Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಡೆದಾಡುವ ದೇವರು
Share:
Articles April 9, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ನಡೆದಾಡುವ ದೇವರು

ಸಿದ್ಧಗಂಗೆಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ದೈಹಿಕವಾಗಿ ನಮ್ಮನ್ನಗಲಿದ್ದರೂ ಅವರ ಸಾಹಿತ್ಯ, ಸಂಸ್ಕೃತಿ, ಅನ್ನ ಮತ್ತು ಜ್ಞಾನದಾಸೋಹದ ಮೂಲಕ ಜನಮನದಲ್ಲಿ ಚಿರಂಜೀವಿಗಳಾಗಿದ್ದಾರೆ. ಕರ್ನಾಟಕ ಮಠಗಳ ತವರೂರು. ಸ್ವಾಮಿ, ಸಂತರ ನೆಲೆವೀಡು. ಇಲ್ಲಿರುವಷ್ಟು ಮಠಗಳು, ಸ್ವಾಮಿಗಳು ಭಾರತದ ಇನ್ನಾವ ರಾಜ್ಯದಲ್ಲೂ ಇರಲಾರರು. ಹಾಗಂತ ಎಲ್ಲ ಸ್ವಾಮಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ. ಕಾವಿಯ ಮರೆಯಲ್ಲಿ ತಮ್ಮ ಕಾಮನೆಗಳನ್ನು ತೀರಿಸಿಕೊಂಡಿರುವ ಸ್ವಾಮಿಗಳ ಉದಾಹರಣೆಗಳೂ ಇವೆ. ಕಾವಿ ಅಗ್ನಿಯ ಸಂಕೇತ. ಅದು ಬೆಂಕಿ ಇದ್ದಂತೆ. ಆ ಬೆಂಕಿ ಸುಡಬೇಕಾದ್ದು ಜನರನ್ನಾಗಲಿ, ಸಮಾಜವನ್ನಾಗಲಿ ಅಲ್ಲ. ಕಾವಿ ಧರಿಸಿರುವ ಸ್ವಾಮಿಯ ಒಳಗೆ ಅಡಗಿರುವ ಕಾಮಾದಿ ದುಷ್ಟಗುಣಗಳನ್ನು ಸುಟ್ಟು ಅವರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿ ಪ್ರೀತಿ, ಸತ್ಯ, ನ್ಯಾಯ, ಅಹಿಂಸೆ, ಪ್ರಾಮಾಣಿಕತೆ, ಸಹಕಾರ, ಸಹಬಾಳುವೆ ಇಂಥ ಮೌಲ್ಯಗಳನ್ನು ಬೆಳೆಸಬೇಕಾಗಿತ್ತು. ಕಾವಿ ಹಾಕಿದ ತಕ್ಷಣ ಎಷ್ಟೋ ಜನ ಅಹಂಕಾರದ ಮೊಟ್ಟೆಗಳಾಗಿ ವರ್ತಿಸುವುದುಂಟು.
ಸ್ವಾಮಿ ಎಂದರೆ ಒಡೆಯ ಅಲ್ಲ. ಒಂದರ್ಥದಲ್ಲಿ ಆತ ಸಮಾಜ ಸೇವಕ. ಸಮಾಜದ ಕಸ ಹೊಡೆಯುವ ಕೈಂಕರ್ಯವನ್ನು ಸ್ವಾಮಿಗಳಾದವರು ಮಾಡಬೇಕಾದ್ದು ಅಪೇಕ್ಷಣೀಯ. ಈ ನೆಲೆಯಲ್ಲಿ ನಾವು ಆಗಾಗ ನೆನಪಿಸಿಕೊಳ್ಳುವುದು ಶಿವಶರಣೆ ಸತ್ಯಕ್ಕನ ಕಾಯಕವನ್ನು. ಸತ್ಯಕ್ಕ ಇಂದಿಗೂ ಉಳಿದಿರುವುದು ಉನ್ನತ ಸ್ಥಾನದಲ್ಲಿದ್ದು ಅಲ್ಲ. ಬದಲಾಗಿ ಆ ಶರಣೆ ಬೀದಿಯ ಕಸವನ್ನು ಗುಡಿಸುವ ಮೂಲಕವೇ ಶರಣರ ಗಮನ ಸೆಳೆದವಳು. ಜನರ ಪ್ರೀತಿ, ವಿಶ್ವಾಸ ಗಳಿಸಿದವಳು. ಆ ತಾಯಿಯ ಸಂಕಲ್ಪ: ಕಸ ಗುಡಿಸುವಾಗ ಬೀದಿಯಲ್ಲಿ ಹೊನ್ನು, ವಸ್ತ್ರ ಬಿದ್ದಿದ್ದರೆ ಅದನ್ನು ಕೈಮುಟ್ಟಿ ಎತ್ತದೆ ಅದನ್ನೂ ಒಂದು ಕಸವೆಂದು ಗುಡಿಸಿ ಹಾಕುವೆ ಎನ್ನುವುದು. ಏಕೆಂದರೆ ನನ್ನ ಬದುಕಿಗೆ ಬೇಕಾದ ಕಾಯಕ ನನಗೆ ಸಿಕ್ಕಿದೆ. ಅದರಿಂದ ಬರುವ ಆದಾಯದಿಂದಲೇ ಸುಖವಾಗಿದ್ದೇನೆ. ಹೀಗಿರುವಾಗ ನನ್ನದಲ್ಲದ ವಸ್ತು, ಬಂಗಾರ ಇತ್ಯಾದಿಗೆ ಕೈ ಹಾಕಿದರೆ ಪಾಪಿಯಾಗುವೆ ಎನ್ನುವ ಪ್ರಜ್ಞೆ ಆ ತಾಯಿಯದು. ಅಂಥ ಪ್ರಜ್ಞೆಯಿಂದಲೇ ಬದುಕು ಸಾಗಿಸಿದವರು ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು.
ಸ್ವಾಮೀಜಿಯವರು `ಸದುವಿನಯವೇ ಸದಾಶಿವನ ಒಲುಮೆ’ ಎನ್ನುವಂತೆ ವಿನಯದ ಸಾಕಾರಮೂರ್ತಿಯಾಗಿದ್ದವರು. ಹಸನ್ಮುಖಿಗಳಾಗಿಯೇ ಭಕ್ತರ ಯೋಗ-ಕ್ಷೇಮ ವಿಚಾರಿಸುತ್ತಿದ್ದರು. ಅವರು ಆಂತರಿಕವಾಗಿ ತಮ್ಮೆಲ್ಲ ಕಾಮನೆಗಳನ್ನು ಸುಟ್ಟು ಬೂದಿ ಮಾಡಿದವರು. ಅವರಿಗಿದ್ದ ಒಂದೇ ಕಾಮನೆ ಎಂದರೆ ವಿದ್ಯಾರ್ಥಿಗಳ ಬಡತನ ಹೋಗಲಾಡಿಸಿ ಅವರ ಅಜ್ಞಾನ ನಿವಾರಣೆ ಮಾಡಬೇಕು, ಅವರು ಮುಂದೆ ಆದರ್ಶ ಜೀವನ ಸಾಗಿಸಬೇಕು ಎನ್ನುವುದಾಗಿತ್ತು. ಅದಕ್ಕಾಗಿ ಅವರು ಶ್ರೀಮಠದಲ್ಲಿ ಪ್ರಾರಂಭಿಸಿದ್ದು ಅನ್ನದಾಸೋಹ ಮತ್ತು ಜ್ಞಾನದಾಸೋಹ. ಇವೆರಡೂ ಮಾನವನ ಬದುಕಿಗೆ ಬಹಳ ಮುಖ್ಯವಾದವು. ಇವತ್ತು ನಾವು ಯಾರಿಗಾದರೂ ಸ್ವಲ್ಪ ಸಹಾಯ ಮಾಡಿದ್ದರೂ ಅಷ್ಟು ಮಾಡಿದೆ, ಇಷ್ಟು ಮಾಡಿದೆ ಎಂದು ಇನ್ನಿಲ್ಲದ ಹಾಗೆ ಬೀಗುವುದುಂಟು. ಆದರೆ ಸ್ವಾಮೀಜಿಯವರಲ್ಲಿ ಬೀಗುವ ಗುಣವಿರಲಿಲ್ಲ; ಬಾಗುವ ಗುಣವಿತ್ತು. ಬಾಗುವ ಗುಣವಿದ್ದ ವ್ಯಕ್ತಿ ದೇವರೇ ಆಗುವನು. ಬೀಗುವ ಗುಣವಿದ್ದ ವ್ಯಕ್ತಿ ರಾಕ್ಷಸನಾಗುವನು. ಈಗ ಕಣ್ಬಿಟ್ಟು ನೋಡಿದರೆ ಎಲ್ಲೆಡೆ ದೇವರಿಗಿಂತ ರಾಕ್ಷಸರೇ ಹೆಚ್ಚಾಗಿರುವಂತೆ ಕಾಣುವುದು. ಹಾಗಿದ್ದರೆ ಕರ್ನಾಟಕದಲ್ಲಿ ಇಷ್ಟೊಂದು ಮಠಗಳಿದ್ದು, ಗುರು-ಜಗದ್ಗುರುಗಳಿದ್ದು ಏನು ಪ್ರಯೋಜನವಾಯ್ತು?
ಪ್ರತಿಯೊಂದು ಮಠದ ಸ್ವಾಮಿಗಳೂ ತಮ್ಮ ವ್ಯಾಪ್ತಿಯಲ್ಲಿ ಬರುವ ಭಕ್ತರ ಬದುಕನ್ನು ಅರಳಿಸುವ ಕಾರ್ಯವನ್ನು ಮಾಡುತ್ತ ಬಂದಿದ್ದರೆ ಕಲ್ಯಾಣ ರಾಜ್ಯ ನೆಲೆಗೊಳ್ಳಲು ಸಾಧ್ಯವಿತ್ತು. ಅರಳಿಸುವುದು ಎಂದರೆ ಜನರಲ್ಲಿರುವ ಅಜ್ಞಾನ, ಮೌಡ್ಯ, ದಾಸ್ಯ, ಸೋಮಾರಿತನ, ದುಶ್ಚಟ-ದುರಭ್ಯಾಸಗಳನ್ನು ಕಳೆಯುವುದು. ಈ ಕಾರ್ಯ ಮಾಡಿದ್ದರೆ ಜಗತ್ತು ನಿಜಕ್ಕೂ ಸುಂದರವಾಗಿರುತ್ತಿತ್ತು. ಇಂಥ ಸಂದರ್ಭದಲ್ಲಿ ನಾವು ಮತ್ತೆ ಮತ್ತೆ 12ನೆಯ ಶತಮಾನದತ್ತ ಮುಖ ಮಾಡುತ್ತೇವೆ. ಬಸವಾದಿ ಶಿವಶರಣರ ಬದುಕನ್ನು ನೆನಪಿಸಿಕೊಳ್ಳುತ್ತೇವೆ. ಹೀಗೆ ಇತಿಹಾಸವನ್ನು ನೆನಪಿಸಿಕೊಂಡರೆ ಸಾಲದು. ನಾವೇ ಹೊಸ ಇತಿಹಾಸವನ್ನು ಬರೆಯುವಂತೆ ಬಾಳಬೇಕು. ಪೂಜ್ಯ ಸ್ವಾಮೀಜಿಯವರು ಇತಿಹಾಸವನ್ನು ಹೇಳದೆ ಇತಿಹಾಸವನ್ನು ಬರೆಯುವಂತೆ ತಾವೇ ಬದುಕಿ ತೋರಿಸಿದರು. ಇವತ್ತು ಇತಿಹಾಸ ಬರೆಯುವವರು ಸಾಕಷ್ಟು ಜನರಿದ್ದಾರೆ. ಆದರೆ ಇತಿಹಾಸದಂತೆ ಬದುಕುವ ಜನ ತುಂಬಾ ವಿರಳವಾಗಿದ್ದಾರೆ. ಪೂಜ್ಯರ ಬದುಕೇ ಸಮಾಜಕ್ಕೆ ಬೆಳಕಾಯಿತು. ಇವತ್ತು ಸಮಾಜಕ್ಕೆ ಬೆಳಕು ಕೊಡುವುದಕ್ಕಿಂತ ಹೆಚ್ಚಾಗಿ ಜನರನ್ನು ಕತ್ತಲೆಯಲ್ಲಿಟ್ಟು ತಾವು ಬೆಳಕಿನಲ್ಲಿ ಕಾಣಿಸಿಕೊಳ್ಳುವವರಿದ್ದಾರೆ.
`ವಿಯ್ ಹ್ಯಾವ್ ಬೆಸ್ಟ್ ಫೇಸ್ ಪಾರ್ ದಿ ಫೊಟೊಗ್ರಾಫರ್’ ಎನ್ನುವ ನುಡಿಗಟ್ಟು ಆಂಗ್ಲಭಾಷೆಯಲ್ಲಿದೆ. ಫೋಟೊ ತೆಗೆಯುತ್ತಾನೆಂದರೆ ಹಸನ್ಮುಖಿಗಳಾಗಿ ಕೂರುತ್ತೇವೆ. ಆದರೆ ಅಂತರಂಗದಲ್ಲಿ ಅದೆಷ್ಟು ಹಾವು, ಚೇಳು, ಕಪ್ಪೆ, ಇಲಿ, ಹುಲಿ, ಸಿಂಹ, ಕರಡಿ ಇವೆಯೋ ತಿಳಿಯದು. ಬಾಹ್ಯ ತೋರಿಕೆಯ ಮುಖ ಮುಖ್ಯವಲ್ಲ. ಅಂತರಂಗ ವಿಕಾರವಾಗದ ಹಾಗೆ ಎಚ್ಚರಿಕೆಯಿಂದ ಇರಬೇಕು. ಆಂತರಿಕ ವಿಕಾಸ ಮುಖ್ಯವಾಗಬೇಕು. `ಮನವರಿಯದ ಕಳ್ಳತನವಿಲ್ಲ’. ಮನುಷ್ಯ ಬೇರೆಯವರಿಗೆ ಟೋಪಿ ಹಾಕಬಹುದು. ತನಗೆ ತಾನೇ ಟೋಪಿ ಹಾಕಿಕೊಳ್ಳಲು ಸಾಧ್ಯವಿಲ್ಲ. ಇಂದು ಇತರರಿಗೆ ಟೋಪಿ ಹಾಕುವುದಲ್ಲದೆ ತಮಗೆ ತಾವೇ ಟೋಪಿ ಹಾಕಿಕೊಳ್ಳುವ ಜನರೂ ಇದ್ದಾರೆ. ಅವರದು ಮುಖವಾಡದ ಬದುಕು. ಕೊರೊನಾ ಸಂದರ್ಭದಲ್ಲಿ ಮುಖಕ್ಕೆ ಹಾಕಿರುವ ಮುಖವಾಡ (ಮಾಸ್ಕ್) ಅಲ್ಲ. ಇದು ಕೊರೊನಾ ಮಾರಿಯಿಂದ ಸಂರಕ್ಷಣೆಗಾಗಿ ಹಾಕಿಕೊಂಡಿರುವುದು. ಆದರೆ ದೊಡ್ಡ ದೊಡ್ಡ ಸ್ಥಾನದಲ್ಲಿರುವವರು ಮುಖವಾಡ ಧರಿಸುವುದು ಮೋಸ, ವಂಚನೆ, ದ್ರೋಹ ಬಗೆಯಲು. ಪರಿಸ್ಥಿತಿ ಹೀಗಿದ್ದರೆ ಧರ್ಮ, ತತ್ವ, ಆದರ್ಶ, ಮೌಲ್ಯಗಳನ್ನು ಹೇಳಿ ಪ್ರಯೋಜನವೇನು? ಹೇಳುವಷ್ಟೇ ಮುಖ್ಯ ಅವುಗಳಂತೆ ಬದುಕುವುದು. ಸ್ವಾಮೀಜಿಯವರು ಕೇವಲ ತತ್ವ ಹೇಳದೆ ಅವುಗಳಿಗೆ ಅನುಗುಣವಾಗಿ ತಮ್ಮ ಬದುಕನ್ನು ಕಟ್ಟಿಕೊಂಡರು. ಹಾಗಾಗಿ ಅವರು ದಿನದಿಂದ ದಿನಕ್ಕೆ ಬೆಳೆಯುತ್ತ ದೊಡ್ಡವರಾದರು. ಅವರು ಸಹ ಸಾಮಾನ್ಯರ ಹಾಗೆ ಹುಟ್ಟಿ ಬೆಳೆದವರು. ಬಡತನ, ನೋವು, ಸಂಕಟ ಅನುಭವಿಸಿ ಈ ನೆಲದಲ್ಲೇ ಓಡಾಡಿದವರು. ಆದರೆ ಅವುಗಳಿಂದ ಪಾಠ ಕಲಿತು ತಮ್ಮ ಸಾಧನೆ, ಸಾಮಾಜಿಕ ಕಳಕಳಿ, ಸ್ವಾರ್ಥರಹಿತ ಬದುಕಿನ ಮೂಲಕ ಸರಳತೆ ಮೈಗೂಡಿಸಿಕೊಂಡು ಬಹು ಎತ್ತರಕ್ಕೆ ಬೆಳೆದರು. ಹಾಗಾಗಿ ಸಮಾಜ ಅವರನ್ನು `ನಡೆದಾಡುವ ದೇವರು’ ಎಂದದ್ದು. ಎಲ್ಲ ಜನರನ್ನೂ ನಡೆದಾಡುವ ದೇವರು ಎನ್ನುವುದಿಲ್ಲ. ವಾಸ್ತವವಾಗಿ ಪ್ರತಿಯೊಬ್ಬ ಮಾನವ ನಡೆದಾಡುವ ದೇವರೇ ಆಗಬೇಕು. ಅದು ಯಾವಾಗ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಬಸವಣ್ಣನವರ ವಚನ ದಾರಿ ತೋರಿಸುವಂತಿದೆ.
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.

