
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
(ಗುರು-ಶಿಷ್ಯ ಸಂವಾದ)
ಶಿಷ್ಯ: ಹಿರಿಯರಿಗೆ ಹಿರಿಯಣ್ಣನೆನಿಸಿದ ಗುರು ಮಹರಾಜರ ಸನಿಹ ಸೇರಿದೆನಯ್ಯಾ… ನನ್ನನ್ನು ಪಾರುಮಾಡು ತಂದೆ! ಕೆಲವರು ಜೀವಾತ್ಮ- ಪರಮಾತ್ಮನೆನ್ನುತ್ತಾರೆ. ಕೆಲವರು ಮಂತ್ರವೆನ್ನುತ್ತಾರೆ. ಕೆಲವರು ಹಠಯೋಗವೆನ್ನುತ್ತಾರೆ. ಕೆಲವರು ಕುಂಡಲಿನಿ ಎನ್ನುತ್ತಾರೆ. ಕೆಲವರು ಸ್ವಪ್ನ ಜಾಗೃತ ಸುಷುಪ್ತಿ ಎನ್ನುತ್ತಾರೆ… ಇವುಗಳಲ್ಲಿ ಯಾವುದು ಸುಳ್ಳು, ಯಾವುದು ನಿಜವೋ… ಒಂದೂ ತಿಳಿಯದಾಗಿದೆ, ಅನುಮಾನಗಳಲ್ಲಿ ಹೂತುಹೋಗಿದ್ದೇನೆ.
ಗುರು: ಇದೆಲ್ಲಾ ಕಸ ನಿನಗೇಕಯ್ಯಾ… ಸುಮ್ಮನಿದ್ದರೆ ಸಾಕಲ್ಲವೇ? ಪರಿಪೂರ್ಣ ಬಯಲ ದರ್ಶನದೊಳಗೆ ಇವೆಲ್ಲಾ ಶೂನ್ಯವಾಗಬೇಕು.
ಭಕ್ತಿ ವೈರಾಗ್ಯಯೋಗ
ಶ್ಯಕ್ತಿ ವ್ಯಕ್ತಾದಿ ವ್ಯಕ್ತ ಚರಿತೆ
ಗಳಲ್ಲಿರುವ ‘ಮುಕ್ತಿ’ ಎಂಬ ಭ್ರಾಂತಿ ಬಿಟ್ಟು
ಮುಕ್ತನಾದವ ಈ ಪರಿಪೂರ್ಣ ಬಯಲ ಚರಿತೆಗೆ ಅಧಿಕಾರಿ.
ಜೀವಾತ್ಮ-ಪರಮಾತ್ಮವೆಂದರೆ ಅಲ್ಲಿ ಅವೆರಡಕ್ಕೂ ಸಂಗವುಂಟು; ಮಂತ್ರವೆಂದರೆ ಪ್ರಾರ್ಥಿಸುವವ, ಪ್ರಾರ್ಥನೆಯನ್ನು ಮನ್ನಿಸುವವ ಎಂದು ಎರಡಾಯಿತ್ತು; ಹಠಯೋಗವೆಂದರೆ ತುದಿಯನ್ನು ಸೇರುವ ಹಂಬಲವಾಯ್ತು; ಕುಂಡಲಿನಿ ಎಂದರೆ ದೊರೆಯದಾ ಊರಿಗೆ ಪಯಣ ಮಾಡುವುದಾಯಿತು; ಸ್ವಪ್ನ ಜಾಗೃತ ಸುಷುಪ್ತಿ ಎಂದರೆ ಮಾಯೆಯೊಳಗೆ ಮಾಯೆ ಮುಳುಗಿ ಹೋಯಿತು… ಆದರೆ ಇವೆಲ್ಲಾ ನಮ್ಮ ಮಾರ್ಗವಲ್ಲ. ಪರಿಪೂರ್ಣ ಬಯಲ ಸಿದ್ಧಾಂತವು ಯಾವ ವಿಷಯದಾ ಹಂಗು ಸಂಗವೇನಿಲ್ಲದಾ ನಿಸ್ಸಂಗತ್ವ… ನಮ್ಮ ಅಲ್ಲಮ ಹೇಳಿದ್ದು ಇದನ್ನೇ ಅಲ್ಲವೇ?
ಅಂಗವಿಲ್ಲಾಗಿ ಅನ್ಯಸಂಗವಿಲ್ಲ
ಅನ್ಯಸಂಗವಿಲ್ಲಾಗಿ ಮತ್ತೊಂದು ವಿವರಿಸಲಿಲ್ಲ
ಮತ್ತೊಂದು ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ
ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ…
ಬಯಲ ಯೋಗದಲ್ಲಿ… ನಮೇ ಬಂದೋಃ/ ನಮೇ ಮುಕ್ತಿಃ/ ನಮೇ ಶಾಸ್ತ್ರಂ/ ನಮೇ ಗುರುಃ/ ಮಾಯಾ ಮಂತ್ರ ವಿಕಾಸತ್ವಾತ್ ಮಯಾತೀತೋ ಹಮವ್ಯಯಂ//
ಬಂಧವೂ ಇಲ್ಲ, ಮುಕ್ತಿಯೂ ಇಲ್ಲ; ಶಾಸ್ತ್ರವೂ ಇಲ್ಲ, ಗುರುವೂ ಇಲ್ಲ. ಕುರುಹುಗೆಟ್ಟ ಬಯಲ ಯೋಗವನು ನಿನಗೆ ಏನೆಂತು ಹೇಳಲಿ ಮಗುವೇ?
