Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನ-ಮನೆ ಅನುಭವಮಂಟಪ
Share:
Articles September 7, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮನ-ಮನೆ ಅನುಭವಮಂಟಪ

ಅತ್ತಲಿತ್ತ ಹೋಗದಂತೆ, ಹೆಳವನ ಮಾಡಯ್ಯಾ ತಂದೆ,
ಸುತ್ತಿ ಸುಳಿದು ನೋಡದಂತೆ, ಅಂಧಕನ ಮಾಡಯ್ಯಾ ತಂದೆ,
ಮತ್ತೊಂದ ಕೇಳದಂತೆ, ಕಿವುಡನ ಮಾಡಯ್ಯಾ ತಂದೆ,
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ.
ಬಸವಣ್ಣನವರ ಅಪರೂಪದ ಈ ವಚನ ಆಧ್ಯಾತ್ಮಿಕ ಹಿನ್ನೆಲೆಯಲ್ಲಿದ್ದರೂ ಇವತ್ತಿನ ಸಂದರ್ಭಕ್ಕೆ ಹೆಚ್ಚು ಅನ್ವಯಿಸುವಂತಹುದು. ಈಗಾಗಲೇ `ಕೊರೊನಾ’ ರಾಕ್ಷಸ ವಿಶ್ವದ ಎಲ್ಲ ಜನರನ್ನೂ ಕಾಡುತ್ತಿದೆ. ಜನರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಈ ವಚನದ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು. ಅವರು ಹೇಳುವುದು ಹೆಳವನ ಮಾಡು, ಅಂಧಕನ ಮಾಡು, ಕಿವುಡನ ಮಾಡು ಎಂದು. ಕೊರೊನಾ ಕಾರಣದಿಂದಾಗಿ ನಾವು ಕಂಡ ಕಂಡಲ್ಲಿ ಸುತ್ತದೆ ಹೆಳವನಂತೆ ಮನೆಯಲ್ಲಿ ಅಥವಾ ನಮ್ಮ ನಮ್ಮ ಕಾಯಕದಲ್ಲಿ ಇರಬೇಕಾದ್ದು ತೀರಾ ಅಗತ್ಯ ಮತ್ತು ಅನಿವಾರ್ಯ. ಹಾಗೆನೇ ಕಂಡ ಕಂಡದ್ದನ್ನು ನೋಡದೆ ಕಣ್ಣುಗಳನ್ನು ಮುಚ್ಚಿಕೊಂಡು ಅಂತರಾವಲೋಕನ ಮಾಡಬೇಕಾಗಿದೆ. ಪಂಚೇಂದ್ರಿಯಗಳ ಉಪಟಳ ಹೇಳತೀರದು. ಅವು ಗಾಳಿಯಂತೆ ಎತ್ತ ಬೇಕೋ ಅತ್ತ ಸುಳಿಯುತ್ತಿರುತ್ತವೆ. ಹಾಗೆ ಸುಳಿದಾಗ ಕೊರೊನಾ ಹೆಮ್ಮಾರಿ ನಮ್ಮನ್ನು ಮುತ್ತಿಕೊಳ್ಳುವುದು ಸಹಜ. ಅದರಿಂದ ತಪ್ಪಿಸಿಕೊಳ್ಳಬೇಕು ಎನ್ನುವುದಾದರೆ ಮನುಷ್ಯ ತನ್ನ ಇಂದ್ರಿಯಗಳ ಮೇಲೆ ನಿಯಂತ್ರಣ ಹಾಕಿಕೊಳ್ಳಬೇಕು. ಬಹಿರ್ಮುಖಿಯಾಗದೆ ಅಂತರ್ಮುಖಿಯಾಗಬೇಕು. ಆಗ ಮನುಷ್ಯ ಬಾಹ್ಯ ವ್ಯವಹಾರದಿಂದ ಸ್ವಲ್ಪ ಮುಕ್ತನಾಗಿ ಅಂತರಂಗದ ಅವಲೋಕನ ಮಾಡಿಕೊಳ್ಳಲು, ಶಿವಪಥದತ್ತ ಅಡಿಯಿಡಲು ಸಾಧ್ಯವಾಗುವುದು.
ನಮ್ಮ ಹಿರಿಯರು ಲೌಕಿಕವನ್ನೂ ಬಿಟ್ಟವರಲ್ಲ; ಪಾರಮಾರ್ಥಿಕವನ್ನೂ ಮರೆತವರಲ್ಲ. ಲೌಕಿಕ ಮತ್ತು ಪಾರಮಾರ್ಥದ ಸಂಗಮವಾದಾಗ ವ್ಯಕ್ತಿಯ ಬದುಕು ಸರ್ವಶ್ರೇಷ್ಠವಾಗುವುದು. ಇತ್ತೀಚಿನ ದಿನಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಜನರಿಗೆ ಪಾರಮಾರ್ಥಿಕ ಬದುಕಿಗಿಂತ ಲೌಕಿಕ ಬದುಕೇ ಶ್ರೇಷ್ಠ, ಅದೇ ಪರಮಪುರುಷಾರ್ಥ ಎನ್ನುವ ಭಾವನೆ ಬಂದಂತಿದೆ. ಹಾಗಾಗಿ ಹಣ, ಅಧಿಕಾರ, ಕಾಮನೆಗಳ ಹಿಂದೆ ಓಡುತ್ತಿದ್ದಾರೆ. ಆದರ್ಶಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹೊತ್ತು ಬಂದ ಹಾಗೆ ಕೊಡೆ ಹಿಡಿಯುವ ಪ್ರವೃತ್ತಿಯನ್ನು ಮನೆಯಿಂದ ಮಠದವರೆಗೆ, ಸಾಮಾನ್ಯ ಪ್ರಜೆಯಿಂದ ರಾಷ್ಟ್ರಾಧ್ಯಕ್ಷನವರೆಗೂ ಬೆಳೆಸಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಕಾಮನೆಗಳು ಕಾಡುತ್ತಿವೆ. ಇಂತಹ ಕಾಮನೆಗಳಿಂದ ಮನುಷ್ಯ ಮುಕ್ತನಾಗಬೇಕೆಂದರೆ ಅಂತರಂಗದ ಅವಲೋಕನದ ಅಗತ್ಯವಿದೆ. ಈ ನೆಲೆಯಲ್ಲಿ ಬಸವಣ್ಣನವರ ಆರಂಭದ ವಚನವನ್ನು ಮತ್ತೆ ನಾವು ಗಮನಿಸಬೇಕು. ಮನುಷ್ಯ ಕೇವಲ ಬಹಿರ್ಮುಖಿಯಾಗದೆ ಅಂತರ್ಮುಖಿಯಾಗಿ ತನ್ನ ಬದುಕನ್ನು ತಾನು ಕಟ್ಟಿಕೊಳ್ಳಬೇಕು. ಅಂಥವನಿಂದ ಲೋಕದ ಬದುಕನ್ನು ಸಹ ಕಟ್ಟಲು ಸಾಧ್ಯವಾಗುವುದು. ಆಂತರಿಕ ಬದುಕು ಶ್ರೀಮಂತವಾಗಿದ್ದರೆ ಬಾಹ್ಯ ಬದುಕು ಸಹ ಶ್ರೀಮಂತವಾಗಿರಲು ಸಾಧ್ಯ. ಆದರೆ ಅದೇ ಬಾಹ್ಯ ಬದುಕು ಶ್ರೀಮಂತವಾಗಿದ್ದ ಮಾತ್ರಕ್ಕೆ ಆಂತರಿಕ ಬದುಕು ಶ್ರೀಮಂತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಬದುಕು ಕಳಾಯುಕ್ತವಾಗಲು ಆಂತರಿಕ ಮತ್ತು ಬಾಹ್ಯ ಈ ಎರಡೂ ಬದುಕು ಶ್ರೀಮಂತವಾಗಬೇಕು. ಈ ನೆಲೆಯಲ್ಲಿ ಶರಣರು ನಮಗೆ ಕರುಣಿಸಿದ್ದೇನು? ಬಾಹ್ಯ ಬದುಕಿನ ಶ್ರೀಮಂತಿಕೆಗಾಗಿ `ಕಾಯಕ’ ಮತ್ತು `ದಾಸೋಹ’ ತತ್ವವನ್ನು ದಯಪಾಲಿಸಿದರು. ಆಂತರಿಕ ಬದುಕಿನ ಶ್ರೀಮಂತಿಕೆಗಾಗಿ `ಇಷ್ಟಲಿಂಗ’ ಪೂಜೆಯನ್ನು ಜಾರಿಯಲ್ಲಿ ತಂದರು. ವಿಷಾದದ ಸಂಗತಿ ಎಂದರೆ ಶರಣರ ಪರಿಭಾಷೆಯಲ್ಲಿ ನಾವು ಕಾಯಕ ಮತ್ತು ದಾಸೋಹ ತತ್ವಗಳನ್ನು ಅರ್ಥ ಮಾಡಿಕೊಂಡಿಲ್ಲ; ಅರ್ಥ ಮಾಡಿಕೊಂಡಿದ್ದರೂ ಅದು ಉಪದೇಶಕ್ಕೆ ಮಾತ್ರ ಮೀಸಲಾಗುತ್ತಿರುವುದು. ಅದೇ ರೀತಿ ಸ್ಥಾವರ ದೇವಾಲಯದ ಹಂಗನ್ನು ಕಳೆದುಕೊಂಡು ಇಷ್ಟಲಿಂಗ ಪೂಜೆಯನ್ನೂ ಮಾಡಿಕೊಳ್ಳುತ್ತಿಲ್ಲ. ಕಾಯಕ ಮರೆತು ಉದ್ಯೋಗ, ಕೆಲಸ ಎಂದು ವಂಚನೆ, ಮೋಸಗಳ ದಾರಿ ತುಳಿದಿದ್ದೇವೆ. ದಾಸೋಹ ತತ್ವದ ಬದಲಾಗಿ ಸ್ವಾರ್ಥ ಮತ್ತು ಅಹಂಕಾರ ಬೆಳೆಸಿಕೊಂಡು ನನಗೆ, ಮಡದಿಗೆ, ಮಕ್ಕಳಿಗೆ, ನಾಳೆಗೆ ಎಂದು ಕೂಡಿಡುವ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಕೊರೊನಾದಂತೆ ಹಬ್ಬುತ್ತಿದೆ. ಶರಣರ ಪರಿಭಾಷೆಯಂತೆ ಕಾಯಕ ಮತ್ತು ದಾಸೋಹ ತತ್ವದ ಅರಿವು, ಆಚರಣೆ ಎಲ್ಲ ಜನರಲ್ಲೂ ಬಂದರೆ ಇಲ್ಲೇ ಪರಮಾನಂದವನ್ನು ಅನುಭವಿಸಲು ಸಾಧ್ಯ.
ಕೆಲವರು ಕಷ್ಟಪಟ್ಟು ದುಡಿಯುತ್ತಾರೆ. ಆ ದುಡಿಮೆಯಲ್ಲಿ ಪ್ರಾಮಾಣಿಕತೆಯೂ ಇದೆ. ಆದರೆ ದುಡಿದದ್ದೆಲ್ಲವೂ ನನಗಾಗಿ, ನನ್ನ ಮನೆತನಕ್ಕಾಗಿ ಎನ್ನುವ ಸ್ವಾರ್ಥ, ಸಂಕುಚಿತ ಭಾವನೆ ಇದೆ. ಅದೇ ಅಹಂಕಾರಕ್ಕೂ ಕಾರಣವಾಗುವುದು. ಇಂಥ ಸ್ವಾರ್ಥ, ಸಂಕುಚಿತ ಭಾವನೆ ಮತ್ತು ಅಹಂಕಾರವನ್ನು ತ್ಯಜಿಸಿ ನನ್ನ ದುಡಿಮೆಯ ಆದಾಯ ನನಗೆ ಹೇಗೋ ಹಾಗೇ ಸಮಾಜಕ್ಕೂ ಸಲ್ಲುವಂತಹುದು ಎನ್ನುವ ಸದ್ಭಾವನೆ ಬಂದರೆ ಅದೇ ದಾಸೋಹ. ದಾಸೋಹ ಎಂದರೇನೇ ಅಹಂಕಾರ ನಿರಶನ, ಸ್ವಾರ್ಥ ತ್ಯಾಗ, ವಿಶಾಲ ಮನೋಭಾವ. ಈ ನೆಲೆಯಲ್ಲಿ ಕಾಯಕ ಮತ್ತು ದಾಸೋಹ ತತ್ವಗಳು ಅನುಷ್ಠಾನದಲ್ಲಿ ಅಳವಟ್ಟರೆ ಬಾಹ್ಯ ಬದುಕು ಶ್ರೀಮಂತವಾಗುವುದು. ಆಂತರಿಕ ಬದುಕಿನ ಶ್ರೀಮಂತಿಕೆಗೆ ಸಹಕಾರಿ ಇಷ್ಟಲಿಂಗ ಪೂಜೆ. ಕೊರೊನಾ ಕಾರಣದಿಂದ ಎಲ್ಲ ದೇವಸ್ಥಾನಗಳು, ಮಸೀದಿಗಳು, ಚರ್ಚ್ಗಳು ಮತ್ತಿತರ ಧಾರ್ಮಿಕ ಕೇಂದ್ರಗಳು ಏನಾಗಿವೆ? ಹಲವು ಕಾಲ ಅವುಗಳ ಬಾಗಿಲಿಗೆ ಬೀಗ ಹಾಕಿದ್ದನ್ನು ಗಮನಿಸಿದ್ದೀರಿ. ಜನರ ಬದುಕಿಗೆ ಶಾಂತಿ, ನೆಮ್ಮದಿಯ ತಾಣವಾಗಬೇಕಾಗಿದ್ದ ಆ ಧಾರ್ಮಿಕ ಕೇಂದ್ರಗಳಿಗೂ ಬೀಗ ಹಾಕಿ ಸ್ಯಾನಿಟೇಶನ್ ಮಾಡುವ ಪರಿಸ್ಥಿತಿ ಬಂತು. ಆದರೆ ಇಷ್ಟಲಿಂಗಧಾರಿಗಳಾಗಿ ಇಷ್ಟಲಿಂಗವನ್ನೇ ಪೂಜೆ ಮಾಡಿಕೊಳ್ಳುವ ಸಂಕಲ್ಪ ಮಾಡಿದರೆ ಎಲ್ಲೂ ಬೀಗ ಹಾಕಬೇಕಾಗಿಲ್ಲ. ನಾವಿರುವಲ್ಲೇ ಸಂತೃಪ್ತಿ, ಸಮಾಧಾನದಿಂದ ಇಷ್ಟಲಿಂಗ ಪೂಜೆಯನ್ನು ಮಾಡಿಕೊಳ್ಳಬಹುದು. ಈ ಎಚ್ಚರ ಜನರಲ್ಲಿ ಬಂದರೆ ಯಾರೂ ದೇವಸ್ಥಾನಗಳತ್ತ ಸುಳಿಯುವುದಿಲ್ಲ; ಪೂಜಾರಿ ಪುರೋಹಿತರ ಕಪಿಮುಷ್ಠಿಗೆ ಸಿಲುಕುವುದಿಲ್ಲ.
ಇವತ್ತಿನ ದಿನಮಾನಗಳಲ್ಲೂ ದೊಡ್ಡವರು, ಸಣ್ಣವರು ಎನ್ನುವ ಅಂತರ ಹೋಗಿಲ್ಲ. ಯಾರೂ ದೇವಾಲಯ ಪ್ರವೇಶ ಮಾಡಬಾರದು ಎಂದಿದ್ದರೂ ಕೆಲವು ಪ್ರಖ್ಯಾತ ದೇವಾಲಯಗಳಿಗೆ ರಾಜಕೀಯ ಪ್ರಮುಖರನ್ನೋ, ಶ್ರೀಮಂತರನ್ನೋ, ಧೀಮಂತರನ್ನೋ ಕಾರ್ಪೆಟ್ ಹಾಕಿ ಸ್ವಾಗತಿಸುವರು. ಅದೇ ಭಕ್ತಿ ಭಾವ ಇಟ್ಟುಕೊಂಡು ಬರುವ ಜನರನ್ನು ರಕ್ಷಣಾ ಇಲಾಖೆಯವರೇ ಬೆದರಿಸಿ ಹಿಂದಕ್ಕೆ ಕಳಿಸುವರು. ಅದಕ್ಕಾಗಿಯೇ ಶರಣರು ಹೇಳಿದ್ದು ನೀವು ಅಂಥ ದೇವಾಲಯಗಳಿಗೆ ಹೋಗುವುದು, ದಿಗ್ಬಂಧನ ಹಾಕಿಸಿಕೊಳ್ಳುವುದು, ಪೊಲೀಸರ ಬೆತ್ತದ ರುಚಿಯನ್ನು ಅನುಭವಿಸುವುದೂ ಬೇಡ ಎಂದು. ಎಲ್ಲರೂ ದೇಹವನ್ನೇ ದೇವಾಲಯ ಮಾಡಿಕೊಂಡರೆ ದೇವರು ಅಲ್ಲೇ ದರ್ಶನವೀಯುವನು. ಇಂಥ ತತ್ವಗಳನ್ನು ಸಮಾಜಬಾಂಧವರು ಮೈಗೂಡಿಸಿಕೊಂಡರೆ ಸಮಾಜದಲ್ಲಿ ನಿರೀಕ್ಷಿತ ಸುಧಾರಣೆ ತರಲು ಸಾಧ್ಯ. ಮನುಷ್ಯನಾದವ ತಿಳಿದೋ ತಿಳಿಯದೆಯೋ ತಪ್ಪು ಮಾಡುವುದು ಸಹಜ. ಆದರೆ ತಾನು ಮಾಡಿದ್ದು ತಪ್ಪು ಎನ್ನುವ ಅರಿವಾದಾಗ ತನ್ನನ್ನು ತಾನು ತಿದ್ದಿಕೊಳ್ಳುವ ಮನಸ್ಸುಳ್ಳವನಾಗಬೇಕು. ಬಸವಣ್ಣನವರು ಮಾಡಿದ್ದು ಇದನ್ನೇ.
ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ.
ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ.
ಕೂಡಲಸಂಗಮದೇವಯ್ಯಾ,
ನಿಮ್ಮ ಪ್ರಮಥರ ಮುಂದೆ ಕಿನ್ನರ ಬೊಮ್ಮಣ್ಣ ಸಾಕ್ಷಿ.
ವಚನದಲ್ಲಿರುವ ಆಶಯವನ್ನು ಗಮನಿಸಬೇಕು. ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ನೀನು ನನ್ನನ್ನು ಸೈರಿಸಿಕೊಂಡು ಕ್ಷಮಿಸುತ್ತ ಬಂದಿರುವೆ. ಈಗ ನನ್ನ ತಪ್ಪಿನ ಅರಿವು ನನಗಾಗಿದೆ. ಹಾಗಾಗಿ ಮುಂದೆಂದೂ ತಪ್ಪು ಮಾಡುವುದಿಲ್ಲ. ಇದಕ್ಕೆ ನಿಮ್ಮ ಪಾದವೇ ಸಾಕ್ಷಿ, ಕಿನ್ನರ ಬೊಮ್ಮಣ್ಣನೇ ಸಾಕ್ಷಿ ಎನ್ನುವರು. ಈ ಎಚ್ಚರ ವ್ಯಕ್ತಿಗಳಿಗೆ ಬಂದರೆ ಸುಧಾರಣೆ ತನ್ನಷ್ಟಕ್ಕೆ ತಾನೇ ಆಗುವುದು. ಇವತ್ತಿನ ದಿನಮಾನಗಳಲ್ಲಿ ಬಹುತೇಕ ಜನರು ತಮ್ಮ ತಪ್ಪುಗಳ ಕಡೆಗೆ ಗಮನ ಹರಿಸುವುದಿಲ್ಲ. ಬದಲಾಗಿ ಇತರರ ಕಡೆ ಬೆರಳು ಮಾಡಿ ಅವರ ದೋಷಗಳನ್ನೇ ತೋರಿಸುವ ಸಾಹಸ ಮಾಡುವರು. ಅದೇ ಅವರಿಗೆ ಹವ್ಯಾಸವಾಗಿರುತ್ತದೆ. ಆದರೆ ಅವರು ತಮ್ಮ ತಪ್ಪುಗಳನ್ನು ನೋಡಿಕೊಳ್ಳುವುದಿಲ್ಲ. ಇತರರು ತೋರಿಸಿದರೆ ಸಿಡಿದು ಬೀಳುವ ಸ್ವಭಾವವನ್ನೂ ಬಿಡುವುದಿಲ್ಲ. ಆದರೆ ಶರಣರು ಈ ರೀತಿಯ ಮನಸ್ಥಿತಿ ಬೆಳೆಸಿಕೊಂಡವರಲ್ಲ ಎನ್ನುವುದಕ್ಕೆ ಬಸವಣ್ಣನವರ ಅನೇಕ ವಚನಗಳು ಸಾಕ್ಷಿ ನುಡಿಯುತ್ತವೆ. ಈ ಕಾರಣದಿಂದಲೇ ಎಲ್ಲ ಶರಣರೂ ಅಹಂಕಾರವೆಂಬ ಮದಗಜವಾಗದೆ ಸದುವಿನಯ, ಮೃದುಭಾವನೆಗಳನ್ನು ಬೆಳೆಸಿಕೊಂಡರು. ಇವತ್ತು ಯಾರನ್ನೇ ಗಮನಿಸಿದರೂ ನಾನು ನೀಡಿದೆ, ನಾನು ಮಾಡಿದೆ, ನಾನು ಕಟ್ಟಿದೆ, ನನ್ನಿಂದಲೇ ಎನ್ನುವ ಅಹಂಕಾರ ಅವರಲ್ಲಿ ಭೂತವಾಗಿ ಕಾಡುತ್ತಿದೆ. ಆದರೆ ಬಸವಣ್ಣನವರು ಹೇಳಿದ್ದು `ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎಂದು.
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ,
ಬೇಡಿದ್ದನೀವ ಕೂಡಲಸಂಗಮದೇವ.
ಈ ರೀತಿಯ ವಚನಗಳು ಬದುಕಿಗೆ ಬೆಳಕನ್ನು ನೀಡುವಂತಿವೆ. ಆದರೆ ಎಷ್ಟೋ ಜನರು ವಚನಗಳನ್ನು ಓದಿ ಅರ್ಥೈಸಿದರೂ ಅಲ್ಲಿಯ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ಸೋಲುತ್ತಿರುವುದನ್ನು ಕ್ಷಣ ಕ್ಷಣಕ್ಕೂ ಕಾಣುತ್ತಲಿದ್ದೇವೆ. ಹಾಗಾಗಿ ಬದುಕು ನಿತ್ಯನರಕವಾಗುತ್ತಿದೆ. ಸಂತೋಷ ಹಗಲುಗನಸಾಗುತ್ತಿದೆ. ಹೀಗಾಗದೆ ಸದಾ ನೆಮ್ಮದಿಯ ಜೀವನ ಸಾಗಿಸಬೇಕೆಂದರೆ ವಚನಗಳಲ್ಲಿರುವ ತತ್ವಗಳ ಅರಿವು ಮತ್ತು ಆಚಾರ ನಮ್ಮ ಬದುಕಿನ ಬಾಳಬಟ್ಟೆಯಾಗಬೇಕು. ಈ ನೆಲೆಯಲ್ಲಿ ನಾವು ಆಗಾಗ ಹೇಳುವುದು ಲಿಂಗಾಯತ ಧರ್ಮ ಪ್ರಯೋಗ ಪ್ರಧಾನ ಧರ್ಮ ಎಂದು. ವಿಶ್ವದಲ್ಲಿ ಬೇಕಾದಷ್ಟು ಧರ್ಮಗಳಿವೆ. ಅಲ್ಲಿ ಪ್ರಯೋಗ ಪ್ರಧಾನವಾದ ಧರ್ಮಗಳು ವಿರಳ. ಕೆಲವೊಮ್ಮೆ ಅಲ್ಲಿ ವೈಜ್ಞಾನಿಕ, ತಾರ್ಕಿಕ ವಿಚಾರಗಳೂ ಇರುವುದಿಲ್ಲ. ಆದರೆ ಲಿಂಗಾಯತ ಧರ್ಮದಲ್ಲಿ ವೈಜ್ಞಾನಿಕ, ತಾರ್ಕಿಕ ವಿಚಾರಗಳೂ ಇವೆ. ಅದಕ್ಕನುಗುಣವಾದ ಆಚರಣೆಯೂ ಇದೆ. ಹಾಗಾಗಿಯೇ ಇದನ್ನು ಪ್ರಯೋಗ ಪ್ರಧಾನ ಧರ್ಮ ಎನ್ನುವುದು. `ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ಎಂತೊಲಿವನಯ್ಯಾ’ ಎಂದು ಕೇಳುವರು ಬಸವಣ್ಣನವರು. ನುಡಿ ಮತ್ತು ನಡೆ ಒಂದಾದಾಗ ದೇವರು ಒಲಿಯುವನು. ಆದರೆ ಇಂದು ನಡೆ ಮತ್ತು ನುಡಿ ಬೇರೆ ಬೇರೆ ಆಗಿವೆ. `ಮಾತು ಪುರಾತನರದು, ಕೃತಿ ಕಿರಾತನರದು’. ಹೀಗಾಗಿಯೇ ವಿವಿಧ ರೀತಿಯ ವ್ಯಾಧಿಗಳು ಮನುಕುಲವನ್ನು ಕಾಡುತ್ತಲಿವೆ. ಪ್ರಾಕೃತಿಕ, ಮಾನಸಿಕ, ದೈಹಿಕ ವ್ಯಾಧಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವುಗಳಿಂದ ಮುಕ್ತವಾಗಬೇಕೆಂದರೆ ಅಂತರಂಗ ಮತ್ತು ಬಹಿರಂಗ ಶುದ್ಧಿ ಬಹುಮುಖ್ಯ. ಈ ಎರಡೂ ಶುದ್ಧಿಗಳು ಇಲ್ಲದಿದ್ದಾಗ ಬದುಕು ನರಕಸದೃಶವಾಗುವುದು. ಇದನ್ನು ತಪ್ಪಿಸಿಕೊಳ್ಳಲು ಮನುಷ್ಯ ಯಾವಾಗಲೂ ಸತ್ಚಿಂತನೆ ಮಾಡಬೇಕು.
