Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿಚ್ಚ ನಿಚ್ಚ ಶಿವರಾತ್ರಿ
Share:
Articles March 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ನಿಚ್ಚ ನಿಚ್ಚ ಶಿವರಾತ್ರಿ

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?
ಸುಮ್ಮನೇಕೆ ಹೊತ್ತುಗಳೆವಿರಿ ಸ್ವಾಮಿಗಳಿರಾ?
ಮಾಡಬನ್ನಿ ದಿನ ಶಿವರಾತ್ರಿಯ, ಕೇಳಬನ್ನಿ ಶಿವಾನುಭವವ,
ನೋಡಬನ್ನಿ ಅಜಗಣ್ಣನಿರವ ಬಸವಣ್ಣ ತಂದೆ.
                                                        – ಮುಕ್ತಾಯಕ್ಕ

ಭಾರತೀಯ ಪರಂಪರೆಯಲ್ಲಿ ವರ್ಷದುದ್ದಕ್ಕೂ ವಿವಿಧ ರೀತಿಯ ಹಬ್ಬ ಹುಣ್ಣಿಮೆಗಳ ಆಚರಣೆ ಪುರಾತನ ಕಾಲದಿಂದಲೂ ನಡೆದು ಬಂದಿದೆ. ಅವುಗಳ ಹಿಂದೆ ಏನೋ ಒಂದು ಉದ್ದೇಶ ಇರುತ್ತದೆ. ಆದರೆ ಮುಂದೆ ಬಂದವರು ಮೂಲ ಉದ್ದೇಶ ಮರೆತು ಅದೊಂದು ಸಂಪ್ರದಾಯವೆನ್ನುವಂತೆ ಆಚರಿಸುವುದುಂಟು. ಅದನ್ನು ಏಕೆ ಆಚರಿಸುತ್ತೇವೆ, ಹೇಗೆ ಆಚರಿಸಬೇಕು, ಉದ್ದೇಶವೇನು ಎನ್ನುವ ಚಿಂತನೆಯನ್ನೇ ಮಾಡುವುದಿಲ್ಲ. ಹಿಂದೆ ಬಹುತೇಕ ಜನರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇತ್ತು. ಹೊಟ್ಟೆ ತುಂಬಿಕೊಳ್ಳುವುದೇ ದುಸ್ತರವಾಗಿರುವಾಗ ಸಾತ್ವಿಕ ಮತ್ತು ಪುಷ್ಠಿದಾಯಕ ಆಹಾರ ಸ್ವೀಕರಿಸುವುದಂತೂ ದೂರವೇ ಉಳಿಯಿತು. ನಮ್ಮ ಬಾಲ್ಯವನ್ನೇ ನೆನಪಿಸಿಕೊಂಡರೆ ಕೊಬ್ಬರಿ, ಬಾಳೇಹಣ್ಣು ತಿನ್ನುತ್ತಿದ್ದುದು ಯಾವಾಗಲೋ? ಅದೂ ದೇವರಿಗೆಂದು ನೈವೇದ್ಯ ಮಾಡಿದಾಗ. ನೆಲ್ಲಕ್ಕಿ ಅನ್ನ, ಪಾಯಸ, ಹೋಳಿಗೆ ಉಣ್ಣಬೇಕು ಎಂದರೆ ಮನೆಗೆ ಅಪರೂಪದ ನೆಂಟರು ಬರಬೇಕು, ಇಲ್ಲವೇ ಯಾವುದಾದರೂ ಹಬ್ಬ ಇರಬೇಕು. ನಮ್ಮ ಹಿರಿಯರು ತುಂಬಾ ಬುದ್ಧಿವಂತರೆಂದು ಈಗ ಅನ್ನಿಸುವುದು. ಹಬ್ಬದ ನೆಪದಲ್ಲಾದರೂ ಸ್ವಲ್ಪ ಸಾತ್ವಿಕ ಮತ್ತು ಪುಷ್ಠಿದಾಯಕ ಆಹಾರ ಎಲ್ಲರಿಗೂ ಸಿಗುವಂತಾಗಲಿ ಎನ್ನುವ ಉದ್ದೇಶ ಹಿರಿಯರದಾಗಿರಬೇಕು. ಹಬ್ಬಗಳಲ್ಲೂ ವೈವಿಧ್ಯತೆ ಇದೆ. ಒಂದೊಂದು ಹಬ್ಬದಲ್ಲಿ ಒಂದೊಂದು ರೀತಿಯ ಆಹಾರ ತಯಾರಿಸುವ ಪದ್ಧತಿ. ಕೆಲವು ಹಬ್ಬಗಳು ಪುಷ್ಕಳವಾಗಿ ಊಟ ಮಾಡುವಂತಹವಾದರೆ ಮತ್ತೆ ಕೆಲವು ಹಬ್ಬಗಳು ಮಿತ ಆಹಾರ ಸ್ವೀಕರಿಸುವಂತಹವು. ಇನ್ನು ಕೆಲವು ಹಬ್ಬಗಳು ಉಪವಾಸವಿದ್ದು ದೇವರ ಸ್ಮರಣೆ ಮಾಡುವಂತಹವು. ಇಂಥವುಗಳಲ್ಲಿ ವಿಶೇಷ ಸ್ಥಾನ `ಶಿವರಾತ್ರಿ’ ಹಬ್ಬಕ್ಕೆ.

