
ನಾನು ಯಾರು? ಎಂಬ ಆಳನಿರಾಳ – 2
ಮೈಸೂರು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ದಿನಗಳು. ದಾರ್ಶನಿಕ ಕವಿಯೆಂದೇ ಹೆಸರಾದ ವಿಲಿಯಂ ಬ್ಲೇಕ್ ಕುರಿತಾದ ಸೆಮಿನಾರ್ ನಡೆಯುತ್ತಿತ್ತು. ಹಿರಿ-ಕಿರಿಯ ವಿದ್ಯಾರ್ಥಿಗಳ ಜೊತೆ ಇಂಗ್ಲಿಷ್ ವಿಭಾಗದ ಉಪನ್ಯಾಸಕರೆಲ್ಲಾ ಅಲ್ಲಿದ್ದರು. If the doors of perception were cleansed everything would appear to man as it is, infinite- (ದೃಷ್ಟಿದ್ವಾರಗಳನ್ನು ಶುದ್ಧಗೊಳಿಸಿಕೊಂಡಲ್ಲಿ ಪ್ರತಿಯೊಂದೂ ತನ್ನ ನಿಜಸ್ವರೂಪದಲ್ಲಿ ಅನಂತವೆಂದು ಮನುಷ್ಯನಿಗೆ ಕಾಣಿಸೀತು) ಎನ್ನುವ ಕವಿಯ ಸಾಲೊಂದನ್ನು ಹಿಡಿದು ಪೋಲಂಕಿ ರಾಮಮೂರ್ತಿಯವರು ಮಾತನಾಡುತ್ತಿದ್ದರು. ಆಗ “ಆ ದೃಷ್ಟಿ ದ್ವಾರಗಳು ಯಾವುವು? ಅವುಗಳನ್ನು ಶುದ್ಧಗೊಳಿಸಿಕೊಳ್ಳುವುದು ಹೇಗೆ?” (which are those doors? how to clense the doors of perception?) ಎಂದು ಕಿರಿಯ ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದಳು. ಅರೆಕ್ಷಣ ಮೌನರಾದ ಅವರು, “ಮನುಷ್ಯನು ತನ್ನ ವಾಂಛಲೆಗಳಲ್ಲಿ, ಸಂಪ್ರದಾಯಗಳಲ್ಲಿ, ಅಹಂಕಾರಗಳಲ್ಲಿ- ಅದರಲ್ಲೂ ಜ್ಞಾನದ ಅಹಂಕಾರದಲ್ಲಿ ತನ್ನನ್ನು ತಾನೇ ಬಂಧಿಯಾಗಿಸಿದ್ದಾನೆ. ಇವುಗಳಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಲು ನಾವು ನಮ್ಮ ನೆಲದ ಸಂತರಲ್ಲಿಗೇ ಹೋಗಬೇಕು” ಎಂದಿದ್ದರು. ಮಾತು, ಬರಹ, ವರ್ತನೆಗಳ ಮೂಲಕ ಜ್ಞಾನದ ಅಹಂಕಾರವು ನನ್ನಲ್ಲೂ, ಇತರರಲ್ಲೂ ಕಾಣಿಸಿಕೊಂಡಾಗಲೆಲ್ಲಾ ವಿಪರೀತ ಕಸಿವಿಸಿಯಾಗುತ್ತಿತ್ತು, ಹೇಸಿಗೆ ಹುಟ್ಟುತ್ತಿತ್ತು. ಅದರ ಕಬಂಧ ಬಾಹುಗಳನ್ನು ಪರಿಶೀಲಿಸಿಕೊಳ್ಳುವ ಅವಕಾಶವನ್ನು ಒದಗಿಸಿದ್ದು “ನಾನು ಯಾರು?” ಎಂಬ ಸ್ವವಿಮರ್ಶೆಯ ಪ್ರಶ್ನೆ.
ಮನುಷ್ಯನ ಅಂತರಂಗದ ಸಮಪಾತಳಿಯಲ್ಲಿ ಸದಾ ಉಕ್ಕಿ ಹರಿಯುತ್ತಿರುವ ಸಮ್ಯಕ್ ಜ್ಞಾನಗಳನ್ನು ಕಂಡುಹಿಡಿದು ಅದರ ಕರೆಯಂತೆ ಸಹಜವಾಗಿ ಜೀವಿಸಲು ನಾನು ಯಾರು? ಎಂಬ ಪ್ರಶ್ನೆ ನಮಗೆ ಮುಖ್ಯವಾಗುತ್ತದೆ. ಈ ಚರ್ಚೆಯು ನಮ್ಮಲ್ಲಿರುವ ತಪ್ಪು ತಿಳುವಳಿಕೆಗಳನ್ನು ಖಾಲಿಗೊಳಿಸಿ ನಮ್ಮಲ್ಲಿರಬೇಕಾದ ಎಚ್ಚರವನ್ನು ಕಾಯ್ದುಕೊಳ್ಳುವ ವಿಚಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುತ್ತಾ ಹೋಗುತ್ತದೆ. ಆದ್ದರಿಂದ ಇದೊಂದು ಸಾರ್ವಕಾಲಿಕ ಪ್ರಶ್ನೆಯೂ ಆಗಿದೆ. ಭಾರತದ ಸಾಂಸ್ಕೃತಿಕ ಪರಂಪರೆಗಳು ಈ ಪ್ರಶ್ನೆಯನ್ನು ದೇಶ, ಕಾಲ, ಭಾಷೆಗಳು ಒಡ್ಡಿದ ಆತಂಕ ಮತ್ತು ಸವಾಲುಗಳಿಗನುಗುಣವಾಗಿ ಎದುರುಗೊಂಡು, ಜನಪರವಾದ ಮತ್ತು ಜೀವಪರವಾದ ಚಿಂತನಾಕ್ರಮಗಳನ್ನು ನಮಗೆ ತನ್ಮೂಲಕ ಒದಗಿಸಿಕೊಟ್ಟಿವೆ. ಸಂತಪರಂಪರೆಗಳಲ್ಲಂತೂ ಈ ಪ್ರಶ್ನೆ good intellect ಆಗಿ ಹೊರಹೊಮ್ಮಿದೆ. ತನ್ನ ಹಾಗೂ ಇದಿರಿನ ಜಗತ್ತಿನ ಕುರಿತಾಗಿ ಇರಬೇಕಾದ ಸರಿಯಾದ ವಿವೇಚನೆಯ ಕಡೆ ಮನುಷ್ಯನನ್ನು ಕೊಂಡೊಯ್ಯುವುದು ಈ ತರ್ಕದ ಗುರಿಯಾಗಿದೆ.
ತಾನಿರ್ದು ತನ್ನನರಿಯದೇ ಇನ್ನೆಂದಿಗೆ ಶರಣನಪ್ಪನಯ್ಯಾ
ಪವನಸ್ಥಾನವರಿತ ಬಳಿಕ ಬಂದು ಬಂದು ಸುಳಿಯಲಿಲ್ಲ
ಇದರಂತುವ ನಾರು ಬಲ್ಲರು ಗುಹೇಶ್ವರಾ- ನಿಮ್ಮ ಶರಣನಲ್ಲದೆ?
ಈ ವಚನದಲ್ಲಿ ‘ಪವನ ಸ್ಥಾನ’ ಎಂಬ ಪದ ಪ್ರಯೋಗ ಬಹಳ ಗಮನ ಯೋಗ್ಯವಾದುದು. ವಚನಗಳಲ್ಲಂತೂ ‘ಪವನ’ ಎಂಬ ಪದವು ಪದೇ ಪದೇ ಕಾಣಸಿಗುತ್ತದೆ. ಪವನವು ಅಹಂಕಾರ, ಚಂಚಲ, ಆಸೆ, ಭ್ರಮೆ, ತೃಪ್ತವಾಗದಾ ಸುಖ, ಮದ, ಸ್ವಾರ್ಥ, ಶೋಷಣೆ, ಅಧಿಕಾರ, ನಾಯಕ, ಗುಲಾಮ… ಇತ್ಯಾದಿ ಪದಗಳಿಗೆ ಸಮಾನಾಂತರ ಶಬ್ದವಾಗಿದೆ. ಅಂದರೆ ಇವೆಲ್ಲವೂ ಮನುಷ್ಯನೇ ಸೃಷ್ಟಿಸಿಕೊಂಡಿರುವ ಒಡಲ ಗಾಯಗಳು. ಆದ್ದರಿಂದ ಇವು ಗಾಳಿ ಅಥವಾ ದೆವ್ವದಂತೆ. ಇವುಗಳಿಗೆ ಪ್ರತ್ಯಕ್ಷ ವಸ್ತು ನಿದರ್ಶನಗಳಿಲ್ಲ. ಅಂದರೆ ಇವುಗಳನ್ನು ವಸ್ತುರೂಪದಲ್ಲಿ ತೋರಿಸಲು ಸಾಧ್ಯವಿಲ್ಲ. ಆದ್ದರಿಂದ ಇವು ನೈಸರ್ಗಿಕ ಪದಸಂಪತ್ತಿಗಳಲ್ಲ. ಇವು ಅನ್ಯೋನ್ಯವಾದ ಸಮಾಜವನ್ನಾಗಲಿ, ಸಮತಾ ಪ್ರಜ್ಞೆಯನ್ನಾಗಲಿ, ಪ್ರಜಾಸತ್ತಾತ್ಮಕ ವಿವೇಚನೆಯನ್ನಾಗಲಿ ಕಟ್ಟಲು ಇರುವ ಭೀಕರ ತೊಡಕುಗಳಾಗಿವೆ. ಇವುಗಳನ್ನು ವಿಸರ್ಜಿಸದೆ ನಂಬುಗೆಗೆ ಅರ್ಹವಾದ ಸಮುದಾಯವನ್ನಾಗಲಿ, ಮನುಷ್ಯ-ಮನುಷ್ಯರ ಮಧ್ಯೆ ಇರುವ ಭಾಷಾತೀತವಾದ ಜೈವಿಕ ಸಂಬಂಧವನ್ನಾಗಲಿ ಕಟ್ಟಲು ಸಾಧ್ಯವಿಲ್ಲ. ಇವು ಎಲ್ಲಿವೆ? ಇವುಗಳ ಮೂಲಸ್ಥಾನ ಯಾವುದು? ಎಂದು ವಿಚಾರಿಸಿ ನೋಡಿದರೆ ಮನುಷ್ಯನ ವಿವೇಚನೆಗೆ ಹಚ್ಚದ ನಂಬುಗೆಗಳಲ್ಲಿ, ಭಾವನೆಗಳಲ್ಲಿ, ಅಸ್ತಿತ್ವದ ಅಹಂಕಾರಿಕೆಯ ಭ್ರಮೆಗಳಲ್ಲಿ ಸಂಗ್ರಹಗೊಂಡು, ಅವನಾಡುವ ಮಾತಿನ ಮೂಲಕ, ಅವನು ನಡೆಯುವ ನಡೆಗಳ ಮೂಲಕ ಪ್ರಸರಣಕ್ಕೆ ಬರುತ್ತಿವೆ. ಆಲೋಚನೆಗಳಲ್ಲಿರುವ ಇವುಗಳನ್ನು ಅವನ ಆಲೋಚನೆಯ ಅಸ್ತ್ರವನ್ನೇ ಬಳಸಿ, ಅವನಿಗೆ ಪ್ರಶಾಂತತೆಯನ್ನು, ಆಳ-ನಿರಾಳತೆಯನ್ನು ತಂದುಕೊಡುವ ಮಹದೋದ್ದೇಶ ಸಂತರದು. ಗುರು-ಶಿಷ್ಯ ಮಾರ್ಗ ಕೇವಲ ಬೋಧನೆಯ ಮಾರ್ಗ ಎಂದು ಯಾರಾದರು ಅಂದುಕೊಂಡರೆ ಅದು ಮಹಾ ತಪ್ಪಾಗುತ್ತದೆ.
