Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಸವ ಸ್ಮರಣೆ ಇಂದಿಗೂ ಏಕೆ?
Share:
Articles May 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಬಸವ ಸ್ಮರಣೆ ಇಂದಿಗೂ ಏಕೆ?

`ಕಲ್ಲು ಎಷ್ಟೇ ಕಾಲ ನೀರಲ್ಲಿದ್ದರೂ ನೆನದು ಮೃದುವಾಗದು’. ಈ ನುಡಿಗಟ್ಟು ಬಸವಣ್ಣನವರದು. ಕಲ್ಲನ್ನು ಬೇಕಾದರೆ ಮೃದುಗೊಳಿಸಬಹುದು. ಆದರೆ ಕಾಡುಗಲ್ಲಿನಂತಿರುವ ಮನುಷ್ಯರನ್ನು ಮೃದುಗೊಳಿಸುವುದು ಹೇಗೆ? ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನ ಬಾಹ್ಯ ಮತ್ತು ಆಂತರಿಕ ವರ್ತನೆಗೆ ಸಂಬಂಧವೇ ಇಲ್ಲ ಎನ್ನುವ ದುರಂತ ಎಲ್ಲರಲ್ಲೂ ಹೆಡೆಯಾಡುತ್ತಲಿದೆ. ಬಸವಣ್ಣನವರ `ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ’ ಕೇವಲ ಭಾಷಣ, ಬರವಣಿಗೆಯ ಸರಕಾಗುತ್ತಿದೆ. `ಒಳಗೆ ಕುಟಿಲ, ಹೊರಗೆ ವಿನಯ’. ನಡೆದಂತೆ ನುಡಿ ಇಲ್ಲ, ನುಡಿದಂತೆ ನಡೆ ಇಲ್ಲ. ದ್ವೇಷ, ಅಸೂಯೆ, ಮತ್ಸರಗಳು ಹೃದ್ಗತ ಎನ್ನಬೇಕೋ, ರಕ್ತಗತ ಎನ್ನಬೇಕೋ ತಿಳಿಯದು. ಬಸವಣ್ಣನವರು 12ನೆಯ ಶತಮಾನದಲ್ಲಿದ್ದವರು. ಇಂದಿಗೂ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಏನು ಕಾರಣ?

ವ್ಯಕ್ತಿ ದೊಡ್ಡವನಾಗುವುದು ಜಾತಿ, ಅಧಿಕಾರ, ಬುದ್ಧಿವಂತಿಕೆಯಿಂದ ಎಂದೆಲ್ಲ ಹೇಳುವರು. ಬಸವಣ್ಣನವರು ಉನ್ನತ ಜಾತಿಯಲ್ಲಿ ಜನಿಸಿದ್ದರು. ಬಿಜ್ಜಳನ ರಾಜ್ಯದಲ್ಲಿ ಪ್ರಧಾನಿಯಾಗಿದ್ದರು. ಬುದ್ಧಿವಂತಿಕೆಗೆ ಕೊರತೆ ಇರಲಿಲ್ಲ. ಆದರೆ ಅವರು ದೊಡ್ಡವರಾಗಿದ್ದು, ಇಂದಿಗೂ ಉಳಿದುಕೊಂಡು ಬಂದಿರುವುದು ಜಾತಿ, ಅಧಿಕಾರ, ಬುದ್ಧಿವಂತಿಕೆಯಿಂದ ಅಲ್ಲ. ಅವರು ದೊಡ್ಡವರಾಗಿದ್ದು ಜಾತಿ ಕೊಳೆ ತೊಳೆದುಕೊಂಡದ್ದರಿಂದ. ಅವರಿಗೆ ಉನ್ನತ ಕುಲ ಹೊರಲಾರದ ಹೊರೆಯಾಗಿತ್ತು. ಮೇಲಾಗಲೊಲ್ಲೆ, ಕೀಳಾಗಿರುವೆ ಎಂದು ಶಪಥ ಮಾಡಿದರು. ಅಪ್ಪನು ನಮ್ಮ ಮಾದಾರ ಚೆನ್ನಯ್ಯ ಎಂದು ತಳವರ್ಗದವರನ್ನು ಅಪ್ಪಿಕೊಂಡು ಅವರೊಂದಿಗೆ ಕರುಳಿನ ಸಂಬಂಧ ಬೆಳೆಸಿದರು. ಮಾದಾರ ಚೆನ್ನಯ್ಯನ ಮನೆಯ ದಾಸನ ಮಗ, ಡೋಹರ ಕಕ್ಕಯ್ಯನವರ ಮನೆಯ ದಾಸಿಯ ಮಗಳು ಹೊಲಕ್ಕೆ ಬೆರಣಿ ಆಯಲು ಹೋದಾಗ ಅವರಿಬ್ಬರ ಅಕ್ರಮ ಸಂಬಂಧಕ್ಕೆ ಹುಟ್ಟಿದವ ಎನ್ನುವರು. ಅದಕ್ಕೆ ಕೂಡಲ ಸಂಗನ ಸಾಕ್ಷಿ ಕೊಡುವರು.

ತಮ್ಮನ್ನು ತಾವು ಅಪವರ್ಗೀಕರಣಗೊಳಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ, ಆರ್ಥಿಕ-ಸಾಮಾಜಿಕ ಸ್ಥಾನ-ಮಾನಗಳಿಂದ ವಂಚಿತರಾದ ತಳವರ್ಗದ ಜನರೇ ತಮ್ಮ ಬಂಧು ಬಾಂಧವರೆಂದು ತಿಳಿದು ಅವರ ಜೊತೆ ಪ್ರೀತಿಯಿಂದ ಮಾತನಾಡಿದರು. ಅಷ್ಟು ಮಾತ್ರವಲ್ಲ; ಮುಟ್ಟುವ, ಮುಟ್ಟಿಸಿಕೊಳ್ಳುವ, ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸುವ ಕಾರ್ಯವನ್ನು ಸಂತೋಷದಿಂದ ಮಾಡಿದರು. ಆಗ ಬ್ರಾಹ್ಮಣನ ಮೇಲೆ ದಲಿತನ ನೆರಳು ಬಿದ್ದರೂ ಸ್ನಾನ ಮಾಡುವ ಪರಂಪರೆ ಇತ್ತು. ಅವನೊಂದಿಗೆ ಮಾತನಾಡಿದರೆ ಮಾತನಾಡಿದವನದೇ ಬಹುದೊಡ್ಡ ಅಪರಾಧವಾಗಿತ್ತು. ಮಾತನಾಡಿದ ಶೂದ್ರನಿಗೆ ಎಂಥ ಶಿಕ್ಷೆಯನ್ನು ಬೇಕಾದರೂ ಕೊಡಬಹುದಾಗಿತ್ತು. ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸುವುದು ಕಲ್ಪನೆಗೂ ಮೀರಿದ್ದು. ಆದರೆ ಬಸವಣ್ಣ ಅವರೊಂದಿಗೆ ಮಾತನಾಡಿದರು. ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು. ಅಪ್ಪ, ಅಣ್ಣ, ಚಿಕ್ಕಪ್ಪ, ತಾಯಿ, ದೊಡ್ಡವ್ವ, ದೊಡ್ಡಪ್ಪ ಎನ್ನುವ ಕರುಳಿನ ಸಂಬಂಧದ ಮೂಲಕ ಅವರೆಲ್ಲರ ನೆರಳಿನಂತಾದರು.