ಹೆಸರೇ ಹೇಳುವಂತೆ ರಾತ್ರಿ ಮಾಡುವ ಹಬ್ಬ `ಶಿವರಾತ್ರಿ’. ಈ ಹಬ್ಬದ ಪೌರಾಣಿಕ ಕತೆಗಳು ಏನಾದರೂ ಇರಲಿ. ಪೌರಾಣಿಕತೆಗಿಂತ ವಾಸ್ತವಿಕತೆಯ ನೆಲೆಯಲ್ಲಿ ಈ ಹಬ್ಬವನ್ನು ನೋಡಬೇಕಾದ್ದು ಇಂದಿನ ಅಗತ್ಯ. ಇಲ್ಲಿ ಶಿವ ಮತ್ತು ರಾತ್ರಿ ಎನ್ನುವ ಎರಡು ವಿಶೇಷ ಪದಗಳಿವೆ. ಶಿವ ಶಬ್ದಕ್ಕೆ ಅನೇಕ ಅರ್ಥಗಳಿವೆ. ಶಿವ ಎಂದರೆ ಮಂಗಳ, ಒಳಿತು, ಲೇಸು, ಅಭ್ಯುದಯ, ಕಲ್ಯಾಣ, ಬೆಳಕು, ಜ್ಞಾನ ಇತ್ಯಾದಿ. ಇಲ್ಲಿ ಮುಖ್ಯವಾಗಿ ನಾವು ಶಿವ ಎಂದರೆ ಜ್ಞಾನ, ಬೆಳಕು ಎಂದು ಸ್ವೀಕರಿಸಿದರೆ ಸಾಕು. ಇನ್ನು ರಾತ್ರಿ ಎಂದರೆ ಕತ್ತಲೆ, ಅಜ್ಞಾನ. ಪರಸ್ಪರ ವಿರುದ್ಧ ಪದಗಳಿವೆಯಲ್ಲ ಎನ್ನಿಸಬಹುದು. ಶಿವ ಎಂದರೆ ಬೆಳಕು, ರಾತ್ರಿ ಎಂದರೆ ಕತ್ತಲೆ. ಇವೆರಡೂ ಕೂಡಿ ಹೇಗೆ ಹಬ್ಬವಾಗುವುದು? ಇದನ್ನು ಸ್ವಲ್ಪ ಗಂಭೀರವಾಗಿ ವಿಶ್ಲೇಷಣೆ ಮಾಡುವ ಅಗತ್ಯವಿದೆ. ಅದನ್ನೇ ಬಸವಣ್ಣನವರು `ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎಂದಿದ್ದಾರೆ. ಜ್ಞಾನದಿಂದ ಅಜ್ಞಾನವನ್ನು ಹೊಡೆದೋಡಿಸಬೇಕು. ಬೆಳಕಿನಿಂದ ಕತ್ತಲೆಯನ್ನು ದೂರ ತಳ್ಳಬೇಕು. ಈ ನೆಲೆಯಲ್ಲಿ ಶಿವರಾತ್ರಿ ಎಂದರೆ ಬೆಳಕಿನಿಂದ ಕತ್ತಲೆಯ ಕಡೆ ಸಾಗುವುದಲ್ಲ. ಬದಲಾಗಿ ಕತ್ತಲೆಯಿಂದ ಬೆಳಕಿನ ಕಡೆ ನಡೆಯಬೇಕು. ಜ್ಞಾನ ಸಲಾಕೆಯಿಂದ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಬೇಕು. ಆಗಲೇ ಶಿವರಾತ್ರಿಗೆ ವಿಶೇಷ ಮನ್ನಣೆ ಬರುವುದು. ಇದು ಕಾರಣವಾಗಿಯೇ ಶಿವರಾತ್ರಿ ಹಬ್ಬದಂದು ರಾತ್ರಿಯೆಲ್ಲ ಜನರು ಪುರಾಣ ಪುಣ್ಯ ಕತೆಗಳ ಶ್ರವಣದಲ್ಲಿ ಕಾಲದ ಸದುಪಯೋಗ ಮಾಡುವರು. ಭಜನೆ ಮಾಡುವರು. ಸಂಗೀತ ಕೇಳುವರು. ಕಾಲ ಬದಲಾದಂತೆ ಶಿವರಾತ್ರಿಯ ದಿನದಂದು ಜಾಗರಣೆ ಮಾಡಬೇಕು ಎನ್ನುವ ತತ್ವವನ್ನು ಮಾತ್ರ ಹಲವರು ಉಳಿಸಿಕೊಂಡಿದ್ದಾರೆ.

