Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಲನೆಂಬ ಜಾಲಗಾರ…
Share:
Articles January 7, 2019 ಕೆ.ಆರ್ ಮಂಗಳಾ

ಕಾಲನೆಂಬ ಜಾಲಗಾರ…

ಡಿಸೆಂಬರ್ ತಿಂಗಳ ಕೊರೆವ ಚಳಿಯ ಕೊನೆಯ ರಾತ್ರಿ. ಎಲ್ಲೆಡೆ ಝಗಮಗಿಸುವ ಬೆಳಕು. ಹಾಡು-ಕುಣಿತ-ಕೇಕೆಗಳ ಸಂಭ್ರಮ. ಪ್ರಪಂಚದಾದ್ಯಂತ ನವ ವರ್ಷ ಸ್ವಾಗತಿಸುವ ಸಡಗರ, ಉತ್ಸಾಹ. ಗಂಟೆ ಹನ್ನೆರಡಾಗುತ್ತಿದ್ದಂತೆ ಮುಗಿಲು ಮುಟ್ಟುವ ಉದ್ಗಾರಗಳು, ಪಟಾಕಿ ಸದ್ದುಗಳು. ಬಂಧುಗಳ, ಸ್ನೇಹಿತರ ಫೋನ್ ಕರೆಗಳು, ಶುಭಾಶಯಗಳ ವಿನಿಮಯ. ಗೋಡೆಯ ಮೇಲೆ ಹೊಸ ಕ್ಯಾಲೆಂಡರಿನ ಆಗಮನ.

ಇದು ಹೊಸ ವರ್ಷದ ರಂಗು. ಈ ತಿಂಗಳಿಡೀ ಅದೇ ಗುಂಗು.

ಹೊಸ ವರ್ಷಾಚರಣೆಯ ಹುಮ್ಮಸ್ಸು ಇಳಿಯುತ್ತಿದ್ದಂತೆ ಮತ್ತೆ ಎಲ್ಲವೂ ಎಂದಿನಂತೆ. ಸಮಯದ ಬೆನ್ನು ಹತ್ತಿ ಓಡುವ ಬದುಕು. ಅದೇ ಹಗಲು- ಇರುಳಿನ ದಿನಚರಿ, ವಾರದ ಲೆಕ್ಕಾಚಾರ, ತಿಂಗಳ ಎಣಿಕೆ. ಹೀಗೆ ಮತ್ತೊಂದು ವರ್ಷ ಓಡಿ ಬರುತ್ತದೆ. ವರ್ಷಗಳು ಉರುಳಿದ್ದು, ಆಯುಷ್ಯ ಸರಿದದ್ದು ಗೊತ್ತಾಗುವುದೇ ಇಲ್ಲ. “ಎಲೆಯ ತುದಿಯ ಇಬ್ಬನಿಯಂತೆ ಕಾಲದ ಅಲಗಿನ ಮೇಲೆ ನಿನ್ನ ಬದುಕು ಹಗುರಾಗಿ ನರ್ತಿಸಲಿ ಬಿಡು” ಎನ್ನುವ ರವೀಂದ್ರನಾಥ ಟಾಗೋರ್ ಕವನ ನೆನಪಾಗುತ್ತದೆ.

ನಮ್ಮ ಇಡೀ ದಿನಚರಿಯನ್ನು, ಜೀವನವನ್ನು ಕಾಲದ ಕೈಗೊಪ್ಪಿಸಿ ಕೂತಿದ್ದೇವೆ. ಕಾಲ ಮುಟ್ಟಿದ್ದೆಲ್ಲ ಮಾಗುತ್ತದೆ, ಬಾಗುತ್ತದೆ. ಮಣ್ಣಲ್ಲಿ ಮಣ್ಣಾಗುತ್ತದೆ. ಆದರೆ ಇದಾವುದೂ ತನಗೆ ಸಂಬಂಧಿಸಿಯೇ ಇಲ್ಲದಂತೆ ತನ್ನ ಪಾಡಿಗೆ ತಾನು ಕಾಲ ಚಲಿಸುತ್ತಿರುತ್ತದೆ, ತಣ್ಣಗೆ. “ಇಲ್ಲ! ಅಗಾಧವಾದ ಈ ಕಾಲಚಕ್ರವನ್ನು ನಿಲ್ಲಿಸುವುದು ಸಾಧ್ಯವಿಲ್ಲ!! ಶಕ್ತಿಶಾಲಿಯಾಗಿ ಸುತ್ತುತ್ತಲೇ ಇರುತ್ತದೆ, ನಿರ್ದಯವಾಗಿ, ಸಾವಿರಾರು ಜೀವಿಗಳನ್ನು ಭೀಕರ ರಾತ್ರಿಯಗುಂಟ ಅಜ್ಞಾತ ಜಾಗಕ್ಕೆ ಹೊತ್ತೊಯ್ಯುತಿದೆ…..” ಎಂದು ಕಾಲದ ಮುಂದೆ ಮನುಷ್ಯನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾನೆ ಚಾರ್ಲ್ಸ್ ಕೌಡನ್ ಕ್ಲಾರ್ಕ್ ತನ್ನ ‘ದಿ ಕೋರ್ಸ್ ಆಫ್ ಟೈಂ’ನಲ್ಲಿ.

ಕಾಲವನ್ನು ಯಾವ ಕಾಲಕ್ಕೂ ಧಿಕ್ಕರಿಸಲು, ಅಲಕ್ಷಿಸಲು ಸಾಧ್ಯವಿಲ್ಲ. ಇಡೀ ಸೃಷ್ಟಿಯೇ ಕಾಲವಶದಲ್ಲಿದೆ. ಇಲ್ಲಿ ಎಲ್ಲಕ್ಕೂ ಕಾಲದ ಮೊಹರೆ. ಕಾಲ ಮುಟ್ಟದ ಜೀವಿಗಳಿಲ್ಲ, ಕಾಲ ಮುಟ್ಟದ ವಸ್ತುವಿಲ್ಲ. ಸೃಷ್ಟಿಯ ಎಲ್ಲವೂ ಕಾಲದ ಅಧೀನ. “ಗೊತ್ತಿಲ್ಲದ ಎಲ್ಲಾ ಅಪರಿಚಿತ ವಿಷಯಗಳ ನಡುವೆ ಮತ್ತೂ ಅಜ್ಞಾತವಾಗಿರುವುದು ಸಮಯ” ಎಂದು ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಅರಿಸ್ಟಾಟಲ್ ಹೇಳಿದ್ದಾನೆ. “ವರ್ಷಗಳು ಮನಸ್ಸಿನಿಂದ ಕೆಚ್ಚನ್ನು; ಅಂಗಾಂಗಗಳಿಂದ ಹುರುಪನ್ನು ಕದ್ದೊಯ್ಯುತ್ತವೆ. ಕಾಲ ದೊಡ್ಡ ದರೋಡೆಕೋರ, ನಮ್ಮಲ್ಲಿರುವ ಎಲ್ಲವನ್ನೂ ದೋಚುತ್ತದೆ, ಹಂತಹಂತವಾಗಿ. ಅದರಂಥ ಭಯಾನಕ ಮೋಸಗಾರ ಮತ್ತೊಬ್ಬನಿಲ್ಲ” ಎನ್ನುತ್ತಾನೆ ಕವಿ ಲಾರ್ಡ್ ಬೈರನ್. “ಕಾಲ ಸರಿಯಿತು, ಏನು ಹಾಗೆನ್ನುವಿಯಾ? ಅಯ್ಯೋ ಇಲ್ಲ, ಕಾಲ ಇಲ್ಲೇ ಇದೆ, ಸರಿದು ಹೋಗುವವರು ನಾವು” ಎನ್ನುತ್ತಾನೆ ಹೆನ್ರಿ ಆಸ್ಟಿನ್ ಡಾಬ್ಸನ್. “ಸಮಯವು ತನ್ನಷ್ಟಕ್ಕೆ ತಾನಿರುವ ಒಂದು ಅಸ್ತಿತ್ವವಾಗಿದೆ, ನಾವು (ಮತ್ತು ವಿಶ್ವದಲ್ಲಿನ ಎಲ್ಲ ವಸ್ತುಗಳು) ಕೇವಲ ತಾತ್ಕಾಲಿಕವಾಗಿ ಅದನ್ನು ಆಕ್ರಮಿಸಿಕೊಳ್ಳುತ್ತೇವೆ”- ಎಂಬುದು ನ್ಯೂಟನ್ನನ ತಿಳಿವು. ಕಾಲವನ್ನು ಅತೀಂದ್ರಿಯ ಆಘಾತಕಾರಿ ಅಚ್ಚರಿ (mystic baffling wonder ) ಎನ್ನುವ ವಾಲ್ಟ್ ವಿಟಮನ್, ಅದೊಂದೇ ದೋಷರಹಿತವಾದದ್ದು ಮತ್ತು ಎಲ್ಲವನ್ನೂ ಪೂರ್ಣಗೊಳಿಸುವಂಥದ್ದೆಂದು ತನ್ನ ಲೀವ್ಸ್ ಆಫ್ ಗ್ರಾಸ್ ಕವನದಲ್ಲಿ ವರ್ಣಿಸುತ್ತಾನೆ. “ಮನುಷ್ಯ ಮಾತ್ರರಾದ ನಮಗೆ ಕೇವಲ ಸಾಪೇಕ್ಷ ಸಮಯ ಎಂದು ಕರೆಯುವದನ್ನು ಮಾತ್ರ ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಸಾಪೇಕ್ಷ ಸಮಯ ಎಂದರೆ ಇದು ಕಾಲವನ್ನು ಚಲನೆಯಲ್ಲಿ ಗ್ರಹಿಸುವ ಮಾಪನ” ಎನ್ನುತ್ತಾನೆ ಐನಸ್ಟಿನ್. ಹೀಗೆ ಪ್ರತಿ ಯುಗದ ವಿಜ್ಞಾನಿಗಳನ್ನು, ಕವಿಗಳನ್ನು, ಲೇಖಕರನ್ನು, ಚಿತ್ರಕಾರರನ್ನು, ತತ್ವಜ್ಞಾನಿಗಳನ್ನು ಕಾಲದ ಕಲ್ಪನೆ ಇನ್ನಿಲ್ಲದಂತೆ ಕಾಡಿದೆ.

