Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದೂಷಕರ ಧೂಮಕೇತು
Share:
Articles August 8, 2021 ಹೆಚ್.ವಿ. ಜಯಾ

ದೂಷಕರ ಧೂಮಕೇತು

“ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ, ಉರಿಯುವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡಿಸುವಂತೆ, ಹುಲಿಯ ಮೀಸೆಯ ಹಿಡಿದುಕೊಂಡು ಒಲಿದುಯ್ಯಾಲೆಯಾಡುವಂತೆ, ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದಡೆ ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ”

ಶರಣರನ್ನು, ಜಂಗಮರನ್ನು ನಿಂದಿಸುವುದನ್ನು ಗುರು ಬಸವಣ್ಣನವರು ಎಂದೂ ಸಹಿಸುತ್ತಿರಲಿಲ್ಲ. ಆದ್ರೆ ತಮಗೆ ಯಾರಾದರೂ, ಏನೇ ಅಂದರೂ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ.”ಬೈದವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ಜನ್ಮ ಬಂಧುಗಳೆಂಬೆ” ಎನ್ನುತ್ತಿದ್ದರು. ಆದರೆ ಶರಣರಿಗೆ ನೋವಾದರೆ ಅವರ ರಕ್ಷಣೆಗೆ ಸದಾ ಬೆಂಗಾವಲಾಗಿರುತ್ತಿದ್ದರು. ಅವರಿಗೆ ಸದಾ ರಕ್ಷಾಕವಚವಾಗಿರುತ್ತಿದ್ದರು.
ಶರಣನ್ನು, ಜಂಗಮರನ್ನು ನಿಂದಿಸಿದರೆ, ಅಪಮಾನಿಸಿದರೆ, ಅವಹೇಳನ ಮಾಡಿದರೆ ಏನಾಗುತ್ತದೆಂಬುದನ್ನು ಮೇಲಿನ ವಚನದಲ್ಲಿ ಬಹಳ ಚನ್ನಾಗಿ ಹೇಳುತ್ತಾರೆ.
ಹಾವಿನ ಹೆಡೆಯನ್ನು ಹಿಡಿದುಕೊಂಡು ಕೆನ್ನೆಗಳಲ್ಲಿ ನವೆಯಾಗುತ್ತಿದೆ ಎಂದು ತುರಿಸಿಕೊಂಡರೆ ಆ ಹಾವು ಕಚ್ಚದೇ ಬಿಡುತ್ತದೆಯಾ? ತಲೆಯ ಕೂದಲು ತುಂಬಾ ಸಿಕ್ಕಾಗಿದೆಯೆಂದು ಉರಿಯುತ್ತಿರುವಂತಹ ಕೊಳ್ಳಿಯನ್ನು ತೆಗೆದುಕೊಂಡು ಕೂದಲಿನ ಸಿಕ್ಕನ್ನು ಬಿಡಿಸಿಕೊಳ್ಳಲು ಹೋದರೆ ಇಡೀ ಕೂದಲು ಸುಟ್ಟು ಹೋಗುತ್ತದಷ್ಟೆ. ಅದೇ ರೀತಿ ಹುಲಿಯ ಮೀಸೆಯನ್ನು ಹಿಡಿದುಕೊಂಡು ಜೋಕಾಲಿ ಆಡಲು ಹೋದರೆ ಆ ಹುಲಿ ನಮ್ಮನ್ನು ತಿಂದು ಹಾಕಿ ಬಿಡುತ್ತದೆ. ಹಾಗೆಯೇ ನಾವು ಮೈಮರೆತು ಶರಣರು, ಜಂಗಮರು ನಮ್ಮ ಹಾಗೆ ಸಾಧಾರಣ ಮನುಷ್ಯರೆಂದು ಭಾವಿಸಿ ಅವರ ಜೊತೆ ಸರಸವಾಡಲು ಹೋದರೆ ಆಗ ನಮ್ಮ ಸ್ಥಿತಿ ಹೇಗಾಗುತ್ತದೆಂದರೆ, ಸುಣ್ಣದ ಕಲ್ಲನ್ನು ಮಡಿಲಿನಲ್ಲಿ ಕಟ್ಟಿಕೊಂಡು ನೀರಿನ ಹೊಂಡದೊಳಗೆ ಬಿದ್ದರೆ, ಆ ಸುಣ್ಣವೆಲ್ಲ ಕುದಿದು ಅದರ ಜೊತೆಗೆ ನಾವೂ ಬೆಂದು ಹೋಗುವುದು ನಿಶ್ಚಿತ.
