Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರು ಲಿಂಗ ಜಂಗಮ…
Share:
Articles February 10, 2023 ಡಾ. ಪಂಚಾಕ್ಷರಿ ಹಳೇಬೀಡು

ಗುರು ಲಿಂಗ ಜಂಗಮ…

ಶರಣರ ವಚನಗಳು ಮಾನವನ ಜೀವನದಲ್ಲಿ ಆಕಾಶದ ಚಂದ್ರಮನಂತೆ, ಬೀದಿ ದೀಪದಂತೆ ಅಷ್ಟೇ ಏಕೆ ಸಣ್ಣ ಕೈದೀವಟಿಗೆಯಂತೆ ನಮಗೆ ನಿತ್ಯ ಮಾರ್ಗದರ್ಶನ ಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವಚನಗಳಲ್ಲಿ ಉಲ್ಲೇಖವಾಗಿರುವ ಬಹುಮುಖ್ಯವಾಗಿ ಗುರು ಲಿಂಗ ಜಂಗಮ ಮತ್ತು ಪ್ರಸಾದ ಶಬ್ದಗಳು ಬೇರೆ ಬೇರೆ ವಚನಗಳಲ್ಲಿ ವಿಭಿನ್ನ ಅರ್ಥ ಹಾಗೂ ಭಾವದಲ್ಲಿ ಬಳಕೆಯಾಗಿವೆ. ವಚನದ ಭಾವಕ್ಕೆ ತಕ್ಕಂತೆ ಆ ಶಬ್ದಗಳನ್ನು ಅರ್ಥಮಾಡಿಕೊಂಡರೆ ವಚನದ ಆಶಯಕ್ಕೆ ಭಂಗ ಬರುವುದಿಲ್ಲ ಇಲ್ಲವಾದಲ್ಲಿ ಇಡೀ ವಚನದ ಆಶಯ ಈಡೇರುವುದಿಲ್ಲ. ಮೇಲೆ ಹೇಳಿದಂತೆ ನಮ್ಮ ಜೀವನಕ್ಕೆ ಅಗತ್ಯವಾಗಿ ನಿತ್ಯ ಮಾರ್ಗದರ್ಶಕವಾಗಬೇಕಾದ ವಚನಗಳು ಭಿನ್ನ ಹಾದಿಯನ್ನು ತೋರಿದಂತಾಗುತ್ತದೆ. ವಚನದ ಸಂಪೂರ್ಣ ಆಶಯವನ್ನು ಮೊದಲು ಗುರುತಿಸಿ ಈ ಶಬ್ದಗಳನ್ನು ಅರಿಯಲು ಪ್ರಯತ್ನಿಸಿದಲ್ಲಿ ವಚನದ ಭಾವದ ಜೊತೆಗೆ ನಮ್ಮ ಭಾವ ಬೆರೆತು ಸಮೀಕರಣವಾಗುವುದರಲ್ಲಿ ಸಂಶಯವಿಲ್ಲ. ಈ ನಾಲ್ಕು ಪದಗಳು ಕೇವಲ ಶಬ್ದ ಅಥವಾ ಪದಗಳಲ್ಲ. ಇವು ಶರಣ ಸಂಸ್ಕೃತಿಯ ನಾಲ್ಕು ಆಧಾರ ಸ್ತಂಭಗಳು. ಈ ಆಧಾರ ಸ್ತಂಭಗಳ ಮೇಲೆ ಶರಣರು ಅನುಭಾವ ಮಂಟಪ ನಿರ್ಮಿಸಿದರು, ಆ ಅನುಭಾವ ಮಂಟಪವಾದರೋ ಸ್ಥೂಲ ಹಾಗೂ ಸೀಮಿತ ಮಂಟಪದಂತಿರದೆ ವಿಶ್ವ ವಿಶಾಲವಾದುದು, ಹಿಗ್ಗಿಸಿದಷ್ಟೂ ಹಿಗ್ಗುವುದು.

ಗುರು ಲಿಂಗ ಜಂಗಮ ಎಂಬ ತತ್ವತ್ರಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನಾವು ಗುರು ಎಂದಾಕ್ಷಣ ವೇಷತೊಟ್ಟ ಒಬ್ಬ ವ್ಯಕ್ತಿಯನ್ನು ನೋಡುತ್ತೇವೆ, ಲಿಂಗ ಎಂದಾಕ್ಷಣ ಇಷ್ಟಲಿಂಗ ಎಂದುಕೊಳ್ಳುತ್ತೇವೆ, ಜಂಗಮ ಎಂದಾಕ್ಷಣ ಊರೂರು ಸುತ್ತುವ ಮತ್ತೊಬ್ಬ ವೇಷಧಾರಿ ನಮ್ಮ ಮನದ ಮುಂದೆ ಸುಳಿದು ಹೋಗುತ್ತಾನೆ. ಇದೂ ಒಂದು ರೀತಿಯಲ್ಲಿ ಭಾವನಿಂದೆಯೇ! “ತಾಳ ಮರದ ಕೆಳಗೆ ಒಂದು ಹಾಲ ಹರವಿಯಿರ್ದೊಡೆ ಅದ ಹಾಲಹರವಿಯೆನ್ನರು, ಸುರೆಯ ಹರವಿಯೆಂಬರು, ಈ ಭಾವನಿಂದೆಯ ಮಾಣಿಸಾ, ಕೂಡಲಸಂಗಮದೇವಾ.” ಪ್ರತಿಯೊಂದು ವಸ್ತುವನ್ನೂ ಅದರ ಪೂರ್ಣ ನೆಲೆಯಲ್ಲಿ ಅರಿಯುವ ಪ್ರಯತ್ನ ಮಾಡಬೇಕು.

ಮೂಲತಃ ಗುರು ಎಂಬುದು ತತ್ವವಾಚಕ ಪದವಾಗಿದ್ದು ವಚನಸಾಹಿತ್ಯದಲ್ಲಿ ಇದನ್ನು ವ್ಯಕ್ತಿವಾಚಕವಾಗಿ ಬಳಸದೆ ತತ್ವವಾಚಕವಾಗಿ ಹೆಚ್ಚಾಗಿ ಬಳಸಿರುವುದು ವಿಶೇಷ. ‘ಗುರು’ ಪದದಲ್ಲಿ ‘ಗು’ ಎಂದರೆ ‘ಅಜ್ಞಾನದ ಕತ್ತಲೆ’ ಮತ್ತು ‘ರು’ ಎಂದರೆ ‘ಜ್ಞಾನದ ದಿವ್ಯ ಬೆಳಕು’. ನಿಜವಾದ ಜ್ಞಾನದ ದಿವ್ಯ ಬೆಳಕಿನಿಂದ ಕತ್ತಲೆ ಮತ್ತು ಭ್ರಮೆಯನ್ನು ತೊಡೆದುಹಾಕುವ ವ್ಯಕ್ತಿ/ಸನ್ನಿವೇಶ/ವಸ್ತು/ನಿಸರ್ಗ/ಕ್ರಿಯೆಗಳನ್ನು ಗುರು ಎಂದು ಕರೆಯಲಾಗುತ್ತದೆ. ಇದು ಒಂದು ನಿರ್ದಿಷ್ಟ ಬಣ್ಣದ ಉಡುಗೆಯ ಉಟ್ಟ ವ್ಯಕ್ತಿಗೆ ಸಂಬಂಧಿಸಿರದೆ ಒಂದು ಶುದ್ಧ ತಾತ್ವಿಕ ಪದವಾಗಿರುವುದು. ಗುರು ಎಂಬುದು ವ್ಯಕ್ತಿಯ ಸ್ವಯಂ-ಸಾಕ್ಷಾತ್ಕಾರದ ಉನ್ನತ ಸ್ಥಿತಿಯಾಗಿದೆ.

