Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಿಟ್ಟ ನಿಲುವಿನ ಶರಣೆ
Share:
Articles April 29, 2018 ಡಾ. ಶಶಿಕಾಂತ ಪಟ್ಟಣ

ದಿಟ್ಟ ನಿಲುವಿನ ಶರಣೆ

ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು, ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದರು. ಅವರಲ್ಲಿ ವಿಶಿಷ್ಟ, ಪ್ರಮುಖ ಚಿಂತಕಿ, ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಾಂಬಿಕೆ. ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲ ಪತ್ನಿ ಸೋದರ ಮಾವ ಬಲದೇವರ ಮಗಳು.

ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನ ಅಪ್ಪ ಅಮ್ಮ ಇವರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹರಿಹರ ಮತ್ತು ಭೀಮ ಕವಿಗಳು ಬಸವಣ್ಣನವರ ಮಡದಿ ನೀಲಾಂಬಿಕೆಯವರನ್ನು ಮಾಯಿದೇವಿ ಎಂದು ಕರೆದಿದ್ದಾರೆ. ಅಲ್ಲದೆ ಹರಿಹರನು ಸಿದ್ಧರಸ ಮಂತ್ರಿಗಳ ಆಸ್ತಿಗೆ ಬಸವಣ್ಣನೇ ವಾರಸುದಾರರಾದರು ಎಂದು ಹೇಳಿದ್ದಾನೆ. ಲಕ್ಕಣ್ಣ ದಂಡೇಶನು ನೀಲಮ್ಮ ಬಿಜ್ಜಳನ ತಂಗಿ ಎಂದು ಹೇಳಿದ್ದಾನೆ. ಬಿಜ್ಜಳನ ತಾಯಿ ಸತ್ತ ಮೇಲೆ ಬಿಜ್ಜಳ ಮತ್ತು ಆತನ ತಮ್ಮ ಕರ್ಣದೇವನು ಸಿದ್ಧರಸ ಮತ್ತು ಪದ್ಮಗಂಧಿಯವರ ಮನೆಯಲ್ಲಿ ಬೆಳೆದರು ಎನ್ನುವ ಐತಿಹಾಸಿಕ ಸಂಗತಿಗಳಿವೆ. ಹೀಗಾಗಿ ನೀಲಮ್ಮ ಬಿಜ್ಜಳನ ಸಾಕು ತಂಗಿ ಎಂದು ಗೊತ್ತಾಗುತ್ತದೆ. ಬ್ರಾಹ್ಮಣ ಕುಟುಂಬದ ಗಂಗಾಂಬಿಕೆಯವರಿಗಿಂತ ಜೈನ ಧರ್ಮದ ನೀಲಾಂಬಿಕೆಯವರ ವಚನ ರಚನಾ ಶೈಲಿ, ಅನುಭಾವ ಅರ್ಥಪೂರ್ಣ ಮತ್ತು ಪ್ರಭಾವಿಶಾಲಿಯಾಗಿವೆ.

ಗಂಗಾಂಬಿಕೆಯವರಿಗೆ ಸಿದ್ಧರಸನೆಂಬ ಹಾಗೂ ನೀಲಾಂಬಿಕೆಯವರಿಗೆ ಬಾಲಸಂಗಯ್ಯನೆಂಬ ಮಕ್ಕಳಿದ್ದರೆಂದು, ಗಂಗಾಂಬಿಕೆಯವರ ಮಗ ಬಾಲ್ಯದಲ್ಲಿಯೇ ತೀರಿಕೊಂಡನೆಂದೂ ತಿಳಿದುಬರುತ್ತದೆ. ಅಂತೆಯೇ ಗಂಗಾಂಬಿಕೆಯವರನ್ನು ಸಂತೈಸುತ್ತ ಬಸವಣ್ಣನವರು, “ಅವಳ ಕಂದ ಬಾಲ ಸಂಗಾ ನಿನ್ನ ಕಂದ ಚೆನ್ನಲಿಂಗ” ಎಂದಿದ್ದಾರೆ. “ಪೃಥ್ವಿದಗ್ಗಳ ಚೆಲುವೆ ನೀಲಲೋಚನೆ” ಎಂದು ಒಂದೆಡೆ ತಮ್ಮ ಪತ್ನಿ ನೀಲಾಂಬಿಕೆಯವರ ಬಗ್ಗೆ ಹೇಳಿದ್ದಾರೆ.

