Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನುಷ್ಯತ್ವ ಮರೆಯಾಗದಿರಲಿ
Share:
Articles August 6, 2022 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮನುಷ್ಯತ್ವ ಮರೆಯಾಗದಿರಲಿ

ಮನುಷ್ಯನ ಪರಮೋದ್ದೇಶ ಇತರರಿಗೆ ತನ್ನಿಂದಾದಷ್ಟು ಒಳಿತು ಮಾಡುವುದು. ಇದು ಅನುಭಾವಿಗಳ, ಹಿರಿಯರ ಅಭಿಪ್ರಾಯ. ನೀನು ಇನ್ನೊಬ್ಬರಿಗೆ ಉಪಕಾರ ಮಾಡದಿದ್ದರೂ ಉಪದ್ರ ನೀಡಬೇಡ ಎನ್ನುವ ಅನುಭವೋಕ್ತಿಯೂ ಇದೆ. ಪ್ರಸ್ತುತ ದಿನಮಾನಗಳಲ್ಲಿ ಮತ್ತೊಬ್ಬರಿಗೆ ಕಿರುಕುಳ ಕೊಡುತ್ತ ಕೇಡು ಬಯಸುವುದೇ ತಮ್ಮ ಬದುಕಿನ ಸಾರ್ಥಕತೆ ಎಂದು ಭಾವಿಸಿರುವವರೂ ಇದ್ದಾರೆ. ಅಂತೆಯೇ ಎಲೆಮರೆಯ ಕಾಯಂತಿದ್ದು ಒಳಿತಿನ ಕಾರ್ಯಗಳನ್ನು ಮಾಡುವವರೂ ನಮ್ಮ ನಡುವೆ ಇದ್ದಾರೆ. ಅವರು ಯಾರ ಹೊಗಳಿಕೆ, ತೆಗಳಿಕೆಗೂ ಪಕ್ಕಾಗುವುದಿಲ್ಲ. ತಾವಾಯಿತು, ತಮ್ಮ ಕಾಯಕವಾಯಿತು ಎನ್ನುವಂತೆ ಇದ್ದುಬಿಡುತ್ತಾರೆ. ಹಮ್ಮು, ಬಿಮ್ಮು ಅವರ ಬಳಿ ಸುಳಿಯುವುದಿಲ್ಲ. ಅವರಿಗೆ `ಕಾಯಕವೆ ಕೈಲಾಸ’ ಎನ್ನುವ ತತ್ವ ಗೊತ್ತಿಲ್ಲದಿದ್ದರೂ ಕಾಯಕದಲ್ಲೇ ಪರಮಾನಂದ ಕಾಣುವ ಗುಣ ಅವರದು. ಅಂಥವರ ಸಂಖ್ಯೆ ಹೆಚ್ಚಾದಾಗ ಮನೆ, ಮಠ, ಊರು, ನಾಡಿನ ಚಿತ್ರಣವೇ ಬದಲಾಗುವುದು. ಈ ಭೂಮಿಯ ಮೇಲೆ ಯಾರೇನು ಸಾವಿರಾರು ವರ್ಷ ದೈಹಿಕವಾಗಿ ಬದುಕುವುದಿಲ್ಲ. ಹುಟ್ಟಿದವರಿಗೆಲ್ಲ ಸಾವು ಕಟ್ಟಿಟ್ಟದ್ದೇ. ಸಾವಿನ ಮುಂದೆ ಬಡವ, ಶ್ರೀಮಂತ, ಅಧಿಕಾರಿ, ಮಂತ್ರಿ, ಗುರು, ಜಗದ್ಗುರು, ವ್ಯಾಪಾರಿ, ಕೃಷಿಕ, ಕೂಲಿಕಾರ ಎನ್ನುವ ಅಂತರವಿಲ್ಲ. ಪ್ರತಿಯೊಬ್ಬರೂ ಒಂದಿಲ್ಲೊಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಹಾಗೆ ಹೋಗುವ ಮುನ್ನ ಏನನ್ನು ಬಿಟ್ಟು ಹೋಗಬೇಕು ಎನ್ನುವ ಅರಿವಿರಬೇಕು. ಬಿಟ್ಟುಹೋಗಬೇಕಾದ್ದು ವ್ಯಕ್ತಿ ಗಳಿಸಿದ ಸಂಪತ್ತು, ಭೂಮಿ, ಮನೆ, ವಾಹನ ಇತ್ಯಾದಿ ಬಾಹ್ಯ ವಸ್ತುಗಳನ್ನಲ್ಲ; ಬದಲಾಗಿ ಎಷ್ಟು ಜನರ ನೋವು ನಿವಾರಿಸಿದ, ಎಷ್ಟು ಜನರಿಗೆ ಆದರ್ಶ ಪಥ ತೋರಿಸಿದ, ಎಷ್ಟು ಜನರ ಕಣ್ಣೀರು ಒರೆಸಿದ, ಏನೆಲ್ಲ ಸಮಾಜಮುಖಿ ಕಾರ್ಯಗಳನ್ನು ಮಾಡಿದ ಎನ್ನುವುದನ್ನು. ಅವುಗಳ ಮೂಲಕ ಆತ ಸತ್ತರೂ ಬದುಕಲು ಸಾಧ್ಯ.

