Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತತ್ವಪದಗಳ ಜಾಡು ಹಿಡಿದು…
Share:
Articles October 6, 2020 ಮಲ್ಲಿಕಾರ್ಜುನ ಕಡಕೋಳ

ತತ್ವಪದಗಳ ಜಾಡು ಹಿಡಿದು…

ಬಾಯಿಲೊಂದಾಡ್ತೀರಿ/
ಮನಸಿನ್ಯಾಗೊಂದ ಮಾಡ್ತೀರಿ /
ಬರೆದಿಟ್ಟದ್ದೋದಿಕೊಂಡು/
ಭ್ರಾಂತಿಗೆಟ್ಟು ಹೋಗ್ತೀರಿ //೧//
ಶೀಲವಂತರಂತೀರಿ/
ಸುಳ್ಳೇ ಶೀಲ ಮಾಡ್ತೀರಿ//
ಸಂತೆಯೊಳಗಿನ ಲಿಂಗಕಟ್ಟಿಕೊಂಡು/
ಸತ್ತೇನಾಶ ಆಗಿಹೋಗ್ತೀರಿ //೨//
ಮುಸಲ್ಮಾನರಂತೀರಿ/
ತುರ್ತು ಸುಂತಿ ಮಾಡ್ತೀರಿ//
ಉಸಲ ಬಿಟ್ಟು ಫಾತೇ ಕೊಟ್ಟು/
ಬಿಸ್ಮಿಲ್ಲಾ ಅಂತೀರಿ //೩//
ಬ್ರಾಹ್ಮಣರಂತ ಹೇಳ್ತೀರಿ/
ನೀರಾಗ ಮುಳಮುಳುಗೇಳ್ತೀರಿ//
ಪಾಪದಿಂದ ಸುಟಗೊಂಡು/
ದೀಪಾ ಬಡಕೊಂಡು ಹೋಗ್ತೀರಿ //೪//
ಸಾಧುರಂತ ಹೇಳ್ತೀರಿ/
ಸೋಹಂ ಭಜನಿ ಮಾಡ್ತೀರಿ//
ಅಡ್ಡ ದುಡ್ಡಿಗೆ ಆಸೆಮಾಡಿ/
ದಡ್ಡರಾಗಿ ಹೋಗ್ತೀರಿ //೫//
ಪಟ್ಟದ ಚರಮೂರ್ತಿ ಅಂತೀರಿ/
ಪರಮಾತ್ಮನ ನೆನಿತೀರಿ//
ಪರನಾರಿ ಸ್ನೇಹಮಾಡಿ/
ಗುಡ್ಡದ ಮಹಾಂತಗ ಹಾಕ್ತೀರಿ //೬//
ಇದು ಕಡಕೋಳ ಮಡಿವಾಳಪ್ಪನವರ ತತ್ವಪದ. ಜಾತಿ, ಮತ, ಧರ್ಮ ಮತ್ತು ಅವುಗಳ ಆಚರಣೆ ಕುರಿತು ವಸ್ತುನಿಷ್ಠ ನಿರಾಕರಣೆ ತೋರುವ ಪ್ರತಿಭಟನಾ ಕಾವ್ಯದ ಸಿಡಿಮದ್ದಿನ ನುಡಿಗಟ್ಟುಗಳಿವು.
ಯಾವುದನ್ನು ಒಂದೆರೆಡು ಶತಮಾನಗಳ ಕಾಲ ಕನ್ನಡ ಸಾಹಿತ್ಯ ಚರಿತ್ರೆಕಾರರು ಕತ್ತಲೆ ಯುಗಗಳೆಂದು ಕರೆದರೋ ಅಂತಹ ಕತ್ತಲೆ ಯುಗಗಳ ಬಯಲಲ್ಲೇ ಹುಟ್ಟಿಕೊಂಡ ಮಹಾಬೆಳಕಿನ ವಜ್ರ ಜಲಪಾತ ಧಾರೆಗಳೇ ತತ್ವಪದಗಳು. ಅಂತೆಯೇ ಇವತ್ತಿಗೂ ಅಮವಾಸ್ಯೆಯ ಕತ್ತಲು, ಹೆಣದ ಸಾನಿಧ್ಯ, ಊರಾಚೆಯ ಗವಿ, ಗುಡಿ, ಗುಂಡಾರ, ಗುಡಿಸಲು, ಗುಂಪಾ, ಕೊಂಪೆಗಳಲ್ಲಿ ಅನುರಣಿಸುವ ಹಾಡುಗಬ್ಬಗಳೇ ತತ್ವಪದಗಳು. ಅವು ಏಕಾಂತ ಮತ್ತು ಲೋಕಾಂತಗಳೆರಡರಲ್ಲೂ ಪ್ರಸ್ತುತಗೊಳ್ಳುವ ಗಾಯನ ಪ್ರಸ್ಥಾನಗಳು. ಹೀಗೆ ಕತ್ತಲೆ ಯುಗದಲ್ಲಿ ಜನ್ಮತಾಳಿದ ತತ್ವಪದ ಸಾಹಿತ್ಯಕ್ಕೂ ಮತ್ತು ಮಡಿವಂತ ಮನಸುಗಳು ಅಶುಭ, ಅಮಂಗಳವೆಂದು ಭಾವಿಸಲಾಗುವ ಹೆಣ, ಸಾವು, ಅಮವಾಸ್ಯೆಯ ಕತ್ತಲೆಗೂ ಅವಿನಾಭಾವ ಸಂಬಂಧ. ಇವತ್ತಿಗೂ ತತ್ವಪದಗಳು ಯಥೇಚ್ಛವಾಗಿ ಬದುಕಿರುವ, ಕೇಳಿಬರುವ ಸಂದರ್ಭೋಚಿತ ಸಮಯ ಮತ್ತು ಜಾಗಗಳವು. ಗುರುಪುತ್ರ, ಪುತ್ರಿಯರು ಇಲ್ಲವೇ ಗುರು- ಶಿಸುಮಕ್ಕಳು ತಮ್ಮ ಅಂತರಂಗದ ಸಮಕ್ಷಮದಲ್ಲಿ ತನ್ನ ತಾನರಿವ, ತಾನೇ ತಾನಾಗಿ, ತಾನೆರಡೊಂದಾಗಿ ಜನ್ಮತಾಳುವ ಗದ್ಯಗೀತೆಗಳೇ ತತ್ವಪದ ಸಾಹಿತ್ಯ. ನಿಗಿ ನಿಗಿ ಕೆಂಡದ ಧುನಿಯ ಸುತ್ತಲೂ ದುಂಡಾಕಾರದಲ್ಲಿ ಕುಂತ ಸಾಧುಗಳು, ಗುರು ಶಿಸುಮಕ್ಕಳು ಭಂಗಿ ಸೇವಿಸುತ್ತಾ ಧುನಿಯ ಅಗ್ನಿಕುಂಡಕ್ಕೆ ಸರಾಯಿ ಸುರಿಯುತ್ತಾ ಏಕತಾರಿ, ಚಿನ್ನಿ, ತಾಳ, ಚಳ್ಳಮ, ದಮಡಿ ನುಡಿಸುತ್ತಾ ತತ್ವಪದ ಹಾಡುವುದನ್ನು ಕನ್ನಡನಾಡಿನ ತುಂಬೆಲ್ಲ ಕಣ್ತುಂಬಿಸಿಕೊಳ್ಳ ಬಹುದಾದ ಜವಾರಿತನದ ಜನಸಂಸ್ಕೃತಿ.
ಅಷ್ಟು ಮಾತ್ರವಲ್ಲದೇ ಅಲ್ಲಿ ಕೆಂಡದ ಧುನಿಯ ಸುತ್ತಲೂ ತತ್ವಪದಗಳ ಕುರಿತಾಗಿ ವಿಸ್ತೃತ ಚರ್ಚೆಗಳು ಜರುಗುತ್ತವೆ. ಅನುಭವ ಮಂಟಪ ಮಾದರಿಯ ಅನುಭಾವ ಸಂವಾದ ಅದಾಗಿರುತ್ತದೆ. ಅವರು ಸೆರೆ, ಭಂಗಿ ಸೇವಿಸುವುದು ಅಲ್ಲಿ ನಗಣ್ಯ. ನಶೆ ಅವರ ಪಾಲಿಗದು ಒಂದು ಬಗೆಯ ಜ್ಞಾನ. ಆ ನಶೆಯೇ ಬೇರೆ. ಅದು ಉತ್ಕಟೋನ್ಮಾದ ಜ್ಞಾನ ಎಂತಲೂ ಕರೆಯಬಹುದು. ಹೀಗಾಗಿ ಅದು ಧುನಿಯ ನಿಗಿನಿಗಿ ಕೆಂಡದ ಬೆಳಕಿನಲ್ಲಿ ಜರುಗುವ ತಾತ್ವಿಕತೆಯ ಸೂಕ್ಷ್ಮಾನುಸಂಧಾನ. ತತ್ವಪದ ಸಾಹಿತ್ಯ ಮತ್ತು ಸಾಮಾಜಿಕ ಚಿಂತನ – ಮಂಥನ ಅದಾಗಿರುತ್ತದೆ. ದಟ್ಟವಲ್ಲದಿದ್ದರೂ ಈ ಸಾಧುರ ಮ್ಯಾಳವು ಅನುಭವ ಮಂಟಪದ ಪುಟ್ಟ ನೆನಪು ಮೂಡಿಸುವುದನ್ನು, ಅದರ ಸಮೀಕರಣ, ನಾದಕಂಪನಗಳನ್ನು ಖಂಡಿತ ಅಲ್ಲಗಳೆಯಲಾಗದು. ಕಲ್ಯಾಣ ಕರ್ನಾಟಕದಲ್ಲಿ ಇಂತಹ ಸಾಧುರ ಮೇಳಗಳು ಹೆಚ್ಚಾಗಿ ಕಂಡು ಬರುತ್ತವೆ. ಹಾಗೆಯೇ ಬಯಲುಸೀಮೆಯ ಬೇರೆ, ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರಿನ ಸಂಪ್ರದಾಯಗಳಿರುವುದನ್ನು ಗುರುತಿಸಬಹುದು. ಆದರೆ ಅವು ಸ್ಥಳೀಯ ಹೆಸರಿನೊಂದಿಗೆ ಎಲ್ಲಕಡೆಗೂ ಗುರುಮಾರ್ಗದ ಹೆಜ್ಜೆ ಗುರುತುಗಳದ್ದೇ ಹೆಗ್ಗಳಿಕೆ. ಅದೊಂದು ಸಾವಯವ ಸಂಬಂಧ.