ಬಸವಣ್ಣನವರು ದೇವರಿಗೆ ಸವಾಲು ಹಾಕುವರು. ಇವತ್ತು ಸಹ ಜನರು ಸವಾಲು ಹಾಕುವರು. ನಾನೇನೆಂದು ಅವನಿಗೆ ತೋರಿಸುವೆ. ಮಹಾ ಎಂದರೆ ಎರಡು ಎಕರೆ ಅಡಕೆ ತೋಟ ಇಲ್ಲವೇ ತುಮಕೂರಲ್ಲಿರುವ ಒಂದು ಸೈಟು ಹೋಗಲಿ ಎನ್ನುವುದು ಹಲವರ ಸವಾಲು. ಬಸವಣ್ಣನವರ ಸವಾಲನ್ನು ಗಮನಿಸಿರಿ. ನಾನು ಭಕ್ತಿಯನ್ನು ಹೊರಹೊಮ್ಮಿಸುವ ಹಿತವಾದ, ಮಿತವಾದ ಮಾತುಗಳನ್ನು ಆಡುವೆ ಎನ್ನುವರು. ಇಂಥ ಮಾತುಗಳನ್ನು ಆಡುವವರಿಗೆ ಇಂದು ಕೊರತೆ ಇಲ್ಲ. ಆದರೆ ಬಸವಣ್ಣನವರು ಹೇಳುವುದು ನಾನು ನುಡಿದಂತೆ ನಡೆಯುತ್ತೇನೆ. ನನ್ನ ನಡೆ, ನುಡಿಯಲ್ಲಿ ಒಂದು ಕುದುರೆ ಕೂದಲಿನಷ್ಟು ವ್ಯತ್ಯಾಸ ಕಂಡುಬಂದರೂ ನನ್ನನ್ನು ತುಳಿದು ನೀನೆದ್ದು ಹೋಗು ಎಂದು ದೇವರಿಗೇ ಸವಾಲು ಹಾಕುವರು. ಶಿವನಿಗೆ ಇಂಥ ಸವಾಲು ಹಾಕಿದವರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರು. ಸವಾಲು ಹಾಕಿ ಸುಮ್ಮನಾಗಲಿಲ್ಲ. ತಮ್ಮ ಸವಾಲಿನ ಮೂಲಕ ಶಿವನನ್ನೇ ಗೆದ್ದರು. ಭಕ್ತ, ದೇವರು ಇವರಲ್ಲಿ ಯಾರು ದೊಡ್ಡವರು ಎಂದರೆ ಬಹುತೇಕ ಜನರು ದೇವರು ಎಂದು ಹೇಳಬಹುದು. ಈ ನೆಲೆಯಲ್ಲಿ ಬಸವಣ್ಣನವರ ವಚನ ಗಮನಾರ್ಹವಾಗಿದೆ.
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ತಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.

