Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಛಲಬೇಕು ಶರಣಂಗೆ…
Share:
Articles April 29, 2018 ಕೆ.ಆರ್ ಮಂಗಳಾ

ಛಲಬೇಕು ಶರಣಂಗೆ…

ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೇ ಸಂದರ್ಭದಲ್ಲಿ ಹುಟ್ಟಿದ ಮಾನವನ ಮೂಲಭೂತ ಚಿಂತನೆಗಳು ಆಯಾ ಕಾಲ ಮತ್ತು ದೇಶಗಳಿಗೆ ಮಾತ್ರವೇ ಬದ್ಧವಾಗಿರುವುದಿಲ್ಲ. ಇಡೀ ಲೋಕಕ್ಕೆ, ಎಲ್ಲಾ ಕಾಲಗಳಿಗೆ ಆ ವಿಚಾರಗಳು ಚಲಿಸುತ್ತಾ ಹೋಗುತ್ತವೆ. ಮಾನವನ ಅಸ್ತಿತ್ವ ಮತ್ತು ಸಮಾಜದೊಂದಿಗಿನ ಮಾನವನ ಸಂಬಂಧದ ಕುರಿತು ನಡೆಸಿದ ವಿಚಾರಗಳಿಗೆ ಸಾವಿಲ್ಲ. ಥೋರೊ, ರಸ್ಕಿನ್, ಟಾಲಸ್ಟಾಯ್ ಅವರಿಂದ ಗಾಂಧೀಜಿ ಪ್ರೇರಣೆ ಪಡೆದರು. ಪಾಶ್ಚಾತ್ಯ ಕವಿಗಳಾದ ಎಲಿಯೆಟ್ ಮತ್ತು ಏಟ್ಸ್ ಉಪನಿಷತ್ತುಗಳಿಂದ ಪ್ರೇರಿತರಾಗಿದ್ದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಆಂಗ್ ಸಾನ್ ಸೂಕಿ ಗಾಂಧೀಜಿಯ ವಿಚಾರಧಾರೆಗೆ ಮಾರುಹೋಗಿದ್ದರು. ಬ್ರಿಟನ್ನಿನ ಖ್ಯಾತ ಆರ್ಥಿಕ ಚಿಂತಕ ಷೂಮ್ಯಾಕರ್ ಬುದ್ಧನ ತತ್ವಗಳಿಂದ ಪ್ರೇರಣೆ ಪಡೆದು ಸ್ಮಾಲ್ ಈಸ್ ಬ್ಯೂಟಿಫುಲ್ ಎಂಬ ಪ್ರಸಿದ್ಧ ಕೃತಿ ರಚಿಸಿದರು… ಲೋಕವನ್ನು ಪ್ರಭಾವಿಸಬಲ್ಲ ಇಂಥ ಕಾಲಾತೀತ ವಿಚಾರಗಳಿಗೆ ಶರಣರ ತತ್ವಗಳು ಸೇರಿಕೊಳ್ಳುತ್ತವೆ. ನಾನಾ ಕಾರಣಗಳಿಂದ ಇಂಥ ಪ್ರಖರ ವೈಚಾರಿಕ ಚಿಂತನೆಗಳು ನಮ್ಮ ನಾಡಿನ ಗಡಿಯನ್ನೂ ದಾಟಲಿಲ್ಲ. ಆದರೆ ಪುರೋಹಿತಶಾಹಿ ವರ್ಗದ ಕಂಗೆಣ್ಣಿಗೆ ತುತ್ತಾದ ಹಾಗೂ ಯಾವ ರಾಜಾಶ್ರಯದ ಬೆಂಬಲವೂ ಇಲ್ಲದ ಶರಣರ ವಿಚಾರಗಳು ಒಂಬೈನೂರು ವರುಷಗಳ ದೀರ್ಘಾವಧಿಯ ಸವಾಲುಗಳನ್ನು ಜನಮನದ ಮೂಲಕ ದಾಟುತ್ತಾ ಬಂದಿರುವುದು ನಿಜಕ್ಕೂ ಕಾಲದ ಅಚ್ಚರಿಗಳಲ್ಲೊಂದು.

