Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಗಿನ ಬೆಳಗು ಮಹಾಬೆಳಗು
Share:
Articles November 1, 2018 ಕೆ.ಆರ್ ಮಂಗಳಾ

ಬೆಳಗಿನ ಬೆಳಗು ಮಹಾಬೆಳಗು

ಕಾರ್ತಿಕದ ಕತ್ತಲೆಯ ಉದ್ದಕ್ಕೂ ಪುಟ್ಟ ಹಣತೆಗಳ ಸಾಲು. ದೀಪಗಳಿಗೆ ಒಂದಕ್ಕೊಂದು ಮುತ್ತನಿಟ್ಟು ಬೆಳಕು ಹಚ್ಚುವ ತವಕ. ಸಣ್ಣ ಗಾಳಿಯಲಿ ತುಸು ತೂಗಿ ನಲಿವ ಪುಳಕ. ತಾರೆಗಳನ್ನು ನೋಡಿ ಕಣ್ಣು ಮಿಟುಕಿಸಿ, ‘ಸ್ಪರ್ಧೆಗಿಳಿಯಲಾರೆನೆ ನಾನು ನಿನ್ನ ಜೊತೆಗೆ’ ಎಂದು ನಗುವ ತುಂಟತನ. ಭಾವಗಳ ತೇರಿನಂತೆ ಕಾಣುವ ಹಣತೆಯ ಹಿಡಿದು ಬೆಳಕ ಬೆನ್ನೇರಿದರೆ ಆಕಾಶಗಂಗೆಯ ಜೊತೆ ಒಂದು ಅದ್ಭುತ ಪಯಣ…

ಜೀವಕ್ಕೂ ಬೆಳಕಿಗೂ ಅವಿನಾಭಾವ ಸಂಬಂಧ. ದಿಕ್ಕೆಟ್ಟು ಕೂತಾಗ ದಾರಿಯೊಂದು ಬೆಳಕಂತೆ ಕಾಣುತ್ತದೆ, ಹೊಸ ವಿಚಾರಗಳು ಮಿಂಚಿನಂತೆ ಹೊಳೆಯುತ್ತವೆ. ಜ್ಞಾನವನ್ನು ಜ್ಯೋತಿ ಎನ್ನುತ್ತಾರೆ, ಬೆಳಕಿನಲ್ಲಿ ನಡೆಯುವುದೆಂದರೆ ಸನ್ಮಾರ್ಗದಲ್ಲಿ ಸಾಗುವುದು. ಇನ್ನು ದೇವರು ಮತ್ತು ಬೆಳಕು ಎರಡೂ ಒಂದರೊಳಗೊಂದು ನಿಕಟವಾಗಿ ಹೆಣೆದುಕೊಂಡಿವೆ. ಅನುಭಾವಿಗಳು ತಮ್ಮ ದಿವ್ಯಾನುಭವವನ್ನು ‘ಮಿಂಚಿನ ಬಳ್ಳಿ’ ಗೆ ಹೋಲಿಸಿದ್ದಾರೆ. ಅನೇಕ ಸಂಪ್ರದಾಯ ಮತ್ತು ನಂಬಿಕೆಗಳು ದೇವರನ್ನು ಸೂರ್ಯನೊಂದಿಗೆ ಸಮೀಕರಿಸುತ್ತವೆ. ಹಳೆಯ ಒಡಂಬಡಿಕೆ ಪ್ರಕಾರ ಭೂಮಿಯ ಮೇಲಿನ ಕತ್ತಲು ಮತ್ತು ಗೊಂದಲವನ್ನು ಹೊಡೆದೋಡಿಸಲು ದೇವರು ಮೊದಲು ಬೆಳಕನ್ನು ಸೃಷ್ಟಿಸಿದನಂತೆ. ಕ್ರಿಶ್ಚಿಯನ್ನರು ಜೀಸಸ್ ಬೆಳಕಿನಂತೆ ಭೂಮಿಗೆ ಬಂದ ಎಂದರೆ ಪ್ರವಾದಿ ಮಹಮ್ಮದ್ ಪೈಗಂಬರ್ ಅಲ್ಲಾನ ಬೆಳಕು ಎಂಬುದು ಇಸ್ಲಾಂ ಧರ್ಮೀಯರ ನಂಬಿಕೆ. ಇನ್ನು ಬುದ್ಧ ಎಂದರೆ ಪರಮಜ್ಞಾನದ ಬೆಳಕು. ಸತ್ಯದ ಸಾಧಕರನ್ನು, ಶರಣರನ್ನು ಬೆಳಕಿನ ಸ್ವರೂಪಿಗಳೆಂದೇ ಭಾವಿಸಲಾಗುತ್ತದೆ. ಮಂಟೇಸ್ವಾಮಿ ಕಾವ್ಯವು ಕಥೆಯ ಆರಂಭಕ್ಕೂ ಮುನ್ನ ಪರಂಜ್ಯೋತಿಯನ್ನು ಪ್ರಾರ್ಥಿಸುತ್ತದೆ:

ಆದಿ ಒಳಗಲ ಜ್ಯೋತಿ ಬೀರದಿ ಒಳಗಲ ಜ್ಯೋತಿ
ಅಂಗೈ ಲಿ ಉರಿವಂತ ಜ್ಯೋತಿ
ಮುಂಗೈಲಿ ಉರಿವಂತ ಜ್ಯೋತಿ, ಜ್ಯೋತಿss……

ಬೆಳಕಿಗೆ ಹಲವಾರು ಭಾವ, ಹಲವಾರು ಅರ್ಥ. ಬೆಳಕು ಮಂದವಾಗುತ್ತಾ ಇಲ್ಲವಾಗುವುದೇ ಕತ್ತಲೆ. ಸಿಹಿ ಇಲ್ಲದಿದ್ದರೆ ಸಪ್ಪೆ ಎನ್ನುತ್ತೇವೆಯೇ ಹೊರತು ಕಹಿ ಎನ್ನುವುದಿಲ್ಲ, ಹಾಗೇ ಬೆಳಕಿನ ವಿರುದ್ಧ ಪದ ಕತ್ತಲೆ ಅಲ್ಲ. ಬೆಳಕು ಪ್ರಖರಗೊಳ್ಳುತ್ತಾ ಹೋಗುತ್ತದೆ ಇಲ್ಲವೇ ಶೂನ್ಯದಲ್ಲಿ ಹುದುಗಿಕೊಳ್ಳುತ್ತದೆ. ಶರಣರಲ್ಲಿ ‘ಬೆಳಗು’ ಎಂಬುದು ಶೂನ್ಯಾನುಭವದ ಪ್ರತೀಕ. ಅದು ಬೆಳಕಿನ ಅನುಭವವೇ. “ಕಂಗಳ ಬೆಳಗ ಕಲ್ಪಿಸಬಾರದು” ಎನ್ನುವಲ್ಲಿ ಶೂನ್ಯಾನುಭವದ ಹಂತಗಳನ್ನು ಅನುಭವಿಸಿಯೇ ಅರಿಯಬೇಕು ಎಂಬ ವಿವೇಕವಿದೆ. ಬುದ್ಧ ವರ್ಣಿಸುವಂತೆ, “ಬೆಳಕಿನ ಬೆಳಕು ನೀಲಿಯಲ್ಲ, ಹಳದಿ, ಕೆಂಪು, ಬಿಳಿ ಅಥವಾ ಕರಿ ಯಾವುದೂ ಅಲ್ಲ, ಅದು ವಸ್ತುವೂ ಅಲ್ಲ, ಮನಸ್ಸೂ ಅಲ್ಲ, ಅದಕ್ಕೆ ಅಸ್ತಿತ್ವವೂ ಇಲ್ಲ, ಅಸ್ತಿತ್ವವಿಲ್ಲವೆಂತಲೂ ಅಲ್ಲ, ಅದು ಯಾವುದೋ ಕಾರಣಗಳಿಂದಾದ ವಿದ್ಯಮಾನವೂ ಅಲ್ಲ.  ಅದು ಎಲ್ಲ ಬುದ್ಧರ ಮೂಲ, ಜ್ಞಾನೋದಯಕ್ಕಾಗಿ ತುಡಿಯುವ ಎಲ್ಲರ ದಾರಿ…”