ಮೇಲ್ನೋಟಕ್ಕೆ ಗಡಿಯಾರದ ಟಿಕ್ ಟಿಕ್ ನಲ್ಲೂ, ಕ್ಯಾಲೆಂಡರಿನ ಪುಟ ಬದಲಾವಣೆಯಲ್ಲೂ ಓಡುವಂತೆ ಕಾಣುವ ಕಾಲದ ನಿಜವಾದ ಸ್ವರೂಪ ಎಂಥದು? ಅಸಲಿಗೆ ಕಾಲ ಶುರುವಾದದ್ದು ಎಂದು?

ಇಂದಿನ ವೈಜ್ಞಾನಿಕ ತಿಳಿವಳಿಕೆಯ ಪ್ರಕಾರ ಕಾಲ ಹುಟ್ಟಿದ್ದು ನಾವು ವಾಸಿಸುವ ಈ ಅನಂತ ಬ್ರಹ್ಮಾಂಡದ ಜೊತೆಗೆ, ಸುಮಾರು 13.7 ಬಿಲಿಯನ್ ವರ್ಷಗಳ ಹಿಂದೆ. ಅದಕ್ಕೂ ಮುನ್ನ ಸಮಸ್ತ ದ್ರವ್ಯರಾಶಿಯು ಅತ್ಯಂತ ಚಿಕ್ಕ ಚುಕ್ಕೆಯಲ್ಲಿ ಬಂಧಿತವಾಗಿತ್ತು. ಆ ಅಖಂಡ ದಟ್ಟತೆಯ ದ್ರವ್ಯರಾಶಿಯು ತನ್ನೊಡಲಿನ ಅಪಾರ ಬಿಸಿಗೆ ಏಕಾಏಕೀ ಹಿಗ್ಗುತ್ತಾ(ಬಿಗ್ ಬ್ಯಾಂಗ್) ಈ ಅನಂತ ಬ್ರಹ್ಮಾಂಡ ಹೊರಹೊಮ್ಮಿತು. ಬಿಗ್ ಬ್ಯಾಂಗ್ ಗೂ ಮುನ್ನ ಕಾಲ (Time) ಮತ್ತು ದೇಶ (Space) ಗಳಿರಲಿಲ್ಲ. ಹೀಗೆ ಕಾಲವು ಬ್ರಹ್ಮಾಂಡದ ಮೂಲಭೂತ ರಚನೆಯ ಒಂದು ಭಾಗ ಎಂಬುದು ವಿಜ್ಞಾನದ ತರ್ಕ.

ಕಾಲವು ಒಂದು ಕುತೂಹಲಕಾರಿ ಕಲ್ಪನೆಯಾಗಿದ್ದು, ನೂರಾರು, ಸಾವಿರಾರು ವರ್ಷಗಳ ಪ್ರಯತ್ನದ ಹೊರತಾಗಿಯೂ ಇದಕ್ಕೊಂದು ನಿರ್ಣಾಯಕ ವ್ಯಾಖ್ಯಾನವನ್ನು ಕೊಡುವುದು ಸಾಧ್ಯವಾಗಿಲ್ಲ. ಇದುವರೆಗೆ ತನ್ನ ಮೂಲಭೂತ ಸ್ವಭಾವದ ಗುಟ್ಟನ್ನು ಮಾತ್ರ ಕಾಲ ಬಿಟ್ಟುಕೊಟ್ಟಿಲ್ಲ. ಸೂಕ್ಷ್ಮದರ್ಶಕ ಅಥವಾ ಪ್ರಯೋಗದೊಂದಿಗೆ ಕಾಲವನ್ನು ಅಧ್ಯಯನ ಮಾಡಲಾಗುವುದಿಲ್ಲವಾದ್ದರಿಂದ ಸಮಯ ಸರಿಯುವಾಗ ನಿಖರವಾಗಿ ಏನಾಗುತ್ತದೆಂದು ಹೇಳಲಾಗದು. ಅದಕ್ಕೇ ಕಾಲವನ್ನು ಭ್ರಮೆ, ಒಂದು ಆಯಾಮ, ನಯವಾಗಿ ಹರಿಯುವ ನಿರಂತರತೆ, ನಿಗೂಢ, ಅನಿರ್ವಚನೀಯ…. ಎಂದು ಬಗೆಬಗೆಯಾಗಿ ಕರೆಯುತ್ತಾರೆ.