ಅದು ‘ರಾಜಾ ಪ್ರತ್ಯಕ್ಷ ದೇವತಾ:’ ಎಂಬ ನಂಬಿಕೆ ಬೇರು ಬಿಟ್ಟಿದ್ದ ಕಾಲಮಾನ. ಚಾಲುಕ್ಯರ ಸಾಮ್ರಾಜ್ಯದಲ್ಲಿ ಬಿಜ್ಜಳ ಮಹಾರಾಜನ ರಾಜ್ಯಭಾರ ಆರಂಭವಾಗಿತ್ತು. ಸಾಮ್ರಾಜ್ಯ ವಿಸ್ತರಣೆಯ ದಾಹ, ಚಕ್ರಾಧಿಪತ್ಯದ ಹುನ್ನಾರ, ಸಾಮಂತರ ರಹಸ್ಯ ಚಟುವಟಿಕೆಗಳ ನಿಗ್ರಹ… ರಾಜಾಡಳಿತದ ಇಂಥ ಬೇಗುದಿಯ ಹಿನ್ನೆಲೆಯಲ್ಲಿ ಕಲ್ಯಾಣವು ನಾಗರಿಕತೆಗೊಂದು ಹೊಸ ದಿಕ್ಕು ತೋರಿಸಲು ಸಜ್ಜಾಗುತ್ತಿತ್ತು. ಅರಸೊತ್ತಿಗೆಯಲ್ಲಿ ವಿನೂತನ ಮಾದರಿಯ ಪ್ರಜಾಸತ್ತೆಯ ಪ್ರಯೋಗಕ್ಕೆ ಕೈ ಹಾಕಿದ್ದರು ಮಹಾಪ್ರಧಾನಿ ಬಸವಣ್ಣನವರು. ದುಡಿಯುವ ವರ್ಗದ, ಶುದ್ಧ ವಿಚಾರವಾದಿಗಳ, ಅನುಭಾವಿಗಳ ಶರಣ ಪಡೆಯೇ ಅಲ್ಲಿ ರೂಪು ತಳೆಯುತ್ತಿತ್ತು. ಸಮಾಜವಾದ, ಪ್ರಜಾಪ್ರಭುತ್ವ, ಲಿಂಗ ತಾರತಮ್ಯ, ವರ್ಣ ಸಮಾನತೆ, ಸ್ತ್ರೀ ಸಂವೇದನಾ ಹೋರಾಟ, ಅಲ್ಪಸಂಖ್ಯಾತರ ಹಿತಾಸಕ್ತಿ… ಇಂತಹ ನಮ್ಮ ಇಂದಿನ ಹೋರಾಟಗಳನ್ನು ಪ್ರಭಾವಿಸಬಲ್ಲ ಆಲೋಚನೆಗಳನ್ನು, ಪ್ರಯೋಗಗಳನ್ನು ಕಲ್ಯಾಣ ಕ್ರಾಂತಿಯಲ್ಲಿ ಗುರುತಿಸಬಹುದು.
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಅವನದೇ ಆದ ಪಾತ್ರಗಳಿವೆ. ಆ ಪಾತ್ರಗಳ ನಿರ್ವಹಣೆಯಲ್ಲಿ ಆತನ ವ್ಯಕ್ತಿತ್ವದ ನೇಯ್ಗೆ ಇರುತ್ತದೆ. ಇಂತಹ ಪಾತ್ರಗಳ ಪರಸ್ಪರ ಹೆಣಿಗೆಯಲ್ಲಿ ವ್ಯವಸ್ಥೆಯೊಂದು ರೂಪು ಪಡೆಯುತ್ತದೆ. ಇಡೀ ಸಮಾಜದ ಮನಸ್ಥಿತಿಯನ್ನು ನಿರ್ಧರಿಸುವುದು ಈ ವ್ಯವಸ್ಥೆಯೇ. ಹೀಗಾಗಿ ಇಡೀ ವ್ಯವಸ್ಥೆಯನ್ನು ತಮ್ಮ ಮುಂದೆ ಎಳೆಎಳೆಯಾಗಿ ಹರಡಿಕೊಂಡ ಬಸವಣ್ಣನವರು ಬದಲಾವಣೆಯ ದಿಕ್ಕನ್ನು ನಿರ್ಧರಿಸಿದರು. ಅಸ್ಪೃಶ್ಯರು, ಶೂದ್ರರು, ದೀನ ದಲಿತರು, ಮಹಿಳೆಯರು ಹೊಸ ವಿಚಾರಗಳಿಗೆ ಒಡ್ಡಿಕೊಂಡು ತಮ್ಮ ಸಂಕೋಚಗಳಿಂದ, ಕೀಳರಿಮೆಗಳಿಂದ ಹೊರಬಂದರು. ಮೇಲ್ವರ್ಗದ ಅನೇಕರು ತಮ್ಮ ಕುಲದ ಅಹಮ್ಮಿಕೆಯ ಭ್ರಾಂತಿಯನ್ನು ಬಿಡಿಸಿಕೊಂಡು, ಸಮಾನತೆಯ ತತ್ವವನ್ನು ಒಪ್ಪಿಕೊಂಡರು. ಹೀಗೆ ಸಹಜವಾದ ಸಮಾನತೆಯ ಹಕ್ಕುಗಳು ಅಲ್ಲಿ ನೆಲೆಗೊಂಡವು. ಆದರೆ ಹಕ್ಕುಗಳೊಂದಿಗೆ ಹೊಣೆಗಳು ಬೆರೆತಾಗಲೇ ಸಾಮಾಜಿಕ ಪರಿವರ್ತನೆ ಸಾಧ್ಯ. ಬಸವಣ್ಣನವರಲ್ಲಿ ಇದ್ದದ್ದು ಅಂಥ ದೂರದೃಷ್ಟಿ.
ಇವತ್ತಿನ ನಮ್ಮ ತಿಳಿವಳಿಕೆಯ ಪ್ರಕಾರ ಯಾವುದೇ ದೇಶದ ಪ್ರಜೆಗಳ ಹಿತ ರಕ್ಷಣೆಗೆ ಆ ನೆಲವು ನೀಡುವ ಮೂಲಭೂತ ಹಕ್ಕುಗಳು ಮತ್ತು ಜವಾಬ್ದಾರಿಗಳ ಪಾತ್ರ ಅತಿ ಅವಶ್ಯಕ. ಹಕ್ಕುಗಳು ವೈಯಕ್ತಿಕ ಹಿತಾಸಕ್ತಿಯನ್ನು ರಕ್ಷಿಸಿದರೆ, ಜವಾಬ್ದಾರಿಗಳು ಆ ನೆಲದ ಶಾಂತಿ ಮತ್ತು ಸಮೃದ್ಧಿಗೆ ಪೂರಕವಾಗಿರುತ್ತವೆ. ಅಮೆರಿಕದ ಜನಕ ಎಂದೇ ಹೆಸರಾದ ಥಾಮಸ್ ಜೆಫರ್ ಸನ್ ಒಂದು ಮಾತು ಹೇಳುತ್ತಾರೆ: A nation, as a society, forms a moral person, and every member of it is personally responsible