Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನಗಳ ಓದು ಮತ್ತು ಅರ್ಥೈಸುವಿಕೆ
Share:
Articles August 5, 2018 ಡಾ. ಪಂಚಾಕ್ಷರಿ ಹಳೇಬೀಡು

ವಚನಗಳ ಓದು ಮತ್ತು ಅರ್ಥೈಸುವಿಕೆ

ವಚನಗಳು ಶರಣರ ಜೀವನಕ್ಕೆ  ಹಿಡಿದ ಕೈಗನ್ನಡಿ, ಶರಣರ ಅನುಭಾವದ ಅಕ್ಷರರೂಪ. ಶರಣ ಪಥದಲ್ಲಿ ಸಾಗ ಬಯಸುವ ಪ್ರತಿಯೊಬ್ಬ ಪಥಿಕನ ದಾರಿ ದೀಪಗಳು. ಮೌಢ್ಯದ ಕೊಳೆಯನ್ನು ತೊಳೆಯುವ, ಅಂಧಕಾರದ ಮನಕ್ಕೆ ಅಂಟಿದ ಕಿಲುಬನ್ನು ತೊಳೆದು ಸ್ವಚ್ಚಗೊಳಿಸಿ ಫಳಫಳ ಹೊಳೆಯುವಂತೆ ಮಾಡಬಲ್ಲ ವಿಚಾರ ತರಂಗಿಣಿಗಳು. ಅಂತಹ ವಚನಗಳನ್ನು ಓದಿ ಸರಿಯಾಗಿ ಯಥಾವತ್ತಾಗಿ ಅರ್ಥ ಮಾಡಿಕೊಂಡು ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದುದು ಬಸವ ಪಥಿಕರ ಆದ್ಯ ಕರ್ತವ್ಯ. ವಚನಗಳನ್ನು ಓದುವಾಗ ಬಹಳ ಎಚ್ಚರಿಕೆಯಿಂದ ಆ ವಚನದ ರಚನೆಯ ಹಿಂದಿನ ಸನ್ನಿವೇಶವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಆಗ ಮಾತ್ರ ನಿರ್ದಿಷ್ಟ ವಚನದ ನಿಖರವಾದ ಅರ್ಥ ನಮಗೆ ಆಗುವುದು. ಸುಮ್ಮನೇ ಯಾವುದೋ ಒಂದು ವಚನವನ್ನು, ಅದರ ಹಿನ್ನೆಲೆಯನ್ನು ಅವಲೋಕಿಸದೆ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಅಲ್ಲಿ ಅರ್ಥಕ್ಕಿಂತ ಅನರ್ಥವೇ ಹೆಚ್ಚಾಗುವುದು.

ವಚನಗಳಲ್ಲಿ ಪ್ರಮುಖವಾಗಿ ಮೂರು ಬಗೆಯನ್ನು ಗುರುತಿಸಬಹುದು:

೧. ವಿಡಂಬನಾತ್ಮಕ ವಚನಗಳು
೨. ಆಧ್ಯಾತ್ಮಿಕ ಅನುಭಾವದ ವಚನಗಳು
೩. ಸಂವಾದಿಕ ವಚನಗಳು

೧. ವಿಡಂಬನಾತ್ಮಕ ವಚನಗಳು:

ಕೆಲವು ವಚನಗಳು ಅಂದಿನ ಸಮಾಜದಲ್ಲಿ, ಜನಮಾನಸದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ಸುಜ್ಞಾನವನ್ನು ಬಿತ್ತಿ ಸದಾಚಾರದ ಬೆಳೆತೆಗೆಯುವ ಸ್ವಭಾವದವು. ಈ ವಚನಗಳು ಓದುಗರಿಗೆ ಬೇವಿನಂತೆ ಕಹಿಯೆನಿಸಿದರೂ ಅವುಗಳನ್ನು ಆಚರಣೆಗೆ ತಂದಾಗ ಬೆಲ್ಲದಂತೆ ಸಿಹಿಯಾಗುವುದು. ಹಾಗಾಗಿಯೇ ಬಸವಣ್ಣನವರು,”ಆದ್ಯರ ವಚನ ಪರುಷ ಕಂಡಣ್ಣಾ; ಸದಾಶಿವನೆಂಬ ಲಿಂಗವ ನಂಬುವುದು, ನಂಬಲೊಡನೆ ನೀ ವಿಜಯಿ ಕಂಡಣ್ಣಾ. ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಕೂಡಲಸಂಗನ ಶರಣರ ವಚನ ಬೇವ ಸವಿದಂತೆ” ಎಂದಿರುವರು.

ಉದಾಹರಣೆಗೆ:

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, 
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ !
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ !
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ.

ಲಿಂಗವಿರದೆ ಸೀಮೆಯ ಕಲ್ಲಿನಲ್ಲಿ
ಲಿಂಗವಿರದೆ ಪಶುವಿನ ತೊಡೆಯಲ್ಲಿ
ಕಲ್ಲ ತೆಕ್ಕೊಂಡು ಮೆಳೆಯ ಮೇಲೆ ಇಟ್ಟಡೆ,
ಆ ಕಲ್ಲು ಮೆಳೆಯಲ್ಲಿ ಸಿಕ್ಕಿದಡೆ ಆ ಮೆಳೆ ಭಕ್ತನಾಗಬಲ್ಲುದೆ
ಇದು ಕಾರಣ ಸತ್ಯ, ಸಹಜ, ಸದ್ಭಾವ, ಸದ್ವರ್ತನೆ ಉಳ್ಳಡೆ ಸದ್ಭಕ್ತ,
ಇಲ್ಲದಿದ್ದಡೆ ಆ ಮೆಳೆಯೊಳಗೆ ಸಿಕ್ಕಿ ಕಲ್ಲಿನಂತೆ
ಕಾಣಾ ಕೂಡಲಸಂಗಮದೇವಾ.

ಸೃಷ್ಟಿಗೆ ಹುಟ್ಟಿದ ಕಲ್ಲು, ಕಲ್ಲುಕುಟಿಕನಿಂದ ಮೂರ್ತಿಯಾಗಿ
ಮಂತ್ರಕ್ಕೆ ಲಿಂಗವಾಯಿತಲ್ಲಾ
ಇವರಿಗೆ ಹುಟ್ಟಿದ ಕೂಸ ಲಿಂಗವೆಂದು ಕೈವಿಡಿವ
ವ್ರತಗೇಡಿಗಳನೇನೆಂಬೆ ಗುಹೇಶ್ವರಾ.
ಹೀಗೆ ಎಲ್ಲಾ ಶರಣರೂ ಹಲವಾರು ವಚನಗಳಲ್ಲಿ  ಅಜ್ಞಾನಯುಕ್ತ ಆಚರಣೆಗಳನ್ನು ಖಂಡಿಸಿ ಅರಿವಿನ ಬೀಜಗಳನ್ನು ಬಿತ್ತಿದ್ದಾರೆ.

೨. ಆಧ್ಯಾತ್ಮಿಕ ಅನುಭಾವದ ವಚನಗಳು

ಕೆಲವು ವಚನಗಳು  ಶರಣರು ಸಾಧಿಸಿದ  ಆಧ್ಯಾತ್ಮಿಕ ಸಾಧನೆಯ ಕನ್ನಡಿಗಳಾಗಿವೆ, ಈ ವಚನಗಳನ್ನು ಓದುತ್ತಿದ್ದರೆ ಶರಣರು ನಿಂತ ನೆಲೆ ಏರಿದ ಎತ್ತರ ಅನುಭಾವದ ಆಳ ನಮ್ಮ ಅರಿವಿಗೆ ಬರುತ್ತಾ ಹೋಗುತ್ತವೆ. ಇಂಥಾ ವಚನಗಳು ಕಬ್ಬಿನ ತೋಟದ ಹಾಗೆ. ಕುರಿಗಳ ಹಿಂಡು ಚೆನ್ನಾಗಿ ಕೊಬ್ಬಿ ಬೆಳೆದ ಕಬ್ಬಿನ ತೋಟಕ್ಕೆ  ನುಗ್ಗಿ ಕೇವಲ ತುದಿಯ ಗರಿಗಳನ್ನು ಮಾತ್ರ ತಿಂದು ಹೊಟ್ಟೆ ತುಂಬಿಸಿಕೊಂಡು ಆನಂದಿಸುತ್ತವೆ. ಆದರೆ ಅದು ಕೇವಲ ಗರಿಯಲ್ಲಿರುವ ನೀರಿನಂಶವನ್ನು ಮಾತ್ರ ಸವಿದಿರುತ್ತವೆ. ನಿಜವಾದ ಸಿಹಿ ಇರುವುದು ಒಳಭಾಗದ ಕಬ್ಬಿನ ಜಲ್ಲೆಯಲ್ಲಿ. ಕುರಿಗಳಿಗೆ ಗಟ್ಟಿಯಾದ ಕಬ್ಬಿನ ಜಲ್ಲೆಗಳನ್ನು ತಿನ್ನುವ ಶಕ್ತಿ ಇರುವುದಿಲ್ಲ. ಆದ್ದರಿಂದ ಅದರಲ್ಲಿರುವ ಹಾಲಿನ ರಸದ ಸ್ವಾದವನ್ನು ಅನುಭವಿಸಲು ಅವುಗಳಿಗೆ ಸಾಧ್ಯವಾಗದು. ಅಂಥಾ ರುಚಿಕರವಾದ ಸಿಹಿ ಹಾಲಿನ ಸ್ವಾದವನ್ನು ಸವಿಯಲು ಆನೆಗಳಿಂದ ಮಾತ್ರವೇ ಸಾಧ್ಯ. ಹಾಗೇ ಶರಣರ ಅನುಭಾವಿಕ ವಚನಗಳ ಆಳ ಅಗಲಗಳನ್ನು ಅನುಭವಿಸಲು ವಿಶೇಷ ಸಾಧನೆ ಅರಿವು ವಚನಾಸಕ್ತರಲ್ಲಿ ಇರಬೇಕಾಗುತ್ತದೆ.  ಇಲ್ಲವಾದಲ್ಲಿ ಕುರಿಯಂತೆ ಕೇವಲ ಶಬ್ದ ಜಾಲದ ಹಿಂದೆ ಬಿದ್ದು ಶಾಬ್ದಿಕ ಅರ್ಥವನ್ನಷ್ಟೇ ಗ್ರಹಿಸಿ ಇದೇ ಸತ್ಯ ಎಂದು ಪ್ರತಿಪಾದಿಸುತ್ತೇವೆ. ವಚನಗಳ ಅಂತರಂಗದ ಭಾವವನ್ನು ಗ್ರಹಿಸಲು ವಿಫಲರಾಗುತ್ತೇವೆ. ಇಂಥಾ ಒಂದೊಂದು ವಚನವೂ ಅಂತರಂಗವನ್ನು ಇಣುಕಿ ನೋಡಿ ಅಲ್ಲಿಯ ಓರೆಕೋರೆಗಳನ್ನು ತಿದ್ದಿ ಸಾಧನೆಯ ಪಥದಗುಂಟ ಸಾಗಲು ಪ್ರೇರೇಪಿಸಿ ಶಕ್ತಿಯನ್ನು ತುಂಬುತ್ತವೆ. ಅನುಭಾವಿಕ ವಚನಗಳಲ್ಲಿ ಕೆಲವು ಸರಳವಾಗಿಯೂ, ಕೆಲವು ಬೆಡಗಿನ ಶೈಲಿಯಲ್ಲೂ ಮತ್ತೂ ಕೆಲವು ಸ್ವರವಚನಗಳಾಗಿಯೂ ರಚಿಸಲ್ಪಟ್ಟಿವೆ. ಈ ರೀತಿಯ ಕೆಲವು ಅನುಭಾವಿಕ ವಚನಗಳನ್ನು ನೋಡೋಣ.

ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು.
ಅನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು.
ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ.

ಇದು ಪ್ರಭುದೇವರ ಬೆಡಗಿನ ವಚನ. ಇಂಥಾ ವಚನಗಳಲ್ಲಿ ಬರುವ ಪ್ರತಿಯೊಂದು ಪದಕ್ಕೂ ಗೂಢಾರ್ಥವಿದ್ದು, ಆ ಗೂಢಾರ್ಥವನ್ನು ಬೇಧಿಸಿದಾಗ ಓದುಗರಲ್ಲಿ ವಿಶಿಷ್ಟವಾದ ಆನಂದ ಪ್ರಾಪ್ತಿಯಾಗುವುದರ ಜೊತೆಗೆ ಒಂದು ಹೊಸಲೋಕವೇ ಅನಾವರಣಗೊಂಡಂತೆ ಭಾಸವಾಗುವುದು. ಮೇಲ್ನೋಟಕ್ಕೆ ಈ ವಚನ ನಕಾರಾತ್ಮಕ ಭಾವದೊಂದಿಗೆ ಕಾಣುವುದು, ಆದರೆ ಅದರ ಆಂತರ್ಯಕ್ಕಿಳಿಯಲು ಪ್ರಯತ್ನಿಸಿದಾಗ ಸಮುದ್ರದೊಳಗಿನ ಮುತ್ತಿನಂತೆ ಹೊಸ ವಿಚಾರ ಗೋಚರವಾಗುವುದು.

