Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
Share:
Articles May 6, 2021 ಪ್ರೊ.ಸಿದ್ದು ಯಾಪಲಪರವಿ

ವಚನಗಳು ಮತ್ತು ವ್ಯಕ್ತಿತ್ವ ವಿಕಸನ

ಮನುಷ್ಯನ ಮನಸ್ಸಿನ ಮೇಲೆ ಸಾವಿರಾರು ವರ್ಷಗಳಿಂದ ಅಧ್ಯಯನ ಸಾಗಿಯೇ ಇದೆ. ಆದರೆ ಇನ್ನೂ ನೆಲೆ ನಿಂತಿಲ್ಲ, ನಿಲ್ಲುವುದೂ ಇಲ್ಲ. ಬುದ್ಧನ ವಿಪಶ್ಶನ, ಆಯುರ್ವೇದ ಶಾಸ್ತ್ರದ ಕಾಯ ಚಿಕಿತ್ಸಾ ಮತ್ತು ಬಸವಾದಿ ಶರಣರ ವಚನಗಳು ಆಲೋಚನಾ ಕ್ರಮವನ್ನು ಮುಂದುವರೆಸಿಕೊಂಡು ಸಾಗಿವೆ. ಆಧುನಿಕ ಮನೋವಿಜ್ಞಾನ ವಿದೇಶಗಳಲ್ಲಿ ತನ್ನ ಮನೋ ಸಂಶೋಧನೆಯನ್ನು ಮಾಡುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ನಮ್ಮ ಶರಣರು ಅನುಭವ ಮಂಟಪದ ಮೂಲಕ ಬದುಕಿನ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ಮನೋವೈಜ್ಞಾನಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಚರ್ಚೆ ಮಾಡಿ, ಚರ್ಚೆಯ ಪ್ರತಿಫಲನವನ್ನು ವಚನಗಳ ಮೂಲಕ ದಾಖಲಿಸಿ ಹೋಗಿರುವುದು ಕನ್ನಡ ಸಂದರ್ಭದ ಬಹು ದೊಡ್ಡ ಇತಿಹಾಸ.
ಅಧ್ಯಾತ್ಮ ಕೇವಲ ಸನ್ಯಾಸಿಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಶರಣರು ಜಗತ್ತಿಗೆ ತೋರಿಸಿದರು.
ಸಂಸಾರದಿಂದಲೂ ಸದ್ಗತಿ ಸಾಧ್ಯ ಎಂಬುದನ್ನು ಲಿಂಗಾಂಗ ಸಾಮರಸ್ಯದ ಮೂಲಕ ಅರ್ಥ ಮಾಡಿಸಿದರು. ಹೀಗಾಗಿ ಅವರ ಪ್ರತಿಯೊಂದು ವಚನಗಳು ಜೀವನಶೈಲಿ ನಿರ್ವಹಣೆಯ ಮಹತ್ತರ ದಿವ್ಯ ಸಂದೇಶಗಳು.
ವಚನಕಾರರ ಮೌಲ್ಯಗಳನ್ನು ಇಟ್ಟುಕೊಂಡು ಆರೋಗ್ಯಕರ ಸಮಾಜ ಮತ್ತು ಚಾರಿತ್ರಿಕ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು.
ಈ ಹಿನ್ನೆಲೆಯಲ್ಲಿ ಕೆಲವು ಮಹತ್ವದ ವಚನಗಳ ಮೂಲಕ ವಿವರಿಸ ಬಯಸುವೆ.