ಶಿಷ್ಯ: ಈ ಭುವಿಯೊಳಗೆ ಪ್ರಾಜ್ಞರು ಕೆಲವರು ಅರಿವನ್ನು ಬಿಡಬೇಕೆಂದರು. ಕೆಲವರು ಜೀವವೇ ಅಂತಿಮವೆಂದರು. ಮತ್ತೆ ಕೆಲವರು ಬ್ರಹ್ಮವೆಂದರು, ಇನ್ನು ಕೆಲವರು ಶೂನ್ಯ ಭಾವವೆಂದರು. ಇವೆಲ್ಲವೂ ಬಯಲ ಮಾರ್ಗವಲ್ಲವೇ?
ಗುರು: ಬಯಲ ಮಾರ್ಗವು ಆಗಮ ಜ್ಞಾನಕ್ರಿಯಾಮಾರಣ ಯೋಗ ವೆಂದರಿ ಕಂದಾ! ಅಂದರೆ ಬಯಲ ಮಾರ್ಗವು ಏನೂ ಇಲ್ಲದಾ ಮಾರ್ಗವಲ್ಲ. ಪರಂಪರಾನುಗತವಾಗಿ ಬಂದಿರುವ ಆಗಮ ಜ್ಞಾನವನ್ನನುಸರಿಸಿದ ಕ್ರಿಯೆಗಳನ್ನು ತನ್ನೊಳಗೆ ತಾನು ತಿಳಿದು ಗುರು ಸೌಂಜ್ಞೆ ಮುಖೇನ ಅವು ಇಲ್ಲವಂತಾಗಬೇಕು. ಆಗಮ ಜ್ಞಾನದ ಪ್ರವೃತ್ತಿಗಳಿಂದ ನಿವೃತ್ತನಾಗಲು ಸದಾ ಸಾಧನೆ ಮಾಡುವಂತಹವನು ನಿರವಯ ನಿತ್ಯ ಮೂರುತಿ.
ಶಿಷ್ಯ: ನನಗೇನೂ ತಿಳಿಯಲಾಗಲಿಲ್ಲ ಗುರುವೇ!?
ಗುರು: ನಿನಗೆ ತಿಳಿಯಲು ಕಷ್ಟವೇನಲ್ಲ! ಮರೆಯಲು ಕಷ್ಟವಾಗಿದೆ. ಅಂದರೆ ಈಗಾಗಲೇ ನೀನು ಮುಕ್ತಿ ಮತ್ತು ವಿಮೋಚನೆ ಇವೆರಡರ ಬಗ್ಗೆ ತಿಳಿದುಕೊಂಡಿರುವ ರೀತಿಗಳು ನಿನ್ನನ್ನು ಅದೇ ಅಂತಿಮ ಜ್ಞಾನವೆಂದು ನಂಬಿಸುತ್ತಿವೆ. ಬೇರೆ ಮಾರ್ಗಗಳು ಬೇಡವೆಂದು ಹಠ ಮಾಡುತ್ತಿವೆ. ಸತ್ಯಕ್ಕೆ ಒಂದೇ ದಾರಿ, ಸುಳ್ಳಿಗೆ ಸಾವಿರಾರು ದಾರಿ… ಸತ್ಯ ಮಾರ್ಗ ಬೇಕೆಂದರೆ ಈ ದಾರಿಗೆ ಬಾ…
ಮರೆಯಲಾಗದೇ ಹರಿಯ? ಮರೆಯಲಾಗದೆ ಬ್ರಹ್ಮನ?
ಮರೆಯಲಾಗದೇ ತೆತ್ತೀಸಕೋಟಿ ದೇವರ್ಕಳ
ನಮ್ಮ ಕೂಡಲ ಸಂಗಮದೇವರ ಮರೆಯಲಿಹುದು.
ಕೂಡಲಸಂಗಮವೆಂಬ ‘ಮಹಾಘನ ಬಯಲು’ ತೆತ್ತೀಸ ಕೋಟಿ ದೇವರ್ಕರನ್ನು ಮರೆಸಿ ಹಾಕುತ್ತದೆ. ಕಲ್ಪಿತ ಜ್ಞಾನಗಳನ್ನು ಸುಟ್ಟು ಬೂದಿ ಮಾಡುತ್ತದೆ.
ಶಿಷ್ಯ: ಬಯಲ ಮಾರ್ಗಿಗಳು ದ್ವೈತಿಗಳಲ್ಲ; ಅದ್ವೈತಿಗಳಲ್ಲ; ಶಕ್ತಿ ವಿಶಿಷ್ಟಾದ್ವೈತಿಗಳೂ ಅಲ್ಲ. ಹಾಗಾದರೆ ಅವರ ಮತ ಪಥ ಯಾವುದು?