ಈ ವಚನವನ್ನು ಪ್ರವೇಶಿಸೋಣ- ಸೃಷ್ಟಿಯ  ಪ್ರತಿಯೊಂದು ಕಣವೂ ಮೂರು ತತ್ವಗಳಿಂದ ರಚನೆಯಾಗಿವೆ. ಅವುಗಳೆಂದರೆ ಗುರು, ಲಿಂಗ ಮತ್ತು ಜಂಗಮ ತತ್ವಗಳು. ಗುರು ತತ್ವವು ಸ್ಥೂಲ ತನುವನ್ನೂ, ಲಿಂಗ ತತ್ವವು ಸೂಕ್ಷ್ಮ ತನುವನ್ನೂ, ಜಂಗಮ ತತ್ವವು ಕಾರಣ ತನುವನ್ನೂ ಪ್ರತಿನಿಧಿಸುತ್ತವೆ.
ಗುರು: ಸ್ಥೂಲತನು, ಪಾದ: ಕರ್ಮೇಂದ್ರಿಯಗಳ ಸಂಕೇತ, ತಲೆ: ಭಿನ್ನಬುದ್ಧಿ
ಯಾವಾಗ ಆಧ್ಯಾತ್ಮ ಸಾಧಕನ ಮನವು ಅಂತರ್ಮುಖಿಯಾಗಿ ಸಂಚರಿಸಿ ತನ್ನೊಳಗೆ ಸತ್ಯವನ್ನು ಹುಡುಕಲು ಪ್ರಾರಂಭಿಸುವುದೋ ಆಗ ಆತನ ಇಂದ್ರಿಯಗಳು ಬಹಿರ್ಮುಖ ಚಲನೆಯನ್ನು ಕಳೆದುಕೊಂಡು ಒಳಮುಖವಾಗುತ್ತವೆ. ಆತನ ಕರ್ಮೇಂದ್ರಿಯಗಳೆಲ್ಲವೂ ಲೋಕಾರೂಢಿಯಂತೆ ಕರ್ಮವನ್ನು ಮಾಡುತ್ತಿದ್ದರೂ ಯಾವುದೇ ಪ್ರತಿಫಲದ ಸೋಂಕಿರುವುದಿಲ್ಲ. ತಾನು ಮಾಡುವ ಕರ್ಮವೆಲ್ಲಾ ದೇವರ ಸೇವೆಯೆಂದೇ ತಿಳಿದು ಮಾಡುತ್ತಿರುತ್ತಾನೆ. ಆತನ ಅಂತರಂಗವೂ ತಾನು ದೇವನಿಂದ ಭಿನ್ನವಿದ್ದೇನೆ ಎಂದು ಭಿನ್ನ ಬುದ್ಧಿ ತೋರದೇ ಅಭಿನ್ನ ನೆಲೆಯಲ್ಲಿ ನಿಲ್ಲುವುದು. ಅಂದರೆ ದೇವರಿಗೂ ತನಗೂ ಯಾವುದೇ ಭಿನ್ನವಿಲ್ಲ ದೇವನು ನನ್ನೊಳಗೂ ನಾನು ದೇವರೊಳಗೂ ಅವಿನಾಭಾವವಾಗಿ ಬೆರೆತು ಬೇರಿಲ್ಲದ ಭಾವ ವ್ಯಕ್ತವಾಗಿದೆ (ತಲೆಯಿಲ್ಲದ ಶಿಷ್ಯ). ಆಚಾರ ಬೇಕಿರುವುದು ಭಿನ್ನತೆ ಇದ್ದಾಗ ಮಾತ್ರ. ಅಭಿನ್ನ ಭಾವ ನೆಲೆಗೊಂಡ ಬಳಿಕ ಅಲ್ಲಿ ಆಚಾರಕ್ಕೆ ಇಂಬಿಲ್ಲ, ಹಾಗಾಗಿ ಅವನು ಅನಾಚಾರಿ. ಸೂಕ್ಷ್ಮ ತನುವು ನಿರ್ವಿಕಾರವಾಗಿ ಸಂಕಲ್ಪ ವಿಕಲ್ಪಗಳಿಗೊಳಗಾಗದೆ ಎಲ್ಲಾ ವ್ರತವನ್ನು ಮೀರಿದ ಘನದೆತ್ತರಕ್ಕೆ ಏರಿದ ಕಾರಣ ಅವನು ವ್ರತಗೇಡಿ. ಹೀಗೆ ಸಾಧಕನ ಅಂತರಂಗ ಹಾಗೂ ಬಹಿರಂಗಗಳೆರಡೂ ಲಿಂಗತತ್ವವೇ ತಾನಾದ ಬಳಿಕ ಅವು ಪರಿಪೂರ್ಣಗೊಂಡು ನಿ:ಕಲ್ಪವಾದ ಕಾರಣ  ಅವುಗಳಿಗೆ ಮರಣ ಎಂದು ಹೇಳಿದ್ದಾರೆ ಪ್ರಭುದೇವರು. ಅಂಥಾ ಶರಣನ ಕಾಯವೇ ದೇವಾಲಯವಾದ ಕಾರಣ ಗುಹೇಶ್ವರನೆಂಬ ಲಿಂಗವು ತನ್ನಿಂದ ಬೇರೆಯಾಗಿ ತೋರದೆ ತನ್ನೊಳಗೇ ಐಕ್ಯವಾಗಿದೆಯೆಂದು ಪ್ರಭುದೇವರು ಈ ವಚನದಲ್ಲಿ ತಮ್ಮ ಅನುಭಾವವನ್ನು ಕಟ್ಟಿಕೊಟ್ಟಿದ್ದಾರೆ.

೩. ಸಂವಾದಿಕ ವಚನಗಳು

ಕೆಲವು ವಚನಗಳು ಇಬ್ಬರ ನಡುವಿನ ಸಂವಾದದ ರೂಪದಲ್ಲಿರುತ್ತವೆ. ಒಬ್ಬರು ಮತ್ತೊಬ್ಬರಿಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಮತ್ತೊಬ್ಬರು ಆ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಇವುಗಳೂ ವಚನಗಳ ರೂಪದಲ್ಲೇ ಇರುತ್ತವೆ. ಆದರೆ ಇಲ್ಲಿ ಪ್ರಶ್ನೆ ಕೇಳುವ ವ್ಯಕ್ತಿ ಹೊಸ ವಿಚಾರವನ್ನು ಅರಿಯುವ ತವಕದಲ್ಲಿ ಅರಿತವನನ್ನು ಪ್ರಶ್ನಿಸುತ್ತಾನೆ. ಅರಿತವನು ಅರಿಯದವನಿಗೆ ಮಾರ್ಗಸೂಚಿ ಕೊಡುತ್ತಾನೆ. ಈ ಸಂವಾದಿತ ವಚನಗಳನ್ನು ಓದಿ ಅರ್ಥ ಮಾಡಿಕೊಳ್ಳುವಾಗ ನಾವು ಬಹಳ ಜಾಗರೂಕರಾಗಿರಬೇಕಾಗುವುದು. ನಾವು ಕೇವಲ ಪ್ರಶ್ನಾರ್ಥಕ ರೂಪದ ವಚನಗಳನ್ನಷ್ಟೇ ಓದಿದಾಗ ಅದು ಅಪೂರ್ಣ ಮಾಹಿತಿಯನ್ನು ಕೊಡುತ್ತದೆ ಮತ್ತು ನಮ್ಮನ್ನು ತಾತ್ವಿಕವಾಗಿ ವಿರುದ್ದ ದಿಕ್ಕಿನಲ್ಲಿ ಕೊಂಡೊಯ್ಯುವುದು. ಇಲ್ಲಿ ಉತ್ತರ ರೂಪ ವಚನಗಳು ನಮಗೆ ಸರಿಯಾದ ಮಾಹಿತಿಯನ್ನು ಪೂರೈಸಬಲ್ಲವು. ಹಾಗಾಗಿ ವಚನಾಸಕ್ತರು ಸಂವಾದಿಕ ವಚನಗಳನ್ನು ಓದುವಾಗ ವಚನಗಳ ಮಧ್ಯೆ ಸಂಪರ್ಕವೇರ್ಪಡಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅಂತಹ ಕೆಲವು ವಚನಗಳನ್ನು ಈಗ ಅರಿಯಲು ಪ್ರಯತ್ನಿಸೋಣ.