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ

ಬಸವಣ್ಣನವರ ಈ ಮೇಲಿನ ಒಂದು ವಚನ ಪ್ರತಿಯೊಬ್ಬ ಪರಿಪೂರ್ಣ ವ್ಯಕ್ತಿ ಪಾಲಿಸಬೇಕಾದ ಸಪ್ತ ಸೂತ್ರಗಳು.
ನಮ್ಮ ಇಡೀ ವ್ಯಕ್ತಿತ್ವದ ಟೊಳ್ಳುತನ ಮೇಲಿನ ಎಲ್ಲ ‘ಬೇಡ’ ಗಳಲ್ಲಿದೆ.
ವ್ಯಕ್ತಿ ಕಳ್ಳತನ ಮಾಡದೇ, ಮೋಸ ಮಾಡದೇ ಬದುಕುವುದೇ ಅಸಾಧ್ಯ ಅಂದುಕೊಂಡಿದ್ದಾನೆ. ತಾನೇ ಹುಟ್ಟು ಹಾಕಿದ ಮೋಸದ ಜಾಲದಲ್ಲಿ ಕಳ್ಳತನ, ಕೊಲೆ, ಸುಳ್ಳು, ಕೋಪ, ಬೇರೆಯವರ ಕುರಿತು ಜುಗುಪ್ಸೆ, ತನ್ನ ಬಗ್ಗೆ ಮಹಾ ಅಂದುಕೊಂಡು, ಇತರರನ್ನು ಅವಮಾನಿಸುತ್ತ ಸಾಗುವುದೇ ಜೀವನ ಅಂದುಕೊಂಡಿದ್ದಾನೆ. ಮೇಲ್ನೋಟಕ್ಕೆ ಇದೊಂದು ಪ್ರಾಥಮಿಕ, ಸರಳ ಮತ್ತು ಜನಪ್ರಿಯ ವಚನದಂತೆ ಕಂಡರೂ ಅಪಾರ ಕಠಿಣತೆಯನ್ನು ಮೈಗೂಡಿಸಿಕೊಂಡಿದೆ.
ವ್ಯಕ್ತಿ ತನ್ನ ಪ್ರಾಮಾಣಿಕ ವರ್ತನೆ ಮೂಲಕ ದೊಡ್ಡವನಾಗುವ ಅವಕಾಶ ಕಳೆದುಕೊಂಡು ಬಿಡುತ್ತಾನೆ.
ಆಧುನಿಕ ಮನೋವಿಜ್ಞಾನದಲ್ಲಿ SWOC analysis ಗುರುತಿಸಲ್ಪಡುವ ತಂತ್ರವೂ ಇದನ್ನೇ ಹೇಳುತ್ತದೆ.
Strength, Weakness, Opportunity and Challenges ಎಂಬ ಆಧುನಿಕ ಮಾನದಂಡವನ್ನು ಬಸವಣ್ಣನವರು ಅಂದೇ ಅರ್ಥ ಮಾಡಿಕೊಂಡಿದ್ದರು. ಅವರು ‘ಬೇಡ’ ಎಂದು ವಿವರಿಸುವ ಎಲ್ಲ ಸಂಗತಿಗಳು weakness. ಅವುಗಳನ್ನು ಬದಿಗಿರಿಸಿ ಗೆಲ್ಲುವುದೇ ಸವಾಲು. ಆಧುನಿಕ ಮನೋವಿಜ್ಞಾನ ಕೇವಲ ಕೆಲವೇ ಸಿದ್ಧಾಂತಗಳ ಮೇಲೆ ವ್ಯಕ್ತಿತ್ವ ವಿಕಸನದ ವಿವರಣೆಗೆ ಹೊರಟರೆ ಬಸವಾದಿ ಶರಣರು ಅಂತಹ ಸಾವಿರಾರು ಸಿದ್ಧಾಂತಗಳನ್ನು ನಮಗೆ ನೀಡಿದ್ದಾರೆ.
‘To know thyself’ ಎಂಬ ಹೇಳಿಕೆ ತುಂಬಾ ಜನಪ್ರಿಯ ಅದನ್ನು self analysis ಗೆ ಪೂರಕವಾಗಿ ಬಳಸುತ್ತಾರೆ.
ಅದನ್ನು ನಮ್ಮ ಶರಣರು ಈ ರೀತಿ ವಿಶ್ಲೇಷಣೆ ಮಾಡುತ್ತಾರೆ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.

