Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಹದೇವ ಭೂಪಾಲ ಮಾರಯ್ಯನಾದದ್ದು…
Share:
Articles March 5, 2019 ಮಹಾದೇವ ಹಡಪದ

ಮಹದೇವ ಭೂಪಾಲ ಮಾರಯ್ಯನಾದದ್ದು…

ಹಿಮ ಕರಗಿ ನೀರಾಗಿ ಭೋರೆಂದು ಹರಿಯುವ ಕಾಲವದು. ಎಷ್ಟೋ ದಿವಸದ ಮೇಲೆ ಸೂರ್ಯನು ಆಕಾಶದಲ್ಲಿ ಕಾಣಿಸಿಕೊಂಡಾಗ ಇಡೀ ಮಾಂಡವ್ಯಪುರವೇ ಮೈಚಳಿಬಿಟ್ಟು ಓಡಾಡಲು ಶುರುಮಾಡಿತ್ತು. ಆಕಾಶವೇ ಕತ್ತರಿಸಿಕೊಂಡು ನೆಲಕ್ಕೆ ಬಿದ್ದಂತೆ ಹಿಮ ಸುರಿಯುತ್ತಿರಲು ಯಾರ ಮುಖದಲ್ಲೂ ಖುಷಿ ಇದ್ದಿರಲಿಲ್ಲ. ಮನೆಯ ಮಾಳಿಗೆಯ ಬೆಳಕಿಂಡಿಗಳಿಂದ ಇಳಿದ ಹಿಮ ನಡುಮನೆಯಲ್ಲೆ ಶಿವಲಿಂಗದ ಆಕಾರದಲ್ಲಿ ಎತ್ತರೆತ್ತರಕ್ಕೆ ಏರುತ್ತಲಿತ್ತು. ಅಮರನಾದ ಆ ಶಿವನು ಹೀಗೆ ಗುಹಾವಾಸಿಯಂತೆ ಹಿಮದಿಂದಲೇ ಸೃಷ್ಟಿಯಾಗಿ ಪೂಜೆಗೊಳ್ಳುವ ಸಂಕ್ರಾಂತಿಗೆ ಇಡೀ ಮಾಂಡವ್ಯಪುರವೇ ಹೊಸಹುಮ್ಮಸ್ಸಿನಲ್ಲಿ ಸಜ್ಜುಗೊಳ್ಳುತ್ತಿತ್ತು. ಮುಂಬರುವ ವಸಂತೋತ್ಸವವನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಅಳುಕು, ಆತಂಕ ರಾಜ್ಯದ ಜನರಲ್ಲಿ, ಪ್ರಧಾನಿ, ಪುರೋಹಿತ, ಮಂತ್ರಿಮಹೋದಯರ, ಊಳಿಗದವರ ಮುಖದಲ್ಲಿ ಕಾಣತೊಡಗಿತ್ತು. ಆರುಸಾವಿರ ತಾಪಸಿಗಳು ಏಕಾಏಕಿ ರಾಜ್ಯವನ್ನು ತೊರೆದು ದಕ್ಷಿಣದ ಕಲ್ಯಾಣಕ್ಕೆ ಹೊರಟ ದಿನದಿಂದ ಮಹದೇವ ಭೂಪಾಲರು ಏಕಾಂತದಲ್ಲಿ ಉಳಿದಿದ್ದರು.

ರಾಜಸಭೆಗೆ ಬರುವುದು ಬೇಡ, ಅವರ ಇಷ್ಟದೈವವಾದ ನಿಃಕಳಂಕ ಮಲ್ಲಿಕಾರ್ಜುನನ ಪೂಜೆಗೂ ಬರುತ್ತಿರಲಿಲ್ಲ. ಕಲ್ಯಾಣ ನಾಡಿನ ವಚನಗಳ ಓದಿನಲ್ಲಿ ತೊಡಗಿದ್ದ ಅವರ ಮನಸ್ಸು ವ್ಯಾಕುಲಗೊಂಡಿತ್ತು. ಬಿಡುವು ಸಿಕ್ಕಾಗೊಮ್ಮೆ ಆ ವ್ಯಾಪಾರಿಯ ಜೋಳಿಗೆಯಿಂದ ಪಡೆದಿದ್ದ ಲಿಂಗವನ್ನು ದೃಷ್ಟಿಸುತ್ತಿದ್ದರು. ಅನ್ನಾಹಾರದ ಮೇಲೆ ಧ್ಯಾಸವಿಲ್ಲ, ಮಗ ಲಿಂಗಾರತಿಯ ಮೇಲೆಯೂ ಅಕ್ಕರೆಯಿಲ್ಲದವರಂತೆ ವಚನಗಳನ್ನು ಓದುವುದರಲ್ಲೇ ತಲ್ಲೀನರಾಗಿದ್ದರು. ರಾಜರ ತಂಗಿ ನಿಜದೇವಿಯೂ ಆ ಶರಣರೊಡನೆ ಕಲ್ಯಾಣಕ್ಕೆ ಹೋಗಿರಬಹುದು ಎಂದು ಮಗ ಲಿಂಗಾರತಿ ಹೇಳಿದಾಗ ಒಂದು ಕ್ಷಣ ವಿಚಲಿತರಾದವರಂತೆ ವರ್ತಿಸಿ ಮತ್ತೆ ಯಥಾವತ್ ವಚನಗಳ ಓದಿನಲ್ಲಿ ಮುಳುಗಿದ್ದರು.

ರಾಜ್ಯದ ಯುವರಾಜ ಲಿಂಗಾರತಿಯು ಯಾವ ಕುಂದುಕೊರತೆಗಳು ಆಗದಂತೆ ಪ್ರಜಾಜನರಲ್ಲಿ ಹೊಸ ಮನ್ವಂತರದ ಸ್ವಾಗತಕ್ಕೆ ತಯ್ಯಾರಿ ಮಾಡಿಕೊಳ್ಳಿರೆಂದು ವಿಜ್ಞಾಪನೆ ಮಾಡಿಕೊಂಡಿದ್ದ. ಪ್ರಜಾಜನರು ಒಲ್ಲದ ಮನಸ್ಸಿನಿಂದಲೇ ವಸಂತೋತ್ಸವಕ್ಕೆ ತಯ್ಯಾರಿ ನಡೆಸಿದ್ದರು. ಮೊದಲಿನ ಯಾವ ಸಂಭ್ರಮವೂ ಈಗಿಲ್ಲವೆಂಬ ಕೊರಗಿನಲ್ಲಿಯೇ ಅರಮನೆಯ ಒಳಾಂಗಣವನ್ನು ತೊಳೆದು ಸ್ವಚ್ಛಮಾಡಿದರು. ರಾಜಾಂಗಣದ ಮುಖ್ಯಭಾಗದಲ್ಲಿದ್ದ ಮಲ್ಲಿಕಾರ್ಜುನ ದೇವಾಲಯ ಪೂಜೆಗಾಣದೆ ಎಷ್ಟೋ ದಿನಗಳಾದ್ದರಿಂದ ಅಲ್ಲಿಗೆ ಹೋಗಬೇಕೋ ಬೇಡವೋ ಎಂಬ ಅಳುಕಿನಲ್ಲಿ ಕೈಯಾಳುಗಳು ನಿಂತಿದ್ದಾಗ ಸ್ವತಃ ಯುವರಾಜರೇ ಮುಂದಾಗಿ ನೀರುಹಾಕಿ ದೇವಾಲಯ ತೊಳೆಯತೊಡಗಿದರು. ಆ ನೀರು ಹೋಗುವ ಮೋರಿಯೊಳಗಿಂದ ಬೆಕ್ಕೊಂದು ಚಂಗನೇ ಜಿಗಿದು ಹೊರಗೆ ಬಂತು. ಆಗತಾನೆ ಜನ್ಮತಳೆದಿದ್ದ ಮೂರುನಾಲ್ಕು ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡಿದ್ದ ಬೆಕ್ಕು ನೆಗೆದು ನೆಲಮಾಳಿಗೆಯ ಹೊಕ್ಕಿತು. ಅಷ್ಟೊತ್ತಿಗೆ ಬೆಳಗಿನ ಬಿಸಿಲು ದೇವಾಲಯದ ಮುಂಬಾಗಿಲಿನಿಂದ ಹಾದು ಮಲ್ಲಿಕಾರ್ಜುನದೇವನ ಮೇಲೆ ಬಿದ್ದಿತ್ತು. ಆ ಹೊತ್ತಿಗೆ ಸರಿಯಾಗಿ ದಿನಂಪ್ರತಿ ಸಾವಿರಾರು ತಾಪಸಿಗಳು ಪೂಜೆಮಾಡುತ್ತಿದ್ದರು. ಆ ಆರು ಸಾವಿರ ಜಂಗಮರ ಘಂಟಾನಾದ, ಮಂತ್ರಘೋಷಗಳ ಸದ್ದು, ಕರ್ಪೂರ ಧೂಪದೀಪಾರತಿ, ಗಂಧದ ಕಡ್ಡಿಯ ಪರಿಮಳ, ನಾನಾಬಗೆಯ ಹೂಗಳ ಸುಗಂಧ… ಎಲ್ಲವೂ ಈಗ ಲಿಂಗಾರತಿಗೆ ನೆನಪಾಗಿ ಕಾಡತೊಡಗಿದವು. ಈಗ ಅದೇ ದೇವಾಲಯ ಭಣಗುಡುತ್ತಿದೆ. ಯಾರೋ ಮುಖ್ಯಬಾಗಿಲಲ್ಲಿ ಬಂದು ನಿಂತಂತೆ ಮಾನವಾಕಾರದ ನೆರಳೊಂದು ಮಲ್ಲಿಕಾರ್ಜುನನ ಸನ್ನಿಧಾನದಲ್ಲಿ ಕಂಡದ್ದೆ ಲಿಂಗಾರತಿಗೆ ಎಚ್ಚರವಾಯ್ತು. ರಾಜಮಾತೆ ಗಂಗಾದೇವಿ..! ಹೂಗಳ ಬುಟ್ಟಿ ಹಿಡಿದು ಒಳಬಂದರು. ಅವರ ಹಿಂದಿನಿಂದ ರಾಜರು ಬಂದಾರೆಂದು ಅತ್ತ ಕಣ್ಣಾಡಿಸಿದರೆ ತಂದೆಯವರು ಬಂದಿರಲಿಲ್ಲ. ಅವರು ತಂದಿದ್ದ ಹೂಗಳ ದೇವರಿಗೆ ಅರ್ಪಿಸಿ ಕೈಮುಗಿದು, ಮಗ ಲಿಂಗಾರತಿಯ ಮುಖ ನೋಡಿ ಹೂನಗೆ ನಕ್ಕರು.

ಅಮ್ಮಾ, ತಂದೆಯವರು ಏನಾದರೂ ಹೇಳಿದರೆ…?

ಹೂಂ, ಹೇಳಿದರು. ಮಗ ಲಿಂಗಾರತಿಗೆ ರಾಜ್ಯಾಭಿಷೇಕ ಮಾಡಬೇಕು ಅಂದರು.

ನಾನು ಕೇಳಿದ್ದು ಅದಲ್ಲ, ತಂದೆಯವರ ಮನಸ್ಸು ಈಗ ಹೇಗಿದೆ?

ನಿನಗೆ ಪಟ್ಟಗಟ್ಟಿ ಕಲ್ಯಾಣಕ್ಕೆ ಹೋಗಬೇಕು ಎನ್ನುತ್ತಿದ್ದಾರೆ. ಅಲ್ಲಿನ ಬದುಕಿನ ಬಗ್ಗೆ ಅವರಿವರಿಂದ ಕೇಳಿ ತಿಳಿದಿದ್ದಾರೆ. ಈ ವಸಂತೋತ್ಸವ ಮುಗಿದದ್ದೆ ನಾವು ಕಲ್ಯಾಣಕ್ಕೆ ಹೊರಡುತ್ತೇವೆ.

ಅಮ್ಮಾ ನೀವೂ ತಂದೆಯವರೊಡನೆ ಹೋಗುತ್ತಿರೇನು…?