ನಿಜಕ್ಕೂ ಕಾಲ ಎನ್ನುವುದು ವಾಸ್ತವವೇ ಅಥವಾ ಬೌದ್ಧಿಕ ಕಲ್ಪನೆಯೇ? ಅಥವಾ ಮನುಷ್ಯರು ಕೇವಲ ಘಟನೆಗಳನ್ನು ಅನುಕ್ರಮವಾಗಿಡಲು, ಹಾಗೂ ಹೋಲಿಕೆಗಾಗಿ ಕಾಲವನ್ನು ಬಳಸುತ್ತಾರೆಯೇ?  ಅದಕ್ಕೆ ಆದಿ, ಅಂತ್ಯಗಳಿವೆಯೇ? ಕಾಲ ಸರಳ ರೇಖೆಯಲ್ಲಿ ಚಲಿಸುವುದೋ ಅಥವಾ ಚಕ್ರದಂತೆ ಸುತ್ತುವುದೋ, ಅದು ಸೀಮಿತವೋ, ಅನಂತವೋ?… ಕಾಲದ ಸುತ್ತ ಗಿರಕಿ ಹೊಡೆಯುವ ಇಂಥ ಪ್ರಶ್ನೆಗಳು ನಾಗರಿಕತೆಯ ಉದ್ದಕ್ಕೂ ಮನುಷ್ಯನನ್ನು ಬಾಧಿಸಿವೆ. ಕಾಲದ ವಿಷಯದಲ್ಲಿ ಸೂಕ್ತ ಜ್ಞಾನ ಅತ್ಯಂತ ಅವಶ್ಯಕ. ಏಕೆಂದರೆ ನಾವು ಹೇಗೆ ಬದುಕುತ್ತಿದ್ದೇವೆ ಎಂಬುದು ಈ ಪ್ರಪಂಚವನ್ನು ನಾವು ಹೇಗೆ ಗ್ರಹಿಸಿದ್ದೇವೆ ಎಂಬುದನ್ನು ಅವಲಂಬಿಸಿದೆ. ಪ್ರಪಂಚದ ನಮ್ಮ ಗ್ರಹಿಕೆಯು ಕಾಲದ ಬಗೆಗಿನ ನಮ್ಮ ನಿಲುವನ್ನು ಅವಲಂಬಿಸಿದೆ. ಅದಕ್ಕಾಗಿ ಕಾಲವನ್ನು ಕೆದುಕುವುದು ಅನಿವಾರ್ಯ ಹಾಗೂ ಅಗತ್ಯ!!

ವಸ್ತು ಪ್ರಪಂಚದ ಆದಿ ಮತ್ತು ಅಂತ್ಯಗಳನ್ನು ಒಪ್ಪುವ ದರ್ಶನಗಳು ವಸ್ತು ಮತ್ತು ಕ್ರಿಯೆಯ ಮೂಲಕ ಕಾಲದ ಅಸ್ತಿತ್ವವನ್ನು ಗುರುತಿಸುತ್ತವೆ. ಬ್ರಹ್ಮಶಕ್ತಿಯೇ ಕಾಲ ಎನ್ನುವುದು ಸಂಸ್ಕೃತ ವಿದ್ವಾಂಸ ಭತೃಹರಿಯ ನಿಲುವು. ಆಕಾಶವನ್ನೇ ಕಾಲವೆನ್ನುತ್ತಾರೆ ಸಾಂಖ್ಯರು. ವೈಶೇಷಿಕ ದರ್ಶನದ ಪ್ರಕಾರ ಕಾಲ ಎಲ್ಲದಕ್ಕೂ ಆಧಾರವಾದದ್ದು, ಅದು ನಿತ್ಯ, ಸತ್ಯ. ಆದರೆ ಇಂದ್ರಿಯಗ್ರಾಹ್ಯವಲ್ಲ. ಮಧ್ವಾಚಾರ್ಯರ ಪ್ರಕಾರ ಕಾಲಕ್ಕೆ ಉತ್ಪತ್ತಿಸ್ಥಿತಿಲಯಗಳಿವೆ. ಆದ್ದರಿಂದ ಅದು ಅನಿತ್ಯ ದ್ರವ್ಯ. ವ್ಯಾವಹಾರಿಕ ಕಾಲವೆನ್ನುವುದು ಮಾಯೆ, ಅದು ಬ್ರಹ್ಮನ ಮಾಯಾಶಕ್ತಿ ಎನ್ನುವುದು ಅದ್ವೈತ ಸಿದ್ಧಾಂತ. ಕಾಲವನ್ನು ನಿಶ್ಚಯ ಕಾಲ ಮತ್ತು ವ್ಯವಹಾರ ಕಾಲ ಎಂದು ವಿಭಜಿಸಿ ನೋಡುತ್ತದೆ ಜೈನ ಸಿದ್ಧಾಂತ.

ಬೌದ್ಧರ ಪ್ರಕಾರ ಸ್ವತಂತ್ರ ಕಾಲವೆನ್ನುವುದಕ್ಕೆ ಅರ್ಥವೇ ಇಲ್ಲ, ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳು ಕೇವಲ ನಮ್ಮ ಸಾಪೇಕ್ಷ ಕಲ್ಪನೆಗಳು. ನಾಗಾರ್ಜುನ: “ಅಸ್ತಿತ್ವದಲ್ಲಿಲ್ಲದ ಕಾಲ ಗ್ರಾಹ್ಯವಲ್ಲ; ಸ್ಥಿತ ಕಾಲವಿಲ್ಲ; ಅಗ್ರಾಹ್ಯ ಕಾಲವನ್ನು ವ್ಯಕ್ತಪಡಿಸುವುದು ಹೇಗೆ?….. ಭಾವವನ್ನವಲಂಬಿಸಿ ಕಾಲ ಇರುತ್ತದೆ ಎಂದಾದರೆ, ಇಲ್ಲದ್ದನ್ನವಲಂಬಿಸಿ ಇರಲು ಸಾಧ್ಯವೆ? ಭಾವವೆಂಬ ಯಾವುದಕ್ಕೂ ಅಸ್ತಿತ್ವವಿಲ್ಲ, ಕಾಲ ಇರುವುದಾದರೂ ಎಲ್ಲಿ?” ಎಂದು ಪ್ರಶ್ನಿಸುತ್ತಾನೆ. ಶರಣರಲ್ಲಿಯೂ ಇದೇ ಚಿಂತನೆ ಮುಂದುವರೆಯುತ್ತದೆ. ಕಾಲವು ಆದಿ, ಅನಾದಿಗಳ ಭ್ರಮೆ ಹುಟ್ಟಿಸುವುದರಿಂದ ಮನಸ್ಸು ಸಂದೇಹಕ್ಕೆ ಬೀಳುತ್ತದೆ, ತರ್ಕದ ಬೆನ್ನು ಹತ್ತುತ್ತದೆ. ಕಾಲವನ್ನು ಭಿನ್ನ ಭಿನ್ನ ಘಟಕಗಳನ್ನಾಗಿ ಗ್ರಹಿಸುವಲ್ಲಿಯೇ ದೋಷ ಅಡಗಿದೆ. “ನೋಡುವುದ ನೋಡಲರಿಯದೇ ಕೆಟ್ಟಿತ್ತೀ ಲೋಕವೆಲ್ಲ” ಎಂದು ಅಲ್ಲಮರು ಹೇಳುವಂತೆ ಕಾಲದ ಗ್ರಹಿಕೆಯಲ್ಲೇ ನಾವು ಎಡವುತ್ತಿದ್ದೇವೆ.

ಕಾಲ ಓಡುತ್ತಿದೆಯೇ? ನಾವು ಓಡುತ್ತಿದ್ದೇವೆಯೇ?

ಇದು ಕಾಲಕ್ಕೆ ಸಂಬಂಧಿಸಿದ ಒಂದು ಜಟಿಲ ಪ್ರಶ್ನೆ. ಭೂಮಿಯ ನಿರಂತರ ಚಲನೆಯನ್ನು ಕಾಲದ ಓಟವೆಂದು ಭ್ರಮಿಸಿ, ಅದರೊಂದಿಗೆ ಧಾವಿಸುವ ಮನಷ್ಯನ ಧಾವಂತ ಅರ್ಥರಹಿತ. ಈ ಧಾವಂತದಲ್ಲಿ ಮನುಷ್ಯ ಬದುಕಿನ ಅರ್ಥವನ್ನೇ ಮರೆತುಬಿಟ್ಟಿದ್ದಾನೆ. ಮನುಷ್ಯನನ್ನು ಹೀಗೆ ಕಾಲನಿಗೆ ಒಪ್ಪಿಸುವ ಮೂಲಕ ಜಗತ್ತನ್ನು ಮೋಸದ ಬಲೆಯೊಳಗೆ ಸಿಕ್ಕಿಸಿದ್ದು ಈ ಸೃಷ್ಟಿಯ ಮಾಯೆ. ಆದ್ದರಿಂದಲೇ ಜಗತ್ತು ನಶ್ವರತೆಯ ಬೆನ್ನು ಬಿದ್ದಿದೆ, ಕಾಮನೆಗಳ ಬಲೆಯೊಳಗೆ ಜಾರಿದೆ ಎನ್ನುತ್ತಾರೆ ಸ್ವತಂತ್ರ ಸಿದ್ಧಲಿಂಗ ಶರಣರು: “….ಕಾಲನಿಗೊಪ್ಪಿಸಿ ಜಗವ ಠಕ್ಕಿಸಿ ಮಿಕ್ಕು ಮೀರಿ ಹೋದನಯ್ಯ,
ಶಿವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.”