ಎಷ್ಟೋ ಜನರು ಇದ್ದಾಗಲೇ ಸತ್ತಂತಿರುತ್ತಾರೆ. ಅಂಥವರು ಸತ್ತು ಬದುಕುವುದೆಂತು? ಇದ್ದಾಗಲೇ ಸತ್ತಂತಿರುವುದು ಎಂದರೆ ಏನೊಂದೂ ಆದರ್ಶ ಕಾರ್ಯಗಳನ್ನು ಮಾಡದೆ ಮತ್ತೊಬ್ಬರಿಗೆ ತೊಂದರೆ ಕೊಡುವುದರಲ್ಲೇ ಕಾಲ ಕಳೆದರೆ ಇಲ್ಲವೇ ಕೇವಲ ಉಂಡುಟ್ಟು ಜಡಜೀವಿಯಾಗಿ ಬಾಳಿದರೆ ಅವನು ಬದುಕಿದ್ದರೂ ಸತ್ತಂತೆ. ಕೆಲವರು ತಾವು ಸಾಯಲೇಬಾರದು ಎಂದು ಏನೆಲ್ಲ ಸಾಹಸ ಮಾಡುವರು. ತಮಗೆ ಸಾವೇ ಇಲ್ಲ ಎಂದು ಭ್ರಮಿಸುವರು. ಏನಾದರೂ ಕಾಯಿಲೆ ಬಂದರೆ ಅಯ್ಯೋ ದೇವರೇ ನನ್ನನ್ನು ಉಳಿಸು. ಇಷ್ಟೆಲ್ಲ ಸಂಪಾದನೆ ಮಾಡಿ ಸುಖವಾಗಿರುವ ಕಾಲದಲ್ಲಿ ಸಾವು ಬಂದರೆ ಗತಿ ಏನು ಎಂದು ಕೊರಗುವರು. ಕಂಡ ಕಂಡ ದೇವರಿಗೆ ಹರಕೆ ಕಟ್ಟಿಕೊಳ್ಳುವರು. ಅಂಥವರಿಗೆ ಲದ್ದೆಯ ಸೋಮಣ್ಣನವರು ಹೇಳುವುದು:

ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ?

ಮನುಷ್ಯನಿಗೆ ಮುಖ್ಯವಾದುದು ಕಾಯಕ ಶ್ರದ್ಧೆ. ಕಾಯಕದಲ್ಲಿ ಶ್ರೇಷ್ಟ, ಕನಿಷ್ಟ ಎಂದಿಲ್ಲ, ಇರಬಾರದು. ಕಾಯಕ ಯಾವುದೇ ಆಗಿದ್ದರೂ ಅದು ತನ್ನದೇ ಎನ್ನುವ ಪ್ರೀತಿ, ಶ್ರದ್ಧೆಯಿಂದ ಮಾಡಬೇಕು. ಆಗ ಕಾಯಕ ಮಾಡುವವನಿಗೂ ಆನಂದ, ಅದರ ಪ್ರಯೋಜನ ಪಡೆಯುವವರಿಗೂ ಸಂತೋಷ. ಅಬ್ದುಲ್ ಕಲಾಂ ಅವರ ಬದುಕಿನ ವಿಧಾನ ಗಮನಾರ್ಹ. ಅವರು ಒಮ್ಮೆ ಮಕ್ಕಳ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣದಿಂದ ತಡವಾಗಿ ಹೋಗುತ್ತಾರೆ. ಅವರಿಗೆ ತೋರಿಸಲೆಂದೇ ಮಕ್ಕಳು ಒಂದು ಸಾಂಸ್ಕೃತಿಕ ಕಾರ್ಯಕ್ರಮದ ವ್ಯವಸ್ಥೆ ಮಾಡಿಕೊಂಡಿದ್ದರೂ ಕಲಾಂ ಅವರು ಬರುವುದು ತಡವಾಗುತ್ತದೆ ಎಂದು ಸಂಘಟಕರು ಸಾಂಸ್ಕೃತಿಕ ಕಾರ್ಯಕ್ರಮ ಮುಂದೂಡಿರುತ್ತಾರೆ. ಸಾಮಾನ್ಯವಾಗಿ ಕಲಾಂ ಅವರು ಪ್ರಸಾದ ಸ್ವೀಕರಿಸುವ ಸಮಯ ಮದ್ಯಾಹ್ನ ಒಂದುಗಂಟೆ. ಇನ್ನೂ ವೇಳೆ ಇದ್ದುದರಿಂದ ಮಕ್ಕಳ ಕಾರ್ಯಕ್ರಮಕ್ಕೆ ಅವಕಾಶ ನೀಡುವರು. ಇದು ಅವರ ಸರಳತೆಗೆ ಮತ್ತು ಮಕ್ಕಳ ಮೇಲಿನ ಪ್ರೀತಿಗೆ ಹಿಡಿದ ಕನ್ನಡಿ. ಸರಳತೆ ಎಂದರೆ ಮತ್ತೊಬ್ಬರ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳುವುದು. ಅವರು ದೇಶದ ಪ್ರಥಮ ಪ್ರಜೆ ಅಂದರೆ ರಾಷ್ಟ್ರಪತಿಯಾಗಿದ್ದಾಗಲೂ ಸರಳತೆಯನ್ನು ಬಿಟ್ಟುಕೊಟ್ಟವರಲ್ಲ. ನಮ್ಮ ಕಾರ್ಯಕ್ರಮವನ್ನು ರಾಷ್ಟ್ರಪತಿಗಳು ನೋಡಲಿಲ್ಲವಲ್ಲ ಎನ್ನುವ ನೋವು ಮಕ್ಕಳಿಗೆ ಕಾಣಿಸಿಕೊಳ್ಳಬಾರದು ಎನ್ನುವ ದೂರದೃಷ್ಟಿ ಅವರದು. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನ ಪಾದವಿರಬೇಕಾದ್ದು ನೆಲದ ಮೇಲೇ ಎನ್ನುವ ಅರಿವಿದ್ದವರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಎಷ್ಟೋ ಜನರು ಸ್ವಲ್ಪ ಸಾಧನೆ ಮಾಡಿದರೆ, ಏನಾದರೊಂದು ಅಧಿಕಾರ ಪಡೆದರೆ, ಸ್ವಲ್ಪ ಸಂಪತ್ತು ಹೆಚ್ಚಾದರೆ ಆಕಾಶದಲ್ಲಿ ತೇಲಾಡುವರು. ಅಂಥವರಿಗೆ ಡಾ. ಅಬ್ದುಲ್ ಕಲಾಂನಂಥವರು ಆದರ್ಶವಾಗಬೇಕು. ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರೂ ಅವನಲ್ಲಿ ಪ್ರಾಮಾಣಿಕತೆ, ಜನಪರ ಕಾಳಜಿ, ಸತ್ಯಸಂಧತೆ ಇಲ್ಲವಾದರೆ ಅವನ ವಿದ್ಯೆ, ಅಧಿಕಾರಕ್ಕೆ ಬೆಲೆ ಇರುವುದಿಲ್ಲ. ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ನೀಡಬಹುದು.

