Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಿದ್ಯೆಯೊಳಗಣ ಅವಿದ್ಯೆ
Share:
Articles February 6, 2019 ಡಾ. ಪಂಚಾಕ್ಷರಿ ಹಳೇಬೀಡು

ವಿದ್ಯೆಯೊಳಗಣ ಅವಿದ್ಯೆ

ಇಂದು ತೋರಿಕೆಗೆ ಕಾಣುವ ಈ ಅಖಂಡ ಸೃಷ್ಟಿಯು ಒಂದೇಬಾರಿಗೆ ಅನಾಮತ್ತಾಗಿ ಉದಯಿಸಿ ನಿಂದುದಲ್ಲವೆಂದು ನಾವೆಲ್ಲಾ ಅರಿತಿದ್ದೇವೆ. ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಸಿದ್ಧಾಂತವೂ ಸೃಷ್ಟಿಯ ವಿಕಾಸವಾದವನ್ನು ಹೇಳುತ್ತದೆ. ಅಂದರೆ ಈ ಜೀವ ಜಗತ್ತು ಇಂದಿನ ಮಟ್ಟಕ್ಕೆ ಅಭಿವೃದ್ಧಿಯಾಗಲು ಕೋಟ್ಯಂತರ ವರ್ಷಗಳೇ ಸಂದಿವೆ. ಏಕಕೋಶಜೀವಿ ಅಮೀಬಾದಿಂದ ಹಿಡಿದು ಇಂದಿನ ಮಾನವನವರೆಗೆ ಜೀವ ವಿಕಾಸ ನಿರಂತರವಾಗಿ ನಡೆದುಬಂದಿದೆ. ಅದೇ ರೀತಿ ನಮ್ಮ ಕನ್ನಡನಾಡಿನಲ್ಲಿ ಆಗಿಹೋದ ಹನ್ನೆರಡನೇ ಶತಮಾನದ ಶರಣರೂ ಈ ಸೃಷ್ಟಿಯಲ್ಲಿ ೮೪ ಲಕ್ಷ ಜೀವರಾಶಿಗಳಿವೆಯೆಂದು ಪ್ರತಿಪಾದಿಸುತ್ತಾರೆ. ಪರಮಾತ್ಮನ ಚಿತ್ಕಳೆಯೇ ಈ ಎಲ್ಲಾ ಜೀವರಾಶಿಗಳಲ್ಲಿಯೂ ಹರಿದಾಡುತ್ತಿದೆ ಹಾಗೂ ಸೃಷ್ಟಿಯ ಸಚರಾಚರದಲ್ಲಿಯೂ  ಪರಮಾತ್ಮನ ಚಿತ್ಕಳೆ ಹಾಸುಹೊಕ್ಕಾಗಿರುವುದನ್ನು ನಾವು ಅರಿಯಬಹುದು. ಅಲ್ಲಮಪ್ರಭುದೇವರು “ಸಾರೆ ಚೆಲ್ಲ್ಯಾದೆ ಮುಕುತಿ, ಗುರು ತೋರಿಸಿದಲ್ಲದೆ ಕಾಣಿಸದಣ್ಣಾ” ಎಂದಿರುವರು, ಮುಕುತಿ ಎಂದರೆ ಶಿವಚೈತನ್ಯ ಅಖಂಡ ಸೃಷ್ಟಿಯಲ್ಲಿ ಓತಪ್ರೋತವಾಗಿ ಹರಡಿದೆ. ಆದರೆ ಅದನ್ನು ಕಾಣಲು, ಅನುಭವಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮೊಳಗಿನ ಅರಿವು ಜಾಗೃತವಾಗಿಲ್ಲ, ಅರಿವನ್ನು ತೋರಿಸಬೇಕಾದ  ಗುರುವೂ ಅರಿವುಗೇಡಿಯಾಗಿದ್ದಾನೆ, ಹಾಗಾಗಿ ಆ ಶಿವಚೈತನ್ಯವು ಮಾಯೆಯ ಅಂಧಕಾರ ಮುಸುಕಿದ ನಮ್ಮ ಕಣ್ಣಿಗೆ ಕಾಣಿಸದಾಗಿದೆ.

