Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು ಯಾರು? ಎಂಬ ಆಳ-ನಿರಾಳ-5
Share:
Articles August 2, 2020 ಕೆ.ಆರ್ ಮಂಗಳಾ

ನಾನು ಯಾರು? ಎಂಬ ಆಳ-ನಿರಾಳ-5

ಜನನ-ಮರಣಗಳ ಪರಿವರ್ತನೆಯಲ್ಲಿ ನಾನೆಲ್ಲಿದ್ದೇನೆ?

ಎಲ್ಲ ಓದುಗ ಬಂಧುಗಳಿಗೆ ಭಾಗ-5ರ ಘಟ್ಟಕ್ಕೆ ಸ್ವಾಗತ… ಹೇಗಿದ್ದೀರಿ? ಜೀವನ ವಿಜ್ಞಾನವಾಗಿ ಈ ಲೇಖನದ ಚಿಂತನಾ ಪ್ರಹಾರವು ನಿಮ್ಮೊಳಗಿಂದ ಪ್ರಜ್ಞೆಯ ಅರುಹುಗಳನ್ನು ಹೊಮ್ಮಿಸಲೆಂದು ನಾನು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ…

ನಾವು ಹಿಂದಿನ ಸಂಚಿಕೆಯಲ್ಲಿ ‘ಇಲ್ಲದ ಮನಸ್ಸು’ ಮತ್ತದರ ನಿರಸನದ ಆಯಾಮಗಳನ್ನು ಪರಿವೀಕ್ಷಿಸಿದ್ದೇವೆ. ಆದಾಗ್ಯೂ ಈ ಲೇಖನದಲ್ಲಿ ಶರಣರು ವಿಶ್ಲೇಷಿಸಿದ ಮನಸ್ಸಿನ ಕುರಿತಾದ ‘ಜ್ಞಾನ- ಜ್ಞೇಯ- ಜ್ಞಾತೃ’ವಿನ ವಿವರಣೆಗಳು ಇನ್ನಷ್ಟು ವಿಸ್ತಾರವಾಗಿ ಮೂಡಿಬರಲಿಲ್ಲವೆಂಬ ಕೊರಗು ನನ್ನನ್ನು ಬಹುವಾಗಿ ಕಾಡಿದೆ. ಮನಸ್ಸಿನ ಕುರಿತಾದ ಶರಣರ ಪ್ರಜ್ಞೆಯ ಅರುಹುಗಳು ತುಂಬಾ ವಿಶಾಲವಾದದ್ದು ಮತ್ತು ಸಂಕ್ಲಿಷ್ಟವಾದದ್ದು. ರೂಢಿಗೆ ಬಿದ್ದಿರುವ ಮನಸ್ಸನ್ನು ಪ್ರಜ್ಞೆಯ ಸಹಜ ಸೋಪಾನದೆಡೆಗೆ ತಿರುಗಿಸಲು ನಡೆ-ನುಡಿಯಲ್ಲಿ ಎಚ್ಚರವನ್ನು ಕಾಯ್ದುಕೊಳ್ಳುವ ಸಾಧನೆಯಲ್ಲಿ ನಾವೂ ತೊಡಗಿಕೊಂಡಾಗ ಮಾತ್ರ ಮನಸ್ಸಿನ ಪ್ರಸ್ತಾಪದ ಕುರಿತು ತಿಳಿದುಕೊಳ್ಳಬಹುದೇ ವಿನಾ ಇದು ಬರಿ ಮಾತಿನ ಬ್ಯಾರವಲ್ಲ. ವಿಶಾಲವಾದ ಸಾಧನಾ ಪ್ರಕ್ರಿಯೆಗಳಿಗೆ ಬದ್ಧವಾಗಿರುವ ಶರಣ ಸಾಹಿತ್ಯವನ್ನು ಕೇವಲ ಮಾತು ಮತ್ತು ಬರಹಗಳ ಮೂಲಕ ಸ್ಪಷ್ಟೀಕರಿಸಬೇಕೆಂದಾಗ ಅನೇಕ ಸವಾಲುಗಳು ಎದುರಾಗುತ್ತವೆ. ಬಯಲು ಬ್ಲಾಗಿನಲ್ಲಿ ಬರೆಯಬಹುದಾದ ಲೇಖನಗಳಿಗೂ ಅದರದೇ ಆದ ಇತಿಮಿತಿಗಳಿವೆ. ಲೇಖನದ ಮಿತಿಗಳನ್ನು ತೀರಾ ಉಪೇಕ್ಷಿಸಿ ಇಲ್ಲಿ ಬರೆಯಲು ಸಾಧ್ಯವಿಲ್ಲ. ಏಕೆಂದರೆ ಇಂದಿನ ಯುಗದ ಓದುಗರ ಓದಿನ ಮಿತಿಯೂ ತುಂಬಾ ಪುಟ್ಟದು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಒಂದು ತಾತ್ವಿಕ ನಡೆಯನ್ನು ಓದುವಷ್ಟು ಸಹನೆ, ಸಮಯ, ಶ್ರದ್ಧೆಗಳು ಇಂದಿನ ಓದುಗರಿಗೆ ಇದೆಯೆಂದು ನಂಬುವುದು ಅತಿಯಾಗುತ್ತದೆ. ಇಂದಿನ ಓದುಗರು ಚುಟುಕು ಸಾಹಿತ್ಯದ ಮಾದರಿಯಲ್ಲಿದ್ದರೆ ತುಂಬಾ ಇಷ್ಟಪಡುತ್ತಾರೆ. ಆದರೆ ಶರಣರ ನಡೆ ಎಂದಿಗೂ ಸೀಮಿತ ವಲಯದ ಸಾಹಿತ್ಯವಂತೂ ಅಲ್ಲ. ಎಲ್ಲಾ ಕಾಲಕ್ಕೂ ಮನುಷ್ಯನ ಎಲ್ಲಾ ಸಮಸ್ಯೆಗಳಿಗೂ ಅನ್ವಯಿಸಿಕೊಂಡು ವಿಶಾಲತೆಯನ್ನು ದಕ್ಕಿಸಿಕೊಟ್ಟ ಕನ್ನಡದ ಬಹು ದೊಡ್ಡ ಓದದು. ಆದ್ದರಿಂದ ‘ನಾನು ಯಾರು?’ ಲೇಖನಗಳಲ್ಲಿ ಶರಣರ ನಿರಂತರ ಓದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಾರದೆಂಬುದನ್ನು ನಾನು ಒಪ್ಪಿಕೊಳ್ಳಲೇ ಬೇಕು.

ವಚನಸಾಹಿತ್ಯವನ್ನು ‘ಶಿವಪಥ’ದ ಕ್ರಮದಲ್ಲಿ ಓದುವ ಒಂದು ಗುಂಪು ನಮ್ಮಲ್ಲಿ ಇಂದಿಗೂ ಸಾಧ್ಯವಿಲ್ಲ. ಅವರವರ ಭಾವಕ್ಕೆ ಮತ್ತು ನಂಬಿಕೆಗಳಿಗೆ ತಕ್ಕಂತೆ ಅವರವರು ಓದಿಕೊಳ್ಳುವ ಪದ್ಧತಿಯಲ್ಲಿ ನಾವಿಂದು ವಚನಗಳನ್ನು ಕಾಪಿಟ್ಟುಕೊಂಡಿದ್ದೇವೆ. ಇದರಿಂದ ಅಭಿಪ್ರಾಯ ಭೇದಗಳ ಗೋಂಡಾರಣ್ಯದಲ್ಲಿ ನಾವೆಲ್ಲಾ ತಗುಲಿಕೊಳ್ಳುವಂತಾಗಿದೆ. ಅಭಿಪ್ರಾಯ ಭೇದಗಳು ನಿಜವಾಗಿಯೂ ಇರಲೇ ಬೇಕಾಗುತ್ತದೆ. ಆದರೆ ಶರಣರ ಹಾದಿ ಒಂದು ಕ್ರಮಬದ್ಧಗೊಳಿಸಿದ ಗುರುಮಾರ್ಗದ ಶಿಸ್ತನ್ನು ಬಯಸುತ್ತದೆ. ಅಲ್ಲಿ ಯಾರಿಗೂ ರಿಯಾಯತಿಗಳಿಲ್ಲ. ಆ ಶಿಸ್ತು ಸಾಧ್ಯವಾದಾಗ ಮಾತ್ರ ಶರಣ ಪಥದ ಅತ್ಯಂತ ಸಣ್ಣ ತೋರುದಾರಿಯೊಂದು ತೆರೆದುಕೊಳ್ಳಬಲ್ಲುದು. ಮುಖ್ಯವಾಗಿ ಶರಣ ಮಾರ್ಗದ ಓದು ಒಂದು ಸಮುದಾಯದೊಳಗೆ ಕೆಲವು ಮಂದಿಯಲ್ಲಾದರೂ ನಡೆಯಬೇಕಾಗಿರುವ ಓದಾಗಿದೆ. ಹೀಗೆ ಓದಿಕೊಂಡಾಗ ಮಾತ್ರ ಎಲ್ಲರ ಅಭಿಪ್ರಾಯ ಮತ್ತು ಅನುಭವಗಳನ್ನು ಪರಿಷ್ಕರಿಸಿಕೊಂಡು ಸಾರ್ವರ್ತಿಕ ಸಮಸ್ಯೆಗಳೊಂದಿಗೆ ಜೋಡಿಸಿದಾಗ ಶರಣರ ಪ್ರತಿಭಾಶಕ್ತಿಯು ಸಮಾಜ ಮತ್ತು ವ್ಯಕ್ತಿಗೆ ಉಪಯೋಗವಾಗಬಲ್ಲುದು. ಇದನ್ನೇ ಅವರು ಪಾದೋದಕ ಮತ್ತು ಪ್ರಸಾದವೆಂದು ರೂಢಿಗೆ ತಂದರು. ಪಾದೋದಕವೆಂದರೆ ಗುರುವಿನ ಹಾದಿಯಲ್ಲಿ ನಡೆಯಲು ತ್ರಿಕರಣಪೂರ್ವಕವಾಗಿ ಸಿದ್ಧನಾಗುವುದು. ಪ್ರಸಾದವೆಂದರೆ ಗುರುಪಥದಲ್ಲಿ ನಡೆದಿದ್ದರಿಂದಾದ ಪರಿಣಾಮ ಅಥವಾ ಫಲ. ಶರಣರು ತಮ್ಮನ್ನು ಪರಿಣಾಮಿಗಳೆಂದು ಕರೆದುಕೊಳ್ಳಲು ಹೆಮ್ಮೆಪಡುತ್ತಾರೆ. ಭವತಾಪಗಳ ಮನೋಸಂಕ್ಲೇಶಗಳಿಂದ ತತ್ತರಿಸಿ ಹೋದಂತ ‘ಭವಿ’ಯನ್ನು ಭಕ್ತನನ್ನಾಗಿಸುವ ಪ್ರಕ್ರಿಯೆಗೆ ‘ಅನುಭಾವ’ವೆಂಬ healthful mindset ನ ಪರಿಣಾಮವಿದ್ದೇ ಇದೆ. ಭವಿ ಭಕ್ತನಾಗುವುದು ನಿರಂತರವಾದ ಬಹಿರಂತರ್ಗತದ ಇರುವಿನಲ್ಲಿ ನಡೆಯುವ ಹೋರಾಟವೇ ವಿನಾ ಅದು ಪೂಜೆ ಪುನಸ್ಕಾರಗಳನ್ನೊಳಗೊಂಡ ಆರಾಧನಾ ಸೆಲಿಬ್ರೇಶನ್ ಆಗಿರಲಿಲ್ಲ. ಯಾವುದೇ ಬಗೆಯ ಸೆಲಿಬ್ರೇಶನ್ ಗಳಿಂದಲೂ ನಾವು ಏನನ್ನಾದರೂ ಬದಲಿಸಲಾರೆವು ಎಂಬುದನ್ನು ನಾವು ಇನ್ನಾದರೂ ಕಲಿಯಬೇಕಿದೆ. ಮನುಷ್ಯನಲ್ಲಿರುವ ಉದಾತ್ತ ಅನುಭಾವಿಕ ಅಂತಃಶಕ್ತಿಯನ್ನು ಎಚ್ಚರಿಸಿ, ಆ ಎಚ್ಚರದಿಂದಲೇ ಬಹಿರ್ ಲೋಕವನ್ನು ಬೆಳಗಿಸಿದ್ದು ಅನುಭವ ಮಂಟಪದ ಚಾರಿತ್ರಿಕ ಹೆಗ್ಗಳಿಕೆ ಎನ್ನಲೇಬೇಕು.

ಈಗ ನಾವಿಂದು ಚರ್ಚಿಸಬೇಕಾದ ಪ್ರಶ್ನೆಗೆ ಬರೋಣ… ಇಂದಿನ ಪ್ರಶ್ನೆ- ಕಾಯವು ನಾನೇ?… ಈ ನನ್ನ ಕಾಯವು (ದೇಹ) ಖಂಡವ್ಯಾಪ್ತಿಯುಳ್ಳದ್ದೋ (ಅಂದರೆ ಇತಿಮಿತಿಗಳಲ್ಲಿ ಇರುವಂಥದ್ದೋ) ಅಥವಾ ಅಖಂಡವಾದದ್ದೋ (ಅಂದರೆ ಆವರಣಗಳಿಂದ ಹೊರತಾಗಿ ಅನಂತವಾಗಿ ವ್ಯಾಪಿಸಿರುವಂತಹದ್ದೋ) ಹಾಗಾದರೆ ಇವುಗಳೊಳಗೆ ನನ್ನ ಇರುವು ಎಂತಹದ್ದು? ನನ್ನ ಅಸ್ತಿತ್ವ ಮಿತಿಯುಳ್ಳದ್ದೋ? ಅನಂತವಾದದ್ದೋ?
ಈ ಪ್ರಶ್ನೆಯ ಮೂಲಕ ನಾವೊಂದು ಮುಖ್ಯವಾದ ಹಂತವನ್ನು ತಲುಪುತ್ತೇವೆ. ತನ್ನ ತಾನರಿವ ಪಥದಲ್ಲಿ ಇದು ಅತ್ಯಂತ ಮಹತ್ವದ ಹಂತ. ಕಾಯದ ಸರ್ವಾಂಗದಲ್ಲೂ ಲಿಂಗವಂತನಾಗುವ ಶರಣನು ಅನಂತವಾದ ಜಂಗಮಲಿಂಗದೊಂದಿಗೆ ತನಗಿರುವ ಸಂಬಂಧವನ್ನು ತಲುಪಿ ಅನುಭಾವವನ್ನು ಹೊಂದುವ ಸಮ್ಯಕ್ ಭಾವವಿದು. ಜನನ ಮರಣಗಳು ಇಲ್ಲದೆ ನಿರಂತರವಾಗಿ ತಾನು ಆಗುತ್ತಲೇ ಇರುವ ಜಂಗಮದ ಅನುಭೂತಿಯನ್ನು ತಿಳಿಯುವ ಹಂತವಿದು. ಈ ಹಂತದಲ್ಲಿ ಎಲ್ಲಾ ಮಾನವ ಸಂರಚನೆಗಳೂ ಬಿದ್ದುಹೋಗುತ್ತವೆ.

ದಯಾಧರ್ಮ ಶಮೆದಮೆ, ಶಾಂತಿದಾಂತಿ ನಯಾನೀತಿ,
ಸುಮನ ಸುಬುದ್ಧಿ, ನಿರಹಂಕಾರ, ಸುಜ್ಞಾನ ಸುಚಿತ್ತ,
ಸದ್ಭಾವ ಸತ್ಕರ್ಮ, ಪರೋಪಕಾರ ಸುಖಭೋಗ,
ಶಿವಯೋಗ, ರಾಜಯೋಗ, ಸಾಧುರಸಂಗ, ಶಿವತತ್ತ್ವ,
ಶಿವಪೂಜೆ ಶಿವಧ್ಯಾನ ಶಿವಮಹತ್ವಾಪೇಕ್ಷೆ,
ಶಿವಸಂಕಥಾಗೋಷ್ಠಿಯಲ್ಲಿರ್ದು, ತನ್ನ ತಾನರಿಯದೇ
ಸತ್ತು ಹೋಯಿತು ಅನಂತಕಾಲ ಅನಂತಜನ್ಮ.
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ (ಮಡಿವಾಳಪ್ಪ ಕಡಕೋಳ)

ನಿರಂತರವಾಗಿ ತನ್ನ ಬದುಕಿನಲ್ಲಿ ದಯಾ ಧರ್ಮ ಶಮೆ ದಮೆ ಶಾಂತಿ ದಾಂತಿ ನಯಾನೀತಿ, ಸುಮನ ಸುಬುದ್ಧಿ, ನಿರಹಂಕಾರ, ಸುಜ್ಞಾನ ಸುಚಿತ್ತ, ಸದ್ಭಾವ ಸತ್ಕರ್ಮ, ಪರೋಪಕಾರ ಸುಖಭೋಗ, ಶಿವಯೋಗ, ಸಾಧುರಸಂಗ, ಶಿವತತ್ತ್ವ, ಶಿವಪೂಜೆ ಶಿವಧ್ಯಾನ, ಶಿವಸಂಕಥಾಗೋಷ್ಠಿಯಲ್ಲಿ ಕಾಲಕಳೆದರೂ “ತನ್ನ ತಾನರಿಯದೇ” ಇದ್ದಲ್ಲಿ ಕಳೆದು ಹೋದ ಬದುಕಿನ ಕ್ಷಣಗಳೆಲ್ಲವೂ ಸತ್ತು ಹೋಯಿತೆಂದೇ ಇಲ್ಲಿ ಹೇಳಲಾಗಿದೆ. ಒಂದು ವೇಳೆ ತನ್ನ ತಾನರಿದರೂ, ಈ ಹಂತದಲ್ಲಿ ತಲುಪಬೇಕಾದ ಖಂಡ ಕಾಯ ಮತ್ತು ಅಖಂಡ ಕಾಯದ ಹಂತ ತಲುಪದಿದ್ದಲ್ಲಿ “ತನ್ನ ತಾನರಿವ” ಮಾರ್ಗ ಸಂಪೂರ್ತಿಯಾಗದು. ಆದ್ದರಿಂದ ಈ ಹಿಂದಿನ ಎಲ್ಲಾ ಪ್ರಶ್ನೆಗಳಿಗಿಂತಲೂ ಇಂದಿನ ಪ್ರಶ್ನೆಯು ಬಹಳ ಮಹತ್ವವೆನಿಸುವಂತಹುದ್ದಾಗಿದೆ.

ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ,
ಸಿಕ್ಕದೆಂಬ ಬಳಲಿಕೆಯ ನೋಡಾ.
ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
ಕಾಣಬಾರದುದ ಕಾಣಬಹುದು ಗುಹೇಶ್ವರಾ (ಅಲ್ಲಮಪ್ರಭು)

ಪ್ರತ್ಯಕ್ಷವಾಗಿ ನಮ್ಮ ಕಣ್ಣಿಗೆ ಮತ್ತು ಅನುಭವಕ್ಕೆ ಬರುತ್ತಿರುವುದನ್ನು ಲಕ್ಷ್ಯದಲ್ಲಿರಿಸಿಕೊಳ್ಳದೆ ಮತ್ತೊಂದು ಬಗೆಯಲ್ಲಿ ಕಾಣದೇ ಇರುವುದನ್ನು ಕಂಡೆ ಎಂದರೆ ‘ಸಿಗದದು’ ಎಂಬ ಬಳಲಿಕೆಯಾಗುವುದು ಖಂಡಿತ. ಯಾವುದು ಪ್ರತ್ಯಕ್ಷವಾಗಿ ನಮ್ಮ ಅನುಭವದಲ್ಲಿದೆಯೋ ಅದರ ಮೂಲಕ ಗುರುಮಾರ್ಗ ಹಿಡಿದಲ್ಲಿ ಕಾಣಲಾಗದ್ದನ್ನು ಕಾಣಬಹುದು ಎನ್ನುತ್ತಾರೆ ಅಲ್ಲಮಪ್ರಭುಗಳು. ನಾವಿಂದು ಗುರುಮಾರ್ಗದ ಪ್ರತ್ಯಕ್ಷಾನುಭವವಾಗಿರುವ ಕಾಯದ (ದೇಹದ) ಹಂತಕ್ಕೆ ಬಂದಿದ್ದೇವೆ.
ಹಾಗಾದರೆ ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳಿಂದ ಅಸ್ತಿತ್ವದಲ್ಲಿರುವ ಈ ಕಾಯವು ನಾನೇ? ಇದು ಕೇವಲ ದೇಹ ವ್ಯಾಪ್ತಿಗಷ್ಟೇ ಸೀಮಿತವಾಗಿದೆಯೋ ಇಲ್ಲವೇ ಈ ನನ್ನ ದೇಹವು ಅಖಂಡವಾದ ಪ್ರಕೃತಿ ಲಾಸ್ಯಕ್ಕೆ ಅನ್ವಯಿಸಿದ್ದೋ? ಪಂಚಭೌತಿಕ ರೂಪದ ನನ್ನ ದೇಹಕ್ಕೂ ಮತ್ತು ಅಖಂಡವಾದ ಈ ಪ್ರಕೃತಿ ಲಾಸ್ಯಕ್ಕೂ ಇರುವ ಸಂಬಂಧ ಎಂತಹದ್ದು?

ಸತ್ತು ಹುಟ್ಟಿ ಕೆಟ್ಟವರೆಲ್ಲರು,
ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು.
ಸಾಯದ ಮುನ್ನ ಸ್ವಯವನರಿದಡೆ
ದೇವನೊಲಿವ ನಮ್ಮ ಗುಹೇಶ್ವರನು.(ಅಲ್ಲಮಪ್ರಭು)

ದೇವಲೋಕ, ಮರ್ತ್ಯಲೋಕಗಳನ್ನೆಲ್ಲಾ ಹೀಗಳೆಯುತ್ತಾ ಪ್ರಭುದೇವರು, “ಸಾಯದ ಮುನ್ನ ಸ್ವಯವನರಿ” ಎನ್ನುತ್ತಾರೆ. ಸ್ವಯವನರಿ ಎನ್ನುವಾಗ ಪರದ ಪ್ರಶ್ನೆ ಇಲ್ಲವೇ ಇಲ್ಲ. ತನ್ನ ಜೀವ ಕಾಯದ ಸಂಬಂಧವು ಅನಂತವಾದ ಪ್ರಕೃತಿಯ ಭಾಗವಾಗಿರುವುದನ್ನು ಅರಿಯಬೇಕೆನ್ನುವುದು ಇಲ್ಲಿನ ವೈಶಿಷ್ಠ್ಯ. ಈ ಅನಂತತೆಯನ್ನು ಅರಿಯಬೇಕೆಂದರೆ ನನಗೆ ನನ್ನ ಜೀವಂತ ಕಾಯವೊಂದರ ಅವಕಾಶ ಸಿಕ್ಕಾಗ ಮಾತ್ರ ಸಾಧ್ಯ! ಆದ್ದರಿಂದ ಜೀವ ಶರೀರ ಸಂಯುಕ್ತದೊಂದಿಗೆ ಈ ಕ್ಷಣದ ಸತ್ಯವಾಗಿರುವ ನನ್ನ ಕಾಯವನ್ನು ‘ನಾನು’ ಎನ್ನಲಾಗದಿದ್ದರೂ ಜೀವ ಶರೀರ ಸಂಬಂಧದಲ್ಲಿ ನನ್ನೊಳಗೆ ಸದಾ ಪ್ರವಹಿಸುತ್ತಿರುವ ಪ್ರಾಣ ಮತ್ತು ಪ್ರಜ್ಞೆ(ಲಿಂಗ)ಗಳಿಗೆ ಅತ್ಯಮೂಲ್ಯವಾದ ಆಶ್ರಯಧಾಮ ನನ್ನ ಕಾಯವೇ ಆಗಿದೆ. ಈ ಜಗತ್ತಿಗೂ ನನಗೂ ಇರುವ ಅನಂತವಾದ ಅಂತಃಸಂಬಂಧವನ್ನು ಗ್ರಹಿಸಲು ಕಾಯ ಮತ್ತು ಪ್ರಾಣ ಸಂಬಂಧ ನನಗೆ ಅತ್ಯಮೂಲ್ಯ ಅವಕಾಶವಾಗಿದೆ. ಆದ್ದರಿಂದ ನನಗೆ ದೇಹ (ಕಾಯ) ಜೀವ ಸಂಬಂಧವು ಅತ್ಯಪರೂಪದ ದೇಹ ದೇಗುಲವಾಗಿದೆ.

ಕಾಯವೆ ಸಕಲ, ಪ್ರಾಣವೆ ಸಕಲ ನಿಷ್ಕಲ,
ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ
ಬೇರೆ ಆಯತ ಸ್ವಾಯತ ಸನ್ನಿಹಿತವೆಂಬುದಿಲ್ಲ ನೋಡಾ.
ಶಿವ_ಶಕ್ತಿ (ಭಕ್ತಿ_ಶಕ್ತಿ?) ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ
ಗುಹೇಶ್ವರಲಿಂಗದಲ್ಲಿ,
ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ? (ಅಲ್ಲಮಪ್ರಭು)

ಕಾಲರೂಪಿಯಾದ ಶಿವನು; ಶಕ್ತಿರೂಪಿಣಿಯಾದ ಪ್ರಾಕೃತಿಕ ಚೈತನ್ಯಗಳೆರಡೂ ಒಡಗೂಡಿಕೊಂಡು ಆಗುತ್ತಿರುವ ಮಹಾಂತ ಮಹಿಮೆಯು ನನ್ನ ಕಾಯಜೀವದ ಇರುವನ್ನು ನಿಜಗೊಳಿಸಿವೆ. ಈ ರೀತಿ ತಿಳಿಯುವುದು ನನ್ನ ಪ್ರತ್ಯಕ್ಷಾನುಭವಕ್ಕೆ ಸರಿಹೊಂದುವ ವಿಚಾರವಾಗಿದೆ. ಇದರ ಹೊರತಾಗಿ ಯಾರೋ ಹೇಳಿದ ಪೌರಾಣಿಕ ಶಿವನೊಂದಿಗೆ ನನ್ನ ಪ್ರತ್ಯಕ್ಷಕ್ಕೆ ಸಿಗುತ್ತಿರುವ ಕಾಲರೂಪಿ ಶಿವನನ್ನು ಗ್ರಹಿಸುವುದಾಗಲಿ, ಪೌರಾಣಿಕ ಶಕ್ತಿರೂಪಿಣಿಯನ್ನಾಗಿ ಪ್ರಾಕೃತಿಕವಾಗಿರುವ ಜೀವ ಚೈತನ್ಯವನ್ನು ಭ್ರಮಿಸುವುದಾಗಲಿ ಅದು ಬರೀ ಕಲ್ಪನೆಯಾಗಿರುತ್ತದೆ. ಕಲ್ಪನೆಗಳು ಎಂದಿಗೂ ನನ್ನ ಕೈಗೆಟುಕಲಾರವು ಎಂದು ನನಗೆ ಗುರುಮಾರ್ಗದಿಂದ ಚೆನ್ನಾಗಿ ದೃಢಪಟ್ಟಿದೆ. ಕಲ್ಪನಾರಹಿತವಾಗಿರುವ ನನ್ನ ಕಾಯದೊಳಗಿನ ಮತ್ತು ಹೊರಗೆ ವ್ಯಾಪಿಸಿಕೊಂಡಿರುವ ಅನಂತ ಆಗುವಿಕೆಯ ನಿತ್ಯಾ ನಿತ್ಯ ವಸ್ತುವಿವೇಕದ ಸರಿಯಾದ ಭಾವಜಾಲವನ್ನು ಅನುಸಂಧಾನ ಮಾಡಲು ಇರುವ ಏಕೈಕ ಅವಕಾಶವಾಗಿಯೂ ನನ್ನ ಕಾಯವು ಮೂಡಿಬಂದಿದೆ. ಆದ್ದರಿಂದ ನನ್ನ ಜೀವಂತ ಕಾಯದ ಇರುವಿಕೆ ನನ್ನ ಈ ಕ್ಷಣದ ರೋಮಾಂಚನವಾಗಿದೆ. ಈ ರೋಮಾಂಚನವು ನಾನು ಹುಟ್ಟದ ಮುನ್ನ ಎಲ್ಲಿದ್ದಿತು? ನಾನು ಸತ್ತ ನಂತರ ಎಲ್ಲಿ ಹೋಗುತ್ತದೆ? ನನ್ನ ಕಾಯದ ಇರುವಿಕೆಯಲ್ಲಿ ನನಗಿರುವ ಜೀವನ ಪಾರಮಾರ್ಥಿಕ ಜವಾಬ್ದಾರಿಗಳು ಏನೆಂಬುದನ್ನು ಸರಿಯಾಗಿ ಗ್ರಹಿಸಲು ಇರುವ ವೇದಿಕೆಯಾಗಿದೆ.

ಕಾಯದಿಂದ ಲಿಂಗದರುಶನ, ಕಾಯದಿಂದ ಜಂಗಮ ದರುಶನ,
ಕಾಯದಿಂದ ಪ್ರಸಾದಸಂಪತ್ತು.
ಕೂಡಲಚೆನ್ನಸಂಗಯ್ಯಾ
ಆ ಕಾಯದಲ್ಲಿ ನಿಮ್ಮುವ ಕಂಡೆನಯ್ಯಾ. (ಚೆನ್ನಬಸವಣ್ಣ)

ಸದಾ ಮಾನವ ಕುಲದ ಸಂಕ್ಷೇಮವನ್ನು ಬಯಸಿದ, ಮಾನವ ಕುಲದ ಏಳಿಗೆಗಾಗಿಯೇ ತಮ್ಮ ಬದುಕುಗಳನ್ನು ಸವೆಸಿಹೋದ ಹಿರೀಕರಾದ ನಮ್ಮ ಶರಣರು ಕುರುಹಿಟ್ಟು ಹೋದ ಲಿಂಗ ದರುಶನ, ಜಂಗಮ ದರುಶನ ಮತ್ತು ಪ್ರಸಾದ ಸಂಪತ್ತನ್ನು ನಾನು ನನ್ನ ಜೀವಂತ ಕಾಯವಿದ್ದರೆ ಮಾತ್ರ ತಿಳಿಯಬಹುದಾಗಿದೆ. ಕಾಯವಿಲ್ಲದಿದ್ದ ಪಕ್ಷದಲ್ಲಿ ನಾನು ತಿಳಿಯಲೇ ಬೇಕಾಗಿರುವ ಅನುಭಾವಿಕ ಸತ್ಯ ಸಾಧ್ಯವೇ ಇಲ್ಲ. ಆದ್ದರಿಂದ ನನ್ನ ಈ ದೇಹವು ನನ್ನ ದೇಗುಲ ಮಾತ್ರವಲ್ಲ, ದೇಹವೇ ನನ್ನ ಅತ್ಯುತ್ಕೃಷ್ಟವಾದ ಸೌಭಾಗ್ಯವಾಗಿದೆ. ಕಾಯವೇ ನನ್ನ ಅನುಭಾವದ ನೆಲೆಗೆ ಇರುವ ಮಹಾನದಿ.
ಹಾಗಾದರೆ ಯಾವುದು ನನ್ನ ಕಾಯ? ಅದು ಭಿನ್ನವೋ ಅಭಿನ್ನವೋ? ನನ್ನ ಕಾಯವು ಶುದ್ಧವಾದ ಭೂತ ಪಂಚಕಗಳಿಂದಾದದ್ದೋ? ಆ ಭೂತಪಂಚಕಗಳಿಗೆ ಆತುಕೊಂಡಿರುವ ಜ್ಞಾನೇಂದ್ರಿಯಗಳೋ? ಕರ್ಮೇಂದ್ರಿಯಗಳೋ? ಮನಸೇಂದ್ರಿಯಗಳಾದ ಚಿತ್ತ, ಬುದ್ಧಿ, ಅಹಂಕಾರಗಳೋ? ನನ್ನ ಸಂವೇದನೆಗಳೋ? ನನ್ನ ಭಾವನೆಗಳೋ? ಚಿಂತನಾ ವಿಧಾನಗಳೋ? ನಾನೀಗಾಗಲೇ ತಿಳಿದುಕೊಂಡಿರುವ ಜ್ಞಾನಾಜ್ಞಾನಗಳ ಅರಿವಿನ ವ್ಯತ್ಯಾಸಗಳೋ? ನನಗೆ ಅಂಟಿಕೊಂಡಿರುವ ಈ ಭವ ಸಂಸಾರವೋ? ಹಾಗೂ ನನ್ನೊಳಗೆ ಸದಾ ಪ್ರವಹಿಸುತ್ತಿರುವ ಪ್ರಾಣ ಚೈತನ್ಯವೋ ಅಥವಾ ಇವುಗಳೆಲ್ಲವನ್ನೂ ಸೃಷ್ಟಿಸುತ್ತಿರುವ, ಪೋಷಿಸುತ್ತಿರುವ ಹಾಗೂ ನಾಶ ಮಾಡುತ್ತಿರುವ ಸರ್ವತಂತ್ರ ಸ್ವತಂತ್ರವಾಗಿರುವ ಜಗತ್ಕಾರಣ ಶಕ್ತಿ ಇದೆಯೇ? ಆ ಶಕ್ತಿಯೇ ಎಲ್ಲವನ್ನೂ ಮಾಡುತ್ತಿದೆಯೇ?

ಸರ್ವವೂ ಶಿವನಿಂದ ಉದ್ಭವಿಸುವವೆಂದರೆ, ಉದ್ಭವಿಸುವವೆಲ್ಲವೂ ಶಿವನೆ?
ಸಕಲ ಬೀಜವ ಬಿತ್ತುವನೊಕ್ಕಲಿಗನೆಂದರೆ ಆ ಬೆಳೆ ತಾನೊಕ್ಕಲಿಗನೆ?
ಮಡಕೆಯ ಕುಂಬಾರ ಮಾಡುವನೆಂದರೆ, ಆ ಮಡಕೆ ತಾ ಕುಂಬಾರನೆ?
ಕಬ್ಬುನವ ಕಮ್ಮಾರ ಮಾಡುವನೆಂದರೆ, ಆ ಕಬ್ಬುನ ತಾ ಕಮ್ಮಾರನೆ?
ಆ ಪರಿಯಲಿ ಸಕಲ ಜಗತ್ತಿನ ಸಚರಾಚರವನು ಮಾಡುವನೆಂದರೆ,
ಆ ಸಚರಾಚರವು ಶಿವನೆ?
ಹಂಗಾದರೆ ಅಷ್ಟಾದಶವರ್ಣವೇಕಾದವು?
ಚೌರಾಸಿಲಕ್ಷ ಜೀವರಾಶಿಗಳೇಕಾದವು?
ಸುಖ-ದುಃಖ, ಸ್ವರ್ಗ-ನರಕಂಗಳೇಕಾದವು?
ಉತ್ತಮ-ಮಧ್ಯಮ-ಕನಿಷ್ಠಂಗಳೇಕಾದವು?
ಪುಣ್ಯ-ಪಾಪ, ಭವಿ-ಭಕ್ತರೆಂದೇಕಾದವು?
ಇದು ಕಾರಣ ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವ.
ಅಂತಲ್ಲದೆ ಸರ್ವವೂ ಶಿವನೆಂದರೆ
ಅಘೋರ ನರಕ ಕೂಡಲಚೆನ್ನಸಂಗಯ್ಯಾ. (ಚೆನ್ನಬಸವಣ್ಣ)