ಸರ್ ಎಂ ವಿಶ್ವೇಶ್ವರಯ್ಯವರು ಈ ನಾಡು ಕಂಡ ಅಪರೂಪದ ಎಂಜಿನಿಯರ್. ಅವರು ತಮ್ಮ ಅಧಿಕಾರವನ್ನು ಎಂದೂ ದುರುಪಯೋಗ ಮಾಡಿಕೊಂಡವರಲ್ಲ ಎನ್ನುವ ಪ್ರತೀತಿ ಇದೆ. ಅವರ ಕಾಲದಲ್ಲಿ ಇಂದಿನಂತೆ ವಿದ್ಯುತ್ ಇರಲಿಲ್ಲ. ಮೇಣದ ಬತ್ತಿಯ ಬೆಳಕಿನಲ್ಲಿ ಕತ್ತಲೆಯನ್ನು ದೂರ ಮಾಡಿಕೊಳ್ಳಬೇಕಿತ್ತು. ರಾತ್ರಿ ಸರ್ಕಾರಿ ಕೆಲಸ ಮಾಡುವಾಗ ಒಂದು ಮೇಣದ ಬತ್ತಿ ಬಳಸುತ್ತಿದ್ದರಂತೆ. ತಮ್ಮ ಸ್ವಂತ ಕೆಲಸ ಇದ್ದಾಗ ಆ ಮೇಣದ ಬತ್ತಿಯನ್ನು ಆರಿಸಿ ಮತ್ತೊಂದು ಮೇಣದ ಬತ್ತಿಯನ್ನು ಬೆಳಗಿಸುತ್ತಿದ್ದರಂತೆ. ಯಾಕೆ ಆ ಮೇಣದ ಬತ್ತಿ ಆರಿಸಿ ಮತ್ತೊಂದು ಮೇಣದ ಬತ್ತಿಯನ್ನು ಬೆಳಗಿಸಿದಿರಿ ಎಂದು ಅವರ ಒಡನಾಡಿ ಕೇಳಿದಾಗ ಸರ್ಕಾರ ಕೊಟ್ಟಿರುವ ಮೇಣದಬತ್ತಿ ಸರಕಾರಿ ಕೆಲಸಕ್ಕೆ ಮಾತ್ರ ಬಳಕೆ ಆಗಬೇಕು. ನನ್ನ ಸ್ವಂತ ಕೆಲಸಕ್ಕೆ ಅದು ಬಳಕೆ ಆಗಬಾರದು ಎಂದರಂತೆ. ನನ್ನ ಗಳಿಕೆಯ ಹಣದಿಂದ ಕೊಂಡ ಮೇಣದ ಬತ್ತಿಯನ್ನು ಬಳಸುವುದು ಧರ್ಮ ಎನ್ನುವ ಅವರ ಪ್ರಜ್ಞೆ ಇಂದು ನಮ್ಮ ರಾಜಕೀಯ ನೇತಾರರಿಗೆ, ಅಧಿಕಾರಿಗಳಿಗೆ ಬಂದಿದ್ದರೆ ಈ ನಾಡಿನಲ್ಲಿ ಬಡತನಕ್ಕೆ ಇಂಬಿರುತ್ತಿರಲಿಲ್ಲ. ಪ್ರಗತಿಪರ ಕೆಲಸ ಕಾರ್ಯಗಳಿಗೆ ಸಂಪತ್ತಿನ ಕೊರತೆ ಆಗುತ್ತಿರಲಿಲ್ಲ. ಇದೇ ಅಭಿಪ್ರಾಯ ಬಸವಣ್ಣನವರದೂ ಹೌದು. ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಸರಕಾರಿ ಅಧಿಕಾರಿಗಳಾಗಿದ್ದವರು. ಅವರು ಒಂದು ಊರಲ್ಲಿ ಬಿಡಾರ ಮಾಡಿದಾಗ ಒಬ್ಬ ರೈತ ಅವರಿಗೆ ದಿನನಿತ್ಯ ಹಾಲನ್ನು ತಂದುಕೊಡುತ್ತಾನೆ. ತಿಂಗಳ ನಂತರ ರೈತನಿಗೆ ಹಾಲಿನ ಹಣ ಕೊಡಲು ಮುಂದಾದರೆ ಆತ ಸ್ವೀಕರಿಸಲು ಸಿದ್ಧನಿಲ್ಲ. ನನಗೆ ಹಣ ಬೇಡ ಎನ್ನುವನು. ಸರ್ಕಾರ ಹಾಲಿಗಾಗಿ ನನಗೆ ಹಣ ಕೊಡುತ್ತದೆ. ಆದ್ದರಿಂದ ನೀನು ಹಣ ತೆಗೆದುಕೊಳ್ಳಲೇಬೇಕು ಎನ್ನುವರು. ಅದಕ್ಕೆ ರೈತನ ಉತ್ತರ: ಹಾಲನ್ನು ಹಣಕ್ಕಾಗಿ ನಮ್ಮೂರಲ್ಲಿ ಯಾರೂ ಮಾರುವುದಿಲ್ಲ ಎನ್ನುವುದು. ಈ ಹಣವನ್ನು ನಿನ್ನ ಸ್ವಂತಕ್ಕೆ ಬಳಸದಿದ್ದರೆ ಸಮಾಜದ ಸತ್ಕಾರ್ಯಕ್ಕೆ ಕೊಡು ಎನ್ನುವರು. ಇಲ್ಲಿ ರೈತ ಮತ್ತು ಅಧಿಕಾರಿ ಇಬ್ಬರ ವ್ಯಕ್ತಿತ್ವ ಎಂತಹುದೆಂಬುದನ್ನು ಮನಗಾಣಬಹುದು.

