Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
Share:
Articles December 6, 2020 ಹೆಚ್.ವಿ. ಜಯಾ

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು

“ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ”
ಶರಣರು ಕೈಲಾಸದ ಪರಿಕಲ್ಪನೆಯನ್ನು ತಳ್ಳಿಹಾಕಿದ್ದರು.
“ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ. ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ. ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು. ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ. ಇದರಾಡಂಬರವೇಕಯ್ಯಾ? ಎಮ್ಮ ಪುರಾತರಿಗೆ ಸದಾಚಾರದಿಂದ, ಲಿಂಗಾಂಗ ಸಾಮರಸ್ಯವ ತಿಳಿದು, ನಿಮ್ಮ ಪಾದ ಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ”
ಅಜ್ಞಾನ ಮೂಢನಂಬಿಕೆಯಿಂದ ಕೈಲಾಸವನ್ನು ಬಯಸುವವರಿಗೆ ನೇರವಾಗಿ ಸಿದ್ದರಾಮೇಶ್ವರರು ಹೇಳುತ್ತಾರೆ- ಕೈಲಾಸವೆನ್ನುವಂತಹದ್ದು ಈ ಭೂಮಿಯಲ್ಲಿರುವ ಒಂದು ಹಾಳು ಬೆಟ್ಟ. ಅದು ಚಂದ್ರಶೇಖರ ಎನ್ನುವ ಹೆಡ್ಡ ಮತ್ತು ಜೀವಗಳ್ಳ ಮುನಿಗಳು ವಾಸ ಮಾಡುತ್ತಿರುವ ಸ್ಥಳ. ಇಂಥ ಕೈಲಾಸವನ್ನು ಪಡೆಯವ ಹಂಬಲವೇಕೆ? ನಮ್ಮ ಪುರಾತರು ಸಾಧಿಸಿರುವುದು ಸದಾಚಾರ. ಲಿಂಗಾಂಗ ಸಾಮರಸ್ಯ ಸಾಧ್ಯವಾಗಲು ಸದಾಚಾರದ ಅನುಷ್ಠಾನ ಬೇಕು. ಅಂತರಂಗದ ಕ್ರಿಯೆಗಳನ್ನು ಶುಧ್ದಗೊಳಿಸುವ ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರ, ಸತ್ಯಾಚಾರ, ನಿತ್ಯಾಚಾರ, ಧರ್ಮಾಚಾರ ಮತ್ತು ಸಂಪತ್ತಿನಾಚಾರ, ಎಂಬ ಏಳು ಬಗೆಯ ನಿಯಮಗಳನ್ನು ಅಳವಡಿಸಿಕೊಂಡರೆ, ಅದೇ ಸದಾಚಾರ. ಅದೇ ಬಯಲಾಗುವ ಹಾದಿ. ಹಾಗೆ ಬಯಲಾಗುವ ಸಾಧ್ಯತೆಯನ್ನು ತೋರುವ ತಾಣವೇ ಇಲ್ಲಿ ಸಿದ್ಧರಾಮೇಶ್ವರರು ಹೇಳುವ ಸದಾಚಾರದ ಕೈಲಾಸ.
ಹೀಗೆ ಪೌರಾಣಿಕ ಕೈಲಾಸವನ್ನು ಶರಣರು ನೇರವಾಗಿ ದಿಕ್ಕರಿಸಿದರು. ನಿಜವಾದ ಕೈಲಾಸವನ್ನು ಕಲ್ಯಾಣದಲ್ಲಿಯೇ ನಿರ್ಮಾಣ ಮಾಡಿದರು. ಕಲ್ಯಾಣವೆಂದರೆ ಕೇವಲ ಒಂದು ಊರು ಮಾತ್ರವಲ್ಲ. ಅದು ವ್ಯಕ್ತಿಯ ಕಲ್ಯಾಣ, ಸಮಾಜದ ಕಲ್ಯಾಣ ಮತ್ತು ಇಡೀ ಜಗತ್ತಿನ ಕಲ್ಯಾಣ.
“ಭಕ್ತಿಯೆಂಬ ಪಿತ್ತ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ಪಾಪಾತ್ಮರ ಕಂಡು ಎನ್ನ ಮನ ನಾಚಿತ್ತು” ಎಂದು ವ್ಯಂಗ್ಯವಾಗಿ ಚನ್ನಬಸವಣ್ಣನವರು ಹೇಳುತ್ತಾರೆ. ಭಕ್ತಿಯ ಪರಾಕಾಷ್ಟೆಯಿಂದ ಕೈಲಾಸವನ್ನು ಹುಡುಕಿಕೊಂಡು ಹೋಗುವವರನ್ನು ಪಾಪಾತ್ಮರು ಎಂದು ಹೇಳುವುದರ ಜೊತೆಗೆ ಅಂಥವರನ್ನು ಕಂಡು ಮನ ನಾಚಿತ್ತು ಎನ್ನುತ್ತಾರೆ. ದೇವರನ್ನು ಹುಡುಕಿ ಯಾವ ಬೆಟ್ಟ ಗುಡ್ಡಗಳನ್ನೂ ಅಲೆಯಬೇಕಿಲ್ಲ. ಶಿವನು ನಮ್ಮೊಳಗೇ ಇದ್ದಾನೆ, ನಾವೆಲ್ಲ ಶಿವಾಂಶಿಕರೇ ಎನ್ನುತ್ತಾರೆ. ಅದಕ್ಕೆ ಬಸವಣ್ಣನವರು “ಕಾಯವೇ ಕೈಲಾಸ”ವೆಂದರು.