ಹೌದಪ್ಪಾ… ನನಗೂ ಆ ಭಕ್ತಳಾಗುವ ಬಯಕೆಯಿದೆ. ಅಲ್ಲಿ ಭಕ್ತರಾಗುವುದೆಂದರೆ ಆಡಂಬರವಲ್ಲ, ಡಂಬಾಚಾರವಲ್ಲ ಅರಿವನ್ನು ಪಡೆಯುವುದು. ಅಂತಪ್ಪ ಕಲ್ಯಾಣಕ್ಕೆ ನಾನು ಹೋಗದೆ ಇರಲಾರೆ.

ಅಮ್ಮಾ ಇಲ್ಲೇ ಇದ್ದು ಆ ಕಲ್ಯಾಣದ ಶರಣತತ್ವ ಪಾಲಿಸಬಹುದಲ್ಲವೇ…?

ಪಾಲಿಸಬಹುದು. ಆದರೆ ಬೀಜವು ಬರೀ ಬೀಜವಾಗಿಯೇ ಶುಷ್ಕವಾದ ಮಣ್ಣಲ್ಲಿ ಬಿದ್ದರೆ  ಅದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಬೀಜ ಕುಡಿಯೊಡೆದು ಗಿಡವಾಗಿ ಮರವಾಗಿ ಫಲಕೊಟ್ಟು ಬೀಜಸಂತತಿ ಮಾಡಿಕೊಳ್ಳಲು ಅದರದ್ದೆ ಆದ ತಯಾರಿ ಬೇಕಲ್ಲವೇ ಮಗು. ಈಗ ವಚನದ ರೂಪದಲ್ಲಿ ವಿಚಾರವೆಂಬ ಬೀಜ ಇಲ್ಲಿ ಉತ್ಪತ್ತಿಯಾಗಿದೆ… ಅದು ಫಲಕೊಡಲು ಹದವಾದ, ತೇವಾಂಶದ ವಾತಾವರಣ ಬೇಕಲ್ಲವೇ…? ಹಾಗಾಗಿ ನಾವು ಕಲ್ಯಾಣಕ್ಕೆ ಹೋಗುವುದೆಂದು ತೀರ್ಮಾನಿಸಿದ್ದೇವೆ.

ಹೀಗೆ ತಾಯಿ-ಮಗ ಮಾತಾಡಿಕೊಳ್ಳುತ್ತಾ ಅರಮನೆಯ ಪ್ರಾಂಗಣವನ್ನು ಹಾಯ್ದು ರಾಜಸಭೆಗೆ ಬಂದಾಗ ಅಲ್ಲಿ ಮಂತ್ರಿಗಳು, ಪುರೋಹಿತರು, ಕವಿಗಳು ಮತ್ತು ರಾಜ್ಯದ ಹಿರಿಯರು ಸಭೆ ಸೇರಿರುವುದು ಕಾಣಿಸಿತು. ಅವರೆಲ್ಲ ಬರಲಿರುವ ವಸಂತೋತ್ಸವದ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಸ್ವತಃ ಮಹದೇವಭೂಪಾಲರೇ ಸಭೆ ಕರೆದಿದ್ದಾರೆಂದು ಕೇಳಿ ಲಿಂಗಾರತಿಗೆ ಸಂತಸವಾಯ್ತು. ಭೂಪಾಲರು ಬರುತ್ತಿದ್ದಾರೆ ಎಂದು ಬಹುಪರಾಕ್ ಕೂಗತೊಡಗಿದಾಗ ಅಲ್ಲಿ ನೆರೆದವರೆಲ್ಲ ಎದ್ದುನಿಂತು ದ್ವಾರಬಾಗಿಲ ಕಡೆ ನೋಡಿದರು. ಸಾಮಾನ್ಯವಾಗಿ ಭೂಪಾಲರು ಓಲಗಕ್ಕೆ ಬರುವಾಗ ದಟ್ಟಿಯನುಟ್ಟು, ಒಳಂಗಿಯ ಮೇಲ್ಗಡೆ ಕಪ್ಪು ಜರಿಯಂಚಿನ ದೊಡ್ಡದೊಂದು ದುಪ್ಪಟಾ ಹೊದ್ದುಕೊಂಡು, ತಲೆಗೆ ರೇಷ್ಮೆ ರುಮಾಲು, ಹೆಗಲ ಮೇಲೊಂದು ಸಣ್ಣ ವಸ್ತ್ರ, ಕೈ-ಕಡಗ, ಕಾಲ್-ಕಡಗ, ರಾಜಮುದ್ರೆಯ ಉಂಗುರ, ಕೊರಳಲ್ಲಿ ಮುತ್ತುರತ್ನಗಳ ಹಾರ ಹಾಕಿಕೊಂಡು ತಮ್ಮ ಬಿಡುಬೀಸಾದ ಹೆಜ್ಜೆಗಳನ್ನು ಹಾಕುತ್ತಾ ಬರುತ್ತಿದ್ದರು. ಆದರೆ ಇಂದು ರಾಜರು ಒಬ್ಬ ಸಾಧಾರಣ ವ್ಯಕ್ತಿಯ ಹಾಗೆ ದಟ್ಟಿಯನುಟ್ಟು, ಕಣ್ಣಿಗೆ ಮೋಹಕವಾಗಬಲ್ಲ ಬಿಳಿಯದೊಂದು ಮೇಲ ಹೊದಿಕೆ ಹೊದ್ದುಕೊಂಡು ಬರುತ್ತಿದ್ದರು. ಕೊರಳಲ್ಲಿ ರುದ್ರಾಕ್ಷಿ, ಕೈಯಲ್ಲಿ ತಾಳೆಗರಿಯಿಂದ ಮಾಡಿದ ಗ್ರಂಥವೊಂದನ್ನು ಹಿಡಿದಿದ್ದರು.

ರಾಜರು ಓಲಗಕ್ಕೆ ಬಂದದ್ದೆ ಎಲ್ಲರೂ ಬಾಗಿ ವಂದಿಸಿದಾಗ ಪ್ರತಿಯಾಗಿ ಭೂಪಾಲರೂ ಬಾಗಿ ವಂದಿಸಿದ್ದು ಇಡೀ ಸಭೆಗೆ ಸೋಜಿಗದ ಸಂಗತಿಯಾಯ್ತು. ಮಂತ್ರಿಗಳು ವಸಂತೋತ್ಸವದ ತಯಾರಿಯ ಬಗ್ಗೆ ವಿವರಿಸಿದರು. ಹಿರಿಕಿರಿಯರು ಮತ್ತಷ್ಟು ಸಲಹೆ ಸೂಚನೆಗಳನ್ನು ನೀಡಿದರು. ಎಲ್ಲರ ಮಾತನ್ನು  ಸಾವಧಾನದಿಂದ ಕೇಳಿಸಿಕೊಂಡ ಭೂಪಾಲರು ‘ಈ ಸಲದ ವಸಂತೋತ್ಸವಕ್ಕೆ ಮಗನಿಗೆ ರಾಜ್ಯದ ರಾಜಪದವಿ ಬಿಟ್ಟುಕೊಡುವೆನು ಅದಕ್ಕೆ ಬೇಕಾದ ಸಿದ್ಧತೆ ಮಾಡಿ’ ಎಂದು ಹೇಳಿದಾಗ ಈ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಬಸವಣ್ಣನವರ ಕಾಯಕ ಸಿದ್ಧಾಂತದ ಬಗ್ಗೆ ಹೇಳಿದರು. ಉತ್ಸವದ ನಂತರ ಕಲ್ಯಾಣಕ್ಕೆ ಹೋಗುವುದಾಗಿ ಹೇಳಿದರು. ರಾಜನೆಂಬ ಗತ್ತು ಇಲ್ಲವಾಗಿ ಈಗ ವಿನಯದ ಮೂರ್ತಿಯಂತಾಗಿದ್ದ ಮಹದೇವಭೂಪಾಲರ ನಿರ್ಣಯಗಳನ್ನು ರಾಜಸಭೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿತು.

ಒಂದು ಮುಂಜಾನೆ ಗೂಢಚಾರನೊಬ್ಬ ಅರಮನೆಗೆ ಕಲ್ಯಾಣದಿಂದ ಬಂದ ಶರಣರಿಬ್ಬರನ್ನು ಕರೆದು ತಂದನು. ಆ ಶರಣರು ಚೋರಚಿಕ್ಕ ಶರಣನಾಗಿ ಬದಲಾದ ಕತೆ ಹೇಳಿದಾಗ ಮಹದೇವಭೂಪಾಲರು ಮೂಕವಿಸ್ಮಿತರಾದರು. ಅದೇ ದಿನವೇ ರಾಜರು ಲಿಂಗದೀಕ್ಷೆಯನ್ನು ಪಡೆದು ಕಲ್ಯಾಣದ ಕತೆಯನ್ನು ಆ ಶರಣರ ಬಾಯಿಂದ ವಿವರವಾಗಿ ಕೇಳಿ ತಿಳಿದರು. ಅವರೊಳಗೆ ರೂಪುಗೊಂಡಿದ್ದ ಕಲ್ಯಾಣದ ಕನಸು ಮತ್ತಷ್ಟು ಗಟ್ಟಿಗೊಂಡಿತು.

****   ****   ****

ಸುತ್ತಲ ಸೀಮೆಯ ಹತ್ತಾರು ರಾಜರ ಪರಿವಾರದವರೂ, ಕಲಾವಿದರೂ, ಕವಿಗಳು, ಪಂಡಿತೋತ್ತಮರೂ, ಪ್ರವಾಸಿಗರು, ಆಮಂತ್ರಿತರು ವಸಂತೋತ್ಸವದ ಶುಭಸಂದರ್ಭದಲ್ಲಿ ರಾಜ್ಯಾಭಿಷೇಕಕ್ಕಾಗಿ ಬಂದಿದ್ದರು. ಲಿಂಗಾರತಿಗೆ ರಾಜ್ಯಪದವಿ ಬಿಟ್ಟುಕೊಟ್ಟ ಮಹದೇವಭೂಪಾಲರು ಪ್ರಜೆಗಳನ್ನು ಉದ್ಧೇಶಿಸಿ ಮಾತಾಡಿ, ಕಲ್ಯಾಣಕ್ಕೆ ಹೊರಡುವುದಾಗಿ ಹೇಳಿದ್ದರು. ಆ ದಿನ ರಾತ್ರಿಯಾದರೂ ಅರಮನೆಯಲ್ಲಿ ಯಾರ ಕಣ್ಣಲ್ಲೂ ನಿದ್ದೆ ಇರಲಿಲ್ಲ. ಲಿಂಗಾರತಿಯು ತಂದೆಯವರ ಪ್ರಯಾಣಕ್ಕಾಗಿ ತೊಂದರೆ ಆಗಬಾರದೆಂದು ಮುಂದಾಲೋಚಿಸಿ ಅಗತ್ಯದ ವ್ಯವಸ್ಥೆ ಮಾಡಿಸಿದ್ದ. ಎರಡು ಆನೆಗಳ ಮೇಲೆ ಸಾಮಾನು ಸರಂಜಾಮನ್ನಿಟ್ಟು, ಅವರೊಡನೆ ಕಾಲಾಳುಗಳನ್ನು ಕಳಿಸಬೇಕೆಂದು ದಳಪತಿಗೆ ಆಜ್ಞೆ ಮಾಡಿದ್ದ.

