Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾಡುವಂತಿರಬೇಕು, ಮಾಡದಂತಿರಬೇಕು…
Share:
Articles April 29, 2018 ಕೆ.ಆರ್ ಮಂಗಳಾ

ಮಾಡುವಂತಿರಬೇಕು, ಮಾಡದಂತಿರಬೇಕು…

ಮೊದಲ ಬಾರಿಗೆ ಶಾಲೆಯಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಮ್ಮೆ, ಅಭಿಮಾನ, ಕುತೂಹಲಗಳಿಂದ ಓದುತ್ತಿದ್ದಾಗ ಒಂದು ವಿಷಯ ನನ್ನ ಮನಸ್ಸಿನಲ್ಲಿ ಅರ್ಥವಾಗದೇ ಉಳಿದುಬಿಟ್ಟಿತ್ತು. ಇಡೀ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಗಾಂಧೀಜಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಯಾಕೆ ಮೊದಲ ಸ್ವಾತಂತ್ರ್ಯ ಬಾವುಟ ಹಾರಿಸಲಿಲ್ಲ? ಜನರನ್ನುದ್ದೇಶಿಸಿ ಆ ದಿನ ಯಾಕೆ ಮಾತನಾಡಲಿಲ್ಲ? ಸಂತೋಷ ಹಂಚಿಕೊಳ್ಳಲಿಲ್ಲ? ಅವತ್ತಿನ ಯಾವ ಉತ್ಸವ ಆಚರಣೆಯಲ್ಲಿಯೂ ಅವರು ಭಾಗಿಯಾದ ಬಗ್ಗೆ ಮಾಹಿತಿ ಸಿಗದೇ ನನಗೆ ಗೊಂದಲವಾಗಿತ್ತು. ದೇಶಕ್ಕೆ ದೇಶವೇ ಸಂಭ್ರಮಿಸುತ್ತಿದ್ದ ಆಗಸ್ಟ್ 15, 1947ರಂದು ಕಲ್ಕತ್ತಾ (ಈಗಿನ ಕೊಲ್ಕತ್ತಾ)ದಲ್ಲಿ ಹಿಂದೂ-ಮುಸ್ಲಿಂ ಯುವಜನರ ನಡುವೆ ಬಾಂಧವ್ಯ ಬೆಸೆಯಲು ಗಾಂಧೀಜಿ ಹೆಣಗುತ್ತಿದ್ದರು ಎನ್ನುವ ವಿಷಯ ಎಷ್ಟೋ ವರ್ಷಗಳ ಬಳಿಕ ನನಗೆ ಗೊತ್ತಾಯಿತು. ಅಂದು ಪೂರ್ತಿ ಉಪವಾಸವಿದ್ದ ಅವರು ಉಳಿದ ಸಮಯದಲ್ಲಿ ಚರಕ ನೂಲುತ್ತಾ ಪ್ರಾರ್ಥನೆಯಲ್ಲಿ ತೊಡಗಿದ್ದರು. ಅಷ್ಟು ದಿನಗಳ ತಮ್ಮ ಹೋರಾಟ- ಸೆರೆವಾಸಗಳ ಕಷ್ಟಕ್ಕೆ ಪ್ರತಿಫಲ ಸಿಕ್ಕಿತೆಂದು ಎಲ್ಲಿಯೂ ಅವರು ಹೆಮ್ಮೆಯಿಂದ ಹೇಳಿಕೊಳ್ಳಲಿಲ್ಲ. ಆ ದಿನದ ಅವರ ಮನಸ್ಥಿತಿ ಹೇಗಿದ್ದೀತು ಎಂದು ಕಲ್ಪಿಸಿಕೊಂಡಾಗಲೆಲ್ಲಾ ನನಗೆ ನೆನಪಾಗುವುದು ಬಸವಣ್ಣನವರ ಈ ವಚನ:
ಮಾಡುವಂತಿರಬೇಕು ಮಾಡದಂತಿರಬೇಕು.
ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು.
ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು.
ಮಾನಸಿಕ ಸಮತೋಲನದ ಪಾಠ ಹೇಳಿಕೊಡುವ ಅತ್ಯದ್ಭುತ ಸಂದೇಶವೊಂದು ಇಲ್ಲಿದೆ. ಯಾವುದೂ ತೋರಿಕೆ ಅಥವಾ ಪ್ರದರ್ಶನವಾಗಬಾರದು. ಅದು ಪೂಜೆಯಾದರೂ ಸರಿ, ಮಾಡುವ ಕೆಲಸವಾದರೂ ಸರಿ. ಯಾರದೇ ಮೆಚ್ಚುಗೆ, ಹೊಗಳಿಕೆಗಳೂ ಇಲ್ಲಿ ಗಣನೆಗೆ ಬರುವುದಿಲ್ಲ. ‘ತಾನಿಲ್ಲದ ಮಾಟ’ದಲ್ಲಿ ತುಂಬಿಕೊಂಡಿರುವುದು ಸಮಷ್ಟಿಯ ಪ್ರಜ್ಞೆ. ಅದೇ ದೇವರು. ಆ ಭಾವದ ಮುಂದೆ ‘ನಾನು’ ಎನ್ನುವುದು ಅರ್ಥ ಕಳೆದುಕೊಂಡಿರುತ್ತದೆ. ನನ್ನ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಷ್ಟೇ ನನಗೆ ಸೇರಿದ್ದು ಎಂಬ ಸಹಜ ಭಾವ. ಅಲ್ಲಿ ಹೆಗ್ಗಳಿಕೆಗೆ ಜಾಗವಿರುವುದಿಲ್ಲ. ಚಿಕ್ಕಪುಟ್ಟ ಗೆಲುವಿಗೆಲ್ಲಾ ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿಸಿಕೊಳ್ಳುವ, ಹಾರ-ತುರಾಯಿಗಳಿಗೆ ಕೊರಳೊಡ್ಡಿ, ಜೈಕಾರಗಳನ್ನು ಕೂಗಿಸಿಕೊಳ್ಳುವ ಇಂದಿನ ನಾಯಕರೆನಿಸಿಕೊಂಡವರಿಗೆ, ಮಾಡುವ ಕೆಲಸದ ಮುಂದೆ ವಿನಮ್ರ ಭಾವ ಅಳವಟ್ಟು ನಿಂತ ಇಂಥ ವ್ಯಕ್ತಿತ್ವ ಸದಾ ಕಾಲ ಎಚ್ಚರಿಕೆಯ ರೂಪದಲ್ಲಿ ಕಾಡಬೇಕು.