ಗುರುವು ನಿಜವಾದ ಆತ್ಮದ ಜ್ಞಾನ ಮತ್ತು ಪ್ರಪಂಚದ ಜ್ಞಾನದ ನಡುವೆ ನಿಂತಿರುವ ಒಬ್ಬ ವಿವೇಕಿ. ಯಾವ ವ್ಯಕ್ತಿ/ಸನ್ನಿವೇಶ/ವಸ್ತು/ನಿಸರ್ಗ/ಕ್ರಿಯೆಯು ಮರೆವಿನ ಮಾಯೆಯಲ್ಲಿ ಮುಳುಗಿರುವ ಆತ್ಮವನ್ನು ಎತ್ತಿ ತನ್ನನ್ನು ತಾನು ಅರಿಯಲು ಸಹಾಯ ಮಾಡುತ್ತದೋ ಅದು ಆ ವ್ಯಕ್ತಿಗೆ ಗುರುವಾಗುತ್ತದೆ ಮತ್ತು ಮರೆವಿನಿಂದ ಮುಕ್ತಗೊಳಿಸುತ್ತದೆ.

ಗುರುವು ಮೂಲಭೂತವಾಗಿ ನಿರಾಕಾರ, ಆದರೆ ಮರೆವಿನ ಮಾನವನಿಗೆ ಅರಿವು ಮೂಡಿಸಲು ಭೌತಿಕ ರೂಪವನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ಜಗನ್ಮಾತಾ ಅಕ್ಕಮಹಾದೇವಿಯವರ ಒಂದು ವಚನ ನಿದರ್ಶನ:
“ಗುರು ತನ್ನ ವಿನೋದಕ್ಕೆ ಗುರುವಾದ, ಗುರು ತನ್ನ ವಿನೋದಕ್ಕೆ ಲಿಂಗವಾದ, ಗುರು ತನ್ನ ವಿನೋದಕ್ಕೆ ಜಂಗಮವಾದ, ಗುರು ತನ್ನ ವಿನೋದಕ್ಕೆ ಪಾದೋದಕವಾದ, ಗುರು ತನ್ನ ವಿನೋದಕ್ಕೆ ಪ್ರಸಾದವಾದ, ಗುರು ತನ್ನ ವಿನೋದಕ್ಕೆ ವಿಭೂತಿಯಾದ, ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ, ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ. ಇಂತೀ ಭೇದವನರಿಯದೆ, ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು. ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ ಅಂಗೈಯಲ್ಲಿರ್ದ ಲಿಂಗವು ಜಾರಿತ್ತು. ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು ಭವಹೇತುಗಳ ಮಾಡುವನಯ್ಯಾ. ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು ಚೆನ್ನಮಲ್ಲಿಕಾರ್ಜುನಾ”. ಮತ್ತು ಗುರು ಬಸವಣ್ಣನವರ “ನಿತ್ಯನಿರಂಜನ ಪರಂಜ್ಯೋತಿ ವಸ್ತು: ಉಪದೇಶವ ಕೊಟ್ಟು ಗುರುವಾದ, ಕರಸ್ಥಲಕ್ಕೆ ಬಂದು ಲಿಂಗವಾದ, ಹಸರವಾದ ಪ್ರಪಂಚನಳಿದು ದಾಸೋಹವ ಮಾಡಿಸಿಕೊಂಡು ಜಂಗಮವಾದ, ಇಂತೀ ಗುರುಲಿಂಗಜಂಗಮ ಒಂದೆಯಲ್ಲದೆ ಭಿನ್ನವಿಲ್ಲ. ಈ ಮೂರಕ್ಕೆ ಮೂರನಿತ್ತು ಮೂರನೊಂದ ಮಾಡಬಲ್ಲಡೆ, ಆತ ಪ್ರಸಾದ ಕಾಯನಯ್ಯಾ, ಕೂಡಲಸಂಗಮದೇವಾ” ಈ ವಚನಗಳಲ್ಲಿ-

ಅಷ್ಟಾವರಣದಲ್ಲಿ ಬರುವ ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಮತ್ತು ಪ್ರಸಾದಗಳೆಲ್ಲವೂ ಮೂಲದಲ್ಲಿ ನಿರಾಕಾರ ತತ್ವಗಳೇ ಆಗಿದ್ದು, ನಮ್ಮ ಮರೆವನ್ನು ಹಿಂಗಲು ಅವುಗಳನ್ನು ಸಾಕಾರ ರೂಪದಲ್ಲಿ ನಮ್ಮ ಅಂಗದ ಮೇಲೆ ಹಿಂಗದೆ ಅಳವಡಿಸಿಕೊಳ್ಳಬೇಕೆಂಬುದು ಶರಣರ ನಿಲುವು. ಹಾಗೆ ಅಂಗದಲ್ಲಿ ಅಳವಟ್ಟ ಸಾಕಾರ ತತ್ವಗಳನ್ನು ನಿರಾಕಾರ ತತ್ವವೆಂದೇ ಅರಿದು ಆಚರಿಸಿದಲ್ಲಿ ಮಾತ್ರ ಅದರ ಫಲ ದೊರಕುವುದು. ಸಾಕಾರವನ್ನು ನಿರಾಕಾರದಿಂದ ಭಿನ್ನ ಎಂಬ ಭಾವ ನಮ್ಮಲ್ಲಿ ಎಡೆಯಾಡಿದ್ದೇ ಆದಲ್ಲಿ ಅಂದರೆ ಸಾಕಾರವು ಕೇವಲ ಕುರುಹು ನಿರಾಕಾರವು ಪರಮ ಚೈತನ್ಯ ಎಂಬ ಭಿನ್ನ ಭಾವ ಮೊಳಕೆಯೊಡೆದಲ್ಲಿ ಇವುಗಳು ಅಪ್ರಯೋಜಕ ಆಚರಣೆಗಳಾಗುವುದರಲ್ಲಿ ಸಂಶಯವಿಲ್ಲ.