ಕಾಯದ ವಿಸ್ತಾರವನ್ನು ತಿಳಿದುಕೊಳ್ಳುವಲ್ಲಿ ಮೇಲ್ಕಂಡ ರೀತಿಯ ಕಾಯದ ಕುರಿತಾಗಿ ವಾಚಿಸುವ ವಚನಗಳನ್ನು ಅವಲೋಕಿಸಬೇಕಾಗಿದೆ. ಕಾಯದ ಬಗ್ಗೆ ವಿಶ್ಲೇಷಿಸುವಲ್ಲಿ ವಚನ ಸಾಹಿತ್ಯ ಜಗತ್ಕಾರಣ ಸಿದ್ಧಾಂತವನ್ನು ಸಾರಾ ಸಗಟಾಗಿ ತಿರಸ್ಕರಿಸಿರುವುದನ್ನು ನಾವು ಬಹಳ ಮುಖ್ಯವಾಗಿ ಗಮನಿಸಲೇ ಬೇಕಾಗುತ್ತದೆ. ಅಂದರೆ ಜೀವ ದೇಹ ರೂಪದಲ್ಲಿ ನಮ್ಮ ಇರುವಿಕೆಗೆ ಕಾರಣವಾಗಿರುವ ಈ ನಮ್ಮ ಭೂತ ಪಂಚಕಗಳ ಕಾಯ ಮತ್ತು ನಮ್ಮ ಸುತ್ತಲೂ ಅಖಂಡವಾಗಿರುವ ಈ ಪ್ರಕೃತಿ ಕಾಯ. ಇವೆರಡನ್ನು ಸೃಷ್ಟಿಸುತ್ತಿರುವ ಮತ್ತು ಪೋಷಿಸುತ್ತಿರುವ ಮತ್ತು ನಾಶ ಮಾಡುವ ಸರ್ವತಂತ್ರ ಸ್ವತಂತ್ರವಾದ ಶಕ್ತಿ ಎಂಬುದಿಲ್ಲ ಎಂದು ಹೇಳುವ ಈ ವಚನದಲ್ಲಿ ಸಚರಾಚರವೆಲ್ಲವೂ ಶಿವಸ್ವರೂಪ ಎಂಬುದನ್ನು ತಿರಸ್ಕರಿಸಲಾಗಿದೆ. ಶರಣರಲ್ಲಿ ಭವದಿಂದ ಪಾರಾಗುವ ಶಿವಾಚಾರದಲ್ಲಿ ತೊಡಗಿರುವ ಭಕ್ತಿ ಶಿವಸ್ವರೂಪಿಯಾಗಿರುತ್ತದೆ. ಹಾಗಾದರೆ ಶಿವ ಪದವಿ ನಡೆದು ಕಟ್ಟಬೇಕಾಗಿರುವ ಸತ್ಯವೇ ಹೊರತು ನಮ್ಮ ಕಾಯದಲ್ಲಾಗಲಿ, ವಿಶ್ವಕಾಯದಲ್ಲಾಗಲಿ ಶಿವ ಇರಲಾರದೆಂಬುದನ್ನು ಅರಿವಾಗಿಸಿಕೊಂಡಾಗ ಶರಣರು ನಡೆದ ಕಾಯಸಿದ್ಧಾಂತಕ್ಕೆ ಇರುವ ಅತ್ಯಂತ ವೈಜ್ಞಾನಿಕವಾದ, ವಿಶಾಲವಾದ ನೋಟವೊಂದರ ಸ್ಪರ್ಶ ಸಿಗತೊಡಗುತ್ತದೆ. ಈ ವಚನದಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾದ ಅಂಶವೇನೆಂದರೆ… ಸರ್ವವೂ ಶಿವನ ಸೃಷ್ಟಿಯೇ ಆಗಿದ್ದ ಪಕ್ಷದಲ್ಲಿ ಇಲ್ಲಿ ಸುಖ- ದುಃಖ, ಪಾಪ-ಪುಣ್ಯ, ಭವಿ- ಭಕ್ತ ಎಂದು ಏಕಾದವು? ಕಡುಬಡವನೊಬ್ಬನಿಗೆ ಇಲ್ಲಿ ಒಂದು ಹೊತ್ತಿನ ಕೂಳಿಲ್ಲ; ಶ್ರೀಮಂತನಿಗೆ ಜೀರ್ಣಮಾಡಿಕೊಳ್ಳಲಾಗದಷ್ಟು ಸಂಗ್ರಹವಿದೆ; ಶೋಷಣೆ ಮಾಡುವವರನ್ನು ಯಾವ ದೇವರೂ ತಡೆಯಲಾರ; ಶೋಷಣೆಗೊಳಗಾದವರಿಗೆ ಇಲ್ಲಿ ನ್ಯಾಯ ಸಿಗುತ್ತದೆಂಬ ನಂಬಿಕೆಯಿಲ್ಲ; ಹಣವಂತರ ಅನ್ಯಾಯ- ಅಕ್ರಮಗಳು ನಮ್ಮ ಸುತ್ತ ಘಟಿಸುತ್ತಿದ್ದರೂ ಅವೆಲ್ಲಾ ವಿನಾಯಿತಿ ಪಡೆದುಕೊಳ್ಳುತ್ತಿರುತ್ತವೆ, ನಿರ್ಗತಿಕರ ಬವಣೆಗಳು ತೀರುವುದೇ ಇಲ್ಲ. ಈ ರೀತಿಯ ಸಬಲ ಮತ್ತು ದುರ್ಬಲವಾದ ಸಾಮಾಜಿಕ ಸನ್ನಿವೇಶಗಳನ್ನು ನಾವೇ ಸೃಷ್ಟಿಸಿಕೊಂಡಾಗಿದೆ. ಈಗ ನಾವೇ ಅವುಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ ಎಂಬ ಅವಶ್ಯಕತೆ “ಜಗತ್ಸರ್ವವೂ ಶಿವ” ಎಂಬ ಅಂಶವನ್ನು ನಿರಾಕರಿಸುತ್ತದೆ. ಮಾನವೀಯತೆ ಇರುವಂತಹವರೇ ಸರ್ವಜೀವಿಗಳಿಗೂ ಕ್ಷೇಮವನ್ನೂ, ನಿರ್ಭಯ ನಿರಾತಂಕದಿಂದ ಬಾಳಬಹುದಾದ ಪರಿಸರ ಮತ್ತು ಸಮಾಜಗಳನ್ನು ಕಟ್ಟಬೇಕಾಗಿದೆ. ಅದುವೇ ಧರ್ಮ. ಶರಣ ಧರ್ಮವು ಸಚರಾಚರ ಜಗತ್ತಿಗೂ ದಯಾ ಕರುಣೆಗಳನ್ನು ಅನುಷ್ಠಾನಕ್ಕೆ ತರುವ ಪರಮ ಜ್ಞಾನವನ್ನು ಪ್ರಸಾದಿಸಿತು. ಆ ಪರಮಜ್ಞಾನವು ಜಗತ್ಕಾರಣಗಳನ್ನು ನಿರಾಕರಿಸಿತ್ತು ಎಂಬುದು ಇಲ್ಲಿ ಬಹಳ ಮುಖ್ಯ. ಈ ನಿರಾಕರಣೆಯಲ್ಲಿ ಹೊಸದೊಂದು ವಿಶ್ವಪ್ರಜ್ಞೆಯ ಮಹಾದ್ವಾರವೊಂದನ್ನು ತೆರೆಯುವ ಕೀಲಿಕೈಯಿದೆ. ಅದನ್ನು ಬಸವಣ್ಣನವರ ಮಾತಿನಲ್ಲಿಯೇ ಕೇಳಬೇಕು.

ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು ಪ್ರಾಣ,
ಪ್ರಾಣವಿಡಿದಿಹುದು ಜ್ಞಾನ, ಜ್ಞಾನವಿಡಿದಿಹುದು ಗುರು.
ಇಂತೀ ಗುರುಲಿಂಗಜಂಗಮಪ್ರಸಾದವ
ಸಗುಣವೆಂದು ಹಿಡಿದು ನಿರ್ಗುಣವೆಂದು ಕಂಡ
ಸಂದೇಹಿ ವ್ರತಗೇಡಿಗಳನೇನೆಂಬೆ
ಅಂತವರ ಮುಖವ ತೋರದಿರು ಕೂಡಲಸಂಗಮದೇವಾ. (ಬಸವಣ್ಣ)

‘ತನುವಿಡಿದಿಹುದು ಪ್ರಕೃತಿ, ಪ್ರಕೃತಿವಿಡಿದಿಹುದು ಪ್ರಾಣ’- ಈ ಇಡೀ ಸಾಲಿನ ಪ್ರಕ್ರಿಯೆಯನ್ನು ಕೆದಕಿದರೆ, ಒಂದನ್ನೊಂದು ಆತುಕೊಂಡಿರುವುದರಿಂದಾದ ಪ್ರಕೃತಿಯನ್ನು ಹಾಗೂ ಆ ಪ್ರಕೃತಿಯನ್ನು ಅವಲಂಬಿಸಿರುವ ಪ್ರಾಣದ ಪ್ರತ್ಯಕ್ಷಾನುಭವವನ್ನು ತೆಗೆದುಕೊಂಡು ಇಲ್ಲಿ ಹೇಳಲಾಗುತ್ತಿದೆ. ನಮ್ಮ ಸಾಮಾನ್ಯ ಅನುಭವದಲ್ಲಿ ಹೇಳಿದರೂ, ನಮ್ಮ ಕಾಲುಗಳಿಗೆ ಭೂಮಿಯೊಂದಿಗೆ ಆತುಕೊಳ್ಳುವಿಕೆ ಬೇಕೇ ಬೇಕು. ನಮ್ಮ ಪ್ರಾಣದ ಇರುವಿಕೆಗೆ ನೀರು, ಗಾಳಿ, ಆಹಾರವನ್ನು ಪ್ರಕೃತಿಯೇ ನಮಗೆ ಒದಗಿಸುತ್ತಿದೆಯಾದ್ದರಿಂದ ‘ಪ್ರಕೃತಿವಿಡಿದಿಹುದು ಪ್ರಾಣ’- ನಮ್ಮ ಪ್ರಾಣ ದೇಹಾದಿಗಳ ಅಸ್ತಿತ್ವವೆಲ್ಲವನ್ನೂ ಅಖಂಡವಾದ ಈ ಪ್ರಕೃತಿಯೇ ಇರುವಂತೆ ಮಾಡುತ್ತಿದೆ. ಪ್ರಾಣವಿಡಿದಿಹುದು ಜ್ಞಾನ- ನಾನು ಜೀವಂತವಾಗಿರುವ ತನಕವೂ ಜ್ಞಾನವೆಂಬ ಅರಿವು- ಮರೆವು ಇರುತ್ತದೆಯಾದ್ದರಿಂದ ಪ್ರಾಣವನ್ನು ಜ್ಞಾನವು ಆಶ್ರಯಿಸಿದೆ. ಈ ಜ್ಞಾನವಾದರೋ ಗುರುವನ್ನು ಆಶ್ರಯಿಸಿಕೊಂಡಿದೆ. ಇದು ವಾಸ್ತವ ಸ್ಥಿತಿ. ಆದರೆ ಗುರು, ಲಿಂಗ, ಜಂಗಮ ಪ್ರಸಾದವು- ಪ್ರಾಣ, ಪ್ರಕೃತಿ, ಜ್ಞಾನ, ಗುರು ಎಂಬ ಅಂಶಗಳು ಸಗುಣ ಎನ್ನುವಂತಹ ಜಿಜ್ಞಾಸೆಯಾಗಲಿ, ನಿರ್ಗುಣ ಎನ್ನುವಂತಹ ಜಿಜ್ಞಾಸೆಯಾಗಲಿ ಅಲ್ಲ. ಈ ರೀತಿ ಜಿಜ್ಞಾಸೆಗೆ ತೊಡಗುವವರೆಲ್ಲರೂ ಬಸವಣ್ಣನವರಿಗೆ ವ್ರತಗೇಡಿಗಳು. ಏಕೆಂದರೆ ಶರಣರ ಶಿವಸ್ವರೂಪವಾಗಿರುವ ಅಪ್ರಮಾಣವಾದ ಏಕತ್ವದ ಘನವನ್ನು ಪ್ರಮಾಣೀಕೃತ ಘಟಕಗಳನ್ನಾಗಿ ಛಿದ್ರ ಛಿದ್ರ ಮಾಡಿಯೋ ಅಥವಾ ಏಕತ್ವದ ಘನವನ್ನು ಅನೇಕ ಘಟಕಗಳನ್ನಾಗಿಸಿಯೋ ವಿಭಾಗಿಸಿ ನೋಡುವ ಅಜ್ಞಾನ ಶರಣರಲ್ಲಿ ಇಲ್ಲ.

ಪೃಥ್ವಿ ಹೋದತ್ತಲಿದೆ (ಹೊರುತ್ತಲಿದೆ?) ಅಪ್ಪು ಉಲಿವುತ್ತಲಿದೆ,
ತೇಜ ಉರಿವುತ್ತಲಿದೆ, ವಾಯು ಹರಿಯುತ್ತಲಿದೆ,
ಆಕಾಶವಿಂಬುಗೊಡುತ್ತಲಿದೆ.
ಅಗಣಿತವಪ್ರಮಾಣವಾನಂದ ಗುಹೇಶ್ವರ!(ಅಲ್ಲಮಪ್ರಭು)

ಪಂಚಭೂತಗಳಿಂದಾದ ಈ ನಮ್ಮ ದೇಹವು (ಕಾಯವು) ಭೂಮಿ, ನೀರು, ವಾಯು, ಬೆಂಕಿ ಮತ್ತು ಆಕಾಶ ತತ್ವಗಳಿಂದಾಗಿದೆ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಮಾಂಸ, ಮೂಳೆ, ನರಗಳು ಹಾಗೂ ಅಸ್ತಿಮಜ್ಜೆಯಂತಹ ಅಂಗಾಂಶಗಳು ಭೂತತ್ವದಿಂದಾಗಿರುವಂತವಾಗಿದ್ದರೆ; ನಮ್ಮಲ್ಲಿನ ರಕ್ತ, ಶ್ಲೇಷ್ಮ, ಮೂತ್ರ ಹಾಗೂ ಒಳಗಿನ ಅಸಂಖ್ಯಾತ ರಸಧಾತು ಮತ್ತು ಲಾಲಾರಸಗಳೆಲ್ಲವೂ ಜಲತತ್ವದಿಂದಾಗಿವೆ. ಹಾಗೆಯೇ ರೇಚಕ ಪೂರಕಗಳಿಂದ ಒಳ ಹೋಗುತ್ತಿರುವ ಮತ್ತು ಹೊರ ಬರುತ್ತಿರುವ ವಾಯು ಸಂಚಯವು ಗಾಳಿ ತತ್ವದಿಂದಾಗಿದೆ. ನಮ್ಮಲ್ಲಿನ ಪ್ರಾಣವು ಸಂರಕ್ಷಣೆಯಿಂದ ಕಾವು ಪಡೆಯುವಲ್ಲಿ ಉತ್ಪತ್ತಿಯಾಗುತ್ತಿರುವ ಶಾಖವು ಅಗ್ನಿತತ್ವವಾಗಿದೆ. ದೇಹಾದ್ಯಂತ ವ್ಯಾಪಿಸಿಕೊಂಡಿರುವ ಅವಕಾಶ ಅಂದರೆ ಸ್ಪೇಸ್ ಆಕಾಶ ತತ್ವವೆನಿಸಿಕೊಂಡಿದೆ.
ಹಾಗಾದರೆ ಪಂಚಭೂತಗಳಿಂದ ಆವೃತಗೊಂಡಿರುವ ಈ ದೇಹವನ್ನು ಅಖಂಡವಾದ ಪ್ರಕೃತಿಯೊಳಗಿರುವ ಪಂಚಭೂತಗಳನ್ನು ಬೇರೆ ಎಂದು ಬೇರ್ಪಡಿಸಲಾದೀತೇ? ಅಥವಾ ನಮ್ಮೊಳಗಿರುವ ಪಂಚಭೂತಗಳನ್ನು ಬೇರೆ ಬೇರೆ ಎಂದು ತಿಳಿಯುವ ವಿಧಾನವು ಸರಿಯೇ? ಸಾಧ್ಯವೇ ಇಲ್ಲ. ನಮ್ಮ ದೇಹದ ಪಂಚಭೂತಗಳಾಗಲಿ ಅಥವಾ ಹೊರಗಿನ ಪ್ರಕೃತಿಯ ಪಂಚಭೂತಗಳಾಗಲಿ ಒಂದನ್ನೊಂದು ಬಿಟ್ಟು ಯಾವೊಂದೂ ಸ್ವತಂತ್ರವಾಗಿ ಬಾಳಲಾರವು. ಒಂದರ ಇರುವಿಕೆ ಮತ್ತೊಂದರ ಇರುವಿಕೆಗೆ ಕಾರಣವಾಗಿವೆಯೇ ವಿನಾ ಯಾವೊಂದು ಭೂತವೂ ಸ್ವತಂತ್ರವಾಗಿಯಾಗಲಿ, ಪ್ರತ್ಯೇಕವಾಗಿಯಾಗಲಿ ಇರಲಾರವು.
ಉದಾಹರಣೆಗೆ ನಮ್ಮ ದೇಹದ ಜೀವಿಸುವಿಕೆಯನ್ನು ತೆಗೆದುಕೊಂಡಾಗ ಗಾಳಿ, ನೀರು, ಆಹಾರ (ಭೂತತ್ವ) ಈ ಮೂರೂ ಭೂತಗಳೂ ಪ್ರಾಣಶಕ್ತಿಯನ್ನು ಜೀವಂತವಾಗಿಡಲು ನಾಲ್ಕನೇ ಭೂತವಾದ ಶಾಖ ಉತ್ಪತ್ತಿಗೆ ಕಾರಣವಾಗುತ್ತವೆ. ಪ್ರಾಣ ಮತ್ತು ಶಾಖಗಳೆರಡೂ ನಮ್ಮ ದೇಹದಲ್ಲಿ ಸಂಚಯವಾಗಲು ಅವಕಾಶ (ಸ್ಪೇಸ್)ದ ಅಂದರೆ ಆಕಾಶ ತತ್ವ ಬೇಕೇ ಬೇಕಾಗಿರುತ್ತದೆ. (ನಮ್ಮ ದೇಹದ ಬಹುತೇಕ ಭಾಗವು ಸ್ಪೇಸ್ ನಿಂದಾಗಿದೆ, ಈ ದೇಹವು ಅಸಂಖ್ಯಾತ ಪರಮಾಣುಗಳಿಂದಾಗಿದ್ದು, ಪರಮಾಣುವಿನ ಶೇ 99.9 ರಷ್ಟು ಜಾಗ ಖಾಲಿಯಾಗಿದೆ. ಪರಮಾಣುಗಳಲ್ಲಿ ಖಾಲಿ ಜಾಗವಿಲ್ಲದಿದ್ದಲ್ಲಿ ನಾವು ಕುಬ್ಜರಾಗಿರುತ್ತಿದ್ದೆವು. ಒಂದೊಮ್ಮೆ ಎಲ್ಲಾ ಖಾಲಿ ಜಾಗವನ್ನು ತೆಗೆದು ಹಾಕಿದರೆ ಇಡೀ ಮಾನವ ಕುಲಕ್ಕೆ ಒಂದು ಶುಗರ್ ಕ್ಯೂಬಿನ ಜಾಗ ಸಾಕಾಗುತ್ತದೆ!)
ಈ ಐದೂ ತತ್ವಗಳಲ್ಲಿ ಯಾವುದಾದರೂ ಒಂದು ತತ್ವದ ಅಂಶ ನಮ್ಮ ಶರೀರಕ್ಕೆ ಲಭ್ಯವಿಲ್ಲದಿದ್ದಾಗ ನಾವು ಜೀವಂತವಾಗಿರಲು ಸಾಧ್ಯವೇ ಇಲ್ಲ. ಆದ್ದರಿಂದ ಗಾಳಿ, ನೀರು, ಆಹಾರ, ಶಾಖ ಮತ್ತು ಅವಕಾಶ (ಸ್ಪೇಸ್) ಒಂದನ್ನೊಂದು ಅವಲಂಬಿಸಿಕೊಂಡು/ ಒಳಗೊಂಡು ಕಾರ್ಯಶೀಲವಾಗಿರುವುದರಿಂದಾಗಿ ನಮ್ಮ ಜೀವಂತ ಇರುವಿಕೆ ಸಾಧ್ಯವಾಗಿದೆ.
ಅದೇ ನಮ್ಮ ಸುತ್ತಲೂ ಇರುವ ಅನಂತ ಪ್ರಕೃತಿಯಲ್ಲಿಯು ಸಹ ಇರುವ ಭೂತ ಪಂಚಕಗಳು ಒಂದು ಮತ್ತೊಂದಕ್ಕೆ ಅವಕಾಶವನ್ನು ನೀಡುತ್ತವೆ. ಇದಕ್ಕೂ ಒಂದು ಉದಾಹರಣೆ ನೀಡುವುದಾದರೆ ಗಾಳಿ ಇಲ್ಲದಿದ್ದರೆ ಬೆಂಕಿ ಹುಟ್ಟಲು ಸಾಧ್ಯವಿಲ್ಲ. ಭೂಖಂಡದ ಇರುವಿಕೆಗೆ ಅದರ ಗರ್ಭದಾಳದಲ್ಲಿರುವ ಬೆಂಕಿ ಗುರುತ್ವ ಬಲವನ್ನು ಚೈತನ್ಯಗೊಳಿಸಲು ಪೂರಕವಾಗಿದೆ. ಭೂಖಂಡ ಹೊರಮೈನಲ್ಲಿರುವ ಗಾಳಿ, ಆಕಾಶಗಳೆರಡೂ ಭೂಮಿಯ ಅಸ್ತಿತ್ವಕ್ಕೆ ಮತ್ತು ಅದರ ಮೇಲಿನ ಸಚರಾಚರ ಜೀವರಾಶಿ ಮತ್ತು ಸಸ್ಯವರ್ಗಗಳೆಲ್ಲದರ ಬೆಳವಣಿಗೆ ಮತ್ತು ಗುರುತ್ವಕ್ಕೆ ವಿರುದ್ಧವಾದ ಚಲನೆಗೆ ಅವಕಾಶವನ್ನುಂಟು ಮಾಡಿದೆ. ನೀರಿನಲ್ಲಿ ಆಮ್ಲಜನಕವೆಂಬ ಪ್ರಾಣವಾಯುವಿದೆ, ಗಾಳಿಯಲ್ಲಿ ನೀರಾಂಶವಿದೆ, ಭೂಮಿಯೊಳಗೂ ಶಾಖವಿದೆ, ಹೊರಗೂ ಅದು ಶಾಖವನ್ನು ಪಡೆಯುತ್ತದೆ. ಆದ್ದರಿಂದ-