ಮನುಷ್ಯ ಜ್ಞಾನ ಗಳಿಸುವಷ್ಟೇ ಮುಖ್ಯವಾದುದು ವ್ಯಕ್ತಿತ್ವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು. ವ್ಯಕ್ತಿತ್ವಕ್ಕೆ ಚ್ಯುತಿ ಬರುವಂತಹ ಕಾರ್ಯಗಳನ್ನು ಮಾಡುತ್ತಿದ್ದರೆ ಅವನು ಎಷ್ಟೇ ವಿದ್ಯಾವಂತನಾಗಿದ್ದರೂ ಆತ ರಾವಣ ಇಲ್ಲವೇ ದುರ್ಯೋಧನ ಆಗುವನು. ಮನುಷ್ಯ ತನ್ನಲ್ಲಿರುವ ಅಧಿಕಾರ, ಬುದ್ಧಿ, ಸಂಪತ್ತನ್ನು ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಸಮಾಜದ ಒಳಿತಿನ ಕಾರ್ಯಗಳಿಗೆ ಸದ್ವಿನಿಯೋಗ ಮಾಡಬೇಕು ಎನ್ನುವುದು ಮುಖ್ಯ. ಬಹುತೇಕ ಜನರಿಗೆ ತಮ್ಮ ತಂದೆ, ತಾತನ ಹೆಸರು ಮಾತ್ರ ಗೊತ್ತು. ಅಜ್ಜನ ಅಪ್ಪ, ಅಜ್ಜನ ಅಜ್ಜ ಯಾರೆಂದರೆ ಯಾರಿಗೂ ಗೊತ್ತಿಲ್ಲ. ಒಂದೇ ವಂಶದವರಾದರೂ ಆ ವಂಶದ ಹಿಂದಿನ ಪೀಳಿಗೆಯ ಅರಿವಿಲ್ಲ. ಆದರೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇಂಥವರ ಹೆಸರು ಎಲ್ಲರಿಗೂ ಗೊತ್ತು. ಅವರೇನೂ ನಮ್ಮ ವಂಶಜರಲ್ಲ. ಆದರೂ ಅವರ ಹೆಸರು ನೆನಪಿನಲ್ಲಿರಲು ಕಾರಣ ಅವರು ಏನೆಲ್ಲ ಸಾಧನೆ ಮಾಡಿದ್ದು. ಅದೂ ಸ್ವಾರ್ಥಕ್ಕಾಗಿ ಅಲ್ಲ; ಸಮಾಜಕ್ಕಾಗಿ. ಅದರಿಂದಾಗಿಯೇ ಅವರು ಇಂದಿಗೂ ಸ್ಮರಣೀಯರಾಗಿದ್ದಾರೆ. ಹಾಗಾಗಿ ಮನುಷ್ಯ ವಿದ್ಯೆ, ಅಧಿಕಾರ, ಸಂಪತ್ತು ಪಡೆದರೆ ಸಾಲದು. ಅವುಗಳ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಬೇರೆಯವರ ಏಳ್ಗೆಗಾಗಿ ಗಂಧದ ಕೊರಡಿನಂತೆ ತೇದುಕೊಳ್ಳಬೇಕು.

