Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
Share:
Articles January 7, 2022 ಡಾ. ವಿಜಯಕುಮಾರ್ ಬೋರಟ್ಟಿ

ಘನಲಿಂಗಿ ದೇವರು ಮತ್ತು ವಚನ ಇತಿಹಾಸ

ಶಿವ ಶರಣರ ವಚನ ಸಾಹಿತ್ಯ ಆಧುನಿಕ ಕಾಲಘಟ್ಟದಲ್ಲಿ ನೂರಾರು ಬಾರಿ ಪ್ರಕಟಗೊಂಡಿವೆ. ನೂರಾರು ಸಂಖ್ಯೆಯಲ್ಲಿ ವಚನಗಳ ಸಂಗ್ರಹಣೆ, ಸಂಕಲನ ಮತ್ತು ಪ್ರಕಟಣೆಯನ್ನು ನಾವು ಕಳೆದ ನೂರೈವತ್ತು ವರ್ಷಗಳಲ್ಲಿ ನೋಡಿದ್ದೇವೆ. ಈ ಪ್ರಕಟಣೆಯ ಪರಂಪರೆಗೆ ಭದ್ರ ಅಡಿಪಾಯವನ್ನು ಹಾಕಿಕೊಟ್ಟವರು ಸುಪ್ರಸಿದ್ಧ ಫ.ಗು. ಹಳಕಟ್ಟಿಯವರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ! ವಚನ ಸಾಹಿತ್ಯದ ಮೇಲೆ ಅವರ ಅಗಾಧವಾದ ಪರಿಶ್ರಮ, ಅಭ್ಯಾಸ ಮತ್ತು ವಿದ್ವತ್ಪೂರ್ಣ ಅಧ್ಯಯನಗಳನ್ನು ಗಮನಿಸಿ ಅವರನ್ನು ಅನೇಕರು ‘ವಚನ ಗುಮ್ಮಟ’ವೆಂದು ಪ್ರಶಂಸೆಯಿಂದ ಹೊಗಳಿದ್ದಾರೆ. 1923ರ ಅವರ ‘ವಚನ ಶಾಸ್ತ್ರ ಸಾರ’ ಈ ದಿಕ್ಕಿನಲ್ಲಿ ಒಂದು ಮೈಲಿಗಲ್ಲು. ಆ ನಂತರದ ವಚನ ಪ್ರಕಟಣೆಗಳು ಒಂದು ಪ್ರತ್ಯೇಕ ಪರಂಪರೆಯನ್ನೇ ಹುಟ್ಟು ಹಾಕಿವೆ. ಜಾತ್ಯಾತೀತ, ಪ್ರಗತಿಪರ, ಸುಧಾರಣೆ ಮತ್ತು ಸಮಾನತೆಯ ಚೌಕಟ್ಟಿನಲ್ಲಿ ವಚನಗಳನ್ನು ವ್ಯಾಖ್ಯಾನಿಸಿದುದು ಹಳಕಟ್ಟಿಯವರ ಸಾಧನೆ ಎಂದು ತಿಳಿಯಬಹುದು. ಆದರೆ ವಚನ ಸಾಹಿತ್ಯದ ಆಧುನಿಕ ಪ್ರಕಟಣೆಯ ಇತಿಹಾಸವನ್ನು ವಿದ್ವಾಂಸರು ಅಥವಾ ಸಂಶೋಧಕರು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿದ್ದಾರೆಂದು ನನಗೆ ಅನಿಸುವುದಿಲ್ಲ. ಎಮ್.ಎಮ್. ಕಲ್ಬುರ್ಗಿಯವರ ‘ವಚನ ಸಾಹಿತ್ಯ ಇತಿಹಾಸ’ ಇದಕ್ಕೆ ಅಪವಾದವಾಗಿದ್ದರೂ, ವಚನ ಪ್ರಕಟಣೆಗಳ ಸಾಂಸ್ಕೃತಿಕ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಈ ಪುಸ್ತಕ ಮಾಡುವುದಿಲ್ಲ. ಸಾಂಸ್ಕೃತಿಕ ರಾಜಕಾರಣ ಅಂದರೆ ಬರವಣಿಗೆಗಳನ್ನು ಪ್ರಕಟಿಸುವುದರ ಮೂಲಕ ಸಂಸ್ಕೃತಿಯನ್ನು ಒಂದು ಪ್ರತ್ಯೇಕ ಸೈದ್ಧಾಂತಿಕ ಮತ್ತು ಧಾರ್ಮಿಕ ಚೌಕಟ್ಟಿನೊಳಗೆ ತಂದು ಅದರಲ್ಲಿ ಗುರುತರವಾದ ಬದಲಾವಣೆಗಳನ್ನು ಮಾಡುವ ಪ್ರಯತ್ನಗಳು ಎಂಬರ್ಥದಲ್ಲಿ ತಿಳಿದುಕೊಳ್ಳಬಹುದು. ಈ ನಿಟ್ಟಿನಲ್ಲಿ ವಚನ ಸಾಹಿತ್ಯದ ಆಧುನಿಕ ಪ್ರಕಟಣೆಗಳ ಇತಿಹಾಸವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಹಳಕಟ್ಟಿ ಯುಗದಿಂದ ಶುರು ಮಾಡಿಕೊಳ್ಳದೆ, ಹಳಕಟ್ಟಿ-ಪೂರ್ವ ಯುಗದ ಪ್ರಕಟಣೆಗಳನ್ನು ಸಹ ಒಳಗೊಳ್ಳಬೇಕಾಗುತ್ತದೆ. ಈ ಸೂಚನೆಗೆ ಪೂರಕವಾಗುವಂತೆ ಪ್ರಸ್ತುತ ಲೇಖನದಲ್ಲಿ ಹಳಕಟ್ಟಿ-ಪೂರ್ವದ ಒಂದೆರಡು ವಚನ ಪ್ರಕಟಣೆಯನ್ನು ಅಭ್ಯಸಿಸಿ, ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಾಗಿದೆ.