ಅನಾಹತ ನಾದದ ಕಾವ್ಯ ಮಾರ್ಗ
ತತ್ವಪದಕಾರರು ತಾವು ದಿನನಿತ್ಯದ ಬದುಕಲ್ಲಿ ಕಂಡುಂಡ ಹತ್ತುಹಲವು ನೋವು ನಲಿವು, ಸಾಮಾಜಿಕ ಅನಿಷ್ಟ, ಮನುಷ್ಯ ವಿರೋಧಿ ನಿಲುವುಗಳನ್ನು, ಪ್ರಭುತ್ವದ ಅನಾಚಾರಗಳನ್ನು ಯಾವ ಭಿಡೆ, ಮುಲಾಜು, ಮುರವತ್ತುಗಳಿಗೆ ಎಡೆ ಮಾಡಿಕೊಡದೆ ಪದಗಳ ಮೂಲಕ ಜಾಡಿಸಿ, ಹಾಡಿ ಪ್ರತಿಭಟಿಸಿದ್ದಾರೆ. ನಿರಕ್ಷರಿಗಳ ಈ ಸಾಕ್ಷರ ಮಂತ್ರಗಳು ಇತ್ತೀಚೆಗೆ ಗ್ರಂಥಗಳ ರೂಪದಲ್ಲಿ ಪ್ರಕಟಗೊಂಡಿವೆ. ತತ್ವಪದಗಳನ್ನು ಓದಿ ಅರಿಯುವ ಬದಲು ಹಾಡಿ ಇಲ್ಲವೇ ಹಾಡಿದ್ದನ್ನು ಆಲಿಸಿ ಅರಿಯುವುದೇ ಸೂಕ್ತ. ಹಾಗಾದಾಗಲೇ ಈ ಪದಗಳು ಮನಸ್ಸಿಗೆ ಮುಟ್ಟಿ ಹೆಚ್ಚು ಅರ್ಥ ಆಗಬಲ್ಲವು. ನೂರಾರು ವರ್ಷಗಳ ಹಿಂದೆ, ಅಂದು ಯಾರೂ ಈ ಸಾಹಿತ್ಯವನ್ನು ಲೆಕ್ಕಣಿಕೆ ಹಿಡಿದು ಹಾಳೆಗಳ ಮೇಲೆ ಬರೆಯಲಿಲ್ಲ. ಅದು ಗುರು- ಶಿಶುಮಕ್ಕಳ ಮುಖಾಬಿಲೆಯಲ್ಲಿ ಜರುಗುವ ದೇಹ ಮತ್ತು ಧ್ವನಿಗಳ ಅನುಸಂಧಾನ. ಆಯಾ ಕಾಲದ ಸಾಮಾಜಿಕ ಘಟನೆಗಳ ಸಂದರ್ಭಗಳಲ್ಲಿ ಹಾಡುಗಳಾಗಿ ಹುಟ್ಟಿಕೊಂಡ ತತ್ವಪದವು ಪ್ರತಿಭಟನೆಯ ಕಾವ್ಯ. ಹಾಗಂತ ಪ್ರತಿಭಟನೆಯ ಪಂಥಕ್ಕಷ್ಟೇ ಅವನ್ನು ಸೀಮಿತಗೊಳಿಸಬಾರದು.
ಎಡ ಮತ್ತು ಬಲ ಪಂಥಗಳೆರಡರ ಅತಿರೇಕಗಳನ್ನು ಮೀರಿದ, ಎಂಥದೇ ಕಾಲಕ್ಕೂ ಅಂತಃಕರಣದ ಅಂತಃಶ್ರೋತವನ್ನು ಕಳಕೊಳ್ಳದ ಅನುಸಂಧಾನ ಮಾರ್ಗವೇ ತತ್ವಪದ ಸಾಹಿತ್ಯ. ಕೆಲವು ಮಂದಿ ತತ್ವಪದ ಸಾಹಿತ್ಯ ಮೀಮಾಂಸಕರು ಅದನ್ನು ‘ಮಧ್ಯಮ’ ಮಾರ್ಗವೆಂತಲೂ, ‘ವಿಹಂಗ’ ಮಾರ್ಗವೆಂತಲೂ ಕರೆಯುತ್ತಾರೆ. ಇಷ್ಟು ಮಾತ್ರ ಖರೇ: ಅಲ್ಲಿ ಯಾವುದೂ, ಯಾರೂ ಮುಖ್ಯ- ಅಮುಖ್ಯರೆಂಬುದೇ ಇಲ್ಲ. ಏನೂ ಇಲ್ಲದ ಮತ್ತು ಎಲ್ಲ ಇರುವ, ಇದ್ದುದ್ದೆಲ್ಲವ ಮತ್ತು ಇಲ್ಲದ್ದೆಲ್ಲವ, ಇದ್ದು ಮತ್ತು ಇಲ್ಲದ್ದೆನ್ನುವ, ಇಲ್ಲದ್ದು ಮತ್ತು ಇದ್ದದ್ದೆನ್ನುವ, ಇದ್ದದ್ದು ಮತ್ತು ಇಲ್ಲದ್ದು ಎಲ್ಲ ಒಂದೆನ್ನುವ… ಹೌದು ಅಲ್ಲೆನ್ನುವ, ಮತ್ತು ಅಲ್ಲ ಹೌದೆನ್ನುವ ಹೌದು ಅಲ್ಲ ಎಲ್ಲ ಬಲ್ಲ ಮಹಾತ್ಮರ ಅನುಕ್ಷಣ ಮತ್ತು ಅನುಸಂಧಾನದ ನಿರ್ಗುಣ ಗುರುಮಾರ್ಗವೇ ತತ್ವಪದ. ಅದು ಯಾವ ಏಟಿಗೂ ಸಿಗದ ಅನಾಹತ ನಾದದ ಕಾವ್ಯಮಾರ್ಗ.
ಹೀಗೆ ಗುರುಮಾರ್ಗದಲ್ಲಿ ಸಾಗಿಬಂದ ತತ್ವಪದಕಾರರು ತಮ್ಮ ಗುರುವಿನ ಮೇಲಿನ ಪ್ರೀತಿಯ ದ್ಯೋತಕವಾಗಿ ಗುರುವಿನ ಹೆಸರಿನ ಅಂಕಿತನಾಮಗಳನ್ನು ಪದದ ಕೊನೆಯಲ್ಲಿ ಸೇರಿಸಿ ಹಾಡುತ್ತಾರೆ. ಕೆಲವರು ತಾವು ವಾಸವಾಗಿದ್ದ ನೆಲ, ಊರು ದೇಶದೊಳಧಿಕವಾದುದೆಂಬಂತೆ, ಅಂತಹ ವಾಸವುಳ್ಳ ಊರೆಂದು ಹಾಡುತ್ತಾರೆ. ಇಲ್ಲವೇ ಸ್ಥಳೀಯ ದೈವದ ಹೆಸರು ಕೊಂಡಾಡುವ ಅಂಕಿತಗಳನ್ನು ಸೇರಿಸುವುದು ವಾಡಿಕೆ. ಕೆಲವೊಮ್ಮೆ ಓರ್ವ ತತ್ವಪದಕಾರನ ಪದವನ್ನು ಬೇರೊಬ್ಬ ತತ್ವಪದಕಾರನ ಹೆಸರಿಗೆ ಸೇರಿಸಿ ಹಾಡುತ್ತಾರೆ. ಅದು ಭಜನೆ ಗಾಯಕರು ಮಾಡುವ ಅಚಾತುರ್ಯವೇ ಹೊರತು ಯಾವುದೇ ತತ್ವಪದಕಾರರು ಹಾಗೆ ಮಾಡಲಾರರು.