ಅಧಿಕಾರ ಸೇವೆಗೆ ಒಂದು ಸಾಧನ ಎಂದು ತಿಳಿದವರು ಬಸವಣ್ಣನವರು. ಅಧಿಕಾರದಿಂದ ಅವರಲ್ಲಿ ವಿನಯ ಬೆಳೆಯಿತೇ ಹೊರತು ಅಹಂಕಾರವಲ್ಲ. `ಒಡೆಯರು ಬಂದರೆ ಗುಡಿತೋರಣವ ಕಟ್ಟಿ, ನಂಟರು ಬಂದರೆ ಸಮಯವಿಲ್ಲೆನ್ನಿ’ ಎನ್ನುವ ತತ್ವವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದರು. ಒಡೆಯರು ಎಂದರೆ ಜನಸಾಮಾನ್ಯರು. ಪ್ರಜಾಸತ್ತಾತ್ಮಕ ಆಡಳಿತದಲ್ಲಿ ಪ್ರಜೆಗಳೇ ಒಡೆಯರು ಎನ್ನುವ ತತ್ವವನ್ನು ಮೊಟ್ಟಮೊದಲಿಗೆ ಜಾರಿಯಲ್ಲಿ ತಂದವರು ಬಸವಣ್ಣನವರು. ಅದೇ ಬಂಧು ಬಾಂಧವರನ್ನು ಆದಷ್ಟು ದೂರ ಇಡಬೇಕೆಂಬ ಸಂಕಲ್ಪ ಮಾಡಿಕೊಂಡರು. ಬಂಧು-ಬಾಂಧವರು ಬರುವುದು ಬಹುತೇಕ ಸ್ವಾರ್ಥ ಸಾಧನೆಗೆ. ಅವರು ನಿಜಕ್ಕೂ ನನ್ನ ಮೇಲಿನ ಗೌರವದಿಂದಲೇ ಬರುವವರಾಗಿದ್ದರೆ `ಇಂದು ಬರುವ ನೆಂಟರು ಅಂದೇಕೆ ಬಾರರು?’ ಎಂದು ಪ್ರಶ್ನೆ ಮಾಡುವರು. ಅಂದು ಎಂದರೆ ಬಾಲ್ಯದಲ್ಲಿ ಜನಿವಾರ ಸಂಸ್ಕಾರದ ಸಂದರ್ಭದಲ್ಲಿ ನನಗೆ ಹಾಕುವ ಜನಿವಾರ ನನ್ನ ತಾಯಿಗೆ, ನನಗಿಂತ ದೊಡ್ಡವಳಾದ ಅಕ್ಕನಿಗೆ ಏಕಿಲ್ಲ? ಮೊದಲು ಅವರಿಗೆ ಹಾಕಿರಿ. ಇಲ್ಲವಾದರೆ ನನಗೂ ಬೇಡ ಎಂದು ಪ್ರತಿಭಟಿಸಿದಾಗ… ನನಗೇ ಬಹಿಷ್ಕಾರ ಹಾಕಿದಾಗ…

ಅಂದಿನ ಕಾಲದಲ್ಲಿ ಬಹಿಷ್ಕಾರ ಹಾಕುವುದು ತುಂಬಾ ಅವಮಾನಕಾರಿ ಮತ್ತು ಅಪಾಯಕಾರಿಯಾಗಿತ್ತು. ಬಹಿಷ್ಕೃತರ ಜೊತೆ ಯಾರೂ ಮಾತನಾಡುವಂತಿಲ್ಲ. ಅವರೊಂದಿಗೆ ವ್ಯವಹರಿಸುವಂತಿಲ್ಲ. ಬೆಂಕಿ, ಬಿಸಿನೀರನ್ನು ನಿಲ್ಲಿಸುತ್ತಿದ್ದರು. ಆದರೆ ಬಾಲಕ ಬಸವ ಇಂಥದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ನೀವು ನನಗೆ ಬಹಿಷ್ಕಾರ ಹಾಕುವ ಮೊದಲು ನಾನೇ ನಿಮಗೆ ಮತ್ತು ನಿಮ್ಮ ಗೊಡ್ಡು ಸಂಪ್ರದಾಯಗಳಿಗೆ ಬಹಿಷ್ಕಾರ ಹಾಕುವೆ ಎನ್ನುವ ದಿಟ್ಟತನ ತೋರಿ ಹುಟ್ಟಿದ ಮನೆ, ಜಾತಿ, ಊರನ್ನು ತ್ಯಜಿಸಿ ಕೂಡಲಸಂಗಮ ಸುಕ್ಷೇತ್ರಕ್ಕೆ ಬರುವರು. ಅಲ್ಲೇ ಸಕಲ ವಿದ್ಯಾಪಾರಂಗತರಾದರು. ಮನೋಬಲ, ಆತ್ಮಸ್ಥೈರ್ಯ ಇದ್ದವ ಎಲ್ಲಿ ಬೇಕಾದರೂ ಬದುಕಬಲ್ಲ ಎನ್ನುವುದನ್ನು ತೋರಿಸಿದರು. ಮುಂದೆ ಅವರ ಬದುಕಿನ ಚಿತ್ರಣವೇ ಬದಲಾಯಿತು. ಹೌದು; ಒಳ್ಳೆಯವರಿಗೆ ಸಂಕಷ್ಟಗಳು ಬರುವುದು ಸಹಜ. ಅವುಗಳನ್ನು ಮೆಟ್ಟಿ ನಿಂತಾಗಲೇ ಅವರ ವ್ಯಕ್ತಿತ್ವದ ಅನಾವರಣವಾಗುವುದು. ಇದಕ್ಕೆ ಬಸವಣ್ಣನವರ ಬದುಕೇ ಸಾಕ್ಷಿ. ಅವರು ಕೋಶಾಧ್ಯಕ್ಷರಾಗಿ, ಕಲ್ಯಾಣದಲ್ಲಿ ಪ್ರಧಾನಿಯಾಗಿ ಉನ್ನತೋನ್ನತ ಸ್ಥಾನಕ್ಕೆ ಏರುತ್ತಲೇ ಹೋದರು. ಉನ್ನತ ಸ್ಥಾನಕ್ಕೆ ಹೋದಂತೆ ಅವರಲ್ಲಿ ವಿನಯ, ವಿವೇಕ ಹೆಚ್ಚುತ್ತ ಅಹಂಕಾರ ಅಡಗುತ್ತ ಹೋಯ್ತು.

ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ
ಕಾಲ ಮುಟ್ಟಲಮ್ಮನು, ಕಲ್ಪಿತ ತೊಡೆಯಿತ್ತು.
ಭವಬಂಧನ ಹಿಂಗಿತ್ತು, ಕರ್ಮ ನಿರ್ಮಳವಾಗಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು ‘ಇತ್ತ ಬಾ’ ಎಂದು ಎತ್ತಿಕೊಂಡನು.

ತಮ್ಮ ಬದುಕಿನ ಸಿಂಹಾವಲೋಕನ ಮಾಡಿಕೊಂಡಿದ್ದಾರೆ ಈ ವಚನದಲ್ಲಿ ಬಸವಣ್ಣನವರು. ಶಿವಶರಣರ ಮನೆ ಎಂದರೆ ಮಹಾಮನೆ ಮತ್ತು ಅನುಭವಮಂಟಪ. ಅಲ್ಲಿ `ದಾಸಿಯ ವರ್ಗದಲ್ಲಿಪ್ಪೆ’ ಎಂದು ಹೇಳಿಕೊಳ್ಳುವುದು ಎಂಥ ವಿನಯ! ಅದೆಷ್ಟು ಅಹಂಕಾರ ನಿರಶನ! ಒಬ್ಬ ಪ್ರಧಾನಿ ಹೀಗೆ ಹೇಳಲು ಸಾಧ್ಯವೇ ಎಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಬಸವಣ್ಣನವರು `ಸದುವಿನಯವೇ ಸದಾಶಿವನನ್ನು ಒಲಿಸುವ ದಾರಿ’ ಎಂದು ನಂಬಿ ನಡೆದದ್ದರಿಂದ ಯಮ ಕೂಡ ಹತ್ತಿರ ಸುಳಿಯನು ಎನ್ನುವರು. ಸೇವೆಯಲ್ಲಿಯೇ ಸಂತೃಪ್ತಿ ಕಂಡರು. `ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಕಿಂಕರತ್ವದಿಂದ ಅವರ ಬದುಕಿನಲ್ಲಿ ಅದ್ಭುತ ಬದಲಾವಣೆ ಆಯ್ತು. ಅಂಥವರೇ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ, ಕಸ ಹೊಡೆಯುತ್ತಾರೆ, ಸುಖ-ದುಃಖ ವಿಚಾರಿಸುತ್ತಾರೆ ಎಂದರೆ ಅವರ ಬಗ್ಗೆ ತನ್ನಿಂದ ತಾನೇ ಗೌರವ ಮೂಡುವುದು. ಶರಣರು ಬಿಟ್ಟ ಪ್ರಸಾದವನ್ನು ಸ್ವೀಕರಿಸುವ ಎನ್ನುವ ಮಾತು ದೊಡ್ಡವರ ಬಾಯಿಂದ ಬರಲು ಸಾಧ್ಯವೇ? ಆದರೆ ಬಸವಣ್ಣನವರ ಬಾಯಿಂದ ಬಂದದ್ದು ಮಾತ್ರವಲ್ಲ; ಹಾಗೆಯೇ ಬದುಕಿದರು.

ಹರಗಣಪಙ್ತಯ ನಡುವೆ ಕುಳ್ಳಿರ್ದು
ನಾನು ಒಡೆತನದ ನಾಯಿತೇಜವ ಹೊತ್ತುಕೊಂಡು,
ಮಡದಿಯೆನ್ನಗಲೊಳಗೆ ಸಕಲದೇವಾನ್ನವ
ಒಡೆಯರಿಂದವೂ ಮಿಗಿಲಾಗಿ ಇಕ್ಕಲು, ತೆಗೆದಿರಿಸಿದೆನು.
ಈ ಪರಿಯ ಆಯ ಕಣ್ಗೆ ತೋರಲು ಕಿಲ್ಬಿಷವಾದವು.
ಕರುಣಿ ಚೆನ್ನಬಸವಣ್ಣಾ, ಮರೆದು ಕೊಂಡೆನಾದಡೆ,
ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ.

ಬಸವಣ್ಣನವರಿಗೆ ಹರಳಯ್ಯ, ಚಿಕ್ಕಯ್ಯ, ಕಕ್ಕಯ್ಯ, ಸತ್ಯಕ್ಕ, ಕಾಳವ್ವೆ, ಮಹಾದೇವಮ್ಮ, ಕೇತಯ್ಯ ಇಂಥವರೇ ಒಡೆಯರು. ಸಂಬಂಧಗಳು ಗಟ್ಟಿಗೊಳ್ಳುವುದು ಎಲ್ಲರೂ ಕೂಡಿ ಪ್ರಸಾದ ಸ್ವೀಕರಿಸುವ ಪದ್ಧತಿ ಬೆಳೆಸಿಕೊಂಡಾಗಲೇ. ಹಾಗೆ ಮಹಾಮನೆಯಲ್ಲಿ ಎಲ್ಲ ಶರಣ ಶರಣೆಯರ ಸಾಲಿನಲ್ಲಿ ಬಸವಣ್ಣನವರೂ ಪ್ರಸಾದಕ್ಕೆ ಕೂತಿದ್ದಾರೆ. ಪ್ರಸಾದ ಎಡೆ ಮಾಡುತ್ತಿದ್ದ ಅವರ ಸಹಧರ್ಮಿಣಿ ಪತಿ ಎನ್ನುವ ಪ್ರೀತಿಯಿಂದ ಬಸವಣ್ಣನವರ ತಟ್ಟೆಯಲ್ಲಿ ಹೆಚ್ಚು ದೇವಾನ್ನವನ್ನು ಎಡೆ ಮಾಡಿದ್ದಾಳೆ. ತಾನು ಒಡೆಯರೆಂದು ನಂಬಿದ್ದವರನ್ನು ಉಪೇಕ್ಷಿಸಿ ನನಗೆ ಹೆಚ್ಚಿಗೆ ನೀಡಿದಳಲ್ಲ ಎಂದು ನೊಂದುಕೊಳ್ಳುವರು. ಎಂಥ ಅಪರಾಧವಾಯ್ತಲ್ಲ ಎಂದು ಪರಿತಪಿಸುವರು. ಅಷ್ಟಕ್ಕೇ ಸುಮ್ಮನಾಗದೆ ಅದನ್ನು ಪ್ರತ್ಯೇಕ ತೆಗೆದಿಡುವರು. ಇಲ್ಲದಿದ್ದರೆ ಅದು ದೇವಾನ್ನವಲ್ಲ; ವಿಷ ಎನ್ನುವ ಭಾವ ಅವರ ಮನದಲ್ಲಿ ಮೂಡುವುದು. ಹಾಗೆ ತೆಗೆದಿಡದೆ ನಾನು ಮರವಿನಿಂದ ಸ್ವೀಕರಿಸಿದರೆ ಕೂಡಲಸಂಗಯ್ಯ ಕೆಡವಿ ನರಕದಲ್ಲಿಕ್ಕುವ ಎನ್ನುವ ಮಾತು ಮತ್ತೆ ಮತ್ತೆ ಮನನ ಮಾಡುವಂತಹುದು. ಇದು ಸಮಾನತೆ. ಇದು ಇಂದು ಬೇಕಾಗಿರುವ ತತ್ವ. ಇಂಥ ವಿವೇಕದಿಂದ ಬಸವಣ್ಣ ಇಂದಿಗೂ ಎಲ್ಲರ ಮನದಲ್ಲಿ ನೆಲೆನಿಂತಿರುವುದು.

ಬಸವಣ್ಣನವರು ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ, ಎಲ್ಲರೂ ಅವರಿಗೆ ಅಪಾರ ಗೌರವ ಕೊಡುತ್ತಿದ್ದರೂ ಅವರು ಅದರಿಂದ ಸ್ವಲ್ಪವೂ ಬೀಗದೆ ಬಾಗಿ ನಡೆದರು. ಅದೇ ನಿಜವಾದ ಮನುಷ್ಯತ್ವ. ಹುಟ್ಟಿನ ಜಾತಿಗೆ ಮನ್ನಣೆಯೇ ಇಲ್ಲ. ಈಗ `ಕೊರೊನಾ’ ಎಲ್ಲರನ್ನೂ ಕಾಡುತ್ತಲಿದೆ. ಬಡವ-ಶ್ರೀಮಂತ, ಮೇಲ್ಜಾತಿ-ಕೆಳಜಾತಿ, ಮಂತ್ರಿ-ಕೂಲಿಕಾರ, ಸ್ವಾಮಿ-ಭಕ್ತ ಎನ್ನುವ ಅಂತರವೇ ಅದಕ್ಕಿಲ್ಲ. ಬದುಕಿದರೆ ಸಾಕು; ಜಾತಿ, ಅಂತಸ್ತು ಕಟ್ಟಿಕೊಂಡೇನು ಎಂದು ಎಲ್ಲರೂ ವೈದ್ಯರ ಜಾತಿಯನ್ನು ನೋಡದೆ ಅವರೇ ನಿಜವಾದ ದೇವರು ಎಂದು ಚಿಕಿತ್ಸೆ ಪಡೆಯುವರು. ಇಲ್ಲಿ ಜಾತಿ, ಅಧಿಕಾರ, ಸಂಪತ್ತು, ಅಹಂಕಾರ ಯಾವುದೂ ಮುಖ್ಯವಾಗುವುದಿಲ್ಲ. ಇಂಥವುಗಳಿಂದಾದರೂ ಮನುಷ್ಯ ವಿವೇಕಿಯಾಗಿ ಬಾಳುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ದೊಡ್ಡವ, ಸಣ್ಣವ ಎನ್ನುವ ಭಾವನೆಯೇ ಬದುಕಿನ ನೆಮ್ಮದಿಗೆ ಬೆಂಕಿ ಇಡುವುದು. ಆದರ್ಶಗಳನ್ನು ಗಾಳಿಗೆ ತೂರುವಂತೆ ಮಾಡುವುದು. ಬದ್ಧತೆಯ ಬದಲು, ಹೊತ್ತು ಬಂದಂತೆ ಕೊಡೆ ಹಿಡಿಯುವ ಗೋಸುಂಬೆತನ ಬೆಳೆಸುವುದು. ಇಂಥ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ ಬಸವಣ್ಣನವರ ವಚನಗಳನ್ನು.

ಕರಿ ಘನ: ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾ.
ಗಿರಿ ಘನ: ವಜ್ರ ಕಿರಿದೆನ್ನಬಹುದೆ? ಬಾರದಯ್ಯಾ.
ತಮಂಧ ಘನ: ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾ.
ಮರಹು ಘನ: ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾ
ಕೂಡಲಸಂಗಮದೇವಾ.

ಮನುಷ್ಯನ ಬಂಧನ ಮತ್ತು ಬಿಡುಗಡೆಗೆ ಕಾರಣ ಅವನ ಮನಸ್ಸೇ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ. ಈ ತತ್ವವನ್ನು ಬಸವಣ್ಣನವರು ಎಷ್ಟು ಪರಿಣಾಮಕಾರಿಯಾಗಿ ಮನಗಾಣಿಸಿದ್ದಾರೆ ನೋಡಿ. ಕರಿ ಎಂದರೆ ಆನೆ. ಆನೆಯ ಮುಂದೆ ಮಾನವ ತೀರಾ ಸಣ್ಣವ. ಅದೇನಾದರೂ ಬಾಲ ಬೀಸಿದರೆ, ಸೊಂಡಿಲನ್ನು ತಾಗಿಸಿದರೆ ಮಾನವ ಅಷ್ಟು ದೂರ ಬೀಳುವನು. ಅದಕ್ಕೆ ಸಿಟ್ಟು ಬಂದರೆ ಕಾಲಲ್ಲಿ ಹೊಸಕಿ ಹಾಕಬಹುದು. ಆದರೆ ಅದು ಎಷ್ಟೇ ಬಲಿಷ್ಟ ಪ್ರಾಣಿಯಾಗಿದ್ದರೂ ಒಂದು ಚಿಕ್ಕ ಅಂಕುಶದಿಂದ ಅದನ್ನು ಪಳಗಿಸಬಹುದು. ಆನೆಯ ಮೇಲೆ ಕೂತ ಮಾವುತ ಆ ಅಂಕುಶದಿಂದ ತಿವಿಯುವ ಮೂಲಕ ತಾನು ಹೇಳಿದಂತೆ ಆನೆ ಕೇಳುವಂತೆ ಮಾಡುವನು. ಅಲ್ಲಿಗೆ ಆನೆಗಿಂತ ಅಂಕುಶವೇ ಕಿರಿದೆನ್ನಲು ಸಾಧ್ಯವೇ?

