Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನವೆಂಬ ಸರ್ಪ
Share:
Articles February 7, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮನವೆಂಬ ಸರ್ಪ

ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ?
ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ
ಮನದೊಳಗೆ[ಮನದೊ]ಡೆಯನಿದ್ದಾನೊ, ಇಲ್ಲವೊ?
ಇಲ್ಲ, ಕೂಡಲಸಂಗಮದೇವಾ.

ಎರಡು ಮನೆಗಳ ಪ್ರಸ್ತಾಪ ಇಲ್ಲಿದೆ. ಒಂದು ನಮ್ಮಿಂದ ಹೊರಗೆ ಕಾಣುವ ಮನೆ, ಇನ್ನೊಂದು ನಮ್ಮ ಅಂತರಂಗದ ಮನೆ. ಎರಡೂ ಮನೆಗಳಿಗೆ ಹೋಲಿಕೆ ಇದೆ. ಹೊರಗಿನ ಮನೆ ಮಣ್ಣು, ಇಟ್ಟಿಗೆ, ಸಿಮೆಂಟ್, ಕಲ್ಲು ಇತ್ಯಾದಿಗಳಿಂದ ಕಟ್ಟಿಸಿದ್ದು. ಒಬ್ಬ ಬಹುದಿನಗಳ ನಂತರ ಒಂದು ಊರಿನ ಸಮೀಪ ಬಂದಾಗ ಆ ಊರಿನಲ್ಲಿ ತನ್ನ ಗೆಳೆಯನಿದ್ದುದು ನೆನಪಾಗಿ ಆತನ ಮನೆಯತ್ತ ಹೆಜ್ಜೆ ಹಾಕಿದ. ದೂರದಿಂದಲೇ ಆತನಿಗೆ ಕಂಡದ್ದು ಮನೆಯ ಮುಂದೆ ಹುಲ್ಲು, ಕಸ, ಕಡ್ಡಿ ಇತ್ಯಾದಿ ಕೊಳಕು. ಮನೆಯಲ್ಲಿ ಯಾರಾದರೂ ಇದ್ದಾರೋ ಇಲ್ಲವೋ ಎನ್ನುವ ಅನುಮಾನ. ಆದರೂ ಮನೆಯ ಹತ್ತಿರ ಬಂದಾಗಿದೆ ಎಂದು ಮುಚ್ಚಿರುವ ಕದ ತಳ್ಳುವನು. ಮನೆಯೊಳಗಿನಿಂದ ದುರ್ವಾಸನೆ ಮೂಗಿಗೆ ಅಪ್ಪಳಿಸುವುದು. ಒಳಗಿನಿಂದ ಕಣ್ಣುಕಪ್ಪಡಿಗಳು ಹಾರಿಬರುವವು. ಒಳಗೆಲ್ಲ ಧೂಳು, ಕ್ರಿಮಿಗಳು, ಮತ್ತಿನ್ನೇನೋ! ಅದನ್ನೆಲ್ಲ ಗಮನಿಸಿದಾಗ ಈ ಮನೆಯಲ್ಲಿ ಯಾರೂ ಇದ್ದಂತಿಲ್ಲ ಎನಿಸುವುದು.
ಬಸವಣ್ಣನವರು ಹೊರಗಿನ ಮನೆಯನ್ನು ಒಂದು ರೂಪಕವಾಗಿರಿಸಿಕೊಂಡು ಅಲ್ಲಿಂದ ಮಾನವನ ದೇಹವೆಂಬ ಮನೆಯ ಕಡೆ ತಿರುಗುವರು. ದೇಹವೆಂಬ ಮನೆಯಲ್ಲಿ ಯಜಮಾನ ಇದ್ದರೆ ಮಾತಿನಲ್ಲಿ ಹುಸಿ, ಮನದಲ್ಲಿ ವಿಷಯವಾಸನೆಗಳು ಕಿಂಚಿತ್ತೂ ಇರಬಾರದು. ಬದಲಾಗಿ ಸತ್ಯ, ಸಂತೃಪ್ತಿ ಇದ್ದರೆ ಒಡೆಯ ಇದ್ದಾನೆಂದು ನಂಬಬಹುದು. ಬದಲಾಗಿ ಸುಳ್ಳು, ಮೋಸ, ವಂಚನೆ, ಕಾಮನೆಗಳಂಥ ದುರ್ಗುಣಗಳೇ ತುಂಬಿಕೊಂಡಿದ್ದರೆ ಅಲ್ಲಿ ಯಜಮಾನ ಇಲ್ಲ ಎಂದೇ ಅರ್ಥ. ಅಂತರಂಗದ ಮನೆಯಲ್ಲಿರುವ ಒಡೆಯ ಶಿವ. ಆತ ದೇಹವೆಂಬ ಮನೆಯಲ್ಲಿ ನೆಲೆಗೊಳ್ಳಬೇಕು ಎಂದರೆ ಮನೆ ಸ್ವಚ್ಛವಾಗಿರಬೇಕು. ಪಾರದರ್ಶಕವಾಗಿ ಇರಬೇಕು. ಕೊಳೆ, ಕಸ ತುಂಬಿರಬಾರದು. ಕೊಳೆ, ಕಸ ಕೇವಲ ಹೊರಗೆ ಇರುವಂತಹುದೆಂದು ಭಾವಿಸಬೇಕಾಗಿಲ್ಲ. ದ್ವೇಷ, ಅಸೂಯೆ, ದುರ್ಗುಣ, ವಿಷಯ ವಾಸನೆಗಳು ಸಹ ಕೊಳೆಯೇ. ಇಂಥ ಕೊಳೆ ದೇಹ ಮತ್ತು ಮನಸ್ಸಿನಲ್ಲಿ ಅಡಗಿದ್ದರೆ ಅಲ್ಲಿ ಶಿವ ಇಲ್ಲ ಎಂದೇ ಅರ್ಥ.
ದೇಹವೆಂಬ ಮನೆಯಲ್ಲಿ ಶಿವ ನೆಲೆಗೊಳ್ಳಬೇಕೆನ್ನುವ ಕಾರಣದಿಂದಲೇ ಶರಣರು ವಿಶೇಷ ಒತ್ತು ಕೊಟ್ಟದ್ದು ಇಷ್ಟಲಿಂಗ ಪೂಜೆಗೆ. ಜನರು ದೇವರನ್ನು ಹುಡುಕಿಕೊಂಡು ಮಠ, ಮಂದಿರಗಳಿಗೆ, ತೀರ್ಥಕ್ಷೇತ್ರಗಳಿಗೆ ಹೋಗುವರು. ಅಲ್ಲಿರುವ ದೇವರು ದೇಹ ಎನ್ನುವ ದೇವಾಲಯದಲ್ಲಿ ಇಲ್ಲವೇ ಎನ್ನುವುದು ಶರಣರ ಪ್ರಶ್ನೆ. ಅವರು ದೇವರ ಸ್ವರೂಪವನ್ನು ಎಷ್ಟು ಪರಿಣಾಮಕಾರಿಯಾಗಿ ಹೇಳಿದ್ದಾರೆ ನೋಡಿ:
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ.
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ.
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ.
