Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಸವಣ್ಣನವರ ಒಂದು ವಚನ
Share:
Articles April 9, 2021 ಡಾ. ನಟರಾಜ ಬೂದಾಳು

ಬಸವಣ್ಣನವರ ಒಂದು ವಚನ

ವಚನಗಳು ಇಡಿಯಾಗಿ ಒಂದು ತತ್ವಪ್ರಸ್ಥಾನವಲ್ಲ. ಅವು ಅನೇಕ ಚಿಂತನಾಧಾರೆಗಳ ಸಂಗಮಭೂಮಿ. ಹಾಗಾಗಿ ವಚನಕಾರರ ಆನುಭಾವಿಕ ನೆಲೆಗಳನ್ನು ಏಕಾಕಾರಿಯಾಗಿ ನೋಡಲು ಸಾಧ್ಯವಿಲ್ಲ. ಎಲ್ಲ ವಚನಕಾರರದ್ದೂ ತಾತ್ವಿಕವಾಗಿ ಒಂದೇ ದಿಕ್ಕಿನ ಚಲನೆ ಅಲ್ಲ. ಅವರಲ್ಲಿ ಅನೇಕ ಸಮಾನ ಅಂಶಗಳಿರುವುದು ನಿಜ. ಅಂತಹ ಕೆಲವು ಸಾಮಾನ್ಯ ಅಂಶಗಳನ್ನು ಗುರುತಿಸಿದ ಮಾತ್ರಕ್ಕೆ ಇಡಿಯಾಗಿ ವಚನ ಚಳವಳಿಯನ್ನು ತಾತ್ವಿಕತೆಯ ದೃಷ್ಟಿಯಿಂದ ಒಂದು ಪ್ರಸ್ಥಾನ ಎನ್ನಲಾಗದು. ಅಲ್ಲಿ ಅನೇಕ ಚಿಂತನಾಧಾರೆಗಳ ಮುಂದುವರಿಕೆ ಇದೆ.
ಎಲ್ಲ ವಚನಗಳೂ ವಚನಕಾರರಿಂದಲೇ ಕಟ್ಟಿದವುಗಳಲ್ಲ. ಸಂಪಾದನಾಕಾರರು ಮತ್ತು ನಂತರದ ಕೂಟವಚನ ರಚನಕಾರರ ರಚನೆಗಳೂ ವಚನರಾಶಿಯಲ್ಲಿ ಸೇರಿ ಹೋಗಿರುವುದರಿಂದ ತಾತ್ವಿಕ ಖಚಿತತೆಗೆ ಭಂಗ ಬಂದಿರುವುದು ನಿಜ. ಹಾಗಾಗಿ ಈಗಾಗಲೇ ತೀರ್ಮಾನಿಸಿಕೊಂಡಿರುವ ತಾತ್ವಿಕ ನೆಲೆಗಳ ಸಮರ್ಥನೆಗೆ ಒದಗಿಬರುವ ವಚನಗಳನ್ನು ಮಾತ್ರ ಆಯ್ಕೆ ಮಾಡಿ ಮುಂದಿಟ್ಟುಕೊಳ್ಳುವುದರಿಂದ ಎಲ್ಲ ವಚನಗಳೂ ಅಂತಹ ನಿಲುವುಗಳನ್ನು ಸಮರ್ಥಿಸುತ್ತವೆ ಎನ್ನಲಾಗದು.
ವಚನ ಒಂದು ಚಳವಳಿ ಎಂದು ಕೇವಲ ಪ್ರತಿರೋಧದ ನೆಲೆಯಲ್ಲಿ ನೋಡುವ ಒಂದು ಕ್ರಮವೂ ಇದೆ. ಮೊದಲಿಗೆ ವಚನವಾಗಲೀ ಇತರ ಶ್ರಮಣಧಾರೆಗಳಾಗಲೀ ಸಾಧುವಾದ, ಸರಿಯಾದ ಜೀವನಕ್ರಮಗಳ ಶೋಧನೆಯೇ ಹೊರತು ಕೇವಲ ಪ್ರತಿರೋಧದ ಉದ್ಯೋಗಕ್ಕೆ ನಿಂತವಲ್ಲ. ನಿಜ. ಲೋಕಸಹಜವಾದುದನ್ನು ದಿಕ್ಕು ತಪ್ಪಿಸುವ ನಡೆಗಳಿಗೆ ಅಲ್ಲಿ ಪ್ರತಿರೋಧ ಇದೆ. ಆದರೆ ಕೇವಲ ಪ್ರತಿರೋಧ ಅದರ ಉದ್ಯೋಗವಲ್ಲ.
ಇನ್ನು ಅನುಭಾವ ಪದಕ್ಕೆ ಅನೇಕ ವಿವರಣೆಗಳನ್ನು ನೀಡಲಾಗಿದೆ. ಅನುಭಾವವೆಂದರೆ ನಿತ್ಯದ ಲೌಕಿಕ ಬದುಕಿನಾಚೆಗಿನ ಸಂಗತಿ ಎನ್ನುವುದೂ ಅವುಗಳಲ್ಲಿ ಒಂದು. ಅನುಭಾವವೆಂಬುದು ಭಾಷೆಗೆ ಅತೀತವಾದುದು, ಅನುಭವಕ್ಕೆ ಮಾತ್ರ ದಕ್ಕುವಂಥದ್ದು, ನಿತ್ಯದ ಲೌಕಿಕ ಬದುಕಿನ ಅನುಸಂಧಾನದಾಚೆಗಿನದು, ಸ್ಪಷ್ಟವಾದ ವಿವರಣೆಗೆ ಎಟುಕದ್ದು, ವ್ಯಕ್ತಿಗತವಾದದ್ದು ಇತ್ಯಾದಿ ವಿವರಣೆಗಳಿವೆ. ಆದರೆ ಅನುಭಾವವೆಂಬುದು ನಿತ್ಯದ ಬದುಕಿನ ಸರಿಯಾದ ಅನುಸಂಧಾನಕ್ಕೆ ಒದಗಿಬರುವ ಸಂಗತಿ ಎಂದೇ ನನಗನ್ನಿಸುತ್ತದೆ. ಆ ಪದಕ್ಕೆ ಈ ಅರ್ಥಗಳಿಗೆ ಹೊರತಾದ ಮತ್ತೊಂದು ಅರ್ಥವೂ ಸಾಧ್ಯ. ಅದೇನೆಂದರೆ ಅನುಭಾವವೆಂಬುದು ಏಕಾಕಿ ಪದವಲ್ಲ. ಭಾವ, ಅಭಾವ, ಸ್ವ-ಭಾವ, ಪರಭಾವ, ಭಾವಾಭಾವ, ಅವಿನಾಭಾವ ಮುಂತಾದ ಪದಗಳ ಜೊತೆಯಲ್ಲಿ ಇಟ್ಟು ನೋಡಬೇಕಾದದ್ದು. ಇವೆಲ್ಲ ಲೋಕವನ್ನು ಹೇಗೆ ನೋಡಬೇಕು ಎಂದು ಸೂಚಿಸುವ ಪದಗಳು. ಹಾಗೆ ನೋಡಿದಾಗ ಅನುಭಾವ ಪದಕ್ಕೆ ಲೋಕಪ್ರವಾಹದಲ್ಲಿ ಬೆರೆತು ಹೋಗುವ ಅದಕ್ಕೆ ಅಗತ್ಯವಾದ ನಿಲುವಿನ ಸಂಗತಿಯನ್ನು ವಿವರಿಸಬಹುದಾದ ಪದವೆನ್ನಬಹುದು. ಏಕೆಂದರೆ ಯಾವುದೇ ಚಿಂತನಾಧಾರೆಯಾದರೂ ತಾನು ಮತ್ತು ಇದಿರಿನ ಲೋಕವನ್ನು ಮೊದಲು ವ್ಯಾಖ್ಯಾನಿಸಿಕೊಳ್ಳುವುದೇ ಅದರ ಉದ್ಯೋಗ. ಇದಿರಿನ ಲೋಕವನ್ನು ಅದೇನೆಂದು ವಿವರಿಸಿಕೊಳ್ಳದೆ ಮುಂದಿನ ನಡೆ ಸಾಧ್ಯವಾಗುವುದಿಲ್ಲ. ಹಾಗಾಗಿ ಎಲ್ಲ ಚಿಂತನಾಪ್ರಸ್ಥಾನಗಳೂ ಅಂತಹ ವಿವರಣೆಯಿಂದಲೇ ತಮ್ಮ ಪ್ರಯಾಣವನ್ನು ಆರಂಭಿಸುತ್ತವೆ. ಎಲ್ಲ ಪ್ರಸ್ಥಾನಗಳೂ ಈ ಕೆಲಸ ಮಾಡಿವೆ. ಹಾಗೆ ಮಾಡಿಲ್ಲದಿದ್ದರೆ ಅದನ್ನು ಒಂದು ಸ್ವತಂತ್ರ ಚಿಂತನಾ ಪ್ರಸ್ಥಾನ ಎನ್ನಲಾಗದು. ಈ ಲೋಕ ಏನು ಮತ್ತು ಇದರ ಜೊತೆಗಿನ ನನ್ನ ಸಂಬಂಧ ಎಂಥದ್ದು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದೇ ಅನುಭಾವದ ಮೊದಲ ಹೆಜ್ಜೆ. ಈ ದೃಷ್ಟಿಯಿಂದ ವಚನಕಾರರ ಆನುಭಾವಿಕ ನಿಲುವುಗಳ ಪರಿಶೀಲನೆ ಮಾಡಬಹುದು. ಅವರೂ ಅದನ್ನು ಮಾಡಿದ್ದಾರೆ. ಅನೇಕ ನಿಲುವುಗಳನ್ನು ಪ್ರತಿಪಾದಿಸಿದ್ದಾರೆ. ಕೆಲವನ್ನು ಒಪ್ಪದೆ ಜಗಳವಾಡಿದ್ದಾರೆ. ಕೆಲವನ್ನು ಸ್ವೀಕರಿಸಿದ್ದಾರೆ. ಕೆಲವನ್ನು ತಿರಸ್ಕರಿಸಿದ್ದಾರೆ. ಮತ್ತೆ ಕೆಲವನ್ನು ಮಾರ್ಪಡಿಸಿಕೊಂಡಿದ್ದಾರೆ. ಹೀಗೆ ಎಲ್ಲ ವಚನಕಾರರೂ ಒಂದೇ ನಿಲುವನ್ನು ಪ್ರತಿಪಾದಿಸಿಲ್ಲ; ಸ್ವೀಕರಿಸಿಲ್ಲ.
ಬಸವಣ್ಣನವರ ವಚನದಿಂದ ಇದನ್ನು ಆರಂಭಿಸಬಹುದು. ವಚನಗಳನ್ನು ತುಂಬಾ ನಿಧಾನ ಗತಿಯಲ್ಲಿ ಓದಬೇಕು. ಏಕೆಂದರೆ ಅವು ನಮ್ಮ ಈವರೆಗಿನ ಲೋಕಗ್ರಹಿಕೆಯ ವಿಧಾನವನ್ನು ಆಮೂಲಾಗ್ರವಾಗಿ ಬದಲಿಸಬಲ್ಲವು. ಅವುಗಳನ್ನು ಔಷಧವೆಂದು ಭಾವಿಸಬೇಕು. ವಚನಕಾರರು ವೈದ್ಯರಿದ್ದಂತೆ. ಒಳ್ಳೆಯ ವೈದ್ಯರಿದ್ದಂತೆ. ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿ ಚೀಟಿ ಬರೆಸಿಕೊಂಡು ರೋಗದ ಹೆಸರನ್ನು ತಿಳಿದುಕೊಂಡು ಔಷಧ ತೆಗೆದುಕೊಳ್ಳದಿದ್ದರೆ ಏನು ಉಪಯೋಗವೋ ಹಾಗೆಯೇ ವಚನಗಳನ್ನು ಕೇವಲ ಓದಿದ ಮಾತ್ರಕ್ಕೆ ಏನೂ ಉಪಯೋಗವಿಲ್ಲ. ಅವುಗಳ ಅನುಸಂಧಾನದಿಂದ ಮಾತ್ರ ಉಪಯೋಗವೇ ಹೊರತು ವಚನಗಳು ಮಂತ್ರಗಳಲ್ಲ; ಬದುಕಬೇಕಾದ ಸೂಳ್ನುಡಿಗಳು.
ಬಸವಣ್ಣನವರ ವಚನ:
ಕಲ್ಪಿತವ ಕಳೆದ, ಅಕಲ್ಪಿತವ ತಿಳುಹಿದ
ಮನವ ಮಾಣಿಸಿ ಘನವ ನೆಲೆಗೊಳಿಸಿದ
ತನುವ ಕೆಡಿಸಿ ಅನುವ ಸ್ಥಾಪ್ಯವ ಮಾಡಿ
ಅಂತರಂಗದಲ್ಲಿ ಮಹಾಜ್ಞಾನವ ತುಂಬಿದ
ಬಹಿರಂಗದಲ್ಲಿ ಸದಾಚಾರವ ನೆಲೆಗೊಳಿಸಿದ
ನಿಮ್ಮ ನಿಲುವನೆನಗೆ ಒರೆದೊರೆದು ಹೇಳಿ ತೋರಿಸಿ
ಎನ್ನ ನಿಮ್ಮ ಶ್ರೀಪಾದಕ್ಕೆ ಯೋಗ್ಯನ ಮಾಡಿದ
ಕೂಡಲಸಂಗಮಮಹಾದೇವಯ್ಯಾ, ನಿಮ್ಮ ಮಹಾಮನೆಯಲ್ಲಿ
ಮಡಿವಾಳನೂ ನಾನೂ ಕೂಡಿ ಸುಖದಲ್ಲಿ ಇದ್ದೆವಯ್ಯಾ. (ಬಸವಣ್ಣ)