ಪೃಥ್ವಿಯನತಿಗಳೆದು ಅಪ್ಪುವಿಲ್ಲ, ಅಪ್ಪುವನತಿಗಳೆದು ಅಗ್ನಿಯಿಲ್ಲ,
ಅಗ್ನಿಯನತಿಗಳೆದು ವಾಯುವಿಲ್ಲ, ವಾಯುವನತಿಗಳೆದು ಆಕಾಶವಿಲ್ಲ,
ಆಕಾಶವನತಿಗಳೆದು ನಾದವಿಲ್ಲ, ನಾದವನತಿಗಳೆದು ಬಿಂದುವಿಲ್ಲ,
ಬಿಂದುವನತಿಗಳೆದು ಕಳೆಯಿಲ್ಲ, ಕಳೆಯನತಿಗಳೆದು ಆತ್ಮನಿಲ್ಲ,
ಆತ್ಮವನತಿಗಳೆದು ಗುಹೇಶ್ವರನೆಂಬ ಲಿಂಗವಿಲ್ಲ. (ಅಲ್ಲಮಪ್ರಭು)

ಭೂಮಿಯನ್ನು ತೊರೆದು ಜಲವಿಲ್ಲ; ಜಲವನ್ನು ತೊರೆದು ಅಗ್ನಿಯಿಲ್ಲ; ಅಗ್ನಿಯನ್ನು ತೊರೆದು ವಾಯುವಿಲ್ಲ; ವಾಯುವನ್ನು ತೊರೆದು ಆಕಾಶವಿಲ್ಲ; ಆಕಾಶವನ್ನು ತೊರೆದು ನಾದವಿಲ್ಲ (ನಾದ= ಶಬ್ದ= ಮಾತು; ಆಕಾಶದಲ್ಲಿ ಶಬ್ದದ ತರಂಗಗಳು ಚಲಿಸುತ್ತವೆ, ಆಕಾಶವಿಲ್ಲದಿದ್ದರೆ ಶಬ್ದವನ್ನು ಕೇಳುವ ಮತ್ತು ಉಂಟುಮಾಡುವ ಪ್ರಸಂಗವಿರಲಾರದು ಎಂಬುದು ವೈಜ್ಞಾನಿಕವಾಗಿಯೇ ಇದೆ); ನಾದವನ್ನು ತೊರೆದು ಬಿಂದುವಿಲ್ಲ (ಬಿಂದು= ಮನಸ್ಸು= ದೃಷ್ಟಿಕೋನ); ಮನಸ್ಸನ್ನು ತೊರೆದು ವಿಷಯವಿಲ್ಲ (ಕಳೆ); ವಿಷಯವನ್ನು ತೊರೆದು ಆತ್ಮವಿಲ್ಲ. ಆತ್ಮವು ವಿಷಯಾಧೀನ. ವಿಷಯಗಳಿಂದ ಆತ್ಮವು ಕಲ್ಪಿತಗೊಂಡಿದೆ. ವಿಷಯ ಕಲ್ಪನೆಗಳಿಂದ ಊಹಿಸಿಕೊಂಡಿದೆ. ಕಲ್ಪಿತ ವಿಷಯಗಳಿಂದ ಕೂಡಿದ ಭಾವ ಅಥವಾ ಸಂಸಾರರೂಪಿ ಆತ್ಮವಿರುವುದರಿಂದಾಗಿಯೇ ಬಸವಾದಿ ಪ್ರಮಥರು ಮಾನವ ಕುಲದಲ್ಲಿರುವ ಭವಕ್ಕೆ ಕಾರಣವಾದ ಕಲ್ಪಿತ ವಿಷಯಗಳನ್ನೆಲ್ಲಾ ನಿಃಶೂನ್ಯಗೊಳಿಸಿ ಹಾಕಿ ಆಳ-ನಿರಾಳತೆಯನ್ನು ತಂದೊದಗಿಸಲು ಅಕಲ್ಪಿತ ಲಿಂಗದ ಶಿವಾಚಾರವನ್ನು ಕಟ್ಟಬೇಕಾಯಿತು.

ಕಾಯಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ,
ಕಲ್ಪಿತವಿಲ್ಲದೆ ನೆರೆದಡೆ ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ,
ಗುಹೇಶ್ವರನೆಂಬ ಲಿಂಗವನರಿದ ಬಳಿಕ ನೀ ನಾನೆಂಬುದಿಲ್ಲ ನೋಡಾ. (ಅಲ್ಲಮಪ್ರಭುದೇವ)

ಕಾಮಿಸಿ ಕಲ್ಪಿಸಲಿಲ್ಲ, ಕಲ್ಪಿಸಿ ಭಾವಿಸಲಿಲ್ಲ,
ಭಾವಿಸಿ ರೂಪಿಸಲಿಲ್ಲ, ರೂಪಿಸಿ ಭೇದಿಸಲಿಲ್ಲ.
ಇದು ಕಾರಣ, ಕೂಡಲಚೆನ್ನಸಂಗಮದೇವಾ,
ಸರ್ವಾಂಗಲಿಂಗವಾದಲ್ಲಿ ಅನರ್ಪಿತವಿಲ್ಲ. (ಚೆನ್ನಬಸವಣ್ಣ)

‘ಸರ್ವಾಂಗವೂ ಲಿಂಗ’ವಾದ ಅದ್ಭುತ ಸತ್ಯವೊಂದನ್ನು ಚನ್ನಬಸವಣ್ಣನವರು ಅತ್ಯಂತ ಸ್ಪಷ್ಟವಾದ ರೂಪಕದ ಮೂಲಕ ಹೇಳುತ್ತಿದ್ದಾರೆ. ಅವರ ಲಿಂಗವು ಆಶಿಸಿ (ಕಾಮಿಸಿ) ಕಲ್ಪನೆ ಮಾಡಿಕೊಂಡದ್ದಲ್ಲ. ಕಲ್ಪನೆ ಮಾಡಿಕೊಂಡು ಭಾವಿಸಿದ್ದಲ್ಲ. ಭಾವಿಸಿ, ಭಾವಿಸಿ ತನ್ನ ಭ್ರಮೆಗಳ ಮೂಲಕ ರೂಪಿಸಿಕೊಂಡು ಅದನ್ನು ಬೇಧಿಸಿ ತಿಳಿದುಕೊಳ್ಳಬೇಕೆಂಬ ಹುಂಬತನದ್ದಲ್ಲ. ಲಿಂಗವು ಸರ್ವಾಂಗದಲ್ಲೂ ಪ್ರತ್ಯಕ್ಷವಾಗಿಯೇ ಇರುವಂತಹದ್ದು. ಹಾಗಾದರೆ ಸರ್ವಾಂಗ ಎಂದರೆ ಹೇಗೆ? ಎಂಬ ವಿಚಾರವು ಇಲ್ಲಿ ಮುಖ್ಯವಾಗುತ್ತದೆ.
ಎರಡೆಂಬ ಭೇದವಳಿದ ಅನುಭಾವಿಕ ಸತ್ಯವದು. ಎರಡು ಒಂದಾದ ರೋಮಾಂಚನವದು. ಭೂತಪಂಚಕಗಳಿಂದಲೂ, ಪಂಚೇಂದ್ರಿಯಗಳಿಂದಲೂ, ಕರ್ಮೇಂದ್ರಿಯಗಳಿಂದಲೂ ಇರುವನ್ನು ಪಡೆದ ಈ ನನ್ನ ದೇಹವು ಅನಂತ ಪ್ರಕೃತಿಯೊಂದಿಗೆ ಭಿನ್ನವೂ ಅಲ್ಲ, ಪ್ರತ್ಯೇಕವೂ ಅಲ್ಲ. ಅನಂತ ಪ್ರಕೃತಿಯೇ ನಾನಾಗಿದ್ದೇನೆ ಎಂಬ ಕಾಯದರ್ಶನ ವಿಶ್ವಾತ್ಮಕ ಪ್ರಜ್ಞೆಯಲ್ಲಿ ಬೆರೆತು ಹೋಗಿರುತ್ತದೆ.

ಅನಂತವಾದ ಪ್ರಕೃತಿಯಲ್ಲಿರುವ ಅಸಂಖ್ಯಾತ ಮೂಲಧಾತುಗಳು ಒಂದರಿಂದಾಗಿ ಮತ್ತೊಂದಾಗುವ ಹಾಗೂ ಒಂದನ್ನೊಂದು ಬೆರೆತುಕೊಂಡು ಆಗುತ್ತಿರುವ ಸಂಯೋಗ ಸುಯೋಗದ ಆಗುವಿಕೆ. ಈ ಆಗುವಿಕೆಯೊಳಗೆ ಅತ್ಯಂತ ಆಳವಾದ ನಿಸರ್ಗ ಜ್ಞಾನವಿದೆ. ಆ ವಿಶ್ವಾತ್ಮಕ ನಿಸರ್ಗ ಜ್ಞಾನದ ಅನುಭೂತಿಯ ಸ್ಪೃಹೆ ಶರಣರ ಅನುಭಾವ. ಅಲ್ಲಿ ಈ ಅನಂತವಾದ ಪ್ರಕೃತಿಗೂ ಹಾಗೂ ನಮ್ಮ ಜೀವಂತ ದೇಹಕ್ಕೂ ಯಾವುದೇ ಗುರುತು ಮತ್ತು ವ್ಯತ್ಯಾಸಗಳಿಲ್ಲ.

ಎರಡು ಒಂದಾದ ಬಳಿಕ ಅರ್ಚನೆ ಹಿಂಗಿತ್ತು.
ಎರಡು ಒಂದಾದ ಬಳಿಕ ಅರ್ಪಿತ ಹಿಂಗಿತ್ತು.
ಎರಡು ಒಂದಾದ ಬಳಿಕ ಆಚಾರ ಹಿಂಗಿತ್ತು.
ಎರಡು ಒಂದಾದ ಬಳಿಕ ಅವಧಾನ ಹಿಂಗಿತ್ತು.
ಎರಡು ಒಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ
ರೂಹಿಸಲೆಡೆಯುಂಟೆ ಗುಹೇಶ್ವರಾ? (ಅಲ್ಲಮಪ್ರಭು)

ಎರಡೊಂದಾದ ಅವಲೋಕಿತ ಪ್ರಜ್ಞೆಯೊಳಗೆ ಅರ್ಚನೆಗಳಿಗೆ ತಾವಿಲ್ಲ, ಅರ್ಪಿತಗಳ ಅಗತ್ಯವಿಲ್ಲ, ಆಚಾರ-ವಿಚಾರಗಳ ಹಂಗಿಲ್ಲ, ಅವಧಾನಗಳೇನೂ ಇಲ್ಲ, ಬೋಧಕ ನಿಂದಕರೂ ಇಲ್ಲ.

ತಾನೆ ಜಗ, ಜಗವೆಲ್ಲ ತಾನೆಂದರಿದ ಘನವೇದ್ಯನಭೇದರೂಪನಾಗಿ,
ಅನ್ಯವಿಲ್ಲದನ್ಯವನರಿಯಲೆಲ್ಲಿಯದೊ?
ನಿರಂಜನ ನಿಜಚಿದ್ರೂಪು ತಾನಾಗಿ
ಅರಿವು ತಾನೆಂಬ ಮಾತಿಗೆಡೆಯಲ್ಲಿಯದೊ?
ಅನ್ಯವೆನ್ನದ ತಾನೆನ್ನದಳಿದುಳಿಮೆಯನುಪಮಿಸಬಹುದೆ?
ಅನಪಮಸುಖಸಾರಾಯ, ಕೂಡಲಚೆನ್ನಸಂಗಾ ನಿಮ್ಮ ಶರಣ (ಚೆನ್ನಬಸವಣ್ಣ)

ತಾನೇ ಜಗ- ಎಂದರೆ ಪ್ರಕೃತಿಯೇ ನಾನಾಗಿದ್ದೇನೆ. ಪ್ರಕೃತಿಯೇ ತಾನೆಂದು ಅರಿದ ಬಳಿಕ ಅಭೇದ ರೂಪನಾಗಿ ನಿಂತಿರುವ ಅನಂತತೆಗೆ ಅನ್ಯವಿದೆ (ಬೇರೆಯದೊಂದಿದೆ) ಎಂಬ ಅರಿವು ಎಲ್ಲಿರಲು ಸಾಧ್ಯ? ನಿರಂಜನ ನಿಜ ಚಿತ್ ಸ್ವರೂಪ ತಾನಾಗಿದ್ದೇನೆಂಬ ಭ್ರಮೆಯ ನುಡಿಗೆ ಅಲ್ಲಿ ತಾವೆಲ್ಲಿದೆ? ಅನ್ಯವೆನ್ನದೆ ತಾನು ಎನ್ನುವುದೆಲ್ಲವೂ ಅಳಿದ ಬಳಿಕ ಅದನ್ನು ಉಪಮಿಸಲಾದೀತೆ? ಅದು ಅನುಪಮ ಸಾರಾಯ. ಅಂತಹ ನಿಜ ಸಾರಾಯವನ್ನು ಕುಡಿದು ಅನುಭಾವದಲ್ಲಿ ತಲ್ಲೀನವಾದವನು ನಮ್ಮ ಶರಣ ಎಂಬುದು ಈ ವಚನದ ಸಾರ.
ಆ ಸಾರಾಯದನುಭಾವದಲ್ಲಿ-

ಆನೆಂಬುದಿಲ್ಲ, ನೀನೆಂಬುದಿಲ್ಲ,
ಸ್ವಯವೆಂಬುದಿಲ್ಲ, ಪರವೆಂಬುದಿಲ್ಲ,
ಅರಿವೆಂಬುದಿಲ್ಲ, ಮರವೆಂಬುದಿಲ್ಲ,
ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ,
ಕೂಡಲಚೆನ್ನಸಂಗಯ್ಯನೆಂಬ ಶಬ್ದ ಮುನ್ನಿಲ್ಲ! (ಚೆನ್ನಬಸವಣ್ಣ)

ನಮ್ಮ ಚನ್ನಬಸವಣ್ಣನವರು ಈ ಸಾರಾಯದನುಭಾವದಲ್ಲಿ ಕಲ್ಪನೆಗಳೆಲ್ಲಾ ಹೇಗೆ ಏಕಾರ್ಥವನ್ನು ಹೊಂದುತ್ತವೆಂಬುದನ್ನು ಇನ್ನಷ್ಟು ವಿವರವಾಗಿ ಹೇಳುತ್ತಾರೆ-

ತನ್ನ ತಾನರಿದ ಶಿವಯೋಗಿಯ ಪರಿಯೆಂತೆಂದಡೆ:
ದೇಹಿ ತಾನಲ್ಲ, ಜಾತಿಜಾತಕಂಗಳು ತಾನಲ್ಲ, ಪ್ರಾಣ ತಾನಲ್ಲ,
ದಶವಾಯುಗಳು ತಾನಲ್ಲ, ಇಂದ್ರಿಯಂಗಳು ತಾನಲ್ಲ, ಗುಣತ್ರಯಂಗಳು
ತಾನಲ್ಲ
ಅಂತಃಕರಣ ಚತುಷ್ಟಯಂಗಳು ತಾನಲ್ಲವೆಂದರಿದು ವಿವರಿಸಿ ಕಳೆದು,
ತನ್ನ ನಿಜಸ್ವರೂಪ ತಾನೇ ನೋಡಿ ಕಂಡು;
ಜೀವಾತ್ಮ ಅಂತರಾತ್ಮ ಪರಮಾತ್ಮ ಮತ್ತಂ ಭೂತಾತ್ಮ ಶುದ್ಧಾತ್ಮ
ನಿರ್ಮಲಾತ್ಮ ಸತ್ಯಾತ್ಮ ಮಹಾತ್ಮವೆಂಬ
ಅಷ್ಟ ಆತ್ಮೇಶ್ವರರು ಏಕಾರ್ಥವೆಂದರಿದು,
ಅಲ್ಲಿಯೆ ತಲ್ಲೀಯವಾಗಿಹುದೀಗ ಯೋಗ ಕಾಣಾ,
ಕೂಡಲಚೆನ್ನಸಂಗಮದೇವಾ (ಚೆನ್ನಬಸವಣ್ಣ)

ತಾನು ಏನೇನನ್ನು ಇಲ್ಲಿ ನೋಡುತ್ತಿದ್ದೇನೆಯೋ ಅದೆಲ್ಲವೂ ನನ್ನಿಂದ ಅನ್ಯವಲ್ಲ. ಇಂದ್ರಿಯಗಳಿಗೆ ಎಟುಕುತ್ತಿರುವ ಸರ್ವ ಭೂತಾತ್ಮಕ ಜಗತ್ತೆಲ್ಲವೂ ನನ್ನಿಂದ ಅನ್ಯವಲ್ಲ. ಬೇರೆಯದ್ದಿಲ್ಲದಿರುವಾಗ ನಾನು ಮತ್ತೊಂದನ್ನು ಅನುಭವಿಸುತ್ತಿದ್ದೇನೆ ಎಂಬಲ್ಲಿ, ಮತ್ತೊಂದು ಇಲ್ಲದೇ ಇರುವಾಗ ನಾನು ಅನುಭವಿಸುತ್ತಿದ್ದೇನೆಂಬ ಅಜ್ಞಾನವೇ ಶೂನ್ಯವಾಯಿತು. ಪೂಜಿಸಲು ಇನ್ನೊಂದಿಲ್ಲ, ಸೇರಲು ಮತ್ತೊಂದಿಲ್ಲ. ಸುತ್ತಲೂ ಇರುವ ಅನಂತ ಪ್ರಕೃತಿಯ ಭೂತ ಪಂಚಕಗಳೇ ನನ್ನ ಕಾಯದಲ್ಲಿ ತುಂಬಿರುವಾಗ ಸಚರಾಚರ ವಸ್ತುಪ್ರಪಂಚವೆಲ್ಲಾ ಭೂತ ಪಂಚಕಗಳಿಂದಲೇ ಆಗುತ್ತಿರುವಾಗ ನಾನೆಂಬುದು ಕೇವಲ ಭ್ರಮೆಯಾಯಿತು. ಪಂಚಭೂತಗಳಿಂದಾಗಿರುವ ಈ ಶರೀರ ನಾನಲ್ಲ. ಜ್ಞಾನಾ ಜ್ಞಾನಗಳು ನಾನಲ್ಲ, ಇಂದ್ರಿಯಗಳು ನಾನಲ್ಲ, ಅಹಂಕಾರ ನಾನಲ್ಲ, ಕಾಮ ಕ್ರೋಧಾದಿ ಸ್ವಭಾವಗಳು ನಾನಲ್ಲ, ಪ್ರಕೃತಿ ರೂಪವೇ ನಾನಾಗಿದ್ದೇನೆ. ಈ ಪ್ರಕೃತಿ ಸ್ವರೂಪವಾಗಿರುವ ನನ್ನಲ್ಲಿ ಪೂಜಿಸಲು ಮತ್ತೊಂದಿಲ್ಲ, ಸೇರಲು ಇನ್ನೊಂದಿಲ್ಲ, ಬೇರೆಯಾಗಿ ವಿಘಟಿಸಿಕೊಳ್ಳಲು ಅಲ್ಲಿ ಬೇರೆಂಬುದಾವುದೂ ಇಲ್ಲ. ಇದುವೇ ಅಗಣಿತ ಅಕ್ಷೋಬ್ಯವಾಗಿ ತುಂಬಿ ತುಳುಕಾಡುತ್ತಿರುವ ಏಕಮೇವಾದ್ವಿತೀಯವಾದ ಅದ್ವಯ ದರ್ಶನ!!! ಅದ್ವಯ ಮಹಾಲಿಂಗ ದರ್ಶನ!!!