ಮಾರನೆಯ ದಿನ ಬೆಳಗಾದಾಗ ಭೂಪಾಲರು ಮತ್ತು ರಾಜಮಾತೆ ಗಂಗಾದೇವಿಯೂ ತಮ್ಮ ದಿನಬಳಕೆಯ ವಸ್ತ್ರದ ಹೊರತು ಮತ್ತೇನನ್ನೂ ತೆಗೆದುಕೊಳ್ಳದೆ ಹೊರಟು ನಿಂತಾಗ ಇಡೀ ನಗರವೇ ಅವಾಕ್ಕಾಗಿ ನಿಂತು ನೋಡತೊಡಗಿತು. ಲಿಂಗಾರತಿ ಎಷ್ಟು ಬೇಡಿಕೊಂಡರೂ ಮಹದೇವಭೂಪಾಲರು ಆನೆಗಳಿರಲಿ ಕಾಲಾಳುಗಳ ಬರುವಿಕೆಯನ್ನೂ ಒಪ್ಪಲಿಲ್ಲ.  ಇಡೀ ರಾಜಬೀದಿಯ ತುಂಬೆಲ್ಲ ಜನಗಳು ನೆರೆದಿದ್ದರು. ರಾಜರು ಈಗ ಸಾಮಾನ್ಯನಾಗಿ ಕಲ್ಯಾಣದತ್ತ ಹೊರಡುವಂತೆ ಮಾಡಿದ ಆ ಬಸವಣ್ಣನ ಮಾಂತ್ರಿಕ ಶಕ್ತಿಗೆ ಬೆರಗಾಗಿ ಹೋಗಿದ್ದ ಜನರು ತಮ್ಮ ಕಣ್ಣುಗಳನ್ನೇ ತಾವು ನಂಬದಂತಾಗಿದ್ದರು. ಕೋಟೆಯ ಒಳಬಾಗಿಲ ಮುಂದೆ ಕಾವಲಿನವರು ತಲೆಬಾಗಿ ವಂದಿಸಿದರು. ಕೋಟೆಯ ಹೊರಬಾಗಿಲ ಮುಂದೆ ನೆರೆದಿದ್ದ ಜನರು ರಾಜರ ಪಾದಗಳಿಗೆ ಕಲ್ಲು-ಮುಳ್ಳು ಚುಚ್ಚದಿರಲೆಂದು ಹೂವು ಚೆಲ್ಲಿದರು. ಮಾಂಡವ್ಯಪುರದ ಮುಖ್ಯದ್ವಾರಕ್ಕೆ ಬಂದಾಗ ಲಿಂಗಾರತಿಯು ಬಿಕ್ಕಿಬಿಕ್ಕಿ ಅಳತೊಡಗಿದ. ಆ ಅನಾಥಬಾವದ ಅಳು ಮಾಂಡವ್ಯಪುರದ ಜನರ ಕಣ್ಣಲ್ಲೂ ನೀರು ತರಿಸಿತು. ಜಯಜಯಕಾರದೊಂದಿಗೆ ಮಹದೇವ ಭೂಪಾಲರನ್ನು ಸವಾಲಕ್ಷ ದೇಶದಿಂದ ಕಳಿಸಿಕೊಡಲಾಯ್ತು.

ರಾಜರಾಣಿಯಾಗಿದ್ದವರು ಈಗ ಬರಿಯ ಗಂಡಹೆಂಡತಿಯರಾಗಿ ಮುಂದೆ ಶರಣ-ಶರಣೆಯರಾಗುವ ಭಾವಹೊತ್ತು ಕಲ್ಯಾಣದ ಹಾದಿ ಹಿಡಿದಿದ್ದರು. ಬಿಸಿಲು ಬಲಿಯುವವರೆಗೂ ನಡೆದು ದಣಿವಾದಾಗ ಗಿಡದ ನೆರಳನ್ನು ಆಶ್ರಯಿಸಿ ವಿಶ್ರಮಿಸಿ, ಇಳಿಹೊತ್ತಿಗೆ ಮತ್ತೆ ನಡೆಯುತ್ತಿದ್ದರು. ದಾರಿಯುದ್ದಕ್ಕೂ ಅನ್ನಛತ್ರಗಳ ಆಶ್ರಯದಲ್ಲಿ ಉಂಡು ನಡೆಯುತ್ತ ಬರುತ್ತಿರಲಾಗಿ, ಗುಜ್ಜರ ನಾಡಲ್ಲಿಗೆ ಬಂದಾಗ ಒಂದು ದಿನಪೂರ್ತಿ ನಡೆದರೂ ಯಾವ ಊರೂ ಕಣ್ಣಿಗೆ ಬೀಳಲಿಲ್ಲ. ಆ ದಿವಸ ಊಟಕ್ಕಾಗಿ ಯಾವ ಧರ್ಮಛತ್ರವೂ ಸಿಕ್ಕಲಿಲ್ಲ. ಇಳಿಸಂಜೆಯಾದಾಗ ಇಡುವ ಪ್ರತಿಯೊಂದು ಹೆಜ್ಜೆಯೂ ಭೂಮಿಗೆ ಭಾರವಾದಂತೆನಿಸಿ ಇನ್ನು ಮುಂದಕ್ಕೆ ಕಾಲು ಕಿತ್ತಿಡಲಾರದಷ್ಟು ದಣಿವಿನಲ್ಲಿ ಸೋತಿದ್ದವು.

‘ಈ ದಿವಸ ನಡೆದದ್ದು ಸಾಕು, ಇಲ್ಲೆ ಎಲ್ಲಾದರೂ ವಿಶ್ರಮಿಸಿಕೊಂಡು ನಾಳೆಯ ಸೂರ್ಯೋದಯಕ್ಕೂ ಮೊದಲೆದ್ದು ಮುಂದಕ್ಕೆ ಹೋಗೋಣ’ ಎನ್ನುತ್ತಾ ಮಹದೇವಭೂಪಾಲರು ಆಲದ ಮರವೊಂದರ ಕೆಳಗೆ ಕುಳಿತರು. ಕಾಯಕ ಮಾಡಿ ಉಣ್ಣಬೇಕು, ಉಳಿದುದರಲ್ಲಿ ಜಂಗಮದಾಸೋಹ ಮಾಡಬೇಕೆಂಬ ಬಸವಣ್ಣನವರ ಕಾಯಕತತ್ವ ಮನಸ್ಸಿನ ಮೂಲೆಯಲ್ಲಿ ಚಿಟುಕು ಮುಳ್ಳಾಡಿಸುತ್ತಿತ್ತು. ಇಷ್ಟು ದಿವಸ ರಾಜನಾಗಿದ್ದವನು ಈಗ ಕಲ್ಯಾಣಕ್ಕೆ ಹೋಗುವ ಮೊದಲೇ ಕಾಯಕ ಮಾಡುವುದಾದರೂ ಏನು ಮಾಡಬೇಕೆಂಬ ಚಿಂತೆ ಕಾಡುತ್ತಿತ್ತು. ದೂರದಲ್ಲಿ ಗುಜ್ಜರ ಹೆಣ್ಣುಮಕ್ಕಳು ಕಟ್ಟಿಗೆಯನ್ನು ಆಯ್ದು ಹೊರೆಕಟ್ಟಿಕೊಂಡು ದೂರದೂರದವರೆಗೆ ಸಾಲಾಗಿ ಹೊತ್ತುಕೊಂಡು ಹೋಗುತ್ತಿರುವುದು ಕಾಣಿಸಿತು. ಅವರು ಹಾಡುತ್ತಿದ್ದ ಧ್ವನಿಮಾಧುರ್ಯ ಗಂಡಹೆಂಡತಿಯರ ಕಿವಿಗೆ ಇಂಪಾಗಿ ಕೇಳಿದ್ದೆ ದಣಿವಾದ ದೇಹಕ್ಕೆ ಅದ್ಯಾವ ಮಾಯದಲ್ಲೋ ನಿದ್ದೆ ಆವರಿಸಿತು.

ಆ ಆಲದ ಮರದ ರೆಂಬೆ ಮೇಲೆ ಕುಳಿತಿದ್ದ ಗಿಳಿಗಳೆರಡೂ ಕನಸಿನಲ್ಲಿ ಎಂಬಂತೆ ಮಾತಾಡಿಕೊಳ್ಳತೊಡಗಿದವು. ‘ಆಹಾ ನೆಲದ ಸ್ಪರ್ಶಕ್ಕೆ ಎಂಥಾ ಶಕ್ತಿಯಿದೆಯಲ್ಲಾ, ಇಷ್ಟು ದಿವಸ ಸುಖಾಸನದಲ್ಲಿ ಕುಳಿತು ರಾಜ್ಯಭಾರ ಮಾಡಿದವರು, ಹೂಹಾಸಿನ ಮಂಚದ ಮೇಲೆ ಮಲಗಿ ನಿದ್ರಿಸಿದವರು ಇಲ್ಲಿ ನೋಡು, ಧರೆಯನಾಳುವ ಗುರುತಿಲ್ಲದವರಂತೆ ಮಲಗಿದ್ದಾರೆ’ ಎಂದು ಹೆಣ್ಣು ಗಿಳಿ ಗಂಡನಿಗೆ ಹೇಳಿತು.

ಗಂಡನೋ ನಕ್ಕು ‘ಈ ಸುಕೋಮಲ ಪಾದಗಳಿಗೆ ಎಷ್ಟೊಂದು ಕಲ್ಲುಮುಳ್ಳುಗಳು ಚುಚ್ಚಿವೆಯಲ್ಲಾ…! ಇದ್ಯಾತರದ ಹುಚ್ಚೋ ನಾ ಕಾಣೆ, ತಾವು ಇದ್ದಲ್ಲೇ ಕಲ್ಯಾಣ ಸೃಷ್ಟಿಸಿಕೊಳ್ಳಬಹುದಾಗಿತ್ತು. ಸುಖಭೋಜನವನುಂಡು ಸುಖಿಯಾಗಿ ರಾಜ್ಯವಾಳುವುದ ಬಿಟ್ಟು ಹೀಗೆ ಹೊರಟಿಹಲ್ಲಾ ಯಾರೇ ಇವರು ನನ್ನರಗಿಣಿ’ ಎಂದು ಗಂಡುಗಿಣಿ ಕೇಳಿತು.

‘ಇವರು ಸವಾಲಕ್ಷದ ದೊರೆಯಾಗಿದ್ದವರು, ಈಕೆ ಅವರ ಹೆಂಡತಿ ಗಂಗಾಂಬಿಕೆ… ಸತ್ತಾಗ ಸ್ವರ್ಗಕ್ಕೆ ಹೋಗುವ ಆಸೆಯಿಂದ ಸಾತ್ವಿಕರನ್ನು ಅರಮನೆಯಲ್ಲಿಟ್ಟುಕೊಂಡು ಸದೋದಿತ ಶಿವನ ಪೂಜೆ ಮಾಡುತ್ತಿದ್ದ ನಿಷ್ಠಾವಂತರು’

‘ಇವರು ಹೀಗೆ ಅರಮನೆ ತೊರೆದು ಕಲ್ಯಾಣಕ್ಕೆ ಹೊರಡಲು ಕುಂದೇನಾಯ್ತು ನನ್ನರಗಿಣಿಯೇ’

‘ದಯೆಯಿಟ್ಟ ಧರ್ಮವನ್ನು ಕಾಣುವ ಬಯಕೆಯಿಂದ ಹೊರಟರು. ರಾಜವೈಭೋಗದ ಪೂಜೆಗಿಂತ ಕಾಯಕ-ದಾಸೋಹದ ಕಲ್ಪನೆಗೆ ಮರುಳಾಗಿ ಹೊರಟಿಹರು. ಯಾರೂ ಮುಟ್ಟಲಾಗದ ದೇವರನ್ನು ಶ್ರೀಸಾಮಾನ್ಯನೂ ಮುಟ್ಟಿ ಮಾತಾಡಿಸುವ ಶರಣರ ಜೊತೆ ಬಾಳುವ ಹಂಬಲದಲ್ಲಿ ಹೊರಟಿರುವರು’

‘ಹೌದೇನೆ ಸಖಿ, ನಾಡಿನ ಮೇಲೆ ಆ ಬಸವಣ್ಣನ ಭಕ್ತಿಯೇ ಭಕ್ತಿ, ನಿಷ್ಠೆಯೇ ನಿಷ್ಠೆ ಎಂದು ಇಲ್ಲಿ ಹಾದುಹೋಗುವ ದಾರಿಹೋಕರೆಲ್ಲ ಮಾತಾಡುತ್ತಿದ್ದಾರೆ. ಹಾಗಿದ್ದರೆ ಇವರ ಜೊತೆಗೂಡಿ ನಾವೂ ಕಲ್ಯಾಣಕ್ಕೆ ಹೋಗೋಣವೇ?’