ಸತ್ಯ ಶರಣರ ನೆಲೆಯಾದ ಕಲ್ಯಾಣದಲ್ಲಿ ಬಸವಣ್ಣನವರನ್ನು ಕಾಣುವ ತವಕದಲ್ಲಿ ಅಕ್ಕಮಹಾದೇವಿ ಕಲ್ಯಾಣಕ್ಕೆ ಆಗಮಿಸುತ್ತಾರೆ. ಕಲ್ಯಾಣವನ್ನು ಕಂಡು ಹರ್ಷದಿಂದ ಇಲ್ಲಿಗೆ ಯಾರ್ಯಾರು ಬರಬಹುದು ಯಾರು ಬರಲಾಗದು ಎಂದು ಪಟ್ಟಿ ಮಾಡಿದಂತೆ ಹೇಳುತ್ತಾರೆ-
“ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು… ಹೊಗಬಾರದು, ಅಸಾಧ್ಯವಯ್ಯಾ. ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು. ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು. ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು. ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು”
ಗುರು ಬಸವಣ್ಣನವರು ಕಟ್ಟಬಯಸಿದ ಕಲ್ಯಾಣ ರಾಜ್ಯದ ವರ್ಣನೆಯನ್ನು ಅಕ್ಕಮಹಾದೇವಿಯವರು ಮಾಡುತ್ತಾ ಕಲ್ಯಾಣ ರಾಜ್ಯದ ರೂಪು ರೇಷೆಗಳೇನು ಎಂಬುದನ್ನು ಹೇಳುತ್ತಾ ಅಲ್ಲಮಪ್ರಭು, ಸಿದ್ದರಾಮೇಶ್ವರ, ಅಕ್ಕಮಹಾದೇವಿ ಇವರೆಲ್ಲ ಕಲ್ಯಾಣಕ್ಕೆ ಬಂದು, ತಮ್ಮ ಬದುಕನ್ನು ಕಲ್ಯಾಣ ಮಾಡಿಕೊಂಡರು. ಕರ್ಮಯೋಗಿಯಾಗಿದ್ದ ಸಿಧ್ದರಾಮೇಶ್ವರರು ಬಸವಣ್ಣನವರ ಕಲ್ಯಾಣಕ್ಕೆ ಬಂದು, ಅನುಭವ ಮಂಟಪದಲ್ಲಿದ್ದು ಶಿವಯೋಗಿ ಸಿದ್ದರಾಮೇಶ್ವರರಾದರು. ಅಲ್ಲಮ ಪ್ರಭುದೇವರು ಬಸವಣ್ಣನವರು ನಿರ್ಮಾಣ ಮಾಡಿದ ಶೂನ್ಯ ಪೀಠದ ಮೊದಲ ಅಧಿಕಾರಿಯಾದರು. ಅಕ್ಕಮಹಾದೇವಿ ಅನುಭವ ಮಂಟಪದಲ್ಲಿದ್ದುಕೊಂಡು ಜಗದಕ್ಕ, ಜಗನ್ಮಾತೆ ಎನಿಸಿಕೊಂಡರು. ಇಂತಹ ಕಲ್ಯಾಣ ಮತ್ತು ಕಲ್ಯಾಣದ ಅನುಭವ ಮಂಟಪ ಅಸಂಖ್ಯಾತ ಶರಣರನ್ನು ಬರಮಾಡಿಕೊಂಡಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭೂಭಾಗದಿಂದ ಸಾಧಕರು, ಸಿಧ್ಧರು, ಮುಮುಕ್ಷುಗಳು ಕಲ್ಯಾಣದತ್ತ ಧಾವಿಸಿ ಬಂದರು.
ಕಲ್ಯಾಣವೆಂಬುದು ಇನ್ನಾರಿಗೂ ಹೊಗಬಾರದು ಅಸಾಧ್ಯವಯ್ಯ- ಹೊಗಬಾರದು ಎಂದರೆ ಹೋಗಬಾರದು ಎಂದಲ್ಲ ಹೋಗಲು ಸುಲಭ ಸಾಧ್ಯವಾಗುವುದಿಲ್ಲ ಎಂದು ಅರ್ಥ. ಏಕೆಂದರೆ ಕಲ್ಯಾಣಕ್ಕೆ ಹೋಗಬೇಕಾದರೆ ಕೆಲವು ಗುಣಗಳನ್ನು ಅಳವಡಿಸಿಕೊಂಡಿರಬೇಕು. ಅವು ಯಾವುವೆಂದರೆ-
“ಆಸೆ ಆಮಿಷವ ಅಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು”- ಕಲ್ಯಾಣಕ್ಕೆ ಹೋಗಲು ಬಯಸುವವರು ಆಸೆ ಮತ್ತು ಆಮಿಷಗಳನ್ನು ಅಳಿದಿರಬೇಕು. ಆಸೆ ಅಂದರೆ ತನ್ನ ಮನಸ್ಸಿನಲ್ಲಿಯೇ ಹುಟ್ಟುವ ಬಯಕೆಗಳು. ಆಮಿಷವೆಂದರೆ ಬೇರೆಯವರು ಒಡ್ಡುವ ಪ್ರಲೋಭನೆಗಳಿಗೆ ಒಳಗಾಗುವುದು. ಆಸೆಗಳು ಸ್ವಹಿತಾಸಕ್ತಿಯನ್ನು ಹೆಚ್ಚಿಸುತ್ತವೆ. ಆಮಿಷಗಳಿಗೆ ಒಳಗಾಗುವ ಮನ ಚಂಚಲವಾಗಿರುತ್ತದೆ. ಚಾಂಚಲ್ಯ ಮತ್ತು ಸ್ವಹಿತಾಸಕ್ತಿಗಳನ್ನು ದಾಟಿದವರು ಮಾತ್ರವೇ ಇತ್ತ ಅಡಿ ಇಡಬಹುದು.