ಇಂಗ್ಲಿಷ್ ಲೇಖಕಿ ಜೇನ್ ಆಸ್ಟಿನ್ ಅವರ ಸೆನ್ಸ್ ಆಂಡ್ ಸೆನ್ಸಿಬಿಲಿಟಿ ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ: “ನಾವು ಏನನ್ನು ಮಾತನಾಡುತ್ತೇವೆಯೋ ಅಥವಾ ಏನನ್ನು ಯೋಚಿಸುತ್ತೇವೆಯೇ ಅದಾವುದೂ ನಾವಲ್ಲಾ. ನಾವು ಏನನ್ನು ಮಾಡುತ್ತೇವೋ ಅದೇ ನಾವು.” ನಿಜ, ನಾವು ಮಾಡುವ ಕೆಲಸಗಳು ನಮ್ಮನ್ನು ವ್ಯಾಖ್ಯಾನಿಸುತ್ತವೆ (Our work will define us). ಅದು ಮನೆಗೆಲಸಗಳನ್ನು ಮಾಡುವುದೂ ಸೇರಿದಂತೆ ದೇಶದ ಆಡಳಿತ ನಡೆಸುವ ಯಾವುದೇ ಬಗೆಯ ಕೆಲಸವಾದರೂ ಸರಿ, ಆ ಕೆಲಸವನ್ನು ಆ ಹೊತ್ತಿನಲ್ಲಿ ನಾವು ಹೇಗೆ ಮಾಡುತ್ತೇವೆ ಎಂಬುದು ನಾವು ಯಾರೆಂಬುದನ್ನು ಹೇಳುತ್ತವೆ. ಮಾಡುವ ಮಾಟದಲ್ಲಿ ಅಂದರೆ ಮಾಡುವ ಯಾವುದೇ ಕ್ರಿಯೆಯಲ್ಲಿ ನಮ್ಮನ್ನು ನಾವೇ ಅಭಿವ್ಯಕ್ತಿಸಿಕೊಳ್ಳುವ, ವ್ಯಾಖ್ಯಾನಿಸಿಕೊಳ್ಳುವ, ಕಂಡುಕೊಳ್ಳುವ ಸಾಧ್ಯತೆ ಇದೆ. ಕ್ರಿಯಾಶೀಲತೆಗೆ ಜೀವನದಲ್ಲಿ ಮಹತ್ತರ ಸ್ಥಾನ ನೀಡುವ ಶರಣರು ನಾವು ಮಾಡುವ ಕಾರ್ಯಗಳು ಹೇಗಿರಬೇಕು ಎಂದು ನಿರ್ದೇಶಿಸುತ್ತಾ ಆ ಕಾರ್ಯ ಮಾಡುವ ರೀತಿಯನ್ನೂ ತಮ್ಮ ನಿದರ್ಶನದ ಮೂಲಕವೇ ತೆರೆದಿಡುತ್ತಾರೆ.
ವಚನಗಳಲ್ಲಿ ಕಾಣುವ ‘ಮಾಡು’, ‘ಮಾಡುವ ಮಾಟ’ ಎನ್ನುವ ಪದಗಳಿಗೆ ವಿಶೇಷ ಅರ್ಥವಿದೆ. ಕಾಯಕಕ್ಕಿಂತ ಭಿನ್ನವಾದ ಧ್ವನಿವಿಚಾರವನ್ನು ಇಲ್ಲಿ ಗಮನಿಸಬಹುದು. ‘ಮಾಡು’- ಒಂದು ಕ್ರಿಯಾಪದ. ನಾವು ಮಾಡುವ ಯಾವುದೇ ಕ್ರಿಯೆ ಇದಾಗಿರಬಹುದು. ಭಕ್ತಿ ಮಾಡು, ಪೂಜೆ ಮಾಡು, ಊಟ ಮಾಡು, ಸೇವೆ ಮಾಡು… ಎನ್ನುವುದರಿಂದ ಹಿಡಿದು ನಾವು ಮಾಡುವ ಸಣ್ಣ-ಪುಟ್ಟ-ದೊಡ್ಡ ಕಾರ್ಯಗಳೆಲ್ಲವೂ ಇದರ ವ್ಯಾಪ್ತಿಗೆ ಬರುತ್ತವೆ. ಒಂದರ್ಥದಲ್ಲಿ ಕ್ರಿಯೆಗಳ ಒಟ್ಟು ಮೊತ್ತವೇ ಜೀವನವಲ್ಲವೇ? ಹೀಗಾಗಿ ಇಡೀ ಬದುಕಿನ ಪಾಠವೇ ನಾವು ‘ಮಾಡುವ ಮಾಟ’ದಲ್ಲಿ ಅಡಗಿದೆ ಎಂದರೆ ತಪ್ಪಾಗಲಾರದು. ಕಾರ್ಯ ಪ್ರವೃತ್ತರಾಗುವುದೆಂದರೆ ಬದುಕಿನ ಕ್ರಿಯಾಶೀಲತೆಗೆ ಚಾಲನೆ ಕೊಟ್ಟಂತೆ.