ನೀಲಾಂಬಿಕೆ ಬಸವಣ್ಣನವರ ವಿಚಾರ ಕ್ರಾಂತಿಯಲ್ಲಿ ಸಹಧರ್ಮಿಣಿ. ಗಂಗಾಂಬಿಕೆ ಆಶ್ರಯದಲ್ಲಿ ಬಾಲ ಸಂಗಯ್ಯ ಬೆಳೆಯುತ್ತಾ ಅವರನ್ನೇ ಹೆಚ್ಚು ಅವಲಂಬಿಸುತ್ತಾನೆ. ನೀಲಾಂಬಿಕೆ ಮಹಾಮನೆಯ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುತ್ತಾರೆ. ಮಹಾಮನೆಯ ದಾಸೋಹ ಪ್ರಸಾದ ಸಿದ್ಧಪಡಿಸುವುದು, ಜಂಗಮರ ಸೇವೆ ಒಟ್ಟಾರೆ ಬಸವಣ್ಣನವರ ಎಲ್ಲ ಕಾರ್ಯಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುತ್ತಾರೆ. ಬಸವಣ್ಣನವರ ಜೀವನದಲ್ಲಿ ಇವರ ಪಾತ್ರ ಬಹು ದೊಡ್ಡದು. ಅವರ ಹೆಜ್ಜೆ ಹೆಜ್ಜೆಯಲ್ಲಿ ನೀಲಮ್ಮ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ.

ವರ್ಣ ಸಂಕರದಿಂದ ಕಲ್ಯಾಣದ ಐಕ್ಯತೆಗೆ ಧಕ್ಕೆ ಬರ ಹತ್ತಿತು. ಬಸವಣ್ಣನವರು ಕಲ್ಯಾಣ ತೊರೆದು ಕೂಡಲ ಸಂಗಮಕ್ಕೆ ಪಯಣ ಬೆಳೆಸಿದರು. ಮುಂದೆ ಕೆಲ ದಿನಗಳಲ್ಲಿ ಅಸ್ಥಿರತೆ ಅರಾಜಕತೆ ವ್ಯಾಪಿಸಿತು. ಬಸವಣ್ಣನವರು ಹಡಪದ ಅಪ್ಪಣ್ಣನವರ ಮೂಲಕ ನೀಲಮ್ಮನವರನ್ನು ಕರೆದುಕೊಂಡು ಬರಲು ಆಜ್ಞಾಪಿಸುತ್ತಾರೆ. ಆಗ ನೀಲಮ್ಮ ಬಸವಣ್ಣನಂತಹ ಮಹಾ ಘನಮಹಿಮ ತನ್ನನ್ನು ಕೊನೆಗಳಿಗೆಯಲ್ಲಿ ಕೂಡಲ ಸಂಗಮಕ್ಕೆ ಕರೆ ಹೇಳಿದರೆ? ಎಂದು ಅವರನ್ನೇ ಪ್ರಶ್ನಿಸಿದ್ದಾರೆ. ಬಸವಣ್ಣನವರ ಅನುಭಾವವನ್ನು ಕಂಡು ವಿಚಾರಪತ್ನಿಯಾದೆನು ಎಂದು ಹೇಳಿಕೊಂಡಿದ್ದಾರೆ. ಅನುಭಾವದ ಎತ್ತರ ಮತ್ತು ಅಭಿವ್ಯಕ್ತಿಯ ಬಿತ್ತರವನ್ನು ಏಕಕಾಲಕ್ಕೆ ವ್ಯಕ್ತಗೊಳಿಸುವ ಕಾವ್ಯ ಕೌಶಲ್ಯ ಅನುಪಮವಾದದ್ದು. “ಮಾತಿನ ಹಂಗೇಕೆ ಮನವೇಕಾಂತದಲ್ಲಿ ನಿಂದಬಳಿಕ ” ಎಂದೆನ್ನುವ ನೀಲಮ್ಮ ತಾಯಿಯ ವಚನದಲ್ಲಿ ಬಸವಣ್ಣನವರ ಸ್ತುತಿ ವರ್ಣನೆ ಮತ್ತು ಅವರ ಅಗಲುವಿಕೆಯ ನೋವು ಕಳವಳ ಕಾಣಬಹುದು.