“ಒಳಹೊರಗೆ ಶುದ್ದವಾದವಂಗಲ್ಲದೆ ಕಲ್ಯಾಣವ ಹೊಗಬಾರದು”- ಹೊರಗೂ ಕಲ್ಯಾಣ ಒಳಗೂ ಕಲ್ಯಾಣವೆಂದರೆ ಅಂತರಂಗ ಶುದ್ದಿ ಮತ್ತು ಬಹಿರಂಗ ಶುದ್ಧಿ. ಕಲ್ಯಾಣಕ್ಕೆ ಹೋಗುವವರು ಒಳಗೂ ಶುಧ್ದವಾಗಿರಬೇಕು ಹೊರಗೂ ಶುಧ್ದವಾಗಿರಬೇಕು. ಆಚಾರದಿಂದ ಬಹಿರಂಗ ಶುಧ್ದವಾದರೆ, ವಿಚಾರದಿಂದ ಅಂತರಂಗ ಶುದ್ದವಾಗಿರಬೇಕು. ಅಂದರೆ ನಮ್ಮ ವರ್ತನೆಗಳು ಮತ್ತು ಮನಸ್ಸು ಎರಡೂ ಪಾರದರ್ಶಕವಾಗಿರಬೇಕು. ನಡೆ-ನುಡಿಗಳ ನಡುವೆ ಅಂತರವಿರಬಾರದು.
“ನೀನಾನೆಂಬುದ ಹರಿದವಂಗಲ್ಲದೆ ಕಲ್ಯಾಣವ ಹೊಗಬಾರದು”- ನಾನು ಎಂಬ ಅಹಂ ಭಾವ ಅಳಿದು ದಾಸೋಹಂಭಾವ ಬೆಳೆದಿರಬೇಕು. ನಾನು ಸುಖವಾಗಿದ್ದರೆ ಇಡೀ ಜಗತ್ತೇ ಸುಖವಾಗಿರುತ್ತದೆ ಎಂದು ಭಾವಿಸುವವರು ಸ್ವಾರ್ಥಿಯಾಗಿರುತ್ತಾರೆ. ಇಡೀ ಸಮಾಜ ಚನ್ನಾಗಿದ್ದರೆ ನಾನು ಚನ್ನಾಗಿರುತ್ತೇನೆ ಎಂಬ ಭಾವನೆಯಿಂದ ಕಲ್ಯಾಣ ಪ್ರವೇಶ ಮಾಡಬೇಕು.
“ಒಳಗೆ ತಿಳಿದು… ನಮೋ ನಮೋ ಎನುತಿರ್ದೆನು.”- ಒಳಗೆ ತಿಳಿದು, ಅಂದರೆ ಎರಡು ಅರ್ಥದಲ್ಲಿ ನೋಡಬಹುದು- ತನ್ನನ್ನು ತಾನು ಅರಿಯುವುದು. ನಾನು ಯಾರು? ನನ್ನ ಸ್ವರೂಪವೇನು? ನಾನು ಎಲ್ಲಿಂದ ಬಂದೆ? ನನ್ನ ಮುಂದಿನ ಗುರಿ ಏನು? ಎಂದು ಪ್ರಶ್ನಿಸಿಕೊಂಡು ತನ್ನೊಳಗನ್ನು ಅರಿಯುವುದು. ಇವು ಪ್ರತಿಯೊಬ್ಬರೂ ಹಾಕಿಕೊಳ್ಳಬೇಕಾದ ಮೂಲಭೂತ ಪ್ರಶ್ನೆಗಳು. ಇನ್ನೊಂದು ಅರ್ಥದಲ್ಲಿ ಒಳಗನ್ನು ತಿಳಿ ಮಾಡಿಕೊಳ್ಳುವುದು. ಮನಸ್ಸು ನಿರ್ಮಲವಾಗುವುದು. ಹೀಗೆ ತಿಳಿಯಾದರೆ ತನ್ನೊಳಗನ್ನು ನೋಡುವುದು ಸಾಧ್ಯವಾಗುತ್ತದೆ. ಮನಸ್ಸು ಕಲುಷಿತಗೊಂಡಿದ್ದರೆ ಅಂತರಂಗ ತನಗೆ ಕಾಣಿಸುವುದಿಲ್ಲ. ಅಂತಹವರು ಕಲ್ಯಾಣ ರಾಜ್ಯ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ.