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಇದೊಂದು ವಚನವನ್ನು ಜನರು ಗಂಭೀರವಾಗಿ ಅರ್ಥೈಸಿಕೊಂಡರೆ, ಅನುಷ್ಠಾನಕ್ಕೆ ತಂದರೆ ಸಾಕು. ದೇವರು ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ. ಆತನಿಲ್ಲದ ತಾಣವೇ ಇಲ್ಲ. ದೇವರ ಗುಣಗಳನ್ನು ಹೇಳುವಾಗ ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣ ಎನ್ನುವರು. ದೇವರು ಎಂದರೇನೇ ಸತ್ಯ. ಆ ಚೇತನಕ್ಕೆ ಅರಿವು ಇದೆ. ಅರಿವಿನ ಮೂಲಕ ಆನಂದ ಅನುಭವಿಸುವುದು. ಅದು ಶಾಶ್ವತ ಚೇತನ. ಅಷ್ಟೇ ಅಲ್ಲ; ಪರಿಪೂರ್ಣ. ಈ ಲಕ್ಷಣಗಳು ನಿತ್ಯ ಜನರು ಪೂಜಿಸುವ ಯಾವುದಾದರೂ ಸ್ಥಾವರ ದೇವರುಗಳಿಗೆ ಇವೆಯೇ? ಗುಡಿಯ ದೇವರು ಜಡವಾದುದು. ಜಡವಾದುದರಿಂದ ಅರಿವಿಲ್ಲ. ಅರಿವಿಲ್ಲ ಎಂದಮೇಲೆ ಆನಂದ ಅನುಭವಿಸಲು ಸಾಧ್ಯವಿಲ್ಲ. ಜಡವಾದುದು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಅದು ಪರಿಪೂರ್ಣವೂ ಅಲ್ಲ. ಇಂತಿರುವಾಗ ಅಂಥ ದೇವರನ್ನು ಪೂಜಿಸುವ ಅಗತ್ಯ ಇದೆಯೇ? ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿ ಹಾಗೂ ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣವಾದ ಶಿವ ಇಷ್ಟಲಿಂಗದ ರೂಪದಲ್ಲಿ ಮಾನವನ ಕರಸ್ಥಲಕ್ಕೆ ಬಂದ ಎನ್ನುವರು ಬಸವಣ್ಣನವರು. ಅವರು ತಮ್ಮ ಮತ್ತೊಂದು ವಚನದಲ್ಲಿ ಹೇಳಿದ್ದು:
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
ದೇವಾಲಯ ಎಂದರೆ ಹೊರಗೆ ಕಾಣುವ ಜಡವಾದ ಕಟ್ಟಡವಲ್ಲ. ಕಾರಣ ಅಲ್ಲಿರುವ ಯಾವ ಪ್ರತಿಮೆಗಳೂ ದೇವರ ಲಕ್ಷಣಗಳನ್ನು ಹೊಂದಿಲ್ಲ. ಮಾನವನ ದೇಹವೇ ನಿಜವಾದ ದೇವಾಲಯ. ಕಾಲುಗಳೇ ದೇವಾಲಯದ ಕಂಬಗಳು. ತಲೆಯೇ ದೇವಾಲಯದ ಬಂಗಾರದ ಕಳಸ. ದೇಹದೊಳಗೆ ಇರುವ ಜೀವಾತ್ಮನೇ ಪರಮಾತ್ಮ. ಈ ಭಾವನೆಯನ್ನು ಗಟ್ಟಿಗೊಳಿಸಿಕೊಳ್ಳಲು ಶ್ರೀಗುರುವಿನಿಂದ ಇಷ್ಟಲಿಂಗದೀಕ್ಷೆ ಪಡೆಯಬೇಕು. ಗುರು ಕರುಣಿಸಿದ ಇಷ್ಟಲಿಂಗವನ್ನು ನಿತ್ಯವೂ ಪೂಜೆ ಮಾಡುತ್ತಿದ್ದರೆ ಶಿವ ದೇಹದೊಳಗೇ ನೆಲೆಸುವನು. ಇಷ್ಟಲಿಂಗಧಾರಿಗಳು ಗುಡಿ, ತೀರ್ಥಕ್ಷೇತ್ರಗಳನ್ನೂ ಹುಡುಕಿಕೊಂಡು ಹೋಗಬೇಕಾಗಿಲ್ಲ. ಆದರೆ ಬಸವಪರಂಪರೆಯಲ್ಲಿ ಬೆಳೆದವರು, ನಮ್ಮದು ಲಿಂಗಾಯತ ಧರ್ಮ ಎಂದು ಎದೆತಟ್ಟಿ ಹೇಳಿಕೊಳ್ಳುವವರು ಅದೆಷ್ಟು ಜನ ಇಷ್ಟಲಿಂಗಧಾರಿಗಳಾಗಿ ಸ್ಥಾವರ ಪೂಜೆಯಿಂದ ದೂರ ಸರಿದಿದ್ದಾರೆ? ದುಶ್ಚಟ, ದುರಭ್ಯಾಸಗಳಿಂದ ಮುಕ್ತರಾಗಿದ್ದಾರೆ? ಹಗಲು ಹೊತ್ತಿನಲ್ಲಿ ಬಹಳ ಜನರು ತಮ್ಮ ವೇಷಭೂಷಣಗಳಿಂದ ತುಂಬಾ ಸುಂದರವಾಗಿ ಕಾಣುವರು. ಆದರೆ ಕತ್ತಲೆ ಆಗುತ್ತಲೇ ಎಲ್ಲಿರುತ್ತಾರೆ? ಅವರ ಸ್ಥಿತಿ ಏನಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಕುಡಿಯಬಾರದ್ದನ್ನು ಕುಡಿದು, ತಿನ್ನಬಾರದ್ದನ್ನು ತಿಂದು, ಮಾಡಬಾರದ್ದನ್ನು ಮಾಡಿದರೆ ಅವರನ್ನು ಲಿಂಗವಂತರೆನ್ನಲು ಸಾಧ್ಯವೇ? ಅವರು ತಮ್ಮ ಧರ್ಮಕ್ಕೆ ಕಂಟಕಪ್ರಾಯರೆಂದೇ ಹೇಳಬೇಕಾಗುತ್ತದೆ. ಅದರಲ್ಲೂ ಚುನಾವಣೆಗಳು ಬಂದ ಸಂದರ್ಭದಲ್ಲಿ ಎಲ್ಲ ರೀತಿಯ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ ರಾತ್ರಿ ಮಾತ್ರವಲ್ಲದೆ ಕೆಲವೊಮ್ಮೆ ಹಗಲೇ ಮದ್ಯದ ಪಾರ್ಟಿಗಳು ನಡೆಯುವವು. ಅದರಿಂದ ನಾವು ಹಲವಾರು ವರ್ಷಗಳಿಂದ ಹೇಳುತ್ತ ಬಂದ ಬಸವತತ್ವ, ಸಿದ್ಧಾಂತದ ಮಾತುಗಳು ಹೊಳೆಯಲ್ಲಿ ಹುಣಸೆಹಣ್ಣು ಕದಡಿದಂತೆ.
