Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಖಾಲಿ ಕೊಡ ತುಳುಕಿದಾಗ…
Share:
Articles October 5, 2021 ಲಕ್ಷ್ಮೀಪತಿ ಕೋಲಾರ

ಖಾಲಿ ಕೊಡ ತುಳುಕಿದಾಗ…

“Be vacant and you will remain full”- Lao Tsu

ತಾವೋನ ‘ಖಾಲಿ’ಯ ಬಗ್ಗೆ ಇತ್ತೀಚೆಗೆ ನನ್ನ ವ್ಯಸನ ಜಾಸ್ತಿಯಾಗುತ್ತಿದೆ. ತಾವೋನ ಖಾಲಿ ಎಷ್ಟು ಖಾಲಿಯಲ್ಲವೆಂದರೆ ಅದು ಸುಖಾಸುಮ್ಮನೆ ಮೈಮನಸ್ಸುಗಳನ್ನು ತುಂಬಿಕೊಳ್ಳುತ್ತಾ ಹೋಗುತ್ತದೆ. ಈ ಖಾಲಿ ಎಂಬುದು ಎಷ್ಟು ಮನಸ್ಸನ್ನು ತುಂಬಿಕೊಳ್ಳುತ್ತದೆನ್ನುವುದು ಸರಿಯೋ ಅಥವಾ ಖಾಲಿ ಮಾಡುತ್ತಲೇ ಸಹಜಾದ್ಭುತ ರೀತೀಲಿ ತುಂಬಿಕೊಳ್ಳುತ್ತದೆನ್ನುವುದು ಹೆಚ್ಚು ಸರಿಯೋ? ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ಗೊತ್ತಾಗುತ್ತ ಹೋಗುತ್ತದೆ: ತಾವೋನ ‘ಖಾಲಿ’ಯ ಬಗ್ಗೆ ಬುದ್ಧಿಯ ಕಸರತ್ತು ಶುರುವಾಗುತ್ತಿದ್ದಂತೆಯೇ ನಮ್ಮೊಳಗಿಂದ ತಾವೋ ಖಾಲಿಯಾಗತೊಡಗುತ್ತದೆ! ಯಾಕೆಂದರೆ ಬಹುಶಃ ಹೀಗಿರಬಹುದು. ಏನೆಲ್ಲ ಮಾಡಿದರೂ ‘ಖಾಲಿ’ ಬುದ್ಧಿಪೂರ್ವಕವಾದುದಲ್ಲವೇ ಅಲ್ಲ. ಆಧುನಿಕ ಮನುಷ್ಯನ ಬುದ್ಧಿಯ ವಿಕಾಸದಲ್ಲಿ ಖಾಲಿಗೆ ಜಾಗವೇ ಇಲ್ಲ! ಮೋಹಿನಿ ಭಸ್ಮಾಸುರನ ಹಾಗೆ ತನ್ನನ್ನೇ ತಾನು ಸುಟ್ಟುಕೊಳ್ಳುವ ಮನುಷ್ಯನ ವಿಕಾರಗಳ ವಿಕಾಸವಾಗಿರುವ ನಾಗರಿಕ ಬುದ್ಧಿಗೆ ತಾವೋನ ‘ಖಾಲಿ’ ಎಂಬ ಅನಂತ ಭವ್ಯ ಶೂನ್ಯತೆ ಏನನ್ನೂ ತುಂಬಿಕೊಡುವುದಿಲ್ಲ. ವಿಕಾರಗಳನ್ನೆಲ್ಲ ಖಾಲಿ ಮಾಡುತ್ತಾ ಹೋದಂತೆ ತುಂಬಿಕೊಳ್ಳುತ್ತಾ ಹೋಗುವಂತಹುದು ಈ ಖಾಲಿ! ಬುದ್ಧಿಪೂರ್ವದ ಅಥವಾ ಪೂರ್ವಿಕ ಬುದ್ಧಿಯ ನಿಸರ್ಗ ಸಹಜ ಅಂತಃಸ್ಫುರಣೆಗಳ ಭಾವಕ್ಕೆ ಮಾತ್ರವೇ ಎಟುಕುವಂಥದ್ದು ತಾವೋನ ‘ಖಾಲಿ’ ಎಂಬ ನಿಸರ್ಗ ಬದ್ಧ ತತ್ವ.