ಹೀಗೆ ಗಿಳಿಗಳೆರಡೂ ಕನಸಿನಲ್ಲಿ ಎಂಬಂತೆ ಮಾತಾಡಿಕೊಂಡವು.

ಮಾರನೆಯ ದಿವಸ ಮದ್ಯಾಹ್ನದವರೆಗೂ ನಡೆಯುವಷ್ಟು ನಿತ್ರಾಣವಿಲ್ಲದಾಗಿ ಮಹದೇವಭೂಪಾಲರು ಅಲ್ಲಿಯೇ ಒಂದಷ್ಟು ಕಟ್ಟಿಗೆಯನ್ನು ಆಯ್ದುಕೊಂಡು ಬಳ್ಳಿಯೊಂದನ್ನು ಹಗ್ಗಮಾಡಿಕೊಂಡು ಹೊರೆಕಟ್ಟಿ ತಲೆಯ ಮೇಲೆ ಹೊತ್ತು ಸಮೀಪದ ಊರೊಂದರಲ್ಲಿ ಮಾರಿ ಬಂದರು. ಬರುವಾಗ ಹೊಟ್ಟೆಯ ಅಗತ್ಯಕ್ಕೆ ಬೇಕಾದ ಸರಕು ತಂದು ಮಣ್ಣಿನ ಗಡಿಗೆಯಲ್ಲಿ ಅಂಬಲಿ ಮಾಡಿಕೊಂಡು ಕುಡಿದರು. ಸಂಜೆಯ ಇಳಿಹೊತ್ತಿಗೆ ಆ ಆಲದ ಮರದಿಂದ ಹೊರಟಾಗ ಕೊಂಬೆಯ ಮೇಲಿನ ಗಿಳಿಗಳೂ ಅವರೊಂದಿಗೆ ಹೊರಟವು.

ಸತಿ-ಪತಿಗಳಿಬ್ಬರೂ ಕಾಯಕ ಮಾಡುತ್ತ, ಅಂಬಲಿ ಕಾಯಿಸಿ ಉಣ್ಣುತ್ತಾ, ದೀನರಿಗೆ ದಾಸೋಹ ಗೈಯ್ಯುತ್ತಾ ವಾರ ಕಳೆದು ವಾರ ಬರುವುದರೊಳಗೆ ಕಲ್ಯಾಣಪುರ ಪ್ರವೇಶ ಮಾಡಿದರು. ಅವರ ಸತ್ಯಶುದ್ಧ ಕಾಯಕವನ್ನು ಕಣ್ಣಾರೆ ಕಾಣುತ್ತಾ ಅವರೊಂದಿಗೆ ಕಲ್ಯಾಣಕ್ಕೆ ಬಂದ ಗಿಳಿಗಳೆರಡೂ  ರೆಕ್ಕೆಬಿಚ್ಚಿ ಆಕಾಶದೆತ್ತರಕ್ಕೆ ಹಾರಾಡಿ ಸಂತಸದಿಂದ ನಲಿದಾಡಿದವು. ಅಲ್ಲಿಯ ಶರಣರು ಗಿಡ-ಮರ-ಪ್ರಾಣಿ-ಪಕ್ಷಿಗಳನ್ನು ಕರೆದು ಮಾತಾಡಿಸುವ ಪ್ರೀತಿಗೆ ಧನ್ಯವಾದವು.

****   *****   ****

ಕಲ್ಯಾಣಕ್ಕೆ ಬಂದಂಥ ಭೂಪಾಲರು ತಾವು ಪ್ರಯಾಣದುದ್ದಕ್ಕೂ ಮಾಡಿಕೊಂಡು ಬಂದ ಕಟ್ಟಿಗೆ ಕಾಯಕವನ್ನೇ ಮುಂದುವರೆಸಿದರು. ಊರಹೊರಗಿನ ಬಯಲೊಂದರಲ್ಲಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಆ ಶರಣರ ಅನುಭಾವದೊಳಗೆ ಒಂದಾಗುವ ಬಯಕೆಯಲ್ಲಿಯೇ ಕೆಲಕಾಲ ಗುಪ್ತರಾಗಿಯೇ ಉಳಿದರು. ಕಟ್ಟಿಗೆ ಸಂಗ್ರಹಿಸಿ ಮಾರುವ ಕಾಯಕ ಮಾಡುವುದರಿಂದಾಗಿ, ಕಟ್ಟಿಗೆಗೆ ಮೋಳಿಗೆ ಎಂದು ಕರೆಯುತ್ತಾರೆ ಆದ್ದರಿಂದ ಮೋಳಿಗೆ ಮಾರಯ್ಯನೆಂಬ ಹೆಸರು ಮುನ್ನೆಲೆಗೆ ಬಂದು ತಾನು ಮಹದೇವಭೂಪಾಲನೆಂಬ ಹೆಸರೇ ರಾಜರಿಗೆ ಮರೆತು ಹೋಯ್ತು. ಅಂತೆಯೇ ರಾಣಿಯಾಗಿದ್ದ ಗಂಗಾದೇವಿಯ ಅಂಬಲಿಯ ಕೈರುಚಿಯ ಕಾರಣಕ್ಕೆ ಮಹಾದೇವಮ್ಮನೆಂದು ಶರಣರ ಬಾಯಲ್ಲಿ ಕರೆಸಿಕೊಳ್ಳತೊಡಗಿದ್ದಳು. ಸತಿಪತಿಯರು ಗುಪ್ತವಾಗಿ ಅನುಭವಮಂಟಪಕ್ಕೆ ಹೋಗಿಬಂದು ಅಲ್ಲಿನ ಅನುಭಾವದ ನುಡಿಗಳ ಕೇಳಿ, ಶರಣರ ತತ್ವಗಳನ್ನು ಅರಿತು, ಬೀಜವಾಗಿದ್ದ ಆಧ್ಯಾತ್ಮದ ಸೆಳೆತ ಚಿಗುರೊಡೆದು ವಚನದ ರೂಪದಲ್ಲಿ ಹಾಡಾಗಿ ಕಾಯಕ-ದಾಸೋಹದ ಮಹತ್ವವನ್ನು ಹಾಡತೊಡಗಿದರು.

ಊರ ಹೊರಗಿನ ಗುಡಿಸಿಲಿನಲ್ಲಿ ಉಂಡ ಅಂಬಲಿ ದಾಸೋಹದ ರುಚಿಯ ಬಗ್ಗೆ ಶರಣರೆಲ್ಲ ಮಾತಾಡಿಕೊಳ್ಳುತ್ತಿರಲಾಗಿ ಒಂದು ದಿನ ಚಿಕ್ಕಣ್ಣನೂ ಆ ಅಂಬಲಿಯ ಸ್ವಾದ ಸವಿಯಬೇಕೆಂದು ಬಂದನು. ಅಲ್ಲಿ ನೋಡಿದರೆ ಮಾಂಡವ್ಯಪುರದ ಅರಸರು ಬಾಗಿ ಶರಣು ಮಾಡುತ್ತಾ ಕೈಕಾಲುಗಳಿಗೆ ನೀರು ಕೊಟ್ಟು, ಜಂಗಮರ ಪೂಜೆಗೆ ಅಣಿಮಾಡುತ್ತಿದ್ದಾರೆ. ಅವರ ಹೆಂಡತಿ ರಾಣಿಯಾಗಿದ್ದವರು ಇಲ್ಲಿ ಊದುಗೊಳವಿಯಿಂದ ಹೊಗೆ ಊದಿ ಬೆಂಕಿ ಹೊತ್ತಿಸುತ್ತಾ ಅಂಬಲಿ ಬೇಯಿಸುತ್ತಿದ್ದಾರೆ. ಕೊರಳಲ್ಲಿ ರುದ್ರಾಕ್ಷಿ, ಲಿಂಗ, ಹಣೆಯ ಮೇಲೆ ವಿಭೂತಿ, ಸಾಧಾರಣವಾದ ಗಂಜಿಯ ಬಟ್ಟೆತೊಟ್ಟ ಆ ದೃಶ್ಯವನ್ನು ಕಂಡದ್ದೇ ಚಿಕ್ಕಯ್ಯನ ಕಣ್ಗಳಲಿ ಸಂತೋಷದ ನೀರಾಡಿತು. ‘ಪ್ರಭೂ..’ ಎಂದವನೇ ಮಾರಯ್ಯನವರ ಕಾಲಿಗೆ ಉದ್ದಂಡ ನಮಸ್ಕಾರ ಹಾಕಿದನು.

‘ಯಾಕೆ ಜಂಗಮರೇ ಏನಾಯ್ತು’ಎನ್ನುತ್ತಾ ಮಾರಯ್ಯನವರು ಅವರ ಭುಜ ಹಿಡಿದು ಮೇಲೆತ್ತಿ ನೋಡುತ್ತಾರೆ… ಕಳ್ಳಚಿಕ್ಕಯ್ಯ ಶರಣನಾಗಿ ಅವರ ಮುಂದೆ ನಿಂತಿದ್ದಾನೆ.

ಅಯ್ಯಾ ಪ್ರಭುವೇ ನಾನು..! ನಿಮ್ಮ ರಾಜ್ಯದ ಸುಪ್ರಸಿದ್ಧ ಕಳ್ಳ, ನೆನಪಿಲ್ಲವೇ..?

ನೆನಪಿದ್ದೀರಿ, ಶರಣರೇ.. ಆಗಿನ ಚಿಕ್ಕ ನೀವಲ್ಲ ಈಗ ನೀವು ನಮ್ಮ ದಾಸೋಹದ ಅತಿಥಿ ಶರಣ ಚಿಕ್ಕಯ್ಯ.. ಶರಣು ಬನ್ನಿರಿ..

ಪ್ರಭೂ… ನೀವು ಹೀಗೆ ಬಂದು ಇಲ್ಲಿ ನೆಲೆಸಿದ್ದೀರಿ ಎನ್ನುವುದು ನನಗೆ ತಿಳಿದಿರಲಿಲ್ಲ. ನಾನೇ ಸ್ವತಃ ನಿಮ್ಮನ್ನು ಅಣ್ಣನವರ ಬಳಿಗೆ ಕರೆದೊಯ್ಯುತ್ತಿದ್ದೆ…

ಚಿಕ್ಕಣ್ಣ ನಾನೀಗ ಯಾವ ಪೂರ್ವಾಶ್ರಮದ ದೊರೆಯೂ ಅಲ್ಲ, ಮಾಂಡಲಿಕನೂ ಅಲ್ಲ, ಆ ಪ್ರಭೂ ಅನ್ನುವ ಶಬ್ದಕ್ಕಿಂತಲೂ ಈ ಕಲ್ಯಾಣದ ಅಯ್ಯಾ ಎನ್ನುವ ಶಬ್ದವು ಹಿತವಾಗಿಹುದು.

ಚಿಕ್ಕಣ್ಣನ ಮನಸ್ಸು ತುಂಬಿ ಬಂತು… ಮಹದೇವಮ್ಮ ಬಡಿಸಿದ ಅಂಬಲಿಯು, ತಾಯಿಯ ಕೈರುಚಿಯಂತೆ ಭಾಸವಾಯ್ತು. ಯಾರ ಹೆಸರು ಕೇಳಿದರೆ ಕೋಪಗೊಳ್ಳುತ್ತಿದ್ದರೋ ಆ ಅಂಥ ಕಳ್ಳ ಎದುರಿಗೆ ಬಂದು ನಿಂತಾಗ ಸ್ವತಃ ರಾಜರೇ ಕೈಮುಗಿದು ಶರಣು-ಶರಣಾರ್ಥಿ ಹೇಳಿ ಮನೆಯೊಳಕ್ಕೆ ಕರೆದು ‘ಇಲ್ಲಿ ನಾನೂ ಶರಣ ನೀವೂ ಶರಣರೇ..! ನಾನು ರಾಜ ನೀವು ಕಳ್ಳ ಎಂಬ ಭೇದವಳಿದು ನಾವಿಬ್ಬರೂ ಸಮಾನರಾಗಿದ್ದೇವೆ’ಎಂದು ಹೇಳಿದಾಗ ಈ ಕಲ್ಯಾಣವೇ ಸೂಜಿಗಲ್ಲಿನಂತೆ ಎನಿಸತೊಡಗಿತು. ತಮಗೆ ಬೇಕಾದ ಲೋಹವನ್ನು ಸೆಳೆದುಕೊಳ್ಳುವ ಶಕ್ತಿ ಈ ಶರಣರಿಗಿದೆ. ಇವರು ರಾಜರು ಎಂಬ ಸಂಗತಿಯನ್ನು ಬಸವಣ್ಣನವರಿಗೆ ಹೇಳಬೇಕು, ಅನುಭವ ಮಂಟಪಕ್ಕೆ ಕರೆಯಿಸಿ ಪರಿಚಯಿಸಬೇಕು ಎಂದು ಚಿಕ್ಕಣ್ಣನ ಮನಸ್ಸು ಚಡಪಡಿಸತೊಡಗಿತು.

