Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪೈಗಂಬರರ ಮಾನವೀಯ ಸಂದೇಶ
Share:
Articles November 7, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಪೈಗಂಬರರ ಮಾನವೀಯ ಸಂದೇಶ

ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕಸ ತುಂಬಿದಾಗ ಅದನ್ನು ಗುಡಿಸಿ ಸ್ವಚ್ಛ ಮಾಡಲು ಕಾಲ ಕಾಲಕ್ಕೆ ಅನೇಕ ಧರ್ಮದೀಪಕರು, ಮಹಾತ್ಮರು, ಶರಣರು ಉದಯಿಸಿ ಬರುವರು. ಅವರಲ್ಲಿ ಬುದ್ಧ, ಬಸವ, ಗಾಂಧಿ ಇಂಥ ಮಹನೀಯರನ್ನು ಜಗತ್ತು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಆ ಸಾಲಿನಲ್ಲಿ ಎದ್ದು ತೋರುವ ವ್ಯಕ್ತಿತ್ವ ಪ್ರವಾದಿ ಮುಹಮದ್ ಪೈಗಂಬರ ಅವರದು. ಬಸವಾದಿ ಶಿವಶರಣರ ಹಾಗೂ ಪ್ರವಾದಿ ಪೈಗಂಬರ ಅವರ ಜೀವನ ಸಿದ್ಧಾಂತಗಳಲ್ಲಿ ಅನೇಕ ಹೋಲಿಕೆಗಳು ಕಂಡುಬರುತ್ತವೆ. ಶರಣರಲ್ಲಿ ಬಹುತೇಕ ಜನರು ಅಕ್ಷರ ಜ್ಞಾನದಿಂದ ವಂಚಿತರು. ಆದರೆ ತಮ್ಮ ಸರಳ ಜೀವನ, ಆದರ್ಶ ಪಥ, ಕಾಯಕ ಶ್ರದ್ಧೆ ಮತ್ತು ಅನುಭಾವದ ಮೂಲಕ ನರತ್ವ ಕಳೆದುಕೊಂಡು ಹರತ್ವ ಪಡೆದವರು. ಅದರಂತೆಯೇ ಮುಹಮದ್ ಪೈಗಂಬರ ಅವರು ಬಡತನದ ಬೇಗೆಯಲ್ಲಿ ಬೆಂದು, ಅಕ್ಷರ ಜ್ಞಾನದಿಂದ ವಂಚಿತರಾಗಿದ್ದರೂ ತಮ್ಮ ದೈವಶ್ರದ್ಧೆ, ಜೀವಪರ ಕಾಳಜಿ, ಪ್ರಾಮಾಣಿಕತೆ ಮತ್ತಿತರ ಸದ್ಗುಣಗಳಿಂದ ಪ್ರವಾದಿಯ ಪಟ್ಟಕ್ಕೇರಿದವರು.
ಚಿಕ್ಕಂದಿನಲ್ಲೇ ಹೆತ್ತವರನ್ನು ಕಳೆದುಕೊಂಡ ಪ್ರವಾದಿಗಳು ತಾರುಣ್ಯಕ್ಕೆ ಬರುವವರೆಗೆ ಅನುಭವಿಸಿದ ಬಡತನ, ಸಂಕಷ್ಟ, ಬದುಕಿಗಾಗಿ ನಡೆಸಿದ ಹೋರಾಟ ಅವರ್ಣನೀಯ. ಬೆಂಕಿಯಲ್ಲಿ ಬೆಂದಾಗಲೇ ಚಿನ್ನಕ್ಕೆ ಮೆರಗು ಬರುವುದು. ಅದೇ ರೀತಿ ಪೈಗಂಬರರು ತಮ್ಮ ಸವಾಲು, ಸಂಕಷ್ಟಗಳಿಂದಲೇ ಮೇಲೆದ್ದು ಲೋಕಕಲ್ಯಾಣದ ಚಿಂತನೆ ಮಾಡಿದವರು. ಅಂದಿನ ಸಮಾಜದಲ್ಲಿದ್ದ ಧಾರ್ಮಿಕ ಅಜ್ಞಾನ, ಸಾಮಾಜಿಕ ಅಸಮಾನತೆ, ವ್ಯಕ್ತಿಗತ ಮೌಢ್ಯ ಇತ್ಯಾದಿ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿ ಅದರಲ್ಲಿ ಯಶಸ್ವಿಯಾದರು. ಅವರ ತತ್ವಸಿದ್ಧಾಂತಗಳನ್ನು ಅವರೆಂದೂ ಬರೆದಿಡಲಿಲ್ಲ. ಅವು ಜಾನಪದ ಸಾಹಿತ್ಯದಂತೆ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ತಲುಪಿ `ಖುರಾನ್’ ಧರ್ಮಗ್ರಂಥದ ರೂಪ ಪಡೆದವು. ಪ್ರವಾದಿಗಳು ಖುರಾನ್ ಗ್ರಂಥದಲ್ಲಿರುವ ಉಪದೇಶಾಮೃತ ತಾವೇ ನೀಡಿದವು ಎನ್ನುವ ಅಹಂಕಾರ ಬೆಳೆಸಿಕೊಂಡವರಲ್ಲ. ಅಲ್ಲಾಹನ ಸಂದೇಶವನ್ನು ನಾನು ತಿಳಿಸುತ್ತೇನೆ ಎನ್ನುವ ವಿನಯವಂತಿಕೆ ತೋರಿದರು. `ಸದುವಿಯನಯವೇ ಸದಾಶಿವನ ಒಲುಮೆ’ ಎನ್ನುವ ಬಸವಣ್ಣನವರ ವಾಣಿಯನ್ನು ಆಚರಿಸಿ ತೋರಿದ ಪುಣ್ಯಪುರುಷರು ಪ್ರವಾದಿ ಮುಹಮದ್ ಪೈಗಂಬರ್ ಅವರು.
ಅಲ್ಲಾಹ್ನ ಬೋಧನೆಯೇ ಖುರಾನ್ನಲ್ಲಿ ಅಡಕವಾಗಿದೆ. ಪ್ರವಾದಿಗಳು ಸಾರಿದ್ದು ಶಾಂತಿ, ಸೌಹಾರ್ದದ ಸಂದೇಶವನ್ನು. ಲೋಕದ ಎಲ್ಲ ಅನಾಹುತಗಳಿಗೆ ಅಸಮಾನತೆ, ಕೋಪ, ದ್ವೇಷ, ಮತ್ಸರಾದಿ ಅನಿಷ್ಟಗಳೇ ಕಾರಣವೆಂದು ಮನಗಂಡ ಪ್ರವಾದಿಗಳು ಆ ಸ್ಥಾನದಲ್ಲಿ ಸಮಾನತೆ, ಪ್ರೇಮ, ಶಾಂತಿ, ಸೌಹಾರ್ದತೆ ಇತ್ಯಾದಿ ಆದರ್ಶ ಗುಣಗಳನ್ನು ಬೆಳಕಿಗೆ ತಂದರು. ದೇವರಿಗೆ ಶರಣಾದವರೇ ನೈಜ ಮುಸಲ್ಮಾನರು ಎಂದು ಸಾರಿದರು. ಏಕದೇವೋಪಾಸನೆಗೆ ಒತ್ತು ಕೊಡುವರು. ವಿಗ್ರಹಗಳ ಆರಾಧನೆಯನ್ನು ವಿರೋಧಿಸುವರು. `ದೇವನೊಬ್ಬ ನಾಮ ಹಲವು’ ಎನ್ನುವಂತೆ ಒಬ್ಬ ದೇವರ ಅಸ್ತಿತ್ವವನ್ನು ಸಾರುತ್ತ ಅವನೇ ಅಲ್ಲಾಹ್ ಎಂದು ಪ್ರತಿಪಾದಿಸುವರು. ಯುದ್ಧವೇ ಬಡತನ, ದುಃಖ, ಅಶಾಂತಿಯ ತವರುಮನೆ ಎಂದು ಭಾವಿಸಿ ಯುದ್ಧನೀತಿಯನ್ನೇ ವಿರೋಧಿಸಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವರು. ವೈರಿಯನ್ನೂ ಕ್ಷಮಿಸಿ ಅವರ ಮನಸ್ಸಿನ ಪರಿವರ್ತನೆ ಮಾಡಬೇಕು ಎನ್ನುವ ವಿಶಾಲ ಹೃದಯ ಪ್ರವಾದಿಗಳದು. ಸರಳತೆಯಲ್ಲೇ ಸುಖ, ಸೌಂದರ್ಯ, ಶಾಂತಿ ಇದೆ ಎಂದು ನಂಬಿ ಅದನ್ನೇ ಸಾರ್ವಜನಿಕವಾಗಿ ಪ್ರತಿಪಾದನೆ ಮಾಡಿದರು.