ಪರ್ವತ ಅಗಾಧವಾದುದು. ಅದರ ಮುಂದೆ ನಿಂತವರೆಲ್ಲ ಕುಬ್ಜರೆ. ಹಿಂದೆ ಪರ್ವತಗಳಿಗೆ ರೆಕ್ಕೆಗಳಿದ್ದವು ಎನ್ನುವ ಪೌರಾಣಿಕ ಕಲ್ಪನೆ ಇದೆ. ಆ ರೆಕ್ಕೆಗಳನ್ನು ಕತ್ತರಿಸಿದ್ದು ಒಂದು ಕ್ಷುಲ್ಲಕವಾದ ವಜ್ರದ ತುಂಡು. ವಜ್ರದ ತುಂಡಿನ ಮುಂದೆ ಬೃಹತ್ತಾದ ಪರ್ವತದ ಆಟವೂ ನಡೆಯದು ಎನ್ನುವ ಸತ್ಯವನ್ನು ಮನಗಾಣಿಸಿದ್ದಾರೆ. ಮುಂದೆ ಕೊಡುವ ನಿದರ್ಶನ ಇನ್ನೂ ಪರಿಣಾಮಕಾರಿ. ಗಾಢ ಕತ್ತಲೆ ಆವರಿಸಿದಾಗ ಕಣ್ಣಿದ್ದವರೂ ಮುಂದೆ ಸಾಗಲು ಆಗದು. ಅಂಥ ಸಂದರ್ಭದಲ್ಲಿ ಒಂದು ದೀಪ ಹಿಡಿದುಕೊಂಡರೆ ಗಾಡಾಂಧಕಾರ ತನ್ನಷ್ಟಕ್ಕೆ ತಾನೇ ಮರೆಯಾಗುವುದು. ಆನೆ, ಪರ್ವತ, ಕತ್ತಲೆಯ ನಿದರ್ಶನಗಳ ಮೂಲಕ ಮಾನವನ ಬಳಿ ಬರುತ್ತಾರೆ ಬಸವಣ್ಣನವರು. ಮನುಷ್ಯನಿಗೆ ಎಲ್ಲಿಲ್ಲದ ಮರೆವು. ಈಗ ಆಡಿದ ಮಾತು ಮರುಕ್ಷಣದಲ್ಲೇ ಮರೆತುಹೋಗಿರುತ್ತದೆ. ಕೆಲವರಿಗಂತೂ ಮರೆಗುಳಿ ರೋಗ. ಅವರ ಮರೆಯುವ ಸ್ವಭಾವದಿಂದಾಗಿ ಎಷ್ಟೋ ಅವಗಢಗಳೂ ನಡೆದಿರುವುದುಂಟು. ಎಲ್ಲಿಗೋ ಹೋಗಬೇಕಾದವರು ಮತ್ತೆಲ್ಲಿಗೋ ಹೋಗುವರು. ಏನನ್ನೋ ಮಾಡಬೇಕಾದವರು ಮತ್ತೇನನ್ನೋ ಮಾಡುವರು.

ಕೆಲವರು ಮರೆವಿನ ರೋಗಕ್ಕೆ ತುತ್ತಾಗಿ ತಮ್ಮ ಮನೆಗೆ ಹೋಗುವ ಬದಲು ಮತ್ತೊಂದು ಮನೆಗೆ ಹೋಗಿ ಕದ ತಟ್ಟುವರು ಎಂದು ತಮಾಷೆಗೆ ಹೇಳುವುದುಂಟು. ಹೀಗೆ ಮರವು ಎಷ್ಟೇ ದೊಡ್ಡದಾದರೂ `ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾ’ ಎನ್ನುವರು ಬಸವಣ್ಣನವರು. ಮನುಷ್ಯ ತನ್ನೊಳಗೆ ತಾನು ಮಾಗುತ್ತ, ಮನದೊಡೆಯನ ಸ್ಮರಣೆ ಮಾಡಿಕೊಳ್ಳುತ್ತಿದ್ದರೆ ಅವನ ಅಂತರಂಗದ ಅರಿವು ಜಾಗೃತವಾಗುವುದು. ಬಾಹ್ಯ ಜ್ಞಾನಕ್ಕಿಂತ ಅಂತರಂಗದ ಅರಿವು ವ್ಯಕ್ತಿತ್ವಕ್ಕೆ ನಿಜವಾದ ಘನತೆ ತಂದು ಕೊಡುವುದು. ಈ ನಿಟ್ಟಿನಲ್ಲಿ ಬಸವಣ್ಣನವರು ತಮ್ಮ ಅಂತರಂಗದ ಅರಿವಿಗೆ ಒತ್ತು ಕೊಟ್ಟವರು. ಮನುಷ್ಯ ಅಂತರಂಗದ ಸಾಕ್ಷಿಯಾಗಿ ಬಾಳುವುದನ್ನು ರೂಢಿಸಿಕೊಂಡಾಗ ಬಾಹ್ಯ ವ್ಯಕ್ತಿತ್ವಕ್ಕೆ ಮೆರಗು ಬರುವುದು. ನೆಮ್ಮದಿಯ ಬದುಕಿಗೆ ದಾರಿಯಾಗುವುದು. ಬಸವಣ್ಣ ಅಂಥ ನೆಮ್ಮದಿಯ ಬದುಕನ್ನು ಕಂಡುಕೊಂಡವರು. ಅದಕ್ಕೆ ಸಾಕ್ಷಿ ನುಡಿಯುವಂತಿದೆ ಅವರ ವಚನ.

ಕಲ್ಪಿತವ ಕಳೆದ, ಅಕಲ್ಪಿತವ ತಿಳುಹಿದ,
ಮನವ ಮಾಣಿಸಿ ಘನವ ನೆಲೆಗೊಳಿಸಿದ.
ತನುವ ಕೆಡಿಸಿ, ಅನುವ ಸ್ಥಾಪ್ಯವ ಮಾಡಿ,
ಅಂತರಂಗದಲ್ಲಿ ಮಹಾಜ್ಞಾನವ ತುಂಬಿದ.
ಬಹಿರಂಗದಲ್ಲಿ ಸದಾಚಾರವ ನೆಲೆಗೊಳಿಸಿದ.
ನಿಮ್ಮ ನಿಲವನೆನಗೆ ಒರೆದೊರೆದು ಹೇಳಿ ತೋರಿಸಿ,
ಎನ್ನ ನಿಮ್ಮ ಶ್ರೀಪಾದಕ್ಕೆ ಯೋಗ್ಯನ ಮಾಡಿದ.
ಕೂಡಲಸಂಗಮದೇವಯ್ಯಾ, ನಿಮ್ಮ ಮಹಾಮನೆಯಲ್ಲಿ
ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ.