ತಾಯಿಯ ಗರ್ಭದಲ್ಲಿ ಏಕ ಕೋಶ ಅಣುವಿನಿಂದ ಬೆಳವಣಿಗೆ ಆರಂಭಿಸಿದ ಮಗು ಕ್ರಮೇಣ ಬೆಳೆಯುತ್ತಾ ಸಾಗುತ್ತದೆ.  ಮಾನವನು ದೈಹಿಕವಾಗಿ ಬೆಳೆದಂತೆ ಆಂತರಿಕವಾಗಿಯೂ ಬೆಳೆಯಬೇಕು, ಸದೃಢನಾಗಬೇಕು. ಆದರೆ ಭಾರತೀಯ ಸಮುದಾಯದಲ್ಲಿ ಮಾನವನ ಆಂತರಿಕ ಬೆಳವಣಿಗೆ ಅಷ್ಟೇನು ಆಶಾದಾಯಕವಾಗಿಲ್ಲವೆಂಬುದು ನೋವಿನ ಹಾಗೂ ದುರ್ದೈವದ ಸಂಗತಿ. ಯಾವುದೇ ಒಬ್ಬ ವ್ಯಕ್ತಿ ಸಮಾಜದ ಶಕ್ತಿಯಾಗಿ ರೂಪುಗೊಳ್ಳಬೇಕಾದರೆ ಆತನು ಆಂತರಿಕವಾಗಿ ಬಲಿಷ್ಠನಾಗಬೇಕು. ಈ ಆಂತರಿಕ ಬಲಿಯುವಿಕೆ ಅಥವಾ ಬಲಿಷ್ಠವಾಗುವಿಕೆಯನ್ನು ಕುರಿತು ಅಕ್ಕಮಹಾದೇವಿ ತಾಯಿ ಹೀಗೆ ಹೇಳುತ್ತಾರೆ:  “ಕೆಚ್ಚಿಲ್ಲದ ಮರನ ಕ್ರಿಮಿ ಇಂಬುಗೊಂಬಂತೆ, ಒಡೆಯನಿಲ್ಲದ ಮನೆಯ ಶುನಕ ಸಂಚುಗೊಂಬಂತೆ,  ನೃಪತಿಯಿಲ್ಲದ ದೇಶವ ಮನ್ನೆಯರಿಂಬುಗೊಂಬಂತೆ, ನಿಮ್ಮ ನೆನಹಿಲ್ಲದ ಶರೀರವ  ಭೂತ ಪ್ರೇತ ಪಿಶಾಚಿಗಳಿಂಬುಗೊಂಬಂತೆ ಚೆನ್ನಮಲ್ಲಿಕಾರ್ಜುನಾ.” ಒಳಗೆ ಗಟ್ಟಿತನವಿಲ್ಲದವರ ಬಾಳುವೆ ಹೇಗೆಂದು ಅಕ್ಕನವರು ಬಹಳ ಸುಂದರವಾಗಿ ವಿವರಿಸುತ್ತಾರೆ, ಒಂದು ಮರ ಬೃಹತ್ತಾಗಿ ಬೆಳೆದಿರುತ್ತದೆ ಅದು ಬಿಸಿಲು ಬಿರುಗಾಳಿ ಮಳೆ ಮುಂತಾದ ಪ್ರಾಕೃತಿಕ ವಿಕೋಪಗಳಿಗೆ ಜಗ್ಗದೆ ಹೆಚ್ಚು ಕಾಲ ಬಾಳಬೇಕಾದರೆ ಹೆಚ್ಚು ಸತ್ವಯುಕ್ತವಾಗಿರಬೇಕು, ಗಟ್ಟಿಯಾಗಿರಬೇಕು. ಇಲ್ಲದಿದ್ದರೆ ಅದು ಕ್ರಿಮಿ ಕೀಟಗಳಿಗೆ ತುತ್ತಾಗಿ ಬೀಸುವ ಬಿರುಗಾಳಿಗೆ ಯಾವುದೇ ಸಮಯದಲ್ಲಿ ಉರುಳಿ ಬೀಳಬಹುದು. ಪಾಳುಬಿದ್ದ ಮನೆಯೊಳಗೆ ನಾಯಿ ನರಿಗಳು ನುಗ್ಗಿ ವಾಸಿಸಲಾರಂಭಿಸುತ್ತವೆ, ಸರಿಯಾದ ಸಮರ್ಥ ನಾಯಕನಿಲ್ಲದ ದೇಶವು ವೈರಿಗಳ ಪಾಲಾಗುತ್ತದೆ ಹಾಗೇ ಶಿವಜ್ಞಾನವಿಲ್ಲದ  ಮಾನವನ ದೇಹವು ದುರ್ವಿಚಾರ, ದುರಾಚಾರ, ದುರ್ಗುಣಗಳ ವಾಸಸ್ಥಾನವಾಗಿ ನರಕದ ನೆಲೆಮನೆಯಾಗುವುದು ಎಂದು ಎಚ್ಚರಿಸುತ್ತಾರೆ. “ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಣ ಸಿಪ್ಪೆ ಒಪ್ಪಗೆಡದು” ಎಂಬಲ್ಲಿ  ಹಣ್ಣು ಮಾಗಿದಾಗ ಅದರ ಸಿಪ್ಪೆಯ ಬಣ್ಣದ ಮೂಲಕ ಹಾಗೂ ಅದು ಹೊರಸೂಸುವ ಕಂಪಿನ ಸುವಾಸನೆಯ ಮೂಲಕ  ಜಗದ ಅರಿವಿಗೆ ಬರುವಂತೆ ನಮ್ಮೊಳಗಿನ  ಶಿವ ಜ್ಞಾನದ ಅರಿವು ಘನಗೊಂಡಾಗ ಅದರ ಅನುಭಾವದ ಬೆಳಕು ಸುತ್ತಲೂ ಪಸರಿಸುವುದು.

ಹಿಂದೆಂದಿಗಿಂತಲೂ ಇಂದು ವಿದ್ಯೆ ಕಲಿಸುವ ಶಿಕ್ಷಣ ಸಂಸ್ಥೆಗಳು ವ್ಯಾಪಕವಾಗಿವೆ, ಇವುಗಳು  ಭೌತಿಕವಾಗಿ ಜನರ ಜ್ಞಾನವನ್ನೇನೋ ಹೆಚ್ಚಿಸುತ್ತಿವೆಯಾದರೂ ಅವರ ಬೌದ್ಧಿಕ ಜ್ಞಾನವನ್ನು, ಚಿಂತನಾ ಶಕ್ತಿಯನ್ನು, ಆಂತರಿಕ ದೃಢತೆಯನ್ನು  ಹೆಚ್ಚಿಸುವಲ್ಲಿ ಸೋತುಹೋಗಿವೆ. ಸ್ನಾತಕ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಪದವಿಗಳಂತಹ ಉನ್ನತ ಪದವಿ ಪಡೆದವರೂ ಆಂತರಿಕವಾಗಿ ಟೊಳ್ಳಾಗಿರುವುದನ್ನು ನಾವು ನಿತ್ಯ ಗಮನಿಸಬಹುದು. ಅವರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾದರೂ ಮಾನಸಿಕವಾಗಿ ದುರ್ಬಲರಾಗಿರುವುದನ್ನು ನೋಡಿದರೆ ಇಂದಿನ ಶಿಕ್ಷಣವು ಈ ವಿಚಾರದಲ್ಲಿ ವಿಫಲವಾಗಿದೆ ಎಂದೇ ಭಾವಿಸಬಹುದು.