ಅದು ಹೇಳುವವನೊಬ್ಬ ಕೇಳುವವನೊಬ್ಬ ಎಂಬ ಅಸಮಾನತೆಯ ಮಾರ್ಗವಲ್ಲ. ನಂಬಿ ಎಲ್ಲರೂ ಒಟ್ಟಾಗಿ ನಡೆಯುವ ಮಾರ್ಗ. ಶಿಷ್ಯನು ‘ಕಬ್ಬಿಣದಂತೆ’, ಗುರುವು ‘ಪರುಷ’ದಂತೆ, ಪರುಷ ಸೋಂಕಿದ ಕಬ್ಬಿಣ ಚಿನ್ನವಾಗುವ ಪರಿ ಎಂದು ವಚನಗಳು ಹಾಡಿ ಹೊಗಳಿವೆ. ಇಲ್ಲಿ ಪರುಷವೆಂಬ ಕಾರಣಕ್ಕೂ, ಕಬ್ಬಿಣವೆಂಬ ಕಾರ್ಯಕ್ಕೂ- ಎರಡಕ್ಕೂ ಮುಕ್ತಿಯೆಂಬ ಪರಿಣಾಮವುಂಟು. ಹದಗೊಂಡ ಗುರು ಜಗತ್ತಿಗೂ, ತನಗೂ ಪ್ರಮಾದಗಳಿಲ್ಲದ ಶಿಷ್ಯನನ್ನು ರೂಪಿಸುವ ಮಹಾಕ್ರಿಯೆಯದು. ನಮ್ಮ ಸಂತರಲ್ಲಿ ಗುರುಶಿಷ್ಯರಿಬ್ಬರಿಗೂ ಆಚರಿಸಲು ಯೋಗ್ಯವಾದ ಪಥವೇ ಅಂತಿಮ. ಅದು ಮನುಷ್ಯ ಬದುಕಿಗಿರುವ ಬಯಲ ಬೆಡಗಿನ ಸುಧಾಪಾನ. ಅದು ಸರಿಯಾಗಿ ಜೀವಿಸುವ ಅನುಪಮ ವಿಧಾನ. ಈ ಸಾರಾಯ ಸನುಮತಕ್ಕಾಗಿ ಬಸವಣ್ಣ ಬಾಯ್ದೆರೆದು ಗುರು ಮಾರ್ಗದ ದರ್ಶನಕ್ಕಾಗಿ ಶರಣು ಶರಣೆಂದಿದ್ದಾರೆ. ಬೇಗ ತನ್ನಲ್ಲಿ ತಾನು ತನ್ನನ್ನು ವಿಚಾರಣೆಗೆ ಹಚ್ಚುವಂತೆ ಮಾಡೆಂದು ಗುರುವನ್ನು ಪ್ರಾರ್ಥಿಸಿದ್ದಾರೆ.
ನಾನಾರಿದೆಲ್ಲಿಯ ಪಾಶವಿದೆತ್ತಣ ಮರವೆ (ನಾನಾರು, ಇದೆಲ್ಲಿಯ ಪಾಶ, ಇದೆತ್ತಣ ಮರವೆ)
ಅಕಟಕಟಾ ತಾಮಸಕ್ಕೆ ಗುರಿಮಾಡಿದೆಯಲ್ಲಾ.
ಎಲೆ ಕರುಣಾಂಬುನಿಧಿಯೆ, ದಯಾಪಾರಿಯೆ,
ನೀನು ವಿಚಾರಿಸದಿರ್ದಡಾನೆಂತುಳಿವೆನಯ್ಯಾ.
ನಿಮ್ಮ ಕೃಪಾದೃಷ್ಟಿಯಿಂ ನಿರೀಕ್ಷಿಸಿ ನಿಮ್ಮತ್ತ ಸಾರುವಂತೆ ಮಾಡಾ
ಕೂಡಲಸಂಗಮದೇವಾ.
ಅಲ್ಲಮರಂತೂ ತನ್ನೊಳಗಣ ಎಚ್ಚರವನ್ನು ತನ್ನಲ್ಲಿ ಅರಿಯದಿದ್ದಡೆ ಅನ್ಯ ಮಾರ್ಗವೇ ಇಲ್ಲವೆಂದು ಬಿಡುತ್ತಾರೆ.
ನಿಮ್ಮಲ್ಲಿ ನೀವು ತಿಳಿದು ನೋಡಿದರೆ, ಅನ್ಯವಿಲ್ಲ ಕಾಣಿರಣ್ಣಾ
ಅರಿವು ನಿಮ್ಮಲ್ಲಿಯೇ ತದ್ಗತಿತವಾಗಿದೆ. ಅನ್ಯಭಾವವ ನೆನೆಯದೇ
ತನ್ನೊಳಗೆ ತಾನೆಚ್ಚರ ಬಲ್ಲಡೆ ತನ್ನಲ್ಲಿಯೇ ತನ್ಮಯವು ಗುಹೇಶ್ವರಾ.
ಈ ನೆಲೆಗಟ್ಟಿನಿಂದ ಈ ಸುದೀರ್ಘವಾದ ಚರ್ಚೆಯನ್ನು ಖಚಿತವಾಗಿ ಓದಿಕೊಳ್ಳುತ್ತಿರುವ ಎಲ್ಲಾ ಓದುಗರಿಗೂ ವಿನಮ್ರ ಕೃತಜ್ಞತೆಗಳನ್ನು ಹೇಳಲೇ ಬೇಕಾಗಿದೆ. ‘ನಾನಾರು’ ಎಂಬ ಈ ಪ್ರಶ್ನೆಯನ್ನು ಆಧುನಿಕ ಸನ್ನಿವೇಶದ ಪ್ರಕ್ಷುಬ್ಧ ಸಮಸ್ಯೆಗಳೊಂದಿಗೆ ಬರೆಯಲು ಪ್ರಯತ್ನಿಸಿದ್ದೇನೆ. ಆದ್ದರಿಂದ ಇದೂ ಒಂದು ಮಾದರಿ ಮಾತ್ರ! ಈ ಚರ್ಚೆಯನ್ನು ನೀವು ಕೂಡ ನಿಮ್ಮದೇ ಮಾದರಿಗಳಲ್ಲಿ ಪಥ ಭಂಗವಾಗದಂತೆ ಅವಲೋಕಿಸಲು ಸಾಧ್ಯವಿದೆ. ಆದ್ದರಿಂದ ಈ ಲೇಖನ ನನ್ನದೆಂದು ಹೇಳುವ ಹುಂಬತನ ನನಗಿಲ್ಲ. ಈ ಪ್ರಶ್ನೆ ನಮ್ಮೆಲ್ಲರ ಪ್ರಶ್ನೆಯಾಗಿದೆ. ನಮ್ಮ ಸಂತರು ನಡೆದ ವೈಚಾರಿಕವಾದ ಹಾದಿಬೀದಿಗಳಲ್ಲಿ ನಾವೂ ಮೂಡಿಸಬಹುದಾದ ಒಂದೆರಡು ಹೆಜ್ಜೆ ಗುರುತುಗಳಷ್ಟೇ ಎಂಬುದನ್ನು ನಾವು ನೆನಪಿಡಬೇಕು. ಪರಿಸ್ಥಿತಿ, ಭಾಷೆ, ಸವಾಲುಗಳು ಕಾಲದಿಂದ ಕಾಲಕ್ಕೆ ಬೇರೆಯಾಗಿರುತ್ತವೆ ಎಂಬ ಇಂಗಿತ ಜ್ಞಾನದಿಂದ ಈ ಚರ್ಚೆಯನ್ನು ಆಧುನಿಕಗೊಳಿಸಿ ಹೇಳುತ್ತಿದ್ದೇನೆ. ಇದು ಅತ್ಯಾವಶ್ಯಕವೂ ಹೌದು! ಇಲ್ಲಿಂದಾಚೆಗಿರುವ ಪ್ರಶ್ನೆಗಳು ಸಂಪ್ರದಾಯಿಕ ಗುರು ಸಂಪ್ರದಾಯಗಳಲ್ಲಿ ನಡೆಯುವ ತಾರ್ಕಿಕ ವಾತಾವರಣದಲ್ಲಿನ ವಿಚಾರಣಾಧೀನ ಪ್ರಶ್ನೆಗಳಾಗಿರುತ್ತವೆ. ಇವುಗಳಿಗೆ ನೀವೂ ಸತ್ಪಥಕ್ಕೆ ಧಕ್ಕೆ ಬಾರದ ಹಾಗೆ, ನಿಮ್ಮ ನಿಮ್ಮ ಅನುಭವಗಳನ್ನಿಟ್ಟು ತಳುಕು ಹಾಕಿ ನೋಡಿಕೊಳ್ಳಬಹುದು ಎಂದು ಮತ್ತೊಮ್ಮೆ ಹೇಳುತ್ತಿದ್ದೇನೆ. ನಮ್ಮನ್ನು ನಾವು ಹೊಸದಾಗಿ ಪುನರ್ ಸೃಷ್ಟಿಸಿಕೊಳ್ಳಬೇಕೆಂದರೆ ಈ ಮಾರ್ಗ ಸಮುಚಿತವಾದದ್ದು. ಆದ್ದರಿಂದ ಬನ್ನಿ, ಈ ಪ್ರಯಾಣದಲ್ಲಿ ನೀವೂ ಹೆಜ್ಜೆಹಾಕಿ. ಕಿಲುಬುಗೆಟ್ಟು ಹೋಗಿರುವ ಆಧ್ಯಾತ್ಮಿಕ ವಿಚಾರಗಳಿಂದ, ಸಾಮಾಜಿಕ ವ್ಯವಸ್ಥೆಗಳಿಂದ ಹಾಗೂ ರಾಜಕೀಯ ಸ್ಥಿತ್ಯಂತರಗಳಿಂದ ಉದ್ವಸ್ಥಗೊಂಡಿರುವ ನಮ್ಮ ವಿವೇಚನೆಗಳನ್ನು ಆರೋಗ್ಯವಾಗಿಡಲು ಖಂಡಿತಾ ಈ ಬಗೆಯ ಚರ್ಚೆಯೊಂದು ನಮಗೆ ಅತ್ಯವಶ್ಯಕವಾಗಿದೆ. ಜಾಗತಿಕ ಪ್ರಪಂಚವು ನಮಗೊಡ್ಡಿರುವ ಭಯ, ಆತಂಕ, ಅಭದ್ರತೆಗಳನ್ನು ನಾವು ಮೆಟ್ಟಿನಿಲ್ಲಬೇಕೆಂದರೆ ಅಹಂಕಾರ, ಹಿಂಸೆ, ಕ್ರೂರತೆ, ಹಿತಾಸಕ್ತಿಗಳಿಂದ ಹೊರತಾಗಿ ನಾವು ನಮ್ಮೊಳಗೆ ಮಾತನಾಡಿಕೊಳ್ಳಬೇಕಾದ ಅಂತಃಸತ್ವ ಪಡೆಯಲೇ ಬೇಕಾಗಿದೆ.
ಬಂಧುಗಳೇ, ಈಗ ಪ್ರಶ್ನೆಗಳಿಗೆ ಹಿಂದಿರುಗೋಣ. ನಂತರದ ಪ್ರಶ್ನೆ ಏನೆಂದರೆ- “ನನ್ನೊಳಗೆ ಇದುವರೆಗೂ ಸಂಗ್ರಹಿಸಿಕೊಂಡಿರುವ ಜ್ಞಾನಗಳು ನಾನೇ?” ಈ ಪ್ರಶ್ನೆ ಗುರು ಪರಂಪರೆಗಳಲ್ಲಿ ಅತ್ಯಂತ ಮುಖ್ಯವಾದ ಪ್ರಶ್ನೆಯಾಗಿದೆ. ಮೊದಲು ಗುರು ಜ್ಞಾನದ ಲಕ್ಷಣವನ್ನು ಹೇಳಿ, ನಂತರ ಜ್ಞಾನವನ್ನು ನಿರಸನ ಮಾಡುವುದು ಗುರು ಸಂಪ್ರದಾಯದಲ್ಲಿ ಇಂದಿಗೂ ಇದೆ. ವಚನಗಳಲ್ಲಂತೂ ಜ್ಞಾನದಾ ಲಕ್ಷಣಕ್ಕೆ ನೂರಾರು ವಚನಗಳು ಸಿಗುವಂತೆಯೇ ಜ್ಞಾನ ನಿರಸನಕ್ಕೂ ಅಷ್ಟೇ ಸಂಖ್ಯೆಯ ವಚನಗಳು ಸಿಗುತ್ತವೆ. ಬಸವಣ್ಣನವರಂತೂ “ನಾನು ಜ್ಞಾನಿಯಲ್ಲ, ಅಜ್ಞಾನಿಯಲ್ಲ…” ಎಂದು ಘೋಷಿಸಿಬಿಡುತ್ತಾರೆ. ಅಲ್ಲಮರು “ನಿರವಯವ ಘನಕ್ಕೆ ಜ್ಞಾನ ಅಜ್ಞಾನದ ನುಡಿಗಳು ಸೂತಕ” ವೆನ್ನುತ್ತಾರೆ. ಶರಣರು ಜ್ಞಾನ- ಅಜ್ಞಾನಗಳೆರಡಕ್ಕೂ ಮಿಗಿಲಾಗಿ ಸಮಯೋಚಿತ ಪ್ರಜ್ಞೆಯುಳ್ಳವರು. ವಚನಗಳಲ್ಲಿ ಇದು ‘ಸಮಯಾಚಾರ’ವೆಂದು ವಿವರಿಸಲ್ಪಟ್ಟಿದೆ.
