Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
Share:
Articles November 7, 2020 ಡಾ. ಎಸ್.ಆರ್. ಗುಂಜಾಳ

ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2

ವಿಶ್ವದಲ್ಲಿ ಕ್ರಿಸ್ತಧರ್ಮ ಜನಿಸಿ 2020 ವರುಷಗಳು ಗತಿಸಿವೆ. ಈ ಅವಧಿಯಲ್ಲಿ ಆ ಧರ್ಮದ ಅನುಯಾಯಿಗಳು ಪ್ರಪಂಚದ ಒಟ್ಟು ಜನಸಂಖ್ಯೆಯ 50 ರಷ್ಟು ಬೆಳೆದಿದ್ದಾರೆ. ಇನ್ನೂ ಭರದಿಂದ ಬೆಳೆಯುತ್ತಿದ್ದಾರೆ. ಆ ಧರ್ಮದ ಮೂಲಗ್ರಂಥವಾದ ಬೈಬಲ್ ಸುಮಾರು 1100 ಭಾಷೆಗಳಲ್ಲಿ ಅನುವಾದಗೊಂಡಿದೆ. ಒಂದು ಅಂದಾಜಿನಂತೆ ಕೇವಲ ಇಂಗ್ಲಿಷ್ ಭಾಷೆಯೊಂದರಲ್ಲಿಯೇ ಆ ಧರ್ಮಗುರು ಯೇಸುಕ್ರಿಸ್ತನ ಜೀವನದ ವಿವಿಧ ಮುಖಗಳನ್ನು ಕುರಿತು ಪ್ರತಿದಿನವೂ ಕನಿಷ್ಟ ಪಕ್ಷ ಒಂದು ಗ್ರಂಥವು ಪ್ರಕಟವಾಗುತ್ತಿದೆ.
ಇಸ್ಲಾಂ ಧರ್ಮಗುರು ಪ್ರವಾದಿ ಮಹಮ್ಮದರ ಹೆಸರನ್ನು ಇಟ್ಟುಕೊಂಡವರು ಜಗತ್ತಿನಲ್ಲಿಯೇ ಎಲ್ಲರಿಗಿಂತ ಹೆಚ್ಚಾಗಿದ್ದಾರೆಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಮೂದಿಸಿದೆ, ಇಸ್ಲಾಂ ಧರ್ಮ ಹುಟ್ಟಿ ಸುಮಾರು ಒಂದೂವರೆ ಸಾವಿರ ವರ್ಷಗಳಲ್ಲಿ ಪ್ರವಾದಿ ಮಹಮ್ಮದರ ಅನುಯಾಯಿಗಳ ಸಂಖ್ಯೆ ಬೆಳೆಯುತ್ತಿದೆ. ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ಅನುಯಾಯಿಗಳು ಪ್ರಪಂಚದ ಬಹುಸಂಖ್ಯಾತ ದೇಶಗಳಲ್ಲಿ ಆಧಿಪತ್ಯ ನಡೆಸುತ್ತಿದ್ದಾರೆಂಬುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ಈ ಧರ್ಮವನ್ನು ಕುರಿತು ವಿವಿಧ ಬಗೆಯ ಸಾಹಿತ್ಯ ಲೆಕ್ಕವಿಲ್ಲದಷ್ಟು ಪ್ರಕಟವಾಗಿದೆ. ಅನೇಕ ಭಾಷೆಗಳಲ್ಲಿ ದಿನನಿತ್ಯವೂ ಬೆಳಕು ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ ಬಸವಣ್ಣನವರ ಚಾರಿತ್ರಿಕ ಗ್ರಂಥಗಳನ್ನು ಅವಲೋಕಿಸಿದರೆ ನಿರಾಶೆಯೆನಿಸುತ್ತದೆ. ನಾವು ಬಸವಣ್ಣನವರನ್ನು ವಿಶ್ವವಿಭೂತಿಗಳಾದ ಬುದ್ಧ, ಕ್ರಿಸ್ತ, ಮಹಮ್ಮದ ಇವರ ಸಾಲಿನಲ್ಲಿ ನಿಲ್ಲಿಸ ಬಯಸುತ್ತೇವೆ. ಈ ಬಯಕೆ ಸಹಜವಾದುದೆ. ಆದರೆ ಆ ಮಹಾವ್ಯಕ್ತಿಯ ದಿವ್ಯ-ಭವ್ಯ ಜೀವನ ಚಿತ್ರಣವನ್ನು ಬಿತ್ತರಿಸುವಲ್ಲಿ ಕನ್ನಡಿಗರು- ವಿಶೇಷವಾಗಿ ಲಿಂಗಾಯತರು ಹಿಂದೆ ಬಿದ್ದಿರುವರೆಂದು ಬಹು ವ್ಯಸನದಿಂದ ಹೇಳಬೇಕಾಗಿದೆ. ಇಂಥ ಸ್ಥಿತಿಯಲ್ಲಿಯೂ ಬಸವಣ್ಣನವರನ್ನು ಕುರಿತು ಕಳೆದ 900 ವರ್ಷಗಳಲ್ಲಿ ಬರೆಯಲ್ಪಟ್ಟ ರಗಳೆ, ಷಟ್ಪದಿ, ತ್ರಿಪದಿ, ಸಾಂಗತ್ಯ, ಚಂಪೂ, ಕಥೆ, ಕಾದಂಬರಿ, ನಾಟಕ, ಇತ್ಯಾದಿ ಛಂದೋಬಂಧಗಳಲ್ಲಿ ಸಾಕಷ್ಟು ಕೃತಿಗಳು ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ, ಇಂಗ್ಲಿಷ್, ಜರ್ಮನ್ ಭಾಷೆಗಳಲ್ಲಿ ರಚಿತಗೊಂಡಿವೆ. ಬಸವಣ್ಣನವರ ಸರ್ವೋದಯ ತತ್ವಗಳಿಗೆ ಆಕರ್ಷಿಸಲ್ಪಟ್ಟು ಅನೇಕ ಪಾಶ್ಚಾತ್ಯ ವಿದ್ವಾಂಸರು ಅವರನ್ನು ಕುರಿತು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿರುವರು; ಸ್ವತಂತ್ರ ಗ್ರಂಥಗಳನ್ನೂ ಬರೆದಿರುವರು. ಅಂಥ ಕೆಲವು ಪಾಶ್ಚಾತ್ಯ ಪಂಡಿತರು ಬಸವಣ್ಣನವರ ಮೇಲೆ ಬರೆದಿರುವ ಅಭಿಪ್ರಾಯಗಳನ್ನು ಸಂಕ್ಷೇಪವಾಗಿ ದಿಕ್ಸೂಚಿಯಾಗಿ ನಾವಿಲ್ಲಿ ವಿವರಿಸ ಬಯಸುತ್ತೇವೆ.
ಪಾಶ್ಚಾತ್ಯ ಬರಹಗಾರರಲ್ಲಿ ಮೊಟ್ಟ ಮೊದಲು ಲಿಂಗಾಯತರ ಬಗೆಗೆ ಉಲ್ಲೇಖ ಮಾಡಿದವರು ಡಚ್ ಕ್ರಿಸ್ತ ಧರ್ಮೋಪದೇಶಕರಾದ ಅಬ್ರಾಹಮ್ ರೊಗೇರಿ. ಅವರು ಭಾರತದಲ್ಲಿ ಕ್ರಿ.ಶ. 1632-1642ರವರೆಗೆ ಬೈಬಲ್ ಬೋಧಿಸಿದವರು. ಅವರು ಬರೆದ “ದಿ ಓಪನ್ ಡೋರ್ ಟು ದಿ ಹಿಡನ್ ಪಾಗ್ಯಾನಿಸಮ್” (The open door to the hidden Paganism) ಎಂಬ ಗ್ರಂಥವು 1651ರಲ್ಲಿ ಪ್ರಕಟವಾಗಿದೆ. ಅದರಲ್ಲಿ ಲಿಂಗಾಯತರು ಈಶ್ವರನಲ್ಲಿ ನಿಷ್ಠಾಭಕ್ತಿಯುಳ್ಳವರು, ಅವರು ತಮ್ಮ ದೇವರಾದ ಲಿಂಗವನ್ನು ಕೊರಳಲ್ಲಿ ಕಟ್ಟಿಕೊಳ್ಳುವರು ಮತ್ತು ಅವರು ಮಾಂಸಾಹಾರಿಗಳಲ್ಲ ಎಂದು ಹೇಳಿರುವರು. ಇವರ ನಂತರ ಲಿಂಗಾಯತರನ್ನು ಕುರಿತು ಉಲ್ಲೇಖ ಮಾಡಿದವರು ಪಿಟ್ರೊ ಡೆಲ್ಲಾವಲ್ಲೆ. ಈತ ಇಟಲಿ ದೇಶದ ಪ್ರವಾಸಿ. 16ನೇ ಶತಮಾನದ ಆದಿಯಲ್ಲಿ ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಿ ಆತ ಬರೆದ ಪತ್ರಗಳು, ಅವರು ಕಾಲವಾದ ಹತ್ತು ವರುಷಗಳ ನಂತರ (1663) ಪ್ರಕಟವಾದವು. ಲಿಂಗಾಯತ ಧರ್ಮವು ಇಕ್ಕೇರಿ ಅರಸರ ರಾಜಧರ್ಮವಾಗಿತ್ತೆಂದು (State Religion) ಆತ ಹೇಳಿದ್ದಾನೆ. ಲಿಂಗಾಯತ ಜಂಗಮರ ಹಾಗೂ ಸಮಾಧಿ ಕ್ರಿಯೆಗಳ ಬಗೆಗೆ ವಿಶೇಷ ವಿವರಗಳನ್ನು ಬರೆದಿರುವನು. ಲಿಂಗಾಯತರ ಬಗೆಗೆ ಬರೆದ ಮೂರನೆಯ ಕ್ರೈಸ್ತಪಾದ್ರಿ ಅಬೆ ಡುಬಾಯೆ (1792) ಲಿಂಗಾಯತರ ಬಗೆಗೆ ಅನೇಕ ರೋಚಕ ವಿಷಯಗಳನ್ನು ಹೇಳಿರುವನಾದರೂ ಅವು ಬಹಳಷ್ಟು ಪ್ರಮಾಣದಲ್ಲಿ ನಂಬಲರ್ಹವಾಗಿಲ್ಲ. [ ಇಲ್ಲಿ ನಮೂದಿಸಿದ ಪಾಶ್ಚಾತ್ಯ ಬರಹಗಾರರ ವಿಷಯವನ್ನು ಡಾ.ಜಿ.ಪಿ.ಶೌಟನ್ ಬರೆದ ಅನುಭಾವಿಗಳ ಕ್ರಾಂತಿ (Revolution of the Mystics) ನೆದರಲ್ಯಾಂಡ್, 1991- ಈ ಗ್ರಂಥದಿಂದ ಎತ್ತಿಕೊಳ್ಳಲಾಗಿದೆ.]