ಅಲ್ಲಮಪ್ರಭುದೇವರು ಹೇಳುತ್ತಾರೆ:
ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದಾ ಬೆಳಗು,
ನೋಡಬಾರದ ಘನವು ತೆರಹಿಲ್ಲದ ಬೆಳಗು, ಮಹಾಬೆಳಗು!
ತನ್ನಿಂದ ತಾನಾದ ಸ್ವಯ ಸುಖದ ನಿಜ, ನಿತ್ಯ ನಿಜ;
ರೂಪು ನಿರಂಜನ, ನಿಗಮಕ್ಕತೀತ !
ಹರಿಯಜರಿಗೆಟುಕದ ಜ್ಯೋತಿರ್ಮಯ ತಾನೆ
ಲೀಲೆಗೆ ಮೂಲವಾದ.
ಗುಹೇಶ್ವರಲಿಂಗ ಘನಕ್ಕೆ, ಘನವಾದುದು !

ಯಾವ ಚಟುವಟಿಕೆಯೂ ಬೆಳಕಿನ ನಿರಂತರ ಪ್ರವಾಹಕ್ಕೆ ಅಡ್ಡಗಾಲಾಗುವುದಿಲ್ಲ. ಅದು ಸ್ವಯಂಪ್ರೇರಿತವಾಗಿ ಹೊಳೆಯುವ ಪ್ರಕಾಶ. ಅದಿಲ್ಲದ ಜಾಗವಿಲ್ಲ. ಸಕಲ ಕ್ರಿಯೆಗಳ ನಡುವೆಯೂ ಬೆಳಗುವ ಸ್ವಯಂಪ್ರಕಾಶ, ಪರಂಜ್ಯೋತಿ. ಅದಕ್ಕೆ ನಿರ್ಬಂಧಿತ ಸ್ಥಳವಿಲ್ಲ. ಸಮಸ್ತ ಸೃಷ್ಟಿಯ ಮೂಲ ಆ ಮಹಾಬೆಳಗು. ಇದನ್ನೇ ಝೆನ್ ಗುರು ಇಜೊ ಹೇಳುತ್ತಾನೆ-  “ನೀವು ಹುಟ್ಟಿದಾಗ ಹುಟ್ಟಿ, ಸಾಯುವಾಗ ಆರಿ ಹೋಗುವ ಬೆಳಕಲ್ಲ ಅದು. ಜಗತ್ತಿನಲ್ಲಿ ಸಂತರು, ದಾರ್ಶನಿಕರು ಹುಟ್ಟಿ ಬಂದಾಗ ನಿರಂತರ ಬೆಳಗುವ ಆ ಬೆಳಗು ಹೆಚ್ಚಲಿಲ್ಲ. ನಿರ್ವಾಣ ಹೊಂದಿದಾಗ ಅದು ಮಾಯವಾಗಲಿಲ್ಲ. ಜ್ಞಾನಿಗಳಲ್ಲಿ ಹೆಚ್ಚಾಗಿ, ಪಾಮರರಲ್ಲಿ ಕಡಿಮೆಯಾಗಿ ಇರುವಂಥದಲ್ಲ. ಅದಕ್ಕೆ ನಿರ್ದಿಷ್ಟ ಜಾಗವಾಗಲಿ, ರೂಪವಾಗಲಿ, ಹೆಸರಾಗಲಿ ಯಾವುದೂ ಇಲ್ಲ. ಅದನ್ನು ಗ್ರಹಿಸುವುದಾಗಲಿ, ತಿರಸ್ಕರಿಸುವುದಾಗಲಿ, ಗಳಿಸುವುದಾಗಲಿ ಸಾಧ್ಯವಿಲ್ಲ.”

ಬೆಳಗಿನೊಳಗಣ ಬೆಳಗು ಮಹಾಬೆಳಗು !
ಶಿವ ಶಿವಾ ! ಪರಮಾಶ್ರಯವೆ ತಾನಾಗಿ
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಃಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ.

ಬಸವಣ್ಣನವರು ಹೇಳುತ್ತಾರೆ- ಅದು ಅಂತಿಂಥ ಬೆಳಕಲ್ಲ, ಬೆಳಗಿನೊಳಗಣ ಬೆಳಗು. ಎಲ್ಲದಕ್ಕೂ ಆಶ್ರಯವಾದ ಬೆಳಗು, ಸ್ವಯಂ ವ್ಯಕ್ತವಾದ ಮಹಾಬೆಳಗು. ಅದೇ ಪರಮಾತ್ಮ, ಸಮಷ್ಟಿ ಚೇತನ. ಅದೊಂದು ಅಭೌತ ಬೆಳಕು. ಸ್ವಯಂ ಜ್ಯೋತಿ. ನಿಸ್ಸೀಮ ಪ್ರಕಾಶ. ನಿರಂಜನ, ನಿರಾಲಂಬ ಸ್ವರೂಪ. ಅದರ ದರ್ಶನವೇ ಮಹಾಭಾಗ್ಯ.

ಭೌತಿಕ ಬೆಳಕಿನ ಬಗೆಗಿನ ನಮ್ಮ ವೈಜ್ಞಾನಿಕ ತಿಳಿವಳಿಕೆ ತೀರಾ ಅಲ್ಪ. ಆದರೆ ನಮಗೆ ತಿಳಿದಷ್ಟು ಬೆಳಕಿನ ಗುಣಗಳು ಕುತೂಹಲಕರವಾಗಿವೆ. ಕ್ವಾಂಟಮ್ ಭೌತಶಾಸ್ತ್ರದ ಪ್ರಕಾರ, ಬೆಳಕಿಗೆ ಉಭಯ ಸ್ವಭಾವವುಂಟು. ಅದು ಕೆಲವೊಮ್ಮೆ ಅಲೆಯಂತೆಯೂ, ಕೆಲವೊಮ್ಮೆ ಕಣದಂತೆಯೂ ವರ್ತಿಸುತ್ತದೆ. ಮತ್ತೊಂದು ಆಸಕ್ತಿಕರ ವಿಷಯವೆಂದರೆ ನಂಬಲಾಗದ ವೇಗದಲ್ಲಿ ಬೆಳಕು ಚಲಿಸುತ್ತದೆ, ಅದಕ್ಕೆ ‘ಬೆಳಕಿನ ವೇಗ’ ಎನ್ನುವರು. ಸೆಕೆಂಡಿಗೆ ಒಂದು ಲಕ್ಷ ಎಂಬತ್ತಾರು ಸಾವಿರ ಮೈಲು ವೇಗದಲ್ಲಿ ಬೆಳಕು ಚಲಿಸುತ್ತದೆಂಬುದು ಮನುಷ್ಯನ ಗ್ರಹಿಕೆ ಮಾತ್ರ. ನಮ್ಮ ಮುಂಗೈಗೆ ಬೆಳಕಿನ ಕಿರಣವೊಂದನ್ನು ಸುತ್ತಿಕೊಳ್ಳಲು ಸಾಧ್ಯವಾಗುವುದಾದರೆ ನಾವೂ ಬ್ರಹ್ಮಾಂಡದಲ್ಲಿ ಎಲ್ಲೆಲ್ಲಿಯೂ ಕ್ಷಣಾರ್ಧದಲ್ಲಿಯೇ ಇರಬಹುದು. ಸಾಪೇಕ್ಷ ಸಿದ್ಧಾಂತದ ಪ್ರಕಾರ ಬೆಳಕಿನ ವೇಗದಲ್ಲಿ ಸಮಯವೂ ಅಸ್ತಿತ್ವದಲ್ಲಿರುವುದಿಲ್ಲ. ಅಂದರೆ ಬೆಳಕಿಗೆ ಸಮಯದ ಹಂಗಿಲ್ಲ. ಬೆಳಕನ್ನು ಕಾಲವು ಮುಟ್ಟಲಾರದು. ನಿರ್ದಿಷ್ಟ ಜಾಗವು ಕಟ್ಟಿಹಾಕಲಾರದು.

