Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪ್ರಭುಲಿಂಗಲೀಲೆ…
Share:
Articles May 10, 2022 ಡಾ. ಚಂದ್ರಶೇಖರ ನಂಗಲಿ

ಪ್ರಭುಲಿಂಗಲೀಲೆ…

ಚಾಮರಸ ವಿರಚಿತ ಪ್ರಭುಲಿಂಗಲೀಲೆಯು ಅಲ್ಲಮಪ್ರಭುವನ್ನು ಶಿವನೊಡನೆ “ತಗುಳ್ಚಿ ಪೋಲಿಪ” ಕಥನಕ್ರಮದ ಮಧ್ಯಕಾಲೀನ ಮಹಾಕಾವ್ಯ. ಇದನ್ನು Phylosophical Allegory (=ತಾತ್ವಿಕ ಅನ್ಯೋಕ್ತಿ ಅಥವಾ ತಾತ್ವಿಕದೃಷ್ಟಿಯ ಸಾಂಕೇತಿಕ ನಿರೂಪಣೆ )ಎನ್ನಬಹುದು. ಈ ಬಗೆಯ ರಚನೆಗಳಿಗೆ ಮೂಲಮಾತೃಕೆ = ‘ಆತ್ಮರಾಮಾಯಣ’ ಎಂದು ಹೇಳಬಹುದು. ಇದರಲ್ಲಿ ರಕ್ತಮಾಂಸದ ಪಾತ್ರಗಳಿಗೆ ಬದಲು, ಜೀವಕಳೆಗಳು ಮತ್ತು ಭಾವತತ್ವಗಳು ಪ್ರಧಾನವಾಗಿದ್ದು ಕಥಾಂಶವು ಗೌಣವಾಗಿ ‘ಭಾವಶರೀರದರ್ಶನ’ವೇ ಗಣ್ಯವಾಗುತ್ತದೆ. ಇದಕ್ಕೆ ‘ವ್ಯಕ್ತೀಕರಣ’ (Personification) ಎಂದೂ ಕರೆಯುತ್ತಾರೆ. ‘ಚೇತನಾರೋಪಣೆ’ ಎಂದರೂ ಇದೇ! ಕನಕದಾಸ ವಿರಚಿತ ‘ರಾಮಧಾನ್ಯ ಚರಿತೆ’ಯು Social Allegory (=ಸಾಮಾಜಿಕ ಅನ್ಯೋಕ್ತಿ) ಆಗಿದೆ. ಕುವೆಂಪು ಅವರ ‘ಗೊಬ್ಬರ’ ಕವಿತೆಯು Social Allegory ಮತ್ತು Defence of Poetry ಎರಡೂ ಹೌದು!

ಕನ್ನಡಸಾಹಿತ್ಯ ಪರಂಪರೆಯಲ್ಲಿ ಅಲ್ಲಮ ಕೇಂದ್ರಿತ ಕಥನಗಳಲ್ಲಿ “ಚತುರ್ಮುಖ ಅಲ್ಲಮ” ನಿರೂಪಣೆಯಿದೆ:
1. ಪ್ರಭುದೇವರ ರಗಳೆ – ಹಂಪೆಯ ಹರಿಹರದೇವ
2. ಪ್ರಭುದೇವರ ಶೂನ್ಯಸಂಪಾದನೆ
– ಶಿವಗಣಪ್ರಸಾದಿ ಮಹಾದೇವಯ್ಯ
3. ಪ್ರಭುಲಿಂಗಲೀಲೆ – ಚಾಮರಸ
4. ಮಂಟೇಸ್ವಾಮಿ – ನೀಲಗಾರರು, ಕನ್ನಡ ಜಾನಪದ
ಈ ನಾಲ್ಕುಕಥನಗಳು 360° ವೃತ್ತಾಕಾರದ ಚಲನೆಯನ್ನು ಹೊಂದಿದ್ದು ಒಂದನ್ನೊಂದು ಪ್ರಭಾವಿಸಿದ ರಕ್ತಾಭಿಸರಣವಾಗಿದೆ. ಇದಕ್ಕೆ ಪ್ರಾಣರೂಪಿಯಾಗಿ ಅಲ್ಲಮಪ್ರಭು ವಚನ ಸಾಹಿತ್ಯವಿದೆ. ಇದೆಲ್ಲವನ್ನೂ ಅಖಂಡವಾಗಿ ಗ್ರಹಿಸಿದಾಗಲೇ ಕನ್ನಡ ಸಂಸ್ಕೃತಿಯ ಅತ್ಯುನ್ನತಿಯ ಕಾಣ್ಕೆ ಲಭಿಸುವುದು!