ಶರಣರು ಮೊದಲು ಉಪಮೆಗಳನ್ನು ಕೊಡುತ್ತಾ ಅದೇ ವಚನದಲ್ಲಿ ಮುಂದೆ ಸಿಗುವ ಫಲಿತಾಂಶವನ್ನು ಕೊಟ್ಟು ಬಿಡುತ್ತಾರೆ. ಇದು ವಚನಗಳ ವಿಶೇಷತೆ. ಮೊದಲ ಸಾಲುಗಳಲ್ಲಿ ಪ್ರಶ್ನೆಗಳಿರುತ್ತವೆ. ಆ ಪ್ರಶ್ನೆಗಳಿಗೆ ಉತ್ತರವನ್ನು ಬೇರೆ ಕಡೆ ಹುಡುಕುವ ಅಗತ್ಯವಿರುವುದಿಲ್ಲ. ಅದೇ ವಚನದ ಕೊನೆಯ ಸಾಲುಗಳಲ್ಲಿ ಉತ್ತರವೂ ದೊರೆಯುತ್ತದೆ.
ಗುರು ಬಸವಣ್ಣನವರು ಶರಣರನ್ನು ನಿಂದಿಸಿದರೆ ಏನಾಗುತ್ತದೆಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಶರಣರು ದೂಷಕರ ಧೂಮಕೇತುಗಳು ಎನ್ನುತ್ತಾರೆ. ಅಂದರೆ ಶರಣರ ಮನ ನೊಂದರೆ ಆ ನೋವು ನಿಂದಕರಿಗೇ ತಿರುಗಿಬಿಡುತ್ತದೆಂದು ಅರ್ಥ.
“ಊರಿಗೆ ಹೊಸಬರು ಬಂದರೆ ಪುರದೊಳಗಣ ಶ್ವಾನ ನೋಡಿ ಬಗುಳದೆ ಸುಮ್ಮನೆ ಬಿಡುವುದೆ, ಊರಿಗೆ ಹೊರಗಾದ ಶರಣರು ಊರುಗಳ ಮಧ್ಯದೊಳಿರಲು ದೂಷಕರು ದೂಷಿಸದಿಪ್ಪರೇ ಅಯ್ಯ? ದೂಷಕರ ಧೂಮಕೇತುಗಳು ನಿಮ್ಮ ಶರಣರು, ಕೂಡಲಸಂಗಮದೇವಾ.”
ಯಾರಾದರೂ ಹೊಸಬರು ಊರೊಳಗೆ ಬಂದಾಗ ನಾಯಿಗಳು ಬೊಗಳುವುದು ಸಹಜ.ಅದರಂತೆ ಊರಿನೊಳಗೆ ಶರಣರು ಬಂದಾಗ ಶ್ವಾನನಂತ ಜನರು ಬೊಗಳದೆ ಇರಲಾರರು. ಅಂದರೆ ದೂಷಿಸದೆ ಬಿಡುವುದಿಲ್ಲ. ಈ ರೀತಿಯ ದೂಷಣೆಯಿಂದ ನಿಂದನೆಯಿಂದ ಶರಣರಿಗೆ ಏನೂ ಆಗಲಾರದು. ಅವರ ತೆಗಳುವಿಕೆಗೆ ಅಂಜಿ ಶರಣರೇನೂ ಇಟ್ಟ ಹೆಜ್ಜೆ ಹಿಂದೆಗೆಯುವುದಿಲ್ಲ. ಆದರೆ ಅವರನ್ನು ನಿಂದಿಸಿದ್ದಕ್ಕಾಗಿ ನಿಂದಕರೆ ಬಲಿಯಾಗುತ್ತಾರೆ. ಅಂದರೆ ಬೈದವರೇ ಅಮಂಗಳಕ್ಕೆ ಗುರಿಯಾಗುತ್ತಾರೆ. ಆದರೆ ಶರಣರೇನು ತನ್ನನ್ನು ನಿಂದಿಸಿದ್ದಕ್ಕೆ ನಿಮಗೆ ಕೇಡಾಗಲೆಂದು ಎಂದೂ ಬಯಸುವುದಿಲ್ಲ .
ಆದರೆ ಶರಣರ ನೋವು ,ಲಿಂಗದ ನೋವು . ಆ ನೋವು ನಿಂದಕರಿಗೆ ಹಿಂದಿರುಗುತ್ತದೆ ಎನ್ನುವುದು ಬಸವಣ್ಣನವರು ಕೊಡುವ ಎಚ್ಚರಿಕೆ.
“ಕಂಡೊಂದ ನುಡಿವುದೀ ಲೋಕ. ಕಾಣದೊಂದ ನುಡಿವುದೀ ಲೋಕ. ಹಿಂದೆ ನಿಂದಿಸಿದರೆಂದು ಕುಂದಲಿಲ್ಲ. ಮುಂದೆ ವಂದಿಸಿದರೆಂದುಬ್ಬಲಿಲ್ಲ. ವಂದನೆ ನಿಂದನೆಯೆಂಬುದು ಉಪಜೀವಿಗಳಿಗಲ್ಲದೆ, ಉಪಮಾತೀತನಾದ ಪ್ರಾಣಲಿಂಗೈಕ್ಯನಿಗುಂಟೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.”- ಹೀಗೆ ಶರಣರು ಯಾವುದಕ್ಕು ಎದೆಗುಂದಲಿಲ್ಲ. ಈ ವಚನಕ್ಕೆ ಪೂರಕವಾದ ಬಸವಣ್ಣನವರದೊಂದು ವಚನ ಹೀಗಿದೆ:
“ಎತ್ತಿಕೊಳ್ಳಲೇಕೆ, ಮತ್ತಿಳುಹಲೇಕಯ್ಯಾ, ಧರಧುರ ಭಕ್ತಿಯ ಮಾಡಲೇಕಯ್ಯಾ, ನಿಂದಿಸಲೇಕೆ, ಸ್ತುತಿಸಲೇಕೆ, ಹೋಗಬಿಟ್ಟು ಜಂಗಮವ ಹಿಂದೆಯಾಡುವನ ಬಾಯಲ್ಲಿ ಮೆಟ್ಟಿ ಹುಡಿಹೊಯ್ಯದೆ ಮಾಬನೆ ಕೂಡಲಸಂಗಮದೇವ”
ಒಮ್ಮೆ ಎತ್ತಿಕೊಂಡರೆ ಅವರನ್ನು ಇಳಿಸಬಾರದು. ಧರಧುರ ಭಕ್ತಿಯ ಮಾಡಲೇಕೆ? ಅಂದರೆ ಅವರನ್ನು ಹೊಗಳಿದ್ದೂ ಹೊಗಳಿದ್ದೆ. ನೀವೆ ಇಂದ್ರ ಚಂದ್ರ, ನಿಮ್ಮನ್ನು ಬಿಟ್ಟರೆ ಮತ್ಯಾರೂ ಇಲ್ಲವೆಂದು ಹೊಗಳಿ, ಎಲ್ಲಕ್ಕಿಂತ ಶ್ರೇಷ್ಠ ಅಂತ ಬಿಂಬಿಸಿ, ಗೌರವಿಸಿ, ಭಕ್ತಿಯ, ಪ್ರೀತಿಯ ಮಾಡಿದ ನಂತರ ಅವರನ್ನು ಹಿಂದಿನಿಂದ ಮತ್ತೆ ಯಾಕೆ ನಿಂದಿಸಬೇಕು.
“ಭಕ್ತಂಗೆ ವಂದಿಸಿ ನಿಂದಿಸಿದಲ್ಲಿಯೆ ವಿಶ್ವಾಸ ಜಾರಿತ್ತು. ವಿರಕ್ತಂಗೆ ಸುಗುಣ ದುರ್ಗುಣವ ಸಂಪಾದಿಸಿದಲ್ಲಿಯೆ ವಿವೇಕ ಹೋಯಿತ್ತಯ್ಯಾ. ಕಣ್ಣಿನಲ್ಲಿ ಮುಳ್ಳು ಮುರಿದಂತೆ ಚುಚ್ಚಿ ತೆಗೆಯಬಾರದು, ವೇದನೆ ಬಿಡದು. ವರ್ತನೆಗೆ ಭಂಗ, ಸತ್ಯಕ್ಕೆ ದೂರ, ಈ ಸಮಯದ ಸಂಗ. ಎನ್ನ ಗುಣದ ಕಷ್ಟವನಳಿವುದಕ್ಕೆ ಸಂಗನ ಬಸವಣ್ಣನಿಂದ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದಾಗದು”- ಎಂದು ಶರಣ ಬಾಹೂರ ಬೊಮ್ಮಣ್ಣನವರು ಹೇಳುತ್ತಾರೆ. ಎದುರಿನಿಂದ ವಂದಿಸಿ ಹಿಂದಿನಿಂದ ಅವರನ್ನು ಜರಿದರೆ ಅವರ ವಿಶ್ವಾಸಕ್ಕೆ ಕುಂದುಂತಾಗುತ್ತದೆ. ಅಷ್ಟೇ ಅಲ್ಲ ,ಆ ವೇದನೆಯ ಪರಿ ಹೇಗಿರುತ್ತದೆಂದರೆ “ಕಣ್ಣಿನಲ್ಲಿ ಮುಳ್ಳು ಮುರಿದಂತೆ.” ಈ ರೀತಿ ನಡೆದುಕೊಂಡವರಿಗೆ ಗುರು ಬಸವಣ್ಣನವರು ಕೆಂಡಾಮಂಡಲವಾಗುತ್ತಾರೆ .ಅಂಥವರ ಸ್ಥಿತಿ ಮಡಿಲಿನೊಳಗೆ ಸುಣ್ಣವನ್ನಿಟ್ಟುಕೊಂಡು ನೀರಿನೊಳಗೆ ಬಿದ್ದಾಗ ಉಂಟಾಗುವ ಸ್ಥಿತಿಯಾಗುತ್ತದೆಂದು ಎಚ್ಚರಿಸುತ್ತಾರೆ. ಅವರ ಬಾಯಲ್ಲಿ ಹುಡಿಯ ಹೊಯ್ಯದೆ ಮಾಬನೆ ಎನ್ನುತ್ತಾರೆ.
ಅಕ್ಕಮಹಾದೇವಿ, ಶರಣರನ್ನು ನಿಂದಿಸಿದವರನ್ನು ವಾನರರಂತಹ ಮನುಜರು ಎಂದು ಕಟುವಾಗಿ ಟೀಕಿಸಿದ್ದಾರೆ…
“ವಾನರಂಗಳಿಗೆ ಭೈತ್ರ ತಪ್ಪಿಬಂದಡೆ ಮುತ್ತು ಮಾಣಿಕ್ಯ ನವರತ್ನದ ಪೆಟ್ಟಿಗೆಗಳು ಸಾರಿದವು. ಸಾರಿದಡೆ ಆ ವಾನರಂಗಳು ಬಲ್ಲವೆ ಮುತ್ತಿನ ರಕ್ಷೆಯ? ನವರತ್ನದ ಪೆಟ್ಟಿಗೆಯ ತೆರೆದು ನೋಡಿ, ಕೆಯ್ಕೊಂಡು, ವಾನರಂಗಳು ಮೆದ್ದು ನೋಡಿ, ಹಣ್ಣಲ್ಲವೆಂದು ಬಿಟ್ಟು ಕಳೆದವು. ಲೋಕದೊಳಗೆ ಶರಣ ಸುಳಿದಡೆ, ಆ ಶರಣನ ನಡೆ ನುಡಿ ಚಾರಿತ್ರ್ಯವ ಕರ್ಮಿಗಳೆತ್ತ ಬಲ್ಲರು? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಇರವನು ನಿಮ್ಮ ಶರಣರು ಬಲ್ಲರಲ್ಲದೆ ಆ ವಾನರನಂತಹ ಮನುಜರೆತ್ತ ಬಲ್ಲರು…” ಭೈತ್ರ ಅಂದರೆ ಹಡಗು. ಮುತ್ತು ರತ್ನ ಮಾಣಿಕ್ಯ ಮುಂತಾದ ಬೆಲೆಬಾಳುವ ವಸ್ತುಗಳನ್ನು ತುಂಬಿ ಸಾಗುತ್ತಿದ್ದ ಹಡಗಿನಲ್ಲಿ ಅಚಾನಕ್ಕಾಗಿ ಕೋತಿಗಳು ಸೇರಿಕೊಂಡರೆ ಅವು ಮುತ್ತು ರತ್ನಗಳನ್ನು ತುಂಬಿದ್ದ ಪೆಟ್ಟಿಗೆಗಳನ್ನೆಲ್ಲ ತೆಗೆದು ಹಲ್ಲಿನಿಂದ ಕಚ್ಚಿ ಕಚ್ಚಿ ನೋಡಿ ಇದು ತಿನ್ನುವ ಪದಾರ್ಥವಲ್ಲವೆಂದು ಹಣ್ಣಲ್ಲವೆಂದು ತೆಗೆದು ಸಮುದ್ರದೊಳಕ್ಕೆ ಎಸೆದು ಬಿಡುತ್ತವೆ. ಇದು ಬೆಲೆಬಾಳುವ ಸರಕು ಎಂದು ಆ ಕೋತಿಗಳಿಗೇನು ಗೊತ್ತು? ಅದಕ್ಕೆ ಅಕ್ಕ ಹೇಳ್ತಾರೆ ಮುತ್ತು ರತ್ನದಂತಹ ಶರಣರು ಈ ಲೋಕದೊಳಗೆ ಬಂದಾಗ ಆ ಶರಣರ ನಡೆನುಡಿ ಚಾರಿತ್ರ್ಯಗಳು ಶರಣರಿಗಷ್ಟೇ ಗೊತ್ತಿರುತ್ತದೆ. ಅವರಿಗೆ ಮಾತ್ರ ಅರ್ಥವಾಗುತ್ತದೆ. ಆದರೆ ಈ ವಾನರರಂತಹ ಭವಿಗಳಿಗೆ ಶರಣರ ನಡೆನುಡಿ ಅರ್ಥವಾಗಲು ಹೇಗೆ ಸಾಧ್ಯ. ಬಹುಶಃ ಈ ವಚನವನ್ನು ಓದಿದಾಗ ಅಕ್ಕ ಉಡುತಡಿಯಿಂದ ಕಲ್ಯಾಣಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿ ಅವರ ಬಗ್ಗೆ ಬಂದಂತಹ ಕುಹಕ ನುಡಿಗಳು ನಿಂದೆಯ ಮಾತುಗಳಿಂದ ಮನನೊಂದು ಈ ವಚನವನ್ನು ಬರೆದಿರಬಹುದು.
ಆದರೆ ಅವರು ಯಾವ ಮಾತುಗಳಿಗೂ ಲಕ್ಷ್ಯ ಕೊಡದ ಅಕ್ಕ ಇಟ್ಟ ಹೆಜ್ಜೆಯನ್ನು ಹಿಂದೆಗೆಯದೆ ಸಾಗುತ್ತಾರೆ. ಅಂತಹವರನ್ನು ಹಂದಿಯಂತಹ ಪ್ರಾಣಿಗಳೆಂದು ಹೇಳುತ್ತಾರೆ.
“ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದಡೆ ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ ಈ ಹಂದಿಯದು ಕೇಸರಿಯಪ್ಪುದೆ ಚೆನ್ನಮಲ್ಲಿಕಾರ್ಜುನಾ?” ಹಂದಿ ಆನೆ ಒಂದೇ ದಾರಿಯಲ್ಲಿ ಎದುರಿನಿಂದ ಬಂದು ಸಂದಿಸಿದರೆ ಆನೆ ಪಕ್ಕಕ್ಕೆ ಸರಿಯುತ್ತದೆ. ಹಂದಿ ಕೆಸರಲ್ಲಿ ಬಿದ್ದು ಒದ್ದಾಡಿ ಎದ್ದು ಬಂದಿರುತ್ತದೆ, ಹೊಲಸು ತಿಂದಿರುತ್ತದೆ. ಆ ಹೊಲಸು, ಕೆಸರು ತನಗಂಟುವುದು ಬೇಡವೆಂದು ಆನೆ ಪಕ್ಕಕ್ಕೆ ಸರಿದರೆ, ಆ ಹಂದಿ ಸಿಂಹವಾಗಲು ಸಾಧ್ಯವಾ? ನನ್ನನ್ನು ನೋಡಿ ಆನೆ ಹೆದರಿ ದೂರ ಹೋಯಿತು ಎಂದು ಅದು ಬೀಗುತ್ತದೆ. ಅದೇ ರೀತಿ ಹಂದಿಯಂತಹ ನಿಂದಕರ ಮಾತಿಗೆ ಬೆಲೆಕೊಡದೆ ಮೌನವಾಗಿದ್ದರೆ, ಅವರು ನಾನು ಹೇಳಿದ್ದೇ ಸರಿಯಿದೆ, ಅದಕ್ಕೆ ಅವರಿಗೆ ಉತ್ತರ ಕೊಡಲು ಶಕ್ತಿಯಿಲ್ಲದೆ ಸುಮ್ಮನಾದರು ಎಂದು ಹೇಳುತ್ತಾರೆ. ಆದರೆ ಜ್ಞಾನಿಯಾದವನು, ಈ ಪಾಮರರ ಜೊತೆ ನಾನು ಯಾಕೆ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳಬೇಕೆಂದು ಸುಮ್ಮನಾಗುತ್ತಾನೆ. ಆದರೆ ಶರಣರನ್ನು ನಿಂದಿಸಿದವರ ಸ್ಥಿತಿ ಸುಣ್ಣದಕಲ್ಲನ್ನು ಮಡಿಲೊಳಗೆ ಇಟ್ಟುಕೊಂಡು ನೀರಿನ ಹೊಂಡದಲ್ಲಿ ಬಿದ್ದಂತಾಗುತ್ತದೆ. ಶರಣರ ಯೋಗ್ಯತೆ ಅಳೆಯಲು ಶರಣರಷ್ಟೇ ಎತ್ತರಕ್ಕೆ ಬೆಳೆಯಬೇಕು.
“ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ, ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯಾ? ನದಿಯ ಗುಂಪ ತಾವರೆ ಬಲ್ಲುದಲ್ಲದೆ, ಕಡೆಯಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯಾ? ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ, ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯಾ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ, ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯಾ?”- ಗಗನದ ಆಳ ಅಳತೆಗಳನ್ನು ಗಗನ ಎಷ್ಟು ವಿಸ್ತಾರವಿದೆ ಎಂಬುದನ್ನು ಚಂದ್ರನಿಗೆ ಮಾತ್ರ ಗೊತ್ತಿರುತ್ತದೆ. ಆದರೆ ಅದರ ವಿಸ್ತಾರ ಮೇಲೆ ಹಾರಾಡುವ ಹದ್ದುಗಳಿಗೆ ತಿಳಿಯಲು ಸಾಧ್ಯವಾ? ಅದು ಹಾರಡುವ ವ್ಯಾಪ್ತಿ ಎಷ್ಟಿದೆಯೋ ಅಷ್ಟು ಮಾತ್ರ ಅದಕ್ಕೆ ಗೊತ್ತಿರುತ್ತದೆ. ಅದೇ ರೀತಿಯಲ್ಲಿ ನದಿಯ ಗಾಂಭಿರ್ಯ ನದಿಯೊಳಗಿನ ತಾವರೆಗೆ ಮಾತ್ರ ಗೊತ್ತು. ಆದರೆ ಆ ತಾವರೆಯ ಮೇಲೆ ಕುಳಿತಿರುವ ನೊರಜಕ್ಕೇನು ಗೊತ್ತು? ಹಾಗೆ ಹೂವಿನ ಪರಿಮಳ, ಮಧುವನ್ನು ಹೀರಲು ಕುಳಿತಿರುವ ದುಂಬಿಗೆ ಮಾತ್ರ ಗೊತ್ತಿರುತ್ತದೆ. ಆದರೆ ಅಲ್ಲೇ ಬೆಳೆದಿರುವ ಗರಿಕೆಗೆ ಗೊತ್ತಾಗಲು ಸಾಧ್ಯವೇ? ಅದೇ ರೀತಿ ಶರಣರ ನಿಲುವು ಆ ಮಟ್ಟಕ್ಕೆ ಬೆಳೆದ ಶರಣರಿಗಷ್ಟೇ ಗೊತ್ತಿರಲು ಸಾಧ್ಯ. ಕೋಣನ ಮೇಮೇಲೆ ಕುಳಿತಿರುವ ಸೊಳ್ಳೆಗಳಿಗೆ ಗೊತ್ತಾಗಲು ಸಾಧ್ಯವೇ ಎಂದು ಅಕ್ಕ ಪ್ರಶ್ನಿಸುತ್ತಾರೆ. ಅಧಿಕಾರದ ಕೋಣ, ಸಂಪತ್ತಿನ ಕೋಣ, ಸೊಕ್ಕೇರಿರುವ ಕೋಣಗಳಂತಿರುವ ಅಜ್ಞಾನಿ ಮನುಜರು- ಗುರುಗಳು, ಶರಣರು, ಹಿರಿಯರು ಇವರುಗಳ ನಿಲುವನ್ನು ಅರಿಯಲು ಅಸಮರ್ಥರಾಗಿರುತ್ತಾರೆ.