ಏನೆಂಬೆ ಏನೆಂಬೆ ಒಂದೆರಡಾದುದ
ಏನೆಂಬೆ ಏನೆಂಬೆ ಎರಡೊಂದಾದುದ
ಏನೆಂಬೆ ಏನೆಂಬೆ ಅವಿರಳ ಘನವ
ಮಹಾದಾನಿ ಕೂಡಲಸಂಗಮದೇವಯ್ಯ ತಾನೆ ಬಲ್ಲ.
ಕಾಯವಿಲ್ಲದ ಸಂಸಾರ ಚೋದ್ಯ, ಸಂಸಾರವಿಲ್ಲದ ಕಾಯ ಚೋದ್ಯ,
ಕಾಯದೊಳಗೊಂದು ನಿರಾಳ ಚೋದ್ಯ, ನಿರಾಳದೊಳಗೊಂದು
ಕೂಡಲಚೆನ್ನಸಂಗಯ್ಯನೆಂಬ ಶರಣ.
ಸಮ್ಯಕ್ಚೋದ್ಯ, ಮಹಾಚೋದ್ಯ! (ಚೆನ್ನಬಸವಣ್ಣ)

ಶರಣರ ಕೈಯಲ್ಲಿರುವ ‘ಲಿಂಗದ ಕುರುಹು’ ಈಗ ತಮಗೆ ಅರ್ಥವಾಗಿರಬಹುದೆಂದುಕೊಂಡಿದ್ದೇನೆ. ಅನಂತವಾದ ಜಗತ್ತು ಮತ್ತು ನಾನು ಎಂಬೆರಡು ಭೇದಗಳು ಅಳಿದು ಹೋದ ಪ್ರತ್ಯಕ್ಷ ಲಿಂಗದ ಕುರುಹದು. ಈ ಕುರುಹು ಸಾಮಾನ್ಯವಾದದ್ದೇನೂ ಅಲ್ಲ. ಈ ಅನಂತ ಪ್ರಕೃತಿಯಲ್ಲಿರುವ ಚರಾಚರ ಜೀವರಾಶಿಗಳು, ಸಸ್ಯಗಳು, ಬೆಟ್ಟಗುಡ್ಡ ಸರೋವರ, ಪರ್ವತ ಸಮುದ್ರಾದಿಗಳೆಲ್ಲವೂ ಒಂದೇ ಎನ್ನುವ ಏಕಭಾವವು ಎಲ್ಲವುಗಳೊಂದಿಗೆ ಸಾಮರಸ್ಯದಿಂದ ಬಾಳಬೇಕಾದ ಮಹಾಕರುಣೆಯನ್ನು ಪ್ರಸಾದವನ್ನಾಗಿ ಪಡೆದ ಅನುಭೂತಿಯದು. ಸಕಲ ಜೀವರಾಶಿಗಳು ಅಭದ್ರವಾಗಿಯೇ ಇವೆ, ಅಸಹಾಯಕವಾಗಿಯೇ ಇವೆ ಎಂಬ ದಯಾ ಮೈತ್ರಿಯ ಮಹಾಭಾವವದು. ಒಂದು ಸಣ್ಣ ಜೀವಿಗೂ ತನ್ನಿಂದ ತೊಂದರೆಯಾಗಬಾರದೆಂಬ ಮಹಾ ಪ್ರಜ್ಞೆಯದು. ಪ್ರಕೃತಿಯೊಳಗೆ ದಯೆ ತುಂಬಿ ತುಳುಕಾಡುತ್ತಿದೆಯಾದ್ದರಿಂದ ಎಲ್ಲವೂ ಜೀವಿಸಲು ಸಾಧ್ಯವಾಗಿದೆ ಎಂಬ ನಿಜದರಿವದು. ಆದ್ದರಿಂದ ಶರಣ ಮಾರ್ಗ ಎಂದೆಂದಿಗೂ ಉತ್ಕೃಷ್ಟವಾದದ್ದೇ ಆಗಿದೆ.
ಶರಣರಲ್ಲಿ ಲಿಂಗ ಪ್ರಜ್ಞೆ ಮತ್ತು ಲಿಂಗ ಕುರುಹುಗಳೆರಡೂ ತನ್ನ ಪಂಚೇಂದ್ರಿಯಗಳಿಂದಾದ ದೇಹ, ಮನಸ್ಸು ಮತ್ತು ಇಂದ್ರಿಯಗಳಿಗೆ ದಕ್ಕುವಂತಹುಗಳಲ್ಲ. ಅವು ಅನುಭಾವವೆಂಬ ಮಹಾಪ್ರಜ್ಞೆಗೆ ಮಾತ್ರ ನಿಲುಕುವಂಥವು. ಅನುಭಾವದ ಮಹಾಪ್ರಜ್ಞೆಗೆ ಕರೆದೊಯ್ಯುವುದು ಅವರ ಗುರುಪಥದ ಮಹಾಮರ್ಮವಾಗಿದೆ. ಆದ್ದರಿಂದಲೇ ಶಿವಪಥವನರಿವಡೆ ಗುರುಪಥವೇ ಮೊದಲೆಂದು ಅವರು ಗುರುವನ್ನು ಕೊಂಡಾಡಿದ್ದಾರೆ.
ಶರಣರಲ್ಲಿ ಏಕಮೇವಾದ್ವಿತೀಯವಾದ ಲಿಂಗ ದರುಶನದ ಅನುಭಾವ ಅಂತಿಮವೇನಲ್ಲ. ಈ ಲಿಂಗಪ್ರಜ್ಞೆ ತನ್ನ ಹಿಡಿತಕ್ಕೆ ಸಿಕ್ಕ ನಂತರ ಅವನು ಜಂಗಮ ಹಂತಕ್ಕೆ ಹೊರಳಿಕೊಳ್ಳುತ್ತಾನೆ. ಜಂಗಮನಾಗುವಲ್ಲಿ ಶರಣನಿಗೆ ಇರುವ ಅನುಮಾನಗಳೆಲ್ಲವೂ ಪರಿಹಾರವಾಗುತ್ತವೆ. ಆದ್ದರಿಂದ ಲಿಂಗವಂತನಾದ ಶರಣ ಜಂಗಮನಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯು ಒಂದು ಪರಿಪೂರ್ಣವಾದ ‘ಜ್ಞಾನಸಿದ್ಧಿ’ ಎಂದು ವಚನಸಾಹಿತ್ಯವು ಹೇಳುತ್ತದೆ.
ಹಾಗಾದರೆ ಜಂಗಮಶೀಲತೆಯನ್ನು ನಾವಿಲ್ಲಿ ಗ್ರಹಿಸಬಹುದೇ? ಹೌದು! ಈ ಕ್ರಿಯೆಯನ್ನು ಭಾಷೆಯ ಮೂಲಕ ವ್ಯಕ್ತಪಡಿಸಿರುವುದು ವಚನಗಳ ಚ್ಯೋದ್ಯವೆನ್ನಬಹುದು. ಅದನ್ನು ಈಗ ನೋಡೋಣ….

ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ ನಾನಲ್ಲಯ್ಯಾ.
ಅದೇನೆಂಬೆನಯ್ಯಾ ಎಂತೆಂಬೆನಯ್ಯಾ?
ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ. (ಅಲ್ಲಮಪ್ರಭು)

ಈ ವಚನದಲ್ಲಿ ಜಂಗಮನಿಗೆ ಹುಟ್ಟು ಸಾವುಗಳಿಲ್ಲ ಎಂದು ಅಲ್ಲಮರು ಹೇಳುತ್ತಿದ್ದಾರೆ. ಹಾಗಾದರೆ ‘ಜಂಗಮ’ ಎಂದರೆ ಏನು? ಎಂಬ ಪ್ರಶ್ನೆ ಇಲ್ಲಿ ಬಹಳ ಮಹತ್ತರವಾದದ್ದು. ಚಲನಶೀಲವಾದ ನಿರಂತರ ಆಗುವಿಕೆ ಯಾವುದಿದೆಯೋ ಅದು ಜಂಗಮ ಎಂದಾಗುತ್ತದೆ. ಜಂಗಮ ಎಂದರೆ ಎಲ್ಲೂ ವಿರಮಿಸಲು ಒಂದು ಕ್ಷಣದ ಸ್ಥಿತಿಯೆಂಬುದು ಇಲ್ಲದೇ ಇರುವುದನ್ನು ಜಂಗಮ ಎನ್ನಲಾಗುತ್ತದೆ. ಅಂದ ಮೇಲೆ ಯಾವುದು ಜಂಗಮ? ಯಾರು ಜಂಗಮ? ಲಿಂಗಾಗಿಯಾದ ಶರಣನು ಜಂಗಮನಾಗಿ ಪರಿವರ್ತನೆಗೊಂಡಾಗ ಆ ಶರಣ ಜಂಗಮನೋ? ಅಥವಾ ಅನಂತ ಪ್ರಕೃತಿಯು ಜಂಗಮವೋ? ನಾನು ಎಂಬುದರ ಕುರುಹು ಇಲ್ಲದೇ ನಷ್ಟವಾದಾಗಲೇ ಶರಣನು ಇಲ್ಲವಾದನಲ್ಲವೇ? ಹಾಗಾದರೆ ತಾನು ಮತ್ತು ಇದಿರು ಎಂಬ ಭೇದಗಳಳಿದು ಒಂದಾದಾಗ; ಪ್ರಾಣ ಪ್ರಕೃತಿಗಳೆರಡೂ ಒಂದಾದಾಗ ಅಲ್ಲಿ ನಿರಂತರವಾದ ಪ್ರಕೃತಿ ಯಾವುದಿದೆಯೋ ಅದೇ ಜಂಗಮ ಎಂದಾಯಿತು.

ನಾನು ಸಜ್ಜೀವವೊ, ನೀನು ಸಜ್ಜೀವವೊ?
ನಿನಗೆಯೂ ಎನಗೆಯೂ ಸಂಬಂಧವಯ್ಯಾ,
ನಿನ್ನನೆಂತು ಪ್ರಾಣಲಿಂಗವೆಂದು ಪೂಜಿಸುವೆನಯ್ಯಾ?
ಎನ್ನ ಪ್ರಸಾದವು ನಿನಗೆ, ನಿನ್ನ ಪ್ರಸಾದವು ಎನಗೆ.
ಎನಗೆಯೂ ನಿನಗೆಯೂ ಏಕಪ್ರಸಾದ ಕಾಣಾ ಗುಹೇಶ್ವರಾ (ಅಲ್ಲಮಪ್ರಭು)

ಪಂಚಭೌತಿಕ ರೂಪವಾಗಿ ತೋರಿ ಬರುತ್ತಿರುವ ಎನ್ನ ಕಾಯ ಸಜ್ಜೀವವೋ? ಅಥವಾ ಪ್ರಾಣಾದಿಗಳೇನೂ ಇಲ್ಲದೆ ಕೇವಲ ನಿರಂತರವಾದ ಆಗುವಿಕೆಯ ಮೂಲಕ ಎಲ್ಲವನ್ನೂ ಮಾಡುತ್ತಿರುವ ಅನಂತ ಪ್ರಕೃತಿಯಾದ ನೀನು ಸಜ್ಜೀವವೋ… ಎಂದು ಅಲ್ಲಮರು ಅನುಭಾವಿಕ ನುಡಿ ಹೇಳುವಾಗ… ನನ್ನ ಇರುವಿಕೆಗೆ ನೀನು ಕಾರಣ ರೂಪದ ಪ್ರಸಾದವಾಗಿದ್ದೀಯಾ, ಅಂದರೆ ನನ್ನ ಜೀವಕ್ಕೆ ಬೇಕಾದ ದ್ರವ್ಯಗಳೆಲ್ಲವೂ ನಿನ್ನಿಂದಲೇ ನನಗೆ ದೊರೆಯುತ್ತಿವೆ. ನಿನ್ನ ಆಗುವಿಕೆಯ ಲಾಸ್ಯವು ನನ್ನ ಜೀವ ಚೈತನ್ಯದ ಇರುವಿಕೆಯ ಮೂಲಕ ಬೆಳಗುತ್ತಿದೆ. ಆದ್ದರಿಂದ ಈ ಜೀವಚೈತನ್ಯ ನಿನಗೆ ಪ್ರಸಾದ. ಆಗುವಿಕೆಯ ಕ್ರಿಯೆ ನನ್ನ ಪ್ರಸಾದ! ಇವೆರಡೂ ನಿನಗೂ ನನಗೂ ಏಕಪ್ರಸಾದವಲ್ಲವೇ?- ಎಂಬುದು ಇಲ್ಲಿನ ಸಾರ. ನಿರಂತರವಾದ ಆಗುವಿಕೆಯಲ್ಲಿ ಸಚರಾಚರ ವಸ್ತು, ಜೀವಗಳೆಲ್ಲವೂ ಸಂಬಂಧದಿಂದ ಒಂದೇ ಆಗಿವೆ. ಈ ಮೇಲಿನ ಎಲ್ಲಾ ಹೋಲಿಕೆಗಳಿಂದಾಗಿ ನಮಗೆ ತಿಳಿಯುವುದೇನೆಂದರೆ ಜಂಗಮವೆಂದರೆ ಸದಾ ಆಗುವಿಕೆ. ಆಗುವಿಕೆಯೆಂದರೆ ಪರಿವರ್ತನೆ. ಪರಿವರ್ತನೆಗೆ ಹಿಂದಿನ ರೂಪವೆಂಬುದಿಲ್ಲ. ಮುಂದಿನ ಗುರಿಯೆಂಬುದೂ ಇಲ್ಲ.

ಒಂದು ಸಣ್ಣ ಉದಾಹರಣೆಯ ಮೂಲಕ ಇದನ್ನು ಹೇಳುವುದಾದರೆ. ನನ್ನ ಕೈಯಲ್ಲಿ ಒಂದು ಕಾಗದದ ಚೂರು ಇದೆ ಎಂದುಕೊಳ್ಳೋಣ. ಆ ಕಾಗದಕ್ಕೆ ಬೆಂಕಿ ಇಟ್ಟರೆ, ಕಾಗದವು ಉರಿದು ಆರಿದ ನಂತರ ಅಲ್ಲಿ ಉಳಿಯುವುದು ಬೂದಿ ಮಾತ್ರ. ಈ ಬೂದಿ ಮೊದಲು ಏನಾಗಿತ್ತು? ಕಾಗದ! ಕಾಗದವು ಕಾಗದವಾಗದ ಮುಂಚೆ ಏನಾಗಿತ್ತು? ಬಿದಿರು! ಬಿದಿರು ರೂಪುಗೊಳ್ಳದಾ ಮುನ್ನ ಅದು ಪ್ರಕೃತಿಯಲ್ಲಿ ಯಾವ ರೂಪದಲ್ಲಿದ್ದಿತು? ಸಸಾರಜನಕ, ಯೂರಿಯಾ, ಮಣ್ಣು, ಸೌರಶಕ್ತಿ, ನೀರು, ಸಾರಜನಕ, ಇಂಗಾಲ, ಇತ್ಯಾದಿ, ಇತ್ಯಾದಿ! ಈಗ ನನ್ನಲ್ಲಿ ಉಳಿದಿರುವ ಬೂದಿಯು ಸಹ ಸಸಾರಜನಕ, ಇಂಗಾಲ, ಇತ್ಯಾದಿ, ಮೂಲಧಾತುಗಳಾಗಿ ಬದಲಾಗುವ ಸಂಭವನೀಯತೆ ಇದ್ದೇ ಇರುತ್ತದೆ. ಒಂದು ವೇಳೆ ಕಾಗದಕ್ಕೆ ಬೆಂಕಿ ತಾಗಿಸದಿದ್ದರೂ ಅದು ಪ್ರಕೃತಿಯಲ್ಲಿ ಮಂದದಹನ ಕ್ರಿಯೆಯ ಮೂಲಕ ಮೂಲಧಾತುಗಳಾಗಿ ಪ್ರಕೃತಿಯಲ್ಲಿ ಬದಲಾಗಲೇ ಬೇಕಾಗಿರುತ್ತದೆ. ಆಗುವಿಕೆ ಎಂದರೆ ಇಲ್ಲಿ ಬದಲಾಗುವಿಕೆ ಎಂದಾಗುತ್ತದೆ. ಹಾಗಾದರೆ ದೇಹ ರೂಪ ಜೀವವಾಗಿರುವ ಈ ನನ್ನ ಕಾಯವೂ ಒಂದಲ್ಲಾ ಒಂದು ದಿನ ಇಲ್ಲಿ ನೆಲ ಸೇರಿ ಕೊಳೆಯಲೇ ಬೇಕಲ್ಲವೇ? ನನ್ನ ರಕ್ತ, ಮೂಳೆ, ಮಾಂಸಗಳು ಮೂಲಧಾತುಗಳನ್ನು ಸೇರಲೇ ಬೇಕಲ್ಲವೇ?… ಆ ಮೂಲಧಾತುಗಳು ಮತ್ತಾವುದೋ ಸಸ್ಯಕ್ಕೆ ಸಾರವಾಗಿ, ಅದು ಬೆಳೆದು ನಂತರ ಮತ್ತೊಂದು ಜೀವಿಯ ಹುಟ್ಟುವಿಕೆಗೋ, ಬದುಕುವಿಕೆಗೋ ಆಹಾರ ಅಥವಾ ಆಧಾರವಾಗಲೇ ಬೇಕಲ್ಲವೇ?… ಹೀಗೆ ಜಂಗಮ ಎಂದರೆ ಸದಾ ಬದಲಾಗುವಿಕೆ. ಬದಲಾಗುವಿಕೆಯು ಪೂರ್ಣವಾಗಿ ಹಿಂದಿನ ಸ್ಥಿತಿಯಿಂದ ರೂಪಾಂತರ ಪಡೆದಿರುತ್ತದೆ. ಹಾಗೆಯೇ ಮುಂದೆ ಅದಕ್ಕೆ ಯಾವುದೇ ಗುರಿಯಿಲ್ಲ. ಏಕೆಂದರೆ ಯಾವುದಾದರೂ ಒಂದು ವಸ್ತುವಿಲ್ಲಿ ಮತ್ತೊಂದು ಏನಾದರೂ ವಸ್ತುವಾಗಿ ಬದಲಾಗಬಹುದು. ಆದ್ದರಿಂದ-

ಜನನವಿಲ್ಲದ ಜನಿತನು ನೀನು ನೋಡಯ್ಯಾ,
ಜನಿಯಿಸಿ ಸಂಸಾರವನರಿಯದ ನಿರ್ವಿಕಾರಿ ನೀನು ನೋಡಯ್ಯಾ,
ಭವಬಂಧನಗಳಿಲ್ಲದ ನಿತ್ಯನಿಜತತ್ವವು ನೀನು ನೋಡಯ್ಯಾ… (ಬಸವಣ್ಣ)
ಪಂಚಭೂತ ಸಂಗದಿಂದ ಜ್ಯೋತಿಯಾಯಿತ್ತು.
ಪಂಚಭೂತ ಸಂಗದಿಂದ ಕರ್ಪುರವಾಯಿತ್ತು.
ಈ ಎರಡರ ಸಂಗವೇನಾಯಿತ್ತು ಹೇಳಾ ವಾಙ್ಮನಾತೀತ ಗುಹೇಶ್ವರಾ? (ಅಲ್ಲಮಪ್ರಭು)

ಸದಾ ಆಗುವಿಕೆಯ ಜಂಗಮ ಪ್ರಜ್ಞೆಯೊಳಗೆ ನಾನು ಮಾಡಿಸುತ್ತೇನೆ ಎಂಬುವವನಾರೂ ಇಲ್ಲ. ನಾನು ಮಾಡಿಕೊಳ್ಳುತ್ತೇನೆಂಬ ಕರ್ಮವಿಲ್ಲ. ಜನನವೂ ಇಲ್ಲ, ಮರಣವೂ ಇಲ್ಲ. ಕೇವಲ ಪರಿವರ್ತನೆ ಮಾತ್ರ. ಪರಿವರ್ತನೆ ಮುಕ್ತಾಯವೂ ಅಲ್ಲ, ಪ್ರಾರಂಭವೂ ಅಲ್ಲ. ಮಧ್ಯಸ್ಥವೂ ಅಲ್ಲ. ಹಿಂದಣ ಸ್ಥಿತಿಯೆಂಬುದು ಹಿಂದೆಯೇ ಹೋಯಿತು. ಮುಂದಣದಲ್ಲಿ ಲಯವೆಂಬ ಬಿಡುಗಡೆಯೂ ಇಲ್ಲ. ಈ ಆಗುವಿಕೆಯನ್ನು ಬಿಚ್ಚಿ ಬೇರೆ ಮಾಡಲು ಸಾಧ್ಯವಿಲ್ಲ. ಬೆರಸಿ ಒಂದಾಗಿಸಲೂ ಸಾಧ್ಯವಿಲ್ಲ.