‘Knowledge is power’ ಎಂಬುದು ಆಧುನಿಕ ಮನೋವಿಜ್ಞಾನದ ವಿವರಣೆಯಾದರೆ, ಅದನ್ನು ಬಸವಣ್ಣನವರು ಜ್ಞಾನದ ಬಲ ಎಂದು ಕರೆಯುತ್ತಾರೆ. ಜ್ಯೋತಿ ಎಂಬುದು ಕೇವಲ ಹೊರಗಿನ ಬೆಳಕಲ್ಲ ಒಳಗಿನ ಅರಿವು.
ಅರಿವು, ಅಕ್ಷರ, ಅನುಸಂಧಾನದ ಮೂಲಕ ಅನುಭವ ಮಂಟಪ ಕಟ್ಟಿದರು. ಅನುಭವ ಮಂಟಪ ಕೇವಲ ಕಲ್ಲಿನ ಕಟ್ಟಡವಾಗಿರಲಿಲ್ಲ. ಅರಿವಿನ ಅನುಸಂಧಾನವಾಗಿತ್ತು. ಸಮಾಜ ವಿಕಸನವಾಗಬೇಕಾದರೆ ವ್ಯಕ್ತಿ ವಿಕಸನವಾಗಬೇಕು ಎಂಬುದನ್ನು ಅಲ್ಲಮ-ಅಣ್ಣ-ಅಕ್ಕ ಮತ್ತಿತರ ಶರಣರು ತಮ್ಮ ವಚನ ಮತ್ತು ವ್ಯಕ್ತಿತ್ವದ ಮೂಲಕ ನಿರೂಪಿಸುತ್ತಾರೆ. ಅವರು ಸತ್ಯದ ನಿಲುವಿನ ಮೂಲಕ ಅಸತ್ಯವನ್ನು ಓಡಿಸಿದರು.
ಆಧುನಿಕ ವಿಜ್ಞಾನ ವೈಯಕ್ತಿಕ ಸಾಧನೆಗೆ ಮಹತ್ವ ಕೊಟ್ಟರೆ ನಮ್ಮ ಶರಣರು ‘ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯ’ ಎಂಬ ಡೌನ್ ಟು ಅರ್ಥ್ ಮಾತನ್ನಾಡುತ್ತಾರೆ. ಸಮೂಹ ಪ್ರಜ್ಞೆ ಹೆಚ್ಚಿಸಿ ವೈಯಕ್ತಿಕ ಮತ್ತು ಸಾಮೂಹಿಕ ಪರಿವರ್ತನೆಗೆ ಕಾರಣರಾದವರು ನಮ್ಮ ಶರಣರು.
ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದ ವಿದ್ಯಾರ್ಥಿಯಾಗಿ ವಚನಗಳನ್ನು ಓದಿದಾಗ ತುಂಬಾ ಖುಷಿಯಾಗುತ್ತದೆ. ‘ಇಂಗ್ಲಿಷ್ ಸಾಹಿತ್ಯ ಮತ್ತು ಆಧುನಿಕ ಮನೋವಿಜ್ಞಾನ ಹೇಳುವ ಎಲ್ಲ ಸಂಗತಿಗಳನ್ನು ನಮ್ಮ ಶರಣರು ಹೇಳಿದ್ದಾರಲ್ಲ’ ಎಂಬ ಬೆರಗು ಆ ಖುಷಿಯನ್ನು ನೂರ್ಮಡಿಸುತ್ತದೆ.