ಖಾಲಿಯೇ ಉಪಯುಕ್ತತೆ. ಮಡಕೆಯ ಖಾಲಿಯೇ ಅತ್ಯುಪಯುಕ್ತವಾದದ್ದು. ಟೀ ಕಪ್ಪಲ್ಲಿ ತುಂಬಿಕೊಳ್ಳುವಂತಹುದು ಖಾಲಿ ಪ್ರದೇಶವನ್ನೇ ತಾನೇ? ಅದು ಎಂದಿಗೂ ಖಾಲಿಯಾಗದ ಉಪಯುಕ್ತತೆ! ಮನಸ್ಸಿನ ವಿಕಾರಗಳೆಲ್ಲ ಖಾಲಿಯಾದಾಗಲೇ ತಾನೇ ಮನುಷ್ಯನಿಗೆ ವಿರಾಮ. ಹಾಗಾಗಿ ಖಾಲಿಯೆಂಬುದು ವಿರಾಮದ ಸುಖ ಕೂಡ. ಈ ವಿರಾಮದ ಸುಖವೂ ಉಪಯುಕ್ತವಾದುದೇ ಅಲ್ಲವೇ? ಈ ಜಗತ್ತಿನ ಮನುಷ್ಯರೆಲ್ಲರ ಸುಪ್ತಪ್ರಜ್ಞೆಯ ಭಾಗವಾಗಿರುವ ಜನಾಂಗವಾದಿ ಮತ್ತು ಸಾಮ್ರಾಜ್ಯಶಾಹಿ ವಿಕಾರಗಳೆಲ್ಲವೂ ಒಮ್ಮೆಲೇ ಖಾಲಿಯಾದರೆ ಹೇಗಿರಬಹುದು? ಹೀಗೆ ಖಾಲಿಯಾದೆಡೆ ಸಹಜವಾಗಿಯೇ ಖಾಲಿಯ ಉಪಯುಕ್ತತೆಗಳು ತುಂಬಿಕೊಳ್ಳುತ್ತವೆ. ಯುದ್ಧಗಳು ಮಾಯವಾಗುತ್ತವೆ. ಶಸ್ತ್ರಾಸ್ತ್ರಗಳು ಅತ್ಯಂತ ನಿರುಪಯುಕ್ತ ಕಸವಾಗುತ್ತವೆ!
ಕಾವ್ಯವೆನ್ನುವುದು ನಿಜಕ್ಕೂ ಏನು ಎಂಬುದು ನನಗಿನ್ನೂ ಅರ್ಥವಾಗಿಲ್ಲ. ಆದರೆ ತಾವೋನ ‘ಖಾಲಿ’ಯನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಈ ಖಾಲಿಯೇ ನಿಜವಾದ ಕಾವ್ಯವಲ್ಲವೇ ಎಂಬ ಅನುಮಾನಗಳು ಕಾಡದೆ ಬಿಟ್ಟಿಲ್ಲ. ಖಾಲಿ ಎಂಬುದು ಒಂದರ್ಥದಲ್ಲಿ ಶೂನ್ಯವಲ್ಲವೆ? ಶೂನ್ಯದಲ್ಲಿ ಬೀಡುಬೀಸಾಗಿ ವಿರಮಿಸುವಂತಹುದು ಮಹಾಮೌನವೇ. ನಮ್ಮ ಅಲ್ಲಮನ ಸಂದರ್ಭದಲ್ಲಿ ‘ಮೌನವೇ ನಿಜವಾದ ಕಾವ್ಯ’ ಎಂಬ ಮಾತು ಹುಟ್ಟಿರುವುದೂ ಹೀಗೇ ಇರಬಹುದೇನೋ? ಖಾಲಿ ಎಂದರೆ ಶೂನ್ಯ; ಶೂನ್ಯವೇ ಮಹಾಮೌನ; ಮೌನವೇ ಕಾವ್ಯ. ಕಾವ್ಯ ಭಾಷಾ ಪ್ರಯೋಗದಲ್ಲಿ ಪದಗಳ ನಡುವಿನ ಖಾಲಿಯಲ್ಲಿ empirical ಎನ್ನಬಹುದಾದಂತಹ ಅನುಭವಜನ್ಯ ಸಂವೇದನೆಗಳು ಸಂಚರಿಸುತ್ತಿರುತ್ತವೆ. ಅದೇ ನಿಜವಾದ ಕಾವ್ಯ ಶಕ್ತಿ ಮತ್ತು ಕಾವ್ಯ ಭಾಷೆ. ಆದರೆ ಅದು ಅಗೋಚರ ಮತ್ತು ಮೌನ. ಜಡಗಟ್ಟಿದ ಮನಸ್ಸನ್ನು ಚಲಿಸುವಂತೆ ಮಾಡಬಲ್ಲ ಕಾವ್ಯಶಕ್ತಿ ಈ ಅತ್ಯುಪಯುಕ್ತ ಖಾಲಿ ಮತ್ತು ಮಹಾಮೌನದ ಚಲನೆಗಳೇ. ತಾವೋ ಪ್ರಕಾರ ಜಡ ಮತ್ತು ಚಲನೆಗಳೆಂಬ ವಿರುದ್ಧ ಧ್ರುವಗಳು ಪರಸ್ಪರ ಸಂಗೋಪಿತಗೊಂಡಾಗಲೇ ಎಲ್ಲ ಚಟುವಟಿಕೆಗಳ ಆಳದ ಅಂತರ್ಗಾಮೀ ಶಕ್ತಿಯೊಂದು ಕ್ರಿಯಾಶೀಲವಾಗುವುದು. ಯಾಕೆಂದರೆ ಯಾವುದೇ ಒಂದು ಚಲನೆಗೆ ಅನಿವಾರ್ಯವೆಂಬಂತೆ ವಿರುದ್ಧವಾದ ಪ್ರತಿಚಲನೆಯೊಂದು ಹುಟ್ಟಿಯೇ ತೀರುತ್ತದೆ. ‘For every force there is an equal and opposite Counter Force’ ಎಂಬ ನ್ಯೂಟನ್ನನ ನಿಯಮದಂತೆ, ಬದುಕಿನಲ್ಲಿ ಸಹಜ ಆನಂದ ಹುಟ್ಟಲು ಈ ಎರಡು ವೈರುಧ್ಯಪೂರ್ಣ ಧ್ರುವಗಳ ನಡುವೆ ಸಮತೋಲನ ಏರ್ಪಡಲೇ ಬೇಕು. ಕಾವ್ಯ ಕುರಿತು ಕೀರಂ ಅವರು ಹೇಳಿದ್ದ ಮಾತೂ ಈ ಸಂದರ್ಭದಲ್ಲಿ ನೆನಪಾಗುತ್ತಿದೆ; “ಕಾವ್ಯವೆನ್ನುವುದು ನಿಜಕ್ಕೂ ಮೈದಾಳುವುದು ಅದರ opposite tension ನಲ್ಲೇ. ಅಥವಾ ಕಾವ್ಯದ Counter part ನಲ್ಲಿ.” ತಾವೋ ಹೇಳುವುದೂ ಇದನ್ನೇ ತಾನೇ ಪ್ರತಿಚಲನೆ ಎಂದು.
ಖಾಲಿಯೇ ಕಾವ್ಯದ ಅತ್ಯುಪಯುಕ್ತ ಅನಂತ ಅರ್ಥ ಸಾಧ್ಯತೆಗಳ ಜಾಗ. ಆದರೆ ಅದು ಚಲನೆಯಲ್ಲಿದೆ ಎಂಬುದು ಹೇಗೆ? ತಾವೋ, ಮರದ ದಿಮ್ಮೆಯೊಂದರ ಉಪಮೆಯನ್ನು ನೀಡುತ್ತದೆ. ಕೆತ್ತಲ್ಪಟ್ಟಿಲ್ಲದ ಕಚ್ಚಾ ಮರದ ದಿಮ್ಮಿಯೊಂದರಲ್ಲಿ ಅನಂತ ಅರ್ಥ ಸಾಧ್ಯತೆಗಳು ಹುದುಗಿರುತ್ತವೆ. ಅನಂತ ಆಕಾರಗಳು ಅಡಗಿರುತ್ತವೆ. ನಾವು ಬಗೆದಂತೆಲ್ಲ, ಊಹಿಸಿಕೊಂಡಂತೆಲ್ಲ ಆ ಮರದ ದಿಮ್ಮಿ ಸಾಕಾರಗೊಳ್ಳಬಲ್ಲುದು. ಅಂದರೆ ಅನಂತ ಆಕಾರಗಳು, ಅಗಣಿತ ವಿನ್ಯಾಸಗಳ ಸಾಧ್ಯತೆ ಇರುವುದರಿಂದಲೇ ಅದು ಖಾಲಿಯೂ ಆಗಿದೆ. ನಿರ್ದಿಷ್ಟ ಅರ್ಥ- ಆಕಾರದಲ್ಲೇ ನಿಂತುಬಿಟ್ಟಿಲ್ಲ. ಹಾಗಾಗಿ ಚಲಿಸುತ್ತಿದೆ. ಖಾಲಿಯೊಳಗೆ ಮೌನ ಹುದುಗಿರುವಂತೆ ಹೀಗೆ ಚಲನೆಯೂ ಗುಪ್ತವಾಗಿ ಅಡಗಿದೆ. ಒಂದು ವೇಳೆ ಆ ದಿಮ್ಮಿಯನ್ನು ನಿರ್ದಿಷ್ಟ ಪ್ರತಿಮೆಯನ್ನಾಗಿ ಕೆತ್ತಿದ ಕೂಡಲೇ ಸ್ಥಗಿತಗೊಳ್ಳುವುದೆಂದರೆ ಕೆತ್ತುವುದಕ್ಕೆ ಮುಂಚೆ ಚಲನೆಯಲ್ಲಿತ್ತೆಂದೇ ಅರ್ಥವಲ್ಲವೇ? ಹೀಗಾಗಿ ಖಾಲಿಯೊಳಗಿನ ಕಾವ್ಯ ಚಲನೆಯಲ್ಲಿದೆ. ಖಾಲಿ ಎಂಬುದು ಸುಮ್ಮನೆ ಖಾಲಿಯಲ್ಲ. ಚಲನೆಯಲ್ಲಿರುವ ಅನಂತ ಶೂನ್ಯದ ವಿಶ್ವದ ಹಾಗೆ ಅನಂತ ಖಾಲಿಯಾಗಿ ಚಲನೆಯಲ್ಲಿದೆ; ನಿತ್ಯ ನಿರಂತರ ಮೌನದಲ್ಲಿ. ಪದಗಳು ಆತ್ಯಂತಿಕ ಸತ್ಯವನ್ನು ಉಸುರಲಾರವು ಎಂದು ಝೆನ್ ಕೂಡ ಹೇಳಿರುವುದು, ತಾವೋನ ಖಾಲಿಯಲ್ಲಿರುವ ನಿರಂತರ ಚಲನೆಯಲ್ಲಿಯೇ ಅರ್ಥ-ಸತ್ಯಗಳು ಹುದುಗಿವೆ ಎಂಬ ಪರೋಕ್ಷ ಇಂಗಿತವನ್ನೇ.
ತಾವೋನ ಮರದ ದಿಮ್ಮಿಯ ಉಪಮೆಗೆ ಸಾಕ್ಷಿ ನುಡಿಯುವಂತೆ ಥೋರೋನ ಈ ಮಾತುಗಳಿವೆ. ಇದು ತಾವೋನ ‘ಖಾಲಿ’ ಎಂಬ ಪರಿಕಲ್ಪನೆಯ ತದ್ವತ್ತು ಗ್ರಹಿಕೆಯಾಗಿದೆ. “ಕಲ್ಲನ್ನು ಕೆತ್ತಿ/ ಚಿತ್ರ ಬಿಡಿಸುವುದು/ ಉಕ್ಕಿನ ಸಲಕರಣೆಗಳಿಂದಲ್ಲ/ ಗಾಳಿ ಮಳೆಯ/ ಕೋಮಲ ಸ್ಪರ್ಶ/ ಮತ್ತು ಕಾಲದ ಮುಕ್ತ ಬಿಡುಗಾಲದಿಂದ” (ಗಾಳಿಯ ದೈವಿಕ ಹಾದಿಗಳು- ಅನುವಾದ ಎಲ್ಸಿ ನಾಗರಾಜ). ಇದು ಕೇವಲ ಶಿಲ್ಪಕಲೆಯ ಬಗ್ಗೆ ಮಾತ್ರ ಹೇಳಿದ ಮಾತಲ್ಲ. ಯಾವುದೇ ನಿಸರ್ಗ ಸಹಜ ಕಲೆಗೂ ಅನ್ವಯಿಸಬಲ್ಲಂತಹುದು. ತಾವೋ ಎಂಬುದು ಪೂರ್ವಿಕಕ್ಕೇ ಪೂರ್ವಿಕವಾದುದು. ಹಾಗಾಗಿ ಯಾವುದೇ ಆದಿಮ ಸಮುದಾಯಗಳ ಅಂತಃಸ್ಫುರಣದ ಭಾವಗಳು ಕೂಡ ತಾವೋನ ಹಾಗೇ ನಿಸರ್ಗಬದ್ಧ ತಿಳಿವಳಿಕೆಯುಳ್ಳದ್ದಾಗಿರಬಲ್ಲುದು. ಅಂತಹ ಆದಿಮ ಸಮುದಾಯವೊಂದರ ಹಾಡಿನ ಸಾಲುಗಳು ಹೀಗಿವೆ: “ಬೆಂಕಿ ಕಾಯಿಸಿಕೊಳ್ಳೋಕೆ/ ತಂದ ಮರದ ತುಂಡು/ ಚಿಗುರುತ್ತಾ ಇದೆ.” (ಗಾಳಿಯ ದೈವಿಕ ಹಾದಿಗಳು: ಅನು-ಎಲ್ಸಿ).
ಜಡ ಕೊರಡೊಂದು ಬೆಂಕಿಯ ಹೊಳಪು ಕೂಡ ನಾಚುವಂತಹ ರೀತಿಯ ಚಲನೆಯ ಚಿಗುರು ಚೆಲುವನ್ನು ಪ್ರಕಟಿಸುವುದು ವಿಕಾರಗಳಿಗೆ ಜಾಗವೇ ಇಲ್ಲದಂತಹ ಖಾಲಿಯಾಗಿರುವ ಮನಸ್ಸುಗಳಿಂದಲೇ. ಇದು ತಾವೋ ಕಾವ್ಯ; ಆದಿಮ ಕಾವ್ಯ. ನನ್ನನ್ನು ಅನೇಕ ವರ್ಷಗಳಿಂದ ಕಾಡುತ್ತಿರುವ ಒಂದು ಚಿತ್ರಣವನ್ನು ನೀಡುತ್ತೇನೆ. “ಧೂಳಿಗೆ ಬೆವರಿನ ಬಲೆಯೊಂದನ್ನು ಹರಡಿ, ರಣಬಿಸಿಲಿನ ಧಾರಾಕಾರದಲ್ಲಿ ಕಾಲವನ್ನು ಎಕ್ಕರಿಸುತ್ತಾ, ಗಲೀಜು ರಸ್ತೆಯ ಬದಿಯಲ್ಲಿ ಅಕಾಲ ಮುಪ್ಪಿನ ಒಬ್ಬ ಚಮ್ಮಾರ ಕೂತಿದ್ದಾನೆ. ಆದರೆ ಕೂತಲ್ಲಿ ಅವನು ಕೂತಿಲ್ಲ. ಕದಿರ ಕೈಗಳು ಸಾಕಾರವಾಗಲೊಲ್ಲದ ಕನಸೊಂದನ್ನು ನೇಯುತ್ತಿವೆ. ಕಣ್ಣುಗಳು ಹರಿತ ಸೂಜಿ ಮೊನೆಗಳಾಗಿ ದಾರದ ಗಂಟುಗಳಲ್ಲಿ ಚಲಿಸುತ್ತಿವೆ. ಸಮ್ಮಾಳಿಗೆಗೆ ಗಂಟು ಬಿದ್ದಂತೆಲ್ಲ ಮುಖದ ನರೆ ಮಾಂಸ, ತೊಗಲನ್ನೇ ಯಾರೋ ಬಿಗಿಬಿಗಿದು ಗಂಟು ಹಾಕಿದಂತೆ ನಿರಿಗೆಗಳು ಬಿಗಿದುಕೊಳ್ಳುತ್ತಿವೆ. ನೆರಳಿಗೆಂದು ನಾಕು ದೆಸೆಗೂ ಬಿಗಿದು ಕಟ್ಟಿದ ಚಿಂದಿ ಅರಿವೆಯೊಳಗಿನ ಸವೆದ ನೂಲಿಗಿಂತಲೂ ನಾಜೂಕಾದ ನಿರಿಗೆಗಳಂತಿವೆ ಅವು. ಅನಂತ ಕಾಲದ್ದೆಂಬಂತೆ ಕಠಿಣ ಕಲ್ಲೊಂದು ಪಕ್ಕದಲ್ಲಿ ಬಿದ್ದಿದೆ, ಅವನ ಹೃದಯವೇನೋ ಎಂಬಂತೆ. ಎದುರಿಗಿನ ಗುಡಿಯಲ್ಲೂ ಒಂದು ಕಲ್ಲು ಬಿದ್ದಿದೆ, ಮೂರ್ತಿ ರೂಪದಲ್ಲಿ, ದೇವರೇನೋ ಎಂಬ ಮಬ್ಬಿನಲ್ಲಿ. ಎಳೆಎಳೆದು ಕಟ್ಟಿದ ನೂಲು ಯಾವ ಕ್ಷಣದಲ್ಲಾದರೂ ಹರಿಯುವಂತಿದೆ, ಚಮ್ಮಾರನ ಸವೆದ ಮಾಂಸದ ನಾರುನೂಲಿನಂತೆಯೇ.” ಎಂದೋ ಎಲ್ಲೋ ನನ್ನ ಮನಸ್ಸಿನೊಳಗೆ ಬಿದ್ದ ಈ ಚಿತ್ರ ಸದಾ ಕದಲುತ್ತಲೇ ಇದೆ. ಅದರ ವಿರುದ್ಧ ಧ್ರುವದ ಪ್ರತಿ ಚಲನೆ ಹುಟ್ಟುವುದೆಂದೋ? ತಾವೋ ಸತ್ಯವಾಗುವ ಕ್ಷಣ ಬರುವುದೆಂದೋ?
ಚಲನೆಯಿಲ್ಲದ ಕಡೆ ಏಕತಾನತೆ ಇರುವಂತೆ, ಚಲಿಸಿದ ಕಡೆ ಅನೇಕತೆ ಇರುತ್ತೆ. ಚಲನೆ ಗಮನ ಸೆಳೆಯುತ್ತದೆ. ಹಲವು ಬಗೆಯ ವಿನ್ಯಾಸಗಳನ್ನು ರೂಪಿಸುತ್ತದೆ… ನಿರಂತರ ಬದಲಾವಣೆಗಳನ್ನು ಕಾಣಿಸುತ್ತದೆ. ಈ ಚಲನೆಗೆ ದೇಶ-ಕಾಲಗಳ ಹಂಗಿಲ್ಲ. ಚಲನೆಯ ನಿಜವಾದ ಪಯಣವೆಂಬುದು ಅನಂತದಿಂದ ಅನಂತಕ್ಕೆ ಸಾಗುವುದು. “ಹಿಂದಣ ಅನಂತವನು, ಮುಂದಣ ಅನಂತವನು/ ಒಂದು ದಿನ ಒಳಕೊಂಡಿತ್ತು ನೋಡಾ/ ಒಂದು ದಿನವನೊಳಕೊಂಡು ಮಾತನಾಡುವ ಮಹಂತನ ಕಂಡು ಬಲ್ಲವರಾರಯ್ಯ?/” ಅಲ್ಲಮನೆದೆಯ ಅನಂತ ಖಾಲಿಯಲ್ಲಿ ಅನಂತ ಚಲನೆಯ ಕಾವ್ಯ ಹೀಗೆ ಅಡಗಿದೆ. ಚಲನರಾಹಿತ್ಯವೆಂಬುದು ಕಳೇವರದ ಸ್ಥಿತಿ. ಅದು ಕೊಳೆಯುತ್ತಾ ಹೋಗುತ್ತದೆ. ಭೂಮಿ ಚಲಿಸುತ್ತಲೇ ಇದೆ ನಿರಂತರ. ಚಲನೆಯೇ ಗಾಳಿಯಾಗಿದೆ. ನೀರೂ ಚಲಿಸುತ್ತದೆ. ಬೆಂಕಿಯೂ ಚಲಿಸುತ್ತದೆ. ನಿಸರ್ಗಬದ್ಧ ಚಲನೆಯೊಂದಿಗೆ ನಾವು ಚಲಿಸುತ್ತಿಲ್ಲವೆಂಬುದು ಏನನ್ನು ಹೇಳುತ್ತದೆ?