ಹಳಕಟ್ಟಿಯವರು ಸಂಪೂರ್ಣವಾಗಿ ವಚನ ಅಧ್ಯಯನಕ್ಕೆ ತೊಡಗಿಸಿಕೊಳ್ಳುವ ಮೊದಲೆ (ಅಂದರೆ ಅವರ ‘ವಚನಶಾಸ್ತ್ರ ಸಾರ’ ವು ಪ್ರಕಟಗೊಳ್ಳುವ ಮೊದಲು) ವಚನಗಳ ಅನೇಕ ಪ್ರಕಟಣೆಗಳು ಹೊರ ಬಂದಿದ್ದವು. ಬಾಲ ಸಂಗಯ್ಯನ ಶಿಖಾರತ್ನ ಪ್ರಕಾಶ (1883) ದಲ್ಲಿನ ವಚನಗಳು ಮೊದಲ ಪ್ರಕಟಣೆಗಳು. ನಂತರ ಸಿದ್ಧೇಶ್ವರ ವಚನ (1885), ನಿಃಕಲರ ವಚನ (1885), ಮಡಿವಾಳ ಮಾಚಯ್ಯನ ವಚನ, ನುಲಿ ಚಂದಯ್ಯನ ಶಾರದ (1886) ತೋಂಟದ ಸಿದ್ಧಲಿಂಗೇಶ್ವರ, ಅಖಂಡೇಶ್ವರ, ಮೌನೇಶ್ವರ (ಎಲ್ಲವೂ 1887), ಬಸವಣ್ಣ (1887 ಮತ್ತು 1889), ಮತ್ತು ಅಂಬಿಗರ ಚೌಡಯ್ಯ (ಎರಡನೆ ಸಂಚಿಕೆ 1905), ಗಣಭಾಷ್ಯ ರತ್ನಮಾಲೆ (1909), ಘನಲಿಂಗಿ ದೇವರು ನಿರೂಪಿಸಿದ ವೀರಶೈವ ಸಿದ್ಧಾಂತ ವಚನ (1907), ಮುಕ್ತ್ಯಂಗನಾ ಕಂಠಮಾಲೆ ಮತ್ತು ಜ್ಯೋತಿರ್ಮಯ ಶಾಂಭವಿ (1907?) ಮತ್ತು ಅಂಬಿಗರ ಚೌಡಯ್ಯನ ವಚನ ಶಾಸ್ತ್ರ (1914), ನಿಜಗುಣ ವಚನ, ಟೀಕು ನಿಜಗುಣ ವಚನ, ಸರ್ವಜ್ಞ ಮೂರ್ತಿ ವಚನ, ಟೀಕು ಸರ್ವಜ್ಞ ಮೂರ್ತಿ ವಚನ, ಮೌನೇಶ್ವರ ವಚನ, ಷಡಾಕ್ಷರಯ್ಯ ವಚನ, ಇತ್ಯಾದಿಗಳು ಪ್ರಕಟಿಸಲ್ಪಟ್ಟಿದ್ದವು.

1880ರ ನಂತರದ ದಶಕದಲ್ಲಿ ಪ್ರಕಟಗೊಂಡ ಈ ವಚನ ಸಂಕಲನಗಳಲ್ಲಿ ಶಕ್ತಿ ವಿಶಿಷ್ಟಾದ್ವೈತ, ಶಿವಾಗಮ ಅಥವಾ ಶಿವಾದ್ವೈತ ಚೌಕಟ್ಟು 1920ರ ವರೆಗೆ (ಸುಮಾರು 40 ವರ್ಷಗಳ ಕಾಲ) ಮುಂದುವರೆಯಿತು. ಈ ಅವಧಿಯಲ್ಲಿ ವೇದ, ಉಪನಿಷತ್ ಮತ್ತು ಆಗಮಗಳನ್ನು ವೀರಶೈವ ದೃಷ್ಟಿಯಿಂದ ವ್ಯಾಖ್ಯಾನಿಸಿ, ತಮ್ಮ ಮತವನ್ನು ಬ್ರಾಹ್ಮಣರ ಸಮಾನಕ್ಕೆ ಸ್ಥಾಪಿಸುವ ಪ್ರಯತ್ನವನ್ನು ಮಾಡಲಾಯಿತು. ಹಾಗಾಗಿ ಬ್ರಾಹ್ಮಣ ಸಮಾಜದಲ್ಲಿ ಇರುವ ಹಾಗೆ ವೀರಶೈವ ಮತದಲ್ಲೂ ವರ್ಣಾಶ್ರಮ ಹಾಗೂ ಶ್ರೇಣೀಕೃತ ಸಮಾಜವಿದೆಯೆಂದು ಘೋಷಿಸಲಾಯಿತು.ಇವೆಲ್ಲದರ ಜೊತೆಗೆ ಅಧಿಕೃತವಾಗಿ ಈ ಘೋಷಣೆಯನ್ನು ಸರ್ಕಾರದ ದಾಖಲೆಗಳಲ್ಲಿ ನಮೂದಿಸುವ ತೀವ್ರ ಪ್ರಯತ್ನಗಳಾದವು. ಇಂತಹ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸನ್ನಿವೇಶಗಳ ಹಿನ್ನಲೆಯಲ್ಲಿ ಆಗಿನ ವಚನ ಸಂಕಲನಗಳು ಮತ್ತು ಪ್ರಕಟಣೆಗಳನ್ನು ಗ್ರಹಿಸಬೇಕು.

ಬಸವಲಿಂಗ ಶಾಸ್ತ್ರಿಯವರ ಘನಲಿಂಗಿ ದೇವರು ನಿರೂಪಿಸಿದ ವೀರಶೈವ ಸಿದ್ಧಾಂತ ವಚನ (1907) ಮತ್ತು ಶಿವಪ್ಪ ಶಾಸ್ತ್ರಿ ಗಣಭಾಷ್ಯ ರತ್ನಮಾಲೆ (1909)- ಇವು ಐತಿಹಾಸಿಕ ದೃಷ್ಟಿಯಿಂದ ಮುಖ್ಯವಾದ ವಚನ ಸಂಕಲನಗಳು. ಈ ಮೇಲಿನ ಎಲ್ಲಾ ವಚನ ಸಂಕಲನಗಳಿಗಿಂತ ಇವೆರಡನ್ನೆ ಯಾಕೆ ಗಮನಿಸಬೇಕು? ಇದಕ್ಕೆ ಕಾರಣವಿದೆ. ಇವೆರಡು ಸಂಕಲನಗಳನ್ನು ಹೊರತಂದವರು “ಮುಡುಕುತೊರೆ ಶ್ರೀ ವೀರಶೈವ ಮತಸಂವರ್ಧಿನೀ ಸಭಾಧ್ಯಕ್ಷರಾದ ಪಿ.ಆರ್. ಕರಿಬಸವಶಾಸ್ತ್ರಿಗಳ” (ಘನಲಿಂಗಿ ದೇವರು ನಿರೂಪಿಸಿದ ವೀರಶೈವ ಸಿದ್ಧಾಂತ ವಚನ ಸಂಗ್ರಹದ ಮುಖಪುಟದಲ್ಲಿ ಇದೇ ರೀತಿ ಬರೆಯಲಾಗಿದೆ) ಶಿಷ್ಯರು. ಕರಿಬಸವಶಾಸ್ತ್ರಿಗಳು ವೇದಾಗಮಗಳ ಮತ್ತು ಸಂಸ್ಕೃತ ಸಂಪ್ರದಾಯದ ಪ್ರತಿಪಾದಕರು. ಮತ್ತು ಅವುಗಳೊಟ್ಟಿಗೆ ಕಾಣಿಸಿಕೊಳ್ಳುವ ಮಡಿವಂತಿಕೆ, ಮೇಲು-ಕೀಳು ಭಾವನೆಗಳು ಹಾಗೂ ಶ್ರೇಣೀಕೃತ ಸಮಾಜದ ಸಮರ್ಥಕರು. ಇವರ ಹಾಗೆ ಬಸವಲಿಂಗ ಶಾಸ್ತ್ರಿ ಮತ್ತು ಶಿವಪ್ಪ ಶಾಸ್ತ್ರಿ ಕೂಡ ವೀರಶೈವ ಸಂಪ್ರದಾಯಸ್ಥರು ಮತ್ತು ವೇದಾಗಮಗಳ ಪ್ರತಿಪಾದಕರು. ಮೈಸೂರಿನ ಆಸ್ಥಾನದ ಜೊತೆಗೆ ಸಂಪರ್ಕದಲ್ಲಿದ್ದವರು. ಆದರೆ ಗುರು-ಶಿಷ್ಯರಲ್ಲಿ ಒಂದು ವ್ಯತ್ಯಾಸವನ್ನು ಗಮನಿಸಬೇಕು. ಕನ್ನಡದಲ್ಲಿ ವಚನಗಳು ಹೇರಳವಾಗಿ ಸಿಗುತ್ತವೆ ಎಂದು ಗೊತ್ತಿದ್ದರೂ ಕರಿಬಸವಶಾಸ್ತ್ರಿಗಳು ಅವುಗಳನ್ನು ಪ್ರಕಟಿಸಲು ಸಕ್ರೀಯ ಆಸಕ್ತಿಯನ್ನು ತೋರಿಸಲಿಲ್ಲ. ಆದರೆ ಅವರ ಶಿಷ್ಯರು ಆಸಕ್ತಿ ವಹಿಸಿ ಒಂದೆರಡು ವಚನ ಸಂಕಲನಗಳನ್ನು ಹೊರತಂದರು.