“ಉಭಯ ಲಜ್ಜೆಯಳಿದು” -ಕಲ್ಯಾಣ ರಾಜ್ಯದಲ್ಲಿ ಲಿಂಗ ಭೇದವಿರಲಿಲ್ಲ. ಹೆಣ್ಣು-ಗಂಡು ಇಬ್ಬರೂ ಸಮಾನರು ಅಲ್ಲಿ. ತಾನು ಶರಣನಾದ ಬಳಿಕ ಹೆಣ್ಣಾದವಳು ಹೆಣ್ಣು ಅನ್ನುವ ಭಾವವಳಿದಾಗ ಪುರುಷನ ಕಂಡು ನಾಚಿಕೊಳ್ಳುವುದಿಲ್ಲ. ಅದೇ ರೀತಿ ಪುರುಷನಾದವನು ತಾನು ಗಂಡು ಅನ್ನುವ ಭಾವವಳಿದಾಗ ಹೆಣ್ಣುಮಕ್ಕಳನ್ನು ಕಂಡಾಗ ಮನಸ್ಸು ವಿಕಾರವಾಗುವುದಾಗಲಿ, ನಾಚಿಕೊಳ್ಳುವುದಾಗಲಿ ಮಾಡುವುದಿಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಅವರಲ್ಲಿ ಇನ್ನೂ ಶರಣತ್ವ ಅಳವಟ್ಟಿಲ್ಲ ಎಂದರ್ಥ. ಹೆಣ್ಣು-ಗಂಡು ಭಾವವಳಿಯದೇ ಕಲ್ಯಾಣದೊಳಗೆ ಪ್ರವೇಶ ಸಾಧ್ಯವಿಲ್ಲ.
ಕಲ್ಯಾಣ ರಾಜ್ಯದ ಪ್ರಜೆಯಾಗುವುದೆಂದರೆ ನಿಸ್ವಾರ್ಥಿಯಾಗುವುದು. ಅಕ್ಕಮಹಾದೇವಿಯವರಿಗೆ ಈ ಎಲ್ಲ ಗುಣಗಳೂ ಅಳವಟ್ಟಿದ್ದರಿಂದ ಕಲ್ಯಾಣವನ್ನು ಮನತುಂಬಿ ಪ್ರವೇಶಿಸಿದ್ದರು.
“ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ, ನಿಮ್ಮ ಶರಣರ ಸೂಳ್ನುಡಿಯ ಒಂದರೆ ಗಳಿಗೆಯಿತ್ತಡೆ ನಿನ್ನನಿತ್ತೆ ಕಾಣಾ! ರಾಮನಾಥ” ಎನ್ನುವಲ್ಲಿ ಆನೆ, ಸಂಪತ್ತು, ಅಧಿಕಾರ ಇದಾವುದೂ ಬೇಡ. ಶರಣರ ಹೃದಯದ ಅನುಭಾವದ ನುಡಿಗಳನ್ನು ಕೊಟ್ಟರೆ ಸಾಕು ಎಂದು ಶರಣರ ಸೂಳ್ನುಡಿಯಲ್ಲಿ ಕೈಲಾಸವನ್ನು ಕಂಡರು ಕಲ್ಯಾಣದ ಶರಣರು!
“ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನ ಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ”
ಕಲ್ಯಾಣವೇ ಹಣತೆಯಾಗಿ ಅಲ್ಲಿ ನೆರೆದಿದ್ದ ಎಲ್ಲ ಶರಣರ ಭಕ್ತಿ ರಸವೇ ಎಣ್ಣೆಯಾಗಿ ಅಂತರಂಗ ಬಹಿರಂಗ ಶುದ್ದವಾದಂತಹ ಅಚಾರವೇ ಬತ್ತಿಯಾಗಿ, ಆ ಬತ್ತಿಗೆ ಬಸವಣ್ಣ ಎನ್ನುವ ಮಹಾಜ್ಯೋತಿ ಮುಟ್ಟಿದಾಗ ಅಲ್ಲಿ ಅರಿವಿನ ಮಹಾಬೆಳಕು ಪ್ರಕಾಶಿಸಿತು. ಆ ಪ್ರಜ್ವಲಿಸುವ ಮಹಾ ಬೆಳಗಿನೊಳಗೆ ಅಸಂಖ್ಯಾತ ಭಕ್ತರ ಸಮೂಹವೇ ಬಂದು ಸೇರಿತು. ಭೂಲೋಕದ ಈ ಕಲ್ಯಾಣ ಪೌರಾಣಿಕ ಕೈಲಾಸವನ್ನು ನಾಚಿಸುವಂತಿತ್ತು. ಬಸವಾದಿ ಶರಣರು ನೆಲೆಸಿದ್ದ ಕ್ಷೇತ್ರವೇ ಅವಿಮುಕ್ತ ಕ್ಷೇತ್ರವಾಯಿತು. ಮುಕ್ತಿ ಬಯಸಿ ಯಾರೂ ಎಲ್ಲಿಗೂ ಅಲೆದುಕೊಂಡು ಹೋಗಬೇಕಾಗಿಲ್ಲ. ಶಿವಭಕ್ತರಿದ್ದ ದೇಶವೇ ಪಾವನ, ಅವರು ವಾಸಮಾಡುವ ಮನೆಯಂಗಳವೇ ವಾರಣಾಸಿ. ಆದ್ದರಿಂದ ಪ್ರಭುದೇವರು “ಇಂತಹ ಮಹಾತ್ಮ ಗುರು ಬಸವಣ್ಣನವರ ಕಂಡು ಬದುಕಿದೆ” ಎಂದು ಸಿದ್ದರಾಮೇಶ್ವರರಿಗೆ ಹೇಳುತ್ತಾರೆ.