ಶರಣ ಹಾವಿನಹಾಳ ಕಲ್ಲಯ್ಯನವರು- “ಅರಿವೆ ಗುರು, ಆಚಾರವೆ ಶಿಷ್ಯ, ಜ್ಞಾನವೆ ಲಿಂಗ, ಪರಿಣಾಮವೆ ತಪ, ಸಮತೆಯೆಂಬುದೆ ಯೋಗದಾಗು ನೋಡಾ. ಈಸುವನರಿಯದೆ ವೇಷವ ಧರಿಸಿ, ಲೋಚು ಬೋಳಾದಡೆ ಮಹಾಲಿಂಗ ಕಲ್ಲೇಶ್ವರದೇವರು ನಗುವರು.” ಗುರು ಮತ್ತು ಲಿಂಗಕ್ಕೆ ಒಂದು ಸ್ಪಷ್ಟತೆಯನ್ನು ತಮ್ಮ ವಚನದಲ್ಲಿ ಕರುಣಿಸಿದ್ದಾರೆ. ‘ಅರಿವೆ ಗುರು’ ಈ ಪದಗುಚ್ಛವನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಶರಣರು ಯಾವ ಅರಿವನ್ನು ಗುರುವೆಂದು ಕರೆದಿದ್ದಾರೆ? ಮೊದಲಿಗೆ ಅರಿವು ಎಂದರೇನು? ಉದಾಹರಣೆಗೆ ಲೋಕದ ಸಾಮಾನ್ಯ ಪ್ರಜ್ಞೆಯಾದ ಹಸಿದಾಗ ಊಟಮಾಡಬೇಕೆಂಬ ಸಾಮಾನ್ಯ ಜ್ಞಾನ, ಆಗತಾನೆ ಹುಟ್ಟಿದ ಕರು/ ಮಗು ತಾಯ ಹಾಲು ಕುಡಿಯುವ ಜ್ಞಾನ, ಮುಳ್ಳು ಚುಚ್ಚಿದಾಗ ಅದನ್ನು ತೆಗೆಯುವ ಸಾಮಾನ್ಯ ಜ್ಞಾನ ಇತ್ಯಾದಿ, ಇಂತಹ ಪ್ರಜ್ಞೆ ಏಕಕೋಶ ಜೀವಿಯಾದಿಯಾಗಿ ಮಾನವನವರೆಗೆ ಎಲ್ಲ ಸ್ತರದ ಜೀವಿಗಳಲ್ಲಿಯೂ ಇದ್ದೇ ಇರುತ್ತದೆ. ಕೆಲವರು ಇಂತಹ ಪ್ರಜ್ಞೆಯನ್ನೇ ಅರಿವು ಎಂದು ತಿಳಿದು ಶರಣರ ಕಡೆ ಬೊಟ್ಟು ತೋರಿಸಿ ಶರಣರೇ ಹೇಳಿದ್ದಾರೆ ಅರಿವೇ ಗುರುವೆಂದು ಎಂದು ತಮಗೆ ತಿಳಿದ ಹಾಗೆ ನಡೆವವರನ್ನು ಸಾಮಾನ್ಯವಾಗಿ ನೋಡಿಯೇ ಇರುತ್ತೇವೆ. ಹಾಗಾದರೆ ಶರಣರ ಪ್ರಕಾರ ‘ಅರಿವು’ ಎಂದರೇನು? ಯಾವುದರ ಅರಿವು ಗುರುವಾಗಿ ನಮ್ಮನ್ನು ಸತ್ಪಥದೆಡೆಗೆ ನಡೆಸಿ ನಮ್ಮ ಜೀವನವನ್ನು ಸಾರ್ಥಕಗೊಳಿಸಬಲ್ಲುದು?

ಶರಣರ ನೆಲೆಯಲ್ಲಿ ಅರಿವು ಎಂದರೆ ಲಿಂಗತತ್ವದ ಪ್ರಜ್ಞೆ. ಸೃಷ್ಟಿಗೆ ಕಾರಣವಾದ ಆ ಪರಮ ಚೈತನ್ಯದ ಸ್ವರೂಪ, ಅದರ ನೆಲೆಕಲೆಗಳು, ಜೀವಾತ್ಮನಿಗೂ ಆ ಪರಾತ್ಪರ ಚೈತನ್ಯಕ್ಕೂ ಇರುವ ಸಂಬಂಧ, ಪರಾತ್ಪರ ಚೈತನ್ಯ ನನ್ನಲ್ಲಿ ಇರುವುದಾದರೆ ಅದನ್ನು ನಾನೇಕೆ ನೋಡಲಾಗುತ್ತಿಲ್ಲ ಮತ್ತು ಅನುಭವಿಸಲಾಗುತ್ತಿಲ್ಲ, ನನ್ನಲ್ಲಿ ಇರುವ ದೋಷಗಳೇನು, ಒಟ್ಟಾರೆಯಾಗಿ ಜೀವಾತ್ಮನು ಹೇಗೆ ತನ್ನ ಬದುಕನ್ನು ಕರ್ತಾರನ ಕಮ್ಮಟವಾದ ಈ ಇಳೆಯಲ್ಲಿ ಸಾರ್ಥಕಪಡಿಸಿಕೊಳ್ಳಬಹುದು ಎಂಬ ಪ್ರಜ್ಞೆಯೇ ಶಿವತತ್ವ ಅಥವಾ ಲಿಂಗತತ್ವದ ಅರಿವು. ಇಂಥಾ ಅರಿವುಳ್ಳವನಿಗೆ ಆತನ ಅರಿವು ಗುರುವಾಗಬಲ್ಲುದು. ಇದರ ಲವಲೇಷವೂ ಜ್ಞಾನವಿಲ್ಲದವನಿಗೆ ಆತನ ಅರಿವು ಗುರುವಾಗಲು ಸಾಧ್ಯವಿಲ್ಲ. ಏಕೆಂದರೆ ಆತನಿಗೆ ಸ್ವರೂಪ ಜ್ಞಾನವೇ ಇರುವುದಿಲ್ಲ. ಅರಿವಿಲ್ಲದವನ ಆಚಾರ ಲಿಂಗವಾಗಲು ಸಾಧ್ಯವಿಲ್ಲ, ಆಚಾರವಿಲ್ಲದವನ ಅನುಭವ ಜಂಗಮವಾಗಲು ಸಾಧ್ಯವಿಲ್ಲ. ಯಾವ ವ್ಯಕ್ತಿಯಲ್ಲಿ ಗುರು ಲಿಂಗ ಜಂಗಮಗಳ ಕುರಿತು ಸ್ಪಷ್ಟ ಜ್ಞಾನವಿರುವುದೋ ಅದೇ ನಿಜದ ಅರಿವು!

ಅಂಬಿಗರ ಚೌಡಯ್ಯ ಶರಣರು ಗುರುವಿನ ಕರ್ತವ್ಯ ಮತ್ತು ಶಿಷ್ಯನ ಜ್ಞಾನ ಎರಡನ್ನೂ ಕುರಿತು ತಮ್ಮ ವಚನದಲ್ಲಿ- “ಗುರು- ಲಿಂಗ- ಜಂಗಮವೆಂದರಿಯದ ಗೊಡ್ಡುಗಳ ಶಿಷ್ಯನ ಮಾಡಿಕೊಂಬುವ ಹೆಡ್ಡ ಜಡಜೀವಿಗಳನೇನೆಂಬೆನಯ್ಯ! ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ! ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ, ಅವನ ಆದಿ-ಅಂತ್ಯವ ತಿಳಿಯದೆ, ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ ಹುಟ್ಟಂಧಕನೆಂಬೆನಯ್ಯ! ತನ್ನ ಗುರುತ್ವವನರಿಯದ ಗುರುವಿಂದ ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ! ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮಚ್ಚರಯ್ಯ! ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂ ಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು.”
ಗುರುವಾದವನು ಶಿಷ್ಯನ ಸಮಸ್ತ ಕತ್ತಲೆಯನ್ನು ಕಳೆಯುವ ಅರಿವನ್ನು ಕೊಡಬೇಕು ಹಾಗೇ ಶಿಷ್ಯನೂ ಅರಿಯದ ಗುರುವಿನಿಂದ ಉಪದೇಶವ ಪಡೆದರೆ ಏನು ಪ್ರಯೋಜನ? ಕುರುಡ ಕುರುಡನ ಕೈಹಿಡಿದು ನಡೆಸಿದಂತಾಗುವುದು ಎಂದು ಕಟುವಾಗಿ ಟೀಕಿಸಿದ್ದಾರೆ.