ಇವೆರಡು ಸಂಕಲನಗಳನ್ನು ತಯಾರಿಸಿ, ಪ್ರಕಟಿಸಿದವರ ಉದ್ದೇಶ ಮತ್ತು ವ್ಯಾಖ್ಯಾನಗಳು ನಮ್ಮ ಗಮನ ಸೆಳೆಯುತ್ತವೆ. ಗಣಭಾಷ್ಯ ರತ್ನಮಾಲೆ ಮತ್ತು ಘನಲಿಂಗಿ ದೇವರು ನಿರೂಪಿಸಿದ ವೀರಶೈವ ಸಿದ್ಧಾಂತ ವಚನ (ಘನ ಲಿಂಗಿ ದೇವರು ಸುಮಾರು 15ನೇ ಶತಮಾನದ ಉತ್ತರಾರ್ಧದಲ್ಲಿ ಆಗಿನ ಮೈಸೂರು ಪ್ರಾಂತ್ಯದಲ್ಲಿ ಇದ್ದವರು ಎಂದು ಪರಿಣಿತರು ಅಂದಾಜಿಸಿದ್ದಾರೆ ಮತ್ತು ಇವರು ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯರು)ಗಳನ್ನು ಪರಿಷ್ಕರಿಸಿ, ಪ್ರಕಟಿಸಿದವರು ಆಂತರಿಕ ಜಾತಿ-ವರ್ಣಾಧಾರಿತ ಶ್ರೇಣೀಕೃತ ಸಮಾಜದ ರೂವಾರಿಗಳು. ಇವರು ತಮ್ಮ ಲೇಖನಗಳಲ್ಲಿ ಲಿಂಗಾಯತ ಎಂಬ ಪದವನ್ನು ಬಳಸದೆ ವೀರಶೈವ ಎಂದು ಬಳಸಿದ್ದಾರೆ. ಇವರಿಗೆ ವೀರಶೈವ ಮತವು ಬಸವಣ್ಣನ, ಮತ್ತಿತರ ಶಿವಶರಣರ ವಿಚಾರ ಕ್ರಾಂತಿ ಅಥವಾ ಸಾಮಾಜಿಕ ಕ್ರಾಂತಿಯ ಯಾವುದೇ ವಿಚಾರಗಳನ್ನು ಅನುಮೋದಿಸದ ಮತ. ‘ವೀರಶೈವ ಬ್ರಾಹ್ಮಣ್ಯ’ವನ್ನು ಪ್ರತಿಪಾದಿಸುತ್ತಿದ್ದ ಈ ವಿದ್ವಾಂಸರಿಗೆ ಬ್ರಾಹ್ಮಣ್ಯ-ವಿರೋಧಿ ನೈತಿಕ ವಚನಗಳು ವೈರುಧ್ಯವನ್ನು ಹೊಂದಿದ್ದವು. ಬ್ರಾಹ್ಮಣ್ಯ-ವಿರೋಧಿ ವಚನಗಳನ್ನು ಅವರು ಪ್ರತ್ಯೇಕವಾಗಿ ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಮತ್ತು ವಚನಗಳನ್ನು ಪ್ರಕಟಿಸಿದುದರ ಉದ್ದೇಶ ವಚನಗಳ ಮೂಲಕ ಪುರಾತನ ‘ವೀರಶೈವ’ ಮತದ ಧಾರ್ಮಿಕ ಪರಿಚಯವನ್ನು ಮಾಡಿಸುವುದಕ್ಕೋಸ್ಕರ. ಶಿವಶರಣರ ಕ್ರಾಂತಿಕಾರಕ ವಿಚಾರಗಳಿಗೆ, ಸಾಮಾಜಿಕ-ಲಿಂಗ ಸಮಾನತೆಯ ವಿಚಾರಧಾರೆಗೆ ಅಥವಾ ಸಮಾಜ ಸುಧಾರಕ ಅಂಶಗಳಿಗೆ ಇವರಿಬ್ಬರೂ ಇಂಬು ಕೊಡಲಿಲ್ಲ. ಶಕ್ತಿ ವಿಶಿಷ್ಟಾದ್ವೈತ, ಶಿವಾಗಮ ಅಥವಾ ಶಿವಾದ್ವೈತ ದಾರ್ಶನಿಕತೆಯನ್ನು ಅವರು ಜನಸಾಮಾನ್ಯರಿಗೆ ತಲುಪಿಸುವುದಕ್ಕೋಸ್ಕರ ಈ ಪ್ರಕಟಣೆಗಳನ್ನು ಮಾಡಬೇಕಾದ ಅವಶ್ಯಕತೆ ಇದೆ ಎಂದು ತಮ್ಮ ಸಂಕಲನಗಳನ್ನು ಸಮರ್ಥಿಸಿಕೊಂಡಿದ್ದಾರೆ. ಬಸವಲಿಂಗ ಶಾಸ್ತ್ರಿಗಳು ತಮ್ಮ ಪ್ರಕಟಣೆಯಲ್ಲಿ ಹೇಳುವ ಹಾಗೆ.

ಮುಡುಕುತೊರೆ ಶ್ರೀ ವೀರಶೈವ ಮತಸಂವರ್ಧಿನಿ ಸಭೆಯಲ್ಲಿ ಸಭಾಧ್ಯಕ್ಷರ ಮುಂದೆ ಮೇಲ್ಕಂಡ ಸಭೆಯ ಮುಖ್ಯ ಸದಸ್ಯರಾದ ಕೆ. ಚೆನ್ನಬಸವಪ್ಪನವರು— “ಈಗ ನಮ್ಮ ವೀರಶೈವ ಮತದ ಜನಾಂಗದವರಿಗೆ ವೀರಶೈವ ಸಿದ್ಧಾಂತಾರ್ಥವನ್ನು ಬೋಧಿಸುವ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿರುವುದೇ ಹೊರತು ಕನ್ನಡದಲ್ಲಿ ಯಾವ ಗ್ರಂಥವಿರುವುದೋ ಗೊತ್ತಿಲ್ಲ. ಆದರೆ ಸಂಸ್ಕೃತ ಭಾಷಾ ಪರಿಚಯವಿಲ್ಲದ ನಮ್ಮ ಮತದ ಮಹಾಜನಂಗಳಿಗೆ ವೀರಶೈವ ಸಿದ್ಧಾಂತಾರ್ಥವು ತಿಳಿಯುವುದಕ್ಕೆ ಅಸಾಧ್ಯವಾಗಿರುವುದು. ಆದಕಾರಣ ನಮ್ಮ ಈ ಮಹಾಸಭೆಯಿಂದ ವೀರಶೈವ ಸಿದ್ಧಾಂತಾರ್ಥವನ್ನು ಬೋಧಿಸುವ ಒಂದು ಕನ್ನಡ ಗ್ರಂಥವು ಹೊರಡಿಸಲ್ಪಟ್ಟರೆ, ನಮ್ಮ ಮತದ ಅಬಾಲವೃದ್ಧರು ಅದನ್ನು ಓದಿಕೊಂಡು ತಮ್ಮ ತಮ್ಮ ಆಶ್ರಮಕ್ಕೆ ತಕ್ಕ ತಕ್ಕ ಧರ್ಮಗಳನ್ನು ಆಚರಿಸುವುದಕ್ಕೆ ತುಂಬಾ ಅನುಕೂಲವಾಗಿರುವುದೆಂದು ಪ್ರಾರ್ಥಿಸಿಕೊಂಡು ಆದಮೇಲೆ ಸಭಾಧ್ಯಕ್ಷರು ಅನುಮೋದಿಸಿ ಅಪ್ಪಣೆ ಕೊಟ್ಟ ಪ್ರಕಾರ ನಾನು ಕನ್ನಡದಲ್ಲಿ ಅನೇಕ ವಚನ ಗ್ರಂಥಗಳನ್ನು ನೋಡಿ ಎಲ್ಲಾ ಗ್ರಂಥಗಳಿಗಿಂತಲೂ ಈ ಘನಲಿಂಗಿ ವಚನವು ವೀರಶೈವ ಸಿದ್ಧಾಂತಾರ್ಥವನ್ನು ಸ್ವಚ್ಚವಾಗಿ ಬೋಧಿಸುವುದಾದರಿಂದ ಇದನ್ನು ಪ್ರಿಂಟುಮಾಡಿಸಿರುವೆನು” ಎನ್ನುತ್ತಾರೆ.
ಈ ವಾಕ್ಯಗಳಲ್ಲಿ ‘ಆಶ್ರಮ’, ‘ವೀರಶೈವಸಿದ್ಧಾಂತ’ ಎಂಬ ನುಡಿಕಟ್ಟುಗಳು ಪ್ರಾಚೀನತೆ, ಸಂಪ್ರದಾಯಿಕತೆ ಮತ್ತು ಪಾರಂಪರಿಕತೆಯನ್ನು ಸೂಚಿಸುತ್ತವೆ. ಜೊತೆಗೆ ಸಂಸ್ಕೃತ ಭಾಷೆಯಲ್ಲಿ ವೀರಶೈವರು ಪರಿಣಿತರು; ಆದರೆ ಈಗ ಕನ್ನಡದ ಕಡೆಗೆ ತಿರುಗಬೇಕು ಎಂಬ ಗರ್ವ ಮತ್ತು ಕನ್ನಡ-ಪರ ನಿಲುವೆರಡನ್ನು ಇಲ್ಲಿ ಕಾಣಬಹುದು. ಇಲ್ಲಿ ಬಸವಲಿಂಗ ಶಾಸ್ತ್ರಿಗಳಿಗೆ ಘನಲಿಂಗಿದೇವರ ವಚನಗಳೆ ಶ್ರೇಷ್ಠವಾಗಿ ಕಾಣುತ್ತವೆ. ಸಿದ್ಧೇಶ್ವರ ವಚನ, ಮಡಿವಾಳ ಮಾಚಯ್ಯ, ನುಲಿ ಚಂದಯ್ಯ, ಬಸವಣ್ಣ ಮತ್ತು ಅಂಬಿಗರ ಚೌಡಯ್ಯನವರ ವಚನಗಳು ಅಷ್ಟಾಗಿ ಹಿಡಿಸಲಿಲ್ಲ ಅನಿಸುತ್ತೆ.