ಆ ದಿವಸ ಅಣ್ಣನವರು ಅನುಭವಕೂಟಕ್ಕೆ ಬಂದಾಗ ಚಿಕ್ಕಣ್ಣ ಮಹದೇವಭೂಪಾಲರ ವಿಷಯವನ್ನು ಹೇಳಿದ. ಅಣ್ಣನವರು ಕಾಶ್ಮೀರದ ಅರಸರು ಕಲ್ಯಾಣಕ್ಕೆ ಬಂದ ಸುದ್ದಿಯನ್ನು ಮೊದಲೇ ಯಾರ ಬಾಯಿಯಿಂದಲೋ ಕೇಳಿ ತಿಳಿದವರಾದ್ದರಿಂದ ನಗುತ್ತ ‘ ಬಲ್ಲೆನು ಚಿಕ್ಕಯ್ಯ, ಅವರ ಮನೆಯ ಅಂಬಲಿಯ ರುಚಿಯ ಬಗ್ಗೆ ಶರಣರು ಮಾತಾಡಿಕೊಳ್ಳುತ್ತಿದ್ದಾರೆ. ನಾನೂ ಒಂದು ದಿನ ಅವರ ದಾಸೋಹದ ಅಂಬಲಿಯನುಂಡು ಕೃತಾರ್ಥನಾಗಬೇಕು ಎಂಬ ಆಸೆ ಇದೆ’ ಎಂದರು.

ಯಾವ ಮರದ ಕೆಳಗೆ ಅನುಭವ ಕೂಟ ನಡೆಯುತ್ತಿತ್ತೋ ಅದೆ ಆ ಮರದ ಮೇಲೆ ಮಾರಯ್ಯನವರೊಡನೆ ಕಲ್ಯಾಣಕ್ಕೆ ಬಂದ ಗಿಳಿಗಳೂ ಕೂತಿದ್ದವು.

‘ಅವ್ವಯ್ಯಾ ಈ ಕಲ್ಯಾಣ ಪಟ್ಟಣಕ್ಕೆ ಯಾರು ಬಂದರೂ ಬಸವಣ್ಣನಿಗೆ ಗೊತ್ತಾಗತದೆ ಅಂದರೆ ಅವನಿಗೆ ಅದೆಷ್ಟು ಕಣ್ಣುಗಳಿದ್ದಾವೆಯೇ.. ನನ್ನರಗಿಣಿಯೇ..’

‘ಅರಿವು ಇದ್ದರೆ ಮನಸ್ಸು ಜಾಗೃತವಾಗಿದ್ದರೆ ಲೋಕದ ತಿಳುವಳಿಕೆ ಬರುತ್ತದೆ. ಗಿಣಿರಾಯ. ಅದಕ್ಕೆ ಹತ್ತು ಕಣ್ಣುಗಳ ಲೆಖ್ಖ ಬೇಡ, ಅರಿವೇ ಗುರು ಎಂದು ತಮ್ಮ ತಾವು ಅರಿಯುವ ಈ ಅನುಭವಮಂಟಪಕೆ ಬರುವ ಶರಣರ ಬಗ್ಗೆ ಅಣ್ಣನವರಿಗೆ ಗೊತ್ತಿರದೇ ಇರುತ್ತದೆಯೇ..’

‘ಲಕ್ಷದ ಮೇಲೆ ಎಂಬತ್ತಾರು ಸಾವಿರ ಜನ ಇರುವ ಈ ಪಟ್ಟಣದಲ್ಲಿ ಪ್ರಧಾನಿಯಾಗಿರುವ ಬಸವಣ್ಣ ಗೂಢಚಾರರ ಮೂಲಕ ಮೋಳಿಗೆ ಮಾರಯ್ಯನವರ ಬಗ್ಗೆ ತಿಳಿದುಕೊಂಡಿರಬೇಕು’

‘ಅಯ್ಯೋ ಗಿಣಿರಾಯ ಗೂಢಚಾರಿಕೆ ಎನ್ನುವುದು ರಾಜಕಾರಣದ ಮಾತಾಯ್ತು, ಇದು ಶರಣರ ನಡುವಿನ ಅರಿವಿನ ವಿಷ್ಯಾ.. ಅರಿವು ಎನ್ನುವ ವಿಚಾರ ಬಿತ್ತಿದ ಮನುಷ್ಯ ಬಸವಣ್ಣ, ಯಾವಯಾವದೋ ಜಾತಿಯವರಿಗೆ ಮಾತ್ರ ಸೀಮಿತವಾಗಿದ್ದ ದಾನ ಎಂಬ ಕ್ಷುದ್ರತೆಯ ಚೌಕಟ್ಟನ್ನು ಮೀರಿ ದಾಸೋಹತತ್ವ ಕಟ್ಟಿ ದಯೆಯಲ್ಲಿ ಧರ್ಮ ಕಟ್ಟಿದವ ಬಸವಣ್ಣ.’

ಗಿಳಿಗಳ ಮಾತು ಮುಗಿದದ್ದೆ ಶರಣರು ಅನುಭಾವದ ಸೊಲ್ಲುಗಳನ್ನು ಹಾಡುತ್ತಾ, ತಾವು ಕಂಡುಂಡ ಸತ್ಯದ ಬದುಕನ್ನು ವಿವರಿಸುತ್ತಾ, ಕೆಲವು ಪ್ರಶ್ನೆಗಳನ್ನು ಶರಣರ ಮುಂದಿಡುತ್ತಾ… ಆ ಪ್ರಶ್ನೆಗೆ ಇನ್ಯಾರೋ ಶರಣರು ತಮ್ಮ ಅನುಭವಕ್ಕೆ ಬಂದ ಸತ್ಯದ ಮೂಲಕ ಉತ್ತರಿಸುವ ಅನುಭಾವ ಗೋಷ್ಠಿ ನಡೆಯಿತು. ಕಡೆಯದಾಗಿ ಶಿವನಾಗಮಯ್ಯನವರು ಅಂಬಲಿಯ ರುಚಿಯ ಬಗ್ಗೆ ಹೇಳುತ್ತಾ ಊರ ಹೊರಗಿನ ಗುಡಿಸಿಲ ವಾಸಿಗಳಾದ ಮೋಳಿಗೆ ಮಾರಯ್ಯನವರ ಮನೆಯ ಅಂಬಲಿದಾಸೋಹದ ಪ್ರಸ್ತಾಪ ಮಾಡಿಯೇ ಬಿಟ್ಟರು. ಆಗ ಶರಣಚಿಕ್ಕಯ್ಯನು ಕಾಶ್ಮೀರ ಸೀಮೆಯ ಖಾದ್ಯದ ರುಚಿ ಆ ಅಂಬಲಿಯಲ್ಲಿದೆ. ಅಂತ ಅಂಬಲಿಯನ್ನು ತಾನು ಸವಾಲಕ್ಷ ದೇಶದಲ್ಲಿದ್ದಾಗ ಹಿಮಬೀಳುವ ಕಾಲದಲ್ಲಿ  ಉಂಡಿದ್ದೆನೆಂದೂ ಸಣ್ಣ ಸುಳುಹನ್ನು ಶರಣರ ಮುಂದಿಟ್ಟನು. ದೂರದ ಮಣ್ಣಿನ ದಿಬ್ಬದ ಮೇಲೆ ಕಂಬಳಿ ಹೊದ್ದುಕೊಂಡು ಅನುಭಾವದ ಮಾತುಗಳನ್ನಾಲಿಸುತ್ತಿದ್ದ ಮಾರಯ್ಯ ದಂಪತಿಗಳು, ಮರದ ಮೇಲಿನ ಗಿಳಿಗಳೂ ಶರಣರ ಹೊಗಳಿಕೆಗೆ ಒಂದು ಚಣ ಮುಜುಗರ ಅನುಭವಿಸಿದರು.

ಗಂಡ-ಹೆಂಡತಿಯರಿಬ್ಬರೂ ಅನುಭಾವ ಕೂಟ ಮುಗಿಸಿ ಮನೆಗೆ ಬರುವಾಗ ಒಂದೊಂದು ದಿನವೂ ಒಂದೊಂದು ಅನುಭವದ ಜಗತ್ತು ತಮ್ಮೊಳಗೆ ಸೇರಿಕೊಳ್ಳುತ್ತಾ ಆ ಅರಿವಿನ ವಿಸ್ತಾರದ ಬಗ್ಗೆ ಮಾತಾಡಿಕೊಳ್ಳುತ್ತಾ ಮನೆಗೆ ಬರುತ್ತಿದ್ದರು. ಆದರೆ ಇಂದು ಮಾತಿಲ್ಲ ಕತೆಯಿಲ್ಲ, ಎಲ್ಲಿ ಮಾತಾಡಿದರೆ ನಮ್ಮ ಮಾತುಗಳೂ ಆ ಶರಣರ ಹೊಗಳಿಕೆಯ ಸುತ್ತ ಗಿರಕಿ ಹೊಡೆದು ಮಾಡಿದೆನೆಂಬ ಅಹಂ ಎದುರಾಗುವುದೋ ಎಂಬ ಭಯ ಅವರಿಗೆ…

ಮಾರನೆಯ ದಿನ ನಸುಕಿಗೆದ್ದು ದಂಪತಿಗಳಿಬ್ಬರೂ ಕಟ್ಟಿಗೆ ತರಲು ಗುಡ್ಡಕ್ಕೆ ಹೋದರು. ಬಿಸಿಲೇರುವ ಮೊದಲು ಮಾರಯ್ಯನವರು ಕಟ್ಟಿಗೆ ಮಾರಿಕೊಂಡು ಬರಲು ಕಲ್ಯಾಣಪಟ್ಟಣಕ್ಕೆ ಹೋದದ್ದೆ, ಯಥಾರೀತಿ ಮಹದೇವಮ್ಮ ದಾಸೋಹಕ್ಕೆ ಅಣಿಮಾಡುತ್ತಿದ್ದರು. ಕಟ್ಟಿಗೆ ಮಾರಿ ಅಂದಿನ ಕಾಯಕಕ್ಕೆ ದೊರೆತ ಫಲದಿಂದ ಪದಾರ್ಥವ ಕೊಂಡು ತಂದು ಮಹದೇವಮ್ಮನವರ ಕೈಗಿಟ್ಟು, ದೇಹದ ದಣಿವಿಗೆ ಬಾವಿಯ ನೀರಲ್ಲಿ ಈಜಬೇಕೆಂದು ಸ್ನಾನಕ್ಕೆ ಹೋದರು. ಬಸವಣ್ಣನವರಿಗೋ ಈ ಗುಡಿಸಲ ಮನೆಯ ಅಂಬಲಿಯ ರುಚಿ ಸವಿಯಬೇಕೆಂಬ ಆಸೆಯಾಗಿ, ಹೊನ್ನಿನ ಜಾಳಿಗೆಯ ಸಮೇತ ಮದ್ಯಾಹ್ನದ ಪ್ರಸಾದಕ್ಕೆ ಮಾರಯ್ಯನವರ ಮನೆಯ ದಾಸೋಹಕ್ಕೆ ಬಂದರು.