ಸೌಕರ್ಯಗಳನ್ನು, ಸವಲತ್ತುಗಳನ್ನು, ಐಷಾರಾಮಿ ಜೀವನ ಶೈಲಿಯನ್ನು ಅಕ್ಷರಶಃ ಬೆನ್ನು ಹತ್ತಿರುವ ನಮಗೆ, ‘ಮಾಡುವ ಕೆಲಸ’ಗಳೆಲ್ಲವೂ ಯಾಂತ್ರಿಕವೇ. ಮಾಡುವ, ನೀಡುವ ಕ್ರಿಯೆಗಳು ಯಾಂತ್ರಿಕವೂ, ಪ್ರದರ್ಶಕವೂ ಆಗಿಬಿಡುವುದು ಮನಸ್ಸಿನ ದೌರ್ಬಲ್ಯದಿಂದ. ಕಾಟಾಚಾರಕ್ಕೆ ಮಾಡುವ ಕೆಲಸ ನಿರರ್ಥಕ. ಮನಸ್ಸಿಟ್ಟು ಕೆಲಸ ಮಾಡುವುದರಿಂದ ಸಿಗುವ ಸುಖ ಅನನ್ಯ. ಇದು ಯಾವುದೇ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮುನ್ನ ತಿಳಿಯಬೇಕಾದ ಮೊದಲ ಪಾಠ. ಅದಕ್ಕೆ ಬಸವಣ್ಣನವರು ಹೇಳುತ್ತಾರೆ:
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
ಹಿಡಿದ ಕೆಲಸವನ್ನು ಮನಸಾರೆ ಮಾಡದಿದ್ದರೆ ಅದರಿಂದ ಯಾವ ಪ್ರಯೋಜನವೂ ಸಿಗುವುದಿಲ್ಲ. ಸುಮ್ಮನೆ ಅವರಿವರ ಮುಂದೆ “ನಾನು ಎಷ್ಟೆಲ್ಲಾ ಕಷ್ಟಪಟ್ಟೆ, ಏನೆಲ್ಲಾ ಮಾಡಿದೆ…” ಎಂದು ಪಟ್ಟಿ ಬಿಚ್ಚುತ್ತಾ ಹಲುಬ ಬೇಕಾಗುತ್ತದೆ. ಹಾಗೆ ಹಳಹಳಿಸುತ್ತಾ, ದೊಡ್ಡತನ ತೋರಿಸಿಕೊಳ್ಳುವಲ್ಲಿ, ಕೇಳುಗರಿಂದ ಮರುಕ ಸಂಪಾದಿಸುವಲ್ಲಿಗೇ ಅವರು ಮಾಡಿದ ಕೆಲಸದ ಪಾವಿತ್ರ್ಯವೂ ಕೊಚ್ಚಿ ಹೋಗಿರುತ್ತದೆ. ನಿಜವಾದ ಕಳಕಳಿಯಿಂದ ಕಾರ್ಯ ನಿರ್ವಹಿಸುವುದಾದರೆ ಅದಕ್ಕೆ ದೈವಬಲವೂ ಇರುತ್ತದೆ.
ತನ್ಮಯತೆಯಿಂದ ಮಾಡುವ ಯಾವುದೇ ಸಂಗತಿಯಾಗಲಿ ಅದು ಎಷ್ಟೇ ಬೆವರಿಳಿಸುವಂತಿದ್ದರೂ ಮಾನಸಿಕ ಒತ್ತಡ ಅಥವಾ ಉದ್ವೇಗ ಸೃಷ್ಟಿಸುವುದಿಲ್ಲ. ಮಾಡುವ ಕಾರ್ಯಗಳು ಸಹನೆಯ ಪಾಠ ಕಲಿಸುತ್ತವೆ, ತಪ್ಪುಗಳಾದಾಗ ತಿದ್ದಿ ಮುನ್ನಡೆಸುತ್ತವೆ. ಪ್ರಲೋಭನೆಗೆ ಅವಕಾಶಗಳು ಇದ್ದಾಗಲೂ ಅವುಗಳನ್ನು ದಾಟಿ ಮುನ್ನಡೆಯಬಲ್ಲ ಸಹಜ ಸಂಯಮವನ್ನು ಸಾಧಿಸಿಕೊಳ್ಳಲು ನೆರವಾಗುತ್ತವೆ. ನುಲಿಯ ಚಂದಯ್ಯನವರು ಹೇಳುತ್ತಾರೆ: ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆ ನಷ್ಟವಯ್ಯಾ.
ನಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಉತ್ತಮ ಅವಕಾಶಗಳನ್ನು ಅರಸಿಕೊಳ್ಳುವುದು ಬೇರೇ. ಆದರೆ ಹಿಡಿದುಕೊಂಡ ಸತ್ಯ ಶುದ್ಧ ಕೆಲಸವನ್ನು ಬಿಟ್ಟು, ಹೆಚ್ಚಿನ ಆದಾಯ, ಸೌಲಭ್ಯಗಳನ್ನು ಬೆನ್ನು ಹತ್ತಿ ಇನ್ನೊಂದಕ್ಕೆ, ಮತ್ತೊಂದಕ್ಕೆ ಹಾರುತ್ತಾ ಹೋಗುವುದು ಸರಿಯಲ್ಲ. ಹಣ ಗಳಿಸಬಹುದು, ಆದರೆ ಮಾಡುವ ಕಾರ್ಯದಿಂದ ಸಿಗಬಹುದಾದ ನಿಜವಾದ ನೆಮ್ಮದಿ ಕಾಣೆಯಾಗಿರುತ್ತದೆ, ಇದು ತನಗೆ ತಾನೇ ಮಾಡಿಕೊಳ್ಳುವ ದೊಡ್ಡ ನಷ್ಟ.