ಸಿದ್ಧರಾಮೇಶ್ವರರ ಒಂದು ವಚನ ಹೀಗಿದೆ:
ಚಂದ್ರನ ಮುಂದೆ ಚುಕ್ಕಿಯೇ? ಆನೆಯಮುಂದೆ ಕೋಣವೇ?
ಸಿಂಹದ ಮುಂದೆ ಶ್ವಾನವೇ? ನಿಮ್ಮ ಮುಂದೆ ನಾನೇತರವನಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
ಸೂರ್ಯ-ದೀಪದ ಬೆಳಕು ಒಂದೆಯಾದರೆ
ವೀಣೆ – ತಂಬೂರಿನಾದ ಒಂದೆಯಾದರೆ
ಚಂದ್ರ-ಚುಕ್ಕಿ ಕಾಂತಿ ಒಂದೆಯಾದರೆ
ಕಪಿಲಸಿದ್ಧಮಲ್ಲಿಕಾರ್ಜುನ-ಶರಣ ಒಂದೆಯಾದರೆ
ಇಷ್ಟಲಿಂಗವೇಕಯ್ಯಾ ಚನ್ನಬಸವಣ್ಣಾ.

ಇದಕ್ಕೆ ಪೂರಕವಾಗಿ ಅಲ್ಲಮಪ್ರಭುದೇವರೂ  ಚನ್ನಬಸವಣ್ಣನವರನ್ನು ಪ್ರಶ್ನಿಸುತ್ತಿದ್ದಾರೆ.
ಆಕಾಶವನಡರುವಂಗೆ ಅಟ್ಟಗೋಲ ಹಂಗೇಕೊ ?
ಸಮುದ್ರವ ದಾಟುವಂಗೆ ಹರಿಗೋಲ ಹಂಗೇಕೊ ?
ಸೀಮೆಯ ಮೀರಿದ ನಿಸ್ಸೀಮಂಗೆ ಸೀಮೆಯ ಹಂಗೇಕೊ ?
ಗುಹೇಶ್ವರಲಿಂಗದಲ್ಲಿ ನಿಸ್ಸೀಮ ಸಿದ್ಧರಾಮಯ್ಯದೇವರಿಗೆ
ಲಿಂಗವೆಂದೇನು ಹೇಳಾ ಚನ್ನಬಸವಣ್ಣಾ?

ನಿಸ್ಸೀಮನಾದ ಸಿದ್ಧರಾಮಯ್ಯನವರಿಗೆ ಇಷ್ಟಲಿಂಗದ ಅವಶ್ಯಕತೆ ಏನು ಚನ್ನಬಸವಣ್ಣ ಎಂದು ಕೇಳಿದ್ದಾರೆ.

ಈ ಮೇಲಿನ ಎರಡೂ ವಚನಗಳಲ್ಲಿ ಸಿದ್ದರಾಮೇಶ್ವರರು ಹಾಗೂ ಪ್ರಭುದೇವರು ಅನೇಕ ಉಪಮೆಗಳನ್ನು ಕೊಡುವುದರ ಮೂಲಕ ಇಷ್ಟಲಿಂಗದ ಅವಶ್ಯಕತೆ ಏನು ಎಂದು ಚನ್ನಬಸವಣ್ಣನವರನ್ನು ಕೇಳುತ್ತಿದ್ದಾರೆ. ಇದೊಂದೇ ವಚನವನ್ನು ಬಿಡಿಯಾಗಿ ನೋಡಿದಾಗ ಸಾಮಾನ್ಯವಾಗಿ ಎಲ್ಲರಿಗೂ ಅದೇ ಭಾವನೆ ಉಂಟಾಗುವುದು, ಫ್ರಭುದೇವರು ಹಾಗೂ ಸಿದ್ಧರಾಮೇಶ್ವರರೇ ಹೇಳಿದ್ದಾರೆ- ಇಷ್ಟಲಿಂಗದ ಅವಶ್ಯಕತೆ ಇಲ್ಲ ಎಂದು ನಿರ್ಧಾರಕ್ಕೆ ಬಂದರೆ ಅದು ನಮ್ಮ ತಪ್ಪು ಗ್ರಹಿಕೆಯಾಗಿ ಶರಣ ತತ್ವ ಅರಿಯುವಲ್ಲಿ ಎಡವಿದಂತಾಗುವುದು. ಹಾಗಾದರೆ ಇದಕ್ಕೆ ಸರಿಯಾದ ಉತ್ತರವೇನು ಎಂಬುದನ್ನು ಚನ್ನಬಸವಣ್ಣನವರ ಉತ್ತರ ರೂಪದ ವಚನದ ಮೂಲಕ ಅರಿಯಬೇಕು. ಚನ್ನಬಸವಣ್ಣನವರು ಹೇಳುತ್ತಾರೆ:
ಅಂಗದ ಮೇಲೆ ಲಿಂಗವಿಲ್ಲದನ್ನಕ್ಕರ,
ಪ್ರಾಣದಲ್ಲಿ ಲಿಂಗಪರಿಣಾಮವನೆಯ್ದುವ ಪರಿಯೆಂತಯ್ಯಾ ?
ಅಂಗತ್ರಯವುಳ್ಳವರು ಲಿಂಗತ್ರಯಸಂಪನ್ನರಾಗಬೇಕು,
ಒಂದಂಗ ವಿರಹಿತರಾಗಿಪ್ಪವರುಂಟೆ ?
ಕಂಗಳ ನೋಟಕ್ಕೆ ಇಂಬಾವುದು ಹೇಳಾ
ಒಂದಂಗ ಬಿಟ್ಟು ಒಂದಂಗ ತೋರದಾಗಿ.
ಸಂದುಭೇದವಿಲ್ಲದಿಪ್ಪ ಮಡಿವಾಳನ ನಿಲವು
ಕೂಡಲಚೆನ್ನಸಂಗಯ್ಯನಲ್ಲಿ ನಿನಗೆಂತು 
ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯ?

ಆಕಾಶದಲ್ಲಾಡುವ ಪಟಕ್ಕಾದಡೆಯೂ ಮೂಲಸೂತ್ರವಿರಬೇಕು.
ಕಲಿಯಾದಡೆಯೂ ಕಜ್ಜವಿಲ್ಲದೆ ಆಗದು.
ಭೂಮಿಯಿಲ್ಲದೆ ಬಂಡಿ ನಡೆವುದೆ ?
ಅಂಗಕ್ಕೆ ಲಿಂಗವಿಲ್ಲದೆ ನಿಸ್ಸಂಗವಾಗಬಾರದು.
ಕೂಡಲಚೆನ್ನಸಂಗಮದೇವರಲ್ಲಿ
ಸಂಗವಿಲ್ಲದೆ ನಿಸ್ಸಂಗಿಯೆಂದು ನುಡಿಯಬಹುದೆ ಪ್ರಭುವೆ?