ಈ ದಿನದ ದಾಸೋಹಕ್ಕೆ ಬಂದವರು ಅಣ್ಣನವರು ಎಂಬುದನ್ನರಿತ ಮಹಾದೇವಮ್ಮ  ಕಾಲಿಗೆ ನೀರುಕೊಟ್ಟು ಇಷ್ಟಲಿಂಗಪೂಜೆಗೆ ಅಣಿಮಾಡಿದರು. ಸಂಗಮನಾಥ ಎನ್ನುತ್ತಾ ಅವರು ಪೂಜೆಯನ್ನು ಪೂರೈಸಿದ್ದೆ ತಡ ಅಂಬಲಿ ದಾಸೋಹವನ್ನು ಮನಸಾರೆ ಹೊಗಳುತ್ತಾ ಉಂಡರು. ಮಾರಯ್ಯನವರು ಸ್ನಾನಕ್ಕೆಂದು ಬಾವಿಗೆ ಹೋಗಿದ್ದಾರೆ ಈಗ ಬರುತ್ತಾರೆ ಕುಳಿತಿರಿ ಎಂದು ಎಷ್ಟು ಬೇಡಿಕೊಂಡರೂ ಕೇಳದ ಅಣ್ಣನವರು ಕಾಯಕವಿರುವುದಾಗಿ ತಿಳಿಸಿ, ತಾವು ತಂದಿದ್ದ ಚಿನ್ನದ ಜಾಳಿಗೆಯನ್ನು ಅಲ್ಲಿಯೇ ಬಿಟ್ಟು ಹೊರಟೇಬಿಟ್ಟರು. ಜಂಗಮದ ರೂಪದಲ್ಲಿ ಸಾಕ್ಷಾತ್ ಬಸವಣ್ಣನೇ ಬಂದು ಹೋದರಲ್ಲ ಎಂಬ ಸಂತೋಷದಲ್ಲಿ ಮಹಾದೇವಮ್ಮ ತಾನು ಉಪಚರಿಸಿದ್ದು ಸರಿಯಾಯ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು.

ಮಾರಯ್ಯನವರು ಸ್ನಾನ ಮುಗಿಸಿಕೊಂಡು ಗುಡಿಸಿಲಿಗೆ ಬಂದು ಲಿಂಗಪೂಜಾ ನಿರತರಾದಾಗ ಅವರ ಕಣ್ಣಿಗೆ ಫಳಫಳ ಹೊಳೆಯುವ ಚಿನ್ನದ ಜಾಳಿಗೆ ಕಾಣಿಸಿತು. ಎಷ್ಟು ಪ್ರಯತ್ನಿಸಿದರೂ ಲಿಂಗದೊಳಗೆ ಮನವು ಬೆರೆಯಲಿಲ್ಲ. ಅಂತರಂಗದ ನ್ಯೂನ್ಯತೆಯೊಂದು ಹೀಗೆ ಫಳಫಳ ಹೊಳೆಯುತ್ತಾ ಗೋಚರಿಸುವಾಗ ಲಿಂಗದೊಂದಿಗೆ ಸಾಮರಸ್ಯ ಹೊಂದುವುದಾದರೂ ಹೇಗೆ ಸಾಧ್ಯ…? ಪೂಜೆಯಿಂದ ಎದ್ದೇಬಿಟ್ಟರು.

‘ಛೀ.. ಛೀ.. ಏನು ಕೆಟ್ಟ ವಾಸನೆ ಇದು… ಮಹಾದೇವಿ ಮನೆಯೊಳಗೆ ನಮ್ಮ ಕಾಯಕಕ್ಕೆ ಮಿಗಿಲಾದ ಕೊಳಕು ಬಂದು ಬಿದ್ದಿದೆ. ಎಲ್ಲಿ ಒಂದು ಕೋಲು ತೆಗೆದುಕೊಂಡು ಬಾ’ ಎಂದು ಕೂಗಿದರು. ಇಲಿಯೋ, ಹೆಗ್ಗಣವೋ ಸತ್ತು ಬಿದ್ದಿರಬೇಕೆಂದು ಭಾವಿಸಿದ ಆ ತಾಯಿ ಕೋಲೊಂದನ್ನು ತಂದು ಮಾರಯ್ಯನವರ ಕೈ ಕೊಟ್ಟರು. ಒಂದು ಕೈಯಿಂದ ಮೂಗು ಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಕೋಲು ಹಿಡಿದು ಆ ಚಿನ್ನದ ಜಾಳಿಗೆಯನ್ನು ಕೋಲಿನ ತುದಿಯಿಂದ ಹೊರನೂಕಿದರು. ‘ಅಬ್ಬಾ ಈಗ ಸಮಾಧಾನವಾಯ್ತು. ಅದರ ಕೆಟ್ಟ ವಾಸನೆಯನ್ನ ಸಹಿಸಿಕೊಳ್ಳೋದಕ್ಕಾಗಲಿಲ್ಲ ನೋಡು’ ಎನ್ನುತ್ತಾ ಪೂರ್ತಿ ಮನವಿಟ್ಟು ಇಷ್ಟಲಿಂಗ ಪೂಜೆ ನೆರವೇರಿಸಿದರು.

ಅವರು ಪೂಜಿಸಿಕೊಳ್ಳುವಾಗ ಮಹದೇವಮ್ಮನ ಕಣ್ಣಾಲಿಗಳು ತುಂಬಿ ಬಂದವು. ಯಾವ ಕೈ ಖಡ್ಗ ಹಿಡಿದು ರಾಜ್ಯಾಡಳಿತ ಮಾಡಿತ್ತೋ ಅದೇ ಕೈ ಈಗ ಕಟ್ಟಿಗೆ ಕಾಯಕ ಮಾಡುತ್ತಿದೆ. ಯಾವ ತಲೆಯ ಮೇಲೆ ಚಿನ್ನದ ಕಿರೀಟವಿತ್ತೋ ಅದೇ ತಲೆಯಲ್ಲಿ ಈಗ ಶರಣತ್ವ ಕಾಯಕ-ದಾಸೋಹದ ಶ್ರದ್ಧೆಯಷ್ಟೆ ಉಳಿದಿದೆ. ಪೂಜೆ ಮುಗಿದದ್ದೆ ಮಾರಯ್ಯನವರು ಆ ಚಿನ್ನದ ಜಾಳಿಗೆಯ ಕುರಿತು ವಿಚಾರಿಸಲಾಗಿ ಬಸವಣ್ಣ ಮನೆಗೆ ಬಂದು ಹೋದದ್ದು ತಿಳಿದು ದುಃಖಿತರಾದರು.

ಗುಡಿಸಿಲಿನ ಮಂಭಾಗದ ಹುಲ್ಲಹೊದಿಕೆಯ ಮೇಲೆ ಕುಳಿತಿದ್ದ ಗಿಳಿಗಳೆರಡೂ ಮಾರಯ್ಯನವರು ಚಿನ್ನದ ಜಾಳಿಗೆಯನ್ನು ಸತ್ತ ಹೆಗ್ಗಣದಂತೆ ಮೂಗುಹಿಡಿದು ಎತ್ತಿ ಹೊರಹಾಕಿದ್ದನ್ನು ನೋಡಿ ಖುಷಿಗೊಂಡವು. ‘ಓಹೋ ಇದು ಆ ದಯಾನಿಧಿ ಬಸವಣ್ಣನವರದ್ದೇ ಜಾಳಿಗೆ ಇದ್ದಿರಬೇಕು. ಧನ-ಕನಕಾದಿ, ಆಸ್ತಿ-ಅಂತಸ್ತು, ಅಧಿಕಾರ, ರಾಜ್ಯ-ಕೋಶಕ್ಕಿಂತಲೂ ಕಾಯಕದಿಂದ ಬಂದ ಫಲದಲ್ಲಿಯೇ ಜಂಗಮದಾಸೋಹ ಕೈಗೊಳ್ಳುವ ಮಾರಯ್ಯನವರ ಶುದ್ಧತೆಯನ್ನು ಪರೀಕ್ಷಿಸುವ ಸಲುವಾಗಿಯೇ ಬಸವಣ್ಣ ಹೀಗೆ ಮಾಡಿರಬಹುದು’ ಎಂದು ಹೆಣ್ಣು ಗಿಳಿ ಹೇಳಿತು. ‘ಹಾಗೆ ಇರಲಿಕ್ಕಿಲ್ಲ ಅರಗಿಣಿಯೇ, ರಾಜರಾಗಿದ್ದ ಇವರು ಇಲ್ಲಿ ಕಾಯಕ ಮಾಡುತ್ತಾ ಕಷ್ಟಪಡುತ್ತಿರುವುದನ್ನು ಕಂಡು ಸಹಾಯ ಮಾಡುವುದಕ್ಕಾಗಿ ಚಿನ್ನದ ಜಾಳಿಗೆ ತಂದಿಟ್ಟಿರಬಹುದು’ಎಂಬುದಾಗಿ ಗಂಡುಗಿಣಿ ವಾದಿಸಿತು. ಪೂಜೆ ಪ್ರಸಾದ ಮುಗಿಸಿ ಗುಡಿಸಿಲಿನಿಂದ ಹೊರಗೆ ಬಂದ ಮಾರಯ್ಯನವರ ಮುಖದಲ್ಲಿ ಅಶಾಂತತೆ ತುಂಬಿತ್ತು.

‘ಮಹಾದೇವಿ ನಾನು ರಾಜನಾಗಿದ್ದುಕೊಂಡು ಕಾಯಕ ಮಾಡುತ್ತಾ ಮಾಂಡವ್ಯಪುರದಲ್ಲಿಯೇ ಜಂಗಮದಾಸೋಹ ನಡೆಸಬಹುದಿತ್ತು. ರಾಜನಾಗಿ ಆಡಳಿತ ನಡೆಸುವುದೂ ಕಾಯಕವೇ ಅಲ್ಲವೇನು’

‘ಹೌದು ಸ್ವಾಮಿ ಅದೂ ಕಾಯಕವೇ..!’

‘ಮತ್ತೇಕೆ ಬಸವಣ್ಣನವರು ಹೀಗೆ ಮಾಡಿದರು. ಯಾವ ಮೋಹದಿಂದ ಬಿಡುಗಡೆಗೊಂಡು ಶರಣರೊಳಗೆ ಶರಣನಾಗಿ ಸತ್ಯಶುದ್ಧ ಕಾಯಕದಿಂದ ಜಂಗಮದಾಸೋಹ ಮಾಡುತ್ತಿದ್ದೆನೆಯೋ ಅದು ನನಗೆ ಭಾರವಾದದ್ದು ಎಂದೇಕೆ ಭಾವಿಸಿದರು ಬಸವಣ್ಣ..? ಇದು ಅಣ್ಣನವರ ಪರೀಕ್ಷೆಯಂತಾದರೆ ನಾನು ಕೂಡ ನನ್ನ ಕಾಯಕದ ಮಹತ್ವವೂ ಚಿನ್ನದಷ್ಟೆ ಬೆಲೆಯುಳ್ಳದ್ದು ಎಂಬುದನ್ನು ಸಾಬೀತಪಡಿಸಬೇಕಾಯ್ತಲ್ಲ..’