“ಲಿಂಗವಿದ್ದಲ್ಲಿ ನಿಂದೆಯಿರದು, ನಿಂದೆಯಿದ್ದಲ್ಲಿ ಲಿಂಗವಿರದು, ಅವರೆಂತಿದ್ದಡೇನು? ಹೇಗಿದ್ದಡೇನು? ಲಿಂಗವಂತರವರು, ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು.” ಶರಣರಿಗೆ ಉಪಮೆ ಕೊಡಲು ಅಂದರೆ ಹೋಲಿಕೆ ಮಾಡಲು ಪರ್ಯಾಯವಾಗಿ ಮತ್ತೊಂದು ಇಲ್ಲ. ಅಂತಹ ಮಹಾಘನ ಅವರು. ಅಂತಹವರನ್ನು ನಿಂದಿಸಬೇಡ. ಅವರವರ ಅಂತರಂಗದಲ್ಲಿ ಅವರವರ ಮನಸ್ಥಿತಿ ಹೇಗಿರುತ್ತದೋ ಏನೋ ಅದನ್ನು ಅರಿಯದೆ ಮೇಲ್ನೋಟದಲ್ಲಿ ನೋಡಿ ಅವರನ್ನು ನಿಂದಿಸಬಾರದು. ಅವರನ್ನು ನಿಂದಿಸಿದರೆ ಏನಾಗುತ್ತದೆಂಬುದನ್ನು ಗುರು ಬಸವಣ್ಣನವರೇ ಹೇಳುತ್ತಾರೆ- “ಭವಬಂಧನ ಭವಪಾಶವಾದ ಕಾರಣವೇನಯ್ಯಾ ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ, ಅರಿದಡೀ ಸಂಸಾರವ ಹೊದ್ದಲೀವೆನೆ, ಕೂಡಲಸಂಗಮದೇವಾ” ಆದ್ದರಿಂದ ಶರಣರ ನೋವು ಬೇರೆಯಲ್ಲ, ಲಿಂಗದ ನೋವು ಬೇರೆಯಲ್ಲ. ಸಮಾಜಕ್ಕೆ ಜಂಗಮಕ್ಕೆ ನೋಯಿಸುವುದು ಬೇರೆಯಲ್ಲ. ದೇವರು ಮತ್ತೆಲ್ಲಿಯೂ ಇಲ್ಲ ಜಂಗಮನೊಳಗೇ ಇದ್ದಾನೆ ಎಂಬುದನ್ನು ಗುರು ಬಸವಣ್ಣನವರು ಸ್ಪಷ್ಟವಾಗಿ ಹೇಳುತ್ತಾರೆ.
“ಅರಸನ ಕಂಡು ತನ್ನ ಪುರುಷನ ಮರೆದಡೆ ಮರನನೇರಿ ಕಯ್ಯ ಬಿಟ್ಟಂತಾಯಿತ್ತಯ್ಯಾ. ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ! ನಮ್ಮ ಕೂಡಲಸಂಗಮದೇವಯ್ಯ ಜಂಗಮಮುಖ ಲಿಂಗವಾದ ಕಾರಣ.” ಅದಕ್ಕಾಗಿ “ಲಿಂಗಕಾಯ ಮಮಕಾಯ ಎಂದನಾಗಿ” ಎಂದು ಹೇಳುತ್ತಾರೆ. ಅವರದು ಲಿಂಗದ ಮಾತು, ಲಿಂಗದ ನಡೆ. ಅದಕ್ಕಾಗಿ ಅವರನ್ನು ಅವಮಾನಿಸಬಾರದು. ನಿಂದಿಸಿದರೆ ಆಗ ಶರಣರೆ ದೂಷಕರ ಧುಮಕೇತುಗಳಾಗುತ್ತಾರೆ. ಅವರ ಸ್ಥಿತಿ ಕಲ್ಲ ತಾಗಿದ ಮಣ್ಣಿನ ಹೆಂಟೆಯಂತಾಗುತ್ತದೆ. “ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ”
ನಿಂದನೆ ,ತಿರಸ್ಕಾರ ,ಅವಹೇಳನ, ಅಪಮಾನ ಇವುಗಳನ್ನು ಕೇವಲ ಶರಣರಿಗೆ, ಜಂಗಮರಿಗೆ ಮಾತ್ರ ಮಾಡಬಾರದು ಎಂದಲ್ಲ. ಜಂಗಮ ಅಂದರೆ ಇಡೀ ಸಮಾಜವಾಗುತ್ತದೆ. ಈ ಸಮಾಜದಲ್ಲಿ ಸದಾಚಾರದಿಂದ, ಸದ್ಗುಣಗಳಿಂದ ನಡೆಯುತ್ತಿರುವ ಯಾರಿಗೂ ಮಾಡಬಾರದು. ಆದುದರಿಂದ ಅವರವರ ಜೀವನ ಪದ್ದತಿಗಳು ಅವರವರಿಗೆ ಗೊತ್ತಿರುತ್ತದೆ. ಅವರವರನ್ನು ಅವರವರ ಪಾಡಿಗೆ ಬದುಕಲು ಬಿಟ್ಟು ತನ್ನ ಪಾಡಿಗೆ ತಾನು ಇದ್ದರೆ ಸಾಕು. “ಹಾವಿನ ಡೊಂಕು ಹುತ್ತಕ್ಕೆ ಸಸಿನ, ನದಿಯ ಡೊಂಕು ಸಮುದ್ರಕ್ಕೆ ಸಸಿನ, ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.”

