ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
Share:

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…

ಸೃಷ್ಟಿಯನ್ನು ವಿವಿಧಾ ಎಂದೇ ಕರೆಯಲಾಗುತ್ತದೆ. ಏಕತಾನತೆ ಎನ್ನುವುದಕ್ಕೆ ಇಲ್ಲಿ ಅರ್ಥವೇ ಇಲ್ಲ. ಏಕ ರೂಪು, ಏಕ ಬಣ್ಣ, ಏಕ ಸ್ವಭಾವ, ಏಕ ಭಾವನೆ ಎನ್ನುವುದೆಲ್ಲವೂ ಸೃಷ್ಟಿಗೆ ಅಪರಿಚಿತ. ವೈವಿಧ್ಯತೆ ಅದರ ಮೂಲ ಗುಣ. ವಿವಿಧತೆಯ ಮೂಲ ಶೃತಿಯನ್ನು ತಮ್ಮ ಬದುಕಿನ ಮೂಲಕ ಎತ್ತಿಹಿಡಿದು ಗೌರವಯುತವಾಗಿ ಬದುಕಬಲ್ಲ, ಹೊಸ ಸಮಾಜವನ್ನು ನಿರ್ಮಿಸಬಲ್ಲ ಸಾಧ್ಯತೆಯನ್ನು ತೋರಿದವರು 12ನೇ ಶತಮಾನದ ಶರಣರು. ಬಹುದನಿಗಳ ಸ್ವೀಕಾರ, ವಿಚಾರಗಳ ವಿನಿಮಯ, ಭಾವನೆಗಳ ಸಮನ್ವಯ ಮತ್ತು ಪೂರ್ವಾಗ್ರಹಗಳಿಂದ ಮುಕ್ತವಾದ ಮನಸ್ಸು ಶರಣ ಚಳುವಳಿಯ ವೈಶಿಷ್ಟ್ಯ. ಇದನ್ನು ಸಾಧ್ಯವಾಗಿಸಿದ್ದು ಜಗತ್ತು ಅದುವರೆಗೆ ಕಂಡರಿಯದ, ಕೇಳರಿಯದ ನವೀನ ಮಾದರಿಯ ನಾಯಕತ್ವ- ಅದೇ ಸಾಮೂಹಿಕ ನಾಯಕತ್ವ.

ಸಮಾಜದ ಎಲ್ಲ ವಲಯಗಳಲ್ಲಿ ಸ್ಥಾಪಿತವಾಗಿದ್ದ ಯಜಮಾನಿಕೆಯನ್ನು ಧ್ವಂಸ ಮಾಡುವ ಪ್ರಯತ್ನ ನಡೆಸಿದ ಶರಣರಿಗೆ ಸ್ಫೂರ್ತಿಯ ಸೆಲೆಯಾಗಿದ್ದ ಬಸವಣ್ಣನವರು ನಾಯಕತ್ವಕ್ಕೂ ಹೊಸ ಭಾಷ್ಯ ಬರೆದರು. ಹೊಸ ಧರ್ಮದ ದ್ರಷ್ಠಾರರಾಗಿದ್ದೂ, ನವ ಸಮಾಜದ ಸೂತ್ರಧಾರರಾಗಿದ್ದೂ ಅವರು ಇಡೀ ಚಳುವಳಿಯನ್ನು ಕಟ್ಟಿದ್ದು ಸಾಮೂಹಿಕ ನಾಯಕತ್ವದಿಂದ.  ಆಧುನಿಕ ಜಗತ್ತು ಸಾಮೂಹಿಕ ನಾಯಕತ್ವದ ಕುರಿತು ಈಗ ಗಂಭೀರವಾದ ಚಿಂತನೆ ನಡೆಸುತ್ತಿದ್ದರೆ ಅದನ್ನುಒಂಬತ್ತು ಶತಮಾನಗಳ ಹಿಂದೆಯೇ ಬಸವಣ್ಣನವರು ಅನುಷ್ಠಾನಕ್ಕೆ ತಂದಿದ್ದರು. ಆ ಕುರಿತು ವಚನಗಳ ಉದ್ದಕ್ಕೂ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಬಸವಣ್ಣನವರ ಈ ಅಪೂರ್ವ ಸ್ವರ ವಚನವನ್ನು ಗಮನಿಸಿ:

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ
ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯ
ನಾನು ನೀವು ಬಂದ ಕಾರ್ಯಕೆ ಪ್ರಭುದೇವರು ಬಂದರು
ಕಲ್ಯಾಣವೆಂಬುದು ಪ್ರಣತೆಯಾಯಿತ್ತು
ನಾನು ತೈಲವಾದೆನು, ನೀವು ಬತ್ತಿಯಾದಿರಿ
ಪ್ರಭುದೇವರು ಜ್ಯೋತಿಯಾದರು…

ಬಸವಣ್ಣನವರ ನಾಯಕತ್ವದ ಬಗ್ಗೆ ಯೋಚಿಸುವಾಗಲೆಲ್ಲ ನೆನಪಾಗುವ, ಹಾಗೆ ನೆನಪಾದಾಗಲೆಲ್ಲ ಬಿಟ್ಟು ಬಿಡದೆ ಮನಸ್ಸನ್ನು ಕಾಡುವ ಈ ವಚನದಲ್ಲಿ ಸಾಮೂಹಿಕ ನಾಯಕತ್ವದ ಪ್ರಬಲ ಎಳೆಗಳಿವೆ.

ಯಾವುದೇ ಸಂಘಟನೆ, ಸಂಸ್ಥೆ, ಆಡಳಿತ ವ್ಯವಸ್ಥೆ ಅಥವಾ ಚಳುವಳಿಯು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲು ನಾಯಕ ಸ್ಥಾನದಲ್ಲಿರುವವರ ಪಾತ್ರ ಬಹಳ ಮುಖ್ಯ. ಕಲ್ಯಾಣದಲ್ಲಿ ಅಂದು ಘಟಿಸಿದ ಕ್ರಾಂತಿಯು ಅದುವರೆಗಿನ ಕರ್ಮಠ ವ್ಯವಸ್ಥೆಗೆ ಪರ್ಯಾಯ ರೂಪದಲ್ಲಿ ಮೂಡಿಬಂದದ್ದು. ಐತಿಹಾಸಿಕ ದಾಖಲೆಗಳ ಪ್ರಕಾರ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಲಯಗಳನ್ನು ಆವರಿಸಿದ ಆ ಕ್ರಾಂತಿಕಾರಕ ಬದಲಾವಣೆಗಳು ಸಂಭವಿಸಲು ತೆಗೆದುಕೊಂಡದ್ದು ಕೆಲವೇ ದಶಕಗಳು! ಇಷ್ಟು ಪುಟ್ಟ ಅವಧಿಯಲ್ಲಿ ಅಷ್ಟೊಂದು ವ್ಯಾಪಕವಾಗಿ ಇತಿಹಾಸದ ದಿಕ್ಕನ್ನೇ ಬದಲಿಸಲು ಶರಣರಿಗೆ ಸಾಧ್ಯವಾದದ್ದು ಹೇಗೆ ಎನ್ನುವ ಪ್ರಶ್ನೆಗೆ ಈ ವಚನದಲ್ಲಿ ಉತ್ತರವಿದೆ.