ಚಾಮರಸನ ‘ಪ್ರಭುಲಿಂಗಲೀಲೆ’ಯು ‘ವಚನಕ್ರಮ ಸೇರುವೆ’ಯ ಪರಿಣಾಮ ಫಲವಾದ ‘ಶೂನ್ಯಸಂಪಾದನೆ’ಯ ಮುಂದುವರಿದ ಸಂತಾನವೇ! ಅದು ಮಹಾಕಾವ್ಯ ಸದೃಶವಾದ ವಚನಸಾಹಿತ್ಯ ವಾಸ್ತುಶಿಲ್ಪ! ಇದು “ಕಾವ್ಯಾತ್ಮಕವಾದ ತಾತ್ವಿಕದೃಷ್ಟಿಯ ಅನ್ಯೋಕ್ತಿಮಹಾಕಾವ್ಯ”!
ಮುಕ್ತಾಯಿ, ಗೊಗ್ಗಯ್ಯ , ಸಿದ್ಧರಾಮ, ಬಸವಣ್ಣ , ಮರುಳಶಂಕರ, ಮಹಾದೇವಿ, ಗೋರಕ್ಷ ಮುಂತಾದ ಸಾಧಕರನ್ನೆಲ್ಲಾ ತನ್ನಲ್ಲಿ ಒಳಗೊಳ್ಳುತ್ತಾ ಸುಳಿಯುವ ತಂಗಾಳಿ ಈ ಅಲ್ಲಮಪ್ರಭು! ಹಂಪೆಯ ಹರಿಹರದೇವ, ಶಿವಗಣಪ್ರಸಾದಿ ಮಹಾದೇವಯ್ಯ , ಚಾಮರಸರ ಕಥನಗಳು ಗ್ರಾಂಥಿಕ ಪರಂಪರೆಯ ಅಭಿವ್ಯಕ್ತಿಗಳು! ಆದರೆ ಕನ್ನಡ ಜಾನಪದ ಮೂಲದ ನೀಲಗಾರರು ಹಾಡುವ ಮಂಟೇಸ್ವಾಮಿಯ ಕಥನವು ಮೌಖಿಕ ಪರಂಪರೆಗೆ ಸೇರಿದ್ದು! ಮೇಲುರಚನೆಯ ಗ್ರಾಂಥಿಕ ಮತ್ತು ತಳರಚನೆಯ ಮೌಖಿಕ ಎರಡೂ ನೆಲೆಗಳಲ್ಲಿ ಅಲ್ಲಮಪ್ರಭು ಕೇಂದ್ರಿತವಾದ ನಿರೂಪಣೆ ಇರುವುದು ಅದ್ಭುತವೇ ಸರಿ! ಗೊಬ್ಬರ ಮತ್ತು ಮರದ ತುದಿಹೂವುಗಳ ಅದ್ವೈತ ಸಂಬಂಧವನ್ನಿಲ್ಲಿ ಮನಗಾಣಬಹುದು!

ಕನ್ನಡ ಸಾಹಿತ್ಯದಲ್ಲಿ ಮನುಷ್ಯನನ್ನು ಶಿವನನ್ನಾಗಿ ಕಂಡು ಅಭೇದಕಲ್ಪನೆಯಿಂದ ಕಾವ್ಯರಚನೆ ಮಾಡಿದ ನಿದರ್ಶನಗಳು ಎರಡು: (1) ಸಿದ್ಧರಾಮ ಚರಿತೆ- ರಾಘವಾಂಕ ಮತ್ತು (2) ಪ್ರಭುಲಿಂಗಲೀಲೆ- ಚಾಮರಸ. ಈ ದೃಷ್ಟಿಯಿಂದ ನೋಡಿದರೆ ಶಿವಸಿದ್ಧರಾಮ ಮತ್ತು ಪ್ರಭುಲಿಂಗ ಎಂಬ ‘ಸಮಸ್ತ ನಾಮಕರಣ’ವು ಗಮನಾರ್ಹ!

ಪ್ರಭುಲಿಂಗಲೀಲೆಯು 25 ಗತಿಗಳ ಕಾವ್ಯಕೃತಿ! ಇದರಲ್ಲಿ 16 ನೆಯದಾದ ‘ಇಷ್ಟಲಿಂಗ ಗತಿ’ಯು “ಅಂಗದ ಮೇಲೆ ಲಿಂಗ ಸಾಹಿತ್ಯ” ಮತ್ತು “ಇಷ್ಟಲಿಂಗಪೂಜೆಯ ಮಹತ್ವ”ವನ್ನು ಸಾರುವ ಗತಿಯಾಗಿದೆ. ಚಾಮರಸನ ಕಾಲ 1430 ಎಂದಿದೆ. ಇದು ಇಷ್ಟಲಿಂಗ ಮಹಾತ್ಮೆಯನ್ನು ಕುರಿತ ಮೊದಲ ಪ್ರಸ್ತಾಪ ಎನ್ನಬಹುದು. ಏಕೆಂದರೆ
ಹರಿಹರನ ಪ್ರಭುದೇವರ ರಗಳೆಯಲ್ಲಿ ಮತ್ತು ರಾಘವಾಂಕನ ಕೃತಿಗಳಲ್ಲಿ ಇಷ್ಟಲಿಂಗದ ಪ್ರಸ್ತಾಪವಿಲ್ಲ! ಗೂಳೂರು ಸಿದ್ಧವೀರಣ್ಣೊಡೆಯರು + ಗುಮ್ಮಳಾಪುರ ಸಿದ್ಧಲಿಂಗಯತಿ + ಹಲಗೆಯಾರ್ಯರು ಶೂನ್ಯಸಂಪಾದನೆಯನ್ನು ಪರಿಷ್ಕರಣ ಮಾಡಿ, ‘ಇಷ್ಟಲಿಂಗ ಪ್ರಕರಣ’ವನ್ನು ಸೇರಿಸಿದವರು! ಇವರಿಗೆ ಚಾಮರಸನ ಪ್ರಭುಲಿಂಗಲೀಲೆಯ ‘ಇಷ್ಟಲಿಂಗ ಗತಿ’ ಪ್ರೇರಣೆಯನ್ನು ಒದಗಿಸಿರಬಹುದು! ಇದು ಸರಿ ಎನ್ನುವುದಾದರೆ, ಶೂನ್ಯಸಂಪಾದನೆ ಕುರಿತು ದ್ವಿತೀಯ, ತೃತೀಯ, ಚತುರ್ಥ ಸಂಪಾದನಾಕಾರರು ಸೇರಿಸಿದ ಇಷ್ಟಲಿಂಗ ಪ್ರಕರಣಕ್ಕೆ ಗುದ್ದಲಿಪೂಜೆ ಮಾಡಿದವನು ಚಾಮರಸನೆಂದೇ ಹೇಳಬೇಕು!

ಈ ಕಾವ್ಯದ ಆರಂಭದಲ್ಲಿ ಶಿವ ಮತ್ತು ಪಾರ್ವತಿಯ ಮಾತುಕತೆಯಿದೆ. ಸ್ಥಿತವಾದ ಮತ್ತು ಸ್ಥಿರವಾದ ಪದವಿ ಇದೆಯೇ- ಎಂಬ ಚರ್ಚೆಯೇ ಇಲ್ಲಿದೆ. ಇಂಥದೊಂದು ಸ್ಥಾವರ ಜಗತ್ತಿನ ನಿರಾಕರಣೆ ಮತ್ತು ಸದಾಜಂಗಮವಾಗಿ ಇರಬೇಕಾದ ಪ್ರಕ್ರಿಯೆಯನ್ನು ಶಿವನು ಪಾರ್ವತಿಗೆ ತಿಳಿಸುತ್ತಾನೆ. ಇದಕ್ಕೆ ಭೂಮಿಯೇ ತಕ್ಕ ವೇದಿಕೆಯಾಗಿ, ಎಲ್ಲರ ವ್ಯಕ್ತಿತ್ವ ಸಂವರ್ಧನೆಯ ನಿಕಷವಾಗಿ ಭೂಮಿ ಒದಗಿಬರುವುದನ್ನು ಶಿವನು ಸ್ಪಷ್ಟೀಕರಿಸುತ್ತಾನೆ.

ಶಿವನ ಸಾತ್ವಿಕಕಳೆ ಅಲ್ಲಮಪ್ರಭುವಾದರೆ, ಪಾರ್ವತಿಯ ಸಾತ್ವಿಕಕಳೆ ಮಹಾದೇವಿ! ಪಾರ್ವತಿಯ ತಾಮಸಿಕ ಕಳೆಯೇ ಮಾಯಾದೇವಿ! ಅಲ್ಲಮಪ್ರಭುವನ್ನು ಒಲಿಸಿಕೊಂಡು ಮಾಯಾಮೋಹದ ಬಲೆಯಲ್ಲಿ ಬೀಳಿಸಿ ತೋರಿಸುವೆನೆಂಬ ಪಾರ್ವತಿಯ ಪ್ರತಿಜ್ಞಾವಚನದಿಂದಲೇ ಅಲ್ಲಮಪ್ರಭು + ಮಾಯಾದೇವಿ + ಮಹಾದೇವಿ + ವೃಷಭರಾಜ ಮುಂತಾದ
ಎಲ್ಲರೂ ಭೂಲೋಕದಲ್ಲಿ ಜನಿಸುತ್ತಾರೆ!
ಇವರಿಗೆ ಸಾಥಿಯಾಗಿ ಸಕಲ ಶಿವಗಣಗಳು ಧರೆಯಲ್ಲಿ ಹುಟ್ಟುತ್ತಾರೆ. ಹೀಗೆ ಕೈಲಾಸದ ಸ್ಥಿರತೆಯನ್ನು ಭೂಮಿಯ ಜಂಗಮಕ್ಕೆ “ತಗುಳ್ಚುವ” ಬಗೆಯೂ ಈ ಕಾವ್ಯದಲ್ಲಿದೆ.

ಮಾಯಾದೇವಿಯ ಅಹಂಭಾವದಿಂದ ಹಿಡಿದು, ಮುಕ್ತಾಯಿಯ ದುಃಖಭಾವ, ಗೊಗ್ಗಯ್ಯನ ಕಾಯಕಭಾವ, ಸಿದ್ಧರಾಮನ
ಭೂತದಯಾಭಾವ ಮತ್ತು ಸೇವಾಭಾವ, ಬಸವಣ್ಣನ ಭಕ್ತಿಭಾವ, ಮರುಳಶಂಕರನ ಗುಪ್ತಭಕ್ತಿಭಾವ, ಮಹಾದೇವಿಯ ತಾದಾತ್ಮ್ಯಭಾವ, ಗೋರಕ್ಷನ ವಜ್ರಸಿದ್ಧಿಯ ಯೋಗಭಾವ ….. ಹೀಗೆ ವಿವಿಧಭಾವಗಳ ಸಂಘರ್ಷವೊಂದನ್ನು ಇಲ್ಲಿ ಕಾಣುತ್ತೇವೆ. ಈ ವಿವಿಧ ಭಾವಸಂಘರ್ಷವನ್ನು ಲಕ್ಷಿಸಿ,
# ಭಾವಶರೀರ ದರ್ಶನ # ಎಂಬ ನುಡಿ ಬಳಸಲಾಗಿದೆ. ತಾತ್ವಿಕದೃಷ್ಟಿಯ ಈ ಸಾಂಕೇತಿಕ ನಿರೂಪಣೆಯಯನ್ನು ಪ್ರಭುಲಿಂಗಲೀಲೆ ಎನ್ನುವಂತೆಯೇ, ‘ಅಲ್ಲಮ ವಿಜಯ’ವೆಂದೂ ಕರೆಯಬಹುದು.