Previous post ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
Next post ಗಣಾಚಾರ
ಗಣಾಚಾರ

Related Posts

ಅವಿರಳ ಅನುಭಾವಿ: ಚನ್ನಬಸವಣ್ಣ
Share:
Articles

ಅವಿರಳ ಅನುಭಾವಿ: ಚನ್ನಬಸವಣ್ಣ

March 6, 2020 ಮಹಾದೇವ ಹಡಪದ
ಜಾಜಿ ಮಲ್ಲಿಗೆ ಅರಳಿ ಹೂಬಿಟ್ಟ ಹೊತ್ತು. ಊರೆಲ್ಲ ಘಮ್ಮೆನ್ನುವ ಪರಿಮಳ ಹೊತ್ತು ಸೂಸುವ ಆ ತಂಗಾಳಿಯಲಿ ಚುಮುಚುಮು ಬೆಳಕಿನ ಕಿರಣಗಳು ಗುಡ್ಡವನ್ನೆಲ್ಲ ಕೆಂಪೇರಿಸಿ ಹೊಂಬಣ್ಣದ...
ಸಹಜತೆಯೇ ನಿಜನೆಲೆ
Share:
Articles

ಸಹಜತೆಯೇ ನಿಜನೆಲೆ

February 5, 2020 ಡಿ.ಪಿ. ಪ್ರಕಾಶ್
ಮನುಷ್ಯನ ಅ೦ತರ೦ಗವನ್ನು ಆವರಿಸುವ ಪರಿಕಲ್ಪನೆಗಳು ಮತ್ತು ನ೦ಬಿಕೆಗಳು ವ್ಯಕ್ತಿತ್ವದ ಮೇಲಷ್ಟೇ ಅಲ್ಲದೇ ಸಮಾಜದ ಮೇಲೂ ಗಾಢ ಪರಿಣಾಮ ಬೀರುತ್ತವೆ. ಅ೦ತರ೦ಗದ ಸರಕುಗಳು ಸ್ಪಷ್ಟ ಮತ್ತು...

Comments 10

  1. Indudhar
    Aug 9, 2021 Reply

    ದೂಷಕರ ಧೂಮಕೇತು ಶರಣರು ಅನ್ನೋ ಸಾಲು ಈಗ ಅರ್ಥವಾಯಿತು. ಹೊಗಳಿಕೆ ಮತ್ತು ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸಿದ ಶರಣರು ದೂಷಣೆಯಿಂದ ಎಷ್ಟು ನೊಂದಿರಬಹುದೆಂದು ಯೋಚನೆಯಾಯಿತು.

  2. ಕಮಲಾ ಚನ್ನಪ್ಪ
    Aug 14, 2021 Reply

    ವೈಚಾರಿಕವಾಗಿದ್ದ ಬಸವಾದಿ ಶರಣರ ವಚನಗಳು ಇಂದಿನ ಆಧುನಿಕ ತಂತ್ರಜ್ಞಾನದ ಜನರಿಗೂ ತಲೆಗೆ ಹೋಗುವುದಿಲ್ಲ. ಅವತ್ತು ಅವರು ಅದೆಷ್ಟು ಟೀಕೆಗೆ ಗುರಿಯಾಗಿದ್ದರೋ……

  3. Sharada A.M
    Aug 14, 2021 Reply

    ಇವತ್ತು ವಿಮರ್ಶೆಯನ್ನು ಸ್ವೀಕರಿಸುವವರು ಒಬ್ಬರೂ ಇಲ್ಲ. ಬೈದವರನ್ನು ಬಂಧುಗಳೆಂಬೆ ಎಂದ ಶರಣ ಪರಂಪರೆಯ ಸ್ವಾಮಿಗಳು ಇವತ್ತು ಶಾಪ ಹಾಕುವ ಮಾತುಗಳನ್ನಾಡುತ್ತಾರೆ. ಬಾಯಿ ಬಿಟ್ಟರೆ ಅವರ ಮೇಲೆ ಇವರು, ಇವರ ಮೇಲೆ ಅವರು… ನಿಂದನೆಗಳ ಸುರಿಮಳೆ.