ಜ್ಞಾನ ತನ್ನೊಳಗೆ ಅಜ್ಞಾನ ತನ್ನೊಳಗೆ
ಎರಡುವನರಿದ ಸಹಜ ಸುಜ್ಞಾನಿ ಸುಸಂಗಿ ಲಿಂಗವಶಕನಾಗಿದ್ದು
ಪರಿಣಾಮಿ ಕೂಡಲಚೆನ್ನಸಂಗಾ, ನಿಮ್ಮ ಶರಣ.
ಆದ್ದರಿಂದ ಈ ಪ್ರಶ್ನೆಯು ಅತ್ಯಂತ ಪ್ರಾಚೀನವೂ ಇತ್ತ ಆಧುನಿಕವೂ ಆದ ಪ್ರಶ್ನೆಯಾಗಿದೆ. ಏಕೆಂದರೆ ಸ್ಥಿರ, ಸಿದ್ಧ ಜ್ಞಾನಗಳು ಅಹಂಕಾರ, ಹಿಂಸೆ, ಕ್ರೂರತೆಗಳಲ್ಲಿ ಕೊನೆಗೊಳ್ಳುತ್ತವೆ ಎಂಬ ಅಂಶ ನಮಗೂ ಬೇಕಾದಷ್ಟು ಅನುಭವಕ್ಕೆ ಬಂದಿರುತ್ತದೆ. ಅಷ್ಟಮದಗಳಲ್ಲಿ ಜ್ಞಾನದಾ ಮದ ತುಂಬಾ ಅಪಾಯಕಾರಿಯೆಂದು ನಮ್ಮ ನೆಲದ ಸಂತರು ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸಿದ್ದಾರೆ. ಆದ್ದರಿಂದ ‘ಜ್ಞಾನ’ದಾ ನಿಶ್ಕರ್ಶೆ ಎಂದೆಂದಿಗೂ ಮಹತ್ವವನ್ನು ಪಡೆದುಕೊಂಡಿದೆ. ಹಾಗಾದರೆ ನನ್ನೊಳಗೆ ಸಂಗ್ರಹಗೊಂಡಿರುವ ಜ್ಞಾನಗಳು ನಾನೇ? ನನ್ನವೆ? ನಾನು ಎಂಬುದಕ್ಕೂ, ಜ್ಞಾನಕ್ಕೂ ಇರುವ ಸಂಬಂಧ ಎಂತಹದ್ದು?
ಜ್ಞಾನಕ್ಕಿಂತಲೂ ಶ್ರೇಷ್ಠವಾದುದು ಯಾವುದೂ ಇಲ್ಲ ಎಂತಲೋ ಇಲ್ಲವೆ knowledge is power ಎಂತಲೋ ನಾವಂತೂ ‘ಜ್ಞಾನದ ಅವಶ್ಯಕತೆ’ಯನ್ನು ಮೈಮೇಲೆ ಎಳೆದುಕೊಂಡು ಬಿಟ್ಟಿದ್ದೇವೆ. ಯಾರು ಹೆಚ್ಚು ಜ್ಞಾನವನ್ನು ಬಳಸಲು ಸಮರ್ಥರಿರುತ್ತಾರೋ ಅವರಲ್ಲಿ ಹೆಚ್ಚು ಸಂಪನ್ಮೂಲ ಶೇಖರಗೊಂಡಿರುತ್ತದೆ. ಜ್ಞಾನವಿಲ್ಲದವರು ಕೇವಲ ಶ್ರಮದ ಕೆಲಸಗಳಿಗಷ್ಟೇ ಲಾಯಕ್ಕೆಂಬುದ್ದನ್ನು ಅಂತಿಮವಾಗಿ ಒಪ್ಪಿಕೊಂಡು ಬಿಟ್ಟಿದ್ದೇವೆ. ಹೀಗಾಗಿ ಆಧುನಿಕರಾದ ನಾವಂತೂ ಜ್ಞಾನದಾ ಪ್ರವಾಹದಲ್ಲಿ ನಮ್ಮನ್ನು ನಾವು ಗ್ರಹಿಸಿಕೊಳ್ಳಲಾಗದೇ ಕೊಚ್ಚಿ ಹೋಗುತ್ತಿದ್ದೇವೆ. ನಾವಿಂದು ಪ್ರತಿಕ್ಷಣ ನೋಡುತ್ತಿರುವ ಮತ್ತು ಸದಾ ನಮ್ಮ ಅನುಭವಗಳಿಗೆ ಬರುತ್ತಿರುವ ಈ ಮಾನವ ಲೋಕವು, ಮನುಷ್ಯ ಗಳಿಸಿಕೊಂಡು ಅವನ್ನು ಕಾರ್ಯಗತಕ್ಕಿಳಿಸಿದ ಜ್ಞಾನದ ಫಲವೇ ಆಗಿದೆ.
ಅಭಿವೃದ್ಧಿಯ ಕಲ್ಪನೆಗಳು, ವಿಲಾಸೀ ಜೀವನದ ಬಾಹ್ಯಾಡಂಬರಗಳು, ತೀವ್ರವಾದ ಚಿಕಿತ್ಸಾ ವಿಧಾನಗಳು, ನಗರೀಕರಣದ ನಿರ್ಮಾಣಗಳು, ಚಿತ್ರವಿಚಿತ್ರ ವ್ಯಾಪಾರ ವ್ಯವಹಾರಗಳು, ಧರ್ಮಾಧರ್ಮಗಳು, ಪ್ರತಿಕ್ಷಣ ಹುಟ್ಟಿಕೊಳ್ಳುತ್ತಿರುವ ಕಾನೂನು ವ್ಯವಸ್ಥೆಗಳು, ವಾಹನ ಸಂದಣಿ, ತಂತ್ರಜ್ಞಾನ, ಕೊನೆಗೊಳ್ಳದ ಕೊಳ್ಳುಬಾಕತನ, ಪ್ರಜ್ಞೆಗೆಟುಕದ ತೆರಿಗೆಯ ಪಾವತಿಗಳು… ಎಲ್ಲವೂ ಮನುಷ್ಯ ಜ್ಞಾನದ ಫಲವೇ ಆಗಿವೆ. ಅಸಲಿಗೆ ಜ್ಞಾನದ ವಿಸ್ತರಣೆ ಏನು? ನಾವು ಜಗತ್ತಿನಲ್ಲಿರುವುದನ್ನೆಲ್ಲಾ ನಮ್ಮನಮ್ಮ ಸ್ವಭಾವಗಳು ಮತ್ತು ಆಸಕ್ತಿಗಳಿಗನುಗುಣವಾಗಿ ಒಗ್ಗಿಸಿಕೊಂಡಿರುವ ಶೇಷ ಪದಾರ್ಥವಲ್ಲವೇ? ಅಂದರೆ ನಾವು ಓದಿಕೊಂಡಿದ್ದನ್ನು, ಕಂಡಿದ್ದನ್ನು, ಕೇಳಿದ್ದನ್ನು, ನುಡಿದದ್ದನ್ನು, ಇದ್ದು ಅನುಭವಿಸಿದ್ದನ್ನು, ನಮ್ಮ ಕೊರತೆಗಳನ್ನು, ನಾವೇ ಊಹಿಸಿಕೊಂಡಿರುವ ನಮ್ಮ ಅಮಲು ತೆವಲುಗಳನ್ನೆಲ್ಲಾ ನಮ್ಮದೇ ವಿಷಯಗಳನ್ನಾಗಿ ಕ್ರೋಢೀಕರಿಸಿಕೊಂಡು ಪ್ರತ್ಯೇಕ ಅಹಂಕಾರಿಕೆಗಳಿಂದ ಚಲಾವಣೆಗೆ ತರುತ್ತಿರುವ ಅನುಶಾಸನವಲ್ಲವೇ?
ಒಂದು ಸಮಸ್ಯೆಯ ಪರಿಹಾರಕ್ಕಾಗಿ ಮತ್ತೊಂದಷ್ಟು ಬಗೆಹರಿಸಲಾಗದಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಾ ಹೋಗುವುದು ಜ್ಞಾನದ ಅಪೂರ್ಣತೆಗೆ ಮತ್ತು ಸೋಲಿಗೆ ಸಾಕ್ಷಿಯಾಗಿದೆ. ಅತಿಯಾದ ಸ್ವಯಂ ರಕ್ಷಣೆ ಮತ್ತು ಅತ್ಯಾಶೆಗಳಿಂದಾಗಿ ನಾವೇ ಕಟ್ಟಿಕೊಂಡ ನಮ್ಮ ಜ್ಞಾನಗಳು ಹೊರಲಾಗದಷ್ಟು ಭಾರಗಳನ್ನು ನೆತ್ತಿಯ ಮೇಲಿಟ್ಟಿವೆ. ನಿಜವಾಗಲೂ ಈ ಅತಿ ಭಾರವನ್ನು ಹೊರುವ ಚೈತನ್ಯವಂತೂ ಈ ಶರೀರಕ್ಕೆ ಇಲ್ಲವೇ ಇಲ್ಲ! ನಮ್ಮ ನಮ್ಮ ಜ್ಞಾನಗಳಿಗೆ ನಾವು ನಮ್ಮ ಶರೀರವನ್ನು ಒತ್ತೆಯಿಟ್ಟು ಜೀತದಾಳುವಿನಂತೆ ಬಳಸಿಕೊಳ್ಳುತ್ತಿದ್ದೇವೆ. ಅದನ್ನು ಪ್ರತಿನಿತ್ಯ ಕೊಲ್ಲುತ್ತಿದ್ದೇವೆ. ಆದಷ್ಟೂ ಬೇಗ ಅದನ್ನು ರೋಗಕ್ಕೀಡಾಗಿಸುತ್ತಿದ್ದೇವೆ.
ನಿಶ್ಚಿತ ಜ್ಞಾನಗಳ ಪರಿಣಾಮಗಳನ್ನಿಂದು ನಾವು ಪರಿವೀಕ್ಷಿಸಿ ನೋಡಿದಾಗ, ಅದರ ಭೀಕರ ಪರಿಣಾಮಗಳು ಆಘಾತಕಾರಿಯಾಗಿವೆ. ಅದು ನಮ್ಮನ್ನೂ, ನಮ್ಮ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ ಶಕ್ತಿಗಳನ್ನೂ ಭ್ರಷ್ಟ ರಾಜಕಾರಣಗೊಳಿಸುತ್ತಿದೆ. ಈ ಭ್ರಷ್ಟತೆಯು ತಿಳಿದವರನ್ನು ಪ್ರಮಾಣೀಕರಿಸಲು, ಏನೂ ತಿಳಿಯದಾ ಮೂರ್ಖರನ್ನೂ ಸೃಷ್ಟಿಸಿದೆ. ಉಳ್ಳವರ ಮುಂದೆ ಹೊಟ್ಟೆಗಿಲ್ಲದವರನ್ನು ಇಟ್ಟು ಅಪಹಾಸ್ಯ ಮಾಡುತ್ತಿದೆ. ಆಳುವವರಿಗೆ ಗುಲಾಮನನ್ನು ಒದಗಿಸಿದೆ. ಶೋಷಕರಿಗೆ ಶೋಷಿತನನ್ನು ಒದಗಿಸಿದೆ. ಬಲಿಷ್ಠರ ಮುಂದೆ ದುರ್ಬಲರನ್ನು ಹುಟ್ಟುಹಾಕಿದೆ. ಪ್ರಾಮಾಣಿಕತನಕ್ಕೆ ದುಷ್ಠತನವನ್ನು ಒದಗಿಸಿದೆ. ಅಸಹಾಯಕರ ಮುಂದೆ ಕಠೋರವಾಗಿರುವವರನ್ನು ಕಟ್ಟಿ ಕೊಟ್ಟಿದೆ. ಅಸಂಖ್ಯಾತವಾಗಿ ಚದುರಿ ಹೋಗಿರುವ ಜ್ಞಾನದಿಂದಾಗಿ ಎಲ್ಲರೂ ಅಂತಿಮ ಸತ್ಯವೊಂದನ್ನು ಕಟ್ಟಲು ಬದ್ಧವಾಗುವುದಾದರೂ ಹೇಗೆ? ಇಷ್ಟೊಂದು ವಿಧ್ವಂಸಕತನದಿಂದ ಕೂಡಿದ ನಮ್ಮ ಬದುಕುಗಳು ಸಂಕೀರ್ಣವಾಗದಿರಲು ಹೇಗೆ ಸಾಧ್ಯ? ಅಥವಾ ಇಷ್ಟೊಂದು ವೈರುಧ್ಯಪೂರ್ಣ ಅಸಮಾನತೆಗಳನ್ನು ಪ್ರಕೃತಿಯೇ ಸೃಷ್ಟಿಸಿತೆ?… ಎಂಬ ಪ್ರಶ್ನೆಗಳು ನಮ್ಮಲ್ಲಿ ಎಂದಿಗೂ ಸುಳಿದಾಡಲಿಲ್ಲ. ನಾವು ಮನುಷ್ಯರಾಗಿ ಏಕೆ ಹುಟ್ಟಿದ್ದೇವೆ? ಎಂಬುದನ್ನಂತೂ ಅರ್ಥಮಾಡಿಕೊಳ್ಳಲಾಗಲಿಲ್ಲ. ಪ್ರತಿಯೊಬ್ಬರದೂ ಇಲ್ಲಿ ಜವಾಬ್ದಾರಿಗಳಿವೆ ಎಂಬ ಮಹತ್ವವನ್ನು ಅರ್ಥೈಸಿಕೊಳ್ಳಲಿಲ್ಲ. ಏಕೆಂದರೆ ಈ ಯಾವ ಜವಾಬ್ದಾರಿಗಳನ್ನು ಯಾವ ದೇವರುಗಳೂ ಹೊತ್ತುಕೊಂಡು ಪರಿಹರಿಸಲಾರವು ಎಂಬುದನ್ನು ನಾವು ತಿಳಿಯಲಾಗಲಿಲ್ಲ.