ಸಿದ್ದಪತ್ರಿ ಮತ್ತು ಬಿಲ್ವಪತ್ರೆಗಳು
ಇವೆರಡು ತತ್ವಪದಗಳ ಹಾಡುಗಾರಿಕೆಯ ಪ್ರಮುಖ ಅಂಶಗಳು. ಅವರು ತತ್ವಪದ ಹಾಡಿಗೆ ಮುನ್ನ ಮತ್ತು ಹಾಡುತ್ತಲೇ ಸೇವಿಸುವ ಗಾಂಜಾದ ಹೆಸರೇ ಸಿದ್ಧಪತ್ರಿ. ಗಾಂಜಾ ತಂಬಾಕು ಸಾಧಕರ ಪರಿಭಾಷೆಯಲ್ಲಿ ಸಿದ್ಧಪತ್ರಿ. ಸಾರಾಯಿ ಅವರ ಪರಿಭಾಷೆಯಲ್ಲಿ ಜ್ಯೋತಿ, ಪರಂಜ್ಯೋತಿ, ಪರಮಶಂಕರಿಯಂತೆ. ಅದೊಂದು ಶುದ್ಧ ಆನುಭಾವಿಕ ಲೋಕ. ಇನ್ನೇನು ಹಾಡುಗಾರಿಕೆ ಮುಗೀತು ಮಂಗಳಾರತಿ ಮಾಡಿ ಹಾಕುವುದೇ ಬಿಲ್ವಪತ್ರೆ. ಹಾಡುವ ಪ್ರಕ್ರಿಯೆಗೆ ಅದು ಅಂತ್ಯ ಎಂದುಕೊಂಡರೆ ಗಣಸ್ತುತಿಯೊಂದಿಗೆ ಮತ್ತೆ ಆರಂಭವೇ ಆಗುತ್ತದೆ. ತತ್ವಪದಕಾರರ ದೃಷ್ಟಿಯಲ್ಲಿ ಅದು ಆದಿ ಅಂತ್ಯವಿಲ್ಲದ ಜ್ಞಾನುಸಿಂಧು ಸಾಹಿತ್ಯ ಪ್ರಕಾರ. ಬರೀ ತತ್ವಪದಗಳಲ್ಲ ಅವು ತತ್ವಜ್ಞಾನ ಪದಗಳೂ ಹೌದು. ಕೈವಲ್ಯ, ಅನುಭಾವ, ಸ್ವರವಚನಗಳ ಸ್ವರೂಪದಲ್ಲಿ ಕನ್ನಡದ ವಿವೇಕ, ಅಸ್ಮಿತೆ, ಸಾಹಿತ್ಯದ ಶ್ರೀಮಂತಿಕೆಯನ್ನು ಎತ್ತಿಹಿಡಿದ ಅನನ್ಯ ಸಾಂಸ್ಕೃತಿಕ ಪರಂಪರೆಯೇ ತತ್ವಪದ ಸಾಹಿತ್ಯ. ಈಗಲೂ ಅದು ಮೌಖಿಕ ಪರಂಪರೆಯಾಗಿ ಹೆಚ್ಚು ಪ್ರಚಲಿತ. ತತ್ವಪದಗಳು ಆಡುವ, ನುಡಿವ ಮಾತುಗಳಲ್ಲ. ಹಾಡುವ ಕಾವ್ಯಗಳು. ಅದು ಬಹುತ್ವ ಧ್ವನಿಸುವ ಬಹುಪಂಥೀಯ ಅನುಸಂಧಾನದ ಸಾಧ್ಯತೆಗಳು. ಹಲವು ಮೀಮಾಂಸೆಗಳ ಮಹಾ ಮೊತ್ತವೇ ತತ್ವಪದ ಸಾಹಿತ್ಯ. ಜತೆಗೆ ಹೇಳಲೇಬೇಕಾದ ಮತ್ತೊಂದು ಸತ್ಯ ಏನೆಂದರೆ ತತ್ವಪದ ಎಂಬುದು ಏಕಕಾಲಕ್ಕೆ ಸೃಜನೆ ಮತ್ತು ವಿಸರ್ಜನೆ ಮೀಮಾಂಸೆಯೂ ಹೌದು. ತನ್ನ ತಾನು ತಿಳಿಯುವ, ತನ್ನರಿವಿನ ಸಾಕ್ಷಾತ್ಕಾರ ತಾನೇ ಹುಡುಕಿಕೊಳ್ಳುವ ದಿಕ್ಸೂಚಿ ಕಾವ್ಯ.
ಅದಕ್ಕೆಂದೇ ತತ್ವಪದಕಾರ ಹೇಳುವುದು ಹೀಗೆ-
ತನ್ನ ತಾನು ತಿಳಿದ ಮೇಲೆ
ಇನ್ನೇನಿನ್ನೇನು/
ತನ್ನಂತೆ ಸರ್ವರ ಜೀವ
ಮನ್ನಿಸಿ ಮೂಕಾದ ಮೇಲೆ/
ಇನ್ನೇನಿನ್ನೇನೋ//೧//
ವಚನ ಸಾಹಿತ್ಯ ಆಂದೋಲನದ ಪ್ರಭಾವ, ಅದರಲ್ಲೂ ಅಲ್ಲಮಪ್ರಭುವಿನ ಪ್ರೇರಣೆ ಮತ್ತು ಪ್ರಭಾವದ ನೆರಳು ತತ್ವಪದಕಾರರ ಮೇಲೆ ಹಾಳತವಾಗಿ ದಟ್ಟೈಸಿದೆ. ಹಾಗೆ ನೋಡಿದರೆ ಜಾಗತಿಕ ನೆಲೆಗಳಲ್ಲಿ ಗುರುತಿಸಲೇಬಹುದಾದಂತಹ ವಚನ ಸಾಹಿತ್ಯ ಚಳವಳಿಯನ್ನೇ ಎಂಟುನೂರು ವರ್ಷಗಳ ಕಾಲ ತಡವಾಗಿ ಗುರುತಿಸಿದ ನಮ್ಮ ಸಾಹಿತ್ಯ ಚರಿತ್ರೆಕಾರರು ತತ್ವಪದಗಳನ್ನು, ತತ್ವಪದಕಾರರನ್ನು ಪ್ರಜ್ಞಾಪೂರ್ವಕವಾಗಿಯೋ, ಇಲ್ಲವೆ ಅಪ್ರಜ್ಞಾಪೂರ್ವಕವಾಗಿಯೋ ಅಜ್ಞಾತದಲ್ಲಿರಿಸಿದರು. “ಸುಶಿಕ್ಷಿತರ ವೀಣೆಗಳು, ತತ್ವಪದಗಳ ಕರಿ ಕುಂಬಳಕಾಯಿಯ ಏಕತಾರಿಗಳನ್ನು ಹೊರಗಿಟ್ಟವು” ಎಂಬ ಅಲ್ಲಗಳೆಯಲಾಗದ ಮಾತಿದೆ. ಹೀಗಾಗಿ ತತ್ವಪದಕಾರರನ್ನು ಅಜ್ಞಾತಾವಧೂತರು, ಅನಾಮಿಕ ಅಚಲರು, ಆರೂಢರೆಂಬ ಹೆಸರಿಂದ ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಸಾಹಿತ್ಯ ಚರಿತ್ರೆಕಾರರು ಗುರುತಿಸಿ ಪ್ರತೀತಿಗೊಳಿಸುತ್ತಿರುವ ನಿದರ್ಶನಗಳಿವೆ. ಭಾರತೀಯ ಅಧ್ಯಾತ್ಮ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಸಂವಿಧಾನಗಳಲ್ಲಿ ಶ್ರಮಣ ಧಾರೆಗೆ ಮಹತ್ವದ ಸ್ಥಾನವಿದೆ. ಅಂತಹ ಶ್ರಮಿಕ, ಕಾಯಕ ಧಾರೆಗಳಿಂದ ಹುಟ್ಟಿಕೊಂಡುದು ತತ್ವಪದಸಾಹಿತ್ಯ. ಎಲ್ಲ ಬಗೆಯ ಅಹಮಿಕೆಗಳನ್ನು ಕಳಕೊಳ್ಳುತ್ತಲೇ ಶೂನ್ಯಗೊಳ್ಳುವ, ಬಯಲು ಕಟ್ಟಿಕೊಳ್ಳುವ ಗುರುಮಾರ್ಗ ಪರಂಪರೆ ಅದು. ಅಲ್ಲಿ ಹಲವು ಕಾಡುಗಳ ಹತ್ತು ಹಲವು ಸಹಸ್ರ, ಸಾವಿರ ಬಗೆಯ ಮಹಾವೃಕ್ಷ, ಗಿಡ, ಮರಗಳ ಮಹಾಬೆರಗು, ಬೆಡಗುಗಳ ರಹಸ್ಯನಿಧಿಯ ಬೇರುಗಳಿಂದ ಅವತರಿಸಿದ್ದು ತತ್ವಪದ ಸಾಹಿತ್ಯ.
ಹೌದು, ತುಂಬ ಸರಳ ಮತ್ತು ಸಹಜವಾಗಿ ಗಮನಿಸುವುದಾದರೆ: ತತ್ವಪದ ಎಂಬ ಪದದಲ್ಲೇ ಎರಡು ಪ್ರಮುಖ ಅರ್ಥ ಸಂಗತಿಗಳಿವೆ. ಒಂದನೆಯದು : ತತ್ವ ಅಂದರೆ ಫಿಲಾಸಪಿ. ಎರಡನೆಯದು: ಪದ ಅಂದರೆ ಹಾಡು, ಸಂಗೀತ ಜ್ಞಾನ. ಅದನ್ನು “ದರ್ಶನ ಕಾವ್ಯ”ಎಂತಲೂ ಕರೆಯಬಹುದು. ಪಶ್ಚಿಮ ಪ್ರಣೀತ, ವಸಾಹತುಶಾಹಿ ಕಣ್ಣುಗಳಿಂದ ವಿಭಜಿಸಿ, ಅವಲೋಕಿಸುವ ಆಧುನಿಕ ಕಾವ್ಯಮೀಮಾಂಸೆಗಳನ್ನು ಮೀರಿದ್ದು ತತ್ವ ಪದಸಾಹಿತ್ಯ ಮೀಮಾಂಸೆ. ಅದು ಜನಮಾನಸದ ಲೋಕ ಮೀಮಾಂಸೆ. ದಲಿತರಾದಿಯಾಗಿ ಬ್ರಾಹ್ಮಣರವರೆಗೆ ಎಲ್ಲ ಕುಲ, ಜಾತಿ, ಮತ, ಪಂಥಗಳ ಜನಸಾಮಾನ್ಯ ಕುಟುಂಬಗಳ ದುಡಿಯುವ ಜನರ ನಡುವಿನಿಂದ ಹುಟ್ಟಿಬಂದ ಲೋಕಜ್ಞಾನ ಸಾಹಿತ್ಯವದು. ನಿತ್ಯಬದುಕಿನ ಆನುಭಾವಿಕ ನೆಲೆಯ ಮಹಾಬಯಲ ಬೀಜಧ್ಯಾನವದು. ವಚನ ಹಾಗೂ ದಾಸ ಸಾಹಿತ್ಯದ ನಂತರದಲ್ಲಿ ಕನ್ನಡನಾಡಿನಾದ್ಯಂತ ಮೌನಕ್ರಾಂತಿಯಂತೆ ಮೈತಾಳಿದ್ದು ತತ್ವಪದ ಸಾಹಿತ್ಯ ಆಂದೋಲನ. ಒಂದು ಸಮೀಕ್ಷೆಯ ಅಂದಾಜಿನಂತೆ ಕನ್ನಡನಾಡಿನಲ್ಲಿ ಐದುನೂರಕ್ಕೂ ಹೆಚ್ಚುಮಂದಿ ತತ್ವಪದಕಾರರು ಬಾಳಿ ಬದುಕಿದ್ದಾರೆ. ಒಂದೆರಡು ಜಿಲ್ಲೆಗಳು ನನ್ನ ಈ ಮಾತುಗಳಿಗೆ ಅಪವಾದವಾಗಿ ಕಾಣಬಹುದು.
ಇದುವರೆಗೆ ಅದೆಷ್ಟೇ ಅಧ್ಯಯನ, ಸಂಶೋಧನೆಗಳು ಜರುಗಿದರೂ ಅಗಮ್ಯ ಅಗೋಚರದಲ್ಲುಳಿದಿರುವ ತತ್ವಪದಗಳೇ ಹೇರಳ. ಅವು ರಾಶಿ ರಾಶಿಯಾಗುಳಿದಿವೆ. ಇದುವರೆಗಿನ ಸಮೀಕ್ಷೆಗಳು ಹೇಳುವಂತೆ ಎಲ್ಲ ತತ್ವಪದಕಾರರ ಸಮಗ್ರ ತತ್ವಪದಗಳು ದೊರಕಿಲ್ಲ. ಕಡಕೋಳ ಮಡಿವಾಳಪ್ಪನವರನ್ನೇ ಉದಾಹರಿಸುವುದಾದರೆ ಹದಿನೇಳು ನೂರು ಪದಗಳ ಪೈಕಿ ಪ್ರಾಪ್ತವಾಗಿರುವುದು ಕೇವಲ ಮುನ್ನೂರೈವತ್ತು ಮಾತ್ರ. ಈ ಎಲ್ಲ ತತ್ವಪದಗಳ ಸಂಗ್ರಹದ ಕಾರ್ಯ ಈಗ್ಗೆ ನಾಕೈದು ವರ್ಷಗಳಿಂದ ಸರ್ಕಾರ ಗಂಭೀರವಾಗಿ ಶುರುಮಾಡಿದೆ. ಆದರೆ ಆ ಕೆಲಸಕ್ಕೆ ರಭಸದ ಅಧ್ಯಯನ, ಹುಡುಕಾಟ, ಸಂಶೋಧನಾ ಕ್ರಿಯೆಗಳ ಕೊರತೆ. ಅದೊಂದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿಯಬೇಕಿದೆ.
ಶಿವಪಥವನರಿಯಲು ಗುರುಪಥವೇ ಮೊದಲೆಂಬ ಅಚಲ ನಂಬಿಕೆಯಿಟ್ಟವರು ತತ್ವಪದಕಾರರು. ಪದಗಳ ಒಟ್ಟು ಸೂಕ್ಷ್ಮತೆ, ಜೀವಸಂವೇದನೆ, ತಾತ್ವಿಕತೆ, ಇಹ ಪರದ ಸಂವಿಧಾನವು ಕೂಡ ಶಿವಪಥದ ಅರಿವು. ಅಲ್ಲಮನ ಶಿವಸ್ವರೂಪವನ್ನು, ನಿರ್ಮಲವೂ, ಪರಂಜ್ಯೋತಿಮಯವೂ ಆಗಿರುವ ಜಂಗಮ ಪ್ರಜ್ಞೆಯನ್ನು ಸಹಿತ ಗುರು ಮುಖೇನವೇ ಆಗು ಮಾಡಿಕೊಳ್ಳುವುದು. ಅಂತೆಯೇ-