ಗುರು ಬಸವಣ್ಣನವರ ಈ ವಚನದಲ್ಲಿ ಗುರು ಒಬ್ಬ ವ್ಯಕ್ತಿಯಾಗಿ ಮಾನವ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ “ಕಲ್ಲೊಳಗೆ ಹೊನ್ನುಂಟು, ಮರದೊಳಗೆ ಅಗ್ನಿಯುಂಟು, ಹಾಲೊಳಗೆ ತುಪ್ಪವುಂಟು, ಅಂತರಾಮಿಯಲ್ಲಿ ಶಿವನಿಹನು. ಇದೇನು ಕಾರಣ ಕತ್ತಲೆ ಕಾಣಬಾರದು, ತೋರಬಲ್ಲ ಗುರು ಸುಳಿಯನು, ಕೂಡಲಸಂಗಮದೇವಾ.” ಸಕಲ ಮಾನವರಲ್ಲಿ ಕೂಡ ಅಗಾಧವಾದ ಅರಿವಿದ್ದರೂ ಅದನ್ನು ತೋರುವ ಗುರುವಿಲ್ಲದ ಕಾರಣ ಆ ಅರಿವು ಅಜ್ಞಾನದ ಮರೆಯಲ್ಲಿ ಮಸುಕಾಗಿ ಅಡಗಿದ್ದು ಮುನ್ನೆಲೆಗೆ ಬಂದು ಅರಿವಿನ ಬೆಳಕಾಗುವುದಿಲ್ಲ, ಜೀವನ ದರ್ಶನವಾಗುವುದಿಲ್ಲ, ಮರೆವಿನಲ್ಲಿ ಮೈಮರೆತ ಮಾನವನಿಗೆ ಅರಿವಿನ ಬೆಳಕಿನ ಕಿಡಿಯನ್ನು ಹೊತ್ತಿಸಿದಾಗ ಅವನ ಅಂಧಕಾರವೆಲ್ಲಾ ಧಗಧಗಿಸಿ ಉರಿದು ಅವನಲ್ಲಿ ಶುದ್ಧಜ್ಞಾನ ಹೊರಹೊಮ್ಮುತ್ತದೆ. ಅಂಥಾ ಅರಿವಿನ ಕಿಡಿಯನ್ನು ಹೊತ್ತಿಸುವ ವ್ಯಕ್ತಿ/ಸನ್ನಿವೇಶ/ವಸ್ತು/ನಿಸರ್ಗ/ಕ್ರಿಯೆಗಳೇ ಭೌತಿಕ ಗುರು.

ಮಾನವನ ದೇಹದಲ್ಲಿ ಸ್ಥೂಲ ಸೂಕ್ಷ್ಮ ಹಾಗೂ ಕಾರಣ ಎಂಬ ಮೂರು ಉಪಾಂಗಗಳಿದ್ದು (ಪದರು), ಇವುಗಳು ಗುರು, ಲಿಂಗ ಮತ್ತು ಜಂಗಮ ಎಂಬ ತ್ರಿತತ್ವಗಳು ನೆಲೆಯಾಗಿವೆ ಎಂದು ಎಲ್ಲ ಶರಣರೂ ಅನುಮೋದಿಸಿರುತ್ತಾರೆ. ಚಿನ್ಮಯಜ್ಞಾನಿ ಚನ್ನಬಸವಣ್ಣನವರು ತಮ್ಮ ಈ ವಚನದಲ್ಲಿ ಸ್ಥೂಲ ತನುವೇ ಗುರುವಾಗಿಯೂ, ಸೂಕ್ಷ್ಮತನುವೇ ಲಿಂಗವಾಗಿಯೂ ಹಾಗೂ ಕಾರಣತನುವೇ ಜಂಗಮವಾಗಿಯೂ ಅಭಿನ್ನವಾಗಿ ನೆಲೆಯಾಗಿರುವುದನ್ನು ಉಲ್ಲೇಖಿಸುತ್ತಾರೆ.

“ತನು ಗುರುವಿನಲ್ಲಿ ಸವೆದು, ಮನ ಲಿಂಗದಲ್ಲಿ ಸವೆದು, ಧನ ಜಂಗಮದಲ್ಲಿ ಸವೆದು, ತನುವೆ ಗುರುವಾಗಿ, ಮನವೆ ಲಿಂಗವಾಗಿ, ಧನವೆ ಜಂಗಮವಾಗಿ ಇಂತೀ ತ್ರಿವಿಧ ಐಕ್ಯವಾಗಿ ನಿಮ್ಮಲ್ಲಿ ನಿಂದನಾಗಿ; ಕಾಯವಿಡಿದು ಕರ್ಮವಿರಹಿತನಾದ, ಕೂಡಲಚೆನ್ನಸಂಗಮದೇವರಲ್ಲಿ ಸಂಗನಬಸವಣ್ಣನು ಉಪಮಾತೀತನಾಗಿರ್ದನು” ಇಲ್ಲಿ ತನು ಗುರುವಿನಲ್ಲಿ ಸವೆಯುವುದು ಎಂದರೆ ಸ್ಥೂಲ ತನುವಿನಿಂದ ಪ್ರಜ್ಞಾಪೂರ್ವಕವಾಗಿ ಸತ್ಯಶುದ್ಧ ಕಾಯಕವನ್ನು ಮಾಡುವುದೆಂದರ್ಥ. ಇದನ್ನು ಅಪಾರ್ಥ ಮಾಡಿಕೊಂಡು ಅನೇಕ ಭಕ್ತರು ವೇಷಧಾರಿ ಗುರುವಿನ ಸೇವೆ ಮಾಡಿ ಕೃತಾರ್ಥರಾದೆವೆಂದು ಭಾವಿಸಿದರೆ ಇನ್ನೂ ಅನೇಕ ವೇಷಧಾರಿ ಗುರುಗಳು ಭಕ್ತರು ತಮ್ಮ ಸೇವೆಯನ್ನು ಮಾಡುವ ಮೂಲಕ ಪಾವನರಾಗುತ್ತಾರೆಂದು ತಪ್ಪು ಕಲ್ಪನೆ ಮೂಡಿಸುತ್ತಾರೆ. ಆದರೆ ವಚನದ ಮೂಲ ಆಶಯ ಇದಾಗಿರುವುದಿಲ್ಲ ಎಂಬುದನ್ನು ನಾವು ಅರಿಯಬೇಕು. ತನು ಕಾಯಕದಲ್ಲಿ ಸವೆದು ಸದಾಚಾರದ ನೆಲೆಯಾದಾಗ ಅದು ತಾನೇ ಗುರು ಸ್ವರೂಪವಾಗುತ್ತದೆ, ಮನವು ಲಿಂಗದಲ್ಲಿ ಸವೆದಾಗ, ಅಂದರೆ ಮನವು ಸುವಿಚಾರಗಳ ನೆಲೆಯಾಗಿ ದುರ್ವಿಚಾರಗಳು ಎಡೆಯಾಡದಿರಲು ನಿತ್ಯಾನಿತ್ಯವಿವೇಕವಿದ್ದಲ್ಲಿ ಮನವು ಲಿಂಗವಾಗುತ್ತದೆ, ಕಾರಣತನುವಿನ ಭಾವ, ಚಿತ್ತ ಮತ್ತು ಅಹಂಕಾರಗಳು ಶೂನ್ಯವಾದಲ್ಲಿ ಕಾರಣತನು ಜಂಗಮವಾಗುತ್ತದೆ. ಹೀಗೆ ಸಾಧಕನ ಇಡೀ ದೇಹ ತನ್ನ ದೇಹಭಾವ ಹಿಂಗಿ ಉಪಮಾತೀತನಾದ ಶರಣನಾಗುತ್ತಾನೆ.

