Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನ ಉಂಟೇ ಮರುಳೇ, ಶಿವಯೋಗಿಗೆ?
Share:
Articles November 10, 2022 ಡಾ. ಚಂದ್ರಶೇಖರ ನಂಗಲಿ

ಮನ ಉಂಟೇ ಮರುಳೇ, ಶಿವಯೋಗಿಗೆ?

ಮಾನವಶರೀರವು ಪಂಚಭೂತ ಸಮನ್ವಿತ.
ಪಂಚಭೂತಗಳಿಗೆ ಅನುಗುಣವಾದ ಪಂಚ ಕೋಶಗಳು ಮಾನವಶರೀರಕ್ಕೆ ಇದೆಯೆಂದು
ಹೇಳುವುದುಂಟು! ಪಂಚವಿಧ ಕೋಶಗಳು ಯಾವುವು?
೧. ಅನ್ನಮಯಕೋಶ (=ನೆಲ )
೨. ಪ್ರಾಣಮಯಕೋಶ (=ಜಲ )
೩. ಮನೋಮಯ ಕೋಶ (=ಗಾಳಿ )
೪. ವಿಜ್ಞಾನಮಯಕೋಶ (=ಬೆಳಕು )
೫. ಆನಂದಮಯ ಕೋಶ (=ಆಕಾಶ )

ಈ ಐದು ಬಗೆಯ ಕೋಶಗಳಿಂದ ಮುಕ್ತರಾಗಿ ಚಿತ್ತ ಸಮಾಧಾನಿಯಾಗಿರುವವರೇ ಶರಣರು. ಅನ್ನಮಯದಿಂದ ಆನಂದಮಯದವರೆಗೆ ಮೇಲು ಕೀಳು ಎಂಬುದಿಲ್ಲ! ಅನ್ನ ಪ್ರಾಣ ಮನಸ್ಸು ವಿಜ್ಞಾನ ಆನಂದ – ಇವುಗಳಿಂದ ಮುಕ್ತರಾಗುವುದನ್ನೇ ಶರಣರು ‘ನಿಶ್ಚಿಂತ ನಿರಾಳ’ ಎಂದು ಕರೆಯುತ್ತಾರೆ. ಪಂಚವಿಧ ಕೋಶಗಳು ಕೂಡಾ ಭವಬಂಧನಗಳೇ ಎಂಬ ದೃಷ್ಟಿ ಗಮನಾರ್ಹ! ಅನ್ನಮಯದಿಂದ, ಪ್ರಾಣಮಯದಿಂದ, ಮನೋಮಯದಿಂದ, ವಿಜ್ಞಾನಮಯದಿಂದ, ಆನಂದಮಯದಿಂದ ಬಿಡುಗಡೆ ಪಡೆಯುವುದು ಅಷ್ಟು ಸುಲಭವಲ್ಲ! ಪ್ರತಿಯೊಂದು ಮಗುವೂ ಹುಟ್ಟುತ್ತಲೇ ಬುದ್ಧ! ಬೆಳೆಯುತ್ತಾ ಆ ಮಗು ಸಂಸ್ಕೃತಿಯ ಪ್ರಭಾವ ಮತ್ತು ಒತ್ತಡಗಳಿಗೆ ಸಿಕ್ಕು ‘ಬದ್ಧ’ವಾಗುತ್ತದೆ. ಮತ್ತೆ ಆ ಮಗುವಿನ ಮನಸ್ಸು ಅಥವಾ ಚಿತ್ತಸಮಾಧಾನವನ್ನು ಪಡೆಯುವುದೊಂದು ಸವಾಲ್!

1) ಮನ ಉಂಟೆ ಮರುಳೇ, ಶಿವಯೋಗಿಗೆ ?
ಮತ್ತೊಮ್ಮೆ ಮನಮಗ್ನ ಉಂಟೆ ಶಿವಯೋಗಿಗೆ ?
ಇಲ್ಲದ ಮನವನು ಉಂಟೆಂದು ನುಡಿದು
ಅಡಗಿಸಿದೆನೆಂಬ ಮಾತು ಮನವ ನೆಲೆಮಾಡಿ ತೋರುತ್ತದೆ!
ಗೊಹೇಶ್ವರನನು ಅರಿದ ಶರಣಂಗೆ
ತೋರಲಿಲ್ಲ ಅಡಗಲಿಲ್ಲ ಕೇಳಾ ! ( LB:437)

ಮನೋಮಯ ಅಥವಾ ಮನಮಗ್ನತೆಯ ಮೂಲವಾದ ಮನಸ್ಸಿನ ವಿಸರ್ಜನವನ್ನು ಇಲ್ಲಿ ಗಮನಿಸಬೇಕು. ಸ್ವೀಯ ಮತ್ತು ಪರಕೀಯ ಎಂಬ ಭೇದವಿಲ್ಲದೆ, ಅಲ್ಲಮಪ್ರಭು ಹೇಳುವ ವಿಸರ್ಜನ ಶಕ್ತಿಯನ್ನು ಗ್ರಹಿಸಬೇಕು:

2) ಮಠವೇಕೋ ? ಪರ್ವತವೇಕೋ ?
ಜನವೇಕೋ ? ನಿರ್ಜನವೇಕೋ ?
ಚಿತ್ತ ಸಮಾಧಾನವುಳ್ಳ ಶರಣಂಗೆ ?
ಮತ್ತೆ ಹೊರಗಣ ಚಿಂತೆ – ಧ್ಯಾನ – ಮೌನ – ಜಪ – ತಪವೇಕೋ ತನ್ನ ತಾನರಿದ ಶರಣಂಗೆ
ಗುಹೇಶ್ವರ? (LB:468)