ಉದಾಹರಣೆಗೆ: ವಿಜ್ಞಾನ ತಂತ್ರಜ್ಞಾನ ವೈದ್ಯವಿಜ್ಞಾನ ಕಾಲೇಜುಗಳ, ವಿಶ್ವವಿದ್ಯಾಲಯಗಳ  ಪ್ರಾಧ್ಯಾಪಕರು, ಪ್ರಾಂಶುಪಾಲರು, ಸಂಶೋಧಕರುಗಳು ಆಯುಧಪೂಜೆ ಮಾಡುತ್ತಾರೆ, ಆಯುಧಗಳಿಗೆ (ಯಂತ್ರಗಳಿಗೆ) ಬಲಿಯ ಸಂಕೇತವಾಗಿ, ಕುಂಬಳಕಾಯಿಯೊಳಗೆ ಕೆಂಪುಬಣ್ಣದ ನೀರು (ಪ್ರಾಣಿಯ ರಕ್ತದ ಸಂಕೇತ) ತುಂಬಿ ಅದನ್ನು ಒಡೆದು ಅಮೂಲ್ಯವಾದ ಆಹಾರವನ್ನು ಹಾಳುಮಾಡುತ್ತಾರೆ. ಹೀಗೆ ಪೂಜಿಸಿಕೊಂಡ ಯಂತ್ರಗಳು ಕೆಟ್ಟು ನಿಲ್ಲುವುದಿಲ್ಲವೇ? ಅವುಗಳು ಅಪಘಾತಕ್ಕೀಡಾಗುವುದಿಲ್ಲವೇ ಅಥವಾ ಅವುಗಳಿಂದ ಅಪಘಾತಗಳಾಗುವುದಿಲ್ಲವೇ ಇಂಥಾ ಪ್ರಶ್ನೆಗಳು ಪ್ರಮುಖವಾಗಿ ವಿದ್ಯಾವಂತರಲ್ಲಿ ಪುಟಿದೇಳಬೇಕು. ಆಗ ಮಾತ್ರ ಸತ್ಯದರ್ಶನದ ಹಾದಿ ಗೋಚರಿಸಲು ಸಾಧ್ಯ. ಶತಮಾನಗಳಿಂದ ನಡೆದುಬಂದ ಆಚರಣೆಗಳನ್ನು ಪ್ರಶ್ನಿಸಬಾರದು ಎಂಬ ಕುರುಡು ನಂಬಿಕೆಗೆ ಈಗಲೂ, ಇಂಥಾ ವಿಜ್ಞಾನಯುಗದಲ್ಲೂ ಜೋತುಬೀಳುವ ಮೂಲಕ ನಮ್ಮನ್ನು ಕೈಹಿಡಿದು  ಮುನ್ನಡೆಸಬೇಕಿದ್ದ ವೈಚಾರಿಕತೆಯ ಹರಣ ಮಾಡುತ್ತಿದ್ದೇವೆ. ಮೂಲತಃ ಜಡವಸ್ತುಗಳಾದ ಆಯುಧಗಳು, ಯಂತ್ರಗಳು, ಇತ್ಯಾದಿಗಳಿಗೆ ಯಾವ ಭಾವವೂ ಇರುವುದಿಲ್ಲ, ಹಾಗಾಗಿ ಅವುಗಳಿಗೆ ಮಾಡುವ ಪೂಜೆ, ಕೇವಲ ಶುದ್ಧಮೌಢ್ಯವೆಂದು ನಿಸ್ಸಂಶಯವಾಗಿ ಹೇಳಬಹುದು! ಯಾವುದಾದರೂ ಪ್ರಮುಖ ಕಾರ್ಯಗಳನ್ನು ಆರಂಭಿಸುವ ಮೊದಲು ಒಳ್ಳೆಯ ಮುಹೂರ್ತ ನೋಡುತ್ತಾರೆ, ರಾಹುಕಾಲದಲ್ಲಿ ಯಾವ ಕಾರ್ಯವೂ ಆರಂಭವಾಗುವುದಿಲ್ಲ. ವಿನಾಯಕನ ಸ್ತುತಿ ಇಲ್ಲದೆ ಯಾವ ಸಭೆ ಸಮಾರಂಭಗಳೂ ಆರಂಭಗೊಳ್ಳುವುದೇ ಇಲ್ಲ. ಇವರೆಲ್ಲಾ ಲೌಕಿಕ, ವೈಜ್ಞಾನಿಕ ವಿಷಯಗಳಲ್ಲಿ ಪಾಂಡಿತ್ಯ ಪಡೆದವರಾದರೂ ಬೌದ್ಧಿಕವಾಗಿ ಬಹಳ ದುರ್ಬಲರಾಗಿರುತ್ತಾರೆ. ವಿಪರ್ಯಾಸವೆಂದರೆ ವಿಜ್ಞಾನ ತಂತ್ರಜ್ಞಾನ ವೈದ್ಯವಿಜ್ಞಾನ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲೂ ಇಂಥಾ ಮೌಢ್ಯ ತುಂಬಿದ ಆಚರಣೆಗಳು ನಡೆಯುತ್ತಿರುವುದು ಅತೀ ಸೋಜಿಗವೇ ಸರಿ! ಇವರನ್ನು ಅನುಸರಿಸುವ ವಿದ್ಯಾರ್ಥಿಗಳು ಇನ್ನೇನು ವೈಚಾರಿಕತೆ ಮೈಗೂಡಿಸಿಕೊಂಡಾರು?