1. ಬ್ರೌನ್ ಸಾಹೇಬರು:
ಸಿ.ಪಿ.ಬ್ರೌನರು ತೆಲುಗು ಪ್ರದೇಶದಲ್ಲಿ ಬ್ರಿಟಿಷ್ ಕಂಪನಿ ಸರಕಾರದ ಸೇವೆಯಲ್ಲಿದ್ದ ವಿದ್ವಾಂಸರು. ಜಿಲ್ಲಾ ನ್ಯಾಯಾಧೀಶರಾಗಿ ಕೆಲವು ವರುಷ ಸೇವೆ ಸಲ್ಲಿಸಿದರು. ತೆಲುಗು ಭಾಷಾ ನಿಘಂಟನ್ನು ಸಿದ್ಧಪಡಿಸಿದ ಕೀರ್ತಿ ಅವರದು. ತೆಲುಗು ವ್ಯಾಕರಣ ಗ್ರಂಥವನ್ನು ಬರೆದ ಮೊದಲಿಗರು. ಅನೇಕ ಪ್ರಾಚೀನ ತೆಲುಗು ಗ್ರಂಥಗಳನ್ನು ಸಂಸ್ಕರಿಸಿ ಮೊಟ್ಟ ಮೊದಲಿಗೆ ಮುದ್ರಿಸಿ ಪ್ರಕಟಿಸಿದರು. ಕರ್ನಾಟಕದಲ್ಲಿ ರೆವರೆಂಡ್ ಎಫ್.ಕಿಟಲ್ ಅವರಿಗಿರುವ ಸ್ಥಾನ ತೆಲುಗು ಪ್ರಾಂತ್ಯದಲ್ಲಿ ಬ್ರೌನ್ ಸಾಹೇಬರಿಗಿದೆ.
ಅವರು ಲಿಂಗಾಯತರ ಬಗೆಗೆ ಬರೆದ ಒಂದು ಪುಟ್ಟ ಪುಸ್ತಕವು ಅನೇಕ ಮಹತ್ವದ ವಿಷಯಗಳನ್ನು ಒಳಗೊಂಡಿದೆ. ಅದರ ಹೆಸರು, ‘ಜಂಗಮರ ಮತ, ಆಚಾರಗಳು ಮತ್ತು ಸಾಹಿತ್ಯ ಕುರಿತ ಪ್ರಬಂಧ” ಎಂದಿದೆ. ಇದು ಕ್ರಿ.ಶ. 1840ರಲ್ಲಿ ಪ್ರಥಮ ಸಲ ಮುದ್ರಣಗೊಂಡಿದ್ದು ಎರಡನೆಯ ಆವೃತ್ತಿಯನ್ನು ಮದ್ರಾಸಿನ ಹಿಗಿನ್ ಬಾಥೆಮ್ಸ್ ಸಂಸ್ಥೆ ಮುದ್ರಿಸಿ 1897ರಲ್ಲಿ ಪ್ರಕಟಿಸಿದೆ. ಇದರಲ್ಲಿ ಅವರು ಬಸವೇಶ್ವರ ಹಾಗೂ ಲಿಂಗಾಯತರ ಧರ್ಮದ ಬಗೆಗೆ ಮಹತ್ವಪೂರ್ಣ ವಿಚಾರಗಳನ್ನು ಬರೆದಿರುವರು. [Brown.(C.P): Essay on the Creed, Customs and Literature of the Jangams, Madras, 1840]
“ಈ ಧರ್ಮದ ಸಂಕ್ಷೇಪವಾದ ಇತಿಹಾಸವನ್ನು ಮತ್ತು ಲಿಂಗಾಯತ ಧರ್ಮದ ಇಂದಿನ ಸ್ಥಿತಿಯನ್ನು ಅರಿತುಕೊಳ್ಳುವಲ್ಲಿ ಸಹಾಯವಾಗುತ್ತದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ರಚಿತವಾದ ಕಾವ್ಯಗಳಲ್ಲಿ ಇದು ಸಾಕಷ್ಟು ವರ್ಣಿಸಲ್ಪಟ್ಟಿದೆ. ಅವುಗಳಲ್ಲಿ ಅತಿರಂಜಿತ ವರ್ಣನೆಗಳನ್ನು ಹೊರತುಪಡಿಸಿ ನೋಡಿದರೆ ಜಂಗಮರ(ಲಿಂಗಾಯತರ) ಮತವು ಬಸವೇಶ್ವರನಿಂದ ಸ್ಥಾಪಿಸಲ್ಪಟ್ಟಿರುವುದಾಗಿ ಕಂಡುಬರುತ್ತದೆ. ಲಿಂಗಾಯತರು ಅವನನ್ನು ತಮ್ಮ ಒಬ್ಬನೇ ಒಬ್ಬ ದೈವವಾಗಿರುವನೆಂದು ಗೌರವಿಸುತ್ತಾರೆ. ಅವನು ಶಿವನ ಅವತಾರವೆಂದೂ, ತಮ್ಮ ಧರ್ಮದ ದೇವರೆಂದೂ ಕಾಣುತ್ತಾರೆ.” (ಪುಟ-4)
“ದಕ್ಷಿಣ ಮಹಾರಾಷ್ಟ್ರ ಪ್ರದೇಶದಲ್ಲಿರುವ ಬೆಳಗಾವಿ ಜಿಲ್ಲೆಯ ಬಾಗವಾರಿ ಸಮೀಪದ ಹಿಂಗಳೇಶ್ವರಂ ಎಂಬ ಗ್ರಾಮದ ಮಂಡಿಗ ಮಾದ ಮಂತ್ರಿ ಎಂಬ ಹೆಸರಿನ ಶೈವ ಬ್ರಾಹ್ಮಣನ ಮಗನೇ ಬಸವಣ್ಣ. ಸೂರ್ಯೋಪಾಸನೆಗೆ ವೇದೋಕ್ತ ಅರ್ಹತೆ ಬರಲು ಉಪನಯನ ಕರ್ಮಗಳನ್ನು ಮಾಡಲು ಉದ್ಯುಕ್ತರಾದಾಗ ಬಸವಣ್ಣನವರು ಜನಿವಾರವನ್ನು ಧರಿಸಲು ನಿರಾಕರಿಸಿದರು. ಒಂದು ವೇಳೆ ಅವರು ಜನಿವಾರ ಧರಿಸಿದ್ದು ನಿಜವಿದ್ದರೂ ಅನಂತರ ಅವರು ಅದನ್ನು ತ್ಯಜಿಸಿದರು. ಇದಾದ ಸ್ವಲ್ಪ ಸಮಯದಲ್ಲಿ ಅಲ್ಲಿಂದ ಪಾರಾಗಿ ತಮ್ಮ ಸಹೋದರಿ ಅಕ್ಕನಾಗಮ್ಮನೊಂದಿಗೆ ಜೈನ ರಾಜನಿದ್ದ ಕಲ್ಯಾಣಕ್ಕೆ ಪಯಣ ಬೆಳೆಸಿದರು. ಅರಸನ ಮಂತ್ರಿಯು ಬ್ರಾಹ್ಮಣನಾಗಿದ್ದನು. ಬಸವಣ್ಣನವರ ಸೋದರಮಾವನಾಗಿದ್ದನು. ಅವನು ಅಲ್ಲಿ ನೌಕರಿಯನ್ನು ಕೊಡಿಸಿದನು. ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದನು. ಅವನು ಶಿವಾಧೀನನಾದ ನಂತರ ಬಸವಣ್ಣನವರು ಮಾವನ ಮಂತ್ರಿ ಸ್ಥಾನಕ್ಕೆ ನೇಮಿಸಲ್ಪಟ್ಟರು. ಕ್ರಮೇಣ ಹೆಚ್ಚಿನ ಅಧಿಕಾರ ಹೊಂದಿದರು. ಬಸವೇಶ್ವರನ ಪವಿತ್ರನಾಮದಿಂದ ಆಶೀರ್ವದಿಸದ ಆಹಾರವನ್ನು ಜಂಗಮರು ಸ್ವೀಕರಿಸುವುದಿಲ್ಲ. (ಪು-8)