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು-
ಸಗಣಕ್ಕೆ ಸಾಸಿರ ಹುಳು, ಹುಟ್ಟವೆ ದೇವಾ?
ಕಾಡ ಮೃಗವೊಂದಾಗಿರಲಾಗದೆ, ದೇವಾ?
ಊರ ಮೃಗವೊಂದಾಗಿರಲಾಗದೆ, ಹರನೆ?
ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ-
ವನವಾಸ ನರವಿಂಧ್ಯ ಕಾಣಿರಣ್ಣಾ.
ಶಿವಚಿಂತೆ, ಶಿವಧ್ಯಾನ ಮಾಡದವರ ಬದುಕು ಸಗಣಿಯ ಹುಳಕ್ಕಿಂತ ಕೀಳಾಗುವುದು. ದಾರಿಯಲ್ಲಿ ರಾತ್ರಿ ದನಕರುಗಳು ಸಗಣಿ ಹಾಕಿದ್ದರೆ ಬೆಳಗ್ಗೆ ಆ ಸಗಣಿ ಎತ್ತುವಾಗ ಕಾಣಿಸಿಕೊಳ್ಳುವುದೇನು? ಅದರಲ್ಲಿ ಹುಳುಗಳು ಪಿತಿಗುಟ್ಟುತ್ತವೆ. ಅವುಗಳನ್ನೇ ಸಗಣಿಯ ಹುಳು ಎನ್ನುವುದು. ಅವು ಸ್ವಲ್ಪ ಅವಧಿಯಲ್ಲೇ ಸತ್ತು ತಮ್ಮ ಬದುಕಿನ ಪಯಣ ಮುಕ್ತಾಯ ಮಾಡುವವು. ಆದರೆ ಮನುಷ್ಯನ ಜೀವನ ಹೀಗೆ ಸಗಣಿಯ ಹುಳದಂತೆ ಆಗಬಾರದು. ಮನುಷ್ಯ ಈ ಭೂಮಿಗೆ ಬರುವಲ್ಲಿ ಏನೋ ಒಂದು ಅರ್ಥ, ಉದ್ದೇಶ ಇದೆ. ಅದನ್ನು ಅರಿತು ನಾಲ್ಕು ಜನರಾದರೂ ನಮ್ಮನ್ನು ಪ್ರೀತಿಸುವ, ಈ ಲೋಕ ಬಿಟ್ಟುಹೋದ ನಂತರವೂ ಸ್ಮರಿಸಿಕೊಳ್ಳುವ ರೀತಿಯಲ್ಲಿ ವ್ಯಕ್ತಿಗತ ಬದುಕನ್ನು ಕಟ್ಟಿಕೊಳ್ಳಬೇಕು. ವ್ಯಕ್ತಿಗತ ಬದುಕನ್ನೇ ಕಟ್ಟಿಕೊಳ್ಳದಿದ್ದರೆ ಲೋಕದ ಬದುಕನ್ನು ಕಟ್ಟುವುದು ಅಸಾಧ್ಯದ ಮಾತು. ಮನುಷ್ಯ ಈ ನೆಲೆಯಲ್ಲಿ ನಿಜವಾಗಿಯೂ ಶರಣಾಗಬೇಕಾದ್ದು ವಿಶ್ವಚೇತನವಾದ ದೇವರಿಗೆ. ಆದರೆ ಅನೇಕ ಜನರು ಅದನ್ನು ಮರೆತು ಶ್ರೀಮಂತರಿಗೆ, ಧೀಮಂತರಿಗೆ, ರಾಜಕಾರಣಿಗಳಿಗೆ, ಇನ್ನಾರಿಗೋ ಶರಣಾಗುವರು. ಅವರು ಖಂಡಿತ ಒಳ್ಳೆಯ ದಾರಿಯಲ್ಲಿ ನಡೆಸಲಾರರು. ಆದರೆ ದೇವರು ಹಾಗಲ್ಲ.
ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ.
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯಾ.
ಎನ್ನ ಮಾನಾಪಮಾನವೂ ನಿಮ್ಮದಯ್ಯಾ.
ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ.
ಈ ವಚನದಲ್ಲಿ ಬಸವಣ್ಣನವರು ಹೇಳುವುದು ನನ್ನ ಕ್ಷೇಮ ಸಮಾಚಾರ ನಿನಗೇ ಬಿಟ್ಟದ್ದು. ನನ್ನ ಒಳಿತು ಕೆಡುಕು ನಿನಗೇ ಸಂಬಂಧಿಸಿದ್ದು. ನನ್ನ ಮಾನ ಅಪಮಾನವೂ ನಿನ್ನದೇ ಎಂದು ಎಲ್ಲ ಭಾರವನ್ನು ದೇವರ ಮೇಲೆ ಹಾಕಿ ಸಂಪೂರ್ಣ ಶರಣಾಗುವರು. ಈ ನೆಲೆಯಲ್ಲಿ ಬೆಕ್ಕು ಮತ್ತು ಮಂಗದ ನಿದರ್ಶನಗಳನ್ನು ನೆನಪಿಸಿಕೊಳ್ಳುತ್ತೇವೆ. ಅದನ್ನು ಮರ್ಕಟ ಕಿಶೋರ, ಮಾರ್ಜಾಲ ಕಿಶೋರ ನ್ಯಾಯ ಎನ್ನುವರು. ಮಂಗ ತನ್ನ ಮಗುವಿನ ರಕ್ಷಣೆಯನ್ನು ತಾನೇ ಮಾಡುವುದಿಲ್ಲ. ಬದಲಾಗಿ ಮರಿ ತಾಯಿಯನ್ನು ಬಲವಾಗಿ ಅಪ್ಪಿಕೊಳ್ಳುವುದು. ಅದೇ ಬೆಕ್ಕಿನ ಮರಿಯನ್ನು ತಾಯಿ ತಾನೇ ಬಾಯಲ್ಲಿ ಕಚ್ಚಿಕೊಂಡು ಗುಪ್ತವಾದ ಸ್ಥಳದಲ್ಲಿಟ್ಟು ಸಂರಕ್ಷಣೆ ಮಾಡುವುದು. ಮಂಗನ ಮರಿ ತನ್ನ ತಾಯಿಯನ್ನು ಸರಿಯಾಗಿ ಅಪ್ಪಿಕೊಳ್ಳದಿದ್ದರೆ ತಾನೇ ಪೆಟ್ಟು ತಿನ್ನುವುದು. ಆ ಪರಿಸ್ಥಿತಿ ಬೆಕ್ಕಿನ ಮರಿಗಿಲ್ಲ. ತಾಯಿಯೇ ಅದನ್ನು ರಕ್ಷಿಸುವುದು. ಈ ನಿದರ್ಶನಗಳಿಂದ ಗಮನಿಸಬೇಕಾದ್ದು ನಮ್ಮನ್ನು ರಕ್ಷಿಸುವವನೊಬ್ಬ ಇದ್ದಾನೆ ಎನ್ನುವ ಬಲವಾದ ನಂಬಿಕೆ ಇರಬೇಕು, ಇಲ್ಲವೇ ನಾನು ಅವನನ್ನು ಹಿಡಿದುಕೊಂಡರೆ ಅವನು ರಕ್ಷಿಸದೆ ಇರಲಾರ ಎನ್ನುವ ವಿಶ್ವಾಸವಿರಬೇಕು. ಆದರೆ ಇಂಥ ಗುಣಗಳು ಮಾನವನಿಂದ ದೂರವಾಗುತ್ತಲಿವೆ. ಇವತ್ತು ಮನುಷ್ಯ ನಾಗರಿಕವಾಗಿ ಬೆಳೆಯುತ್ತಿದ್ದರೂ ನೈತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಸೋಲುತ್ತಿದ್ದಾನೆ.