ಈ ನೆಲೆಯಲ್ಲೇ ನಾವು ಅನೇಕ ಬಸವತತ್ವಪ್ರೇಮಿಗಳಿಗೆ ಹೇಳುವುದು ಸಾಮೂಹಿಕ ಅಥವಾ ವ್ಯಕ್ತಿಗತ ಸಮಾರಂಭಗಳನ್ನು ಕಡಿಮೆ ಮಾಡಿ ಪ್ರತಿ ಊರಲ್ಲಿ, ಮನೆಯಲ್ಲಿ ಇಷ್ಟಲಿಂಗದೀಕ್ಷಾ ಕಾರ್ಯಕ್ರಮದ ವ್ಯವಸ್ಥೆ ಮಾಡಿಕೊಳ್ಳಿ ಎಂದು. ಅದರಿಂದ ನಮ್ಮ ಮಕ್ಕಳು ಮತ್ತು ಯುವಕರಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಲು ಸಾಧ್ಯವಾಗುವುದು. ಆಗ ಅವರು ನಿಜಾರ್ಥದಲ್ಲಿ ಗುರುಭಕ್ತರಾಗಲು, ದೇಹ-ಮನಸ್ಸು-ಬುದ್ಧಿಯನ್ನು ಶುದ್ಧವಾಗಿಟ್ಟುಕೊಂಡು ದುಶ್ಚಟ, ದುರಭ್ಯಾಸ, ದುಷ್ಕಾರ್ಯಗಳಿಂದ ದೂರವಿರಲು ಸಾಧ್ಯವಾಗುವುದು. ಇಲ್ಲವಾದರೆ ಹತ್ತರಕೂಡ ಹನ್ನೊಂದು ಪರ್ಷಿಕೂಡ ಗೋವಿಂದ ಎನ್ನುವ ಹಾಗೆ ಶರಣರ ವಿಚಾರಗಳು ಗಾಳಿಯ ಗೋಪುರಗಳಾಗಬಹುದು. ಈ ನೆಲೆಯಲ್ಲಿ ಬಸವಣ್ಣನವರ ಇನ್ನೊಂದು ವಚನ ನೆನಪಾಗುವುದು:
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು, ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವಾ.
ಹೊರಮನೆ, ಒಳಮನೆ ಎಂದಹಾಗೆ ಇಲ್ಲಿ ಹೊರಗಿನ ಭೂಮಿ ಮತ್ತು ಒಳಗಿನ ಭೂಮಿಯ ವಿಚಾರವನ್ನು ಬಸವಣ್ಣನವರು ಪ್ರಸ್ತಾಪಿಸಿದ್ದಾರೆ. ಮಣ್ಣು, ಕಲ್ಲು, ಮರಳು ಇತ್ಯಾದಿ ಅಂಶಗಳಿಂದ ಕೂಡಿದ ಕಣ್ಣಿಗೆ ಕಾಣುವ ಭೂಮಿ ಇದ್ದೇ ಇದೆ. ಆ ಭೂಮಿಗೆ ತಕ್ಕ ಬೀಜ ಬಿತ್ತಿದಾಗ ಅದು ಮೊಳೆತು ಪಲ್ಲವಿಸಿ ಫಲ ಕೊಡುವುದು. ಬೀಜ ಬಿತ್ತಿದಾಗ ಅದರ ಜೊತೆಗೆ ಕಳೆಯೂ ಬೆಳೆಯುವುದು. ಬೆಳೆ ಚನ್ನಾಗಿ ಬರಬೇಕೆಂದರೆ ಕಳೆಯನ್ನು ಕಿತ್ತು ಬಿಸಾಕಬೇಕು. ಈ ಭೂಮಿಯ ಮೂಲಕ ಬಸವಣ್ಣನವರು ದೇಹ ಎನ್ನುವ ಭೂಮಿಯ ಕಡೆ ಬರುವರು. ಅಲ್ಲಿ ಬಿತ್ತಬೇಕಾದ್ದು ಶಿವಬೀಜವನ್ನು. ಅಲ್ಲಿಯೂ ಕಳೆ ಬೆಳೆಯ ಜೊತೆ ಬೆಳೆಯುವುದು. ಅದು `ಪ್ರಳಯ’ದ ಕಸ ಎನ್ನುವರು. ಪ್ರಳಯ ಎಂದರೆ ಭಯಂಕರವಾದುದು. ಅದು ಶಿವ ಬೆಳೆಯನ್ನು ನಾಶ ಮಾಡುವ ಶಕ್ತಿಯುಳ್ಳದ್ದು. ಅಂಥ ಪ್ರಳಯದ ಕಸವನ್ನು ಕಿತ್ತೆಸೆದಾಗ ಮಾತ್ರ ಶಿವ ಬೆಳೆ ಸುಳಿದೆಗೆದು ಸತ್ಫಲವನ್ನು ನೀಡಲು ಸಾಧ್ಯ. ಪ್ರಳಯದ ಕಸವೇ ಅತಿಯಾದಾಗ ಮನುಷ್ಯ ಅರಿವುಗೇಡಿಯಾಗಿ ಮರವೆಗೆ ತುತ್ತಾಗುವನು. ಹಾಗಾಗಿ ಅವಗುಣ ಎನ್ನುವ ಪ್ರಳಯದ ಕಸವನ್ನು ಕಿತ್ತು ನನ್ನನ್ನು ಸಲಹು ಎಂದು ದೇವರಲ್ಲಿ ಬಸವಣ್ಣನವರು ಪ್ರಾರ್ಥಿಸಿಕೊಳ್ಳುವರು. ಇಂಥ ಪ್ರಾರ್ಥನೆಯನ್ನು ಇಂದು ಪ್ರತಿಯೊಬ್ಬರೂ ಕ್ಷಣ ಕ್ಷಣಕ್ಕೂ ಮಾಡಿಕೊಳ್ಳಬೇಕಾಗಿದೆ.
ಇವತ್ತು ಬಹುತೇಕ ಜನರು ಅದರಲ್ಲೂ ಅಡಕೆ, ಕಾಫಿ ಮತ್ತಿತರ ವಾಣಿಜ್ಯ ಬೆಳೆಗಾರರು ಆರ್ಥಿಕವಾಗಿ ತುಂಬಾ ಸುಸ್ಥಿತಿಯಲ್ಲಿದ್ದಾರೆ. ಹಲವರು ಸುಂದರ ಮನೆಗಳನ್ನು ಕಟ್ಟುತ್ತಿದ್ದಾರೆ. ಒಳ್ಳೆಯ ವಾಹನಗಳನ್ನು ಕೊಳ್ಳುತ್ತಿದ್ದಾರೆ. ಬೆಲೆಯುಳ್ಳ ಆಭರಣ, ಬಟ್ಟೆಗಳನ್ನು ಧರಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಬದುಕು ಎಷ್ಟು ನೈತಿಕತೆಯಿಂದ ಕೂಡಿದೆ ಎಂದು ವಿವರಿಸುವ ಅಗತ್ಯವಿಲ್ಲ. ಹೊರಗೆ ಬೆಳೆ ಬಂದರೆ ಸಾಲದು. ಒಳಗೂ ಶಿವ ಬೆಳೆ ಬರಬೇಕು. ಹೊರಗೆ ಸಾಕಷ್ಟು ಸಂಪತ್ತು ಕೂಡಿಹಾಕಿ ಒಳಗೆ ತಿಪ್ಪೆ ಮಾಡಿಕೊಂಡಿದ್ದರೆ ಆ ಮನುಷ್ಯ ಆಂತರಿಕವಾಗಿ ಕೊಳೆಯುತ್ತ, ರೋಗದ ಗೂಡಾಗುತ್ತ ಹೋಗುವನು. ಈ ಬಗ್ಗೆ ಜನರು ಗಂಭೀರವಾಗಿ ಮನನ ಮಾಡಿ ತಮ್ಮ ಆಂತರಿಕ ಭೂಮಿಯಲ್ಲಿ ಪ್ರಳಯದ ಕಸ ಬೆಳೆಯದಂತೆ ಶಿವ ಬೆಳೆ ತೆಗೆಯುವ ಅರಿವುಳ್ಳವರಾಗಬೇಕಾಗಿದೆ. ಕಳೆದ ಒಂದು ವರ್ಷದಿಂದ ಕಾಡುತ್ತಿರುವ ಕೊರೊನಾ ಹೆಮ್ಮಾರಿಯ ಕಾರಣದಿಂದಲಾದರೂ ಪ್ರತಿಯೊಬ್ಬರೂ ಪಾಠ ಕಲಿಯಬೇಕಾಗಿತ್ತು. ಆದರೆ ಎಷ್ಟು ಜನರು ಪಾಠ ಕಲಿತಿದ್ದಾರೆ? ಕೊರೊನಾದ ದುಷ್ಫಲವನ್ನು ನೋಡಿಯಾದರೂ ಜನ ಸರಳವಾಗಿ ಬದುಕುವುದನ್ನು ಕಲಿಯಬೇಕಾಗಿತ್ತು. ದುರ್ಗುಣಗಳಿಂದ ದೂರವಾಗಬೇಕಿತ್ತು. ದ್ವೇಷ, ಅಸೂಯೆ, ಮತ್ಸರ ಇತ್ಯಾದಿ ದುರ್ಗುಣ, ದುರಭ್ಯಾಸಗಳಿಂದ ಮುಕ್ತವಾಗಬೇಕಿತ್ತು. ಎಲ್ಲರನ್ನೂ ಗೌರವದಿಂದ ಕಾಣುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಗಿತ್ತು. ಆದರೆ ಅದಿನ್ನೂ ಸಾಧ್ಯವಾಗಿಲ್ಲವಲ್ಲ ಎನ್ನುವ ನೋವು ನಮ್ಮನ್ನು ಕಾಡುತ್ತಿದೆ.
`ಒಳಿತು ಮಾಡು ಮನಸಾ’ ಎನ್ನುವ ಹಾಡನ್ನು ಕೇಳದಿರುವವರೇ ವಿರಳ. ಮನುಷ್ಯ ಈ ಲೋಕಕ್ಕೆ ಬಂದಿರುವುದೇ ಮತ್ತೊಬ್ಬರಿಗೆ ಒಳಿತನ್ನು ಮಾಡಲೋಸುಗ. ನಾವು ಒಬ್ಬರಿಗೆ ಒಳಿತು ಮಾಡಿದರೆ ಇನ್ನೊಬ್ಬರು ನಮಗೂ ಒಳಿತು ಮಾಡುವರು. ಒಂದು ಕೈಯಿಂದ ಚಪ್ಪಾಳೆ ಆಗುವುದಿಲ್ಲ. ಎರಡೂ ಕೈ ಸೇರಿದಾಗಲೇ ಚಪ್ಪಾಳೆ ಆಗುವುದು. ಹಾಗೆ ಮನುಷ್ಯ ಮತ್ತೊಬ್ಬರನ್ನು ಗೌರವಿಸುವ ಮೂಲಕ ಗೌರವ ಪಡೆಯಬೇಕು. ಪರಸ್ಪರ ಕೊಟ್ಟು ತೆಗೆದುಕೊಳ್ಳುವ ಕ್ರಿಯೆ ನಡೆಯಬೇಕು. ಈ ನೆಲೆಯಲ್ಲಿ ಒಳಿತು ಮಾಡಲು ಸಾಧ್ಯವಾಗುವುದು ಮನದಲ್ಲಿ ಮನೆಮಾಡಿರುವ ದ್ವೇಷವೆಂಬ ಪ್ರಳಯದ ಕಸವನ್ನು ಕಿತ್ತು ಹಾಕುವುದರಿಂದ ಮಾತ್ರ. ಅದರ ಜೊತೆಗೆ ಪರಸ್ಪರ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ದ್ವೇಷದಿಂದ ಸಾಧಿಸಲಾಗದ್ದನ್ನು ಪ್ರೀತಿಯಿಂದ ಸಾಧಿಸಬಹುದು. ದ್ವೇಷವೇ ಎಲ್ಲ ಅವನತಿ, ಅನಾಹುತಕ್ಕೆ ಕಾರಣ. ಇಂದು ಇತರರನ್ನು ಗೌರವಿಸುವುದು, ಪ್ರೀತಿಸುವುದು ಒತ್ತಟ್ಟಿಗಿರಲಿ; ಹೆತ್ತ ತಂದೆ ತಾಯಿ ವೃದ್ಧರಾದಾಗ ಅದೆಷ್ಟು ಜನ ಮಕ್ಕಳು ಅವರನ್ನು ಪ್ರೀತಿಸುತ್ತಾರೆ? ಹೊಟ್ಟೆತುಂಬ ಅನ್ನ ಹಾಕುತ್ತಾರೆ? ಅವರ ಭಾವನೆಗಳನ್ನು ಗೌರವಿಸುತ್ತಾರೆ?
ನಮ್ಮಲ್ಲಿಗೆ ಆಗಾಗ ಅನೇಕ ವೃದ್ಧರು ಬಂದು, “ಬುದ್ಧಿ, ಮಕ್ಕಳು ಮನೆಯಿಂದ ಹೊರ ಹಾಕಿದ್ದಾರೆ. ಊಟಕ್ಕೆ ಕೊಡುವುದಿಲ್ಲ. ಏನು ಮಾಡಿದರೂ ಸಹಿಸುವುದಿಲ್ಲ. ನಾಲ್ಕಾರು ಸಲ ಹೊಡೆದಿದ್ದಾರೆ” ಎಂದು ನೋವಿನಿಂದ ಹೇಳಿಕೊಳ್ಳುತ್ತಾರೆ. ದೇವರು ಇನ್ನೂ ಯಾಕೆ ನನ್ನನ್ನು ಬದುಕಿಸಿದ್ದಾನೋ ಗೊತ್ತಿಲ್ಲ. ತಾವು ಮಕ್ಕಳಿಗೆ ಬುದ್ಧಿ ಹೇಳಬೇಕು. ಇಲ್ಲವಾದರೆ ನಾನು ಮಠದಲ್ಲೇ ತಮ್ಮ ಸೇವೆ ಮಾಡಿಕೊಂಡು ಇರ್ತೇನೆ ಎನ್ನುವರು. ಹಾಗಂತ ಬಂದವರಿಗೆಲ್ಲ ಮಠದಲ್ಲೇ ಆಶ್ರಯ ನೀಡಲು ಸಾಧ್ಯವೇ? ಹಾಗೇನಾದರೂ ಆಶ್ರಯ ಕೊಟ್ಟರೆ `ನಿಮ್ಮಂಥವರಿಗೆ ಮಠ ಇದೆಯಲ್ಲ; ಅಲ್ಲಿಗೇ ಹೋಗು’ ಎನ್ನುವ ಪುಣ್ಯಾತ್ಮರೂ ಇದ್ದಾರೆ. ತಂದೆ ತಾಯಿಗಳನ್ನು ಉಪೇಕ್ಷಿಸಿ ಅವರನ್ನು ಹೊರ ಹಾಕುವುದು, ಇಲ್ಲವೇ ಮಠಕ್ಕೆ ಕಳಿಸುವುದು ಮೂರ್ಖತನದ ಪರಮಾವಧಿ. ಮನೆಯೇ ಮಠವಾಗಬೇಕು. ಮನೆಯಲ್ಲಿ ಹಿರಿಯರನ್ನು ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡಬೇಕು. ಏಕೆಂದರೆ ಪ್ರತಿಯೊಬ್ಬರೂ ವಯೋಧರ್ಮಕ್ಕನುಗುಣವಾಗಿ ವೃದ್ಧರಾಗುವುದು ಅನಿವಾರ್ಯ. ಇವತ್ತಿನ ತಾರುಣ್ಯ, ಶಕ್ತಿ ಯಾವಾಗಲೂ ಇರುವುದಿಲ್ಲ. ಬಾಲಕರಾಗಿದ್ದಾಗ ತಂದೆ ತಾಯಿ ಹೇಗೆ ನಮ್ಮನ್ನು ಸಾಕಿದ್ದರು ಎನ್ನುವುದನ್ನು ನೆನಪಿಸಿಕೊಂಡಾದರೂ ಅವರನ್ನು ಆರೈಕೆ ಮಾಡಬೇಕು. ಆಗ ನಮ್ಮ ಮಕ್ಕಳು ಸಹ ಆ ಪರಂಪರೆಯನ್ನು ಮುಂದುವರಿಸಲು ಸಾಧ್ಯ. ಇಲ್ಲವಾದರೆ ಮುಯ್ಯಿಗೆ ಮುಯ್ಯಿ ಎನ್ನುವಂತೆ ನಮ್ಮಜ್ಜನಿಗೆ ಹೀಗೆ ಮಾಡಿದ್ದಿ, ಅದನ್ನೇ ನಿನಗೆ ನಾನು ಮಾಡುತ್ತೇನೆ ಎನ್ನಬಹುದು.