“ರೇವಣಾರಾಧ್ಯ, ಮರುಳಾರಾಧ್ಯ, ಏಕೋರಾಮರಾಧ್ಯ ಮತ್ತು ಪಂಡಿತಾರಾಧ್ಯ- ಈ ನಾಲ್ವರು ಬಸವೇಶ್ವರರಿಗಿಂತ ಮುಂಚೆ ಒಂದೊಂದು ಯುಗಕ್ಕೆ ಒಬ್ಬೊಬ್ಬರಂತೆ ನಾಲ್ಕು ಯುಗಗಳಲ್ಲಿ ಜನ್ಮಿಸಿದರೆಂದು ಹೇಳಲಾಗುತ್ತದೆ. ಆದರೆ ಅವರು ಕಾಲ್ಪನಿಕ ವ್ಯಕ್ತಿಗಳೆಂದು ತಿಳಿದು ಬರುತ್ತದೆ. ಆರಾಧ್ಯರು ಲಿಂಗವಂತ ಧರ್ಮಕ್ಕೆ ಮತಾಂತರಗೊಂಡವರು. ಮದ್ರಾಸ್ ಕಡೆಯ ಕ್ರಿಶ್ಚಿಯನ್ ಬ್ರಾಹ್ಮಣರಂತೆ ಕ್ರಿಸ್ತ ಧರ್ಮಕ್ಕೆ ಮತಾಂತರಗೊಂಡರೂ ಬ್ರಾಹ್ಮಣ ದ್ಯೋತಕವಾದ ಜನಿವಾರವನ್ನು ಧರಿಸುವರು. ಇತರ ಹಿಂದೂಗಳಂತೆ ಜಾತಿ ಭೇದ ಮಾಡುವರು. ಹಾಗೆಯೇ ಈ ಆರಾಧ್ಯರೂ ಸಹ ಲಿಂಗವಂತ ಧರ್ಮದ ಆಚಾರಗಳನ್ನೂ, ವೈದಿಕ ಧರ್ಮದ ಆಚಾರಗಳನ್ನೂ ಒಟ್ಟಾಗಿಯೇ ಆಚರಿಸುವರು.” (ಪು-13) “ಸಂಸ್ಕೃತ ಶ್ಲೋಕಗಳಲ್ಲಿ ಬರೆಯಲ್ಪಟ್ಟ ಸಿದ್ಧಾಂತ ಶಿಖಾಮಣಿ ಗ್ರಂಥವು ಪೌರಾಣಿಕ ಗ್ರಂಥವಾಗಿದ್ದು ನಂಬಲರ್ಹ ಗ್ರಂಥವಾಗಿಲ್ಲ.”
“ಬಸವೇಶ್ವರರು ಬ್ರಾಹ್ಮಣ ಜನರಂತೆ ಮೃತ ಶರೀರವನ್ನು ಸುಡಲು ನಿಷೇಧಿಸಿ ಹುಗಿಯುವುದಕ್ಕೆ ಅನುಮತಿಸಿದರು. ಸ್ತ್ರೀಯರಿಗೆ ಸಮಾನ ಗೌರವ ಕೊಟ್ಟದ್ದು, ವಿಧವೆಯರಿಗೆ ಪುನರ್ವಿವಾಹ ಮಾಡಿಕೊಳ್ಳಲು ಒಪ್ಪಿಗೆ ಕೊಟ್ಟದ್ದು, ಏಕದೇವೋಪಾಸನೆ, ಜಾತೀಯತೆಯ ನಿರ್ಮೂಲನೆ, ಮುಂತಾದವುಗಳನ್ನು ಪರಿಶೀಲಿಸಿದರೆ ಬಸವೇಶ್ವರರು ಕ್ರಿಶ್ಚಿಯನ್ನರಿಂದ ಈ ಪದ್ಧತಿ- ಸಂಪ್ರದಾಯಗಳನ್ನು ಎತ್ತಿಕೊಂಡಂತೆ ನನಗೆ ಕಾಣುತ್ತದೆ. ಆದರೂ ಜಂಗಮ ಧರ್ಮದ ಅನುಯಾಯಿಗಳಾರೂ ಕ್ರಿಸ್ತ ಧರ್ಮಕ್ಕೆ ಮತಾಂತರವಾದುದು ಕಂಡುಬಂದಿಲ್ಲ.” (ಪು-26).
ಹೀಗೆ ಬ್ರೌನ್ ಸಾಹೇಬರು ಬಸವೇಶ್ವರರ ಬಗೆಗೆ ವಿಮರ್ಶಾತ್ಮಕ ದೃಷ್ಟಿಯಿಂದ ಪರಿಶೀಲಿಸಿ ಬರೆದಿರುವರು. ಅವರು ಸ್ವತಃ ಲಿಂಗಾಯತರೊಂದಿಗಿದ್ದು, ಅವರ ಆಚಾರ-ವಿಚಾರಗಳನ್ನು ಕಣ್ಣಾರೆ ಕಂಡು ವಿಮರ್ಶಿಸಿ, ಬಸವ ಪುರಾಣಾದಿ ಕಾವ್ಯಗ್ರಂಥಗಳನ್ನು ಆಳವಾಗಿ ಅಭ್ಯಸಿಸಿ ತಮ್ಮ ಪ್ರಬಂಧವನ್ನು ಬರೆದಿರುವರು. ಈ ಪ್ರಬಂಧವು ಪ್ರಕಟವಾಗುವುದಕ್ಕಿಂತ ಮೊದಲು ಲಿಂಗಾಯತರನ್ನು ಕುರಿತು ಬರೆದ ಆಂಗ್ಲ ವಿದ್ವಾಂಸರು ತಲಸ್ಪರ್ಶಿಯಾಗಿ ಲಿಂಗಾಯತ ಸಾಹಿತ್ಯವನ್ನು ಅಭ್ಯಸಿಸಿದ್ದು ಕಂಡುಬರುವುದಿಲ್ಲ. ಹೀಗಾಗಿ ಫ್ರಾನ್ಸಿಸ್ ಬುಚನನ್ (1800) ಆರ್ಥರ್ ಸ್ಟೀಲ್ (1826) ಮುಂತಾದವರು ಲಿಂಗಾಯತ ಧರ್ಮ- ಸಾಹಿತ್ಯಗಳ ಬಗೆಗೆ ಮೌಲಿಕ ಮಾತುಗಳನ್ನು ಹೇಳಿಲ್ಲವೆನ್ನಬಹುದು. ಆದುದರಿಂದಲೇ ಸಿ.ಪಿ. ಬ್ರೌನ್ ಸಾಹೇಬರು ತಮ್ಮ ಪ್ರಬಂಧದ ಕೊನೆಗೆ ಲಿಂಗಾಯತರನ್ನು ಕುರಿತು ಅತ್ಯಂತ ಮಾರ್ಮಿಕವಾದ, ಅರ್ಥಪೂರ್ಣವಾದ ಮಾತುಗಳನ್ನು ಹೇಳಿರುವರು:
“ಜಂಗಮರು ಸುವಿಚಾರಿಗಳು, ಶಾಂತಿಯುತರು. ಬ್ರಿಟಿಷ್ ಸರಕಾರವು ಬ್ರಾಹ್ಮಣರಿಗೆ ನೀಡುತ್ತಿರುವ ಎಲ್ಲ ಸೌಲತ್ತುಗಳನ್ನು ಪಡೆಯಲು ಜಂಗಮರು ಅರ್ಹರಾಗಿರುವರು.” (ಪು.40)