ಸೃಷ್ಟಿ ಏನೋ ಸಕಲ ಜೀವಿಗಳ ಜೊತೆ ಮನುಷ್ಯನನ್ನೂ ಕಾಲಕ್ಕೆ ಒಪ್ಪಿಸಿಬಿಟ್ಟಿತು. ಹಾಗಂತ ಮನುಷ್ಯ ತನ್ನನ್ನೇ ಮರೆತು ಬಿಡುವುದೇ? ಹಡಪದ ಅಪ್ಪಣ್ಣ ಶರಣರು ಕಾಲದ ಕುರಿತು ವಿಸ್ತೃತವಾಗಿ ತಮ್ಮ ವಚನಗಳಲ್ಲಿ ಚಿಂತನೆ ನಡೆಸಿದ್ದಾರೆ:

ಆಗುತಿವೆ ಉದಯ ಮಧ್ಯಾಹ್ನ ಅಸ್ತಮಾನ.
ಹೋಗುತಿವೆ ದಿನ ವಾರ ಮಾಸ ಸಂವತ್ಸರವು.
ಸಾವುತಿವೆ ಆಯುಷ್ಯ ಭಾಷೆ.
ಇವರೊಳು ಬೇಗದಿ ತಿಳಿದು ನೀಗಿ, ನಿಷ್ಪತ್ತಿಯಾದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.

ಹಗಲು ಗೂಗೆಗೆ ಇರುಳಾಗಿಪ್ಪುದು, ಇರುಳು ಕಪಟಗೆ ಹಗಲಾಗಿಪ್ಪುದು.
ಇದು ಜಗದಾಟ.
ಈ ಹಗಲು ಇರುಳೆಂಬ ಉಭಯವಳಿದು, ನಿಗಮಂಗಳಿಗೆ ನಿಲುಕದ,
ಸಗುಣ ನಿರ್ಗುಣ ಅಗಮ್ಯ ಅಗೋಚರವಪ್ಪ
ಮಹಾಘನ ಗುರುವಿನ ನೆಲೆಯ, ನಿಮ್ಮ ಶರಣರು ಬಲ್ಲರಲ್ಲದೆ
ಮತ್ರ್ಯದ ಮರಣಬಾಧೆಗೊಳಗಾಗುವ ಮನುಜರೆತ್ತ ಬಲ್ಲರೊ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ !

ಹಗಲು ರಾತ್ರಿಗಳಲ್ಲಿ ಸಮಯವನ್ನು ವಿಭಜಿಸಿ ನೋಡುವ ಮೂಲಕ ಭೂಮಿಯ ನಿರಂತರ ಚಲನೆಯನ್ನು ಮರೆಯುತ್ತಿರುವುದು ಮಾನವ ತಿಳಿವಳಿಕೆಯ ಮತ್ತೊಂದು ದೋಷ. ಸಂಜೆಯ ಹೊತ್ತಿಗೆ ಸೂರ್ಯ ಮುಳುಗಿ ಹೋಗುವುದಿಲ್ಲ, ರಾತ್ರಿ ಭೂಮಿ ತಿರುಗದೆ ನಿಲ್ಲುವುದಿಲ್ಲ, ಪ್ರತಿ ಹಗಲು ಮತ್ತು ಪ್ರತಿ ರಾತ್ರಿ ಭೂಮಿಯ ಸುತ್ತುವಿಕೆಯ ಸಹಜ ಪಲ್ಲಟಗಳು. ಆದರೆ ಹಗಲು- ಇರುಳಿನ ಗುಂಗಿನಲ್ಲಿ ಇಡೀ ಆಯುಷ್ಯವನ್ನೇ ಕಳೆದು ಬಿಡುತ್ತಾನೆ ಮನುಷ್ಯ. ನಮಗೆ ಬೆಳ್ಳಂಬೆಳಗಿನ ಹಗಲು ಗೂಗೆಗೆ ಇರುಳಿನಂತೆ; ಕಳ್ಳನ ಚಟುವಟಿಕೆ ಆರಂಭವಾಗುವುದೇ ರಾತ್ರಿ, ಕತ್ತಲೆಯೇ ಆತನಿಗೆ ಹಗಲು. ಕಾಲ ಸೃಷ್ಟಿಸುವ ಹಗಲು-ಇರುಳಿನ ಓಟದಲ್ಲಿ ಇಡೀ ಜಗತ್ತೇ ಸಿಲುಕಿಕೊಂಡಿದೆ. ಇದೊಂದು ಜಟಿಲ ಜಾಲದಿಂದ ಕೂಡಿದ maze runner ಆಟ. ಕೊನೆಗೊಂದು ದಿನ ಈ ಹಗಲೇ ಕೊನೆಯ ಹಗಲು ಅಥವಾ ಇದೇ ಅಂತಿಮ ರಾತ್ರಿ ಎಂಬ ಯಾವ ಸೂಚನೆಯನ್ನೂ ನೀಡದೆ ಮರಣ ಆಗಮಿಸುತ್ತದೆ. ಇದೇ ಕಾಲಚಕ್ರ. ಇದಕ್ಕೆ ಸಿಲುಕಿದವರಿಗೆ ಅರಿವಿನ ನೆಲೆಯನ್ನು ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಗ್ರಹಿಕೆಗೆ ದಕ್ಕದ, ಕಣ್ಣಿಗೆ ಗೋಚರಿಸದ ಅರಿವು ಪ್ರಾಪ್ತಿಯಾಗಲು ಹಗಲು-ಇರುಳಿನ ಕಾಲಬೇಧದಿಂದ ಮನಸ್ಸು ಮುಕ್ತವಾಗಬೇಕು, ನಿಷ್ಪತ್ತಿಯಾಗಬೇಕು.

ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು,
ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ.
ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ.
ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ.
ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ,
ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು.
ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.