ಘನಲಿಂಗಿ ದೇವರು ವಚನ ಮತ್ತು ಗಣಭಾಷ್ಯ ರತ್ನಮಾಲೆ ಸಂಕಲನಗಳಲ್ಲಿ ಸಂಸ್ಕೃತಭರಿತ ವಚನಗಳು, ವ್ಯಾಖ್ಯಾನಗಳು ಮತ್ತು ಟೀಕುಗಳು ಹೇರಳವಾಗಿವೆ (ವಿಶೇಷವಾಗಿ ಗಣಭಾಷ್ಯ ರತ್ನಮಾಲೆಯಲ್ಲಿ). ಸಂಸ್ಕೃತ ಮತ್ತು ವೇದಗಳಲ್ಲಿ ಜ್ಞಾನವನ್ನು ಹೊಂದಿದ್ದ ಈ ವಿದ್ವಾಂಸರು ಈ ವಚನಗಳ ಮೂಲಕ ‘ವೀರಶೈವ’ರ ಸಂಸ್ಕೃತ ಪರಂಪರೆಯನ್ನು, ವೇದಾಗಮಗಳ ಪರಂಪರೆಯನ್ನು ಮತ್ತು ತೀವ್ರ ಆಡಂಬರದ, ಕ್ಲಿಷ್ಟಕರವಾದ ತಾತ್ವಿಕ ವಿಚಾರಣೆಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ. ಘನ ಲಿಂಗಿ ದೇವರು ವಚನ ಸಂಕಲನದ ಪ್ರಾರಂಭವು “ಓಂನಮೋಭಗವತೇ ರೇಣುಕಾಚಾರ್ಯಾಯ” ಎಂಬ ಪ್ರಾರ್ಥನೆಯೊಂದಿಗೆ ಶುರುವಾಗುತ್ತದೆ. ಅಂದರೆ ಬಸವಲಿಂಗ ಶಾಸ್ತ್ರಿ ರೇಣುಕಾಚಾರ್ಯ ಪಂಥದ ಅನುಯಾಯಿಗಳು ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ಎರಡು ಸಂಕಲಗಳಲ್ಲಿ ಷಟ್ಸ್ಥಲದ ತತ್ವದ ಬಗ್ಗೆ ಇರುವ ನಂಬಿಕೆಯನ್ನು ವರ್ಣಿಸುತ್ತಾ, ಎಲ್ಲಾ ವಚನಗಳನ್ನು ಅದರ ತತ್ವಾನುಸಾರ ವಿಂಗಡಿಸಲಾಗಿದೆ. ಎಲ್ಲಿಯೂ ವಚನಗಳನ್ನು ಪಾಶ್ಚಾತ್ಯರ ಮಾದರಿಯಲ್ಲಿ ಅಥವಾ ಹಳಕಟ್ಟಿ ಮಾದರಿಯ ಜಾತ್ಯಾತೀತ/ಸುಧಾರಣ/ಪ್ರಗತಿಪರ ಧೋರಣೆಯ ಅಡಿಪಾಯದ ಮೇಲೆ ಅರ್ಥ ಮಾಡಿಕೊಂಡಿರುವ ಸಾಕ್ಷಿಗಳು ಸಿಗುವುದಿಲ್ಲ. ವಚನಗಳನ್ನು ಆಧುನಿಕ ಮಾದರಿಯಲ್ಲಿ ಪ್ರಕಟಿಸಿದ್ದರೂ, ಅವು ವಚನಗಳನ್ನು ವಸಾಹತು-ಪೂರ್ವ ಸಾಹಿತ್ಯ ಪ್ರಕಾರದಲ್ಲಿಯೇ ಒಳಗೊಂಡಿವೆ. ಇಲ್ಲಿ ವೈಜ್ಞಾನಿಕವಾಗಿ ವಚನಗಳನ್ನು ವಿಂಗಡಿಸಿ, ಕ್ರಮಬದ್ಧವಾಗಿ ಜೋಡಿಸಿರುವ (ಪ್ರಸ್ತುತ ಲಭ್ಯವಿರುವ ವಚನಗಳ ಮಾದರಿಯಲ್ಲಿ) ಶ್ರಮ ಕಾಣುವುದಿಲ್ಲ. ಇವುಗಳ ಬಗ್ಗೆ ನಾವು ಮತ್ತಷ್ಟು ಚಾರಿತ್ರಿಕ ಅಧ್ಯಯನ ಮಾಡುವ ಅಗತ್ಯವಿದೆ.

