Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರು-ಶಿಷ್ಯ ಸಂಬಂಧ
Share:
Articles August 8, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಗುರು-ಶಿಷ್ಯ ಸಂಬಂಧ

ಮಡಕೆಯ ಮಾಡುವಡೆ ಮಣ್ಣೆ ಮೊದಲು,
ತೊಡುಗೆಯ ಮಾಡುವಡೆ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು,
ಕೂಡಲಸಂಗಮದೇವರನರಿವಡೆ
ಶರಣರ ಸಂಗವೆ ಮೊದಲು.

ಸಂಗದ ಮಹತ್ವವನ್ನು ಕೆಲವು ನಿದರ್ಶನಗಳ ಮೂಲಕ ಬಸವಣ್ಣನವರು ನೀಡಿದ್ದಾರೆ. ಕುಂಬಾರ ತಯಾರು ಮಾಡುವ ಮಡಕೆಗೆ ಮೂಲ ವಸ್ತು ಮಣ್ಣು. ಆಭರಣ ಮಾಡಲು ಬೇಕಾದ ಮೂಲ ವಸ್ತು ಚಿನ್ನ. ಅದರಂತೆ ಶಿವಪಥದಲ್ಲಿ ಸಾಗಬೇಕೆನ್ನುವ ಭಕ್ತನಿಗೆ ಗುರುವಿನ ಮಾರ್ಗದರ್ಶನ ಬೇಕು. ಗುರು ಮತ್ತು ಶಿಷ್ಯ ಎರಡು ಕಣ್ಣುಗಳಿದ್ದ ಹಾಗೆ. ಒಬ್ಬನೇ ವ್ಯಕ್ತಿ ಶಿಷ್ಯನೂ ಆಗಬಲ್ಲ, ಗುರುವೂ ಆಗಬಲ್ಲ. ಒಂದು ಕಣ್ಣಿಗೆ ಊನವಾದರೂ ಗುರು-ಶಿಷ್ಯರ ಸಂಬಂಧಕ್ಕೆ ಪೆಟ್ಟು ಬೀಳುವುದು. ಇಬ್ಬರಲ್ಲೂ ಅನ್ಯೋನ್ಯ ಸಂಬಂಧ ಇದ್ದಾಗ ಅವರ ಬಾಂಧವ್ಯಕ್ಕೆ ಧಕ್ಕೆಯಾಗುವುದಿಲ್ಲ. `ಭಕ್ತನಾದಡೆ ಬಸವಣ್ಣನಂತಾಗಬೇಕು, ಜಂಗಮವಾದಡೆ ಪ್ರಭುದೇವರಂತಾಗಬೇಕು’ ಎನ್ನುವ ಆಶಯ ದುಗ್ಗಳೆಯವರ ವಚನದಲ್ಲಿದೆ. ಬಸವಣ್ಣನವರು ಶಿಷ್ಯ, ಪ್ರಭುದೇವರು ಗುರು. ಗುರು-ಶಿಷ್ಯ ಬಾಂಧವ್ಯ ಹೇಗಿರಬೇಕು ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನ. ಪ್ರಭುದೇವರು ಯಾವುದಕ್ಕೂ ಅಂಟಿಕೊಳ್ಳದ ನಿರ್ಲಿಪ್ತರು. ಅಜ್ಞಾನದಲ್ಲಿ ಮುಳುಗಿದ ಶಿಷ್ಯರ ಬಳಿ ತಾವೇ ಹೋಗಿ ಅವರ ಅಜ್ಞಾನ ನಿವಾರಿಸುವರು. ಗೊಗ್ಗಯ್ಯನ ಬಳಿ ಹೋದಾಗ ಅವನ ತೋಟ ನೋಡಿ ಕೇವಲ ಬಾಹ್ಯ ತೋಟ ಮಾಡಿದರೆ ಸಾಲದು; ಅಂತರಂಗದಲ್ಲೂ ಒಂದು ತೋಟ ಮಾಡಬೇಕು ಎನ್ನುವರು. ನಾನೂ ಒಂದು ತೋಟ ಮಾಡಿದ್ದೇನೆ. ತನುವೆ ತೋಟ, ಮನವೆ ಗುದ್ದಲಿ. ಅದರಿಂದ ಭ್ರಾಂತಿಯ ಬೇರನ್ನು ಅಗೆದು ಕಳೆದೆ ಎನ್ನುವರು. ಅಂದರೆ ವ್ಯಕ್ತಿ ತನ್ನ ಅಂತರಂಗವನ್ನೇ ತೋಟವನ್ನಾಗಿ, ಮನಸ್ಸನ್ನು ಗುದ್ದಲಿಯನ್ನಾಗಿ ಮಾಡಿಕೊಂಡು ಅಲ್ಲಿರುವ ಕಾಮ, ಕ್ರೋಧ, ಲೋಭ ಇತ್ಯಾದಿ ಭ್ರಾಂತಿಯ ಬೇರನ್ನು ಬಗಿದು ಹಾಕಬೇಕು. ಇದು ಪ್ರಭುದೇವರು ಗೊಗ್ಗಯ್ಯನಿಗೆ ನೀಡಿದ ಮಾರ್ಗದರ್ಶನ. ಶಿಷ್ಯನಲ್ಲಿರುವ ಭ್ರಾಂತಿಯನ್ನು ಸರಿಯಾದ ಜ್ಞಾನದ ಮೂಲಕ ನಿವಾರಿಸುವ ಕಾರ್ಯವನ್ನು ಗುರು ಮಾಡಬೇಕು. ಆಗಲೇ ಅವರ ಸಂಬಂಧ ಗಟ್ಟಿಗೊಳ್ಳುವುದು.
ಆಕಸ್ಮಿಕ ಮರಣಕ್ಕೆ ತುತ್ತಾದ ಅಜಗಣ್ಣನ ತಲೆಯನ್ನು ತೊಡೆಯ ಮೇಲಿಟ್ಟುಕೊಂಡು ಮುಕ್ತಾಯಕ್ಕ ದುಃಖಿಸುತ್ತಿದ್ದಾಳೆ. ಅದನ್ನು ಕಂಡ ಪ್ರಭುದೇವರು, `ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವ ತಾಯೆ ನೀನಾರು ಹೇಳಾ?’ ಎಂದು ಕೇಳುವರು. ಪ್ರಶ್ನೆಯ ಮೂಲಕವೇ ಮುಕ್ತಾಯಕ್ಕನ ಸಂಶಯಗಳನ್ನು ನಿವಾರಿಸಿ ಅವಳ ಅರಿವಿನ ಕಣ್ಣು ತೆರೆಸುವರು. ಶಿವಯೋಗಿ ಸಿದ್ಧರಾಮೇಶ್ವರರಿಗೆ ತನ್ನಂತಹ ಕರ್ಮಯೋಗಿ, ಶಿವಯೋಗಿ ಮತ್ತೊಬ್ಬರಿಲ್ಲ ಎನ್ನುವ ಅಹಂ ಮತ್ತು ಭ್ರಮೆ. ಅವರಿಗೆ ಹಣೆಗಣ್ಣಿತ್ತು ಎನ್ನುವ ಪ್ರತೀತಿ. ನನ್ನ ಶಿಷ್ಯರೆದುರೇ ನನ್ನನ್ನು ಒಡ್ಡರ ಗುರು ಎಂದು ಪ್ರಭುದೇವರು ನಿಂದಿಸಿದ್ದನ್ನು ತಿಳಿದು ಸಿಡಿಮಿಡಿಗೊಳ್ಳುವರು. ಅಲ್ಲಮನನ್ನು ಸುಟ್ಟು ಬೂದಿ ಮಾಡುವೆ ಎಂದು ಹಣೆಗಣ್ಣನ್ನು ತೆರೆದು ಬೆಂಕಿಯ ಜ್ವಾಲೆಯನ್ನು ಹೊರಹಾಕುವರು. ಆ ಅಗ್ನಿಜ್ವಾಲೆಯಿಂದ ಅಲ್ಲಮ ಸುಟ್ಟು ಬೂದಿ ಆಗುವನೆಂಬ ಭ್ರಮೆ ಸಿದ್ಧರಾಮೇಶ್ವರರಿಗೆ. ಆದರೆ ಪ್ರಭು ಆ ಬೆಂಕಿಯನ್ನು ತನ್ನ ಅಂಗಾಲ ಕಣ್ಣಿನಲ್ಲಿ ಅಡಗಿಸಿಕೊಂಡರಂತೆ. ಅಂದರೆ ಸಿದ್ಧರಾಮೇಶ್ವರರ ಅಹಂ ಅಡಗಿಸಿ ಅವರಲ್ಲಿ ವಿನಯ, ವಿವೇಕ ಉದಯವಾಗುವಂತೆ ಮಾಡುವರು. ಗೋರಕ್ಷ ತನ್ನ ಸಾಧನೆಯ ಮೂಲಕ ದೇಹವನ್ನು ಕಬ್ಬಿಣದಂತೆ ಮಾಡಿಕೊಂಡಿದ್ದ. ನನ್ನ ಮುಂದೆ ಅಲ್ಲಮನದೇನು ಸಾಧನೆ ಎನ್ನುವ ತಾತ್ಸಾರ ಆತನಿಗೆ. ಹಾಗಾಗಿ ಕತ್ತಿಯಿಂದ ನನ್ನ ದೇಹಕ್ಕೆ ಹೊಡೆ ಎನ್ನುವನು. ಪ್ರಭು ಕತ್ತಿಯಿಂದ ಹೊಡೆದಾಗ ಅದು ದೇಹವನ್ನು ಗಾಯ ಮಾಡದೆ ಠಣ್ ಎಂದು ಶಬ್ದ ಮಾಡುತ್ತ ಪುಟಿಯುವುದು. ಪ್ರತಿಯಾಗಿ ಅದೇ ಕತ್ತಿಯಿಂದ ನನ್ನ ಶರೀರಕ್ಕೆ ಹೊಡೆ ಎಂದು ಅಲ್ಲಮ ಗೋರಕ್ಷನಿಗೆ ಹೇಳುವನು. ಹೊಡೆದರೆ ಕತ್ತಿ ಗಾಳಿಯಲ್ಲಿ ಬೀಸಿದಂತೆ ಆಗುವುದು. ಆಗ ಅಲ್ಲಮ ಹೇಳುವುದು: ಕೇವಲ ದೇಹ ಬೆಳೆಸಿದರೆ ಸಾಲದು. ಶಿವ ಜೀವರ ಸಾಮರಸ್ಯ ಸಾಧನೆ ಮುಖ್ಯವೆಂದು ಆತನ ಅಜ್ಞಾನ ನಿವಾರಿಸುವರು.