ಪಂಚವಿಧ ಕೋಶಗಳಲ್ಲಿ ನಿಲ್ಲದೆ, ಚಿತ್ತ ಸಮಾಧಾನಿಯಾಗಿ ಸಲ್ಲುವ ಬಗೆ ಎಲ್ಲಕ್ಕಿಂತ ಮಿಗಿಲಾದುದು! ಮನೋಮಯ ಸ್ಥಿತಿಯನ್ನು ಮನಸ್ಸು ಎಂದೂ, ಮನೋಲಯ ಗತಿಯನ್ನು ಚಿತ್ತದ ಬಯಲು / ಚಿತ್ತ ಸಮಾಧಾನ ಎಂದೂ ಗುರುತಿಸುವ ಮನೋಧರ್ಮವಿಲ್ಲಿದೆ:

3) ಅರಿವಿನ ನಿರಿಗೆಗಾಣದೆ,
ಗಿರಿಯ ಕೋಡುಗಲ್ಲ ಮೇಲೆ ತಲೆಯೂರಿ ತಪಸ್ಸು ಮಾಡಿದಡಿಲ್ಲ!
ಇಲ್ಲದ ಕಾಲಕ್ಕಿಲ್ಲ! ಗಾತ್ರವ ದಂಡಿಸಿದಡಿಲ್ಲ!
ಪೃಥ್ವಿಯ ತಿರುಗಿದಡಿಲ್ಲ! ತೀರ್ಥಂಗಳ ಮಿಂದು,
ನಿತ್ಯ ನಿಯಮಂಗಳ ಮಾಡಿ,
ಜಪಸಮಾಧಿಯಲ್ಲಿ ನಿಂದಡಿಲ್ಲ!
“ಪೂಜಾಕೋಟಿ ಸಮಂ ಸ್ತೋತ್ರಂ।
ಸ್ತೋತ್ರಕೋಟಿ ಸಮಂ ಜಪಂ।
ಜಪಕೋಟಿ ಸಮಂ ಧ್ಯಾನಂ।
ಧ್ಯಾನಕೋಟಿರ್ಮನೋಲಯಂ॥”
– ಎಂದುದಾಗಿ ಸುತ್ತಿ ಸುಳಿವ ಮನವ ಚಿತ್ತದಲ್ಲಿರಿಸಿ
ಚಿತ್ತ ಬಯಲಾದಡೆ ನಿತ್ಯ ಪ್ರಕಾಶ!
ಗುಹೇಶ್ವರ ಲಿಂಗವ ಮತ್ತರಸಲುಂಟೆ? (LB:464)

ಅರಿವಿನ ನಿರಿಗೆಗಳನ್ನು (=ಪದರುಗಳು) ಕಾಣದೆ, ಎಷ್ಟು ಅಲೆದಾಡಿದರೇನು ಫಲ? ಕಾಲವು ಮಾನವನಿರ್ಮಿತವಾದದ್ದು! ಇಂಥ ಕಾಲವೇ ಇಲ್ಲ! ದೇಹದಂಡನೆಯೂ ವ್ಯರ್ಥ! “ಮನವ ಚಿತ್ತದಲ್ಲಿರಿಸಿ” ಎಂಬ ಮಾತು ಜ್ಯೋತಿರ್ಲಿಂಗ! ಮನಸ್ಸು ಮತ್ತು ಚಿತ್ತ ಎಂಬ ನುಡಿಗಳನ್ನು ಬೇರೆ ಬೇರೆ ಅರ್ಥದಲ್ಲಿ ನೋಡಬೇಕು! ಪಂಚವಿಧ ಕೋಶಗಳಲ್ಲಿ ಒಂದಾದ ಮನಸ್ಸು ಲಯವಾಗಬೇಕು ಎಂಬ ದೃಷ್ಟಿ ಇಲ್ಲಿದೆ:

“ಕೋಟಿವಿಧವಾದ ಪೂಜೆಗಳಿಗೆ ಒಂದು ಸ್ತೋತ್ರ ಸಮ! ಕೋಟಿವಿಧವಾದ ಸ್ತೋತ್ರಗಳಿಗೆ ಒಂದು ಜಪ ಸಮ! ಕೋಟಿವಿಧವಾದ ಜಪಗಳಿಗೆ ಒಂದು ಧ್ಯಾನ ಸಮ! ಕೋಟಿವಿಧವಾದ ಧ್ಯಾನಗಳಿಗೆ ಮನೋಲಯ ಸಮ!” ಎಂಬ ಕ್ರಮಾಗತ ವಿಸರ್ಜನ ಪ್ರಕ್ರಿಯೆ ಗಮನಾರ್ಹ! ಚಂಚಲವಾದ ಮನಸ್ಸನ್ನು ದೃಢವಾದ ಚಿತ್ತದಲ್ಲಿರಿಸಿ, ಚಿತ್ತ ಬಯಲಾಗಬೇಕು! ಎಂಬ ಪ್ರತಿಪಾದನೆಯನ್ನು ಗಮನಿಸಿ. ನಿತ್ಯಪ್ರಕಾಶ ನಾವಾದಾಗ ಗುಹೇಶ್ವರನನ್ನು ಹುಡುಕುತ್ತಾ ಅಲೆಯುವುದು ಬೇಕಿಲ್ಲ ಎಂಬುದು ಇಲ್ಲಿನ ಒಲವು ನಿಲುವು!

4) ಅಂಗ – ಅನಂಗವೆಂಬೆರಡೂ ಅಳಿದು
ನಿಜದಲ್ಲಿ ನಿಂದ ಲಿಂಗೈಕ್ಯನ
ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ!
ಮನೋಲಯವಾಗಿಪ್ಪ ನಿಜಲಿಂಗೈಕ್ಯನ
ಅನುಭಾವವೆಲ್ಲವೂ ಜ್ಞಾನ! ನಷ್ಟಶಬ್ದ ನೋಡಾ!
ತನ್ನಲ್ಲಿ ತಾನು ತದ್ಗತನಾಗಿಪ್ಪ ಶಿವಯೋಗಿಗೆ
ಭಿನ್ನವಿಲ್ಲ ನೋಡಾ, ಗೊಹೇಶ್ವರ ಸಾಕ್ಷಿಯಾಗಿ! ( LB:431)