  4. Basappa Kalguti
    Aug 16, 2021 Reply

    ಬಸವಣ್ಣನವರಿಗೆ ಶರಣರೇ ಪ್ರಾಣವಾಗಿದ್ದರು. ಅವರನ್ನು ಯಾರಾದರೂ ಕೆಣಕಿದರೆ, ಬೈದರೆ ಅವರು ತೀವ್ರವಾಗಿ ನೊಂದುಕೊಳ್ಳುತ್ತಿದ್ದರು. ಆ ನೋವಿನಲ್ಲಿ ಎಚ್ಚರಿಸುವ ಮಾತಿದು- ಒಳ್ಳೆಯ ಮಾಹಿತಿ.

  5. ವೀರನಗೌಡ ಹಾವೇರಿ
    Aug 18, 2021 Reply

    ಅವತ್ತೂ ನಮ್ಮ ಜನ ಶರಣರನ್ನು ಅರ್ಥಮಾಡಿಕೊಳ್ಳಲಿಲ್ಲಾ, ಇವತ್ತೂ ಅವರನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಬಸವಾದಿ ಶರಣರು ಬೇರೆ ದೇಶದಲ್ಲಿ ಹುಟ್ಟಿದ್ದರೆ ಅವರನ್ನು ಕಣ್ಣಿಗೊತ್ತಿಕೊಂಡು ಅಧ್ಯಯನ ನಡೆಸುತ್ತಿದ್ದರು.

  6. Lingappa Boragi
    Aug 19, 2021 Reply

    ವಂದನೆ-ನಿಂದನೆಗಳಿಗೆ ಅತೀತರು ನಮ್ಮ ಶರಣರು. ದಯೆಯೇ ಅವರ ಧರ್ಮ. ದೂಷಕರನ್ನೂ ಅವರು ಕನಸಲ್ಲೂ ಶಪಿಸಿರಲಿಕ್ಕಿಲ್ಲ. ಆದರೆ ಮಹಾತ್ಮರನ್ನು ಹಿಯಾಳಿಸಿದರೆ ಪ್ರಕೃತಿಯು ಅಂಥವರನ್ನು ಯಾವತ್ತಿಗೂ ಕ್ಷಮಿಸಲಾರದು. ಅಂಥವರನ್ನು ಎಚ್ಚರಿಸಿದ್ದಾರೆ ಬಸವಣ್ಣನವರು.

  7. Savitri dodmane
    Aug 23, 2021 Reply

    ಶರಣ ಬಾಹೂರ ಬೊಮ್ಮಣ್ಣನವರ ವಚನ- ಭಕ್ತಂಗೆ ವಂದಿಸಿ ನಿಂದಿಸಿದಲ್ಲಿಯೆ ವಿಶ್ವಾಸ ಜಾರಿತ್ತು… ಕಿಡಿನುಡಿಯಾಡುವ ಕಿಡಿಗೇಡಿಗಳಿಗೆ ಬುದ್ದಿಹೇಳುತ್ತದೆ. ಇಂಥವರು ಎಲ್ಲಾ ಕಾಲದಲ್ಲೂ ಇರುತ್ತಾರೆ.

  8. Chandranna Naganur
    Aug 24, 2021 Reply

    ಅಜ್ಞಾನಿಗಳಲ್ಲಿನ ಅಜ್ಞಾನ, ದೂಷಕರಲ್ಲಿನ ದೂಷಣೆಯ ಗುಣ ಕ್ಷಮಾರ್ಹ. ಆದರೆ ಅವು ಅವರನ್ನೇ ಬಾಧಿಸುತ್ತವೆ. ಎವರಿ ಆಕ್ಷನ್ ಹ್ಯಾಸ್ ರಿಯಾಕ್ಷನ್, ಅಲ್ಲವೇ?

  9. L.S.Patil
    Aug 30, 2021 Reply

    ಮುಂದೆ ವಂದಿಸಿ ಹಿಂದೆ ನಿಂದಿಸುವವರು ಎಲ್ಲಾ ಕಾಲದಲ್ಲೂ ಇರುತ್ತಾರೆ. ಅವರ ನಿಂದನೆ ಅವರಿಗೇ ಮುಳುವಾಗುತ್ತದೆ ಎಂಬುದನ್ನು ಬಹಳ ಮಾರ್ಮಿಕವಾಗಿ ತಿಳಿಸುವ ಲೇಖನ.

  10. Halappa Bhavi
    Sep 4, 2021 Reply

    ನಿಜವಾದ ಲಿಂಗವಂತರು ನಿಂದೆಯಲ್ಲಿ ಕಾಲಕಳೆಯಲಾರರು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಮಾತು ಮಾಯೆ
ಮಾತು ಮಾಯೆ
July 4, 2021
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
Copyright © 2023 Bayalu