ತಮಾಷೆಗಾಗಿ ಒಂದು ಕತೆ ಹೇಳುತ್ತಿರುತ್ತೇವೆ. ಒಂದೂರಲ್ಲಿ ಅಜ್ಜ, ಅಪ್ಪ, ಮೊಮ್ಮಗ ಒಂದೇ ಮನೆಯಲ್ಲಿ ನಕ್ಕು ನಲಿಯುತ್ತ ಸಂತೋಷದಿಂದ ಇರುತ್ತಾರೆ. ಅಜ್ಜನಿಗೆ ವಯಸ್ಸಾಗುತ್ತಲೇ ಪ್ರತ್ಯೇಕ ರೂಮಿನ ವ್ಯವಸ್ಥೆ ಮಾಡಿ ಅಲ್ಲಿಯೇ ಮಣ್ಣಿನ ಮುಚ್ಚಳದಲ್ಲಿ ಊಟಕ್ಕಿಡುವರು. ನೀರು ಕುಡಿಯಲು ಮಣ್ಣಿನ ಕುಡಿಕೆ ಕೊಡುವರು. ಅಜ್ಜನಿಗೇಕೆ ಪ್ರತ್ಯೇಕ ವ್ಯವಸ್ಥೆ? ಅಜ್ಜ ನಮ್ಮ ಜೊತೆಗೆ ಕುಳಿತು ಏಕೆ ಊಟ ಮಾಡುತ್ತಿಲ್ಲ ಎಂದು ಮಗ ತಂದೆಯನ್ನು ಕೇಳಿದಾಗ ಆತ ಹೇಳಿದ್ದು: ಅಜ್ಜನಿಗೆ ವಯಸ್ಸಾಗಿದೆ. ಕೆಮ್ಮು, ದಮ್ಮು… ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು. ಮುಂದೊಂದು ದಿನ ಅಜ್ಜನ ಉಸಿರು ನಿಂತು ಹೋಗುತ್ತದೆ. ತಕ್ಷಣ ಆ ಮಗು ಅಜ್ಜ ಬಳಸುತ್ತಿದ್ದ ಮಣ್ಣಿನ ಮುಚ್ಚಳ ಮತ್ತು ಕುಡಿಕೆಯನ್ನು ಜೋಪಾನವಾಗಿ ಎತ್ತಿಡುವುದು. ಅವುಗಳನ್ನು ಬಿಸಾಕದೆ ಏಕೆ ಎತ್ತಿಡುವೆ ಎಂದು ತಂದೆ ಕೇಳಲು ಮುಂದೆ ನಿಮಗೂ ವಯಸ್ಸಾಗುತ್ತದೆ. ಆಗ ಇಂಥ ಮಣ್ಣಿನ ವಸ್ತುಗಳು ಸಿಗಲಾರವು. ಅದಕ್ಕಾಗಿ ಈಗಲೇ ಜೋಪಾನವಾಗಿ ಎತ್ತಿಡುವೆ ಎನ್ನುವುದು. ವೃದ್ಧರನ್ನು ಕೊರೊನಾ ರೋಗಿಗಳಿಗಿಂತ ಕೀಳಾಗಿ ಕಾಣುತ್ತಿರುವುದನ್ನು ಕೇಳಿದ್ದೇವೆ. ನಮ್ಮ ಬಳಿ ಬಂದ ಎರಡು ಜನ ಶ್ರೀಮಂತರಿಗೆ ಕೊರೊನಾ ಬಂದು ವಾಸಿಯಾಗಿತ್ತು. ನಿಮ್ಮ ಅನುಭವ ಹೇಳಿ ಎಂದಾಗ ಅವರು ಹೇಳಿದ ಮೊದಲ ಮಾತು: ಬುದ್ಧಿ ನಮ್ಮ ವೈರಿಗೂ ಈ ರೋಗ ಬರಬಾರದು. ಏಕೆಂದರೆ ಹೆಂಡತಿ, ಮಕ್ಕಳು ಸಹ ಹತ್ತಿರ ಸುಳಿಯುತ್ತಿರಲಿಲ್ಲ. ರೋಗ ವಾಸಿಯಾಗಿ ಮನೆಗೆ ಬಂದರೂ ನಮಗೇ ಪ್ರತ್ಯೇಕ ರೂಮಿನಲ್ಲಿ ವ್ಯವಸ್ಥೆ ಮಾಡಿ ನಾಯಿಗೆ ಅನ್ನ ಹಾಕಿದಂತೆ ಇಡುತ್ತಿದ್ದರು. ಇದುವರೆಗೆ ಗಂಡ, ಅಪ್ಪ ಎಂದು ಪ್ರೀತಿ ತೋರುತ್ತಿದ್ದವರೇ ಶತ್ರುಗಳಾಗಿದ್ದರು. ಆಸ್ಪತ್ರೆಯಲ್ಲಿದ್ದಾಗಿನ ಒಂದು ಘಟನೆ ಹೇಳಿದ್ದು ಸ್ವಾರಸ್ಯಕರವಾಗಿದೆ. ಅವರ ಅಕ್ಕಪಕ್ಕದಲ್ಲೂ ಕೊರೊನಾ ರೋಗಿಗಳಿದ್ದರಂತೆ. ಒಂದು ರಾತ್ರಿ ವಿಪರೀತ ದುರ್ವಾಸನೆ ಬರುತ್ತಿದೆ ಎಂದು ಮುಖ ಮುಚ್ಚಿಕೊಂಡು ಮಲಗಿದರಂತೆ. ಸ್ವಲ್ಪ ಹೊತ್ತಿನಲ್ಲೇ ಒಬ್ಬ ಆಸ್ಪತ್ರೆಯ ವ್ಯಕ್ತಿ ಬಂದು ಕೋಲಿನಿಂದ ಇವರನ್ನು ತಿವಿದನಂತೆ. ಇವರು ಎಚ್ಚರಾಗಿ ಏಕೆ ತಿವಿಯುತ್ತೀರಿ ಎಂದಾಗ ನಿಮ್ಮ ಪಕ್ಕದಲ್ಲಿದ್ದ ಇಬ್ಬರು ರೋಗಿಗಳು ಸತ್ತಿದ್ದಾರೆ. ನೀನೂ ಸತ್ತಿರಬಹುದೆಂದು ಪರೀಕ್ಷಿಸಲು ಹಾಗೆ ಕೋಲಿನಿಂದ ತಿವಿಯಬೇಕಾಯ್ತು ಎಂದರಂತೆ.