ವಚನಗಳು ಕೇವಲ ಕಾವ್ಯವಲ್ಲ, ಬದುಕುವ ಕಲೆಯನ್ನು ವಿವರಿಸುತ್ತವೆ. ಅಲ್ಲಿ ಸಾಹಿತ್ಯವಿದೆ, ಸಮಾಜ ವಿಜ್ಞಾನವಿದೆ, ಮನಃಶಾಸ್ತ್ರವಿದೆ, ರಾಜಕೀಯ ನೀತಿಯಿದೆ, ಅರ್ಥಶಾಸ್ತ್ರವೂ ಇದೆ. ಬದುಕಿನ ಪ್ರಾಮಾಣಿಕ ವಿಧಾನವನ್ನು ಕೇವಲ ಬೋಧನೆ ಮಾಡಲಿಲ್ಲ. ಅದರಂತೆ ಬದುಕಿ ತೋರಿಸಿದರು.
ಸರಿಸುಮಾರು ಮೂವತ್ತೈದು ವರ್ಷಗಳ ಕಾಲ ನಡೆದ ವಚನ ಚಳುವಳಿ ಜಗತ್ತಿನ ಬಹುದೊಡ್ಡ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿ. ರಾಜಸತ್ತೆಯ ಎಲ್ಲ ಅಮಾನವೀಯ ರೀತಿ ರಿವಾಜುಗಳನ್ನು ದೂರ ದೂಡಿ, ತಾವೇ ರೂಪಿಸಿದ ವಚನ ಸಂವಿಧಾನದ ಆಶಯಗಳಂತೆ ಬದುಕಿದರು ನಮ್ಮ ಶರಣರು. ಲೌಕಿಕ ಮತ್ತು ಅಲೌಕಿಕ ಎರಡು ಭಿನ್ನ ಜಗತ್ತು ಎಂಬ ನಂಬಿಕೆಯನ್ನು ಅಳಿಸಿ ಹಾಕಿ, ಎರಡನ್ನೂ ಸಮೀಕರಿಸಿದ ಸಮಪಾತಳಿಯ ಬದುಕು ಅವರದಾಗಿತ್ತು.
ಬ್ರಹ್ಮಚರ್ಯ, ಸನ್ಯಾಸ, ಮೋಕ್ಷ ಇತ್ಯಾದಿ ನೆಪದಲ್ಲಿ ಇರುವ ಜೀವವಿರೋಧಿ ನಂಬಿಕೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು. ನುಡಿದಂತೆ ನಡೆದು, ನಡೆದಂತೆ ನುಡಿದ ಮೊದಲ ಧಾರ್ಮಿಕ ಕಾಲ ಘಟ್ಟವದು. ಮಿಕ್ಕ ಧರ್ಮಗಳಲ್ಲಿ ಆ ಸಾಮ್ಯತೆಯನ್ನು ಕಾಣಲಾಗದು. ಅದು ಏನಿದ್ದರೂ ಶುಷ್ಕ ಸಿದ್ಧಾಂತ. ಆಚರಣೆಗೂ ತುಂಬಾ ಕಠಿಣ. ಆಚಾರ, ವಿಚಾರಗಳಿಗೆ ಸರಿ ಹೊಂದುವ ಮಾನವೀಯ ಮೌಲ್ಯದ ಸಂವಿಧಾನ ಶರಣರದು.
ಕೊನೆಯದಾಗಿ ಪ್ರಭುದೇವರ ಕೆಳಗಿನ ವಚನ ಸುಂದರ ವ್ಯಕ್ತಿತ್ವ ಹೊಂದಿರಬೇಕಾದ ಅಂತಿಮ ಸತ್ಯವನ್ನು ನಿವೇದಿಸುತ್ತದೆ.