ದೀಪದಿಂದ ಬೆಳಕು. ದೀಪವು ಬೆಳಕಿನ ಶುದ್ಧ ಸಾರವಾದರೆ, ಬೆಳಕು ದೀಪದ ಅಭಿವ್ಯಕ್ತಿ. ಹೆಸರಿಗೆ ಎರಡು, ಆದರೆ ಅಲ್ಲಿರುವುದು ಒಂದೇ. ದೇವರು ಬೆಳಕು ಎಂದರೆ ಸತ್ಯದ ಮೂಲ. ಸತ್ಯದ ದರ್ಶನವೆಂದರೆ ಬೆಳಕಿನ ಸಾಕ್ಷಾತ್ಕಾರ. ದೈವದ ಬೆಳಕಿನಲ್ಲಿ ಮಾತ್ರ ಎಲ್ಲವನ್ನು ನಿಜದ ಅರ್ಥದಲ್ಲಿ ಅರ್ಥೈಸಿಕೊಳ್ಳಲಿಕ್ಕೆ ಸಾಧ್ಯ. ಮಧುವಯ್ಯ ಶರಣರು ಹೇಳುತ್ತಾರೆ:

 

ಕಾಯಕ್ಕೆ ಆಚಾರಸಂಬಂಧ.
ಜೀವಕ್ಕೆ ಅರಿವುಸಂಬಂಧ.
ಅರಿವಿಂಗೆ ಜ್ಞಾನಸಂಬಂಧ.
ಜ್ಞಾನಕ್ಕೆ ಜ್ಯೋತಿಸಂಬಂಧ.
ಜ್ಯೋತಿಗೆ ಮಹಾಬೆಳಗು ಸಂಬಂಧವಾಗಿಯಲ್ಲದೆ,
ಅರ್ಕೇಶ್ವರಲಿಂಗವ ಕಾಣಬಾರದು.
– ಚನ್ನಬಸವಣ್ಣನವರ ಅನುಭವ

ಗುರುಲಿಂಗ ಉದಯವಾದ ಉದಯವ ನೋಡಿರಯ್ಯಾ.
ಹಿಂದೆ ಕತ್ತಲೆ ಮುಂದೆ ಬೆಳಗಾಯಿತ್ತು !
ಬೆಳದಿಂಗಳಾಯಿತ್ತು.
ಕೂಡಲಚೆನ್ನಸಂಗಯ್ಯನಲ್ಲಿ
ಒಲವಿನ ಉದಯದ ದರ್ಪಣದಿಂದ.

ಅರಿವಿನ ರೂಪದ ಗುರು, ಆಚಾರ ರೂಪದ ಲಿಂಗ ಈ ದೇಹದಲ್ಲಿ ಉದಯವಾದ ಬಳಿಕ ಕತ್ತಲೆಗೆ ಜಾಗವೆಲ್ಲಿದೆ? ಹಿಂದಿನ ಅಜ್ಞಾನ ಮಾಯವಾಗಿ ಜ್ಞಾನದ ಬೆಳಕಿನಲ್ಲಿ ಎಲ್ಲವೂ ಸ್ಪಷ್ಟ ರೂಪ ಪಡೆಯುತ್ತವೆ. ಬೆಳದಿಂಗಳಂತೆ ಲೋಕಕ್ಕೆ ಹಿತ ನೀಡುವ ಬದುಕು ಸಾಧ್ಯವಾಗುತ್ತದೆ. ‘ಒಲವಿನ ಉದಯದ ದರ್ಪಣ’- ಎಂದರೆ ಎಲ್ಲರನ್ನೂ ತನ್ನಂತೆ ಕಾಣುವ ಅಕ್ಕರೆಯ ಕನ್ನಡಿಯಾಯಿತು ಮನಸ್ಸು. ನಮ್ಮನ್ನು ಅರಿತುಕೊಳ್ಳುವುದೆಂದರೆ ನಮ್ಮನ್ನು ಮರೆತು ಬಿಡುವುದು. ಸ್ವಯಂ ಅಥವಾ ಅಹಂನ ಮರೆವು ಅಂದರೆ ಎಲ್ಲದರೊಂದಿಗೆ ಒಂದಾಗಿ ಬಿಡುವುದು. ಎಲ್ಲರೊಂದಿಗೆ ಬೆಸೆದು ಹೋಗುವುದೆಂದರೆ ಕಾಲಾತೀತವಾಗುವುದು. ಅದು ಬೆಳಕಿನ ಗುಣವೇ ಅಲ್ಲವೇ?

ದೀಪವಾಗುವುದು…

ಬುದ್ಧನ ಕೊನೆಯ ಗಳಿಗೆ ಸನ್ನಿಹಿತವಾಗಿತ್ತು. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅವನೊಂದಿಗಿದ್ದು, ಅವನ ಮಾರ್ಗದರ್ಶನದಲ್ಲಿ ಬೆಳೆದವರು, ಇನ್ನು ಬುದ್ಧನಿಲ್ಲದ ತಮ್ಮ ಬದುಕು ಕತ್ತಲಿನಂತೆ ಎಂದು ಪರಿತಪಿಸುತ್ತಿದ್ದರು. ಆತನ ಸುತ್ತುವರೆದು ಬಿಕ್ಕುತ್ತಿದ್ದ ಭಿಕ್ಕುಗಳ ಅಳಲನ್ನು ಆನಂದ ಬುದ್ಧನಲ್ಲಿ ತೋಡಿಕೊಂಡ- “ನಮ್ಮ ಮುಂದಿನ ಗುರು ಯಾರು? ನಮಗೆ ಮಾರ್ಗದರ್ಶಕರಾರು? ನಿರ್ವಾಣ ಹೊಂದಲು ನಮಗೆ ನೆರವಾಗುವವರಾರು?” ಆಗ ಬುದ್ಧ ನುಡಿಯುತ್ತಾನೆ- “ನಾನು ಕಂಡದ್ದನ್ನೆಲ್ಲ ನಿಮಗೆ ಹೇಳಿದ್ದೇನೆ. ನಿಮಗೆ ಅನುಕೂಲವಾಗುವುದನ್ನೆಲ್ಲ ಕೊಟ್ಟಿದ್ದೇನೆ. ಈಗ ಬುದ್ಧ ಹೀಗೆ ಹೇಳಿದ ಎನ್ನುವ ಕಾರಣಕ್ಕೆ ನನ್ನ ಮಾತುಗಳನ್ನು ನಂಬಬೇಡಿ, ಅವನ್ನೆಲ್ಲ ಪರೀಕ್ಷಿಸಿ. ನೀವೇ ನಿಮ್ಮ ಬೆಳಕಾಗಿ (Be your own light)” ಯುಗಯುಗಕ್ಕೂ ನೀಡಿದ ಬುದ್ಧನ ಕೊನೆಯ ಅದ್ಭುತ ಸಂದೇಶವೆಂದರೆ ಇದೇ – “ನೀನೇ ನಿನ್ನ ಬೆಳಕಾಗು.”