ಪೈಗಂಬರ್ ಅವರಿಗೆ ಶ್ರೀಮಂತಿಕೆ ಬಂದಾಗಲೂ ಮೆರೆಯಲಿಲ್ಲ. ಸರಳತೆಯನ್ನು ಬಿಡಲಿಲ್ಲ. ಭೋಗ ಜೀವನ ನಡೆಸಲಿಲ್ಲ. `ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿ’ ಎನ್ನುವ ಶರಣರ ಸಂದೇಶದಂತೆ ಬದುಕನ್ನು ನಡೆಸಿದ ಪುಣ್ಯ ಜೀವಿ ಅವರು. ಒಬ್ಬ ಬಡವ ಹೇಗೆ ಬದುಕುವನೋ ಹಾಗೆಯೇ ಅವರು ತಮ್ಮ ಬದುಕಿನುದ್ದಕ್ಕೂ ಬಾಳಿದವರು. `ಕಾಯಕವೇ ಕೈಲಾಸ’ ಎನ್ನುವ ತತ್ವವನ್ನು ತಾವೂ ಪಾಲಿಸಿ ಸಮಾಜಕ್ಕೂ ಬೋಧಿಸಿದವರು. ದುಡಿಯದೆ ಉಣ್ಣುವುದು ದೇವರಿಗೆ ಮಾಡುವ ದ್ರೋಹ ಎಂದು ಪ್ರತಿಪಾದಿಸುತ್ತಿದ್ದರು. `ಲಂಚವಂಚನೆಗೆ ಕೈಯಾನದ ಭಾಷೆ’ ಎನ್ನುವಂತೆ ಭ್ರಷ್ಟಾಚಾರದ ವಿರೋಧಿಗಳಾಗಿ ಸಮಾಜದಲ್ಲಿ ಭ್ರಷ್ಟರಹಿತ ವಾತಾವರಣ ನೆಲೆಗೊಳಿಸಲು ಹೋರಾಡಿದರು. `ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ, ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ, ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ’ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಅದನ್ನೇ ಸಾರ್ವಜನಿಕವಾಗಿ ಎತ್ತಿ ಹಿಡಿದರು. ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಂಡು ಇತರರೂ ಆ ದಾರಿಯಲ್ಲಿ ನಡೆಯುವಂತೆ ಪ್ರೇರಣೆ ನೀಡುತ್ತಿದ್ದರು.
ಪ್ರವಾದಿಗಳು ಪ್ರತಿಪಾದಿಸಿದ ಇಸ್ಲಾಂ ಧರ್ಮದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಬಹುದೇವತಾರಾಧನೆಗೆ ಇಂಬಿಲ್ಲ. ಮೂರ್ತಿ ಪೂಜೆಗೆ ಅವಕಾಶವಿಲ್ಲ. ವ್ಯಕ್ತಿ ಪೂಜೆಯನ್ನು ಮನ್ನಿಸುವುದಿಲ್ಲ. ಎಲ್ಲರೊಳಗೆ ನಾನೊಬ್ಬ ಎನ್ನುವ ಭೃತ್ಯಾಚಾರವನ್ನು ಈ ಧರ್ಮ ಒತ್ತಿ ಹೇಳುವುದು. ಇಸ್ಲಾಂ ಧರ್ಮದ ಆಧಾರಸ್ಥಂಬಗಳೆಂದರೆ 1. ಏಕದೇವತಾರಾಧನೆ. 2. ದಾನ. 3. ಪ್ರಾರ್ಥನೆ. 4. ತೀರ್ಥಯಾತ್ರೆ. 5. ಉಪವಾಸ. ಈ ಐದು ವ್ರತಗಳನ್ನು ಪ್ರತಿಯೊಬ್ಬ ಇಸ್ಲಾಂ ಬಾಂಧವ ತಪ್ಪದೇ ಆಚರಣೆಯಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ಪ್ರವಾದಿಗಳ ಸಂದೇಶ. ಈ ಸಂದೇಶಗಳಿಂದ ವ್ಯಕ್ತಿಯಲ್ಲಿ ಸಾತ್ವಿಕ ಗುಣ ಅಳವಡುವುದು. ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವ ಮೂಡುವುದು. ನಾನೇ ಶ್ರೀಮಂತ ಎನ್ನುವ ಅಹಂಭಾವ ಅಳಿಯುವುದು. ಎಲ್ಲರೊಳಗೊಂದಾಗಿ ಬಾಳುವ ವಿವೇಕ ಬರುವುದು. ಈ ತತ್ವಗಳು ಧರ್ಮ, ಭಾಷೆ, ದೇಶ ಎನ್ನುವ ಭೇದವಿಲ್ಲದೆ ಯಾರು ಬೇಕಾದರೂ ಅನುಸರಿಸುವಂತಹು. ಗಾಳಿ, ನೀರು, ಬೆಳಕು, ಜ್ಞಾನ ಯಾರಿಗೆ ತಾನೇ ಬೇಡ? ಅಂಥ ವಿಶ್ವವಿಶಾಲ ತತ್ವಗಳನ್ನು ಪ್ರವಾದಿಗಳು ಬಿಟ್ಟು ಹೋಗಿದ್ದಾರೆ.
ಧರ್ಮದ ಆಶಯದಂತೆ ಬಾಳುವ ಸಂಕಲ್ಪ ಮಾಡಿದರೆ ಜಗತ್ತಿನಲ್ಲಿ ದ್ವೇಷ, ಅಸೂಯೆ, ಮತ್ಸರಾದಿ ದುರ್ಗುಣಗಳಿಗೆ ಅವಕಾಶವೇ ಇರುವುದಿಲ್ಲ. ಇವತ್ತು ಇಡೀ ದೇಶಕ್ಕೆ ಪಿಡುಗಾಗಿ ಕಾಡುತ್ತಿರುವುದು ಮದ್ಯಪಾನ. ಇದನ್ನು ಪ್ರವಾದಿಗಳು ವಿರೋಧಿಸುತ್ತ ಬಂದವರು. ಅವರು ಮದ್ಯಪಾನ ಎಲ್ಲ ಕೆಡಕುಗಳ ತವರು ಎಂದು ಅದರಿಂದ ನಾಡು ಸಂಪೂರ್ಣ ಮುಕ್ತವಾಗಬೇಕೆಂದು ಕರೆಕೊಟ್ಟಿದ್ದರು. ವಿಷಾದದ ಸಂಗತಿ ಎಂದರೆ ಇಂದಿಗೂ ಆ ಮಹಾಮಾರಿಯನ್ನು ಓಡಿಸಲು ಸಾಧ್ಯವಾಗಿಲ್ಲ. ಬದಲಾಗಿ ಅದು ರಕ್ತಬೀಜಾಸುರನ ವಂಶದಂತೆ ಊರೂರು, ಮನೆ ಮನೆ, ವ್ಯಕ್ತಿ ವ್ಯಕ್ತಿಗಳ ಸಮೀಪ ಬಂದು ಜನರ ಬದುಕನ್ನು ನರಕ ಮಾಡುತ್ತಿದೆ. ಯಾವ ಧರ್ಮದೀಪಕರೂ ಮದ್ಯಪಾನಕ್ಕೆ ಪ್ರೋತ್ಸಾಹ ನೀಡಿಲ್ಲ. ಇದನ್ನರಿತು ಇನ್ನಾದರೂ ನಮ್ಮ ಧರ್ಮ ಶ್ರೇಷ್ಠ ಎನ್ನುವ ವಿವಿಧ ಧರ್ಮೀಯರೆಲ್ಲ ಒಂದಾಗಿ ಮದ್ಯಪಾನವೆಂಬ ಪಿಡುಗನ್ನು ಒದ್ದೋಡಿಸುವ ಸಂಕಲ್ಪ ಮಾಡಿದರೆ ಪ್ರವಾದಿಗಳ ಜನ್ಮದಿನದ ಈ ತಿಂಗಳ ಅಭಿಯಾನ ಅರ್ಥಪೂರ್ಣವಾಗಲು ಸಾಧ್ಯ. ಮಾನವತೆಯ ಮಾರ್ಗದರ್ಶಕರಾದ ಪ್ರವಾದಿ ಮುಹಮದ್ ಪೈಗಂಬರರು ಮನುಕುಲದ ಉತ್ಕರ್ಷಕ್ಕಾಗಿ ನೀಡಿದ ಕೊಡುಗೆಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡು ಅನುಷ್ಠಾನದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