ಇಂಥ ಘಟನೆಗಳನ್ನು ಅನೇಕರು ಕೇಳಿರಬಹುದು. ಇವು ನಮ್ಮ ಸತ್ವಪರೀಕ್ಷೆಯ ಘಟನೆಗಳು. ನಾನಾರೀತಿಯ ರೋಗಗಳು ಎಲ್ಲ ಕಾಲಕ್ಕೂ ಬರುವಂತಹುಗಳೆ. ಅಂಥ ರೋಗ ಬಂದಾಗಲಾದರೂ ಮನುಷ್ಯ ಮುಂದೆ ಆದರ್ಶ ಬದುಕು ನಡೆಸುವ ಚಿಂತನೆ ಮಾಡಬೇಕು. ತಮ್ಮ ನಡೆ-ನುಡಿ, ಆಚಾರ-ವಿಚಾರಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಆಗ ಬದುಕಿಗೆ ಒಂದು ಶಕ್ತಿ ಬರುತ್ತದೆ. ಆ ಶಕ್ತಿಯಿಂದ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ. ನಾವು ಒಳ್ಳೆಯವರಾಗಿದ್ದರೆ ನಮ್ಮ ಮನೆಯ ಸದಸ್ಯರು, ಮಕ್ಕಳು ಸಹ ಒಳ್ಳೆಯವರಾಗಿರಲು ಸಾಧ್ಯ. ರಾಜನಂತೆ ಪ್ರಜೆ, ನೂಲಿನಂತೆ ಸೀರೆ, ತಾಯಿಯಂತೆ ಮಗಳು. ಇದನ್ನು ಗಮನದಲ್ಲಿರಿಸಿಕೊಂಡು ವ್ಯಕ್ತಿಗತ ಬದುಕನ್ನು ಶುದ್ಧವಾಗಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕು. ಆದರೆ ಇವತ್ತು ವ್ಯಕ್ತಿಗತವಾಗಿ ಶುದ್ಧವಾಗಿರುವವರು ತುಂಬಾ ವಿರಳ. ಇಂದು ದುಶ್ಚಟಗಳಿಗೆ ಬಲಿಯಾಗದಿರುವವರನ್ನು ಹಗಲು ಹೊತ್ತಿನಲ್ಲೇ ದೀಪ ಹಚ್ಚಿ ಹುಡುಕಬೇಕಾಗಿದೆ. ವ್ಯಕ್ತಿ ದುಶ್ಚಟದಿಂದ ಮುಕ್ತನಾಗಿ ಶುದ್ಧಿಯನ್ನು ಕಾಯ್ದುಕೊಳ್ಳಲು ಶರಣರ ಮಾರ್ಗ ಅನುಸರಿಸಬೇಕು. ಅದರ ಮೊದಲ ಮೆಟ್ಟಿಲಾಗಿ ಇಷ್ಟಲಿಂಗದೀಕ್ಷೆ ಪಡೆದು ನಿತ್ಯ ಪೂಜೆ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅದರಿಂದ ದೇಹ, ಮನಸ್ಸು, ಬುದ್ಧಿಯನ್ನು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಾಗುವುದು. ಈ ನೆಲೆಯಲ್ಲಿ ಬಸವಣ್ಣನವರ ಒಂದು ವಚನ ಮಾರ್ಗದರ್ಶಿಯಾಗಿದೆ.
ಮನವೆ ಸರ್ಪ, ತನುವೆ ಹೇಳಿಗೆ:
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೆ ಗಾರುಡ, ಕೂಡಲಸಂಗಮದೇವಾ.
ಮನಸ್ಸನ್ನು ಗಾಳಿ, ನೀರು, ಬೆಂಕಿ, ಗೋಸುಂಬೆ, ಓತಿಕ್ಯಾತ, ಮಂಗ ಇತ್ಯಾದಿಗೆ ಹೋಲಿಸುವುದುಂಟು. ಇಲ್ಲಿ ಬಸವಣ್ಣನವರು ಅದನ್ನು ಸರ್ಪಕ್ಕೆ ಹೋಲಿಸಿದ್ದಾರೆ. ದೇಹವನ್ನು ಹಾವನ್ನು ಮುಚ್ಚಿಡುವ ಪುಟ್ಟಿಗೆ ಹೋಲಿಸಿದ್ದಾರೆ. ಹಾವಾಡಿಗನೊಬ್ಬ ಪುಂಗಿಯೂದುತ್ತ ಪುಟ್ಟಿಯೊಳಗಿನ ಹಾವನ್ನು ಹೊರಗೆ ಬಿಟ್ಟು ಆಟ ಆಡುತ್ತ ತನ್ನ ದುಡಿಮೆಗೆ ದಾರಿ ಮಾಡಿಕೊಳ್ಳುವನು. ಆದರೂ ಅವನಿಗೆ ಆ ಹಾವು ಯಾವಾಗ ಕಚ್ಚಿ ಸಾಯಿಸುತ್ತದೆಯೋ ಎನ್ನುವ ಭಯ ಇದ್ದೇ ಇರುತ್ತದೆ. ಅದರಂತೆ ಮಾನವನ ದೇಹವೆಂಬ ಪುಟ್ಟಿಯೊಳಗೆ ಮನಸ್ಸೆಂಬ ಹಾವು ಇದೆ. ಮನಸ್ಸು ಚಂಚಲ ಸ್ವಭಾವದ್ದು. ಮನದ ಚಂಚಲತೆಯೇ ಅನೇಕ ದೌರ್ಬಲ್ಯಗಳಿಗೆ ದೇಹವನ್ನು ಗುರಿ ಮಾಡುವುದು. ಮನುಷ್ಯ ಕೆಡುವುದು, ದಾರಿ ಬಿಡುವುದು ಮನಸ್ಸಿನ ದೌರ್ಬಲ್ಯಗಳಿಂದಲೇ. ಹಾಗಿದ್ದರೆ ಈ ಮನಸ್ಸೆಂಬ ಸರ್ಪವನ್ನು ಪಳಗಿಸುವುದು ಹೇಗೆ? ಅದನ್ನು ಒಳಿತಿನ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಏನು ಮಾಡಬೇಕು? ಹೊರಗಿನ ಹಾವು ಕಚ್ಚಿದರೆ ಅದಕ್ಕೆ ಮಂತ್ರವಾದಿ ಮದ್ದು ನೀಡುವನು. ಮನವೆಂಬ ಸರ್ಪ ಕಚ್ಚಿದರೆ ಅದಕ್ಕೆ ಮದ್ದೇನು? ಆ ಮದ್ದು ನೀಡುವ ಗಾರುಡಿ ಅಂದರೆ ಮಂತ್ರ ಯಾವುದು? ಅದಕ್ಕೆ ಬಸವಣ್ಣನವರು ಹೇಳುವುದು: ನಿತ್ಯ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದು ಎಂದು. ಇಷ್ಟಲಿಂಗ ಪೂಜೆಯಿಂದ ಮನಸ್ಸಿನ ಸಂಚಲನವನ್ನು ನಿಲ್ಲಿಸಿ ಅದೇ ಮನಸ್ಸಿನ ಮೂಲಕ ಏನೆಲ್ಲ ಒಳಿತಿನ ಕಾರ್ಯಗಳನ್ನು ಮಾಡಿಸಬಹುದು ಎನ್ನುವ ನಂಬಿಕೆ ಬಸವಣ್ಣನವರಿಗೆ. ಹಾಗಾಗಿ ದೇಹ, ಮನಸ್ಸು, ಬುದ್ಧಿ ಸದೃಢವಾಗಿರುವಾಗಲೇ ಲಿಂಗಪೂಜೆ ಮಾಡಿಕೊಳ್ಳಬೇಕು. ಜೊತೆಗೆ ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನೂ ಮೈಗೂಡಿಸಿಕೊಳ್ಳಬೇಕು.