ಕಾಲದ ಬಗೆಗೆ ಶರಣರ ನಿಲುವನ್ನು ತಿಳಿಸುವ ಒಂದು ಅದ್ಭುತ ವಚನ ಇದು. ಜೀವವು ರೂಪ ತಳೆದುದು ಪ್ರಕೃತಿಯ ಪಲ್ಲಟಗಳಲ್ಲಿಯೇ. ಅದಕ್ಕೆ ಅಂಟಿಕೊಳ್ಳುವ ಸಂಬಂಧಗಳೆಲ್ಲವೂ ಅದರ ಕೊಡುಗೆ. ಆದರೆ ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಎಂದೆಲ್ಲ ಕಾಲವನ್ನು ಉದ್ದಕ್ಕೂ ಕಟ್ಟಿಕೊಂಡು ಬದುಕನ್ನು ಅವುಗಳಲ್ಲಿ ಹಂಚಿಬಿಡುವುದರಿಂದ ಜೀವ ಜಂಜಾಟದ ಸುಳಿಗೆ ಸಿಕ್ಕಿಕೊಳ್ಳುತ್ತದೆ. ಅದರೊಂದಿಗೆ ಸೇರಿಕೊಳ್ಳುವ ಭಾವನೆಗಳು, ವಿಚಾರಗಳು ಜೀವದ ನಿಜ ಸ್ವರೂಪವನ್ನು ಮರೆಸಿ ಸಂಸಾರದ ಭ್ರಮೆಯಲ್ಲಿ ತೇಲಿಸುತ್ತಿರುತ್ತವೆ. ಆಗ ಕಾಲ ಕಟ್ಟಳೆಯಾಗುವುದು. ಕಾಲದ ಬಳುವಳಿಯಂತೆ ಕರ್ಮ ಮೆತ್ತಿಕೊಳ್ಳುವುದು. ಆದ್ದರಿಂದ ಕಾಲಕ್ಕೆ ಹೊರಗಾದ ಪರಮಚೈತನ್ಯವನ್ನು ಕಾಲದೊಳಗೆ ಸಿಲುಕಿದವರು ಕಾಣಲಾಗುವುದಿಲ್ಲ. ಕಲ್ಪಿತ ಕಾಲಕ್ಕೆ ನಮ್ಮನ್ನು ಕಟ್ಟಿ ಹಾಕಿಕೊಳ್ಳುವುದೇ ಮಹಾನ್ ಮೂರ್ಖತನ ಎನ್ನುತ್ತಾರೆ ಶರಣರು.

ಕಾಲಾಧೀನವಾದ ಶರೀರದಲ್ಲಿ ಕಾಲಾತೀತವಾದ ಜೀವವಿದೆ. ಅದನ್ನು ಹೆಚ್ಚುಕಡಿಮೆ ಮರೆತೇ ಬಿಟ್ಟಿದ್ದೇವೆ ಅಥವಾ ಅದರತ್ತ ನಿರ್ಲಕ್ಷ್ಯ ತೋರಿದ್ದೇವೆ. ತನ್ನ ಸ್ವರೂಪದ ಅನುಭವ ಪಡೆದುಕೊಂಡ ಜೀವನಲ್ಲಿ ದೇಹದ ಗುಣಗಳು ಮಾಯವಾಗುತ್ತವೆ. ಕಾಲದ ಕೈಗೆ ಸಿಗದ ವಿವೇಕವೆಂದರೆ ಇದು. ಈ ಜಾಗೃತಿ ನಮ್ಮಲ್ಲೇ ಹುಟ್ಟಬೇಕು. ಸ್ವತಂತ್ರ ಸಿದ್ಧಲಿಂಗೇಶ್ವರ ಶರಣರ ವಚನ ನೋಡಿ:

ಜಗದಗಲದ ಮಾಯಾಜಾಲವ ಹಿಡಿದು
ಕಾಲನೆಂಬ ಜಾಲಗಾರ ಜಾಲವ ಬೀಸಿದ ನೋಡಯ್ಯ.
ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ.
ಬಲ್ಲಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ.
ಆ ಕಾಲನ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ತನ್ನವರಿಗೆ ತಾ ಮೇಲಾರೈಕೆಯಾಗಿಹನು.

ಕಾಲ ಒಬ್ಬ ಜಾಲಗಾರ, ಅಂದರೆ ಬೆಸ್ತ. ಆತನ ಮಾಯಾ ಬಲೆ ಜಗದಗಲಕ್ಕೂ ಹರಡಿಕೊಂಡಿದೆ. ಪ್ರತಿ ಜೀವಿಯೂ ಅದರ ತೆಕ್ಕೆಯೊಳಗೆ ಸಿಕ್ಕಿಕೊಂಡಿದೆ. ಆ ಜಾಲಕ್ಕೆ ಹೊರಗಾದವರು ಯಾರೂ ಇಲ್ಲ. ತಾವು ಎಲ್ಲವನ್ನೂ ಬಲ್ಲೆವೆಂದು ತಿಳಿದವರೂ ಜಾಲದ ಹೆಣಿಗೆಯೊಳಗೆ ಸಿಲುಕಿಕೊಂಡವರೇ ಆಗಿದ್ದಾರೆ. ಇಲ್ಲಿಂದ ಮೇಲೇಳುವ ಅವಕಾಶವೇ ಇಲ್ಲದಂತೆ ಕಾಲನ ಮಾಯಾ ಜಾಲದಲ್ಲೇ ಇಡೀ ಲೋಕ ವ್ಯವಹರಿಸುತ್ತಿದೆ. ತನ್ನ ತಾನರಿಯುವ ಮೂಲಕ ಮಾತ್ರವೇ ಕಾಲ ಜಾಲದಿಂದ ಬಿಡುಗಡೆ ಸಾಧ್ಯ. ಅದೇ ಲಿಂಗದ ಜ್ಞಾನ, ಸಮಷ್ಟಿಯ ಅರಿವು.

ಜಗದ ಬಾಧೆಗಳಿಗೆ ಮೂಲ ಕಾರಣ ಕಾಲಕ್ಕೆ ತನ್ನನ್ನು ತಾನು ಕಟ್ಟಿ ಹಾಕಿಕೊಂಡಿರುವುದು. ಹೀಗಾಗಿ ಅದರದು ಹುಚ್ಚು ನಾಗಾಲೋಟ. ಹಗಲಿನಲ್ಲಿ ತನ್ನ ಉದರ ಪೋಷಣೆಗಾಗಿ, ಸ್ವಾರ್ಥ ಸಾಧನೆಗಾಗಿ ಏನೆಲ್ಲ ಮಾಡುವ ಜಗತ್ತು, ಕತ್ತಲಾದಂತೆ ತಾನು ಮಾಡಿದ ಕರ್ಮ ತೊಳೆದುಕೊಳ್ಳಲು ಪೂಜೆ-ಪುನಸ್ಕಾರದ ಮೊರೆ ಹೋಗುತ್ತದೆ. ಅಲ್ಲಮಪ್ರಭುದೇವರು ಈ ನಡೆಯನ್ನು ಪ್ರಶ್ನಿಸುತ್ತಾರೆ-

ಹಗಲಿಗೊಂದು, ಇರುಳಿಗೊಂದು ನೇಮವೇ?
ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ
ಕತ್ತಲೆಯಾಯಿತ್ತ ಕಂಡು
ಮಜ್ಜನಕ್ಕೆರೆವರಯ್ಯಾ.

ಇದು ಕಾಲಚಕ್ರದಲ್ಲಿ ತನ್ನನ್ನು ಬಂಧಿಯಾಗಿಸುವ ಬಗೆ. ಅದಕ್ಕೆ ಮುಂದುವರಿದು ಹೇಳುತ್ತಾರೆ:
ಲಿಂಗಕ್ಕೆ ನೇಮವಿಲ್ಲ.
ಇರುಳಿಗೊಂದು ನೇಮ, ಹಗಲಿಗೊಂದು ನೇಮ ?
ಲಿಂಗಕ್ಕೆ ನೇಮವಿಲ್ಲ.

ಲಿಂಗವು ಈ ಎಲ್ಲ ಬಗೆಯ ನೇಮಗಳನ್ನು, ಪೂಜೆಪುನಸ್ಕಾರಗಳನ್ನು ಮೀರಿದ್ದು, ಇವುಗಳಿಗೆ ನಿಲುಕಲಾರದ್ದು.