ಚಲನೆ ಮತ್ತು ಪ್ರತಿಚಲನೆಗಳ ಸಂಗಮದಂತಿರುವ ಅರ್ಧನಾರೀಶ್ವರ ಕಲ್ಪನೆಯು ಕೂಡ ತಾವೋನ ಯಾಂಗ್ (yang) ಮತ್ತು (yin) ಕಲ್ಪನೆಯೇ ಆಗಿದೆ. ಆದರೆ ಇಲ್ಲಿ ಯಾಂಗ್ ಎಂಬ ಬೆಳಕು ಕತ್ತಲೆಯಾಗಿದೆ. ಯಿನ್ ಎಂಬ ಕತ್ತಲೆ ಬೆಳಕಾಗಿದೆ. ಅನಂತ ಶೂನ್ಯದ ಕತ್ತಲೆಯಿಲ್ಲದೆ ಬೆಳಕಿಗೆಲ್ಲಿ ಅರ್ಥವಿದೆ? ಕತ್ತಲೆಯೆಂದರೆ ಬೆಳಕಿನ ಅಭಾವವೆಂದು ನ್ಯಾಯ ವೈಶೇಷಿಕವೂ ವ್ಯಾಖ್ಯಾನಿಸುತ್ತದೆ. ಕತ್ತಲ ಎದೆಯ ಮಿಡಿತಕ್ಕೆ ವಿಶ್ವಗಳು ಏಳುತ್ತಿವೆ; ಬೀಳುತ್ತಿವೆ. ಸೃಷ್ಟಿ-ಪ್ರಳಯಗಳು ಕತ್ತಲೆಯ ನಿಃಶ್ವಾಸ-ಉಚ್ವಾಸಗಳು. ಬ್ರಹ್ಮಾಂಡದ ಸ್ಥಾಯೀ ಭಿತ್ತಿಯೇ ಕತ್ತಲು. ಹಾಗಾಗಿಯೇ ಕತ್ತಲು ಸರ್ವಾಂತರ್ಯಾಮಿಯೆಂದು ಕರೆದು ತಮೋ ಮೀಮಾಂಸೆಯನ್ನು ಕೂಡ ರೂಪಿಸಲಾಗಿದೆ. ಚಂದ್ರ ದಾರಿ ಕಾಣದೆ ಬಯಲಾಗುವಾಗ ಇರುಳು ರವಿಕಿರಣಗಳನ್ನೆತ್ತಿ ಚಂದ್ರನಿಗೆ ನೀಡುವುದು. ನಕ್ಷತ್ರ, ಗ್ರಹಗಳೂ ಅದನ್ನು ಅಚಮನ ಮಾಡಿ ಭಾಗ್ಯವಂತರೆನಿಸುವರು. ಅದು ಕತ್ತಲೆಯ ಸೌಜನ್ಯ, ಹಿರಿಮೆ. ಹೊಳೆಯುವ ಈ ಕತ್ತಲೆ , ಚಿದರ್ಧ ಶರೀರೆ. ಬೆಳಕಿಗೆ ಮಿತಿಯುಂಟು; ಆದರೆ ಕತ್ತಲೆಗೆ ಇಲ್ಲ. ಪುರಾಣಕಾರರ ಈ ಕತ್ತಲ ದರ್ಶನ ಪರೋಕ್ಷವಾಗಿ ತಾವೋನ ದರ್ಶನವೇ ಆಗಿದೆ. ಅನಂತವಾದ ತಾವೋ ಅನಂತ ಕತ್ತಲಾಗಿದೆ. ಬೆಳಕು ಕೇವಲ ಅದರ ಪ್ರತಿಚಲನೆಯಾಗಿದೆ. ಕಾವ್ಯದ ಭಿತ್ತಿಯೂ ಕತ್ತಲೆಯೇ. ಅನಂತವಾದ ಕತ್ತಲೆ ಖಾಲಿಯಾಗಿದೆ; ಅದು ತಾವೋ. ಹಾಗೆಯೇ ಖಾಲಿಯೇ ಬದುಕಿನೆಲ್ಲದರ ಮೂಲ. ತಾವೋ ಹೇಳುವ ಎರಡು ವಿರುದ್ಧ ಧ್ರುವಗಳೂ ಸತ್ಯವೇ. ಅವು ಪರಸ್ಪರ ಸಂಗೋಪಿತಗೊಳ್ಳುವುದರಿಂದ ಹುಟ್ಟುವ ಪ್ರತಿ ಚಲನೆ – ಅಂತರ್ಗಾಮೀ ಶಕ್ತಿಯಿಂದಲೇ ಎಲ್ಲವೂ ಕ್ರಿಯಾಶೀಲವಾಗುತ್ತಿರುವುದು. ಆದರೆ ಆದಿಮವಾದ ಈ ನಿಸರ್ಗಬದ್ಧ ಯಾಂಗ್-ಯಿನ್ ಅರ್ಧನಾರೀಶ್ವರ ತತ್ವದ ಪ್ರಕೃತಿ ಲೀಲೆಗಳಿಗೆ ಆಧುನಿಕ ಮನುಷ್ಯ ಇಂದು ದೂರವಾಗಿದ್ದಾನೆ. ಹಾಗಾಗಿಯೇ ಅಂತಃಸ್ಫುರಣೆಗಳಿಗೆ ಹೊರತಾದ ಕೃತಕ ಹಾಗೂ ಆತ್ಮವಂಚಕ ಬದುಕಿನ ವಿನಾಶದತ್ತ ಬುದ್ಧಿಪೂರ್ವಕವಾಗಿ ಚಲಿಸುತ್ತಿದ್ದಾನೆ. ಕಾವ್ಯಾದಿ ಕಲೆಗಳ ಆದಿಮತೆಯೊಂದೇ ನಿಜವಾದ ಪ್ರತಿಚಲನೆಗಳನ್ನು ಸೃಷ್ಟಿಸಬಲ್ಲವು. ನಿಸರ್ಗಕ್ಕೆ ಎಲ್ಲರೂ ಮುಖಮಾಡಿ ನಿಲ್ಲುವುದೊಂದೇ ಕೊನೆಗುಳಿಯುವ ಉತ್ತರ.