ಎರಡು ಮೂರು ವರ್ಷಗಳ ಹಿಂದೆ ಬೆಂಗಳೂರಿನ ಡಾ. ಶ್ರೀಕಂಠ ಎನ್ನುವ ವೈದ್ಯರು ಸಾಣೇಹಳ್ಳಿಯಲ್ಲಿ ಒಂದು ಅಪರೂಪದ ಆರೋಗ್ಯ ಶಿಬಿರ ಏರ್ಪಡಿಸಿದ್ದರು. ಅದು ಮಗುವಾಗಿದ್ದಾಗಲೇ ಸಕ್ಕರೆ ಕಾಯಿಲೆಗೆ ತುತ್ತಾದ ಮಕ್ಕಳಿಗೆ ಚಿಕಿತ್ಸೆ ಕೊಡುವುದು. ನೂರಾರು ಮಕ್ಕಳು ಆ ಶಿಬಿರದಲ್ಲಿ ಭಾಗಿಯಾಗಿದ್ದರು. ಅವರು ವಾಸಿಯಾಗದ ಸಕ್ಕರೆ ಕಾಯಿಲೆಗೆ ತುತ್ತಾದವರು. ಅವರಿಗೆ ಪ್ರತಿದಿನ ಚುಚ್ಚುಮದ್ದು ನೀಡಲೇಬೇಕು. ಹಗಲು ರಾತ್ರಿ ಎನ್ನದೆ ಆ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡಬೇಕು. ಡಾ. ಶ್ರೀಕಂಠ ಅವರಾಗಲಿ, ಅವರೊಂದಿಗೆ ಸಹಾಯಕರಾಗಿ ಬಂದವರಾಗಲಿ ಆ ಮಕ್ಕಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚು ಕಾಳಜಿ ಮತ್ತು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದರು. ಆಗಾಗ ಅವರಿಗೆ ಬ್ರೆಡ್ ಕೊಡುತ್ತಿದ್ದರು. ಅವರ ಆರೋಗ್ಯ ತಪಾಷಣೆ ಮಾಡುತ್ತಿದ್ದರು. ಅಷ್ಟೇ ಅಲ್ಲ; ಮಕ್ಕಳ ಜೊತೆಯಲ್ಲೇ ಮಲಗುತ್ತಿದ್ದರು. ತಾವು ಪಡೆದ ಜ್ಞಾನವನ್ನು ಈ ರೀತಿಯ ಪರೋಪಕಾರಕ್ಕಾಗಿ ಬಳಸುತ್ತಿದ್ದರು. ಇಂತಹ ಪರೋಪಕಾರದ ಕೆಲಸ ಮಾಡಿದಾಗಲೇ ಮನುಷ್ಯತ್ವಕ್ಕೆ ಬೆಲೆ, ನೆಲೆ, ಭವ್ಯತೆ.

ಡಾ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದಾಗಿನ ಮತ್ತೊಂದು ಘಟನೆ ರೋಮಾಂಚನ ನೀಡುವಂತಹುದು. ಅವರಿಗೆ ಪತ್ರಿಕೆಯವರು ನಿಮ್ಮ ಬದುಕಿನಲ್ಲಿ ಅತ್ಯಂತ ಸಂತೋಷದ ಕ್ಷಣ ಯಾವುದು ಎಂದು ಕೇಳುವರು. ಬೇರೆಯವರಾಗಿದ್ದರೆ ಏನೇನು ಹೇಳುತ್ತಿದ್ದರೆಂದು ಊಹಿಸಿಬಿಡಬಹುದು. ಅದರಂತೆ ನಾನು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಎಂದು ಹೇಳಬಹುದೇನೋ ಎಂದು ಪತ್ರಿಕೆಯವರು ಭಾವಿಸಿದ್ದರೆ ಕಲಾಂ ಅವರು ಹೇಳಿದ್ದೇ ಬೇರೆ. ಅವರೊಬ್ಬ ಬಾಹ್ಯಾಕಾಶ ವಿಜ್ಞಾನಿ. ರಾಷ್ಟ್ರಪತಿಯಾಗುವ ಮುನ್ನ ಅವರೊಂದು ಅಂಗವಿಕಲ ಮಕ್ಕಳ ಶಾಲೆಗೆ ಭೇಟಿ ಕೊಟ್ಟಿರುತ್ತಾರೆ. ಕಾಲಿಲ್ಲದವರಿಗೆ ಕೃತಕ ಕಾಲಿನ ವಿತರಣೆಯ ಕಾರ್ಯಕ್ರಮ ಅದು. ತುಂಬಾ ಭಾರವಾಗಿದ್ದ ಆ ಕೃತಕ ಕಾಲಿನಿಂದ ನಡೆಯುವಾಗ ಮಕ್ಕಳು ಸಾಕಷ್ಟು ವೇದನೆ ಅನುಭವಿಸುತ್ತಿದ್ದುದು ಅವರ ಗಮನಕ್ಕೆ ಬರುತ್ತದೆ. ಕಾರ್ಯಕ್ರಮ ಮುಗಿಸಿಕೊಂಡು ಬಂದಾಗ ಅವರು ತುಂಬಾ ಚಿಂತಾಕ್ರಾಂತರಾಗಿರುತ್ತಾರೆ. ಏಕೆ ಎಂದು ಕೇಳಿದಾಗ ಆ ಮಕ್ಕಳು ಅಷ್ಟೊಂದು ಭಾರವಾದ ಕಾಲುಗಳನ್ನು ಜೋಡಿಸಿಕೊಂಡು ನಡೆಯಲು ಸಂಕಟಪಡುತ್ತಾರೆ. ಭಾರವಾಗದ ಕಾಲುಗಳನ್ನೇಕೆ ಮಾಡಬಾರದು ಎನ್ನುವ ಚಿಂತೆ ಕಾಡುತ್ತದೆ ಎನ್ನುವರು. ತಡಮಾಡದೆ ಬಾಹ್ಯಾಕಾಶ ಯಂತ್ರಗಳಿಗೆ ಬಳಸುವ ತುಂಬಾ ಹಗುರವಾದ ಒಂದು ಲೋಹದಿಂದ ಕೃತಕ ಕಾಲುಗಳನ್ನು ತಯಾರಿಸುವರು. ಅದರ ಭಾರ ನಗಣ್ಯವಾದುದು. ಮುಂದೆ ಅದೇ ಅಂಗವಿಕಲ ಮಕ್ಕಳ ಶಾಲೆಗೆ ಹೋಗಿ ಆ ಕೃತಕ ಕಾಲುಗಳನ್ನು ಅಂಗವಿಕಲ ಮಕ್ಕಳಿಗೆ ಜೋಡಿಸುವರು. ಅವರು ಖುಷಿಯಿಂದ ನಡೆಯುವುದನ್ನು ಕಂಡಾಗ ಮತ್ತು ಆ ಮಕ್ಕಳ ಮುಖದ ಮೇಲಿನ ಸಂತೋಷದ ಗೆರೆಯನ್ನು ಕಂಡಾಗ ನನ್ನ ಜೀವನ ಸಾರ್ಥಕವಾಯಿತು ಎನ್ನುವರು. ಅದೇ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ ಎಂದು ಭಾವುಕರಾಗಿ ಹೇಳುವರು. ಹೀಗೆ ತಮ್ಮ ಜ್ಞಾನವನ್ನು ಮತ್ತೊಬ್ಬರ ಬದುಕಿನ ಉತ್ಕರ್ಷಕ್ಕಾಗಿ ಸದ್ವಿನಿಯೋಗ ಮಾಡಿದಾಗ ಆ ವ್ಯಕ್ತಿ ಸತ್ತರೂ ಬದುಕುವನು. ಈ ನೆಲೆಯಲ್ಲೇ ಬಸವಣ್ಣನವರು ಹೇಳಿದ್ದು: ಲೇಸೆನಿಸಿಕೊಂಡು ಕೆಲವೇ ಕಾಲ ಬದುಕಿದರೂ ಅದು ಸಾರ್ಥಕ ಜೀವನ ಎಂದು. ಒಬ್ಬ ವ್ಯಕ್ತಿ ಎಷ್ಟು ದೀರ್ಘಕಾಲ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಗಮನಾರ್ಹ ಸಂಗತಿ.

