Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
Share:
Articles September 10, 2022 ಡಾ. ನಟರಾಜ ಬೂದಾಳು

ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ

ಅಕ್ಷರ, ಪಠ್ಯ ಮತ್ತು ಓದು – ಈ ಮೂರೂ ಭಾರತದ ಮಟ್ಟಿಗೆ ನಿಯಂತ್ರಿತ ಸಂಗತಿಗಳು. ಕೆಲವರಿಗೆ ಮಾತ್ರ ಅಕ್ಷರ ತೀರಾ ಇತ್ತೀಚೆಗೆ ದೊರಕುತ್ತಿವೆ. ಎಲ್ಲರಿಗೂ ಸಿಗದ ಹಾಗೆ ಅದಕ್ಕೂ ಕಲ್ಲು ಹಾಕಲಾಗುತ್ತಿದೆ. ಇನ್ನು ನಾವು ಓದುವ ಪಠ್ಯಗಳಲ್ಲಿ ನಾವಿಲ್ಲ ಎನ್ನುವ ಸಂಗತಿ ಈಗೀಗ ಗೊತ್ತಾಗುತ್ತಿದೆ. ನಮ್ಮದೇ ಆದ ಪಠ್ಯಗಳಿಗಾಗಿ ಹುಡುಕಾಟ, ಹೋರಾಟ ಶುರುವಾಗಿದೆ. ಇನ್ನು ನಮ್ಮದೇ ಓದಿನ ಬಗಗೆ ನಾವಿನ್ನೂ ಯೋಚಿಸಿಯೇ ಇಲ್ಲ. ಓದೆಂದರೆ ಕೇವಲ ಪುಸ್ತಕಗಳ ಓದಲ್ಲ. ಲೋಕವನ್ನು ಓದುವ ಇದಿರಾಗುವ ಕ್ರಮವನ್ನೆ ಸಂಪೂರ್ಣ ನಿಯಂತ್ರಿಸಲಾಗಿದೆ. ಅಕ್ಷರ ಗೊತ್ತಿರಲಿ ಇಲ್ಲದಿರಲಿ ಎಲ್ಲರೂ ಲೋಕವನ್ನು ಓದುತ್ತಾರೆ. ಅಂತಹ ಓದು ಅಥವಾ ಲೋಕಮೀಮಾಂಸೆಯನ್ನೆ ನಿಯಂತ್ರಿಸಲಾಗಿದೆ. ಸಂವಿಧಾನ, ವಿಜ್ಞಾನ, ಬಹುತ್ವಗಳ ಮೂಲಕ ಲೋಕವನ್ನು ಓದದ ಹಾಗೆ, ಅವು ನಮ್ಮ ಜೀವನ ವಿಧಾನವಾಗದ ಹಾಗೆ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಈ ಮೂರೂ ನಮ್ಮ ಜೀವನದೃಷ್ಟಿ ಆಗದ ಹೊರತು ಬಿಡುಗಡೆ ದೂರದ ಮಾತು. ಅಲ್ಲಿಯವರೆಗೆ ಈ ನೆಲದ ಎಲ್ಲರೂ, ವೈದಿಕರೂ ಸೇರಿದ ಹಾಗೆ– ಎಲ್ಲರೂ ಬಂಧಿತರೇ. ವೈದಿಕರಿಗೆ ಯಜಮಾನಿಕೆ ಸಿಕ್ಕಿದ್ದರೂ ಸರಿಯಾದ ಜೀವನಕ್ರಮ ಸಿಕ್ಕಿಲ್ಲ. ಉರಿಯುತ್ತ ಬರುತ್ತಿರುವ ಕಾಡಿನಲ್ಲಿ ಅವರೂ ಇದ್ದಾರೆ. ಇದೇ ಸ್ಥಿತಿ ಜಗತ್ತಿನ ಇನ್ನೂ ಕೆಲವು ಧರ್ಮಗಳದ್ದೂ ಆಗಿದೆ. ಯುವಪೀಳಿಗೆಯಾದರೂ ಕಣ್ಣುತೆರೆಯಬೇಕು.

ಅಕ್ಷರ, ಪಠ್ಯ, ಮತ್ತು ಓದು – ಈ ಮೂರರ ನಿಯಂತ್ರಣದ ಇತಿಹಾಸದ ಪುಟಗಳನ್ನು ತಿರುವುತ್ತ ಹೋದರೆ ನಾವು ಭಾರತೀಯ ದರ್ಶನಗಳನ್ನು ಪ್ರವೇಶಿಸಿರುತ್ತೇವೆ! ಬಂಧನ ಮತ್ತು ಬಿಡುಗಡೆಯ ನಿರಂತರ ಸಂಘರ್ಷದ ಇತಿಹಾಸ ತೆರೆದುಕೊಳ್ಳುತ್ತದೆ. ಒಂದು ಗಾದೆ ಮಾತಿದೆ: ನಾಯಿ ಕಂಡು ಬೊಗಳಿದರೆ, ನರಮನುಷ್ಯ ಕಾಣದೆ ಬೊಗಳುತ್ತಾನೆ. ಕಾಣದುದರ ಬಗೆಗೆ, ತನ್ನ ಅನುಭವಕ್ಕೆ ಬಾರದುದರ ಬಗೆಗೆ ಇರುವ ಮಾತು/ಬರವಣಿಗೆಯೇ ಜಗತ್ತಿನಲ್ಲಿ ಅತ್ಯಂತ ಹೆಚ್ಚು. ಕೇವಲ ಕಲ್ಪನೆ, ಊಹೆಗಳನ್ನು ಆಧರಿಸಿ ಪ್ರಶ್ನೆಗಳನ್ನು ಕೇಳುತ್ತಲೇ ಇರಬಹುದು. ಅಂತಹ ಮಾತುಕತೆಯಲ್ಲಿ ತೊಡಗುವುದರಿಂದ ಕೇಳುವವನು ಹೇಳುವವನು ಇಬ್ಬರೂ ನಿಜದ ದಾರಿಯನ್ನು ಬಿಟ್ಟಿರುತ್ತಾರೆ. ವಿಜ್ಞಾನಕ್ಕೆ ಒಂದು ಸ್ಪಷ್ಟತೆ ಇದೆ. ಅದೇನೆಂದರೆ ಕೇವಲ ಕಾಲ್ಪನಿಕ ಸಂಗತಿಗಳನ್ನು ಕುರಿತು ಚರ್ಚೆಗೆ ತೊಡಗದಿರುವುದು. ಕೇವಲ ಊಹೆ ಮತ್ತು ಕಲ್ಪನೆಯನ್ನಾಧರಿಸಿದ ಸಂಗತಿಗಳನ್ನು ಚರ್ಚಿಸಲು ತೊಡಗುವುದಾದರೆ ಅದು ಎಂದಿಗೂ ಮುಗಿಯುವುದಿಲ್ಲ. ಕೇವಲ ಊಹೆಯನ್ನಾಧರಿಸಿದ ಪ್ರಶ್ನೆಗಳಿಗೆ ಬುದ್ಧಗುರು ಉತ್ತರಿಸದೆ ಮೌನ ತಾಳಿದನು. ಮೌನವೆಂದರೆ ಸುಮ್ಮನಿರುವುದಲ್ಲ. ಈ ಮೌನದಿಂದಲೇ ನಮ್ಮ ಮಾತುಕತೆಯನ್ನು ಆರಂಭಿಸಬೇಕು. ಏಕೆಂದರೆ ವೈದಿಕ-ಶ್ರಮಣ ತಾತ್ವಿಕತೆಯನ್ನು ಕುರಿತಾದ ಮಾತುಕತೆಗೆ ಅಕಾಲ್ಪನಿಕತೆಯನ್ನು ಅನ್ವಯಿಸಿಕೊಳ್ಳದೆ ಹೋದರೆ ಚರ್ಚೆ ಮಾತ್ರ ಇರುತ್ತದೆ, ಫಲ ಇರೋದಿಲ್ಲ.

ಕೇವಲ ಭಾಷೆಯಲ್ಲಿ ಮಾತ್ರ ಇರುವ ಅಥವಾ ಅಲ್ಲಿ ಮಾತ್ರ ಸಂಭವಿಸುವ ಸಂಗತಿಗಳ ಮಾತುಕತೆಗೆ ಅದೆಷ್ಟೇ ದೀರ್ಘಕಾಲೀನ ಇತಿಹಾಸ ಇರಲಿ, ಯಾರಾದರೂ ಹೇಳಿರಲಿ, ಯಾವ ಧರ್ಮದ ನಿಲುವಾದರೂ ಆಗಿರಲಿ ಕಾಲ್ಪನಿಕವಾದುದನ್ನು ಕಾಲ್ಪನಿಕವೆಂದೇ ನೋಡಬೇಕು. ಇದೊಂದು ರೀತಿಯಲ್ಲಿ ರಾಜನ ಬೆತ್ತಲೆಯ ಸತ್ಯ. ಸುಳ್ಳುಗಾರ ನೇಕಾರನೊಬ್ಬನು ಇಲ್ಲದ ಬಟ್ಟೆಯನ್ನು ರಾಜನಿಗೆ ಹಾಕಿದ್ದೇನೆ ಎಂದು ನಂಬಿಸಿ ರಾಜನನ್ನು ಬೆತ್ತಲೆ ನಿಲ್ಲಿಸಿದಾಗ ಅವನು ಬಟ್ಟೆಯನ್ನೇ ಹಾಕಿಲ್ಲ ಎನ್ನುವುದನ್ನು ಹೇಳಲು ಒಂದು ಮಗು ಬೇಕಾಯಿತು. ಸತ್ಯದ ನಿರ್ವಚನವೂ ಹಾಗೆಯೇ. ಉದಾಹರಣೆಗೆ ಜಾತಿ ಎನ್ನುವುದು ಕೇವಲ ಭಾಷೆಯಲ್ಲಿರುವ ಪೊಳ್ಳು. ಅದನ್ನು ಇಡೀ ಜಗತ್ತು ಪಾಲಿಸುತ್ತದೆ ಎನ್ನುವುದು ಅದನ್ನು ನಿಜವನ್ನಾಗಿಸಲಾರದು. ವೈದಿಕ/ಶ್ರಮಣ ಪಂಥಗಳು ಮತ್ತು ಜಗತ್ತಿನ ಇತರ ಧರ್ಮಗಳು ಏನೇನನ್ನೋ ನಂಬಿವೆ, ಜಗತ್ತನ್ನು ನಂಬಿಸಿವೆ ಎಂದ ಮಾತ್ರಕ್ಕೆ ಅದೆಲ್ಲ ನಿಜವಾಗಿರಬೇಕಿಲ್ಲ. ವಿಜ್ಞಾನಕ್ಕೆ ಈ ತಿಳುವಳಿಕೆ ಇದೆ. ನಾವು ಕೂಡ ಇಟ್ಟುಕೊಳ್ಳಬೇಕಾದ ಕನಿಷ್ಟ ತಿಳುವಳಿಕೆ ಅದು.

ಒಂದು ಕುತರ್ಕದ ಮಾತು ಇಂತಹ ಚರ್ಚೆಗಳಲ್ಲಿ ಇಣುಕಿ ಹಾಕುತ್ತದೆ. ಅದೇನೆಂದರೆ ನೀನು ಲಂಡನ್ ನಗರವನ್ನು ನೋಡಿಲ್ಲ ಎಂದ ಮಾತ್ರಕ್ಕೆ ಲಂಡನ್ ನಗರವೇ ಇಲ್ಲ ಎಂದರೆ ಹೇಗೆ? ಎಂಬ ಪ್ರಶ್ನೆ ಕೇಳಿ ಟಿವಿ ಸ್ಕ್ರೀನ್ ನಡುಗುವಂತೆ ನಗುವವರನ್ನು ನೋಡುತ್ತಿದ್ದೇವೆ. ನಿಜ ನಾನು ಲಂಡನ್ ನಗರ ನೋಡಿಲ್ಲ ಎಂದಮಾತ್ರಕ್ಕೆ ಆ ನಗರವೇ ಇಲ್ಲ ಎನ್ನಲು ಬರುವುದಿಲ್ಲ. ಆದರೆ ನಾನು ಹೇಗೂ ನೋಡಿಲ್ಲ ಅಂತ ಮೇಲೊಂದಷ್ಟು ಲೋಕಗಳು ಕೆಳಗೊಂದಷ್ಟು ಲೋಕಗಳಿವೆ, ಮತ್ತು ಅವುಗಳಿಗೆ ಹೋಗಲು ಇಂತಿಷ್ಟು ರೇಟು ಎಂದು ನಿಗದಿಪಡಿಸುವುದನ್ನು ಕಂಡರೂ ಸುಮ್ಮನಿರಬೇಕೆ? ಅನೇಕ ಧರ್ಮಗಳಲ್ಲಿ ಕಾಲ್ಪನಿಕತೆಯದ್ದೆ ಯಜಮಾನಿಕೆ. ಅದನ್ನು ನಂಬಿ ಆಚರಿಸಲು ಅವರು ಸ್ವತಂತ್ರರು. ಆದರೆ ಅದನ್ನು ಎಲ್ಲರ ಮೇಲೆ ಹೇರುವ ವಸಾಹತುಶಾಹಿ ನಡವಳಿಕೆ ಇವತ್ತಿನ ಸಂಕಟಕ್ಕೆ ಕಾರಣ. ಭಾರತದ ವೈದಿಕ-ಶ್ರಮಣ ದರ್ಶನಗಳಿಗೆ ಹೀಗೆ ಪ್ರವೇಶಿಸುವುದು ಸರಿಯಾದುದು. ಇಲ್ಲವಾದರೆ ಕಣ್ಣುಬಿಡುವ ಮೊದಲೇ ತಮಗೆ ಬೇಕಾದ ಕನ್ನಡಕ ಹಾಕಿ ಲೋಕ ಇರುವುದೇ ಹೀಗೆ ಎಂದು ದಿಕ್ಕು ತಪ್ಪಿಸುವುದನ್ನು ತಡೆಯಲಾಗುವುದಿಲ್ಲ. ಈಗಾಗಲೇ ‘ಭಾರತೀಯ ಕಾವ್ಯ ಮೀಮಾಂಸೆ’ಯ ಹೆಸರಿನಲ್ಲಿ ಅವರ ಕನ್ನಡಕವನ್ನು ಎಲ್ಲರಿಗೆ ಹಾಕಿ ಅದರಲ್ಲಿ ಕಂಡಂತೆಯೇ ಓದಲು ಹಚ್ಚಿ ನೂರಾರು ವರ್ಷಗಳಾಗಿವೆ!
ಭಾರತೀಯ ದರ್ಶನಗಳಲ್ಲಿ ಎರಡು ಪ್ರಮುಖ ಧಾರೆಗಳಿವೆ. ಬೌದ್ಧ, ಜೈನ, ನಾಥ, ಸಿದ್ಧ, ಶೈವ, ವಚನ, ಸೂಫಿ, ಚಾರ್ವಾಕ, ಸಹಜಯಾನ, ಮುಂತಾದ ಧಾರೆಗಳನ್ನು ಶ್ರಮಣ ಧಾರೆಗಳೆನ್ನುತ್ತಾರೆ. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ (ಇದು ಮೀಮಾಂಸೆ ಎಂದು ಪ್ರಸಿದ್ಧವಾಗಿದೆ) ಮತ್ತು ಉತ್ತರ ಮೀಮಾಂಸಾ (ಇದು ವೇದಾಂತ ಎಂದು ಪ್ರಸಿದ್ಧವಾಗಿದೆ) – ಈ ಧಾರೆಗಳನ್ನು ವೈದಿಕವೆಂದು ಗುರುತಿಸುವ ಕ್ರಮವು ದೀರ್ಘಕಾಲದಿಂದ ಚಾಲ್ತಿಯಲ್ಲಿದೆ. ಕೊನೆಯ ಎರಡು ಮೀಮಾಂಸಾ ಪ್ರಸ್ಥಾನಗಳು ನೇರವಾಗಿ ವೇದಗಳು ಮತ್ತು ನಂತರದ ಉಪನಿಷತ್ತುಗಳನ್ನು ಕುರಿತಾದವುಗಳು. ಮೊದಲ ನಾಲ್ಕು ಪ್ರಸ್ಥಾನಗಳು ಕೂಡ ವೇದೋಪನಿಷತ್ತುಗಳನ್ನೇ ಆಧರಿಸಿವೆ ಎಂಬ ಒತ್ತಾಯದ ಹೇರಿಕೆ ಇರುವಂತೆ ಕಂಡುಬರುತ್ತದೆ. ಇನ್ನು ವೈದಿಕ ಧಾರೆಯ ಎರಡೂ ಮೀಮಾಂಸಾ ಪ್ರಸ್ಥಾನಗಳು ಮಂತ್ರ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳೆಂಬ ಆಕರಗಳನ್ನು ಆಧರಿಸಿವೆ. ಇಲ್ಲಿ ಹೇಳಲ್ಪಟ್ಟಿರುವ ಸಂಗತಿಗಳೆಲ್ಲ ಕೇವಲ ಕರ್ತವ್ಯ ಮತ್ತು ಪ್ರಶ್ನಾತೀತ ಎಂದು ಮೊದಲೇ ಕೇವಿಯಟ್ ಹಾಕಿಬಿಡುತ್ತಾರೆ. ಅವೆಲ್ಲ ಮನುಷ್ಯಮಾತ್ರರಿಂದ ರಚಿತವಾಗಿಲ್ಲ ಮತ್ತು ಅವೆಲ್ಲ ‘ಮೊದಲೇ’ ಇದ್ದವುಗಳು ಎಂದು ತೀರ್ಮಾನಿಸಿಕೊಂಡಿದ್ದಾರೆ. ಇಂತಹ ಸಂಗತಿಗಳ ಬಗೆಗಿನ ಚರ್ಚೆ ಇನ್ನು ಸಾಧ್ಯವೇ ಇಲ್ಲ ಎನ್ನುವಷ್ಟು ಕೋಲಾಹಲ ಮಾಡಿಟ್ಟಿದ್ದಾರೆ. ಇಲ್ಲಿ ಸಹಜ ಮಾತುಕತೆಗೆ ಜಾಗವೇ ಇಲ್ಲ. ಹಾಗಾಗಿ ಈ ಚರ್ಚೆ ಇಲ್ಲಿಯೂ ಸಾಧ್ಯವಿಲ್ಲ ಎಲ್ಲಿಯೂ ಸಾಧ್ಯವಿಲ್ಲ.