ಆದರೆ, ಹನ್ನೆರಡನೇ ಶತಮಾನದ ಕನ್ನಡನಾಡಿನ ಶರಣರು ಭೌತಿಕವಾಗಿ ಅಷ್ಟೇನೂ ವಿದ್ಯೆ ಕಲಿಯದಿದ್ದರೂ ಬೌದ್ಧಿಕವಾಗಿ ಬಹಳ ಸಬಲರಾಗಿದ್ದರು. ಒಬ್ಬ ವ್ಯಕ್ತಿ ಬೌದ್ಧಿಕವಾಗಿ ಸಬಲನಾದರೆ ಮಾತ್ರ ಅವನು ದಾಸ್ಯ ಮನೋಭಾವದಿಂದ ಹೊರಬರುತ್ತಾನೆ, ಇಲ್ಲವಾದಲ್ಲಿ ಅವನು ಎಂಥಾ ಉನ್ನತ ಸ್ಥಾನದಲ್ಲಿದ್ದರೂ ದಾಸ್ಯ ಮನೋಭಾವದಿಂದ ಹೊರಬರಲಾರ. ಬಸವಣ್ಣನವರು ಅಂದಿನ ಜನರಿಗೆ ಕೊಡಮಾಡಿದ್ದು ಇಂಥಾ ಬೌದ್ಧಿಕ ಶಿಕ್ಷಣವನ್ನು. ಅಂತಲೇ ಶರಣರು ಎಂಥಾ ಕಷ್ಟಕಾರ್ಪಣ್ಯ, ಬವಣೆಗಳಿಗೂ ಅಂಜಲಿಲ್ಲ. ಅವರ ಪ್ರಶ್ನೆಮಾಡುವ ಪರಿ ನಮಗೆ ಇಂದು ಅಚ್ಚರಿ ಮೂಡಿಸುತ್ತದೆ, ಅಂತಲೇ ಅಂದು ಸ್ವಾನುಭಾವದ ಅಗಣಿತ ವಚನಗಳು ಒಡಮೂಡಲು ಸಾಧ್ಯವಾಯಿತು. ಬಸವಣ್ಣನವರು ಪ್ರಶ್ನಿಸುತ್ತಾರೆ:

“ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ. ಒಬ್ಬರಿಗಾಳಾಗಿ, ಒಬ್ಬರನೋಲೈಸುವ ನಿರ್ಬುದ್ಧಿಮನುಜರನೇನೆಂಬೆ, ಕೂಡಲಸಂಗಮದೇವಾ!”

ಅಷ್ಟಮಿ ನವಮಿ ಎಂಬ ದಿನಗಳು ನಿಜವಾಗಿಯೂ ಪವಿತ್ರವೇ? ದೇವರ ಈ ಅಖಂಡ ಸೃಷ್ಟಿಯಲ್ಲಿ  ಶ್ರೇಷ್ಠ ಕನಿಷ್ಠ ಎಂಬುದು ನಿಜವಾಗಲೂ ಇದೆಯೇ? ಅಥವಾ ಇದೆಲ್ಲಾ ಕೇವಲ ಭ್ರಮೆಯೋ?  ಇಂದಿನ ವಿದ್ಯಾವಂತರು ಈ ರೀತಿ ಪ್ರಶ್ನಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ. ಹೀಗೆ ಇಂಥಾ ಮೌಢ್ಯವನ್ನು ಪ್ರಶ್ನಿಸದೇ ಪಾಲಿಸುವವರನ್ನು ನಿರ್ಬುದ್ಧಿ ಮನುಜರೆಂದು ಕರೆದಿದ್ದಾರೆ ಬಸವಣ್ಣನವರು.

ಇಂದು ಅತ್ಯುನ್ನತ  ಪದವಿ ಪಡೆದ ವಿದ್ಯಾವಂತರು  ರಾಹುಕಾಲದಲ್ಲಿ ಯಾವುದೇ ಕಾರ್ಯವನ್ನು ಆರಂಭಿಸಲು ಹಿಂಜರಿಯುತ್ತಾರೆ, ಶುಭಲಗ್ನಕ್ಕಾಗಿ, ಒಳ್ಳೆಯ ಸಮಯಕ್ಕಾಗಿ ಕಾದು ಕೂರುವುದನ್ನು ನಾವೆಲ್ಲಾ ನೋಡಿದ್ದೇವೆ. ಇದು ಅವರ ಮಾನಸಿಕ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಇಂದಿನ ಹೆಚ್ಚಿನವರು ತಮ್ಮ ಕಾರ್ಯಗಳಿಗೆ ಅನ್ಯರ ಒಪ್ಪಿಗೆ ಪಡೆಯುವಷ್ಟು ದುರ್ಬಲ ಮನಸ್ಸಿನವರಾಗಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಆಗಿಹೋದ  ಆಯ್ದಕ್ಕಿ ಮಾರಯ್ಯ ಎಂಬ ಶರಣ ವ್ಯರ್ಥವಾಗಿ ಚೆಲ್ಲಿರುತ್ತಿದ್ದ ಅಕ್ಕಿಯನ್ನು ಆಯ್ದು ಒಪ್ಪಮಾಡುವ ಕಾಯಕವನ್ನು ಮಾಡುತ್ತಿರುತ್ತಾರೆ, ಅವರೇನು ನಮ್ಮಂತೆ ಅನೇಕ ಪದವಿಗಳನ್ನು ಪಡೆದವರಲ್ಲ. ಆದರೆ ಅವರ ನಡೆ ನುಡಿ ಆಚಾರ ವಿಚಾರಗಳು ಎಷ್ಟೊಂದು ಸತ್ವಯುತವಾದವು, ಅವು ಇಂದಿನ ವಿದ್ಯಾವಂತರಿಗೆ ಮಾರ್ಗದರ್ಶಕವಾಗುವಲ್ಲಿ ಯಾವುದೇ ಸಂಶಯವಿಲ್ಲ. ಶುಭಸಮಯ ಶುಭಲಗ್ನ ಮುಹೂರ್ತ ಮುಂತಾದ ಮಾನವ ಕಲ್ಪಿತಗಳ ಕುರಿತು ಹೀಗೆ ಹೇಳಿದ್ದಾರೆ:

“ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ ತ್ರಿವಿಧಪೂಜೆ ಕೆಟ್ಟಿತ್ತು. ಗುರುಲಿಂಗಜಂಗಮದ ಅನುವನರಿತುದೆ ನೇಮ. ಕಾಲ ಉಚಿತಕ್ಕೆ ಬಂದುದ ಕೂಡಿಕೊಂಬುದೆ ನಿತ್ಯ. ಈ ಗುಣ ಅಮರೇಶ್ವರಲಿಂಗವ ಕೂಡುವ ಕೂಟ.”

ದೇವರ ಈ ಸುಂದರ ಸೃಷ್ಟಿಯಲ್ಲಿ ಒಳ್ಳೆಯಕಾಲ ಕೆಟ್ಟಕಾಲ ಎಂಬುದಿಲ್ಲ. ಒಂದು ವೇಳೆ ನಾವು ಒಳ್ಳೆಯಕಾಲ ಕೆಟ್ಟಕಾಲಗಳನ್ನು ಅರಸಿದರೆ ಅದು ದೇವರ ಸೃಷ್ಟಿಯಲ್ಲಿ ಕುಂದನ್ನು ಹುಡುಕಿದಂತೆ!  ಆದ್ದರಿಂದ ಯಾವ ಸಮಯದಲ್ಲಿ ಏನು ಬರುತ್ತದೋ ಅದನ್ನು ದೇವರಿತ್ತ ಪ್ರಸಾದವೆಂದು ಅನುಭವಿಸುವುದೇ ನಾವು ನಿಜವಾಗಿ ದೇವರಿಗೆ ಸಲ್ಲಿಸುವ ಗೌರವ, ಪೂಜೆ ಸಮರ್ಪಣೆ ಎಲ್ಲವೂ ಆಗಿರುತ್ತದೆ. ಇಲ್ಲದಿದ್ದರೆ ನಾವು ಮಾನಸಿಕ ಕ್ಲೇಶಕ್ಕೆ ಒಳಗಾಗುತ್ತೇವೆ, ನಾವು ಮಾಡುವ ಪೂಜೆ ಪ್ರಾರ್ಥನೆಗಳು ಅರ್ಥ ಕಳೆದುಕೊಳ್ಳುತ್ತವೆ, ಏಕೆಂದರೆ ದೇವರಲ್ಲಿ ನಾವು ಅಪವಿತ್ರವನ್ನು ಹುಡುಕುತ್ತಿದ್ದೇವೆ. ಶರಣರು ಇಂಥಾ ನಡೆಯನ್ನು ವಿಡಂಬಿಸುತ್ತಾರೆ.

ಶುಭಲಗ್ನ ಹುಡುಕುವ ವಿದ್ಯಾವಂತ ಅಂಧರಿಗೆ ಬಸವಣ್ಣನವರು ಹೇಳುತ್ತಾರೆ, “ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ, ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ, ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ, ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ, ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ.”  “ಲಗ್ನವೆಲ್ಲಿಯದೊ, ವಿಘ್ನವೆಲ್ಲಿಯದೊ, ಸಂಗಯ್ಯಾ ದೋಷವೆಲ್ಲಿಯದೊ, ದುರಿತವೆಲ್ಲಿಯದೊ, ಸಂಗಯ್ಯಾ ನಿಮ್ಮ ನೆನೆವಂಗೆ ಭವಕರ್ಮವೆಲ್ಲಿಯದೊ ಕೂಡಲಸಂಗಯ್ಯಾ”  ಎಲ್ಲವೂ ಯಾವಾಗ ಒದಗಿ ಬರುತ್ತದೋ ಅದೇ ಶುಭಸಮಯ ಅದಲ್ಲದೆ ಬೇರೆ ಶುಭಸಮಯವೆಂಬುದಿಲ್ಲ ಎಂದು ಬಸವಣ್ಣನವರು ಎಷ್ಟು ಸ್ಪಷ್ಟವಾಗಿ ೯೦೦ ವರ್ಷಗಳ ಹಿಂದೆಯೇ ಹೇಳಿದ್ದರೂ ಇಂದಿಗೂ  ಇಂಥಾ  ವೈಜ್ಞಾನಿಕ ಯುಗದಲ್ಲೂ ಅದು ಜನ ಮಾನಸವನ್ನು ಹೊಕ್ಕಿಲ್ಲವೆಂದರೆ ಎಷ್ಟು ಅಜ್ಞಾನದ ಅಂಧಕಾರ ನಮ್ಮಲ್ಲಿ ತುಂಬಿರಬೇಕು, ಅಲ್ಲವೇ?