ಇತಿಹಾಸದ ಸಿಂಹಾವಲೋಕನ ಮಾಡಿದಾಗ ನಮಗೆ ಮತ್ತೆ ಮತ್ತೆ ನೆನಪಾಗವಂತಹ ಅನೇಕ ಮಹನೀಯರು ಕಣ್ಮುಂದೆ ಬರುವರು. ಬುದ್ಧ, ಮಹಾವೀರ, ಪೈಗಂಬರ್, ಏಸು, ಬಸವಣ್ಣ, ದಾಸರು; ಇಂಥವರು ಲೋಕಮಾನ್ಯರಾದದ್ದು ಅವರ ಸಂಪತ್ತು, ಅಧಿಕಾರ, ವಿದ್ವತ್ತಿನಿಂದಲ್ಲ. ಅವುಗಳಿಗೆ ಅಂಟಿಕೊಳ್ಳದೆ ಸರಳವಾಗಿ ಬದುಕಿ ಸಾರ್ವಜನಿಕರ ಹಿತವೇ ತಮ್ಮ ಹಿತ ಎಂದು ಭಾವಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ್ದರಿಂದ. ನಮ್ಮ ಹಾಗೂ ಲೆಕ್ಕವಿಲ್ಲದಷ್ಟು ಭಕ್ತರ ಬದುಕಿಗೆ ಬೆಳಕಾಗಿದ್ದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವನ ವಿಧಾನ ಇಂದಿಗೂ ಅವರನ್ನು ಸ್ಮರಿಸಿಕೊಳ್ಳುವಂತೆ ಮಾಡುವುದು. ಶಿಕ್ಷಣ ಪಡೆಯಲು ತಾವು ಅನುಭವಿಸಿದ ವಿಪತ್ತುಗಳನ್ನು ತಮ್ಮ ಭಕ್ತರು ಅನುಭವಿಸಬಾರದು ಎನ್ನುವ ದೂರದೃಷ್ಟಿ ಅವರದಾಗಿತ್ತು. ಅದಕ್ಕಾಗಿ ಊರೂರು ಸುತ್ತಿ ಭಿಕ್ಷೆ ಬೇಡಿ ತರಳಬಾಳು ವಿದ್ಯಾಸಂಸ್ಥೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ- ಕಾಲೇಜು, ಉಚಿತ ಪ್ರಸಾದ ನಿಲಯಗಳನ್ನು ತೆರೆದರು. ಗ್ರಾಮೀಣ ಬಡಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳೆನ್ನದೆ ದುಡಿದರು. ಅಂತಹ ಶಾಲಾ, ಕಾಲೇಜುಗಳಲ್ಲಿ ಓದಿ ತಮ್ಮ ಬದುಕಿಗೆ ಒಂದು ನೆಲೆ ಕಂಡುಕೊಂಡವರು ಗುರುಗಳನ್ನು ನೆನಪಿಸಿಕೊಳ್ಳದ ಕ್ಷಣವೇ ಇಲ್ಲ. ಇದಲ್ಲವೇ ನಿಜವಾದ ಮನುಷ್ಯತ್ವ? ಮನುಷ್ಯತ್ವ ಅರಳುವುದು ಇಲ್ಲವೇ ವಿಕಾರವಾಗುವುದು ಆಯಾ ವ್ಯಕ್ತಿಯ ಮನಸ್ಥಿತಿ, ಕಾರ್ಯವೈಖರಿಯನ್ನು ಅವಲಂಬಿಸಿರುತ್ತದೆ. ಅದಕ್ಕೆ ಬೇಕಾದುದು ಉತ್ತಮರ ಒಡನಾಟ, ತೆರೆದ ಮನಸ್ಸು, ಸಹಾಯ ಮಾಡುವ ಹೃದಯವಂತಿಕೆ. ಎಲ್ಲದಕ್ಕಿಂತ ಮುಖ್ಯವಾಗಿ ಮಾನವೀಯ ಅಂತಃಕರಣ. ಲೋಕ ಮೆಚ್ಚುವ ಕಾರ್ಯಗಳಿಗಿಂತ ಮನ ಮೆಚ್ಚುವ, ಮನದೊಡೆಯ ಮಹಾದೇವ ಮೆಚ್ಚುವ ಸೇವಾ ಕಾರ್ಯಗಳನ್ನು ಮಾಡುವವರು ಎಂದೂ ತಮ್ಮ ಮನುಷ್ಯತ್ವ ಕಳೆದುಕೊಳ್ಳುವುದಿಲ್ಲ.