ಕಾಲವನ್ನು ಶಾಶ್ವತವೆಂದು ಭಾವಿಸುವುದು ಎಲ್ಲ ಗ್ರಹಿಕೆಗಳ ಮೂಲ ಸಮಸ್ಯೆ. ನಿರಂತರ ಬದಲಾಗುತ್ತಿರುವ ಜಗದ ಸತ್ಯವನ್ನು ಅರಿಯಲು ಈ ಗ್ರಹಿಕೆ ಅಡ್ಡವಾಗುತ್ತದೆ. ಈ ಪ್ರಪಂಚದಲ್ಲಿ ಸ್ವತಂತ್ರವಸ್ತು ಎನ್ನುವ ಯಾವುದೂ ಇಲ್ಲ. ಈ ಕ್ಷಣ ಎನ್ನುವುದು ಕಾಲ ಗರ್ಭದಲ್ಲಿ ಜಾರುವಂತಹುದು. ಭೂತ- ಭವಿಷ್ಯತ್ತುಗಳ ಕಾಲ ಪ್ರಜ್ಞೆ ಸಾಮಾನ್ಯರಿಗೆ ಸೇರಿದ್ದು. ಭವಿಷ್ಯದ ಕ್ಷಣಗಳು ಭೂತದ ಒಡಲು ಸೇರುವಲ್ಲಿಗೆ ಮನುಷ್ಯನ ಜೀವನ ಸರಿದು ಹೋಗುತ್ತಿರುತ್ತದೆ. ಕಾಲವನ್ನು ಸ್ವತಂತ್ರ ಘಟಕವಾಗಿ ನೋಡಲು ಶರಣರು ನಿರಾಕರಿಸುತ್ತಾರೆ. ಅದಕ್ಕೇ ಅಲ್ಲಮರು ಹೇಳುತ್ತಾರೆ- “ನಿಮ್ಮ ಶರಣರು ಕಾಲನ ಬಾರಿಗೆ ಕಲ್ಪಿತರಾಗರು.” ಅಂದರೆ ಕಾಲದ ದವಡೆಗೆ ಸಿಗದ ಶರಣರು ಕಾಲಾತೀತರು. ಕಾಲಾತೀತ ಸ್ಥಿತಿಯನ್ನು ಗ್ರಹಿಸಲಾಗಲಿ, ಕಲ್ಪಿಸಿಕೊಳ್ಳಲಾಗಲಿ ಆಗದು. ಏಕೆಂದರೆ ಅದು ಮನಕ್ಕೂ ಅತೀತವಾದದ್ದು. ಶರಣ ಚಂದಿಮರಸರು ಇದನ್ನು ಶೂನ್ಯಕ್ಕೆ ಹೋಲಿಸಿದ್ದಾರೆ: “ಆದಿ ಮೂವರಿಲ್ಲ… ಮಾಯಾಮೋಹವಿಲ್ಲ… ಕರ್ಮವಿಲ್ಲ… ಕಾಲವಿಲ್ಲ… ಲಿಂಗವಿಲ್ಲ…. ಏನೂ ಏನೂ ಇಲ್ಲ….”

ಆದಿ- ಅಂತ್ಯಗಳಿಲ್ಲದ ಲೋಕ ಪ್ರವಾಹವು ಹರಿಯುತ್ತಲಿದೆ. ಅದರ ಲೆಕ್ಕ ಇಡಲಾದೀತೆ? ಈ ಭೂಮಿಯ ಮೇಲಿದ್ದು, ಕಾಲನೆಂಬ ಜಾಲಗಾರನ ಬಲಿಪಶುಗಳಾಗಿದ್ದು, ಕಾಲ ಮುಟ್ಟದ ಸ್ಥಿತಿಗೆ ತಲುಪುವುದು ಸಾಧ್ಯವೇ? ಕಾಲವನ್ನು ಕುರಿತು ನನ್ನನ್ನು ಬಹುವಾಗಿ ಕಾಡುವ ಅಲ್ಲಮಪ್ರಭುದೇವರ ವಚನ ಇದು:

ಹಿಂದಣ ಅನಂತವನು, ಮುಂದಣ ಅನಂತವನು
ಒಂದು ದಿನ ಒಳಕೊಂಡಿತ್ತು ನೋಡಾ!
ಒಂದು ದಿನವನೊಳಕೊಂಡು ಮಾತನಾಡುವ
ಮಹಂತನ ಕಂಡು ಬಲ್ಲವರಾರಯ್ಯ
ಆದ್ಯರು ವೇದ್ಯರು ಅನಂತ ಹಿರಿಯರು
ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರ.

ಜಗದ ಸಹಜತೆಯೊಂದಿಗೆ ಮನದ ಸಹಜತೆಯ ಶೃತಿ ಸೇರಿದಾಗ ಭಾವ ನಿಶ್ಚಲಗೊಳ್ಳುತ್ತದೆ. ಕಾಲದ ನಂಟುತನ ತಪ್ಪುತ್ತದೆ. ಕರ್ಮದ ಜಂಜಡ ಮಾಯವಾಗುತ್ತದೆ. ಭೂತ ಭವಿಷ್ಯಗಳು ಇಲ್ಲವಾಗಿ ಕಾಲಪ್ರವಾಹ ನಿಂತು ಹೋಗುತ್ತದೆ. ಅದು ಬೆಳಕು-ಕತ್ತಲಿನ ಕಾಲದಾಟ ಮಾಯವಾದಾಗ ಕಾಣುವ ಸ್ಥಿತಿ. ಕಾಲಾತೀತ ಅವಸ್ಥೆಯಲ್ಲಿ ಮಾತ್ರ ಸಾಧ್ಯವಾಗುವ ಅದ್ಭುತ ಕ್ಷಣ. ಅಲ್ಲಮರು ಹೇಳುವ ಆ ಒಂದು ದಿನ ಅದೇ ಇರಬೇಕು. ಶಬ್ದಗಳಲ್ಲಿ ನಿಲುಕಲಾರದ್ದನ್ನು ಅನುಭವಿಸಿದ ಅಂಥ ಮಹಂತರು ವಿರಳರಲ್ಲಿ ವಿರಳ.

ಅದು ಶರಣರ ಅನುಭಾವ. ಅಗಮ್ಯ, ಅಗೋಚರ, ಅನಿರ್ವಚನೀಯ ಬಯಲು.

ಗ್ರಂಥ ಋಣ:

  1. ಅಲ್ಲಮಪ್ರಭುದೇವರ ವಚನ ನಿರ್ವಚನ- ಶ್ರೀ ಸಿದ್ದೇಶ್ವರ ಸ್ವಾಮಿಗಳು
  2. ನಾಗಾರ್ಜುನನ ಮೂಲಮಧ್ಯಮಕಕಾರಿಕಾ- ಎಸ್.ನಟರಾಜ ಬೂದಾಳು
Previous post ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
Next post ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ

Related Posts

ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
Share:
Articles

ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ

April 29, 2018 ಕೆ.ಆರ್ ಮಂಗಳಾ
ವಚನಗಳ ಅಂತರಾಳದಲ್ಲಿ ಕಾಣುವುದು ಸಾರ್ವತ್ರಿಕ ಸತ್ಯದ ಮುಖಗಳು. ಓದುಗರ ಪ್ರಜ್ಞೆಯ ಆಳಕ್ಕಿಳಿದು ಕೆಣಕುವ ಶಕ್ತಿ ಶರಣರ ಮಾತುಗಳಿಗಿದೆ. ಅಲ್ಲಿ ಕಾಣುವ ಮನೋವ್ಯಾಪಾರಗಳು ಎಲ್ಲರ...
ಕಾಯವೇ ಕೈಲಾಸ
Share:
Articles

ಕಾಯವೇ ಕೈಲಾಸ

April 29, 2018 ಕೆ.ಆರ್ ಮಂಗಳಾ
ದೇಹಕ್ಕೂ ಮತ್ತು ನನಗೂ ಸಂಬಂಧವೇನು? ಇಂಥದೊಂದು ಪ್ರಶ್ನೆ ಯಾರಾದರೂ ಕೇಳಿದರೆ ತಲೆ ಸರಿ ಇದೆಯೇ? ಎಂಬ ಮರುಪ್ರಶ್ನೆ ಬಾಣದಂತೆ ತೂರಿ ಬರುವುದು ನಿಶ್ಚಿತ. ಆದರೆ ಆಧ್ಯಾತ್ಮ ಲೋಕದಲ್ಲಿ...