ಬುದ್ಧ ಕೊನೆಯ ಕ್ಷಣದಲ್ಲಿ ಶಿಷ್ಯರ ಕೈ ಬಿಟ್ಟನೇ?
ಬೆಳಕಾಗೋದು ಎಂದರೇನು? ದೀಪ ಆಗೋದು ಹೇಗೆ? ಧ್ಯಾನಕ್ಕೆ ಕಣ್ಣು ಮುಚ್ಚಿದರೆ ಕತ್ತಲೆ  ಕವಿಯುತ್ತದೆ, ಹಾಗಾದರೆ ನನ್ನೊಳಗೆ ಬೆಳಕೆಲ್ಲಿದೆ?

ಸತ್ಯ ಅಥವಾ ಬೆಳಕು ಯಾವುದೆಂದು ತೋರಿಸಲಾಗದು. ಆದರೆ ಕತ್ತಲಾವುದೆಂದು ಹೇಳಬಹುದು. ಸತ್ಯವೆಂಬುದು ಧರ್ಮಗ್ರಂಥಗಳಲ್ಲಿಲ್ಲ. ಆಧ್ಯಾತ್ಮದ ಆಕರ್ಷಕ ಶಬ್ದಗಳು, ತಾರ್ಕಿಕ ಊಹಾಪೋಹಗಳು ದಾರಿ ತಪ್ಪಿಸುತ್ತವೆ. ಕೂದಲು ಸೀಳುವ ತರ್ಕ-ವಿತರ್ಕಗಳಲ್ಲಿ ಸಮಯ ಹರಣ ಮಾಡುವುದರಿಂದ ಯಾವ ಪ್ರಯೋಜನವಿಲ್ಲ. ಧರ್ಮಗಳ ಗೊಂದಲದಿಂದ ಹೊರಬರದ ಹೊರತು, ತಲೆಯಲ್ಲಿ ತುಂಬಿಕೊಂಡ ಸಂಗ್ರಹಿಸಿದ ಜ್ಞಾನದಿಂದ ಮನ ಮುಕ್ತವಾಗದೇ ಒಳಗಿನ ಬೆಳಕು ಕಾಣಲಾರದು.

ಮುಚ್ಚಿದರೆ ಮಾತ್ರವಲ್ಲ, ಕಣ್ಣು ಬಿಟ್ಟಾಗಲೂ ಕತ್ತಲೆಯಲ್ಲೇ ಬದುಕು ನಡೆಸುವ ಜೀವಕ್ಕೆ ನಿಜವಾದ ಬೆಳಕಿನ ಅರಿವು ಅಷ್ಟು ಸುಲಭವಾಗಿ ದಕ್ಕುವಂಥದ್ದಲ್ಲ. ಕಾಲ ಮತ್ತು ದೇಶಗಳಲ್ಲಿ ಬಂಧಿಯಾಗಿರುವ ಜೀವನಿಗೆ ತಾನು ಇತರರಿಂದ ಸಂಪೂರ್ಣ ಭಿನ್ನ ಎನ್ನುವ ಭಾವನೆ ತುಂಬಿರುತ್ತದೆ. ಇದಕ್ಕೆ ಅರಿವಿನ ಭ್ರಮೆ (illusion of consciousness) ಅಥವಾ ಅಜ್ಞಾನದ ಕತ್ತಲೆ ಎನ್ನುವರು. ಆ ಭ್ರಾಂತಿಯೇ ಸೆರಮನೆಯಾಗಿ ವ್ಯಕ್ತಿ ಸ್ವಕೇಂದ್ರಿತನಾಗುತ್ತಾನೆ. ನಾನು, ನನ್ನದು, ನನಗೆ ಎಂಬ ಬಲೆಯಲ್ಲಿ ಸಿಕ್ಕಿಕೊಳ್ಳುತ್ತಾನೆ. ತನ್ನ ಆಸೆಗಳ ಬೆನ್ನುಹತ್ತುತ್ತಾನೆ. ಹಡಪದಪ್ಪಣ್ಣನವರ ಪುಣ್ಯಸ್ತ್ರೀ ಲಿಂಗಮ್ಮ ಬೆಳಕಿನ ಒಗಟು ಬಿಡಿಸುತ್ತಾಳೆ:

ಅಂಗವೆಂದಡೆ ಲಿಂಗದೊಳಡಗಿತ್ತು 
ಲಿಂಗವೆಂದಡೆ ಅಂಗದೊಳಡಗಿತ್ತು. 
ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದಡೆ, 
ಮಂಗಳದ ಮಹಾಬೆಳಗು ಕಾಣಿಸಿತ್ತು. 
ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣರಂಘ್ರಿಗೆರಗಿ 
ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.

ಅಂಗ-ಲಿಂಗದ ಭೇದವಿಲ್ಲದಂತೆ ಇಡೀ ಜೀವವನ್ನೇ ಆ ಬೆಳಕು ವ್ಯಾಪಿಸಿದೆ. ಅಂಗೈಯಲ್ಲಿ ಲಿಂಗವನಿಟ್ಟು ಏಕಭಾವದಿಂದ ನೋಡಿದಡೆ, ಧ್ಯಾನಿಸಿದಡೆ ಜೀವ ಚೈತನ್ಯದ ರೂಪವೇ ಬೆಳಕಂತೆ ಅಲ್ಲಿ ಗೋಚರಿಸುವುದು, ಶರಣರ ಅನುಭಾವದ ಜ್ಞಾನದಿಂದ ಇದು ಸಾಧ್ಯವೆಂಬುದು ಲಿಂಗಮ್ಮ ತಾಯಿಯ ಅನುಭವ.