Previous post ‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
Next post ಆಸರೆ
ಆಸರೆ

Related Posts

ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
Share:
Articles

ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…

October 6, 2020 ಡಾ. ಎಸ್.ಆರ್. ಗುಂಜಾಳ
ಬಸವಣ್ಣನವರ ಕ್ರಾಂತಿಗೆ ಅಂದಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಮುಂತಾದ ಕ್ಷೇತ್ರಗಳಲ್ಲಿ ಉಂಟಾಗಿದ್ದ ಕಲುಷಿತ ಪರಿಸ್ಥಿತಿಯೇ ಕಾರಣ. ಸಾಮಾಜಿಕ ಕ್ಷೇತ್ರದಲ್ಲಿ ಅಸ್ಪೃಶ್ಯರ...
ಹೀಗೊಂದು ತಲಪರಿಗೆ (ಭಾಗ- 3)
Share:
Articles

ಹೀಗೊಂದು ತಲಪರಿಗೆ (ಭಾಗ- 3)

August 8, 2021 ಸ್ಮಶಾನವಾಸಿ
ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣುತ್ತಿದ್ದ ಸ್ಮಶಾನವಾಸಿಯ ಒಂದೊಂದು ಮಾತುಗಳೂ ಅಸಾಮಾನ್ಯವಾಗಿದ್ದವು. ಸಾಧಕ ಜೀವನದಲ್ಲಿ ಅಲೆದಲೆದು ತಾನು ತುಳಿದು ಬಂದ ಹಾದಿಯಲ್ಲಿ ಪಡೆದ...

Comments 9

  1. ಶಿವಯೋಗಿ ರಾಯದುರ್ಗಾ
    Aug 8, 2022 Reply

    ಪೂಜ್ಯರ ಲೇಖನ ನಿಜಕ್ಕೂ ಬಹಳ ಚೆನ್ನಾಗಿದೆ. ಮನುಷ್ಯತ್ವವೇ ಕಾಣೆಯಾಗುತ್ತಿರುವ ಇಂದಿನ ಭಯಾನಕ ದಿನಗಳಲ್ಲಿ ಇಂತಹ ಮಾತುಗಳು ಬೇಕೇ ಬೇಕು. ಶರಣರು ಮನುಷ್ಯತ್ವದ ಸಾಕಾರ ರೂಪ, ಅವರ ವಚನಗಳು ಎಂದೆಂದಿಗೂ ದಾರಿದೀಪ.

  2. Rudresh Pavagada
    Aug 8, 2022 Reply

    ಡಾ.ಅಬ್ದುಲ್ ಕಲಾಂ ಅವರ ಮೇರು ವ್ಯಕ್ತಿತ್ವದ ಒಂದೊಂದು ಘಟನೆಗಳೂ ಆದರ್ಶಮಯವಾಗಿವೆ. ಅವರ ವಿಚಾರಗಳು ಪ್ರತಿಯೊಬ್ಬರನ್ನೂ ಮುಟ್ಟುವಂತೆ ಇವೆ. ಅಂತಹ ಹಿರಿಯ ಚೇತನಗಳು ನಮ್ಮ ಭಾರತ ಪುಣ್ಯಭೂಮಿಯಲ್ಲಿ ಬದುಕಿದ್ದೇ ನಮ್ಮ ಭಾಗ್ಯ.

  3. Virupaksha Chillur
    Aug 10, 2022 Reply

    ಲದ್ದೆಯ ಸೋಮಣ್ಣನವರ ವಚನ: ಆವ ಕಾಯಕವಾದಡೂ ಸ್ವಕಾಯಕವ ಮಾಡಿ… ತುಂಬಾ ಚನ್ನಾಗಿದೆ. ಎಷ್ಟು ವಾಸ್ತವಕ್ಕೆ ಹತ್ತಿರವಾಗಿದೆ! ಜೀವನವನ್ನು ಇದ್ದಂತೆ ನೋಡುವ ಇಂತಹ ವಚನಗಳು ಬದುಕಿಗೆ ಬಹಳ ಅವಶ್ಯವೆನಿಸುತ್ತವೆ.

  4. Susheela J.K
    Aug 16, 2022 Reply

    ಸರಳತೆ ಎಂದರೆ ಮತ್ತೊಬ್ಬರ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳುವುದು- ಸರಳತೆಯ ಈ ವ್ಯಾಖ್ಯಾನ ಬಹಳ ಹೊಸದಾಗಿದೆ ಹಾಗೂ ಆಕರ್ಷಕವಾಗಿದೆ. ಸರಳತೆಯಲ್ಲಿ ಇರುವ ಸೌಂದರ್ಯ ಯಾವುದರಲ್ಲೂ ಇಲ್ಲ! ಬುದ್ಧಿಯವರ ಮಾತುಗಳು ಕಿವಿಹಿಂಡಿ ಸರಿದಾರಿಗೆ ತರುವ ತಾಯಿಯ ಪ್ರಯತ್ನದಂತಿವೆ.