Comments 14

  1. ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ ಮಮಮ
    Jan 8, 2019 Reply

    ಶರಣೆ ಮಂಗಳಾವರೇ ಕಾಲನೆಂಬ ಜಾಲಗಾರ ನಿಮ್ಮ ಲೇಖನವು ತುಂಬಾ ಅರ್ಥಪೂರ್ಣವಾಗಿ ಹಾಗೂ ಸಮಯೋಚಿತವಾಗಿ ಮೂಡಿ ಬಂದಿದೆ. ಶರಣರ ವಚನಗಳನ್ನ ಆಧರಿಸಿ ಕಾಲದ ಕುರಿತಾಗಿ ನಿಮ್ಮ ನಿರ್ಧಾರಿತ ಲೇಖನವಿದು ಎಂದುಕೊಂಡಿದ್ದೇನೆ. ಇದೆ ರೀತಿ ನಿಮ್ಮ ಎಲ್ಲ ಲೇಖನಗಳು ಸೊಗಸಾಗಿ ಭಾವಪೂರ್ಣವಾಗಿ ಮೂಡಿ ಬರಲೆಂದು ಹಾರೈಸುವೆ.
    ಶರಣು ಶರಣಾರ್ಥಿಗಳು.

    ಶ್ರೀಮತಿ ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ.

  2. ಡಾ. ಪಂಚಾಕ್ಷರಿ ಹಳೇಬೀಡು
    Jan 9, 2019 Reply

    ಕಾಲವೆಂಬುದು ಹುಟ್ಟಿ ಸಾಯುವ ಜೀವಿಗಷ್ಟೇ ಹೊರತು ಲಿಂಗಕ್ಕಲ್ಲ. ತುಂಬಾ ಅರ್ಥಪೂರ್ಣ ಲೇಖನ.

  3. Dr. Mallesh
    Jan 9, 2019 Reply

    It is difficult to understand your well composed article. Three routes religious, scientific and rational, all of which have confronted ‘time’ are mentioned here supported by quotes of great scholars. It is very difficult to write conclusively and convincingly on the concept of time as it is so queer. ‘Everybody knows time but nobody knows how to define it’ is an oft-quoted sentence in the scientific world. So pl don’t be disappointed. Your writing is honest and sincere.
    -Dr.Mallesh, Mysuru

  4. G.B.Patil
    Jan 10, 2019 Reply

    Your writing on time is precious,but it is not for the ordinary reader, only philosopher and high ranking readers can digest your wonderful vocabulary and hidden treasure.
    PEN something for ordinary readers like me.

  5. Sadananda Shivalli
    Jan 13, 2019 Reply

    ಕಾಲನೆಂಬ ಜಾಲಗಾರನ ಮಾಯಾ ಜಾಲದೊಳಗೆ ಕರೆದೊಯ್ದ ಲೇಖನ ಪ್ರಬುದ್ಧವಾಗಿದೆ. ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ. ನಾನೂ ಇನ್ನೊಮ್ಮೆ ಓದಿ ಕಾಮೆಂಟ್ ಹಾಕ್ತೀನಿ, ಡಿಟೇಲಾಗಿ.

  6. ನಿರ್ಮಲಾ ಜ್ಯೋತಿ
    Jan 13, 2019 Reply

    ಹೋದ ವರ್ಷ ನೀವು ಕಾಲದ ಬಗ್ಗೆ ಬರೆದ ‘ಹೊತ್ತು ಹೋಗದ ಮುನ್ನ’ ನನಗೆ ತುಂಬಾ ಹಿಡಿಸಿತ್ತು. ಅದರ ಮುಂದುವರೆದ ಭಾಗದಂತಿದೆ ಇಲ್ಲಿಯ ವಿಚಾರ. ಪ್ರಭುದೇವರ ವಚನ (ಕೊನೆಗೆ ಉಲ್ಲೇಖಿಸಿದ್ದು)ವನ್ನು ವಿವರಿಸಿದ್ದರೆ ನನ್ನಂಥವರಿಗೆ ಹೆಚ್ಚು ಅನುಕೂಲವೆನಿಸುತ್ತಿತ್ತು.
    ನಿರ್ಮಲಾ ಜ್ಯೋತಿ, ಬೆಂಗಳೂರು

  7. ಸುಜಾತಾ ಕುಣಿಗಲ್
    Jan 20, 2019 Reply

    ಕಾಲದ ಮೇಲೆ ಪುಸ್ತಕವನ್ನೇ ಬರೆಯುವಷ್ಟು ನಿಮಗೆ ಗೊತ್ತಿದೆ ಅನ್ನಿಸಿತು. ಲೇಖನ ಓದುತ್ತಾ ಹಾಗೆಯೇ ಇನ್ನೂ ತಿಳಿದುಕೊಳ್ಳಬೆಕೆನ್ನುವ ಹುಚ್ಚು ಹಿಡಿಯುತ್ತದೆ. ನೀವ್ಯಾಕೆ ಕಾಲದ ಪುಸ್ತಕ ಬರೆಯಬಾರದು?
    ಸುಜಾತಾ ಕುಣಿಗಲ್

  8. Nagaraju M.P
    Jan 28, 2019 Reply

    ಲೇಖನ ತುಂಬಾ ಘನವಾಗಿದೆ, ಅದ್ಭುತವಾಗಿದೆ, ಮತ್ತೊಮ್ಮೆ ಓದಲು ಪ್ರೇರೇಪಿಸುತ್ತದೆ. ಅಕ್ಕಾ, ತಿಂಗಳು ತಿಂಗಳು ನಿಮ್ಮ ಲೇಖನ ಓದಲು ಕಾಯುವಂತಾಗುತ್ತದೆ.
    ನಾಗರಾಜು ಎಂ ಪಿ

  9. ರವಿ ಪೂಜಾರಿ, ಭದ್ರಾವತಿ
    Jan 28, 2019 Reply

    ಚಿಂತನಶೀಲ ಬರವಣಿಗೆ ನಿಮ್ಮದು, ಬೆಳಕು ಮತ್ತು ಕಾಲ ನಿಮ್ಮನ್ನು ಕಾಡಿದಂತೆ ನನ್ನನ್ನೂ ಕೆದಕುತ್ತವೆ. ಬದುಕನ್ನು ಇವುಗಳ ಹಿನ್ನೆಲೆಯಲ್ಲಿ ತಿಳಿಯಲು ಮನಸ್ಸು ತುಡಿಯುತ್ತದೆ. ದಯವಿಟ್ಟು ಪುಸ್ತಕ ಬರೆಯಿರಿ.

  10. sharada A.M
    Jan 28, 2019 Reply

    ಎಂದಿನಂತೆ ಮತ್ತೊಂದು ಅದ್ಭುತ ಲೇಖನ. ತುಂಬಾ ತುಂಬಾ ಚೆನ್ನಾಗಿದೆ.

  11. ಅಶೋಕ್ ಜಾಲಿಹಾಳ
    Jan 28, 2019 Reply

    ಎಷ್ಟು ವಿಷಯಗಳನ್ನು ಉಲ್ಲೇಖಿಸಿದ್ದೀರಿ, ಲೇಖನವು ಅಪೂರ್ವ ಮಾಹಿತಿಯ ಕಣಜ ಎಂದು ಭಾಸವಾಗುತ್ತದೆ. “ಎಲೆಯ ತುದಿಯ ಇಬ್ಬನಿಯಂತೆ ಕಾಲದ ಅಲಗಿನ ಮೇಲೆ ನಿನ್ನ ಬದುಕು ಹಗುರಾಗಿ ನರ್ತಿಸಲಿ ಬಿಡು” ಟಾಗೋರರ ಮಾತು ಕಾಲದ ನಶ್ವರತೆಯ ನಡುವೆ ತಂಪು ಕೊಟ್ಟಿತು.