ಈ ವಚನದಲ್ಲಿರುವ ಭಾವವನ್ನು ಗಮನಿಸಬೇಕು. ಭಕ್ತ ಮತ್ತು ಭಗವಂತನ ನಡುವೆ ಸಂವಾದ ನಡೆಯುತ್ತಿದೆ. ನಿನ್ನನ್ನು ಸೋಲಿಸುವೆ ಎಂದು ಭಗವಂತ ಹೇಳಿದರೆ ಅದು ಸಾಧ್ಯವಿಲ್ಲ; ಗೆಲವು ನನ್ನದೇ ಎಂದು ಭಕ್ತ ಹೇಳುವನು. ಕೊನೆಗೆ ಭಕ್ತ ಗೆದ್ದು ಭಗವಂತ ಸೋತ ಎನ್ನುವರು ಬಸವಣ್ಣನವರು. ಭಕ್ತನ ಗೆಲವಿಗೆ ಕಾರಣವಾದದ್ದು ಅವನ ಸತ್ಯನಿಷ್ಠೆ. ಹಾಗೆ ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ಸತ್ಯನಿಷ್ಠೆಯ ಮೂಲಕ ಭಗವಂತನನ್ನೂ ಸೋಲಿಸಿ ತಾವೇ ದೇವರು ಎನ್ನುವ ಬಿರುದು ಪಡೆದವರು. ದೇವರು, ಮಾನವ ಬೇರೆ ಬೇರೆ ಅಲ್ಲ. ಮನುಷ್ಯ ತನ್ನಲ್ಲಿರುವ ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನಿಯಾದರೆ ಅವನೇ ಶಿವ. ಅಜ್ಞಾನದ ಕೂಪದಲ್ಲಿ ಮುಳುಗಿ, ಅಹಂಕಾರದ ಮೊಟ್ಟೆಯಾದಲ್ಲಿ ಅವನು ಮಾನವನೂ ಆಗದೆ ಕಾಡುವ ಕಾಡುಮೃಗವಾಗುವನು. ಇವತ್ತು ಇಂಥ ಕಾಡುಮೃಗಗಳ ಸಂಖ್ಯೆ ಹೆಚ್ಚುತ್ತಿದೆ. ಈಗ ಮೃಗತ್ವವನ್ನು ಹೊಡೆದುಹಾಕಿ ಮನುಷ್ಯತ್ವದಿಂದ ಮಹಾದೇವತ್ವದ ಕಡೆಗೆ ಸಾಗುವವರ ಸಂಖ್ಯೆ ಹೆಚ್ಚಬೇಕಿದೆ. ಇಂದು ಮನುಷ್ಯ ಹೊರಗೆ ತೋರಿಸಿಕೊಳ್ಳುವುದೇ ಒಂದಾದರೆ ತನ್ನ ಅಂತರಂಗದಲ್ಲಿರುವುದೇ ಬೇರೊಂದು. ಅದನ್ನು ಬೇಕಾದರೆ `ಮೇಲೆ ಬಸಪ್ಪ, ಒಳಗೆ ವಿಷಪ್ಪ’ ಎನ್ನಬಹುದು. ಮನುಷ್ಯ ಹೀಗಾಗಬಾರದು.
ಮನುಷ್ಯನಿಗೆ ಅಂತರಂಗ ಶುದ್ಧಿಯೂ ಬೇಕು, ಬಹಿರಂಗ ಶುದ್ಧಿಯೂ ಬೇಕು. ಇದು ಸಾಧ್ಯವಾಗುವುದು ಬಸವಣ್ಣನವರು ಹೇಳುವ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎನ್ನುವ ಸಪ್ತ ಶೀಲಗಳನ್ನು ಆಚರಣೆಯಲ್ಲಿ ತಂದಾಗ. ಭಕ್ತ ದೇವರನ್ನು ಒಲಿಸಲು ಯಾವ ಗುಡಿಗೂ ಹೋಗಬೇಕಾಗಿಲ್ಲ. ಎಡೆ ಹಿಡಿಯಬೇಕಾಗಿಲ್ಲ. ತೀರ್ಥಕ್ಷೇತ್ರಗಳನ್ನು ಸುತ್ತಬೇಕಾಗಿಲ್ಲ. ಬದಲಾಗಿ ಸಪ್ತಶೀಲಗಳಂತೆ ವ್ಯಕ್ತಿಗತ ಬದುಕನ್ನು ಕಟ್ಟಿಕೊಳ್ಳಬೇಕು. ಆದರೆ ಇವತ್ತು ಸಪ್ತ ಶೀಲಗಳನ್ನು ಧಿಕ್ಕರಿಸಿ ದೇವರಿಗೆ ದೊಡ್ಡ ದೊಡ್ಡ ದೇವಾಲಯಗಳನ್ನು ಕಟ್ಟಿಸುವ ಸ್ಪರ್ಧೆ ನಡೆದಿದೆ. ಊರಲ್ಲಿ ಒಂದು ಪ್ರಾಥಮಿಕ ಶಾಲಾ ಗುಡಿ ಇರುವುದಿಲ್ಲ. ಇದ್ದರೂ ಅದು ರಿಪೇರಿ, ಸುಣ್ಣ ಬಣ್ಣ ಕಾಣದೆ ಹಾಳುಬಿದ್ದಿರುತ್ತದೆ. ಅದರ ಬಗ್ಗೆ ಜನ ಗಮನ ಹರಿಸುವುದಿಲ್ಲ. ಮಕ್ಕಳಿಗೆ ಓದಲು ಪುಸ್ತಕ ತಂದುಕೊಡುವುದಿಲ್ಲ. ಬದಲಾಗಿ ದೇವಸ್ಥಾನ ಕಟ್ಟಿಸುತ್ತೇವೆಂದರೆ ಧಾರಾಳವಾಗಿ ಹಣ ಹರಿದುಬರುವುದು. ಸ್ಥಾವರ ದೇವಾಲಯ ಬೇಕೇ ಎಂದು ಯಾರೊಬ್ಬರೂ ಚಿಂತನೆ ಮಾಡುವುದಿಲ್ಲ. ಗುಡಿಯ ದೇವರು ಯಾರಿಗೂ ವರವನ್ನೂ ಕರುಣಿಸುವುದಿಲ್ಲ, ಶಾಪವನ್ನೂ ವಿಧಿಸುವುದಿಲ್ಲ. ಮಕ್ಕಳೇ ನಿಜವಾದ ದೇವರು. ಅವರು ಓದುವ ಶಾಲಾ ಕಟ್ಟಡವೇ ದೇವಾಲಯ. ಅಂಥ ದೇವಾಲಯವನ್ನು ಸುಂದರವಾಗಿ ಕಟ್ಟಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿದರೆ ಸಾಮಾಜಿಕ ಪ್ರಗತಿ ಸಾಧ್ಯ. ಆದರೆ ನಮ್ಮ ಜನರು ದೇವರಿಗೆ ಗುಡಿ ಕಟ್ಟಿಸುವಲ್ಲಿ ತೋರುವ ಆಸಕ್ತಿಯನ್ನು ತಮ್ಮ ಮಕ್ಕಳು ಓದುವ ಶಾಲಾ ಗುಡಿಗಳನ್ನು ಕಟ್ಟಿಸುವಲ್ಲಿ ತೋರಿಸುತ್ತಿಲ್ಲ. ಇವತ್ತು ಸರ್ಕಾರ ಕೂಡ ದೇವರಿಗೆ ದೇವಸ್ಥಾನ ಕಟ್ಟಿಸಲು ಮುಂದಾಗಿದೆ. ಅದನ್ನು ಬಿಚ್ಚಿ ಹೇಳುವ ಅಗತ್ಯವಿಲ್ಲ. ಅದಕ್ಕಾಗಿ ಬಸವಣ್ಣನವರು ಹೇಳಿದ್ದು:
ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಜಂಗಮ ಎಂದರೆ ಚಲನೆಯುಳ್ಳದ್ದು, ಅಳಿವಿಲ್ಲದ್ದು, ಜೀವಂತಿಕೆಯ ಪ್ರತೀಕ. ಜನರು, ಸಮಾಜ, ಪ್ರಕೃತಿ, ಸಕಲ ಜೀವಜಂತುಗಳು, ಆದರ್ಶ ನಡಾವಳಿಕೆ ಇವೇ ಜಂಗಮ. ಇವುಗಳಿಗೆ ಅಳಿವಿಲ್ಲ. ಸ್ಥಾವರ ಎಂದರೆ ಜಡವಾದುದು. ಜೀವ ಇಲ್ಲದ್ದು. ಸ್ಥಾವರವನ್ನೇ ಹೆಚ್ಚು ಹೆಚ್ಚು ಅವಲಂಬಿಸಿದರೆ ಸಮಾಜವನ್ನು ಜಂಗಮಗೊಳಿಸುವುದು ಯಾವಾಗ? ಯಾರು? ಸ್ವಾಮೀಜಿ ಸಮಾಜವನ್ನು ಸ್ಥಾವರಗೊಳಿಸದೆ ಜಂಗಮಗೊಳಿಸಲು ಏನೆಲ್ಲ ಕಾಯಕ ಮಾಡಿದರು. ಹಾಗಾಗಿ ಇವತ್ತಿಗೂ ಜನ ಅವರನ್ನು ಭಕ್ತಿ ಗೌರವದಿಂದ ಸ್ಮರಿಸಿಕೊಳ್ಳುವರು. ಶ್ರೀ ತರಳಬಾಳು ಜಗದ್ಗುರು ಪೀಠದ 20ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಮತ್ತು ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಸಮಕಾಲೀನರು. ಇಬ್ಬರ ಹೆಸರೂ ಶಿವಕುಮಾರ ಎಂದೇ ಪ್ರಾರಂಭ. ಇಬ್ಬರಲ್ಲೂ ಮಧುರ ಬಾಂಧವ್ಯ ಇತ್ತು. ಇಬ್ಬರೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳೆನ್ನದೆ ಶ್ರಮಿಸಿದರು. ಇಬ್ಬರ ಗುಣಸ್ವಭಾವಗಳು ಒಂದೇ ಆಗಿದ್ದವು. ಸಿರಿಗೆರೆಯ ತರಳಬಾಳು ಹುಣ್ಣಿಮೆ ಮತ್ತಿತರ ಕಾರ್ಯಕ್ರಮಗಳಿಗೆ ಸಿದ್ಧಗಂಗೆಯ ಪೂಜ್ಯರು ಅತ್ಯಂತ ಪ್ರೀತಿಯಿಂದಲೇ ದಯಮಾಡಿಸಿ ಭಕ್ತರಿಗೆ ದರ್ಶನಾಶೀರ್ವಾದ ಕರುಣಿಸುತ್ತಿದ್ದರು. ಹಾಗೆನೆ ಸಿರಿಗೆರೆಯ ಪೂಜ್ಯರು ಸಿದ್ಧಗಂಗಾ ಶ್ರೀಗಳ ಆಹ್ವಾನ ಮನ್ನಿಸಿ ಇಲ್ಲಿಗೆ ಬರುತ್ತಿದ್ದರು. ಅವರು 78 ವರ್ಷ ಕಾಲ ಕಾಯಕ ಮಾಡುತ್ತಲೇ 1992ರಲ್ಲಿ ಶಿವ ಸನ್ನಿಧಿಗೆ ಸೇರಿದರು. ಸಿದ್ಧಗಂಗಾ ಶ್ರೀಗಳು 111 ವರ್ಷಗಳ ಕಾಲ ಸಮಾಜದ ಏಳಿಗೆಗಾಗಿ ಗಂಧದಂತೆ ತೇದುಕೊಂಡು ಶಿವನೆಡೆಗೆ ನಡೆದರು.
ಸಿದ್ಧಗಂಗೆಯ ಶ್ರೀಗಳು ದೀರ್ಘಕಾಲ ಬಾಳಲು ಕಾರಣವಾದುದು `ಕಾಯವೆ ಕೈಲಾಸ’ ಮತ್ತು `ಕಾಯಕವೇ ಕೈಲಾಸ’ ಎನ್ನುವ ತತ್ವವನ್ನು ಚಾಚೂತಪ್ಪದೆ ಪಾಲಿಸಿದ್ದು ಎನಿಸುತ್ತದೆ. `ದೇಹವೇ ದೇವಾಲಯ’ ಎಂದು ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಶಿವಯೋಗ ನಿರತರಾಗುತ್ತಿದ್ದರು. ಉಳಿದ ಸಮಯದಲ್ಲಿ ಕಾಯಕದಲ್ಲಿ ತಲ್ಲೀನರಾಗುತ್ತಿದ್ದರು. ಅವರು ವಿಶ್ರಾಂತಿ ಬೇಕೆಂದು ಹೇಳಿದವರೇ ಅಲ್ಲ. ಅವರ ದಿನಚರಿ ನೋಡಿದರೆ ಆಶ್ಚರ್ಯವಾಗುವುದು. ಮುಂದಿನ ತಲೆಮಾರಿನವರಿಗೆ ಸಿದ್ಧಗಂಗೆಯ ಶಿವಕುಮಾರ ಮಹಾಸ್ವಾಮಿಗಳವರು ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಶಿವಪೂಜೆ ಮಾಡಿಕೊಳ್ಳುತ್ತಿದ್ದರು. ಮಕ್ಕಳ ಜೊತೆ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು. ಶಾಲಾ ಕಾಲೇಜುಗಳ ಆಡಳಿತ ನಿರ್ವಹಿಸುತ್ತಿದ್ದರು. ಎಲ್ಲ ಸಮಯದಲ್ಲೂ ಭಕ್ತರಿಗೆ ದರ್ಶನ ನೀಡಿ ಅವರ ಸಮಸ್ಯೆಗಳಿಗೆ ಸಮಾಧಾನದ ಉತ್ತರ ಕೊಡುತ್ತಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂದರೆ ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲ ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಡಬಹುದು. ಏಕೆಂದರೆ ಇಂದಿನ ಪೀಳಿಗೆ ಸತ್ಯಶುದ್ಧ ಕಾಯಕಕ್ಕಿಂತ ವಿಶ್ರಾಂತಿಯಲ್ಲೇ ಹೆಚ್ಚು ಕಾಲ ಕಳೆಯುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಆದರೆ ಶ್ರೀಗಳು ಸದಾ ಕ್ರಿಯಾಶೀಲರಾಗಿ ಲಿಂಗನಿಷ್ಟೆ, ಜಂಗಮ ಪ್ರೇಮಿಗಳಾಗಿ ಕಾಯಕ ಶ್ರದ್ಧೆ ಮೈಗೂಡಿಸಿಕೊಂಡದ್ದರಿಂದ ದೀರ್ಘಕಾಲ ಆರೋಗ್ಯಪೂರ್ಣವಾಗಿರಲು ಸಾಧ್ಯವಾಯಿತು ಎನಿಸುತ್ತಿದೆ.
ಪೂಜ್ಯರಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಅವರ ಭಾವಚಿತ್ರ ಇಲ್ಲವೇ ಪ್ರತಿಮೆಗೆ ಹಾರ, ಪುಷ್ಟ ಹಾಕಿ ಕೈ ಮುಗಿದು ಅವರನ್ನು ಇಂದ್ರ, ಚಂದ್ರ ಎಂದು ಹೊಗಳಿದರೆ ಸಾಲದು. ಅವರ ಹಾಗೆ ಕಾಲದ ಸದುಪಯೋಗ ಮಾಡಿಕೊಂಡು ಕಾಯಕ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕು. ಕಾಯದ ಶುಚಿತ್ವ ಕಾಪಾಡಿಕೊಳ್ಳಬೇಕು. ಸಮಾಜದ ಬಗ್ಗೆ ಕಳಕಳಿಯುಳ್ಳವರಾಗಿ ಅನ್ನ ಮತ್ತು ಜ್ಞಾನ ದಾಸೋಹಗಳನ್ನು ಜೊತೆ ಜೊತೆಯಲ್ಲೇ ನಡೆಸಿಕೊಂಡು ಹೋಗಬೇಕು. ಆಗ ದೀರ್ಘಕಾಲ ಬಾಳಲು ಸಾಧ್ಯ. ಆದಯ್ಯನವರ ಒಂದು ವಚನ ಸ್ವಾಮೀಜಿಯವರ ಬದುಕಿಗೆ ಕನ್ನಡಿ ಹಿಡಿದಂತಿದೆ.
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯಂಗಳಲ್ಲಿ ಉದಾಸೀನ, ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೊ.