ಗುರು: ದ್ವೈತಿಗಳು ಮಹಾ ಪುಣ್ಯಾತ್ಮರು. ಅವರಿಗೆ ಪಾಪ-ಪುಣ್ಯಗಳಿವೆ. ಸ್ವರ್ಗ-ನರಕ; ಜೀವ-ಪರಮಾತ್ಮ ಇತ್ಯಾದಿಯೆಲ್ಲಾ ಅವರದೇ ಸೃಷ್ಟಿ. ಆದರೆ ಇವೆರಡೂ ನಮಗಿಲ್ಲ. ಈ ಮತ ಖಂಡಿತ ನನದಲ್ಲ. ಏಕೆಂದರೆ ಪಾಪ-ಪುಣ್ಯ ಅವಳಿ ಮಕ್ಕಳಿದ್ದಂತೆ, ಒಂದಿದ್ದರೆ ಮತ್ತೊಂದು ಹುಟ್ಟುತ್ತದೆ. ಆದ್ದರಿಂದ ನಮ್ಮ ಬಸವಣ್ಣ ಇವೆರಡನ್ನೂ ನಿರಾಕರಿಸಿ ಸಮಯಾಚಾರವೆಂದ. ಅಂದರೆ ಜವಾಬ್ದಾರಿಯುತ ಎಚ್ಚರ. ಪಾಪ- ಪುಣ್ಯಗಳ ಹಂಗನ್ನು ಮೀರಿ ಬದುಕಬಲ್ಲ ಶಕ್ತಿಯನ್ನು ನೀಡುತ್ತದೆ. ಆ ಶಕ್ತಿಯನ್ನು ಪ್ರಸಾದ ಶಕ್ತಿ ಎಂದು ಕರೆದ. ಪ್ರಸಾದಿಯಾದವನಿಗೆ ಪಾಪ-ಪುಣ್ಯಗಳ ಹಂಗಿಲ್ಲ. ಆದ್ದರಿಂದ ನಾನು ದ್ವೈತ ಮಾರ್ಗಿಯಲ್ಲ. ಅದ್ವೈತಿಗಳು ದ್ವೈತಕ್ಕೆ ಹೋಗಿ ಜೀವ ಮಾಯೆ, ಬ್ರಹ್ಮ ಸತ್ಯವೆಂದು ಹೇಳಿ, ಇರುವುದು ಮತ್ತು ಇಲ್ಲದ್ದನ್ನು ಒಂದೇ ಅಂತ ಹೇಳುತ್ತಾರೆ. ಅದ್ವೈತವು ಮತಿಮಾಯೆ ಯೋಗವಾಗಿ ಬಿಟ್ಟಿದೆ. ನನಗಂತೂ ಆ ಗೊಡವೆ ಬೇಡವೇ ಬೇಡ! ಶಕ್ತಿ ವಿಶಿಷ್ಟಾದ್ವೈತ ಎಂಬ ಇನ್ನೊಂದು ಯೋಗವಿದೆ. ಎಲ್ಲಾ ಯೋಗಗಳ ಕಲಬೆರಕೆ ಮಾಡಿ ಹೇಳುವ ಮಾರ್ಗವಿದು. ಒಟ್ಟಿನಲ್ಲಿ ಇವೆಲ್ಲವೂ ಮಾನವ ಕುಲ ನಿರ್ಣಯಿಸಲ್ಪಟ್ಟಿರುವ ಪೂರ್ಣ ಜ್ಞಾತೃತ್ವಗಳು. ಸತ್ಯ ಯಾರ ಊಹೆಗೂ, ಕಲ್ಪನೆಗೂ ದಕ್ಕುವುದಿಲ್ಲ. ದಕ್ಕಲಾರದ್ದನ್ನು ದಕ್ಕಿಸಿಕೊಂಡೆವೆಂಬ ಭ್ರಮೆ ನಮಗಿಲ್ಲ. ಮಾನವ ಲೋಕ ನಿರ್ಣಯಿಸಲ್ಪಟ್ಟಿರುವ ಹಾಗೂ ಕಲ್ಪಿಸಲ್ಪಟ್ಟಿರುವ ಜ್ಞಾತೃತ್ವಗಳನ್ನು ಶೂನ್ಯವೆಂದು ಭಾವಿಸಿಕೊಂಡು ಸಹಜವಾಗಿ ಬದುಕುವವರು ಬಯಲಿಗರು. ಬಯಲಿಗರಿಗೆ ಯಾವ ಪದವಿಗಳೂ ಇಲ್ಲ, ಮತಗಳೂ ಇಲ್ಲ.
ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ
ರುದ್ರಪದವಿಯನೊಲ್ಲೆ, ನಾನು ಮತ್ತಾವ ಪದವಿಯನೊಲ್ಲೆನಯ್ಯಾ
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯ ಕರುಣಿಸಯ್ಯಾ.
ಶಿಷ್ಯ: ಹಾಗಾದರೆ ಬಯಲನ್ನು ತಿಳಿಯಲ್ಪಡುವುದು ಹೇಗೆ?