ಈ ವಚನ ವಚನಕಾರರ ಪ್ರಮುಖ ಆನುಭಾವಿಕ ನಿಲುವುಗಳನ್ನು ಗಂಭೀರವಾಗಿ ಮುಂದಿಡುತ್ತಿದೆ. ಈ ವಚನ ವಚನಕಾರರ ನಿಲುವುಗಳಾದ ಅಕಾಲ್ಪನಿಕತೆ, ಮನೋನಿರಸನ, ತಾನು-ಇದಿರಿನ ನಿರಸನ, ಅರಿವು ಮತ್ತು ಅದರ ಅನ್ವಯಗೊಂಡ ಬದುಕು, ಲೋಕದ ಜೊತೆಗಿನ ಸಮರಸದ ಬಾಳುವೆ, ಅರಿವಿನ ರೂಪದ ಒಳ ಹೊರಗಿನ ಗುರುಗಳು, ಬಹುತ್ವ, ನಿಸರ್ಗವಿವೇಕ ಮತ್ತು ಲೋಕವೇ ಎಲ್ಲರೂ ಬಾಳಲು ಇರುವ ಒಂದು ಮಹಾಮನೆ ಎಂಬ ಪ್ರಜಾಸತ್ತೆಯ ನಿಲುವುಗಳನ್ನು ಪ್ರತಿಪಾದಿಸುತ್ತಿದೆ.