ಕೇವಲ ವಯಸ್ಸಿನಿಂದಲೇ ಯಾವ ವ್ಯಕ್ತಿಯೂ ದೊಡ್ಡವರಾಗಲು ಸಾಧ್ಯವಿಲ್ಲ. ಅರಿವು, ಆಚಾರದಿಂದ ವ್ಯಕ್ತಿ ದೊಡ್ಡವನಾಗಲು ಸಾಧ್ಯ. ಜೊತೆಗೆ ಬಸವಣ್ಣನವರು ಹೇಳುವಂತೆ ಪೂಜ್ಯರು ಲೇಸೆನಿಸಿಕೊಂಡು ಬಾಳಿದವರು.
ಲೇಸೆನಿಸಿಕೊಂಡು ಅಯ್ದು ದಿವಸ ಬದುಕಿದಡೇನು?
ಲೇಸೆನಿಸಿಕೊಂಡು ನಾಲ್ಕು ದಿವಸ ಬದುಕಿದಡೇನು?
ಲೇಸೆನಿಸಿಕೊಂಡು ಮೂರು ದಿವಸ ಬದುಕಿದಡೇನು?
ಲೇಸೆನಿಸಿಕೊಂಡು ಎರಡು ದಿವಸ ಬದುಕಿದಡೇನು?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿವಸ ಬದುಕಿದಡೇನೊ!