ಇದೆ, ಇಲ್ಲ, ಇದೆ ಇಲ್ಲ ಎರಡೂ ಹೌದು, ಇದೆ ಇಲ್ಲ ಎರಡೂ ಅಲ್ಲ – ಈ ಚತುಷ್ಕೋಟಿಯನ್ನೂ ಎಲ್ಲಿ ಯಾವುದು ಬೇಕೋ ಅದನ್ನು ಬಳಸುವ ಚಾಕಚಕ್ಯತೆಯನ್ನು ದೀರ್ಘಕಾಲದಿಂದ ಬಳಸಿಕೊಂಡು ಬರಲಾಗಿದೆ. ಉದಾಹರಣೆಗೆ ವೈದಿಕ ದರ್ಶನದ ಆಧಾರ ಎನ್ನುವ ಮೀಮಾಂಸಾದರ್ಶನದಲ್ಲಿ ದೇವರಿಗೆ ಜಾಗವಿಲ್ಲ! ದೇವರನ್ನು ಒಪ್ಪದಿರುವುದು ಮೀಮಾಂಸಾದರ್ಶನದ ನಿಲುವುಗಳಲ್ಲಿ ಒಂದು. ಎಲ್ಲವನ್ನೂ ದೇವರು ಸೃಷ್ಟಿಸಿದ ಎಂಬುದನ್ನು ಒಪ್ಪಿಕೊಂಡರೆ ಇಲ್ಲಿರುವ ಒಳಿತು-ಕೆಡುಕುಗಳಿಗೆ, ತಾರತಮ್ಯಗಳಿಗೆಲ್ಲ ದೇವರು ಕಾರಣವಾಗಬೇಕಾಗುತ್ತದೆ. ಹಾಗಾಗಿ ಪ್ರಪಂಚವನ್ನು ದೇವರು ಸೃಷ್ಟಿಸಿದ ಎಂಬುದೊಂದು ಕಟ್ಟುಕತೆ ಎಂದು ಆ ದರ್ಶನಗಳು ಹೇಳುತ್ತವೆ. ಲೋಕ ಹಿಂದೆಯೂ ಇತ್ತು ಮುಂದೆಯೂ ಇರುತ್ತೆ. ಅದು ನಿತ್ಯವಾದುದು. ಯಾರೂ ಸೃಷ್ಟಿಸಿದ್ದಲ್ಲ. ಹಾಗಾಗಿ ದೇವರ ಅಗತ್ಯವಿಲ್ಲ ಎಂಬುದು ಅವುಗಳ ನಿಲುವು. ಇನ್ನು ಕರ್ಮಫಲವೆನ್ನುವುದೂ ಕೇವಲ ಕಾರಣ-ಪರಿಣಾಮಗಳ ಸರಣಿ ಎಂದೂ ಅಲ್ಲಿಯೂ ದೈವನಿರ್ಣಯಕ್ಕೆ ತಾವಿಲ್ಲವೆಂದೂ ನಿರ್ಣಯಿಸುತ್ತಾರೆ. ಇಲ್ಲೆಲ್ಲ ಇವರು ಸರಿ ಇದ್ದಾರಲ್ಲ ಎಂದೆನ್ನಿಸುತ್ತದೆ. ಆದರೆ ಇದನ್ನು ಸಂಕಲನಾನುಸಂಧಾನಕ್ಕೆ ಸಿಕ್ಕಿಸಿಕೊಂಡು ಕಾಲಾನುಕಾಲಕ್ಕೆ ತಮ್ಮ ಇಷ್ಟಾನುಸಾರ ಮರುವ್ಯಾಖ್ಯಾನಗಳನ್ನು ಕಟ್ಟಿಕೊಳ್ಳಲಾಗಿದೆ. ಒಂದು ಕಡೆ ಹೂಂ ಎಂದರೆ ಇನ್ನೊಂದು ಕಡೆ ಎಲ್ಲಾದರೂ ಉಂಟೆ ಸಾಧ್ಯವೇ ಇಲ್ಲ ಅನ್ನುತ್ತಾರೆ. ಮಾತುಕತೆಯ ಸರಳ ನೀತಿಗಳಿಗೂ ಇಲ್ಲಿ ತಾವಿಲ್ಲ. ಇವೆಲ್ಲ ತುಂಬಾ ಸೂಕ್ಷ್ಮಸ್ತರದಲ್ಲಿ ಮಾತ್ರ ಚರ್ಚಿಸಬಹುದಾದ ಸಂಗತಿಗಳು. ಶ್ರ್ರಮಣ-ವೈದಿಕ ಧಾರೆಗಳ ತಾತ್ವಿಕತೆಯನ್ನು ಹೀಗೆ ಮೇಲ್ಪದರದಲ್ಲಿ ಚರ್ಚಿಸುವುದರಿಂದ ನ್ಯಾಯವಾದುದಕ್ಕೂ ನ್ಯಾಯ ಸಿಗುವುದಿಲ್ಲ.