ಅಂಗದ ಮೇಲೆ  ಲಿಂಗವಿಲ್ಲದೆ ಲಿಂಗತತ್ವ ಸಾಧಿಸುವುದು ಸಾಧ್ಯವಿಲ್ಲ ಸಿದ್ಧರಾಮಯ್ಯಾ ಎಂದು ಚನ್ನಬಸವಣ್ಣನವರು ತಿಳಿಸಿ ಹೇಳುತ್ತಾರೆ. ಅದರ ಅರಿವಾದ ನಂತರ ಸಿದ್ಧರಾಮೇಶ್ವರರು ತಾವೇ ಒಪ್ಪಿಕೊಂಡು ಹೇಳುತ್ತಾರೆ:
ಸ್ಥೂಲವಾದಡೇನು ಸೂಕ್ಷ್ಮವಿಲ್ಲದನ್ನಕ್ಕರ?
ಕಳೆಯುಳ್ಳವನಾದಡೇನು ಕುಲವಿಲ್ಲದನ್ನಕ್ಕರ?
ಜಲವಾದಡೇನು ಸ್ಥಲಯೋಗ್ಯವಿಲ್ಲದನ್ನಕ್ಕರ?
ಆ ಕಲಿ ಮಹಿಮನಾದಡೇನು,
ಕಲಾಮೂರ್ತಿ ಇಷ್ಟಲಿಂಗವಿಲ್ಲದನ್ನಕ್ಕರ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.

ಇಷ್ಟಲಿಂಗ ಪೂಜೆಯದು ಅಷ್ಟೈಶ್ವರ್ಯಪ್ರದವಾಯಿತ್ತು.
ಪ್ರಾಣಲಿಂಗ ಪೂಜೆಯದು ಅಖಂಡಚಿದೈಶ್ವರ್ಯಪ್ರದವಾಯಿತ್ತು.
ಭಾವಂಗಪೂಜೆಯದು ನಿರ್ಭಾವ ನಿಜಾನಂದ
ವಸ್ತುಸ್ವರೂಪವಾಯಿತ್ತು,
ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.

ಇಷ್ಟಲಿಂಗದ ಮಹತಿಯನ್ನು ಕುರಿತು ಸಿದ್ಧರಾಮೇಶ್ವರರೇ ಹೇಳುತ್ತಾರೆ, “ಇಷ್ಟಲಿಂಗವೆಂಬುದು ಅಷ್ಟೈಶ್ವರ್ಯಪ್ರದಾಯಕ”ವೆಂದು.
ಲಿಂಗದಲ್ಲಿ ಆಗಾಗಿ ಅಂಗವಿರಹಿತನಾಗಿ ಫಲವೇನಯ್ಯಾ ?
ಜಂಗಮದಲ್ಲಿ ಸನ್ನಿಹಿತನಾಗಿ ದಾಸೋಹವ ಮಾಡಿ ಫಲವೇನಯ್ಯಾ ?
‘ನೀ’ ‘ನಾ’ ಎಂಬ ಭಾವ ಉಳ್ಳನ್ನಕ್ಕರ
ಜಂಗಮದಲ್ಲಿ ಸಮಯಾಚಾರಿಯಾಗಿಪ್ಪನ್ನಕ್ಕರ
ಮಾಡುವ ಭಕ್ತಿಗೆ ಭಿನ್ನವದೆ.
ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣಂಗೆ
ಆಚರಣೆ ತಿಳಿಯದು ನೋಡಾ ಚೆನ್ನಬಸವಣ್ಣಾ.

ಅಲ್ಲಮಪ್ರಭುದೇವರು  ಬಸವಣ್ಣನವರ ಭಕ್ತಿ ಅಪೂರ್ಣವಾದುದು, ಬಸವಣ್ಣನವರಿಗೆ ಆಚರಣೆ ತಿಳಿಯದು ಎಂದು ಚನ್ನಬಸವಣ್ಣನವರಲ್ಲಿ ಹೇಳುತ್ತಾರೆ. ಈ ವಚನವನ್ನು ಏಕಪಕ್ಷೀಯವಾಗಿ ನೋಡಿದಾಗ ಹೌದು ಪ್ರಭುದೇವರು ಬಸವಣ್ಣನವರನ್ನು ಖಂಡಿಸಿದ್ದಾರೆ ಎನಿಸುವುದು ಸಾಮಾನ್ಯ. ಆದರೆ ಅವರಿಬ್ಬರ ಸಂಭಾಷಣೆಯ ಪೂರ್ಣ ಪಾಠವನ್ನು ನಾವು ಆಲಿಸಿ ಅರಿಯಬೇಕು. ಆಗ ಮಾತ್ರ ನಮಗೆ ಸತ್ಯದರ್ಶನವಾಗುವುದು. ಪ್ರಭುದೇವರ ವಾದಕ್ಕೆ ಪ್ರತ್ಯುತ್ತರವಾಗಿ ಚನ್ನಬಸವಣ್ಣ ಹೇಳುತ್ತಾರೆ:

ಸಂಗವಿಡಿದಂತೆ ಸಂಗವಿಡಿದು ನೋಡದಿರಾ.
ಶರಣ ಸಂಗಸೂತಕಿಯಲ್ಲ, ಲಿಂಗಪರಿಚಿತ.
ಸಂಗವಂತನೆಂದೆನ್ನದಿರು, ಶರಣ ಮನಬಂದಂತೆ ಮಾಡುವ.
ಅರಸಿ ಸಕಳಾಗಮಾಚಾರ್ಯನಪ್ಪ, ಅಹುದಾಗದೆಂಬುದಿಲ್ಲ ನೋಡಾ.
ಕೂಡಲಚೆನ್ನಸಂಗಾ ನಿಮ್ಮ ಶರಣ ಬಸವಣ್ಣನು ಸಂಗಿಯಲ್ಲ ನಿಸ್ಸಂಗಿಯಲ್ಲ.
– ಎಂದು ಉತ್ತರ ಕೊಡುವ ಮೂಲಕ ಪ್ರಭುವಿಗೆ ಬಸವಣ್ಣನವರ ಸಾಧನೆಯ ಸಿದ್ಧಿಯನ್ನು ಅರುಹುತ್ತಾರೆ.  ಆದ್ದರಿಂದ ಇಲ್ಲಿ ಪ್ರಭುದೇವರ ವಚನಕ್ಕಿಂತ ಚನ್ನಬಸವಣ್ಣನವರ ವಚನ ಪ್ರಸ್ತುತವಾಗುವುದು.

 

ಬಸವಣ್ಣನವರ ಒಂದು ಪ್ರಸಿದ್ಧ ವಚನ:
ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.