ಇದಕ್ಕೆ ಪೂರಕವಾಗಿ ಅಕ್ಕಮಹಾದೇವಿಯವರೂ ಒಂದು ವಚನದಲ್ಲಿ ಹೇಳುತ್ತಾರೆ- “ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ. ಅಯ್ಯಾ, ನಿಮ್ಮ ಶರಣರಿದ್ದ ಪುರವೆ ಕೈಲಾಸಪುರವಯ್ಯಾ. ಅಯ್ಯಾ, ನಿಮ್ಮ ಶರಣರು ನಿಂದುದೆ ನಿಜನಿವಾಸವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ, ಆನು ಸಂಗನ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು”
ಮೈಲಾರ ಬಸವ ಲಿಂಗ ಶರಣರು ತ್ರಿಪದಿಯಲ್ಲಿ ಹೀಗೆ ಬರೆದಿದ್ದಾರೆ-“ಹಲವು ಮಾತೇನು ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ ಜಲವೇ ಪಾವನ ತೀರ್ಥ ಸುಲಭ ಶ್ರೀ ಗುರುವೇ ಕೃಪೆಯಾಗು” ಎಂದು. ಸುಕ್ಷೇತ್ರಗಳಲ್ಲಿ ಸಿಗುವ ತೀರ್ಥಪ್ರಸಾದಗಳನ್ನು ಬಯಸಿ ಎಲ್ಲಿಗೂ ಅಲೆಯುವ ಅಗತ್ಯವಿಲ್ಲ. ಒಂದು ವೇಳೆ ಹೋದರೆ ನಮ್ಮಲ್ಲೇ ಇರುವ ಸಿಹಿನೀರಿನ ಸರೋವರವನ್ನು ಬಿಟ್ಟು, ಉಪ್ಪು ನೀರನ್ನು ಹುಡುಕಿಕೊಂಡು ಹೋದಂತಾಗುತ್ತದೆ. ಆದ್ದರಿಂದ ಶರಣರು ನೆಲೆಸಿರುವ ಸ್ಥಳವೇ ಕೈಲಾಸ, ಅವರು ಪಾದವಿಟ್ಟ ಧರೆಯೇ ಪಾವನ, ಅದೇ ಅವಿಮುಕ್ತ ಕ್ಷೇತ್ರ.
ಕಾಯಕ, ದಾಸೋಹ ತತ್ವಗಳಲ್ಲಿಯೇ ಕೈಲಾಸವಡಗಿದೆ. ಶರಣರು ಅನುಸರಿಸಿದ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳಲ್ಲಿಯೇ ಕೈಲಾಸ ಅಡಗಿದೆ. ಬಸವಣ್ಣನವರು ಮಾಡುತ್ತಿದ್ದ ಸಾಮಾಜಿಕ, ಧಾರ್ಮಿಕ ಕಾರ್ಯಗಳ ಚಿಂತನೆಗಳು ಎಲ್ಲೆಡೆ ಹರಡಿದ್ದವು. ಆ ಸಮಯದಲ್ಲಿ ಜ್ಞಾನದ ಮೇರು ಪರ್ವತಗಳಾದ ಪ್ರಭುದೇವರು ಮತ್ತು ಸಿಧ್ದರಾಮೇಶ್ವರರು ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಕಾಯಕವೇ ಕೈಲಾಸವನ್ನಾಗಿ ಮಾಡಿಕೊಂಡ, ಶರಣರನ್ನು ಕಂಡು ಪ್ರಭುದೇವರು ಮನತುಂಬಿ ಸಿದ್ದರಾಮೇಶ್ವರರಿಗೆ ಹೀಗೆ ಹೇಳುತ್ತಾರೆ-
“ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ! ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ, ರುದ್ರಗಣ ಪ್ರಮಥ ಗಣಂಗಳೆಲ್ಲರ ಹಿಡಿತಂದು ಅಮರ ಗಣಂಗಳೆಂದು ಹೆಸರಿಟ್ಟು ಕರೆದು, ಅಗಣಿತ ಗಣಂಗಳೆಲ್ಲರ ಹಿಡಿತಂದು, ಅಸಂಖ್ಯಾತರೆಂಬ ಹೆಸರಿಟ್ಟು ಕರೆದು, ಭಕ್ತಿಯ ಕುಳಸ್ಥಲವ ಶ್ರುತದೃಷ್ಟಪವಾಡದಿಂದ ಮರೆದು ತೋರಿ, ಜಗವರಿಯಲು ಶಿವಾಚಾರವ ಧ್ವಜವನೆತ್ತಿಸಿ ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಿಣಿಗೆಯಾದನು. ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು, ಎನ್ನ ಮನ ಉಬ್ಬಿಕೊಬ್ಬಿ ಓಲಾಡುತ್ತಿದ್ದೆನಯ್ಯಾ! ನಮ್ಮ ಗುಹೇಶ್ವರನ ಶರಣ ಸಂಗನ ಬಸವಣ್ಣನ ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯಾ”