ದರ್ಶನವೊಂದಕ್ಕೆ ದರ್ಶನದ ಸ್ಥಾನ ಸಿಗಬೇಕಾದರೆ ಕೆಲವು ಮಾನದಂಡಗಳನ್ನು ಅದು ಪೂರಯಿಸಬೇಕು. ಮೊದಲನೆಯದಾಗಿ ಅದಕ್ಕೆ ಈ ಲೋಕವನ್ನು ವಿವರಿಸುವ ಸ್ವಂತ ನಿಲುವಿರಬೇಕು. ಲೋಕದ ಅರಿವನ್ನು ಒದಗಿಸಿಕೊಡುವ ಮಾಧ್ಯಮಗಳಾದ ಪ್ರಮಾಣಗಳನ್ನು ಕುರಿತ ವಿವರಣೆ ಮತ್ತು ನಿರ್ಣಯಗಳಿರಬೇಕು. ಪ್ರಾಣ ಮತ್ತು ಪ್ರಜ್ಞೆಯ ಬಗೆಗಿನ ವಿವರಣೆ, ಕರ್ಮ ಮತ್ತು ಜೀವದ ಮುಂದುವರಿಕೆಯ ಬಗೆಗೆ ಹಾಗೂ ಕಾಲದೇಶಗಳನ್ನು ಕುರಿತಾದ ನಿಲುವುಗಳನ್ನು ಹೊಂದಿರಬೇಕು. ಲೋಕವನ್ನು ಇದಿರಾಗುವ ಕ್ರಮವನ್ನು ತಿಳಿಸಿಕೊಡುವ ಅಂದರೆ ಲೋಕವನ್ನು ಓದಲು ಬೇಕಾದ ಮೀಮಾಂಸೆಯೊಂದಿರಬೇಕು. ಇವೆಲ್ಲ ದರ್ಶನವೊಂದು ನಿರ್ವಹಿಸಬೇಕಾದ ಪ್ರಮುಖ ಅಂಶಗಳು. ಲೋಕದ ಬಗೆಗಿನ ವಿವರಣೆಯನ್ನಾಧರಿಸಿ ಆಯಾ ದರ್ಶನಗಳ ಮುಂದಿನ ದಿಕ್ಕು ನಿರ್ಧಾರವಾಗುತ್ತದೆ. ಈ ದೃಷ್ಟಿಯಿಂದ ಕೆಲವು ಪ್ರಾಥಮಿಕ ವಿವರಗಳನ್ನು ಸಂಗ್ರಹಿಸಿ ನೀಡುವ ಪ್ರಯತ್ನ ಮಾಡಬಹುದು.