ಬಸವಣ್ಣನವರು ಏಕವ್ಯಕ್ತಿ ನಾಯಕತ್ವವನ್ನು ಎಂದಿಗೂ ಪುರಸ್ಕರಿಸಲಿಲ್ಲ. ಬದಲಿಗೆ ಸಾಮೂಹಿಕ ನಾಯಕತ್ವಕ್ಕೆ ಚಾಲನೆ ನೀಡಿದರು. “ಯಾವ ಕಾರ್ಯಕ್ಕಾಗಿ ನಾನು ಕೈ ಹಾಕಿರುವೆನೋ ಅದೇ ಉದ್ದೇಶಕ್ಕಾಗಿ ನೀವೂ ಬಂದಿದ್ದೀರಿ. ನೀವು ಬಂದ ಕಾರ್ಯಕ್ಕಾಗಿಯೇ ನಾನೂ ಬಂದಿದ್ದೇನೆ, ಪ್ರಭುದೇವರೂ ನಮ್ಮೊಡನೆ ಸೇರಿಕೊಂಡಿದ್ದಾರೆ…” ಎನ್ನುವ ಮೂಲಕ ಎಲ್ಲರನ್ನೂ ಸಮ ಸಮಾಜದ ನಿರ್ಮಾಣದ ಗುರಿಯತ್ತ ಜೊತೆಗೇ ಕರೆದೊಯ್ಯುತ್ತಾರೆ. ಜಗತ್ತಿನಲ್ಲಿಯೇ ಇಂಥದೊಂದು ನಿದರ್ಶನ ಬೇರೆಲ್ಲೂ ಸಿಗಲಿಕ್ಕಿಲ್ಲ. ಬಸವಣ್ಣನವರು ತಾನು ದೇವದೂತ ಎಂದಾಗಲಿ, “ದೇವರ ಮಗ ನಾನು, ನನಗೆ ಶರಣಾಗಿ” ಎಂದಾಗಲಿ, ಆಚಾರ್ಯ ಪುರುಷ, ಧರ್ಮ ಪ್ರವರ್ತಕ ತಾನು ಎಂದಾಗಲಿ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಜನಸಾಮಾನ್ಯರು ಹಿಂದುಮುಂದು ಯೋಚಿಸದೆ ತಮ್ಮ ಮೇಲೆ ಅಂಧಭಕ್ತಿಯನ್ನು ತೋರಿಸುವುದಾಗಲಿ, ವಿಶ್ವಾಸ ಇಡುವುದಾಗಲಿ ಅವರಿಗೆ ಸಹ್ಯವಾಗುತ್ತಿರಲಿಲ್ಲ. “ಎನಗೆ ಪ್ರಥಮಾಚಾರ್ಯನೆಂಬರು ನಾನೇನು ಮಾಡಿದೆನಯ್ಯಾ..” ಎಂದು ಹೇಳುತ್ತಾ ತಾವೊಬ್ಬ ಬಚ್ಚ ಬರಿಯ ಬಸವ ಎಂದು ಸಾರಿದರು. ಯಾವುದೇ ಸಾಧನೆಯ ಶ್ರೇಯವನ್ನೂ ತಮಗೆ ಅಂಟಿಸಿಕೊಳ್ಳದ ವಿನೀತ ಭಾವ ಅವರದು. ಅವರ ಇಂಥ ಅಸದೃಶ ವಿನಯಶೀಲತೆಯೇ  ಪ್ರಕಾಂಡ ಜ್ಞಾನಿಗಳನ್ನು ಮತ್ತು ಪಾಮರರನ್ನು ಏಕಕಾಲಕ್ಕೆ ಅವರತ್ತ ಸೆಳೆದಿತ್ತು.

ಕಲ್ಯಾಣದಲ್ಲಿ ನಡೆದದ್ದು ಎಲ್ಲ ಬಗೆಯ ಸಮಾನತೆಯ ಹೋರಾಟ. ಸಮಾಜದ ಹೊರಸೆರಗಿನಲ್ಲಿದ್ದ ಅಂತ್ಯಜರೂ, ಅಸ್ಪೃಶ್ಯರೂ ಸೇರಿದಂತೆ ಎಲ್ಲ ಕೆಳಜಾತಿಗಳ, ದುಡಿವವರ, ದಮನಿತರ ಹತ್ತಿರ ಹೋದ ಬಸವಣ್ಣನವರು ಅವರ ಬಳಿ ಭಕ್ತಿಯ ಭಿಕ್ಷೆ ಕೇಳುತ್ತಾರೆ! ಅಸ್ಪೃಶ್ಯರು ಯಾವತ್ತಿಗೂ ಕೀಳು, ಕೈಯೊಡ್ಡಿ, ತಲೆಬಾಗಿ ನಿಲ್ಲಬೇಕಾದವರು ಎಂದು ನಂಬಿದ್ದ ಕಾಲದಲ್ಲಿ ಅಂಥವರ ಮುಂದೆ ಹೋಗಿ ಸೆರಗೊಡ್ಡಿ ಕೇಳುವುದು ಸಾಧ್ಯವೇ? ಅಂದು ಇದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಇವತ್ತಿಗೂ ಇಂಥ ಬೇಡುವ ಸಂದರ್ಭವನ್ನು ತೀವ್ರತರ ಅವಮಾನವೆಂದು ಭಾವಿಸುವ ಭಾರತದಲ್ಲಿ 900 ವರ್ಷಗಳ ಹಿಂದೆ ಅತ್ಯುತ್ತಮ ಕುಲದ, ಅತ್ಯುನ್ನತ ಹುದ್ದೆಯ ಬಸವಣ್ಣನವರು ಕಕ್ಕಯ್ಯನ ಮನೆಯ ಮುಂದೂ, ದಾಸಯ್ಯನ ಮನೆಯ ಮುಂದೂ ಹೋಗಿ ಕೈಯೊಡ್ಡಿ ಭಕ್ತಿಯ ಭಿಕ್ಷೆ ಕೇಳುತ್ತಾರೆ ಅಂದರೆ ಕಲ್ಪನೆ ಮಾಡಿಕೊಳ್ಳಿ! ಮೇಲಾಗಿ ತಾವು ಬಡವ ಎಂದು ಅಂಗಲಾಚುತ್ತಾರೆ!! ಇಡೀ ಸಮಾಜದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಇದೊಂದು ವಚನ, ಇದೊಂದು ನಡೆ ಸಾಕು. ಮನುಷ್ಯ ವಿರೋಧಿ ವ್ಯವಸ್ಥೆಯನ್ನು, ಮನಸ್ಥಿತಿಯನ್ನು ಧಿಕ್ಕರಿಸುವ ಮೂಲಕ ಸಾಮೂಹಿಕ ನಾಯಕತ್ವಕ್ಕೆ ಮುನ್ನುಡಿ ಬರೆದಂತಿದೆ ಈ ವಚನ:

ಭಕ್ತಿಯಿಲ್ಲದ ಬಡವ ನಾನಯ್ಯಾ:
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ,
ದಾಸಯ್ಯನ ಮನೆಯಲ್ಲೂ ಬೇಡಿದೆ.
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.

ಬಸವಣ್ಣನವರ ಕಾಲದಲ್ಲಿ ಭಾರತದಲ್ಲಿ ಅಲ್ಲಲ್ಲಿ ಅನೇಕ ಸಂತರು, ಯೋಗಿಗಳು ಇದ್ದರು. ಆದಾಗ್ಯೂ ನೆರೆಯ ಸಾಮ್ರಾಜ್ಯಗಳಿಂದ, ದೂರದ ಕಾಶ್ಮೀರ ಹಾಗೂ ಅಫಘಾನಿಸ್ತಾನಗಳಿಂದ ಕಲ್ಯಾಣಕ್ಕೆ ಜ್ಞಾನಿಗಳ, ಮುಮುಕ್ಷಿಗಳ ದಂಡೇ ಹರಿದು ಬಂದಿತು. ಸೂಕ್ಷ್ಮಜ್ಞರಾದವರು, ಬುದ್ಧಿವಂತರು ಬಸವಣ್ಣನವರ ಹತ್ತಿರವಾದರು. ಅವರ ಮಾತುಗಳನ್ನು ನಂಬಿದರು. ಅವರ ಕಳಕಳಿಗೆ, ಕಕ್ಕುಲಾತಿಗೆ ಕರುಳ ಸಂಬಂಧ ಜೋಡಿಸಿದರು. ಅವರ ಸಾಮೀಪ್ಯ ಬಯಸಿ ಅಲ್ಲಿಯೇ ನಿಂತರು. ಇಂಥ ಬಳಗ ವಿಸ್ತಾರಗೊಳ್ಳುತ್ತಾ ಅನುಭಾವಿಗಳ ಶರಣ ಸಮಾಜ ನಿರ್ಮಾಣವಾಯಿತು. ಕಾಯಕಜೀವಿಗಳ ಆ ಬಳಗದಲ್ಲಿ ಸಮಾಜವಾದವು ತನ್ನಿಂದ ತಾನೇ ರೂಪು ಪಡೆಯುತ್ತಿತ್ತು.

ಏಕವ್ಯಕ್ತಿ ನಾಯಕತ್ವದಲ್ಲಿ ಅಹಂ ಹೇಗಾದರೂ ತೂರಿಕೊಳ್ಳುತ್ತದೆ. ಇದರಿಂದ ಮನಸ್ಸುಗಳ ಬೆಸುಗೆಗೆ ಯಾವ ಮೂಲದಿಂದಲಾದರೂ ಸರಿ ಧಕ್ಕೆಯಾಗಬಹುದು. ನಾನು ಎನ್ನುವುದು ಎಚ್ಚರವಾಗಿದ್ದರೆ, ನೀನು ಎಂಬುದೂ ಉಸಿರಾಡುತ್ತಿರುತ್ತದೆ. ‘ನಾನು’ ಇಲ್ಲವಾದಲ್ಲಿ ನೀನು ಎಂಬುದೂ ಮಾಯವಾಗುತ್ತದೆ. ನಾನು ಎಂಬ ಭಾವನೆ ಕರಗಿದಾಗಲೇ ‘ನಾವು’ ಎಂಬುದಕ್ಕೆ ಜಾಗ ಸಿಗುತ್ತದೆ. ನಾನು ಎಂಬ ಭಾವವು ಹರಿಯದ ಹೊರತು ಲಿಂಗ ಸಂಗ ಸಾಧ್ಯವಾಗುವುದಿಲ್ಲ. ಅಂದರೆ ನೀನು, ತಾನು ಎನ್ನುವ ಪ್ರತ್ಯೇಕತಾ ಭಾವವನ್ನು ಕಳೆದುಕೊಂಡಾಗ ಮಾತ್ರವೇ ಅನುಭಾವ ದಕ್ಕುವುದು. ದೇಹದ ಅಂಗಾಂಗಗಳಲ್ಲಿನ ಹೊಂದಾಣಿಕೆಯನ್ನು ಗಮನಿಸಿದರೆ ಈ ತತ್ವ ಮತ್ತಷ್ಟು ಅರ್ಥವಾಗುತ್ತದೆ. ಸಮಾಜದಲ್ಲಿ ಸಮನ್ವಯತೆಯನ್ನು ಸಾಧಿಸಲು ಇಂಥ ಹೊಂದಾಣಿಕೆ ಬೇಕು. ಸಾಮೂಹಿಕ ನಾಯಕತ್ವದ ಯಶಸ್ಸು ನಿಂತಿದ್ದೇ ಇಂಥ ಹೊಂದಾಣಿಕೆಯ ಮೇಲೆ ನಾಲ್ಕು ಜನ ಸಮಾನ ಮನಸ್ಕ ಬುದ್ಧಿವಂತರು ಸೇರಿ ಒಂದು ಪುಟ್ಟ ಸಂಘಟನೆ ಕಟ್ಟುವುದು ಅಸಾಧ್ಯವೆನಿಸುವ ಇಂದಿನ ದಿನಮಾನಗಳಲ್ಲಿ ನಿಂತು ಬಸವಣ್ಣನವರ ಕಲ್ಯಾಣವನ್ನು ನೋಡಿದಾಗ ಅಚ್ಚರಿ ಎನಿಸುತ್ತದೆ. ಎಷ್ಟೊಂದು ಪ್ರತಿಭಾವಂತರು ಸ್ವಹಿತಾಸಕ್ತಿಯ ವಾಸನೆಯೂ ಇಲ್ಲದಂತೆ ಒಂದೆಡೆ ಸೇರಿ ಕಲ್ಯಾಣ ರಾಜ್ಯ ನಿರ್ಮಿಸಿದ್ದು ಹೇಗೆಂಬ ಪ್ರಶ್ನೆ ಏಳದೇ ಇರದು. ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಸವಣ್ಣನವರು ಇಡೀ ಸಮೂಹವನ್ನು ಒಂದು ಕುಟುಂಬದಂತೆ ಕಟ್ಟಿದ ಹಾಗೆ ಕಾಣುತ್ತದೆ. ಕಲ್ಯಾಣ ನಗರಿಯಲ್ಲಿ ಅಂಥದೊಂದು ಗಾಢ ಬಾಂಧವ್ಯ ಶರಣರ ನಡುವೆ ಸಾಧ್ಯವಾಗಿದ್ದಕ್ಕೆ ವಚನಗಳು ಸಾಕಷ್ಟು ದಾಖಲೆಗಳನ್ನು ಒದಗಿಸುತ್ತವೆ. ನಾಯಕತ್ವದ ಸಾಂಪ್ರದಾಯಿಕ ಗ್ರಹಿಕೆಯನ್ನೇ ಬುಡಮೇಲು ಮಾಡಿದ್ದರು ಬಸವಣ್ಣನವರು.