ಅಲ್ಲಾಹ್ ಸಹನಶೀಲರೊಂದಿಗೆ ಇರುತ್ತಾನೆ. ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆ ಸ್ತ್ರೀಯರಿಗೂ ಪುರುಷರ ಮೇಲೆ ಹಕ್ಕಿದೆ. ವ್ಯಕ್ತಿ ಕೇವಲ ತಂದೆ, ತಾಯಿ ಬಂಧು-ಬಳಗದವರೊಂದಿಗೆ ಮಾತ್ರವಲ್ಲದೆ ಎಲ್ಲ ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ರಕ್ತಪಾತಕ್ಕೆ ಅವಕಾಶ ನೀಡಬಾರದು. ಸತ್ಯಕ್ಕೆ ಮಿಥ್ಯದ ಬಣ್ಣ ಬಳಿದು ಸತ್ಯವನ್ನು ಮುಚ್ಚಿಡಬೇಡಿರಿ. ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಿ ಅದನ್ನೇ ಬೋಧನೆ ಮಾಡಿರಿ. ಕ್ಷಮೆ ಬದುಕಿನ ಅವಿಭಾಜ್ಯ ಅಂಗವಾಗಿರಲಿ. ಅಜ್ಞಾನಿಗಳ ಜೊತೆ ಜಗಳ ಬೇಡ. ಯಾವಾಗಲೂ ಸತ್ಯಸಂಧರೊಂದಿಗೆ ನಿಮ್ಮ ಒಡನಾಟವಿರಬೇಕು. ಅಲ್ಲಾಹ್ ನಿಮ್ಮಿಂದ ಕಾಣಿಕೆ ಅಥವಾ ಲಂಚ ಪಡೆದು ನಿಮ್ಮ ಪಾಪದ ಕರ್ಮಗಳನ್ನು ಮನ್ನಿಸುವುದಿಲ್ಲ. ಅಲ್ಲಾಹ್ ಇಲ್ಲದ ಸ್ಥಳವೇ ಇಲ್ಲ. ಆ ಚೇತನ ಜಗದಗಲ, ಮುಗಿಲಗಲ, ಮಿಗೆಯಗಲ, ನಿಮ್ಮಗಲ. ಧರ್ಮದ ದಾರಿಯಲ್ಲಿ ನಡೆಯುವವರಿಗೆ ಸೈತಾನನ ಪ್ರಭಾವದಿಂದ ದುರಾಲೋಚನೆಗಳು ಬಂದರೂ ಅವರು ತಕ್ಷಣ ಜಾಗೃತರಾಗುತ್ತಾರೆ. ಧರ್ಮದ ದಾರಿಯಲ್ಲಿ ನಡೆಯುವವರನ್ನು ಯಾರೂ ದಿಕ್ಕುತಪ್ಪಿಸಲು ಸಾಧ್ಯವಿಲ್ಲ. ಹೀಗೆ ಅನೇಕ ಜೀವಪರ ಸಂದೇಶಗಳು ಖುರಾನ್ನಲ್ಲಿ ಅಡಕವಾಗಿವೆ. ಅವುಗಳನ್ನು ಅರಿತು ಆಚರಣೆಯಲ್ಲಿ ತರುವ ಪ್ರಯತ್ನ ನಡೆಯಬೇಕಾಗಿದೆ. ನಮ್ಮಲ್ಲಿ ಅರಿವಿದ್ದರೆ ಆಚಾರವಿಲ್ಲ. ಆಚಾರವಿದ್ದರೂ ಅದು ಮೌಢ್ಯದಿಂದ ಕೂಡಿರುತ್ತದೆ. ಹಾಗಾಗಿ ಅರಿವು, ಆಚಾರ ಒಂದಾದಾಗಲೇ ಅಲ್ಲಾಹ್ನ ಪ್ರೀತಿಗೆ ಪಾತ್ರರಾಗುವರು.
ನಿಜವಾದ ದೈವಭಕ್ತಿ ಆಡಂಬರದ ಪೂಜೆಯಲ್ಲಿಲ್ಲ. ಮನುಷ್ಯನ ಘನತೆಯಲ್ಲಿದೆ. ಹಾಗಾಗಿ ಮನುಕುಲಕ್ಕೆ ಘನತೆಯನ್ನು ತರುವ ಧಾರ್ಮಿಕ, ನೈತಿಕ ನೆಲೆಗಟ್ಟಿನ ಮೇಲೆ ಅರ್ಥಪೂರ್ಣವಾಗಿ ಬಾಳುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಕಣ್ಣುಗಳಿಂದ ಕರುಡಾದರೆ ಅಪಾಯವಿಲ್ಲ; ಹೃದಯದ ಸದ್ಭಾವನೆಗಳಿಂದ ಮನುಷ್ಯ ಎಂದಿಗೂ ಕುರುಡಾಗಬಾರದು. ಬಾಹ್ಯ ಬಡತನಕ್ಕಿಂತ ಹೃದಯದ ಬಡತನ ಬಹುದೊಡ್ಡ ಬಡತನ. ಇಂಥ ಹೃದಯದ ಬಡತನದಿಂದ ಮನುಷ್ಯ ಹೊರಬರಬೇಕು. ಅದನ್ನೇ ಬಸವಣ್ಣನವರು `ಮನೆ ನೋಡಾ ಬಡವರು, ಮನ ನೋಡಾ ಘನ’ ಎಂದಿರುವುದು. ಬಸವಣ್ಣನವರು ಹೇಳಿರುವ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ’ ಎನ್ನುವ ಸಪ್ತಶೀಲಗಳನ್ನೇ ಪ್ರವಾದಿಗಳು ಸಹ ಹೇಳಿರುವುದು. ಕಾಲಮಾನ, ದೇಶ, ಭಾಷೆ ಬೇರೆ ಬೇರೆ ಇದ್ದರೂ ಹೃದಯದ ಸದ್ಭಾವನೆಗಳು ಬೇರೆ ಬೇರೆ ಆಗಿಲ್ಲ ಎನ್ನುವುದು ಜಗತ್ತಿನ ಅನೇಕ ಸಂತರ, ಶರಣರ, ಪ್ರವಾದಿಗಳ ಸಂದೇಶದಿಂದ ತಿಳಿದುಬರುವುದು.
ನಾವಿಂದು ಸಂದೇಶ ಮರೆತು ಮತಾಂಧರಾಗಿ ಬಡಿದಾಡುವುದನ್ನು ನಿಲ್ಲಿಸದಿದ್ದರೆ, ಸರಳವಾಗಿ ಬಾಳದಿದ್ದರೆ, ಸಕಲ ಜೀವಾತ್ಮರ ಒಳಿತನ್ನು ಬಯಸದಿದ್ದರೆ, ಸರ್ವರಲ್ಲೂ ಪ್ರೇಮಭಾವನೆ ತೋರದಿದ್ದರೆ, ಕಾಯಕಶೀಲರಾಗದಿದ್ದರೆ, ಪ್ರಾರ್ಥನೆ, ಸಹಾಯ ಮಾಡುವ ಗುಣ ಬೆಳೆಸಿಕೊಳ್ಳದಿದ್ದರೆ ನಮ್ಮ ನಮ್ಮ ಧರ್ಮದೀಪಕರಿಗೆ ಕಳಂಕ ತಂದಂತೆ. ನಮ್ಮಲ್ಲಿ ಪ್ರವಾದಿಗಳಿಗೆ, ಅವರ ಸಂದೇಶಗಳಿಗೆ ಕೊರತೆ ಇಲ್ಲ. ಇರುವುದು ಅವುಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳದಿರುವುದು. ಧರ್ಮದ ಮೂಲ ದಯೆ ಎಂದು ಗೊತ್ತಿದ್ದರೂ ಭಯದ ಮೂಲಕವೇ ಧರ್ಮವನ್ನು ಹೇಳಲು ಮುಂದಾಗುತ್ತಿರುವುದು ಆಯಾ ಧರ್ಮದ ದ್ರಷ್ಟಾರರಿಗೆ ಅಪಚಾರ ಬಗೆದಂತೆ. ಪ್ರಭುದೇವರ ಒಂದು ವಚನವನ್ನು ನೋಡಿ:
ಸತ್ಯವಿಲ್ಲದವರೊಡನೆ
ಸಹಸ್ರಕ್ಕೊಮ್ಮೆ ನುಡಿಯಲಾಗದು,
ಲಕ್ಷಕ್ಕೊಮ್ಮೆ ನುಡಿಯಲಾಗದು,
ಕೋಟಿಗೊಮ್ಮೆ ನುಡಿಯಲಾಗದು.
ಸುಡಲಿ ಅವಂದಿರ ಕೂಡೆ ಮಾರಿ ಹೋರಲಿ.
ಗುಹೇಶ್ವರಾ ನಿಮ್ಮ ಶರಣರಲ್ಲದವರೊಡನೆ,
ಬಾಯಿದೆರೆಯಲಾಗದು.
ಇದೇ ಅಭಿಪ್ರಾಯ ಪ್ರವಾದಿ ಮುಹಮದ್ ಅವರದೂ ಆಗಿದೆ. ಇದನ್ನರಿತು ಎಲ್ಲ ಬಾಂಧವರೂ ಪ್ರವಾದಿ ಪೈಗಂಬರ ಅವರ ಮಾನವೀಯ ಸಂದೇಶಗಳನ್ನು ವ್ಯಕ್ತಿಗತ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸತ್ಸಂಕಲ್ಪ ಮಾಡೋಣ. ಎಲ್ಲ ಧರ್ಮ ಮತ್ತು ಧರ್ಮದೀಪಕರನ್ನು ಗೌರವಿಸೋಣ. ಒಳ್ಳೆಯ ಅಂಶಗಳು ಎಲ್ಲೇ ಇದ್ದರೂ ಅವುಗಳನ್ನು ಮುಕ್ತವಾಗಿ ಸ್ವೀಕರಿಸೋಣ. ಸಕಲ ಜೀವಾತ್ಮರಿಗೆ ಒಳಿತನ್ನು ಬಯಸೋಣ.