for his society. (ಅಂದರೆ ರಾಷ್ಟ್ರವೊಂದು ಸಮಾಜವಾಗಿ, ನೈತಿಕ ವ್ಯಕ್ತಿಯನ್ನು ಸೃಷ್ಟಿಸುತ್ತದೆ. ಇಂಥ ಪ್ರತಿ ಸದಸ್ಯನೂ ವೈಯಕ್ತಿಕವಾಗಿ ಸಮಾಜಕ್ಕೆ ಜವಾಬ್ದಾರನಾಗಿರುತ್ತಾನೆ.) ಹಕ್ಕು, ಜವಾಬ್ದಾರಿ, ರಾಷ್ಟ್ರ ಎನ್ನುವ ಪದಗಳನ್ನು ಅಕ್ಷರಶಃ ಬಳಸದಿದ್ದರೂ ಆ ಕಾಲದಲ್ಲಿಯೇ ಇದರ ವ್ಯಾಪ್ತಿಯಲ್ಲಿ, ಹಾಗೂ ಇದಕ್ಕೂ ವಿಶಾಲವಾದ ನಿಲುವಿನಲ್ಲಿ ಪ್ರಜೆಗಳಿಗೆ ಹೊಸ ಬದುಕಿನ ಸಾಧ್ಯತೆಯನ್ನು ಬಸವಣ್ಣನವರು ಕಲ್ಪಿಸಿಕೊಟ್ಟಿದ್ದರು ಎನ್ನುವುದಕ್ಕೆ ಬಹುಮುಖ್ಯ ಸಾಕ್ಷಿ ಒದಗಿಸುತ್ತದೆ ಈ ವಚನ.
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.
ಬಸವಣ್ಣನವರು ಸರ್ವಸಮಾನತೆಯ ಮೇಲೆ ಕಟ್ಟ ಬಯಸಿದ್ದ ಸಮಾಜದ ಮೂಲ ಘಟಕ ‘ಶರಣ’. ಮೊದಲು ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಶರಣ ಎಂಬ ಪದವನ್ನು. ಶರಣನೆಂದರೆ ಒಬ್ಬ ಬಿಡಿ ವ್ಯಕ್ತಿಯಲ್ಲ, ಜಪ, ಸ್ತೋತ್ರ, ಪೂಜೆಗಳಲ್ಲಿ ಕಳೆದು ಹೋದ ಭಕ್ತನಲ್ಲ. ಒಂದು ಧರ್ಮಕ್ಕೆ, ಅದರ ನಿರ್ದಿಷ್ಟ ಆಚರಣೆಗಳಿಗೆ ಶರಣಾದವನು ಎಂಬರ್ಥವೂ ಅಲ್ಲ. ಶರಣ ಎಂದರೆ ಜವಾಬ್ದಾರಿಯುಳ್ಳ ಸಾಮಾಜಿಕ ಸದಸ್ಯ. (ಅಂದರೆ ನಮ್ಮ ಆಧುನಿಕ ಪರಿಭಾಷೆಯಲ್ಲಿ ಅತ್ಯುತ್ತಮ ನಾಗರಿಕ ಎಂದು ತೀರಾ ಸರಳೀಕರಿಸಬಹುದು.) ಲಿಂಗದ ಚೈತನ್ಯವನ್ನು ತನ್ನಲ್ಲಿ ಕಂಡುಕೊಂಡು, ಲಿಂಗ ಸ್ವರೂಪಿಯಾದ ಸಮಾಜಕ್ಕೆ, ಸಮಷ್ಠಿಗೆ ಬದ್ಧನಾದವನು ಎಂದರ್ಥ.
“ಅರಿದೊಡೆ ಶರಣ, ಮರೆದೊಡೆ ಮಾನವ” ಎಂಬ ಒಂದೇ ಸಾಲಿನ ವ್ಯಾಖ್ಯಾನವನ್ನು ಗಮನಿಸಿ. ಏನನ್ನು ಅರಿತವ ಶರಣನಾಗುತ್ತಾನೆ? ಏನನ್ನು ಮರೆತರೆ ಮಾನವನಾಗುತ್ತಾನೆ? ಎಂದು ಕೇಳಿದರೆ, “ಚೈತನ್ಯಮಯ ಸಮಷ್ಟಿಯ ಸ್ವರೂಪಿಯಾದ ದೇವರನ್ನು ಮರೆಯದೇ ಪೂಜಿಸು” ಎನ್ನುತ್ತಾರೆ. ಪೂಜಿಸುವುದೆಂದರೆ ಜಗತ್ತನ್ನು, ಜೀವರಾಶಿಯನ್ನು ದೇವಸ್ವರೂಪವೆಂದು ಭಾವಿಸಿ, ಆ ಭಾವನೆಗೆ ಚ್ಯುತಿ ಬರದಂತೆ ರಕ್ಷಿಸುವುದು. ತನ್ನನ್ನು, ತನ್ನ ಜವಾಬ್ದಾರಿಗಳನ್ನು ಅರಿತುಕೊಂಡು ಹಾಗೆ ಸಹಜವಾಗಿ ಆ ಕರ್ತವ್ಯವನ್ನು ಜೀವನದಲ್ಲಿ ತುಂಬಿಕೊಳ್ಳುವವನೇ ಶರಣ.
“ತನಗೆ ತಾನೇ ಕಟ್ಟುಪಾಡುಗಳನ್ನು ವಿಧಿಸಿಕೊಳ್ಳುವವನೇ ನಿಜವಾದ ಸ್ವತಂತ್ರ ವ್ಯಕ್ತಿ” ಎನ್ನುತ್ತಾರೆ ಮಹಾತ್ಮ ಗಾಂಧೀಜಿ. ಛಲ ಎಂದರೆ ಒಂದರ್ಥದಲ್ಲಿ self- discipline. ತನಗೆ ತಾನೇ ಹಾಕಿಕೊಳ್ಳುವ ನಿರ್ಬಂಧ. ಹಾದಿ ತಪ್ಪದಂತೆ, ತಾನು ನಂಬಿದ ತತ್ವಗಳಿಗೆ ತನ್ನನ್ನು ತಾನೇ ಕೊಟ್ಟುಕೊಳ್ಳುವುದು, ನೀತಿ ನಿಯಮಗಳಿಗೆ ಕಟ್ಟಿಕೊಳ್ಳುವುದು. ಮೇಲಿನ ವಚನದಲ್ಲಿ ಉಲ್ಲೇಖಿಸಿರುವ ಐದು ಛಲಗಳನ್ನು ಈಗ ನೋಡಿ. ಜೀವನಕ್ಕೆ ನೈತಿಕ ಬೇಲಿ ಹಾಕಿ ಅಸಾಮಾನ್ಯ ರೀತಿಯಲ್ಲಿ ವ್ಯಕ್ತಿತ್ವವನ್ನು ವಿಕಸಿಸುವ ಪಂಚ ಸ್ವನಿಯಮಗಳಂತೆ ತೋರುತ್ತವೆ.