ಭೂಮಿ ನಿನ್ನದಲ್ಲ ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ.
ನಿನ್ನ ಒಡವೆ ಎಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡಗುಡದೆ
ಆ ರತ್ನವ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ.

ಪ್ರತಿಯೊಬ್ಬ ವ್ಯಕ್ತಿ ಹೆಣ್ಣು ಹೊನ್ನು ಮಣ್ಣು ಎಂಬ ಸವಕಲು ನಂಬಿಕೆಯಲ್ಲಿ ನಾಶವಾಗಿ ಹೋಗುತ್ತಾನೆ. ಅವು ವ್ಯಕ್ತಿಗೆ ಕೊಡಬಹುದಾದ ತಾತ್ಕಾಲಿಕ ಖುಷಿ ಮಾತ್ರ. ಆದರೆ ನಿಜವಾದ ಬದುಕಿನ ಮೌಲ್ಯ ಅಡಗಿರುವುದು ಯಾರೂ ಕದಿಯದ, ಕಸಿಯದ ‘ಜ್ಞಾನ ರತ್ನ’ ದಲ್ಲಿ.
ನಾವು ಹೊರಗೆ ಹೊರಟರೆ ನಮ್ಮ ದೈಹಿಕ ಸಂಪತ್ತು ನಮ್ಮ ಹಿಂದೆ ಬರುವುದಿಲ್ಲ. ಅದು ನಮ್ಮ ವ್ಯಕ್ತಿತ್ವದ ಸಂಕೇತ ಕೂಡ ಆಗಲಾರದು. ಪ್ರತಿಯೊಬ್ಬ ವ್ಯಕ್ತಿ ತಾನು ಹೊಂದಿರುವ ಜ್ಞಾನದ ಮೂಲಕ ಗುರುತಿಸಿ ಗೌರವಿಸಲ್ಪಡುತ್ತಾನೆ. ಸಾರ್ವಜನಿಕವಾಗಿ ಶ್ರೀಮಂತರು ಕೃತಕ ಗೌರವಕ್ಕೆ ಪಾತ್ರರಾದರೆ, ಜ್ಞಾನಿ ಅಂತರಂಗದ ಮನ್ನಣೆ ಸ್ವೀಕರಿಸುತ್ತಾನೆ. ವ್ಯಕ್ತಿ ಅಜರಾಮರವಾಗಿ ಉಳಿಯುವುದು ಅವನ ಜ್ಞಾನದ ಮೂಲಕ ಮಾತ್ರ.
ರಾಜ ಮಹಾರಾಜರುಗಳು ತಾವು ಇತಿಹಾಸದಲ್ಲಿ ಶಾಶ್ವತ ಉಳಿಯಲಿ ಎಂಬ ಕಾರಣಕ್ಕಾಗಿ ಅರಮನೆ, ದೇವಾಲಯ ಮತ್ತು ವಿಗ್ರಹಗಳನ್ನು ಕಟ್ಟಿದರು. ಕಾಲಾನಂತರದಲ್ಲಿ ಅವು ನಾಶವಾಗಿ ಹೋಗಿ ರಾಜರೂ ಮಣ್ಣು ಪಾಲಾದರು.
ಆದರೆ ಶರಣರು, ಸಂತರು, ಜ್ಞಾನಿಗಳು ವಿಗ್ರಹ ರೂಪದಲ್ಲಿ ಇರದಿದ್ದರೂ ತಮ್ಮ ಸಾಧನೆಗಳ ಮೂಲಕ ಇಂದಿಗೂ ಅಜರಾಮರ. ಉದಾಹರಣೆಗೆ ಮೇಲೆ ಉಲ್ಲೇಖಿಸಿದ ಕೆಲವು ವಚನಗಳು ಮತ್ತು ವಚನಕಾರರು. ನಿತ್ಯ ಆರಾಧಿಸಲ್ಪಡುವ ಬುಧ್ದ-ಬಸವ-ಅಲ್ಲಮ ನಮ್ಮ ವ್ಯಕ್ತಿತ್ವ ರೂಪಿಸಲು ಪ್ರೇರೇಪಿಸುತ್ತಾರೆ.

Previous post ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
Next post ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ

Related Posts

ಕಾದಿ ಗೆಲಿಸಯ್ಯ ಎನ್ನನು
Share:
Articles

ಕಾದಿ ಗೆಲಿಸಯ್ಯ ಎನ್ನನು

April 29, 2018 ಕೆ.ಆರ್ ಮಂಗಳಾ
“ಬಾಳಲೇ? ಬಾಳಿಗಂತ್ಯವ ತರಲೇ?” ಹ್ಯಾಮ್ಲೆಟ್ ನಾಟಕದ ಒಂದು ಬಹು ಮುಖ್ಯ ಸ್ವಗತ. ರಾಜಕುಮಾರ ಹ್ಯಾಮ್ಲೆಟ್ ನ ಎದೆಯೊಳಗೆ ಇಂಥ ಪ್ರಶ್ನೆಯೊಂದು ಎದ್ದು ಕೊನೆಗೆ ಆತನ ಬಲಿ...
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
Share:
Articles

ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು

January 4, 2020 ಡಾ. ನಟರಾಜ ಬೂದಾಳು
ವಚನಕಾರರ, ತತ್ವಪದಕಾರರ, ಸೂಫಿಗಳ ತಾತ್ವಿಕತೆಯ ನೆಲೆಗಳ ಹುಡುಕಾಟದ ಹಿಂದೆ  ಕನ್ನಡಕ್ಕೆ ತನ್ನದೇ ಆದ ಕಾವ್ಯ ಮೀಮಾಂಸೆಯೊಂದರ ಶೋಧನೆಯ ಒತ್ತಾಯವಿದೆ. ಈ ನೆಲದ ಕಾವ್ಯವನ್ನು,...