ಈ ವಿಷಯದಲ್ಲಿ ಹಳಕಟ್ಟಿ, ಹಳಕಟ್ಟಿಯೋತ್ತರ ವಚನ ಸಂಗ್ರಹಗಳಿಗೂ ಮತ್ತು ಈ ವಿದ್ವಾಂಸರ ವಚನ ಸಂಕಲನಗಳಿಗೂ ಇರುವ ತಾತ್ವಿಕ ವ್ಯತ್ಯಾಸಗಳು ಅಗಾಧವಾಗಿರುವಂತದ್ದು. ಇವರಿಬ್ಬರ ವಚನ ಸಂಗ್ರಹಗಳು ನಿಗಮ, ಆಗಮ, ಉಪನಿಷದ್, ಸ್ಮೃತಿಗಳು, ಶಿವಪುರಾಣ, ಶಾಸ್ತ್ರ ಹಾಗೂ ವೀರಮಾಹೇಶ್ವರ ಶಾಸ್ತ್ರದ ರಹಸ್ಯಗಳ ಸಾರವನ್ನು ಹೊಂದಿದೆ ಎಂದು ವಿವರಿಸಲಾಗಿದೆ. ಇದೇ ಸಂದರ್ಭದಲ್ಲಿ ಎಮ್. ಎಮ್. ಕಲ್ಬುರ್ಗಿಯವರು ವೀರಮಾಹೇಶ್ವರ ಶಾಸ್ತ್ರದ ಬಗ್ಗೆ ಆಡಿದ ಕೆಲವೆರಡು ಮಾತುಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳುವುದು ಪ್ರಸ್ತುತ. ಅವರ ಪ್ರಕಾರ ವೀರಮಾಹೇಶ್ವರ ಶಾಸ್ತ್ರವು ಆರಾಧ್ಯ ಶೈವದ ಮೂಲದಿಂದ ಉಂಟಾಗಿರುವ ಧಾರ್ಮಿಕ ಸಾಹಿತ್ಯ. ಇದು ಲಿಂಗಾಯತ ಮತದ ಮೂಲ ಸಾಹಿತ್ಯವಲ್ಲವೆಂದು ಅವರ ಅಭಿಮತ. ಆಂಧ್ರದ ಮೂಲದವರಾದ ಆರಾಧ್ಯರು ಈ ಶಾಸ್ತ್ರವನ್ನು ಎತ್ತಿ ಹಿಡಿಯುತ್ತಾ ಮೂಲ ಲಿಂಗಾಯತ ವಚನ ಸಿದ್ಧಾಂತವನ್ನು ಮಲಿನಗೊಳಿಸಿದರು ಎಂದು ಕಲ್ಬುರ್ಗಿಯವರು ನಂಬಿದ್ದಾರೆ. ಬಸವಲಿಂಗ ಶಾಸ್ತ್ರಿ ಮತ್ತು ಶಿವಪ್ಪ ಶಾಸ್ತ್ರಿಯವರನ್ನು ‘ಮಲಿನಗೊಳಿಸಿದವರ ಪಟ್ಟಿಗೆ’ ಸೇರಿಸಬಹುದೆ?

ನಂತರ ದಿನಗಳಲ್ಲಿ ಹಳಕಟ್ಟಿಯ ಪ್ರವೇಶದಿಂದ ವಚನ ಸಾಹಿತ್ಯ ಮತ್ತು ಲಿಂಗಾಯತರ ಒಟ್ಟಾರೆ ಚಿತ್ರಣ ಬದಲಾಯಿತು. ಈಗಿನ ವಚನಗಳ ‘ಜಾತ್ಯಾತೀತ’ ಅರ್ಥ ವಿವರಣೆಗಳು ಹಳಕಟ್ಟಿ ಮತ್ತು ಹಳಕಟ್ಟಿಯೋತ್ತರ ಕಾಲಘಟ್ಟದ ಪ್ರತಿರೂಪಗಳು. ಈಗ ವಚನ ಸಾಹಿತ್ಯವೆಂದರೆ ‘ಅಚ್ಚ’ ಕನ್ನಡದ, ಸಂಸ್ಕೃತಭಾಷೆಯೇತರ, ಜಾತ್ಯಾತೀತ ವಿಚಾರಧಾರೆಯ, ಪ್ರಗತಿಪರತೆಯ, ಸಾಮಾಜಿಕ-ಲಿಂಗ ಸಮಾನತೆಯ ಸಾಹಿತ್ಯ.

Previous post ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
Next post ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ

Related Posts

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
Share:
Articles

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರು. ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ...
ನಾನು ಯಾರು? ಎಂಬ ಆಳ-ನಿರಾಳ-5
Share:
Articles

ನಾನು ಯಾರು? ಎಂಬ ಆಳ-ನಿರಾಳ-5

August 2, 2020 ಕೆ.ಆರ್ ಮಂಗಳಾ
ಜನನ-ಮರಣಗಳ ಪರಿವರ್ತನೆಯಲ್ಲಿ ನಾನೆಲ್ಲಿದ್ದೇನೆ? ಎಲ್ಲ ಓದುಗ ಬಂಧುಗಳಿಗೆ ಭಾಗ-5ರ ಘಟ್ಟಕ್ಕೆ ಸ್ವಾಗತ… ಹೇಗಿದ್ದೀರಿ? ಜೀವನ ವಿಜ್ಞಾನವಾಗಿ ಈ ಲೇಖನದ ಚಿಂತನಾ ಪ್ರಹಾರವು...