ಬಾಸೆಲ್ ಮಿಷನ್ನಿನ ಪ್ರೊಟೆಸ್ಟಂಟ್ ಧರ್ಮೋಪದೇಶಕನಾದ ರೆ.ಜಿ.ವುರ್ಧ ಇವರು ಭೀಮಕವಿಯ ಬಸವಪುರಾಣವನ್ನು 1853ರಲ್ಲಿ ಮೊಟ್ಟಮೊದಲು ಜರ್ಮನ್ ಭಾಷೆಗೆ ಸಾರಾಂಶ ರೂಪದಲ್ಲಿ ಅನುವಾದಿಸಿದರು. ಇದರ ಪರಿಷ್ಕೃತ ಆವೃತ್ತಿಯನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ, ಮುಂಬಾಯಿ ರಾಯಲ್ ಏಷಿಯಾಟಿಕ್ ಸೊಸಾಯಿಟಿಯ ಪತ್ರಿಕೆಯಲ್ಲಿ 1865ರಲ್ಲಿ ಪ್ರಕಟಿಸಿದರು. ಇವರು ಬಸವಣ್ಣನವರ ಚರಿತ್ರೆಯನ್ನು ಜರ್ಮನ್ ಮತ್ತು ಇಂಗ್ಲಿಷ್ ಭಾಷಿಕರಿಗೆ ತಿಳಿಸಿದ ಮತ್ತೊಬ್ಬ ಶ್ರೇಷ್ಠ ವಿದ್ವಾಂಸರಾಗಿರುವರು. ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣವನ್ನೂ ಇವರೇ ಇಂಗ್ಲಿಷಿನಲ್ಲಿ ಸಂಕ್ಷೇಪಿಸಿ ಅದೇ ಪತ್ರಿಕೆಯಲ್ಲಿ ಅದೇ ವರುಷ ಪ್ರಕಟಿಸಿದರು.
19ನೆಯ ಶತಮಾನದ ಕೊನೆಯ ಹಾಗೂ ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಆಂಗ್ಲ ಸರಕಾರದ ಆದೇಶದ ಮೇರೆಗೆ ಭಾರತದ ಜಿಲ್ಲಾ ಗೆಝೆಟಿಯರುಗಳನ್ನು ಸಿದ್ಧಪಡಿಸಿ ಪ್ರಕಟಿಸಲಾಯಿತು. ಇವುಗಳನ್ನು ಸಂಪಾದಿಸಿ ಪ್ರಕಟಿಸಿದ ಪಾಶ್ಚಾತ್ಯರಲ್ಲಿ ಎಡ್ಗರ್ ಥರ್ಸಟನ್, ಬಿ.ಎಲ್.ರಾಯಿಸ್, ಆರ್.ಇ.ಎಂಥೋವೆನ್ ಮುಂತಾದವರನ್ನು ಹೆಸರಿಸಬಹುದು. ಇವರೆಲ್ಲರೂ ಬಸವಣ್ಣನವರೇ ಲಿಂಗಾಯತ ಧರ್ಮದ ಸ್ಥಾಪಕರೆಂದು ಹೇಳಿರುವರಲ್ಲದೆ, ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳ ಬಗೆಗೆ ವಿವರಿಸಿರುವರು. ಎನಸೈಕ್ಲೋಪಿಡಿಯಾ ಆಫ್ ರಿಲಿಜನ್ ಆಂಡ್ ಎಥಿಕ್ಸ್, ಎನಸೈಕ್ಲೋಪಿಡಿಯಾ ಬ್ರಿಟಾನಿಕಾ ಮುಂತಾದ ವಿಶ್ವಕೋಶಗಳಲ್ಲೂ ಬಸವಣ್ಣನವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಪ್ರಕಟವಾಗಿವೆ.