ಜಾಗರಣೆ ಮಾಡುವ ಸಲುವಾಗಿ ರಾತ್ರಿಯೆಲ್ಲ ಟಿವಿ ಮುಂದೆ ಕೂರುವವರಿದ್ದಾರೆ. ಎರಡು ಮೂರು ಚಲನಚಿತ್ರ ನೋಡುವವರಿದ್ದಾರೆ. ಇನ್ನೂ ಸುಧಾರಿಸಿದವರು ಕ್ಲಬ್‍ಗಳಲ್ಲಿ ಕಾಲ ಕಳೆಯುವುದೂ ಉಂಟು. ವಾಸ್ತವವಾಗಿ ಇದು `ಡಿವೈನ್’ ರಾತ್ರಿಯಾಗಬೇಕೇ ಹೊರತು `ವೈನ್’ ರಾತ್ರಿಯಾಗಬಾರದು. ಡಿವೈನ್‍ಗೂ, ವೈನ್‍ಗೂ ತುಂಬಾ ಅಂತರವಿದೆ. ಡಿವೈನ್ ರಾತ್ರಿ ಎಂದರೆ ದೈವಿಕ ರಾತ್ರಿ. ಧ್ಯಾನ, ಪೂಜೆ, ಮೌನ, ಭಜನೆ ಇತ್ಯಾದಿ ಮಾಡುವ ಮೂಲಕ ರಾತ್ರಿಯನ್ನು ಸಾರ್ಥಕಪಡಿಸಿಕೊಳ್ಳುವುದು. ವೈನ್ ಎಂದರೆ ಮತ್ತು ಬರಿಸುವಂಥ ಪೇಯಗಳನ್ನು ಕುಡಿಯುವುದು. ದೆವ್ವ ಬಂದಂತೆ ವರ್ತಿಸುವುದು. ಯಾರು ಸಹ ಶಿವರಾತ್ರಿಯನ್ನು ವೈನ್ ರಾತ್ರಿಯನ್ನಾಗಿ ಮಾಡಿಕೊಳ್ಳದೆ ನಿಜಾರ್ಥದಲ್ಲಿ ಡಿವೈನ್ ರಾತ್ರಿಯನ್ನಾಗಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾಗರಣೆ ಮಾಡುವುದೆಂದರೆ ಸದಾ ಎಚ್ಚರದಿಂದಿರುವುದು. ಶರಣರ ದೃಷ್ಟಿಯಲ್ಲಿ ನಿತ್ಯವೂ ಶಿವರಾತ್ರಿಯಾಗಬೇಕು. ಹಾಗಾಗಿಯೇ ಮುಕ್ತಾಯಕ್ಕ ವ್ಯರ್ಥವಾಗಿ ಏಕೆ ದಿನ ಕಳೆಯುವಿರಿ? ಪ್ರತಿ ದಿನವೂ ಶಿವರಾತ್ರಿಯ ಮಾಡಬನ್ನಿ ಎನ್ನುವ ಕರೆ ನೀಡಿದ್ದಾರೆ. ಶಿವರಾತ್ರಿ ಮಾಡುವುದು ಎಂದರೆ `ಶಿವಾನುಭವ’ ಸಂದೇಶ ಕೇಳುವುದು. ನಾವೂ ಶಿವಾನುಭವಿಗಳಾಗುವುದು. 12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರು `ಅನುಭವಮಂಟಪ’ದ ಮೂಲಕ ನಿತ್ಯವೂ ಶಿವರಾತ್ರಿ ಮಾಡುತ್ತಿದ್ದುದು ಗಮನಾರ್ಹ. ಬಸವಣ್ಣನವರ ವಚನಗಳು ಶಿವರಾತ್ರಿಯ ಮಹತ್ವವನ್ನು ಸಾರುವಂತಿವೆ.

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ
ಕಾಯವೆ ಕೈಲಾಸ ಕಾಣಿರೊ.

ಕಾಯಕ್ಕೆ ವಿಶೇಷ ಮಹತ್ವ ನೀಡಿದವರು ಬಸವಣ್ಣನವರು. ಹಾಗಾಗಿ ತಮ್ಮ ಮತ್ತೊಂದು ವಚನದಲ್ಲಿ `ಕೂಡಲಸಂಗಮದೇವರನೊಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು’ ಎಂದಿದ್ದಾರೆ. ದೇಹ ದೇವರನ್ನು ಒಲಿಸಲು ಬಂದಿರುವ ಪ್ರಸಾದ ಕಾಯ. ಕುಡಿಯಬಾರದ್ದನ್ನು ಕುಡಿದು, ತಿನ್ನಬಾರದ್ದನ್ನು ತಿಂದು, ಮಾಡಬಾರದ್ದನ್ನು ಮಾಡಿ, ಆಡಬಾರದ್ದನ್ನು ಆಡಿ ಈ ಶರೀರವನ್ನು ಚರಂಡಿಯನ್ನಾಗಿ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ಕಾಯ ಎಂದರೆ ದೇಹ. ದೇಹದ ಪಾವಿತ್ರ್ಯವನ್ನು ಕಾಯ್ದುಕೊಂಡರೆ ಅದೇ ಕೈಲಾಸ. ಕೈಲಾಸ ಪೌರಾಣಿಕ ಕಲ್ಪನೆಯದಲ್ಲ. ನೆಮ್ಮದಿಯ ಜೀವನವೇ ಕೈಲಾಸ. ಈ ವಚನದಲ್ಲಿ ಶರಣ, ನಿದ್ರೆ, ಜಪ, ಶಿವರಾತ್ರಿ, ಶಿವತತ್ವ ಇತ್ಯಾದಿ ಪದಗಳ ಬಳಕೆ ಆಗಿರುವುದು ಗಮನಾರ್ಹ. ಅರಿವು, ಆಚಾರ ಒಂದಾದವ, ನುಡಿದಂತೆ ನಡೆಯುವವ ಶರಣ. ಅಂಥ ಶರಣನಿಗೆ ವರ್ಷಕ್ಕೊಮ್ಮೆ ಶಿವರಾತ್ರಿ ಅಲ್ಲ. ಪೂಜೆಯ ಸಂದರ್ಭದಲ್ಲಿ ಮಾತ್ರ ಆತ ಜಪ ಮಾಡುವುದಿಲ್ಲ. ಮಲಗಿ ನಿದ್ರಿಸುವಾಗಲೂ ಶ್ವಾಸೋಚ್ವಾಸದ ಮೂಲಕ ಓಂ ನಮಃ ಶಿವಾಯ ಎನ್ನುವ ಮಂತ್ರದ ಅನುಸಂಧಾನ ಮಾಡುವನು. ಹಾಗಾಗಿ ಆತನ ನಿದ್ರೆಯೇ ಜಪ. ಆಗ ಎಚ್ಚರವಿದ್ದು ಏನಾದರೂ ಕಾಯಕ ಮಾಡುತ್ತಿದ್ದರೆ ಅದೇ ಶಿವರಾತ್ರಿ. ಅವನಾಡುವ ಪ್ರತಿಯೊಂದು ನುಡಿಗಳೂ ಶಿವತತ್ವ ಪ್ರತಿಪಾದಿಸುವಂತಹವು. ಈ ಅರಿವು ಇದ್ದರೆ ವರ್ಷಕ್ಕೊಮ್ಮೆ ಶಿವರಾತ್ರಿ ಅಲ್ಲ, ಆತನ ಉಸಿರಾಟದ ಪ್ರತಿಯೊಂದು ಕ್ಷಣವೂ ಶಿವರಾತ್ರಿ. ಅವನು ಯಾವಾಗಲೂ ಜಾಗರವಾಗಿದ್ದು ತನ್ನ ದೇಹ, ಮನಸ್ಸು, ಬುದ್ಧಿ, ಇಂದ್ರಿಯಗಳ ಶುದ್ಧಿಯನ್ನು ಕಾಯ್ದುಕೊಳ್ಳುವನು. ಶಿವರಾತ್ರಿಯ ಉದ್ದೇಶವೂ ಇದೇ ಆಗಿದೆ. ಶಿವರಾತ್ರಿಯ ಹಿನ್ನೆಲೆಯಲ್ಲಿ ಉಪವಾಸ ಮಾಡುವುದು ಮುಖ್ಯ ಎಂದು ಬಹುತೇಕರು ಭಾವಿಸಿದ್ದಾರೆ. ಉಪವಾಸ ಎಂದರೆ ಸಮೀಪದಲ್ಲಿರುವುದು, ಹತ್ತಿರದಲ್ಲಿ ವಾಸಿಸುವುದು ಎನ್ನುವ ಅರ್ಥವೂ ಇದೆ.