ಬೆಳಗಿನ ತತ್ವ- ಪ್ರತಿಮೆಗೆ ಶರಣರ ವಚನಗಳಲ್ಲಿ ಅನೇಕ ವ್ಯಾಖ್ಯಾನಗಳಿವೆ. ಅದರಲ್ಲೂ ಅಲ್ಲಮರ ವಚನಗಳಲ್ಲಿ ಬೆಳಕು, ಉರಿ- ಶಬ್ದಗಳು ಪ್ರತಿಮಾ ರೂಪದಲ್ಲಿ ಬೆಳಗಿ, ಸೃಷ್ಟಿಯ ಚೇತನದ ದಿಗ್ದರ್ಶನವನ್ನೇ ಮಾಡಿಸುತ್ತವೆ. ನಶ್ವರವಾದ ಈ ದೇಹದಲ್ಲಿ ಸದಾ ಪ್ರಕಾಶಿಸುವ ಬೆಳಗು ಹೇಗಿದೆ ಎನ್ನುವುದನ್ನು ಅವರ ಮಾತುಗಳಲ್ಲೇ ಕೇಳಬೇಕು- “ಅರಗಿನ ದೇಗುಲದಲ್ಲಿ ಉರಿಯ ಲಿಂಗವ ಕಂಡೆ”- ಉರಿ ಸ್ವಲ್ಪ ತಾಕಿದರೂ ಸಾಕು, ಕರಗಿ ಹೋಗುವ ಅರಗು, ಉರಿಯನ್ನು ಧರಿಸಿ ಬದುಕಬಲ್ಲುದೆಂದರೆ? ಉರಿಯ ನೆರವಿನಿಂದಲೇ ತನ್ನೆಲ್ಲ ಕ್ರಿಯೆಗಳನ್ನು ನಡೆಸುವುದೆಂದರೆ?… ಶರಣ ಚಂದಿಮರಸರು ಹೀಗೆ ಬಣ್ಣಿಸುತ್ತಾರೆ:

ಬೆಳಗಿನ ಬೀಜ ಮಹಾಬೆಳಗು!
ಕತ್ತಲೆಯನೊಳಕೊಂಡು
ಕಣ್ಣಿರೆವ ಪರಿಯ ನೋಡಾ!
ತಿಳಿವಡೆ ಬೆಳಗಲ್ಲ,
ಒಳಗೊಳಗೆ ಹೊಳೆವ ಕಳೆ ಇದೇನೊ!
ಇದೆಲ್ಲಿಂದ ಹುಟ್ಟಿ, ಇದೆಲ್ಲಿಂದ ತೋರಿತ್ತು!
ಅಲ್ಲಿಯೆ ಆಗಾಗಿ ಅಲ್ಲಿಯೇ ಬೆಳೆಯಿತ್ತು.
ಸಿಮ್ಮಲಿಗೆಯ ಚೆನ್ನರಾಮನೆಂಬ
ಮಹಾಘನಲಿಂಗದಲ್ಲಿಯೆ ಕಾಲೂರಿನಿಂದ
ಪರಿಯನೇನೆಂಬೆ!

ಅಲ್ಲಮಪ್ರಭುದೇವರ ಈ ವಚನ ನೋಡಿ:
ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ
ಬೆಳಕೂ ಅದೆ, ಕತ್ತಲೆಯೂ ಅದೆ !
ಇದೇನು ಚೋದ್ಯವೊ? ಒಂದಕ್ಕೊಂದಂಜದು !
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ- ಗುಹೇಶ್ವರಾ

ಸೀಮಿತ ಕಾಲಾವಧಿಯ ದೇಹದಲ್ಲಿ ನಿಸ್ಸೀಮ ಬೆಳಕು! ಸಾಲದೆಂಬಂತೆ ಮಹಾಮಾಯೆಯ ಕತ್ತಲೆ ಮತ್ತು ಪರಮ ಜ್ಞಾನದ ಬೆಳಕು ಎರಡೂ ಒಂದೇ ದೇಹದಲ್ಲಿ ಜೊತೆಗೇ ಬದುಕುತ್ತಿರುವ ರೀತಿ, ಪರಮಾಶ್ಚರ್ಯ!! ಕತ್ತಲು ಬೆಳಕು ಎರಡೂ ಒಂದರ ಮಗ್ಗುಲಲ್ಲಿ ಮತ್ತೊಂದು ಇರುವುದು ಸೃಷ್ಟಿಯ ವೈಚಿತ್ರ್ಯವೇ ಸರಿ ಎಂದು ಉದ್ಗರಿಸುತ್ತಾರೆ!!!

ಪ್ರತಿಯೊಬ್ಬರಲ್ಲೂ ಬೆಳಕಿದೆ; ಸ್ವ ಅರಿವಿನಿಂದ ಮಾತ್ರವೇ ಅದನ್ನು ಹೊತ್ತಿಸಿಕೊಳ್ಳಬೇಕು. ಹಗಲು ರಾತ್ರಿ ಬುದ್ಧನೊಡನಿದ್ದರೂ ಸಾಧ್ಯವಾಗದ ಬೆಳಕಿನ ದರ್ಶನ ಸ್ವ ಸಾಧನೆಯಿಂದ ಮಾತ್ರವೇ ಸಾಧ್ಯವಾಗುವುದು. ಕಡ ತಂದ ಬೆಳಕಿನಲ್ಲಿ ಎಷ್ಟು ದಿನ ಬದುಕಲಾದೀತು? ಝೆನ್ ಕಥೆಯೊಂದು ಹೀಗಿದೆ. ಟೊಕುಸನ್ ಎನ್ನುವ ಶಿಷ್ಯ ತನ್ನ ಗುರುವಿನ ಬಳಿ ಅಧ್ಯಯನಕ್ಕೆ ಹೋಗುತ್ತಿದ್ದ. ಒಮ್ಮೆ ಹೀಗೆ ಚರ್ಚೆಯಲ್ಲಿ ಹೊತ್ತು ಸರಿದು ಕತ್ತಲಾದದ್ದೇ ತಿಳಿಯಲಿಲ್ಲ. “ಇನ್ನು ಮಲಗಲು ಹೋಗು, ಇಷ್ಟು ಸಾಕು” ಎಂದ ಗುರು. ಸರಿ ಎಂದು ಎದ್ದ ಟೊಕುಸನ್ ಹೊರಗೆ ನೋಡಿ, “ತುಂಬಾ ಕತ್ತಲಾಗಿದೆ” ಎಂದ. “ತಗೋ, ಮೇಣದಬತ್ತಿ ತಗೋ” ಎಂದು ಉರಿವ ಮೊಂಬತ್ತಿ ಕೊಟ್ಟ ಗುರು. ಶಿಷ್ಯ ಅದನ್ನು ಕೈಗೆತ್ತಿಕೊಂಡದ್ದೇ ತಡ, ಗುರು ಮುಂದೆ ಬಾಗಿ ಮೇಣದಬತ್ತಿ ಆರಿಸಿದ.

ಝೆನ್ ಕಥೆಗಳೇ ಹೀಗೆ, ಒಗಟಿನಂತೆ. ಗುರು ಯಾಕೆ ಹಾಗೆ ನಿಷ್ಕರುಣಿಯಾದ? ಆಗ ಶಿಷ್ಯ ಏನು ಮಾಡಿದ? ಎಂಬ ಸಾಮಾನ್ಯ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿರುವುದಿಲ್ಲ, ಅನುಭವಿಸಿ ಅರಿಯಬೇಕಾದ ಗಾಢ ಸಂದೇಶವಿರುತ್ತದೆ.