ಕೆಲವು ಸಾಹಿತಿಗಳು ಈ ವಚನವನ್ನು ಓದಿ ಸ್ವತ: ಬಸವಣ್ಣನವರೇ ಕೂಡಲಸಂಗನ ಸಾಕ್ಷಿಯಾಗಿ  ಚನ್ನಯ್ಯನ ದಾಸನ ಮಗ ಮತ್ತು ಕಕ್ಕಯ್ಯನ ದಾಸಿಯ ಮಗಳು ಇವರ ಅಕ್ರಮ ಸಂಬಂಧದಿಂದ ಹುಟ್ಟಿದ್ದೇನೆಂದು ಹೇಳಿಕೊಂಡಿದ್ದಾರೆ, ಎಂದು ವಿತಂಡವಾದವನ್ನು ಮಂಡಿಸಿ ತಮ್ಮ ಅಜ್ಞಾನದ ಪರಾಕಾಷ್ಠೆಯನ್ನು ಈ ಹಿಂದೆ ಮೆರೆದಿದ್ದನ್ನು ಯಾರೂ ಮರೆತಿಲ್ಲ. ಯಾವ ಸನ್ನಿವೇಶದಲ್ಲಿ ಯಾವ ವಿಚಾರವನ್ನು ಪುಷ್ಠೀಕರಿಸಲು ಬಸವಣ್ಣನವರು ಹೀಗೆ ಹೇಳಿಕೊಂಡಿದ್ದಾರೆ ಎನ್ನುವ ಪರಿಜ್ಞಾನ ಓದುಗರಿಗೆ ಇರಬೇಕಾಗುತ್ತದೆ. ಅಂದಿನ ಅಸ್ಪೃಶ್ಯರಲ್ಲಿ, ದೀನದಲಿತರಲ್ಲಿ, ವೇಶ್ಯೆಯರಲ್ಲಿ, ದಮನಿಸಲ್ಪಟ್ಟ ಎಲ್ಲರಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಬಸವಣ್ಣನವರು ಮೇಲಿನಂತೆ ಹೇಳಿದ್ದಾರೆ.  ಮನೆಯೊಳಗಣ ದೀಪದ ಬೆಳಕಿನಿಂದ ಹೊರಬಂದು  ನೋಡಿದಾಗ ಸೂರ್ಯನ ಬೆಳಕು ಗೋಚರಿಸುವುದು. ನಾನು ಅರಿತಿದ್ದೆ ಸತ್ಯ ಎನ್ನದೆ ಅರಿಯದಿದ್ದನ್ನು ಚರ್ಚೆಗಳ ಮೂಲಕವಾದರೂ ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಹೀಗೆ ವಚನಗಳನ್ನು ಓದುವಾಗ ವಚನಾಸಕ್ತರು ವಚನ ರಚನೆಯ ಹಿನ್ನೆಲೆ ಮತ್ತು ಸಂವಾದಗಳನ್ನು ಸರಿಯಾಗಿ ಗ್ರಹಿಸಿ ಅವುಗಳನ್ನು ಅರಿಯಲು ಪ್ರಯತ್ನಿಸಿದರೆ ಮಾತ್ರ ವಚನಗಳ ಅಂತರಂಗ ನಮಗೆ ವೇದ್ಯವಾಗುವುದು. ಇಲ್ಲದಿದ್ದರೆ ವಚನಗಳನ್ನು ತಪ್ಪುತಪ್ಪಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು.

Previous post ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
Next post ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….

Related Posts

ವೈಚಾರಿಕ ಚಳುವಳಿಯ ಮರುಸ್ಥಾಪನೆ
Share:
Articles

ವೈಚಾರಿಕ ಚಳುವಳಿಯ ಮರುಸ್ಥಾಪನೆ

April 29, 2018 ಡಾ. ಜೆ ಎಸ್ ಪಾಟೀಲ
ಭಾರತ ಉಪಖಂಡದಲ್ಲಿ ಅನೇಕ ಪ್ರಗತಿಪರ ಚಳುವಳಿಗಳು ಘಟಿಸಿವೆ. ಚಳುವಳಿಯೊಂದು ರೂಪು ತಾಳಬೇಕಾದರೆ ಅಲ್ಲಿನ ಸಮಗ್ರ ವ್ಯವಸ್ಥೆಯಲ್ಲಿನ ಲೋಪದೋಷಗಳೇ ಅದರ ಹುಟ್ಟಿಗೆ ಕಾರಣವಾಗಬಲ್ಲವು....
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
Share:
Articles

ಲಿಂಗಾಂಗ ಸಮರಸವೆಂಬ ಮಹಾಪ್ರಸಾದ

August 2, 2019 ಪದ್ಮಾಲಯ ನಾಗರಾಜ್
ತೀರಾ ಇತ್ತೀಚೆಗೆ ‘ಮಂಗಳಾ’ ಎನ್ನುವ ಕೂಸೊಂದು ನನ್ನ ಕೈಕಾಲುಗಳನ್ನು ಬಿಗಿದು ಬಲಾತ್ಕಾರವಾಗಿ ‘ಬಯಲು ಬ್ಲಾಗಿ’ನಲ್ಲಿ ಕೂಡಿ ಹಾಕಿ ‘ಶರಣಪಥ’ದ ಕುರಿತು ಮಾತನಾಡಬೇಕೆಂದು ನನ್ನನ್ನು...

Comments 13

  1. Jahnavi Naik
    Aug 7, 2018 Reply

    ನನಗೆ ಮೊದಲಿನಿಂದಲೂ ವಚನಗಳೆಂದರೆ ಬಲು ಪ್ರಿತಿ. ಅವುಗಳನ್ನು ಓದುವಾಗಲೆಲ್ಲ ಇದಕ್ಕೆ ಇನ್ನೂ ಹೆಚ್ಚಿನ ಅರ್ಥ ಇದೇಂತ ಅಂದ್ಕೋತಿದ್ದೆ, ನಿಮ್ಮ ಲೇಖನ ನಿಜಕ್ಕೂವೆ ಮಾರ್ಗದರ್ಶಿ, ವಂದನೆಗಳು.

  2. ಶಿವಲಿಂಗಪ್ಪ ಯಾಳಗಿ
    Aug 9, 2018 Reply

    ವಚನಗಳು ನಿಜವಾಗಿ ಸರಳ ಮತ್ತು ಕಷ್ಟಕರ ಎರಡೂ. ಅದರಲ್ಲೂ ಅಲ್ಲಮಪ್ರಭುಗಳ ವಚನಗಳನ್ನು ಓದಲು ನಿಮ್ಮಂಥ ಶರಣರ ಸಹಾಯ ಬೇಕೇ ಬೇಕು ಅಣ್ಣಾ.
    -ಶಿವಲಿಂಗಪ್ಪ ಯಾಳಗಿ

  3. Gowrishwara Kiragadi
    Aug 9, 2018 Reply

    ಸಂವಾದಿಕ ವಚನಗಳು ಕುತೂಹಲಕಾರಿಯಾಗಿವೆ. ಇತಿಹಾಸದ ತುಣುಕುಗಳಂತೆ ಕಾಣುತ್ತಿವೆ. ಶೂನ್ಯ ಸಂಪಾದನೆಯಲ್ಲಿ ಇಂಥ ವಚನಗಳು ಸಿಗುತ್ತವೆ, ಆದರೆ ಅವೆಲ್ಲವೂನಿಜವೇ?

  4. shobhadevi
    Aug 12, 2018 Reply

    ಆಧ್ಯಾತ್ಮದ ಅನುಭಾವದ ವಚನಗಳು ಕ್ಲಿಷ್ಟಕರವಾಗಿವೆ. ಎಲ್ಲಾ ಶರಣರು ಒಂದೇ ರೀತಿ ಮಾತಾಡುತ್ತಾರೆ. ಕೆಲವು ಪಾರಿಭಾಷಿಕ ಶಬ್ದಗಳು ಎಲ್ಲಾ ವಚನಗಳಲ್ಲಿ ಒಂದೇ ಅರ್ಥ ಕೊಡುತ್ತವೆಯೇ?