ಕೂಡಲಸಂಗನ ಶರಣರ ವಚನದಲ್ಲಿ ಲೇಸೆನಿಸಿಕೊಂಡು ಪೂಜ್ಯರು 111 ವರ್ಷ ಅರ್ಥಪೂರ್ಣ ಬದುಕನ್ನು ನಡೆಸಿ ಪರಮಾತ್ಮನಲ್ಲಿ ಬೆರೆತಿದ್ದಾರೆ. ಅಂಥ ಬದುಕು ಪ್ರತಿಯೊಬ್ಬರದೂ ಆದಾಗಲೇ ಆ ಗುರುವಿನ ಸ್ಮರಣೆ ಸಾರ್ಥಕವಾಗುವುದು.

Previous post ಶಿವಾಚಾರ
ಶಿವಾಚಾರ
Next post ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ

Related Posts

ಪೈಗಂಬರರ ಮಾನವೀಯ ಸಂದೇಶ
Share:
Articles

ಪೈಗಂಬರರ ಮಾನವೀಯ ಸಂದೇಶ

November 7, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕಸ ತುಂಬಿದಾಗ ಅದನ್ನು ಗುಡಿಸಿ ಸ್ವಚ್ಛ ಮಾಡಲು ಕಾಲ ಕಾಲಕ್ಕೆ ಅನೇಕ ಧರ್ಮದೀಪಕರು, ಮಹಾತ್ಮರು, ಶರಣರು ಉದಯಿಸಿ ಬರುವರು. ಅವರಲ್ಲಿ ಬುದ್ಧ,...
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
Share:
Articles

ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ

September 10, 2022 Bayalu
(ಅಣ್ಣ-ತಂಗಿಯರ ಸುಜ್ಞಾನದ ಪಯಣ) ಅಲರೊಳಡಗಿದ| ಪರಿಮಳದಂತೆ|| ಪತಂಗದೊಳಡಗಿದ| ಅನಲನಂತೆ|| ಶಶಿಯೊಳಡಗಿದ| ಷೋಡಸಕಳೆಯಂತೆ|| ಉಲುಹಡಗಿದ| ವಾಯುವಿನಂತೆ|| ಸಿಡಿಲೊಳಡಗಿದ| ಗಾತ್ರದ...

Comments 10

  1. Veeresh S. Belgavi
    Apr 11, 2021 Reply

    ಸಿದ್ಧಗಂಗೆಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಕುರಿತಾದ ಸಮಯೋಚಿತ ಲೇಖನಕ್ಕೆ ಧನ್ಯವಾದ.

  2. Kamalesh Jevergi
    Apr 11, 2021 Reply

    ತುಮಕೂರಿನ ಸಿದ್ಧಗಂಗಾ ಮಠಕ್ಕೆ ಹೋಗಿ ಸ್ವಾಮಿಗಳ ಸೇವೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರು ನಿಜಕ್ಕೂ ವಿದ್ಯಾದಾತರು. ಆದರೆ ಅವರು ತಾಯತ ಕಟ್ಟಿಕೊಡುತ್ತಿದ್ದರು, ಇದು ಶರಣರ ಆಶಯಗಳಿಗೆ ಸರಿ ಹೊಂದುತ್ತದೆಯೇ?