ಜ್ಞಾನಕ್ಕೂ ಮತ್ತು ಸ್ವಯಂ ತಿಳುವಳಿಕೆಗೂ ಬಹಳ ವ್ಯತ್ಯಾಸವಿದೆ, ಜ್ಞಾನವು ಬುದ್ಧಿಮತ್ತೆಯಿಂದಾದುದು, ಜ್ಞಾನವು ನೈಜಸುಖವನ್ನು ನಾಳೆಗೆ ಮುಂದೂಡುತ್ತಿರುತ್ತದೆ. ಸ್ವಯಂ ತಿಳುವಳಿಕೆಯು ಜ್ಞಾನದ ಪ್ರಮಾದಗಳನ್ನು ಪರಿಶುಭ್ರಗೊಳಿಸಿ ನಮ್ಮನ್ನು ಪ್ರಜ್ಞೆಯ ಆಳಕ್ಕೆ ಕೊಂಡೊಯ್ಯಬಲ್ಲದು. ಪ್ರಜ್ಞೆಯೇ ಸರಿಯಾದ ಜ್ಞಾನ. ಪ್ರಜ್ಞೆಯ ಮೂಲಕ ಮಾತ್ರ ನಮ್ಮನ್ನೂ, ಜಗತ್ತನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪ್ರಜ್ಞೆಗೆ ಭಾಷೆ ಗೊತ್ತಿಲ್ಲದಿದ್ದರೂ ಅದರಲ್ಲಿ ನಿರಂತರವಾಗಿ ಪ್ರವಹಿಸುವ ಸಮಯೋಚಿತ ಸಂಜ್ಞೆಗಳಿವೆ.
ಪ್ರಜ್ಞೆಯು ವರ್ತಮಾನದಲ್ಲಿ ನಿರಂತರವಾಗಿ ಆಗುತ್ತಲೇ ಇರುವ ನಿರವಯವ ಸತ್ಯವಾಗಿದೆ. ಮೊದಲು ನಮ್ಮೊಳಗೆ ಸದಾ ಉಕ್ಕಿ ಉಕ್ಕಿ ಹರಿಯುತ್ತಿರುವ ಪ್ರಜ್ಞೆಯ ಸಂಜ್ಞೆಗಳನ್ನು ಅನುಭವಕ್ಕೆ ತಂದುಕೊಳ್ಳಬೇಕೆಂದರೆ, ನಮ್ಮೊಳಗೆ ನಮ್ಮನ್ನು ನೋಡಿಕೊಳ್ಳುವ ಹಾಗೂ ಪರಿಶೀಲಿಸಿಕೊಳ್ಳುವ ಒಳನೋಟದ ಕಲೆ ಬೇಕಾಗಿದೆ. ಮನುಷ್ಯ ಸಂಕಟಗಳಿಗೆ ತುಡಿಯುವ ಕನಿಕರವಿದ್ದಾಗ ಈ ಕೆಲಸ ಮತ್ತಷ್ಟೂ ಸುಲಭವಾಗುತ್ತದೆ. ನೆನಪಿಟ್ಟುಕೊಳ್ಳಿ, ನಮ್ಮಲ್ಲಿ ತುಂಬಿಹೋಗಿರುವ ಜ್ಞಾನದ ವಿಷಯಗಳ ಸಂದಣಿಯಲ್ಲಿ ಪ್ರಜ್ಞೆಯ ದನಿಯನ್ನು ಹಿಡಿಯಲಾಗದು. ಸುಪ್ತ ಮನಸ್ಸಿನಲ್ಲಿ ನೋವು, ಸಂಕಟ, ಅವಮಾನ, ಅಸೂಯೆ, ದ್ವೇಷ, ಏನೂ ಸಾಧಿಸಲಾಗಲಿಲ್ಲವೆಂಬ ಅಸಹಾಯಕತೆಗಳಿದ್ದಾಗ ನಮ್ಮೊಳಗಿನ ಜ್ಞಾನ ಕ್ರೂರವಾಗುತ್ತಾ ಮನಸ್ಸಿನಲ್ಲಿ ವಿಪರೀತ ಒತ್ತಡಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಆಗ ಹಳೆಯ ವಿಷಯದಿಂದ ಪಲಾಯನವಾಗಿ ಮನಸ್ಸು ಹೊಸ ವಿಷಯದಲ್ಲಿ ವಿರಮಿಸಲು ಹೋಗಿ ಮತ್ತಷ್ಟು ಹತಾಶೆಯನ್ನು ಸೃಷ್ಟಿಸುತ್ತಿರುತ್ತದೆ. ಇಂತಹ ರೋಗಗ್ರಸ್ಥ ಸ್ಥಿತಿಯಲ್ಲಿ ನಮ್ಮ ಯಾವ ಸಮಸ್ಯೆಗಳನ್ನೂ ನಾವು ಸರಿಯಾಗಿ ಅರ್ಥಮಾಡಿಕೊಳ್ಳಲಾರೆವು. ಹಳತಾದ ವಿಷಯಗಳ ಹಂಗು ತೊರೆದು ಮುಕ್ತವಾಗಿ ಚಿಂತಿಸಿದರೆ ನಮ್ಮ ಸಂಕಟಗಳ ಕಾರಣ ಸ್ಪಷ್ಟವಾಗುತ್ತಾ ಹೋಗುತ್ತದೆ. ಕಾರಣಕ್ಕೂ, ನಾವು ಮಾಡುವ ಕ್ರಿಯೆಗೂ ಸಂಬಂಧವಿರುತ್ತದೆ. ಕ್ರಿಯೆಯನ್ನು ಉಪೇಕ್ಷಿಸುತ್ತಾ ಹೋದಾಗ ಕಾರಣವೆಂಬ ಅಹಂ ಬಿದ್ದು ಹೋಗುತ್ತದೆ. ನಮಗೂ ಮತ್ತು ಜಗತ್ತಿಗೂ ಉಪಯೋಗವಿಲ್ಲದಾ ಅಹಂ ಅನ್ನು ನಾವು ಬಿಡಲು ಸಿದ್ಧರಿದ್ದಾಗ ನಮ್ಮಲ್ಲಿ ಅದ್ಭುತವಾದ ಬದಲಾವಣೆಗಳು ಕಾಣತೊಡಗುತ್ತವೆ. ಆಗ ನಮ್ಮ ಸುತ್ತಲಿನ ಬಂಧು, ಸ್ನೇಹಿತರೆಲ್ಲರೂ ನಮ್ಮೊಂದಿಗೆ ಮುಕ್ತವಾಗಿ ಸ್ಪಂದಿಸಲು ಪ್ರಾರಂಭಿಸುತ್ತಾರೆ. ಈ ಪ್ರಕೃತಿಯೂ ನಮ್ಮ ಕರೆಗೆ ಓಗುಡಲು ಪ್ರಾರಂಭಿಸುತ್ತದೆ. ಎಲ್ಲದರಲ್ಲೂ ನಿತ್ಯನೂತನತೆ… ನಮ್ಮಲ್ಲಿ ಅಂತಃಸ್ಪೃಹೆಯಾಗುತ್ತಾ ಹೋಗುತ್ತದೆ.
ಜ್ಞಾನವು ವ್ಯಷ್ಠಿ ಕೇಂದ್ರದಿಂದಾದದ್ದು. ಪ್ರಜ್ಞೆ ಸಮಷ್ಠಿಯ ಸಂಬಂಧದಲ್ಲಿ ಜೀವಿಸುವಂತಹದ್ದು. ನಮ್ಮ ಬದುಕು ಸಂಬಂಧಗಳ ಅವಲಂಬನೆಯಿಂದ ಸಾಧ್ಯವಾಗಿದೆ. ಜ್ಞಾನದ ಕ್ಷೇತ್ರ ಅವರವರ ಕಲ್ಪನೆಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರಜ್ಞೆಯೇ ಬದುಕಿನ ವಸ್ತುಸ್ಥಿತಿಯ ವಿಜ್ಞಾನ. ಪ್ರಜ್ಞೆ ಅನಂತವಾದದ್ದು, ಅದು ಎಲ್ಲವನ್ನೂ ತಿಳಿಯುವಂತಹದ್ದೇ ಆಗಿದೆ. ಅದರದು ಪ್ರಾಕೃತ ಭಾಷೆ. ಆಗತಾನೇ ಹುಟ್ಟಿದ ಯಾವುದೇ ಜೀವಿಯ ಶಿಶುವು ತಾಯಿಯ ಮೊಲೆಯ ತೊಟ್ಟನ್ನು ಅರಸಿ ಹೋಗುವಂತೆ… ವರ್ತಮಾನದಲ್ಲಿ ಅದಕ್ಕೆ ಅದರಿಂದಾಗಿ ಏನು ಬೇಕಾಗಿದೆಯೋ ಅದನ್ನು ಅದು ಹುಡುಕಿಕೊಳ್ಳುತ್ತದೆ. ಮತ್ತು ಜೀವಿಗೆ ದಕ್ಕಿಸಿಕೊಳ್ಳುವ ದಾರಿಗಳನ್ನದು ಸ್ವಯಂ ತೆರೆದುಕೊಳ್ಳುವಂತೆ ಮಾಡಬಲ್ಲದು. ಪ್ರಜ್ಞೆ ಹೀಗೆ ನಿರಂತರವಾದ ಆಗುವಿಕೆಯ ಪ್ರಕ್ರಿಯೆಯಲ್ಲಿ ಪ್ರಕಟವಾಗುತ್ತಿರುತ್ತದೆ. ಹೀಗಾಗಿ ಪ್ರಜ್ಞೆಯು ಅಂದರೆ ಸ್ವಯಂ ತಿಳುವಳಿಕೆ ಎಂಬುದು ಕಲಿತ ಜ್ಞಾನಗಳ ಕೂಸಿನ ಮೂಲ ಮಾತೃಕೆಯಾಗಿದೆ. ತಾಯಿ ಮಗುವನ್ನು ಸರಿದಾರಿಗೆ ತರುವಂತೆ ಜ್ಞಾನದ ಅತಿಗಳನ್ನು ಅದು ಶುಚಿಗೊಳಿಸಬಲ್ಲುದು. ನಾವು ಜೀವಂತವಾಗಿರುವುದು ನಿಜವೇ ಆಗಿದ್ದ ಪಕ್ಷದಲ್ಲಿ ನಮ್ಮ ಸ್ವಯಂ ತಿಳುವಳಿಕೆ ನಮ್ಮ ನೈಜ ಸಂಗಾತಿಯಾಗಿರಬೇಕು. ಕಾಯ ಮತ್ತು ಸಹಜ ಮನಸ್ಸಿನ ಅನೂಹ್ಯ ಸಂಬಂಧದಲ್ಲಿ ಜೀವಿಸುವುದೇ ಸರಿಯಾದ ಬದುಕು. ಇವೆರಡರ ಸಂಬಂಧದಲ್ಲಿ ಜೀವಿಸುವುದೆಂದರೆ ಪ್ರಜ್ಞೆಯಲ್ಲಿ ಜೀವಿಸುವುದೇ ಆಗಿದೆ. ಪ್ರಜ್ಞೆಯೇ ಸಹಜ, ಆಳ ನಿರಾಳ ಎಂಬ ಸಂತರ ಕರೆಯನ್ನು ನಾವು ಇನ್ನಾದರೂ ಆಲಿಸಲೇ ಬೇಕು.
ಕಾಯವೆ ಪೀಠಿಕೆ ಪ್ರಾಣವೆ ಲಿಂಗವಾಗಿರಲು,
ಬೇರೆ ಮತ್ತೆ ಕುರುಹೇಕಯ್ಯಾ?
ಕುರುಹುವಿಡಿದು ಕೂಡುವ ನಿರವಯವುಂಟೆ? ಜಗದೊಳಗೆ.