Comments 13

  1. ಬಸವರಾಜ ಹಂಡಿ
    Jan 10, 2022 Reply

    ಡಾ. ವಿಜಯಕುಮಾರ್ ಬೋರಟ್ಟಿ ಶರಣರು ಬಹಳ ಆಳವಾಗಿ ಹಾಗು ದೀರ್ಘವಾಗಿ ವಚನಗಳನ್ನು ಹಾಗು ವಚನಗಳ ಪ್ರಕಟಣೆಯ ಇತಿಹಾಸ ಅಧ್ಯಯನ ಮಾಡಿ ಈ ಲೇಖನ ಬರೆದಿದ್ದಾರೆ. ಶರಣ ಸಾಹಿತ್ಯವು ಸಹ ಸಂಸ್ಕೃತಿಕ ಧಾರ್ಮಿಕ ಹಾಗೂ ಭಾಷಾ ರಾಜಕೀಯ ಹೇಗೆ ಒಳಗಾಗಿದೆ ಎಂಬುದನ್ನು ಬಹಳ ವಿವರವಾಗಿ ತಿಳಿಸಿದ್ದಾರೆ. ನೋಡಿ ಕೆಲವರು( ಬಸವ ಲಿಂಗ ಶಾಸ್ತ್ರಿ ಹಾಗು ಶಿವಪ್ಪ ) ತಮ್ಮ ಅನುಕೂಲ ತಕ್ಕಂತೆ ಹಾಗು ತಮ್ಮ ಕಲ್ಪನೆಗಳ ಅನುಸಾರ ವಚನಗಳ ಜೊತೆ ಚೆಲ್ಲಾಟ ಆಡಿದ್ದಾರೆ.
    ನಿಮ್ಮ ವಿರಳ ಹಾಗು ಅದ್ಬುತ ಜ್ಞಾನ ದಾಸೋಹಕ್ಕಾಗಿ ನಮ್ಮೆಲ್ಲರಿಂದ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು.

  2. Mahadevaswamy K.P
    Jan 10, 2022 Reply

    ವಚನಗಳ ಪ್ರಕಟಣೆಯ ಇತಿಹಾಸದಲ್ಲಿ ನಡೆದ ಭಾನಗಡಿಯನ್ನು ವಿವರಿಸಿ ಎಲ್ಲಿ ಲಿಂಗಾಯತ ಧರ್ಮಕ್ಕೆ ವಂಚನೆಯಾಗಿದೆ ಎನ್ನುವುದನ್ನು ತೋರಿಸಿಕೊಟ್ಟ ವಿಜಯಕುಮಾರ ಅವರಿಗೆ ಶರಣು.

  3. Danappa Jodettu
    Jan 10, 2022 Reply

    ಹಳಕಟ್ಟಿ ಪೂರ್ವ ಯುಗದ ವಚನ ಪ್ರಕಟಣೆಗಳ ಕುರಿತಾಗಿ ನನಗೇನೂ ತಿಳಿದಿರಲಿಲ್ಲ. ಅನೇಕರೂ ನನ್ನಂತೆ ಈ ವಿಷಯದಲ್ಲಿ ಅಪರಿಚಿತರು. ಆ ಕತ್ತಲ ಯುಗದ ಮೇಲೆ ಬೆಳಕು ಬೀರುವ ಮುಖ್ಯವಾದ ವಿಚಾರವೊಂದು ಇಲ್ಲಿದೆ.

  4. ಸಿದ್ದಪ್ಪ ಗಲಗಲಿ
    Jan 13, 2022 Reply

    ಬ್ರಾಹ್ಮಣರನ್ನು ನಕಲು ಮಾಡಲು ಹೋಗಿ ವಚನಗಳ ವೈಚಾರಿಕತೆಯನ್ನೇ ಮೂಲೆಗುಂಪು ಮಾಡಿದ ವೀರಶೈವರು ಸಾಧಿಸಿದ್ದಾದರೂ ಏನು? ತಾವೂ ಉತ್ತಮರೆಂದು ಸಾಬೀತುಪಡಿಸಿಕೊಳ್ಳಲಿಕ್ಕೆ ಅವರು ಎಂತೆಂಹ ಅಪರಾಧ ಮಾಡಿದರೆನ್ನುವುದನ್ನು ಆಧಾರ ಸಹಿತ ತೋರಿಸಿಕೊಡುವ ಲೇಖನ.

  5. Girija K.P
    Jan 13, 2022 Reply

    ನಿಮ್ಮ ಲೇಖನ ಚನ್ನಾಗಿದೆ ಸರ್. ನೀವು ಉಲ್ಲೇಖಿಸಿದ ಹಳಕಟ್ಟಿಯವರ ಪೂರ್ವದಲ್ಲಿ ಪ್ರಕಟವಾದ ವಚನ ಸಂಕಲನಗಳು ಈಗಲೂ ಸಿಗುತ್ತವೆಯೇ? ಎಲ್ಲಿ ಎಂದು ತಿಳಿಸುವಿರಾ? ನನ್ನ ಸಂಶೋಧನೆಗೆ ಸಹಾಯವಾಗುತ್ತದೆ.

  6. Palaksha s
    Jan 13, 2022 Reply

    ಲೇಖನವನ್ನು ಓದುತ್ತಿದ್ದರೆ ಆಗಿನ ಕಾಲದ ಲಿಂಗಾಯತ ಧರ್ಮೀಯರು ಹೇಗಿದ್ದಿರಬಹುದು? ವಚನಗಳಿಲ್ಲದ ಅವರ ನಿತ್ಯದ ಬದುಕು ಹೇಗಿದ್ದಿರಬಹುದು ಎಂದು ಯೋಚಿಸುವಂತಾಯಿತು. ನಿಜವಾಗಿಯೂ ಹಳಕಟ್ಟಿಯವರು ಮಾಡಿದ್ದು ದೊಡ್ಡ ಕೆಲಸ. ವಚನಗಳ ನಿಧಿಯನ್ನು ತೆಗೆದುಕೊಟ್ಟ ಅವರಿಗೆ ನಾವೆಲ್ಲಾ ಮತ್ತು ಮುಂದಿನ ತಲೆಮಾರು ಕೂಡ ಋಣಿಯಾಗಿರುತ್ತದೆ.