ಉಪವಾಸ ಎಂದರೆ ಊಟ ಮಾಡದಿರುವುದು ಎನ್ನುವ ಅಭಿಪ್ರಾಯ ಬಹುತೇಕ ಜನರದ್ದಾಗಿದೆ. ಆದರೆ ಅದಷ್ಟೇ ಅರ್ಥ ಅಲ್ಲ. ಅಂತರಂಗದೊಂದಿಗೆ ಮಾತನಾಡುವುದು, ಧ್ಯಾನ, ಮೌನ, ಪ್ರಾರ್ಥನೆ, ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವುದು, ಲಿಂಗಾಂಗಸಮರಸ ಹೊಂದುವುದು ಸಹ ಉಪವಾಸವೇ. ಇದನ್ನು ಅರ್ಥಮಾಡಿಕೊಳ್ಳದೆ ಅಂದು ರಾತ್ರಿ ಕೆಲವರು ಊಟ ಮಾಡದೆ ಶಿವಧ್ಯಾನ ಮಾಡುವುದುಂಟು. ಇನ್ನು ಕೆಲವರು ಕರಿದ, ಹುರಿದ, ಬೇಯಿಸಿದ ಆಹಾರವನ್ನು ಶಿವರಾತ್ರಿಯಂದು ಸೇವಿಸಬಾರದು ಎಂದು ಹಣ್ಣು, ಹಾಲು, ಹಸಿಕಡಲೆ ಇತ್ಯಾದಿ ಪದಾರ್ಥಗಳನ್ನು ಹೊಟ್ಟೆಬಿರಿಯುವಂತೆ ತಿನ್ನುವರು. ಅದೇನು ಕಾರಣವೋ ಇತ್ತೀಚಿನ ದಿನಗಳಲ್ಲಿ ಉಪ್ಪಿಟ್ಟು ಶಿವರಾತ್ರಿಯ ಆಹಾರದ ಪಟ್ಟಿಯಲ್ಲಿ ಸೇರಿದೆ. ಹಾಗಾಗಿ ಪ್ರತಿದಿನಕ್ಕಿಂತ ಹೆಚ್ಚಾಗಿಯೇ ಶಿವರಾತ್ರಿಯಂದು ಊಟ ಮಾಡುವರು. ಅದೇನಾದರೂ ಇರಲಿ; ಮನುಷ್ಯ ತನ್ನ ನೈತಿಕತೆಯನ್ನು ಹಾಳುಮಾಡಿಕೊಳ್ಳದೆ ಅಂತರಂಗ, ಬಹಿರಂಗ ಶುದ್ಧಿಯನ್ನು ಕಾಯ್ದುಕೊಳ್ಳಬೇಕು. ಆದರೆ ಅದೆಷ್ಟೋ ಜನರು ಬೆಲ್ಲದಂತಹ ಮಾತನಾಡಿ ಅಲ್ಲವಾದ ಕಾರ್ಯಗಳನ್ನು ಮಾಡುವುದುಂಟು. ಅಂಥವರನ್ನು ಗಮನಿಸಿದ ಬಸವಣ್ಣನವರು ಹೇಳುವ ಮಾತುಗಳು ಚಿಂತನಾರ್ಹವಾಗಿವೆ.
ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ!
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ!
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ!
ಆನು ಎನ್ನಂತೆ, ಮನ ಮನದಂತೆ.
ಕೂಡಲಸಂಗಮದೇವ ತಾನು ತನ್ನಂತೆ.

ಇಲ್ಲಿ ಬರುವ ಪ್ರತಿಯೊಂದು ಪದಗಳೂ ಜಾಗರೂಕರಾಗಿರುವ ಅಗತ್ಯವನ್ನು ಒತ್ತಿ ಹೇಳುವಂತಿವೆ. ಬಾಯಲ್ಲಿ ಬೆಲ್ಲದಂತಹ ಮಾತನಾಡಿ ಹೃದಯದಲ್ಲಿ ಕತ್ತರಿಯನ್ನು ಅಡಗಿಸಿಕೊಂಡಿದ್ದರೆ ಅವನ ಬೆಲ್ಲದಂತಹ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. ಅವನು ಏನು ಹಾಡಿದರೇನು, ಏನು ಆಡಿದರೇನು, ನಿತ್ಯ ಶಿವರಾತ್ರಿ ಮಾಡಿದರೇನು? ಅವನಲ್ಲಿ ಆಂತರಿಕ ಶುಚಿತ್ವ ಇಲ್ಲದಲ್ಲಿ ಆತ ಆಡುವುದೆಲ್ಲ ಹೊಳೆಯಲ್ಲಿ ಹುಣಸೇಹಣ್ಣು ಕದಡಿದಂತೆ ವ್ಯರ್ಥವಾಗುವುದು. ಹಾಗಾಗಿ ಶಿವರಾತ್ರಿಯ ದಿನದಂದು ಏನು ಮಾಡಬೇಕೆಂಬ ಎಚ್ಚರ ಪ್ರತಿಯೊಬ್ಬರಿಗೂ ಇರಬೇಕು. ವಿದ್ಯಾರ್ಥಿಗಳು ಅಂದು ರಾತ್ರಿಯೆಲ್ಲ ನಿದ್ದೆಗೆಟ್ಟು ಏನೇನೋ ಮಾಡುವ ಬದಲು ನಿತ್ಯ ಓದುವುದಕ್ಕಿಂತ ಅರ್ಧ ಗಂಟೆ ಹೆಚ್ಚು ಓದು, ಬರಹ ಮಾಡಿದರೆ ಸಾಕು. ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿರುವವರು ಅಂದು ವಚನಗಳನ್ನು, ಧರ್ಮಗ್ರಂಥಗಳನ್ನು ಓದುವ, ಬರೆಯುವ, ಒಳ್ಳೆಯ ನುಡಿಗಳನ್ನು ಆಲಿಸುವ ಕಾಯಕ ಮಾಡಿದರೆ ಅದೇ ನಿಜಾರ್ಥದಲ್ಲಿ ಶಿವರಾತ್ರಿಯಾಗುವುದು.