ಅಪ್ಪನು ನಮ್ಮ ಮಾದಾರ ಚನ್ನಯ್ಯ
ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ…
ಎನ್ನುವ ವಚನದಲ್ಲಿ ಬಸವಣ್ಣನವರ ಇಂಥ ದೃಷ್ಟಿಕೋನ ಸ್ಪಷ್ಟವಾಗಿ ಕಾಣುತ್ತದೆ.

ಸಮಾಜಕ್ಕಿಂತ ವ್ಯಕ್ತಿ ಮುಖ್ಯವಾದಲ್ಲಿ ಅದು ಸ್ವಾರ್ಥಿಗಳನ್ನು ಹುಟ್ಟಿಸುತ್ತಾ ಹೋಗುತ್ತದೆ. ಅದೇ ರೀತಿ ವ್ಯಕ್ತಿಗಿಂತ ಸಮಾಜ ಮುಖ್ಯ ಎಂಬ ಧೋರಣೆಯಲ್ಲಿ ವ್ಯಕ್ತಿಗಳನ್ನು ಯಂತ್ರಗಳಂತೆ ದುಡಿಸಿಕೊಳ್ಳಲಾಗುತ್ತದೆ. ಆದರೆ ಕಲ್ಯಾಣದಲ್ಲಿ ಸಮಾಜದ ಹಿತದಲ್ಲಿ ವ್ಯಕ್ತಿಯ ಹಿತವೂ; ವ್ಯಕ್ತಿಯ ಏಳ್ಗೆಯಲ್ಲಿ ಇಡೀ ಸಮಾಜದ ಉದ್ಧಾರವೂ ಅಡಕವಾಗಿತ್ತು. ಇದೊಂದು ಅಪರೂಪದ ನೇಯ್ಗೆ. ಏಕೆಂದರೆ ಬಸವಣ್ಣನವರ ಶರಣ ಸಮಾಜದಲ್ಲಿ ಯಾವೊಬ್ಬ ಶರಣರೂ ವ್ಯಕ್ತಿ ವಿಶಿಷ್ಟತೆಯನ್ನು ಕಳೆದುಕೊಂಡಿರಲಿಲ್ಲ. ಪ್ರತಿಯೊಬ್ಬರ ಮಾತಿಗೂ ಅಲ್ಲಿ ಜಾಗವಿತ್ತು. ಯಾರೂ ಯಾರ ಆಜ್ಞೆಗೂ, ಅವಜ್ಞೆಗೂ ಒಳಪಟ್ಟಿರಲಿಲ್ಲ.

ಅಥೆನ್ಸನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಾಚೀನ ಜಗತ್ತಿನ ಅತ್ಯುತ್ತಮ ಮಾದರಿ ಎನ್ನುತ್ತಾರೆ. ಆದರೆ ಆ ವ್ಯವಸ್ಥೆಯಲ್ಲಿ ಕೇವಲ ಪುರುಷರಿಗೆ ಮಾತ್ರ ಅವಕಾಶವಿದ್ದು ಮಹಿಳೆಯರು ಗುಲಾಮರಂತೆ ನಾಗರಿಕ ಹಕ್ಕುಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದರು. ಆದರೆ ಕಲ್ಯಾಣ ರಾಜ್ಯದಲ್ಲಿ ಮಹಿಳೆಯರು ಪುರುಷರಿಗೆ ಎಲ್ಲ ವಿಷಯಗಳಲ್ಲೂ ಸರಿಸಮಾನರಾಗಿದ್ದರು. ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡಬಲ್ಲವರಾಗಿದ್ದರು. ತಮ್ಮ ಕಾಯಕದ ಜೊತೆಯಲ್ಲಿ ಆಧ್ಯಾತ್ಮ ಸಾಧನೆಯ ಔನ್ನತ್ಯ ಸಾಧಿಸಿ, ಮಾರ್ಗದರ್ಶನ ನೀಡಬಲ್ಲ ಲಿಂಗಮ್ಮ, ನೀಲಮ್ಮ, ಸತ್ಯಕ್ಕನವರಂಥ ಶರಣೆಯರಿದ್ದರು. ಬಸವಣ್ಣನವರನ್ನು ನೇರವಾಗಿ ಪ್ರಶ್ನಿಸುವಷ್ಟು ಸ್ವಾತಂತ್ರ್ಯವೂ, ಧೀಮಂತಿಕೆಯೂ ಅವರಲ್ಲಿತ್ತು. ಪ್ರಸಂಗ ಬಂದಾಗ, “ಬಸವಣ್ಣನ ಅನುಮಾನದ ಚಿತ್ತವೋ?” ಎಂದು ದಿಟ್ಟಳಾಗಿ (ಕಾಯಕ ತತ್ವದ ನಾಯಕಿಯೆಂದೇ ಕರೆಯಬಹುದಾದ) ಪ್ರಶ್ನಿಸುವ ಆಯ್ದಕ್ಕಿ ಲಕ್ಕಮ್ಮನವರಂಥ ಮೇರು ವ್ಯಕ್ತಿತ್ವದ ಮಹಿಳೆಯರಿದ್ದರು.