*******************

ಮಾತೆಂಬ ಜ್ಯೋತಿ

ಮಾತೆಂಬುದು ಜ್ಯೋತಿರ್ಲಿಂಗ!
ಸ್ವರವೆಂಬುದು ಪರತತ್ವ!
ತಾಳೋಷ್ಠ ಸಂಪುಟವೆಂಬುದೇ ನಾದಬಿಂದುಕಳಾತೀತ!
ಗೊಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ! ಕೇಳಾ ಮರುಳೇ! (LB:429)

“ಮಾತೆಂಬ ಜ್ಯೋತಿ ಬೆಳಗದೆ ಇದ್ದರೆ ಜಗತ್ತೆಲ್ಲಾ ಕತ್ತಲೆಯಿಂದ ಕೂಡಿರುತ್ತಿತ್ತು!” ಎಂದು ದಂಡಿ ಹೇಳಿದ್ದಾನೆ. ಈ ಭೂಮಿಯ ಮೇಲಿರುವ ಸಸ್ಯ + ಪ್ರಾಣಿ + ಮನುಷ್ಯ ಜೀವಿಗಳ ಪೈಕಿ ಮಾತನಾಡಬಲ್ಲ ಏಕೈಕ ಜೀವಿ ಮನುಷ್ಯ ಮಾತ್ರ! ನೈಸರ್ಗಿಕ ಧ್ವನ್ಯಂಗವಾದ ತಾಲು (=ಬಾಯಂಗಳದ ಮೇಲ್ಭಾಗ), ಓಷ್ಠ (=ತುಟಿ), ಧ್ವನಿಪೆಟ್ಟಿಗೆಯೇ ತಾಳೋಷ್ಠ ಸಂಪುಟ. ಉಸಿರು (=ಸ್ವರ) ತಾಳೋಷ್ಠ ಸಂಪುಟದ ವಿವಿಧ ಸ್ಥಾನಗಳಲ್ಲಿ ತಡೆದಾಗ ಧ್ವನಿಗಳನ್ನು ಹಡೆಯುತ್ತದೆ. ಕಂಠ್ಯ + ತಾಲವ್ಯ + ಮೂರ್ದನ್ಯ + ದಂತ್ಯ + ಓಷ್ಠ್ಯ ಇತ್ಯಾದಿ
ಧ್ವನಿಗಳು ಹುಟ್ಟಿ ‘ವರ್ಣಮಾಲೆ’ ಸಿದ್ಧವಾಗುತ್ತದೆ. ಇದೇ ಸ್ವರಾಕ್ಷರ (=ಉಯಿರ್ ಎೞುತ್ತುಗಳ್) ಮತ್ತು ವ್ಯಂಜನಾಕ್ಷರ (=ಮೆಯ್ ಎೞುತ್ತುಗಳ್) ಸಂಬಂಧ. ವ್ಯಂಜನಕ್ಕೆ (=ಮೈಗೆ) ಸ್ವರವೇ (=ಉಸಿರು) ಪ್ರಾಣ. ಈ ಬಗೆಯ ಧ್ವನಿ ವಿಜ್ಞಾನವು
ಮನುಷ್ಯ ಮಾತ್ರರಿಗೆ ವಿಶಿಷ್ಟವಾದ ಮತ್ತು ಅನನ್ಯವಾದ ‘ವಿಶ್ವಾತ್ಮಕ ವ್ಯಾಕರಣ’ (=Universal Grammar)
ಎನ್ನಬಹುದು. ಈ ಬಗೆಯ ಜೀವ ನಾದವು ವೀರ್ಯವತ್ತಾದ (=ಬಿಂದು) ಪ್ರಾಣಕಳೆ!
ಇಂಥ ನಾದಬಿಂದುಕಳಾತೀತವಾದ ಪರತತ್ವವು ಸ್ವಯವಾಗಿ, ಮಾತೆಂಬ ಜ್ಯೋತಿ ನಡೆನುಡಿಯ ಲಿಂಗವಾಗಿ, ಗುಹೇಶ್ವರನ ಶರಣರಲ್ಲಿ ಪ್ರಕಟವಾಗುವುದು. ನುಡಿದಂತೆ ನಡೆಯುವ ಶರಣರು ಎಂದಿಗೂ ನಡತೆ ತಪ್ಪಿದ ಅಥವಾ ನುಡಿ ತಪ್ಪಿದ ಸೂತಕಿಗಳಲ್ಲ! ಕೇಳಿರಯ್ಯಾ! ಮರುಳು ಹುಚ್ಚರೆ!

ಅಲ್ಲಮಪ್ರಭು ಕನ್ನಡದ ತತ್ವಜ್ಞಾನಿ ಕವಿ ಸಂತ. ಹನ್ನೆರಡನೇ ಶತಮಾನದಲ್ಲಿ ಇಡೀ ಮಾನವ ಕುಲಕ್ಕೆ ಅನ್ವಯವಾಗುವ ತಾಳೋಷ್ಠ ಸಂಪುಟದ ವಿಶ್ವಾತ್ಮಕ ವ್ಯಾಕರಣದ ಮೂಲಕ ಮನುಷ್ಯ ಮಾತ್ರರಿಗೆ ವಿಶಿಷ್ಟವಾದ ಮತ್ತು ಅನನ್ಯವಾದ ಭಾಷೆಯ ಘನತೆಯನ್ನು ನಿರೂಪಿಸುತ್ತಾ ಶರಣರು ಹೇಗಿರಬೇಕೆಂದು ನುಡಿದಿದ್ದಾನೆ. ಭಾಷೆಯೆಂಬ ಬೆಳಕು ಬಾಳನ್ನು ಬೆಳಗುವ ಬಗೆಯನ್ನು ಬೋಧಿಸಿದ್ದಾನೆ.
ನುಡಿದಂತೆ ನಡೆಯದೆ ಸೂತಕವನ್ನು ಹೊತ್ತು ಪಾತಕಿಗಳಾಗುವವರು ಶರಣರಲ್ಲ!