ಇನ್ನು ಪವಾಡಗಳ ಹಿಂದೆ ಬೀಳುವ, ಅವುಗಳನ್ನು ನಂಬುವ, ಅದಕ್ಕೆ ಮಾರು ಹೋಗುವ ವಿದ್ಯಾವಂತರ ಸಂಖ್ಯೆಯೇನೂ ಕಡಿಮೆ ಇಲ್ಲ. ನೈಸರ್ಗಿಕ ಸಹಜತೆಯ ಸತ್ಯವನ್ನು ಇವರಿಗೆ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ. ಯಾವುದಾದರೂ ಪವಾಡ ಬೇಕೇಬೇಕು ಎನ್ನುವ ಮನಸ್ಥಿತಿ ಇವರದ್ದು, ಹಾಗಾಗಿಯೇ ಜ್ಯೋತಿಷಿಗಳ, ಆಧುನಿಕ ಡೋಂಗಿ ಮಹರ್ಷಿಗಳ ಸುತ್ತ ಸುತ್ತುತ್ತಿರುತ್ತಾರೆ ಹಾಗೂ ಅವರಿಂದ  ನಿತ್ಯ ಮೋಸಹೋಗುತ್ತಿರುತ್ತಾರೆ. ಆದರೂ ಅವರ ಅಜ್ಞಾನದ ಮನಕ್ಕೆ ಮೋಸಹೋದ ಭಾವ ಉಂಟಾಗುವುದೇ ಇಲ್ಲ.

ವಿದ್ಯಾವಂತರೆನಿಸಿಕೊಂಡ  ಉನ್ನತ ಪದವೀಧರರು ಧರೆಯ ಮೇಲೆ ಇರುವ ಎಲ್ಲಾ ದೇವಸ್ಥಾನಗಳಿಗೆ ಎಡತಾಕುವುದನ್ನು ನಾವು ದಿನ ನಿತ್ಯ ನೋಡುತ್ತೇವೆ. ಅಂತಲೇ ದೇವಸ್ಥಾನಗಳ ಹುಂಡಿಗಳು ತುಂಬಿ ಹೋಗುತ್ತಿವೆ. ಹಸಿದ ಬಡವನಿಗೆ ಬಿಡಿಗಾಸು ಕೊಡದ ಈ ಜನ ಕೋಟಿಗಟ್ಟಲೇ ಹಣ, ಬಂಗಾರವನ್ನು ದೇವಸ್ಥಾನದ ಹುಂಡಿಗೆ ಸುರಿಯುತ್ತಾರೆ  ಮೂರ್ಖ ಶಿಖಾಮಣಿಗಳು! ಇಷ್ಟಕ್ಕೂ ಆ ಹಣವನ್ನು ಅನುಭವಿಸುವವರು ಯಾರು? ದೇವರೇ? ಅಲ್ಲ, ದೇವಸ್ಥಾನದ ತಂತ್ರಿಗಳು, ಪದಾಧಿಕಾರಿಗಳು ಹಾಗೂ ಜನರನ್ನು ನಂಬಿಸಿ ಮೋಸ ಮಾಡುವ ಕುತಂತ್ರಿಗಳು! ಹಸಿದವನಿಗೆ ತುತ್ತು ಅನ್ನ ನೀಡದೇ, ಸರ್ಕಾರಕ್ಕೆ ತೆರಿಗೆ ಕಟ್ಟದೇ ಮೋಸ ಮಾಡಿ ದೇವರ ಹುಂಡಿಗೆ ಹಣ ಸುರಿಯುವ ಮೂರ್ಖರ ಕಂಡು ಅಸಹ್ಯಪಡಬೇಕೋ, ಮರುಕಪಡಬೇಕೋ ತಿಳಿಯದಾಗಿದೆ!!! ಅದಕ್ಕೇ ಪ್ರಭುದೇವರು “ಸುತ್ತಿಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ. ತುಟ್ಟ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ. ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ. ನಿಚ್ಚಕ್ಕಿನ ಗಮನವಂದಂದಿಗೆ; ಅತ್ತಲಿತ್ತ ಹರಿವ ಮನವ ಚಿತ್ತದಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರನೆಂಬ ಲಿಂಗವು.” “ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ, ಮೀಯದೆ ಮೀನು? ಮೀಯದೆ ಮೊಸಳೆ? ತಾ ಮಿಂದು, ತನ್ನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ?” ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಇಂದಿನ ವಿದ್ಯಾವಂತ ಹೆಂಗಳೆಯರು ಮಾಡುವ ವ್ರತ ನೇಮಗಳು ಅವರ ಅಜ್ಞಾನವನ್ನು ಪ್ರದರ್ಶಿಸುತ್ತವೆ. ನಾಗಪೂಜೆ, ತುಳಸಿಪೂಜೆ, ವರಲಕ್ಷ್ಮೀ ವ್ರತ, ಇತ್ಯಾದಿ, ಅಬ್ಬಬ್ಬಾ ಒಂದೇ ಎರಡೇ?  ಇವರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಯದಿರಲು ಕಾರಣವೇನು? ಕುರುಡಾಗಿ ಎಲ್ಲವನ್ನೂ ನಂಬುವ ಇವರು ವಿದ್ಯೆ ಕಲಿತು ಸಾಧಿಸಿದ್ದೇನು? ಇಂಥಾ ಪ್ರಶ್ನೆಗಳು ಪ್ರಜ್ಞಾವಂತರನ್ನು ದಿನನಿತ್ಯ ಕಾಡುತ್ತವೆ. ಬಸವಣ್ಣನವರು ಹೇಳುತ್ತಾರೆ- “ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ” “ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,  ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ! ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ! ದೈವ ದೈವವೆಂದು ಕಾಲಿಡಲಿಂಬಿಲ್ಲ, ದೇವನೊಬ್ಬನೆ ಕೂಡಲಸಂಗಮದೇವ್” ಎಂದು ಹೇಳಿ ೯೦೦ ವರ್ಷಗಳಾದರೂ ಅದರ ಅರಿವು ಇನ್ನೂ  ನಮ್ಮಲ್ಲಿ ಜಾಗೃತವಾಗದಿರುವುದು ಅತೀ ನೋವಿನ ಸಂಗತಿ.