ಅಂಗ = ಶರೀರ, ಅನಂಗ = ರತಿಭಾವ ಎಂಬ ಇವೆರಡೂ ಬದುಕಿದ್ದಂತೆಯೇ ಅಳಿಯಬೇಕು. ಯಾವುದು ನಿಜವೋ ಅದರಲ್ಲಿ ನಿಲ್ಲಬೇಕು. ಲಿಂಗೈಕ್ಯ ಅಥವಾ ಗಣೈಕ್ಯನಾಗುವುದೇ ಬಹು ಮುಖ್ಯ! ಆಗ ಅಂಗದ ಕ್ರಿಯಾ ಸಮಸ್ತವೂ ಲಿಂಗದ ಅಥವಾ ಗಣದ ಕ್ರಿಯೆಗಳೇ ಆಗುತ್ತವೆ. “ನಾವೆಲ್ಲರೂ ಒಂದೇ” ಎಂಬ ಬುಡಕಟ್ಟು ಸಮಾಜದ ಗಣಾದರ್ಶಕ್ಕೆ ಬದ್ಧರಾದ ಶರಣ ಮನೋಧರ್ಮವಿಲ್ಲಿದೆ. ನನ್ನದು ಅಥವಾ ನಿನ್ನದು (=ಅಹಂಕಾರ + ತಸ್ಮಕಾರ) ಎಂಬ ಮನೋಲಯವನ್ನಿಲ್ಲಿ ಪರಿಭಾವಿಸಬೇಕು. ಇಂಥ ಸಿದ್ಧಿಯಲ್ಲಿ ಅನುಭಾವವೆಲ್ಲವೂ ‘ಜ್ಞಾನ’ವೆನಿಸುತ್ತದೆ. ಇದೇ ‘ನಷ್ಟಶಬ್ದ’ ನೋಡಿರಿ! ನಿಶ್ಚಿಂತೆಯಿಂದ ನಿರಾಳವಾಗಿ ತನ್ನಲ್ಲಿ ತಾನು ತದ್ಗತನಾಗಿದ್ದರೆ, ಭಿನ್ನಭೇದಕ್ಕೆಡೆಯಿಲ್ಲ! ಇಂಥವರೇ ಶಿವಯೋಗಿಗಳು!

5) ಘನವ ಕಂಡು ಮನವು ಗ್ರಹಿಸಿತ್ತು!
ಕಂಡು ಕಂಡು ಮನ ಮಹಾಘನವಾಯಿತ್ತು!
ತತ್ತಲ್ಲೀಯವಾಗಿತ್ತು!
ತದುಗತವಾಯಿತ್ತು!
ಶಬ್ದಮುಗ್ಧವಾದುದನು ಏನೆಂಬೆ ಗೊಹೇಶ್ವರ? (LB:458)

ಮನೋಮಯಕ್ಕೆ ಬದಲು ಮನೋಲಯತೆ ಹೇಳುತ್ತಿರುವ ಈ ವಚನದಲ್ಲಿ ತತ್ತಲ್ಲೀಯ / ತದುಗತ ಎಂಬುದು ಮನೋಲಯವನ್ನೇ ಹೇಳುತ್ತದೆ. ಇದರ ಪರಿಣಾಮ ಫಲವೇ ‘ಶಬ್ದಮುಗ್ಧ’ವಾದುದು! ಇದು ಮೇಲ್ಕಂಡ ‘ನಷ್ಟಶಬ್ದ’ದ ಪರ್ಯಾಯ ಪದ. Do nothing, Be nothing, Think nothing ಎಂಬ ಮಸನೊಬು ಪುಕೋಕಾ (ಜಪಾನಿನ ಕೃಷಿಸಂತ) ಮನೋಧರ್ಮವಿದು! ಈ ದೃಷ್ಟಿಯಿಂದ ಮುಂದಿನ ವಚನ ಪರಿಭಾವಿಸಿ:

6) ಬಿತ್ತದೆ ಬೆಳೆಯದೆ ತುಂಬಿದ ರಾಸಿಯ ಕಂಡಲ್ಲಿ ಸುಖಿಯಾಗಿ ನಿಂದವರಾರೋ!?
ಇದ ಹೇಳಲು ಬಾರದು! ಗೊಗೇಶ್ವರ,
ನಿಮ್ಮ ಶರಣನು ಲಚ್ಚಣವಳಿಯದೆ ರಾಸಿಯನಳೆದನು! (LB:393)

ಸಾಧನ ಸಂಪನ್ನತೆಯಿಲ್ಲದೆ ‘ಸಾಧ್ಯ’ವಾದಂಥ ಮತ್ತು ಲಕ್ಷಣ ಸಂಪನ್ನತೆಯಿಲ್ಲದೆ ‘ಲಕ್ಷ್ಯ’ಸಿದ್ಧಿ ಆದಂಥ ಬಗೆಯನ್ನಿಲ್ಲಿ ಮನಗಾಣಬೇಕು! ಕೃಷಿಕ್ಷೇತ್ರದಲ್ಲಿಂದು ಉಳುವ ಟ್ರ್ಯಾಕ್ಟರ್ ನಿಂದ ಹಿಡಿದು ಕುಯ್ಲು ಮಾಡಲು, ಒಕ್ಕಲು, ಹರಗಲು ಪ್ರತಿಯೊಂದಕ್ಕೂ ಬೃಹತ್ ಯಂತ್ರಗಳೇ ಬಂದು ಕೃಷಿಜ್ಞಾನವೇ (=ಆತ್ಮ ಜ್ಞಾನವೇ) ನಾಶವಾಗುತ್ತಿದೆ. ನಿಜರೈತರು (=ನಿಜಶರಣರು) ಮೂಲೆಗುಂಪಾಗಿ, ಮಧ್ಯವರ್ತಿಗಳೇ (=ಏಜೆನ್ಸಿಗಳೇ) ಆಕ್ರಮಣ ಮಾಡಿ ಮೆರೆಯುತ್ತಿದ್ದಾರೆ. ಆದ್ದರಿಂದ, ಇಂಥ ಯಾವೊಂದೂ ಸಾಧನ ಸಂಪತ್ತು ಮತ್ತು ಲಕ್ಷಣ ಸಂಪತ್ತು ಇಲ್ಲದೆ, ಶೂನ್ಯಕೃಷಿಯ (=ಶೂನ್ಯಸಂಪಾದನೆಯ) ಮೂಲಕ ತುಂಬಿದ ರಾಶಿಯನ್ನು ಪಡೆಯುತ್ತಿರುವ ಬಗೆ ಇಲ್ಲಿದೆ. ಆಧ್ಯಾತ್ಮ ಕ್ಷೇತ್ರದ ಸಾಧನ ಸಂಪತ್ತು ಯಾವುದೆಂದರೆ, ತಪಸ್ಸು, ನೇಮ, ಶೀಲ, ಭಾಷೆ ಎಂಬ ಚತುರ್ವಿಧ ಯೋಗ! ಆದರೆ ಗುಹೇಶ್ವರನ ಶರಣರಿಗೆ ಇವುಗಳ ಹಂಗಿಲ್ಲ!