ಪರಧನವನೊಲ್ಲೆ, ಪರಸತಿಯನೊಲ್ಲೆ: ಮನುಷ್ಯನ ದಾಹಕ್ಕೆ ಪ್ರಳಯಾಂತಕ ಶಕ್ತಿ ಇದೆ. ಎಲ್ಲವನ್ನೂ ನುಂಗಿ ನೀರು ಕುಡಿದೇನು ಎನ್ನುವಷ್ಟು ಹಪಾಹಪಿ ಇರುತ್ತದೆ. ತನ್ನದಲ್ಲದ ಹಣ ಮತ್ತು ಹೆಣ್ಣು (ಪುರುಷನಿಗೆ ಪರಸ್ತ್ರೀ, ಸ್ತ್ರೀಗೆ ಪರಪುರುಷ) ಎರಡೂ ಕೆಂಡದಂತೆ. ಜೀವಂತವಾಗಿ ದಹ���ಸಿ ಬಿಡುತ್ತವೆ. ಅವುಗಳಿಗಾಗಿ ಆಶಿಸುವುದು, ತನ್ನದಾಗಿಸಿಕೊಳ್ಳಲು ನಾನಾ ವಾಮಮಾರ್ಗಗಳನ್ನು ಹಿಡಿಯುವುದು ಎಲ್ಲ ಅಶಾಂತಿಗಳಿಗೂ ಮೂಲ. ವಿವೇಕವನ್ನು ಮಣಿಸಿ, ವಿನಾಶಕ್ಕೆ ದೂಡುವ ಇಂಥ ಸೆಳೆತಗಳನ್ನು ಮೀರಬೇಕೆನ್ನುತ್ತಾರೆ ಬಸವಣ್ಣ.
ಮನಸ್ಸಿನ ನಿಗಿನಿಗಿ ಕೆಂಡ ಕಾಮ. ಸತಿ- ಪತಿಯ ನಡುವೆ ಅದು ಹಿತವಾದ ಅಗ್ಗಷ್ಟಿಕೆ. ಪರಸತಿ- ಪರ ಪುರುಷರ ನಡುವೆ ಪ್ರವಹಿಸಿದರೆ ಅದು ಲಾವಾರಸ. ವೈಯಕ್ತಿಕ ಬದುಕಿನೊಂದಿಗೆ ಸುತ್ತಣದ ಶಾಂತಿಯನ್ನೂ ಅದು ಕೊಚ್ಚಿ ಹಾಕಬಲ್ಲದು. ವಿಷಯಾದಿಗಳನ್ನು ಬೆನ್ನು ಹತ್ತುವುದರಿಂದ ದೇಹ ದಣಿಯುತ್ತದೆ, ಮನಸ್ಸು ಬಳಲುತ್ತದೆ. ಬದುಕಿನ ಲಯ ತಪ್ಪುತ್ತದೆ, ಹಿಡಿವ ಹಾದಿ ಘೋರವಾಗಿರುತ್ತದೆ. ಮನಸ್ಸಿಗೆ ಬೇಕೆನಿಸಿದ್ದನ್ನೆಲ್ಲಾ ತನ್ನದಾಗಿಸಿಕೊಳ್ಳುವ ಸ್ವಾರ್ಥದಲ್ಲಿ ಸಂಭವಿಸಿದ ಹೆಲನ್ ಆಫ್ ಟ್ರಾಯ್ ಯಂಥ ಘೋರ ಯುದ್ಧಗಳು ಅಸಂಖ್ಯಾತ. ಜಗತ್ತಿನ ಇತಿಹಾಸದ ಎಷ್ಟೋ ಪುಟಗಳು ಇದೇ ಕಾರಣಕ್ಕೆ ರಕ್ತಸಿಕ್ತವಾಗಿವೆ.
ವೈಯಕ್ತಿಕವಾಗಿ ಶೀಲವನ್ನೂ, ಜೀವನ ನಿರ್ವಹಣೆಗೆ ಚಿತ್ತ ಶುದ್ಧ ಕಾಯಕದ ಗಳಿಕೆಯ ಮಹತ್ವವನ್ನೂ ಇಲ್ಲಿ ಸೂಚ್ಯವಾಗಿ ತಿಳಿಸಲಾಗಿದೆ. ಸಂಸಾರವನ್ನು ಶರಣರು ಹೇಯವಾಗಿ ಕಾಣುವುದಿಲ್ಲ. ದಾಂಪತ್ಯದ ಅಗತ್ಯವನ್ನೂ, ಮಹತ್ವವನ್ನೂ ಅರಿತು ಅರ್ಥಪೂರ್ಣವಾಗಿ ಜೀವನ ನಡೆಸಿ, ಅವರು ಸಂಸಾರ ಯೋಗಿಗಳೆನಿಸಿಕೊಂಡರು. ಅದೇ ರೀತಿ ಪರಿಶ್ರಮದ ದುಡಿಮೆಯನ್ನು ಪರಮಾತ್ಮನಂತೆ ಪೂಜಿಸಿದರು. ಇಂಥ ಕಾಯಕ ನಿಷ್ಠೆಯಿಂದ ಗಳಿಸಿಯೇ ಬದುಕುವಲ್ಲಿ ಅಪಾರ ತೃಪ್ತಿ ಇದೆ. ಶರಣ ಧರ್ಮದ ಮೂಲಾಧಾರವೇ ಸ್ವಂತ ಪರಿಶ್ರಮ ಮತ್ತು ಸತ್ಯ ಶುದ್ಧ ಕಾಯಕದ ಗಳಿಕೆ.

ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ: ಧರ್ಮ, ದೇವರ ವಿಷಯದಲ್ಲಿ ಮನಸ್ಸು ಬೇಗ ದುರ್ಬಲವಾಗುತ್ತದೆ. ದೇವ- ದೇವತೆಗಳ ಹೆಸರಿನಲ್ಲಿ ನಡೆಯುವ ಶೋಷಣೆಗಳು ಸೂಕ್ಷ್ಮವಾದವು, ಆಳವಾದವು. ಸ್ವರ್ಗ-ನರಕಗಳನ್ನು ಸೃಷ್ಟಿಸಿ, ಕರ್ಮವಾದವನ್ನು ಹುಟ್ಟು ಹಾಕಿ, ಯಜ್ಞ-ಯಾಗಗಳ ನೆಪದಲ್ಲಿ ಇವು ಮನುಷ್ಯ ಕುಲವನ್ನೇ ಹಿಂಡಿ ಹಿಪ್ಪೆ ಮಾಡಿವೆ. ಧರ್ಮಗಳ ಈ ಎಲ್ಲ ಆವಾಂತರಗಳನ್ನು ಧಿಕ್ಕರಿಸಿದ ಬಸವಣ್ಣನವರು ದಯೆಯ ಮೂಲದಲ್ಲಿ ಸಹಜ ಬದುಕಿನ ಧರ್ಮ ಕೊಟ್ಟರು. ಭೌತಿಕಕ್ಕೆ ಜೋತು ಬೀಳದೆ, ಚೈತನ್ಯಮಯಿಯಾದ ಜೀವ-ಜಗತ್ತನ್ನು ಸಲಹುವ ಮಾರ್ಗವನ್ನು ಇಷ್ಟಲಿಂಗದ ರೂಪದಲ್ಲಿ ತೋರಿಸಿಕೊಟ್ಟರು. ಅವರು ಕೊಟ್ಟ ಲಿಂಗ ಉಪಾಧಿತವಲ್ಲ, ಅದು “ನಿರುಪಾಧಿತ ಲಿಂಗ”ವಾಗಿ ಜೀವನವನ್ನು ಬೆಳಗುವಂಥದು. ಶರಣರು ಲಿಂಗಾರಾಧಕರಲ್ಲ. ಬದಲಿಗೆ ಲಿಂಗಜೀವಿಗಳು. ಲಿಂಗಯೋಗಿಗಳು. ಇದನ್ನು ಬಿಟ್ಟು ಜಡದೈವಗಳ ಆರಾಧನೆ ಸಲ್ಲದು. ಅಂಥ ಛಲ ಶರಣನದಾಗಿರಲಿ ಎಂದರು.