ತಮ್ಮ ಅರಿವಿನ ಬೆಳಕಿನಲ್ಲಿ ಕಂಡುಕೊಂಡದ್ದನ್ನು ದಾರ್ಶನಿಕರು ಹೇಳಿಹೋಗಿದ್ದಾರೆ. ಅವರ ಮಾತುಗಳೇ ಗಾಥೆಗಳಾಗಿ, ಗಾದೆಗಳಾಗಿ, ಧರ್ಮಬೋಧೆಗಳಾಗಿ, ಶ್ಲೋಕಗಳಾಗಿ, ವಚನಗಳಾಗಿ, ದೋಹೆಗಳಾಗಿ, ಮಹಾವಾಕ್ಯಗಳಾಗಿ ನಮ್ಮ ನಡುವೆ ಇವೆ. ನಮ್ಮ ಮನಸ್ಸಿನ ಮಿತಿಗಳನ್ನು ದಾಟಲು ನೆರವಾಗುತ್ತವೆ, ನಮ್ಮ ಹಾದಿಯ ಸೊಬಗನ್ನು ಸವಿಯಲು ಪ್ರೇರೇಪಿಸುತ್ತವೆ. ನಾವು ನಮ್ಮದೇ ಬೆಳಕಾಗುವ ರಹಸ್ಯಗಳನ್ನು, ಸುಳಿವುಗಳನ್ನು ತೋರುತ್ತವೆ. ಪ್ರತಿಯೊಬ್ಬರ ಯಾತ್ರೆಯ ಹಾದಿ ಭಿನ್ನಭಿನ್ನವಾಗಿರುತ್ತದೆ ನಿಜ. ಆದರೆ ಅನುಭಾವದ ಹೊಳಹುಗಳು ಬಾಳ ಪಯಣವನ್ನು ನಿಸ್ಸಂದೇಹವಾಗಿ ಬೆಳಗಿಸುತ್ತವೆ.

ಗುರು ಬೇಕು, ನಿಜ. ದಾರಿ ತೋರಿಸುವ ತನಕ ಮಾತ್ರವೇ ಆತನ ಪಾತ್ರ, ಅಲ್ಲಿಂದ ಮುಂದಿನ ಪಯಣ ನಮ್ಮದೇ, ಪೂರಾ ನಮ್ಮದೇ. ನಾವೇ ನಡೆದು ಸೇರಬೇಕಾದ ದಾರಿ. ಸ್ವಯಂ ಅರಿವಿನಿಂದಲೇ ಸ್ವಯಂ ಜ್ಞಾನೋದಯ. ಅರಿವು ಜಾಗೃತವಾಗಲು ನಮ್ಮನ್ನು ಸುತ್ತುವರೆದ ಮಾಯೆಯ ಆವರಣಗಳನ್ನು ಕಳಚಿಕೊಳ್ಳಬೇಕು. ಮಾಯೆಯು ಸತ್ಯವನ್ನು ಮರೆಮಾಚುತ್ತದೆ, ನಮ್ಮೊಳಗಿನ ಬೆಳಕೇ ನಮ್ಮ ಕಣ್ಣಿಗೆ ಬೀಳದಂತೆ ನಾನಾ ಆಟಗಳನ್ನಾಡುತ್ತದೆ. ಆಗ ವಿಚಾರಗಳು ಸಂಕುಚಿತಗೊಳ್ಳುತ್ತವೆ, ನಾನು, ನಾನು, ಕೇವಲ ನಾನು ಎನ್ನುವ ಸ್ವಮೋಹವು ಆವರಿಸಿಕೊಳ್ಳುತ್ತದೆ. ನಾವು ನಿಜವೆಂದು ನಚ್ಚಿಕೊಂಡ ಇಂಥ ಆಲೋಚನೆಗಳು, ವರ್ತನೆಗಳು ಮೋಡಗಳಿದ್ದಂತೆ. ಮೋಡಗಳು ಆಕಾಶದ ಭಾಗವಲ್ಲ,

ದೀಪದ ಗುಣವಾದರು ಎಂಥದು? ತಾನು ಉರಿಯುತ್ತಾ ಬೆಳಕು ಕೊಡುವುದು, ಅನ್ಯರಿಗಾಗಿ ತನ್ನನ್ನೇ ಸವೆಸುವುದು, ಕತ್ತಲಲ್ಲಿದ್ದವರಿಗೆ ಬೆಳಕಾಗುವುದು, ಸಮಷ್ಟಿಯ ಹಿತಕ್ಕಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುವುದು. ಒಂದು ದೀಪ ಅಸಂಖ್ಯ ದೀಪಗಳನ್ನು ಹಚ್ಚಬಲ್ಲುದು. ಆ ಮೂಲಕ ಪ್ರಕಾಶಮಾನವಾದ ಅದ್ಭುತ ಪ್ರಪಂಚವನ್ನೇ ಸೃಷ್ಟಿಸುವುದು. ಇಷ್ಟು ಸರಳ ಸತ್ಯ ನಮ್ಮ ಬದುಕಿನಲ್ಲಿ ಏಕೆ ಇಳಿಯುವುದಿಲ್ಲವೆಂದರೆ ನಾವು ಮನಸ್ಸಿನ ಹೊರ ಅಂಚಿನಲ್ಲಷ್ಟೇ ವ್ಯವಹರಿಸುತ್ತಿರುತ್ತೇವೆ. ಕೇಂದ್ರಕ್ಕೆ ಸರಿದಷ್ಟು ಮನಸ್ಸು ತಿಳಿಯಾಗಿ ಕಾಣಿಸುತ್ತದೆ. ಯಾವುದೇ ವಿಷಯದಲ್ಲಿ ನಮಗೆ ಸ್ಪಷ್ಟತೆ ಸಿಗುವುದೇ ಜ್ಞಾನೋದಯ. ವಿಚಾರಗಳಲ್ಲಿ, ಭಾವನೆಗಳಲ್ಲಿ, ಆಲೋಚನೆಗಳಲ್ಲಿ ಸ್ಪಷ್ಟತೆ ಇದ್ದಲ್ಲಿ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ. ಶರಣರು ಪರಿಭಾವಿಸಿದ ಇಂಥ ಅರಿವು ಕಾಲ ಮತ್ತು ದೇಶಗಳ ಹಂಗು ತೊರೆದದ್ದು, ಆದ್ದರಿಂದ ಅದೂ ಬೆಳಕಿನಂತೆ ನಿರಾಳ, ನಿರ್ವಿಕಲ್ಪ. ಶರಣನಾಗುವುದು ಎಂದರೆ ಅರಿವಿನ ಬೆಳಕಾಗುವುದೆಂದೇ ಅರ್ಥ.

Previous post ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
Next post ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ

Related Posts

ಕಾದಿ ಗೆಲಿಸಯ್ಯ ಎನ್ನನು
Share:
Articles

ಕಾದಿ ಗೆಲಿಸಯ್ಯ ಎನ್ನನು

April 29, 2018 ಕೆ.ಆರ್ ಮಂಗಳಾ
“ಬಾಳಲೇ? ಬಾಳಿಗಂತ್ಯವ ತರಲೇ?” ಹ್ಯಾಮ್ಲೆಟ್ ನಾಟಕದ ಒಂದು ಬಹು ಮುಖ್ಯ ಸ್ವಗತ. ರಾಜಕುಮಾರ ಹ್ಯಾಮ್ಲೆಟ್ ನ ಎದೆಯೊಳಗೆ ಇಂಥ ಪ್ರಶ್ನೆಯೊಂದು ಎದ್ದು ಕೊನೆಗೆ ಆತನ ಬಲಿ...
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
Share:
Articles

ಅಲ್ಲಮರ ಒಂದು ‘ಸ್ವವಿರೋಧ’ದ ವಚನ

August 2, 2020 ಡಾ. ಎನ್.ಜಿ ಮಹಾದೇವಪ್ಪ
ಜ್ಞಾನದಿಂದ ನಿಮ್ಮನರಿದಿಹೆನೆಂದಡೆ: ಅರಿವಿಂಗೆ ಬಂದಾಗಲೆ ಕುರುಹು. ಕುರುಹಿಂಗೆ ಕೇಡುಂಟು. ಜ್ಞಾನವೆಂಬುದೇನು? ಮನೋಭೇದ! ಇಂತಪ್ಪ ಜ್ಞಾನದ ಕೈಯಲ್ಲಿ ಅರುಹಿಸಿಕೊಂಡಡೆ ನೀ ದೇವನಲ್ಲ,...