ಮುಂಬಯಿಯಿಂದ ಪ್ರಕಟವಾಗುತ್ತಿರುವ ‘ಟೈಮ್ಸ್ ಆಫ್ ಇಂಡಿಯಾ’ ಆಂಗ್ಲ ದಿನಪತ್ರಿಕೆಯು ಭಾರತೀಯ ಪತ್ರಿಕಾ ರಂಗದಲ್ಲಿ ಶ್ರೇಷ್ಠ ದರ್ಜೆಯ ಪತ್ರಿಕೆಯೆಂದು ಹೆಸರು ಮಾಡಿದೆ. ಅದು ದಿ. 17-4-1918ರ ಸಂಚಿಕೆಯಲ್ಲಿ ಬಸವಣ್ಣನವರನ್ನು ಭಾರತದ ಶ್ರೇಷ್ಠ ಸಮಾಜವಾದಿಯೆಂದೂ, ಸಮಾಜ ಸುಧಾರಕನೆಂದೂ ಬಣ್ಣಿಸಿದೆ. ಸರ್ ಜೇಮ್ಸ್ ಕ್ಯಾಂಬೆಲ್ ಮಹಾಶಯನ ಅಭಿಪ್ರಾಯವನ್ನು ಉದಾಹರಿಸಿದೆ. ಇದು ಲಿಂಗಾಯತರ ಕಣ್ಣು ತೆರೆಯಿಸುವ ಅಭಿಪ್ರಾಯವಾಗಿದೆ-
“ಬಸವೇಶ್ವರರಿಗಿಂತ ಮುಂಚಿನ ಕಾಲದಲ್ಲಿ ಹುಟ್ಟಿದ ಪ್ರತಿಯೊಬ್ಬ ಸುವಿಖ್ಯಾತ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕನು ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳಲ್ಲಿ ಯಾವುದಾದರೊಂದರ ಮೇಲೆ ಹೆಚ್ಚು ಒತ್ತುಕೊಟ್ಟಿರುವರು. ಇನ್ನಿತರ ಸುಧಾರಣೆಗಳಿಗೆ ಗೌಣ ಸ್ಥಾನ ಕೊಟ್ಟಿರುವರು. ಇಲ್ಲವೇ ಅವೆಲ್ಲವುಗಳನ್ನು ಸಾರಾಸಗಟಾಗಿ ನಿರ್ಲಕ್ಷಿಸಿರುವರು. ಬಸವೇಶ್ವರರು ಎಲ್ಲಾ ಸುಧಾರಣೆಗಳನ್ನು ಸಮಗ್ರವಾಗಿ ಕ್ರೋಢೀಕರಿಸಿದ ಮಹಾ ಯೋಜನೆಯನ್ನು ಸಿದ್ಧಪಡಿಸಿ ಸ್ತ್ರೀಯರ ಏಳ್ಗೆಯನ್ನು ಮತ್ತು ಸ್ವಾತಂತ್ರ್ಯವನ್ನು ಮಾರ್ಗದರ್ಶಿಯನ್ನಾಗಿ ಇಟ್ಟುಕೊಂಡು ಆ ಯೋಜನೆಯನ್ನು ಧೈರ್ಯದಿಂದ ಕಾರ್ಯಗತಗೊಳಿಸಿದರು.”
“ಇಂದಿನ ದಿನಗಳಲ್ಲಿ ಭಾರತದ ಅನೇಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಜರುಗುವ ಸಾಮಾಜಿಕ ವಾರ್ಷಿಕ ಸಮ್ಮೇಳನಗಳಾಗಲಿ, ಇಲ್ಲವೆ ಸುಧಾರಣಾ ಯೋಜನೆಯ ಪ್ರಮುಖ ಸುಧಾರಣೆಗಳಲ್ಲಿ ಇಂದಿನ ಸಮಾಜ ಸುಧಾರಕರು ಬಸವೇಶ್ವರರಿಗಿಂತ ಹೆಚ್ಚಿನದೇನನ್ನೂ ಮಾಡಲಾರರು. ಭಾರತದ ಇತಿಹಾಸ, ಸಂಪ್ರದಾಯಗಳ ರೀತಿ-ನೀತಿಗಳ ವಿಶೇಷ ತಿಳಿವಳಿಕೆಗೆ ಹೆಸರಾದ ಸರ್ ಜೇಮ್ಸ್ ಕ್ಯಾಂಬೆಲ್ಲರ ಹೇಳಿಕೆಯನ್ನು ಸಂಕ್ಷೇಪಿಸಿ ಹೇಳುವುದಾದರೆ- ಭಾರತದ ಇಂದಿನ ಸಮಾಜ ಸುಧಾರಕನು ಬಸವೇಶ್ವರರ ತತ್ವಗಳನ್ನೇ ಉಪದೇಶಿಸುತ್ತಲೂ, ಅವರ ವಿಚಾರಗಳನ್ನೇ ಆಚಾರದಲ್ಲಿ ತರಲು ಹವಣಿಸುತ್ತಲೂ ಇರುತ್ತಾನೆ.”
[It was the distinctive feature of his mission that while illustrious religious and social reformer in India before him had each laid his emphasis on one or other items of religious and social reform, either subordinating more or less other items to it, ignoring them altogether, Basava sketched and boldly tried to workout a large and comprehensive program of social reform with the elevation and independence of womanhood as its guiding point.
Neither social conferences which are annually held in these days at several parts of India, nor Indian social reformers can improve upon that program as to essentials. As was in substance remarked by the late Sir James Campbell, whose knowledge of Indian History, customs and manners was almost phenomenal, the present day social reformer in India is but speaking the language and seeking to enforce the mind of Basava.]