ಸಾಕ್ಷಾತ್ ಸದ್ಗುರು ಪ್ರತ್ಯಕ್ಷವಾಗಲು
ಸ್ಥಿತಿಗತಿಗಳ ಅರಿಯುವದ್ಯಾಕೋ/
ಆ ಕ್ಷಣವಾಗುವುದು ಅನಂತ ಸೌಖ್ಯವು/
ಮೋಕ್ಷವ ಪಡಕೊಳ್ಳೊ ಕುದಿಯಾಕೋ//
ಹಾಗೆಯೇ ಮತ್ತೊಂದು ತತ್ವಪದದಲ್ಲಿ-
ಗುರು ಕರುಣವಿಲ್ಲದವನ ಸ್ನೇಹ
ಸಾಯುವತನಕ ಬೇಡ/
ಸಾಧು ಸತ್ಪುರುಷರ ಸೇವೆ
ಮಾಡುವುದೇ ಬಹುಪಾಡ//
ಹೀಗೆ ಗುರುಪಥದ ಮಹತಿಯನ್ನು ಎಲ್ಲ ಪದಕಾರರ ತತ್ವಪದಗಳು ಎತ್ತಿ ಹಿಡಿಯುತ್ತವೆ. ಪದಗಳ ಗುರುಭಕ್ತಿ ಪರಂಪರೆ ಮಹತ್ತರವಾದುದು. ಶರಣಸತಿ ಭಾವವನ್ನು ಯಥೇಚ್ಛವಾಗಿ ತತ್ವಪದಗಳು ಪ್ರತಿಪಾದನೆ ಮಾಡುತ್ತವೆ. ಅದು ಗುರು ಶಿಷ್ಯ ಸಂಬಂಧ. ಗುರು ಅವರಿಗೆ ಏನೆಲ್ಲವೂ ಹೌದು. ಗುರುವಿಗಿಂತ ಅಧಿಕವಾದುದು ಜಗದೊಳು ಅವರಿಗಿನ್ನೊಂದು ಇಲ್ಲ.
ತತ್ವಪದಗಳ ಒಟ್ಟು ತಾತ್ವಿಕತೆ ಅದ್ವಯ ಸಿದ್ಧಾಂತದ ಸಾಧನೆ, ಅರಿವು ಮತ್ತು ಅನುಭಾವ. ಬೆಂಕಿ ಸುಡುತ್ತದೆಂಬುದು ಅರಿವು. ಸುಟ್ಟಮೇಲೆಯೇ ಅದು ಅನುಭವ ಆಗಬಲ್ಲದು. ಹಾಗೇನೆ ಸಕ್ಕರೆ ಸಿಹಿಯಾಗಿರುತ್ತದೆಂಬುದು ಅರಿವು. ತಿಂದಾದ ಮೇಲೆಯೇ ಅದು ಅನುಭವ ಆಗಬಲ್ಲದು. ಅನುಭಾವ ಪರಂಪರೆಯ ಗಮ್ಯ, ಗುರಿ ಒಂದೇ ಆಗಿರಬಹುದು. ಆದರೆ ಅದನ್ನು ತಲುಪಲು ನಡೆದು ಬರುವ ಪಥ, ಪಂಥಗಳು ಹತ್ತು ಹಲವು. ಅದು ಶಾಕ್ತ, ಸಿದ್ಧ, ನಾಥ, ಅಘೋರಿ, ಅಚಲ, ಅವಧೂತ, ಆರೂಢ ಮುಂತಾದ ಈ ಎಲ್ಲ ಧಾರೆಗಳು ತತ್ವಪದಗಳ ರಾಚನಿಕ ಅಂತಃಸತ್ವಗಳು. ಸೇರಬೇಕಾದ ಊರಿಗೆ ದಾರಿಗಳು ಹತ್ತಾರು. ಹಾಗೆ ಇವು ಬೇರೆ, ಬೇರೆ ದಾರಿಗಳಿದ್ದಂತೆ.
ಅದುವರೆಗೆ ವೇದಾಂತ, ಅಧ್ಯಾತ್ಮ ಎಂಬ ಪದಗಳು ಮೇಲ್ವರ್ಗ, ಮೇಲ್ಜಾತಿಯ ಪಂಡಿತೋತ್ತಮರಿಗೆ ಮೀಸಲಾಗಿದ್ದವು. ಇಂತಹ ಶುಷ್ಕ ವೇದಾಂತವನ್ನು ನಿರಾಕರಿಸಿ, ಅಧ್ಯಾತ್ಮವನ್ನು ಗಂಡು ಹೆಣ್ಣೆನ್ನದೇ, ಜಾತಿ, ಕುಲ, ಮತ, ಧರ್ಮ ತಾರತಮ್ಯದ ಗೊಡವೆಗಳನ್ನು ಕೆಡವಿ ಸಾಮಾನ್ಯ ಜನರೆಲ್ಲರಿಗೂ ಸರಳಗೊಳಿಸಿ ತಿಳಿಸಿದ ಶ್ರೇಯಸ್ಸು ತತ್ವಪದ ಸಾಹಿತ್ಯಕ್ಕೆ ಮತ್ತು ತತ್ವಪದಕಾರರಿಗೆ ಸಲ್ಲಬೇಕು.
ಹಾಗೆ ನೋಡಿದರೆ ತತ್ವಪದಕಾರರು ನಮ್ಮ ನಿತ್ಯಬದುಕನ್ನು ಪ್ರತಿನಿಧಿಸುವ ಬದುಕಿನ ಪ್ರತಿನಿಧಿಗಳು. ಅನುಭವದ ಗಾಢತೆಯು ಅವರ ಅಂತರಂಗವನ್ನು ಸತಾಯಿಸಿದಾಗ ರೂಪಗೊಂಡ ಅಭಿವ್ಯಕ್ತಿಯ ತೀವ್ರತೆಗಳು ಈ ಪದಗಳು. ಮುಖ್ಯವಾಗಿ ಸಾಮಾಜಿಕ- ಸಾಂಸ್ಕೃತಿಕ ಅನುಸಂಧಾನ, ದ್ವಂದ್ವಗಳ ಮುಖಾಮುಖಿ, ಪ್ರಾದೇಶಿಕ ಭಾಷಿಕತೆಯ ಸಂವೇದನಾಶೀಲತೆಗಳನ್ನು ಇಲ್ಲಿ ಢಾಳಾಗಿ ಗುರುತಿಸಬಹುದು. ಹಳ್ಳಿಗಾಡಿನ ಜನಸಾಮಾನ್ಯರ ನಾಲಿಗೆ ಮೇಲೆ ನಲಿದಾಡಿದ ತತ್ವಪದಗಳು ಪಂಡಿತರ ಮಿದುಳಿಗೆ ಮುಟ್ಟಲಿಲ್ಲ. ಹೀಗಾಗಿ ತತ್ವಪದಗಳನ್ನು ಅಧೀನ ಸಂಸ್ಕೃತಿಯ ನಜರಿನಲ್ಲಿ ನೋಡುವಂತಾಯಿತು.