Previous post ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
Next post ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ

Related Posts

ಧರ್ಮವನ್ನು ಒಡೆಯುವುದು – ಹಾಗೆಂದರೇನು?
Share:
Articles

ಧರ್ಮವನ್ನು ಒಡೆಯುವುದು – ಹಾಗೆಂದರೇನು?

October 2, 2018 ಡಾ. ಎನ್.ಜಿ ಮಹಾದೇವಪ್ಪ
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂಬ ಚಳುವಳಿಯು ಮೊದಲು ಕೇವಲ ಗಾಳಿಯಾಗಿದ್ದು ಇತ್ತೀಚೆಗೆ ಬಿರುಗಾಳಿಯ ಸ್ವರೂಪ ಪಡೆದಿರುವುದು ಕೆಲವು ಸನಾತನಿಗಳಿಗೆ ಹೇಗೋ ಹಾಗೆ...
  ಅವಿರಳ ಅನುಭಾವಿ-3
Share:
Articles

  ಅವಿರಳ ಅನುಭಾವಿ-3

May 6, 2020 ಮಹಾದೇವ ಹಡಪದ
ಇಲ್ಲಿಯವರೆಗೆ: ಏನಾದರೊಂದು ತರಲೆ ಮಾಡುತ್ತಾ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಿದ್ದ ಬಾಲಕ ಚನ್ನಬಸವ ಮಹಾಮನೆಯ ಕಣ್ಮಣಿಯಾದ. ಆತನ ಪ್ರಬುದ್ಧತೆ, ಚುರುಕುತನ ಹೀಗೊಮ್ಮೆ...

Comments 9

  1. Sharanbasveshwar Mathpati
    Feb 7, 2021 Reply

    ಇಂದಿನ ವರ್ತಮಾನದ ಸ್ಥಿತಿಗನುಗಣುವಾಗಿ ನಡೆಯುವ ನೈಜ ಘಟನೆಗಳನ್ನ ಉದಾಹರಣೆ ಸಮೇತ ವಚನದೊಂದಿಗೆ ಪೂಜ್ಯರು ಚೆಂದವಾಗಿ ವಿವರಿಸಿದ್ದಾರೆ.

    ಇಲ್ಲಿ ನನ್ನದೊಂದು ಪ್ರಶ್ನೆ
    ದುಶ್ಚಟ ಮಾಡುವವರಷ್ಟು ಒಳ್ಳೆಯರು, ದುಶ್ಚಟ ಮಾಡದೆ ಇರುವವರು ಇರುವುದಿಲ್ಲ. ನಾನು ಸತ್ಯ ಶುದ್ದ ಸಾತ್ವಿಕ ಎಂಬ ಅಹಂಕಾರದ ದುಷ್ಚಟ ಹೊಂದಿರುವವರೆ ಅನೇಕ.
    ಅದೆ ದುಶ್ಚಟ ಮಾಡುವವನಿಗೆ ಪಶ್ಚಾತ್ತಾಪದ ಬೇಗೆ ಇದ್ದರೆ,
    ಮಾಡದಿರುವವನಿಗೆ ತಾನೊಬ್ಬನೆ ಸಜ್ಜನ ಎಂಬ ಅಹಂಕಾರ ಮನೆ ಮಾಡಿರುತ್ತದೆ.
    ಇಲ್ಲಿ ಸಜ್ಜನರು ಯಾರು ದುರ್ಜನರು ಯಾರು ಎಂಬುದೆ ನನ್ನ ಯಕ್ಷ ಪ್ರಶ್ನೆ?
    ತನ್ನ ‌ಮನದ ಬೇಗೆ ನಿವಾರಿಸಿಕೊಳ್ಳಲು ಮಧ್ಯ ಧೂಮಪಾನ ಮಾಡುವಾತ ಇತರರ ಕೆಡಕು ಬಯಸದೆ ಇರುವವರು ಇದ್ದಾರೆ.
    ಸಜ್ಜನ ಸಸ್ಯಾಹಾರಿಯಾಗಿ ಮತ್ಸರ ದ್ವೇಷ ಅಹಂಕಾರ ಅಸೂಯೆಯೆಂಬ ದುಶ್ಚಟ ಹೊಂದಿರುವವರು ಇದ್ದಾರೆ.
    ಇಲ್ಲಿ ಯಾರನ್ನು ಯಾವ ವರ್ಗಕ್ಕೆ ಸೇರಿಸಬೇಕೆಂಬುದು ಅವರವರ ಅಂತರಳಾದ ಧ್ವನಿಗೆ ಬಿಟ್ಟ ವಿಷಯ.
    ತಾವು ಇದಕ್ಕೆ ಇನ್ನಷ್ಟು ಬೆಳಗ ಚೆಲ್ಲಬೇಕು ಎಂಬ ನೀವೆದನೆಯೊಂದಿಗೆ ಪೂಜ್ಯರಿಗೆ
    ಶರಣು ಶರಣಾರ್ಥಿ