ನಷ್ಟವ ಕೈಯಲ್ಲಿ ಹಿಡಿದು ದೃಷ್ಟವ ಕಂಡೆಹೆನೆಂದಡೆ,
ಕಪಿಲಸಿದ್ಧಮಲ್ಲಿನಾಥಯ್ಯನು ಸಾಧ್ಯವಹ ಪರಿಯ ಹೇಳಾ ಪ್ರಭುವೆ.
ಸಂಬಂಧ ಅಸಂಬಂಧವೆಂದು ಹೆಸರಿಟ್ಟುಕೊಂಡು ನುಡಿವಿರಿ.
ಸಂಬಂಧವಾವುದು? ಅಸಂಬಂಧವಾವುದು ?_ ಬಲ್ಲಡೆ ನೀವು ಹೇಳಿರೆ?
ಕಾಯ ಸಂಬಂಧ, ಜೀವ ಸಂಬಂಧ, ಪ್ರಾಣ ಸಂಬಂಧ_
ಇಂತೀ ತ್ರಿವಿಧ ಸಂಬಂಧವನರಿದಡೆ
ಆತನೆ ಸಂಬಂಧಿ ಕಾಣಾ ಗುಹೇಶ್ವರಾ.
ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ,
ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ.
ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು,
ಗುಹೇಶ್ವರಾ ನಿಮ್ಮ ನೆನೆದೆನಾಗಿ.
ಜ್ಞಾನಗಳಿಂದ ಎಂದಿಗೂ ‘ಪ್ರಜ್ಞೆ’ಯ ಸಂಜ್ಞೆಗಳನ್ನಾಗಲಿ, ಅದರ ಆಳನಿರಾಳವನ್ನಾಗಲಿ ತಿಳಿಯಲು ಸಾಧ್ಯವೇ ಇಲ್ಲ. ಎಲ್ಲಾ ಜ್ಞಾನಗಳು ಬಹಿರ್ ಪ್ರಪಂಚದ ಎಲ್ಲಾ ಆಗುಹೋಗುಗಳ ಪ್ರಭಾವ- ಪ್ರಸರಣಗಳಿಂದ ಸಂಚಯಗೊಂಡು ಕಾರ್ಯೋನ್ಮುಖವಾಗಿರುತ್ತವೆ. ಜ್ಞಾನಗಳ ಮೂಲ ನಮ್ಮ ನಂಬುಗೆಗಳು, ಭಾವನೆಗಳು ಮತ್ತು ಅಸ್ತಿತ್ವದ ಅಹಂಕಾರಿಕೆಗಳಲ್ಲಿರುತ್ತದೆ. ಈ ಮೂರೂ ವಿಷಯಗಳಿಗೆ ಕೊನೆಯೆಂಬುದಾಗಲಿ, ಪರಿಹಾರವೆಂಬುದಾಗಲಿ, ಮುಕ್ತತೆಯೆಂಬುದಾಗಲಿ ಸಾಧ್ಯವಿಲ್ಲ. ಕನಸಿನಲ್ಲಿಯ ವಸ್ತು, ವ್ಯಕ್ತಿ, ವಾಹನ, ಆಭರಣಾದಿಗಳು ಎಚ್ಚರಗೊಂಡ ನಂತರ ಹೇಗೆ ಇಲ್ಲವಾಗುವವೋ ಹಾಗೆಯೇ ನಮ್ಮ ಜೈವಿಕ ಅಸ್ತಿತ್ವ (life existence)ದಲ್ಲಿ ಅವುಗಳಿಗೆ ಯಾವ ಇರುವಿಕೆಯೂ ಸಾಧ್ಯವಿಲ್ಲ. ಎಲ್ಲಾ ಪೂರ್ವಾಶ್ರಿತ ಕೃತಕ ಜ್ಞಾನಗಳು ಒಂದು ಕ್ಷಣದಲ್ಲಿ ನಿಜವೆನಿಸಿದ್ದು ನಂತರದ ಕ್ಷಣದಲ್ಲಿ ಸುಳ್ಳಾಗಿರುತ್ತವೆ. ಒಂದು ಕ್ಷಣದಲ್ಲಿ ನೆನಪಿಗೆ ಬಂದದ್ದು ಇನ್ನೊಂದು ಕ್ಷಣಕ್ಕೆ ಇಲ್ಲವಾಗುತ್ತವೆ. ಈ ಕ್ಷಣದಲ್ಲಿ ಅನುಭವಿಸಿದ್ದು ಮತ್ತೊಂದು ಕ್ಷಣದಲ್ಲಿ ಇಲ್ಲವಾಗುತ್ತದೆ. ಅವುಗಳನ್ನು ಯಾರೂ ಸ್ಥಿರವಾಗಿ ಹಿಡಿದು ನಿಲ್ಲಿಸಲಾರರು. ಆದ್ದರಿಂದ ಅವು ನಶ್ವರ. ಆದ್ದರಿಂದ ಇವುಗಳನ್ನು ಅತಿಯಾಗಿ ನಂಬಲು ಹೋಗದೆ ನಾವು ಜೀವಿಸುತ್ತಿರುವ ಅವಕಾಶದ ಈ ಕ್ಷಣದಲ್ಲಿ ಪೂರ್ವಾಶ್ರಿತಗಳನ್ನು ಬಿಟ್ಟು ಸ್ವತಂತ್ರವಾಗಿ ಚಿಂತಿಸುವುದರ ಮೂಲಕ ನಾವು ಮುಕ್ತತೆಗೆ ಅವಕಾಶ ಮಾಡಿಕೊಳ್ಳಬೇಕಾಗಿದೆ.
ಭಾವದಲೊಬ್ಬ ದೇವರ ಮಾಡಿ,
ಮನದಲೊಂದು ಭಕ್ತಿಯ ಮಾಡಿದಡೆ,
ಕಾಯದ ಕೈಯಲ್ಲಿ ಕಾರ್ಯವುಂಟೆ?
ವಾಯಕ್ಕೆ ಬಳಲುವರು ನೋಡಾ.
ಎತ್ತನೇರಿ ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ?
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು.
ಜಗವೆಲ್ಲವ ಕಾಬ ಕಣ್ಣು,
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು,
ಕೂಡಲಸಂಗಮದೇವಾ.
ಈ ವಚನಾಮೃತ ಪ್ರಸಂಗದಲ್ಲಿ ‘ಗಿಳಿಯೋದು’; ‘ಜಗವೆಲ್ಲಾ ಕಾಬಕಣ್ಣು’; ‘ತನ್ನ ಕೊಂಬಕೊಲ್ಲೆ ಕಾಣಲರಿಯದು’- ಎನ್ನುವ ದನಿ ಪ್ರಾಶಸ್ತ್ಯಗಳನ್ನು ಪ್ರಜ್ಞೆಗೆ ತಂದುಕೊಳ್ಳಬೇಕಾಗಿದೆ. ಗಿಳಿಯೋದು- ಎಂಬ ಸಂರಚನೆಯು mechanical learning ಗಳ ಅಪ್ರಯೋಜಕತೆಗಳನ್ನು ಎಚ್ಚರಿಸಿ ಮುಕ್ತ ಚಿಂತನೆಗಳನ್ನು ಪ್ರೇರೇಪಿಸುತ್ತದೆ. ಜಗವೆಲ್ಲ ಕಾಬಕಣ್ಣು- ಎಂಬ ವಿವೇಚನೆ ಜಗತ್ತೆಲ್ಲವನ್ನು ತನ್ನದೇ ಪ್ರಾಮುಖ್ಯತೆಯ ದೃಷ್ಟಿಕೋನಗಳಿಂದ ಗ್ರಹಿಸಿಕೊಳ್ಳುವ ರೋಗಗ್ರಸ್ಥ ಮನಸ್ಥಿತಿಗಳನ್ನು ಪ್ರಶ್ನಿಸುತ್ತದೆ. ತನ್ನ ಕೊಂಬ ಕೊಲ್ಲೆಯ ಕಾಣಲರಿಯದು- ಎನ್ನುತ್ತಾ ತನ್ನ ಅಹಂಕಾರಿಕೆಗಳು ತನ್ನನ್ನೇ ಕೊಂದು ಹಾಕಲು ತನ್ನಲ್ಲೇ ಇರುವ ಹರಿತ ಕೊಂಬೆಂದು ಸಾರಿ ಹೇಳುತ್ತದೆ. ಇದಿರ ಗುಣವ ಬಲ್ಲೆವೆಂಬರು- ಅಂದರೆ ಈ ನುಡಿ ಹೊರ ಜಗತ್ತಿನ ಜ್ಞಾನಗಳ ಗ್ರಹಿಕೆಗಳಿಂದಾದ ಕಾಲ್ಪನಿಕ ಕುದುರೆಯನ್ನೇರಿ ತಿರುಗಾಡುವ ಮನಸ್ಸನ್ನು ಗೇಲಿಮಾಡುತ್ತಲೇ ಹೊರಗಿರುವ ಕೊಳೆಯೆಲ್ಲವೂ ತನ್ನೊಳಗೂ ಇರುವ ಕಟುವಾಸ್ತವವನ್ನು ‘ತನ್ನ ಗುಣವನರಿಯರು’ ಎಂದು ವಿಡಂಬಿಸಿಬಿಡುತ್ತದೆ. ಈ ವಿಡಂಬನೆಯು ಒಳನೋಟಕ್ಕೆ ಎಲ್ಲರನ್ನೂ ಅಣಿಗೊಳಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಂಡಿದೆಯೆಂಬುದು ಈ ವಚನದ ಮಹತ್ವವಾಗಿದೆ.
ಆದ್ದರಿಂದ ಮನೋದೇಹ ಸಂಯುಕ್ತ ವಸ್ತುವಾಗಿರುವ (mind-body compound) ನನ್ನ ಜೈವಿಕ ಪದಾರ್ಥ (life substance)ದ ಇರುವಿಕೆಯು ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಆಹಾರದ ಮೇಲೆ ಅವಲಂಬಿತವಾಗಿದೆ ಎಂಬುದು ಸರಿಯಾದ ನಿಜ. ಈ ನಿಜವೆನ್ನುವುದು ನಾನು ನಿಂತ ನೆಲ, ನನ್ನ ನೆತ್ತಿಯ ಮೇಲಿನ ಹಾಗೂ ನನ್ನ ಸುತ್ತಲಿನ ಖಾಲಿ ಪ್ರದೇಶ ಮತ್ತು ನಿಸರ್ಗದ ಆಗುವಿಕೆಯ ವಿಲಕ್ಷಣತೆಯು ಇನ್ನಷ್ಟು ಅವಕಾಶದ ಸತ್ಯವಾಗಿರುವುದು… ಇದು ನನ್ನ ಪ್ರತ್ಯಕ್ಷ ಅನುಭವ. ಇದೇ ನಾನು ಈ ಕ್ಷಣದಲ್ಲಿ ನಂಬಬಹುದಾದ ಅಂತಿಮ ಸತ್ಯವಾಗಿದೆಯೇ ಹೊರತು ನನ್ನ ಅಹಂಕಾರಗಳಾಗಲಿ, ನನ್ನೊಳಗೆ ಸಂಗ್ರಹಗೊಂಡ ಜ್ಞಾನಗಳಾಗಲಿ, ನನ್ನ ಹಿತಾಸಕ್ತಿಗಳಾಗಲಿ ನನ್ನ ಜೀವದ ಇರುವಿಕೆಯನ್ನು ದೃಢೀಕರಿಸಲಾರವು. ನಾನು ಎಂಬ ಜೈವಿಕ ಪದಾರ್ಥವು (life substance) ಈ ಜಗತ್ತಿಗೆ ಬಾರದ ಮುನ್ನ ಅಥವಾ ನನ್ನ ಪ್ರಾಣವು ಹೋದ ನಂತರ ಇವೆಲ್ಲವೂ ಸರ್ವತಂತ್ರ ಸ್ವತಂತ್ರವಾಗಿ ಬಾಳಲಾರವು ಎಂಬುದೇ ನನ್ನ ಅಹಂಕಾರ ಮತ್ತು ಜ್ಞಾನಗಳಿಗಿರುವ ಮಿತಿಗಳು. ಸಂಗ್ರಹಿಸಿಗೊಂಡ ಜ್ಞಾನಗಳಾಗಲಿ, ಅಹಂಕಾರಗಳಾಗಲಿ, ಹಿತಗಳಾಗಲಿ ನನ್ನದೇ ಆದ ಕಾಲ್ಪನಿಕ ಪದಾರ್ಥಗಳು ಮಾತ್ರ ಆಗಿವೆ. ಆದ್ದರಿಂದ ನಾನೆಂಬ ಜೈವಿಕ ಪದಾರ್ಥದ ಆಳದಲ್ಲಿ ಸಂಚಿತಗೊಂಡ ಜ್ಞಾನಗಳಿಗೆ ಜಾಗವಿಲ್ಲವಾದ್ದರಿಂದ ನಾನು ಜ್ಞಾನವಲ್ಲ!!