ಅಕಾಲ್ಪನಿಕತೆ: ‘ಕಲ್ಪಿತವ ಕಳೆದ ಅಕಲ್ಪಿತವ ತಿಳುಹಿದ’ ಕಲ್ಪಿತವನ್ನು ತೊಡೆದುಹಾಕಿ ಅಕಲ್ಪಿತವನ್ನು ಇದಿರಾಗುವುದು ದೇಸಿ ಅನುಭಾವಿಗಳ ಮೊದಲ ಹೆಜ್ಜೆ. ಇದು ಎಷ್ಟು ಮುಖ್ಯವೆಂದರೆ, ಈ ಹೊತ್ತು ನಮ್ಮನ್ನು ನಿಯಂತ್ರಿಸುತ್ತಿರುವುದು ಕಲ್ಪಿತ ಸಂಗತಿಗಳು. ವಚನಗಳು ನಮ್ಮ ಆದರ್ಶವಾಗಿಲ್ಲ; ಬದಲಿಗೆ ವಚನಗಳು ನಮ್ಮ ಆದರ್ಶ ಎಂಬ ಕಲ್ಪನೆಯನ್ನು ಮಾತ್ರ ಬದುಕುತ್ತಿದ್ದೇವೆ. ನಮ್ಮ ಅನುಭವಕ್ಕೆ ಬರದ ಭ್ರಮೆ, ಸುಳ್ಳು, ಪೊಳ್ಳು, ಕಲ್ಪನೆ, ಮುಂತಾದುವುಗಳ ಮೂಲಕ ನಮ್ಮ ಬದುಕು ನಿಯಂತ್ರಿತವಾಗಿದೆ. ಯಾವುದೇ ಭ್ರಮಾತ್ಮಕವಾದುದನ್ನು, ಕಾಲ್ಪನಿಕವಾದದ್ದನ್ನು ಅದೆಷ್ಟೇ ಪ್ರಾಚೀನವಾದರೂ, ಕೋಟ್ಯಂತರ ಜನ ನಂಬಿ ಬದುಕುತ್ತಿದ್ದರೂ ಅವುಗಳನ್ನು ನಿಜವೆಂದು ಒಪ್ಪಿಕೊಳ್ಳಬೇಡಿ. ಯೋಚಿಸಿ ನೋಡಿ, ನಮ್ಮ ಅನುಭವಕ್ಕೆ ಬಾರದ ಕಾಲ್ಪನಿಕ ಸಂಗತಿಗಳ ದೊಡ್ಡ ಪಟ್ಟಿ ಇದೆ. ದೈವವಾದ, ಬ್ರಹ್ಮವಾದ, ಆತ್ಮವಾದ, ಜಾತಿವಾದ, ಲಿಂಗತಾರತಮ್ಯವಾದ, ಅಸ್ಪೃಶ್ಯತೆ ಮುಂತಾದುವುಗಳೆಲ್ಲವೂ ಕೇವಲ ಭಾಷೆಯಲ್ಲಿರುವ ಭ್ರಮಾತ್ಮಕ ಸಂಗತಿಗಳು. ಇವು ನಿಜವೋ ಸುಳ್ಳೋ ಎಂಬ ಚರ್ಚೆಗೆ ಹೋಗದೆ ಎಲ್ಲ ಸತ್ಯವೆಂದು ನಮ್ಮನ್ನು ನಂಬಿಸಲಾಗಿದೆ. ಈ ಕಲ್ಪಿತವನ್ನು ಕಳೆದುಕೊಂಡರೆ ಮಾತ್ರ ಸರಿಯಾದುದನ್ನು ಬದುಕಲು ಸಾಧ್ಯ. ಆದರೆ ಕೇವಲ ಸಂಕೇತಗಳು ನಮ್ಮನ್ನು ಆಳುತ್ತಿವೆ. ವಚನಕಾರರಿಗೆ ಇದರ ಸ್ಪಷ್ಟತೆ ಇತ್ತು. ಪ್ರಪಂಚದ ಇತರ ಧರ್ಮಗಳು ಏನನ್ನಾದರೂ ಹೇಳಲಿ, ಪಾಲಿಸುವವರು ಪಾಲಿಸಲಿ. ಅದು ಅವರ ಇಚ್ಛೆ ಮತ್ತು ಸ್ವಾತಂತ್ರ್ಯ. ಆದರೆ ನಮಗೆ ಇರುವ ನಿಸರ್ಗ ವಿವೇಕ ಯಾವ ಸಂಗತಿಗಳನ್ನು ಒಪ್ಪಿಕೊಳ್ಳುತ್ತದೆಯೋ ಅದನ್ನು ಮಾತ್ರ ಒಪ್ಪಿ ಪಾಲಿಸಿ ಎನ್ನುವುದು ಬಸವಣ್ಣನವರ ನಿಲುವು.
ವಚನಕಾರರ ಸಂದರ್ಭವೂ ಇಂದಿಗಿಂತ ಬೇರೆ ಇರಲಿಲ್ಲ. ಕೇವಲ ಭ್ರಮಾ ಸಂರಚನೆಗಳನ್ನು ನಮ್ಮ ಎದುರಿಗೆ ಒಟ್ಟಿ ನಿಜವನ್ನು ಆಚೆಗೆ ಅಟ್ಟಿ ನಮ್ಮನ್ನು ಆಳುವುದು ಸಾಂಸ್ಕೃತಿಕ ವಸಾಹತುಶಾಹಿಗಳ ನಡೆ. ಯಾವುದು ಕಲ್ಪಿತ ಯಾವುದು ಅಕಲ್ಪಿತ? ಇವುಗಳನ್ನು ಹೇಗೆ ವಿಂಗಡಿಸಿಕೊಳ್ಳುವುದು? ಈ ಹೊತ್ತು ಇದನ್ನು ಹೇಗೆ ಇದಿರಾಗಿವುದು? ಇವತ್ತಿಗೆ ಕಲ್ಪಿತವಾದದ್ದು ಯಾವುದು? ಅಕಲ್ಪಿತ ಅಥವಾ ವಾಸ್ತವವಾದದ್ದು ಯಾವುದು ಎಂಬುದನ್ನು ವಿಂಗಡಿಸಿಕೊಳ್ಳಲು ಒಂದು ಸುಲಭ ಉಪಾಯ ಇದೆ. ವಿಜ್ಞಾನ ಕಲ್ಪಿತ ಅಕಲ್ಪಿತಗಳನ್ನು ಸರಿಯಾಗಿ ವಿಂಗಡಿಸಿಕೊಡಬಲ್ಲದು. ಯಾವುದೇ ಸಂಗತಿ ಆಗಲಿ ವಿಜ್ಞಾನದ ಎದುರಿಗೆ ಇಡಿ. ಅದರ ಉತ್ತರ ಏನು ಬರುತ್ತದೆಯೋ ಅದನ್ನು ಒಪ್ಪಿಕೊಳ್ಳಿ. ಅಂದರೆ ಅದು ಕಲ್ಪಿತ ಸಂಗತಿಗಳನ್ನು ಕಲ್ಪಿತ ಸಂಗತಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತದೆ. ಇಲ್ಲ ನಾನು ವಿಜ್ಞಾನವನ್ನು ಒಪ್ಪಿಕೊಳ್ಳುವುದಿಲ್ಲ, ಪೊಳ್ಳೋ ಸುಳ್ಳೋ ನಮ್ಮ ಪರಂಪರೆ ಹೇಳುವುದನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ ಎನ್ನುವುದಾದರೆ ಅದು ನಿಮ್ಮ ಪಾಡು. ಆತ್ಮ ಎನ್ನುವುದು ಇದೆಯೆ? ಎಂಬ ಪ್ರಶ್ನೆಗೆ ವಿಜ್ಞಾನ ಏನು ಉತ್ತರ ನೀಡುತ್ತದೆಯೋ ಅದು ಸತ್ಯ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ನಿಮ್ಮಿಷ್ಟ. ಆದರೆ ಅದೊಂದು ಕಲ್ಪಿತ ಸಂಗತಿ ಎಂಬುದು ವಿಜ್ಞಾನ ಹೇಳುವ ಸತ್ಯ. ಬಹುತ್ವ, ಸಾಮಾನ್ಯ ವಿವೇಕ ಮತ್ತು ಪ್ರಜಾಪ್ರಭುತ್ವದ ಸಮಾನ ಆಶಯಗಳು ಬದುಕಿಗೆ ಸೂಕ್ತ ಎಂಬುದನ್ನು ಸಾಮಾನ್ಯ ವಿವೇಕವೂ ಹೇಳುತ್ತದೆ, ವಿಜ್ಞಾನವೂ ಹೇಳುತ್ತದೆ, ವಚನಕಾರರೂ ಹೇಳಿದ್ದಾರೆ. ಅವರು ಹೇಳಿದ ಮಾತ್ರಕ್ಕೆ ಏನೂ ಆಗುವುದಿಲ್ಲ; ಬದುಕಿದರೆ ಮಾತ್ರ ಅದರ ಸಾಫಲ್ಯ.
ಕಲ್ಪಿತ ಸಂಗತಿಗಳು ಯಾವುವು? ಅಲ್ಲಮಗುರು ಕೊಡುವ ಒಂದು ಪಟ್ಟಿ ಇದು:
ವೇದ ದೈವವೆಂದು ನುಡಿವರು ಶಾಸ್ತ್ರ ದೈವವೆಂದು ನುಡಿವರು
ಪುರಾಣ ದೈವವೆಂದು ನುಡಿವರು ಕಲ್ಲು ದೈವವೆಂದು ನುಡಿವರು
ಕಾಷ್ಠ ದೈವವೆಂದು ನುಡಿವರು ಪಂಚಲೋಹ ದೈವವೆಂದು ನುಡಿವರು
ಇವರೆಲ್ಲ ಸಕಲದಲ್ಲಾದ ಸಂದೇಹವನೆ ಪೂಜಿಸಿ ಸತ್ತುಹೋದರಲ್ಲಾ!
ಸಮಸ್ತ ಪ್ರಾಣಿಗಳೂ ತಂದೆ ತಾಯಿಯನರಿಯದ ತರ್ಕಿಗಳು
ತಂದೆಯನರಿಯದ ಸಂದೇಹಿಗಳು
ತನು ಪೃಥ್ವಿಯಿಂದಲಾಯಿತು ಮನ ವಾಯುವಿನಿಂದಾಯಿತ್ತು
ಕಲ್ಲು ಕಾಷ್ಠ ಸಕಲ ನಿಷ್ಕಲದಿಂದಲಾಯಿತ್ತು. (ಅಲ್ಲಮ)