1. ವೈದಿಕತೆಗೆ ಸ್ವಯಂ ಸ್ಥಾಪನೆಯ ಗುಣವಿದ್ದರೆ ಶ್ರಮಣಧಾರೆಗಳಿಗೆ ಸ್ವಯಂ ವಿಸರ್ಜನೆಯ ಗುಣವಿದೆ. ಸ್ವಯಂ ಸ್ಥಾಪಿತ ವೈದಿಕತೆಗೆ ಒಂದು ರೀತಿಯ ವಿಚಿತ್ರ ಅಹಂಕಾರ ಒದಗಿಬಂದಿದೆ. ಸದಾ ದಾಟುವಿಕೆಯನ್ನೆ ತನ್ನ ಸಹಜ ನಡೆಯನ್ನಾಗಿಸಿಕೊಂಡಿರುವ ಶ್ರಮಣಧಾರೆಗಳಿಗೆ ಅಧಿಕಾರ ಕೇಂದ್ರಗಳ ಸಖ್ಯ ಸಾಧ್ಯವಾಗುವುದಿಲ್ಲ. ಆದರೆ ಅಂತಹ ಅಪವಿತ್ರ ಮೈತ್ರಿಗೆ ಸದಾ ಹಾತೊರೆದು ಕೂತಿರುವ ವೈದಿಕತೆ ಅಧಿಕಾರವಿಲ್ಲದಿದ್ದರೆ ತತ್ತರಿಸಿ ಹೋಗುತ್ತದೆ. ಈ ಹೊತ್ತಿನ ಸವಾಲು ಕೂಡ ಇದೇ ಆಗಿದೆ.
2. ವೈದಿಕತೆಯು ಪ್ರಧಾನವಾಗಿ ಭಾಷಿಕ ರಚನೆಗಳನ್ನಾಧರಿಸಿದ್ದು. ಅದೊಂದು ದರ್ಶನವೇ? ಎನ್ನುವುದು ಕೂಡ ಗಂಭೀರವಾಗಿ ಪರಿಶೀಲಿಸಬೇಕಾದ್ದು. ದರ್ಶನವೆಂದರೆ ಏನೆಂದು ಮುರಾರಿ ಬಲ್ಲಾಳರು ವಿವರಿಸುತ್ತಾರೆ: ‘ಜಗತ್ತಿನ ಸ್ವರೂಪ, ಜಗತ್ಕಾರಣದ ಸ್ವರೂಪ ಮತ್ತು ಜೀವನ ಸ್ವರೂಪವನ್ನು ತಿಳಿದುಕೊಂಡು ಅನುಭವದ ನೆಲೆಯಲ್ಲಿ ಸಿದ್ಧಾಂತ ಮಾಡಿದರೆ ಅದನ್ನು ದರ್ಶನ ಎನ್ನುತ್ತಾರೆ.’ ಇಲ್ಲಿ ಅವು ಏನು ನಿರ್ಣಯ ತೆಗೆದುಕೊಳ್ಳುತ್ತವೆಯೋ ಅದನ್ನು ಆಧರಿಸಿ ಅವುಗಳ ಮುಂದಿನ ಪ್ರಯಾಣ ನಿರ್ಧಾರವಾಗುತ್ತದೆ. ಅನುಭವಕ್ಕೆ ದಕ್ಕದ ಸಂಗತಿಗಳೇ ವೈದಿಕ ತಾತ್ವಿಕತೆಯಲ್ಲಿ ನಿರ್ಣಾಯಕ. ಆತ್ಮ, ಪರಬ್ರಹ್ಮ, ಪರಾವಾಕ್ಕು, ಅನುತ್ತರಾ ಇತ್ಯಾದಿಗಳೆಲ್ಲ ಭಾಷೆಯಲ್ಲಿ ಊದಿ ಬೆಳೆಸಿರುವ ಬಲೂನುಗಳೋ ಅನುಭವಕ್ಕೆ ದಕ್ಕಿದವುಗಳೋ ಎನ್ನುವುದು ಇಂದಿಗೂ ಚರ್ಚಿಸಬೇಕಾದ ಸಂಗತಿಯೇ ಆಗಿದೆ. ಎಂತೆಂಥವರೋ ಹೇಳಿದ್ದಾರೆ, ಯಾವ್ಯಾವುದೋ ಗ್ರಂಥಗಳಲ್ಲಿ ಹೇಳಿದೆ ಎನ್ನುವುದಾಗಲಿ, ತೀಕ್ಷ್ಣವಾದ ಅವಹೇಳನವಾಗಲಿ ಉತ್ತರವಲ್ಲ.
3. ಬೌದ್ಧ ಧರ್ಮವಾಗಲೀ, ದೇಸಿ ಶ್ರಮಣಧಾರೆಗಳನ್ನಾಧರಿಸಿದ ಶೂದ್ರ ಧರ್ಮವಾಗಲೀ, ವಿಜ್ಞಾನವಾಗಲಿ ನಿಮ್ಮ ವಿರೋಧಿಗಳೆ? ಎಂಬ ಪ್ರಶ್ನೆಗೆ ವೈದಿಕರು ಎಂದಿಗೂ ಹೂಂ ಅನ್ನುವುದಿಲ್ಲ. ಕಡೆಗೆ ವಿಜ್ಞಾನ ಕೂಡಾ ನಾವೇ ಹೆತ್ತ ಕೂಸು, ಬುದ್ಧನು ಹನ್ನೆರಡನೆಯದೋ ಹದಿಮೂರನೆಯದೋ ಅವತಾರ ಎನ್ನುತ್ತಾರೆಯೇ ಹೊರತು ವಿರುದ್ಧವೆಂದು ಎಂದೂ ಹೇಳಿಲ್ಲ; ಮುಂದೂ ಹೇಳಲ್ಲ. ಪರವೋ ವಿರುದ್ಧವೋ ಒಟ್ಟಿನಲ್ಲಿ ಅವರಿಗೆ ಒಂದು ಜಾಗವನ್ನು ಕೊಡುವಂತೆ ಮಾಡುತ್ತಾರೆ. ಸ್ವಂತದ್ದೇನೂ ಇಲ್ಲದಿದ್ದಾಗ ಸಿಕ್ಕ ಜಾಗವೆಲ್ಲ ಲಾಭವೇ ಆಗುತ್ತದೆ. ವಿಜ್ಞಾನವೆಂದೂ ಯಾವ ಧರ್ಮದ ಪರವೂ ಅಲ್ಲ; ವಿರುದ್ಧವೂ ಅಲ್ಲ. ಅದು ಸತ್ಯದ ಪರ. ಸಂವಿಧಾನವೂ ಅಷ್ಟೆ. ಅದು ಯಾವ ಧರ್ಮದ ವಿರುದ್ಧವೂ ಪರವೂ ಅಲ್ಲ. ಅದು ಲೋಕದ ಸಹಜನಡೆಯ ಪರವಾದುದು. ಯಾವುದನ್ನೇ ಆಗಲಿ ಅವಳಿ ವಿರುದ್ಧಗಳಾಗಿ ನೋಡಿದಾಕ್ಷಣ ನೋಡಿದವರು ದುರ್ಬಲರಾಗುತ್ತಾರೆ. ಸರಿಯಾದುದು, ಸಹಜವಾದುದು ಮತ್ತೊಂದನ್ನು ವಿರುದ್ಧ ಎಂದು ಗ್ರಹಿಸದಿರುವುದೇ ಸರಿ. ಸರಿಯಲ್ಲದ್ದು, ಸರಿಯಾದದ್ದರ ಎದುರಿಗೆ ಬಂದಾಗ ಸಹಜವಾಗಿ ತಿರಸ್ಕøತಗೊಳ್ಳುತ್ತದೆ. ಹಾಗಾಗಬೇಕು. ಆಗದಿದ್ದರೆ ಕೇವಲ ವಿರೋಧವನ್ನೇ ಉದ್ಯೋಗ ಮಾಡಿಕೊಂಡವರು ಸ್ವಂತದ್ದನ್ನು ಮಾಡಲಾಗದಂತಾಗುತ್ತಾರೆ.
4. ಹಾಗಾದರೆ ಬೌದ್ಧ, ಜೈನ, ನಾಥ, ಸಿದ್ಧ, ವಚನ, ಸೂಫಿ, ಸಹಜಯಾನ, ಆರೂಢ, ಅವಧೂತ, ಅಚಲ, ಅನೇಕ ತತ್ವಪದ ಧಾರೆಗಳು, ಮುಂತಾದ ಭಾರತೀಯ ಶ್ರಮಣಧಾರೆಗಳು ತಮ್ಮ ನಿಲುವುಗಳನ್ನು ಹೇಗೆ ನಿರ್ಣಯಿಸಿ ಮುಂದಿಟ್ಟಿದ್ದಾರೆ? ಇದೊಂದು ಸಾವಿರಾರು ಪುಟಗಳ ಉತ್ತರವನ್ನು ಕೇಳುವ ಪ್ರಶ್ನೆ. ಕಾಲ್ಪನಿಕತೆಯ ನಿರಾಕರಣೆ, ಪ್ರಮಾಣಗಳ ನಿರಾಕರಣೆ, ಅನೈಸರ್ಗಿಕ ಜೀವನಕ್ರಮದ ನಿರಾಕರಣೆ, ಅನೇಕ ರೀತಿಯ ತಾರತಮ್ಯಗಳ ನಿರಾಕರಣೆ, ಸಂಕೇತಗಳ ನಿರಾಕರಣೆ ಇತ್ಯಾದಿ ನಿರಾಕರಣೆಗಳ ಮೂಲಕ ಶುದ್ಧೀಕರಣ ಮತ್ತು ಸರಿಯಾದುದರ ಪ್ರತಿಷ್ಠಾಪನೆ ಎರಡನ್ನೂ ಮಾಡುವ ಹೊಣೆ ಹೊತ್ತು ನಿಭಾಯಿಸಿವೆ. ಇದೊಂದು ಇಬ್ಬಾಯಿಯ ಕತ್ತಿ. ಶ್ರಮಣಧಾರೆಗಳು ಹೋಗುತ್ತಲೂ ಜೀವ ತೆತ್ತಿವೆ ಬರುತ್ತಲೂ ಜೀವ ತೆತ್ತಿವೆ. ಇದಕ್ಕೆ ಬಸವಾದಿ ಶರಣರ ಉದಾಹರಣೆ ನಮ್ಮ ಕಣ್ಣಮುಂದೆ ಇದೆ. ಅದೇ ಕಸ ಅಂಗಳಕ್ಕೆ ಮತ್ತೆ ಮತ್ತೆ ಬೀಳುತ್ತಲೇ ಇದೆ. ನಾವು ಗುಡಿಸುತ್ತಲೇ ಇರಬೇಕು. ದುರಂತವೆಂದರೆ ಈಗ ತಮ್ಮ ತಮ್ಮ ಮನೆಗಳ ಮುಂದೆ ತಾವೇ ಕಸವನ್ನು ಸುರಿದುಕೊಳ್ಳುವುದನ್ನು ಸಂಭ್ರಮಿಸುವಂತೆ ಮಾಡಲಾಗುತ್ತಿದೆ.
ಇಡಿಯಾಗಿ ಭಾರತದ ಬದುಕು ವೈದಿಕ ಮತ್ತು ಶ್ರಮಣ ಎಂದು ತನ್ನನ್ನೇ ಸೀಳಿಕೊಂಡಿದೆ. ಬೇರೆ ಧರ್ಮಗಳನ್ನು ಹೊರತುಪಡಿಸಬೇಕಾದ್ದಿಲ್ಲ. ಅಲ್ಲೂ ಅದೇ ಸ್ಥಿತಿ. ಈ ಸ್ಕೀಜೋಫ್ರೇನಿಕ್ ಅವಸ್ಥೆ ಭಾರತೀಯ ಬದುಕಿಗೇ ಸಂಬಂಧಿಸಿದುದು. ನಮ್ಮ ನಡುವಿನ ತರತಮಗಳು ನಿತ್ಯ ಬದುಕಿನ ವಾಸ್ತವವಾಗಿರುವುದರಿಂದ ಇಂತಹ ವಿಭಜನೆ ಅನಿವಾರ್ಯ. ಇಂತಹ ತರತಮಗಳು ಎಲ್ಲಿಂದ ಮೂಡಿ ಬರುತ್ತಿವೆ?
ಪ್ರಮಾಣಗಳಿಂದ ಮೂಡಿಬರುತ್ತಿವೆ. ತಾರತಮ್ಯಗಳನ್ನು ಅಧಿಕೃತಗೊಳಿಸಲು ಪ್ರಮಾಣಗಳನ್ನು ಬಳಸುತ್ತಾರೆ. ಸತ್ಯವನ್ನು ತಿಳಿಯಲು ಇರುವ ಸಾಧನಗಳನ್ನು ಪ್ರಮಾಣಗಳೆನ್ನುತ್ತಾರೆ. ಯಾವುದಾದರೊಂದು ನಿಜವೆ ಅಥವಾ ಸುಳ್ಳೆ? ಇದನ್ನು ನಿರ್ಣಯಿಸಲು ಪ್ರಮುಖವಾಗಿ ಮೂರು ಸಾಧನಗಳಿವೆ. ಒಂದು ಅನುಭವ ಅಥವಾ ಪ್ರತ್ಯಕ್ಷ. ನಮ್ಮ ಇಂದ್ರಿಯಗಳ ಮೂಲಕ ಕಂಡದ್ದನ್ನು ನಿಜ ಎಂದುಕೊಳ್ಳುವುದು ಪ್ರತ್ಯಕ್ಷ ಪ್ರಮಾಣ. ತರ್ಕ ಅಥವಾ ಅನುಮಾನದ ಮೂಲಕ ಕಂಡುಕೊಳ್ಳುವ ನಿಜವನ್ನು ತರ್ಕಪ್ರಮಾಣ ಎನ್ನುತ್ತಾರೆ. ಇನ್ನು ಮೂರನೆಯದು ಶಬ್ದ ಪ್ರಮಾಣ. ಯಾವುದೋ ಪುಸ್ತಕದಲ್ಲಿದೆ, ದಾಖಲೆಯಲ್ಲಿದೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಿ ಎಂದು ಒತ್ತಾಯಿಸುವ ಪ್ರಮಾಣ. ಈ ಪ್ರಮಾಣವೇ ಈ ಹೊತ್ತು ಜಗತ್ತನ್ನು ದುರಂತದ ಅಂಚಿಗೆ ತಂದು ನಿಲ್ಲಿಸಿದೆ. ದರ್ಶನಗಳು ತಮ್ಮ ನಿಲುವುಗಳನ್ನು ಪ್ರತಿಪಾದಿಸಲು ಯಾವ್ಯಾವ ಪ್ರಮಾಣಗಳನ್ನು ಒಪ್ಪಿಕೊಳ್ಳುತ್ತವೆ/ ಒಪ್ಪಿಕೊಳ್ಳುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಉದಾಹರಣೆಗೆ ಸಾಂಖ್ಯರಿಗೆ ಪ್ರತ್ಯಕ್ಷ, ಮೀಮಾಂಸೆಗಳಿಗೆ ಪ್ರತ್ಯಕ್ಷ ಮತ್ತು ಶಬ್ದ ಪ್ರಮಾಣಗಳು ಮಾನ್ಯವಾದರೆ ಶ್ರಮಣಧಾರೆಗಳಲ್ಲಿ ಸಾಂಖ್ಯರಿಗೆ ಪ್ರತ್ಯಕ್ಷವು ಮಾನ್ಯ. ಬೌದ್ಧರು ಯಾವ ಪ್ರಮಾಣಗಳನ್ನೂ ಆತ್ಯಂತಿಕ ಎಂದು ಒಪ್ಪುವುದಿಲ್ಲ. ಅಲ್ಲಮನೂ ಅದನ್ನು ಅನುಮೋದಿಸಿದ್ದಾನೆ. (ಶಬ್ದವೆಂಬೆನೆ ಶ್ರೋತ್ರದೆಂಜಲು., ವೇದವೆಂಬುದು ಓದಿನ ಮಾತು… ಇತ್ಯಾದಿ). ಈ ಪ್ರಮಾಣಗಳನ್ನು ಒಮ್ಮೆ ವಿಜ್ಞಾನದ ಒರೆಗಲ್ಲಿಗೆ ತೀಡಿದರೆ ಮಾತ್ರ ಅವೇನು ಎನ್ನುವುದು ಗೊತ್ತಾಗುತ್ತದೆ. ಉದಾಹರಣೆಗೆ ನಾವು ನಮ್ಮ ಇಂದ್ರಿಯಗಳ ಮೂಲಕ ಕಂಡದ್ದನ್ನು ನಿಜ ಎನ್ನುವ ಪ್ರತ್ಯಕ್ಷ ಪ್ರಮಾಣಕ್ಕೆ ಜೋತುಬಿದ್ದಿದ್ದೇವೆ. ಬುದ್ಧ ಹೇಳಿದರೂ, ನಾಗಾರ್ಜುನ ಹೇಳಿದರೂ, ಅಲ್ಲಮ ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ. ಕಡೆಗೆ ವಿಜ್ಞಾನವನ್ನಾದರೂ ಕೇಳಿಸಿಕೊಳ್ಳುತ್ತೇವೆಯೇ? ಅದೂ ಇಲ್ಲ. ಉದಾಹರಣೆಗೆ ನಾವು ನೋಡದಿದ್ದರೂ ನಾವು ಕಾಣುವ ಕಾಮನಬಿಲ್ಲು ಉಂಟಾಗುತ್ತದೆಯೆ? ನಾವಿಲ್ಲದಿದ್ದರೂ ಕಾಡಿನಲ್ಲಿ ನಮ್ಮ ಅನುಭವದ ಬೆಳದಿಂಗಳು ಇರುತ್ತದೆಯೆ? ನಾವಿಲ್ಲದಿದ್ದರೂ ದಟ್ಟಕಾಡಿನಲ್ಲಿ ಮರಬಿದ್ದ ಸದ್ದು ಉಂಟಾಗುತ್ತದೆಯೆ? ಮರದೊಳಗಣ ಕಿಚ್ಚು ಎನ್ನುವುದು ನಿಜವೆ? ಇತ್ಯಾದಿಗಳಿಗೆ ಬುದ್ಧ, ಅಲ್ಲಮ ಮತ್ತು ಅನೇಕ ಶ್ರಮಣಧಾರೆಗಳು ಮತ್ತು ವಿಜ್ಞಾನ ‘ಇಲ್ಲ‘ ಎಂದು ಉತ್ತರಿಸುತ್ತದೆ. ವಿಜ್ಞಾನಕ್ಕೆ ತೆರೆದುಕೊಂಡ ವಿವೇಕ ಇದನ್ನು ಪರಿಶೀಲಿಸಬಲ್ಲದು. ಪ್ರಮಾಣಗಳಿಗೆ ಬದ್ಧವಾದದ್ದಕ್ಕೆ ಇಲ್ಲಿ ಪರಿಶೀಲಿಸಲು ಏನಿದೆ? ನಾವಿಲ್ಲದಿದ್ದರೇನೆಂತೆ ಅವೆಲ್ಲ ಅಲ್ಲಿ ಇರುತ್ತವೆ ಎಂದೇ ನಂಬುತ್ತವೆ. ಸಂವಿಧಾನ ಮತ್ತು ವಿಜ್ಞಾನ ನಮ್ಮ ಬದುಕಿನ ವಿಧಾನವಾಗುವುದು ತುಂಬಾ ಸರಳವೂ ಹೌದು ತುಂಬಾ ಸಂಕೀರ್ಣವೂ ಹೌದು.