ಮಾಡಿ ಮುಗಿಸುವುದಷ್ಟೇ ಕೆಲಸದ ಉದ್ದೇಶವಲ್ಲ. ಆ ಕೆಲಸ ನಮ್ಮಲ್ಲಿ ತೃಪ್ತಿಯನ್ನೂ ನೀಡಬೇಕು. ಮಾಡುವ ಕೆಲಸದಲ್ಲಿ ಮನಸ್ಸಿನ ಜೊತೆಗೆ ಪ್ರೀತಿಯೂ ಸೇರಿದರೆ ಮಾತ್ರ ಇದು ಸಾಧ್ಯ. ಪ್ರೀತಿಯಿಲ್ಲದ ಕೆಲಸ ನಿಜಕ್ಕೂ ಶ್ರಮದಾಯಕ. ಬೇಗ ಮುಗಿಸಿ ಬಿಡುವ ಧಾವಂತವಿರುತ್ತದೆ. ಕೆಲಸ ಹೊರೆಯೆನಿಸುತ್ತದೆ. ಜೀವ ಆಯಾಸಗೊಳ್ಳುತ್ತದೆ, ಬೇಗನೇ ದಣಿಯುತ್ತೇವೆ. ಅದಕ್ಕೆ ಬಸವಣ್ಣನವರು ಹೇಳುತ್ತಾರೆ:
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ;
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ,
ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿಯಿಲ್ಲ.
ಕೂಡಲಸಂಗಮದೇವ ನಿಜವಿಲ್ಲದವನ ಭಕ್ತಿ.
“ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ” ಎರಡೂ ಸಂತೃಪ್ತಿ ನೀಡಲಾರವು. ನೇಹ ಅಂದರೆ ಪ್ರೀತಿ. ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಆಗ ಉತ್ಸಾಹ ಮೂಡುತ್ತದೆ, ಕೆಲಸದೊಂದಿಗೆ ಆಪ್ತತೆ ಬೆಳೆಯುತ್ತದೆ. ಎಷ್ಟೇ ಕಷ್ಟವಿದ್ದರೂ ಸುಲಭವಾಗಿ ಮಾಡಿಬಿಡುತ್ತೇವೆ. ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲೂ ಸಾಧ್ಯವಾಗುತ್ತದೆ.
ಈ ವಚನದಲ್ಲಿ ಪೂಜೆಗೆ ಸರಿಸಮವಾದ ಪ್ರಾಶಸ್ತ್ಯವನ್ನು ನಾವು ಮಾಡುವ ಕಾರ್ಯಗಳಿಗೆ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು. ಎರಡಕ್ಕೂ ನಿಜಭಕ್ತಿಯ ಅವಶ್ಯವಿದೆ. ಮಾಡುವ ಕೆಲಸಕ್ಕೂ ಭಕ್ತಿಯ ಅಂದರೆ ಶ್ರದ್ಧೆಯ ಅಗತ್ಯವಿದೆ. ಮತ್ತೊಂದು ಮಗ್ಗಲಿನಿಂದ ನೋಡುವುದಾದರೆ ಇವೆರಡೂ ಬೇರೆ ಬೇರೆಯಲ್ಲ. ಎರಡೂ ಅಂತರಂಗದ ಪಯಣವೇ. ಪ್ರೀತಿಯಿಂದ ಮಾಡುವ ಮಾಟವೇ ಒಲವಿನಿಂದ ಮಾಡುವ ಪೂಜೆಯೂ ಹೌದು. ಕಬ್ಬಿನ ಸವಿಯನ್ನು ಅಗಿದಗಿದು ಹೀರಿದರೆ ಮಧುರ, ರುಚಿಕರ. ಮಾಡುವ ಕೆಲಸವೂ ಹಾಗೇ. ದೇಹಕ್ಕೆ ಕಸುವನ್ನೂ, ಮನಸ್ಸಿಗೆ ಅಗಾಧ ತೃಪ್ತಭಾವವನ್ನೂ ತಂದುಕೊಡಬಲ್ಲುದು.

ಎಲ್ಲವೂ “ಎನ್ನಿಂದಲೇ ಆಯಿತ್ತು, ಎನ್ನಿಂದಲೇ ಹೋಯಿತ್ತು” ಎಂದು ಕೊಚ್ಚಿಕೊಳ್ಳುವುದು ಮನುಷ್ಯನ ಸಹಜ ಗುಣ. ತಾನೇ ಸೈ ಎನಿಸಿಕೊಳ್ಳಬೇಕು. ಶ್ರೇಷ್ಠ ಎನ್ನುವುದೆಲ್ಲವೂ ತನ್ನ ಉಡಿಯೊಳಗೇ ಬಂದು ಬೀಳಬೇಕು. ತನ್ನ ಹೆಸರೇ ಎಲ್ಲೆಡೆ ರಾರಾಜಿಸಬೇಕು, ಕೀರ್ತಿ ಪತಾಕೆಗಳು ಹಾರಬೇಕು… ಎನ್ನುವ ಒಂದಲ್ಲಾ ಒಂದು ಭ್ರಾಂತಿಯಲ್ಲಿ ಮನುಷ್ಯ ತೇಲುತ್ತಿರುತ್ತಾನೆ. ಜಗತ್ತಿನ ಅಶಾಂತಿಗೆ ಮೂಲಕಾರಣವೇ ಇಂಥ ನಾನತ್ವ. ಆದ್ದರಿಂದಲೇ “ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ” ಎಂದು ಗುಡುಗುತ್ತಾರೆ ಬಸವಣ್ಣನವರು.