ಅಚ್ಚಿಗವೇಕಯ್ಯಾ ಸಂಸಾರದೊಡನೆ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು.

ಮನುಷ್ಯ ಸಂಸಾರದಲ್ಲೇ ಸುಖವಿದೆಯೆಂದು ಅದರಲ್ಲೇ ಮುಳುಗುವುದುಂಟು. ಸಂಸಾರದಲ್ಲಿ ಮುಳುಗಿದ ಮನುಷ್ಯನಿಗೆ ದೇವರ ನೆನವಿಗೂ ಬಿಡುವಾಗುವುದಿಲ್ಲ. ಹಾಗಾಗಿ ಬಸವಣ್ಣನವರು ಅಂಥವರಿಗೆ ಈ ವಚನದಲ್ಲಿ ಹೇಗಿರಬೇಕೆಂಬ ದಾರಿ ತೋರಿದ್ದಾರೆ. ಅದರಲ್ಲೇ ಮುಳುಗುವುದು ಬೇಡ. ನಿತ್ಯ ಶಿವರಾತ್ರಿ ಮಾಡಬೇಕು ಎಂದು ಸೂಚಿಸಿದ್ದಾರೆ. ಅದಕ್ಕಾಗಿ ಪ್ರತಿನಿತ್ಯ ಬೇಗ ಎದ್ದು ಅರ್ಚನೆ, ಪೂಜನೆ ಮಾಡಿ ದೇವರ ಸಾನಿಧ್ಯ ಸೇರಬೇಕು ಎನ್ನುವರು. ಆದರೆ ಇದು ಅಂದುಕೊಂಡಷ್ಟು ಸುಲಭವಿಲ್ಲ. ನಾಯಿಗೆ ಹೇಸಿಗೆ ತಿನ್ನುವಲ್ಲಿ, ಎಲವು ಕಡಿಯುವಲ್ಲಿ ಸಂತೋಷವೇ ಹೊರತು ಪಾಯಸ ಪಕ್ವಾನ್ನ ತಿನ್ನುವುದರಲ್ಲಿ ಅಲ್ಲ. ಮಾನವನ ಪರಿಸ್ಥಿತಿಯೂ ಕೆಲವೊಮ್ಮೆ ನಾಯಿಗಿಂತ ಕೀಳಾಗುವುದುಂಟು. ಹಾಗಂತ ಶರಣರು ಸಂಸಾರ ಬೇಡ ಎನ್ನುವುದಿಲ್ಲ. ಅದರ ಬಗ್ಗೆ ಎಚ್ಚರವಿರಬೇಕು. ಸಂಸಾರ ಸಂಗದಲ್ಲೇ ಮುಳುಗಿ ತನ್ನನ್ನೇ ತಾನು ಕಳೆದುಕೊಳ್ಳಬಾರದು ಎನ್ನುವರು. ಸಂಸಾರದ ಪರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಬಸವಣ್ಣನವರು.

ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರ ಶರಧಿಯ ದಾಂಟಿಸಿ
ಕಾಲಾಂತಕನೆ ಕಾಯೋ, ಕೂಡಲಸಂಗಯ್ಯಾ.

ಎಂಥ ನಿದರ್ಶನ ನೀಡಿದ್ದಾರೆ ನೋಡಿ. ಕಾಲಿಗೆ ಗುಂಡನ್ನು ಕಟ್ಟಲಾಗಿದೆ. ಕೊರಳಿಗೆ ಬೆಂಡನ್ನು ಕಟ್ಟಲಾಗಿದೆ. ಹೀಗೆ ಕಟ್ಟಿದ ವ್ಯಕ್ತಿಯನ್ನು ನೀರಿಗೆ ತಳ್ಳಿದರೆ ಏನಾಗಬಲ್ಲುದು? ಗುಂಡು ತೇಲಲು ಬಿಡುವುದಿಲ್ಲ. ಬೆಂಡು ಮುಳುಗಲು ಬಿಡುವುದಿಲ್ಲ. ಒಂದೆಡೆ ಸಂಸಾರ ಎನ್ನುವ ಗುಂಡು, ಮತ್ತೊಂದರೆ ಅನುಭಾವ ಎನ್ನುವ ಬೆಂಡು. ಯಾವುದನ್ನು ಹಿಡಿಯುವುದು, ಯಾವುದನ್ನು ಬಿಡುವುದು? ಹಾಗಾಗಿ ದೇವರೇ ನೀನೇ ನನ್ನನ್ನು ರಕ್ಷಿಸು ಎಂದು ಎಲ್ಲ ಭಾರವನ್ನೂ ಭಗವಂತನ ಮೇಲೆ ಹಾಕಿದ್ದಾರೆ. ಮನುಷ್ಯ ಕೆಲವೊಮ್ಮೆ ಸಂಪೂರ್ಣ ಭಗವಂತನನ್ನೂ ನಂಬುವುದಿಲ್ಲ, ತನ್ನ ಆತ್ಮಬಲದ ಮೇಲೂ ಬದುಕುವುದಿಲ್ಲ. ಹೊತ್ತು ಬಂದಂತೆ ಕೊಡೆ ಹಿಡಿಯುವ ಪ್ರಯತ್ನ ಮಾಡುವನು. ಅದೇ ಅವನಿಗೆ ಮುಳುವಾಗುವುದು. ಆತ ಒಂದನ್ನು ಹಿಡಿಯಬೇಕು, ಮತ್ತೊಂದನ್ನು ಬಿಡಬೇಕು. ಇದಕ್ಕೆ ಪೂರಕ ಶಕ್ತಿ ಒದಗಿಸುವಂತಿದೆ ಬಸವಣ್ಣನವರ ಮುಂದಿನ ವಚನ:

ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ,
ದೂರ ದುರ್ಜನರ ಸಂಗವದು ಭಂಗವಯ್ಯಾ.
ಸಂಗವೆರಡುಂಟು; ಒಂದ ಹಿಡಿ, ಒಂದ ಬಿಡು,
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣರ.

ಮನುಷ್ಯ ಏಕಾಂಗಿಯಾಗಿ ಬಾಳಲು ಆಗುವುದಿಲ್ಲ. ಅವನಿಗೆ ಹಲವರ ಜೊತೆ ಒಡನಾಟ ಅನಿವಾರ್ಯ. ಆದರೆ ಆ ಒಡನಾಟ ಎಂಥವರ ಜೊತೆ ಇರಬೇಕೆನ್ನುವುದು ಮುಖ್ಯ. ಸಜ್ಜನರ ಒಡನಾಟ ಲೇಸು ಎನ್ನುವರು. ಅದೇ ದುರ್ಜನರ ಒಡನಾಟದಿಂದ ದೂರವಿರಬೇಕು ಎನ್ನುವರು. ಕಾರಣ ಸಜ್ಜನರ ಜೊತೆ ಇದ್ದರೆ ಅವರು ನಮ್ಮ ಬದುಕಿನ ಕಲಂಕವನ್ನು ಕಳೆದು ಬೆಳಕಿನ ದಾರಿ ತೋರುವರು. ದುರ್ಜನರ ಜೊತೆ ಇದ್ದರೆ ಅವರು ಮತ್ತಷ್ಟು ಕಲಂಕವನ್ನು ಹೆಚ್ಚಿಸಿ ಕತ್ತಲೆಗೆ ತಳ್ಳುವರು. ಹಾಗಾಗಿ ಶರಣರ ಸಂಗವನ್ನು ಮಾಡಬೇಕು ಎಂದು ಸ್ಪಷ್ಟಪಡಿಸುವರು. ಶಿವರಾತ್ರಿಯ ಆಚರಣೆ ಎಂದರೆ ಶರಣರ ಸಹವಾಸದಲ್ಲಿ ಇರಬೇಕು. ಅದು ವರ್ಷಕ್ಕೆ ಒಂದು ದಿನ ಅಲ್ಲ; ಪ್ರತಿನಿತ್ಯವೂ ಶರಣರ ಸಹವಾಸದಲ್ಲಿದ್ದು ಬದುಕಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೌದು ಇಂದು ಅಂಥ ಶರಣರನ್ನು ಎಲ್ಲಿಂದ ತರುವುದು ಎನ್ನುವ ಪ್ರಶ್ನೆ ಉದ್ಭವಿಸಬಹುದು. ಅದಕ್ಕಾಗಿ ಚಿಂತೆ ಮಾಡಬೇಕಾಗಿಲ್ಲ. ಶರಣರ ಸಂದೇಶ ಸಾರುವ ಅನೇಕ ವಚನಗಳಿವೆ. ಅವುಗಳನ್ನು ನಿತ್ಯ ಓದುತ್ತಿದ್ದರೆ ಅವೇ ನಮಗೆ ಸರಿಯಾದ ದಿಕ್ಕನ್ನು ತೋರಿಸಿ ನಮ್ಮ ಅಜ್ಞಾನಾಂಧಕಾರವನ್ನು ಕಳೆದು ಸದಾ ಬೆಳಕಿನಲ್ಲಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವವು. ಈ ನೆಲೆಯಲ್ಲಿ ಪ್ರತಿಯೊಬ್ಬರೂ ಶಿವರಾತ್ರಿಯನ್ನು ಆಚರಿಸುವ ಸಂಕಲ್ಪ ಸ್ವೀಕರಿಸಿ ಶರಣರಂತೆ ಬಾಳೋಣ.

 

Previous post ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
Next post ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ

Related Posts

ಧರ್ಮವನ್ನು ಒಡೆಯುವುದು – ಹಾಗೆಂದರೇನು?
Share:
Articles

ಧರ್ಮವನ್ನು ಒಡೆಯುವುದು – ಹಾಗೆಂದರೇನು?

October 2, 2018 ಡಾ. ಎನ್.ಜಿ ಮಹಾದೇವಪ್ಪ
ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂಬ ಚಳುವಳಿಯು ಮೊದಲು ಕೇವಲ ಗಾಳಿಯಾಗಿದ್ದು ಇತ್ತೀಚೆಗೆ ಬಿರುಗಾಳಿಯ ಸ್ವರೂಪ ಪಡೆದಿರುವುದು ಕೆಲವು ಸನಾತನಿಗಳಿಗೆ ಹೇಗೋ ಹಾಗೆ...
ಜಗವ ಸುತ್ತಿಪ್ಪುದು ನಿನ್ನ ಮಾಯೆ…
Share:
Articles

ಜಗವ ಸುತ್ತಿಪ್ಪುದು ನಿನ್ನ ಮಾಯೆ…

April 29, 2018 ಕೆ.ಆರ್ ಮಂಗಳಾ
ಈ ಭೂಮಿಯ ಮೇಲೆ ನಿಂತು ನೋಡಿದರೆ ಚಂದ್ರ ಬೆಳ್ಳಿಯಂತೆ ಹೊಳೆಯುತ್ತಾನೆ, ತಾರೆಗಳು ಕಣ್ಣು ಮಿಟುಕಿಸುತ್ತವೆ, ಸೂರ್ಯ ಮುಂಜಾನೆ ಮತ್ತು ಮುಸ್ಸಂಜೆಗೆ ಕಿತ್ತಳೆಯ ಚೆಂಡಾಗುತ್ತಾನೆ....

Comments 14

  1. Ganesh A.P
    Mar 7, 2020 Reply

    ಶಿವರಾತ್ರಿಯ ಬಗ್ಗೆ ಸರಳ, ಸುಂದರ ನಿರೂಪಣೆ. ಸ್ವಾಮಿಗಳಿಗೆ ಶರಣಾರ್ಥಿಗಳು

  2. ಸದಾಶಿವಯ್ಯ ನ್ಯಾಮ್ತಿ
    Mar 7, 2020 Reply

    ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ವಿವರಿಸಿದ ಲೇಖನ. ಶರಣರ ಶಿವ ಯಾರು? ಶರಣರ ಶಿವಯೋಗ ಯಾವುದು? ದಯವಿಟ್ಟು ತಿಳಿಸಿ.

  3. Panchakshari halebeedu
    Mar 7, 2020 Reply

    ಸಮಯೋಚಿತ ಉತ್ತಮ ಲೇಖನ. ಶಿಬರಾತ್ರಿಯ ಮಹತ್ವವನ್ನು ಸರಳವಾಗಿ ತಿಳಿಸಿದ ಗುರುಗಳಿಗೆ ಶರಣು.

  4. Halappa Bhavi
    Mar 8, 2020 Reply

    ಗುಂಡು ಮತ್ತು ಬೆಂಡಿನಂತಿರುವ ಸಂಸಾರವನ್ನು ತೂಗಿಸಿದ ಶರಣರ ಸಮತೋಲನದ ಮಾರ್ಗವನ್ನು ತೋರಿಸಿದ ಶ್ರೀಗಳಿಗೆ ಶರಣು.

  5. Shivananda G
    Mar 11, 2020 Reply

    ಲಿಂಗಾಯತರು ಶಿವರಾತ್ರಿಯನ್ನು ಹೇಗೆ ಆಚರಿಸಬೇಕು? ಕೈಯಲ್ಲಿರುವ ಲಿಂಗವೇ ನಮ್ಮ ಶಿವನಾದರೆ ಆತನ ಪೂಜೆ ಹೇಗೆ…. ಶಿವನ ವಿಷಯದಲ್ಲಿ ಅನೇಕ ಗೊಂದಲಗಳಿವೆ. ಅವುಗಳ ಮೇಲೆ ಬೆಳಕು ಚಲ್ಲುವಿರಾ?

  6. Deveeramma pavate
    Mar 11, 2020 Reply

    ನಮ್ಮೂರಲ್ಲೂ ಶಿವರಾತ್ರಿಯ ದಿನ ಇಸ್ಪೀಟ್ ಆಟ ಆಡುತ್ತಾ ಜಾಗರಣೆ ಮಾಡುವವರೇ ಹೆಚ್ಚು, ಹೆಂಗಸರು ಸಿನೆಮಾ ನೋಡುತ್ತಾರೆ. ಶಿವಪೂಜೆ ಕೇವಲ ನೆಪವಾಗಿ ಉಳಿದಿದೆ ಅಷ್ಟೆ. ನಿಚ್ಚ ನಿಚ್ಚ ಶಿವರಾತ್ರಿ- ಲೇಖನ ಬಹಳ ಚನ್ನಾಗಿದೆ.

  7. Chandarashekhar Kavali
    Mar 12, 2020 Reply

    ಶಿವರಾತ್ರಿ ಎಂದರೆ ಬೆಳಕಿನಿಂದ ಕತ್ತಲೆಯ ಕಡೆ ಸಾಗುವುದಲ್ಲ. ಬದಲಾಗಿ ಕತ್ತಲೆಯಿಂದ ಬೆಳಕಿನ ಕಡೆ ನಡೆಯಬೇಕು. ಜ್ಞಾನ ಸಲಾಕೆಯಿಂದ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಬೇಕು…. ಹಬ್ಬದ ಮರ್ಮವನ್ನು ಸರಳವಾಗಿ, ನೇರವಾಗಿ ಹೇಳಲಾಗಿದೆ. ಆದರೆ ಆ ದಿನದ ವಿಶೇಷತೆ ಏನು? ಕತೆ ಯಾವುದು? ಸದ್ಗುರು ಜಗ್ಗಿ ವಾಸುದೇವ ಅವರು ಹೇಳುವಂತೆ ಆಕಾಶಕಾಯಗಳಲ್ಲಿ ಆ ದಿನ ಏನಾದರೂ ಮಹತ್ತರ ಬದಲಾವಣೆಗಳಾಗುತ್ತವೆಯೇ… ಇದನ್ನೆಲ್ಲಾ ತಿಳಿಸಿದ್ದರೆ ಚನ್ನಾಗಿತ್ತು.