  12. Ganesh Ganiga
    Jan 28, 2019 Reply

    ಕಾಲದ ಬಗೆಗೆ ಶರಣರ ನಿಲುವನ್ನು ತಿಳಿಸುವ ವಚನಗಳನ್ನು ಅದ್ಭುತವಾಗಿ ನಿರೂಪಿಸಿದ್ದೀರಿ. ಓದುತ್ತಾ ಓದುತ್ತಾ ನನ್ನನ್ನೇ ಮರೆತುಹೋದೆ, ಅಕ್ಕಾ, ಕಾಲದ ಹಿಂದೆ ನಾವು ಓಡುತ್ತಿದ್ದೇವೆಯೋ, ಕಾಲ ನಮ್ಮನ್ನು ದಬ್ಬುತ್ತಾ ಒಯ್ಯುತ್ತಿದೆಯೋ ನಿಜಕ್ಕೂ ಜಟಿಲ ಪ್ರಶ್ನೆ. ಚಿಂತನಶೀಲ ಬರವಣಿಗೆಗೆ ಶರಣುಗಳು.

  13. ಬಸವರಾಜ ಹಂಡಿ
    Feb 1, 2019 Reply

    ಯಾವದನ್ನು ಶಬ್ದಗಳಲ್ಲಿ/ವಾಕ್ಯಗಳಲ್ಲಿ ಹಿಡಿಯಲು ಆಗುವದಿಲ್ಲೊ ಅಂತದನ್ನು ಮಂಗಳಾ ಶರಣಿಯರು ಹಿಡಿಯಲಿಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಿಡಿಯಬೇಕು ಅಂತ ಶಬ್ದಗಳ ಸರಪಳಿಯನ್ನು ಚಾಚುತಿದ್ದಾರೆ ಆದರೆ ಅದು ಸರಪಳಿಯಿಂದ ತಪ್ಪಿಸಿಕೊಳ್ಳುತ್ತಿದೆ. ಇನ್ನೇನು ಸೋಲು ಹತ್ತಿರ ಬರಲು, ವಚನಗಳ ಆಶ್ರಯದಿಂದ ಅದನ್ನು ಶಬ್ದಗಳಲ್ಲಿ ಕಟ್ಟಿಹಾಕಲು ತಕ್ಕ ಮಟ್ಟಿಗೆ ಯಶ್ವಿಸಿ ಆಗಿದ್ದಾರೆ.

    ಸಮಯ ಸಮಯ ಸಮಯ…. ಇದನ್ನು ಹೇಗೆ ವ್ಯಾಖ್ಯಾನಸಲು ಸಾಧ್ಯ. ಸಮಯದ ವ್ಯಾಖ್ಯಾನ ಸಮಯದಲ್ಲಿ ಬಂದಿತವಾಗಿದೆ. ನಾನು ಈಗ ಬರೆಯುವದು ಸಹ ಸಮಯದಿಂದ ಆವರಿಸಿಕೊಂಡಿದೆ.
    ನಮ್ಮಲ್ಲಿ ಉದಯಿಸುವ ವಿಚಾರಗಳು ಸಹ ಸಮಯದಿಂದ ಬಂಧನಕ್ಕೆ ಒಳಗಾಗಿವೆ.

    ಮಂಗಳಾ ಶರಣಿಯರು ಎಲ್ಲ ಲೇಖನಗಳಲ್ಲಿ ಲೇಖನದ ವಿಷಯವನ್ನು ಪಾಶ್ಚಿಮಾತ್ಯ ತಜ್ಞರಿಂದ, ವಿಜ್ಞಾನಿಗಳಿಂದ ಹಾಗು ಬುದ್ಧರಿಂದ ಅಳೆದು ನೋಡುತ್ತಾರೆ. ಕೊನೆಗೆ ಬರುವದು ಶರಣರು ಹಾಗು ಶರಣರು ವಚನಗಳು. ವಚನಗಳಿಂದ ಆ ವಿಷಯಗಳ ಮೇಲೆ ಬೆಳಕು ಬಿದ್ದು ಆ ವಿಷಯದ ರಹಸ್ಯ ನಮಗೆ ಗೋಚರಿಸುತ್ತದೆ.

    ಶರಣರು ಅರಿಯಬಾರದ ಸೃಷ್ಟಿಯ ರಹಸ್ಯವನ್ನು ಕೇವಲ 5-6 ಸಾಲಿನ ವಚನಗಳಲ್ಲಿ ಅದನ್ನು ನಮಗೆ ಸ್ಪಷ್ಟವಾಗಿ ಅನುಭವಕ್ಕೆ ಸಾಧ್ಯವಾಗುವ ಮಟ್ಟಿಗೆ ತಿಳಿಸಿಕೊಡುತ್ತಾರೆ.
    ಹಡಪದ ಅಪ್ಪಣ್ಣ ಹಾಗು ಅಲ್ಲಮ ಪ್ರಭುದೇವರ ವಚನಗಳ ಎದುರಿಗೆ ಸಮಯ ಸೋತು ತನ್ನ ನಿಜವಾದ ಬಣ್ಣವನ್ನು ಬಿತ್ತರಿಸುತ್ತಿದೆ.

    ಮಂಗಳಾ ಶರಣಿಯರ ಈ ಲೇಖನ ಬಹಳ ಉತ್ಕೃಷ್ಟವಾಗಿ ಮೂಡಿಬಂದಿದೆ. ಬಹಳ ಸಂಕೀರ್ಣವಾದ ವಿಷಯವನ್ನು ಬಹಳ ಶ್ರಮಪಟ್ಟು ವಿಷಯಕ್ಕೆ ತಕ್ಕಹಾಗೆ ಲೇಖನವನ್ನು ಬರೆದಿದ್ದಾರೆ.

    ನಮ್ಮೆಲ್ಲ ಬಸವ ಅನುಯಾಯಿಗಳಿಂದ ಅತಿ ವಿರಳವಾದ ಜ್ಞಾನ ದಾಸೋಹಕ್ಕೆ ದಾನ್ಯವಾಗಗಳು ಹಾಗು ಶರಣು ಶರಣಾರ್ಥಿಗಳು ???

  14. ರುದ್ರಪ್ಪ ಪಿ
    Feb 2, 2019 Reply

    ಲೇಖನ ಅಂತರಂಗದ ಪಯಣದಲ್ಲಿ ಇರುವವರಿಗೆ ಚಿಂತನೆಗೆ ಹಚ್ಚುತ್ತದೆ. ಕಾಲ ಆದಿಯ ಪ್ರಾರಂಭವೇಣಿಸಿದರೆ ಅನಾದಿಯಲ್ಲಿ ಕಾಲದ ಗಣಿಕೆ ಇಲ್ಲ. ಅನಾದಿ ವಸ್ತು ತನ್ನ ವಿಸ್ತರದ ಪ್ರಕ್ರಿಯೆಯ ಬಿಂದು ಸಮಯವೆಂದು ಕರೆದಿರಬಹುದೇ?ಏಕೆಂದರೆ ಕಾಲ ಮತ್ತು ಸಮಯ ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಬಳಸುವದುಂಟು. ಅವುಗಳು ನಿಜವಾಗಿ ಒಂದು ನಿಲುಕದ ಬಿಂದು,ಇನ್ನೊಂದು ಆದಿಯ ಪ್ರಕ್ರಿಯೆ ಅಳೆಯುವ ಸಾಧನ ಎನಿಸುತ್ತದೆ.ಇದರ ಬಗ್ಗೆ ಚಿಂತನೆಗಳು ಬರಲಿ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುಪಥ
ಗುರುಪಥ
January 4, 2020
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ನನ್ನ ಶರಣರು…
ನನ್ನ ಶರಣರು…
April 9, 2021
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
Copyright © 2023 Bayalu