ಲಿಂಗಜಂಗಮವೊಂದೆಯೆಂಬ: ಗಾಂಧೀಜಿ ಸತ್ಯವನ್ನೇ ದೇವರು ಎಂದು ನಂಬಿದ್ದರು. ಸತ್ಯ ಮತ್ತು ಅಹಿಂಸೆಗಳ ಮೇಲೆ ಅವರ ವಿಚಾರಗಳು ವ್ಯಕ್ತವಾಗುತ್ತಿದ್ದವು. ಆದರೆ ನಂತರದ ದಿನಗಳಲ್ಲಿ ಅವರು ಸತ್ಯ ಮತ್ತು ಅಹಿಂಸೆ ಎರಡೂ ಒಂದೇ ಎಂದು ಹೇಳುತ್ತಿದ್ದರು. ಬಸವಣ್ಣನವರ ವಿಚಾರಗಳಲ್ಲಿಯೂ ಇಂಥ ಒಂದು ಸಾಮ್ಯತೆಯನ್ನು ಗುರುತಿಸಬಹುದು. ಲಿಂಗ ಮತ್ತು ಜಂಗಮ ದೇವರ ಅಂತರಂಗ ಮತ್ತು ಬಹಿರಂಗ ಮುಖಗಳು. “ಲಿಂಗ ವ್ಯಸನಿ, ಜಂಗಮಪ್ರೇಮಿಯೆನಿಸಯ್ಯಾ” ಎಂದು ಉಭಯ ತತ್ವಗಳನ್ನು ಸಮಾನವಾಗಿ ಕಾಣಬೇಕೆಂದು ಹೇಳುತ್ತಿದ್ದ ಬಸವಣ್ಣನವರು ಮುಂದೆ “ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ” ಎಂದು ಇವೆರಡರಲ್ಲಿ ಭೇದವಿಲ್ಲ ಎಂಬ ನಿಲುವಿಗೆ ಬರುತ್ತಾರೆ. ಜಂಗಮವೇ ಲಿಂಗವೆಂದು ನಂಬಿದೆ, ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳೊಡೆ ತೋರುವ… ಎಂದು ಅನೇಕ ವಚನಗಳಲ್ಲಿ ತಮ್ಮ ಈ ನಿಲುವನ್ನು ಗಟ್ಟಿಗೊಳಿಸಿದ್ದಾರೆ. ಇದು ಅತಿ ಮುಖ್ಯವಾದ ವಿಚಾರ. ಸ್ಥಾವರವಾದುದನ್ನೆಲ್ಲ ಧಿಕ್ಕರಿಸಿದ ಬಸವಣ್ಣನವರು ತಾವು ಕೊಟ್ಟ ಇಷ್ಟಲಿಂಗವೂ ಸ್ಥಾವರವಾಗಿ ಯಾಂತ್ರಿಕ ಪೂಜೆಗೆ ಈಡಾಗದಿರಲೆಂಬ ಎಚ್ಚರಿಕೆ ಹೊಂದಿದ್ದರು. ಪರಮಾತ್ಮನ ಇರುವನ್ನು ಪ್ರಪಂಚದಲ್ಲಿಯೇ ಗುರುತಿಸಬೇಕು, ಅಲ್ಲಿಯೇ ಪೂಜಿಸಬೇಕು. ಮರದ ಬಾಯಿ ಬೇರು, ಲಿಂಗದ ಬಾಯಿ ಜಂಗಮ ಎಂದು ಲಿಂಗದ ಸಾನ್ನಿಧ್ಯವನ್ನು ಲೋಕದ ಚರಾಚರಗಳಲ್ಲಿ ಗುರುತಿಸಲು ಪ್ರೇರೇಪಿಸುತ್ತದೆ. ಸಮಾಜದ ಹಿತದಲ್ಲಿ ತನ್ನ ಹಿತ ಕಾಣುವ ಅಂತಃಕರಣವನ್ನು ಬೆಳೆಸಬಲ್ಲ ಛಲ ಇದು.