ಕರ್ತೃತ್ವವಿಲ್ಲಾಗಿ ಕರ್ಮವಿಲ್ಲ, ಕರ್ಮವಿಲ್ಲಾಗಿ ಜನನವಿಲ್ಲ,
ಜನನವಿಲ್ಲಾಗಿ ದೇಹವಿಲ್ಲ, ದೇಹವಿಲ್ಲಾಗಿ ಭೂತಾತ್ಮ ಪವಿತ್ರ
ಕರಣಾದಿ ಗುಣಂಗಳು ಮುನ್ನಿಲ್ಲ, ಹಿಂದಣ ಸ್ಥಿತಿಯಿಲ್ಲ, ಮುಂದಣ ಲಯವಿಲ್ಲ,
ಆದಿ ಮಧ್ಯ ಅವಸಾನವಿಲ್ಲ,
ಬಿಚ್ಚಿ ಬೇರಿಲ್ಲ, ಬೆರಸಿವೊಂದಿಲ್ಲ, ಉಪಮಾತೀತನೆಂಬೆ.
ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ನುಡಿಗಡಣವಿಲ್ಲದ ಮುಗ್ಧನು. (ಚೆನ್ನಬಸವಣ್ಣ)

ಕೊನೆಯದಾಗಿ ಬಂಧುಗಳೇ, ಜಂಗಮತ್ವವೆಂಬುದು ಶರಣರಲ್ಲಿ ಉತ್ಕೃಷ್ಟವಾದ ಅನಂತವಿಶ್ವಪ್ರಜ್ಞೆ ಎಂಬುದನ್ನು ಇಲ್ಲಿಯ ತನಕವೂ ತಿಳಿದುಕೊಂಡೆವು. ನಮ್ಮ ಸಾಮಾನ್ಯಜ್ಞಾನದ ಮಿತಿಯೊಳಗೆ ‘ನಾನು ಹುಟ್ಟಿದೆ’, ‘ನಾನು ಸತ್ತೆ’ (ಜನನ * ಮರಣ) ಎಂಬೆರಡು ಬಿಂದುಗಳಲ್ಲಿ ಸಂಕುಚಿತವಾಗಿ ನಾವು ನಮ್ಮನ್ನು ಗ್ರಹಿಸಿ ಅಲ್ಪವಾಗಿ ಬಿಡುತ್ತೇವೆ. ಆದರೆ ಶರಣರು ತಮ್ಮನ್ನು ಅನಂತವಾದ ಪ್ರಜ್ಞೆಯ ಆಗುವಿಕೆಯಲ್ಲಿ ಗ್ರಹಿಸಿ, ಅಲ್ಲಿ ಯಾವುದೇ ವಸ್ತುವಿಗಾಗಲಿ, ಜೀವಿಗಾಗಲಿ ಜನನ-ಮರಣವೆಂಬುದೇ ಇಲ್ಲ ಎಂದು ಕಂಡುಕೊಂಡರು. ಅಲ್ಲಿ ಕೇವಲ ಬದಲಾವಣೆ ಮಾತ್ರ ಇರುತ್ತದೆ. ಆ ಬದಲಾವಣೆ ಧರ್ಮಾತೀತ, ದೈವಾತೀತ, ಜಾತ್ಯಾತೀತ, ಪಕ್ಷಾತೀತ, ಪ್ರಶ್ನಾತೀತ, ಉಪಮಾತೀತ, ವಾಚ್ಯಾತೀತವಾದ ಪ್ರಕ್ರಿಯೆ ಎಂದು ತೋರಿಸಿ, ಸಕಲ ಜೀವಿಗಳಲ್ಲಿ ದಯೆ, ಸರ್ವ ಮಾನವರಲ್ಲಿ ಸಮಾನತೆ, ನಿಸರ್ಗದ ಸತ್ಯಕ್ಕೆ ಶರಣೆಂದು ಶರಣಾಗಿ ಬದುಕನ್ನು ಉತ್ಕೃಷ್ಟವಾದುದೆಂದು ತೋರಿಸಿಕೊಟ್ಟರು. ಅವರ ವಿಶ್ವಪ್ರಜ್ಞೆಯನ್ನು ನಾವು ಮರೆತು, ಅಲ್ಪಜ್ಞಾನದಲ್ಲಿ ಬಸವಣ್ಣ ಮತ್ತು ಅಲ್ಲಮಾದಿ ಶರಣರನ್ನು ಮೂಸಿ ಮೂಸಿ ನೋಡಿ ವಿಫಲರಾಗುತ್ತಿದ್ದೇವೆ. ಅತ್ಯುತ್ಕೃಷ್ಟವಾದ ಶರಣರ ಬದುಕಿನ ಘಮಲನ್ನು ದುರ್ನಾತ ತುಂಬಿರುವ ನಮ್ಮ ನಾಸಿಕಾದಿ ಕರಣಗಳು ಗ್ರಹಿಸಬಲ್ಲವೇ? ನೀವೇ ಹೇಳಿ!

ಜಂಗಮತ್ವಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಇನ್ನೂ ಮುಂದುವರೆಯುತ್ತದೆ. ಇದು ಇಲ್ಲಿಗೆ ನಿಲ್ಲದು. ಆದರೆ ಉಳಿದ ಮುಂದಿನ ಭಾಗ ಇಂದ್ರಿಯಾತೀತವಾದದ್ದು. ಅಂದರೆ ಅನುಭಾವದ ಪ್ರಜ್ಞೆಗೆ ಅರಿವಾಗುವಂತಹದ್ದು. ಅದು ಪರಿಪೂರ್ಣ ನಿರ್ವಯಲ ಭಾವ!! ನಿರ್ವಯಲು ವಾಕ್ ಮನೋತೀತವಾದ್ದರಿಂದ ಇದನ್ನು ಶಬ್ದಾತೀತ, ಶಬ್ದ ಮುಗ್ಧತೆ ಎಂದು ಕರೆದರು… ಯಾಕೆಂದರೆ ಭಾಷೆ ನಿರ್ವಯಲನ್ನು ತಿಳಿಯದು. ಇಲ್ಲಿ ಹೇಳಲಿಕ್ಕಾಗಲಿ, ಕೇಳಲಿಕ್ಕಾಗಲಿ ಮಾತುಗಳು ಇಲ್ಲ. ನಡೆಯುವ ಆಸ್ಥೆಯುಳ್ಳ ಮಹಾಪ್ರಾಜ್ಞರಿಗೆ ಸದಾ ತೆರೆದೇ ಇರುವ ಹಾದಿ ಮಾತ್ರ ಇದೆ.

ಜಂಗಮ ಜಂಗಮವೆಂದರೆ ಬಾಯಿಲೆಕ್ಕವೆ ಜಂಗಮ?
ಜಂಗಮ ಜಂಗಮವೆಂದರೆ ಉಪಾಧಿಕನೆ ಜಂಗಮ?
ಜಂಗಮ ಜಂಗಮವೆಂಬುದೇನೊ ಬೋಧಕನೆ ಜಂಗಮ?
ಜಂಗಮ ಜಂಗಮವೆಂಬುದೇನೊ ಆಶ್ರಿತನೆ ಜಂಗಮ?
ಜಂಗಮ ಜಂಗಮವೆಂಬುದೇನೊ ಕಾರ್ಯಕಾರಣನೆ ಜಂಗಮ?
ಜಂಗಮ ಜಂಗಮವೆಂಬುದೇನೊ ಸ್ತ್ರೀಲಂಪಟನೆ ಜಂಗಮ?
ಈ ಷಡ್ಗುಣದಿಚ್ಛುಕರ ಜಂಗಮವೆಂಬೆನೆ? ಎನ್ನೆನು.
ಈ ಪಾತಕದ ನುಡಿಯ ಕೇಳಲಾಗದು.
ಜಂಗಮವೆಂತಹನೆಂದರೆ:
ನಿರವಯ ಜಂಗಮ, ನಿರುಪಾಧಿಕ ಜಂಗಮ
ನಿರ್ಬೋಧಕ ಜಂಗಮ, ನಿರಾಶ್ರಿತ ಜಂಗಮ
ನಿಃಕಾರಣ ಜಂಗಮ, ನಿರ್ಲಂಪಟ ಜಂಗಮ_
ಇಂತಪ್ಪುದೆ ಕಾರಣವಾಗಿ ಪ್ರಭುದೇವರಿಗೆ ಶರಣೆಂದು
ಬದುಕಿದ ಬಸವಣ್ಣ.
ಅವರಿಬ್ಬರ ಒಕ್ಕುದ ಕೊಂಡು, ನಾನು ಬದುಕಿದೆನು ಕಾಣಾ
ಕೂಡಲಚೆನ್ನಸಂಗಮದೇವಾ (ಚೆನ್ನಬಸವಣ್ಣ)

ಇಲ್ಲಿಗೆ ‘ನಾನು ಯಾರು?’ ಎಂಬ ಪ್ರಶ್ನೆ ಮುಗಿಯಿತು.

ಶರಣು ಶರಣಾರ್ಥಿ

Previous post ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
Next post ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ

Related Posts

ಕರ್ತಾರನ ಕಮ್ಮಟ
Share:
Articles

ಕರ್ತಾರನ ಕಮ್ಮಟ

July 5, 2019 ಮಹಾದೇವ ಹಡಪದ
ವಸುಧೆಯೊಳು ಹೆಸರಾಂತ ಸೊನ್ನಲಿಗೆ ಎಂಬ ಊರಿನಲ್ಲಿ ಮುದ್ದಣ್ಣ ಸುಗ್ಗವ್ವೆ ಎಂಬ ಗಂಡ ಹೆಂಡತಿಗೆ ಮುದ್ದಾದ ಇಬ್ಬರು ಮಕ್ಕಳಿದ್ದರು. ದೊಡ್ಡವನು ಬೊಮ್ಮಣ್ಣ ಸಣ್ಣವನು ಧೂಳಯ್ಯ....
ಬಯಲಾದ ಬಸವಯೋಗಿಗಳು
Share:
Articles

ಬಯಲಾದ ಬಸವಯೋಗಿಗಳು

April 3, 2019 ಕೆ.ಆರ್ ಮಂಗಳಾ
“ಅವರು ಗುಣಮುಖರಾಗೋದು ಯಾವಾಗ?” ಮಾತಾಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕೇಳುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಸಣ್ಣ ಭರವಸೆ. ನನ್ನ ನೇರ...

Comments 31

  1. CA.Ramesha gowda m y
    Aug 2, 2020 Reply

    ನಾನು ಯಾರು ಲೆಖನಗಳ ಸರಮಾಲೆ ತುಂಬ ವಿಸ್ತೃತವಾದ ಅದ್ಯನ ಚಿಂತನೆಗಳಿಂದ ಮೂಡಿಬಂದ ಪ್ರಬುದ್ಧ ಚಿಂತನೆಗಳ ಜ್ಞಾನ ವರ್ಧಕಗಳು
    ನಿಮ್ಮ ಅದ್ಯಯನ ಚಿಂತನೆಗಳಿಗೆ ಶರಣು ಶರಣಾರ್ಥಿಗಳು
    Written using http://bit.ly/sirigannada

  2. ಮನೋಹರ್ ಆಚಾರ್
    Aug 3, 2020 Reply

    ಲೇಖನ ಓದಿದೆ. ಕೊನೆಯ ಕಂತು ಬಹಳ ಸೊಗಸಾಗಿ ಮೂಡಿದೆ. ನಿಮಗೆ ಶುಭವಾಗಲಿ.

  3. Dayashankara R
    Aug 3, 2020 Reply

    ಆಳ ನೋಟಗಳಿಗೆ ಎಳೆದೊಯ್ಯುವ ಲೇಖನ ಮುಗಿಯಲೇ ಬಾರದು ಎನಿಸುತ್ತಿತ್ತು, ಇನ್ನೂ ಮತ್ತೂ ನೀವು ಮಾತಾಡುತ್ತಲೇ ಇರಬೇಕು, ನಾನು ಓದುತ್ತಲೇ ಹೋಗಬೇಕೆನಿಸಿತು. ನಾನು ಯಾರು ಲೇಖನಗಳು ಒಂದಕ್ಕಿಂತ ಒಂದು ಮಿಗಿಲಾಗಿವೆ… ನಿಲ್ಲಿಸಬೇಡಿ, ಮತ್ತೆ ಬರೆಯಿರಿ.

  4. ಪೆರೂರು ಜಾರು, ಉಡುಪಿ
    Aug 4, 2020 Reply

    ನಾನು ಎನ್ನುವುದು ಈ ಜಗತ್ತಿನ 107 ಮೂಲವಸ್ತುಗಳ ಭಾಗ. ಮೂಲವಸ್ತುಗಳಿಂದಾದ ನಾನು ಮೂಲವಸ್ತುಗಳ ಬದಲಾವಣೆಯಿಂದ ಮಗುವಾಗಿ ಜನಿಸುತ್ತೇನೆ. ಸಾವಿನಲ್ಲಿ ಮತ್ತೆ ಮೂಲವಸ್ತುಗಳೊಡನೆ ಬೆರೆತು ಹೋಗುತ್ತೇನೆ. ಆದ್ದರಿಂದ ನಾನು ಯಾರು ಎನ್ನುವುದು ಈ ಪ್ರಕೃತಿಯ ಮೂಲವಸ್ತುಗಳೇ ಹೊರತು ಬೇರೇನಲ್ಲ. ನನ್ನ ಕಾಯ ಏನೇ ಕಾಯಕ ಮಾಡುವುದಿದ್ದರೂ ನನ್ನ ಕಾಯದೊಳಗಿರುವ ಕೋಟಿಗಟ್ಟಲೆ ಜೀವಾಣುಗಳು ಪ್ರತಿಯೊಂದೂ ತಮ್ಮ ಕಾಯಕ ಮಾಡುತ್ತಿರುತ್ತವೆ. ಅವು ಕಾಯಕ ಮಾಡದಿದ್ದರೆ ನಾವು ಕೊರೊನಾಕ್ಕೋ, ಮತ್ತಾವುದಕ್ಕೋ ಪಕ್ಕಾಗುತ್ತೇವೆ. ಆದ್ದರಿಂದ ಕಾಯಕವೆನ್ನುವುದು ಎದುರಾಗಿ ಕಾಣುವ ನಾನಾದರೂ ನಿಜಕ್ಕೂ ನನ್ನ ದೇಹದೊಳಗಿರುವ ಜೀವಾಣುಗಳು. ಆ ಜೀವಾಣುಗಳೆಂದರೆ ಈ ಪ್ರಕೃತಿಯಲ್ಲಿರುವ ಮೂಲವಸ್ತುಗಳು. ಆದ್ದರಿಂದ ಪ್ರಕೃತಿಯೇ ನಾನು. ಲೇಖನ ಚೆನ್ನಾಗಿ ಬಂದಿದೆ. ಪ್ರತಿ ತಿಂಗಳೂ ನಾನು ತಪ್ಪದೆ ಕುತೂಹಲದಿಂದ ನಿರೀಕ್ಷಿಸಿದ್ದೇನೆ, ಓದಿದ್ದೇನೆ.

  5. ಈರಣ್ಣ ಕಮ್ಮಾರ, ಶಿಕ್ಷಕರು
    Aug 6, 2020 Reply

    ಲಿಂಗಾಯತ ದರ್ಶನ ಪತ್ರಿಕೆಯಲ್ಲಿಯೂ ‘ನಾನು ಯಾರು ಎಂಬ ಆಳ ನಿರಾಳ’ ಲೇಖನ ಮಾಲೆಯನ್ನು ಪ್ರಕಟಿಸುತ್ತಿದ್ದಾರೆ. ನಾನು ಮತ್ತು ನನ್ನ ಮನೆಯವರು ಒಟ್ಟಿಗೆ ಓದುತ್ತಿದ್ದೆವು… ಎಲ್ಲ ಲೇಖನಗಳಂತಿಲ್ಲ ಇದು, ನಿಮ್ಮೊಂದಿಗೆ ನಮ್ಮನ್ನೂ ಅನುಭಾವದ ಆಳಕ್ಕೆ ಒಯ್ಯುತ್ತೀರಿ. ಇಂಥ ಬರಹಗಳನ್ನು ನಾನು ಓದಿರಲಿಲ್ಲ. ಬಹಳ ಆನಂದವಾಯಿತು, ಕಣ್ತುಂಬಿ ಬಂತು ತಾಯಿ.