Previous post ವಚನಗಳ ಮಹತ್ವ
ವಚನಗಳ ಮಹತ್ವ
Next post ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು

Related Posts

ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
Share:
Articles

ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು

January 8, 2023 ಮಲ್ಲಿಕಾರ್ಜುನ ಕಡಕೋಳ
ಅಣಜಿಗಿ ಗೌಡಪ್ಪ ಸಾಧು. ಈ ಹೆಸರು ಕಡಕೋಳ ಮಡಿವಾಳಪ್ಪನವರ ಚಾರಿತ್ರಿಕ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಅತ್ಯಂತ ಮಹತ್ವದ ಹೆಸರು. ಹೇಗೆಂದರೆ ಬಸವಣ್ಣನವರು...
ಶರಣರು ಕಂಡ ಸಮಸಮಾಜ
Share:
Articles

ಶರಣರು ಕಂಡ ಸಮಸಮಾಜ

July 4, 2022 ಡಾ. ಚಂದ್ರಶೇಖರ ನಂಗಲಿ
(ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ) ಹನ್ನೆರಡನೆ ಶತಮಾನದ ಶರಣ ಚಳುವಳಿಯನ್ನು ಅಧ್ಯಯನ ಮಾಡುವಾಗ 800 ವರ್ಷಗಳ ಅಂಧಕಾರಯುಗವನ್ನು ಮರೆಯಬಾರದು. ವಚನಗಳನ್ನು ಸಾಹಿತ್ಯ...

Comments 10

  1. ನಿರ್ಮಲಾ ಪಡವೂರು
    Oct 6, 2021 Reply

    ನನಗೂ ತಾವೋ ಪ್ರಿಯವಾದ ಓದು. ಲಕ್ಷ್ಮೀಪತಿಯವರ ವಿಚಾರ ದರ್ಶನ ಬಲು ಸೊಗಸಾಗಿದೆ.

  2. SIDDHALINGAIAH TUMKUR
    Oct 7, 2021 Reply

    ತಾವೋ ಸಿದ್ಧಾಂತವನ್ನು ಮತ್ತಷ್ಟು ತಿಳಿದುಕೊಳ್ಳಬೇಕೆಂಬ ಕುತೂಹಲ ಹುಟ್ಟಿಸಿದ ಬರಹ ಬಹಳ ಇಷ್ಟವಾಯಿತು. ಲಕ್ಷ್ಮೀಪತಿ ಶರಣರಿಗೆ ಶರಣಾರ್ಥಿಗಳು.