ಪ್ರಸಾದ ದಿಟವೆಂಬ: ಕೊನೆಯದಾಗಿ ಸೂಚಿಸುವ ‘ಪ್ರಸಾದ ದಿಟವೆಂಬ’ ಎನ್ನುವ ಛಲ ತುಂಬಾ ಮಾರ್ಮಿಕವಾದುದು. ಮೇಲಿನ ಛಲಗಳನ್ನು ಸಾಧಿಸುತ್ತಾ ಬರುವ ಮನಸ್ಸು ಈ ಹಂತದಲ್ಲಿ ಮಾಗಿರುತ್ತದೆ. ಪರಧನವನೊಲ್ಲೆ, ಪರಸತಿಯನೊಲ್ಲೆ, ಪರದೈವವನೊಲ್ಲೆ… ಎನ್ನುವ ಪರಿಯಲ್ಲಿ ಜೀವಕ್ಕೆ ಗಟ್ಟಿತನ ಪ್ರಾಪ್ತವಾಗುತ್ತದೆ. ಏಕೆಂದರೆ ಆಕರ್ಷಣೆಗಳನ್ನು, ಸೆಳೆತಗಳನ್ನು ನಿರಾಕರಿಸಲು ಪ್ರಚಂಡ ಮನೋಬಲ ಬೇಕು. ತನಗೆ ಹಿತವಲ್ಲದ್ದನ್ನು ನಿರಾಕರಿಸುವ ಮನಸ್ಥಿತಿಯೇ ಜೀವಕ್ಕೆ ಅದಮ್ಯ ಶಕ್ತಿಯನ್ನು ತಂದುಕೊಡುತ್ತದೆ. ಗೋಜಲುಗಳಿಂದ ಮುಕ್ತವಾದಾಗ ನಿರಾಳ ಭಾವ ಪ್ರಾಪ್ತವಾಗುತ್ತದೆ. ಆಸೆ, ಆಮಿಷಗಳ ಸೆಳೆತ ದಾಟಿದವನು ಚಿರಾಯು ಎನ್ನುತ್ತಾರೆ. ಇನ್ನು ಲಿಂಗಜಂಗಮವೊಂದೆಯೆಂಬೆ… ಎನ್ನುವ ಪರಿಯಲ್ಲಿ ತನ್ನ ದುಡಿಮೆಯ ಸಾರ್ಥಕತೆಗೆ, ಬದುಕಿನ ಅರ್ಥವಂತಿಕೆಗೆ ಹೊಸ ಆಯಾಮವೊಂದು ಸಿಕ್ಕಂತಾಗುತ್ತದೆ. ಆಗ ಮೂಡುವುದೇ ಪ್ರಸನ್ನ ಭಾವ. ಪ್ರಸನ್ನತೆಯೇ ಪ್ರಸಾದ. ಇದೇ ಬದುಕಿನ ಸಾರ್ಥಕ್ಯ. ಇದು ದಿಟ, ಸತ್ಯ, ಗಟ್ಟಿಯಾದುದು ಹಾಗೂ ಚಿರವಾದುದು.
ವಿವಿಧ ಹಿನ್ನೆಲೆಗಳಿಂದ ಬಂದಿದ್ದ ಅಸಂಖ್ಯಾತ ಶರಣರು ಸಂಸಾರಿಗಳಾಗಿದ್ದರೂ ಜಂಜಾಟದಿಂದ ಮುಕ್ತರಾಗಿ ಬದುಕಲು ಸಾಧ್ಯವಾಗಿದ್ದು ಬಹುಶಃ ಇಂಥ ಛಲಗಳಿಂದ. ಮಾನವ ಶರಣನಾಗುವ ಹಾದಿ ಇದು. ಶರಣನ ವ್ಯಕ್ತಿತ್ವ ಪೂರ್ಣವಾಗುವ ಮಾರ್ಗವೂ ಇದೇ. ಛಲದ ಹೆಸರಿನಲ್ಲಿ ಜವಾಬ್ದಾರಿಗಳನ್ನು ಬದುಕಿನ ಲಯಕ್ಕೆ ಹೊಂದಿಸಿದಂತೆ ತೋರುತ್ತದೆ. ವೈಯಕ್ತಿಕ ಘನತೆಯನ್ನು ಎತ್ತಿ ಹಿಡಿದ ಶರಣರು ಇಂಥ ಅಭೂತಪೂರ್ವ ಸಾಮಾಜಿಕ ಜವಾಬ್ದಾರಿಯ ದೀಕ್ಷೆಯನ್ನೂ ಸಹಜವೆಂಬಂತೆಯೇ ಸ್ವೀಕರಿಸಿಬಿಟ್ಟರು. ಆದ್ದರಿಂದಲೇ ನಶ್ವರವೆನಿಸುವ ಬದುಕಿನ ದಾಹಗಳು ಶರಣರನ್ನು ಕಾಡಲಿಲ್ಲ. ಅಂಥವುಗಳನ್ನು ಅವರು ಕಣ್ಣೆತ್ತಿಯೂ ನೋಡಿದಂತೆ ಕಾಣುವುದಿಲ್ಲ.
ದೇವರು ಅಥವಾ ಧಾರ್ಮಿಕ ಆಚರಣೆಗಳಿಗಿಂತ ಬಸವಣ್ಣನವರಿಗೆ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಾಸ ಮತ್ತು ಆಧ್ಯಾತ್ಮಿಕ ಸಾಧನೆ ಮುಖ್ಯವಾಗಿದ್ದಂತೆ ತೋರುತ್ತದೆ. ಅದೇ ರೀತಿ ಸಾಮಾಜಿಕ ಒಳಿತಿನ ಬಗ್ಗೆ ಕಾಳಜಿಯಿಲ್ಲದ ಪಾರಮಾರ್ಥಿಕತೆಯನ್ನೂ ಅವರು ಪೋಷಿಸಲಿಲ್ಲ. ಪ್ರಭುತ್ವವನ್ನು ದೈನ್ಯದಿಂದ ನೋಡದಂಥ ಸ್ವಾವಲಂಬಿ ಸಮಾಜ ನಿರ್ಮಾಣ ಅವರ ಆಶಯವಾಗಿತ್ತು. ಅಂತೆಯೇ ಶರಣರು ತಮ್ಮ ಕಾಲ ಮೇಲೆ ತಾವು ನಿಂತು ಸ್ವಾಭಿಮಾನದಿಂದ ಬದುಕಿದರು, ತಮ್ಮಂತೆ ಸಮಾಜವನ್ನೂ ದಾಸೋಹದ ಹೆಸರಲ್ಲಿ ಸಲುಹಿದರು. ತಮ್ಮ ಸಮಸ್ಯೆಗಳನ್ನು, ಅಹವಾಲುಗಳನ್ನು ಹಿಡಿದುಕೊಂಡು ಯಾವೊಬ್ಬ ಶರಣರೂ ರಾಜನನ್ನು ಅಂಗಲಾಚಲಿಲ್ಲ. ಶರಣರ ವಚನಗಳಲ್ಲಿ ರಾಜನ ಸ್ತುತಿಯ ಒಂದೇ ಒಂದು ಪದವನ್ನೂ ಕಾಣುವುದಿಲ್ಲ.
ಜಗತ್ತಿನ ಮೊದಲ ಸಮಾಜವಾದಿ ದೇಶ ಸೋವಿಯತ್ ಒಕ್ಕೂಟವು he who does not work neither shall he eat (‘ದುಡಿಯಲಾರದವ ತಿನ್ನಲಿಕ್ಕೂ ಅರ್ಹನಲ್ಲ’) ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಸಂವಿಧಾನ ರಚಿಸಿತು. ಅಲ್ಲಿ ಮೂಲಭೂತ ಹಕ್ಕುಗಳ ಜೊತೆಯಲ್ಲೇ ಕರ್ತವ್ಯಗಳನ್ನು ನಮೂದಿಸಲಾಗಿತ್ತು. ಭಾರತವು 1976ರಲ್ಲಿ ಸೋವಿಯತ್ ಮಾದರಿಯನ್ನು ಅನುಸರಿಸಿ, 42ನೆಯ ಸಂವಿಧಾನದ ತಿದ್ದುಪಡಿಯ ಮೂಲಕ ಕರ್ತವ್ಯಗಳನ್ನು 51ಎ ಕಲಂನಲ್ಲಿ ಸಂವಿಧಾನಕ್ಕೆ ಸೇರಿಸಿಕೊಂಡಿತು. ಏನೇ ಆಗಲಿ, ಪರಿಣಾಮ ಒಂದೇ- ಶೂನ್ಯ. ಕೇವಲ ರಾಜಕೀಯ ವ್ಯವಸ್ಥೆಗಳನ್ನು ಬದಲಿಸುವುದರಿಂದ; ಕಾನೂನು, ಕಾಯ್ದೆಗಳನ್ನು ಬಿಗಿಪಡಿಸುವುದರಿಂದ ವ್ಯಕ್ತಿ ಬದಲಾಗುವುದಿಲ್ಲ, ಸಮಾಜ ಪ್ರಗತಿ ಸಾಧಿಸುವುದಿಲ್ಲ ಎಂಬುದನ್ನು ಕಮ್ಯೂನಿಸ್ಟ್ ರಾಷ್ಟ್ರಗಳಿಂದ ಹಿಡಿದು ಎಲ್ಲಾ ಸಿದ್ಧಾಂತಗಳ ರಾಜ್ಯಾಡಳಿತಗಳು ಇಂದು ನಮಗೆ ತೋರಿಸಿಕೊಟ್ಟಿವೆ. ಬಾಹ್ಯದ ಒತ್ತಡಗಳಿಂದ ಹೇರಲ್ಪಡುವ ವಿಚಾರಗಳು ಒಳಗಿಳಿಯುವುದಿಲ್ಲ, ನಿಜವಾದ ಬದಲಾವಣೆ ತರುವುದಿಲ್ಲ. ಉನ್ನತ ವಿಚಾರಗಳು ಛಲದ ರೂಪದಲ್ಲಿ ಮನಸ್ಸಿನೊಳಗೆ ಇಳಿಯಬೇಕು, ಅವುಗಳ ಅನಿವಾರ್ಯತೆ ಸ್ಷಷ್ಟವಾಗಿ ಮನದಟ್ಟಾದರೆ ಮಾತ್ರ ಮನುಷ್ಯ ಬದಲಾಗಬಲ್ಲ. ಶರಣನಾಗಿ ಅರಳಬಲ್ಲ.
ಸಾಮಾಜಿಕ ಬದುಕು ಮನುಷ್ಯನ ಅಂತರಂಗದ ಬದುಕಿನಷ್ಟೇ ನಿಜವಾದದ್ದು, ಮಹತ್ವಪೂರ್ಣವಾದದ್ದು. ನಮ್ಮ ಜೀವನವು ಸಾಮಾಜಿಕ ಜೀವನಕ್ಕೆ ಸಾಧನವಾದಾಗ ನಿಶ್ಚಯವಾಗಿ ಅಲ್ಲೊಂದು ಕಲ್ಯಾಣ ರಾಜ್ಯ ನಿರ್ಮಾಣವಾಗುತ್ತದೆ. ಬಸವಣ್ಣನವರು ತಿಳಿಸಿದ ಛಲಗಳು ಇದಕ್ಕೆ ದಾರಿ ತೋರಿಸುತ್ತವೆ. ಗಾಂಧೀಜಿ ಯಾವುದಕ್ಕಾಗಿ ಹಗಲಿರುಳು ಆಶಿಸಿದ್ದರೋ, ಅಂಬೇಡ್ಕರ್ ತಮ್ಮ ಜನರಿಗಾಗಿ ಎಂಥ ನ್ಯಾಯ ಸಿಗಬೇಕೆಂದು ತುಡಿದಿದ್ದರೋ ಅವು 12ನೇ ಶತಮಾನದ ಆ ಬಸವ ವರ್ಷಗಳಲ್ಲಿ ಕಾರ್ಯರೂಪಕ್ಕೆ ಬಂದಿದ್ದವು. ಬದುಕನ್ನು ಸರಳಗೊಳಿಸುವ, ಸಹ್ಯವಾಗಿಸುವ, ನಿರ್ಭೀತಿಯ ನಿಷ್ಠುರತೆಯನ್ನು ಜೀವಕ್ಕೆ ಒದಗಿಸುವ ಈ ಛಲಗಳು ಪಾಲನೆಗೆ ಅಸಾಧ್ಯವೆನಿಸುತ್ತವೆಯೇ, ಒಮ್ಮೆ ಯೋಚಿಸಿ.