ಇಲ್ಲಿ ಆಗಿರುವುದು ಎಲ್ಲವೂ ಇಲ್ಲಿನ ಸಂಗತಿಯಿಂದಲೇ ಹೊರತು ಮತ್ತೆಲ್ಲಿಯದೋ ಹೊರಗಿನ ಕಲ್ಪಿತ ಶಕ್ತಿಗೆ ಇಲ್ಲಿ ತಾವಿಲ್ಲ. ಲೋಕವನ್ನು ಅದು ಇರುವಂತೆಯೇ ನೋಡಿ ಎನ್ನುವುದು ವಚನಕಾರರ ನಿಲುವು.
ಮನವ ಮಾಣಿಸಿ ಘನವ ನೆಲೆಗೊಳಿಸಿದ – ಮನಸ್ಸಿನಲ್ಲಿ ಗುಡ್ಡೆ ಹಾಕಿಕೊಂಡಿರುವ ಸಂರಚನೆಗಳನ್ನು ನಿರಸನಗೊಳಿಸಿ ಸರಿಯಾದ ಸಹಜ ಜ್ಞಾನವನ್ನು ಉಂಟುಮಾಡುವುದನ್ನು ಅನುಭಾವಿಗಳು ಮನೋನಿರಸನ, ಅಮನಸ್ಕ, ಮುಂತಾದ ಪದಗಳ ಮೂಲಕ ಸೂಚಿಸತ್ತಾರೆ. ಮನಸ್ಸಿನಲ್ಲಿ ದೀರ್ಘಕಾಲದಿಂದ ಯಾರ್ಯಾರೋ ತಂದು ಗುಡ್ಡೆ ಹಾಕಿರುವ ಸಂರಚನೆಗಳ ಕಸವನ್ನು ಗುಡಿಸಿ ಹೊರಗೆ ಹಾಕಿಸಿ ಘನವಾದ ತಾಕ್ಷಣಿಕತೆ ವಿವೇಕವನ್ನು ಪ್ರತಿಷ್ಠಾಪಿಸಿಕೊಳ್ಳಬೇಕಾದ ವರ್ತಮಾನದ ಅಗತ್ಯವನ್ನು ಈ ಸಾಲು ನುಡಿಯುತ್ತಿದೆ. ನಮ್ಮವಲ್ಲದ ಈ ಸಂರಚನೆಗಳ ರಾಶಿಯನ್ನು ಅಲ್ಲಮಗುರು ‘ಸಂಚ’ ಎನ್ನುತ್ತಾನೆ. ಈ ಮನದ ಸಂಚವು ನಮ್ಮನ್ನು ಆಳುತ್ತಿದೆ. ಮೊದಲು ಬಿಡುಗಡೆ ಬೇಕಿರುವುದು ನಮ್ಮ ನಮ್ಮ ಮನಸ್ಸುಗಳಿಂದ. ಅದನ್ನು ಬಹುಪಾಲು ಎಲ್ಲ ದೇಸಿ ಆನುಭಾವಿಕ ಧಾರೆಗಳೂ ಹೇಳುತ್ತವೆ.
ತನುವ ಕೆಡಿಸಿ ಅನುವ ಸ್ಥಾಪ್ಯವ ಮಾಡಿ – ನಾನು, ನನ್ನ ದೇಹ, ಇದು ನನ್ನದು, ಇದು ನನ್ನದಲ್ಲದ್ದು ಎನ್ನುವುದನ್ನು ನಿರಸಗನಗೊಳಿಸಿ ಅನುವನ್ನು ಸ್ಥಾಪಿಸಿದ ಎಂದರೆ ಎಲ್ಲದರ ಜೊತೆಯಲ್ಲಿ, ಎಲ್ಲದರ ಸಂಬಂಧದಲ್ಲಿ ಎಲ್ಲವೂ ಉಂಟಾಗಿದೆ ಎನ್ನುವ ಲೋಕಸಮಸ್ತದ ಜೊತೆಗೆ ಬೆರೆತು ಹೋದರೆ ಮಾತ್ರ ಅದು ಲೋಕದ ಬಗೆಗಿನ ಸರಿಯಾದ ಅರಿವು. ಲೋಕ ಸಮಸ್ತವೂ ಪ್ರತ್ಯಯಗಳಿಂದ ಉಂಟಾದ ಅಂದರೆ ಅನೇಕ ಅಂಶಗಳಿಂದ ಆಗುತ್ತಲೇ ಇರುವ ‘ಪ್ರತೀತ್ಯ ಸಮುತ್ಪಾದ’ ಎಂದು ಬುದ್ಧಗುರು ವಿವರಿಸಿಕೊಟ್ಟದ್ದು ಇದನ್ನೆ. ಆದರೆ ಈ ಅಂತರಂಗದಲ್ಲಿನ ಅರಿವು ಹೊರಗಿನ ನಡವಳಿಕೆಯಾದಾಗ ಮಾತ್ರ ಜ್ಞಾನ ಜ್ಞಾನವೇ ಹೊರತು ಅದು ಕೇವಲ ಮಾಹಿತಿ ರೂಪದ ಸಂಗ್ರಹವಲ್ಲ.
ಇನ್ನು ಲೋಕವೆನ್ನುವುದೇ ಒಂದು ಮಹಾಮನೆ. ಅಲ್ಲಿ ಎಲ್ಲರೂ ಎಲ್ಲವೂ ಬಾಳಬೇಕು ಎನ್ನುವುದೇ ಅರಿವಿನ ರೂಪದ ಗುರು ಕೊಟ್ಟ ಜ್ಞಾನ. ಲೋಕವನ್ನು ಕೇಡಿಗೆ ಈಡುಮಾಡಿ ನಾನೊಬ್ಬ ಚೆನ್ನಾಗಿ ಬದುಕುತ್ತೇನೆ ಎನ್ನುವುದು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಎಲ್ಲವೂ ಇದ್ದರೆ ಮಾತ್ರ ನಾನೂ ಇರಲು ಸಾಧ್ಯ. ನಾನೂ ಅದರ ಭಾಗವೆ ಹೊರತು ಅದರಿಂದ ಅನ್ಯವೂ ಅಲ್ಲ ಸ್ವತಂತ್ರವೂ ಅಲ್ಲ ಎಂಬ ಸಂವಿಧಾನದ ಅರಿವನ್ನೆ, ವಿಜ್ಞಾನದ ಅರಿವನ್ನೆ ಈ ಮಾತು ಪ್ರತಿಪಾದಿಸುತ್ತಿದೆ. ಗುರುವೆನ್ನುವುದೂ ಕೂಡ ಒಂದು ಮಹತ್ವದ ಕಲ್ಪನೆಯೇ. ನಾಲ್ವರು ಗುರುಗಳಂತೆ. ಶಿಕ್ಷಾಗುರು, ದೀಕ್ಷಾಗುರು, ಗುರುವಿನ ಗುರು ಮತ್ತು ಪರಮ ಗುರು. ಮೊದಲಿನ ಇಬ್ಬರು ಗುರುಗಳು ಹೊರಗಿರುವವರು. ತಂದೆತಾಯಿಯರು ಶಿಕ್ಷಾಗುರುಗಳಾದರೆ ಮೇಷ್ಟ್ರು, ದೀಕ್ಷೆಕೊಟ್ಟವರು ಇತ್ಯಾದಿ ದೀಕ್ಷಾಗುರುಗಳು. ಕೊನೆಯ ಇಬ್ಬರು ನಮ್ಮೊಳಗೆ ಇರುವವವರು. ಇವರು ಮಾತ್ರ ನಮ್ಮನ್ನು ಲೋಕದ ಸಂಕಟದಿಂದ ಪಾರುಮಾಡಬಲ್ಲವರು. ಕೂಡಲಸಂಗಮನೆಂಬುವನೂ ಒಳಗಿನ ಗುರು. ಎಲ್ಲೋ ಹೊರಗಿರುವ ಸಂಕೇತವಲ್ಲ. ಒಳಗಿನ ಗುರು ಒಬ್ಬನಿಗೆ ಅಂದರೆ ತನಗೆ ಮಾತ್ರ ಗುರುವಲ್ಲ. ಅವನು ಲೋಕ ಸಮಸ್ತಕ್ಕೂ ಗುರು, ಎಲ್ಲವನ್ನೂ ಬಾಳಿಸಬಲ್ಲವನು. ಅಲ್ಲಿ ಬಸವಣ್ಣನೂ ಸುಖವಾಗಿರಬಲ್ಲ; ಮಡಿವಾಳನೂ ಸುಖವಾಗಿರಬಲ್ಲ.