  3. Raju Gubbi
    Apr 13, 2021 Reply

    ಶಿವಕುಮಾರ ಸ್ವಾಮಿಗಳಂತಹ ಗುರುಗಳು ಬಹಳ ಅಪರೂಪ. ಅವರ ಅವಿಶ್ರಾಂತ ದುಡಿಮೆಯ ಫಲ ಇವತ್ತಿನ ತುಮಕೂರು ಶಿಕ್ಷಣ ಸಂಸ್ಥೆಗಳು. ಜಾತಿಬೇಧವಿಲ್ಲದ ಅವರ ನಡೆ ಎಂದಿಗೂ ಅನುಕರಣೆ ಯೋಗ್ಯ.

  4. ಚಂದ್ರಶೇಖರ ಆರ್.
    Apr 13, 2021 Reply

    ನಮ್ಮ ನಾಡಿಗೆ ಸ್ವಾಮಿಗಳ ಸೇವೆ ಅಗಾಧವಾದುದು. ಆದರೆ ಅವರ ಪ್ರತಿಮೆಗಾಗಿ ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡುತ್ತಿರುವುದು ಸ್ವಾಮಿಗಳ ಆಶಯಕ್ಕೆ ವಿರುದ್ಧವಾಗಿ ಕಾಣುತ್ತದೆ. ಸ್ಥಾವರ ಪ್ರತಿಮೆಗಳಿಗೆ ಹೀಗೆ ಸಾರ್ವಜನಿಕ ಹಣವನ್ನು ನೀಡುವುದು ಸರಿಯಲ್ಲ, ಅದರ ಬದಲಿಗೆ ಪ್ರತಿವರ್ಷ ಗುರುಗಳ ಹೆಸರಲ್ಲಿ ಸಮಾಜ ಸೇವಕರಿಗೆ ಪ್ರಶಸ್ತಿ ನೀಡಿದರೆ ಹೆಚ್ಚು ಅರ್ಥಪೂರ್ಣವೆನಿಸುವುದು.

  5. Sunanda
    Apr 15, 2021 Reply

    ಸಿದ್ಧಗಂಗಾ ಪೂಜ್ಯರ ಸಾಧನೆ, ವ್ಯಕ್ತಿತ್ವದ ಕುರಿತಾದ ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ. ಆಧುನಿಕ ಶರಣದೆಂದರೆ ನಮ್ಮ ಶ್ರೀಗಳು.

  6. Basappa Chamarajnagar
    Apr 20, 2021 Reply

    ಸತ್ಯನಿಷ್ಠೆಯಿಂದ ಮಾತ್ರವೇ ಭಕ್ತ ಗೆಲ್ಲಬಲ್ಲ- ತುಮಕೂರಿನ ಹಿರಿಯ ಸ್ವಾಮಿಗಳು ಹಾಗೆ ಹಿಡಿದ ವ್ರತವನ್ನು ಪೂರೈಸಿ ಹೋದವರು. ಅವರ ಕಾಯಕ ನಿಷ್ಠೆ ನಿಜಕ್ಕೂ ಅನುಪಮವಾದುದು.

  7. Chandranna Naganur
    Apr 20, 2021 Reply

    ಸ್ವಾಮಿಗಳು ಬದುಕಿದ್ದು ಒಂದು ಇಡೀ ಶತಮಾನ! ನನಗಂತೂ ಅಚ್ಚರಿ ಎನಿಸುತ್ತದೆ. ಹೆಚ್ಚು ಕಮ್ಮಿ ಕೊನೆಯವರೆಗೂ ಕ್ರಿಯಾಶೀಲರಾಗಿದ್ದ ಅವರನ್ನು ನೋಡುವ ಭಾಗ್ಯ ನನ್ನದಾಗಿತ್ತು. ಅವರ ಮಠದಲ್ಲಿ ಒಂದಷ್ಟು ಕಾಲ ಇರುವ ಅದೃಷ್ಟವೂ ನನ್ನದಿತ್ತು.

  8. Vinay Bengaluru
    Apr 25, 2021 Reply

    ಜಂಗಮ ಎನ್ನುವುದು ವಚನಕಾರರ ವಿನೂತನ ಕೊಡುಗೆ, ಜಂಗಮರೂಪಿ ಸಮಾಜದ ದರ್ಶನವಾಗಬೇಕಾದರೆ ಇಂತಹ ಗುರುಗಳ ಹೆಜ್ಜೆಗಳನ್ನು ಗಮನಿಸಬೇಕೆಂದು ಬಿಡಿಬಿಡಿಯಾಗಿ ತಿಳಿಸಿದ ಸುಂದರ ಲೇಖನ.

  9. Jayaprakash Solapur
    Apr 30, 2021 Reply

    ನನ್ನ ಅನಿಸಿಕೆಯಂತೆ ತಾವೂ ನಡೆದಾಡುವ ದೇವರೇ. ಜಂಗಮ ಸೇವೆಯನ್ನು ಮತ್ತು ಸಂಕಷ್ಟಗಳಲ್ಲಿ ಸಮಾಜದ ಜೊತೆ ನಿಲ್ಲುವ ಎದೆಗಾರಿಕೆಯನ್ನು ನಿಮ್ಮಲ್ಲಿ ನಾನು ಕಂಡಿದ್ದೇನೆ. ಬಸವಾದಿ ಶರಣರ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಯೊಬ್ಬರೂ ನಡೆದಾಡುವ ದೇವರುಗಳೇ ಅಲ್ಲವೇ?

  10. Chinmayi
    May 15, 2021 Reply

    ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಾರ
ಭಾರ
October 6, 2020
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ನನ್ನ ಶರಣರು…
ನನ್ನ ಶರಣರು…
April 9, 2021
Copyright © 2023 Bayalu