Comments 11

  1. ಸೋಮಶೇಖರ, ಹಾಸನ
    May 7, 2021 Reply

    ವಛನಗಳನ್ನು ಬದುಕಿಗೆ ಅಳವಡಿಸಿಕೊಂಡರೆ ನಮ್ಮ ವ್ಯಕ್ತಿತ್ವದಲ್ಲಿ ಸಂಪೂರ್ಣ ಬದಲಾವಣೆ ತರಬಹುದು. ಲೇಖನ ಪರಿಣಾಮಕಾರಿಯಾಗಿದೆ.

  2. Indira Bidar
    May 10, 2021 Reply

    ಮನಸ್ಸಿನ ಪರಿವರ್ತನೆಗೆ ಒತ್ತು ಕೊಟ್ಟ ಶರಣರ ವಿಚಾರಗಳನ್ನು ಅವರ ವಚನಗಳ ಮೂಲಕ ಸೊಗಸಾಗಿ, ಸರಳವಾಗಿ ವಿವರಿಸಿದ ಸಿದ್ದು ಶರಣರಿಗೆ ವಂದನೆ.

  3. Umashankara Bengaluru
    May 10, 2021 Reply

    ಸರಳ ವಚನಗಳಲ್ಲಿ ಒಂದೊಂದು ಅಭೂತಪೂರ್ವ ಸಂದೇಶಗಳಿವೆ ಎಂಬುದನ್ನು ತೋರಿಸಿದ ಲೇಖನ. ಅವುಗಳನ್ನು ಜೀವನದಲ್ಲಿ ಪಾಲಿಸುವವರ ಕೊರತೆ ಮಾತ್ರ ಢಾಳವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಇದರಷ್ಟು ಸ್ಪಷ್ಟವಾದ ದಾರಿ ಮತ್ತೊಂದು ಇರಲಿಕ್ಕಿಲ್ಲ.

  4. Padma
    May 12, 2021 Reply

    ವ್ಯಕ್ತಿ ವಿಕಸನ ಮತ್ತು ಸಮಾಜದ ವಿಕಸನಗಳನ್ನು ಸಾಧಿಸಲು ಕನ್ನಡದ ವಚನಗಳು ಮಾರ್ಗದರ್ಶನ ಮಾಡಬಲ್ಲವು. ಮನಸ್ಸನ್ನು ಗೆಲ್ಲಲು ಇಲ್ಲಿ ಬಹಳಷ್ಟು ಉಪಾಯಗಳಿವೆ. ಉತ್ತಮ ಲೇಖನ.

  5. Sunanda Kr
    May 15, 2021 Reply

    ವಚನಗಳು ನಮ್ಮ ವ್ಯಕ್ತಿತ್ವ ರೂಪಿಸುವುದರಲ್ಲಿ ಈಗಲೂ ಬಹು ಮುಖ್ಯ ಪಾತ್ರ ವಹಿಸುತ್ತವೆ

  6. Sharada A.M
    May 16, 2021 Reply

    ಮನಸ್ಸು ಹದವಾದಾಗಲೇ ವ್ಯಕ್ತಿತ್ವ ವಿಕಸನ ಸಾಧ್ಯ. ಮನಸ್ಸನ್ನು ಬದಲಿಸುವುದು ಸುಲಭವಲ್ಲ. ನಮ್ಮದೇ ಮನಸ್ಸು ನಮಗೇ ಎದುರಾಗುತ್ತಿರುತ್ತದೆ. ಇಂತಹ ಮನಸ್ಸನ್ನು ಪಳಗಿಸಿ, ವ್ಯಕ್ತಿತ್ವವನ್ನು ಅರಳಿಸುವ ಶರಣರ ವಚನಗಳನ್ನ ವಿವರಿಸಿದ ರೀತಿ ಗಮನೀಯವಾಗಿದೆ.