ಬದುಕಿನಲ್ಲಿ ಸೋಲಬಾರದು ಎನ್ನುವ ಕಾರಣಕ್ಕಾಗಿ ಹಿಂದೆ ಪುರಾಣ ಪ್ರವಚನಗಳನ್ನು ಏರ್ಪಡಿಸುತ್ತಿದ್ದರು. ಅಲ್ಲಿಯ ಧಾರ್ಮಿಕ ಕತೆಗಳನ್ನು ಕೇಳುತ್ತಿದ್ದರು. ಸಂದರ್ಭ ಸಿಕ್ಕಾಗ ತಾವೂ ಸತ್ಪುರುಷರ ಜೀವನದ ಪುಸ್ತಕಗಳನ್ನು ಓದುತ್ತಿದ್ದರು, ಇಲ್ಲವೇ ಓದಿಸುತ್ತಿದ್ದರು. ಅವುಗಳಲ್ಲಿರುವ ಸತ್ವವನ್ನು ಅರಿತು ತಮ್ಮ ಬದುಕಿಗೆ ಅಳವಡಿಸಿಕೊಳ್ಳುತ್ತಿದ್ದರು. ಆದರೆ ಇಂದು ಬಹುತೇಕ ಜನರಿಗೆ ಪುಣ್ಯಕತೆಗಳು, ಒಳ್ಳೆಯ ಮಾತುಗಳು ಹಿಡಿಸುತ್ತಿಲ್ಲ. ಆದರ್ಶದ ಬದುಕು ಬೇಕಾಗಿಲ್ಲ. ಧರ್ಮ ಅರ್ಥಹೀನ ಎನ್ನುವ ಅವೈಚಾರಿಕತೆ. ಹಾಗಾಗಿ ಅವರು ನೋಡುವುದು, ಕೇಳುವುದು, ಓದುವುದು ತಮ್ಮ ಹಿರಿಯರಿಗಿಂತ ವಿಭಿನ್ನವಾದುದು. ನಮ್ಮ ದೃಶ್ಯ ಮಾಧ್ಯಮಗಳು ಹಿರಿಯರ ದಾರಿಯನ್ನು ತೋರಿಸದೆ ದಿಕ್ಕು ತಪ್ಪಿಸುವ ಕೆಲಸವನ್ನೇ ಮಾಡುತ್ತಲಿವೆ. ಕೆಲವು ಸಾಹಿತ್ಯ ಕೃತಿಗಳೂ ದಾರಿತಪ್ಪಿಸುವ ಕಾರ್ಯ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ನಮಗೆ ಸರಿಯಾದ ದಾರಿಯನ್ನು ತೋರಿಸುವವರು ಯಾರು? ಯಾರೋ ಬಂದು ನಮ್ಮನ್ನು ಕೈ ಹಿಡಿದು ನಡೆಸುತ್ತಾರೆ, ಗುರಿ ಮುಟ್ಟಿಸುತ್ತಾರೆ ಎನ್ನುವ ಭಾವನೆಯನ್ನು ಮೊದಲು ಮನಸ್ಸಿನಿಂದ ಕಿತ್ತೆಸೆಯಬೇಕು. ಬದಲಾಗಿ ಶರಣರ ವಚನ ಸಾಹಿತ್ಯ ಓದುವ, ಅರ್ಥೈಸಿಕೊಳ್ಳುವ, ಆಚರಣೆಯಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಅವೇ ನಮ್ಮ ಬದುಕಿನ ಬೆಳಕಾಗಿ ಸರಿಯಾದ ದಾರಿಯಲ್ಲಿ ಮುನ್ನಡೆಸಿ ಗುರಿಯನ್ನು ಮುಟ್ಟಿಸುತ್ತವೆ.
`ಶ್ರಾವಣ ಮಾಸ’ ಹಿಂದಿನ ಜನರಿಗೆ ತುಂಬಾ ವಿಶೇಷವಾದ ತಿಂಗಳಾಗಿತ್ತು. ಶ್ರಾವಣ ಸಂದರ್ಭದ ಒಂದು ತಿಂಗಳ ಅವಧಿ ಕೃಷಿಕರಿಗೆ ಸ್ವಲ್ಪ ಬಿಡುವಿನ ಕಾಲ. ಮಳೆ ಬರುವ ಸಂದರ್ಭ. ಆಗ ಅವರು ಪುರಾಣ ಪುಣ್ಯಕತೆಗಳನ್ನು ಕೇಳುತ್ತಿದ್ದರು. ಶ್ರವಣ ಎಂದರೆ ಶ್ರದ್ಧೆಯಿಂದ ಕೇಳುವುದು. ಶ್ರವಣಕ್ಕೇ ನಿಲ್ಲಿಸುವುದಲ್ಲ. ಅದು ಮನನವಾಗಬೇಕು. ಮನನವಾಗಿದ್ದು ನಿಧಿದ್ಯಾಸನವಾಗಬೇಕು. ಶ್ರವಣ, ಮನನ, ನಿಧಿದ್ಯಾಸನ ಅಳವಟ್ಟಾಗ ಬದುಕಿನ ಕಲಂಕವನ್ನು ಕಳೆದುಕೊಂಡು ವ್ಯಕ್ತಿತ್ವವನ್ನು ಎತ್ತರಿಸಿಕೊಳ್ಳಲು ಸಾಧ್ಯ. ಈ ನೆಲೆಯಲ್ಲಿ ಹಿಂದಿನವರ ಪರಂಪರೆಯನ್ನು ನೆನಪಿಸುವ ನಿಟ್ಟಿನಲ್ಲಿ 2013 ರಿಂದ `ಶ್ರಾವಣ ಸಂಜೆ’ ಎನ್ನುವ ಕಾರ್ಯಕ್ರಮವನ್ನು ಬೇರೆ ಬೇರೆ ತಾಲ್ಲೂಕಿನ ಒಟ್ಟು 30 ಗ್ರಾಮಗಳಲ್ಲಿ ಒಂದು ತಿಂಗಳ ಕಾಲ ನಡೆಸುತ್ತ ಬಂದಿದ್ದು ಅನೇಕರಿಗೆ ಗೊತ್ತಿದೆ. ಆ ಸಂದರ್ಭದಲ್ಲಿ ಗ್ರಾಮಸ್ಥರೇ ಊರಿನ ಸ್ವಚ್ಛತೆ ಮಾಡುವ, ಮನೆಗೊಂದು ಸಸಿ ವಿತರಿಸಿ ಬೆಳೆಸುವ, ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸುವ, ದನ- ಜನಗಳ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಜೊತೆಗೆ ನಾವೂ ಊರಲ್ಲಿ ಪಾದಯಾತ್ರೆ ಮಾಡುತ್ತಿದ್ದೆವು. ಸಂಜೆ ಸಾರ್ವಜನಿಕ ಸಮಾರಂಭ. ಅಲ್ಲಿ ವಚನಗೀತೆಗಳನ್ನು ಹಾಡಿಸುವ, ಪ್ರತಿಭಾನ್ವಿತರನ್ನು ಗೌರವಿಸುವ, ವಚನ ಕಂಠಪಾಠದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸುವ, ಉಪನ್ಯಾಸಕರಿಂದ ಮಾತನಾಡಿಸುವ ಪದ್ಧತಿ ಇತ್ತು.
2019ರಲ್ಲಿ `ಶ್ರಾವಣ ಸಂಜೆ’ `ಮತ್ತೆ ಕಲ್ಯಾಣ’ ಎನ್ನುವ ಹೊಸ ಹೆಸರಿನೊಂದಿಗೆ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡಿತ್ತು. ಆಗಸ್ಟ್ 1 ರಿಂದ 30 ರವರೆಗೆ ಕರ್ನಾಟಕದ 30 ಜಿಲ್ಲಾ ಕೇಂದ್ರಗಳಲ್ಲಿ `ಮತ್ತೆ ಕಲ್ಯಾಣ’ ಅಭಿಯಾನ ವಿನೂತನ ರೀತಿಯಲ್ಲಿ ನಡೆದಿತ್ತು. ಶ್ರಾವಣ ಸಂಜೆಯ ಕಾರ್ಯಕ್ರಮದಿಂದ ಪ್ರಭಾವಿತರಾದ ಕೆಲವರು ತಮ್ಮ ತಮ್ಮ ತಾಲ್ಲೂಕಿನ ಗ್ರಾಮಗಳಲ್ಲಿ ಅಂಥದೇ ಕಾರ್ಯಕ್ರಮ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ವರ್ಷ ಕೊರೊನಾ ಕಾರಣದಿಂದ ಹಿಂದಿನ ವರ್ಷದಂತೆ ಹಳ್ಳಿ ಹಳ್ಳಿಗಳಿಗೆ ಹೋಗಿ ಮಾಡಲಾಗದಿದ್ದರೂ ಅಂತರ್ಜಾಲದ ಮೂಲಕ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಒಳ್ಳೆಯ ಕಾರ್ಯಗಳನ್ನು ಎಂತದೇ ಸಂದರ್ಭ ಬಂದರೂ ಬಿಡಬೇಕಾಗಿಲ್ಲ. ಆಧುನಿಕ ಮಾಧ್ಯಮಗಳ ಮೂಲಕವೂ ಜನರಲ್ಲಿ ಅರಿವನ್ನು ಮೂಡಿಸಬಹುದು. ಎಲ್ಲರೂ ಶರಣರ ವಿಚಾರಗಳ ಆಚಾರ-ಪ್ರಚಾರ ಮಾಡುವ ಮೂಲಕ ಮನಸ್ಸನ್ನು ಹದಗೊಳಿಸಿಕೊಳ್ಳುವ, ವಿಕಾರಗಳನ್ನು ದೂರ ಮಾಡಿಕೊಳ್ಳುವ, ಬದುಕನ್ನು ಎತ್ತರಿಸಿಕೊಳ್ಳುವ ಸಂಕಲ್ಪ ಮಾಡಬೇಕು.
ಶ್ರಾವಣ ಮಾಸವನ್ನೇ ಸಂಕೇತವಾಗಿಸಿಕೊಂಡು ಮನೆಯಲ್ಲಿರುವ ಹಿರಿಯರು ತಾವೂ ಪ್ರತಿದಿನ ಒಂದೆರಡು ವಚನಗಳನ್ನು ಓದುವ ತಮ್ಮ ಮಕ್ಕಳಿಗೂ ಓದಿಸುವ, ಅರ್ಥೈಸುವ ಕಾಯಕ ಮಾಡಬೇಕು. ಆಗ ಪ್ರತಿಯೊಬ್ಬರ ಮನಸ್ಸು, ಮನೆ ಅನುಭವಮಂಟಪವಾಗುವುದು. ಶರಣರು ಬಯಸಿದ್ದೂ ಇದನ್ನೇ. ಭಕ್ತರ ಮನೆಗಳೆಲ್ಲ ಮಠಗಳಾಗಬೇಕು, ಅನುಭವಮಂಟಪಗಳಾಗಬೇಕು. ಮಠಗಳಾಗಬೇಕು ಎಂದರೆ ಸಂನ್ಯಾಸಿಗಳಾಗಬೇಕು, ಸಂಸಾರ ತ್ಯಜಿಸಬೇಕು ಎಂದಲ್ಲ. ಸಂಸಾರದಲ್ಲಿದ್ದೂ ಮಠದಲ್ಲಿ ನಡೆಯುವಂತಹ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ಮನೆಯಲ್ಲೂ ನಡೆಯುವಂತಾಗಬೇಕು. ಈಗ ಕೊರೊನಾ ಕೇಕೆ ಹಾಕುತ್ತಿರುವುದು ವ್ಯಕ್ತಿಯ ಅಂತರಾವಲೋಕನಕ್ಕೆ ಸ್ಪೂರ್ತಿಯನ್ನು ತುಂಬಿದೆ ಎಂದು ಭಾವಿಸಿ ತಮ್ಮ ಮನೆಯನ್ನೇ ಅನುಭವಮಂಟಪ ಮಾಡಿಕೊಳ್ಳಬೇಕು. ವಚನಗಳನ್ನು ಓದುವ, ಹಾಡುವ, ಕೇಳುವ, ವಿಶ್ಲೇಷಣೆ ಮಾಡುವ ಕಾರ್ಯ ಮಾಡಿದರೆ ಮನೆ ಮಹಾಮನೆಯಾಗುವುದು. ಆಗ ಅಲ್ಲಿರುವ ಜನರೇ ಶರಣರಾಗಲು, ಅನುಭಾವಿಗಳಾಗಲು ಅವಕಾಶವಾಗುವುದು. ಹೀಗೆ ಓದುವ ಮುನ್ನ ಅವರು ಕೆಲವು ನಿಯಮಗಳನ್ನು ಅನುಸರಿಸಬೇಕು.
ಅಡ್ಡ ವಿಭೂತಿಯಿಲ್ಲದವರ ಮುಖಹೊಲ್ಲ, ನೋಡಲಾಗದು.
ಲಿಂಗದೇವನಿಲ್ಲದ ಠಾವು ನರವಿಂಧ್ಯ, ಹೊಗಲಾಗದು.
ದೇವಭಕ್ತರಿಲ್ಲದೂರು ಸಿನೆ ಹಾಳು,
ಕೂಡಲಸಂಗಮದೇವಾ.
ಮುಖಕ್ಕೆ ಸೊಬಗನ್ನು ತರುವುದು ವಿವಿಧ ಪೌಡರ್ ಇನ್ನೇನೋ ಹಾಕಿಕೊಳ್ಳುವುದಲ್ಲ; ವಿಭೂತಿಯನ್ನು ಹಣೆಯ ಮೇಲೆ ಧರಿಸುವುದು. ಎದೆಯ ಮೇಲೆ ಇಷ್ಟಲಿಂಗವಿರುವಂತೆ ಲಿಂಗದೀಕ್ಷೆ ಪಡೆಯುವುದು. ನಿತ್ಯ ಲಿಂಗಪೂಜೆ ಮಾಡಿಕೊಳ್ಳುವುದು. ಆಗ ಊರುಗಳು ಅನುಭವಮಂಟಪಗಳಾಗುತ್ತವೆ. ಈ ದಾರಿಯಲ್ಲಿ ಬಸವಭಕ್ತರು ನಡೆಯುವ ಸಂಕಲ್ಪ ಮಾಡಬೇಕು. ಕಳೆದ ವರ್ಷ `ಮತ್ತೆ ಕಲ್ಯಾಣ’ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿತ್ತು. ಈ ವರ್ಷವೂ `ಮತ್ತೆ ಕಲ್ಯಾಣ’ ನಡೆಯಿತು. ಅದರೆ ಸ್ವರೂಪ ಬದಲಾಗಿತ್ತು. ಅಂತರ್ಜಾಲದ ಮೂಲಕ ಆಗಸ್ಟ್ 1 ರಿಂದ 30 ರವರೆಗೆ 30 ದಿನಗಳ ಕಾಲ 30 ಜನ ಅನುಭಾವಿಗಳು ಉಪನ್ಯಾಸ ನೀಡಿದರು. ಶಿವಸಂಚಾರದ ಕಲಾವಿದರು ವಚನಗಳನ್ನು ಹಾಡಿದರು. ಕೊನೆಯಲ್ಲಿ ನಾವು ಪ್ರತಿದಿನ ನಮ್ಮ ಆಲೋಚನೆಗಳನ್ನು ಹಂಚಿಕೊಂಡೆವು. ಇದೊಂದು ವಿಶಿಷ್ಟ, ವಿನೂತನ, ಅಪರೂಪದ ಕಾರ್ಯಕ್ರಮ. ಬಸವಣ್ಣನವರು ನಮ್ಮೆಲ್ಲರಿಗೂ ಗುರು. ಆ ಗುರುವಿನ ಸಂದೇಶವನ್ನು ಪಾಲಿಸುವುದೇ ಪರಮಪುಣ್ಯದ ಕಾರ್ಯ.
ಶಿವ, ಗುರುವೆಂದು ಬಲ್ಲಾತನೆ ಗುರು,
ಶಿವ, ಲಿಂಗವೆಂದು ಬಲ್ಲಾತನೆ ಗುರು,
ಶಿವ, ಜಂಗಮವೆಂದು ಬಲ್ಲಾತನೆ ಗುರು,
ಶಿವ, ಪ್ರಸಾದವೆಂದು ಬಲ್ಲಾತನೆ ಗುರು,
ಶಿವ, ಆಚಾರವೆಂದು ಬಲ್ಲಾತನೆ ಗುರು,
ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ
ಮಹಾಮಹಿಮ ಸಂಗನಬಸವಣ್ಣನು,
ಎನಗೆಯೂ ಗುರು, ನಿನಗೆಯೂ ಗುರು,
ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.
ವಿಶ್ವಕ್ಕೇ ಗುರುವಾಗುವ ಅರ್ಹತೆಯುಳ್ಳ ಬಸವಣ್ಣನವರ ಸಂದೇಶಗಳು ವಚನ ರೂಪದಲ್ಲಿ ನಮ್ಮ ಕಣ್ಮುಂದೆ ಇವೆ. ಅವುಗಳಂತೆ ಬದುಕನ್ನು ಕಟ್ಟಿಕೊಳ್ಳೋಣ.