ನೀ ಭೂಮಿಯಾಗಿ ನಾ ಸಸಿಯಾಗಿ…

ಬೆಳೆಯ ಭೂಮಿಯಲೊಂದು
ಪ್ರಳಯದ ಕಸ ಹುಟ್ಟಿ ತಿಳಿಯಲೀಯದು;
ಎಚ್ಚರಲೀಯದು!
ಎನ್ನ ಅವಗುಣವೆಂಬ ಕಸವ ಕಿತ್ತು
ಸಲಹಯ್ಯ ಲಿಂಗ ತಂದೆ!
ಸುಳಿದೆಗೆದು ಬೆಳೆವೆನು, ಕೂಡಲಸಂಗಮದೇವ! (LB: 32)

ಗಿಡದ ಬೆಳವಣಿಗೆ ಮತ್ತು ಮನದ ಬೆಳವಣಿಗೆ ಎರಡೂ ಒಂದೇ! ಗಿಡವೊಂದು ಕಸಕಡ್ಡಿಗಳ ಇಕ್ಕಟ್ಟಿನಲ್ಲಿ ಹೇಗೆ ನಳನಳಿಸಿ ಬೆಳೆಯಲು ಸಾಧ್ಯವಿಲ್ಲವೋ ಹಾಗೆಯೇ ಮನಸ್ಸು ಕೂಡಾ ಅಡೆ ತಡೆಗಳ ಮಧ್ಯೆ ವಿಕಾಸವಾಗುವುದಿಲ್ಲ! ಮನೋವಿಕಾಸವು ( Personality Development) ಗಿಡಕ್ಕೆ ಪ್ರಳಯವನ್ನುಂಟು ಮಾಡುವ ಕಸಕಡ್ಡಿಗಳಂತೆ, ಇಕ್ಕಟ್ಟಿನಲ್ಲಿ ಸಿಕ್ಕು ಮುರುಟಿಹೋಗುತ್ತದೆ. ಅವಗುಣಗಳೆಂಬ ಕಸಕಡ್ಡಿಗಳನ್ನು ತೆಗೆದುಹಾಕಿದರೆ, ನಮ್ಮಲ್ಲಿ ತಿಳಿವು ಮತ್ತು ಎಚ್ಚರ ಹುಟ್ಟುತ್ತದೆ. ಇದರಿಂದ ಮನೋವಿಕಾಸ ಸಾಧ್ಯವಾಗಿ, ವ್ಯಕ್ತಿಗಳು ಗಿಡದಂತೆ ಸುಳಿದೆಗೆದು ಬೆಳೆಯುವುದಕ್ಕೆ ಅವಕಾಶವಾಗುತ್ತದೆ. ಲಿಂಗ ತಂದೆ ಎಂಬುದಕ್ಕೆ
“ನಿಜವನ್ನು ತಂದವನು” ಎಂದು ಹೇಳಲು ಅವಕಾಶವಿದೆ. ಏಕೆಂದರೆ ಈ ಸಮಾಜದಲ್ಲಿ ಸುಳ್ಳುಸೃಷ್ಟಿಗಳು ಕಸಕಡ್ಡಿಗಳ ರೀತಿ ನಮ್ಮ ಮನಸ್ಸಿಗೆ ಕವಿದು ನಿಜವಾದ ವ್ಯಕ್ತಿತ್ವವನ್ನು ಮುಚ್ಚಿಹಾಕುತ್ತವೆ. ಆದ್ದರಿಂದ ಯಾವುದು ಸುಳ್ಳು ? ಯಾವುದು ನಿಜ ? ಎಂಬ ತಿಳಿವು ಮತ್ತು ಎಚ್ಚರ ತುಂಬಾ ಅಗತ್ಯ! ಲಿಂಗ ತಂದೆ ಆದಂತಹ ಕೂಡಲಸಂಗಮ ದೇವನೇ ನಮ್ಮ ಮಾರ್ಗದರ್ಶಿಯಾಗಿ ಸಲಹಬೇಕು!

ಭೂಮಿಯಿಂದ ಹುಟ್ಟಿ ಅಂತರದಲ್ಲಿ ಬೆಳೆವ
ಫಲವೃಕ್ಷದಂತೆ,
ಸರ್ವರಿಗೆ ಭೂತಹಿತವಾಗಿ ಫಲರಸವನೀವಂತೆ,
ನೀ ಭೂಮಿಯಾಗಿ ನಾ ಸಸಿಯಾಗಿ
ಬೆಳೆದ ಬೆಂಬಳಿಯಲ್ಲಿ
ಗೊಹೇಶ್ವರ ಲಿಂಗವೆಂಬುದು ಫಲವಾಯಿತ್ತು!
ಅರಿದ ಅರಿಕೆ ರಸವಾಯಿತ್ತು!
ಸಂಗನ ಬಸವಣ್ಣನಿಂದ ಎನ್ನಂಗ ಬಯಲಾಯಿತ್ತು! (LB:480)