“ತ್ರಿವಿಧ ಪ್ರಸಾದವೆಂದೆಂಬರು, ಅದೆಂತಹುದೋ ಶುದ್ಧಪ್ರಸಾದ ಗುರುವಿನದು, ಸಿದ್ಧಪ್ರಸಾದ ಲಿಂಗದದು, ಪ್ರಸಿದ್ಧಪ್ರಸಾದ ಜಂಗಮದದು. ಇಂತೀ ತ್ರಿವಿಧ ಒಂದಾದವರ ತೋರಾ ಕೂಡಲಸಂಗಮದೇವಾ.”
ಶುದ್ಧಪ್ರಸಾದ ಗುರುವಿನದು ಎಂದರೆ ಸದಾಚಾರ ಮತ್ತು ಸತ್ಯಶುದ್ಧ ಕಾಯಕದಿಂದ ತನು ಸವೆದು ರೋಗರಹಿತ ಆನಂದದಾಯಕ ಸ್ವಸ್ಥ ಕಾಯವನ್ನು ಹೊಂದುವುದೇ ಶುದ್ಧಪ್ರಸಾದವೆಂದರಿಯಬೇಕು. (ಇಷ್ಟಲಿಂಗ ಸಾಧನೆ ಮಾಡುವುದು ಅಂದರೆ ತನ್ನ ಕಾಯವನ್ನು ಇಷ್ಟಲಿಂಗವಾಗಿಸುವುದೇ ಶುದ್ಧಪ್ರಸಾದದ ಪರಿಣಾಮ). ಇದಕ್ಕೆ ಗುರುಪ್ರಸಾದವೆಂದೂ ಕರೆಯುವುದುಂಟು.

ಸಿದ್ಧಪ್ರಸಾದ ಲಿಂಗದದು ಎಂದರೆ ಪ್ರಾಣದ ಸಂಸ್ಕಾರದಿಂದ ಅಂತಃಕರಣಗಳಾದ ಮನಸ್ಸು ಮತ್ತು ಬುದ್ಧಿ ನಿರ್ವಿಷಯಿಗಳಾಗಿ, ನಿತ್ಯಾನಿತ್ಯವಿವೇಕ ಪ್ರಜ್ಞೆಯುಳ್ಳಲ್ಲಿ ಸಿದ್ಧಪ್ರಸಾದ ಪ್ರಾಪ್ತಿಯಾಗುವುದು (ಪ್ರಾಣಲಿಂಗ ಸಾಧನೆ ಮಾಡುವುದು ಅಂದರೆ ಸೂಕ್ಷ್ಮತನು (ಅಂತಃಕರಣ)ವನ್ನು ಲಿಂಗಮಯವಾಗಿಸುವುದೇ ಸಿದ್ಧಪ್ರಸಾದದ ಪರಿಣಾಮ). ಇದಕ್ಕೆ ಲಿಂಗಪ್ರಸಾದವೆಂದೂ ಕರೆಯುವುದುಂಟು. ಪ್ರಸಿದ್ಧಪ್ರಸಾದ ಜಂಗಮದದು ಎಂದರೆ ಕಾರಣತನುವಿನ ಚಿತ್ತ, ಅಹಂಕಾರ ಮತ್ತು ಭಾವಗಳನ್ನು ಸಂಪೂರ್ಣವಾಗಿ ಜ್ಞಾನಮಯ ಮಾಡಿಕೊಂಡು ಚಿತ್ತವು ಸುಚಿತ್ತವಾಗಿ, ಅಹಂಕಾರವು ನಿರಹಂಕಾರವಾಗಿ, ಭಾವವು ಸದ್ಭಾವವಾಗಿ ಸದಾ ನಿರಾಳ ಸ್ಥಿತಿಯನ್ನನುಭವಿಸುವುದೇ ಪ್ರಸಿದ್ಧ ಪ್ರಸಾದ ಪ್ರಾಪ್ತಿಯಾಗುವುದು (ಭಾವಲಿಂಗ ಸಾಧನೆ). ಇದಕ್ಕೆ ಜಂಗಮ ಪ್ರಸಾದವೆಂದೂ ಕರೆಯುವುದುಂಟು.

ಸತ್ಯಶುದ್ಧ ಕಾಯಕ ಮತ್ತು ದಾಸೋಹ ಇವೆರಡನ್ನೂ ಅಳವಡಿಸಿಕೊಳ್ಳುವ ಮೂಲಕ ಸಾಧಕನು ಗುರು ಲಿಂಗ ಜಂಗಮ ಮತ್ತು ಪ್ರಸಾದವನ್ನು ತನ್ನೊಳಗೆ ಕಂಡು ಅನುಭವಿಸಿ, ಈ ನಾಲ್ಕರ ಸಂಪತ್ತನ್ನು ನಿತ್ಯ ಅನುಭವಿಸಬಹುದೆಂದು ಗುರು ಬಸವಣ್ಣನವರು ತಮ್ಮ ವಚನದಲ್ಲಿ ತಿಳಿಸುತ್ತಾರೆ= “ದಾಸೋಹವೆಂಬ ಸೋಹೆಗೊಂಡು ಹೋಗಿ, ಗುರುವ ಕಂಡೆ, ಲಿಂಗವ ಕಂಡೆ, ಜಂಗಮವ ಕಂಡೆ, ಪ್ರಸಾದವ ಕಂಡೆ. ಇಂತೀ ಚತುರ್ವಿಧ ಸಂಪನ್ನನಾದೆ ಕಾಣಾ, ಕೂಡಲಸಂಗಮದೇವಾ.”

ಜಗನ್ಮಾತಾ ಅಕ್ಕಮಹಾದೇವಿಯವರು ‘ಲಿಂಗ’ಕ್ಕೆ ಒಂದು ಹೊಸ ಆಯಾಮವನ್ನೇ ಕೊಡುತ್ತಾರೆ- “ಅಂಗದಲ್ಲಿ ಆಚಾರವ ತೋರಿದ, ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಅರಿವೆ ಜಂಗಮವೆಂದು ತೋರಿದ. ಚೆನ್ನಮಲ್ಲಿಕಾರ್ಜುನ ಎನ್ನ ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ ಪ್ರಭುವೆ.” ಅಂಗದಲ್ಲಿ ಅಳವಟ್ಟ ಆಚಾರವೇ ಲಿಂಗವೆಂದು ಈ ವಚನದಲ್ಲಿ ತಿಳಿಸುತ್ತಾರೆ. ಅಂದರೆ ಸತ್ಯ ಸದಾಚಾರಗಳೇ ಲಿಂಗ ಎಂಬ ಭಾವ ವ್ಯಕ್ತವಾಗಿದೆ. ಪ್ರಾಣದಲ್ಲಿ ಅರಿವು ಅಂದರೆ ಸೂಕ್ಷತನುವಿನಲ್ಲಿ ನೆಲೆಗೊಂಡ ಅರಿವು ಜಂಗಮವೆಂದು ಈ ವಚನದಲ್ಲಿ ಹೇಳುತ್ತಾರೆ. ಇನ್ನು ಕೆಲವು ವಚನಗಳಲ್ಲಿ ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ ಎಂದೂ ತಿಳಿಸಿರುತ್ತಾರೆ.

ಅಲ್ಲಮಪ್ರಭುದೇವರು ಕೂಡ- “ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು, ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು, ಈ ಎರಡರ ಸಂಗವೆ ತಾನೆಂದರಿದನು ಮಾಡುವ ದಾಸೋಹವೆ ಲಿಂಗ ಜಂಗಮವೆಂದರಿದನು ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ” ಅಕ್ಕ ಹೇಳಿರುವ ರೀತಿಯಲ್ಲೇ ಹೇಳಿದ್ದಾರೆ.