Comments 15

  1. Karibasappa hanchinamani
    Nov 2, 2018 Reply

    ಮನಸ್ಸನ್ನು ಬೆಳಗುವ ಲೇಖನ ಬರೆದಿದ್ದೀರಿ. ಎರಡು ಸಲ ಓದಿದೆ.

  2. yogish j.p
    Nov 3, 2018 Reply

    ದೀಪಾವಳಿ ಸಂದರ್ಭದಲ್ಲಿ ಸೂಕ್ತವಾದ ಲೇಖನ. ಹಣತೆಯ ದೀಪದ ಬೆಳಕಲ್ಲಿ ತತ್ವ-ಆಧ್ಯಾತ್ಮಗಳ ದರ್ಶನ ಮಾಡಿಸಿದ್ದೀರಿ. ಅಕ್ಕಾ ಎಂದಿನಂತೆ ಸೂಪರ್. ಬುದ್ಧ-ಬಸವ- ಅಲ್ಲಮರನ್ನು ಹತ್ತಿರ ತಂದು ನಿಲ್ಲಿಸಿದಂತೆ ಭಾಸವಾಗತ್ತದೆ.

  3. Gayathri.N.C
    Nov 3, 2018 Reply

    ವಚನ ಚಳುವಳಿಯ ಘನತೆ ಇರುವುದು ಅದು ಎಲ್ಲರನ್ನೂ ತಬ್ಬಿಕೊಂಡಿತು ಎನ್ನುವಲ್ಲಿ ಎನ್ನುವ ಮಾತು ಅಕ್ಷರಶಃ ಸತ್ಯ ಗುರುಗಳೇ, ನಿಮ್ಮ ವಿಚಾರಗಳಿಗೆ ನಮೋ ನಮೋ.

  4. dr. Malleshappa Pattar
    Nov 3, 2018 Reply

    ನಿಮ್ಮ ಮಾತುಗಳನ್ನು ತುಂಬಿಕೊಂಡು ಈ ಸಲ ದೀಪಾವಳಿ ಆಚರಿಸುತ್ತೇನೆ, ಅಷ್ಟು ಚೆನ್ನಾಗಿವೆ ಎಲ್ಲ ಸಾಲುಗಳು, ಎಲ್ಲರ ಮಾತುಗಳು, ಬುದ್ಧನ ಕಥೆಯಿಂದ ಅವನ ಬಗ್ಗೆ ನನ್ನ ತಿಳಿವಳಿಕೆ ಹೆಚ್ಚಿತು. ಶರಣರು, ಬುದ್ಧ ಬೇರೆ ಬೇರೆ ಅಲ್ಲಾ.

  5. K S MALLESH
    Nov 3, 2018 Reply

    I read your article on ಬೆಳಗು…..Nice that you have enlightened the reader by quoting many a good saying from literature and mostly from vachanas. Your statement that darkness is the absence of light kept me thinking. I am happy that light fascinates through its myriad manifestations always enchanting whenever the seeker knows a bit more about it but it also continues to elude everyone. Einstein was right when he said that he had pursued very hard for more than 50 years to know light but could not understand it . I really don’t know how to define God whom every body considers as the ultimate Absolute. The way light has been referred to by travellers on the spiritual path as exemplified in your article gives me an impression that experiencing such intangibles innocently is lot better than trying to probe their nature and meaning logically and using reasoning. Often the innate desire and CURIOSITY in us tries to question more than to ACCEPT as it is. For those seekers your article has some thing to offer. Shall I conclude by saying that it is like a lamp which humbly but passionately tries to throw more LIGHT ?

  6. shruthi bhaskar
    Nov 4, 2018 Reply

    a very captivating article. you have portrayed indescribable thoughts and beliefs masterfully.

  7. Panchakshari hv
    Nov 5, 2018 Reply

    ಧರ್ಮಗಳ ಗೊಂದಲದಿಂದ ಹೊರಬರದ ಹೊರತು, ತಲೆಯಲ್ಲಿ ತುಂಬಿಕೊಂಡ ಸಂಗ್ರಹಿಸಿದ ಜ್ಞಾನದಿಂದ ಮನ ಮುಕ್ತವಾಗದೇ ಒಳಗಿನ ಬೆಳಕು ಕಾಣಲಾರದು.

    ಅದ್ಬುತ ನುಡಿಗಳು. ಸಮಯೋಚಿತ ಲೇಖನ. ಜಗತ್ತಿನ ಮಹಾಂತರ ನುಡಿಗಟ್ಟುಗಳನ್ನು ಒಂದೆಡೆ ಸೇರಿಸಿ ಬೆಳಕನ್ನು ಬೆಳಗಿಸಿದ್ದೀರಿ.

    ಧನ್ಯವಾದಗಳೊಂದಿಗೆ ಶರಣಾರ್ಥಿ.

  8. ಬಸವರಾಜ ಹಂಡಿ
    Nov 7, 2018 Reply

    ಅಬ್ಬಾ ಅದ್ಭುತವಾದ ಲೇಖನ ಮಂಗಳಾ ಶರಣಿಯರಿಂದ.
    ಬೆಳಕು.. ಬೆಳಗು ದಿಂದ ಪೂರ್ತಿಯಾಗಿ ಆವರಿಸಿಕೊಂಡು ಓದುವರಿಗೂ ಸಹ ಬೆಳಕನ್ನು ಕೊಡಬಲ್ಲ ಅಂತ ಲೇಖನ.

    ಎಷ್ಟು ಸರಳತೆಯಿಂದ ಕೂಡಿದ ಸಂಕೀರ್ಣವಾದ ಲೇಖನವೆಂದರೆ ಕೆಲವಂದು ಸಲ ಓದುವದು ನಿಂತು ಹೋಗಿ ನಮ್ಮನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

    ಬೆಳಕು ಹಾಗು ಕತ್ತಲೆಯ ಸಂಬದ, ಬೆಳಕುಬರಿತ ಹಾಗು ಬೆಳಕುರಹಿತ ಸಂಬದ ಇಂತ ವಿಷಯವನ್ನು ಶಬ್ದಗಳಲ್ಲಿ ಹಿಡಿಯಲಾಗದು. ಇಂತದನ್ನು ಮಂಗಳಾ ಮೇಡಂ ತಮ್ಮ ಎಲ್ಲ ಕೌಶಲ್ಯ ಹಾಗು ಜ್ಞಾನವನ್ನು ಉಪಯೋಗಿಸಿ ಹಿಡಿಯಲು ಪ್ರಯತ್ನಿಸಿದ್ದಾರೆ ಹಾಗು ಯಶಸ್ವಿಯಾಗಿದ್ದಾರೆ.

    ವಚನಗಳ ಆಯ್ಕೆ ಹಾಗು ಬುದ್ಧನ ಹೇಳಿಕೆಗಳು ಆಯ್ಕೆ ಬಹಳ ಸೂಕ್ತವಾಗಿವೆ.