ಬಸವಭೂಮಿಯಲ್ಲಿ ಬೆಳೆದ ಫಲವೃಕ್ಷದ ಸಂಪತ್ತನ್ನು ಈ ವಚನವು ಹೇಳುತ್ತಿದೆ. ಇಕ್ಕಟ್ಟಿಲ್ಲದ ಅಂತರವೊಂದು ಗಿಡದ ಬೆಳವಣಿಗೆಗೆ ಬೇಕೇ ಬೇಕು! ಬಸವಣ್ಣನೇ ಭೂಮಿಯಾಗಿ, ಅಲ್ಲಮಪ್ರಭುವೊಂದು ಸಸಿಯಾಗಿ ಮಹಾಮನೆಯಲ್ಲಿ ಬೆಳೆದ ಬೆಂಬಲದಿಂದ ಸಕಲ ಶರಣರ ಮನಸ್ಸಿಗೆ ಭೂತಹಿತವಾಗಿ ಫಲರಸವು ಪ್ರಾಪ್ತಿಯಾಯ್ತು! ಸರ್ವಶರಣರು ಅರಿತುಕೊಂಡ ಅರಿವು, ಜೀವ ಮುಕ್ತಿಗೆ ರಸವಾಯ್ತು! ಅಣ್ಣ ಬಸವಣ್ಣನಿಂದ
ಸರ್ವಮಾನ್ಯನಾದ ಅಲ್ಲಮಪ್ರಭು, ಶರಣರಿಗೆ ಮಾತ್ರವಲ್ಲ, ಸಕಲ ಕನ್ನಡಿಗರಿಗೆ ಸಿಗುವಂತೆ ಆದನು. ಇಲ್ಲದಿದ್ದರೆ ಒಬ್ಬ ಅಜ್ಞಾತಯೋಗಿಯೆ ಆಗಿದ್ದು ಯಾರ ಕಣ್ಣಿಗೂ ಬೀಳದಿರುತ್ತಿದ್ದನು. ಆದ್ದರಿಂದ ಅಲ್ಲಮಪ್ರಭುವಿನ ಅಂಗವು ಕಾಲಚಕ್ರದ ಚಲನೆಯಲ್ಲಿ ಬಯಲಾಗಿ, ಶೂನ್ಯ ಸಂಪಾದನೆಯಾಗಿ ನಮಗೆ ಲಭ್ಯವಾಯಿತು!
ಇವು ಬಸವಣ್ಣ ಮತ್ತು ಅಲ್ಲಮಪ್ರಭುವನ್ನು ಅಖಂಡವಾಗಿ ಗ್ರಹಿಸಲು ನೆರವಾಗುವ ವಚನಗಳೆಂದು ಹೇಳಬಹುದು.

Previous post ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
Next post ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2

Related Posts

ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
Share:
Articles

ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ

April 29, 2018 ಡಾ. ಶಶಿಕಾಂತ ಪಟ್ಟಣ
ಹನ್ನೆರಡನೆಯ ಶತಮಾನದ ಬಸವಣ್ಣನವರ ನೇತೃತ್ವದಲ್ಲಿ ನಡೆದ ವರ್ಗ ವರ್ಣ ರಹಿತವಾದ ಸಾಮಾಜಿಕ ಆಂದೋಲನವು ಶ್ರೇಷ್ಠ ಕ್ರಾಂತಿಯ ಮುನ್ನುಡಿ. ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸಿದ...
ಮಹಾಮನೆಯ ಕಟ್ಟಿದ ಬಸವಣ್ಣ
Share:
Articles

ಮಹಾಮನೆಯ ಕಟ್ಟಿದ ಬಸವಣ್ಣ

December 8, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಮನೆಯೂ ಒಂದು. ಹಕ್ಕಿ-ಪಕ್ಷಿಗಳು ಸಹ ತಮ್ಮದೇ ಆದ ಮನೆ ಕಟ್ಟಿಕೊಳ್ಳುತ್ತವೆ. ಒಂದು ಗುಬ್ಬಿ ಎಲ್ಲೆಲ್ಲಿಂದಲೋ ತೆಂಗಿನ ನಾರು, ಕಡ್ಡಿ, ಗರಿಕೆ...

Comments 13

  1. Vijayakumar Kammar
    May 11, 2022 Reply

    ಡಾ. ನಂಗಲಿಯವರ ಲೇಖನ ಉತ್ತಮವಾಗಿದೆ. 👍👍👍👍👍

  2. ಶಿವಪ್ಪ ಬಾಗೀದಾರ್, ಮಹಾಲಿಂಗಪುರ
    May 13, 2022 Reply

    ಪ್ರಭುಲಿಂಗಲೀಲೆ ಕನ್ನಡದ ಬಹುಮುಖ್ಯ ಕಾವ್ಯಗಳಲ್ಲೊಂದೆಂದು ಗುರುತಿಸಿಕೊಂಡಿದ್ದು, ಅದರ ವಿನ್ಯಾಸ, ಒಳತಿರುಳು, ಕಾವ್ಯವೈಖರಿ ಬಹಳ ಮನೋಜ್ಞವಾಗಿದೆ. ಲೇಖನ ಪುಟ್ಟದಾಗಿದ್ದರೂ ಅರ್ಥಪೂರ್ಣವಾಗಿದೆ.
    ಪೂಜ್ಯ ಅಪ್ಪಾಜಿಯವರ ಪ್ರವಚನದಲ್ಲಿ ಇದೇ ಮೂಲ ಆಕರ ಗ್ರಂಥವಾಗಿದ್ದು, ಅವರು ಒಂದೊಂದು ಅಧ್ಯಾಯವನ್ನೂ ವರ್ಣಿಸಿದ್ದು ಇನ್ನೂ ನನ್ನ ಮನದಲ್ಲಿ ಅಚ್ಚೊತ್ತಿ ಉಳಿದಿದೆ.