ಮಾಡುವಲ್ಲಿ ಎನ್ನ ನಾನರಿದು ಮಾಡಿದೆನಾದಡೆ,
ನೀಡುವಲ್ಲಿ ಎನ್ನ ನಾನರಿದು ನೀಡಿದೆನಾದಡೆ,
ನೀಡುವಲ್ಲಿ ರುಚಿಗೆ ಮನವೆಳೆಸಿ ಹಾರೈಸಿದೆನಾದಡೆ,
ನಿಮಗಂದೆ ದ್ರೋಹವಯ್ಯಾ.
ಮಾಡುವಲ್ಲಿ ನೀಡುವಲ್ಲಿ ಕೂಡೆ ಶುದ್ಧನಲ್ಲದಿರ್ದಡೆ,
ನೀನಂದೆ ಮೂಗ ಕೊಯಿ ಕೂಡಲಸಂಗಮದೇವಾ.
ಮಾಡುವ ಮಾಟದಲ್ಲಿ ‘ನಾನು’ ಎಂಬ ಅಹಂ ತಲೆ ಹಾಕಿದಾಗ ಅದರ ಸ್ವರೂಪವೇ ಬದಲಾಗಿ ಬಿಡುತ್ತದೆ. ಮಾಡುವ ಕ್ರಿಯೆಗೂ, ಸಂಭವಿಸುವ ಫಲಿತಾಂಶಕ್ಕೂ ನಡುವೆ ದೊಡ್ಡ ಕಂದಕವೊಂದು ಆಂತರ್ಯದಲ್ಲೇ ತೆರೆದುಕೊಂಡು ಬಿಡುತ್ತದೆ. ಅದೇ ರೀತಿ ನೀಡುವಲ್ಲಿಯೂ ನಾನು ಕೊಡುತ್ತಿದ್ದೇನೆ ಎಂಬ ದೊಡ್ಡಸ್ತಿಕೆ ಸುಳಿಯಬಾರದು. ಯಾವುದೇ ಪದಾರ್ಥವಿರಲಿ ಅದನ್ನು ನೀಡುವಲ್ಲಿ ಅರ್ಪಣೆಯ ವಿನಯ ಇರಬೇಕೇ ಹೊರತು, ಅದರ ಸೆಳೆತಕ್ಕೆ ಒಳಗಾಗಿ ಯಾಕಾದರೂ ಕೊಡುತ್ತಿದ್ದೇನೆ ಎಂದು ಅರೆ ಮನಸ್ಸು ಮಾಡಿದರೆ ಅದು ದೈವ ದ್ರೋಹ, ಸಮಾಜಕ್ಕೆ ಬಗೆಯುವ ಅನ್ಯಾಯ. ಮಾಡುವಲ್ಲಿ ಇರುವ ಶುದ್ಧತೆ ನೀಡುವಲ್ಲಿಯೂ ಇರಬೇಕು. ಈ ಶುದ್ಧತೆ ಕಾಣೆಯಾದರೆ ಅದು ದೇವನ ಶಿಕ್ಷೆಗೆ ಅರ್ಹ ಎಂಬುದು ಬಸವಣ್ಣನವರ ತೀರ್ಪು. ಇದನ್ನೇ, “ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ” ಎನ್ನುತ್ತಾರೆ ಶರಣರಾದ ದೇಶಿಕೇಂದ್ರ ಸಂಗನ ಬಸವಯ್ಯನವರು.
ಯಾವುದೇ ಕೆಲಸಕ್ಕೆ ಕೈ ಹಾಕುವಾಗ ಇದರಿಂದ ನನಗೆ ಏನು ಸಿಗುತ್ತದೆ, ಯಾವ ಲಾಭವಾಗಬಹುದು, ಎಂದು ಲೆಕ್ಕಾಚಾರ ಹಾಕುವವರೇ ಬಹುತೇಕ ಮಂದಿ. ಹಾಗೆ ಅಳೆದು ತೂಗಿ ಮಾಡುವವರ ಕಾರ್ಯಗಳೆಲ್ಲವೂ ನಿರರ್ಥಕ. ಲಾಭ- ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದ ಇನ್ನೂ ಕೆಲವರು ಕೀರ್ತಿ-ಪ್ರತಿಷ್ಟೆಗಾಗಿ ಸಮಾಜದ ಕೆಲಸಗಳನ್ನು ಮಾಡಲು ಮುಂದಾಗಿರುತ್ತಾರೆ. ಅಹಂ ಅನ್ನು ಕೊಬ್ಬಿಸುವ, ಪೋಷಿಸುವ ಇಂಥ ಮಾಟಗಳಿಂದ ನಮ್ಮ ವಿನಾಶವೇ ಖಂಡಿತ. ಅಂಥವರನ್ನು ಕಂಡು ಬಸವಣ್ಣನವರು ಹೇಳುತ್ತಾರೆ:
ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ
ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ���ಲವು.