ಕೊನೆಯ ಆ ದಿನಗಳು…

ಹರಳಯ್ಯನವರ ಮಗ ಶೀಲವಂತನಿಗೂ ಬ್ರಾಹ್ಮಣರ ಮಧುವರಸರ ಲಾವಣ್ಯಳಿಗೂ ಮದುವೆ ಏರ್ಪಟ್ಟಾಗ ಆದ ಜಾತಿ ಸಂಕರವು ಕಲ್ಯಾಣದಲ್ಲಿ ತಲ್ಲಣವನ್ನು ಹುಟ್ಟು ಹಾಕಿತು. ನಾರಾಯಣ ಕ್ರಮಿತ ಮತ್ತು ವಿಷ್ಣು ಭಟ್ಟರ ಕಪಟತನದಿಂದ ಬಸವಣ್ಣನವರಿಗೆ ಕಲ್ಯಾಣದಿಂದ ಗಡಿಪಾರು ಮಾಡುವ ಘೋರ ಶಿಕ್ಷೆಗೆ ಆದೇಶಿಸಲಾಗುವುದು. ಹಡಪದ ಅಪ್ಪಣ್ಣನವರ ಜೊತೆಗೆ ಕೂಡಲ ಸಂಗಮಕ್ಕೆ ಪ್ರಯಾಣ ಬೆಳೆಸಿದ ಬಸವಣ್ಣನವರು ಅತ್ಯಂತ ನೋವಿನಿಂದ ತಾವು ಮಾಡಿದ
ಕ್ರಾಂತಿಯ ಕಲ್ಯಾಣವು ತಮ್ಮ ಕಣ್ಣ ಮುಂದೆಯೇ ಹಾಳಾಗುತ್ತಿರುವುದನ್ನು ನೋಡಿ ಮುಮ್ಮಲ ಮರುಗಿದರು.
ಕೂಡಲ ಸಂಗಮದಲ್ಲೊಮ್ಮೆ ಹಡಪದ ಅಪ್ಪಣ್ಣವರನ್ನು ಕರೆದು ತಮ್ಮ ವಿಚಾರ ಪತ್ನಿ ನೀಲಮ್ಮನವರನ್ನು ಬರಹೇಳುತ್ತಾರೆ.

ಕಲ್ಯಾಣಕ್ಕೆ ಬಂದ ಅಪ್ಪಣ್ಣನವರು ನೀಲಮ್ಮನವರಿಗೆ ಬಸವಣ್ಣನವರ ಇಂಗಿತವನ್ನು ಅರಹುತ್ತಾರೆ. ಆ ಸಂದರ್ಭದಲ್ಲಿ ನೀಲಮ್ಮನವರು ಹೇಳುವ ಈ ವಚನಗೀತೆ ತುಂಬಾ ಅರ್ಥಪೂರ್ಣವಾದುದು.

ನೋಡು ನೋಡು ನೋಡು ನೋಡು ಲಿಂಗವೇ
ನೋಡು ಬಸವಯ್ಯನವರು ಮಾಡುವಾಟವ
ಸಂಗಮಕ್ಕೆ ಬಸವಯ್ಯನವರು ನಮ್ಮನು ಬರ ಹೇಳಿದರಂತೆ.
ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ?