ಗುರು: ತಿಳಿಯಲ್ಪಡುವುದು, ತಿಳಿದುಕೊಳ್ಳುವುದು ಎಂಬೆರಡು ಮನೋ ಪ್ರಕೃತಿಗಳಾಚೆ ದೋಷರಹಿತವಾಗಿಹುದು ಬಯಲು.
ಶಿಷ್ಯ: ತಿಳಿಯಲ್ಪಡುವುದು ತಿಳಿದುಕೊಳ್ಳುವುದು ಈ ಮನಸ್ಥಿತಿಗಳಾಚೆ ತಿಳಿವುದಾದರೂ ಹೇಗೆ?
ಗುರು: ಅರಿವಿನೊಳಗಣ ಅರಿವು ಯಾವನಿಗೆ ದೃಢವಾಗುವುದೋ ಅವನೇ ನಿತ್ಯ ನಿರಂಜನ…
ಶಿಷ್ಯ: ಅದು ದೃಢವಾಗುವ ಪರಿಯೆಂತು?
ಗುರು: ಅರಿದೆವೆಂಬುದು ತಾ ಬಯಲು
ಅರಿಯನೆಂಬುದು ತಾ ಬಯಲು
ಅರಿವಿನ ಕುರುಹಿನ ಮರೆಹಿನೊಳಗೆ
ಗುಹೇಶ್ವರನೆಂಬುದು ತಾ ಬಯಲು
ಅರಿದೆನೆಂಬುದು ಅರಿತ ಕ್ಷಣವೇ ಸತ್ತಿತು. ಮರೆತೆನೆಂಬುದು ಮರೆತಲ್ಲಿಗೇ ಸತ್ತಿತು. ಸತ್ತ ಹೆಣನ ಮುಂದಿಟ್ಟುಕೊಂಡು ಅರಿದೆ, ಮರೆದೆ ಎಂಬುದೇ ಒಂದು ಮಹಾ ಭ್ರಮೆ.
ಕ್ಷಣ ಕ್ಷಣ ನಿತ್ಯ ನೂತನ… ಕ್ರಿಯೆ, ಪ್ರಕ್ರಿಯೆ ಮಹಾ ಪರಿವರ್ತನ… ತಾನೆಂಬುದು, ನೀನೆಂಬುದು, ನಾನೆಂಬುದು ಇಲ್ಲದಾ ಅನಿಕೇತನ ಎಂಬ ಅರಿವು ದೃಢವಾದವನಿಗೆ ಅರಿತರೂ ಮುಕ್ತಿ, ಮರೆತರೂ ಮುಕ್ತಿ. ಮುಕ್ತಿ ಎಂಬುದೇ ಚಿರಂತನ… ಹೀಗಿರುವಾಗ ನೋಡುವುದು, ಕೇಳುವುದು, ತಿಳಿಯುವುದು ಇತ್ಯಾದಿ ವಿಪರೀತಗಳಲ್ಲಿ ಮುಳುಗಿ ಹೋಗಿರುವ ದುರ್ಬಲ ಮನಸ್ಸಿನಿಂದ ತಿಳಿದೆನೆಂದರೆ ಮಹಾ ಭ್ರಮೆ… ತಿಳಿದ ಮತ್ತು ತಿಳಿಯಲ್ಪಡುವ ಜ್ಞಾತೃತ್ವಗಳನ್ನು ಅವು ಬಂದ ಕ್ಷಣದಲ್ಲಿಯೇ ಅವುಗಳನ್ನು ನಂಬದೇ ಬಯಲಗೊಳಿಸುವ ಎಚ್ಚರ ಬಲ್ಲವನು ಬಯಲಿಗನೆಂದು ತಿಳಿ.
ಬಯಲ ರೂಪ ಮಾಡಬಲ್ಲಾತನೇ ಶರಣನು
ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲ ಮಾಡಲರಿಯದಿದ್ದಡೆ
ಎಂತು ಲಿಂಗಾನುಭವಿಯೆಂಬೆ?
ಶಿಷ್ಯ: ಬಯಲು ಮನೋಗೋಚರವೋ? ಹೃದ್ಗೋಚರವೋ?
ಗುರು: ಬಯಲು ಮನೋ ವಾಕ್ ಗೋಚರವಲ್ಲ.
ಶಿಷ್ಯ: ಮತ್ತೆ ಹೇಗೆ?
ಗುರು: ಘೋಷಿಸಲ್ಪಡುತ್ತಿದೆ ಎಂದಾಗ ನೋಡುವ ಮತ್ತು ನೋಡಲ್ಪಟ್ಟದ್ದು ಎಂದಾಯ್ತು… ಇವೆರಡೂ ಸುಳ್ಳೇ!!! ನೋಡುವವನೇ ಇಲ್ಲವಾಗಿರುವಾಗ ನೋಡಿದವನಾರು? ನೋಡಲ್ಪಟ್ಟದ್ದೇನು? ದ್ವೈತದ ಹೊಲಸಲ್ಲಿ ಬಿದ್ದಿದ್ದೀಯಾ, ನೋಡಿಕೋ ನಿನ್ನ ಗಲೀಜು!!