‘ಹಾಗನ್ನಬೇಡಿ, ನಮಗೆ ಬೇಡವಾದದ್ದನ್ನು ಹೊರಗೆ ಹಾಕಿದ ಮೇಲೆ ಮತ್ತೇಕೆ ಈ ಜಿದ್ದು’

‘ಮಹಾದೇವಿ ಶರಣರ ಅರಿವು ಸಾಮಾನ್ಯದ್ದಲ್ಲ, ಇಲ್ಲಿ ಎಲ್ಲವೂ ಪ್ರಶ್ನೆಗೊಳಪಡುತ್ತದೆ. ಈ ಶರಣರು ಅಘಟಿತ ಘಟನಾ ಚತುರರು’

ಆ ದಿವಸ ಸತಿಪತಿಗಳಿಬ್ಬರ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವೇ ಎದ್ದಿತ್ತು. ಶರಣರೊಳಗೆ ತಾವು ಬದುಕುತ್ತಿರುವುದು ಸರಿಯಾಗಿದೆ ಎನ್ನುವುದಾದರೆ ಬಸವಣ್ಣನವರ ಈ ಒಗಟಿನ ನಡೆಗೆ ಕ್ರಿಯೆಯ ಮೂಲಕವೇ ಉತ್ತರಿಸಬೇಕಾಗಿತ್ತು. ಮರುದಿನ ಗಂಡಹೆಂಡತಿಯರು ಗುಡ್ಡಕ್ಕೆ ಹೋಗಿ ಕಟ್ಟಿಗೆಯ ಹೊರೆ ಹೊತ್ತು ತಂದರು. ಎಂದಿನ ನಿತ್ಯನೇಮದಂತೆ ದಾಸೋಹಕ್ಕೆ ಅಣಿಮಾಡಿ ತುಸು ಹೆಚ್ಚು ಜನ ಶರಣರನ್ನು ಅಂಬಲಿ ದಾಸೋಹಕ್ಕೆ ಬರಮಾಡಿಕೊಂಡರು. ಲಿಂಗಪೂಜೆ, ಪ್ರಸಾದದ ನಂತರ ಮಾರಯ್ಯಗಳು ಪ್ರತಿಯೊಬ್ಬ ಶರಣನಿಗೂ ಒಂದಷ್ಟು ಕಟ್ಟಿಗೆಗಳನ್ನು ಕೊಟ್ಟು ‘ಇದನ್ನು ಮಹಾಮನೆಯ ದಾಸೋಹಕ್ಕೆ ತಲುಪಿಸಿರಿ.. ಯಾರಾದರೂ ಕೇಳಿದರೆ… ಈ ಕಟ್ಟಿಗೆ ಸತ್ಯಶುದ್ಧ ಕಾಯಕದಿಂದ ಬಂದುದು ಇದು ಮೋಳಿಗೆ ಮಾರಯ್ಯನವರ ಪಾಲಿಗೆ ಬಂಗಾರ ಎಂದು ಹೇಳಿರಿ, ಹುಶಾರಿನಿಂದ ತೆಗೆದುಕೊಂಡು ಹೋಗಿ’ಎಂದು ಕಾಳಜಿಯಿಂದ ಬಂದ ಶರಣರನ್ನೆಲ್ಲ ಬೀಳ್ಕೊಟ್ಟರು.

ಪೂಜೆ-ಪ್ರಸಾದ ಮುಗಿಸಿ ಮಹಾಮನೆಯ ಮುಂದಿನ ತೂಗುಮಂಚದ ಮೇಲೆ ಕುಳಿತಿದ್ದ ಬಸವಣ್ಣನವರು ದಾಸೋಹದ ಭಿನ್ನಯಕ್ಕೆ ಹೋಗಿ ಬರುತ್ತಿರುವ ಶರಣರ ಕೈಯಲ್ಲಿ ಕಟ್ಟಿಗೆ ಇರುವುದನ್ನು ಗಮನಿಸಿದರು. ಏನು..? ಎತ್ತ..? ಎಂದು ಆ ಶರಣರನ್ನು ವಿಚಾರಿಸಲಾಗಿ ನಡೆದ ವೃತ್ತಾಂತವನ್ನೆಲ್ಲ ಹೇಳಿದರು. ತೂಗುಮಂಚದ ನೆತ್ತಿಯ ಮೇಲೆ ಕುಳಿತಿದ್ದ ಗಿಳಿಗಳು ಅಣ್ಣನವರ ಮುಖ ಪೆಚ್ಚಾದುದನ್ನು ಕಂಡು…

‘ಅಣ್ಣನವರು ರಾಜರೆಂಬ ಕಾಳಜಿಯಿಂದ ಚಿನ್ನದ ಜಾಳಿಗೆ ಇಟ್ಟುಬಂದರಲ್ಲವೇ..?’

‘ಹೌದು, ಆದರೆ ಶರಣರು ತತ್ವವನ್ನು ಬರೀ ಮಾತಿನಲ್ಲಿ ಆಡುವವರಲ್ಲ, ಕಾರ್ಯದಲ್ಲಿ ಮಾಡುವವರು. ಅನುಭವಕ್ಕೆ ಬಂದ ಸಂಗತಿ ಅನುಭಾಕ್ಕೆ ದಕ್ಕಬೇಕಲ್ಲವೇ.. ಘಟಿಸುವುದನೆಲ್ಲ ಸತ್ವಪರೀಕ್ಷೆಯಂದೇ ಭಾವಿಸಿ ಮಾರಯ್ಯನವರು ತಮ್ಮ ಕಾಯಕತತ್ವವನ್ನು ಎತ್ತಿ ಹಿಡಿದರು ಗಿಣಿರಾಯ’

‘ಅಹುದಹುದು ಅದೋ ನೋಡಲ್ಲಿ ಅಣ್ಣನವರು ಮಾರಯ್ಯನವರ ಗುಡಿಸಿಲಿನತ್ತ ಹೊರಟರು, ನಾವು ಹೋಗೋಣವೇ ಅರಗಿಣಿಯೇ…’

‘ಬೇಡ, ಬೇಡ. ಆದಿಯಲ್ಲಿ ಗುರು-ಲಿಂಗ-ಜಂಗಮ ಎನಿಸಿಕೊಂಡ ಬಸವಣ್ಣನವರು ಇಂದಿನ ಅನುಭವ ಮಂಟಪಕೆ ಆ ಕಾಶ್ಮೀರದ ಶರಣ ದಂಪತಿಗಳನ್ನು ಕರೆತರುತ್ತಾರೆ. ಇಲ್ಲಿಯೇ ಕಾಯೋಣ’

ಅಂದಿನ ಅನುಭಾವ ಕಾಯಕ ಶ್ರದ್ಧೆ ಮತ್ತು ಅಧಿಕಾರದ ಬಗ್ಗೆಯೇ ನಡೆಯಿತು. ಮಾರಯ್ಯನವರು ಹುರುಳಿಲ್ಲದ ಸಿರಿಯ ನೆಚ್ಚಿಕೆಡಬೇಡ ಮನುಜಾ ಎಂದು ಅರ್ಥಗರ್ಭಿತವಾಗಿ ಮಾತನಾಡಿದರು, ಏನೆಲ್ಲ ಆಸ್ತಿಯಿದ್ದರೂ ಉಣ್ಣುವುದು ಪಡಿಯಕ್ಕಿ ಮಲಗುವುದು ಅರ್ಧಮಂಚ ಎಂಬ ಕಾಶ್ಮೀರದ ಸಿರಿತನಕ್ಕೂ ಕಲ್ಯಾಣದ ಸರಳ ಜೀವನದ ಬಗ್ಗೆ ಅನುಭಾವ ನಡೆಸಿದರು. ಕಡೆಯಲ್ಲಿ ಮಹಾದೇವಮ್ಮನವರು ವಚನವನ್ನು ಹಾಡಿದರು.

****   ****   ****

ಹೀಗೆ ದಂಪತಿಗಳು ನುಡಿದಂತೆ ನಡೆದು ಶರಣರೊಳಗೆ ಒಂದಾದರು. ಅಂದು ಕಲ್ಯಾಣದಲ್ಲಿ ದಂಗೆ ಶುರುವಾದ ದಿವಸ ಬೊಂತಾದೇವಿ ಒಮ್ಮೆ ಮಾರಯ್ಯನವರಿಗೆ ಎದುರು ಬಂದಳು. ಅಣ್ಣ-ತಂಗಿಯರೆಂಬ ಯಾವ ಕಕ್ಕುಲಾತಿಯೂ ಉಳಿದಿರಲಿಲ್ಲ. ಶರಣ-ಶರಣೆಯರ ಹಾಗೆ ಆ ನಿಃಕಳಂಕ ಮಲ್ಲಿಕಾರ್ಜುನನ ಮಕ್ಕಳಂತೆ ಒಬ್ಬರ ಕಣ್ಣೊಳಗೆ ಒಬ್ಬರನ್ನು ನೋಡಿಕೊಂಡರು. ಯಾವ ದೇಶದ ಬಳ್ಳಿ ಯಾವ ದೇಶದ ದಡಕ್ಕೆ ಮುಟ್ಟಿದರೂ ಅಂತರಂಗವು ಮಲಿನಗೊಂಡಿಲ್ಲ ಎಂಬ ಅರಿವು ಅವರಲ್ಲಿ ಕಾಣುತ್ತಿತ್ತು. ಹನ್ನೆರಡು ಗಾವುದದ ಕಲ್ಯಾಣದ ದೊಂಬಿಗಳ ನಡುವೆ ದಿಕ್ಕುಕಾಣದವರಂತೆ ನಿರ್ಲಿಪ್ತರಾಗಿದ್ದರು. ಅದೇ ದಿವಸ ಬೊಂತಾದೇವಿ, ಹೊದ್ದುಕೊಂಡಿದ್ದ ಕೌದಿಯನ್ನು ಆಕಾಶಕ್ಕೆ ತೂರಿ ದಿಗಂಬರೆಯಾಗಿ ಬಯಲಾದಳು. ಶರಣರೆಲ್ಲ ಒಬ್ಬೊಬ್ಬರಾಗಿ ಚದುರಿ ಹೋಗುತ್ತಿರುವಾಗ ಮಾರಯ್ಯ ಮತ್ತು ಮಹದೇವಮ್ಮನವರು ಮೂಕಪ್ರೇಕ್ಷಕರಾಗಿದ್ದರು. ಅಷ್ಟು ದೂರದಿಂದ ನಡೆದು ಬಂದವರಿಗೆ ಮತ್ತೂ ಮುಂದಕ್ಕೆ ಹೋಗುವ ಮನಸ್ಸಾಗಲಿಲ್ಲ. ಊರುಕೆಟ್ಟು ಸೂರೆಯಾಡುವಲ್ಲಿ ನಮಗೊಂದು ದಿಕ್ಕು ತೋರಾ ಎಂದು ತಮ್ಮ ಮನದ ಮಹದೇವನಾದ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಆದ್ರವಾಗಿ ಬೇಡಿಕೊಂಡರು.

ಒಂದು ಮುಂಜಾನೆ ಪೂಜೆಗೆ ಕುಳಿತಿದ್ದವರು ಇಷ್ಟಲಿಂಗವನ್ನು ದೃಷ್ಟಿಸುತ್ತಾ ದಿನಕ್ಕಿಂತ ಕೊಂಚ ಹೆಚ್ಚು ಹೊತ್ತು ಧ್ಯಾನಸ್ಥರಾದರು. ಈ ಅಸಹಜವಾದ ನಡವಳಿಕೆಯನ್ನು ಗಮನಿಸಿದ ಮಹದೇವಮ್ಮನವರ ಎದೆ ಧಸಕ್ಕೆಂದಿತು. ಒಂದು ಚಣ ಅಧೀರರಾದರೂ ‘ಮರಣವೇ ಮಹಾನವಮಿ’ಎಂದು ಮತ್ತೆಮತ್ತೆ ಪುನರುಚ್ಚರಿಸಿದರು. ಪೂಜೆಗೆ ಕುಳಿತವರನ್ನು ಎಬ್ಬಿಸಬಾರದೆಂದು ಎಷ್ಟೋ ಹೊತ್ತಿನತನಕ ಕಾದು ಕುಳಿತರು. ಅಲ್ಲಿ ಇಷ್ಟಲಿಂಗ ಬೇರೆಯಲ್ಲ, ಸದಾಚಾರಿ ಸಾತ್ವಿಕ ಕಳೆಯ ಮಾರಯ್ಯನವರು ಬೇರೆಯಲ್ಲ ಎಂಬಷ್ಟು ಲಿಂಗಾಂಗ ಸಾಮರಸ್ಯ ಏರ್ಪಟ್ಟಿತ್ತು. ಬಯಲುಬಯಲನೇ ಕೂಡಿ ಬಯಲಾದ ಅವರನ್ನು ಅದೇ ಜಾಗದಲ್ಲಿಯೇ ಅಳಿದುಳಿದ ಶರಣರು ಜೊತೆಗೂಡಿ ಕ್ರಿಯಾ ಸಮಾಧಿ ಮಾಡಲಾಯ್ತು.

ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ.. ಶರಣ ಮಾರಯ್ಯನವರ ಕಥೆ ಮುಗಿದುದು.