ವೈಚಾರಿಕ ದಿಟ್ಟತನಕ್ಕೆ ಅವರ ಈ ನಿಲುವೇ ಸಾಕ್ಷಿ. ಅಲ್ಲಿ ಇಲ್ಲಿ ಎಂಬ ಉಭಯ ಭಾವವು ಶರಣರಿಗೆ ಸಲ್ಲದು. ಅದೇ ರೀತಿ ನೀಲಮ್ಮ ತಾಯಿಯವರು ಈ ವಚನದಲ್ಲಿ ಹೀಗೆ ಹೇಳಿದ್ದಾರೆ:

ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ?
ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ?
ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ?
ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ
ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?

ತಾನು ಯಾರನ್ನಾದರೂ ಸೇರುವೆನೆಂದು ಚಿಂತಿಸುವರೇ, ತಾನು ಯಾರನ್ನಾದರೂ ಹೊಂದುವೆನೆಂದು ಬಸವಣ್ಣನವರು ಅನುಮಾನ ಪಡುವರೇ ? ಯಾರಾದರೂ ಆಶ್ರಯದಲ್ಲಿ ಬಂಧನದಲ್ಲಿ ಇರುವೆನೆಂಬ ಪ್ರಲಾಪವು ಬಸವಣ್ಣನವರನ್ನು ಕಾಡುತ್ತಿರುವುದೇ? ಬಸವಣ್ಣನವರ ರೂಪವು ತನ್ನ ಕರಸ್ಥಲದಲ್ಲಿರಲು ಕೂಡಲ ಸಂಗಯ್ಯನ ಹಂಗೇಕೆ ಎಂದು ಪ್ರಶ್ನಿಸುತ್ತಾರೆ. ದೇವರ ಹಂಗೂ ತನಗಿಲ್ಲವೆಂಬ ಅವರ ಗಟ್ಟಿಮಾತು ಅಚ್ಚರಿ ಮೂಡಿಸುವಂತಿದೆ.

ತಾನು ಬಿಜ್ಜಳನ ಕುಟುಂಬದವಳು ಎಂದು ಸೂಕ್ಷ್ಮವಾಗಿ ಹೇಳುತ್ತಾ:

ನಾಡನಾಳಹೋದರೆ,
ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು.
ಹಗೆಯಳಿದು ನಿಸ್ಸಂಗವಾಯಿತ್ತು.
ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.

ನಾಡನ್ನು ಆಳ ಹೋದರೆ ಅದು, ಆ ನಾಡಿನ ಕೋಪಕ್ಕೆ ಕೆಂಗಣ್ಣಿಗೆ ಗುರಿಯಾಗಿ ನಾಡು ಹಾಳಾಯಿತ್ತು ಎಂದು ಬಿಜ್ಜಳನ ವೈಫಲ್ಯವನ್ನು ಎತ್ತಿ ತೋರುತ್ತಾರೆ. ಹಗೆಯು ಅಳಿದು ನಿಸ್ಸಂಗವಾಯಿತ್ತು, ಮುಂದೆ ನಿಸ್ಸಂಗವೇ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ಎಂದು ಹೇಳಿದ್ದಾರೆ.

ಕೊನೆಕಾಲದಲ್ಲಿ ಬಸವಣ್ಣನವರನ್ನು ಭೇಟಿಯಾಗಿ ಅವರ ಮುಂದಿನ ಗೊತ್ತು ಗುರಿಗಳನ್ನು ಅರಿತು ಅದರಂತೆ ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು ನೀಲಮ್ಮ, ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾರೆ. ಆದರೆ ರಕ್ಕಸ ತಂಗಡಗಿ ಮುಟ್ಟುವಷ್ಟರಲ್ಲಿ ಬಸವಣ್ಣನವರು ಸಂಗಮದಲ್ಲಿ ಐಕ್ಯರಾದ ಸುದ್ದಿ ಬರ ಸಿಡಿಲಿನಂತೆ ಅಪ್ಪಳಿಸುತ್ತದೆ. ನೀಲಮ್ಮನವರಿಗೆ ಅಗಾಧ ನೋವು ಕಳವಳ ಆತಂಕವಾಗುತ್ತದೆ.

ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,
ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು.
ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು. ನಮ್ಮ ಸಂಗಯ್ಯನಲ್ಲಿ
ಬಸವಯ್ಯನೈಕ್ಯ ಬಯಲಿಲ್ಲದ ಬಯಲು.

ಸ್ತ್ರೀ ಕುಲೋದ್ಧಾರಕ ಬಸವಣ್ಣನವರು ಐಕ್ಯವಾದ ಸುದ್ದಿಯನ್ನು ನೀಲಮ್ಮ ತನ್ನ ವಚನದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ನಾಡಿನ ಅಕ್ಕ ತಂಗಿಯರೆಲ್ಲರನ್ನು ಕೂಗಿ ಕರೆಯುತ್ತಾರೆ. ನೋಡ ಬನ್ನಿ, ಅಕ್ಕನರಸ ಅಂದರೆ ಗಂಗಾಂಬಿಕೆಯ ಒಡೆಯ ಬಸವಣ್ಣನವರು ಬಯಲ ಕಂಡು ಬಟ್ಟ ಬಯಲಾದರು. ನಮ್ಮ ಸಂಗಯ್ಯನಲ್ಲಿ ಬಸವಣ್ಣನವರ ಐಕ್ಯವು ಬಯಲಿಲ್ಲದ ಬಯಲು ಎಂದು ನೋವಿನೊಂದಿಗೂ ಅಷ್ಟೇ ಆಧ್ಯಾತ್ಮಿಕ ಪ್ರಬುದ್ಧತೆಯನ್ನು ತೋರಿದ್ದಾರೆ. ಬಯಲಿಲ್ಲದ ಬಯಲು ಎಂದಿರುವುದು ಅವರ ಸ್ಥಿತ ಪ್ರಜ್ಞೆಗೆ ಸಾಕ್ಷಿಯಾಗುತ್ತದೆ.

ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ?
ನಾನಾರ ರೂಪ ನಿಜವಿಡಲಯ್ಯಾ ಬಸವಾ ?
ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ?
ನಾನಾರ ಮನವನಂಗೈಸಲಯ್ಯಾ ಬಸವಾ ?
ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ.
ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ.

ಬಸವಣ್ಣನವರು ಐಕ್ಯವಾದ ಬಳಿಕ ತಾನು ಯಾರ ಹೆಸರನ್ನು ಕೂಗಿ ಕರೆಯಲಿ, ಬಸವಣ್ಣನವರಿಲ್ಲದ ಬದುಕಿನಲ್ಲಿ ಯಾರ ಭಾವ ರೂಪವನ್ನು ನಿಜ ಮಾಡಲಿ, ಬಸವಣ್ಣನಿಲ್ಲದ ಜೀವನದಲ್ಲಿ ತಾನು ಯಾರ ಮಾತನ್ನು ನೆಲೆಗೊಳಿಸಲು ಸಾಧ್ಯ? ಬಸವಣ್ಣನವರೇ ತನ್ನ ಸರ್ವಸ್ವವಾದ ಕಾರಣ ತಾನು ಯಾರ ಮನವನ್ನು ಅಂಗೈಸಲಿ ಎಂದು ಕಳವಳ ವ್ಯಕ್ತ ಪಡಿಸುತ್ತಾ ತನ್ನ ಸಾಕಾರಮೂರ್ತಿ ಸುಖ ದುಃಖ ಹಂಚಿಕೊಂಡ ಮಹಾಮಣಿಹನಿಲ್ಲದ ಬಳಿಕ ತನಗೆ ಹೆಸರಿಲ್ಲ ತನ್ನ ರೂಪು ನಿರೂಪವಾಯಿತ್ತು ಸಂಗಯ್ಯನೊಳಗೆ ಬಸವನಡಗಿದ ಬಳಿಕ ಎಂದಿದ್ದಾರೆ ನೀಲಮ್ಮ.