  3. Kantharaju Mallapura
    May 19, 2022 Reply

    ಚಾಮರಸನ ಪ್ರಭುಲಿಂಗಲೀಲೆಯಲ್ಲಿನ ಪ್ರಭುವಿನ ವ್ಯಕ್ತಿತ್ವ ಕುರಿತು ವಿವರವಾಗಿ ತಿಳಿಸಲು ಸಾಧ್ಯವೇ? ಚಂದ್ರಶೇಖರ ಶರಣರಿಂದಲೇ ಆ ಬರವಣಿಗೆಯನ್ನು ನಾವು ನಿರೀಕ್ಷಿಸಬಹುದೇ?

  4. Annadanappa SAnkeshwara
    May 19, 2022 Reply

    12ನೆ ಶತಮಾನ ನೆನೆದರೇ ಮೈ ರೋಮಾಂಚನವಾಗುತ್ತದೆ. ಅಲ್ಲಮ ಮತ್ತು ಬಸವಣ್ನನವರ ಸಮಾಗಮ ಮತ್ತು ಅವರು ಒಬ್ಬರಿಗೊಬ್ಬರು ಎಷ್ಟೊಂದು ಅನ್ಯೋನ್ಯವಾಗಿ ಬದುಕಲು ಹೇಗೆ ಸಾಧ್ಯವಾಯಿತು!! ಇಬ್ಬರೂ ಅಪ್ರತಿಮ ಪ್ರತಿಭಾಶಾಲಿಗಳು ಒಬ್ಬರೊಳಗೊಬ್ಬರು ಐಕ್ಯವಾಗಿ ಬದುಕಿದ ಪರಿ ಅಮೋಘವಾದದ್ದು!!!

  5. Harsha m patil
    May 19, 2022 Reply

    ಕನ್ನಡ ಸಾಹಿತ್ಯದಲ್ಲಿ ಮನುಷ್ಯನನ್ನು ಶಿವನನ್ನಾಗಿ ಕಂಡು ಅಭೇದಕಲ್ಪನೆಯಿಂದ ಕಾವ್ಯರಚನೆ ಮಾಡಿದ ನಿದರ್ಶನಗಳು ಎರಡು: (1) ಸಿದ್ಧರಾಮ ಚರಿತೆ- ರಾಘವಾಂಕ ಮತ್ತು (2) ಪ್ರಭುಲಿಂಗಲೀಲೆ- ಚಾಮರಸ. ಈ ದೃಷ್ಟಿಯಿಂದ ನೋಡಿದರೆ ಶಿವಸಿದ್ಧರಾಮ ಮತ್ತು ಪ್ರಭುಲಿಂಗ ಎಂಬ ‘ಸಮಸ್ತ ನಾಮಕರಣ’ವು ಗಮನಾರ್ಹ!
    ದಯವಿಟ್ಟು ಈ ಮೇಲಿನ ಸಾಲುಗಳನ್ನು ವಿಸ್ತರಿಸಿ ಹೇಳುವಿರಾ ಸರ್?

  6. ಕರಿಬಸವಯ್ಯ ತಾಳಿಕೋಟೆ
    May 23, 2022 Reply

    ಶಿವನ ಸಾತ್ವಿಕ ಕಳೆಯಾಗಿ ಅವತರಿಸಿದ ಅಲ್ಲಮಪ್ರಭುದೇವರು ಶರಣ ಸಂಕುಲದಲ್ಲಿ ಅಗ್ರಮಾನ್ಯ ಗುರುವಾಗಿ ಭುಲೋಕವನ್ನೇ ಸ್ವರ್ಗವನ್ನಾಗಿಸಿದ ಕತೆಯ ಹಂದರ ಚಾಮರಸನ ಕಾವ್ಯದ ವಿಶೇಷತೆ. ಈ ಕಾವ್ಯದ ಒಳ-ಹೊರಗಿನ ಮೈಯನ್ನು ಬರೆಯಿರಿ…

  7. ಸತೀಶ್ ತಾವರೆಕೆರೆ
    May 29, 2022 Reply

    “ಚತುರ್ಮುಖ ಅಲ್ಲಮ”ನ ನಿರೂಪಣೆಯನ್ನು ಕಾವ್ಯಾಧಾರದಲ್ಲಿ ತೋರಿಸುವ ಲೇಖನಗಳನ್ನು ನಾವು ಬಯಲು ನಲ್ಲಿ ನಿರೀಕ್ಷಿಸಬಹುದೇ? ಅಲ್ಲಮಪ್ರಭು ಕುರಿತು ಸಮಗ್ರವಾದ ಚಿತ್ರಣವನ್ನು ಇದುವರೆಗೆ ಯಾರೂ ಕಟ್ಟಿಕೊಟ್ಟಿಲ್ಲಾ. ಡಿ.ಆರ್. ನಾಗರಾಜ್ ಅವರ ಅಲ್ಲಮಪ್ರಭು: ಶೈವ ಪ್ರತಿಭೆ- ನಮ್ಮ ಬುದ್ಧಿಮತ್ತೆಗೆ ಮೀರಿದ್ದಾಗಿದ್ದು ಅದರಲ್ಲಿ ಕಲ್ಯಾಣದ ಪ್ರಭು ನಮಗೆ ಸಿಕ್ಕುವುದೇ ಇಲ್ಲ. ಪ್ರಭುಗಳ ವಚನಗಳ ಕುರಿತಾದರೂ ನಮಗೆ ಮಾಹಿಸಿ ಕೊಡಬಹುದೇ?