ಬಸವಣ್ಣನವರನ್ನು ಕುರಿತು ಅತ್ಯಂತ ಸ್ಪಷ್ಟ ಅಭಿಪ್ರಾಯಗಳನ್ನು ಬಿತ್ತರಿಸಿದ ಪಾಶ್ಚಾತ್ಯರಲ್ಲಿ ಆರ್ಥರ್ ಮಾಯಿಲ್ಸ್ (Arthur Miles) ಶ್ರೇಷ್ಠ ಪಂಡಿತನಾಗಿರುವನು. ಶೈವ ಧರ್ಮದ ಉಗಮ ಮತ್ತು ವಿಕಾಸಗಳ ತವರು ಮನೆಯಾದ ಭಾರತದಲ್ಲಿ ಬಸವೇಶ್ವರರೊಬ್ಬರೇ ಮೊಟ್ಟಮೊದಲನೆಯ ವಿಚಾರವಾದಿ ಎಂದು ಅಭಿಪ್ರಾಯಪಟ್ಟಿರುವನು. ಅವನು ಬರೆದ “ಲಿಂಗ ದೇಶ” (ಲ್ಯಾಂಡ್ ಆಫ್ ದಿ ಲಿಂಗಂ) ಎಂಬ ಸುಪ್ರಸಿದ್ಧ ಗ್ರಂಥವು 1933ರಲ್ಲಿ ಲಂಡನ್ ಪಟ್ಟಣದಿಂದ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿದೆ. ಅದರಲ್ಲಿ ಬಸವಣ್ಣನವರನ್ನು ಕುರಿತು ಹೇಳಿದ ಮಾತುಗಳು ವಿದ್ವತ್ಪೂರ್ಣವಾಗಿವೆ:
“ಬಸವಣ್ಣನವರನ್ನು ಕುರಿತು ಪುರಾಣಗಳು ಏನೇ ಹೇಳಲಿ: ಆತ ಭಾರತದ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ( ಫಸ್ಟ್ ಇಂಡಿಯನ್ ಫ್ರೀ ಥಿಂಕರ್) ಆಗಿದ್ದರೆಂಬ ವಿಷಯ ಅತ್ಯಂತ ಸ್ಪಷ್ಟವಾಗಿದೆ. ಆತನನ್ನು ಭಾರತ ದೇಶದ ಲೂಥರನೆಂದು ಕರೆಯಬಹುದು. ಬಸವಣ್ಣನವರು ಕಾಣಿಸಿಕೊಂಡಾಗ ಪುರೋಹಿತರು ಸಮಾಜದ ನೇತಾರರಾಗಿ ರಾರಾಜಿಸುತ್ತಿದ್ದರು. ಬುದ್ಧಿವಂತಿಕೆ ಮತ್ತು ಸ್ವತಂತ್ರ ವಿಚಾರಶಕ್ತಿಯಿಂದ, ಜಾತೀಯತೆಯ ನಿರ್ಮೂಲನೆ ಮಾಡಲು, ಪೌರೋಹಿತ್ಯದ ಅಧಿಕಾರವನ್ನು ಕಿತ್ತೆಸೆಯಲು ಚಳುವಳಿಯೊಂದು ಅದೇ ಆಗ ಪ್ರಾರಂಭವಾಗಿತ್ತು. ಶೈವ ಬ್ರಾಹ್ಮಣನಾದ ಬಸವೇಶ್ವರನು ಈ ಉದಾರವಾದಿಗಳ ಪಕ್ಷದಲ್ಲಿದ್ದನು. ಜಾತೀಯತೆ ಮತ್ತು ಕಂದಾಚಾರಗಳನ್ನು ನಿರ್ನಾಮ ಮಾಡಲು ಉದಾರವಾದಿಗಳ ಪಕ್ಷದ ಹಿರಿತನವನ್ನು ವಹಿಸಿದನು. ಹುಟ್ಟಿನಿಂದ ಎಲ್ಲರೂ ಸಮಾನರೆಂದೂ, ಪುರುಷರಷ್ಟೇ ಸ್ತ್ರೀಯರೂ ಶ್ರೇಷ್ಠರೆಂದೂ, ಬಾಲ್ಯವಿವಾಹವು ತಪ್ಪೆಂದೂ, ವಿಧವೆಯರಿಗೆ ಪುನರ್ವಿವಾಹ ಮಾಡಿಕೊಳ್ಳಲು ಅನುಮತಿ ಕೊಡುವುದು ಒಪ್ಪವೆಂದೂ ಬೋಧಿಸಿದನು. ಲಿಂಗಾಯತರಿಗೆಲ್ಲಾ ವೈಯಕ್ತಿಕ ಸ್ವಾತಂತ್ರ್ಯದ ಭರವಸೆಯಿತ್ತನು. ಇಷ್ಟಲಿಂಗಧಾರಿಗಳೆಲ್ಲಾ ಒಂದೇಯಾಗಿದ್ದು, ಸಹಪಂಕ್ತಿ ಭೋಜನ ಮತ್ತು ತಮ್ಮತಮ್ಮೊಳಗೆ ರಕ್ತಸಂಬಂಧ ಮಾಡುವುದು ಕಡ್ಡಾಯವಾಗಿತ್ತು.”
[Whatever legend may say of Basava, the fact is pretty clear that he was the first Indian free thinker. He might be called the Luther of India. The acknowledged leadership of the priests was in full swing when Basava came upon the scene and there was a movement on foot to replace caste and priestly authority with intelligence and free-thinking. Basava, A Sivaite Brahmin, was in the camp of Liberals. He mounted the rostrum for the abolition of caste and ceremonies and preached that all men by birth equal, that one sex was important as another, that child marriage was wrong and widows should be permitted to remarry. He promised the Lingayats the freedom of individual action. All wearers of Divine Lingam were to occupy a common level; they were to eat together and inter-marry…]
(ಮುಂದುವರೆಯುತ್ತದೆ)