ಈಗ ಈ ತತ್ವ-ಹೋರಾಟದ ಕೆಲವು ಮಗ್ಗುಲುಗಳನ್ನು ಹೀಗೆ ಸಂಗ್ರಹಿಸಬಹುದು:
1.ಎಲ್ಲ ಶ್ರಮಣ ಧಾರೆಗಳೂ ಶಬ್ದ ಪ್ರಮಾಣವನ್ನು (ಪ್ರಶ್ನಿಸಲಾಗದ ಪವಿತ್ರ ಗ್ರಂಥಗಳು) ನಿರಾಕರಿಸುತ್ತವೆ. ಪ್ರಶ್ನಿಸದೆ ಒಪ್ಪಬೇಕಾದ ಯಾವ ತಾತ್ವಿಕ ಆಕರವೂ, ದರ್ಶನವೂ, ದಾರ್ಶನಿಕರೂ ಇಲ್ಲವೆಂದು ನಂಬುತ್ತವೆ.
2.ವೈದಿಕ ಧಾರೆ ಪ್ರಧಾನವಾಗಿ ಏಕಮೂಲವಾದಿ. ಶ್ರಮಣಧಾರೆಗಳು ಪ್ರಧಾನವಾಗಿ ಬಹುತ್ವವಾದಿ.
3.ಒಂದು ಪ್ರಧಾನವಾಗಿ ಹೊರಗಿನ ಮತ್ತೊಂದು ಶಕ್ತಿಯನ್ನಾಧರಿಸಿದೆ. ಇನ್ನೊಂದು ಕಾರ್ಯ-ಕಾರಣದ ಪ್ರಕ್ರಿಯಾ ಮೀಮಾಂಸೆಯನ್ನಾಧರಿಸಿದೆ.
4.ಒಂದು ಪ್ರಧಾನವಾಗಿ ಭಾವನಾವಾದಿ ದೈವಮಾರ್ಗಿ. ಇನ್ನೊಂದು ಪ್ರಧಾನವಾಗಿ ಜ್ಞಾನವಾದಿ ಗುರುಮಾರ್ಗಿ.
5.ಒಂದು ಯಜ್ಞ, ಪೂಜೆ ಇತ್ಯಾದಿ ಸಾಂಕೇತಿಕ ಆಚರಣಾ ಪ್ರಧಾನವಾದುದು.ಇನ್ನೊಂದು ಕಸುಬು, ಶ್ರಮ, ಕಾಯಕ ಪ್ರಧಾನವಾದುದು.
6.ಒಂದು ಕರ್ಮಸಿದ್ಧಾಂತವನ್ನಾಧರಿಸಿದ್ದು ಇನ್ನೊಂದು ನಿಸರ್ಗನಡೆಯನ್ನಾಧರಿಸಿದ್ದು.
7.ಒಂದು ವರ್ಣಾಶ್ರಮ, ಅಸ್ಪøಶ್ಯತೆ ಇತ್ಯಾದಿ ತಾರತಮ್ಯವನ್ನಾಧರಿಸಿದ್ದು ಇನ್ನೊಂದು ಸಮಾನತೆಯನ್ನಾಧರಿಸಿದ್ದು.
8.ಒಂದು ವಿಧಿವಾದಿ ಇನ್ನೊಂದು ಕಾರ್ಯಕಾರಣವಾದವನ್ನು ಮುಂದಿಡುತ್ತದೆ.
9.ಒಂದು ದ್ವೈತಾದ್ವೈತಗಳನ್ನು ಮುಂದಿಟ್ಟರೆ ಇನ್ನೊಂದು ಬಯಲನ್ನು, ಶೂನ್ಯತೆಯನ್ನು, ಅದ್ವಯವನ್ನು ಮುಂದಿಡುತ್ತದೆ.
10.ಒಂದು ಮುಕ್ತಿಯ ಸಾಧ್ಯತೆ ಎಲ್ಲರಿಗೂ ಇಲ್ಲವೆಂದರೆ ಇನ್ನೊಂದು ಎಲ್ಲರಿಗೆ ತೆರೆಯುತ್ತದೆ.
ಇವೆಲ್ಲ ಚರ್ಚಾಸ್ಪದ ಸಂಗತಿಗಳು. ಕೊನೆಯಲ್ಲದ ಕೊನೆಯ ಮಾತು: ಪ್ರಜಾಸತ್ತೆ, ನಿಸರ್ಗವಿವೇಕ ಮತ್ತು ಬಹುತ್ವದಲ್ಲಿ ನಂಬಿಕೆ ಇದ್ದರೆ ಇವೆಲ್ಲವನ್ನೂ ದಾಟಿ ಕೂಡ ಎಲ್ಲರನ್ನೂ ಬಾಳಿಸಿ ತಾನೂ ಬಾಳಲು ಸಾಧ್ಯ.