ಜ್ಞಾನದಿಂದ ನಿಮ್ಮನರಿದಿಹೆನೆಂದಡೆ:
ಅರಿವಿಂಗೆ ಬಂದಾಗಲೆ ಕುರುಹು.
ಕುರುಹಿಂಗೆ ಕೇಡುಂಟು;
ಜ್ಞಾನವೆಂಬುದೇನು? ಮನೋಭೇದ !
ಇಂತಪ್ಪ ಜ್ಞಾನದ ಕೈಯಲ್ಲಿ,
ಅರುಹಿಸಿಕೊಂಡಡೆ ನೀ ದೇವನಲ್ಲ,
ಅರಿಯದಿದ್ದಡೆ ನಾ ಶರಣನಲ್ಲ.
ನೀ ದೇವ, ನಾ ಶರಣನೆಂತಾದೆ ಹೇಳಾ ಗುಹೇಶ್ವರಾ?
ಬಂಧುಗಳೇ… ನಂತರದ ಪ್ರಶ್ನೆಗೆ ಹೋಗೋಣ… ನಂತರದ ಪ್ರಶ್ನೆ ಏನು ಗೊತ್ತೆ? “ಪರಾಚೈತನ್ಯವೆಂದು ಉಪನಿಷತ್ತುಗಳಲ್ಲಿ ಹೊಗಳಲ್ಪಟ್ಟಿರುವ ಬ್ರಹ್ಮವಸ್ತು ನಾನೇ?”- ಭಾರತೀಯರಾದ ಯಾರಿಗಾದರೂ ಈ ಪ್ರಶ್ನೆಯು ಅತಿಮುಖ್ಯವಾಗಿದೆ. ಈ ಪ್ರಶ್ನೆಗೆ ನಾನು ಈ ಲೇಖನದ ಚರ್ಚೆಯಲ್ಲಿ ನನ್ನ ಯಾವುದೇ ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸದೇ ಈ ಪ್ರಶ್ನೆಯು ಎದುರುಗೊಂಡಾಗ ನಮ್ಮ ನೆಲದ ಸಂತರಾದ ಶರಣರು, ತತ್ವಪದಕಾರರು, ಶೈವತಾಂತ್ರಿಕರು, ಕಾಳಾಮುಖಾಚಾರ್ಯರು ಇತ್ಯಾದಿ ಹಿರಿಯರು ಹೇಗೆ ನಿಭಾಯಿಸಿದರು? ಈ ತರ್ಕಕ್ಕೆ ಅವರ ಉತ್ತರ ಏನಿತ್ತು ಎಂಬುದನ್ನಷ್ಟೇ ನಿಮ್ಮೊಂದಿಗೆ ಇಡಲು ಇಚ್ಛಿಸುತ್ತೇನೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಈ ಪ್ರಶ್ನೆಯು ಭಾರತೀಯರಲ್ಲಿ ಉಂಟು ಮಾಡಿದ ಮನೋವೈಜ್ಞಾನಿಕ ಪ್ರಭಾವವೇನು? ಅಥವಾ ನಮ್ಮ ಸಾಮಾಜಿಕ ವ್ಯವಸ್ಥೆ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿ ಅದು ಯಾವ ತಿರುವನ್ನುಂಟು ಮಾಡಿತೆಂಬುದನ್ನು ಮುಂದೆ ಚರ್ಚೆ ಮಾಡೋಣ.
ಈಗ ಎಲ್ಲರಿಗೂ ಶರಣಾರ್ಥಿ.
(ಮುಂದುವರೆಯುವುದು)
Comments 27
Pro. C.A.Somashekharappa
Apr 7, 2020Kudos to all your efforts, both individual and collective, with regard to successful building accounts on Basava philosophy and Sharana Sampradaya.
Regards
Prof.Somashekharappa
Jyothilingappa
Apr 7, 2020ತುಂಬಾ ಕುತೂಹಲ ಇತ್ತು..
ಪೋಲಂಕಿಯವರೊಂದಿಗೆ ಸರಿಯಾಗಿ ಆರಂಭಿಸಿ… ಹಸಿವಿಗೆ ಉಣ ಬಡಿಸಿದಿರಿ… ಅದು ಇನ್ನೂ ಹಸಿವು ಹೆಚ್ಚಿಸಿ… ಮತ್ತೆ ಕಾಯುತಿರುವೆ… ನಿಜಕ್ಕೂ
ಆಳ ತಾತ್ವಿಕ ನಿಲುವು, ಅಧ್ಯಯನ, ಸ್ವ ನೋಟ, ನಿರಹಂಕಾರ ಭಾಷೆ…
ಒಡಲ ಗಾಯಗಳು.. ಒಡಲು ಪದ ತೆಗೆದರೆ ಇನ್ನೂ ಒತ್ತು ಬರುತ್ತದೆ.. ನನ್ನ ಅಭಿಪ್ರಾಯ… ಮತ್ತೆ ಅಂತಿಮ ಸತ್ಯ ಕ್ಕೆ ಕೈ ಹಾಕಿರುವಿರಿ… ಕಾಯೋಣ… ಮತ್ತೊಮ್ಮೆ ಅಭಿನಂದನೆ. ಸಂಗ್ರಹಿಸುವ ಲೇಖನ.
Jeevan koppad
Apr 7, 2020ಅಕ್ಕಾ, ನಾನು ಯಾರು? ಲೇಖನಕ್ಕೆ ಕಾಯುತ್ತಿದ್ದೆ, ಜಾತಕಪಕ್ಷಿಯಂತೆ. ಮತ್ತೆ ಮತ್ತೆ ಓದಬೇಕಿನಿಸುತ್ತಿದೆ. ಸಂಪೂರ್ಣ ಜೀರ್ಣಿಸಿಕೊಂಡ ನಂತರ ಬರೆಯುತ್ತೇನೆ. ಅನಂತ ಶರಣುಗಳು.
Shiva S M
Apr 8, 2020ಪಾಂಡಿತ್ಯಪೂರ್ಣ ಲೇಖನ.
ಸನತ್ ಕುಮಾರ ಬೆಳಗಲಿ
Apr 9, 2020ಅದ್ಬುತ ಒಳನೋಟಗಳನ್ನು ಹೊಂದಿದ ಲೇಖನ. ಜ್ಞಾನ ಮಾರ್ಗದ ಕಟು ವಿಮರ್ಶೆ ತುಂಬ ಅರ್ಥಗರ್ಭಿತವಾಗಿದೆ. ಮುಂದಿನ ಭಾಗಕ್ಕೆ ನಿರೀಕ್ಷಿಸುವೆ.
Vinay Adihalli
Apr 11, 2020ಜ್ಞಾನ, ಪ್ರಜ್ಞೆ, ಅರಿವು ಕುರುಹು
ಬಹಳ ಸೊಗಸಾದ ಪಯಣ , ಇನ್ನೂ ಹೆಚ್ಚು ಹಸಿವನ್ನು ಉಂಟುಮಾಡುತ್ತಿದೆ “ಯಾರು ನಾನು?”
ಎಷ್ಟು ಎತ್ತರಕ್ಕೆ ಏರಲು ಬಯಸುತ್ತದೆ ಮನ
ಅಷ್ಟೆ ಆಳಕ್ಕೆ ಇಳಿಯಬೇಕು. ಕಾಯ, ಪ್ರಜ್ಞೆಯ ಅನುಭವ ಅರಿವಾಗಿ , ಕುರುಹಾಗಿ ಜ್ಞಾನಮದವನ್ನು ಅಳಿದು ಮುಂದುವರೆಯುವ ಹಸಿವು “ಯಾರು ನಾನು?”
Dr. J S Patil
Apr 11, 2020ನಾನು ಯಾರು ಎನ್ನುವ ಆತ್ಮಾವಲೋಕನದ ತಮ್ಮ ಲೇಖನ ಕಣ್ತೆರುವಂತದ್ದು . ಶರಣರು ತನ್ನನ್ನು ತಾನರಿತರೆ ಮಾತ್ರ ದೇವರನ್ನು ಕಾಣಬಹುದು ಎಂದು ಮಾರ್ಮಿಕವಾಗಿ ಹೇಳಿದ ಅನೇಕ ಉಪಮೇಯಗಳು ತಮ್ಮ ಲೇಖನದಲ್ಲಿ ಬಳಕೆಯಾಗಿವೆ :
” ಆಯುಧವೈನೂರಿದ್ದರೇನು,
ರಣರಂಗದಲ್ಲಿ ಹಗೆಯ ಗೆಲುವುದು ಒಂದೇ ಅಲಗು.
ಏನನೋದಿ ಏನಕೇಳಿದರೇನು, ತಾನಾರೆಂಬುದನರಿಯದನ್ನಕ್ಕ?
ತಾನಾರೆಂಬುದನರಿದ ಬಳಿಕ ನೀನಾನೆಂಬುದಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆಯಾಗಿಹನು.”
ಶರಣರ ತಾನ್ಯಾರೆಂಬುದನರಿದ ಬಳಿಕ ನೀ ನಾ ಎಂಬುದಿಲ್ಲ ಎನ್ನುವ ಮಾತನ್ನು ಮಾರ್ಧನಿಸಿದೆ.
ಬಸವರಾಜ. ಗೂ.ಸೂಳಿಭಾವಿ
Apr 11, 2020ಶರಣಿಯರೆ, ನಾನು ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿ ಉದ್ಭವಿಸಿದ ಕೆಲವು ವಿಷಯಗಳಿಗೆ ಸ್ಪಷ್ಟೀಕರಣ ಸಿಗದೆ, ನಾನು ವಿಚಾರಿಸುವುದು ಸರಿಯೋ, ತಪ್ಪೊ ಅಥವಾ ನಾನು ಋಣಾತ್ಮಕವಾಗಿರುವೆನೊ, ಅನ್ನುವ ದ್ವಂದ್ವವಿತ್ತು. ಕೆಲವರಲ್ಲಿ ನನ್ನ ಮನದಾಳದ ಮಾತುಗಳನ್ನು ಹೇಳಿದಾಗ, ಬಹಳ ಜನ ನನ್ನನ್ನು ಋಣಾತ್ಮಕವಾಗಿ ತಿಳಿದವರೆ ಹೆಚ್ಚು.
ಅರಸುತ್ತಿದ್ದ ವಸ್ತು ನಮ್ಮ ಹತ್ತಿರ ಸುಳಿದು ಬಂದಾಗ, ಆಗುವ ಪರಮಾನಂದ, ತಾವು ಬರೆದ “ನಾನು ಯಾರು ಎಂಬ ಆಳ ನಿರಾಳ” ಭಾಗ 1 ಹಾಗೂ 2 ಲೇಖನ ಓದಿದಾಗ ಪರಮಾನಂದವನ್ನು ಅನುಭವಿಸಿದೆನು. ತಮ್ಮ ಲೇಖನ, ವಿಷಯದಲ್ಲಿ ಪರಿಪೂರ್ಣವಾಗಿದ್ದು, ತುಂಬಾ ಸುಲಲಿತವಾಗಿದೆ. ತಮ್ಮ ಲೇಖನಗಳನ್ನು ಓದುವಾಗ, Cotton candy ತಿಂದ ಅನುಭವವಾಗುತ್ಥದೆ. ಕಾಟನ್ ಕ್ಯಾಂಡಿ ತಿನ್ನುವಾಗ, ತಿಂದಿದ್ದೆ ಗೊತ್ತಾಗುವುದಿಲ್ಲ ಹಾಗೂ ತಿಂದಷ್ಟೂ ತಿನ್ನಬೇಕೆನ್ನುಸುತ್ತದೆ.
ವಿಜಿ, ಚಾಮರಾಜನಗರ
Apr 11, 2020ಬುದ್ದಿ, ಮೋಹ, ಮದಗಳ ನಡುವೆ ವಾಸ್ತವದ ಮರೆವು ನಮ್ಮ ಜೀವನವನ್ನೇ ರೇಸ್ ಕುದುರೆಗಳಾಗಿಸಿವೆ, ಓಡುವುದೊಂದೇ ಗುರಿ, ಎಲ್ಲಿಗೆ? ಏಕೆ? ನಂತರ? ಯಾವುದೂ ನಮಗೆ ಬೇಕಾಗಿಯೇ ಇಲ್ಲ ಎನ್ನುವಷ್ಟು ಬೌದ್ಧಿಕ ಗುಲಾಮರಾಗಿದ್ದೇವೆ ಅಹಂಗೆ ಸಿಲುಕಿ. ತುಂಬಾ ಸತ್ವಪೂರ್ಣ ವಿಚಾರ ಅಕ್ಕ, ಗೊಂದಲಗಳಿಗೆ ಉತ್ತರ ದೊರಕಿಸುವಷ್ಟು ಪ್ರಬಲವಾಗಿದೆ.