ಶರಣರ ಸಾಮೂಹಿಕ ನಾಯಕತ್ವದ ಮತ್ತೊಂದು ವಿಶೇಷವೆಂದರೆ ಪ್ರತಿಯೊಬ್ಬರೂ ಪರಸ್ಪರರಲ್ಲಿ ಗೌರವ, ವಿಶ್ವಾಸಗಳನ್ನು ಹೊಂದಿಯೂ ಸ್ವಂತಿಕೆಯನ್ನು ತೋರುತ್ತಾರೆ. ಯಾರೊಬ್ಬರೂ ಮತ್ತೊಬ್ಬರ ನಕಲೆಂದು ಕಾಣಿಸುವುದಿಲ್ಲ. ತಮ್ಮತಮ್ಮ ಬದುಕಿನಲ್ಲಿ, ವಿಚಾರಗಳಲ್ಲಿ, ಅನುಭಾವದಲ್ಲಿ ಎಲ್ಲಿಯೂ ಅವರು ಅಂಧಾನುಕರಣೆ ಮಾಡಿದಂತೆ ಕಾಣುವುದಿಲ್ಲ. ಒಬ್ಬರು ತಪ್ಪಿದಲ್ಲಿ ಮತ್ತೊಬ್ಬರು ಎಚ್ಚರಿಸುತ್ತಾರೆ. ಒಬ್ಬರ ದೋಷಗಳನ್ನು ಮತ್ತೊಬ್ಬರು ಯಾವ ಮುಲಾಜಿಲ್ಲದೆ ಟೀಕಿಸುತ್ತಾರೆ. ತಮ್ಮ ತಪ್ಪುಗಳನ್ನು ಮುಕ್ತವಾಗಿ ತಿದ್ದಿಕೊಳ್ಳುತ್ತಾರೆ, ಒಬ್ಬರನ್ನೊಬ್ಬರು ವಿಮರ್ಶಿಸಿಯೂ ಸ್ನೇಹ, ಗೌರವಗಳಿಂದ ಉಳಿಯುವುದು ಸಾಧ್ಯ ಎಂಬುದನ್ನು ತಮ್ಮ ಮೂಲಕವೇ ತೋರಿಸಿಕೊಟ್ಟಿದ್ದಾರೆ.

ಉದಾಹರಣೆಗೆ: “ಕಕ್ಕಯ್ಯನೆನಗೆ ಕಾಮಧೇನು, ಚೆನ್ನಯ್ಯನೆನಗೆ ಕಲ್ಪವೃಕ್ಷ, ಹರಳಯ್ಯನೆನಗೆ ಚಿಂತಾಮಣಿ, ಕೆಂಭಾವಿಯ ಭೋಗಯ್ಯನೆನಗೆ ಸುದಾಬ್ಧಿ, ಶಿವನಾಗಮಯ್ಯನೆನಗೆ ಪರುಷದ ಗಿರಿಯಯ್ಯಾ…” ಎಂದು ತಮ್ಮ ವ್ಯಕ್ತಿತ್ವದ ರೂಹಾರಿಗಳನ್ನು ನೆನೆಯುತ್ತಾರೆ ವೈದ್ಯ ಸಂಗಣ್ಣನವರು. ಹೀಗೆ ಒಬ್ಬರ ಬದುಕು ಮತ್ತೊಬ್ಬರನ್ನು ಆ ಹೊಸ ಮಾರ್ಗದಲ್ಲಿ ಸಾಗಲು ಪ್ರೇರೇಪಿಸುವಂತಿತ್ತು. ಸಾಮೂಹಿಕ ನಾಯಕತ್ವವು ವೈಯಕ್ತಿಕ ಸಾಧನೆಯೊಂದಿಗೆ ಸಾಮೂಹಿಕ ಉನ್ನತಿಯನ್ನು ಸಾಧಿಸುವ ಸಾಮಾಜಿಕ ಪ್ರಕ್ರಿಯೆಗೆ ನಾಂದಿ ಹಾಡುವಂಥದು.

ಸಾಮೂಹಿಕ ನಾಯಕತ್ವದ ಮೂಲ ಸ್ವರೂಪವೇನು?

ಎಲ್ಲರನ್ನೂ ಒಳಗೊಳ್ಳುವುದು. ಎಲ್ಲ ಜಾತಿಯ, ವರ್ಗದ, ಸಂಸ್ಕೃತಿಯ, ವಯಸ್ಸು ಹಾಗೂ ಲಿಂಗಬೇಧಗಳಿಲ್ಲದ ಜನರು ಏಕ ಪಾತಳಿಯ ಮೇಲೆ ನಿಲ್ಲಲು ಸಾಧ್ಯವಾಗಬಲ್ಲ ವೇದಿಕೆಯ ಸೃಷ್ಟಿ ಇದು. ಪ್ರತಿಯೊಬ್ಬರೊಂದಿಗೂ ನೇರ ಸಂವಾದ, ಹೊಣೆಗಾರಿಕೆ ಮತ್ತು ಕರ್ತವ್ಯಗಳ ಹಂಚಿಕೆ, ಒಂದಾಗಿ ಕೆಲಸ ಮಾಡುವ ಬದ್ಧತೆಯನ್ನು ಇಲ್ಲಿ ಕಾಣಬಹುದು. ಇಂಥ ವಾತಾವರಣದಲ್ಲಿ ಸಹಭಾಗಿತ್ವ, ಬದ್ಧತೆ ಮತ್ತು ಎಲ್ಲವನ್ನೂ ಹೆಗಲಿಗೇರಿಸಿಕೊಂಡು ಮುನ್ನಡೆಯುವ ಉತ್ಸಾಹ ತಾನೇ ತಾನಾಗಿ ಸಾಧ್ಯವಾಗುತ್ತದೆ.