ಮಾನವನಿಗೆ ಜೀವನ ಹೊರೆಯಾಗಬಾರದು, ಅತ್ಯಂತ ಸಹಜವಾಗಬೇಕು, ಹೇಗೆ ಉಸಿರಾಟವು ನಿತ್ಯ ನಿರಂತರವಾಗಿ ನಮ್ಮ ಅರಿವಿಗೇ ಬಾರದಂತೆ ಸಹಜವಾಗಿ ನಡೆಯುತ್ತದೆಯೋ ಹಾಗೇ ನಮ್ಮ ಜೀವನವೂ ಅತ್ಯಂತ ಸಹಜವಾಗಿ  ಹಗುರವಾಗಿ ನಡೆಯಬೇಕು. ಅದಕ್ಕಾಗಿ, ಸಮಾಜವನ್ನು ಶುದ್ಧೀಕರಿಸಲು, ಜನ ಜೀವನವನ್ನು ಸರಳವಾಗಿಸಲು  ಬಸವಾದಿ ಶರಣರು ತಮ್ಮ ಜೀವನವನ್ನು ಗಂಧದಂತೆ ಸವೆಸಿದರು. ಅವರ ಗಂಧದಂಥಾ ಬಾಳಿನ ಸೌರಭವನ್ನು ನಾವು ನಮ್ಮ ಜೀವನದಲ್ಲಿ ಉಸಿರಾಗಿಸಿಕೊಂಡರೆ ನಮ್ಮ ಜೀವನ ಪಾವನವಾಗುವುದು.

Previous post ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
Next post ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?

Related Posts

ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
Share:
Articles

ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ

July 4, 2022 ಡಾ. ವಿಜಯಕುಮಾರ್ ಬೋರಟ್ಟಿ
ಇಂಗ್ಲೀಷಿನಲ್ಲಿ ಕ್ಯಾಲೆಂಡರ್ ಮತ್ತು ಕನ್ನಡದಲ್ಲಿ ಪಂಚಾಂಗವೆಂದು ಕರೆಯಲ್ಪಡುವ ಕಾಲನಿರ್ಣಯ ವ್ಯವಸ್ಥೆಯ ಬಗ್ಗೆ ಎಲ್ಲರಿಗು ತಿಳಿದಿರುವ ವಿಷಯವೇ. ನಮ್ಮ ದಿನ ನಿತ್ಯದ...
ಖಾಲಿ ಕೊಡ ತುಳುಕಿದಾಗ…
Share:
Articles

ಖಾಲಿ ಕೊಡ ತುಳುಕಿದಾಗ…

October 5, 2021 ಲಕ್ಷ್ಮೀಪತಿ ಕೋಲಾರ
“Be vacant and you will remain full”- Lao Tsu ತಾವೋನ ‘ಖಾಲಿ’ಯ ಬಗ್ಗೆ ಇತ್ತೀಚೆಗೆ ನನ್ನ ವ್ಯಸನ ಜಾಸ್ತಿಯಾಗುತ್ತಿದೆ. ತಾವೋನ ಖಾಲಿ ಎಷ್ಟು ಖಾಲಿಯಲ್ಲವೆಂದರೆ ಅದು...

Comments 11

  1. Chandrashekhar Negi
    Feb 7, 2019 Reply

    ನೀವು ನಮ್ಮನ್ನೆಲ್ಲಾ, ಅದರಲ್ಲೂ ನನ್ನನ್ನ ಹೀಗೆ ಲೇಖನಿಯ ಮೂಲಕ ತಿವಿದದ್ದು ಸರಿಯಾಗಿದೆ, ನಾನೂ ವಿದ್ಯೆಯೊಳಗಿನ ಅವಿದ್ಯೆಗೆ ಒಂದು ಉದಾಹರಣೆ.

  2. Kumuda Jairam
    Feb 7, 2019 Reply

    Very interesting article. everyone should read it.

  3. Vinay Kulakarni
    Feb 9, 2019 Reply

    “ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಣ ಸಿಪ್ಪೆ ಒಪ್ಪಗೆಡದು” –
    ಎಂಥ ಅದ್ಭುತ ಮಾತು ಸರ್. ನಮ್ಮ ಇವತ್ತಿನ ಶಿಕ್ಷಣ ಹಾಗೆ ಖಂಡಿತ ಪಕ್ವ ಮಾಡೋದಲ್ಲ, ಬರೀ ಸ್ಪರ್ಧಾಳುಗಳನ್ನು ರೆಡಿ ಮಾಡುತ್ತದೆ. ಶಿಕ್ಷಣಕ್ಕೆ ದಾರಿದೀಪದಂತಿದೆ ನಿಮ್ಮ ಲೇಖನ.

  4. gavisiddappa lamani
    Feb 10, 2019 Reply

    ಗುರು ತೋರಿಸುವ ತನಕ ನಮಗೆ ನಿಜ ಬದುಕು ಕಾಣೋದು ಹ್ಯಾಂಗೆ? ಸರ್, ವಿದ್ಯೆಯೊಳಗೆ ಜ್ಞಾನ ಮರೆಯಾಗದೆ, ಅಜ್ಞಾನ ತುಂಬಿ ನಿಂತದೆ. ಆ ಅಜ್ಞಾನವನ್ನೇ ಜ್ಞಾನಾಂತ ನಾವು ಕುಡಿತಾ ಅದೀವಿ. ಹಿಂಗಾದ್ರೆ ಹೆಂಗೆ? ನಾವು ದಡ ಮುಟ್ಟಲ್ಲಾ, ಇಲ್ಲೇ ಕೊಚ್ಚಿಕೊಂಡು ಹೋಗ್ತೆವೆ. ದಾರಿ ತೋರಿ ನಡೆಸೋರಾರು?