ಪರಿವರ್ತನೆಯ ಹರಿಕಾರ ಬಸವಣ್ಣನವರು ಕೂಡಲ ಸಂಗಮದಲ್ಲಿ ಐಕ್ಯವಾದ ನೋವನ್ನು ನೀಲಮ್ಮ ತಮ್ಮ ಇನ್ನೊಂದು ವಚನದಲ್ಲಿ ಅತ್ಯಂತ ಅರ್ಥಬದ್ಧವಾಗಿ, ಮಾರ್ಮಿಕವಾಗಿ ನಿರೂಪಿಸಿದ್ದಾರೆ:

ಬಸವನರಿವು ನಿರಾಧಾರವಾಗಿತ್ತು
ಬಸವನ ಮಾಟ ನಿರ್ಮಾಟವಾಗಿತ್ತು
ಬಸವನ ಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು
ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ
ನಿಶಬ್ದವಾಯ್ತಯ್ಯ ಸಂಗಯ್ಯಾ.

ಬಸವಣ್ಣನವರು ಅನುಭಾವದ ನೆಲೆಯಲ್ಲಿ ನೀಡಿದ ಕಾಯಕ ದಾಸೋಹದ ಸಿದ್ಧಾಂತಗಳು, ಅವರು ನೀಡಿದ ಅರಿವು ನಿರಾಧಾರವಾಯಿತ್ತು. ಎಲ್ಲೆಡೆ ಶೂನ್ಯ ಭಾವ ಆವರಿಸಿತ್ತು. ಬಸವಣ್ಣನವರು ಕಲ್ಯಾಣವನ್ನು ಒಂದು ಸಮತೆಯ ಸುಂದರ ಮಾಟವನ್ನಾಗಿ ಮಾಡಿದ್ದರು. ಬಸವಣ್ಣನವರಿಲ್ಲದ ಕಾರಣ ಆ ಸುಂದರ ಮಾಟವು ನಿರ್ಮಾಟವಾಗಿತ್ತು. ಮಹಾಮನೆ ಹಾಳಾಯಿತ್ತು, ಅನುಭವ ಮಂಟಪವು ಬೆಂಕಿಗೆ ಗುರಿಯಾಗಿತ್ತು ಎಂದು ಸೂಕ್ಷ್ಮವಾಗಿ ಹೇಳುತ್ತಾರೆ. ಬಸವಣ್ಣನವರು ಭಕ್ತಿ ಮಾರ್ಗದಲ್ಲಿ ಧರ್ಮವನ್ನು ಕಟ್ಟಿ, ಬಯಲು ಶೂನ್ಯ ಮಹಾಬೆಳಗು ಚಿದ್ಬೆಳಕು ಎಂಬರ್ಥದಲ್ಲಿ ನಿರೂಪಿಸಿ ಸಾಧಿಸಿದವರು. ಅವರಿಲ್ಲದ ಕಾರಣ ಅವರ ಭಕ್ತಿ ಬಯಲೊಳಗೆ ಕೂಡಿ ನಿರ್ವಯಲಾಯಿತ್ತು. ಬಸವಣ್ಣನವರ ಧರ್ಮದ ಧ್ಯೇಯ ಉದ್ದೇಶಗಳು, ಸಮತೆಯ ಪರಿಕಲ್ಪನೆ ಹಾಳಾದವೇ ಎಂದು ಆತಂಕವನ್ನೂ ವ್ಯಕ್ತಪಡಿಸುತ್ತಾರೆ ನೀಲಮ್ಮ.