`ಮಹಾಮನೆಯಲ್ಲಿ ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ’ ಎನ್ನುವ ಮಾತನ್ನು ಗಮನಿಸಬೇಕು. ಹಾಗೆ ಸುಖದಲ್ಲಿ ಇರಲು ಮುಖ್ಯ ಕಾರಣ ಅಂತರಂಗದಲ್ಲಿ ಮಹಾಜ್ಞಾನ, ಬಹಿರಂಗದಲ್ಲಿ ಸದಾಚಾರ ನೆಲೆಗೊಳಿಸಿದ್ದು. ಅವರಿಗೆ ಅಂತರಂಗ, ಬಹಿರಂಗ ಎನ್ನುವ ಭಿನ್ನತೆಯೇ ಇರಲಿಲ್ಲ. ಎರಡೂ ಒಂದಾದಾಗ ಸುಖ ಅಂಗೈ ನೆಲ್ಲಿಯಾಗುವುದು. ಆ ವ್ಯಕ್ತಿಗೆ ಮಾತ್ರವಲ್ಲ; ಅವನ ಸುತ್ತ ಇರುವವರಿಗೆ ಸಹ. ಬಸವಣ್ಣನವರ ಜೊತೆಗೆ ಇದ್ದವರು ಶ್ರೀಮಂತರು, ಧೀಮಂತರು, ಅಧಿಕಾರಸ್ಥರು ಅಲ್ಲ. ಶುದ್ಧ ಕಾಯಕ ಜೀವಿಗಳು. ತನು, ಮನ, ಧನದಲ್ಲಿ ಶುಚಿತ್ವ ಕಾಯ್ದುಕೊಂಡವರು. ಇವತ್ತು ಕಾಯಕ ಜೀವಿಗಳು ಎಂದಾಕ್ಷಣ ಅವರನ್ನು ಗೌರವದಿಂದ ಕಾಣುವವರೇ ವಿರಳ. ನಾನು ಯಜಮಾನ, ಅವರು ಸೇವಕರು. ನಾನು ಹೇಳಿದಂತೆ ಅವರು ಮಾಡಬೇಕು. ಅವರು ಜೀವಿಸಿರುವುದೇ ನನ್ನ ಕರುಣೆಯಿಂದ ಎನ್ನುವ ಅಹಂಭಾವ ಹಲವರದು. ಆದರೆ ಬಸವಣ್ಣನವರಲ್ಲಿ ಅಂತಹ ಅಹಂಭಾವ ಇರಲಿಲ್ಲ. `ಕೂಡಲಸಂಗನ ಶರಣರ ಮನ ನೊಂದರೆ ಆನು ಬೆಂದೆನಯ್ಯಾ’ ಎನ್ನುವ ಸಂಕಲ್ಪ ಅವರದಾಗಿತ್ತು. ಹಾಗಾಗಿ `ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ’ ಎನ್ನುವರು.

ಬಸವಣ್ಣನವರ ಬದುಕು ಪಾರದರ್ಶಕ. ಹಾಗಾಗಿ ತಾವು ತಪ್ಪೆಸಗಿದರೂ ಅದನ್ನು ಒಪ್ಪಿಕೊಳ್ಳುವ ಧೀಮಂತಿಕೆ ಅವರಲ್ಲಿತ್ತು. ಅವರು ಸಾಮಾಜಿಕ ಪರಿವರ್ತನೆಗೆ ಕೈ ಹಾಕುವ ಮುನ್ನ ವ್ಯಕ್ತಿಗತ ದೋಷಗಳ ನಿವಾರಣೆಗೆ ಒತ್ತು ಕೊಟ್ಟರು. ಲೋಕದ ಡೊಂಕನ್ನು ತಿದ್ದುವ ಮುನ್ನ ತಮ್ಮ ತನು, ಮನವನ್ನು ತಿದ್ದಿಕೊಂಡರು. ಅಹಂಕಾರ ಆವರಿಸಿ ನನ್ನನ್ನು ಗಾಯಗೊಳಿಸದಿರಲಿ ಎಂದು ದೇವರಲ್ಲಿ ಮತ್ತೆ ಮತ್ತೆ ಪ್ರಾರ್ಥಿಸಿಕೊಳ್ಳುತ್ತಿದ್ದರು. `ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎನ್ನವ ಒಳ ಎಚ್ಚರ ಅವರಲ್ಲಿತ್ತು. ಹಾಗಾಗಿ `ಮಾವಿನಕಾಯೊಳಗೊಂದು ಎಕ್ಕೆಯ ಕಾಯಿ ನಾನು’ ಎನ್ನುವ ವಿನಯ, ವಿವೇಕ ಅವರಲ್ಲಿ ಸ್ಥಾಯಿಯಾಗಿತ್ತು. ಇಂಥ ಗುಣಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಬಸವ ಜಯಂತಿಯ ಆಚರಣೆ ಅರ್ಥಪೂರ್ಣವಾಗುವುದು. ಈಗಂತೂ ಬಹಿರಂಗದಲ್ಲಿ ಬಸವ ಜಯಂತಿಯನ್ನು ಆಚರಿಸಲು `ಕೊರೊನಾ’ ಹೆಮ್ಮಾರಿ ಯಾರಿಗೂ ಅವಕಾಶ ನೀಡುತ್ತಿಲ್ಲ. ಇದು ಇನ್ನೊಂದು ರೀತಿಯಲ್ಲಿ ಒಳ್ಳೆಯದೇ ಆಯ್ತು.

ಬಹಿರಂಗಕ್ಕಿಂತ ಅಂತರಂಗವನ್ನು ಅರಳಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ. ಆದುದರಿಂದ ಬಸವ ಜಯಂತಿಯನ್ನೇ ಒಂದು ನೆಪವಾಗಿಸಿಕೊಂಡು ಶರಣರ ವಚನಗಳನ್ನು ಓದುವ, ಅರಿಯುವ, ಅನುಷ್ಠಾನದಲ್ಲಿ ತರುವ ಸತ್ಸಂಕಲ್ಪ ಸ್ವೀಕರಿಸಬೇಕು. ಬಸವಣ್ಣನವರ ತತ್ವಗಳನ್ನು ಪರಿಪಾಲಿಸುವುದು ಎಂದರೆ ಕೇವಲ ಕಾಯಕ ಮತ್ತು ದಾಸೋಹ ಪ್ರಜ್ಞೆ ಬೆಳೆಸಿಕೊಳ್ಳುವುದಷ್ಟೇ ಅಲ್ಲ. ಬಹಳಷ್ಟು ಜನರು ಕಾಯಕ, ದಾಸೋಹದ ಬಗ್ಗೆ ಮೆಚ್ಚುಗೆ ಸೂಚಿಸಿ ಪುಂಖಾನುಪುಂಖವಾಗಿ ಮಾತನಾಡಿದರೂ ಅವುಗಳ ಜೊತೆಯಲ್ಲೇ ಬರುವ ಪೂಜೆಯನ್ನು ಪರಿಗಣಿಸುವುದಿಲ್ಲ. ಕಾಯಕ, ದಾಸೋಹ ತತ್ವಗಳಿಗೆ ಮೆರಗು ಬರುವುದೇ ಪೂಜೆಯಿಂದ. ಎಷ್ಟೋ ಜನರು ಪೂಜೆ ಎನ್ನುತ್ತಲೇ ಹೊರಗಿನ ಗುಡಿ-ಗುಂಡಾರ, ಪೂಜಾರಿ-ಪುರೋಹಿತರತ್ತ ಮುಖ ಮಾಡುವರು. ಆದರೆ ಶರಣರು ಬಾಹ್ಯ ಗುಡಿ-ಗುಂಡಾರ, ಪೂಜಾರಿ-ಪುರೋಹಿತರನ್ನು ನಿರಾಕರಿಸಿದರು. ಬಾಹ್ಯ ಗುಡಿಗೆ ಬದಲು ದೇಹವನ್ನೇ ಗುಡಿಯಾಗಿಸಿಕೊಳ್ಳಲು ಸೂಚಿಸಿ ಜೀವನೇ ಶಿವನಾಗಬೇಕೆಂದರು. ಇದನ್ನು ಅರ್ಥ ಮಾಡಿಕೊಂಡು ಕಾಯಕ, ದಾಸೋಹ ಮತ್ತು ಪೂಜೆಗೆ ಸಮಾನ ಸ್ಥಾನ ನೀಡಿದರೆ ಯಾವುದಕ್ಕೂ ಹೆದರಬೇಕಿಲ್ಲ. ಅದನ್ನೇ ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ ವೈದ್ಯ ಸಂಗಣ್ಣ.

ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ.
ಸಕಲ ಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ,
ಪಂಚಾಕ್ಷರಿ ಪ್ರಣಾಮವ ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ,
ಇದರಿಂದ ರುಜೆದರ್ಪಂಗಡಗು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ

ಈ ವಚನದ ಆಶಯ ಅರಿತು ಬಸವ ಜಯಂತಿಯನ್ನು ಮನ, ಮನೆಯೊಳಗೆ ಮಾಡಿಕೊಂಡರೆ ಮನುಷ್ಯತ್ವಕ್ಕೆ ಮೆರಗು ಬರುವುದು. ಆತ್ಮಕಲ್ಯಾಣದೊಂದಿಗೆ ಲೋಕ ಕಲ್ಯಾಣವೂ ಆಗುವುದು. ಡಾ. ಜಿ ಎಸ್ ಶಿವರುದ್ರಪ್ಪನವರ ಬಸವಣ್ಣನವರನ್ನು ಕುರಿತ ಪದ್ಯದ ಕೆಲವು ಸಾಲುಗಳೇ ಹೇಳುತ್ತವೆ `ಬಸವಣ್ಣನವರ ಸ್ಮರಣೆ ಇಂದಿಗೂ ಏಕೆ? ಎನ್ನುವುದಕ್ಕೆ ಉತ್ತರವನ್ನು.

ಇರಬಹುದು ನಿನಗಿಂತ ದೊಡ್ಡವರು, ಅನುಭಾವ
ದಲ್ಲಿ ಮೇಲೇರಿ ಬಯಲಾದವರು; ಇರಬಹುದು
ನಿನಗಿಂತಲೂ ದೊಡ್ಡ ತ್ಯಾಗಿಗಳು, ವಿರಾಗಿಗಳು.
ಇರಲಾರರೆಂದೇ ತೋರುತಿದೆ ನಿನ್ನಂತೆ ನಿನ್ನೊಳಗಿ-
ನಂಕು ಡೊಂಕುಗಳನ್ನು ಕಂಡುಕೊಂಡವರು; ಇರ-
ಲಾರರೆಂದೇ ತೋರುತಿದೆ ನಿನ್ನಂತೆ ಒಳಗು ಹೊರಗು
ಗಳನ್ನು ಮುಚ್ಚುಮರೆಯಿಲ್ಲದೆಯೆ ದಿನವೂ ಬಿಚ್ಚಿಟ್ಟು
ಒಗೆದು ಮಡಿಮಾಡಿ, ಇಷ್ಟದೈವದ ಗುಡಿಗೆ ನಡೆ
ಮಡಿಯಾಗಿ ಹಾಸಿದವರು…

Previous post   ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
Next post ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3

Related Posts

ವಚನ – ಸಾಂಸ್ಕೃತಿಕ ತಲ್ಲಣಗಳು
Share:
Articles

ವಚನ – ಸಾಂಸ್ಕೃತಿಕ ತಲ್ಲಣಗಳು

November 1, 2018 ಡಾ. ನಟರಾಜ ಬೂದಾಳು
ವಚನಗಳನ್ನು ಏಕೆ ಓದುತ್ತಿದ್ದೇವೆ ಮತ್ತು ಹೇಗೆ ಓದುತ್ತಿದ್ದೇವೆ? ಎನ್ನುವ ಪ್ರಶ್ನೆಯನ್ನು ಇದಿರಾಗದೆ ಗತ್ಯಂತರವಿಲ್ಲ. ವಚನಗಳನ್ನು ಓದುವವರೆಲ್ಲ ಅದರ ಅನುಸಂಧಾನಕ್ಕೆ, ಪಾಲನೆಗೆ...
ಅನುಪಮ ಯೋಗಿ ಅನಿಮಿಷ
Share:
Articles

ಅನುಪಮ ಯೋಗಿ ಅನಿಮಿಷ

May 6, 2020 ಹೆಚ್.ವಿ. ಜಯಾ
ವಿಜಯಪುರ ಜಿಲ್ಲೆಯ ಪಟ್ಟದಕಲ್ಲಿನಲ್ಲಿ ತ್ರೈಲೋಕ್ಯ ಚೂಡಾಮಣಿ ಹಾಗೂ ಪತ್ನಿ ಮಹರ್ಲೋಕಿ ಎಂಬ ಶಿವಭಕ್ತ ರಾಜ ದಂಪತಿಗಳಿಗೆ ಹುಟ್ಟಿದ ಮಗನೇ ‘ವಸುಧೀಶ’. ವಸುಧೀಶ ರಾಜಕುಮಾರನು ಬೆಳೆದು...

Comments 11

  1. Dr. Panchakshari Halebeedu
    May 8, 2020 Reply

    ಬಸವ ತತ್ವವೆಂಬುದು ಇಂದು ಕನ್ನಡಿಯಿಂದ ಕನ್ನಡಿಗೆ ಪ್ರತಿಪಲನಗೊಂಡು ಹೊರಗಡೆ ಬೆಳಕನ್ನು ಬೀರುತ್ತಾ ಆ ಬೆಳಕನ್ನು ಒಳಗಡೆ ಬಿಟ್ಟುಕೊಳ್ಳದ ಹಾಗೆ ಆಗಿದೆ.
    ಪ್ರತಿಯೊಬ್ಬ ಭಾಷಣಕಾರನೂ ಎಲ್ಲರೂ ಬಸವ ತತ್ವ ಅಳವಡಿಸಿಕೊಂಡರೆ ಜಗತ್ತು ಹಾಗಾಗುತ್ತದೆ ಹೀಗಾಗುತ್ತದೆ ಎಂದು ಹೇಳತ್ತಾರೆ. ಆದರೆ ಯಾವೊಬ್ಬ ಭಾಷಣಕಾರನೂ ನಾನು ಈ ಕ್ಷಣದಿಂದ ಬಸವಣ್ಣನವರ ಒಂದು ವಚನವನ್ನಾದರೂ ಪಾಲಿಸುತ್ತೇನೆ ಎಂದು ಹೇಳುವುದಿಲ್ಲ. ಅದೇ ವಿಪರ್ಯಾಸ.
    ಗುರುಗಳೇ ಉತ್ತಮ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದೀರಿ.