    • Panchaksharihv
      Aug 13, 2018 Reply

      ಇಲ್ಲ. ಆ ನಿರ್ದಿಷ್ಟ ವಚನದ ಆಶಯಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳ ಬೇಕಾಗಬಹುದು.

  5. Vinay Kanchikere
    Aug 12, 2018 Reply

    ನಿತ್ಯಸತ್ಯವಾಗಿಯೂ ವಚನಗಳು ಅನುಭಾವದ ರೂಪಗಳೇ. ನಿಮ್ಮ ಲೇಖನ ಈ ದಾರಿಯಲ್ಲಿ ಗೈಡ್ ಮಾಡುತ್ತದೆ. ವಂದನೆಗಳು ಸರ್.

  6. Karibasappa hanchinamani
    Aug 13, 2018 Reply

    ವಿಡಂಬನಾತ್ಮಕ ವಚನಗಳು ಹೆಚ್ಚು ಪ್ರಚಲಿತದಲ್ಲಿವೆ. ಅವುಗಳನ್ನು ಮಾತ್ರ ಓದಿ, ಎಲ್ಲ ವಚನಗಳು ಹೀಗೇ ಸರಳ ಎಂದುಕೊಳ್ಳುವುದು ಮೂರ್ಕತನ. ನೀವು ಹೇಳಿದ ಪಾಠ ಮರೆಯಲಾರೆವು ಗುರುಗಳೇ.

  7. girish Karwadi
    Aug 17, 2018 Reply

    ಬಯಲು ಲೇಖನಗಳ ಪುಸ್ತಕ ಹೊರಬರಬಹುದೇ? ಕೈ ಪುಸ್ತಕದಲ್ಲಿ ಇಲ್ಲಿನ ಬರಹಗಳನ್ನು ಸಂಗ್ರಹಿಸಬೇಕೆಂದು ಅನಿಸುತ್ತಿದೆ.

  8. ಬಸವರಾಜ ಹಂಡಿ
    Aug 17, 2018 Reply

    http://bayalu.co.in/ವಚನಗಳ-ಓದು-ಮತ್ತು-ಅರ್ಥೈಸುವ/

    ನನ್ನ ಅಭಿಪ್ರಾಯಗಳು :

    ವಚನಗಳ ಓದು ಮತ್ತು ಅರ್ಥೈಸುವಿಕೆ

    ಈ ಲೇಖನ ಬಗ್ಗೆ ಹೇಳಲು ನನ್ನ ಹತ್ತಿರ ಈ ಕೆಳಗಿನ ಶಬ್ದಗಳು ಇವೆ
    ಅದ್ಬುತ, ಚೆನ್ನಾಗಿದೆ, ಪರಿಣಾಮಕಾರಿ
    ಈ ಲೇಖನ ಈ ಎಲ್ಲ ಶಬ್ದಗಳಕಿಂತ ಮಿಗಿಲಾದದ್ದು. ಈ ಲೇಖನ ಎಷ್ಟು ಚೆನ್ನಾಗಿದೆ ಅಂದರೆ ಅದನ್ನು ಹೇಳಲು ಶಬ್ದಗಳೇ ಇಲ್ಲ.
    ನನಗೆ ಗೊತ್ತು ಡಾ ಪಂಚಾಕ್ಷರಿ ಹಳೇಬೀಡು ಶರಣರು ವಚನದಲ್ಲಿ ಪ್ರವೀಣರು ಅಂತ ಆದರೆ ಈ ಲೇಖನ ಓದಿದ ನಂತರ ನನಗೆ ಗೊತ್ತು ಇದ್ದದಕ್ಕಿಂತ ಜಾಸ್ತಿ ಜ್ಞಾನ ಶರಣರಗೆ ಇದೆ.
    ಬಹಳ ವೈಜ್ಞಾನಿಕವಾಗಿ ಈ ಲೇಖನವನ್ನು ಬರೆದಿದ್ದಾರೆ.
    ವಚನಗಳನ್ನು ವಿಂಗಡಿಸುವದು ಸಹ ಬಹಳ ತಾರ್ಕಿಕ( logical ) ವಾಗಿದೆ.

    ಆಧ್ಯಾತ್ಮಿಕ ಅನುಭಾವದ ವಚನಗಳ ಬಗ್ಗೆ ಬರೆಯುವಾಗ ಒಂದು ವಚನವನ್ನು ಉಲ್ಲೇಖ ಮಾಡಿ ಆ ವಚನದ ಬಗ್ಗೆ ವಿವರಣೆ ಅದ್ಭುತವಾಗಿದೆ. ನಾನು 5 ಸಲ ವಚನ ಹಾಗೂ ಅದರ ವಿವರಣೆ ಓದಿದೆ.

    ಇನ್ನು ಸಂವಾದಿಕ ವಚನಗಳ ಬಗ್ಗೆ ಬಹಳ ಅದ್ಬುತವಾಗಿ ಬರೆದಿದ್ದಾರೆ. ದಿಗ್ಭ್ರಮೆ ಆಗುತ್ತೆ. ಮತ್ತೆ ಮತ್ತೆ ಓದು ಬೇಕು ಅಂತ ಅನುಸುತ್ತೆ. ಓದಿದ್ದು ತಲೆಯಲ್ಲಿ ಸುತ್ತುತ್ತಾ ಇರುತ್ತೆ. ಈ ತರ ಬರೆಯಬೇಕಾದರೆ ವಚನಗಳ ಬಗ್ಗೆ ಬಹಳ ಜ್ಞಾನ ಹಾಗೂ ಆಸಕ್ತಿ ಬೇಕಾಗುತ್ತದೆ. ನಾವು ಸ್ವತಃ 12ನೆಯ ಶತಮಾನದ ಶರಣರನ್ನು ನೇರವಾಗಿ ಮುಖಾಮುಖಿ ಮಾಡಿದ ಅನುಭವ ಆಗುತ್ತೆ.

    ವಚನಗಳ ಆಯ್ಕೆ ಹಿಡಿದುಕೊಂಡು, ಪ್ರತಿಯೊಂದು ಶಬ್ದ ಹಾಗೂ ವಾಕ್ಯ ಅದ್ಭುತವಾಗಿ ಮೂಡಿ ಬಂದಿದೆ.

    ಅತಿ ವಿರಳವಾದ ಜ್ಞಾನ ದಾಸೋಹಕ್ಕೆ ನಮ್ಮೆಲ್ಲ ಬಸವ ಭಕ್ತರಿಂದ ಶರಣ ಡಾ ಪಂಚಾಕ್ಷರಿ ಹಳೇಬೀಡು ರಗೆ ಧನ್ಯವಾದಗಳು ಹಾಗು ಶರಣು ಶರಣಾರ್ಥಿಗಳು.

  9. ಡಾ.ಪಂಚಾಕ್ಷರಿ ಹಳೇಬೀಡು
    Aug 17, 2018 Reply

    ಈ ಲೇಖನದಲ್ಲಿ ಮೂರು ಬಗೆಯ ವಚನಗಳ ಕುರಿತು ಬರೆದಿದ್ದೇನೆ. ನಾಲ್ಕನೆಯ ಬಗೆಯ ವಚನಗಳನ್ನು ಕುರಿತು ಬರೆದಿರಲಿಲ್ಲ.