ಶಿಷ್ಯ: ಅಯೋಮಯವಾಗಿದೆ ಸ್ವಾಮಿ…
ಗುರು: ವಿಶ್ವಾತ್ಮಕ ವಸ್ತು ಜಗತ್ತಿನಲ್ಲಿ ನಾನು ಎಂಬುದು ಅನ್ಯವಲ್ಲ ಮತ್ತು ಒಂದೇ ಅಲ್ಲ! ಬಿಡಿಸಿಕೊಳ್ಳಲು ನೀನು ಯಾವುದರ ಜೊತೆಗೂ ಅಂಟಿಕೊಂಡಿಲ್ಲ. ಅಂಟಿಕೊಳ್ಳೋಣವೆಂದರೆ ಇಲ್ಲಿ ತಾನು, ಅವನೆಂಬ ತೆರಹಿಲ್ಲದೆ ನಿರಂತರವಾಗಿದೆ. ಈ ಅರಿವಿನೊಳಗಣ ಅರಿವು ನಿನಗೆ ದೃಢವಾದಾಗ ಈಗಲೇ ನೀನು ನಿತ್ಯ ಸುಖಿ. ಅಂಡ, ಪಿಂಡ, ಬ್ರಹ್ಮಾಂಡಗಳೆಂದು ಬೇಧವೆಣಿಸಲು ಏನೂ ಇಲ್ಲದಾ ಏಕಾದ್ವಯ ಮಹಾಘನದೊಳಗೆ ಮಾತಿಲ್ಲ, ಮೌನವೂ ಇಲ್ಲ, ಹಂಗು ಇಲ್ಲ. ಹುಟ್ಟು ಸಾವುಗಳೆಂಬ ಜರಾ ಮರಣಗಳೂ ಇಲ್ಲ.
ಏನೂ ಇಲ್ಲದ ಮಹಾಘನದೊಳಗೆ
ತಾನೆಂಬುದನಳಿದ ಪರಮ ಲಿಂಗೈಕ್ಯರಿಗೆ
ಧ್ಯಾನ ಮೌನದ ಹಂಗುಂಟೆ ಗುಹೇಶ್ವರಾ.
ಆದ್ದರಿಂದ ಶಿಷ್ಯೋತ್ತಮ… ಬಯಲ ಮಾರ್ಗವು ಆಗಮ ಕ್ರಿಯಾ ಮರಣಯೋಗವೆನಿಸಿಕೊಂಡಿದೆ. ನೀನು ಮೊದಲು ಅವುಗಳಿಂದ ಹೊರಗೆ ಬಾ… ಭ್ರಮೆಗಳನ್ನು ಕಿತ್ತೊಗೆದು ಬಾ… ಈ ಕ್ಷಣದಲ್ಲೇ ನಿನಗೆ ಬಯಲ ಪಥ ಸಿಗುತ್ತದೆ.
Comments 20
Jyothilingappa
Feb 8, 2021ಸರಳ ವಚನಗಳನ್ನು ಬಳಸಿಕೊಂಡು ಅತ್ಯಂತ ಗಂಭೀರ ಚಿಂತನೆಯನ್ನು ಬಹು ಸರಳವಾಗಿ ಬಯಲ ದರ್ಶನ ಮಾಡಿಸಿರುವ ಪದ್ಮಾಲಯ ನಾಗರಾಜ್ ರಿಗೆ ಧನ್ಯವಾದಗಳು. ಹೀಗೂ ವಚನಗಳನ್ನು ಓದಬಹುದು ಎಂಬೊಂದು ಹಾದಿ ಗುರು ಮುಖೇನ ತೋರಿರುವರು.
ನವೀನ್ ಚಂದ್ರ
Feb 8, 2021ಗುರು- ಶಿಷ್ಯ ಸಂವಾದವನ್ನು ಕನಿಷ್ಟ ನಾಲ್ಕೈದು ಸಲ ಓದಿದೆ… ಬಹಳ ಗೂಡಾರ್ಥವಿದೆ. ಸರಿ ದಾರಿ ತೋರುವ ಗುರುವಿಗೆ ವಂದನೆ.
Nandeesh Harihara
Feb 9, 2021ನಾನು ತಿಳಿದುಕೊಂಡ ಲಿಂಗಾಯತಕ್ಕೂ ನೀವು ಹೇಳುತ್ತಿರುವ ಲಿಂಗಾಯತ ದರ್ಶನಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ವಿಚಾರಗಳು ಎಲ್ಲಿಯೂ ಸಂಧಿಸುತ್ತಿಲ್ಲ. ಶಕ್ತಿವಿಶಿಷ್ಟಾದ್ವೈತವನ್ನು ನಾನು ultimate ಎಂದು ಭಾವಿಸಿದ್ದೆ. ಇಲ್ಲಿ ಗುರುವಾದರೋ ಅದನ್ನು ಕಸದಂತೆ ತಳ್ಳಿಬಿಡುತ್ತಾನೆ! ನನ್ನ ನಂಬಿಕೆಯನ್ನೇ ತಳ್ಳಿದಂತಾಯಿತು….. ವಿಚಾರ ಪ್ರಚೋದಕ ಸಂವಾದವನ್ನು ಪ್ರಕಟಿಸಿದ್ದಕ್ಕೆ ಶರಣು.