ಸಾಮೂಹಿಕ ನಾಯಕತ್ವದಲ್ಲಿ ಎಲ್ಲ ಸದಸ್ಯರು ತಮ್ಮ ಸಾಮೂಹಿಕ ಪ್ರಯತ್ನ ಮತ್ತು ಫಲಿತಾಂಶಗಳಿಗಾಗಿ ಪರಸ್ಪರ ಜವಾಬ್ದಾರರಾಗಲು ಸಾಮೂಹಿಕ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಇಂಥ ವಿನೂತನ ವಿಧಾನವನ್ನು ರೂಢಿಸಲು ಸೂಕ್ತ ಮನಸ್ಸಿನ ಜನರು ಬೇಕು. ಇಡೀ ವಾತಾವರಣ ಹೊಸ ನಾಯಕತ್ವವನ್ನು ಹೊಸ ಸೂತ್ರಗಳೊಂದಿಗೆ ಬೆಸೆಯಲು ಅನುಕೂಲಕರವಾಗುವಂತಿರಬೇಕು. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ, ಅವರ ಗೌರವಕ್ಕೆ ಚ್ಯುತಿಯಾಗದ ರೀತಿಯಲ್ಲಿ ಅವರೊಬ್ಬ ಮೌಲಿಕ ವ್ಯಕ್ತಿಯೆಂದು ಅವರು ಭಾವಿಸುವಂತೆ ಮಾಡುವಲ್ಲಿ ಯಶಸ್ವಿಯಾಗಬೇಕು. ಆಗ ಎಲ್ಲರೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ, ಸೃಜನಾತ್ಮಕವಾಗಿ ಕ್ರಿಯಾಶೀಲರಾಗಿರುತ್ತಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷತೆಗಳಿರುತ್ತವೆ, ವಿಶಿಷ್ಟ ಪ್ರತಿಭೆ ಅಡಗಿರುತ್ತದೆ.  ಒಬ್ಬರು ಸೂಕ್ಷ್ಮಮತಿಗಳಾಗಿದ್ದರೆ, ಮತ್ತೊಬ್ಬರು ತೀಕ್ಷ್ಣವಿಚಾರವಾದಿಗಳಾಗಿರುತ್ತಾರೆ; ಒಬ್ಬರಲ್ಲಿ ಸಹನಶೀಲತೆಯಿದ್ದರೆ ಮತ್ತೊಬ್ಬರಲ್ಲಿ ವಸ್ತನಿಷ್ಠ ಗುಣವಿರುತ್ತದೆ… ಅವುಗಳ ಅಭಿವ್ಯಕ್ತಿಗೆ ನೆರವಾಗುವ ವಾತಾವರಣ ಸೃಷ್ಟಿಸಿದಲ್ಲಿ ಅಲ್ಲೊಂದು ಹೊಸ ಸಂಚಲನವೇ ಕಾಣಿಸಿಕೊಳ್ಳುವುದು. ಹೀಗೆ ಚಳವಳಿಯೊಂದು ಯಶಸ್ವಿಯಾಗಲು ಎಲ್ಲ ಬಗೆಯ ಜನರೂ ಬೇಕು. ಸಿದ್ಧರಾಮಯ್ಯನವರ ಈ ವಚನ ಇದಕ್ಕೆ ಪುಷ್ಠಿ ಕೊಡುತ್ತದೆ:

ಭಕ್ತನಾದಡೆ ಬಸವಣ್ಣನಂತಾಗಬೇಕು,
ಜಂಗಮವಾದಡೆ ಪ್ರಭುವಿನಂತಾಗಬೇಕು.
ಭೋಗಿಯಾದಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು.
ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ,
ಕಪಿಲಸಿದ್ಧ ಮಲ್ಲಿಕಾರ್ಜುನಾ

ಶರಣರು ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರೂ ಪರಸ್ಪರರ ಮೇಲೆ ಸಮಾನ ಗೌರವ ಇರುತ್ತಿತ್ತು. ಎಲ್ಲರೂ ಅವರವರ ಅನುಭಾವದ ನೆಲೆಯಲ್ಲಿ ನಿಂತು ಮಾತನಾಡುತ್ತಿದ್ದರು. ನಡೆಯಲು ಸಾಧ್ಯವಾದುದನ್ನು ನುಡಿಯುತ್ತಿದ್ದರು. ಆತ್ಮಸಾಕ್ಷಿಗನುಗುಣವಾಗಿದ್ದವು ಅವರ ನಡೆ-ನುಡಿಗಳು. ಬೂಟಾಟಿಕೆಗಾಗಲಿ, ಬಡಾಯಿಗಾಗಲಿ ಅಲ್ಲಿ ಜಾಗವೇ ಇರಲಿಲ್ಲ. ಅನುಭವ ಪ್ರಾಮಾಣ್ಯಕ್ಕೆ ಮಾತ್ರ ಅಲ್ಲಿ ನೆಲೆ, ಬೆಲೆ. ಹೀಗಾಗಿ ಒಬ್ಬರ ಮಾತನ್ನು ಮತ್ತೊಬ್ಬರು ಶ್ರದ್ಧೆ ಹಾಗೂ ಧನ್ಯತೆಯ ಭಾವದಿಂದ ಕೇಳುತ್ತಿದ್ದರು. ಏಕೆಂದರೆ ಅವರ ಮಾತಿನಲ್ಲಿ ಅರಿವಿನ ಬೆಳಕು ಇರುತ್ತಿತ್ತು. ಇದೆಲ್ಲದರ ಪರಿಣಾಮವೆಂಬಂತೆ ಹಲವಾರು ವೈಚಾರಿಕ, ದಾರ್ಶನಿಕ, ಭಾವ ಧಾರೆಗಳು ಸೇರಿಕೊಂಡು ಶರಣರ ಅನುಭಾವ ಧಾರೆ ನಿರ್ಮಾಣವಾಯಿತು.