    ಏನು ಬುದ್ಧ, ಏನು ಬಸವಣ್ಣ, ಏನು ಅಲ್ಲಮ್ಮ …. ಇವರು ಎಲ್ಲರು ಜಗತ್ತಿಗೆ ಬೆಳಕಾಗಿ ಬೆಳಕನ್ನು ದಾರೆ ಎರದು ಹೋಗಿದ್ದಾರೆ.. ನಾವು ಇವರು ಹೇಳಿದ್ದನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಪಾಲಿಸಿದರೆ ಸಾಕು ನಮ್ಮ ಜೀವನ ಬೆಳಕು ಆಗಬಹುದು.

    ಬಯಲುದಲ್ಲಿ ಬರುವ ಲೇಖನಗಳು ನನಗೆ ಹಾಗು ನನ್ನಂತ ನೂರಾರು ಜನರ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ. ಕೆಲವು ಜನ ತಮ್ಮ ಅಭಿಪ್ರಾಯಗಳನ್ನು ನಮೋದಿಸಿತ್ತಾರೆ ಬಹಳಷ್ಟು ಜನ ಬರೆಯಲ್ಲ.
    ಬಯಲು ಜನರಲ್ಲಿ ಜಾಗೃತಿಯನ್ನು ಹಾಗೂ ಜ್ಞಾನದ ಬೆಳಕನ್ನು ಉಂಟುಮಾಡುತ್ತಿದೆ. ಇದು ಒಂದು ಪವಿತ್ರವಾದ ಕಾಯಕ.

    ಬಯಲು ತಂಡಕ್ಕೆ ಹಾಗು ಬಯಲು ತಂಡದ ನಾಯಕಿ ಮಂಗಳಾ ಶರಣಿಯರಗೆ ನಮ್ಮೆಲ್ಲರಿಂದ ಧನ್ಯವಾದಗಳು ಹಾಗು ಶರಣು ಶರಣಾರ್ಥಿಗಳು ???

  9. kavya kalmane
    Nov 7, 2018 Reply

    ಜೆನ್ ಕಥೆಗಳಂದರೆ ನನಗೂ ತುಂಬಾ ಆಸಕ್ತಿ. ಆದರೆ ಅರ್ಥವಾಗುವುದಿಲ್ಲ. ಇಲ್ಲಿ ಸೂಕ್ತವಾದ ಜೆನ್ ಕತೆ ಹೇಳಿರುವಿರಿ, ಬುದ್ಧನನ್ನು ಬಸವಣ್ಣನಂತೇ ಆರಾಧಿಸುವಿರಿ ಎನಿಸುತ್ತದೆ. ಅದೇನೇ ಇರಲಿ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಬೆಳಕನ್ನು ಬರೆಯುತ್ತಾ ನೀವೂ ಬೆಳಕಾದಂತೆ, ಅದನ್ನು ಓದುತ್ತಾ ನಾವೂ ಬೆಳಕಾದಂತೆ ಭಾಸವಾಗತ್ತದೆ.

  10. jyotilingappa
    Nov 7, 2018 Reply

    ಅಂತೂ ಬಯಲು ಕಾಯುವ ಹಂತಕ್ಕೆ ತಂದಿರಿ. ಅಭಿನಂದನೆಗಳು. ಎಲ್ಲಾ ಲೇಖನಗಳೂ ಹಲವಾರು ಬಾರಿ ಓದುವ ಲೇಖನಗಳು.

  11. Mruthyunjaya v Nara
    Nov 9, 2018 Reply

    ಧನ್ಯವಾದಗಳು ಅತ್ಯಂತ ಸೊಗಸಾದ ಲೇಖನ.ಸರಳ ಮತ್ತು ಸುಂದರವಾಗಿದೆ. ??

  12. Mruthyunjaya v Nara
    Nov 9, 2018 Reply

    ಧನ್ಯವಾದಗಳು ಅತ್ಯಂತ ಸೊಗಸಾದ ಲೇಖನ.ಸರಳ ಮತ್ತು ಸುಂದರವಾಗಿದೆ.??

  13. Basavaraj ganiger
    Nov 14, 2018 Reply

    Super article

  14. R.P. Jagadeesh
    Nov 14, 2018 Reply

    ಲೇಖನವು ಇನ್ನೊಮ್ಮೆ ಮತ್ತೊಮ್ಮೆ ಓದುವಂತಿದೆ. ಚೆನ್ನಾಗಿ ಬರೆದಿದ್ದೀರಿ. ಬೆಳಕು ಹಚ್ಚಿ ಬೆಳಕಾಗುವ ರೀತಿಯನ್ನು ಅನುಭವಿಸಿದಂತಾಗುತ್ತದೆ.

  15. ಬಸವರಾಜ ಕುಂಚೂರು
    Nov 29, 2018 Reply

    ಬೆಳಗು- ಮನಸೂರೆಗೊಳ್ಳುವ ಲೇಖನ, ಒಂದು ಬಾರಿ ಓದಿ ಮುಚ್ಚಿಡುವದಲ್ಲ ಆಗಾಗ್ಗೆ ಮೆಲುಕು ಹಾಕಬಹುದಾದ ಲೇಖನ, ಅಲ್ಲಲ್ಲಿ ವಚನಗಳನ್ನು ಸೂಕ್ತವಾಗಿ ಉದಾಹರಿಸಿ ಬೆಳಕನ್ನು ಪ್ರಜ್ವಲಗೊಳಿಸಿದ್ದೀರಿ.
    ಜ್ಯೋತಿಯ ಬಗ್ಗೆ ನಿಜಗುಣ ಶಿವಯೋಗಿಗಳ “ಜ್ಯೋತಿ ಬೆಳಗುತಿದೆ… ಮಾತು ಮನಂಗಳಿಂದತ್ತತ್ತ…” ಎಂಬ ಮಾತು ಬೇರಾವ ವಚನಗಳಲ್ಲೂ ನಾನು ಕಂಡಿಲ್ಲ. ಇದು ಎಣ್ಣೆ ಬತ್ತಿಗಳಿಲ್ಲದ ದೀಪ. ನಿಮ್ಮ ಲೇಖನದಲ್ಲಿ ಹೇಗೆ ಬಿಟ್ಟು ಹೋಯಿತು? ಪರವಾಗಿಲ್ಲ, ಅದರ ಕೊರತೆಯಾಗೇನಿಲ್ಲ, ನಿಮ್ಮ ಲೇಖನ ಅಷ್ಟು ಸಶಕ್ತವಾಗಿದೆ.
    ಬಸವಣ್ಣನೆಂಬ ಬತ್ತಿ, ಅಲ್ಲಮನೆಂಬ ತೈಲ, ಗುಂಡಯ್ಯನೆಂಬ ಪ್ರಣತಿ, ಸೇರಿ ಆಯಿತು ಕನ್ನಡದ ಜ್ಯೋತಿ.
    ಇತಿಹಾಸಕಾರ ಗುಹಾ ಅವರಿಗೆ ಇಂಗ್ಲಿಷಿಗೆ ಭಾಷಾಂತರಗೊಂಡ ಬಸವಣ್ಣನವರ ವಚನಗಳನ್ನ, ಕುಮಾರಸ್ವಾಮಿಯವರ “Buddha and Basava” ಓದಲು ಕಳಿಸಿಕೊಡಿ.
    -ಬಸವರಾಜ ಕುಂಚೂರು, ಡಾವಣಗೆರೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಗುರುವಂದನೆ
ಗುರುವಂದನೆ
October 13, 2022
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ನಾನು ಯಾರು?
ನಾನು ಯಾರು?
December 8, 2021
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
Copyright © 2023 Bayalu