ಆದರೆ ಪ್ರತಿಯೊಂದು ಸಣ್ಣ ವಿಷಯಕ್ಕೂ ನಾವು ಅಹಂ ಅಥವಾ ಸ್ಥಾನಮಾನ, ಅಸ್ತಿತ್ವಕ್ಕೆ ಅಂಟಿಕೊಂಡಿದ್ದೇವೆ, ಇದು ಬಿಟ್ಟೇನೆಂದರೆ ಬಿಟ್ಟೀತೇ?…. ಅಹಂ ತೊರೆದು ಬದುಕಲಾದೀತೇ ಎನ್ನುವುದೇ ಪ್ರಶ್ನೆ.
Ca.Ramesha gowda M Y., B. COm., Fca
Apr 12, 2020ನಿಮ್ಮ ನಾನು ಯಾರು -೨ ಓದಿದೆ, ಇದು ಸವಿಸ್ತಾರವಾದ ಲೇಖನ. ಎಷ್ಟೊಂದು ಆಳವಾದ ಅಧ್ಯಯನ
ಜ್ಞಾನ ಮತ್ತು ಪ್ರಜ್ಞೆ ನಡುವಿನ ಅಂತರವೇನೆಂದು ಎಂದೂ ಯೊಚಿಸಿರಲಿಲ್ಲ ಅಥವಾ ಅದು ನಮ್ಮ ಸಾಮಾನ್ಯ ಯೋಚನೆಗೆ ನಿಲುಕದ ದಾರ್ಶನಿಕ ವಿಮರ್ಶ
ನಿಮ್ಮ ಈ ಮಹಾ ಲೇಖನಕ್ಕೆ ತುಂಬು ಹೃದಯದ ಅಭಿನಂದನೆಗಳು
Panchakshari H V
Apr 14, 2020ಸೂಕ್ಷ್ಮಾತಿಸೂಕ್ಷ್ಮ ಅಹಂಕಾರವನ್ನು ನಿರ್ವಯಲಾಗಿಸಿ ಅರಿವಿನ ಪ್ರಜ್ಞೆಯಲ್ಲಿ ತೇಲಿಸುವಂಥಾ ಲೇಖನ.
ಶರಣುಶರಣಾರ್ಥಿ
ಪೆರೂರು ಜಾರು, ಉಡುಪಿ
Apr 14, 2020ಸುದೀರ್ಘವಾದ ಲೇಖನ ಚೆನ್ನಾಗಿದೆ. ನನಗೆ ಅನಿಸಿದ್ದು- ಜ್ಞಾನ- ಅಜ್ಞಾನಗಳೆರಡೂ ನನ್ನೊಳಗಿರುವುದೇ ನಾನು. ಈ ಕಾರಣದಿಂದ ಜಗತ್ತಿನಲ್ಲಿ ಉತ್ತಮ ಜೀವಿಗಳನ್ನು ಕಾಣಬಹುದೇ ಹೊರತು ಅತ್ಯುತ್ತಮ ಜೀವಿಗಳು ದೊರೆಯುವುದು ಸಾಧ್ಯವಿಲ್ಲ. ಹಳೆಯ ಭೂಮಿಯಲ್ಲಿ ನಿಂತರೂ ಹೊಸ ನಿಸರ್ಗವು ನಿತ್ಯ ನೂತನವೆಂಬುದನ್ನು ತಿದ್ದುವ ಗುರುವಾದರೂ ಪರಿಪೂರ್ಣತೆಗೆ ಮುನ್ನ ಆಯುಷ್ಯ ಮುಗಿಯುತ್ತದೆ. ಅಂದರೆ ನಾನು ನಾನಾಗುವ ಮುನ್ನ ಮಣ್ಣಾಗುತ್ತೇನೆ….
R.P. Jagadeesh
Apr 14, 2020Super, intellectual article, hats off to your indepth knowledge about the subject. Keep it up.
ಮಹಾದೇವ
Apr 14, 2020ಪೂರ್ಣ ಲೇಖನವನ್ನು ಓದಬೇಕು ಅನಿಸುತ್ತಿದೆ ಮೇಡಮ್. ನಾನು ಕೂಡ ಈಗ ನಾಲ್ಕು ದಿನದಿಂದ ನನ್ನೊಳಗನ್ನು ಇಣುಕುವ ಸಣ್ಣ ಪ್ರಯತ್ನದ ಹಾದಿಯಲ್ಲಿರುವುದರಿಂದ ನಿಮ್ಮ ಅನುಭವವು ನನಗೆ ಚೂರುಚೂರೇ ಆಗುತ್ತಿದೆ. ಕೆಲವು ಸಲ ಶ್ವಾನ ಜ್ಞಾನದ ಪರಮಾವಧಿಯೊಳಗೆ ಹೊಯ್ದಾಡುತ್ತಿದ್ದೇನೆ. ಬಹುಶಃ ಇದಕ್ಕೆಲ್ಲ ಅಂತರ್ಜಾಲದಲ್ಲಿ ಸಿಕ್ಕುವ ಮಾಹಿತಿಯನ್ನೇ(ಕುಕ್ಕುಟ ಜ್ಞಾನ) ಜ್ಞಾನವೆಂದು ಭಾವಿಸಿ ಸಧ್ಯಕ್ಕೆ ಶ್ವಾನ ಜ್ಞಾನದಲ್ಲೇ ವಿರಮಿಸಿದ ಅನುಭವವಾಗುತ್ತಿದೆ. ನಿಮ್ಮ ಈ ಲೇಖನವು ಪ್ರಜ್ಞೆಯನ್ನು ಎಚ್ಚರಿಸಿತು. ಶರಣು ಶರಣಾರ್ಥಿಗಳು.
ರಾಧಾ ನಿರಂಜನ
Apr 15, 2020ನಾನು ಯಾರು ? ಎಂಬ ಪ್ರಶ್ನೆ ಯೇ ರೋಮಾಂಚನವಾಗಿದೆ. ಈ ಲೇಖನ ಬಹಳ ತಾತ್ವಿಕವಾಗಿ ಸೊಗಸಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರಲ್ಲೂ ನಾನು ಯಾರು ? ಎಂಬ ಪ್ರಶ್ನೆ ಕಾಡಿದ್ದು ಇದೆ .ಅದರಲ್ಲೂ ಪಾರಮಾರ್ಥಿಕ ಪಥದತ್ತ ಹೆಜ್ಜೆ ಇಡುವವರಲ್ಲಿ ಮೊದಲು ಅರಿಯಬೇಕಾದದ್ದು ನಾನು ಯಾರು? ಎಂಬುದೇ.
ಇದಕ್ಕೆಲ್ಲ ಸಮರ್ಪಕ ಉತ್ತರವನ್ನು ಈ ಲೇಖನಗಳ
ಮೂಲಕ ತಿಳಿಸಿದ್ದೀರಿ. ಆದರೆ ನಾವೆಲ್ಲಾ ನಾನೇ ಎಂಬ ಅಹಂಕಾರದಲ್ಲೇ ಮುಳುಗಿದ್ದೇವೆ. ನಾವಾರೆಂಬ ಪ್ರಶ್ನೆ ಹಾಕಿಕೊಂಡು ಅದರ ಹುಡುಕಾಟದದಲ್ಲಿ ತೊಡಗ ಬೇಕಾಗಿದೆ. ಲೇಖನಗಳ ವಿಚಾರಗಳು ಬಹಳ ಉಪಯುಕ್ತವಾಗಿವೆ. ಅಕ್ಕಮಹಾದೇವಿಯವರ ವಚನ ನೆನಪಾಗ್ತಾ ಇದೆ: ”ಎಲ್ಲ ಎಲ್ಲವನರಿದು ಫಲವೇನಯ್ಯ ತನ್ನ ತಾ ಅರಿಯಬೇಕಲ್ಲದೇ’ ಆಳವಾದ ಜ್ಞಾನ ಹಾಗೂ ಅನುಭಾವದ ಲೇಖನಕ್ಕೆ ಭಕ್ತಿಯಾ ಶರಣು 🙏🏼
Basavaraj Karihole
Apr 15, 2020“ಮನುಷ್ಯ ಸಂಕಟಗಳಿಗೆ ತುಡಿಯುವ ಕನಿಕರವಿದ್ದಾಗ ಈ ಕೆಲಸ ಮತ್ತಷ್ಟೂ ಸುಲಭವಾಗುತ್ತದೆ. ನೆನಪಿಟ್ಟುಕೊಳ್ಳಿ”👍
“ನಮ್ಮೊಳಗಿನ ಜ್ಞಾನ ಕ್ರೂರವಾಗುತ್ತಾ…”( ಮನಸ್ಸು ಜ್ಞಾನದ ಅಸಮ್ಯಗ್ ಆಗಿ ಅಹಂಕಾರ ಉಂಟಾಗುವುದು)
….
ಒಟ್ಟಾರೆ ವಿಷಯ ಬಲವಾಗಿ ವಿಷದೀಕರಿಸಲ್ಪಟ್ಟಿದೆ. ಗ್ರಹಿಕೆಗೆ ಪ್ರಯತ್ನಬೇಕು. ಸಾಧನೆಯ ವಿಷಯ, ಕಾರ್ಮಿಕ ಮಲವನ್ನು ದಾಟಿ ನಿಲ್ಲಬಹುದು. 🙏🙏
Girija K.P
Apr 18, 2020ಇದೊಂದು ಪ್ರಯಾಣ, ಜೊತೆಗೆ ಹೆಜ್ಜೆ ಹಾಕಿ ಎಂದಿದ್ದೀರಿ. ನನಗಂತೂ ನನ್ನನ್ನು ನಾನು ತಿಳಿಯುವ ಬಗ್ಗೆ ಬಹಳ ಕುತೂಹಲ, ಆಸಕ್ತಿ ಇದೆ. ಲೇಖನ ಓದುತ್ತಾ ಇದರ ಆಶಯದ ಜೊತೆ ನಾನೂ ಸೇರಿಹೋದಂತೆ ಅನಿಸತೊಡಗಿದೆ. ನನ್ನನ್ನು ಪುನರ್ ಸೃಷ್ಟಿಸಿಕೊಳ್ಳಲು ದಾರಿ ತೋರಿಸಿರುವಿರಿ. ಎಲ್ಲಾ ಕೊಡವಿಕೊಂಡು ಈ ಹಾದಿಯಲ್ಲಿ ನಡೆಯಬೇಕೆನಿಸಿದೆ. ನನ್ನೊಳಗೆ ಚಿಂತನೆಯ ಕಿಡಿ ಹಚ್ಚಿದ ನಿಮಗೆ ಅನಂತ ನಮನಗಳು.
ಮನೋಹರ್ ಆಚಾರ್
Apr 19, 2020ಲೇಖನ ಓದಿದೆ ಬಹಳ ಚೆನ್ನಾಗಿದೆ. ಇಷ್ಟು ತೂಕದ ಮತ್ತು ಆಳವಾದ ಅಧ್ಯಯನ ನೋಡಿ ಆಶ್ಚರ್ಯ ವಾಯಿತು. ಲೌಕಿಕ ಮತ್ತು ಅಲೌಕಿಕದ ಮಧ್ಯ ನಡೆದಾಡುವಾಗ ನಮ್ಮ ಎಚ್ಚರ, ಮಾನಸಿಕ ಒತ್ತಡ ಎಲ್ಲದರ ಬಗ್ಗೆ ಸೊಗಸಾದ ವಿಶ್ಲೇಷಣೆ. ಅರ್ಥಗರ್ಭಿತ. ಶುಭವಾಗಲಿ.
Pro. Shivanna
Apr 20, 2020Highly intellectual and reflective article. You have analysed various facets of ‘self’ and ‘egoism’ that one has towards ones own achivement and accomplishments! It’s true one must have his or her own selfishness but certainly not at the cost of others. Achievements are possible only when we such attitudes but one should not exploit the situation and the environment or the ignorance of others.
Congratulations for writing an interesting and thought provinking article; bahala prabhuddavada lekana. I don’t know whether I have understood the article particularly inner and insightful thoughts.
Wish many more such articles to come from your mind and computer PEN!
Naveen JK
Apr 24, 2020ಇದು ಬರಿಯ ಲೇಖನವಲ್ಲ. ಕಳಕಳಿಯಿಂದ ಮಾತನಾಡುತ್ತಾ ಮಾರ್ಗದರ್ಶನ ಮಾಡುವ ಮಾತುಗಳು…… ಶರಣರ ಮಾತುಗಳು ನಮ್ಮನ್ನು ಎಚ್ಚರಿಸಿ ಕರೆದೊಯ್ಯುವಂತೆ ಅನುಭವವಾಯಿತು. ಗುರು-ಶಿಷ್ಯರ ಸಂಬಂಧವನ್ನು ಎಷ್ಟು ಚನ್ನಾಗಿ ಹೇಳಿದ್ದೀರಿ ಅಕ್ಕಾ, ಅಂಥ ಗುರು-ಶಿಷ್ಯರು ಆಗ 12ನೇ ಶತಮಾನದಲ್ಲಿದ್ದರು, ಈಗ ಲೆಕ್ಕಾಚಾರದ ಜಗತ್ತಿನಲ್ಲಿ ಪರುಷದಂತಹ ಗುರು, ನಂಬಿ ನಡೆಯುವ ಶಿಷ್ಯ ಇದ್ದಾರೆಯೇ?