7) ತಪವೆಂಬುದು ತಗಹು! (=ತಡೆ )
ನೇಮವೆಂಬುದು ಬಂಧನ!
ಶೀಲವೆಂಬುದು ಸೂತಕ!
ಭಾಷೆಯೆಂಬುದು ಪ್ರಾಣಘಾತಕ!
ಇಂತೀ ಚತುರ್ವಿಧದೊಳಗಿಲ್ಲ ಗುಹೇಶ್ವರ!
ನಿಮ್ಮ ಶರಣರಗ್ರಗಣ್ಯರು! (LB:338)

ಚತುರ್ವಿಧ ಸಾಧನ ಮತ್ತು ಪಂಚವಿಧ ಕೋಶಗಳಿಂದ ಪಾರಾದ ಶರಣರು ತುಂಬಿದ ಫಲಾನುಭವಿಗಳು ಮತ್ತು ಅಗ್ರಗಣ್ಯರು! ವಸ್ತು (Matter) ಮತ್ತು ಚೈತನ್ಯ (Mind) ಅವಿಭಾಜ್ಯವಾಗಿದ್ದು ಭವಬಂಧನಕ್ಕೆ ಹೇತು ಎಂದು ಗ್ರಹಿಸಿದ್ದು ಶರಣರ ಅಗ್ಗಳಿಕೆಯೇ ಹೌದು!

8) ಮಣಿಯನೆಣಿಸಿ ಕಾಲವ ಕಳೆಯಬೇಡ!
ಕಣಿಯ ಪೂಜಿಸಿ ಕಾಲವ ಕಳೆಯಬೇಡ!
ಕ್ಷಣವಾದಡೆಯೂ ಆಗಲಿ! ನಿಜದ ನೆನಹೇ ಸಾಕು!
ಕ್ಷಣಾರ್ಧವಾದಡೆಯೂ ಆಗಲಿ! ನಿಜದ ನೆನಹೇ ಸಾಕು!
ಬೆಂಕಿಯೊಳಗುಳ್ಳ ಗುಣ ಬಿಸಿನೀರಲುಂಟೇ ?
ಗುಹೇಶ್ವರ! (LB: 402)

ಜಪಮಣಿ, ಗಣಿಗಾರಿಕೆಯ ಕಣಿಪೂಜೆ (ಕಣಿ=ಕಲ್ಲು) ಇತ್ಯಾದಿಗಳೆಲ್ಲಾ ಬರಿಯ ಕಾಲಹರಣ! ಸುಳ್ಳುಸೃಷ್ಟಿಗಳನ್ನು ಇಡೀ ಜೀವಮಾನ ಪೂಜಿಸಿದರೇನು ಫಲ? ಒಂದು ಕ್ಷಣವಾಗಲಿ! ಅಥವಾ ಕ್ಷಣಾರ್ಧವಾಗಲಿ! ನಿಜದ ಜೊತೆಯಿದ್ದರೆ ಸಾಕು! ಬೆಂಕಿಯೊಳಗೆ ಇರುವ ಗುಣ ಬಿಸಿನೀರಿಗೆಲ್ಲಿ ಸಾಧ್ಯ? ಬೆಂಕಿಯು ಒರಿಜಿನಲ್! ನಿಸರ್ಗಸಹಜ! ಬಿಸಿನೀರು ಡೂಪ್ಲಿಕೇಟ್! ಮಾನವನಿರ್ಮಿತ! ಶರಣರು ಸದಾ ಬೆಂಕಿಯಾಗಿರಬೇಕು!

9) ತನು ಉಂಟೆಂದರೆ ಪಾಶಬದ್ಧ!
ಮನ ಉಂಟೆಂದರೆ ಭವಕ್ಕೆ ಬೀಜ!
ಅರಿವ ನುಡಿದು ಕೆಟ್ಟೆನೆಂದರೆ ಅಜ್ಞಾನ!
ಭಾವದಲ್ಲಿ ಸಿಲುಕಿದೆನೆಂಬ ಮಾತು
ಬಯಲ ಭ್ರಮೆ ನೋಡಾ!
ಒಮ್ಮೆ ಕಂಡೆನೊಮ್ಮೆ ಕಾಣೆ,
ಒಮ್ಮೆ ಕೂಡಿದೆನೊಮ್ಮೆಯಗಲಿದೆನೆಂದರೆ
ಕರ್ಮ ಬೆಂಬತ್ತಿ ಬಿಡದು!
ನಿನ್ನೊಳಗೆ ನೀ ತಿಳಿದು ನೋಡಲು ಭಿನ್ನ ಉಂಟೆ?
ಗೊಹೇಶ್ವರ ಲಿಂಗವನರಿವಡೆ
ನೀನೆಂದೆ ತಿಳಿದು ನೋಡಾ! (LB: 425)