ಅಧೀನವಲ್ಲ, ಪ್ರಧಾನ ಸಂಸ್ಕೃತಿ
ತತ್ವಪದಗಳ ಪರಂಪರಾಗತ ಗಾಯನದ ಗುಂಗು ಹಚ್ಚಿಕೊಂಡು ಹಾಡುವವರು ಇವತ್ತಿಗೂ ನಮ್ಮ ಹಳ್ಳಿಗಳಲ್ಲಿದ್ದಾರೆ. ಹಾಗೆಯೇ ಆಧುನಿಕತೆಯ ಸ್ಪರ್ಶ ನೀಡಿ ಇವುಗಳನ್ನು ಸುಗಮ, ಶಾಸ್ತ್ರೀಯ, ಸಿನೆಮಾ, ಪಾಪ್ ಸಂಗೀತ ಶೈಲಿಯಲ್ಲಿ ಹಾಡುವ ಪ್ರಯೋಗ ಮಾದರಿಯ ಪ್ರಯತ್ನಗಳು ಜರುಗುತ್ತಲಿವೆ. ಆದರೆ ಇವೆಲ್ಲವುಗಳಿಗಿಂತ ಏಕತಾರಿಯ ಏಕನಾದದ ನಾದಲೀಲೆಯೇ ಅನನ್ಯವಾದುದು. ಅದು ಎಂತಹ ಕಟುಕ ಹೃದಯದವರನ್ನು ಕರಗಿಸಿ, ಅಂತಃಕರಣ ಭರಿತ ಅಪರಿಚಿತ ಲೋಕದ ಪರಿಚಯ ಮಾಡಿಸಿಕೊಡುತ್ತದೆ. ಅನುಭಾವ ಸಾಹಿತ್ಯ ಜಗತ್ತಿಗೆ ಅಂಥದೊಂದು ಅದ್ಭುತ ಶಕ್ತಿಯಿದೆ. ಅದು ಕಾಲಾತೀತ, ಜೀವಾತೀತ ಸಂವೇದನೆ. ಅಂತೆಯೇ ತತ್ವಪದಗಳು ಸಾರ್ವಕಾಲಿಕ ಜೀವಸಂಸ್ಕೃತಿಯ ಸರೋವರಗಳು.
ಎಂಥಾ ಕಂಡಾಪಟ್ಟೆ
ಸೂಳೆಮಕ್ಕಳಿವರೋ/ ಸಾಧು
ಸಂತರನ ಕಂಡರೆ ನಿಂದೆನಾಡ್ತಿಹರೋ//
ಅಂಥ ಇಂಥ ಮಾತಿಗೆ ಹಾಯ್ ಹಾಯ್
ಎಂಬುವರೋ/ ಇವರು
ಹಂತ ತಿಳಿಯದೇ ಸುಳ್ಳೇ ಸತ್ತು ಹೋಗುವರೋ/
ಕಲ್ಲು ಮಣ್ಣು ದೇವರೆಂದು ಪೂಜೆ ಮಾಡುವರೋ/ ಭಾಳ
ಬಲ್ಲಿದರನು ಕಂಡು ದೂರ
ಹಾಯುವರೋ//
ಕಲ್ಲು-ಮಣ್ಣುಗಳ ಗುಡಿಯೊಳಗಣ ಇಲ್ಲದ ದೇವರ ಕುರಿತು ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಬರುವ ಕವಿಯೊಬ್ಬರ ಕವಿತೆ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಅದು ಸಂತಸದ ಸಂಗತಿ. ಆದರೆ ಇಂಥದೇ ಕಾವ್ಯ ನುಡಿಗಳನ್ನು ಮಡಿವಂತಿಕೆ ಹೊಡೆದೋಡಿಸಿ ಹೆಚ್ಚು ತೀಕ್ಷ್ಣವಾಗಿ ಹದಿನೇಳನೇ ಶತಮಾನದಲ್ಲಿ ಹಸಿಗೋಡೆಗೆ ಹರಳು ಹೊಡೆದಂತೆ ಮೇಲಿರುವ ಹಾಗೆ ಹೇಳಿದ ತತ್ವಪದಕಾರರು ಮತ್ತು ಅವರ ಕಾವ್ಯ ಮೂರು ಶತಮಾನ ಕಾಲ ಅಜ್ಞಾತದಲ್ಲಿರಬೇಕಾಯಿತು. ಹೀಗೆ ನೂರಾರು ತತ್ವಪದಗಳು ಮತ್ತು ತತ್ವಪದಕಾರರು ಅನೇಕ ಅಗ್ನಿದಿವ್ಯಗಳನ್ನು ಬದುಕಿ ಬಂದವರು. ಈಗ್ಗೆ ನಾಕೈದು ವರ್ಷಗಳ ಹಿಂದೆ ಕನ್ನಡ ಸಂಸ್ಕೃತಿ ಇಲಾಖೆಯ ಕನಕ ಅಧ್ಯಯನ ಕೇಂದ್ರವು ತತ್ವಪದಗಳ ಸಮಗ್ರ ಸಂಗ್ರಹ ಕಾರ್ಯಯೋಜನೆಯೊಂದನ್ನು ರೂಪಿಸಿತು. ಐವತ್ತು ಸಂಪುಟಗಳಲ್ಲಿ ಸದ್ಯಕ್ಕೆ ಮೂವತ್ತೆರಡು ಸಂಪುಟಗಳು ಪ್ರಕಟಗೊಂಡಿವೆ. ಪ್ರಾಯಶಃ ಇಷ್ಟು ಪ್ರಮಾಣದಲ್ಲಿ ತತ್ವಪದ ಸಾಹಿತ್ಯ ಪ್ರಕಟಗೊಳ್ಳುತ್ತಿರುವುದು ಇದೇ ಮೊದಲು. ಅಂತೆಯೇ ಇದು ಆರಂಭಕಾಲ. ಇನ್ನು ಮೇಲೆಯೇ ತತ್ವಪದಗಳ ಕುರಿತು ಖರೇ ಖರೇ ಕೆಲಸ ಶುರುವಾಗಬೇಕಿದೆ.
ಅಕ್ಷರಶಃ ಮಹಾಕಾವ್ಯಗಳಾಗಿರುವ ತತ್ವಪದಗಳು ಪ್ರಧಾನ ಸಾಹಿತ್ಯ ಸಂಸ್ಕೃತಿ ಧಾರೆಗೆ ಸೇರಬೇಕು. ಬಹುಪಾಲು ನಮ್ಮ ಗ್ರಾಮೀಣರೇ ಹಾಡುವ ಭಜನೆ ಪದಗಳನ್ನು ಜಾನಪದ ಪ್ರಕಾರಕ್ಕೋ, ಇಲ್ಲವೇ ಅಸ್ಪೃಶ್ಯವಾಗಿರಿಸಿದಂತೆ ಪರಿಶಿಷ್ಟ ಪ್ರಾಕಾರವಾಗಿ ನೋಡುವ ಸಾಹಿತ್ಯ ಚರಿತ್ರೆಗಳಿವೆ. ಹಾಗೆಂದು ತತ್ವಪದಗಳ ಅಸ್ಮಿತೆ ಪ್ರತಿಸಂಸ್ಕೃತಿಯ ಹುಡುಕಾಟವಲ್ಲ. ಅದು ಅಧೀನ ಸಂಸ್ಕೃತಿಗೆ ಸೇರಬೇಕಾದುದು ಅಲ್ಲ. ಅದು ಭಾರತೀಯ ಮತ್ತು ಕನ್ನಡ ಮನಸುಗಳ ಅಪ್ಪಟ ಜನಮುಖೀ ಸಂಸ್ಕೃತಿ. ಇದು ಕಾವ್ಯ ಮೀಮಾಂಸಕರಿಗೆ ತಡವಾಗಿ ಅರ್ಥವಾಗಿದೆ. ಆದರೆ ಲೋಕ ಮೀಮಾಂಸೆಗೆ ಅದು ತಿಳಿನೀರು ಕುಡಿದಷ್ಟು ಸರಳ. ಹೀಗಾಗಿ ತತ್ವಪದಗಳು ಶತಮಾನಗಳ ಕಾಲ ಪುಸ್ತಕ ರೂಪದಲ್ಲಿ ಬರದೇ ಜನಮಾನಸದ ಮಸ್ತಕದಲ್ಲಿ ನಿರಂತರವಾಗಿ ಉಳಿದಿವೆ. ತತ್ವಪದಗಳು ಪ್ರಜಾಸತ್ತಾತ್ಮಕ ಜೀವನ ಕ್ರಮದ ಪರಿಶೋಧಗಳು. ಅದು ಅಗ್ನಿದಿವ್ಯದ ಬಯಲು ಬಿತ್ತನೆ. ಇಂತಹ ಬಯಲು ಬಿತ್ತನೆಯ ಅನುಭಾವದ ಹರಿಕಾರರಲ್ಲಿ ಕಡಕೋಳ ಮಡಿವಾಳಪ್ಪಗೆ ಅಗ್ರಸ್ಥಾನ. ಅವರು ತತ್ವಪದಲೋಕದ ಸಾಂಸ್ಕೃತಿಕ ನಾಯಕ.
ಹಿಂದೆ ಬಸವ ಬಂದು ತೋರಿದ
ಲಿಂಗಮಹತಿಗೆ/
ಅಂದೇ ಆಯಿತು ವಿಘ್ನ ಪ್ರಮಥರಿಗೆ ತಾನೆ//
ಅಂದಾದ ವಿಘ್ನಕ್ಕೆ ಪ್ರಮಥರು ತಾವೆಲ್ಲಾ
ಮುಂದಾಗುವುದು ಸೂಚಿಸಿದರು ತಾನೆ//
ಇದು ತತ್ವಪದಕಾರರ ತ್ರಿಕಾಲಜ್ಞಾನ ವಚನ. ವರ್ತಮಾನದ ವೀರಶೈವ – ಲಿಂಗಾಯತ ಹೋರಾಟಕ್ಕೆ ಮುನ್ನೂರು ವರ್ಷಗಳ ಹಿಂದೆಯೇ ಇದು ಮುನ್ನುಡಿ ಬರೆದಂತಿದೆ. ಸಮಕಾಲೀನ ಅನೇಕ ಬಿಕ್ಕಟ್ಟು, ತಲ್ಲಣಗಳಿಗೆ ತತ್ವಪದಗಳಲ್ಲಿ ಹುಡುಕಿದರೆ ಉತ್ತರ ಸಿಗಬಲ್ಲವು. ಇವತ್ತಿನ ನಮ್ಮ ಅನೇಕ ಮಂದಿ ಭಾಷಣದ ಬುದ್ದಿಜೀವಿಗಳಿಗೆ ಅವು ಚಿಮ್ಮುಹಲಗೆಗಳಾಗಿ ನೆರವಾಗುತ್ತಲಿವೆ.
ಜ್ಯೋತಿ ಬೆಳಗುತಾದೋ ಜಗಜಗ/
ತಾನೇ ಹೊಳೆಯುತಾದೋ ಥಳಥಳ
ಜ್ಯೋತಿ ಬೆಳಗುತಾದ ತಾನೆ ಹೊಳೆಯುತಾದ/೧/
ಮಾನಸ ತುದಿಮೇಲೆ ಜ್ಞಾನಕೆ ನಿಲುಕದೆ/
ತಾನೇ ಹೊಳೆಯುತಾದೋ ಥಳಥಳ
ಜ್ಯೋತಿ ಬೆಳಗುತಾದೋ ಜಗಜಗ//೨//
ಅಸ್ತಮಗಿರಿ ಚೆನ್ನ ಮಸ್ತಕದೊಳ ಚೆಲುವ/
ವಸ್ತು ಹೊಳೆಯಿತಾದೋ ಥಳಥಳ
ತಾನೇ ಹೊಳೆಯುತಾದೋ ಥಳಥಳ//೩//
ಕಂಗಳ ಮಧ್ಯದಿ ತುಂಗ ಗುಡ್ಡದಯೋಗಿ/
ಅಂಗ ಹೊಳೆಯುತಾದೋ ಥಳಥಳ
ತಾನೇ ಹೊಳೆಯುತಾದೋ ಥಳಥಳ//೪//
ಕಡಕೋಳ ಮಡಿವಾಳಪ್ಪನವರ ಪರಂಜೀವ ಜನ್ಯತೆಯ ಈ ಮಂಗಳಾರತಿ ಪದದೊಂದಿಗೆ ನನ್ನ ಈ ಅಕ್ಷರಗಳಿಗೆ ಮಂಗಳ ಹಾಡುವೆ.