Previous post ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
Next post ಸಂತೆಯ ಸಂತ
ಸಂತೆಯ ಸಂತ

Related Posts

  ಅವಿರಳ ಅನುಭಾವಿ-3
Share:
Articles

  ಅವಿರಳ ಅನುಭಾವಿ-3

May 6, 2020 ಮಹಾದೇವ ಹಡಪದ
ಇಲ್ಲಿಯವರೆಗೆ: ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ ಬಾಲಕ ಚನ್ನಬಸವ ಮಹಾಮನೆಯ ಕಣ್ಮಣಿಯಾದ. ಆತನ ಪ್ರಬುದ್ಧತೆ, ಚುರುಕುತನ ಹೀಗೊಮ್ಮೆ...
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
Share:
Articles

ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ

January 7, 2022 ಡಾ. ಪಂಚಾಕ್ಷರಿ ಹಳೇಬೀಡು
ಗುರುಬಸವಣ್ಣನವರು ಭಾರತ ದೇಶದಲ್ಲಿ ಅದರಲ್ಲೂ ನಮ್ಮ ಕನ್ನಡನಾಡಿನಲ್ಲಿ ಹನ್ನೆರಡನೇ ಶತಮಾನದಲ್ಲಿ ಪ್ರಜ್ವಲಿಸಿದ ಮಹಾನ್ ಚೇತನ ಎಂಬುದು ನಮಗೆಲ್ಲಾ ಬಹಳ ಹೆಮ್ಮೆಯ ವಿಷಯ. ಮಾನವ ಜೀವನದ...

Comments 11

  1. Mahanthesh B.G
    Sep 10, 2020 Reply

    ಮತ್ತೆ ಕಲ್ಯಾಣ ಕಾರ್ಯಕ್ರಮವು ಮನ- ಮನೆಗಳನ್ನು ಅನುಭವ ಮಂಟಪವಾಗಿಸುವಲ್ಲಿ ನಡೆಸಿದ ಒಂದು ಉತ್ಕೃಷ್ಟ ಪ್ರಯೋಗವೆಂದು ಭಾವಿಸಿದ್ದೇನೆ. ಇಡೀ ತಿಂಗಳು ನಡೆಸಿದ ಕಾರ್ಯಕ್ರಮವನ್ನು ನಾವು ತಪ್ಪದೇ ವೀಕ್ಷಿಸಿದ್ದೇವೆ. ಸ್ವಾಮಿಗಳವರಿಗೆ ಪ್ರಣಾಮಗಳು.

  2. ಜಯಮ್ಮಾ ನಾಗನೂರು
    Sep 10, 2020 Reply

    ವಿಭೂತಿ ಧರಿಸದವನ ಮುಖವ ನೋಡಲಾಗದು ಎಂದು ಶರಣರು ಹೇಳಿದ್ದಾರೆ. ಈಗಿನ ಮಕ್ಕಳು ವಿಭೂತಿ ಇಟ್ಟುಕೊಳ್ಳಲು ಸಂಕೋಚ ಪಡುತ್ತಾರೆ. ಅವರಿಗೆ ತಿಳಿ ಹೇಳುವುದೇ ಕಷ್ಟವಾಗಿದೆ. ನಾವೇಕೆ ವಿಭೂತಿಧಾರಿಗಳಾಗಿರಬೇಕೆಂದು ಆಧುನಿಕ ಭಾಷೆಯಲ್ಲಿ ಅವರಿಗೆ ಮನದಟ್ಟು ಮಾಡಿಸುವ ಜರೂರಿದೆ. ತಾವು ಆ ಕುರಿತು ಲೇಖನ ಬರೆಯಬೇಕೆಂದು ನನ್ನ ಪ್ರಾರ್ಥನೆ.

  3. Shanthveeraiah
    Sep 13, 2020 Reply

    ಬಾಹ್ಯ ಬದುಕಿನ ಶ್ರೀಮಂತಿಕೆಗಾಗಿ `ಕಾಯಕ’ ಮತ್ತು `ದಾಸೋಹ’ ತತ್ವವನ್ನು ದಯಪಾಲಿಸಿದರು. ಆಂತರಿಕ ಬದುಕಿನ ಶ್ರೀಮಂತಿಕೆಗಾಗಿ `ಇಷ್ಟಲಿಂಗ’ ಪೂಜೆಯನ್ನು ಜಾರಿಯಲ್ಲಿ ತಂದರು… ಶರಣರಿಗೆ ಕಾಯಕವೂ ಪೂಜೆಯಾಗಿತ್ತು. ಅವರ ಜೀವನ ಚಿತ್ರಣವನ್ನು ನೀಡುವ ವಚನಗಳು ಇನ್ನಾದರೂ ನಮ್ಮ ಮನೆ ಮತ್ತು ಮನಗಳನ್ನು ಬೆಳಗಿಸಬೇಕಾಗಿದೆ.