ಗುರುವಾದವನು ಲೌಕಿಕ ವಿಷಯವಾಸನೆಗಳಿಗೆ ಅಂಟಿಕೊಳ್ಳದೆ ಅಹಂಕಾರ ತ್ಯಜಿಸಬೇಕು. ಮಾತು ಜ್ಯೋತಿರ್ಲಿಂಗವಾಗಿರಬೇಕು. ಕೋಪ ತಾಪಗಳಿಂದ ಮುಕ್ತವಾಗಬೇಕು. ಅರಿವು, ಆಚಾರ ಒಂದಾಗಿರಬೇಕು. ಶಿಷ್ಯನ ಅಜ್ಞಾನ ನಿವಾರಿಸಿ ಅವನಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಬೇಕು. `ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ, ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ’ ಎನ್ನುವಂತೆ ಗುರು ತನ್ನ ಶಿಷ್ಯನ ಅಜ್ಞಾನ ಕಳೆಯಬೇಕು. ಇಲ್ಲವಾದರೆ ಆತ ಗುರುವಾಗುವುದಿಲ್ಲ. ಅಜ್ಞಾನಾಂಧಕಾರ ದೂರ ಮಾಡಿಕೊಳ್ಳದಿದ್ದರೆ ಶಿಷ್ಯ ಶಿಷ್ಯನಾಗುವುದಿಲ್ಲ. ಗುರು-ಶಿಷ್ಯರ ನಡುವೆ ಅಜ್ಞಾನದ ಕತ್ತಲು, ಅಹಂಕಾರದ ಗೋಡೆ ಇದ್ದರೆ ಉಭಯತರೂ ದಾರಿ ತಪ್ಪುವರು. ಈ ನೆಲೆಯಲ್ಲಿ ನಮ್ಮ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಹೇಳಿಕೆಯೊಂದು ನೆನಪಾಗುವುದು. `ಗುರುವಿಗಂಜಿ ಶಿಷ್ಯ, ಶಿಷ್ಯರಿಗಂಜಿ ಗುರು ನಡೆಯಬೇಕು’. ಗುರುವಿನ ತಪ್ಪನ್ನು ಶಿಷ್ಯ ತೋರಿಸಿದರೆ ಅದಕ್ಕಾಗಿ ಗುರು ಆತನ ಮೇಲೆ ಮುನಿಸಿಕೊಳ್ಳಬೇಕಾಗಿಲ್ಲ. ಬದಲಾಗಿ ತಪ್ಪನ್ನು ತಿದ್ದಿಕೊಳ್ಳುವ ಮೂಲಕ ಆ ಶಿಷ್ಯನ ಬೆನ್ನು ತಟ್ಟಬೇಕು. ಅದರಂತೆ ಶಿಷ್ಯ ತಪ್ಪು ಮಾಡಿದಾಗ ಅದನ್ನು ತೋರಿಸಿ ತಿದ್ದುವ ಕೆಲಸವನ್ನು ಮಾಡಬೇಕು. ತಪ್ಪು ತೋರಿಸಿದನಲ್ಲ ಎಂದು ಗುರು ಶಿಷ್ಯನ ಮೇಲೆ, ಶಿಷ್ಯ ಗುರುವಿನ ಮೇಲೆ ಮುನಿಸಿಕೊಳ್ಳಬಾರದು. ಇದು ನಿಜವಾದ ಗುರು, ಶಿಷ್ಯ ಬಾಂಧವ್ಯ.
ನಮ್ಮ ಗುರುಗಳು ಕಾಶಿಯಲ್ಲಿ ಓದುತ್ತಿದ್ದಾಗ ಅವರಿಗೆ ಎಲ್ಲ ರೀತಿಯಲ್ಲಿ ಮಾರ್ಗದರ್ಶನ ಮಾಡಿದವರು ಅವರ ಗುರುಗಳಾಗಿದ್ದ ಶ್ರೀ ಗೌರಿನಾಥ ಪಾಠಕರು. ಅವರು ನಮ್ಮ ಗುರುಗಳನ್ನು ಅಂದರೆ ತಮ್ಮ ಶಿಷ್ಯನನ್ನು ಕುರಿತು ಹೇಳಿದ ಮಾತು `ದಿಟ್ಟ ಹೆಜ್ಜೆ ಧೀರ ಕ್ರಮ’ ಎನ್ನುವ ಗುರುಗಳ ಜೀವನ ಚರಿತ್ರೆಯಲ್ಲಿ ದಾಖಲಾಗಿದೆ. `ಒಳ್ಳೆಯ ಶಿಷ್ಯ ಸಿಕ್ಕರೆ ಗುರು ಗೆದ್ದ’ ಎನ್ನುವುದು. ಗುರುವಿನ ಗೆಲವು ಆದರ್ಶ ಶಿಷ್ಯ ಸಿಕ್ಕಾಗ. ಅಂಥ ಶಿಷ್ಯರನ್ನು ಆತ ತಯಾರು ಮಾಡದಿದ್ದರೆ ಆ ಗುರು ಸೋತಂತೆ. ಗುರುವಿಗೆ ಆದರ್ಶ ಶಿಷ್ಯನ ಅಗತ್ಯ ಇರುವಂತೆ ಶಿಷ್ಯನಿಗೂ ಆದರ್ಶ ಗುರುವಿನ ಅಗತ್ಯವಿದೆ. ಗುರು ಮೊದಲು ತಾನು ತನ್ನ ಅಜ್ಞಾನ ನಿವಾರಿಸಿಕೊಂಡು ಸುಜ್ಞಾನಿಯಾಗಬೇಕು. ಸುಜ್ಞಾನಿ ಗುರುವಿನಲ್ಲಿ ಅಹಂಕಾರ, ಕೋಪ, ತಾಪಗಳು ಇರುವುದಿಲ್ಲ. ವಿನಯ, ವಿವೇಕ ಅವನ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆಗ ಗುರುವಿಗೆ ವಿಶೇಷ ಮಾನ್ಯತೆ ಬರುವುದು. ಗುರು ತಾನು ಗುರುವೆಂದು ಬೀಗದೆ ಶಿಷ್ಯನ ಅಜ್ಞಾನ ನಿವಾರಿಸಿ ಅವನ ಬದುಕಿನಲ್ಲಿ ವಿನಯ, ವಿವೇಕ ಉದಯ ಆಗುವ ಹಾಗೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಭುದೇವರ ವಚನ ಗುರು, ಶಿಷ್ಯರ ಸಂಬಂಧಕ್ಕೆ ಹಿಡಿದ ಕನ್ನಡಿಯಂತಿದೆ.
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
ಇಲ್ಲಿ ನಾಲ್ಕು ಯುಗಗಳ ಕಲ್ಪನೆ ಇದೆ. ಇದನ್ನು ಪೌರಾಣಿಕ ಕಲ್ಪನೆಯಲ್ಲಿ ತೆಗೆದುಕೊಳ್ಳಬೇಕಿಲ್ಲ. ಮಾನವನ ಜೀವಿತದ ಅವಧಿ ನೂರು ವರ್ಷ ಎಂದರೆ ಅದನ್ನು ನಾಲ್ಕು ವಿಭಾಗ ಮಾಡಬಹುದು. ಪ್ರತಿ 25 ವರ್ಷಕ್ಕೆ ಒಂದು ಯುಗ ಎಂದು ಭಾವಿಸಿದರೆ ಸಾಕು. ಕೃತಯುಗದಲ್ಲಿ ಶಿಷ್ಯ ಅಜ್ಞಾನಾಂಧಕಾರದಲ್ಲಿರುತ್ತಾನೆ. ಆಗ ಗುರು ಆತನ ಅಜ್ಞಾನ ನಿವಾರಣೆ ಮಾಡಲು ಸಂದರ್ಭೋಚಿತವಾಗಿ ಬಡಿದು ಬುದ್ಧಿಯನ್ನು ಕಲಿಸುವನು. ನಾವು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾಗಿದ್ದಾಗ ಸರಿಯಾಗಿ ಓದು ಬರಹ ಬಾರದ ವಿದ್ಯಾರ್ಥಿಗಳಿಗೆ ಅಂದಿನ ಗುರುಗಳು ಮೂಲೆಯಲ್ಲಿದ್ದ ಕೋಲಿನಿಂದ ದನಗಳಿಗೆ ಹೊಡೆದಂತೆ ಹೊಡೆಯುತ್ತಿದ್ದರು. `ಚಡಿ ಚಮ್ ಚಮ್ ವಿದ್ಯಾ ಗಮ್ ಗಮ್’ ಎನ್ನುವ ಮಾತೇ ಆಗ ಜಾರಿಯಲ್ಲಿತ್ತು. ಚಡಿ ಏಟು ಕೊಟ್ಟರೆ ಶಿಷ್ಯನ ಅಜ್ಞಾನ ನಿವಾರಣೆಯಾಗಿ ಜ್ಞಾನಿಯಾಗುವನು ಎನ್ನುವ ನಂಬಿಕೆ ಅವರಲ್ಲಿತ್ತು. ಇದು ಮೊದಲ ಹಂತ. ತ್ರೇತಾಯುಗದಲ್ಲಿ ಆತ ಅಜ್ಞಾನದಿಂದ ಹೊರಬಂದು ಜ್ಞಾನ ಸಂಪಾದನೆ ಮಾಡುವನು. ಆಗ ಗುರು ಹೊಡೆಯುವುದಿಲ್ಲ. ಓದು, ಬರಹದಲ್ಲಿ ಆತ ಉದಾಸೀನ ಮಾಡಿದರೆ ಬೈದು ಬುದ್ಧಿ ಹೇಳುವನು. ಗುರುಗಳಿಂದ ಬೈಸಿಕೊಳ್ಳಬೇಕಾಯ್ತಲ್ಲ ಎಂದು ಶಿಷ್ಯ ಜಾಗೃತನಾಗುವನು. ದ್ವಾಪರಯುಗದಲ್ಲಿ ಬಡಿಯುವ, ಬಯ್ಯುವ ಅಗತ್ಯ ಬೀಳುವುದಿಲ್ಲ. ತಪ್ಪು ಮಾಡಿದಾಗ ಕಣ್ಸನ್ನೆಯ ಮೂಲಕವೇ ಅವನ ಅಜ್ಞಾನ ನಿವಾರಿಸುವನು. ಕಲಿಯುಗದಲ್ಲಿ ಶಿಷ್ಯ ದೈಹಿಕವಾಗಿ, ಬೌದ್ಧಿಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ ಗುರುವಿಗಿಂತ ಒಂದು ಹೆಜ್ಜೆ ಮುಂದೆ ಸಾಗುವನು. ಶಿಷ್ಯನ ಸಾಧನೆಯನ್ನು ಕಂಡ ಗುರು ಸಂತೃಪ್ತನಾಗಿ ತಾನೇ ಆತನಿಗೆ ವಂದಿಸುವನು. ನನ್ನ ಶಿಷ್ಯ ನನಗಿಂತ ಅದ್ಭುತ ಸಾಧನೆ ಮಾಡಿದನಲ್ಲ ಎಂದು ಅವನನ್ನು ಶಿಷ್ಯನನ್ನಾಗಿ ಪರಿಗಣಿಸದೆ ಗುರುವೆಂದು ಗೌರವಿಸುವನು. ಇದು ಗುರು, ಶಿಷ್ಯರಲ್ಲಿ ಆಗಬೇಕಾದ ಪರಿವರ್ತನೆ. ಇವತ್ತು ಗುರು-ಶಿಷ್ಯ ಸಂಬಂಧ ವ್ಯಾವಹಾರಿಕವಾಗಿಬಿಟ್ಟಿದೆ. ಶೈಕ್ಷಣಿಕ, ಧಾರ್ಮಿಕ, ನೈತಿಕ, ಆಧ್ಯಾತ್ಮಿಕ ಸಂಬಂಧ ಉಳಿದುಕೊಂಡಿಲ್ಲ. ಹಿಂದೆ ಆಶ್ರಮ ಪದ್ಧತಿ ಇತ್ತು. ಕಾಡಿನಲ್ಲಿದ್ದ ಋಷಿಗಳ ಆಶ್ರಮಕ್ಕೆ ಶಿಷ್ಯ ಹೋಗಿ ಗುರುಕಾಣಿಕೆ ಸಲ್ಲಿಸಿ ಹತ್ತಾರು ವರ್ಷಗಳ ಕಾಲ ಲೌಕಿಕ ಮತ್ತು ಪಾರಮಾರ್ಥಿಕ ವಿದ್ಯೆಯನ್ನು ಪಡೆಯುತ್ತಿದ್ದ. ಆ ಶಿಷ್ಯ ಮುಂದೆ ತನ್ನ ಬದುಕಿನಲ್ಲಿ ಎಂದೂ ದಾರಿತಪ್ಪಲು ಸಾಧ್ಯವಿರಲಿಲ್ಲ. ಅಂಥ ಗುರು-ಶಿಷ್ಯ ಸಂಬಂಧ ಇಂದು ಬೇಕಾಗಿದೆ. ಪ್ರಭುದೇವರು `ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು’ ಎಂದು ಗೌರವಿಸಿದ್ದಾರೆ. ಆದರೆ ಬಸವಣ್ಣನವರು ಹೇಳುವುದನ್ನು ನೋಡಿ:
ಎನ್ನ ಗುರು ಪರಮಗುರು ನೀವೆ ಕಂಡಯ್ಯಾ,
ಎನ್ನ ಗತಿ ಮತಿ ನೀವೆ ಕಂಡಯ್ಯಾ,
ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯಾ,
ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ,
ಕೂಡಲಸಂಗಮದೇವಾ,
ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು
ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.
ಬಸವಣ್ಣನವರ ಗುರು ಸಾಕ್ಷಾತ್ ಶಿವ. ನಾನು ಅವನ ಶಿಷ್ಯ. ಶಿವನೇ ನನಗೆ ಗತಿ, ಮತಿ. ಅವನೇ ನನ್ನ ಅರಿವಿನ ಜ್ಯೋತಿ. ಅಂತರಂಗ, ಬಹಿರಂಗದ ಗುರು ಎಂದು ಮನದುಂಬಿ ಹೇಳಿದ್ದಾರೆ. ಇಲ್ಲಿ ಎಂಥ ಉದಾತ್ತ ಭಾವನೆ ಇದೆ ಎನ್ನುವುದನ್ನು ಗಮನಿಸಬೇಕು. ಗುರು, ಶಿಷ್ಯ ಬಾಂಧವ್ಯ ಕೇವಲ ಲೌಕಿಕವಾದುದಲ್ಲ. ಅದು ಭಕ್ತ, ಭಗವಂತನ ನಡುವಿನ ಸಂಬಂಧ ಆಗಬೇಕು. ಆಗ ಗುರುವನ್ನು ಶಿಷ್ಯ ಸೋಲಿಸಲು ಸಾಧ್ಯ ಎನ್ನುವರು ಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲಿ.
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ತಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.
ಭಕ್ತ ಮತ್ತು ಭಗವಂತನ ನಡುವೆ ಸಂವಾದ ನಡೆಯುವುದು. ಎಷ್ಟೋ ಜನ ಸಂವಾದದ ಬದಲು ವಿವಾದ ಮಾಡಿಕೊಳ್ಳುವರು. ನಿಜವಾಗಲೂ ನಡೆಯಬೇಕಾದ್ದು ವಿವಾದ ಅಲ್ಲ; ಸಂವಾದ. ಅನುಭವಮಂಟಪದಲ್ಲಿ ನಡೆಯುತ್ತಿದ್ದುದು ಸಂವಾದ. ಆ ಸಂವಾದದಲ್ಲಿ ಭಕ್ತ ಗೆದ್ದು ಭಗವಂತ ಸೋಲಲು ಕಾರಣವಾಗಿದ್ದು ಅವನ ಸತ್ಯನಿಷ್ಠೆ ಎನ್ನುವರು. ವಯಸ್ಸಿನಲ್ಲಿ ಅತ್ಯಂತ ಕಿರಿಯಳಾಗಿದ್ದ ಮಹಾದೇವಿಯಕ್ಕನಿಗೆ ಅನುಭಾವಿ ಅಲ್ಲಮರು `ಉದಮದದ ಯೌವನವನೊಳಗೊಂಡ ಸತಿ ನೀನು. ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿವರೆಮ್ಮ ಶರಣರು… ದೇಹಕ್ಕೆ ಕೂದಲ ಮರೆಯೇಕೆ’ ಎಂದು ಪ್ರಶ್ನಿಸುವರು. ಅದಕ್ಕೆ ಅಕ್ಕನ ಉತ್ತರ: “ನಿಮಗೆ ಮತ್ತು ನಿಮ್ಮ ಶರಣರಿಗೆ ನನ್ನಲ್ಲಿ ಉದಮದವನ್ನು ಕಾಣುವ ಭಾವ ಇರುವಾಗ ಕಾಮನ ಮುದ್ರೆಯ ಕಂಡು ನಿಮಗೆ ನೋವಾಗದಿರಲೆಂಬ ಭಾವದಿಂದ ದೇಹಕ್ಕೆ ಕೂದಲ ಮರೆ ಮಾಡಿರುವೆ” ಎನ್ನುವಳು. ಇಲ್ಲಿನ ಸಂವಾದವನ್ನು ಗಮನಿಸಬೇಕು. ಕಿರಿಯಳಾದ ಮಹಾದೇವಿಯಕ್ಕ ಹಿರಿಯರಾದ ಅಲ್ಲಮಪ್ರಭುವಿಗೆ ಹೀಗೆ ಛೇಡಿಸಬಹುದೇ ಎಂದು ಇಂದಿನ ಗುರುಗಳು ಕೋಪಿಷ್ಟರಾಗಬಹುದು. ಅಲ್ಲಮನಂಥ ಗುರುತ್ವ ಅಳವಟ್ಟಿದ್ದರೆ ಶಿಷ್ಯನ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಉತ್ತರ ನೀಡಬೇಕಾಗುತ್ತದೆ. ಪ್ರಶ್ನೆ ಪ್ರತಿಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುವನು ನಿಜವಾದ ಗುರು. ಪ್ರಶ್ನೋತ್ತರದ ಮೂಲಕವೇ ಗುರು-ಶಿಷ್ಯರು ತಮ್ಮ ಅನುಮಾನಗಳಿಗೆ ಪರಿಹಾರವನ್ನು ಕಂಡುಕೊಳ್ಳುವರು. ಗ್ರೀಕ್ತಾತ್ವಿಕ ಸಾಕ್ರಟೀಸ್ ಪ್ರಶ್ನಿಸುವ ಮೂಲಕವೇ ಜನರ ಅಜ್ಞಾನ ಕಳೆದು ಸುಜ್ಞಾನಿಗಳನ್ನಾಗಿ ಮಾಡುತ್ತಿದ್ದರು. ಆದರೆ ಇವತ್ತು ಮನೆ, ಶಾಲೆ, ಮಠ ಹೀಗೆ ಎಲ್ಲೆಡೆ ಪ್ರಶ್ನೆ ಕೇಳುವುದೇ ಅಪರಾಧ ಎನ್ನುವ ವಾತಾವರಣ ಇದೆ. ತಲೆಹರಟೆ ಮಾಡದೆ ನಾನು ಹೇಳುವುದನ್ನು ಕೇಳು ಎನ್ನುವ ಹಿರಿಯರು, ಗುರುಗಳು ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಹೇಳಿದ್ದನ್ನು ಮಾತ್ರ ಕೇಳು ಎಂದರೆ ಆತ ನಿಜ ಗುರು ಅಲ್ಲ; ಹಾಗೆ ಕೇಳಿದರೆ ಆತ ಶಿಷ್ಯನೂ ಅಲ್ಲ. ಶಿಷ್ಯ ಪ್ರಶ್ನೆಗಳನ್ನು ಕೇಳಬೇಕು. ಗುರು ತಾಳ್ಮೆಯಿಂದ ಉತ್ತರ ಕೊಡಬೇಕು. ಆಗ ಗುರು, ಶಿಷ್ಯ ಬಾಂಧವ್ಯಕ್ಕೆ ವಿಶೇಷ ಗೌರವ ಬರುವುದು. ಈ ನೆಲೆಯಲ್ಲಿ ಚೆನ್ನಬಸವಣ್ಣನವರ ವಚನ ಗಮನಾರ್ಹವಾಗಿದೆ.
ಗುರುವೆಂಬ ತಂದೆಗೆ ಶಿಷ್ಯನೆಂಬ ಮಗಳು ಹುಟ್ಟಿ,
ಲಿಂಗವೆಂಬ ಗಂಡನ ತಂದು, ಮದುವೆಯ ಮಾಡಿದ ಬಳಿಕ
ಇನ್ನಾರೊಡನೆ ಸರಸವನಾಡಲೇಕಯ್ಯಾ?
ನಾಚಬೇಕು ಲಿಂಗದೆಡೆಯಲ್ಲಿ ನಾಚಬೇಕು ಜಂಗಮದೆಡೆಯಲ್ಲಿ,
ನಾಚಬೇಕು ಪ್ರಸಾದದೆಡೆಯಲ್ಲಿ,
ನಾಚಿದಡೆ ಭಕ್ತನೆಂಬೆನು, ಯುಕ್ತನೆಂಬೆನು, ಶರಣನೆಂಬೆನು,
ನಾಚದಿದ್ದರೆ ಮಿಟ್ಟಿಯ ಭಂಡರೆಂಬೆನು
ಕೂಡಲಚೆನ್ನಸಂಗಮದೇವಾ.
ಲಿಂಗಾಯತ ಧರ್ಮದಲ್ಲಿ `ಶರಣಸತಿ ಲಿಂಗಪತಿ’ ಎನ್ನುವ ತತ್ವ ಇದೆ. ಅದನ್ನು ಇನ್ನೊಂದು ರೀತಿಯಲ್ಲಿ ಚೆನ್ನಬಸವಣ್ಣನವರು ಹೇಳಿದ್ದಾರೆ. ಚೆನ್ನಬಸವಣ್ಣವರು ಅವಿರಳ ಜ್ಞಾನಿ. ಲಿಂಗಾಯತ ಧರ್ಮದ ತಾತ್ವಿಕ ಚಿಂತನೆ ಬಂದಾಗ ಎಲ್ಲರೂ ನೋಡುವುದು ಚೆನ್ನಬಸವಣ್ಣನವರ ವಚನಗಳ ಕಡೆಗೆ. ಗುರು, ಶಿಷ್ಯ ಸಂಬಂಧ ಕುರಿತಂತೆ ಈ ವಚನದಲ್ಲಿ ಗುರುವನ್ನು ತಂದೆ ಎಂದಿದ್ದಾರೆ. ಶಿಷ್ಯ ಮಗಳಾಗಿದ್ದಾಳೆ. ಗುರು, ಶಿಷ್ಯ ಸಂಬಂಧ ತಂದೆ, ಮಗಳ ಸಂಬಂಧದಂತೆ ಇರಬೇಕು ಎನ್ನುವುದು ಚೆನ್ನಬಸವಣ್ಣನವರ ಅಭಿಪ್ರಾಯ. ತಂದೆಯೋಪಾದಿಯಲ್ಲಿರುವ ಗುರು ಮಗಳೋಪಾದಿಯಲ್ಲಿರುವ ಶಿಷ್ಯನಿಗೆ ಲಿಂಗವೆಂಬ ಗಂಡಿನ ಜೊತೆ ಮದುವೆ ಮಾಡಬೇಕು. ಹಾಗೆ ಮದುವೆ ಮಾಡಿದನಂತರ ಅವಳು ಸ್ಥಾವರ ದೇವರ ಆರಾಧನೆ ಬಿಟ್ಟು ಲಿಂಗ, ಜಂಗಮ, ಪ್ರಸಾದಕ್ಕೆ ನಾಚಬೇಕು. ಅವನೇ ಭಕ್ತ, ಯುಕ್ತ ಮತ್ತು ಶರಣ. ನಾಚದೆ ಮತ್ತೆ ಬೇರೆ ಬೇರೆ ಸ್ಥಾವರ ದೇವರುಗಳತ್ತ ಮುಖ ಮಾಡಿದರೆ ಅವರನ್ನು ನಾಚಿಕೆ ಇಲ್ಲದ ಭಂಡರು ಎಂದು ಕಟುವಾಗಿ ನುಡಿಯುವರು. ಹೀಗೆ ಹೇಳುವ ಗುರುಗಳು, ಹೇಳಿದ್ದನ್ನು ಪಾಲಿಸುವ ಶಿಷ್ಯರು ಎಷ್ಟು ಜನರಿದ್ದಾರೆ? ಲಿಂಗಾಯತ ಧರ್ಮದ ಆಶಯದ ಹಿನ್ನೆಲೆಯಲ್ಲಿ ಗುರು ಶಿಷ್ಯನಿಗೆ ಇಷ್ಟಲಿಂಗದೀಕ್ಷೆಯನ್ನು ಕರುಣಿಸಬೇಕು. ಇಷ್ಟಲಿಂಗವೇ ಕಾಮಧೇನು, ಕಲ್ಪವೃಕ್ಷ. ಅದೇ ಬೇಕಾದ್ದನ್ನು ಕೊಡುವಾಗ ಇಷ್ಟಲಿಂಗವನ್ನು ಹೊರತುಪಡಿಸಿ ಬೇರೇನನ್ನೂ ಪೂಜಿಸಬಾರದು ಎಂದು ಅರಿವು ಮೂಡಿಸಬೇಕು. ಶಿಷ್ಯ ಗುರುವಿನ ಆದೇಶದಂತೆ ನಡೆದುಕೊಳ್ಳಬೇಕು. ಬದಲಾಗಿ ಆತ ತೀರ್ಥಕ್ಷೇತ್ರ, ಕಾಶಿ, ಧರ್ಮಸ್ಥಳ, ರಾಮೇಶ್ವರ, ತಿರುಪತಿ ಮತ್ತಿತರ ಕಡೆಗೆ ಹೋಗಿ ತಲೆ ಬೋಳಿಸಿಕೊಂಡು ನೀರಲ್ಲಿ ಮುಳುಗಿ ದೀರ್ಘದಂಡ ನಮಸ್ಕಾರ ಮಾಡುವುದಲ್ಲ. ಹೀಗೆ ಮಾಡಿದರೆ ಆತ ಶಿಷ್ಯನಲ್ಲ, ಅಂಥ ಶಿಷ್ಯನನ್ನು ಒಪ್ಪುವವ ಗುರುವಲ್ಲ. ಈ ನೆಲೆಯಲ್ಲಿ ಎಂತೆಂಥ ಗುರುಗಳು ಸಮಾಜದಲ್ಲಿದ್ದಾರೆ ಎನ್ನುವ ವಾಸ್ತವವನ್ನು ತೆರೆದಿಟ್ಟಿದ್ದಾರೆ ಸಿದ್ಧರಾಮೇಶ್ವರರು.
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ
ನಾನು ಬೇಸರಗೊಂಡೆನಯ್ಯಾ.
ವಿತ್ತಾಪಹಾರಿ ಗುರುಗಳು ನೂರಾರು;
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು;
ಮಂತ್ರತಂತ್ರದಿಂದುಭಯ ಲೋಕದಲ್ಲಿ
ಸುಖದುಃಖವೀವ ಗುರುಗಳು ನೂರಾರು;
ಸತ್ಕರ್ಮೋಪದೇಶವನರುಹಿ
ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು;
ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು.
ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ
ಆತ್ಮಾನುರಾಗತ್ವವನೀವ ಗುರುಗಳು ನೂರಾರು;
ಶಿವಜೀವರ ಏಕತ್ವವನರುಹಿ
ನಿರ್ಮಲಜ್ಞಾನವೀವ ಗುರುಗಳು ಪ್ರಮಥರು.
ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ
ಮುಕ್ತಿಯ ಹಂಗೆಂಬುದ ಅರುಹಿನ ಬಂದನದಲ್ಲಿರಿಸಿದ ಗುರು
ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
ಶಿಷ್ಯರ ಸಂಪತ್ತನ್ನು ಸುಲಿಗೆ ಮಾಡುವ ಗುರುಗಳಿದ್ದಾರೆ. ಶಿಷ್ಯರನ್ನು ಅಜ್ಞಾನದಲ್ಲಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುವ, ಶಾಸ್ತ್ರ ಹೇಳುವ, ಮಂತ್ರ ಮಾಟ ಮಾಡುವ ಗುರುಗಳು ಸಾಕಷ್ಟಿದ್ದಾರೆ. ನಿಜವಾದ ಅರಿವು ಮೂಡಿಸುವ ಗುರು ಇವತ್ತು ಬೇಕಾಗಿದೆ. ಆತ ಶುದ್ಧ ಜ್ಞಾನ ನೀಡುವ ಮೂಲಕ ಶಿಷ್ಯನ ಸಂಶಯಗಳನ್ನು ಸುಟ್ಟುಹಾಕಬೇಕು. ಚೆನ್ನಬಸವಣ್ಣನವರಂತಹ ಗುರುಗಳು ಇಂದು ಬೇಕಾಗಿದೆ. ಆಗ ಮಾತ್ರ ಶಿಷ್ಯನ ಬದುಕು ಪಾವನವಾಗುವುದು. ಚನ್ನಾಗಿ ದುಡಿದು ಸಂಪಾದನೆ ಮಾಡಿರಿ ಎಂದು ಇಂದು ಯಾರಿಗೂ ಗುರುಗಳು ಹೇಳಬೇಕಾಗಿಲ್ಲ. ಎಲ್ಲರೂ ಚನ್ನಾಗಿ ದುಡಿದು ಆರ್ಥಿಕ ಸುಸ್ಥಿತಿ ಪಡೆದಿದ್ದಾರೆ. ಆದರೆ ಅವರ ನೈತಿಕತೆ ಕುಸಿಯುತ್ತಿದೆ. ಧಾರ್ಮಿಕವಾಗಿ ದಿಕ್ಕು ತಪ್ಪುತ್ತಿದ್ದಾರೆ. ಆಧ್ಯಾತ್ಮಿಕ ಅರಿವೇ ಇಲ್ಲ. ಶಿಷ್ಯನ ಅಜ್ಞಾನ ಕಳೆದು ಅವನನ್ನು ನೈತಿಕವಾಗಿ, ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ಮುನ್ನಡೆಸಬೇಕು. ಈ ನೆಲೆಯಲ್ಲಿ ಅಂಬಿಗರ ಚೌಡಯ್ಯನವರ ವಚನ ಗಮನಾರ್ಹ. ಅವರು ಇದ್ದದ್ದನ್ನು ಇದ್ದಹಾಗೆ ಹೇಳುವ ಬಂಡಾಯ ಮನೋಭಾವದವರು. ಗುರು, ಶಿಷ್ಯರ ಸಂಬಂಧ ಕುರಿತಂತೆ ವಿನೂತನವಾಗಿ ಹೇಳಿದ್ದಾರೆ.
ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ.
ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ
ಗೊಡ್ಡ ಮಾನವನ ಮುಖವ ತೋರದಿರಯ್ಯಾ.
ಅದೇನು ಕಾರಣವೆಂದಡೆ:
ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.
ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ
ಖೊಟ್ಟಿ ಗುಣಂಗಳ ಬಿಡಿಸಲಿಲ್ಲ.
ಮಹಾಶೂನ್ಯ ನಿರಾಳ ನಿರಂಜನಲಿಂಗದ
ಕರ ಮನ ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.
ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ?
ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.
ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ.
ಇಷ್ಟೆಲ್ಲ ವಿಚಾರಗಳನ್ನು ವಚನಕಾರರು ಹೇಳಿದ್ದರೂ ನಮ್ಮ ಜನರು ಇನ್ನೂ ವಚನ ಸಾಹಿತ್ಯದ ಕಡೆ ಮುಖ ಮಾಡುತ್ತಿಲ್ಲ. ವಚನ ಸಾಹಿತ್ಯದ ಆಶಯದಂತೆ ಗುರು ಮತ್ತು ಶಿಷ್ಯರು ನಡೆದುಕೊಂಡಾಗ ಮಾತ್ರ ಗುರು, ಶಿಷ್ಯ ಸಂಬಂಧಕ್ಕೆ ಮಾನ್ಯತೆ ಬರುವುದು. ಉಪನಿಷತ್ ಕಾಲದಲ್ಲಿ ಗುರು, ಶಿಷ್ಯರ ನಡುವೆ ಪ್ರಶ್ನೆ, ಪ್ರತಿಪ್ರಶ್ನೆಗಳ ಸಂವಾದ ಇರುವುದು ತಿಳಿದು ಬರುತ್ತದೆ. ಅಲ್ಲಿ ಪ್ರಶ್ನೋತ್ತರದ ಮೂಲಕವೇ ಶಿಷ್ಯನ ಅಜ್ಞಾನವನ್ನು ಗುರು ಕಳೆದು ಅವನನ್ನು ಸುಜ್ಞಾನಿಯನ್ನಾಗಿ ಮಾಡುವನು. ಶಿಷ್ಯ ಪ್ರಶ್ನೆ ಕೇಳುವುದನ್ನು ಗುರು ಸ್ವಾಗತಿಸುವನು. ಪ್ರಶ್ನೆ ಕೇಳಬಾರದೆಂದು ಅವನ ಬೆನ್ನಿನ ಮೇಲೆ ಬಾರಿಸದೆ ಪ್ರಶ್ನೆಯ ಮೂಲಕ ಜ್ಞಾನ ಪಡೆಯುವ ಶಿಷ್ಯನ ಬೆನ್ನು ತಟ್ಟುವನು. ಈ ರೀತಿಯ ಗುರು, ಶಿಷ್ಯ ಸಂಬಂಧ ಇದ್ದಲ್ಲಿ ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯವಾಗುವುದು. ಸರ್ವಜ್ಞ ‘ಮೂಢಂಗೆ ಗುರುತನ ಸಲ್ಲದು’ ಎನ್ನುವನು. ಮೂಢ ಗುರುವಾದರೆ ಶಿಷ್ಯರ ಅಜ್ಞಾನ ಕಳೆಯಲು ಹೇಗೆ ಸಾಧ್ಯ? ಆದರೆ ಇಂದು ಮೂಢರು ಸಹ ಗುರುಗಳಾಗುತ್ತಿರುವುದರಿಂದ ಶಿಷ್ಯರು ಸಹ ಮೂಢರಾಗುತ್ತಿದ್ದಾರೆ. ಹಾಗೆಂದು ನಿರಾಶರಾಗಬೇಕಿಲ್ಲ. ಈಗಲೂ ಶರಣ ಸಂದೇಶ ಅಳವಡಿಸಿಕೊಂಡಿರುವ ಗುರುಗಳೂ ಇದ್ದಾರೆ, ಶಿಷ್ಯರೂ ಇದ್ದಾರೆ. ಇಂಥ ಗುರು, ಶಿಷ್ಯ ಸಂಬಂಧ ಹೆಚ್ಚುತ್ತಿದ್ದರೆ ಕಲ್ಯಾಣ ನಾಡನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಕಲ್ಯಾಣ ನಾಡಿನಲ್ಲಿ ಅಲ್ಲಮರಂಥ ಗುರುಗಳು, ಬಸವಣ್ಣನವರಂಥ ಶಿಷ್ಯರು ಇದ್ದುದರಿಂದ ಅಲ್ಪಾವಧಿಯಲ್ಲೇ ಕಲ್ಯಾಣ ನಾಡಿನ ಚಿತ್ರಣವನ್ನೇ ಬದಲಾಯಿಸಲು ಸಾಧ್ಯವಾಯಿತು. ಗುರುವಾಗಲು ಕಾವಿ ಧರಿಸಬೇಕಿಲ್ಲ. ಮಠದ ಸ್ವಾಮಿಯಾಗಬೇಕಿಲ್ಲ. ಸನ್ಯಾಸಿಯಾಗಬೇಕಿಲ್ಲ. ಬಸವಣ್ಣನವರು ಕಾವಿ ಧರಿಸಲಿಲ್ಲ. ಮಠದ ಸ್ವಾಮಿಗಳಾಗಲಿಲ್ಲ. ಸನ್ಯಾಸಿಯಂತೂ ಮೊದಲೇ ಅಲ್ಲ. ಆದರೂ ಅನುಭಾವಿ ಅಲ್ಲಮರೂ ಸೇರಿದಂತೆ ಅನೇಕ ಶರಣ ಶರಣೆಯರು ಬಸವಣ್ಣನವರನ್ನೇ ಗುರುವೆಂದು ಗೌರವಿಸಿದ್ದಾರೆ.
ಗುರು ಎನ್ನುವ ಗರ್ವ ಬಸವಣ್ಣನವರಿಗೆ ಇರಲಿಲ್ಲ. `ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ಮೂಲಕ ವಿನಯವಂತರಾಗಿ ನಡೆದುಕೊಂಡರು. ಇಂಥ ಗುಣಸ್ವಭಾವ ಗುರುವಿಗೆ ಇರಬೇಕು. ಕೆಲವರು ಸ್ವಯಂ ಗುರುವೆಂದು ಹೇಳಿಕೊಳ್ಳುವುದನ್ನು ನೋಡಿದ್ದೇವೆ. ಅವರೇ ಅಜ್ಞಾನಿಗಳಾಗಿದ್ದರೆ ಶಿಷ್ಯರ ಅಜ್ಞಾನವನ್ನು ಎಂತು ಕಳೆಯಬಲ್ಲರು? ಒಬ್ಬ ಪ್ರವಚನಕಾರ ಒಂದು ಊರಲ್ಲಿ ಪ್ರವಚನ ಮಾಡುತ್ತಿದ್ದರು. ಅವರು ತಮ್ಮ ಊರಿಗೆ ಪತ್ರ ಕಳಿಸಬೇಕಿತ್ತು. ಪೋಷ್ಟಾಫೀಸಿನ ದಾರಿ ಅವರಿಗೆ ಗೊತ್ತಿಲ್ಲ. ಅಲ್ಲಿದ್ದ ಒಬ್ಬ ವಿದ್ಯಾರ್ಥಿಗೆ ಪೋಷ್ಟಾಫಿಸು ಎಲ್ಲಿದೆ ಎಂದು ಕೇಳುವರು. ಆತ ನೇರವಾಗಿ ಹೋಗಿ ಬಲಕ್ಕೆ ತಿರುಗಿದರೆ ಕೆಂಪು ಡಬ್ಬಿ ಕಾಣುವುದು. ಅದೇ ಪೋಷ್ಟಾಫೀಸು ಎನ್ನುವನು. ಅದರಂತೆ ಅವರು ಅಲ್ಲಿಗೆ ಹೋಗಿ ಪತ್ರ ಹಾಕಿ ವಾಪಾಸು ಬಂದಾಗ ವಿದ್ಯಾರ್ಥಿ ಅಲ್ಲೇ ನಿಂತಿದ್ದ. ಅವನಿಗೆ ಕೊಡಲು ಏನೂ ಇಲ್ಲದ್ದರಿಂದ ಸಂಜೆ ನನ್ನ ಪ್ರವಚನಕ್ಕೆ ಬಾ ಎಂದು ಆಹ್ವಾನಿಸುವರು. ಯಾವ ವಿಷಯದ ಬಗ್ಗೆ ಪ್ರವಚನ ಮಾಡುತ್ತೀರಿ ಎಂದು ವಿದ್ಯಾರ್ಥಿ ಕೇಳಲು `ಸ್ವರ್ಗಕ್ಕೆ ದಾರಿ’ ಎನ್ನುವರು. ಹಾಗಿದ್ದರೆ ನಾನು ಬರುವುದಿಲ್ಲ ಎನ್ನುವನು. ಏಕೆ ಬರುವುದಿಲ್ಲ ಎಂದಾಗ ಪೋಷ್ಟಾಫೀಸಿನ ದಾರಿಯೇ ಗೊತ್ತಿಲ್ಲದ ನೀವು ಕಾಣದ ಸ್ವರ್ಗದ ದಾರಿಯನ್ನು ಹೇಗೆ ತೋರಿಸಬಲ್ಲಿರಿ ಎಂದು ಪ್ರಶ್ನಿಸುವನು. ಈ ರೀತಿ ಪ್ರಶ್ನಿಸುವ ಮನಸ್ಥಿತಿ ಶಿಷ್ಯರಿಗೆ ಬಂದರೆ ಗುರು ತನ್ನ ಅಜ್ಞಾನದಿಂದ ಹೊರಬರುವನು. ಇಲ್ಲದಿದ್ದರೆ ಅವನ ಅಹಂಕಾರ ಹೆಚ್ಚಿ ಶಿಷ್ಯ ಕೂಡ ಮೂಢನಾಗುವನು. ಮೂಢ ಶಿಷ್ಯ ಗುರು ಹೇಳಿದ್ದೇ ಸತ್ಯ ಎಂದು ನಂಬುತ್ತಾನೆ. ಶಿಷ್ಯನಾದವ ಗುರುವಿಗೆ ಏನು ಕೊಡಬೇಕು? ಬಸವಣ್ಣನವರ ವಚನದಲ್ಲಿ ಇದಕ್ಕೆ ಉತ್ತರ ಇದೆ.
ಗುರುವಿಂಗೆ ತನುವ ಕೊಟ್ಟು, ಲಿಂಗಕ್ಕೆ ಮನವ ಕೊಟ್ಟು,
ಜಂಗಮಕ್ಕೆ ಧನವ ಕೊಟ್ಟು,
ಇಂತೀ ತ್ರಿವಿಧಕ್ಕೆ ತ್ರಿವಿಧವ ಕೊಟ್ಟು ನಾನು ಶುದ್ಧನಾದೆನು
ಕಾಣಾ, ಕೂಡಲಸಂಗಮದೇವಾ.
ಯೋಗ್ಯ ಗುರುವಿದ್ದರೆ ಶಿಷ್ಯ ಆತನ ಸೇವೆ ಮಾಡಬೇಕು. ಗುರು ಕರುಣಿಸಿದ ಇಷ್ಟಲಿಂಗವನ್ನು ಮನಸ್ಸಿಟ್ಟು ಪೂಜಿಸಬೇಕು. ಸನ್ಮಾರ್ಗ ತೋರುವ ಜಂಗಮಕ್ಕೆ ಧನ ನೀಡಬೇಕು. ಇದರಿಂದ ಆತ ತನು, ಮನ, ಧನದಿಂದ ಶುದ್ಧನಾಗಲು ಸಾಧ್ಯ ಎನ್ನುವ ಆಶಯ ಬಸವಣ್ಣನವರದು. ಯೋಗ್ಯ ಗುರು ಮತ್ತು ಯೋಗ್ಯ ಶಿಷ್ಯರ ನಡುವೆ ಸಂಬಂಧ ಇದ್ದರೆ ಅಭಿವೃದ್ಧಿ ತನ್ನಿಂದ ತಾನೇ ಆಗುವುದು. ಆಗ ಶರಣರು ಕಂಡ ಕಲ್ಯಾಣವನ್ನು ಮತ್ತೆ ಕಾಣಲು ಸಾಧ್ಯ. ಗುರು ಶಿಷ್ಯನ ನರಜನ್ಮವನ್ನು ಕಳೆದು ಹರಜನ್ಮವನ್ನು ಕರುಣಿಸಬೇಕು ಎನ್ನುವ ಅಕ್ಕನ ವಚನ ಗುರು, ಶಿಷ್ಯರ ಬದುಕಿಗೆ ಹಿಡಿದ ಕನ್ನಡಿಯಂತಿದೆ.
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.
ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.
ಚೆನ್ನಮಲ್ಲಿಕಾರ್ಜುನನ ತಂದೆನ್ನ
ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ.