    ನಾಲ್ಕನೆಯ ಬಗೆಯ ವಚನಗಳು ನೀತಿಬೋಧಕ ವಚನಗಳು. ಈ ವಚನಗಳು ನಮಗೆ ನೈತಿಕತೆಯನ್ನು ತಿಳುಸುವ ವಚನಗಳಾಗಿವೆ.
    ಉದಾಹರಣೆಗೆ:
    “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇತರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.”

    “ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ, ಕೂಡಲಸಂಗಮದೇವನೆಂತೊಲಿವನಯ್ಯಾ”

    ಈ ರೀತಿಯ ವಚನಗಳು ನಮಗೆ ಬದುಕಲು ಸೂಕ್ತ ಮಾರ್ಗಸೂಚಿಗಳಾಗಿವೆ.

    • Basavaraj R Murgod
      Oct 2, 2018 Reply

      ಡಾ.ಪಂಚಾಕ್ಷರಿ ಹಳೇಬೀಡು ರವರಿಗೆ ಶರಣು. ಈ ಲೇಖನ ಹೊಸ ಚಿಂತನೆಗೆ ದಾರಿಮಾಡಿ ಕೊಟ್ಟಿದೆ. ಈ ಬಗ್ಗೆ ಏನಾದರೂ ವಚನಗಳನ್ನು ವಿಂಗಡಿಸಿದ ಗ್ರಂಥಗಳಿವೆಯೇ ? ತಿಳಿಸಿ ಉಪಕರಿಸಿ. ಮತ್ತು ನಮಗೆ ವಚನಗಳನ್ನು ಅನುಭಾವಿಕ ನೆಲೆಯಲ್ಲಿ ಭಾವಾರ್ಥ ಬರೆದ ಗ್ರಂಥಗಳ ಅವಶ್ಯಕತೆ ಇದೆ.ದಯವಿಟ್ಟು 9902715900 ನಂಬರಿಗೆ ಮಿಸ್ ಕಾಲ್ ಮಾಡಿ. ಹೆಚ್ಚಿನ್ಸ ಮಾಹಿತಿ ಪಡೆದುಕೊಳ್ಳುತ್ತೇವೆ. ಶರಣು .

  10. ಬಸವರಾಜ ಹಂಡಿ
    Aug 18, 2018 Reply

    ಚಂದ್ರನ ಮುಂದೆ ಚುಕ್ಕಿಯೇ? ಆನೆಯಮುಂದೆ ಕೋಣವೇ?
    ಸಿಂಹದ ಮುಂದೆ ಶ್ವಾನವೇ? ನಿಮ್ಮ ಮುಂದೆ ನಾನೇತರವನಯ್ಯಾ
    ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
    ಸೂರ್ಯ-ದೀಪದ ಬೆಳಕು ಒಂದೆಯಾದರೆ
    ವೀಣೆ – ತಂಬೂರಿನಾದ ಒಂದೆಯಾದರೆ
    ಚಂದ್ರ-ಚುಕ್ಕಿ ಕಾಂತಿ ಒಂದೆಯಾದರೆ
    ಕಪಿಲಸಿದ್ಧಮಲ್ಲಿಕಾರ್ಜುನ-ಶರಣ ಒಂದೆಯಾದರೆ
    ಇಷ್ಟಲಿಂಗವೇಕಯ್ಯಾ ಚನ್ನಬಸವಣ್ಣಾ.

    ಈ ವಚನದ ಅರ್ಥ ಕೆಳಗಿನ ತರ ಸಹ ಇರಬಹುದು —
    ಚಂದ್ರ ಬಹಳ ಘನವಾದದ್ದು. ಚುಕ್ಕೆ ಬಹಳ ಚಿಕ್ಕದಾದ್ದು.
    ಚಂದ್ರನ ಮುಂದೆ ಚಿಕ್ಕೆ ಇಲ್ಲ ಅಂದರು ನಡೆಯುತ್ತದೆ.
    ಇದೆ ತರ ಆನೆಯ ಮುಂದೆ ಕೋಣ ಹಾಗು ಸಿಂಹದ ಮುಂದೆ ಶ್ವಾನ ಇಲ್ಲ ಅಂದರೆ ನಡೆಯುತ್ತದೆ.
    ಕಪಿಲಸಿದ್ದ ಮಲ್ಲಿಕಾರ್ಜುನ( ಇಷ್ಟಲಿಂಗ ) ಸಹ ಘನವಾದದ್ದು ಶರಣ ಬಹಳ ಚಿಕ್ಕವ. ಲಿಂಗದ ಮುಂದೆ ಅಂಗ ಅಥವಾ ಅಂಗದ ಮುಂದೆ ಲಿಂಗ ಇಲ್ಲ ಅಂದರು ನಡೆಯುತ್ತದೆ ಅನ್ನುವ ಸಂದೇಹ ಸಿದ್ದರಾಮಯ್ಯ ಶರಣರು ವ್ಯಕ್ತ ಪಡಿಸಿದ್ದಾರೆ.
    ಈ ಸಂದೇಹವನ್ನು ನಿವಾರಿಸಲು ಚೆನ್ನಬಸವಣ್ಣ ಶರಣರು ಒಂದನ್ನು ಬಿಟ್ಟು ಇನ್ನೊಂದು ಹಿಡಿಯಲು ಆಗುವದಿಲ್ಲ ಅಂತ ಕೆಲವು ಉದಾಹರಣೆಗಳ ಮುಖಾಂತರ ಉತ್ತರಿಸಿದ್ದಾರೆ.

  11. Basavaraj R Murgod
    Oct 2, 2018 Reply

    ಡಾ.ಪಂಚಾಕ್ಷರಿ ಹಳೇಬೀಡು ರವರಿಗೆ ಶರಣು. ಈ ಲೇಖನ ಹೊಸ ಚಿಂತನೆಗೆ ದಾರಿಮಾಡಿ ಕೊಟ್ಟಿದೆ. ಈ ಬಗ್ಗೆ ಏನಾದರೂ ವಚನಗಳನ್ನು ವಿಂಗಡಿಸಿದ ಗ್ರಂಥಗಳಿವೆಯೇ ? ತಿಳಿಸಿ ಉಪಕರಿಸಿ. ಮತ್ತು ನಮಗೆ ವಚನಗಳನ್ನು ಅನುಭಾವಿಕ ನೆಲೆಯಲ್ಲಿ ಭಾವಾರ್ಥ ಬರೆದ ಗ್ರಂಥಗಳ ಅವಶ್ಯಕತೆ ಇದೆ.ದಯವಿಟ್ಟು 9902715900 ನಂಬರಿಗೆ ಮಿಸ್ ಕಾಲ್ ಮಾಡಿ. ಹೆಚ್ಚಿನ್ಸ ಮಾಹಿತಿ ಪಡೆದುಕೊಳ್ಳುತ್ತೇವೆ. ಶರಣು .

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಗಂಟಿನ ನಂಟು
ಗಂಟಿನ ನಂಟು
November 7, 2020
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಶಿವನ ಕುದುರೆ…
ಶಿವನ ಕುದುರೆ…
May 1, 2019
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
Copyright © 2021 Bayalu