Previous post ಗಂಟಿನ ನಂಟು
ಗಂಟಿನ ನಂಟು
Next post ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3

Related Posts

ತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
Share:
Articles

ತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ

April 29, 2018 ಡಾ. ಶಶಿಕಾಂತ ಪಟ್ಟಣ
ಶರಣ ಸಾಹಿತ್ಯವು ಸಾರ್ವಕಾಲಿಕ ದಯೆ, ಸಮತೆ, ಶಾಂತಿ, ಪ್ರೀತಿ ಬೀರಿದ ಶ್ರೇಷ್ಠ ದೇಸಿ ಸಾಹಿತ್ಯ. ಬಸವಣ್ಣ, ಅಲ್ಲಮ, ಚೆನ್ನಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ, ಮುಕ್ತಾಯಕ್ಕ,...
ಆತ್ಮಹತ್ಯೆ-ಆತ್ಮವಿಶ್ವಾಸ
Share:
Articles

ಆತ್ಮಹತ್ಯೆ-ಆತ್ಮವಿಶ್ವಾಸ

January 10, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕಟ್ಟಬೇಕು ಮನವ, ಮೆಟ್ಟಬೇಕು ಮದವ, ಸುಟ್ಟರುಹಬೇಕು ಸಪ್ತವ್ಯಸನಂಗಳ. ಆ ತೊಟ್ಟಿಲ ಮುರಿದು, ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ ನಿಂದಿರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ. ಮನುಷ್ಯನ...

Comments 10

  1. ಗವಿಸಿದ್ದೇಶ ಗುರುಮಠ್
    Nov 10, 2020 Reply

    ಪೈಗಂಬರರ ಸಂದೇಶಗಳನ್ನು ಸರಳವಾಗಿ ತಿಳಿಸಿದ ಸುಂದರ ಲೇಖನ

  2. ಜಯದೇವಪ್ಪ ಚಿಕ್ಕಮಗಳೂರು
    Nov 10, 2020 Reply

    ಕನ್ನಡದಲ್ಲಿ ಕುರಾನ್ ಓದಿದ್ದೇನೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಅದ್ಭುತ ಕೃತಿ. ಕುರಾನಿನ ಸಂದೇಶಗಳು ಸಾರ್ವಕಾಲಿಕವಾಗಿವೆ. ಸಮಯೋಚಿತ ಲೇಖನ ಬರೆದ ಪೂಜ್ಯರಿಗೆ ನಮನಗಳು.

  3. Prabhakar Banavar
    Nov 11, 2020 Reply

    ಹಿಂಸೆಗೆ ಜಾಗವಿಲ್ಲದ ಇಸ್ಲಾಂ ಧರ್ಮದಲ್ಲಿ ಈಗ ಹಿಂಸೆಯೇ ತುಂಬಿಕೊಂಡಿದ್ದು ಹೇಗೆ? ಧರ್ಮಗಳು ಹೀಗೆ ಗಟ್ಟಿಗೊಂಡ ಹಾಗೆ ಅಲ್ಲಿನ ಮಾನವೀಯ ವಿಚಾರಗಳೆಲ್ಲವೂ ನಿಂತು ಹೋಗಿ ಮತಾಂಧತೆಯನ್ನು ಸೃಷ್ಟಿಸುತ್ತಿರುತ್ತದೆ.