Previous post ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
Next post ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ

Related Posts

ಬಯಲಾದ ಬಸವಯೋಗಿಗಳು
Share:
Articles

ಬಯಲಾದ ಬಸವಯೋಗಿಗಳು

April 3, 2019 ಕೆ.ಆರ್ ಮಂಗಳಾ
“ಅವರು ಗುಣಮುಖರಾಗೋದು ಯಾವಾಗ?” ಮಾತಾಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕೇಳುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಸಣ್ಣ ಭರವಸೆ. ನನ್ನ ನೇರ...
ಗಮ್ಯದೆಡೆಗೆ ಗಮನ
Share:
Articles

ಗಮ್ಯದೆಡೆಗೆ ಗಮನ

July 5, 2019 ಡಾ. ಪಂಚಾಕ್ಷರಿ ಹಳೇಬೀಡು
ಮಾನವನ ವ್ಯಕ್ತಿತ್ವ ಆತನ ಬಹಿರಂಗದ ಚಟುವಟಿಕೆಗಳು/ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ಆಚರಣೆಗಳು  ಆತನ ಅಂತರಂಗದ ಅರಿವಿನ ನೆಲೆಯ ಬಿಂಬವಾಗಿದ್ದರೆ, ಅಂತರಂಗದ ಅರಿವಿನ...

Comments 16

  1. ಚಿನ್ಮಯಿ
    Mar 6, 2019 Reply

    ಸೊಗಸಾಗಿದೆ

  2. kallesh angadi
    Mar 7, 2019 Reply

    ಮಹಾದೇವ ಭೂಪಾಲನನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ. ರಾಜ-ರಾಣಿಯರ ತ್ಯಾಗ ಬಲು ದೊಡ್ಡದು. ಇತಿಹಾಸದಲ್ಲಿ ಮರೆಯಲಾಗದ ಜೋಡಿ ಇವರು. ಮಾರಯ್ಯನವರ ಸಾವಿನ ಬಳಿಕ ಮಹಾದೇವಮ್ಮ ಏನಾದರು?
    -ಕಲ್ಲೇಶ ಅಂಗಡಿ, ಹರಿಹರ

  3. Jahnavi Naik
    Mar 11, 2019 Reply

    ಮಾರಯ್ಯನವರ ಕಥೆ ಸಿನೆಮಾ ನೋಡಿದಂತೆ ಭಾಸವಾಯಿತು. ಗಿಣಿಗಳ ಉಲ್ಲೇಖ ಅರ್ಥಪೂರ್ಣವಾಗಿದೆ. ವಚನಗಳು ರಾಜನಿಗೆ ಮಾಡಿದ ಮೋಡಿ ಹೇಗಿದ್ದಿರಬಹುದು?
    -ಜಾಹ್ನವಿ ಬಿರಾದಾರ

  4. Sushma karaga
    Mar 11, 2019 Reply

    ಶರಣರಲ್ಲಿ ಶರಣರಾಗಿ ಬೆರೆತ ಸರಳ ಜೀವಿಗಳು ರಾಜ-ರಾಣಿಯರು. ಅದ್ಭುತ ಕಥೆ, ಇತಿಹಾಸ ಇನ್ನೂ ಇಂತಹ ಅನೇಕ ಕತೆಗಳನ್ನು ಬಚ್ಚಿಟ್ಟುಕೊಂಡಿರಬಹುದು. ಮಹಾರಾಜನೊಬ್ಬ ಎಲ್ಲ ಬಿ್ಟ್ಟು ಅನುಭಾವಿ ಆಗೋದು, ಬುದ್ಧನಿಗಿಂತ ಕಮ್ಮಿಯೇನಲ್ಲ ನಮ್ಮ ಭೂಪಾಲ ಮಹದೇವಯ್ಯ.

  5. Pro Mallikarjuna
    Mar 11, 2019 Reply

    Actually story telling is an art. It is all about feelings, the way of thinking. There is no limit and no criteria for writing a story. These things are based on our imagination and on our point of view. The better we think and visualize the thing, the better we write. I felt that you have written this excellent story in calm and complete involvement. Your art of recreating the history of a great personality is mesmerizing.

  6. ರವಿರಾಜ ಚಿಂತಾಮಣಿ
    Mar 11, 2019 Reply

    ಮಾರಯ್ಯನವರ ಕಥೆ ಇದು ನಿಜಕ್ಕೂ ಹೀಗೇ ನಡೆದದ್ದೆ? ಇದಕ್ಕೆ ಯಾವ ಸಾಹಿತ್ಯಗಳನ್ನು ಆಧಾರವಾಗಿ ತೆಗೆದುಕೊಂಡಿರುವಿರಿ? ವಚನಗಳಲ್ಲಿ ಇಷ್ಟು ಮಾಹಿತಿ ಸಿಕ್ಕಿದೆಯೇ?…….. ಹೀಗೆ ಪ್ರಶ್ನೆಗಳು ಹುಟ್ಟಿದವು. ಸವಾಲಾಕ್ಷದ ದೊರೆ ಮನ ಗೆದ್ದುಬಿಟ್ಟ. ತನ್ನನ್ನು ಗೆಲ್ಲುವ ಮೂಲಕ ಜಗತ್ತನ್ನೇ ಗೆದ್ದು ಬಿಟ್ಟ ಭೂಪಾಲ.

  7. mahadevi katagi
    Mar 11, 2019 Reply

    ಬಸವಣ್ಣ ಮತ್ತು ಮಾರಯ್ಯನವರ ಒಡನಾಟ ಹೇಗಿತ್ತು ಎಂಬುದನ್ನು ಹೇಳಬೇಕಿತ್ತು. ತಂಗಿ ಬೊಂತಾದೇವಿಯೊಂದಿಗೆ ಮಾರಯ್ಯನವರ ಸಂಬಂಧ ಕಲ್ಯಾಣದಲ್ಲಿ ಹೇಗಿತ್ತೆಂಬುದು ನನ್ನ ಕುತೂಹಲವಾಗಿತ್ತು. ಯಾಕೋ ಅವರ ಭೇಟಿಯ ಬಗ್ಗೆ ಕತೆಗಾರರು ಗಮನ ಕೊಟ್ಟಿಲ್ಲ ಎನಿಸಿತು. ನಿಜದೇವಿಯು ಅಣ್ಣನ ಬಳಿಗೆ ಹೋಗಲೇ ಇಲ್ಲವೆಂದು ಕಲ್ಪನೆ ಮಾಡಲಿಕ್ಕೂ ನನಗೆ ಆಗಲಿಲ್ಲ. ಕಥೆ ಓದುಗರನ್ನು ಹಿಡಿದಿಡುತ್ತದೆ.

  8. karthik mannur
    Mar 12, 2019 Reply

    ಆಹಾ……. ಕಾಶ್ಮೀರದ ಗಿಳಿಗಳು, ಮರದ ಗಿಳಿಗಳು ಮನಸ್ಸನ್ನು ಸೂರೆಗೊಂಡವು.

  9. devuru mysuru
    Mar 12, 2019 Reply

    thank you for heart touching, unforgettable story.

  10. ಪವಿತ್ರ ಕರಿಬಸಪ್ಪ ಧಾರವಾಡ
    Mar 12, 2019 Reply

    ಕಾಶ್ಮೀರದ ರಾಜನನ್ನ ಕಲ್ಯಾಣಕ್ಕೆ ಎಳೆದ ಶಕ್ತಿ ಯಾವುದು? ಅಲ್ಲಲ್ಲ ಅದು ಆಯಸ್ಕಾಂತ….. ಹಾಗೆ ರಾಜರಾಣಿ ಎಲ್ಲ ಬಿಟ್ಟು ಬರಿಗೈಯಲ್ಲಿ ಬಸವಣ್ಣನವರಲ್ಲಿ ಬರಬೇಕೆಂದರೆ ಅದು ಸಾಮಾನ್ಯ ಸೆಳೆತ ಅಲ್ಲ. ಆ ಸೆಳೆತವನ್ನು ಕತೆಗಾರರು ಸೊಗಸಾಗಿ ಕಟ್ಟಿ್ದಾರೆ.

  11. ಶಾರದಾ ಟೀಚರ್, ಕನಕಪುರ
    Mar 16, 2019 Reply

    ಈ ಕತೆಯನ್ನು ನನ್ನ ಶಾಲೆಯಲ್ಲಿ ನಾಟಕ ಮಾಡಿಸಬಹುದೇ ಅಂತ ಯೋಚಿಸುತ್ತಿದ್ದೇನೆ. ನನಗಂತೂ ಬಹಳ ಇಷ್ಟವಾಯಿತು.

  12. lingaraju Patil
    Mar 16, 2019 Reply

    ಕಾಶ್ಮೀರದ ಬೃಹತ್ ಲಿಂಗ ಬಿಟ್ಟು, ಇಷ್ಟಲಿಂಗದ ಬೆನ್ನು ಹತ್ತಿ ಬಂದ ದೊರೆಯ ಕತೆ ರೋಚಕವಾಗಿದೆ. ರಾಣಿ ಮಹಾದೇವಿಯದು ಅಪರೂಪದ ವ್ಯಕ್ತಿತ್ವ. ಇಡೀ ಕತೆ ಸುಂದರವಾಗಿದೆ.

  13. ಕಪಿಲಾ ಕಲ್ಯಾಣಿ
    Mar 18, 2019 Reply

    ಮೋಳಿಗೆಯ ಮಾರಯ್ಯನವರ ಮೇಲೆ ನೀವೊಂದು ಕಾದಂಬರಿಯನ್ನೇ ಬರೆಯಬಹುದು ಅಂತ ಎನಿಸಿತು. ಮಹಾದೇವ ಭೂಪಾಲನ ಆಧ್ಯಾತ್ಮಿಕ ಆಸಕ್ತಿಗೆ ಕಲ್ಯಾಣದಲ್ಲಿ ದಾರಿ ಇತ್ತು. ಎಲ್ಲವನ್ನೂ ಬಿಟ್ಟು ಬರೋದು ಸರಳ ಅಲ್ಲ. ಶರಣರ ನಡೆಗೆ ಸಾಟಿಯಿಲ್ಲ.

  14. gavibasappa
    Mar 18, 2019 Reply

    ಕಟ್ಟಿಗೆ ಒಡೆಯುವ ಕಾಯಕವನ್ನು ಮಾರಯ್ಯ ಕಲ್ಯಾಣಕ್ಕೆ ಬರುವ ಮೊದಲೇ ಆರಿಸಿಕೊಂಡಿದ್ದು ಆಶ್ಚರ್ಯಕರ ವಿಷಯ, ಇದಕ್ಕೆ ಆಧಾರಗಳಿವೆಯೇ ಅಥವಾ ನಾಟಕಕಾರರ ಕಲ್ಪನೆಯೇ?

  15. ರವಿ ಹೊನ್ನಾಪುರ
    Mar 20, 2019 Reply

    ಸಂಬಂಧಗಳನ್ನು ನಾಜೂಕಾಗಿ ತೆಗೆದುಕೊಂಡು ಶರಣರ ಕತೆ ಕಟ್ಟಿದ ನಾಟಕಕಾರ ಮಹಾದೇವ ಹಡಪದ ಅವರಿಗೆ ವಂದನೆಗಳು. ಚೆನ್ನಾಗಿದೆ, ಒಂದೇ ಓಟದಲ್ಲಿ ಓದಿಸಿಕೊಳ್ಳುತ್ತದೆ.

  16. gangadhara Navale
    Mar 23, 2019 Reply

    ಕಲ್ಯಾಣ ಕ್ರಾಂತಿಯ ನಂತರದ ಮಾರಯ್ಯನವರ ಜೀವನದ ಬಗ್ಗೆ ಕತೆಯನ್ನು ಬೆಳೆಸಬೇಕಿತ್ತು. ಶರಣ ದಂಪತಿಗಳ ಜೀವನ ಆದರ್ಶಪ್ರಾಯವಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಭವ ರಾಟಾಳ
ಭವ ರಾಟಾಳ
September 10, 2022
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
Copyright © 2023 Bayalu