ಈ ಜಗತ್ತೇ ಮಹಾಮನೆ. ಅನ್ಯಾಯ ಅತ್ಯಾಚಾರ, ದೌರ್ಜನ್ಯಗಳಿಂದ ಇದು ಹಾಳಾಗದಿರಲೆಂದು ಜಗತ್ತಿನ ಉದ್ದಾರಕ್ಕಾಗಿ ಒಬ್ಬ ಶರಣನಾಗಿ ಬಂದವರು ಬಸವಣ್ಣ. ಮೂಢನಂಬಿಕೆ, ಅಜ್ಞಾನ ಅಂಧಕಾರಗಳಲ್ಲಿ ಜನ ಮುಳುಗಿದ್ದಂತಹ ಕಾಲದಲ್ಲಿ ಬಸವಣ್ಣನವರು ಕಲ್ಯಾಣವೆನ್ನುವ ಶಿವಪುರವನ್ನು ಕೈಲಾಸವನ್ನಾಗಿ ಪರಿವರ್ತನೆ ಮಾಡಿದರು. ಆ ಕಲ್ಯಾಣವು ಕೈಲಾಸವನ್ನು (ಪುರಾಣದ ಕೈಲಾಸ) ನಾಚಿಸುವಂತಿತ್ತು. ರುದ್ರಗಣ ಅಂದರೆ ಶರಣ ಸಮೂಹ, ಪ್ರಮಥಗಣವೆಂದರೆ ಅಂಗಲಿಂಗ ಒಂದಾದ ಲಿಂಗಾಂಗ ಸಮರಸ ಪಡೆದಂತಹ ಶರಣ ಸಮೂಹ. ಇವರೆಲ್ಲರನ್ನು ಹಿಡಿದು ತಂದು ಅವರುಗಳಿಗೆ ಅಮರಗಣಂಗಳೆಂದು ಹೆಸರಿಟ್ಟರು. ಆ ಸಾಗರ ಸೇರಿದ ಲಕ್ಷಾಂತರ ಶರಣರನ್ನು ಅಸಂಖ್ಯಾತರೆಂದು ಹೆಸರಿಟ್ಟು ಕರೆದರು. ಕುಳಸ್ಥಳವೆಂದರೆ- ಭಾವ ಸ್ಥಲದಿಂದ ಭಕ್ತ ಸ್ಥಲದವರೆಗೆ ಪ್ರಕಟಕೊಳ್ಳುವ ಮೂವತ್ತಾರು ಸ್ಥಲಗಳು. ಅವು- ಅಂಗ ಸ್ಥಲಗಳು ಇಪ್ಪತೈದು, ಲಿಂಗಸ್ಥಲಗಳು ಹನ್ನೊಂದು. ಒಟ್ಟು ಮೂವತ್ತಾರು ಸ್ಥಲಗಳು. ಪಂಚ ವಿಂಶತಿ ತತ್ವಗಳು ಲಿಂಗೈಕ್ಯವಾಗಲೊಡನೆ ಲಿಂಗತತ್ವ ತಾವೂ ಒಂದರಲ್ಲೊಂದುಗೂಡಿ ಏಕಾರ್ಥವಾಗಿ ಕುಳಸ್ಥಳವಡಗಿತು. ಇಂತು ಕುಳಸ್ಥಲ, ಸ್ಥಲಕುಳವಡಗಲೊಡನೆ ಮಹಾಘನ ಪರಾತ್ಪರ ವಸ್ತು ದಿವ್ಯಲಿಂಗ ಸರ್ವಶೂನ್ಯವಾಯಿತು.
ಶೃತದೃಷ್ಟ: ಅಂದರೆ, ಪ್ರಮಾಣಗಳಲ್ಲಿ ಮೂರು ಪ್ರಕಾರಗಳಿವೆ. ೧.ಶಬ್ದ ಪ್ರಮಾಣ ೨.ಪ್ರತ್ಯಕ್ಷ ಪ್ರಮಾಣ ಮತ್ತು ೩.ಅನುಮಾನ ಪ್ರಮಾಣ. ೧. ಬರವಣಿಗೆ ವಿದ್ಯಾಭ್ಯಾಸ ಹೆಚ್ಚು ಪ್ರಚಲಿತವಿಲ್ಲದಿದ್ದ ಕಾಲದಲ್ಲಿ ಜನರು ಏನಾದರೂ ತಿಳಿದುಕೊಳ್ಳಬೇಕಿದ್ದರೆ ಅಕ್ಷರ ಬಲ್ಲವರಿಂದ ಓದಿಸಿ ಕೇಳಿಸಿಕೊಂಡು ತಿಳಿದುಕೊಳ್ಳುತ್ತಿದ್ದರು. ಇದು ಶಬ್ದಪ್ರಮಾಣ, ಶೃತ ಎನಿಸಿಕೊಂಡಿತು. ೨. ಪ್ರತ್ಯಕ್ಷ ಪ್ರಮಾಣವೆಂದರೆ ಕಣ್ಣಿನಿಂದ ಖುದ್ದಾಗಿ ನೋಡುವುದು. ಇದು ಕಣ್ಣಿನಿಂದ ನೋಡಿ ಪಡೆದ (ದೃಷ್ಟ) ಜ್ಞಾನಕ್ಕಷ್ಟೇ ಅನ್ವಯಿಸದೇ ಇತರ ಇಂದ್ರಿಯಗಳಿಂದ ಪಡೆದ ಜ್ಞಾನಕ್ಕೂ ಅನ್ವಯಿಸುತ್ತದೆ. ೩. ಅನುಮಾನ ಪ್ರಮಾಣ ಎಂದರೆ, ನಮಗೆ ಗೊತ್ತಿರುವ ಕೆಲವು ವಿಷಯಗಳಿಂದ ಗೊತ್ತಿಲ್ಲದ ವಿಷಯಗಳನ್ನು ತರ್ಕದ ಮೂಲಕ ಪಡೆದುಕೊಳ್ಳುವುದು. ಉದಾ: ಇಲ್ಲಿ ಪ್ರವಾಹ ಬಂದರೆ ಮೇಲಿನ ಪ್ರದೇಶದಲ್ಲಿ ಮಳೆ ಬಿದ್ದಿರಬಹುದೆಂದು ಊಹಿಸುವುದು.