ದೇಶಿಕೇಂದ್ರ ಸಂಗನಬಸವಯ್ಯ ಶರಣರು- “ಆಚಾರವೇ ಗುರು ವಿಚಾರವೇ ಶಿಷ್ಯನೆಂಬುದು ಸಹಜ. ಆಚಾರವೇ ಜ್ಞಾನ ವಿಚಾರವೇ ಭಕ್ತಿ, ಎರಡರ ಸಂಬಂಧವೇ ಘನ ಸಂಬಂಧವು. ಈ ಸುಖಾನಂದ ಸುಧೆಯೊಳು ಚರಿಸಲರಿಯದೆ, ಆಚಾರವ ಜರಿದು ಅವಿಚಾರಮುಖನಾದರೆ ಸಚರಾಚರದೊಳು ನಿಂದು ಸವೆಯದಾಯಾಸವೇ ಸಹಜ ಕಾಣಾ ಮುಂದೆ ಗುರುನಿರಂಜನ ಚನ್ನಬಸವಲಿಂಗಾ.” ಆಚಾರವೇ ಗುರುವೆಂದು ಸ್ಪಷ್ಟಪಡಿಸುತ್ತಾರೆ. ಕೆಲವು ಶರಣರು ಆಚಾರವನ್ನು ಲಿಂಗವೆಂದೂ ಕರೆದಿದ್ದಾರೆ. ಗುರು ಲಿಂಗ ಜಂಗಮವು ಒಂದೇ ಮೂಲವಸ್ತುವಿನ (ಪರಮ ಚೈತನ್ಯದ) ವಿಕಾಸವಾದ್ದರಿಂದ ಈ ಮೂರರಲ್ಲಿ ಭಿನ್ನವರಸದೆ ಅಭಿನ್ನವಾಗಿ ಕಂಡು ಆಚರಿಸಿ ಅನುಭವಿಸುವುದೇ ಶರಣನ ಲಕ್ಷಣ.

ಅಖಂಡ ಸೃಷ್ಟಿಯಲ್ಲಿಯ ಎಲ್ಲ ತತ್ವಗಳೂ ಎಲ್ಲ ಜೀವರಾಶಿಗಳಲ್ಲಿ ಸೂಕ್ಷ್ಮವಾಗಿ ಅಡಕವಾಗಿವೆ. ಸಾಧನೆಯ ಮೂಲಕ ನಾವು ಅವುಗಳನ್ನು ಅರಿತು ನಮ್ಮೊಳಗೆ ನಿತ್ಯ ಅವುಗಳನ್ನು ಅನುಭವಿಸಬಹುದು. ಬ್ರಹ್ಮಾಂಡದಲ್ಲಿರುವ ಸಕಲವೂ ಜೀವಾತ್ಮನೊಳಗಿದೆ ಎಂದರೆ ಜೀವಾತ್ಮನ ಅಂಗವು ಚುಳುಕಾದ ಚೇತನವಾಗುತ್ತದೆ. ಅಖಂಡ ಸೃಷ್ಟಿಯೇ ಮಹಾಚೇತನವಾಗಿ ಮಹಾಲಿಂಗವೆನಿಸಿದರೆ ಜೀವಾತ್ಮನು ಮಹಾಲಿಂಗದ ಒಂದು ಸಣ್ಣ ತುಣುಕಾಗಿ ಅದರ ಒಡಲೊಳಗೆ ಲೀಲೆಗೊಳಗಾಗಿರುವುದರಿಂದ ಜೀವಾತ್ಮನು ಚರಲಿಂಗ, ಚುಳುಕಾದಚೇತನ, ಇಷ್ಟಲಿಂಗವೆನಿಸುತ್ತಾನೆ. ಈ ಭಾವವನ್ನು ನಾವು ಶರಣ ಅಂಬಿಗರ ಚೌಡಯ್ಯನವರ ವಚನದಲ್ಲಿ ಕಾಣಬಹುದು. “ಲಿಂಗತನುವಿಂಗೆ ಶೃಂಗಾರವಪ್ಪ ತೆರನಾವುದೆಂದಡೆ: ಕಾಮ ಕ್ರೋಧ ಲೋಭ ಮೋಹಾದಿಗಳಲ್ಲಿ ತೆರಪುಗೊಡದಿಪ್ಪುದು. ಲಿಂಗವೆ ಅಂಗವಾಗಿ, ಧ್ಯಾನ ಧಾರಣ ನಿಜವಾಸನಿವಾಸವಾಗಿ, ನಿಶ್ಚಯ ನಿಜತತ್ವವಾಗಿ ನಿಂದುದೆ ಆಭರಣವೆಂದನಂಬಿಗ ಚೌಡಯ್ಯ.” ಲಿಂಗವೆ ಅಂಗವಾಗಿ ಎಂದರೆ ಮಹಾಲಿಂಗ ಸ್ವರೂಪವು ಜೀವಾತ್ಮನಾಗಿದ್ದಾನೆ ಎಂದರ್ಥ. ಆದರೆ ಮರೆವಿನಲ್ಲಿ ಮೈಮರೆತ ಜೀವಾತ್ಮನಿಗೆ ಅಂಥಾ ಮಹದ ಅರಿವು ಇರುವುದಿಲ್ಲ. ಅವನು ಸದಾ ಕಾಮ ಕ್ರೋಧ ಲೋಭ ಮೋಹಾದಿಗಳಲ್ಲಿ ಮುಳುಗೇಳುತ್ತಿರುವುದರಿಂದ ಭ್ರಮೆಗೊಳಗಾಗಿ ತನ್ನ ಮೂಲಸ್ವರೂಪವನ್ನು ಮರೆತಿದ್ದಾನೆ. ಯಾವಾಗ ಅಂಗನಲ್ಲಿ ಸುಜ್ಞಾನ ಪ್ರಾಪ್ತಿಯಾಗುವುದೋ ಆಗ ಆತನಲ್ಲಿ ಧ್ಯಾನ ಧಾರಣ ನಿಜವಾಸನಿವಾಸವಾಗಿ, ನಿಶ್ಚಯ ನಿಜತತ್ವವಾಗಿ ಆತನ ಅಂಗವು ಲಿಂಗಭಾವವನು ಅಖಂಡವಾಗಿ ಅನುಭಾವಿಸುತ್ತದೆ.