ತನು ಮನ ಅರಿವು ಭಾವ ಮುಂತಾದ ಭವಬಂಧನಗಳ ಸ್ಪಷ್ಟನೆ ಈ ವಚನದಲ್ಲಿದೆ. ಮನೋಲಯದಿಂದ ನಿನ್ನೊಳಗೆ ನೀನು ತಿಳಿದು ನೋಡಬೇಕಾದ ತತ್ವವಿದು! ಎಲ್ಲಾ ವಿಧವಾದ ಭವಬಂಧನಗಳಿಂದ ಮುಕ್ತವಾದ ಮನೋಧರ್ಮವನ್ನು ಇಲ್ಲಿ ಪರಿಭಾವಿಸಿ:

10) ವಸುಧೆಯಿಲ್ಲದ ಬೆಳಸು!
ರಾಜಾನ್ನದ ಹೆಸರಿಲ್ಲದ ಓಗರ!
ವೃಷಭ ಮುಟ್ಟದ ಹಯನುವ,
ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆ!
ಶಿಶು ಕಂಡ ಕನಸಿನಂತೆ
ಗುಹೇಶ್ವರನೆಂಬುದು ಹೆಸರಿಲ್ಲದ ಬಯಲು! (LB: 323)

ಕ್ಷೇತ್ರವಿಲ್ಲದ ಬೆಳೆ, ರಾಜಮುಡಿ (=ಕೆಂಪಕ್ಕಿ) ಇಲ್ಲದ ಓಗರ, ಹೋರಿ ಹತ್ತದ ಹಯನು ಕರೆದ ಹಾಲಿನಿಂದ ತೆಗೆದ ಬೆಣ್ಣೆ ಇವನ್ನು ಹವಣಿಸುವವರು ಯಾರೂ ಇಲ್ಲ! ಆದರೆ ನಾನಳಿದು ಇವನ್ನು ಕಂಡಿದ್ದೇನೆ, ಉಂಡಿದ್ದೇನೆ! ಸಾಧನ ಸಂಪತ್ತಿಲ್ಲದ ಸಾಧ್ಯತೆಯನ್ನು ಈ ವಚನವೂ ಹೇಳುತ್ತಿದೆ. ನಷ್ಟಶಬ್ದವಾದ, ಶಬ್ದಮುಗ್ಧವಾದ ಮನೋಧರ್ಮವನ್ನು ಹೇಳಲು ಅಲ್ಲಮಪ್ರಭು ಬಳಸಿರುವ ಮಾತು ಜ್ಯೋತಿರ್ಲಿಂಗವಾಗಿದೆ: “ಶಿಶು ಕಂಡ ಕನಸು”! ಇದು ಯಾವುದೇ “ಹೆಸರಿಲ್ಲದ ಬಯಲು”!

11) ನಡೆ ನುಡಿಯಿಲ್ಲದ ಗುರುವ ಕಂಡು
ಉಪದೇಶವ ಪಡೆಯಲೆಂದು ಹೋದರೆ,
ಒಡನೆ ನುಡಿಯ! ನುಡಿಸಿದರೆ ಕೇಳ!
ಕಡೆ ಮೊದಲ ಕಾರ್ಯವೆಂತಪ್ಪುದೋ ಅಯ್ಯ?
ಮೂಗರ ಮೂಗರ ಪ್ರಸಂಗದಂತೆ
ಇದೆ ಎನ್ನೊಳಗೆ ಅರಿವಿನ ಪರಿಮಳ!
ಹೊರಗೆ ನೋಡಿದರೆ ಮುಗ್ಧವಾಯಿತ್ತು!
ಇದನೆಂತು ಉಪಮಿಸುವೆ ಅನಿಯಮದ ಬೆಡಗ?
ಇದು ತನ್ನಿಂದ ತಾನಪ್ಪುದಲ್ಲದೆ ಭಿನ್ನದಲುಂಟೇ?
ಗೊಹೇಶ್ವರ! (LB: 421)

ಶಿಶು ಕಂಡ ಕನಸು ಮತ್ತು ಮೂಗರ ಮೂಗರ ಪ್ರಸಂಗ ಸಮಾನದೇಹಿಕಲ್ಪದ ನುಡಿಗಡಣ. ಸಾಧನಸಂಪತ್ತಿಲ್ಲದೆ ಸಾಧ್ಯವಾದ ಬಗೆಯನ್ನು “ಅನಿಯಮದ ಬೆಡಗು”ಎಂದು ಹೇಳಲಾಗಿದೆ. ಯಾವುದೇ ನೇಮ ನಿಯಮಗಳ ಹಂಗಿಲ್ಲದೆ “ಈಗಳೆ ಸಾಧ್ಯ” (LB: 467) ಮಾಡಿಕೊಳ್ಳುವ ಬಗೆ ನಿಜಶರಣರಲ್ಲಿದೆ:

12) ಪುಣ್ಯವುಳ್ಳ ಕಾಲಕ್ಕೆ
ಪಾಷಾಣ ಪರುಷವಪ್ಪುದು ನೋಡಾ!
ಮಣ್ಣು ಹೊನ್ನಪ್ಪುದು!
ಮುನ್ನ ಮುನ್ನವೆ ಅಚ್ಚೊತ್ತಿದ ಭಾಗ್ಯವೆನ್ನ
ಕಣ್ಣ ಮುಂದೆ ಕಾಣ ಬಂದಿತ್ತು ನೋಡಾ!
ಮಣ್ಣ ಮರೆಯ ದೇಗುಲದೊಳಗೊಂದು
ಮಾಣಿಕ್ಯವ ಕಂಡ ಬಳಿಕ
ಇನ್ನು ಮುನ್ನಿನಂತಪ್ಪುದೇ ಗುಹೇಶ್ವರ? (LB: 420)