  6. Muttanna Kanti
    Aug 9, 2020 Reply

    ನಾನು ಯಾರು? ಐದನೆಯ ಭಾಗವಂತೂ ಲಿಂಗಪೂಜೆ ಮಾಡಿದಂತೆ, ನಮ್ಮನ್ನು ನಿಜದ ಕಡೆಗೆ ಕರೆದೊಯ್ಯುವಂತೆ ಇದೆ. ಆದರೆ ದಿಢೀರೆಂದು ನಿಲ್ಲಿಸಿದ್ದು ನನಗೆ ಬಹಳ ಬೇಸರವುಂಟು ಮಾಡಿತು. ಈ ಪ್ರಯಾಣದಲ್ಲಿ ನೀವು ಅವಸರ ಮಾಡಿದಿರೇನೋ….. ನಮ್ಮ ವಿಷಯದಲ್ಲಿ ದಯವಿಟ್ಟು ಸಹನೆ ತೋರಿ ಕರೆದೊಯ್ಯಬೇಕು. ನಿಮ್ಮ ಮಾರ್ಗದರ್ಶಿ ನುಡಿಗಳು ಈ ಹಾದಿಯಲ್ಲಿ ಓಯಾಸಿಸ್ ತರಹ ನನಗೆ ಭಾಸವಾಗುತ್ತಿತ್ತು. ಅಕ್ಕಾ, ಬಸವಣ್ಣನವರನ್ನು, ಇತರ ಶರಣರನ್ನು ಹೊಸದಾಗಿ ತೋರಿಸಿದ್ದೀರಿ. ದಯವಿಟ್ಟು ಇದೇ ಹಾದಿಯಲ್ಲಿ ಬರವಣಿಗೆ ಮುಂದುವರಿಸಬೇಕೆಂದು ಸೆರಗೊಡ್ಡಿ ಕೇಳಿಕೊಳ್ಳುತ್ತಿದ್ದೇನೆ. ನನ್ನ ಕೋರಿಕೆ ಮನ್ನಿಸುವಿರೆಂದು ನಂಬಿದ್ದೇನೆ.

  7. ಗುರುಪಾದಸ್ವಾಮಿ
    Aug 11, 2020 Reply

    ಈ ಬರವಣಿಗೆಗೆ ಮೆಚ್ಚುಗೆ ಸಲ್ಲಿಸದೆ ಇರಲು ಸಾಧ್ಯವೇ ಇಲ್ಲ… ಇಂತಹ ಸ್ಪಷ್ಟ ಮಾತುಗಳಲ್ಲಿಯ ವಿಶ್ಲೇಷಣೆಯನ್ನು ಮೊದಲ ಬಾರಿ ಓದಿದೆ. ವೈಚಾರಿಕತೆ ಇಲ್ಲಿಯೇ ಇದೆ. ನಮ್ಮಿಂದ ಮುಚ್ಚಿಡಲ್ಪಟ್ಟ ವಿದ್ಯೆಯ ಸಾರವನ್ನು 12ನೆಯ ಶತಮಾನದಲ್ಲಿಯೇ ನಮ್ಮ ಮುಂದೆ ತೆರೆದಿಡಲಾಗಿದೆ… ಎಂತಹ ವೈಜ್ಞಾನಿಕ ವಿಶ್ಲೇಷಣೆ! ಲೇಖಕರಿಗೆ ಹಾಗೂ ಇದನ್ನು ಓದಲು ತಲುಪಿಸಿದ ಶರಣರಿಗೆ ನನ್ನ ನಮನಗಳು.

  8. Padmalaya
    Aug 12, 2020 Reply

    ಎಲ್ಲಿಯ ತನಕ ಪರಾಚೈತನ್ಯ, ಚಿದ್ ಚೈತನ್ಯ ಇತ್ಯಾದಿ ಉಪನಿಷತ್ ಪ್ರಣೀತ ಸಿದ್ದಾಂತಗಳ ಮೂಲಕ ವಚನ ಸಾಹಿತ್ಯವನ್ನ ಗ್ರಹಿಸಲಾಗುತ್ತೋ…ಅಲ್ಲಿಯ ತನಕ ತಾನು ತನ್ನನ್ನ ಬದಲಾಯಿಸಿಕೊಳ್ಳಬೇಕೆಂಬ ಸಣ್ಣ ಊಹೆ ಕೂಡ ಬರುವುದಿಲ್ಲ. ಬಸವಣ್ಣನವರು ರೂಪಿಸಿದ ಕ್ರಾಂತಿ ಸತ್ತುಹೋಗಲು ಇಷ್ಟೇ ಸಾಕಲ್ಲವೇ?… ಕ್ರಾಂತಿಯ ಜಾಗದಲ್ಲಿ ಹುರುಳಿಲ್ಲದ ಆಧ್ಯಾತ್ಮಿಕ ಕಲ್ಪನೆಗಳು ಸೇರಿಕೊಂಡು ಬಸವ ಪಥ ವಿರೂಪಗೊಂಡಿತೆನ್ನಬಹುದು. ನಿಮ್ಮ ಬರಹಗಳು ನಿಜ ಬಸವ ನೆಲೆಯಡಿಗೆ ತೋರುದಾರಿಯನ್ನಂತೂ ತೋರಿಸುತ್ತವೆ. ಬಸವಪಥ ನಡೆಕಾರರಿಲ್ಲದೆ ಸೊರಗಿಹೋಗಿದೆ. ನಿಮ್ಮ ಪ್ರಯತ್ನ ಬಸವ ಪಥದಲ್ಲಿ ಒಂದು ಹೆಜ್ಜೆ ಗುರುತನ್ನ ಮೂಡಿಸಿದೆ…

  9. Pro. Shivanna
    Aug 15, 2020 Reply

    Very much engrossing and soul searching piece. As mentioned earlier you have really become a very matured writer and Kuddos for the same.
    If I am not wrong still ” Yaru Nanu” remains mystery and it’s difficult to answer!
    After this if you address contemporary issues with the backdrop of this article certainly would be great! Enjoyed reading and wish for many more.

  10. ಜಿ.ಎಚ್. ಜ್ಯೋತಿಲಿಂಗಪ್ಪ, ಶಿವನಕೆರೆ
    Aug 15, 2020 Reply

    ಮೊನ್ನೆ ನಟರಾಜ ಬೂದಾಳು ಅವರು ಓದುವಿನ ರಾಜಕೀಯ.. ಎಂಬ ವಿಷಯ ಮಾತಾಡುತ್ತಾ… ಗುರುಮಾರ್ಗದಲ್ಲಿ ವಚನಗಳ ಓದನ್ನು ಸೂಚಿಸಿದಾಗ ನಿಮ್ಮ ಲೇಖನ ನೆನಪಿಗೆ ಬಂದು ಮತ್ತೊಮ್ಮೆ ಓದಿದೆ.
    ವಚನಗಳ ಓದಿಗೆ ಬೇಕಾದ ಗುರು ಮಾರ್ಗದ ಶಿಸ್ತು, ಸಾಧಕ ಮಾರ್ಗ, ಪಾದೋದಕ, ಪ್ರಸಾದಗಳ ತಿಳಿವು, ತನ್ನ ತಾನರಿಯುವ ಪರಿ… ಇತ್ಯಾದಿಗಳನ್ನು ವಚನಗಳ ಹಿನ್ನೆಲೆಯಲ್ಲಿ ನೋಡಿರುವುದು ನಿಜಕ್ಕೂ ಒಂದು ವಿಶೇಷ ಸಂವೇದನಾ ಓದು. ಯಾವುದು ಕಾಯ ಎಂಬ ಪ್ರಶ್ನೆಯನ್ನು ಬಹು ಸೂಕ್ಷ್ಮವಾಗಿ ವಚನಗಳ ಆಧಾರದ ಮೇಲೆ ನೋಡಿರುವುದು ವಿಶಿಷ್ಟ.
    ಇದು ನಾನಲ್ಲ..ಇದು ನಾನಲ್ಲ…ಎಂದು ಹೇಳುತ್ತಾ… ಯಾವುದು ನಾನು ಎಂಬ ಕುತೂಹಲ ಕೆರಳಿಸಿ ಪ್ರಕೃತಿ ರೂಪದ ಕಡೆ ನಮ್ಮನ್ನು ಸೆಳೆದು ಜಂಗಮದ ನಿಜ ನೆಲೆಯಾದ ಬಯಲು, ಶೂನ್ಯ ಅಥವಾ ನಿರಂತರ ಚಲನೆಯಲಿ ಸಾವಿಲ್ಲದ ಜಂಗಮನನ್ನು ಅದ್ಭುತವಾಗಿ ಕಾಣಿಸಿ, ನಾನು ಯಾರು.. ಎಂಬ ನಿಗೂಢ ಪರಿಚಯಿಸಿದ ನಿಮಗೆ ಅಭಿನಂದನೆಗಳು..
    ಒಂದು ಪೂರಕ..
    ಈ
    ಮನೆಗೆ
    ಗೋಡೆ ಇದೆ
    ಕಿಟಕಿ ಬಾಗಿಲುಗಳೂ ಇವೆ
    ನಡುವಿನ ಬಯಲಲಿ ವಾಸ
    ಖಾಲಿ ಆಗು.

  11. Bharath Jodettu
    Aug 17, 2020 Reply

    ಹತ್ತಾರು ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಕಾಡುತ್ತಿದ್ದ ಪ್ರಶ್ನೆಗಳಿಗೆ ನಿಮ್ಮ ಲೇಖನದಲ್ಲಿ ಉತ್ತರ ದೊರೆತವು. ಅದ್ಭುತವಾದ ಬರಹ. ಸ್ಪಷ್ಟವಾದ, ವೈಚಾರಿಕ ಹಾಗೂ ಅತ್ಯಾಧುನಿಕ ಎನಿಸುವ ಚಿಂತನೆಗಳನ್ನು ಶರಣರು ನೀಡಿದರೇ ಎನ್ನುವ ಹೆಮ್ಮೆ, ಗೌರವ, ಭಕ್ತಿ ಒಟ್ಟೊಟ್ಟಿಗೆ ಮೂಡಿದವು. ಜಂಗಮನಾಗುವುದು ಹೇಗೆ? ಶರಣನಾಗುವುದು ಹೇಗೆ? ಬಿಡಿಬಿಡಿಸಿ ಬರೆಯಲು ಆದೀತೆ? ವಚನಗಳ ಲೋಕಕ್ಕೆ ಬೆಳಕು ತೋರುವಂತಿರುವ ವಿಚಾರಗಳು ಮತ್ತೆ ಮತ್ತೆ ಮತ್ತೊಮ್ಮೆ ಓದಿಸಿಕೊಳ್ಳುತ್ತವೆ.

  12. SIDDHALINGAIAH TUMKUR
    Aug 17, 2020 Reply

    ನಾನು ಯಾರು? ಇಲ್ಲದ ಮುಂದಿನ ತಿಂಗಳ ಬಯಲು ಬ್ಲಾಗನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತಿದೆ… ಈ ಪ್ರಯಾಣವನ್ನು ವಿಸ್ತರಿಸಲು ಸಾಧ್ಯವಿಲ್ಲವೇ? ದಯವಿಟ್ಟು ಯೋಚಿಸಿ.

  13. ಜಯಾ ಹೆಚ್.ವಿ
    Aug 20, 2020 Reply

    ಅಂಗಾಂಗಗಳಿರುವ ಈ ದೇಹವೇ ನಾನೋ ಅಥವಾ ಅದಕ್ಕೂ ಅತೀತವಾದದ್ದು ಏನಾದರೂ ಇದೆಯಾ?
    ಬಸವಯೋಗಿ ಸಿದ್ಧರಾಮೇಶ್ವರರು ಹೇಳುತ್ತಾರೆ: “ಕಾಯ ಮುನ್ನವೊ, ಕಾಯದಲ್ಲಿಪ್ಪ ಮನ ಮುನ್ನವೊ? ಮನ ಮುನ್ನವೊ, ಮನದಲ್ಲಿಪ್ಪ ಚೈತನ್ಯ ಮುನ್ನವೊ? ಚೈತನ್ಯ ಮುನ್ನವೊ, ಚೈತನ್ಯಾತ್ಮಕ ಮಾಯೆ ಮುನ್ನವೊ? ಅವು ಮುನ್ನವಲ್ಲ, ಮುನ್ನವಲ್ಲ ; ನಿನ್ನ ನಿರಾಳ ನಿಜದ ನಿರ್ವಯಲಿನ ಶೂನ್ಯಾಶೂನ್ಯವೆ ಮುನ್ನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.”
    ಹೀಗೆ ನಾನು ಯಾರು ಎಂಬ ಆಳ ನಿರಾಳವನ್ನು 5 ಹಂತಗಳಲ್ಲಿ ಸುಧೀರ್ಘವಾದ ಲೇಖನದ ಮೂಲಕ ವಿವರಣೆ ನೀಡಿ ಆಧ್ಯಾತ್ಮದ ಹಸಿವೆಯನ್ನು ಹಿಂಗಿಸಿದ ಮಂಗಳಾ ಅವರಿಗೆ ಶರಣಾರ್ಥಿಗಳು.

  14. ಮಾತೆ ವಾಗ್ದೇವಿ
    Aug 20, 2020 Reply

    ನಾಶವಿಲ್ಲದ ಆದಿ ಅನಂತ ಶಕ್ತಿಯೇ ನಾನು, ಅದನ್ನು ವಿಸ್ತರಿಸುವಲ್ಲಿ ವಚನಗಳ ಬೆಂಬಳಿವಿಡಿದು ಹೋಗಿದ್ದು ಆಳ, ಗಂಭೀರ.

  15. Girish Babu N
    Aug 20, 2020 Reply

    ನಾನು ಯಾರು ಎಂಬ ಆಳ ನಿರಾಳ ಭಾಗ-4 ನನಗೆ ಒಂದು ವಾಟ್ಸಾಪ್ ಗುಂಪಿನಲ್ಲಿ ಸಿಕ್ಕಿತು. ಅದನ್ನು ಓದುತ್ತಾ ಹೋದಂತೆಲ್ಲ ಕುತೂಹಲ ಹೆಚ್ಚಾಗಿ ಉಳಿದ ಭಾಗವನ್ನು ಓದಲೇಬೇಕೆಂದು “ಬಯಲಿ”ಗೆ ನುಗ್ಗಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ನಾನು ಯಾರು ಎಂಬ ಯಕ್ಷ ಪ್ರಶ್ನೆ ಕಾಡುತ್ತಲೇ ಇರುತ್ತದೆ. ನಮ್ಮ ಇರುವನ್ನು ಶಾರೀರಿಕ ಮಾನಸಿಕ ಬೌದ್ಧಿಕ ಮತ್ತು ಆತ್ಮ ಈ ನಾಲ್ಕು ಹಂತಗಳಲ್ಲಿ ಸಹಜವಾಗಿ ಗುರುತಿಸಿಕೊಳ್ಳುತ್ತೇವೆ. ಸಹಜವಾಗಿ ಈ ಹಂತಗಳನ್ನು ಅನೇಕ ಸಂದರ್ಭಗಳಲ್ಲಿ ನಾವು ಅನುಭವಿಸುತ್ತೇವೆ. ಇತ್ತ ಸಾಹಿತ್ಯ ವಿದ್ಯಾರ್ಥಿಯಲ್ಲದ ಮತ್ತು ಉತ್ತರ ಕರ್ನಾಟಕದ ಬಸವಣ್ಣನ ವಿಷಯ ತಿಳಿದವನು ಅಲ್ಲದ ನನಗೆ ಮಂಗಳ ಅವರ ನಾನು ಯಾರು ನಾಲ್ಕು ಭಾಗಗಳನ್ನು ಒಟ್ಟಿಗೆ ನೋಡುವ ಸದಾವಕಾಶ ಲಭಿಸಿತು. ಪ್ರಕೃತಿಯೊಂದಿಗೆ ಸಾಕಷ್ಟು ತಾದ್ಯಾತ್ಮ ಅನುಭವದ ಅವಕಾಶ ಇದ್ದರೂ ಅದನ್ನು ಪದಗಳಲ್ಲಿ ಹೇಳುವುದು ಸುಲಭದ ವಿಷಯವಲ್ಲ. ಈ ಬೃಹತ್ ಬ್ರಹ್ಮಾಂಡದ ಒಂದು ಸಣ್ಣ ಬಿಂದುವೂ ಅಲ್ಲದ ನಮ್ಮ ಇರುವಿಕೆಯ ಬಗ್ಗೆ ಮಾತನಾಡುವುದು ಬಹಳ ಕಷ್ಟ. ಈಗ 5ನೇ ಭಾಗ ಓದಿದ ನಂತರ ಮಂಗಳ ಅವರು ಸಾಕಷ್ಟು ವೈಜ್ಞಾನಿಕವಾಗಿ ಮತ್ತು ಸಹಜವಾಗಿ ಒಪ್ಪಿಗೆಯಾಗುವಂತಹ ರೀತಿಯಲ್ಲಿ ಶರಣರ ವಿಚಾರಗಳನ್ನು ಮಂಡಿಸಿದ್ದಾರೆ ಎಂಬ ಭಾವ ಮೂಡಿದೆ. ಈ ೫ ಭಾಗಗಳನ್ನು ಇನ್ನು ಕೆಲವು ಬಾರಿ ಓದಿ ಮನದಟ್ಟು ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ನನಗೆ ಅನಿಸುತ್ತದೆ. ಮಂಗಳ ಅವರಿಗೆ ಧನ್ಯವಾದಗಳು.

  16. ಪಂಚಾಕ್ಷರಿ ಹಳೇಬೀಡು
    Aug 22, 2020 Reply

    ನಾನುಯಾರು ಎಂಬ ತಮ್ಮ ಲೇಖನ ಸರಣಿ ಬಹಳ ಅರ್ಥಗರ್ಭಿತವಾಗಿ ಮೂಡಿ ಬಂದು ಅಂತರಾಳವನ್ನು ಅರಿಯುವ ಕಿಡಿಹೊತ್ತಿಸಿದೆ.
    ಶರಣುಶರಣಾರ್ಥಿಗಳು.

  17. ಸತೀಶ್ ಗವಿಮಠ
    Aug 24, 2020 Reply

    ಜನನ ಮರಣಗಳ ಪರಿವರ್ತನೆಯಲ್ಲಿ ನಾವೆಲ್ಲಿ ಇದ್ದೇವೆ ಎನ್ನುವುದನ್ನು ಇಷ್ಟು ವೈಜ್ಞಾನಿಕವಾಗಿ ಶರಣರ ಅನುಭಾವವನ್ನು ಯಾರೂ ಹೇಳಿದ್ದನ್ನು ನಾನು ಕೇಳಿಲ್ಲ. ಸ್ಫುಟವಾದ ವಿಚಾರಗಳ ಲೇಖನ ನನ್ನ ಮನಸ್ಸನ್ನು ಇನ್ನಿಲ್ಲದಂತೆ ಆಕ್ರಮಿಸಿತು. ಇಲ್ಲಿನ ಒಂದೊಂದು ವಿಚಾರಗಳು ನನ್ನ ಹೃದಯದಲ್ಲಿ ಉಳಿದು ಹೋಗುವಂತೆ ಓದಿಕೊಂಡಿದ್ದೇನೆ. ಲೇಖಕರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

  18. Veeranna Madiwalar
    Aug 24, 2020 Reply

    ನಾನು ಯಾರು? ಐದನೆ ಭಾಗವು ಮತ್ತೊಮ್ಮೆ ಎಲ್ಲ ಲೇಖನಗಳನ್ನು ಓದಲು ಪ್ರೇರೆಪಿಸಿತು. ಎಲ್ಲಾ ಲೇಖನಗಳ ಪ್ರಿಂಟ್ ತೆಗೆದಿಟ್ಟುಕೊಂಡು ಮೊದಲಿನಿಂದ ಓದಿದೆ. ಕಣ್ಣು ತೆರೆಸುವ ಮಾತುಗಳು, ಹಾಗೇ ಕೇಳುತ್ತಾ, ಓದುತ್ತಾ ಹೋಗಬೇಕೆನಿಸುವಂತೆ ಆಪ್ತವಾಗಿದೆ.