ಷಣ್ಮುಖಶಿವಯೋಗಿಗಳು- “ಜಗವನೊಳಕೊಂಡ ಲಿಂಗವು ಸೊಗಸಿಂದೆ ಎನ್ನ ಕರಸ್ಥಲಕ್ಕೆ ಬಂದಿರಲು, ಕಂಡು ಹಗರಣವಾಯಿತ್ತೆನಗೆ.” ಎಂದು ಕರಸ್ಥಲಕ್ಕೆ ಚುಳುಕಾಗಿ ಬಂದ ಗುರು ಕಾರುಣ್ಯದ ಇಷ್ಟಲಿಂಗವನ್ನು ಕುರಿತು ಹೇಳಿದ್ದಾರೆ. ಚೆನ್ನಬಸವಣ್ಣನವರು ಅರಿವುಳ್ಳುದೆ ಜಂಗಮ, ಕೇವಲ ವೇಷಧಾರಿ ಜಂಗಮನಲ್ಲ ಎಂದು ಸ್ಪಷ್ಟಪಡಿಸುತ್ತಾರೆ- “ಕೇಶ ಕಾಷಾಂಬರವನಿಕ್ಕಿದರೆನುಳ ರುದ್ರಾಕ್ಷೆಯ ಮಕುಟವ ಧರಿಸಿದರೇನು? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ, ಪರಮಾರ್ಥದಲ್ಲಿ ಪರಿಣಾಮಿಗಳಲ್ಲ. ಇದು ಕಾರಣ ಕೂಡಲ ಚೆನ್ನಸಂಗಯ್ಯಾ ತುರುಬಾಗಲಿ, ಬೋಳಾಗಲಿ, ಅರಿವುಳ್ಳುದೆ ಜಂಗಮ” ಅಲ್ಲಮಪ್ರಭುದೇವರು ಅಂಗದ ಮೇಲೆ ಧರಿಸಿದ ಇಷ್ಟಲಿಂಗ ಆಚಾರದಲ್ಲಿ ಅಳವಡದಿದ್ದರೆ ಅದು ಕಲ್ಲಿಗೆ ಸಮಾನ. ಅಂಗಕ್ಕೆ ಲಿಂಗ ಆಯತವಾದ ಮೇಲೆ ಅದು ಸ್ವಾಯತ ಮತ್ತು ಸನ್ನಿಹಿತವಾದಲ್ಲಿ ಮಾತ್ರ ಇಷ್ಟಲಿಂಗವೆನಿಸುವುದು. ಇದಕ್ಕೆ ಕೊಡುವ ಗುರು ಪಡೆವ ಶಿಷ್ಯ ಇಬ್ಬರೂ ಕಾರಣಿಭೂತರಾಗಿರುತ್ತಾರೆ. ಇವರಲ್ಲಿ ಯಾರೊಬ್ಬರೂ ವಿಹೀನರಾಗಿದ್ದರೆ ಅದರ ಫಲ ಪ್ರಾಪ್ತಿಯುಂಟಾಗುವುದಿಲ್ಲ ಎಂದು ಈ ವಚನದಲ್ಲಿ ತಿಳಿಸುತ್ತಾರೆ- “ಲಿಂಗ ಘನವೆಂಬೆನೆ? ಕಲುಕುಟಿಗನ ಕೈಯಲ್ಲಿ ಮೂಡಿಸಿಕೊಂಡು ಕಿರಿದಾಯಿತ್ತು. ಭಕ್ತ ಘನವೆಂಬೆನೆ? ತನು-ಮನ-ಧನದಲ್ಲಿ ವಂಚಕನಾಗಿ ಕಿರಿದಾದ. ಇಂತೀ ತ್ರಿವಿಧದಲ್ಲಿ ಪರಿಣಾಮವಿಲ್ಲ ಪರಮಾರ್ಥವಿಲ್ಲ. ಘನವ ಬಲ್ಲವರಾರೊ ಗುಹೇಶ್ವರಾ?”

ಸಮಗ್ರವಾಗಿ ವಚನಸಾಹಿತ್ಯವನ್ನು ಅರ್ಥೈಸಿಕೊಂಡಲ್ಲಿ ಗುರು ಲಿಂಗ ಜಂಗಮ ಪದಗಳು ಬೇರೆ ಬೇರೆ ವಚನಗಳಲ್ಲಿ ವಿವಿಧ ಅರ್ಥ, ಭಾವದಲ್ಲಿ ಬಳಕೆಯಾಗಿರುವುದನ್ನು ನಾವು ಅರಿಯಬಹುದು ಅವುಗಳ ಸಂಕ್ಷಿಪ್ತ ರೂಪವನ್ನು ಕೆಳಗೆ ಕಾಣಿಸಲಾಗಿದೆ.
ಗುರು: ಶಿವಪ್ರಜ್ಞೆಯರಿವು, ಸದಾಚಾರ ಭರಿತ ಕಾಯ, ಅರಿವ ಪ್ರಜ್ವಲಿಸುವ ಜ್ಞಾನಿ.
ಲಿಂಗ: ಅಂಗದಲಳವಟ್ಟ ಆಚಾರ, ಆಚಾರಭರಿತ ಕಾಯ, ಪ್ರಾಣದ ಸಂವೇದನೆ, ಗುರು ಕರುಣಿಸಿದ ಇಷ್ಟಲಿಂಗ.
ಜಂಗಮ: ಅನುಭಾವ ನಿಷ್ಪತ್ತಿ, ಅರಿವು ನಿಷ್ಪತ್ತಿಯಾದ ಶರಣ, ಸಕಲ ಚರಾಚರ ಜೀವ ಸಂಕುಲ.
ಪ್ರಸಾದ: ಸದಾಚಾರ, ಕಾಯಕ, ದಾಸೋಹಗಳ ಪರಿಣಾಮ.
ಪರಮಸತ್ಯವು ‘ಸಚ್ಚಿದಾನಂದ ನಿತ್ಯಪರಿಪೂರ್ಣ’ವಾಗಿದ್ದು ಅದನ್ನು ನಮ್ಮೊಳಗೆ ಕಂಡು ಅನವರತ ಅನುಭಾವಿಸುವುದೆ ಶರಣನ ನೆಲೆ. ಅಂಥಾ ಶರಣನ ಸತ್ ಸ್ವರೂಪವೆ ಗುರು, ಚಿತ್ ಸ್ವರೂಪವೆ ಲಿಂಗ, ಆನಂದ ಸ್ವರೂಪವೆ ಜಂಗಮ.

Previous post ಗುರುವಿಗೆ ನಮನ…
ಗುರುವಿಗೆ ನಮನ…
Next post ಅಚಲ ಕಥಾಲೋಕ
ಅಚಲ ಕಥಾಲೋಕ

Related Posts

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
Share:
Articles

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ

December 3, 2018 ಡಾ. ಪಂಚಾಕ್ಷರಿ ಹಳೇಬೀಡು
ಇಂದಿನ ದಿನಮಾನಗಳಲ್ಲಿ ಒಬ್ಬ ವ್ಯಕ್ತಿ ಭಕ್ತನೆನಿಸಿಕೊಳ್ಳುವುದೆಂದರೆ ಆತ/ಆಕೆ ಮಡಿವಂತನಾಗಿ, ದೇಗುಲಕ್ಕೆ ಹೋಗಿ, ಅಥವಾ ಮನೆಯ ದೇವರ ಕೋಣೆಯಲ್ಲಿ ದೇವ ನಾಮ ಸ್ಮರಣೆ ಮಾಡುವುದು,...
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
Share:
Articles

ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…

February 11, 2022 ಡಾ. ವಿಜಯಕುಮಾರ್ ಬೋರಟ್ಟಿ
ಮಂಟೇಸ್ವಾಮಿಯ ಮಡಿವಾಳ ಮಾಚಯ್ಯ ಮತ್ತು ಶೈವ ಪುರಾಣಗಳ ಸಿರಿಯಾಳ ಕನ್ನಡ ವಿದ್ವಾಂಸರಾದ ವೆಂಕಟೇಶ ಇಂದ್ವಾಡಿಯವರಿಂದ ಸಂಪಾದಿಸಲ್ಪಟ್ಟಿರುವ ‘ಧರೆಗೆ ದೊಡ್ಡವರ ಕತೆ’ (1996) ಮೈಸೂರು...

Comments 10

  1. Mallikarjun K.P
    Feb 13, 2023 Reply

    ಗುರು-ಲಿಂಗ-ಜಂಗಮ ಅಂದು ಮತ್ತು ಇಂದು ಎಂದು ವ್ಯತ್ಯಾಸ ತೋರಿಸಿದ್ದು ಈ ಕಾಲದ ಲಿಂಗಾಯತವು ಪೂರ್ವದ ಪಳೆಯುಳಿಕೆ ಎನ್ನುವಂತಾಗಿದೆ. ಯಾವ ಶರಣರ ವಿಚಾರಗಳೂ ಇವತ್ತು ಶುದ್ಧ ರೂಪದಲ್ಲಿ ಉಳಿಯದೇ ಇರುವುದು ಲಿಂಗಾಯತೀಯರ ದುರ್ವಿಧಿ.