ಈ ವಚನದಲ್ಲಿರುವ ರೂಪಾಂತರ ತತ್ವವನ್ನು (=Metamorphosis) ಇಲ್ಲಿ ತಿಳಿಯಬೇಕು. ಪಾಷಾಣದ ಶಿಲೆ ಪರುಷವಾಗುವಂತೆ, ಮಣ್ಣು ಹೊನ್ನಾಗಿ ಪರಿವರ್ತನೆಯಾಗುವಂತೆ, ತನ್ನ ತಾನು ತಿಳಿದು ಮಾಣಿಕ್ಯವೆ ತಾನಾದ ಪರಿಯು ಇಲ್ಲಿದೆ. ಇಂಥದೊಂದು ಪರಿವರ್ತನೆ ಸಾಧ್ಯವಾದ ಮೇಲೆ ಇನ್ನು ಮೊದಲಿನಂತೆ ಇರಲಾಗುವುದೇ? ಎಂಬ ಪ್ರಶ್ನೆಯಲ್ಲಿ ಹೂವಿಂದ ಹೂವಿಗೆ ಹಾರುವ ಚಿಟ್ಟೆಯಾದ ಮೇಲೆ, ಅದು ಮೊದಲಿನಂತೆ ಕಂಬಳಿ ಹುಳುವಾಗಿ ತೆವಳಬಲ್ಲುದೇ? ಎಂಬ ಒಳಪ್ರಶ್ನೆಯಿದೆ.

ಪರಿವರ್ತನೆಯ ಮಹಾನ್ ಹರಿಕಾರ ಈ ಅಲ್ಲಮಪ್ರಭು! ಪ್ರತಿಯೊಂದು ಜೀವಿಯಲ್ಲಿ ನಿಸರ್ಗಸಹಜವಾದ ವಿವೇಕದ ಉದಯ ಮತ್ತು ಸುಳ್ಳುಸೃಷ್ಟಿಗಳಿಂದ ಬಿಡುಗಡೆ ಅಲ್ಲಮರ ವಚನಗಳ ತಿರುಳಾಗಿದೆ.

Previous post ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
Next post ಹಾಯ್ಕುಗಳು
ಹಾಯ್ಕುಗಳು

Related Posts

ಕೊಂಡಗುಳಿ ಕೇಶಿರಾಜ ಮತ್ತು…
Share:
Articles

ಕೊಂಡಗುಳಿ ಕೇಶಿರಾಜ ಮತ್ತು…

April 6, 2020 ಡಾ. ಎನ್.ಜಿ ಮಹಾದೇವಪ್ಪ
ಕಲ್ಯಾಣವನ್ನು ಆಳಿದವರಲ್ಲಿ ಆರನೆಯ ವಿಕ್ರಮಾದಿತ್ಯ ಅಥವಾ ಪೆರ್ಮಾಡಿಗೆ (1076-1126) ಕೊಂಡುಗುಳಿ ಕೇಶಿರಾಜ ಎಂಬ ಮಂತ್ರಿ, ಲಕ್ಷ್ಮೀದೇವಿ ಎಂಬ ಹೆಂಡತಿ, ತೆಲುಗು ಜೊಮ್ಮಯ್ಯ ಎಂಬ...
ಬಸವಣ್ಣವರ ಆಶಯಗಳು
Share:
Articles

ಬಸವಣ್ಣವರ ಆಶಯಗಳು

July 4, 2021 ಡಾ. ಎನ್.ಜಿ ಮಹಾದೇವಪ್ಪ
ಹೋರಾಟ ಬಸವಣ್ಣನವರ ಇನ್ನೊಂದು ಹೆಸರು. ಅವರ ಹೋರಾಟ ಒಬ್ಬ ವ್ಯಕ್ತಿಯ ವಿರುದ್ಧ ಅಲ್ಲ, ಒಂದು ಜಾತಿಯ ಅಥವಾ ಕೋಮಿನ ವಿರುದ್ಧ ಅಲ್ಲ; ವ್ಯಕ್ತಿಯ ವಿರುದ್ಧವಾಗಲಿ ಒಂದು ಕೋಮಿನ...

Comments 13

  1. VIJAYAKUMAR KAMMAR
    Nov 10, 2022 Reply

    ಉತ್ತಮ ಲೇಖನಗಳು.
    ನಂಗಲಿ ಸರ್ ಅವರ ಲೇಖನ ಹೊಸ ಚಿಂತನೆಗೆ ಹಚ್ಚುತ್ತದೆ.🙏🙏

  2. ಗಿರಿಮಲ್ಲಪ್ಪ, ಗಂಗಾವತಿ
    Nov 14, 2022 Reply

    ಮನಸ್ಸು ಲಯವಾದಾಗಲೇ ಅದು ಶಬ್ದಮುಗ್ಧವಾಗುವುದು!! ಚಂಚಲತೆ ಇದ್ದಲ್ಲಿ ಮಾತಿನ ಆರ್ಭಟ! ಜ್ಞಾನದ ಪ್ರದರ್ಶನ! ಅಲ್ಲಮಪ್ರಭುದೇವರ ವಚನಗಳನ್ನು ಓದುವುದೆಂದರೆ ಅನುಭಾವದ ದರ್ಶನ ಪಡೆದಂತೆ, ವಂದನೆಗಳು ಸರ್.

  3. Suresh M
    Nov 17, 2022 Reply

    I want to say that this post is awesome, great written and come with hitherto unknown information. Thank you.

  4. ಶಿವರುದ್ರಪ್ಪ, ಬೆಂಗಳೂರು
    Nov 20, 2022 Reply

    ಪಂಚವಿಧ ಕೋಶಗಳ ವಿವರಣೆ ಚೆನ್ನಾಗಿದೆ, ಆದರೆ ಅವೂ ಭವಬಂಧನಗಳೇ ಎನ್ನುವ ಮಾತನ್ನು ಒಪ್ಪಲಾಗದು, ದೇಹ ಇರುವ ತನಕ ಅದರ ಅಗತ್ಯಗಳು ಬೇಕೇ ಬೇಕಾಗುತ್ತವೆ. ನೀರು, ಗಾಳಿ, ಬೆಳಕುಗಳುಗಳನ್ನೂ ಬಂಧನಗಳೆಂದು ಶರಣರು ಕರೆದದ್ದನ್ನು ಎಲ್ಲೂ ನಾನು ನೋಡಿಲ್ಲಾ.