ಸ್ವಾರ್ಥದ ವಾಸನೆ ಹೊಡೆಯುವ ಯಾವುದೇ ನೇಮವೇ ಆಗಲಿ, ಕಾರ್ಯವೇ ಆಗಲಿ ನಿಷ್ಪ್ರಯೋಜಕ. ಅವುಗಳು ಬಹಳ ಕಾಲ ನಿಲ್ಲಲಾರವು. ಒಂದಲ್ಲಾ ಒಂದು ಗುಪ್ತ ಉದ್ದೇಶ (hidden agenda) ಇಟ್ಟುಕೊಂಡು ಸೇವೆಯ ಸೋಗು ಹಾಕಿದವರು ತಮಗೇ ತಾವು ಮೋಸ ಮಾಡಿಕೊಂಡಂತೆ. “ವಿಭವಕ್ಕೆ ಮಾಡಿದವನ ಭಕ್ತಿ ಇರುಳು ಸತ್ತಿಗೆ ಹಿಡಿದಂತೆ” ಎಂಬ ನಿಷ್ಠುರ ನಿಲುವು ಶರಣರದು. ವಿಭವಕ್ಕೆ ಅಂದರೆ ಪ್ರದರ್ಶನಕ್ಕಾಗಿ ಆಡಂಬರದಿಂದ ಮಾಡುವವರ ಭಕ್ತಿಯನ್ನು, ಸೇವೆಯನ್ನು ರಾತ್ರಿ ಕೊಡೆ ಹಿಡಿದು ನಡೆದಷ್ಟೇ ಆಭಾಸ ಎಂದು ಗೇಲಿ ಮಾಡುತ್ತಾರೆ. ಇಂಥವರನ್ನು ಕುರಿತು ಸ್ವತಂತ್ರ ಸಿದ್ಧಲಿಂಗ ಶರಣರು ಹೇಳುತ್ತಾರೆ:
ಅಂತರಂಗ ಶುದ್ಧವಿಲ್ಲದವರು,
ಬಹಿರಂಗದಲ್ಲಿ ಸದಾಚಾರ ಸತ್ಕ್ರಿಯೆಯ,
ಸರ್ವಜನ ಮೆಚ್ಚುವಂತೆ ಮಾಡುತಿರ್ದರೇನು?
ಅದು ಲೋಕರಂಜನೆಯಲ್ಲದೆ ಶಿವ ಮೆಚ್ಚ.
ಶಿವಶರಣರು ಮೆಚ್ಚರು.
ನಾವು ಬದುಕುತ್ತಿರುವ ವಾತಾವರಣ ಎಷ್ಟು ಕಲುಷಿತವಾಗಿದೆ ಎಂದರೆ ನಮ್ಮನ್ನು ನಾವೇ ಸಂಪರ್ಕಿಸಲಾಗದಷ್ಟು ಸುತ್ತಲಿನ ವಸ್ತುಗಳಲ್ಲಿ, ಭೋಗವಿಲಾಸಗಳಲ್ಲಿ, ನಿತ್ಯದ ಜಂಜಾಟಗಳಲ್ಲಿ ಕಳೆದುಹೋಗಿದ್ದೇವೆ. ಹಾಗೆ ಕಳೆದು ಹೋದ ನಮ್ಮನ್ನು ನಾವು ಕಂಡುಕೊಳ್ಳಲು ‘ಮಾಡುವ ಕಾರ್ಯಗಳು’ ಅವಕಾಶ ಒದಗಿಸಿಕೊಡುತ್ತವೆ. ಯಾವುದೇ ಕೆಲಸದಲ್ಲಿ ತಲ್ಲೀನವಾಗುವುದೆಂದರೆ ಅಂತರಂಗದ ಪಯಣದ ಹಾದಿ ತುಳಿದಂತೆ. “ಮತ್ತೆ ನೀನು? ನಿನ್ನೊಳಗಿನ ದೀರ್ಘ ಪಯಣವನ್ನು ಎಂದು ಆರಂಭಿಸುತ್ತೀ?” ಎಂದು ಪರ್ಶಿಯನ್ ಕವಿ ಜಲಾಲುದ್ದೀನ್ ರೂಮಿ ಯಾವುದೇ ಕಾರ್ಯವನ್ನು ತನ್ನ ಶಿಷ್ಯರಿಗೆ ನಿಯೋಜಿಸುವಾಗ ಪ್ರಶ್ನಿಸುತ್ತಿದ್ದನಂತೆ.
ನಮ್ಮೊಳಗಿನ ನಿಗೂಢ ಜಗತ್ತನ್ನು ನಾವು ಸಂದರ್ಶಿಸುವ ಅಪೂರ್ವ ಅವಕಾಶವನ್ನೂ ಕೆಲಸ- ಕಾರ್ಯಗಳು ಒದಗಿಸಿಕೊಡುತ್ತವೆ. ಕಾರ್ಯ ನಿರ್ವಹಣೆಯ ಬೇರೆ ಬೇರೆ ಸಂದರ್ಭಗಳಲ್ಲಿ ನಮಗೇ ತಿಳಿಯದಂತೆ ಅಥವಾ ನಾವೇ ಮುಚ್ಚಿಟ್ಟುಕೊಂಡ ದುರಾಸೆ, ಮತ್ಸರ, ಮಹತ್ವಾಕಾಂಕ್ಷೆ, ಬೇಗುದಿ, ಕಾಮನೆಗಳು ಭಿನ್ನ ರೂಪದಲ್ಲಿ ನಮಗೇ ಮುಖಾಮುಖಿಯಾಗಿ ನಿಲ್ಲುತ್ತವೆ. ಯಾವ ಮಜುಗರವಿಲ್ಲದೆ ಅಂತರಂಗವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಅವಕಾಶವಿದು. ಸುಳ್ಳು-ಪೊಳ್ಳುಗಳ, ಹಮ್ಮು ಬಿಮ್ಮುಗಳ ನಮ್ಮದೇ ಮುಖವಾಡಗಳು ಬಿದ್ದು ಹೋಗದ ಹೊರತು ನಮ್ಮ ನಿಜದ ನಿಲುವು ನಮಗೆ ತಿಳಿಯದು. ಆಂತರಿಕ ಪ್ರಜ್ಞೆ ಜಾಗೃತಿಯಾಗದು. ಸೋಗು, ಮುಖವಾಡಗಳನ್ನು ಸರಿಸದ ಹೊರತು ನಮ್ಮ ಒಳಗು ನಮಗೆ ಗೋಚರಿಸದು. ಅಂಬಿಗರ ಚೌಡಯ್ಯನವರ ಈ ವಚನ ನೋಡಿ:
ಮಾಡುವ ಭಕ್ತಂಗೆ ಮನವೇ ಸಾಕ್ಷಿ,
ಹೊರಹೊಮ್ಮಿ ಬಯಲ ಹೊರಲೇನು?