Previous post ನಡೆದಾಡುವ ದೇವರು
ನಡೆದಾಡುವ ದೇವರು
Next post ನಾನರಿಯದ ಬಯಲು
ನಾನರಿಯದ ಬಯಲು

Related Posts

ಶಿವಮಯ-ಶಿವೇತರ ಗುಣಗಳು
Share:
Articles

ಶಿವಮಯ-ಶಿವೇತರ ಗುಣಗಳು

January 4, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಲಿಂಗದೇವನೆ ಕರ್ತ, ಶಿವಭಕ್ತನೆ ಶ್ರೇಷ್ಠ. ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ. ಅಳುಪಿಲ್ಲದಿರ್ಪುದೆ ವ್ರತ. ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ...
ಪೂರ್ವಚಿಂತನೆಯಿಂದ ಕಂಡು…
Share:
Articles

ಪೂರ್ವಚಿಂತನೆಯಿಂದ ಕಂಡು…

November 7, 2020 ಡಾ. ವಿಜಯಕುಮಾರ್ ಬೋರಟ್ಟಿ
ಪೂರ್ವಚಿಂತನೆಯಿಂದ ಕಂಡು… ಉತ್ತರ ಚಿಂತನೆಯಿಂದ ಖಂಡಿಸಿ… (ಆಧುನಿಕ ಕಾಲದ ವಚನ ಪ್ರಕಟಣೆಯ ಸಂಕ್ಷಿಪ್ತ ಇತಿಹಾಸ) ನಮಗ್ಯಾರಿಗೂ ಹೆಚ್ಚು ಗೊತ್ತಿಲ್ಲದ ಒಂದು ವಿಷಯದಿಂದ...

Comments 17

  1. Jyothilingappa
    Apr 10, 2021 Reply

    ನಟರಾಜ ಬೂದಾಳರು ಒಂದೇ ಒಂದು ವಚನದ ಓದುವಿನ ಮೂಲಕ ಇಡೀ ವಚನಗಳ ಓದು ಮತ್ತು ಅನುಭಾವ ಎಂಬುದೇನು ಎಂದರಿಯುವ ಹೊಸ ಸುಳಿವುಗಳನ್ನು ನಮಗೆ ನೀಡಿರುವರು.ಇದು ನಮ್ಮ ಇಂದಿನ ತುರ್ತು ಅಗತ್ಯ.
    ಇಂತಹ ಒಳ್ಳೆಯ ಲೇಖನ ಪ್ರಜಟಿಸಿದ ಬಯಲು.. ವಿಗೆ ಮನ ತುಂಬಿದ ಅಭಿಮಾನ.

  2. Padmalaya
    Apr 10, 2021 Reply

    Super sir

  3. Mallikarjuna
    Apr 11, 2021 Reply

    ವಚನಗಳ ಆಳಕ್ಕಿಳಿಯಲು ನಾವು ಯಾಕೆ ಪರದಾಡುತ್ತಿದ್ದೇವೆ ಎಂಬುದು ನಿಮ್ಮ ಲೇಖನ ಓದಿದ ಮೇಲೆ ಸ್ಪಷ್ಟವಾಯಿತು ಸರ್.

  4. Jnanesh Hubli
    Apr 11, 2021 Reply

    ಅದ್ಭುತ ವಚನ ವ್ಯಾಖ್ಯಾನ! ಶರಣರು ನಿಜಕ್ಕೂ ವೈದ್ಯರು, ಭವರೋಗ ವೈದ್ಯರು. ಅವರು ಸೂಚಿಸಿದ ಔಷಧವನ್ನು ದಕ್ಕಿಸಿಕೊಳ್ಳಲು ನಮಗೆ ಸಾಧ್ಯವಾಗದೇ ಹೋದದ್ದು ನಮ್ಮ ಅವಿವೇಕತನವೇ ಹೊರತು ಅದು ಅವರ ದೋಷವಲ್ಲ. ಶರಣರಾದ ನಟರಾಜ ಅವರ ಲೇಖನ ಕಣ್ತೆರೆಸುವಂತಿದೆ.

  5. Umesh Patri
    Apr 11, 2021 Reply

    ಜೀವನ ಕ್ರಮಗಳ ಶೋಧನೆ ವಚನಗಳಲ್ಲಿದೆ ಎನ್ನುವುದು ನಿಜವಾದ ಮಾತು. ಸರಿಯಾದ ಬದುಕುವ ದಾರಿಯನ್ನು ತೋರಿಸಿದ ವಚನಗಳ ಅಂತಃಸತ್ವವನ್ನು ನಿಷ್ಠುರ ಮಾತುಗಳಲ್ಲಿ ಪರಿಚಯಿಸಿದ್ದೀರಿ.