  7. Virupaksha Patil
    Jan 18, 2022 Reply

    ಘನಲಿಂಗಿ ದೇವರ ಕುರಿತಾಗಿ ವಿವರಗಳನ್ನು ಹುಡುಕಿದೆ. ನನಗೆ ಅಷ್ಟಾಗಿ ಸಿಗಲಿಲ್ಲ. ನಿರ್ದಿಷ್ಟವಾಗಿ ಅವರು ಯಾವ ಶತಮಾನಕ್ಕೆ ಸೇರಿದವರು ಮತ್ತು ಅವರ ವಚನಗಳು ಎಷ್ಟು ಎಂದು ಲೇಖನದಲ್ಲಿ ವಿವರಿಸಿದ್ದರೆ ಈ ಹುನ್ನಾರಗಳ ಹಿಂದಿನ ಮುಖಗಳು ಮತ್ತಷ್ಟು ಸ್ಪಷ್ಟವಾಗುತ್ತಿದ್ದವು.

  8. Vijay Boratti
    Jan 20, 2022 Reply

    ಗಿರಿಜಾರವರಿಗೆ, ಬೆಂಗಳೂರಿನ ಬಸವ ಸಮಿತಿ ಯಲ್ಲಿ ವಚನಗಳು ಇವೆ.
    ವಿರೂಪಾಕ್ಷ ರವರೆ, ಲೇಖನದಲ್ಲೆ ಮಾಹಿತಿಗಳಿಯೆಲ್ಲಾ!

  9. ಜಯದೇವ ಜಿಗಜಿಣಗಿ
    Jan 23, 2022 Reply

    ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಲಿಂಗಾಯತ ಧರ್ಮೀಯರಿಗೆ ತಮ್ಮ ಶರಣ ಪರಂಪರೆಯ ಅರಿವಿಲ್ಲದಾಗ ಹೇಗೆ ಜಾತಿಗಳ ಮೇಲಾಟದಲ್ಲಿ ಸಿಲುಕಿಕೊಂಡರು ಎನ್ನುವುದನ್ನು ಈ ಸಂಶೋಧನಾತ್ಮಕ ಲೇಖನ ಸ್ಪಷ್ಟಪಡಿಸುತ್ತದೆ. ನಮ್ಮ ಹಿರಿಯರೆಲ್ಲರೂ ಈ ಶ್ರೇಷ್ಠತೆಯ ಗುಂಗಿನಲ್ಲಿ ಕಳೆದುಹೋಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲಾ ಸರ್.

  10. Avinash Beluru
    Jan 23, 2022 Reply

    ಉತ್ತಮ ಮಾಹಿತಿ. ಆವತ್ತಿನ ತಪ್ಪು ನಡೆಗಳಿಂದ ಲಿಂಗಾಯತೀಯರು ಇನ್ನೂ ಹೊರಗೇ ಬಂದಿಲ್ಲ.

  11. Veeresh S. Belgavi
    Jan 23, 2022 Reply

    ಕರಿಬಸವಶಾಸ್ತ್ರಿಗಳಂಥವರು ಈಗಲೂ ವಚನಗಳನ್ನು ವೇದಾಗಮಗಳೊಂದಿಗೆ ಇಟ್ಟು ನೋಡಿ ಅಭ್ಯಸಿಸುತ್ತಾರೆ. ಮುಖ್ಯವಾಗಿ ವೀರಶೈವ ಸಿದ್ದಾಂತಕ್ಕೆ ಇಂಥವರೇ ಮೂಲಪುರುಷರು. ಈಗಲೂ ಪಂಚಪೀಠಗಳು ಇದೇ ವಾದವನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತಾರೆ.

  12. ರಾಜಶೇಖರ ಹೊನ್ನಾಳಿ
    Jan 26, 2022 Reply

    ಚರಿತ್ರೆಯಲ್ಲಿ ಹುದುಗಿ ಹೋದ ಸತ್ಯಗಳನ್ನು ತೆಗೆದು ತೋರಿಸುವ ವಿಚಾರಗಳು ಗಂಭೀರವಾಗಿವೆ. ವಚನಗಳನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲದ ಮೂಲಭೂತವಾದಿಗಳು ವಚನ ಚಳುವಳಿಯನ್ನೇ ಹತ್ತಿಕ್ಕುವ ಪ್ರಯತ್ನಗಳನ್ನು ಅಂದಿನಿಂದ ನಡೆಯುತ್ತಲೇ ಬಂದಿರುವುದು ಖೇದದ ಸಂಗತಿ.

  13. Chandrashekhar.K
    Feb 1, 2022 Reply

    ಬ್ರಾಹ್ಮಣ್ಯ-ವಿರೋಧಿ ನೈತಿಕ ವಚನಗಳು ಈಗಲೂ ವೀರಶೈವರಿಗೆ ಅಪಥ್ಯವೇ ಆಗಿವೆ. ಅದಕ್ಕಾಗಿ ಅವರು ಯಾವ ಕಾರಣಕ್ಕೂ ಚಳುವಳಿ, ಕ್ರಾಂತಿ, ನವ ಧರ್ಮ ಎನ್ನುವ ಮಾತುಗಳನ್ನು ಒಪ್ಪಿಕೊಳ್ಳಲಾರರು, ಲಿಂಗಾಯತ ಧರ್ಮ ಇಂಥವರ ಕೈಯಲ್ಲಿ ಸಿಕ್ಕಿ ತನ್ನ ಹೊಳಪನ್ನೇ ಕಳೆದುಕೊಂಡಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ನೆಮ್ಮದಿ
ನೆಮ್ಮದಿ
April 6, 2020
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಒಳಗಣ ಮರ
ಒಳಗಣ ಮರ
March 12, 2022
Copyright © 2022 Bayalu