  7. Dinesh Patil
    May 17, 2021 Reply

    ವಚನ ಚಳುವಳಿಯು ಜಗತ್ತಿನ ಬಹುದೊಡ್ಡ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿ. ಆದರೆ ಅದಕ್ಕೆ ಸಿಗಬೇಕಾದ ಆದ್ಯತೆ ನಮ್ಮ ರಾಜ್ಯದಲ್ಲೂ, ದೇಶದಲ್ಲೂ ಸಿಕ್ಕಿಲ್ಲ ಎನ್ನುವುದು ವಿಷಾದದ ಸಂಗತಿ. ವಚನಕಾರರನ್ನು ಇಂದಿನ ಸಮಾಜಕ್ಕೆ ತಲುಪಿಸುವಲ್ಲಿ ನಾವು ಸೋತಿದ್ದೇವೆ ಎನ್ನುವುದು ಸ್ಪಷ್ಟವಾದ, ಒಪ್ಪಲೇ ಬೇಕಾದ ಕಹಿ ಸತ್ಯ.

  8. Ravindra Desai
    May 19, 2021 Reply

    ಆಚಾರ, ವಿಚಾರಗಳಿಗೆ ಸರಿ ಹೊಂದುವ ಮಾನವೀಯ ಮೌಲ್ಯದ ಸಂವಿಧಾನವನ್ನು ಕೊಟ್ಟ ಶರಣರ ಸಂದೇಶಗಳನ್ನು ಚೊಕ್ಕವಾಗಿ ತಿಳಿಸುವ ಬರಹ.

  9. ಶಿವಪ್ರಕಾಶ್, ಶಿಕ್ಷಕರು
    May 24, 2021 Reply

    ವ್ಯಕ್ತಿತ್ವ ವಿಕಾಸವನ್ನು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ಒಂದು ಪಠ್ಯವಾಗಿ ಬೋಧಿಸುವ ವ್ಯವಸ್ಥೆ ಆಗಬೇಕು. ನಿಮ್ಮಂತಹ ನುರಿತ ಉಪನ್ಯಾಸಕರು ಶರಣರ ವಚನಗಳನ್ನಾಧರಿಸಿ ಹಾಗೆ ಒಂದು ಪಠ್ಯ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದರೆ ಬಹಳ ಉಪಕಾರವಾಗುತ್ತದೆ. ಮಾರಲ್ ಸೈನ್ಸ್ ಜೊತೆಯಲ್ಲಿ ಇಂತಹ ವ್ಯಕ್ತಿತ್ವ ವಿಕಸನದ ಅಗತ್ಯ ಮಕ್ಕಳಿಗಿದೆ.

  10. Girish Mysuru
    May 31, 2021 Reply

    ವಚನಗಳು ಕೇವಲ ಕಾವ್ಯವಲ್ಲ, ಬದುಕುವ ಕಲೆಯನ್ನು ವಿವರಿಸುತ್ತವೆ. ಅಲ್ಲಿ ಸಾಹಿತ್ಯವಿದೆ, ಸಮಾಜ ವಿಜ್ಞಾನವಿದೆ, ಮನಃಶಾಸ್ತ್ರವಿದೆ, ರಾಜಕೀಯ ನೀತಿಯಿದೆ, ಅರ್ಥಶಾಸ್ತ್ರವೂ ಇದೆ. ಬದುಕಿನ ಪ್ರಾಮಾಣಿಕ ವಿಧಾನವನ್ನು ಕೇವಲ ಬೋಧನೆ ಮಾಡಲಿಲ್ಲ. ಅದರಂತೆ ಬದುಕಿ ತೋರಿಸಿದರು- ಶರಣರ ಬದುಕಿನ ಸಾರವನ್ನೇ ಹೇಳುವ ಸುಂದರ ಸಾಲುಗಳು.

  11. VITHAL HANCHINAL
    Nov 20, 2021 Reply

    Vyaktitva VIKAS, basavanna vachanagalu, and pravachana books reqd for rural students and agricultural family’s

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಸೂರ್ಯ
ಸೂರ್ಯ
January 8, 2023
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
Copyright © 2023 Bayalu