  4. Shivananda G
    Nov 16, 2020 Reply

    ಇಸ್ಲಾಂ ಧರ್ಮದ ಐದು ಆಧಾರಸ್ಥಂಬಗಳು- 1. ಏಕದೇವತಾರಾಧನೆ. 2. ದಾನ. 3. ಪ್ರಾರ್ಥನೆ. 4. ತೀರ್ಥಯಾತ್ರೆ. 5. ಉಪವಾಸ. ಇವು ಪ್ರತಿಯೊಬ್ಬರಿಗೂ ಪಾಲನೆಗೆ ಯೋಗ್ಯವಾಗಿವೆ. ಇಸ್ಲಾಂ ಮತಾಂಧತೆಯನ್ನು ಹುಟ್ಟುಹಾಕುವ ಧರ್ಮವಲ್ಲ ಎನಿಸಿತು. ಧರ್ಮಗಳನ್ನ ತಿರುಚಿ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವವರು ನಾವು, ಶ್ರೀಗಳ ಲೇಖನ ಕಣ್ಣು ತೆರೆಸುವಂತಿದೆ.

  5. Anand Gubbi
    Nov 18, 2020 Reply

    ಸರ್ವ ಧರ್ಮಗಳ ಐಕ್ಯಮತ್ಯವನ್ನು ಜನರಿಗೆ ಮುಟ್ಟಿಸುವ ಇಂತಹ ಲೇಖನಗಳು ಬೇಕು. ಖುರಾನಿನ ಸಂದೇಶಗಳು ಸರ್ವಕಾಲಕ್ಕೂ ಸಲ್ಲುವಂತಿವೆ.

  6. Chandranna Naganur
    Nov 19, 2020 Reply

    ಬಯಲು ಮ್ಯಾಗಝಿನಿನಲ್ಲಿ ಪೈಗಂಬರರ ಲೇಖನದ ಅಗತ್ಯ ಇತ್ತಾ?

  7. Lalithamma
    Nov 19, 2020 Reply

    ಕುರಾನ್ ಹಾಗೂ ವಚನಗಳ ಸಾಮ್ಯತೆಗಳನ್ನು ಮತ್ತು ಅವುಗಳ ತಾತ್ವಿಕ ಭಿನ್ನತೆಗಳನ್ನು ಬರೆದಿದ್ದರೆ ಲೇಖನ ಸಮಗ್ರವಾಗಿರುತ್ತಿತ್ತು.

  8. ಕರಿಬಸವಯ್ಯ
    Nov 22, 2020 Reply

    ನಿಜ ಗುರುಗಳೇ, ಎಲ್ಲಾ ಧರ್ಮಗಳ ಗುರುಗಳು ಧರ್ಮದೀಪಕರೇ. ಆದರೆ ಅವರ ಅನುಯಾಯಿಗಳು ಮಾತ್ರ ಅವರು ಹಚ್ಚಿದ ದೀಪಗಳನ್ನಾರಿಸಿ ಬಡೆದಾಡಿಕೊಳ್ಳುವ ಧರ್ಮಾಂಧರು.

  9. Shantha Gavi
    Nov 22, 2020 Reply

    ಮಾನವೀಯತೆಯ ಮಾರ್ಗದರ್ಶಕರನ್ನು ಅವರ ಪಾಡಿಗೆ ಅವರನ್ನು ಬಿಟ್ಟುಬಿಟ್ಟಿದ್ದರೆ ಚೆನ್ನಾಗಿತ್ತು. ಧರ್ಮಗಳೇ ಇವತ್ತು ನೇಣಾಗಿವೆ… ಯಾವ ಧರ್ಮವೂ ಬೇಡವೆನಿಸಿ ಬಿಟ್ಟಿದೆ…. ಇವತ್ತಿನ ವಾತಾವರಣ ಪ್ರತಿ ಹೆಜ್ಜೆಯಲ್ಲೂ ಧರ್ಮವಿರೋಧಿಯಾಗಿದ್ದರೂ ಧರಮದ ಹೆಸರೇ ಹೆಚ್ಚು ಬಳಕೆಯಾಗುತ್ತಲಿದೆ.

  10. ಮಹಾದೇವಪ್ಪ ಹಾರೂರು
    Nov 26, 2020 Reply

    ಪೈಗಂಬರರ ಸಂದೇಶದಲ್ಲಿ ಎಲ್ಲರ ಹಿತ, ಸಮಾಜದ ಶ್ರೇಯ ಅಡಗಿದೆ. ಸುಂದರ ಲೇಖನ.

Leave a Reply to Anand Gubbi Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
Copyright © 2021 Bayalu