Previous post ಗಣಾಚಾರ
ಗಣಾಚಾರ
Next post ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)

Related Posts

ವಿದ್ಯೆಯೊಳಗಣ ಅವಿದ್ಯೆ
Share:
Articles

ವಿದ್ಯೆಯೊಳಗಣ ಅವಿದ್ಯೆ

February 6, 2019 ಡಾ. ಪಂಚಾಕ್ಷರಿ ಹಳೇಬೀಡು
ಇಂದು ತೋರಿಕೆಗೆ ಕಾಣುವ ಈ ಅಖಂಡ ಸೃಷ್ಟಿಯು ಒಂದೇಬಾರಿಗೆ ಅನಾಮತ್ತಾಗಿ ಉದಯಿಸಿ ನಿಂದುದಲ್ಲವೆಂದು ನಾವೆಲ್ಲಾ ಅರಿತಿದ್ದೇವೆ. ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಸಿದ್ಧಾಂತವೂ...
ಲಿಂಗಾಂಗ ಸಮರಸವೆಂಬ ಮಹಾಪ್ರಸಾದ
Share:
Articles

ಲಿಂಗಾಂಗ ಸಮರಸವೆಂಬ ಮಹಾಪ್ರಸಾದ

August 2, 2019 ಪದ್ಮಾಲಯ ನಾಗರಾಜ್
ತೀರಾ ಇತ್ತೀಚೆಗೆ ‘ಮಂಗಳಾ’ ಎನ್ನುವ ಕೂಸೊಂದು ನನ್ನ ಕೈಕಾಲುಗಳನ್ನು ಬಿಗಿದು ಬಲಾತ್ಕಾರವಾಗಿ ‘ಬಯಲು ಬ್ಲಾಗಿ’ನಲ್ಲಿ ಕೂಡಿ ಹಾಕಿ ‘ಶರಣಪಥ’ದ ಕುರಿತು ಮಾತನಾಡಬೇಕೆಂದು ನನ್ನನ್ನು...

Comments 13

  1. Dinesh P
    Aug 9, 2021 Reply

    ವೈದಿಕರ ಗುರು-ಶಿಷ್ಯ ಸಂಬಂಧಕ್ಕೂ ಶರಣರ ಗುರು-ಶಿಷ್ಯ ಸಂಬಂಧಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಸೂಕ್ಷ್ಮತೆಯನ್ನು ಪ್ರತಿಯೊಬ್ಬ ಲಿಂಗಾಯತನೂ, ಲಿಂಗಾಯತ ಸ್ವಾಮಿಯೂ ಅರಿತುಕೊಳ್ಳಬೇಕು. ಗುರುಗಳಿಗೆ ಶರಣುಗಳು.

  2. ಶರಣಪ್ಪ ಬಿರಾದಾರ
    Aug 14, 2021 Reply

    ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಚನಕ್ಕೆ ನೀವು ನೀಡಿದ ವಿವರಣೆ ಬಹಳ ಚೆನ್ನಾಗಿದೆ, ಲೇಖನವೂ ಅರ್ಥಪೂರ್ಣವಾಗಿದೆ.

  3. Prabhu Hukkeri
    Aug 14, 2021 Reply

    ನಿಜ `ಒಳ್ಳೆಯ ಶಿಷ್ಯ ಸಿಕ್ಕರೆ ಗುರು ಗೆದ್ದ’ , ಹಾಗೆಯೇ ಒಳ್ಳೆಯ ಗುರು ಸಿಕ್ಕರೆ ಶಿಷ್ಯ ಪಾವನನಾಗುತ್ತಾನೆ. ಇವತ್ತು ಅಂತಹ ಗುರುವೂ ಇಲ್ಲ, ಅಂತಹ ಶಿಷ್ಯನೂ ಇಲ್ಲ.

  4. ಚನ್ನಬಸಪ್ಪ ಗೌಳಿ
    Aug 16, 2021 Reply

    ಅಲ್ಲಮರಿಗೆ ಬಸವಣ್ಣ, ಬಸವಣ್ಣನವರಿಗೆ ಅಲ್ಲಮರು…. ಶರಣರ ವಚನಗಳಲ್ಲಿ ಒಬ್ಬರಿಗೊಬ್ಬರು ಗುರುವೆಂದು ಸಂತೋಷದಿಂದ, ಕೃತಜ್ಞತೆಯಿಂದ ಹೇಳಿಕೊಳ್ಳುವುದನ್ನು ನೋಡಿದರೆ ನಮ್ಮಲ್ಲಿರುವ ಅಹಂಕಾರಿಕೆ ಕಂಡು ನಾಚಿಕೆಯೆನಿಸುತ್ತದೆ. ನಾವು ಸದಾ ಒಬ್ಬರನ್ನೊಬ್ಬರಿಗೆ ಹೋಲಿಸಿ ಅವರು ಹೆಚ್ಚು ಇವರು ಹೆಚ್ಚು ಎಂದು ವಾದಿಸುವುದರಲ್ಲಿ ಕಾಲ ಕಳೆಯುತ್ತೇವೆ.