  5. ವಿರೇಶ್ ಬೆಳಗಾವಿ
    Aug 22, 2022 Reply

    ಸಾವಿನ ಮುಂದೆ ಬಡವ, ಶ್ರೀಮಂತ, ಅಧಿಕಾರಿ, ಮಂತ್ರಿ, ಗುರು, ಜಗದ್ಗುರು, ವ್ಯಾಪಾರಿ, ಕೃಷಿಕ, ಕೂಲಿಕಾರ ಎನ್ನುವ ಅಂತರವಿಲ್ಲ. ಪ್ರತಿಯೊಬ್ಬರೂ ಒಂದಿಲ್ಲೊಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಹಾಗೆ ಹೋಗುವ ಮುನ್ನ ಏನನ್ನು ಬಿಟ್ಟು ಹೋಗಬೇಕು ಎನ್ನುವ ಅರಿವಿರಬೇಕು… ಬಹುಶಃ ಈ ಅರಿವಿದ್ದವರಲ್ಲಿ ಮನುಷ್ಯತ್ವ ತಂತಾನೇ ಜಾಗೃತವಾಗುತ್ತದೆ.

  6. ಮಹಾದೇವಪ್ಪ ನಾಶಿ
    Aug 22, 2022 Reply

    ಶರಣರು ದೇವರಿಗಿಂತ ನೀತಿಗಳನ್ನು, ಮನುಷ್ಯತ್ವವನ್ನು ತಮ್ಮ ವಚನಗಳಲ್ಲಿ ಸಾರಿ ಹೋಗಿದ್ದಾರೆ. ಅವರನ್ನು ಅನುಸರಿಸುವುದೆಂದರೆ ಮೊದಲು ಮಾನವರಾಗುವುದು, ನಂತರ ಶರಣರಾಗುವುದು.

  7. Shankar Tumkur
    Aug 22, 2022 Reply

    ಲೇಖನದಲ್ಲಿ ಉಲ್ಲೇಖಿಸಿದ ಸರ್ ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂರಂತಹ ಮಹಾನುಭಾವರ ಜೀವನದ ಸಂಗತಿಗಳು ಎಲ್ಲರ ಬದುಕಿಗೆ ಬೆಳಕಾಗುವಂತಿವೆ. ಗುರುಗಳ ವಿಚಾರಗಳು ಪ್ರಖರವಾಗಿ ಮೂಡಿಬಂದಿವೆ.

  8. ಶಾಂತಮೂರ್ತಿ ಹಡಗಿ
    Aug 24, 2022 Reply

    ಮನುಷ್ಯತ್ವವೇ ಶೂನ್ಯವಾಗಿ ಜಾತೀಯತೆ ಮತ್ತು ಧರ್ಮಾಂಧತೆ ತುಂಬಿತುಳುಕುತ್ತಿರುವ ಈ ಕಾಲದಲ್ಲಿ ಇಂತಹ ಮಾತುಗಳು ಯಾರ ಕಿವಿಯನ್ನು ಮುಟ್ಟುತ್ತವೆ ಗುರುಗಳೇ? ಮಠಗಳು ದರಿದ್ರ ರಾಜಕೀಯದ ಬಿಡಾರಗಳಾಗಿವೆ, ಸ್ವಾಮಿಗಳು ರಾಜಕಾರಣಿಗಳ ಗುಲಾಮರಾಗಿದ್ದಾರೆ. ಭಕ್ತರು ಅವರಿಬ್ಬರ ಕಾಲು ನೆಕ್ಕುವ ಹುಳಗಳಾಗಿದ್ದಾರೆ! ಜಾತಿಯ ಜಗದ್ಗುರುಗಳು ಇರುವ ತನಕ ಮಾನವೀಯತೆಯಂತಹ ಮಾತುಗಳಿಗೆ ಬೆಲೆಯಾದರೂ ಎಲ್ಲಿದೆ ಸ್ವಾಮೀಜಿ?

  9. ಪ್ರವೀಣ್ ಮುದೇನೂರು
    Sep 9, 2022 Reply

    ಹಣ, ಅಧಿಕಾರ, ಶ್ರೀಮಂತಿಕೆಗಳ ಅಬ್ಬರದಲ್ಲಿ ಮನುಷ್ಯತ್ವ ಸಂಪೂರ್ಣ ಕಾಣೆಯಾಗಿದೆ. ಅಭಿವೃದ್ಧಿಯ ಹೆಸರಲ್ಲಿ ದೇಶಗಳು ದಿಕ್ಕು ತಪ್ಪಿದಂತೆ ನಾಗರಿಕತೆಯ ಹೆಸರಲ್ಲಿ ಮನುಷ್ಯರು ದಿಕ್ಕುತಪ್ಪಿದ್ದಾರೆ. ಇಂತಹ ಲೇಖನಗಳು ಜನಸಾಮಾನ್ಯರನ್ನು ಕೊಂಚವಾದರೂ ಎಚ್ಚರಿಸಿದಲ್ಲಿ ಸಮಾಜದ ಬಗ್ಗೆ ಏನಾದರೂ ಒಂದಷ್ಟು ಆಶಾ ಭಾವ ಮೂಡಬಹುದು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ನಾನು… ನನ್ನದು
ನಾನು… ನನ್ನದು
July 4, 2021
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
Copyright © 2023 Bayalu