  5. pro shivaranjini
    Feb 11, 2019 Reply

    ನೀವು ಕೊಟ್ಟ ಉದಾಹರಣೆಗಳೆಲ್ಲ ಮುಟ್ಟಿ ನೋಡಿಕೊಳ್ಲುವಂತಿವೆ, ನಾವು ಹೀಗಾದದ್ಯಾಕೆ ಅಂತ ಯಾರೂ ಯೋಚಿಸಲಾರರು, ಅಷ್ಟರಮಟ್ಟಿಗೆ ಶಿಕ್ಷಣ ಕುಲಗೆಟ್ಟು ಹೋಗಿದೆ, ಆಧುನಿಕತೆಯೇ ವಿದ್ಯೆ ಎಂದು ಎಲ್ಲಿಯವರೆಗೆ ನಂಬುತ್ತೇವೋ ಅಲ್ಲಿಯವರೆಗೆ ನಮ್ಮ ಉದ್ದಾರ ಸಾದ್ಯವಿಲ್ಲ.

  6. Eshwarappa Mudalagi
    Feb 12, 2019 Reply

    ಇವತ್ತಿನ ಟೊಳ್ಳು ಶಿಕ್ಷಣದ ಬಗೆಗೆ ನೀವು ಹೇಳಿದ ವಿಷಯಗಳು ನಿಜ. Moral Science ಎನ್ನುವ ಒಂದು ವಿಷಯ ಇದ್ದರೂ ಅದು ನೀತಿ ಕತೆಗಳನ್ನು ಹೇಳುತ್ತದೆಯೇ ಹೊರತು ವೈಚಾರಿಕ ದೃಷ್ಟಿಕೋನ ಬೆಳೆಸುವುದಿಲ್ಲ. ಮುಂದಿನ ಜನಾಂಗಕ್ಕೆ ಶಿಕ್ಷಣ ಕೊಡುತ್ತಿರುವುದು ವಿಷಯಗಳ ಮಾಹಿತಿ ಮಾತ್ರ. ಉತ್ತಮ ಪ್ರಜೆಗಳನ್ನು ತಯಾರಿಸಬೇಕಾದ ಶಾಲಾ-ಕಾಲೇಜುಗಳು ಸೋಲುತ್ತಿವೆ.

  7. Mahadev hadapad
    Feb 12, 2019 Reply

    ಇಂದು ಜ್ಞಾನವೆನ್ನುವುದು ವಿಕಿಪೀಡಿಯ ಹುಡುಕಾಟವಾಗಿದೆ ಸರ್… ಆದರೆ ಅರಿವನ್ನು ಮುಟ್ಟುವ ಜ್ಞಾನವನ್ನು ಇಂದಿನ ಯಾವ ಶಿಕ್ಷಣದ ಕೋರ್ಸಗಳೂ ನೀಡುತ್ತಿಲ್ಲ. ಅರಿವೆ ಗುರುವಾಗಬೇಕು ಎಂಬುದು ಶರಣರ ತತ್ವ. ಶೂನ್ಯಸಂಪಾದನೆಯಲ್ಲಿ ಸ್ಪಷ್ಟವಾಗಿ ಆ ಅರಿವನ್ನು ಎಚ್ಚರಿಸುವ ಚಲನೆ ಇದೆ. ಲೇಖನ ಚನ್ನಾಗಿದೆ.

  8. shobhadevi
    Feb 19, 2019 Reply

    ಓದಿದೋದ್ಯಾರು, ಓದದೆ ಇರೋರಾರು? ಬುದ್ಧಿವಂತರಾರು. ಅಜ್ಞಾನಿಗಳಾರು? ರ್ಯಾಂಕ ಪಡೆದೋರಾರು, ಫೇಲಾದೊರಾರು? ಇವತ್ತಿನ ನಮ್ಮ ಶಿಕ್ಷಣ ಕುಲಗೆಟ್ಟು ಹೋಗಿದೆ, ವಿದ್ಯಾರ್ಥಿಗಳು ಅಂಕದ ಬೊಂಬೆಗಳಾಗಿದ್ದಾರೆ. ನಿಮ್ಮ ಲೇಖನವನ್ನು ಪ್ರತಿಯೊಬ್ಬ ಶಿಕ್ಷಕರೂ ಓದಬೇಕು, ಶಾಲಾ-ಕಾಲೇಜುಗಳಿಗೆ ಹಂಚಬೇಕು ಸರ್.

  9. ananth Jagali
    Feb 22, 2019 Reply

    ಈಗ ಲೆಖನ ಓದಿದೆ, ನಮ್ಮ ಜಾಡ್ಯತೆಯನ್ನು ಬಡಿದೆಬ್ಬಿಸುವಂತಿದೆ, ನಾವು ನಿಜಕ್ಕೂ ವಿದ್ಯಾವಂತರೆ ಎಂದು ಪ್ರಶ್ನಿಸಿಕೊಳ್ಳುವಂತಿದೆ.

  10. Sushma karaga
    Feb 22, 2019 Reply

    ವಿದ್ಯಾವಂತ ಹೆಣ್ಣುಮಕ್ಕಳಿಗಿಂತ ವಿದ್ಯಾವಂತ ಗಂಡಸರೇ ಸಂಸ್ಕೃತಿ ಹೆಸರಿನಲ್ಲಿ ಮೂಡನಂಬಿಕೆಗಳನ್ನು ಪೋಷಿಸುತ್ತಿದ್ದಾರೆ. ಪ್ರಶ್ನೆ ಮಾಡುವುದು ದ್ರೋಹ ಎಂದು ತಿಳಿದಿದ್ದಾರೆ. ವಿದ್ಯೆ ಅಂಕಗಳಿಕೆ ಮತ್ತು ಜಾಬ್ ಹುಡುಕಲು ಸೀಮಿತವಾಗಿದೆ.

  11. Chinmayi
    Mar 1, 2019 Reply

    Reality based article.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
Copyright © 2023 Bayalu