Previous post ಒಳಗನರಿವ ಬೆಡಗು
ಒಳಗನರಿವ ಬೆಡಗು
Next post ಲಿಂಗದ ಹಂಗೇ…
ಲಿಂಗದ ಹಂಗೇ…

Related Posts

ನೀರಬೊಂಬೆಗೆ ನಿರಾಳದ ಗೆಜ್ಜೆ
Share:
Articles

ನೀರಬೊಂಬೆಗೆ ನಿರಾಳದ ಗೆಜ್ಜೆ

April 29, 2018 ಕೆ.ಆರ್ ಮಂಗಳಾ
“ಅನುಭಾವದಡುಗೆಯ ಮಾಡಿ, ಅದಕ್ಕನುಭಾವಿಗಳು ಬಂದು ನೀವೆಲ್ಲ ಕೂಡಿ…” ಚಿಕ್ಕವಳಿದ್ದಾಗಿನಿಂದ ಕೇಳುತ್ತಿದ್ದ ಸರ್ಪಭೂಷಣ ಶಿವಯೋಗಿಗಳ ಈ ಗಾಯನದ ತಂತು ಈಗಲೂ ಪದೇ ಪದೇ ಮನದಲ್ಲಿ...
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
Share:
Articles

ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ

March 9, 2023 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಹನ್ನೆರಡನೆಯ ಶತಮಾನ ವಿಶ್ವದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ದಾಖಲಿಸುವಂತಹುದು. ಇದಕ್ಕೆ ಕಾರಣರಾದವರು ಬಸವಾದಿ ಶರಣರು. ಅವರ ಪೂರ್ವದ ಮತ್ತು ಸಮಕಾಲೀನ ಸಮಾಜ ಇಂದಿಗಿಂತ...

Comments 13

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Sep 13, 2022 Reply

    ಅಪರೂಪದ ಓದಿಗೆ ತೊಡಗಿಸಿದ ನಟರಾಜ್ ಬೂದಾಳರಿಗೆ ಧನ್ಯವಾದಗಳು.ಒಳಗಣ್ಣಿನಲ್ಲಿ ಬೆಳಕು ಮೂಡಿಸುವ ಲೇಖನ.

  2. Vinaykumar Hubli
    Sep 13, 2022 Reply

    I think this is among the most significant information for me. And I am glad reading your article sir. The web site style is wonderful, very decent, the articles are really great.

  3. Anil Jadhav
    Sep 13, 2022 Reply

    ಪ್ರಸ್ತುತ ಲೇಖನವು ಕನಿಷ್ಟ ಎರಡು-ಮೂರು ಓದುಗಳನ್ನಾದರೂ ಬೇಡುತ್ತದೆ. ಅನೇಕ ಮಹತ್ವದ ವಿಷಯಗಳನ್ನು ಶರಣರಾದ ನಟರಾಜ ಬೂದಾಳು ಅವರು ಹೇಳಲು ಪ್ರಯತ್ನಿಸುತ್ತಿದ್ದಾರೆ, ಇವೆಲ್ಲವೂ ಕಾಲಚಕ್ರದಲ್ಲಿ ಬೇಕೆಂದೇ ಮರೆಮಾಚಿದ ಮಹತ್ತರ ಸಂಗತಿಗಳು. ಇಂತಹ ಬರವಣಿಗೆಗಳು ನಮ್ಮನ್ನು ಎಚ್ಚರಿಸಲು ಬಹಳ ಸಹಕಾರಿಯಾಗುತ್ತವೆ.

  4. Basalingappa g.P
    Sep 14, 2022 Reply

    ಅಕ್ಷರ, ಪಠ್ಯ, ಓದು- ವ್ಯಕ್ತಿಯೊಬ್ಬನನ್ನು ಸುಶಿಕ್ಷಿತನನ್ನಾಗಿಸಲು ಬೇಕೇ ಬೇಕಾದ ಸಾಧನಗಳು. ಸುಶಿಕ್ಷಿತನಾಗಲು ಹೊರಟ ನವ ನಾಗರಿಕತೆಯ ಮಾನವನನ್ನು ಇವುಗಳಲ್ಲೇ ದಿಕ್ಕುತಪ್ಪಿಸಿದ ಇತಿಹಾಸದ ಸೂಕ್ಷ್ಮಗಳನ್ನು ಇಲ್ಲಿ ಓದಿ ಬಹಳ ಆಶ್ಚರ್ಯ ಮತ್ತು ಆಘಾತವಾಯಿತು. ಈ ಸುಳಿಯೊಳಗೆ ಸಿಲುಕಿದ ಇವತ್ತಿನ ಜನಸಮೂಹ ಇದರಿಂದ ಪಾರಾಗುವ ಬಗೆ ಹೇಗೆ?

  5. Kiran Raipur
    Sep 15, 2022 Reply

    ಇವತ್ತಿನ ಎಲ್ಲಾ ಧಾರ್ಮಿಕ ತಿಕ್ಕಾಟಗಳಿಗೆ ಕಾರಣವೇ ತಮ್ಮ ಧರ್ಮವೇ ಶ್ರೇಷ್ಠ ಎನ್ನುವ ಧೋರಣೆ. ಧಾರ್ಮಿಕ ವ್ಯಕ್ತಿ ಎಂದರೆ ಈಗ ನಯಾಪೈಸೆ ಸಹನೆ ಇಲ್ಲದವನು ಎನ್ನುವ ಅರ್ಥವೇ ಮನಸ್ಸಿಗೆ ಬರುತ್ತದೆ. ಯಾರಾದರೂ ಇವರು ಧಾರ್ಮಿಕ ವ್ಯಕ್ತಿ ಎಂದು ಪರಿಚಯಿಸಿದರೆ ಅವರಿಂದ ದೂರವಿರಬೇಕು ಎನ್ನುವ ಭಾವನೆ ಬರುವುದಕ್ಕೆ ಇದೇ ಕಾರಣ ಇರಬಹುದು. ತಾವೇ ಸರಿ ಎನ್ನುವ ಧೋರಣೆಯನ್ನು ಬೆಳೆಸುವ ಧರ್ಮಗಳಾದರೂ ಯಾಕೆ ಬೇಕು ಎನ್ನುವ ನನ್ನ ಮನದ ಇಂಗಿತಕ್ಕೆ ಪೂರಕವಾದ ವಿಚಾರಧಾರೆಯನ್ನು ಇಲ್ಲಿ ಕಂಡೆ.