    ಶರಣುಶರಣಾರ್ಥಿ.

  2. ಫಕೀರಪ್ಪ, ರಾಣೆಬೆನ್ನೂರು
    May 8, 2020 Reply

    ಬಸವಣ್ಣನವರ ವ್ಯಕ್ತಿತ್ವವನ್ನು ಸರಳ, ಸುಂದರ ಮಾತುಗಳಲ್ಲಿ ತಿಳಿಸಿದ್ದಾರೆ. ಏನಾದರೂ ಆಗಬಹುದು, ಬಸವಣ್ಣನಾಗುವುದು ಅಸಾಧ್ಯ.
    -ಫಕೀರಪ್ಪ, ರಾಣೆಬೆನ್ನೂರು

  3. Lalithamma
    May 8, 2020 Reply

    ಲಿಂಗಾಯತರಲ್ಲಿ ಸ್ವಲ್ಪವೂ ಅಹಂಕಾರ, ಮದ ಇರಬಾರದು- ಯಾಕೆಂದರೆ ಅವರ ಧರ್ಮಗುರು ಮಹಾ ವಿಧೇಯವಂತರು. ಜಗತ್ತಿನಲ್ಲೇ ಇಂಥ ವಿನಯ ಪುರುಷ ಸಿಗಲಿಕ್ಕಿಲ್ಲ.

  4. ಗುರುರಾಜ್ ಮನಹಳ್ಳಿ
    May 11, 2020 Reply

    ಬಸವಣ್ಣನವರ ಕುರಿತಾದ ಶ್ರೀಗಳ ಲೇಖನ ಚೆನ್ನಾಗಿದೆ.

  5. Satish J.P
    May 13, 2020 Reply

    ಅಧಿಕಾರವನ್ನು ಸೇವೆಗೆ ಒಂದು ಸಾಧನವೆಂದು ಭಾವಿಸಿದವರಲ್ಲಿ ಬಹುಶಃ ಬಸವಣ್ಣನವರೇ ಮೊದಲಿಗರಿರಬೇಕು. ಭಾರತದ ಇತಿಹಾಸದಲ್ಲಿ ಯಾವತ್ತೂ ಮರೆಯದ ಹೆಸರು ಬಸವಣ್ಣ.

  6. Jagannatha Patil
    May 13, 2020 Reply

    ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ಶ್ರೀಗಳು ನೀಡಿದ ಸಲಹೆ ಬಹಳ ಚೆನ್ನಾಗಿದೆ.ವ್ಯಕ್ತಿಗತ ಜೀವನದಲ್ಲಿ ಬಸವತತ್ವವನ್ನು ಅಳವಡಿಸಿಕೊಳ್ಳುವುದೇ ಎಲ್ಲಕ್ಕಿಂತಲೂ ಮುಖ್ಯವಾದದ್ದು. ಕೇವಲ ಢಂಬಾಚಾರದ ಆಚರಣೆ ಅವರಿಗೆ ಮಾಡುವ ಗುರುದ್ರೋಹ.

  7. ಚನ್ನಪ್ಪ ಮುದೇನೂರು
    May 20, 2020 Reply

    ನಾನು ಶ್ರೀಗಳ ಅಭಿಮಾನಿ. ಅವರ ಲೇಖನಗಳನ್ನು ಪ್ರತಿ ತಿಂಗಳು ತಪ್ಪದೇ ಓದುತ್ತೇನೆ. ಅವರ ಸಮಾಜ ಕಳಕಳಿ ಎಲ್ಲರನ್ನೂ ತಲುಪುವಂತಾಗಬೇಕು. ಬಸವಣ್ಣನವರ ವ್ಯಕ್ತಿತ್ವವನ್ನು ಸುಂದರವಾಗಿ ಇಲ್ಲಿ ಚಿತ್ರಿಸಿದ್ದಾರೆ. ಮತ್ತೆ ಕಲ್ಯಾಣವನ್ನು ಕರ್ನಾಟಕದ ಜನತೆ ಮರೆಯಲು ಸಾಧ್ಯವಿಲ್ಲ.

  8. ಕೀರ್ತಿಪ್ರಸಾದ
    May 24, 2020 Reply

    ಹರಳಯ್ಯ, ಚಿಕ್ಕಯ್ಯ, ಕಕ್ಕಯ್ಯ, ಸತ್ಯಕ್ಕ, ಕಾಳವ್ವೆ, ಮಹಾದೇವಮ್ಮ, ಕೇತಯ್ಯ….. ಇವರೇ ಬಸವಣ್ಣನವರ ಒಡೆಯರು! ಈಗಿನ ಗುರುಗಳಿಗೆ ಶ್ರೀಮಂತರು, ರಾಜಕಾರಣಿಗಳೇ ಒಡೆಯರು!! ಬಸವಣ್ಣನವರ ಹೆಸರು ಹೇಳಲು ಮಾತ್ರ, ಅವರು ಹಾಗೆ ಹೀಗೆ ಎಂದು ಜಪಿಸಿಕೊಳ್ಳುವುದು ಮಾತ್ರ……

  9. Shankarappa Bannuru
    May 24, 2020 Reply

    ಜಿ.ಎಸ್. ಶಿವರುದ್ರಪ್ಪನವರ ಕವನ ಬಹಳ ಸೊಗಸಾಗಿದೆ. ಲೇಖನಕ್ಕೆ ಒಪ್ಪುವ ಕವನ. ಬಸವಣ್ಣನವರಂತೆ ಇನ್ನೊಬ್ಬರು ಸಿಗಲಿಕ್ಕೆ ಸಾಧ್ಯವೇ ಇಲ್ಲ!

  10. Nagaraj G.N
    May 27, 2020 Reply

    `ಮಹಾಮನೆಯಲ್ಲಿ ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ’- ಬಸವಣ್ಣನವರ ವಚನ ಅವರ ಸದುವಿನಯಕ್ಕೆ ಸಾಕ್ಷಿ. ನಮೋನಮಃ ಬಸವಣ್ಣ.

  11. Jayadev Jawali
    May 27, 2020 Reply

    ಬಸವ ಜಯಂತಿಯನ್ನು ಮನ, ಮನೆಯೊಳಗೆ ಮಾಡಿಕೊಂಡರೆ ಮನುಷ್ಯತ್ವಕ್ಕೆ ಮೆರಗು- ಆಹಾ! ಎಂಥ ಮಾತು!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಇದ್ದಷ್ಟೇ…
ಇದ್ದಷ್ಟೇ…
January 10, 2021
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಶಿವಯೋಗ
ಶಿವಯೋಗ
July 4, 2021
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
Copyright © 2023 Bayalu