ನಾಯಕನೇ ಪರಮಾಧಿಕಾರಿ ಎನ್ನುವ ಶ್ರೇಣೀಕೃತ ವ್ಯವಸ್ಥೆಯನ್ನೂ ಮುರಿದು ಸಮಾನ ಪಾತಳಿಯ ಮ್ಯಾಟ್ರಿಕ್ಸ್ ಮಾದರಿಯ ಸಾಮೂಹಿಕ ನಾಯಕತ್ವವನ್ನು ಅಳವಡಿಸಿಕೊಂಡ ಕಲ್ಯಾಣದಲ್ಲಿ ಸುಖ, ಸಂತೃಪ್ತಿ ಮತ್ತು ಸುಯಿಧಾನಗಳು ನೆಲೆಸಿದ್ದವು. ಏಕೆಂದರೆ ಅದ್ಭುತ ವಿಚಾರಗಳು ತಲೆಯಲ್ಲಿದ್ದರೆ ಸಾಲದು. ಅವು ಕಾರ್ಯ ರೂಪಕ್ಕಿಳಿದಾಗಲೇ ಅವುಗಳ ಸಾಧಕ-ಬಾಧಕಗಳು ಗೊತ್ತಾಗುತ್ತವೆ. ಸಾರ್ವಕಾಲಿಕ ಮೌಲ್ಯಗಳಾದ ಜಂಗಮ, ದಾಸೋಹ, ಕಾಯಕ, ಭಕ್ತಿಪಕ್ಷ, ಅನುಭಾವ ಗೋಷ್ಠಿ, ಮಹಾಮನೆಯಂಥ ಉದಾತ್ತ ಪರಿಭಾಷೆಗಳು ಶರಣರ ಸಂಗದಲ್ಲಿ ಪ್ರಾಯೋಗಿಕ ರೂಪಪಡೆದವು. ಅತ್ಯುನ್ನತ ಕ್ರಿಯಾಶೀಲ ಮನಸ್ಸುಗಳ ಆ ಶರಣ ಸಂಗಮದಲ್ಲಿ ಬಸವಣ್ಣನವರು ಸಾಮೂಹಿಕ ನಾಯಕತ್ವದ ಫಲವನ್ನು ಕಲ್ಯಾಣಕ್ಕೆ ಒದಗಿಸಿದ್ದರು.

ನಾನೊಂದು ಕಾರಣ ಮರ್ತ್ಯಕ್ಕೆ ಬಂದೆನು,
ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚೆನ್ನಬಸವಣ್ಣ ಬಂದನು,
ಇನ್ನು ಬಾರದಂತೆ ಪ್ರಭುದೇವರು ಬಂದರು,
ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿತಂದೆ ಬಂದನು.
ನಾನಿನ್ನಾರಿಗಂಜೆನು, ಬದುಕಿದೆನು
ಕಾಣಾ ಕೂಡಲಸಂಗಮದೇವಾ.

ಸಕಲ ಜೀವಾತ್ಮರ ಲೇಸಿಗಾಗಿ ಅಹೋರಾತ್ರಿ ಶ್ರಮಿಸಿದ ಶರಣರ ತಂಡ ಸಂಪ್ರದಾಯಕ್ಕೆ ಸೆಡ್ಡು ಹೊಡೆದಂತೆ ಪರ್ಯಾಯ ಸಮಾಜವೊಂದನ್ನು ಕಟ್ಟಲು ಯಶಸ್ವಿಯಾಗಿತ್ತು. ಬೌದ್ಥಿಕ ಬಂಡವಾಳ (‘intellectual capital’)ದ ಬಗ್ಗೆ ನಮಗೆಲ್ಲ ಗೊತ್ತು. ಆದರೆ ಕಲ್ಯಾಣದಲ್ಲಿ ಹೂಡಲ್ಪಟ್ಟದ್ದು ಸಾಮೂಹಿಕ ಬಂಡವಾಳ (social capital’). ನಾಯಕನ ಬದಲು ನಾಯಕತ್ವದ ಪ್ರಗತಿ. ಸಾಮೂಹಿಕ ನಾಯಕತ್ವವು ನಾಯಕರನ್ನು ಬೆಳೆಸುವುದಕ್ಕಿಂತ ಚಳುವಳಿಯ ನಾಯಕತ್ವದ ಸಾಮರ್ಥ್ಯವನ್ನು ಬೆಳೆಸಬಲ್ಲದು ಎಂಬುದಕ್ಕೆ ಮಾನವೀಯ ಮೌಲ್ಯಗಳಿಗಾಗಿ ಸೆಣೆಸಿದ ಕಲ್ಯಾಣ ಕ್ರಾಂತಿಯೇ ಸಾಕ್ಷಿ.

ಸಾಮೂಹಿಕ ನಾಯಕತ್ವದ ಬಗ್ಗೆ ಹಲವಾರು ದೇಶಗಳು ಆಸಕ್ತಿ ತೋರಿಸಿದ್ದು, ಮುಂದಿನ ಪೀಳಿಗೆಗೆ ಇದೇ ಮಾರ್ಗದರ್ಶಿ ಎಂಬಂಥ ಮಾತುಗಳು ಕೇಳಿಬರುತ್ತಿವೆ. “ದುಡಿಮೆಯ ಜಗತ್ತು ಇಂದು ಬದಲಾಗಿದೆ, ಆದ್ದರಿಂದ ಇದುವರೆಗಿನ ನಾಯಕತ್ವದ ಧೋರಣೆಯನ್ನು ಬದಲಿಸಿಕೊಳ್ಳಬೇಕಿದೆ. ಏಕ ನಾಯಕತ್ವದಿಂದ ಸಾಮೂಹಿಕ ನಾಯಕತ್ವಕ್ಕೆ ಬದಲಾಗುವುದು ಇವತ್ತಿನ ತುರ್ತು ಅಗತ್ಯ” ಎಂದು ಜಾಗತಿಕ ಮಟ್ಟದಲ್ಲಿ ಗಂಭೀರವಾದ ಚಿಂತನೆಗಳು ನಡೆದಿವೆ. ಲೋಕಕಲ್ಯಾಣಕ್ಕಾಗಿ ಅನುಸರಿಸಬೇಕಾದ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ, ಅವುಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸುವ ವಿವಿಧ ಮಾರ್ಗಗಳ ಬಗ್ಗೆ ಶ್ರಮಿಸಿದ ಬಸವಣ್ಣನವರೊಂದಿಗೆ ಶರಣರ ದೊಡ್ಡ ಪಡೆಯೇ ಹಗಲಿರುಳು ಕಾರ್ಯನಿರ್ವಹಿಸಿತ್ತು. ತತ್ವ-ಸಿದ್ಧಾಂತಗಳಿಗೆ ಬದ್ಧರಾದ, ತ್ಯಾಗಬಲಿದಾನಗಳಿಗೆ ಸಿದ್ಧರಾದ ಶರಣರು “ಲೋಕ ವಿರೋಧಿ ಶರಣನಾರಿಗೂ ಅಂಜುವುದಿಲ್ಲ” ಎಂಬ ದಿಟ್ಟತನಕ್ಕೆ ಮಾದರಿಯಾಗಿದ್ದರು.  ಒಬ್ಬಬ್ಬರಲ್ಲೂ ಒಂದೊಂದು ದೋಷಗಳನ್ನೂ, ದೌರ್ಬಲ್ಯಗಳನ್ನೂ ಹುಡುಕುತ್ತಾ ಹೋದರೆ ಯಾವ ಘನ ಕಾರ್ಯಗಳನ್ನೂ ಸಾಧಿಸಲಾಗದು. ಸರ್ವರ ಸಹಯೋಗ ಮತ್ತು ಸಮನ್ವಯತೆ ಯಾವುದೇ ಚಳುವಳಿಯ ಸಾಮರ್ಥ್ಯವನ್ನು ಹೆಚ್ಚಿಸಬಲ್ಲುದು. ಜೊತೆಗೆ ಇಂದಿನ ಗೊಂದಲಗಳಿಗೆ ಶರಣರ ಆ ಮಾರ್ಗ ಸೂಕ್ತ ಮಾರ್ಗದರ್ಶನ ನೀಡಬಲ್ಲುದು. ಸಾಮೂಹಿಕ ನಾಯಕತ್ವವು ದೀರ್ಘಾವಧಿಯಲ್ಲಿ ಹೊಸ ಸಂಸ್ಕೃತಿಯೊಂದನ್ನು ಖಂಡಿತವಾಗಿಯೂ ಹುಟ್ಟುಹಾಕಬಲ್ಲುದು.