Previous post ತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
Next post ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ

Related Posts

ಬಸವನಾ ಯೋಗದಿಂ…
Share:
Articles

ಬಸವನಾ ಯೋಗದಿಂ…

July 1, 2018 ಡಾ. ಪಂಚಾಕ್ಷರಿ ಹಳೇಬೀಡು
ನಮ್ಮ ಕಿವಿಯ ಮೇಲೆ ಪ್ರತಿನಿತ್ಯ ಯೋಗ ಎಂಬ ಶಬ್ದ ಹಲವಾರು ಬಾರಿ  ಅಪ್ಪಳಿಸುತ್ತದೆ. ಲಕ್ಷಾಂತರ ಯೋಗ ತರಬೇತಿ ಶಾಲೆಗಳು ಜಗತ್ತಿನಾದ್ಯಂತ ಮೈಚಾಚಿಕೊಂಡಿವೆ, ಯೋಗ ಈಗ ಒಂದು ಹುಲುಸಾದ...
ಅರಿವು ಕಣ್ತೆರೆಯದವರಲಿ….
Share:
Articles

ಅರಿವು ಕಣ್ತೆರೆಯದವರಲಿ….

August 5, 2018 ಕೆ.ಆರ್ ಮಂಗಳಾ
ಪ್ರಪಂಚದಲ್ಲಿ ಬಹಳಷ್ಟು ಬಿಡಿಸಲಾಗದ ಸಮಸ್ಯೆಗಳಿವೆ. ಆದರೆ ಅವುಗಳಲ್ಲಿ ಒಂದು ಶಬ್ದ ಮಾತ್ರವೇ ‘ಕಠಿಣ ಕಗ್ಗಂಟು’ (ಬಿಡಿಸಲಾಗದ ಒಗಟು!?) ಎಂದು ಗುರುತಿಸಿಕೊಂಡಿದೆ. ಆ ಶಬ್ದವೇ...

Comments 1

  1. G.B.Patil
    Sep 6, 2018 Reply

    Fabulous writings,high quality.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
July 4, 2021
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
Copyright © 2023 Bayalu