ಪವಾಡ ಎನ್ನುವ ಪದ ಮೂಢಭಕ್ತರ ಕೈಗೆ ಸಿಲುಕಿ ಅದು ತನ್ನ ಅರ್ಥವನ್ನೇ ಬದಲಾಯಿಸಿಕೊಂಡಿರುವುದನ್ನು ನೋಡುತ್ತೇವೆ. ಇಲ್ಲಿ ಪವಾಡವೆಂದರೆ ಸಾಮಾನ್ಯರಿಂದ ಸಾಧ್ಯವಾಗದೇ ಇರುವ ಕೆಲಸವನ್ನು ಸಾಧ್ಯವಾಗುವಂತೆ ಮಾಡುವುದು. ಅಂದರೆ ಯಾರಿಂದಲೂ ಸಾಧ್ಯವಾಗದ ಕೆಲಸಗಳನ್ನು ಬಸವಣ್ಣನವರು ಮಾಡಿ ತೋರಿಸಿದರು. ಹೀಗೆ ಶೃತದೃಷ್ಟಪವಾಡದಿಂದ ಮೆರೆದು ತೋರಿ, ಪ್ರಕಾಶಿಸಿ, “ಜಗವರಿಯಲು ಶಿವಾಚಾರದ ಧ್ವಜವನೆತ್ತಿಸಿ” ಬಸವಣ್ಣನವರು ಕೊಟ್ಟಂತಹ ತತ್ವಗಳಲ್ಲಿ ಪಂಚಾಚಾರವೂ ಒಂದು. ಅದರಲ್ಲಿ ಶಿವಾಚಾರವೂ ಒಂದು. ಶಿವಾಚಾರವೆಂದರೆ ,ಸಾಮಾಜಿಕ ಸಮಾನತೆ, social justice. ಹುಟ್ಟಿನಿಂದಲೇ ಮೇಲು-ಕೀಳು ವಿಂಗಡಿಸುವುದಾಗಲೀ, ಹೆಣ್ಣು-ಗಂಡು ಎಂದು ವಿಂಗಡಿಸುವುದಾಗಲಿ, ವೃತ್ತಿಭೇದ, ಬಡವ-ಬಲ್ಲಿದನೆಂಬ ವರ್ಗಭೇದ ಮಾಡುವುದನ್ನು ಖಂಡಿಸಿ ಸರ್ವರೂ ಸಮಾನರು ಎಂದು ಎಲ್ಲರೂ ಧಾರ್ಮಿಕ ಸಂಸ್ಕಾರ ಪಡೆದು ಶರಣರಾಗಲು ಸ್ವತಂತ್ರರು ಎಂಬ ತತ್ವವನ್ನು ಶಿವಾಚಾರ ಪ್ರತಿಪಾದಿಸುತ್ತದೆ. ಸಮಾನತೆಯ ಶಿವಾಚಾರದ ಪತಾಕೆಯನ್ನು ಎತ್ತಿಹಿಡಿದರು.
“ಮರ್ತ್ಯ ಲೋಕ ಶಿವಲೋಕವೆರಡಕ್ಕೂ ನಿಚ್ಚಣಿಕೆಯಾದನು”-ಇಲ್ಲಿ ಮರ್ತ್ಯಲೋಕವೆಂದರೆ ಭವಿಗಳು, ಶಿವಲೋಕವೆಂದರೆ ಅಂಗ-ಲಿಂಗವರಡೂ ಒಂದಾದ ಶರಣರು. ಭವಿಗಳು ಭಕ್ತರಾಗುವ ಸಾಧನೆಯ ಮಾರ್ಗದಲ್ಲಿ ಬಸವಣ್ಣನವರು ಏಣಿಯಾದರು. ಇಂತಹ ಬಸವಣ್ಣನವರ ಮನೆಯೊಳಗಿದ್ದ ಶರಣ ಸಮೂಹ (ತಿಂಥಿಣಿ)ವನ್ನು ನೋಡಿ ತಮ್ಮ ಮನ ತುಂಬಿಬಂದಿದೆ ಎಂದು ಹರ್ಷದಿಂದ ಪ್ರಭುದೇವರು ಸಿಧ್ದರಾಮೇಶ್ವರರಿಗೆ ಹೇಳುತ್ತಾರೆ. ಈ ಶರಣನು(ಬಸವಣ್ಣನು) ಮಾಡಿರುವ ದಾಸೋಹದ ಘನವನ್ನು ನಾನು ಹೇಗೆ ವರ್ಣಿಸಲಿ ಎಂದು ಉದ್ಗಾರ ಮಾಡುತ್ತಾರೆ.