ಹಮ್ಮಿಲ್ಲದೆ ಮಾಡಿ ಮನದಲ್ಲಿ ಮರುಗದಿರ್ದಡೆ
ಅಲ್ಲಿ ತಾ ಹೆರಹಿಂಗದಿರ್ಪ ಅಂಬಿಗರ ಚೌಡಯ್ಯ.
ನಮ್ಮ ಕಾರ್ಯದುದ್ದಕ್ಕೂ ಸಾಕ್ಷಿ ಪ್ರಜ್ಞೆಯಂತಿರುವುದು ಮನಸ್ಸು. ಹೀಗಾಗಿ ಅಲ್ಲಿ ಕಳ್ಳಾಟಕ್ಕೆ ಅವಕಾಶ ಕೊಡಬಾರದು. ನಿಷ್ಠೆಯಿಂದ ಮಾಡುವ ಮಾಟವು ಒಂದರ್ಥದಲ್ಲಿ ಜೀವಪ್ರೀತಿಯ ಯಾನ. ನಮ್ಮನ್ನು ನಾವು ಕಂಡುಕೊಳ್ಳುವ ಜೊತೆಗೆ ನಮ್ಮ ಅಸ್ತಿತ್ವವನ್ನು ಹೊಸದಾಗಿ ಸೃಷ್ಟಿಸಿಕೊಳ್ಳುವ ಭರವಸೆ. ಆ ಭರವಸೆ ಎಂತಹ ಕಾರ್ಯವನ್ನೂ ಸಲೀಸಾಗಿಸುತ್ತದೆ. ತೃಪ್ತ ಭಾವ ತಂದುಕೊಡುತ್ತದೆ. ಈ ಹುಡುಕಾಟದ ಹಾದಿಯಲ್ಲಿ ಅಹಂ ಮರೆಯಾಗುತ್ತದೆ. ಪ್ರತಿಷ್ಠೆಯು ಆವಿಯಾಗುತ್ತದೆ. ನಮ್ಮ ತಿಳಿವಳಿಕೆಯ ಮಿತಿಯೂ ಮತ್ತು ನಮ್ಮಲ್ಲಿ ಹುದುಗಿದ ಅಗಾಧ ಸಾಮರ್ಥ್ಯವೂ ಅನಾವರಣಗೊಳ್ಳುತ್ತವೆ. ಅದೇ ಹೊಸ ತಿಳಿವಿನ ಉದಯ. ಹೀಗೆ ಹಿಡಿದ ಕೆಲಸ ಮುಗಿಸುವಷ್ಟರಲ್ಲಿ ಮನಸ್ಸು ನಿರುಮ್ಮಳವಾಗಿರುತ್ತದೆ. ಆಗ ಅಲ್ಲಿ ಉಳಿದುಕೊಳ್ಳುವುದು ಶೂನ್ಯ. ಪ್ರೀತಿ ಹುಟ್ಟುವುದು ಈ ಖಾಲಿತನದಲ್ಲೇ. ಲಿಯೋ ಟಾಲಸ್ಟಾಯ್ ಹೇಳುತ್ತಾರೆ: “ಹೇಗೆ ಕೆಲಸ ಮಾಡಬೇಕು ಮತ್ತು ಹೇಗೆ ಪ್ರೀತಿಸಬೇಕು ಎಂದು ಅರಿತವನು ಈ ಜಗತ್ತಿನಲ್ಲಿ ಸೊಗಸಾಗಿ ಬದುಕಬಲ್ಲ” ಎಂದು.
ಮಾಡುವ ಭಕ್ತನ ಕಾಯ, ಬಾಳೆಯ ಕಂಭದಂತಿರಬೇಕು
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ,
ಒಳಗೆ ಕೆಚ್ಚಿಲ್ಲದಿರಬೇಕು.
ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು. 
ಎನಗಿನ್ನಾವ ಭವವಿಲ್ಲ ಕಾಣಾ ಕೂಡಲಸಂಗಮದೇವಾ.
ಬಸವಣ್ಣನವರ ಇಡೀ ವ್ಯಕ್ತಿತ್ವವನ್ನೇ ಎತ್ತಿ ತೋರುವಂತಹ ಮಾರ್ಮಿಕವಾದ ವಚನ. ಕ್ರಿಯಾಶೀಲತೆಗೆ ಮತ್ತೊಂದು ಹೆಸರೆಂಬಂತೆ ಬಾಳಿದ ಅವರು ಜೀವಮಾನದುದ್ದಕ್ಕೂ ಹೇಗೆ ದೇಶಕ್ಕಾಗಿ, ಜನರಿಗಾಗಿ ತಮ್ಮನ್ನು ತೇಯ್ದುಕೊಂಡರು ಎಂಬುದಕ್ಕೆ ಈ ವಚನವೇ ಸಾಕ್ಷಿ. ಇತಿಹಾಸದ ದಿಕ್ಕನ್ನೇ ಬದಲಿಸಿದ ಅವರು ತಮ್ಮನ್ನು ಯಾವ ವಿಶೇಷಣಗಳಿಂದಲೂ ಕರೆದುಕೊಳ್ಳಲು ಬಯಸಲಿಲ್ಲ. “ಬಚ್ಚ ಬರಿಯ ಬಸವನೆಂದೆನಿಸಯ್ಯಾ” ಎಂದು ಬಾಗಿ ನಿಂತರು. ಬಾಳೆಯ ಕಂಭವನ್ನು ಸುರುಳಿ ಸುರುಳಿಯಾಗಿ ಬಿಚ್ಚಿ ತೆಗೆದಲ್ಲಿ ಒಳಗೆ ಏನೂ ಇರುವುದಿಲ್ಲ. ಹಾಗೆ ತನ್ನದೆಂಬುದು ಕಾರ್ಯಗಳ ಪ್ರತಿಫಲವಲ್ಲದೇ ಮತ್ತೇನೂ ಅಲ್ಲ. ಆ ಫಲ ಪ್ರಸಾದ ರೂಪದಲ್ಲಿ ಸಮಷ್ಟಿಗೆ ಸಮರ್ಪಣೆಯಾದ ಬಳಿಕ ಉಳಿಯುವುದು ಕೇವಲ ಸಂತೃಪ್ತಿಯ ಭಾವ. ಅದನ್ನೂ ಅವರಿಲ್ಲಿ ಬಾಯ್ಬಿಟ್ಟು ಹೇಳುವುದಿಲ್ಲ. ಮತ್ತೊಂದು ಹುಟ್ಟಿಲ್ಲದ ಬಾಳೆಯಂತೆ ಭವವನ್ನು ದಾಟಿದ ನಿರಾಳತೆ. ಇದು ಬಯಲಾಗುವ ಬಗೆ. ನಿರ್ಲಿಪ್ತತೆಯನ್ನು ಅಳವಡಿಸಿಕೊಂಡು ಸಮೃದ್ಧವಾಗಿ ಬದುಕುವ ಮರ್ಮ.