  5. ಹನುಮಂತಪ್ಪ ವಾಳೇಕರ್
    Nov 20, 2022 Reply

    ಚಿತ್ತಸಮಾಧಾನಿಯಾಗಿದ್ದ ಶರಣರ ವಚನಗಳು ಇಹಕ್ಕೂ, ಪರಕ್ಕೂ ಮಾರ್ಗದರ್ಶನ ನೀಡುತ್ತವೆ. ವಚನಗಳೊಳಗೆ ಪ್ರವೇಶ ಮಾಡಲು, ಅವುಗಳ ಆಂತರ್ಯವನ್ನು ತಿಳಿಯಲು ಇಂತಹ ಲೇಖನಗಳು ದಾರಿದೀಪವಾಗುತ್ತವೆ. ಒಂದೆಳೆ ಹಿಡಿದು ವಚನಗಳನ್ನು ವಿಧವಿಧವಾಗಿ ನೋಡುವ ಸಾಧ್ಯತೆ ಇದೆ ಎನ್ನುವುದಕ್ಕೆ ಶರಣ ಚಂದ್ರಶೇಕರ ನಂಗಲಿಯವರ ಪ್ರಸ್ತುತ ಲೇಖನವೇ ಸಾಕ್ಷಿ.

  6. madhukeshwar Chintamani
    Nov 20, 2022 Reply

    ಮನೋಮಯ ಸ್ಥಿತಿಯನ್ನು ಮನಸ್ಸು ಎಂದೂ, ಮನೋಲಯ ಗತಿಯನ್ನು ಚಿತ್ತದ ಬಯಲು / ಚಿತ್ತ ಸಮಾಧಾನ ಎಂದೂ ಗುರುತಿಸುವ ಬಗೆಯನ್ನು ಸಂಕ್ಷಿಪ್ತ ಮಾತುಗಳಲ್ಲಿ ತಿಳಿಸಿದ್ದೀರಿ. ಮತ್ತಷ್ಟು ವಿವರಣೆ ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಸರ್, ಶರಣು ಶರಣಾರ್ಥಿಗಳು.

  7. ಸುನಿತಾ ಮೂರಶಿಳ್ಳಿ
    Nov 21, 2022 Reply

    ಮನ ಬಯಲಾಗುವಿಕೆಯ ಶರಣ ಗಮ್ಯದ ವಿಭಿನ್ನ ಮುಖಗಳ ಮೇಲೆ ಬೆಳಕು ಚೆಲ್ಲುವ ಅತ್ಯಂತ ವಿಶಿಷ್ಟ ವಾದ ನಂಗಲಿ ಸರ್ ಅವರ ಲೇಖನ ಮನವನ್ನು ಆವರಿಸಿತು. ವಂದನೆಗಳು ಸರ್

  8. nagesh B.N
    Nov 23, 2022 Reply

    ಅನಿಯಮದ ಬೆಡಗು ಎಂದರೆ ಏನೆಂದು ಸರಿಯಾಗಿ ಗೊತ್ತಾಗಲಿಲ್ಲಾ…. ತನ್ನಿಂದ ತಾನಪ್ಪುವುದು ಅನಿಯಮದ ಬೆಡಗು ಎನ್ನುವ ಸೂಚನೆ ಸಿಗುತ್ತದೆ. ಸರ್, ಈ ಇಡೀ ವಚನದ ವಿವರಣೆ ತುಂಬಾ ಆಳವಾಗಿದೆ ಎಂದು ತೋರುತ್ತದೆ, ಇದನ್ನ ವಿವರವಾಗಿ ನಮಗೆ ತಿಳಿಯುವಂತೆ ಹೇಳುವಿರಾ? ಬೆಡಗಿನ ವಚನಗಳಿಗೆ ಸರಳಾರ್ಥ ಕೊಡುವುದು ಕಷ್ಟದ ಕೆಲಸವೆಂದು ಬಲ್ಲೆ, ಆದರೆ ತಾವು ಅಂತಹ ಕೆಲಸಕ್ಕೆ ಕೈ ಹಾಕಿದ್ದೀರಿ, ಮುಂದುವರಿಸುವಿರೆಂದು ನಂಬಿದ್ದೇನೆ.

  9. ಶಿವಶರಣಪ್ಪ ಮಡಿವಾಳರ್
    Nov 24, 2022 Reply

    ಲೇಖನ ಬಹಳ ಸೊಗಸಾಗಿದೆ. ಅಂಗ – ಅನಂಗವೆಂಬೆರಡೂ ಅಳಿದು… ವಚನದ ನಿರ್ವಚನ ಓದಿ ಆಶ್ಚರ್ಯವಾಯಿತು. ಶಬ್ದನಷ್ಟ- ಎನ್ನುವ ವಿನೂತನ ಪದಪ್ರಯೋಗವು ತನ್ನಲ್ಲಿ ಇಟ್ಟುಕೊಂಡಿರುವ ಆಳ ಅರ್ಥವನ್ನು ತಿಳಿಸಿದ್ದಕ್ಕೆ ಶರಣರಾದ ಚಂದ್ರಶೇಖರ ನಂಗಲಿಯವರಿಗೆ ಭಕ್ತಿಪೂರ್ವಕ ವಂದನೆಗಳು.

  10. Jayakumar P.S
    Nov 25, 2022 Reply

    ಮನೋಮಯದಿಂದ ಮನೋಲಯದತ್ತ ಶರಣರ ಪಯಣ ಸಾಗಿತ್ತು ಎನ್ನುವುದನ್ನು ಅಲ್ಲಮಪ್ರಭುದೇವರು ನೂರಾರು ವಚನಗಳಲ್ಲಿ ಬಗೆಬಗೆಯಾಗಿ ಹೇಳಿದ್ದಾರೆ. ನೀವು ಆಯ್ದುಕೊಂಡ ವಚನಗಳಲ್ಲಿ ಉದ್ದಕ್ಕೂ ಈ ಸೂಚನೆಗಳು ಢಾಳವಾಗಿ ಇರುವುದನ್ನು ಗುರುತಿಸಲು ಸಾಧ್ಯವಾಗಿದ್ದು ನಿಮ್ಮ ವ್ಯಾಖ್ಯಾನದ ಬಲದಿಂದ. ಉತ್ತಮ, ಮಾರ್ಗದರ್ಶಿ ಲೇಖನ.