Previous post ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
Next post ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…

Related Posts

ಕನ್ನಗತ್ತಿಯ ಮಾರಯ್ಯ
Share:
Articles

ಕನ್ನಗತ್ತಿಯ ಮಾರಯ್ಯ

April 3, 2019 ಮಹಾದೇವ ಹಡಪದ
ವ್ಯಾಪಾರಿಗಳ ಮನೆಗಳಿಗೆ ದುಃಸ್ವಪ್ನವಾಗಿದ್ದ ಕನ್ನದ ಮಾರ ಹೇಳಿಕೇಳಿ ಕದಿಯುವ ಚಾಣಾಕ್ಷ ಕಳ್ಳ. ಇಂಥ ದಿನ ಇಷ್ಟು ಹೊತ್ತಿಗೆ ಸರಿಯಾಗಿ ನಿಮ್ಮ ಮನೆಗೆ ಕನ್ನ ಹಾಕತೇನೆ ಅಂತ...
ದೇವರು: ಶರಣರು ಕಂಡಂತೆ
Share:
Articles

ದೇವರು: ಶರಣರು ಕಂಡಂತೆ

April 29, 2018 ಡಾ. ಪಂಚಾಕ್ಷರಿ ಹಳೇಬೀಡು
ದೇವರು ಎಂಬ ಶಬ್ದ ಅನೇಕರಲ್ಲಿ ಅನೇಕ ರೀತಿಯ ಭಾವನೆಗಳನ್ನು ಮೂಡಿಸುವುದು. ಕೆಲವರಿಗೆ ದೇವರೆಂದರೆ ಭಯ, ಕೆಲವರಿಗೆ ಪ್ರೀತಿ, ಕೆಲವರಿಗೆ ಭಕ್ತಿ. ಆಸ್ತಿಕರ ಪ್ರಕಾರ ದೇವರೆಂದರೆ ಈ...