Previous post ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
Next post ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…

Related Posts

ಹೊತ್ತು ಹೋಗದ ಮುನ್ನ…
Share:
Articles

ಹೊತ್ತು ಹೋಗದ ಮುನ್ನ…

April 29, 2018 ಕೆ.ಆರ್ ಮಂಗಳಾ
ಕಾಲವನ್ನು ಹೇಗೆ ಗ್ರಹಿಸುತ್ತೀರಿ? ಕಳೆದು ಹೋದ ನಿನ್ನೆಗಳಲ್ಲೋ? ಕಾಣದ ನಾಳೆಗಳಲ್ಲೋ? ಈಗ ನಮ್ಮೆದುರೇ ಸರಿಯುತ್ತಿರುವ ಈ ಕ್ಷಣಗಳಲ್ಲೋ… ಇಲ್ಲವೇ ಗೋಡೆಯ ಗಡಿಯಾರದಲ್ಲೋ… ವಿಶ್ವಕ್ಕೆ...
ಸಂದೇಹ ನಿವೃತ್ತಿ…
Share:
Articles

ಸಂದೇಹ ನಿವೃತ್ತಿ…

October 6, 2020 ಪದ್ಮಾಲಯ ನಾಗರಾಜ್
ಗುರು-ಶಿಷ್ಯ ಪ್ರಶ್ನೋತ್ತರ ಮಾಲಿಕೆ ಮೂಲ: ಬೃಹದ್ವಾದಿಷ್ಠ (ಅಚಲ ಗ್ರಂಥ) ಕನ್ನಡಕ್ಕೆ: ಪದ್ಮಾಲಯಾ ನಾಗರಾಜ್ ಶಿಷ್ಯ: ಮನಸ್ಸು ಮತ್ತು ದೇಹ ಬೇರೆ ಬೇರೆ ಆಗಿವೆಯೇ? ಇಲ್ಲವೆ ಅವೆರಡೂ...

Comments 7

  1. Madiwalappa K
    Nov 10, 2020 Reply

    ಚರಿತ್ರೆಯಲ್ಲಿ ಮರೆಯಾದ ಮಹಾನುಭಾವರ ಲೇಖನಿಯಲ್ಲಿ ಲಿಂಗಾಯತ ಧರ್ಮದ ಬಗೆಗೆ ಬಂದ ಮಹತ್ವದ ಮಾತುಗಳು ಮನನ ಮಾಡುವಂತಿವೆ.

  2. Halappa Bhavi
    Nov 12, 2020 Reply

    ಕರ್ನಾಟಕದಲ್ಲಿ ರೆವರೆಂಡ್ ಎಫ್.ಕಿಟಲ್ ಅವರಿಗಿರುವ ಸ್ಥಾನ ತೆಲುಗು ಪ್ರಾಂತ್ಯದಲ್ಲಿ ಬ್ರೌನ್ ಸಾಹೇಬರಿಗಿದೆ- thanks for information sir.

  3. Mariswamy Gowdar
    Nov 16, 2020 Reply

    ಬ್ರೌನ್ ಸಾಹೇಬರ ಬಗೆಗೆ ಸುದೀರ್ಘ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್ ಸರ್

  4. Jeevan koppad
    Nov 19, 2020 Reply

    ರೇವಣಾರಾಧ್ಯ, ಮರುಳಾರಾಧ್ಯ, ಏಕೋರಾಮರಾಧ್ಯ ಮತ್ತು ಪಂಡಿತಾರಾಧ್ಯ- ಈ ನಾಲ್ವರು ಬಸವೇಶ್ವರರಿಗಿಂತ ಮುಂಚೆ ಒಂದೊಂದು ಯುಗಕ್ಕೆ ಒಬ್ಬೊಬ್ಬರಂತೆ ನಾಲ್ಕು ಯುಗಗಳಲ್ಲಿ ಜನ್ಮಿಸಿದರೆಂದು ಹೇಳಲಾಗುತ್ತದೆ. ಆದರೆ ಅವರು ಕಾಲ್ಪನಿಕ ವ್ಯಕ್ತಿಗಳೆಂದು ತಿಳಿದು ಬರುತ್ತದೆ. ಆರಾಧ್ಯರು ಲಿಂಗವಂತ ಧರ್ಮಕ್ಕೆ ಮತಾಂತರಗೊಂಡವರು. – ಸಿ.ಪಿ ಬ್ರೌನರ ಈ ಮಾತುಗಳು ಲಿಂಗಾಯತ ಮತ್ತು ವೀರಶೈವರ ನಡುವಣ ಭಿನ್ನಾಭಿಪ್ರಾಯಕ್ಕೆ ಪ್ರಬಲ ಸಾಕ್ಷಿಯನ್ನು ಒದಗಿಸುತ್ತದೆ.

  5. Naveen JK
    Nov 22, 2020 Reply

    ದಿ ಓಪನ್ ಡೋರ್ ಟು ದಿ ಹಿಡನ್ ಪಾಗ್ಯಾನಿಸಮ್” (The open door to the hidden Paganism) 1651ರಲ್ಲಿ ಪ್ರಕಟವಾದ ಗ್ರಂಥ ಈಗಲೂ ಲಭ್ಯವಿದೆಯೇ? ಎಲ್ಲಿ ಸಿಗುತ್ತದೆ? ದಯವಿಟ್ಟು ತಿಳಿಸುವಿರಾ?

  6. Lingaraj Patil
    Nov 23, 2020 Reply

    ಬಸವಣ್ಣನವರು ನಿಶ್ಚಿತವಾಗಿಯೂ ಬುದ್ಧ, ಕ್ರಿಸ್ತ, ಮುಹಮ್ಮದರ ಸಾಲಿನಲ್ಲಿ ನಿಲ್ಲುವ ಮಹನೀಯರು. ಜಗತ್ತು ಅವರ ಕೊಡುಗೆಯನ್ನು ಗಮನಿಸುವ ಕಾಲ ಬಂದೇ ಬರುತ್ತದೆ.

  7. ಚನ್ನಪ್ಪ ಮಡಿವಾಳರ್
    Nov 26, 2020 Reply

    ಇಂಗ್ಲಿಷಿನ ಜೊತೆಗೆ ಕನ್ನಡದ ಭಾವಾನುವಾದವನ್ನು ನೀಡಿದ್ದಕ್ಕೆ ಧನ್ಯವಾದಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
Copyright © 2023 Bayalu