Comments 10

 1. parameshappa t.N
  Jul 2, 2018 Reply

  ಕಲ್ಯಾಣದ ಜನರೇ ಧನ್ಯರು. ಮತ್ತೆ ಮತ್ತೆ ಓದಬೇಕೆನಿಸುತ್ತದೆ ಈ ಲೇಖನ. ಬಸವಣ್ಣನವರ ವ್ಯಕ್ತಿತ್ವದ ವಿಶಾಲತೆ ಊಹೆಗೂ ಮೀರಿದ್ದು. ಥ್ಯಾಂಕ್ಸ್ ಸಿಸ್ಟರ್

 2. dr. Mallesh, mysuru
  Jul 4, 2018 Reply

  Your article highlights collective leadership more than collective wisdom. Reads well with befitting vachanas.

 3. Ashok mahalingashetty
  Jul 5, 2018 Reply

  Great article, your kannada is great, hold on the subject is even greater. i will read it again.

 4. ಡಾ.ಪಂಚಾಕ್ಷರಿ ಹಳೇಬೀಡು
  Jul 5, 2018 Reply

  ಯಶಸ್ವಿ ನಾಯಕನಿಗಿರಬೇಕಾದ ಗುಣ ಲಕ್ಷಣಗಳನ್ನು ತಮ್ಮ ಲೇಖನದಲ್ಲಿ ಬಹಳ ವಿಸ್ತೃತವಾಗಿ ಎಳೆಎಳೆಯಾಗಿ ಚಿತ್ರಿಸಿದ್ದೀರಿ.
  ಬಸವಣ್ಣ ನವರ ವಿಷೇಷ ನಾಯಕತ್ವ ಗುಣದಿಂದಾಗಿ ಸೂಜಿಗಲ್ಲಿನಂತೆ ಸಮಾಜದ ಎಲ್ಲರನ್ನು ತನ್ನತ್ತ ಸೆಳೆದು ತನ್ನಂತೆ ಎಲ್ಲರನ್ನೂ ರೂಪುಗೊಳಿಸಿದ್ದು.
  ಅದ್ಭುತವಾದ ಲೇಖನ.
  ಧನ್ಶವಾದಗಳೊಂದಿಗೆ ಶರಣುಶರಣಾರ್ಥಿ.

 5. r.p.jagadeesh
  Jul 6, 2018 Reply

  r.p.jagadeesh
  ಎರಡು ಕೈ ತಟ್ಟಿದರೆ ಮಾತ್ರ ಚಪ್ಪಾಳೆ. ಟೀಂ ಸ್ಪಿರಿಟ್, ಯೂನಿಟಿ… ಎಂದೆಲ್ಲಾ ಕೇಳಿದ್ದೇವೆ. ಆದರೆ ದೊಡ್ಡ ಚಳುವಳಿಯೊಂದನ್ನು ಸಾಮೂಹಿಕ ನಾಯಕತ್ವದಲ್ಲಿ ನಡೆಸಿದ ಅತ್ಯುತ್ತಮ ಉದಾಹರಣೆ ಬಸವಣ್ಣನವರ, ಶರಣರ ಗುಂಪು. ಏನಾದರೂ ಹೊಸದನ್ನು ಸಾಧಿಸಲು ಹೊರಡುವವರಿಗೆ ಇದು ಉತ್ತಮ ಮಾರ್ಗದರ್ಶನ ನೀಡುತ್ತದೆ. excellent article

 6. Naganagoudar chintamani
  Jul 11, 2018 Reply

  fantastic article, an eye opener, can i print it and distribute?

 7. pratapa gowda, ganiger
  Jul 14, 2018 Reply

  ಯೋಗ್ಯ ನಾಯಕರಿಲ್ಲದೆ ದೇಶ, ರಾಜ್ಯ, ಸಂಘಟನೆಗಳು ಇವತ್ತು ಅಡ್ಡಹಾದಿ ಹಿಡಿದಿವೆ. ಬಸವಾದಿ ಶರಣರು ತೋರಿದ ನಾಯಕತ್ವ ನಮ್ಮ ಸಮಸ್ಯೆಗಳಿಗೆ ಉತ್ತರ ಒದಗಿಸುತ್ತದೆ ಎಂಬ ಆಸೆ ಹುಟ್ಟಿಸಿತು ನಿಮ್ಮ ಲೇಖನ. ಧನ್ಯವಾದಗಳು.

 8. ರವಿರಾಜ್ ಸಾಗರ್
  Jul 18, 2018 Reply

  ಉತ್ತಮ ಬ್ಲಾಗ್….. ಉತ್ತಮ ಲೇಖನಗಳು.. ಧನ್ಯವಾದಗಳು

 9. sadashivaiah JP
  Jul 22, 2018 Reply

  the article throws light on the crucial character which bound sharanas together. madam, wonderful article.

 10. shobhadevi
  Jul 22, 2018 Reply

  ತುಂಬಾ ಚೆನ್ನಾಗಿದೆ ಲೇಖನ. ನಾನು ಬಂದ ಕಾರ್ಯಕ್ಕೆ ವಚನದ ಮರ್ಮ ಗೊತ್ತಾಯಿತು.

Leave A Comment

Your email address will not be published. Required fields are marked *