  3. Jayaraj Bidar
    Oct 7, 2021 Reply

    ಎಲ್ಲರೂ ಖಾಲಿಯಾಗುವುದನ್ನೇ ಹೇಳುತ್ತಾರೆ, ಖಾಲಿಯಾಗೋದು ಹೇಗೆ ಅಂತ ಹೇಳೊಲ್ಲ, ತಾವೋ ಓದುವಾಗಲೂ ನನಗೆ ಹೀಗೇ ಮನಸ್ಸಿಗೆ ಬಂತು. ಶರಣರೂ ಶೂನ್ಯ ಸಂಪಾದಕರು, ಬಯಲು ಹೇಳಿದವರು.

  4. Sudheer
    Oct 8, 2021 Reply

    ಕತ್ತಲೆಗೆ, ಖಾಲಿಗೆ… ಅನಂತ ಸಾಧ್ಯತೆಗಳಿವೆ… ತಾವೋ ಏನು ಹೇಳುತ್ತದೆ? ಜಂಜಾಟವಿಲ್ಲದ ಬದುಕು ನಿರ್ವಹಿಸುವ ಜಾಣತನ ಗಳಿಸಿಕೊಳ್ಳುವುದನ್ನು ಕಲಿಯಲು ಹೇಳುತ್ತದೆ. ಕಾವ್ಯದಂತ ಲೇಖನ.

  5. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Oct 12, 2021 Reply

    ಖಾಲಿ ಆದರೆ ಬಯಲು ತುಂಬಿತು
    ಬಯಲು ತುಂಬಿದರೆ ಖಾಲಿ ಆಗುವೆ.

  6. ಗುಣಶೀಲಾ
    Oct 12, 2021 Reply

    ಖಾಲಿ ಎಂದರೆ ಶೂನ್ಯ; ಶೂನ್ಯವೇ ಮಹಾಮೌನ; ಮೌನವೇ ಕಾವ್ಯ… ನನ್ನದಲ್ಲದ ಜಗತ್ತು ನನ್ನ ತವರು!

  7. Phalakshi Revadi
    Oct 16, 2021 Reply

    ಈ ಸಲದ ಎಲ್ಲಾ ಲೇಖನಗಳು ತುಂಬಾ ತುಂಬಾ ಚೆನ್ನಾಗಿದ್ದವು. ಪ್ರಿಂಟ್ ತೆಗೆದುಕೊಂಡು ಓದಿದ್ದೇನೆ. ಸಮಾನ ಮನಸ್ಕ ಹಿರಿಯ ಗೆಳೆಯರೊಂದಿಗೆ ಕೊಟ್ಟು ಓದಿ ಚರ್ಚಿಸಿದ್ದೇನೆ. ದಸರಾ ರಜೆಯ ಉತ್ತಮ ಸಂಗಾತಿಯಾಗಿತ್ತು ಬಯಲು.

  8. Harsha m patil
    Oct 23, 2021 Reply

    ನಿಸರ್ಗಬದ್ಧ ಯಾಂಗ್-ಯಿನ್ ತತ್ವವು ನಮ್ಮ ಅರ್ಧನಾರೀಶ್ವರ ಕಲ್ಪನೆಯನ್ನೇ ಹೇಳುತ್ತದೆನ್ನುವುದು ತುಂಬಾ ಆಸಕ್ತಿಕರ ವಿಷಯ. ಹೊಸ ವಿಚಾರಗಳನ್ನು ಉಣಬಡಿಸುತ್ತಿರುವ ಬಯಲ ಬಳಗಕ್ಕೆ ಶರಣು.

  9. Jeevan koppad
    Oct 27, 2021 Reply

    ತಾವೋನ ವೈಯಕ್ತಿಕ ಬದುಕಿನ ಬಗ್ಗೆ ತಿಳಿಸಿಕೊಡಿ. ಖಾಲಿಯಾಗೋದು ಅಂದರೂ ಒಂದೇ ಶೂನ್ಯವಾಗೋದು ಅಂದರೂ ಒಂದೇ. ಎಲ್ಲಾ ವಿಚಾರವಂತ ತತ್ವಜ್ಞಾನಿಗಳು ಇದನ್ನೇ ಹೇಳಿದರೆ ಹಿಂದೂ ಧರ್ಮ ಮಾತ್ರ ಮಂತ್ರ, ಜಪ-ತಪಗಳನ್ನು ದೇವರ ಸಾಕ್ಷಾತ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ.

  10. Shekhar, Talikote
    Nov 1, 2021 Reply

    ಶರಣರ ಶೂನ್ಯಕ್ಕೂ, ಬುದ್ಧನ ಶೂನ್ಯಕ್ಕೂ, ತಾವೋನ ಶೂನ್ಯಕ್ಕೂ ವ್ಯತ್ಯಾಸಗಳೇನಾದರೂ ಇವೆಯೇ? ದಯವಿಟ್ಟು ತಿಳಿಸಿ. ಶೂನ್ಯ ಎಂದರೆ ಏನು?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಾರಿ ಬಿಡಿ…
ದಾರಿ ಬಿಡಿ…
December 6, 2020
ಮಾತು ಮಾಯೆ
ಮಾತು ಮಾಯೆ
July 4, 2021
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
Copyright © 2023 Bayalu