  19. Vijayakumar Honnalli
    Aug 24, 2020 Reply

    ಜಂಗಮನು ಬಯಲು ಸ್ವರೂಪನಾಗುತ್ತಾನೆಯೇ? ಹಾಗಾದರೆ ಬಯಲು ಎಂದರೆ ಅನಂತ ವಿಶ್ವವೇ? ಶರಣ ಬಯಲಾಗುವ ಕ್ರಿಯೆ ಯಾವುದು? ಭಕ್ತನಾಗುವ ಮೂಲಕ ಆರಂಭವಾಗುವ ಆಧ್ಯಾತ್ಮದ ಪ್ರಯಾಣದಲ್ಲಿ ಶರಣನಾಗಿ, ಜಂಗಮನಾಗಿ ಬಯಲಾಗುವ ಆವಸ್ಥೆಗಳ ಕುರಿತು ಬರೆಯಿರಿ. ನಿಮ್ಮಿಂದ ಉಪಕಾರವಾದ ಹಾಗಾಗುತ್ತದೆ.

  20. Shivashankarappa Yadiyal
    Aug 25, 2020 Reply

    ಇದು ಪುಸ್ತಕ ರೂಪದಲ್ಲಿದ್ದರೆ ನನಗೆ ಕಳಿಸಿಕೊಡಿ, ವಿಳಾಸ ಕಳಿಸುತ್ತೇನೆ. ಇಡಿಯಾಗಿ ಇದನ್ನು ಓದಬೇಕೆಂದುಕೊಂಡಿದ್ದೇನೆ. ನನ್ನ ಫೇಸ್ ಬುಕ್ ಸ್ನೇಹಿತರೊಬ್ಬರು ಒತ್ತಾಯದಿಂದ ಓದಿಸಿದ ಈ ಲೇಖನ ಶರಣರ ಕುರಿತಾದ ನನ್ನ ದೃಷ್ಟಿಕೋನವನ್ನು ಸಂಪೂರ್ಣ ಬದಲಾಯಿಸಿಬಿಟ್ಟಿದೆ.

  21. ಬಸವರಾಜ ಸೂಳಿಭಾವಿ
    Aug 26, 2020 Reply

    ನಾನು ಯಾರು ಎಂಬ ಲೇಖನ ಮಾಲೆ, ಪ್ರತಿಯೊಬ್ಬರೂ ತಮ್ಮನ್ನು ತಾವು ಅರಿತು, ಜೀವನದಲ್ಲಿರುವ ಗೊಂದಲಗಳಿಂದ ಹಾಗೂ ಅಸ್ಪಷ್ಟತೆಗಳಿಂದ ಹೊರಬಂದು, ನಿರಾಳತೆಯನ್ನು ಅನುಭವಿಸಲು ಅವಶ್ಯವಾಗಿ ಓದಲೇ ಬೇಕು. ಈ ಲೇಖನಗಳನ್ನು ಓದುವ ಮೊದಲು ನನ್ನ ಮನಸ್ಸಿನಲ್ಲಿ ಉತ್ತರಗಳೇ ದೊರೆಯದ ಅನೇಕ ಪ್ರಶ್ನೆಗಳು ಇದ್ದವು, ಯಾರನ್ನು ಕೇಳಿದರೂ ಅಸ್ಪಷ್ಟತೆ. ಈ ಲೇಖನಗಳಲ್ಲಿ ನನ್ನ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟತೆಯಿಂದ ಕೂಡಿದ ನಿಖರ ಉತ್ತರಗಳು ದೊರಕಿವೆ. ನಾನು ಈಗ ನಿರುಮ್ಮಳಾಗಿದ್ದೇನೆ. ಲೇಖನಗಳಲ್ಲಿ ನೈಜತೆ ಹಾಗೂ ನಿಖರತೆ ಇರುವುದರಿಂದ ಓದುಗರ ಮನಮುಟ್ಟುತ್ತವೆ. ಇಂತಹ ಲೇಖನಗಳನ್ನು ಬರೆಯಲು ಸಾಮಾನ್ಯ ಲೇಖಕರಿಂದ ಅಸಾಧ್ಯ. ಇಂತಹ ಅನೇಕ ಲೇಖನಗಳು ಮುಂದಿನ ದಿನಗಳಲ್ಲಿ ಬರಲಿ ಹಾಗೂ ಸಕಲಜೀವಿಗಳಿಗೂ ಒಳ್ಳೆಯದಾಗಲಿ.

  22. ವಿಜಯಕುಮಾರ್ ಕಮ್ಮಾರ
    Aug 26, 2020 Reply

    ಲೇಖನ ತುಂಬಾ ಚೆನ್ನಾಗಿ ಬಂದಿದೆ. ವಚನ ಸಾಹಿತ್ಯಕ್ಕೆ ಆಧುನಿಕ ಹೊಳಪು ನೀಡಿದಂಗೆ ಇದೆ. ಉತ್ತಮ ಮತ್ತು ಪ್ರಬುದ್ಧ ಲೇಖನ. Congratulations.

  23. ಬಸವರಾಜ ಸೂಳಿಭಾವಿ
    Aug 27, 2020 Reply

    ನಾನು ಯಾರು ಲೇಖನಗಳ ಮಾಲೆ ತುಂಬಾ ಚೆನ್ನಾಗಿ ಮೂಡಿಬಂದಿವೆ ಹಾಗೂ ಸಂಗ್ರಹಕ್ಕೆ ಅತಿ ಯೋಗ್ಯವಾಗಿದೆ.ಲೇಖನಗಳನ್ನು ಓದಲು ತುಂಬಾ ಸಮಯ ಬೇಕಾಗುತ್ತದೆ,ಕಾರಣ ಲೇಖನಗಳ ಪ್ರತಿ ಶಬ್ದ ಹಾಗೂ ವಾಕ್ಯಗಳು ಗಹನವಾದ ವಿಷಯಗಳಿಂದ ಕೂಡಿ ಅರ್ಥಗರ್ಭಿತವಾಗಿವೆ.ಅವುಗಳನ್ನು ಮನನ ಮಾಡಿಕೊಂಡು ಮುಂದೆ ಓದಲು ಸಮಯ ಬೇಕಾಗುತ್ತದೆ. ಎಲ್ಲೂ ಸಿಗದ ಒಳ್ಳೆಯ ವಿಚಾರಗಳನ್ನು ಲೇಖನಗಳಲ್ಲಿ ಕಾಣಬಹುದು. ಇಲ್ಲಿ ಬರುವ ವಿಚಾರಗಳು ನಮ್ಮ ದೈನಂದಿನ ಜೀವನಕ್ಕೆ ಅತೀ ಉಪಯುಕ್ತವಾದ, ನೈಜ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವಾದವುಗಳಾಗಿವೆ. ಬಸವಾದಿ ಶರಣರ ಸಾಹಿತ್ಯದಲ್ಲಿ ಅಡಗಿರುವ ಅತ್ಯುತ್ತಮ ವಿಚಾರಗಳನ್ನು ತಿಳಿದುಕೊಳ್ಳಲು ನನಗೆ ಸಾಧ್ಯವಾಯಿತು. ನಾನು ಯಾರು ಪ್ರತಿಯೊಬ್ಬರೂ ಓದಲೇಬೇಕಾದ ಲೇಖನಗಳ ಗುಚ್ಛ. ಈ ಲೇಖನಗಳನ್ನು ಓದುವುದರಿಂದ ಪ್ರತಿಯೊಬ್ಬರೂ ತಾನು ಕ್ರಮಿಸಬೇಕಾದ ಸರಿಯಾದ ಹಾದಿಯನ್ನು ಕಂಡುಕೊಳ್ಳಬಹುದು. ಮಂಗಳಾ ಅಕ್ಕನವರಿಂದ ಇಂತಹ ಅನೇಕ ಲೇಖನಗಳು ಮೂಡಿಬರಲಿ.

  24. Paramashivaiah
    Aug 28, 2020 Reply

    ರೂಢಿಗೆ ಬಿದ್ದಿರುವ ಮನಸ್ಸನ್ನು ಪ್ರಜ್ಞೆಯ ಸಹಜ ಸೋಪಾನದೆಡೆಗೆ ತಿರುಗಿಸಲು, ನಡೆ ನುಡಿಯಲ್ಲಿ ಎಚ್ಚರ ಎಂಬ ಮನಸ್ಸಿನ ಪ್ರಸ್ತಾಪ ಸಾರ್ವಕಾಲಿಕ. ಮನಸ್ಸನ್ನು ಅನುಭೂತಿಯ ಮಟ್ಟದಲ್ಲಿ ಅರಿತಾಗ ಮಾತ್ರ ನಾವು ಈ ಪಥದಲ್ಲಿ ಸಾಗಲು ಸಾಧ್ಯ. ಬೇಕಿರುವುದನ್ನು ಧ್ಯಾನಿಸುವ ಮತ್ತು ಸಾಧಿಸುವ ಶಿವಪಥಿಕರಿಗೆ ಸಮಯ ಮತ್ತು ಶ್ರದ್ಧೆ ಇರುತ್ತದೆಂಬುದು ನನ್ನ ಭಾವನೆ. ನನ್ನ ನಾನರಿಯಲು ಈ ಜೀವಂತ ಕಾಯ ಎಷ್ಟು ಮುಖ್ಯ ಮತ್ತು ಕಾಯ ಪ್ರಕೃತಿ ಬೇರೆ ಬೇರೆಯಲ್ಲ ಎಂಬ ಕಾಯದರ್ಶನ ಪ್ರಜ್ಞೆಯು ಸ್ಪಷ್ಟವಾಗಿ ತಿಳಿಯಿತು. ನಮ್ಮ ಶರಣರು ಬುತ್ತಿ ಸಿದ್ಧಮಾಡಿ ಇಟ್ಟಿದ್ದಾರೆ ನಾವು ಬಿಚ್ಚಿ ಉಣಬೇಕು ಅಷ್ಟೇ. ಇಲ್ಲಿ ಮಾತಿಗೆ ಜಾಗವಿಲ್ಲ, ಇದು ಬಯಲಿಗೆ ಬಯಲಾಗುವ ಕೆಲಸ. ನಾನು ಕಂಡುಕೊಂಡ ಹಾಗೆ ನಮ್ಮ ಭವಿಷ್ಯದ ಅಸ್ತಿತ್ವವನ್ನು ವಿವೇಕದಿಂದ ರೂಪಿಸಿಕೊಳ್ಳಲು ಇದಕ್ಕಿಂತ ಉತ್ತಮವಾದ ಅವಕಾಶ ಬೇರಿಲ್ಲ. ಲೇಖನಗಳು ಮುಂದುವರೆಯಲಿ.ಶರಣು.

  25. Naganna D
    Sep 1, 2020 Reply

    ಪ್ರಶ್ನೆಯಲ್ಲಿಯೇ ಉತ್ತರವನ್ನಿಟ್ಟು ನಮ್ಮನ್ನು ಕುತೂಹಲಕ್ಕೆ ಇಟ್ಟ ರೀತಿ ವಿನೂತನವಾಗಿದೆ. ಇದು ಪುಸ್ತಕ ರೂಪದಲ್ಲಿ ಇನ್ನಷ್ಟು ವಿವರಣೆಗಳನ್ನು ಇಟ್ಟುಕೊಂಡು, ಅದರಲ್ಲೂ ಜ್ಞಾನ- ಜ್ಞಾತೃಗಳ ಹೆಚ್ಚು ವಿಸ್ತಾರವನ್ನು ಪಡೆದು ಬರಲಿ. ನಾನೆಂದರೆ ಆಳ-ನಿರಾಳ!! ಆದರೆ ನಾನು ಈಗ ಅಶಾಂತಿಯ ಕೂಪವಾಗಿದ್ದೇನೆ. ಆಳ-ನಿರಾಳಕ್ಕೆ ನಮ್ಮನ್ನು ಕರೆದೊಯ್ಯುವ ಮಹತ್ತರ ವಿಚಾರಗಳನ್ನು ಪದೇ ಪದೇ ಓದಿ ಮನನ ಮಾಡಿಕೊಳ್ಳಬೇಕಾಗುತ್ತದೆ, ಅದಕ್ಕಾಗಿ ಪುಸ್ತಕವಾಗಿ ಇದು ಬರಲೆಂಬುದು ನನ್ನ ಬೇಡಿಕೆ.

  26. Vijayashree S
    Sep 1, 2020 Reply

    ಅಕ್ಕಾ, ಒಮ್ಮೆ ಓದಿದೆ, ಎಲ್ಲೋ ಎತ್ತಿಕೊಂಡು ಹೋದಂತೆನಿಸಿತು, ಮತ್ತೆರಡು ಸಲ ಓದಿ, ಅರಗಿಸಿಕೊಂಡು ಮಾತಾಡುತ್ತೇನೆ. ಈಗ ಒಂದೇ ಮಾತಲ್ಲಿ ಹೇಳುವುದಾದರೆ ಲೇಖನ ಸಂಗ್ರಹಯೋಗ್ಯ, ವಿಚಾರ ಪ್ರಚೋದಕವಾಗಿದೆ.

  27. ನಂದಾ ಜೋಡೆತ್ತು
    Sep 1, 2020 Reply

    ಹೊಸ ವಿಚಾರಗಳು, ಹೊಸ ಆಲೋಚನೆಗಳು, ಹೊಸ ಹೊಳಪುಗಳಿಂದ ಕೂಡಿದ ಬರಹವನ್ನು ಓದಿ ಹೃದಯ ತುಂಬಿ ಬಂದಿತು.

  28. Prakash S Desmukh
    Sep 5, 2020 Reply

    ಎಲ್ಲಿಂದ,ಹೇಗೆ ಬಂದಿದೆಯೋ ಈ ಕಾಯ ಅಲ್ಲಿಗೆ ಹಾಗೆಯೇ ಹೋಗುತ್ತದೆ. ಪೇಪರ ಸುಟ್ಟರೂ ಸುಡದಿದ್ದರೂ ಅದು ಯಾವುದರಿಂದ ಆಗಿದೆಯೋ ಅದೇ ಆಗುತ್ತದೆ.ಇದಕ್ಕೆ ಆದಿ,ಮಧ್ಯೆ,ಅಂತ್ಯ ಎಂಬುದಿಲ್ಲ. ಆ ಕ್ಷಣ ನನಗೆ ಜಿಗುಪ್ಸೆಯ ಜಡತ್ವ ಬಂದಿತ್ತು. ಬಹುಶಃ ಜನಗಳಿಗೂ ಹಾಗೆಯೇ ಅನಿಸಿ ಇಷ್ಟೊಂದು ಬೇಜವಬ್ದಾರಿಯ ಜಡಮತಿಗಳಾಗುತಿದ್ದಾರೆ ಏನೊ. ಪರಿವರ್ತನೆ, ಬೆಳವಣಿಗೆ ನಮ್ಮ ಕೈಯಲ್ಲಿದೆ ಅದು ಯಾವ ರೀತಿ ಆರೋಗ್ಯಕರವಾಗಿರಬೇಕು ಎಂದು ಹೇಳಿದ್ದು ನನಗೆ ಇಷ್ಟವಾಯಿತು. ಈ ಲೇಖನದಿಂದ ನನಗೆ ಗೊತ್ತಾಗಿದ್ದು you are not only a writer, but also a teacher,a farmer,a thinker, a Doctor, a psychologist, a geologist, a scientist… all of these.

  29. ಜಯ ಹೆಚ್ ವಿ
    Sep 8, 2020 Reply

    ನಾನು ಯಾರು ಆಳ ನಿರಾಳ ಲೇಖನದ ೫ ನೇ ಸಂಚಿಕೆಯನ್ನು ಮರುಪ್ರಸಾರ ಮಾಡಿ ಪುನರ್ ಮನನ ಮಾಡಿಕೊಳ್ಳಲು ಅವಕಾಶವಾಯಿತು .
    ಅತ್ಯದ್ಬುತವಾದ ಲೇಖನ. ಮುಂದುವರೆಸಿದರೆ ಚನ್ನಾಗಿರುತ್ತಿತ್ತು.
    ಶರಣು ಶರಣಾರ್ಥಿ

  30. Shivakumar Patil
    Sep 10, 2020 Reply

    ಅಲ್ಲಮಪ್ರಭುಗಳ ವಚನಗಳಿಗೆ ಇಷ್ಟು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದನ್ನು ಇದೇ ಮೊದಲು ಓದಿದ್ದು. ಲಿಂಗ, ಜಂಗಮ ಕುರಿತಾದ ನಿಮ್ಮ ವಿಚಾರಗಳು ತಲೆದೂಗುವಂತಿವೆ. ಬರೆಯುವುದನ್ನು ನಿಲ್ಲಿಸಬೇಡಿ.

  31. Mahadev Patel
    Sep 18, 2020 Reply

    ನಾನು ಯಾರು ಲೇಖನಗಳು ನನ್ನಲ್ಲಿ ಹೊಸ ವಿಚಾರಗಳನ್ನು ಹುಟ್ಟಿಸಿದವು. ಧರ್ಮವನ್ನು, ಶರಣರ ವಚನಗಳನ್ನು ಶುದ್ಧವಾಗಿ ಓದುವ ಸಾಧ್ಯತೆಗಳನ್ನು ತೆರೆದು ತೋರಿಸಿದವು. ಆಪ್ತವಾದ ಲೇಖನದ ದನಿ ಪದೇ ಪದೇ ಓದುವಂತೆ ಮಾಡಿದವು. ಕೊನೆಯಲ್ಲಿ ನನಗೊಂದು ಅನುಮಾನ ಹಾಗೆಯೇ ಉಳಿಯಿತು ಅಕ್ಕಾ. ಜಂಗಮತ್ವದ ತಿಳುವಳಿಕೆ ವಿನೂತನವಾಗಿತ್ತು, ಮನಸ್ಸು ಒಪ್ಪುವಂತಿತ್ತು, ಆದರೆ ಬಯಲು ಎಂದರೇನು? ನಾನು ಯಾರು ಎನ್ನುವ ಪ್ರಶ್ನೆಯಲ್ಲಿ ಬಯಲಿನ ಪ್ರಸ್ತಾಪ ಬರುವುದಿಲ್ಲವೇ? ಜಂಗಮತ್ವ ಮತ್ತು ಬಯಲು ಎರಡೂ ಬೇರೆ ಬೇರೆಯೇ ಅಥವಾ ಒಂದೆಯೇ?

Leave a Reply to SIDDHALINGAIAH TUMKUR Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಗುರುಪಥ
ಗುರುಪಥ
January 4, 2020
ಶಿವನ ಕುದುರೆ…
ಶಿವನ ಕುದುರೆ…
May 1, 2019
Copyright © 2021 Bayalu