  8. ಶಿವರಾಜ್ ಜೋಗದಕಟ್ಟಿ
    Mar 15, 2020 Reply

    ನಿಜಾರ್ಥದಲ್ಲಿ ಶಿವರಾತ್ರಿಯನ್ನು ಮಾಡುವುದು ಹೇಗೆಂದು ಬಹಳ ಸೊಗಸಾಗಿ ತಿಳಿಸಿಕೊಟ್ಟಿದ್ದಾರೆ. ಶಿವಯೋಗ ಎಂದರೆ ನಿರಂತರವಾಗಿ ಶಿವಭಾವದಲ್ಲಿರುವುದೆಂದು ತಿಳಿದಿದ್ದೇನೆ.

  9. ಶರಣಪ್ಪ ಪಾಟೀಲ
    Mar 15, 2020 Reply

    ಶಿವರಾತ್ರಿಯ ಬಗೆಗೆ ವಿಶೇಷ ಲೇಖನ ಓದಿ ಬಹಳ ಖುಷಿಯಾಯಿತು. ನಾನು ಸಾಣೇಹಳ್ಳಿ ಶ್ರೀಗಳ ಅಪ್ಪಟ ಅಭಿಮಾನಿ. ಅವರ ನೇರ ನಿಷ್ಠುರ ಮಾತುಗಳು ಮಾರ್ಗದರ್ಶನ ನೀಡುತ್ತವೆ. ಷಟಸ್ಥಲದ ಬಗ್ಗೆ ಅವರಿಂದ ಲೇಖನ ಮಾಲೆ ಬರೆಸಬೇಕೆಂದು ಬಯಲು ಬಳಗದವರಿಗೆ ನನ್ನ ಕೋರಿಕೆ.

  10. ಮಹಾಂತೇಶಪ್ಪ ನೇವಲಗಿ
    Mar 17, 2020 Reply

    ಶಿವರಾತ್ರಿಯಂದು ಸಾಮೂಹಿಕ ಇಷ್ಟಲಿಂಗಪೂಜೆ ಮಾಡಿಕೊಳ್ಳುತ್ತಿದ್ದೇವೆ. ಮನೆಮಂದಿಯೆಲ್ಲ ಸೇರಿ, ಉಪವಾಸವಿದ್ದು ರಾತ್ರಿ ವಚನ ಪಾರಾಯಣ ಮಾಡುತ್ತೇವೆ, ದೇವಸ್ಥಾನಗಳಿಗೆ ಹೋಗುವುದಿಲ್ಲ, ಬುದ್ದಿ, ನಮ್ಮ ಆಚಾರಣೆ ಸರಿಯಾಗಿದೆಯೇ?

  11. Shanmukhappa
    Mar 17, 2020 Reply

    ಲಿಂಗಾಂಗಸಮರಸ ಹೊಂದುವುದು ಸಹ ಉಪವಾಸವೇ… ಎಂದು ಹೇಳಿದ್ದೀರಿ. ಲಿಂಗಾಂಗ ಸಮರಸ ಹೇಗೆ? ಇದರ ಮಾಹಿತಿ ಎಲ್ಲಿ ಸಿಗುತ್ತದೆ, ತಾವು ಯಾವುದಾದರೂ ಪುಸ್ತಕ ಬರೆದಿದ್ದರೆ ದಯಮಾಡಿ ತಿಳಿಸಿಕೊಡಿ ಗುರುಗಳೇ

  12. Narayanaswamy
    Mar 20, 2020 Reply

    ಅರಿವು, ಆಚಾರ ಒಂದಾದವ, ನುಡಿದಂತೆ ನಡೆಯುವವ ಶರಣ….. ಒಂದೇ ಸಾಲಿನಲ್ಲಿ ಇಡೀ ವಚನದ ಸಾರ ತಿಳಿಸಿಕೊಟ್ಟಿದ್ದೀರಿ. ಉಸಿರಾಟದ ಪ್ರತಿಯೊಂದು ಕ್ಷಣವೂ ಶಿವರಾತ್ರಿ… ಶರಣಾರ್ಥಿಗಳು

  13. Shivakumar Patil
    Mar 24, 2020 Reply

    ಸುಂದರ ವಿವರಣೆ, ಶಿವರಾತ್ರಿಯ ಕುರಿತು ಶರಣರ ದಾರಿಯನ್ನು ತೋರಿಸಿಕೊಡುವ ಬರವಣಿಗೆ. ಬುದ್ಧಿಯವರ ಮಾತುಗಳು, ಬರಹಗಳು ಸುಂದರವಾಗಿ ಮೂಡಿಬರುತ್ತಿವೆ. ಪ್ರತಿ ತಿಂಗಳು ನಾನು ಮತ್ತು ಮನೆಯವರು ತಪ್ಪದೇ ಓದುತ್ತೇವೆ. ಬಯಲು ಬ್ಲಾಗಿನ ಪ್ರತಿಯೊಂದು ಬರಹಗಳು ನಮಗೆ ಅಚ್ಚುಮೆಚ್ಚು. ವಂದನೆಗಳು.

  14. ಉಮಾಪತಿ ಪಿರಿಯಾಪಟ್ಟಣ
    Mar 29, 2020 Reply

    ಅನುಭಾವಿಗಳ ಸಂಗದಲ್ಲಿರುವುದೇ ಶಿವರಾತ್ರಿಯ ಆಚರಣೆ. ಅಂತಹ ಶರಣರು ಎಲ್ಲಿದ್ದಾರೆ? ಬಸವಣ್ಣನವರನ್ನೂ, ಲಿಂಗವನ್ನೂ ವೈಭವದಿಂದ ಪೂಜೆ ಮಾಡಿ ತೃಪ್ತಿಪಡುವವರ ಮಧ್ಯೆ ನಿತ್ಯ ಶಿವರಾತ್ರಿಯ ಆಚರಣೆಯನ್ನು ಕಮ್ಯೂನಿಕೇಟ್ ಮಾಡುವುದಕ್ಕೂ ಸಾಧ್ಯವಿಲ್ಲ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
Copyright © 2023 Bayalu