ಕಲ್ಯಾಣದ ತುಂಬೆಲ್ಲ ಬಸವಾ ಬಸವಾ ಬಸವಾ ಎಂಬ ಶಬ್ದವು ಅಧಿಕವಾಗಿತ್ತು. ಬಸವಾಕ್ಷರಗಳೆ ಮಂತ್ರವಾಗಿತ್ತು. ಇಂತಹ ಬಸವಾ ಬಸವಾ ಎಂಬ ಶಬ್ದವು ಅಡಗಿ ನಿಶಬ್ದವಾಯಿತ್ತು ಸಂಗಯ್ಯಾ ಎಂದು ಸಾಂದರ್ಭಿಕವಾಗಿ ತನ್ನ ಅಳಲನ್ನು ತೋಡಿಕೊಂಡ ನೀಲಮ್ಮನವರಿಗೆ ಬಸವಣ್ಣನವರೇ ಕರಸ್ಥಲದ ಲಿಂಗವಾಗಿದ್ದರು. ಬಸವಣ್ಣನವರಿಲ್ಲದ ಬದುಕು ತನಗೂ ಬೇಡವೆಂದು ತೀರ್ಮಾನಿಸಿ ನದಿಯ ಆಚೆಗೆ ಬಸವಣ್ಣನವರು ಐಕ್ಯವಾದರೆ ನೀಲಮ್ಮನವರು ಹಡಪದ ಅಪ್ಪಣ್ಣನವರ ಜೊತೆ ನದಿಯ ಈಚೆಗೆ ಇಂದಿನ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಬಳಿಯಿರುವ ರಕ್ಕಸ ತಂಗಡಗಿಯಲ್ಲಿ ಐಕ್ಯರಾಗುತ್ತಾರೆ.

ಮಹಾ ನಿಲುವಿನ ದಿಟ್ಟ ಶರಣೆ ಕಲ್ಯಾಣದ ಕ್ರಾಂತಿಯಲ್ಲಿ ಅಚ್ಚು ಹಾಕಿದ ಹೆಸರು, ಮಹಿಳೆಯರಿಗೆ ಸ್ಫೂರ್ತಿ ಚೇತನವಾದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ನೀಲಮ್ಮ. ರಕ್ಕಸ ತಂಗಡಗಿಯಲ್ಲಿ ಅವರ ಗದ್ದುಗೆಯಿದೆ. ಜಂಗಮ ಜ್ಯೋತಿಗೆ ಅರಿವಿನ ಸಾಕಾರಕ್ಕೆ ಹಚ್ಚಿದ ಅಮರ ಜ್ಯೋತಿ ನೀಲಮ್ಮ.

Previous post ಲಿಂಗವಾಗುವ ಪರಿ…
ಲಿಂಗವಾಗುವ ಪರಿ…
Next post ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…

Related Posts

ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
Share:
Articles

ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2

November 7, 2020 ಡಾ. ಎಸ್.ಆರ್. ಗುಂಜಾಳ
ವಿಶ್ವದಲ್ಲಿ ಕ್ರಿಸ್ತಧರ್ಮ ಜನಿಸಿ 2020 ವರುಷಗಳು ಗತಿಸಿವೆ. ಈ ಅವಧಿಯಲ್ಲಿ ಆ ಧರ್ಮದ ಅನುಯಾಯಿಗಳು ಪ್ರಪಂಚದ ಒಟ್ಟು ಜನಸಂಖ್ಯೆಯ 50 ರಷ್ಟು ಬೆಳೆದಿದ್ದಾರೆ. ಇನ್ನೂ ಭರದಿಂದ...
ಶರಣರು ಕಂಡ ಸಹಜಧರ್ಮ
Share:
Articles

ಶರಣರು ಕಂಡ ಸಹಜಧರ್ಮ

April 29, 2018 ಡಾ. ಶಶಿಕಾಂತ ಪಟ್ಟಣ
‘ಧರ್ಮ’ ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು ‘ಧಾರಣಾತ್ ಧರ್ಮಃ’ -ಅಂದರೆ ಯಾವುದನ್ನು ಧರಿಸಲು, ಆದರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
Copyright © 2023 Bayalu