Dr. sarvamangala khanapuri
Apr 24, 2020Namaste madam,
Your article naanu yaaru is very thought provoking and eye opener.
Firstly i congratulate you for writing such an explicit article about which most of us are always having a question mark. The way you have intricately woven the words and aptly placed the relevant vachanas of sharanas is mind blowing. the search for who am i ends when we start introspecting ourselves and become a better version of ours clearing away the mask of wrong perception and start looking into others as we look into our self. gratitude for your divine touch which REALLY touched my heart knowing how beautifully and in a simple manner sharanas have conveyed the message.
waiting for your next article.
Thank you.
ಗಂಗಾಧರ ಮೊದಲಿಯಾರ್
Apr 26, 2020ನಾನು ಯಾರು? ಎಂಬ ಆಳನಿರಾಳ-2 ಓದಿದೆ. ಮನುಷ್ಯ ಬದುಕಿಗಿರುವ ಬಯಲ ಬೆಡಗಿನ ಅನುಸಂಧಾನವನ್ನು ಹಂತಹಂತವಾಗಿ ವಿವರಿಸಿರುವ ಪರಿ, ಧರ್ಮ ಗುರುಗಳನ್ನು , ತತ್ವಶಾಸ್ತ್ರಜ್ಞರನ್ನು ಮೀರಿಸುವ ಚಿಂತನೆಯಾಗಿದೆ. ಇಂದಿನ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ‘ನಿಮ್ಮಲ್ಲಿ ನೀವು ತಿಳಿದು ನೋಡಿದರೆ ಅನ್ಯವಿಲ್ಲ’ ಎಂಬುದು ನಿಮ್ಮ ಬೌದ್ಧಿಕ ಚರ್ಚೆಯ ಸಾರವಾಗಿದ್ದು, ನಿಮ್ಮ ಓತಪ್ರೋತ ವಿಚಾರಧಾರೆ ಅರಿವಿನ ಆಗರವೇ ಆಗಿದೆ.
ಬಸವರಾಜ ಹಂಡಿ
May 2, 2020ಈ ಲೇಖನದಲ್ಲಿ ಮಂಗಳಾ ಎಂಬ ಮಾನಸಿಕ/ಅಧ್ಯಾತ್ಮಿಕ ವೈದ್ಯ ಮರೆವು ಎಂಬ ಮಾನಸಿಕ ಕಾಯಿಲೆಗೆ “ನಾನು ಯಾರು” ಎಂಬ ಚಿಕಿತ್ಸೆಯ ವಿಧಾನವನ್ನು ಉಪಯೋಗಿಸಿ ಕಾಯಿಲೆ ಗುಣಪಡಿಸಲು ಪ್ರಯತ್ನಿಸಿದ್ದಾರೆ.ಲೇಖನದಲ್ಲಿ ಬಹಳಷ್ಟು ಕ್ರಿಯೆಗಳನ್ನು ಹೇಳಿದ್ದಾರೆ. ಸುಮ್ಮನೆ ಕಾಲಹರಣ ಮಾಡಲು ಓದುವ ಲೇಖನ ಇದಲ್ಲ. ಇದು ನಿಮ್ಮಲ್ಲಿ ಯಾವ ಸ್ವಾರಸ್ಯ/ರೋಮಾಂಚನ ಉಂಟು ಮಾಡಲ್ಲ. ಗುರುಪಥದಲ್ಲಿ ಸಾಗುವ ಕ್ರಮವನ್ನು ಹೇಳಿದ್ದಾರೆ. ಪ್ರತಿಯೊಂದು ವಾಕ್ಯ ಪ್ರಾಯೋಗಿಕವಾಗಿ ಈ ಲೇಖನದಲ್ಲಿ ಹೇಳಿದ್ದನ್ನು ನಮ್ಮ ಜೀವನದಲ್ಲಿ ಅಳವಡಿಸಲು ಸೂಚಿಸುತ್ತದೆ.
ಬಹಳಷ್ಟು ವಚನಗಳು ನಾನು ಯಾರು ಎಂಬ ಪ್ರಶ್ನೆಯ ಸುತ್ತ ಗಿರಿಕಿ ಹೊಡೆಯುತ್ತವೆ. ನಮ್ಮನ್ನು ನಾವು ತಿಳಿದುಕೊಳ್ಳುವುದು ವಚನಗಳ ಪರಮ ಉದ್ದೇಶವಾಗಿತ್ತು. ತನ್ನನ್ನು ತಾನು ತಿಳಿದರೆ ತಾನೆ ದೇವ ನೋಡ ಎಂದು ಹೇಳುವ ಮುಖಾಂತರ ನಮ್ಮನ್ನು ನಾವು ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎಂದು ಶರಣರು ಸಾರಿ ಸಾರಿ ಹೇಳುತ್ತಾರೆ.
ಇದು ಲೇಖನದ 2ನೆಯ ಭಾಗ. ಇಲ್ಲಿ ನಾನು ಯಾರು ಎಂಬ ಪ್ರಶ್ನೆಗೆ ನಮ್ಮಲ್ಲಿ ಸಂಗ್ರಹಿಸಿದ ಜ್ಞಾನ ಉತ್ತರವೇ ಎಂದು ಪರಿಶೀಲನೆ ಮಾಡುತ್ತಾರೆ. ಜ್ಞಾನದ ಎಲ್ಲ ಭಾಗಗಳನ್ನು ಒಂದು ಒಂದಾಗಿ ಬಿಚ್ಚುತ್ತಾ ಜ್ಞಾನದಲ್ಲಿ ಅಡಗಿರುವ ಅಹಂಕಾರವನ್ನು ತೋರಿಸುತ್ತಾರೆ. ನೋಡಿ ಈ ಕೆಳಗಿನ ವಾಕ್ಯ ಎಷ್ಟು ಅರ್ಥಪೂರ್ಣವಾಗಿದೆ
“ನಾವಿಂದು ಪ್ರತಿಕ್ಷಣ ನೋಡುತ್ತಿರುವ ಮತ್ತು ಸದಾ ನಮ್ಮ ಅನುಭವಗಳಿಗೆ ಬರುತ್ತಿರುವ ಈ ಮಾನವ ಲೋಕವು,ಮನುಷ್ಯ ಗಳಿಸಿಕೊಂಡು ಅವನ್ನು ಕಾರ್ಯಗತಕ್ಕಿಳಿಸಿದ ಜ್ಞಾನದ ಫಲವೇ ಆಗಿದೆ”
ಮಂಗಳಾ ಶರಣೆ ಈ ಲೇಖನ ಬರೆಯಲು ಎಷ್ಟು ಶ್ರಮಪಟ್ಟಿದ್ದಾರೆ ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ತಮ್ಮ ದೇಹ ಹಾಗು ಮನಸ್ಸನ್ನು ಈ ಪ್ರಯೋಗದ ಭಾಗವಾಗಿ ಈ ಲೇಖನದಲ್ಲಿ ಬರೆದಿದ್ದನ್ನು ತಮ್ಮ ಮೇಲೆ ಉಪಯೋಗಿಸಿದ್ದಾರೆ. ನಾವು ಸಹ ಈ ಲೇಖನವನ್ನು ಸಾಮಾನ್ಯ ಲೇಖನ ಅಂತ ಕಾಲಹರಣ ಮಾಡಲು ಓದಬಾರದು. ಈ ಲೇಖನದಲ್ಲಿ ಹೇಳಿದ್ದನ್ನು ನಮ್ಮ ಮೇಲೆ ಪ್ರಯೋಗಿಸಬೇಕು. ನಮ್ಮ ಮೇಲೆ ಪರಿಣಾಮ ಬಿರಿ, ನಮ್ಮ ಮನಸ್ಸು ಸ್ವಾಸ್ಥ ಮನಸ್ಸು ಆಗಿ ಸಮಾಜಕ್ಕೆ ಉಪಯೋಗ ಆಗಬೇಕು. ಈ ವಿರಳವಾದ ಜ್ಞಾನ ದಾಸೋಹಕ್ಕೆ ಮಂಗಳಾ ಶರಣೆಗೆ ಎಷ್ಟು ಧನ್ಯವಾದ ಹೇಳಿದರು ಸಾಲದು.
ನಮ್ಮೆಲ್ಲರ ಶರಣು ಶರಣಾರ್ಥಿ.
Shubha
May 2, 2020ಅಹಂ ಬ್ರಹ್ಮಾಸ್ಮಿ, ನಾನು ಸತ್ಯ- ಜಗತ್ ಮಿಥ್ಯ, ಜೀವ-ಜೀವನ ನಶ್ವರ, ಸೃಷ್ಠಿ ಕರ್ತ ಮಾತ್ರ ಸತ್ಯ, ಎಂಬಿತ್ಯಾದಿ ಸಾಲುಗಳು ಕೇವಲ ಯಾರು ನಾನು ? ಎಂಬ ಪ್ರಶ್ನೆಯನ್ನು ಎತ್ತಿ ತೋರಿಸಿದ್ದವೇಯೇ ಹೊರತು ಆಳವಾಗಿ ಯೋಚಿಸುವ ಹಾಗೆ ಮಾಡಿರಲೇ ಇಲ್ಲ. ಇದು ಯೋಚಿಸಿದಷ್ಟು ಜಟಿಲವಾಗಿಯೇ ತೋರುತ್ತದೆಯೇ ಹೊರತು ಕಾಣುವಷ್ಟು, ಕೇಳುವಷ್ಟು ಸರಳವಾಗಿ ಇಲ್ಲವೇ ಇಲ್ಲ. ಮುಂದಿನ ಲೇಖನದಲ್ಲಾದರೂ ನಾನು ಯಾರೆಂದು ಅರಿವಾದೀತೇ? ಶತಮಾನಗಳಿಂದಲೂ, ವಿಶ್ವದ ವಿವಿಧ ಭಾಗಗಳ ಎಲ್ಲಾ ನಾಗರೀಕತೆಗಳ ಹುಟ್ಟು , ಆಳ್ವಿಕೆ , ವಿನಾಶ ಇವೆಲ್ಲವುಗಳು ಬಹುಷಃ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ತನ್ನೊಂದಿಗೆ ಮಾನವ ನಡೆಸಿದ ಹೋರಾಟ ವಿದ್ದೀತೆ?
Ravandur shiva
May 5, 2020Thanks for the explanations.
ಪಂಡಿತಾರಾಧ್ಯ ಶ್ರೀಗಳು
May 5, 2020ನಾನು ಯಾರು ಎನ್ನುವ ನಿಮ್ಮ ಸುದೀರ್ಘ ಮತ್ತು ಆತ್ಮಾವಲೋಕನಕ್ಕೆ ಎಡೆ ಮಾಡುವ, ಪ್ರಜ್ಞೆಯನ್ನು ಜಾಗೃತಗೊಳಿಸುವ ಎರಡೂ ಲೇಖನ ಗಳನ್ನು ನಿನ್ನೆ ರಾತ್ರಿ ಓದಿದೆವು. ಇನ್ನೂ ಪೂರ್ಣವಾಗಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಹಂ ನಿರಶನವಾಗದೆ, ಕಾಯಕ ಮತ್ತು ದಾಸೋಹ ತತ್ವಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದೆ ಇದ್ದರೆ ನಾನು ಯಾರು ಎಂದು ಅರ್ಥ ಮಾಡಿಕೊಳ್ಳುವುದು ತಂಬಾ ಕಷ್ಟ. ಬಾಲ್ಯದಿಂದಲೂ ನಿಮ್ಮನ್ನು ಕಾಡಿದ ಪ್ರಶ್ನೆಗೆ ಈಗ ಪರಿಹಾರ ಕಂಡುಕೊಳ್ಳಲು ಶರಣರ ತಾತ್ವಿಕ ವಿಚಾರಗಳನ್ನು ಬಳಸಿಕೊಂಡಿರುವ ವಿಧಾನ ಆಪ್ಯಾಯಮಾನವಾಗಿದೆ.
Ambaraya
Dec 7, 2020ನಾನಾರು ಎಂಬ ಆಳ ನಿರಾಳ ಓದುತ್ತಾ ಹೋದಾಗ ಅದರ ಆಳ ಹುಡುಕುವುದೆ ಕಷ್ಟ ಏಕೆಂದರೆ ಅದು ನಿರಾಳವಾಗಿದೆ. ಅಳಿಯಲು ಬಾರದ ನಿರವಯ ಬಯಲು ಆಗಿದೆ.