  6. ವಿರೂಪಾಕ್ಷ, ಗಂಗಾವತಿ
    Sep 18, 2022 Reply

    ಶ್ರಮಣ ಧಾರೆಗಳ ಚಿಂತನೆಗಳನ್ನು ಮರೆಮಾಚುತ್ತಾ ಬಂದ ವೈದಿಕ ಧಾರೆಗಳು ಇವತ್ತು ಎಲ್ಲರ ಮನಸ್ಸಿನಲ್ಲೂ, ಬದುಕಿನಲ್ಲೂ ಹಾಸುಹೊಕ್ಕಾಗಿವೆ. ಮರೆಯಾದ ಮಹಾಮಾರ್ಗವನ್ನು ಮುನ್ನಲೆಗೆ ತರಬೇಕೆನ್ನುವ ಲೇಖನದ ತುಡಿತ ಹೊಸ ಪೀಳಿಗೆಗೆ ಅವುಗಳನ್ನು ದಾಟಿಸಬೇಕೆನ್ನುವ ಆಶಯಗಳು ನಿಜಕ್ಕೂ ಎಲ್ಲರನ್ನೂ ತಲುಪಲೇ ಬೇಕು. ಅಕ್ಕಾ, ಒಂದೊಳ್ಳೆಯ ಲೇಖನ ಓದಿಸಿದ್ದಕ್ಕೆ ಧನ್ಯವಾದಗಳು. ಬೂದಾಳು ಶರಣರಿಗೆ ಅನಂತ ಶರಣುಗಳು.

  7. Kamalesh M
    Sep 18, 2022 Reply

    I think this is one of the most important information for me. I am not just reading,but studying this article. The website taste is perfect, the articles in reality are great.

  8. ಪೆರೂರು ಜಾರು, ಉಡುಪಿ
    Sep 18, 2022 Reply

    ನನಗಂತೂ ವಿದ್ಯೆ ಸರಸ್ವತಿಯೂ ಕೊಡಲಿಲ್ಲ, ಗಣಪತಿಯೂ ಕೊಡಲಿಲ್ಲ, ಮಿಶನರಿಗಳ ತಳಪಾಯ, ಫುಲೆ ಸಾವಿತ್ರಿಬಾಯಿಯವರ ತ್ಯಾಗ ನನ್ನ ಅಕ್ಷರದ ನೆಲೆಗಟ್ಟು.

  9. ಗೌರಿಶಂಕರ ಗಿರಿನಗರ
    Sep 23, 2022 Reply

    ಶ್ರಮಣ ಧಾರೆ ಹಾಗೂ ವೈದಿಕ ಧಾರೆಗಳ ಕುರಿತಾದ ಸ್ಪಷ್ಟ ಚಿತ್ರಣ ನಮ್ಮಲ್ಲಿ ಬಹುತೇಕರಲ್ಲಿ ಇಲ್ಲವೇ ಇಲ್ಲ. ಈ ಐತಿಹಾಸಿಕ ಪರಂಪರೆಯ ಬಗೆಗೆ ಗೊತ್ತಿಲ್ಲದಿದ್ದರೆ ಮತ್ತೆ ಮಹಾಮರೆವಿಗೆ ಒಳಗಾಗುತ್ತಲೇ ಇರುವ ಮೋಸ ತಿಳಿಯದೇ ಹೋಗುತ್ತದೆ. ಅವೈದಿಕ ಪರಂಪರೆಗಳು ಎಷ್ಟೇ ಜನಪರವಾಗಿದ್ದರೂ, ಜಗತ್ತಿಗೆ ಹಿತಕಾರಿಯಾಗಿದ್ದರೂ ಯಾಕೆ ಜನಪ್ರಿಯವಾಗಲಿಲ್ಲ ಎನ್ನುವುದು ಮಾತ್ರ ನನಗೆ ಇವತ್ತಿಗೂ ಬಗೆಹರಿಯದ ಪ್ರಶ್ನೆ.

  10. Jayaprakash Gowdar
    Sep 23, 2022 Reply

    ಪ್ರಮಾಣಗಳನ್ನು ಅಂತಿಮವೆಂದು ಬುದ್ಧನಾಗಲಿ, ಬಸವಾದಿ ಶರಣರಾಗಲಿ ಒಪ್ಪಿಕೊಳ್ಳಲಿಲ್ಲ ಎನ್ನುವ ಮಾತು ನನ್ನ ಅನೇಕ ಗೊಂದಲಗಳನ್ನು, ತಾತ್ವಿಕ ಸಮಸ್ಯೆಗಳನ್ನು ಬಗೆಹರಿಸಿತು, ಶರಣಾರ್ಥಿಗಳು.

  11. Deepa Jigajinigi
    Sep 23, 2022 Reply

    ವೇದೋಪನಿಷತ್ತುಗಳನ್ನು ಪ್ರಶ್ನಿಸಬಾರದೆನ್ನುವುದು, ಕುರಾನ್ ಮತ್ತು ಬೈಬಲಗಳಲ್ಲಿ ಇರುವುದೇ ಪರಮ ಸತ್ಯವೆಂದು ಭಾವಿಸುವುದು ಮನುಷ್ಯನ ವೈಚಾರಿಕ ಸ್ವಾತಂತ್ರ್ಯವನ್ನು ಧರ್ಮದ ಹೆಸರಲ್ಲಿ ನಿರ್ಬಂಧಿಸುವುದೇ ಆಗಿದೆಯಲ್ಲವೇ ಸರ್? ಹಾಗಾದರೆ ಧರ್ಮಗ್ರಂಥಗಳೆಲ್ಲವೂ ಮನುಷ್ಯನ ಕೈ ಕಟ್ಟಿಹಾಕಿದ ಬೇಡಿಗಳೆಂದೇ ನನಗೆ ಕಾಣಿಸುತ್ತವೆ.

  12. ಪರಶುರಾಮ, ಬೆಂಗಳೂರು
    Sep 26, 2022 Reply

    ಅಕ್ಷರ, ಪಠ್ಯ, ಮತ್ತು ಓದು – ಈ ಮೂರರ ನಿಯಂತ್ರಣದ ಇತಿಹಾಸದ ಪುಟಗಳನ್ನು ತಿರುವುತ್ತ ಹೋದರೆ ನಾವು ಭಾರತೀಯ ದರ್ಶನಗಳನ್ನು ಪ್ರವೇಶಿಸಿರುತ್ತೇವೆ! ಎಲ್ಲಿಂದ ಎಲ್ಲಿಗೆ ಸಂಬಂಧ ಎಂದುಕೊಂಡೆ,… ಸಂಬಂದವಿದೆ, ಬಹು ದೊಡ್ಡ ಸಂಬಂಧವೇ ಇದೆ… ನಮ್ಮನ್ನು ಎಲ್ಲಾ ರೀತಿಯಿಂದ ಯೋಚನೆಗೆ ಹಚ್ಚಿದ ಉತ್ತಮ ಬರಹ ನೀಡಿದ್ದೀರಿ ಸರ್, ಶರಣುಗಳು.

  13. Bhuvanesh Davangere
    Sep 26, 2022 Reply

    ಓದುತ್ತಾ ಹೋದಂತೆ ದಿಕ್ಕುತಪ್ಪಿದಂತಾಯಿತು, ನಾವೆಲ್ಲಾ ಸ್ಕೀಜೋಫ್ರೇನಿಯಾ ಕಾಯಿಲೆಗೆ ಒಳಗಾಗಿರೋದು ಸತ್ಯಸ್ಯ ಸತ್ಯ… ಯಾವುದನ್ನ ನಂಬುವುದು, ಯಾವುದನ್ನ ತ್ಯಜಿಸುವುದು… ಸಮಾಜ ಪೂರಾ ದಿಕ್ಕುತಪ್ಪಿಬಿಟ್ಟಿದೆ!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ನಾನು ಯಾರು?
ನಾನು ಯಾರು?
December 8, 2021
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಖಾಲಿ ಕೊಡ ತುಳುಕಿದಾಗ…
ಖಾಲಿ ಕೊಡ ತುಳುಕಿದಾಗ…
October 5, 2021
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
Copyright © 2023 Bayalu