  6. Prabhakar Banavar
    Apr 13, 2021 Reply

    ವಚನಗಳ ರಾಶಿಯಲ್ಲಿ ಪ್ರಕ್ಷಿಪ್ತ ವಚನಗಳು ಯಾವ್ಯಾವುದೋ ಉದ್ದೇಶಗಳಿಂದ ಸೇರಿಸಲ್ಪಟ್ಟಿರುವ ವಿಚಾರವನ್ನು ಕಲಬುರ್ಗಿ ಸರ್ ಅವರು ಹೇಳುತ್ತಿದ್ದರು. ಅಂತಹ ವಚನಗಳನ್ನು ಬೇರೆ ಮಾಡುವ ಪ್ರಯತ್ನಗಳೂ ನಡೆದಿದ್ದವು. ಆದರೆ ಶರಣರ ಆಶಯಗಳನ್ನು ಸರಿಯಾಗಿ ಗ್ರಹಿಸಬಲ್ಲವರು ಮಾತ್ರವೇ ಈ ಕೆಲಸಕ್ಕೆ ನ್ಯಾಯ ಕೊಡಬಲ್ಲರು. ಒಂದು ದಾರಿ ಹಿಡಿದು ಹೊರಟರೆ ಇನ್ನೊಂದು ಟಿಸಿಲು ಒಡೆದುಕೊಂಡು ದಿಕ್ಕುತಪ್ಪಿಸುವ ಅನುಭವ ನನಗೂ ಆಗಿದೆ. ಇದಕ್ಕೆ ನಿಮ್ಮಂಥ ಸಂಶೋಧಕರೆಲ್ಲಾ ಸೇರಿ ಪರಿಹಾರ ಹುಡುಕಿದರೆ ಸಮಾಜಕ್ಕೆ ದೊಡ್ಡ ಉಪಕಾರವಾದೀತು.

  7. Naveen JK
    Apr 13, 2021 Reply

    ಅನುಭಾವವೆಂದರೆ ಆಧ್ಯಾತ್ಮಿಕ ಪದವೆಂದೇ ನಮ್ಮ ತಿಳುವಳಿಕೆ. ಆದರೆ ಇದು ನಿತ್ಯದ ಬದುಕಿನ ಸರಿಯಾದ ಅನುಸಂಧಾನಕ್ಕೆ ಒದಗಿಬರುವ ಸಂಗತಿ ಎಂದಿರುವಿರಿ, ಹೇಗೆ? ಮತ್ತಷ್ಟು ವಿವರಣೆ ಕೊಟ್ಟಿದ್ದರೆ ಚೆನ್ನಾಗಿತ್ತು.

  8. ಚೇತನ್ ಪಾಟೀಲ್
    Apr 15, 2021 Reply

    ಶರಣರ ನಿಲುವುಗಳನ್ನೆಲ್ಲಾ ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದಾಗಲಿ, ಅವರನ್ನು ಒಂದು ಸಿದ್ದಾಂತದ ಗೂಟಕ್ಕೆ ಕಟ್ಟಿಹಾಕುವುದಾಗಲಿ ಮಾಡಿದರೆ ಅದು ದೊಡ್ಡ ಅಪರಾಧವಾಗುತ್ತದೆ ಎನ್ನುವ ಅಂಶ ನಿಮ್ಮ ಮಾತುಗಳಿಂದ ಸ್ಪಷ್ಟವಾಯಿತು. ವಚನಕಾರರು ಜಗತ್ತನ್ನು, ಜೀವನವನ್ನು ಪರಸ್ಪರ ಸಂಬಂಧದಲ್ಲೇ ನೋಡಿದ್ದಾರೆ, ಜಗದ ವಿಸ್ಮಯಗಳನ್ನು ಅನುಭಾವಿಕ ನೆಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಮಾರ್ಗಗಳು ಭಿನ್ನವಾಗಿದ್ದರೂ ಗುರಿ ಒಂದೇ ಎಂದು ಸ್ಪಷ್ಟವಾಗಿ ತೋರುತ್ತದೆ. ನೀವು ಹೇಳಿದಂತೆ ನಿಧಾನಗತಿಯ ಓದನ್ನು ವಚನಗಳು ಬಯಸುತ್ತವೆ. ಮಹತ್ವಪೂರ್ಣ ಒಳನೋಟಗಳ ಬರಹ, ಧನ್ಯವಾದಗಳು.

  9. ಶಶಿಧರ ಹತ್ತಿ
    Apr 15, 2021 Reply

    ವಚನಗಳು ನಮ್ಮ ಆದರ್ಶ, ಶರಣರ ಮಾತುಗಳು ನಮ್ಮ ಆದರ್ಋ, ಬಸವಣ್ಣನವರು ನಮಗೆ ಆದರ್ಶ… ಎನ್ನುವ ಕಲ್ಪನೆಗಳಲ್ಲಿ ನಾವು ಬದುಕುತ್ತಿದ್ದೇವೆ ಎನ್ನುವ ಮಾತು ನನ್ನನ್ನು ತೀವ್ರವಾಗಿ ಕಾಡಿದೆ. ನಿಜಕ್ಕೂ ನೋಡಿದರೆ ನಮಗೆ ಅವರ ಬದುಕಿನಲ್ಲಿ ಗಮನವಿಲ್ಲ, ಅವರು ಹಾಗೆ ಬದುಕಿದರು ಎನ್ನುವುದೇ ಮಾತಿನ ಗೀಳಾಗಿ ಹೋಗಿದೆ, ನಾನು ಹಾಗೆಲ್ಲಾ ಇದ್ದೇನೆಯೇ? ಎಂದು ಯೋಚಿಸಲು ಸಮಯವಿಲ್ಲ, ವ್ಯವಧಾನವಿಲ್ಲ. ಕಲ್ಪನೆಗಳಿಂದ ಹೊರ ಬಂದು ನಾವು ಅವರಾಗುವ ಅಥವಾ ಅವರಂತೆ ಬದುಕುವ ದಾರಿ ಕಂಡುಕೊಳ್ಳಬೇಕಾಗಿದೆ. ನಟರಾಜ ಬೂದಾಳು ಶರಣರಿಗೆ ಶರಣಾರ್ಥಿಗಳು.