ravi hatti
Feb 10, 2021ಸಂವಾದದಲ್ಲಿರುವ ಶಿಷ್ಯನಂತೆ ನನಗೂ ಎಲ್ಲವೂ ಆಯೋಮಯವಾಗಿ ಕಾಣುತ್ತಿದೆ. ಬಯಲು ಕೇವಲ ಸಾಂಕೇತಿಕ ಆದರ್ಶವಲ್ಲ, ಅದೊಂದು ಸಾಧನೆಯ ಪರಿಣಾಮವೆಂದು ಓದಿ ಆನಂದವಾಯಿತು.
ಶ್ರೀಕಾಂತ ಬಸಪ್ಪ, ಮನಗೂಳಿ
Feb 10, 2021🙏🏻 THNQ. I thought, there is no beyond this. This is Very Very meaningful And Super most
ARIvu. ನನ್ನೊಳಗಿನ ಬಯಲು, ಹೊರಗಿನ ಬಯಲು ಎಲ್ಲವೂ ಒಂದೇ ಆಗಿದೆ.
Prasanna Kumar
Feb 12, 2021ನಾಗರಾಜ ಶರಣರಿಗೆ ಶರಣು. ಬಯಲ ಮಾರ್ಗ ತೋರಲು ಯಾವುದಾದರೂ ಪುಸ್ತಕಗಳು ಸಿಗುತ್ತವೆಯೇ? ಅದರ ಸಾಧನಾ ಕ್ರಮವು ಇಷ್ಟಲಿಂಗ ಸಾಧನೆಯಿಂದ ಹೇಗೆ ಸಾಧ್ಯವಾಗುತ್ತದೆನ್ನುವುದು ನನಗೆ ಯಕ್ಷ ಪ್ರಶ್ನೆಯಾಗಿಬಿಟ್ಟಿದೆ. ಇದರ ಬಗೆಗೆ ಮತ್ತೊಂದು ಲೇಖನ ಬರೆಯುವಿರಾ?
Kusuma Shivamogga
Feb 12, 2021ಬಂಧವೂ ಇಲ್ಲ, ಮುಕ್ತಿಯೂ ಇಲ್ಲ; ಶಾಸ್ತ್ರವೂ ಇಲ್ಲ, ಗುರುವೂ ಇಲ್ಲ. ಕುರುಹುಗೆಟ್ಟ ಬಯಲ ಯೋಗವನು ನಿನಗೆ ಏನೆಂತು ಹೇಳಲಿ ಮಗುವೇ? ಎಂದು ಗುರು ಇಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಿದ್ದಾನಾ ಅಥವಾ ಇದು ಸಾಧ್ಯವಾಗದ ಕೆಲಸವೆಂಬ ಚಿಂತೆಯೇ… ಅಥವಾ… ಇನ್ನೇನು?
ಶಂಕರಗೌಡ ನೀಲಸಂದ್ರ
Feb 14, 2021ಅನುಭಾವದ ಮಾತುಗಳು ಹೃದಯ ತಣಿಸುವಂತಿದ್ದವು. ಬಯಲು ಶರಣರ ವಚನಗಳಲ್ಲಿ ಬೆಡಗಾಗಿ ಹೊಮ್ಮಿದೆ. ಆ ಬೆಡಗನ್ನು ಬಿಡಿಸಲು ನೀವು ಯತ್ನಿಸುತ್ತಿದ್ದೀರಿ. ಆದರೆ ಅದು ನಮ್ಮನ್ನು ಪ್ರತಿನಿಧಿಸೋ ಶಿಷ್ಯನ ತಲೆಗೆ ಹೋಗುವುದು ಕಷ್ಟವೇ ಇದೆ.
ಹರಿಪ್ರಸಾದ ಬೆಂಗಳೂರು
Feb 14, 2021ದ್ವೈತ, ಅದ್ವೈತ, ಶಕ್ತಿವಿಶಿಷ್ಟಾದ್ವೈತಗಳೆಲ್ಲವೂ ವಾದದ ಚಮತ್ಕಾರಗಳು. ಪ್ರತಿಯೊಬ್ಬರ ವಾದವನ್ನು ಕೇಳುತ್ತಿದ್ದರೆ ತಾರ್ಕಿಕವಾಗಿ ಇದು ಸರಿ, ಅದು ಸರಿ ಎಂದುಕೊಳ್ಳುತ್ತೇವೆ. ಅವೆಲ್ಲವೂ ದರ್ಶನಶಾಸ್ತ್ರಗಳಾಗಿ ಕೇಳಲು ಚನ್ನಾಗಿರುತ್ತವೆ. ಬಯಲಿಗೆ ಯಾವ ದರ್ಶನ ಶಾಸ್ತ್ರವಿದೆ? ಬಯಲು ಒಂದು ದರ್ಶನದ ಸಿದ್ದಾಂತವಾಗಿ ಯಾರೊಂದಿಗೂ ವಾದಕ್ಕೆ ನಿಂತಿದ್ದನ್ನು ನಾನು ನೋಡಿಲ್ಲ. ಪಂಡಿತೋತ್ತಮರು ಕೂಡ ಇದರ ಬಗ್ಗೆ ಮಾತಾಡಿದ್ದನ್ನು ಬರೆದದ್ದನ್ನು ನೋಡಿಲ್ಲ. ಇದೇ ಮೊದಲ ಸಲ ಈ ಲೇಖನದಲ್ಲಿ ಓದಿದೆ. ಧನ್ಯವಾದಗಳು.