ನಾವಷ್ಟೇ ಉಂಡು-ತೇಗಿ ಖುಷಿಪಟ್ಟು ಸಾಯುವುದಕ್ಕೆ ಮಾತ್ರ ಸೀಮಿತವಾಗದೆ, ಜೀವನಕ್ಕೆ ಬೇರೆಯದೇ ಆಯಾಮಗಳಿವೆ. ನಮ್ಮ ಅಸ್ತಿತ್ವಕ್ಕೆ ಹೊಸ ಅರ್ಥಗಳು ಕಾಣಿಸುವುದೇ ಕ್ರಿಯಾಶೀಲತೆಯಲ್ಲಿ. ಆ ಮೂಲಕವೇ ಲೋಕಕ್ಕೆ ನಮ್ಮನ್ನು ಸಂಪೂರ್ಣವಾಗಿ ತೆರೆದುಕೊಳ್ಳಲು ಸಾಧ್ಯ. ಮನಸ್ಸು ಗೋಜಲುಗಳಿಂದ ಮುಕ್ತವಾಗುವುದೂ ಸಾಧ್ಯ. ಇದು ವ್ಯಷ್ಟಿಯನ್ನು ಸಮಷ್ಟಿಯೊಂದಿಗೆ ಬೆಸೆಯುವ ಏಕೈಕ ಸಶಕ್ತ ಮಾರ್ಗ. ಮಾಡುವ ಕ್ರಿಯೆಯ ಮೂಲಕ ನಮ್ಮ ಶಕ್ತಿಯನ್ನೂ, ಅಂತಃಸತ್ವವನ್ನೂ ವಿಕಸಿಸಿಕೊಳ್ಳಬಹುದು. ವಿನೀತ ಭಾವದಲ್ಲಿ ಮನಸ್ಸು ಮೃದುವಾಗುವುದಾದರೆ ಆ ಮಾಟಕ್ಕೆ ಬಯಲಿನ ಸೊಬಗು ಪ್ರಾಪ್ತವಾಗುತ್ತದೆ.

Previous post ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
Next post ವೀರ
ವೀರ

Related Posts

ಅನುಭಾವ ಮತ್ತು ಅನಿರ್ವಚನೀಯತೆ
Share:
Articles

ಅನುಭಾವ ಮತ್ತು ಅನಿರ್ವಚನೀಯತೆ

March 12, 2022 ಡಾ. ಎನ್.ಜಿ ಮಹಾದೇವಪ್ಪ
ನಾವು ಇಂದ್ರಿಯಾನುಭವವನ್ನು ವರ್ಣಿಸಿದಂತೆ ಅನುಭಾವ ಅಥವಾ ತುರೀಯವನ್ನು ವರ್ಣಿಸಲಾಗದು. ಅನುಭಾವಿಗಳೇ ಅದನ್ನು ಅನಿರ್ವಚನೀಯ, ಮಾತುಮನಂಗಳಿಂದತ್ತತ್ತ, ಮೂಕ/ಶಿಶು ಕಂಡ...
  ಅವಿರಳ ಅನುಭಾವಿ-3
Share:
Articles

  ಅವಿರಳ ಅನುಭಾವಿ-3

May 6, 2020 ಮಹಾದೇವ ಹಡಪದ
ಇಲ್ಲಿಯವರೆಗೆ: ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ ಬಾಲಕ ಚನ್ನಬಸವ ಮಹಾಮನೆಯ ಕಣ್ಮಣಿಯಾದ. ಆತನ ಪ್ರಬುದ್ಧತೆ, ಚುರುಕುತನ ಹೀಗೊಮ್ಮೆ...

Comments 1

  1. Prasanna Hosur
    Aug 15, 2020 Reply

    ಅದ್ಭುತವಾದ ಆರ್ಟಿಕಲ್ ನಿಮಗೆ ಅನಂತ ಭಕ್ತಿಯ ಶರಣು ಶರಣಾರ್ಥಿಗಳು💐💐💐

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣನಾಗುವುದು…
ಶರಣನಾಗುವುದು…
February 10, 2023
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಸಂತೆಯ ಸಂತ
ಸಂತೆಯ ಸಂತ
September 7, 2020
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ದಾರಿ ಬಿಡಿ…
ದಾರಿ ಬಿಡಿ…
December 6, 2020
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
Copyright © 2023 Bayalu