  11. Veeraswamy Nakote
    Nov 25, 2022 Reply

    I am at work browsing your blog from my new apple iphone! Just wanted to say I love reading your blog and look forward to all your posts! Keep up the outstanding work!

  12. ಬಸವರಾಜ ಹಂಡಿ
    Nov 25, 2022 Reply

    ಈ ಲೇಖನ ಬಹಳ ಚೆನ್ನಾಗಿ ಮತ್ತು ಅರ್ಥವತ್ತಾಗಿ ಮೂಡಿ ಬಂದಿದೆ.
    ಸುಮ್ಮನೆ ಶಬ್ದಗಳ ಮುಖಾಂತರ ಓದಿದರೆ ಸಾಲದು.
    ಶಬ್ದಗಳೇ ನಮ್ಮ ಮನಸ್ಸಿನಲ್ಲಿ ಕಲ್ಪನೆಗಳು ಉಂಟು ಮಾಡುತ್ತವೆ. ಕಲ್ಪನೆಗಳಿಂದ ಭಾವ ಉಂಟಾಗುತ್ತದೆ. ಇಷ್ಟು ಆದರೆ ಮುಗೀತು ನಾವು ಇಲ್ಲದ ಮನಸ್ಸಿನಲ್ಲಿ ಮುಳುಗಿ ಹೋಗುತ್ತವೆ. ಕಲ್ಪನೆಗಳ/ಭಾವನೆಗಳ ಸರಪಳಿ ಉಂಟಾಗಿ ಈ ಸರಪಳಿನಲ್ಲಿ ನಾವು ಬಂಧನಕ್ಕೆ ಈಡಾಗುತ್ತವೆ.
    ನೋಡಿ ಅಲ್ಲಮಪ್ರಭು ಶರಣರು ಇದನ್ನೆ ಹೇಳುತ್ತಿದ್ದಾರೆ.
    ನಾವು ಇಷ್ಟಲಿಂಗ ನೋಡುವ ಮುಖಾಂತರ ನಮ್ಮ ಮನಸ್ಸಿನಲ್ಲಿ ಉಂಟಾಗುವ ಕಲ್ಪನೆಗಳನ್ನು ಮತ್ತು ಭಾವಗಳನ್ನು ಹೊಡೆದು ಹಾಕಬೇಕು. ಇಷ್ಟಲಿಂಗಕ್ಕೆ ಆಕಾರ ಇರುವದರಿಂದ ಇಷ್ಟಲಿಂಗ ಇದೆ ಅಂತ ನಿಶ್ಚಿತವಾಗಿ ಹೇಳಬಹುದು. ಆದರೆ ನಮ್ಮ ಕಲ್ಪನೆಗಳಿಗೆ ಮತ್ತು ಭಾವನಗಳಿಗೆ ಮತ್ತು ಇವುಗಳ ತಂದೆ/ತಾಯಿಯಾದ ಆಶೆ( ಅಸ್ತಿತ್ವ ಆಹಂಕಾರ) ಕ್ಕೆ ಯಾವ ಆಕಾರ ಇಲ್ಲ ಆದ್ದರಿಂದ ಇವುಗಳು ಇಲ್ಲ. ಯಾವುದು ಇಲ್ಲವು ಅದನ್ನು ನಮ್ಮ ಮೇಲೆ ಯಾವ ಪರಿಣಾಮ ಉಂಟು ಮಾಡಬಾರದು.
    ವಚನಗಳ ಆಯ್ಕೆ ಬಹಳ ಅದ್ಭುತವಾಗಿದೆ ಮತ್ತು ಬಹಳ ಪರಿಣಾಮ ಉಂಟು ಮಾಡುತ್ತದೆ.
    ಚಂದ್ರಶೇಖರ ನಂಗಲಿ ಶರಣರಗೆ ಮತ್ತು ಬಯಲು ತಂಡಕ್ಕೆ ದನ್ಯವಾದಗಳು. ಶರಣು ಶರಣಾರ್ಥಿ ಗಳು.

  13. Prasanna Basavaraj Hosur
    Nov 26, 2022 Reply

    ಡಾ. ಚಂದ್ರಶೇಖರ ನಂಗಲಿ ಶರಣರೇ
    #ಮನ ಉಂಟೇ ಮರುಳೇ, ಶಿವಯೋಗಿಗೆ?? ಬ್ಯೂಟಿಫುಲ್ ಆರ್ಟಿಕಲ್ 👌👌 *ಅಲ್ಲಮ ಪ್ರಭುದೇವರ ವಚನಗಳು ಬೆಡಗಿನ ವಚನಗಳು, ಅದನ್ನ ಎಷ್ಟು ಸಲ ಓದಿದರೂ ಓದಬೇಕು ಅನಿಸುತದೆ, ಅರ್ಥ ಮಾಡಿಕೊಳಲು ಕಷ್ಟವಾದರೂ ನೀವು ತುಂಬಾ ಸುಲಭವಾಗಿ ವಚನಗಳನು ಚನ್ನಾಗಿ study ಮಾಡಿ ಬರದಿದಿರಿ. ನಿಮ್ಮ ಪಾದಕ್ಕೆ ಅನಂತ ಕೋಟಿ ಕೋಟಿ ಶರಣು ಶರಣಾರ್ಥಿಗಳು.
    (“ಬಸವಾದಿ ಶರಣರು ದಿವ್ಯ ಪರಂಪರೆಯವರು” ) ಈ topic ಮೇಲೆ ಸಾಧ್ಯ ವಾದರೆ ಒಂದು ಆರ್ಟಿಕಲ್ ಮಾಡಿ ಶರಣರೇ.. 😄

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಾತು ಮಾಯೆ
ಮಾತು ಮಾಯೆ
July 4, 2021
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
Copyright © 2023 Bayalu