  4. ಕರಿಬಸಪ್ಪ ಮಿಸಳಿ
    Sep 13, 2020 Reply

    ಶ್ರಾವಣ ಮಾಸವನ್ನು ನಾವು ಕರೋನಾದ ಈ ವರ್ಷದಲ್ಲೂ ಮತ್ತೆ ಕಲ್ಯಾಣದ ಮೂಲಕ ಅದೇ ಉತ್ಸಾಹದಿಂದ ಆಚರಿಸಿದಂತಾಯಿತು. ಅದಕ್ಕಾಗಿ ನಾವು ಋಣಿಯಾಗಿದ್ದೇವೆ. ನಾನು ಚಿಕ್ಕವನಾಗಿದ್ದಾಗ ಶ್ರಾವಣ ಮಾಸದಲ್ಲಿ ಏರ್ಪಡಿಸುವ ಪುರಾಣ ಪ್ರವಚನಗಳನ್ನು ತಪ್ಪದೇ ಕೇಳುತ್ತಿದ್ದೆ. ಈ ಯುಗದ ಮಕ್ಕಳಿಗೆ ನಾವು ಆ ಸಂಸ್ಕೃತಿಯನ್ನು ಉಳಿಸಲಿಲ್ಲವಲ್ಲಾ ಎನ್ನುವ ಕೊರಗು ನನಗಿದೆ. ಇದಕ್ಕೆ ತಮ್ಮ ಉತ್ತರವೇನು?

  5. Akshay B.R
    Sep 13, 2020 Reply

    ಲೇಖನದ ಆಶಯ ದೊಡ್ಡದಿದೆ. ವಾಸ್ತವ ವಿಭಿನ್ನವಾಗಿದೆ. ಬಸವಣ್ನನವರ ಮಾತುಗಳನ್ನು ಬದುಕಿಗೆ ತರುವುದು ಹೇಗೆ? ಮನಸ್ಸುಗಳು ಕೊಳೆತು ಹೋಗಿವೆ, ಮನೆಗಳು ಸಾಮರಸ್ಯವನ್ನು ಕಳೆದುಕೊಂಡಿವೆ. ಅನುಭವ ಮಂಟಪದ ಹೆಸರು ಹೇಳುವ ಯೋಗ್ಯತೆ ಕೂಡ ಗುರುಗಳಾದಂತವರಿಗೆ ಇಲ್ಲವಾಗಿದೆ. ಶರಣರ ಹತ್ತಿರ ಹೋಗಲು ಎಲ್ಲಿದೆ ದಾರಿ?

  6. Revanasiddhaiah
    Sep 13, 2020 Reply

    ಶ್ರಾವಣ ಸಂಜೆಯ ಕಾರ್ಯಕ್ರಮಗಳನ್ನು ನಾನು ಮರೆಯಲಾರೆ. ಗ್ರಾಮದವರೆಲ್ಲಾ ಒಂದು ಮನೆಯವರಂತೆ ಉತ್ಸಾಹ ಉಲ್ಲಾಸದಿಂದ ಭಾಗವಹಿಸುತ್ತಿದ್ದರು. ಬೆಂಗಳೂರು ಸೇರಿಕೊಂಡ ಮೇಲೆ ಆ ದಿನಗಳೇ ದೂರಾದವು.

  7. Nagaraju M.P
    Sep 15, 2020 Reply

    ಮಾರ್ಜಾಲ ಕಿಶೋರ ನ್ಯಾಯ ಮತ್ತು ಮರ್ಕಟ ನ್ಯಾಯಗಳ ವಿವರಣೆ ತುಂಬಾ ಚೆನ್ನಾಗಿದೆ. ನಮ್ಮ ನಂಬಿಕೆ ಹೀಗಿರಬೇಕು, ಗಟ್ಟಿಯಾಗಿ ಹಿಡಿದುಕೊಂಡಂತೆ.

  8. Akshay B.R
    Sep 18, 2020 Reply

    ಇವತ್ತಿನ ದಿನಮಾನಗಳಲ್ಲಿ ಧರ್ಮ ನಮಗೆ ಬೇಕೆ ಎಂದು ಪ್ರಶ್ನಿಸಿಕೊಳ್ಳುವಷ್ಟು ಕೆಟ್ಟುಹೋಗಿದೆ. ಜನರಿಂದ ಜನರನ್ನು ಬೇರೆ ಮಾಡುವ ಧರ್ಮಾಚರಣೆಗಳು ಬೇಕಾಗಿಲ್ಲ. ಎಲ್ಲ ಹೃದಯಗಳನ್ನು ಬೆಸೆಯುವ ಅನುಭವ ಮಂಟಪಗಳು ಬೇಕಾಗಿವೆ. ಜಾತಿ, ಧರ್ಮಗಳ ಸಂಕೋಲೆಯಿಂದ ಪಾರಾಗಲು ಇಲ್ಲಿ ಉತ್ತಮ ಮಾರ್ಗವಿದೆ.

  9. Halappa Bhavi
    Sep 18, 2020 Reply

    ಎಲ್ಲ ಶರಣರೂ ಅಹಂಕಾರವೆಂಬ ಮದಗಜವಾಗದೆ ಸದುವಿನಯ, ಮೃದುಭಾವನೆಗಳನ್ನು ಬೆಳೆಸಿಕೊಂಡರು. ಇವತ್ತು ಯಾರನ್ನೇ ಗಮನಿಸಿದರೂ ನಾನು ನೀಡಿದೆ, ನಾನು ಮಾಡಿದೆ, ನಾನು ಕಟ್ಟಿದೆ, ನನ್ನಿಂದಲೇ ಎನ್ನುವ ಅಹಂಕಾರ ಅವರಲ್ಲಿ ಭೂತವಾಗಿ ಕಾಡುತ್ತಿದೆ… ಅಹಂಕಾರದಿಂದ ಹೊರ ಬರುವ ಮಾರ್ಗಗಳನ್ನು ದಯವಿಟ್ಟು ತಿಳಿಸಿಕೊಡಿ.

  10. ದೇವಿಕಾ ಬೇವೂರು
    Sep 22, 2020 Reply

    ತಪ್ಪುಗಳನ್ನು ಒಪ್ಪೊಕೊಳ್ಳುವುದು ಮತ್ತು ತಿದ್ದಿಕೊಳ್ಳುವುದು ಹೇಗೆಂದು ಬಸವಣ್ಣನವರ ವಚನಗಳನ್ನು ನೋಡಿದರೆ ಗೊತ್ತಾಗುತ್ತದೆ. ಪ್ರಾಮಾಣಿಕವಾಗಿ ಬದುಕಲು ಇದೇ ಮೊದಲ ಹೆಜ್ಜೆ. ಸ್ವಾಮಿಗಳ ಲೇಖನಗಳು ಮನಮುಟ್ಟುವಂತಿರುತ್ತವೆ.

  11. Prabhakar Banavar
    Sep 22, 2020 Reply

    ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿಸುತ್ತವೆ. ಆದರೆ ಇತ್ತೀಚೆಗೆ ಇವುಗಳಿಗೆ ಮತೀಯ ಬಣ್ಣ ಮೆತ್ತಿಕೊಂಡು ಒಬ್ಬರನ್ನೊಬ್ಬರು ಶಂಕಿತ ದೃಷ್ಟಿಯಿಂದ ನೋಡುವಂತಾಗಿದೆ. ಮತ್ತೆ ಕಲ್ಯಾಣ ಅಂತಹ ಯಾವುದೇ ವರ್ಗಕ್ಕೆ ಸೀಮಿತವಾಗದೆ ಸಮಷ್ಟಿಯ ಹಿತಕ್ಕಾಗಿ ಶ್ರಮಿಸುವಂತಾಗಬೇಕು. ಅದೇ ನಾವು ಶರಣರಿಗೆ ಸಲ್ಲಿಸಬೇಕಾದ ಕೃತಜ್ಞತೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಶರಣ- ಎಂದರೆ…
ಶರಣ- ಎಂದರೆ…
March 6, 2020
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
Copyright © 2023 Bayalu