Comments 9

  1. Jayamma Gangadhara
    Oct 9, 2020 Reply

    ತತ್ವಪದಕಾರರ ಬಗೆಗೆ ನನಗೆ ಮೊದಲಿನಿಂದ ಆದರ, ಕುತೂಹಲ ಇತ್ತು. ಮಲ್ಲಿಕಾರ್ಜುನ ಶರಣರು ತುಂಬಾ ಚೆನ್ನಾಗಿ ಬರೆದಿದ್ದಾರೆ.

  2. L.S.Patil
    Oct 10, 2020 Reply

    ತತ್ವಗಳನ್ನು ಹಾಡುತ್ತಾ ಕಾಲ ಕಳೆಯುವವರು ತತ್ವಪದಕಾರರು, ಭಜನೆಗಳನ್ನು ಹೇಳುತ್ತಾ ತಿರುಗುತ್ತಾರೆಂದು ನಾನು ಭಾವಿಸಿದ್ದೆ. ಅವರ ಹಿನ್ನೆಲೆ ಹಾಗೂ ಬದುಕನ್ನು ಏನೇನೂ ತಿಳಿದಿರಲಿಲ್ಲ. ಲೇಖನ ನನ್ನ ಕಣ್ಣುತೆರೆಸಿತೆಂದೇ ಹೇಳಬೇಕು. ಲೇಖಕರಿಗೆ ಶರಣು.

  3. Jahnavi Naik
    Oct 10, 2020 Reply

    ಈ ತತ್ವಪದಗಳನ್ನು ಹೇಳುವವರು ಎಲ್ಲಿ ಸಿಗುತ್ತಾರೆ? ಮಡಿವಾಳಪ್ಪ ಕಡಕೋಳಂತವರು ಈಗಲೂ ಇದ್ದಾರೆಯೇ? ಸಮಕಾಲೀನ ಪದಕಾರರ ಕುರಿತು ದಯವಿಟ್ಟು ಒಂದು ಲೇಖನ ಬರೆಯಿರಿ.

  4. Gurunath Kusthi
    Oct 14, 2020 Reply

    ಗುರು- ಶಿಶುಮಕ್ಕಳ ಮುಖಾಬಿಲೆಯಲ್ಲಿ ಜರುಗುವ ದೇಹ ಮತ್ತು ಧ್ವನಿಗಳ ಅನುಸಂಧಾನ- ತತ್ವಪದಗಳು ಎನ್ನುವುದು ನಿಜಕ್ಕೂ ತೀವ್ರ ಆಸಕ್ತಿ ಹುಟ್ಟಿಸುವ ಪರಂಪರೆಯನ್ನು ಕಡೆಗಣಿಸಿದ್ದರ ಹಿಂದಿನ ರಾಜಕೀಯ ಯಾವುದು?

  5. Prabhakar Banavar
    Oct 16, 2020 Reply

    ತತ್ವಪದಕಾರರು ಭಂಗಿ ಯಾಕೆ ಸೇದುತ್ತಾರೆ? ಅದರಿಂದ ದೇಹದ ಮೇಲೆ ದುಷ್ಪರಿಣಾಮಗಳಾಗುವುದಿಲ್ಲವೇ? ಆಧ್ಯಾತ್ಮಿಕಕ್ಕೂ ನಶೇ ಏರಿಸುವ ಸಾಧನಗಳಿಗೂ ಸಂಬಂಧ ಉಂಟೆಂದರೆ ದಾರಿ ತಪ್ಪಿಸಿದಂತಾಗುತ್ತದೆ ಎನ್ನುವುದು ನನ್ನ ಭಾವನೆ. ಶರೀಫರ ಹಾಡುಗಳು ಇದೇ ಕಾರಣಕ್ಕಾಗಿ ನನ್ನಲ್ಲಿ ಗೊಂದಲ ಹುಟ್ಟಿಸುತ್ತವೆ. ಹೀಗೆ ನಶೆ ಏರಿಸಿಕೊಂಡು ಮಾತನಾಡುವುದು ಆಧ್ಯಾತ್ಮವೇ? ಕೋಪ ಮಾಡಿಕೊಳ್ಳದೆ ಉತ್ತರಿಸುವಿರೆಂದು ನಂಬಿದ್ದೇನೆ.

  6. Akshay B.R
    Oct 16, 2020 Reply

    ಹೀಗೊಂದು ತತ್ವಪದಕಾರರ ಸಮೂಹವೇ ನಮ್ಮ ನಡುವೆ ಇದೆ ಎಂಬುದು ಅನೇಕರಿಗೆ ತಿಳಿಯದ ವಿಷಯ. ಶರೀಫಜ್ಜನ ಜೊತೆ ಆ ಸಂತತಿ ಕೊನೆಯಾಯಿತೆಂದೇ ಅನೇಕರು ತಿಳಿದಿದ್ದರು. ನನಗೆ ಬಯಲು ಬ್ಲಾಗಿನಿಂದಲೇ ತತ್ವಪದಕಾರರ ಅನೇಕ ಮಾಹಿತಿಗಳು ಲಭ್ಯವಾದವು. ಲೇಖನ ಚನ್ನಾಗಿದೆ ಸರ್.

  7. ಮುರುಗೇಶ್ ನಿಪ್ಪಾಣಿ
    Oct 19, 2020 Reply

    ಲೇಖನ ತುಂಬಾ ಹಿಡಿಸಿತು. ಒಂದು ಮಾತು ಗೊತ್ತಾಗಲಿಲ್ಲ- ತತ್ವಪದಕಾರರದು ಗುರು ಮಾರ್ಗ, ಅದೊಂದು ಸಾವಯವ ಸಂಬಂಧ ಎಂದು ಬರೆದಿರುವಿರಿ. ಹಾಗೆಂದರೆ ಏನು ಶರಣರೇ?

  8. Mariswamy Gowdar
    Nov 5, 2020 Reply

    ಅನುಭಾವಿಗಳಾದ ತತ್ವಪದಕಾರರ ಕುರಿತು ಸೊಗಸಾದ ಲೇಖನ. ಮಲ್ಲಿಕಾರ್ಜುನ ಶರಣರಿಗೆ ಶರಣು.

  9. Devaraj B.S
    Nov 5, 2020 Reply

    ಶರಣರಂತೆ ತತ್ವಪದಕಾರರು ಬಹಳ ಹತ್ತಿರವೆನಿಸಿದರು. ಆಧುನಿಕ ಯುಗದಲ್ಲಿ ಇವರ ಇರುವಿನ ಜಾಡು ತಿಳಿಸಿದ ಮಹತ್ವಪೂರ್ಣ ಬರವಣಿಗೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
Copyright © 2021 Bayalu