  8. Shanthamma G
    May 29, 2022 Reply

    ಮಾಯಾದೇವಿ ಮತ್ತು ಅಕ್ಕಮಹಾದೇವಿ ಅಲ್ಲಮರ ಬದುಕಿನ ಮುಖ್ಯ ಮಹಿಳೆಯರು ಅನ್ನುತ್ತಾರೆ. ಆಧ್ಯಾತ್ಮಿಕವಾಗಿ ಇವರ ಪ್ರಾಮುಖ್ಯತೆ ಮತ್ತು ಪ್ರಭಾವದ ಕುರಿತಾಗಿ ಹೊಸದಾಗಿ ಯೋಚಿಸುವ ಕೆಲಸಗಳಾಗಬೇಕೆನಿಸುತ್ತದೆ. ಲೇಖನ ಚಿಕ್ಕದಾಗಿ ಹಲವು ಮಹತ್ವದ ಮಾಹಿತಿಗಳನ್ನು ನೀಡುತ್ತದೆ.

  9. ಶಾಂತಮೂರ್ತಿ ಬೀರೂರು
    May 31, 2022 Reply

    ಅಲ್ಲಮಯೋಗಿಗಳ ಬೆಡಗಿನ ವಚನಗಳ ಲೇಖನಗಳನ್ನು ಬಯಲು ಬ್ಲಾಗಿನಲ್ಲಿ ಬಯಸುತ್ತೇವೆ. ಚಾಮರಸನ ಪ್ರಭುಲಿಂಗಲೀಲೆಯನ್ನು ನನಗೆ ಓದಲು ಪ್ರೇರೇಪಿಸಿದಂತಾಯಿತು.

  10. Yashavanth
    Jun 14, 2022 Reply

    ಅಲ್ಲಮಪ್ರಭುವಿನ ಕುರಿತಾಗಿ ಕಲಾ ಪ್ರಕಾರಗಳಲ್ಲಿ ಪ್ರಭಾವಶಾಲಿಯಾದ ಯಾವ ಕೃತಿಗಳೂ ಬಂದಿಲ್ಲ. ಅವರ ಒಂದೊಂದು ವಚನಗಳೂ ಬೆಡಗು, ಹೊಳಪು ಮತ್ತು ಅನುಭಾವದ ರಸಗಟ್ಟಿಯಂತಿವೆ. ಅವರ ಕೆಲವಾದರೂ ವಚನಗಳಿಗೆ ನಿಮ್ಮಿಂದ ಅರ್ಥವ್ಯಾಖ್ಯಾನ ನೀಡಿದರೆ ವಿಶಿಷ್ಟವಾಗಿರುತ್ತವೆಂದು ನಂಬಿದ್ದೇನೆ, ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

  11. Pro. Mallikarjuna
    Jun 30, 2022 Reply

    ಮನೋವಿಕಾಸವು ( Personality Development) ಗಿಡಕ್ಕೆ ಪ್ರಳಯವನ್ನುಂಟು ಮಾಡುವ ಕಸಕಡ್ಡಿಗಳಂತೆ, ಇಕ್ಕಟ್ಟಿನಲ್ಲಿ ಸಿಕ್ಕು ಮುರುಟಿಹೋಗುತ್ತದೆ… ಇಕ್ಕಟ್ಟಿಲ್ಲದ ಅಂತರವೊಂದು ಗಿಡದ ಬೆಳವಣಿಗೆಗೆ ಬೇಕೇ ಬೇಕು!- ವಚನಗಳ ಚಿಕ್ಕ ಚೊಕ್ಕ ವಿಶ್ಲೇಷಣೆಗಳು ಹೊಸ ಹೊಳಹುಗಳನ್ನು ತೋರಿಸಿವೆ. ಪ್ರಕೃತಿಪ್ರೀಯ ಶರಣರಾದ ಚಂದ್ರಶೇಖರ ನಂಗಲಿ ಅವರಿಗೆ ಶರಣುಗಳು.

  12. ಹಾಲಪ್ಪ ಶಿಕ್ಷಕರು, ಚಿಕ್ಕಮಗಳೂರು
    Jun 30, 2022 Reply

    ಮುಕ್ತಾಯಿ, ಗೊಗ್ಗಯ್ಯ , ಸಿದ್ಧರಾಮ, ಬಸವಣ್ಣ , ಮರುಳಶಂಕರ, ಮಹಾದೇವಿ, ಗೋರಕ್ಷ ಮುಂತಾದ ಸಾಧಕರನ್ನೆಲ್ಲಾ ತನ್ನಲ್ಲಿ ಒಳಗೊಳ್ಳುತ್ತಾ ಸುಳಿಯುವ ತಂಗಾಳಿ ಈ ಅಲ್ಲಮಪ್ರಭು!- ನಿಜ, ಪ್ರಭುವಿನ ವ್ಯಕ್ತಿತ್ವ ಆಕಾಶದಂತೆ ವಿಸ್ತಾರವಾದುದು. ಉತ್ತಮ ಬರಹಕ್ಕೆ ಧನ್ಯವಾದಗಳು.

  13. SIDDHESH GAJENDRAGAD
    Jun 30, 2022 Reply

    This is the first visit to your blog! We are a group of volunteers and starting a new initiative in a community in the same niche. Your blog provided us valuable information to work on. You have done a outstanding job! Great articles!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
Copyright © 2023 Bayalu