Shanmukhappa
Feb 15, 2021ಬಯಲ ರೂಪ ಮಾಡಬಲ್ಲಾತನೇ ಶರಣನು
ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ- ಬಯಲು ರೂಪಾಗುವುದೆಂದರೆ ಇಷ್ಟಲಿಂಗ, ಆ ರೂಪು ಬಯಲಾಗುವುದೆಂದರೆ ಇಷ್ಟಲಿಂಗ ಹಿಡಿದು ಬಯಲಾಗುವುದೆಂದು ಅನೇಕ ಸ್ವಾಮಿಗಳು ಹೇಳುತ್ತಾರೆ. ಈ ಅರ್ಥ ವ್ಯಾಖ್ಯಾನವನ್ನು ಆಚರಣೆಯಲ್ಲಿ ನಡೆಸುವುದು ಹೇಗೆಂದು ನನಗೆ ಗೊತ್ತಾಗಲಿಲ್ಲ. ತಿಳಿಸುವಿರಾ?
ಬಸವರಾಜ ಹಂಡಿ
Feb 17, 2021ಬಯಲು ಎಂಬುದನ್ನು ಅನುಭಾವ ಮಾಡಿಕೊಳ್ಳಲು ಈ ಲೇಖನ ನಮ್ಮ ಎದುರಗಡಗೆ ಒಂದು ಸಣ್ಣದಾದ ದಾರಿಯನ್ನು ತರೆದು ಬಿಡುತ್ತದೆ.ಸಾರಾಂಶ ರೂಪದಲ್ಲಿ ಪ್ರಶ್ನೆ ಉತ್ತರಗಳ ಮುಖಾಂತರ ಬಯಲುನ್ನೂ ನಮಗೆ ತೋರಿಸಿ ಕೊಡುತ್ತಾರೆ.
ಬಯಲ ರೂಪ ಮಾಡಬಲ್ಲಾತನೇ ಶರಣನು
ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲ ಮಾಡಲರಿಯದಿದ್ದಡೆ
ಎಂತು ಲಿಂಗಾನುಭವಿಯೆಂಬೆ?
ಬಯಲು : ತಿಳಿದ ಮತ್ತು ತಿಳಿಯಲ್ಪಡುವ ಜ್ಞಾತೃತ್ವಗಳನ್ನು ಅವು ಬಂದ ಕ್ಷಣದಲ್ಲಿಯೇ ಅವುಗಳನ್ನು ನಂಬದೇ ಬಯಲಗೊಳಿಸುವ ಎಚ್ಚರ ಬಲ್ಲವನು ಬಯಲಿಗನೆಂದು ತಿಳಿ.
ಇದನ್ನು ಸುಮ್ಮನೆ ಓದಿದರೆ ಸಾಲದು.ಇದನ್ನು ಸಾಧನೆಯ ಮುಖಾಂತರ ಸಾಧಿಸಿ ಕೊಳ್ಳಬೇಕು.
ತತ್ವಪದಕಾರ ಶ್ರೀ ಪದ್ಮಲಯ ನಾಗರಾಜ ಶರಣರಗೆ. ಹಾಗು ಬಯಲು ತಂಡದ ನಾಯಕಿ ಮಂಗಳಾ ಶರಣೆಗೆ ದನ್ಯವಾದಗಳು ಮತ್ತು ಶರಣು ಶರಣಾರ್ಥಿ.
ದಾನಪ್ಪ ಹೆರೂರು
Feb 17, 2021ಶರಣರದು ಶಕ್ತಿವಿಶಿಷ್ಟಾದ್ವೈತವೆಂದು ವಚನಗಳ ಸಾಲುಗಳನ್ನು ಹಿಡಿದು ಕೆಲವರು ವಾದಿಸುತ್ತಾರೆ. ಅದೂ ಶೈವದ ನಂಬಿಕೆಗಳಲ್ಲೊಂದು. ಕುಂಡಲಿನಿಯೋಗವನ್ನು ಶರಣರು ಅನುಸರಿಸಿದರೇ? ಅದು ಈ ಮೊದಲೇ ಇದ್ದ ಯೋಗ ಪ್ರಕಾರ, ಶರಣರು ಯಾವ ದಾರಿ ಹಿಡಿದಿದ್ದರು ಎನ್ನುವುದು ಅಸ್ಪಷ್ಟವಾಗಿದೆ. ಇಷ್ಟಲಿಂಗ ಯೋಗ ಇರಬೇಕೆಂದು ನನ್ನ ಅಭಿಪ್ರಾಯ. “ಬಯಲ ಮಾರ್ಗವು ಆಗಮ ಜ್ಞಾನಕ್ರಿಯಾಮಾರಣ ಯೋಗ” – ಎನ್ನುವ ನಿಮ್ಮ ಮಾತು ಬಹಳ ಕುತೂಹಲ ಹುಟ್ಟಿಸಿದೆ, ಈ ಮಾತಿನ ಮರ್ಮವೇನು? ಈ ಯೋಗದ ಹೆಸರನ್ನು ನಾನು ಎಲ್ಲಿಯೂ ಕೇಳಿಲ್ಲ. ವಚನಗಳಲ್ಲಿ ಇದು ಪ್ರಸ್ತಾಪವಾಗಿದೆಯೇ?