  2. ಈಶ್ವರಪ್ಪ ಮುದ್ದೆಬಿಹಾಳ
    Feb 8, 2021 Reply

    ಲೇಖನ ಬಹಳ ಚೆನ್ನಾಗಿದೆ. ಮನದ ಉಪಟಳದಿಂದ ಪಾರಾಗುವುದು ಬಹು ಕಠಿಣ. ಅದಕ್ಕಾಗಿ ಶರಣರು ಏನು ಮಾಡಿದರೆಂದು ತಿಳಿಸಿಕೊಡಿ ಗುರುಗಳೆ.

  3. Veerabhadrappa, Bangalore
    Feb 9, 2021 Reply

    ಮನೆಯನ್ನು ಸ್ವಚ್ಛವಾಗಿಡಲು ದೈಹಿಕ ಶ್ರಮ ಸಾಕು. ಮನೆಯನ್ನು ಸ್ವಚ್ಚವಾಗಿಡಲು ದ್ವೇಷ, ಅಸೂಯೆ, ದುರ್ಗುಣ, ವಿಷಯ ವಾಸನೆಗಳನ್ನು ಕಳೆದುಕೊಳ್ಳಬೇಕು. ಮನವೆಂಬ ಸರ್ಪ ಆಗ ತೊಂದರೆ ಕೊಡಲಾರದು. ಉತ್ತಮ ಲೇಖನ.

  4. Raju Gubbi
    Feb 12, 2021 Reply

    ಮಕ್ಕಳಿಗೆ ಚಿಕ್ಕವಯದಲ್ಲೇ ಇಷ್ಟಲಿಂಗ ದೀಕ್ಷೆ ಕೊಡಿಸುವುದರಿಂದ ಒಳ್ಳೆಯ ಸಂಸ್ಕಾರಕ್ಕೆ ಬುನಾದಿ ಹಾಕಬಹುದು ಎನ್ನುವ ತಮ್ಮ ಮಾತು ನಿಜ ಗುರುಗಳೇ.

  5. B.S.Patil
    Feb 14, 2021 Reply

    ಮನಸ್ಸಲ್ಲೇ ಮಹದೇವನಿರುವಾಗ ಯಾಕೆ ನಮ್ಮ ಮನಸ್ಸು ಶುದ್ಧವಾಗಿ ಇರುವುದಿಲ್ಲ ಎನ್ನುವುದು ನನ್ನನ್ನು ಕಾಡುವ ಪ್ರಶ್ನೆ ದಯಮಾಡಿ ಉತ್ತರಿಸಿ.

  6. Veeranna Madiwalar
    Feb 16, 2021 Reply

    ಅವಗುಣವೆಂಬ ಪ್ರಳಯದ ಕಸವನ್ನು ಕಿತ್ತೊಗೆದರೆ ಮಾತ್ರವೇ ಶಿವ ಬೆಳೆ ಬೆಳೆಯುವುದು, ಈ ಪ್ರಳಯ ಎನ್ನುವುದು ಅವಗುಣ ಎನ್ನುವುದು ಗೊತ್ತಾಯಿತು. ಈ ಅವಗುಣ ಮನದಲ್ಲಿದೆ. ಅದಕ್ಕೇ ಮನಸ್ಸನ್ನು ಹಾವೆಂದು ಕರೆದರು.

  7. Jyothi Hulyal
    Feb 18, 2021 Reply

    ಮನಸ್ಸು ಕೋತಿ, ನಾಯಿ, ಹಾವು… ಎಲ್ಲವೂ ಹೌದು. ಮನಸ್ಸಿನ ಚಂಚಲತೆಗೆ, ಅದು ಕೊಡುವ ಕೆಟ್ಟ ಸಲಹೆಗಳಿಗೆ ಕಿವಿ ಕೊಡದಂತ ಸ್ಥಿತಿ ಗಳಿಸಿಕೊಳ್ಳಬೇಕು. ಅದೇ ಮುಕ್ತಿಯ ಮಾರ್ಗ. ಸುಂದರ ಲೇಖನ.

  8. Gurusiddappa Hospet
    Feb 22, 2021 Reply

    ಗುರುಗಳೇ, ಗುಡಿಯಲ್ಲಿರುವ ದೇವರು ಜಡ ಎನ್ನುತ್ತೀರಿ, ಒಪ್ಪೋಣ. ಕೈಯಲ್ಲಿರುವ ಇಷ್ಟಲಿಂಗ ಜಡವಲ್ಲ ಎಂದು ಹೇಗೆ ಹೇಳುತ್ತೀರಿ? ಎರಡೂ ವಸ್ತು ರೂಪಗಳೇ ಅಲ್ಲವೇ? ಕೈಯಲ್ಲಿರೋ ಇಷ್ಟಲಿಂಗವನ್ನೂ ಗುಡಿಯ ಲಿಂಗದಂತೇ ಪೂಜೆ ಮಾಡುತ್ತೇವೆ, ಎರಡೂ ಕೇವಲ ನಮ್ಮ ಕಲ್ಪನೆಗಳಲ್ಲಿ ಭಿನ್ನವೆಂದಂತಾಯಿತು… ನನ್ನ ಗೊಂದಲಕ್ಕೆ ತೆರೆ ಎಳೆಯಿರಿ.

  9. ಪೂಜಾ ಗುಬ್ಬಿ
    Feb 22, 2021 Reply

    ಚಂಚಲ ಸ್ವಭಾವದ ಮನಸ್ಸು ಇಷ್ಟಲಿಂಗ ಪೂಜಕರಲ್ಲೇನೂ ಕಡಿಮೆಯಾಗಿರುತ್ತದೆ ಎಂದು ನನ್ನ ಸುತ್ತಲಿನವರನ್ನು ನೋಡುತ್ತಿದ್ದರೆ ನನಗೆ ಅನಿಸುವುದಿಲ್ಲ. ಮನಶುದ್ಧಿ ಹೇಗೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಬಯಲಾಟ
ಬಯಲಾಟ
March 17, 2021
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಅಂದು-ಇಂದು
ಅಂದು-ಇಂದು
December 8, 2021
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
Copyright © 2022 Bayalu