  2. ವೀರೇಶ್ ಸಿದ್ದಾಪುರ
    Feb 13, 2023 Reply

    ಅಣ್ಣಾ, ಲೇಖನದಲ್ಲಿ ನೀವು ಉದಹರಿಸಿದ ವಚನಗಳನ್ನು ನೋಡಿದರೆ ಬಸವಾದಿ ಶರಣರು ಇದನ್ನೇ ಗುರು ಎಂದರು, ಇದೇ ಲಿಂಗ, ಜಂಗಮ ಎಂದರೆ ಹೀಗೆ ಎಂದು ತಿಳಿಯುವುದು ಕಷ್ಟವಾಗುತ್ತದೆ. ಹೆಚ್ಚಿನ ವಿವರಣೆ ನೀಡಿದ್ದರೆ ಸ್ಪಷ್ಟತೆ ಸಿಗುತ್ತಿತ್ತು.

  3. ಶರಣ ಬಸವ, ಕೊಟ್ಟೂರು
    Feb 16, 2023 Reply

    ಸರ್, ನಮ್ಮೊಳಗೆ ಸಚ್ಚಿದಾನಂದ ನಿತ್ಯಪರಿಪೂರ್ಣವನ್ನು ಕಾಣುವುದು ಎಂದರೆ ಏನು ? ಹಾಗಾದರೆ ಲಿಂಗಾಯತವು ಅದ್ವೈತವನ್ನು ಮಾತನಾಡುತ್ತದೆಯೇ? ಗುರು-ಲಿಂಗ- ಜಂಗಮದ ನೆಲೆಗಳನ್ನು ಅನುಭಾವಿಕ ನೆಲೆಯಲ್ಲಿ ಮಾತನಾಡುವುದು ಸಾಧ್ಯವೇ?

  4. Lingaraju Gulagi
    Feb 16, 2023 Reply

    ಗುರು ಎಂದರೆ ಏನು, ಲಿಂಗ ಎಂದರೆ ಏನು, ಜಂಗಮ ಎಂದರೆ ಏನು ಎಂದು ವಚನಗಳಲ್ಲಿ ಹುಡುಕುವ ನಿಮ್ಮ ಪ್ರಯತ್ನ ಶ್ಲಾಘನೀಯವಾದುದು. ಆದರೆ ಅದರಿಂದ ಸಂಶಯಗಳು ಪರಿಹಾರವಾಗುವು ಬದಲು ಹೆಚ್ಚೇ ಆಗುತ್ತದೆ… ಹೀಗೆ ನಾನೂ ವಚನಗಳನ್ನು ಆಯಾ ಪದಕ್ಕೆ ತಕ್ಕಂತೆ ಸಂಗ್ರಹಿಸಿಕೊಂಡಿದ್ದೇನೆ, ಅದರಿಂದ ನನಗೆ ಯಾವ ಸ್ಪಷ್ಟತೆಯೂ ಸಿಕ್ಕಿಲ್ಲ.

  5. Mahadeva Gowdar
    Feb 17, 2023 Reply

    ಇವತ್ತಿನ ಲಿಂಗಾಯತ ಆಚರಣೆಗಳಲ್ಲಿ ಗುರು ದಾರಿ ತಪ್ಪಿ, ನಮ್ಮನ್ನೂ ದಾರಿ ತಪ್ಪಿಸಿದ್ದರಿಂದ ಲಿಂಗವೂ ದಾರಿ ತಪ್ಪಿದೆ, ಜಂಗಮವೂ ಹಳ್ಳ ಹಿಡಿದಿದೆ….

  6. Prasad D
    Feb 21, 2023 Reply

    ಅರಿವಿನ ಕಿಡಿ ಹಚ್ಚುವವನು ಗುರು, ಆ ಅರಿವಿನ ಬೆಳಕಲ್ಲಿ ಲಿಂಗ ಮತ್ತು ಜಂಗಮ ಸಾಕ್ಷಾತ್ಕಾರವಾಗುತ್ತದೆ. ಗುರುವೇ ಎಲ್ಲದಕ್ಕೂ ಮೂಲ, ನಂತರ ಲಿಂಗ ಮತ್ತು ಜಂಗಮ ದರ್ಶನ!

  7. ಮಹಲಿಂಗಯ್ಯ ಗುರುಮಠ
    Feb 21, 2023 Reply

    ಲಿಂಗದಲ್ಲಿ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳ ಬೇಧವಿದೆ ಎಂದು ಕೇಳಿದ್ದೇನೆ. ಇದರ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಕೆಲವು ಸ್ವಾಮಿಗಳಲ್ಲಿ, ಹಿರಿಯರಲ್ಲಿ ವಿಚಾರಿಸಿದ್ದೇನೆ, ಆದರೆ ಯಾರ ಉತ್ತರಗಳೂ ನನಗೆ ಇದುವರೆಗೆ ಸರಿ ಎನಿಸಿಲ್ಲ. ಈ ಮೂರೂ ಲಿಂಗಗಳಿಗೆ ಇರುವ ವ್ಯತ್ಯಾಸವನ್ನು ಯಾವುದಾದರು ವಚನದಲ್ಲಿ ಉಲ್ಲೇಖಿಸಲಾಗಿದೆಯೇ? ಗೊತ್ತಿದ್ದರೆ ದಯವಿಟ್ಟು ತಿಳಿಸಿ ಸರ್.

  8. Panchakshari
    Feb 24, 2023 Reply

    ಚನ್ನಬಸವಣ್ಣ
    ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು.
    ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು.
    ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು
    ಲಿಂಗೇಂದ್ರಿಯಗಳಾದುವು.
    ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ.
    ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು,
    ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ

  9. Panchakshari
    Feb 24, 2023 Reply

    ಜಕ್ಕಣಯ್ಯ
    ಇಷ್ಟಲಿಂಗವಿಡಿದು ಕಾಯ ಶುದ್ಧವಾಯಿತ್ತಯ್ಯ.
    ಪ್ರಾಣಲಿಂಗವಿಡಿದು ಮನ ಶುದ್ಧವಾಯಿತ್ತಯ್ಯ.
    ಭಾವಲಿಂಗವಿಡಿದು ಚಿತ್ತ ಶುದ್ಧವಾಯಿತ್ತಯ್ಯ.
    ಹೀಂಗೆ ಮುಮ್ಮಯ್ಯ ಸಿರಿವಂತನಾಗಿ
    ನಿಶ್ಚಿಂತ ನಿರಾಕುಳಲಿಂಗವನಾಚರಿಸುತಿಪ್ಪರು ನೋಡಾ
    ಝೇಂಕಾರ ನಿಜಲಿಂಗಪ್ರಭುವೆ.

  10. ಮಹಲಿಂಗಯ್ಯ ಗುರುಮಠ
    Feb 27, 2023 Reply

    ಪಂಚಾಕ್ಷರಿ ಅಣ್ಣನವರಿಗೆ ವಂದನೆಗಳು. ನೀವು ಉಲ್ಲೇಖಿಸಿದ ಚನ್ನಬಸವಣ್ಣ ಮತ್ತು ಜಕ್ಕಣ್ಣಯ್ಯನವರ ವಚನಗಳನ್ನು ಓದಿದೆ, ಈ ಮೂರೂ ಲಿಂಗಗಳನ್ನು ಸಂಬಂಧ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ, ಹೇಗೆ? ಇದನ್ನ ವಿವರವಾಗಿ ತಿಳಿಸಿಕೊಡುವ ಪುಸ್ತಕವೇನಾದರೂ ಇದೆಯಾ ಅಥವಾ ಬಯಲು ವೆಬ್ ನಲ್ಲಿ ನೀವು ಅಥವಾ ಬೇರೆ ಯಾರಾದರೂ ಲೇಖನಗಳನ್ನು ಬರೆದಿದ್ದಾರಾ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಶಿವಾಚಾರ
ಶಿವಾಚಾರ
April 9, 2021
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ವೀರ
ವೀರ
April 29, 2018
ನಾನು… ನನ್ನದು
ನಾನು… ನನ್ನದು
July 4, 2021
Copyright © 2023 Bayalu