Harsha m patil
Feb 18, 2021ಬಿಡಿಸಿಕೊಳ್ಳಲು ಯಾವುದರೊಂದಿಗೆ ಅಂಟಿಕೊಂಡಿಲ್ಲವೆನ್ನುತ್ತೀರಿ. ಮನಸ್ಸಿನೊಂದಿಗೆ, ನಮ್ಮ ಯೋಚನೆಗಳೊಂದಿಗೆ, ನಮ್ಮದೇ ಜಗತ್ತಿನೊಂದಿಗೆ ಈಚೆ ಬರಲಾಗದಂತೆ ಅಂಟಿಕೊಂಡು ಬಿಟ್ಟಿದ್ದೇವೆ! ಗುರುವೇ.
ಸುಶೀಲಮ್ಮ ಬಾಳೆಹೊನ್ನೂರು
Feb 22, 2021ಗುರು-ಶಿಷ್ಯ ಸಂವಾದವು ತುಂಬಾ ಉತ್ಕೃಷ್ಟವಾಗಿದ್ದು, ಸರಳ ಭಾಷೆಯಲ್ಲಿದ್ದರೂ ಗಹನವಾಗಿದೆ. ಬಯಲು ಪರಿಕಲ್ಪನೆ ಯಾವ ಸಿದ್ದಾಂತಗಳಿಗೂ ಸಿಗಲಾರದ್ದು ಎನ್ನುವ ಉನ್ನತ ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕೆ ಶರಣಾರ್ಥಿಗಳು.
Gowreesh
Feb 22, 2021ಶರಣರು ಸ್ವರ್ಗ-ನರಕ, ಪಾಪ-ಪುಣ್ಯಗಳನ್ನು ಒಪ್ಪೊದಿಲ್ಲ, ಆದರೆ ಜೀವಾತ್ಮ-ಪರಮಾತ್ಮರನ್ನೂ ಅಲ್ಲಗಳೆದರೆ? ಮತ್ತೆ ಕೈಯಲ್ಲಿರೋ ಲಿಂಗ ಸರ್ವವ್ಯಾಪಿ ಪರಮಾತ್ಮನ ಕುರುಹು ಎನ್ನುತ್ತಾರಲ್ಲಾ…
J.K. Patil
Feb 23, 2021ಈಗ ಗುರುವಿಗೆ ಶರಣಾಗಿ ಬಂದ ಶಿಷ್ಯನಿಗೆ ಆರಂಭದಲ್ಲೇ ಬಯಲಿನ ಪಾಠ ಹೇಳಿದರೆ ಅರ್ಥವಾಗುವುದಾದರೂ ಹೇಗೆ?
Kiran Bellad
Mar 2, 2021ಬಯಲ ಪಥ ಸಂವಾದ ಚೆನ್ನಾಗಿ ಮೂಡಿ ಬಂದಿದೆ. ಇದರ ಗೂಢಾರ್ಥ ಅನುಭವ ವೇದ್ಯವಾದಾಗ ಮಾತ್ರ ಸಾಧ್ಯ ಎನ್ನುವುದು ನನ್ನ ಅಭಿಪ್ರಾಯ
Hareesh Mysuru
Mar 4, 2021ಯಾವುದನ್ನು ಅರಿಯಬೇಕು, ಯಾವುದನ್ನು ಮರೆಯಬೇಕು? ಅರಿವು ಮರೆವು ಇವುಗಳ ಕೀಲನ್ನು ಬಿಡಿಸಿ ಹೇಳಿ ಗುರುವೇ…
H v jaya
Mar 5, 2021ಗುರುವು ಶಿಷ್ಯನಿಗೆ ಮಾಡಿದ ಉಪದೇಶ ಅತ್ಯದ್ಬುತವಾಗಿದೆ
Manoj Giravi
Mar 22, 2021ಗುರು-ಶಿಷ್ಯ ಸಂವಾದವನ್ನು ಪ್ರತಿ ತಿಂಗಳು ಪ್ರಕಟಿಸಬೇಕೆಂದು ನನ್ನ ಪ್ರಾರ್ಥನೆ. ಶರಣರ ಆಶಯಗಳನ್ನು ಸ್ಪಷ್ಟಪಡಿಸುವ ಇಂತಹ ಪ್ರಶ್ನೋತ್ತರಗಳು ಮಾರ್ಗದರ್ಶನ ನೀಡುತ್ತವೆ.