  10. ಜಯ ಹೆಚ್ ವಿ
    Apr 17, 2021 Reply

    ಭವರೋಗ ವೈದ್ಯರಾದ ಬಸವಾದಿ ಶರಣರು ವಚನ ಸಾಹಿತ್ಯ ಎಂಬ ಚುಚ್ಚುಮದ್ದು ಕೊಡುವ ಮೂಲಕ ಭವರೋಗದ ನಿವಾರಣೆಗೆ ಮಾರ್ಗದರ್ಶಕರಾದರು. ಶರಣರ ನಡೆ ನುಡಿ ಒಂದೇ ಆಗಿದ್ದು, ನುಡಿದು ಹುಸಿಯಲಿಲ್ಲ ,ನಡೆದು ತಪ್ಪಲಿಲ್ಲ. ಅವರ ನಡೆನುಡಿಯೇ ವಚನಗಳಾದವು. ಅಂತಹ ವಚನಗಳ ಸಾರವನ್ನು ಮನಮುಟ್ಟುವಂತೆ ತಿಳಿಸಿದ ಶರಣರಾದ ನಟರಾಜ್ ಅವರಿಗೆ ಶರಣಾರ್ಥಿಗಳು

  11. Indudhar
    Apr 20, 2021 Reply

    ಅದ್ಭುತ ವಚನಕ್ಕೆ ಅತ್ಯಂತ ಸಮರ್ಥವಾದ ವ್ಯಾಖ್ಯಾನವನ್ನು ನೀಡುವ ಮೂಲಕ ವಚನಗಳ ಆಂತರ್ಯವನ್ನು ತೋರಿಸುವ ಪ್ರಯತ್ನ ಮಾಡಿದ ಶರಣ ಬೂದಾಳು ಅವರಿಗೆ ಅನಂತಾನಂತ ವಂದನೆಗಳು. ಎರಡೆರಡು ಸಲ ತಮ್ಮ ಲೇಖನ ಓದಿದೆ.

  12. Veerabhadrappa, Bengaluru
    Apr 20, 2021 Reply

    ಎಲ್ಲಾ ಬಗೆಯ ಭ್ರಮೆಗಳಿಂದ ಹೊರಬರಲು ಅಕಲ್ಪಿತ ಲಿಂಗವನ್ನು ಕೊಟ್ಟವರು ಶರಣರು. ವಿಜ್ಞಾನದ ಸುಜ್ಞಾನವನ್ನು ತಮ್ಮ ನಡೆನುಡಿಗಳಲ್ಲಿ ಅಳವಡಿಸಿಕೊಂಡ ಅವರ ಜೀವನ ನಮಗೆ ಮಾದರಿಯಾಗಬೇಕೆಂಬ ಮಾತು ನಿಜ, ನಿಜ.

  13. Deveeramma pavate
    Apr 20, 2021 Reply

    ಲೋಕವೆನ್ನುವ ಮಹಾಮನೆಯಲ್ಲಿ ಬಸವಣ್ಣನವರೂ, ಮಡಿವಾಳ ಮಾಚಿದೇವರೂ ಕೂಡಿ ಬದುಕಬಲ್ಲ ಸುಂದರ ತಾಣ… ಹಾಗೆ ಅದನ್ನು ಆರೋಗ್ಯಕರವಾಗಿ, ಹರ್ಷದಾಯಕವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ- ಎಂಥ ಮಹೋನ್ನತ ಸಂದೇಶ!!

  14. Tippeswamy
    Apr 21, 2021 Reply

    ‘ಕಲ್ಪಿತವ ಕಳೆದ ಅಕಲ್ಪಿತವ ತಿಳುಹಿದ’ – fantastic explanation sir

  15. ಅಮರನಾಥ್ ರೇವಡಿ
    Apr 25, 2021 Reply

    ಅನುಭವಕ್ಕೆ ಸಿಗದ ಕೇವಲ ಭಾಷೆಯಲ್ಲಿನ ಪದಗಳಿಗಾಗಿಯೇ ನಾವಿಂದು ಹೊಡೆದಾಡುತ್ತಿದ್ದೇವೆ, ಅವುಗಳಲ್ಲಿ ದೇಶ ಭಕ್ತಿ, ಜಾತಿ, ಧರ್ಮ, ದೇವರು- ಮುಖ್ಯವಾದವುಗಳು. ಕೋಟ್ಯಾಂತರ ಜನ ಈ ಸುಳಿಯಲ್ಲಿ ಸಿಕ್ಕಿಕೊಂಡು ನಿಜವಾದ ಬದುಕನ್ನೇ ಮರೆತು ಹೋಗಿದ್ದಾರೆ. ಇಂತಹ ವಿಚಾರಗಳು ಹೆಚ್ಚು ಹೆಚ್ಚು ಜನರನ್ನು ತಲುಪುವಂತಾಗ ಬೇಕು. ಶರಣರನ್ನು ಈ ರೀತಿ ನೋಡುವುದೇ ಹೆಚ್ಚು ಉಚಿತ ಎಂದು ನನ್ನ ಅನಿಸಿಕೆ. ಲೇಖಕರಿಗೆ ಶರಣು.

  16. Shivanna Gadavi
    Apr 30, 2021 Reply

    ಬಸವಣ್ಣನೂ ಮಡಿವಾಳನೂ ಕೂಡಿ ಬದುಕಿದ ಮಹಾಮನೆಯನ್ನು ಲೇಖನದ ಮೂಲಕ ಸಮರ್ಥವಾಗಿ ತೋರಿಸಲಾಗಿದೆ. ಅಂಥ ಮಹಾಮನೆ ಇವತ್ತು ಕನಸೇ ಅಥವಾ ಬರಿ ಮಾತೇ?

  17. Channappa Ilkal
    Apr 30, 2021 Reply

    ಎಲ್ಲರೂ, ಎಲ್ಲವೂ ಬಾಳಬೇಕಾದ ಮಹಾಮನೆಯನ್ನು ಕಟ್ಟಿ ತೋರಿಸಿದ ಶರಣರು ನಮಗಿಂದು ಕೇವಲ ಆದರ್ಶ ಮತ್ತು ಧರ್ಮದ ಗುರುತಾಗಿ ಉಳಿದು ಬಿಟ್ಟಿದ್ದಾರೆ. ಇದೂ ಕಲ್ಪಿತದ ನಡೆ ಎಂದು ಎಚ್ಚರಿಸುವಂತಹ ಮಾತುಗಳನ್ನಾಡಿದ ನಟರಾಜು ಶರಣರಿಗೆ ಶರಣು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
Copyright © 2023 Bayalu