  5. ವೀರನಗೌಡ ಹಾವೇರಿ
    Aug 18, 2021 Reply

    ಗುರುವಾದವನು ಲೌಕಿಕ ವಿಷಯವಾಸನೆಗಳಿಗೆ ಅಂಟಿಕೊಳ್ಳದೆ ಅಹಂಕಾರ ತ್ಯಜಿಸಬೇಕು. ಮಾತು ಜ್ಯೋತಿರ್ಲಿಂಗವಾಗಿರಬೇಕು. ಕೋಪ ತಾಪಗಳಿಂದ ಮುಕ್ತವಾಗಬೇಕು….. ಇಂತಹ ಗುರು ಎಲ್ಲಿರಬಹುದು? ಕೇವಲ ಕಾವಿಧಾರಿಗಳ ಬಗ್ಗೆ ಮಾತಾಡುತ್ತಿಲ್ಲಾ, ಗುರುವೆಂದು ಪ್ರಸಿದ್ದರಾದ ಎಲ್ಲರನ್ನೂ ಹತ್ತಿರದಿಂದ ನೋಡಲು ಸಾಧ್ಯವಿಲ್ಲದಷ್ಟು ವಿಕಾರವಾಗಿದ್ದಾರೆ. ಸದ್ಗುಣಿಗಳಾದ ಗುರುಗಳನ್ನು ಇವತ್ತಿನ ಸಮಾಜ ಕಳೆದುಕೊಂಡಿದೆ ಎನ್ನುವುದು ವಿಷಾದದ ಸಂಗತಿ.

  6. haraprasad
    Aug 18, 2021 Reply

    ರಾಜಕೀಯ ಮಾಡುತ್ತಿರುವ ಗುರುಗಳಿಗೆಲ್ಲಾ ಈ ಲೇಖನವನ್ನು ಕಳಿಸಿಕೊಡಬೇಕು. ಇಂತಹ ರಾಜಗುರುಗಳಿಂದ ಧರ್ಮಗಳು ಹಾಳಾಗುತ್ತಿವೆ, ಜನ ದಾರಿ ತಪ್ಪುತ್ತಿದ್ದಾರೆ.

  7. Siddu Yapalaparvi
    Aug 21, 2021 Reply

    ಅದ್ಬುತ ಬರಹ ಅನ್ನುವ ಧೈರ್ಯ ಬರುತ್ತಿಲ್ಲ

  8. ಈಶ್ವರಪ್ಪ ಗೋವಿನಾಳ
    Aug 21, 2021 Reply

    ಸಾಂದರ್ಭಿಕವಾಗಿ ಅಕ್ಕ- ಅಲ್ಲಮ; ಅಲ್ಲಮ-ಮುಕ್ತಾಯಕ್ಕ, ಬಸವಣ್ಣ-ಅಲ್ಲಮರ ಸಂಬಂಧಗಳ ಅನನ್ಯತೆಯನ್ನು ಬಹಳ ಚೆನ್ನಾಗಿ ನಿರೂಪಿಸಿದ ಉತ್ತಮ ಬರಹ. ಶ್ರೀಗಳ ಮಾತುಗಳೇ ಹಾಗೇ ನೇರ, ಸ್ಪಷ್ಟ ಹಾಗೂ ಸರಳ. ಶರಣಾರ್ಥಿಗಳು ಗುರುಗಳೇ.

  9. Shivaiah Hanji
    Aug 23, 2021 Reply

    ಗುರುವಿನ ತಪ್ಪನ್ನು ಶಿಷ್ಯ ತೋರಿಸಿದರೆ ಗುರು ಮುನಿಸಿಕೊಳ್ಳಬಾರದು ಎನ್ನುವುದು ದೊಡ್ಡ ಮಾತು. ನಮ್ಮೂರಿನ ಗುರುಗಳಿಗೆ ಪಾದಕ್ಕೆ ಅಡ್ಡಬೀಳದಿದ್ದರೆ ಸಾಕು ಕೆಂಗಣ್ಣಿನಿಂದ ನೋಡುತ್ತಾರೆ, ಸಿಡಿಸಿಡಿ ಮಾಡುತ್ತಾರೆ. ಎಲ್ಲರ ಎದುರು ಅವಮಾನವಾಗುವಂತೆ ಮಾತನಾಡುತ್ತಾರೆ. ನಾನು ಕಂಡಂತೆ ಬಹಳಷ್ಟು ಸ್ವಾಮಿಗಳು ಇದೇ ಕೆಟಗರಿಗೆ ಸೇರಿದ್ದಾರೆ. ಇವರಿಗೆ ಬುದ್ದಿ ಹೇಳೋರಾರು?

  10. Doddappa G. K
    Aug 24, 2021 Reply

    ಗುರು ತಂದೆ, ಶಿಷ್ಯ ಮಗಳು, ಲಿಂಗ ಗಂಡ ಎನ್ನುವ ಹೋಲಿಕೆಯಲ್ಲಿ ಚನ್ನಬಸವಣ್ಣನವರು ಗುರು ಮತ್ತು ಶಿಷ್ಯರಿಬ್ಬರ ಕರ್ತವ್ಯ ಮತ್ತು ಗುಣಗಳನ್ನು ತಿಳಿಸಿದ್ದಾರೆ. ಲೇಖನ ಚನ್ನಾಗಿ ಮೂಡಿಬಂದಿದೆ.

  11. Narendra H
    Aug 30, 2021 Reply

    This is my first comment here so I just wanted to give a quick shout out and say I truly enjoy reading through all Bayalu articles.

  12. Umesh Patri
    Aug 31, 2021 Reply

    ಹಿಂದೂ ಧರ್ಮದ ಗುರು-ಶಿಷ್ಯ ಸಂಬಂಧಕ್ಕಿಂತ ವಚನಕಾರರಲ್ಲಿನ ಗುರು-ಶಿಷ್ಯ ಸಂಬಂಧ ಸಂಪೂರ್ಣ ಭಿನ್ನವಾಗಿದೆ. ಯಾವುದೇ ಕಟ್ಟಪ್ಪಣೆಗಳಿಲ್ಲದ ಇದು ಹೆಚ್ಚು ಪ್ರಜಾತಾಂತ್ರಿಕವಾಗಿದ್ದು, ಈಗಿನ ಕಾಲಕ್ಕೂ ನವನವೀನ ಎನ್ನಿಸುವ ಬಂಧವನ್ನು ಉಳಿಸಿಕೊಂಡಿದೆ. ನಿಜಕ್ಕೂ ಶರಣರು ಪ್ರಗತಿಪರ ವಿಚಾರಧಾರೆಯವರು ಎನ್ನುವುದರಲ್ಲಿ ಸಂದೇಹವೇ ಇಲ್ಲ.

  13. ನಾರಪ್ಪ ಸಿರಿಗೆರೆ
    Feb 8, 2022 Reply

    ಪೂಜ್ಯರಿಗೆ ವಂದಿಸುತ್ತಾ 🙏
    ಶಿಷ್ಯ ಸಿಕ್ಕರೆ ಗುರು ಗೆದ್ದ’ ಗೆಲವು ಆದರ್ಶ ಶಿಷ್ಯ ಸಿಕ್ಕಾಗ. ಅಂಥ ಶಿಷ್ಯರನ್ನು ಆತ ತಯಾರು ಮಾಡದಿದ್ದರೆ ಆ ಗುರು ಸೋತಂತೆ. ಗುರುವಿಗೆ ಆದರ್ಶ ಶಿಷ್ಯನ ಅಗತ್ಯ ಇರುವಂತೆ ಶಿಷ್ಯನಿಗೂ ಆದರ್ಶ ಗುರುವಿನ ಅಗತ್ಯವಿದೆ.
    ತಮ್ಮ ಈ ಮಾತಿನಂತೆ ಗುರುಶಿಷ್ಯರ ಸಂಬಂಧವು ವಾಸ್ತವ ಘಟನೆಗಳನ್ನು ಪರಾಮರ್ಶೆಗೆ ಒಳಪಡಿಸಿದಾಗ, ಕೆಲವು ಗುರುಶಿಷ್ಯರಲ್ಲಿ ಗಣಾಚಾರ ದುರ್ಬಳಕೆಯಾಗಿ ದೌರ್ಜನ್ಯ,ಅಹಂಕಾರ, ಷಡ್ಯಂತ್ರ ಮೇಲುಗೈ ಸಾಧಿಸುತ್ತಿದೆ ಎಂದೆನಿಸದಿರುವುದಿಲ್ಲ, ನಿಜದ ಗಣಾಚಾರ ಝಳಪಿಸಬೇಕಿದೆ. ಆಗ ಮಾತ್ರ ಶಿವಶರಣರ ಆಶಯದಂತೆ ಕಲುಷಿತಗೊಂಡ ಸಮಾಜ ನಿರ್ಮಲವಾಗಿ ನಿರ್ಮಾಣವಾಗಬಹುದು. ಗುರುವಿಗಂಜಿ ಶಿಷ್ಯ, ಶಿಷ್ಯನಿಗಂಜಿ ಗುರುವೆಂಬ ಮಾತಿನಂತೆ ವಾತಾವರಣ ಸೃಷ್ಟಿಯಾಗಬಹುದು .

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
Copyright © 2023 Bayalu