ಬಸವ ಪೂರ್ವದಲ್ಲಿ ಈ ನಾಡು ಹೇಗಿತ್ತು ಎಂದು ಹರಿಹರ ಕವಿ ಹೀಗೆ ಹೇಳುತ್ತಾನೆ: “ಪಾಶಂಡಿ ಭೂಮಿಯೊಳು ಶಿವಭಕ್ತಿಯನಾರಂಭಿಸಿ ಸಾಮರ್ಥ್ಯಮಂ ಬಿತ್ತಿ ಪ್ರತ್ಯಕ್ಷಂಗಳಂ ಬೆಳೆದು ಗಣ ಪರ್ವಂಗಳಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವ, ನಿಮ್ಮ ದೆಸೆಯಿಂದೆಮ್ಮ ಭಕ್ತಿ ಬಣ್ಣವೇರಿತು…” ಬಸವಣ್ಣನವರು ಬರುವುದಕ್ಕೆ ಮೊದಲು ಈ ಭೂಮಿ ಪಾಶಂಡಿಭೂಮಿ ಎಂದರೆ, ಕರಲು ಭೂಮಿ, ಒಂದು ಹುಲ್ಲು ಕಡ್ಡಿಯೂ ಬೆಳೆಯದಂತಹ ಸ್ಥಳ. ಅಂದರೆ ಸ್ವಲ್ಪವೂ ಶಿವಜ್ಞಾನದ ಗಂಧವಿಲ್ಲದ ಜಾಗವಾಗಿತ್ತಂತೆ. “ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು- ಸಗಣಕ್ಕೆ ಸಾಸಿರ ಹುಳು ಹುಟ್ಟವೆ ದೇವಾ ಕಾಡ ಮೃಗವೊಂದಾಗಿರಲಾಗದೆ, ದೇವಾ ಊರ ಮೃಗವೊಂದಾಗಿರಲಾಗದೆ, ಹರನೆ ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ- ವನವಾಸ, ನರವಿಂಧ್ಯ ಕಾಣಿರಣ್ಣಾ” ಹೀಗಿತ್ತು. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಬಂದು ಶಿವಭಕ್ತಿಯನ್ನು ಆರಂಬಿಸಿ ಹೃದಯವೆಂಬ ಹೊಲಗಳನ್ನು ಹಸನು ಮಾಡಿ ಶಕ್ತಿ ಸಾಮರ್ಥ್ಯವೆನ್ನುವ ಬೀಜವನ್ನು ಬಿತ್ತಿ ಅನುಭಾವದ ಬೆಳೆ ಬೆಳೆಯುವ ಶಕ್ತಿಯನ್ನು, ಚೈತನ್ಯವನ್ನು ಹೃದಯವೆಂಬ ಹೊಲದಲ್ಲಿ ಬಿತ್ತಿ “ಪ್ರತ್ಯಕ್ಷಂಗಳಂ ಬೆಳೆದು” ಭವಿ ಶರಣನಾಗುವ ಪ್ರತ್ಯಕ್ಷದ ಬೆಳೆ ತೆಗೆದವರು.
“ಉಪ್ಪರಗುಡಿ ತೋರಣ ಕಟ್ಟಿತ್ತು ಕಲ್ಯಾಣದಲ್ಲಿ. ಅಷ್ಟದ್ವಾರದಂಗಡಿ ರಾಜವೀದಿಯೊಳೆಲ್ಲಾ ವ್ಯಾಸನ ಬಾಹುಗಳುಪ್ಪರಿಸಿದವು. ಎಂಟು ಬಾಗಿಲಲ್ಲಿ ನಡೆಮಡಿಗಳ ಹಾಸಿ, ಸಂಕಲ್ಪ ಸಂತೋಷವ ಮಾಡಿದನು ವೃಷಭೇಶ್ವರನು, ಬಸವಪ್ರಿಯ ಕೂಡಲಚೆನ್ನಸಂಗಯ್ಯ ಬಂದಾನೆಂದು” ಕಲ್ಯಾಣದಲ್ಲಿ ಎತ್ತರವಾದ ಅಂದರೆ ಜಗವೆಲ್ಲಾ ಅರಿಯುವಂತಹ ಸಾಮಾಜಿಕ ಸಮಾನತೆಯ ಶಿವಾಚಾರದ ಧ್ವಜ ಕಟ್ಟಲಾಗಿತ್ತು. ಶರಣರ ಬರುವಿಕೆಗಾಗಿ ಹಂಬಲಿಸುತ್ತಿದ್ದರು ಬಸವಣ್ಣ. ಬಾಗಿದ ತಲೆ ಮುಗಿದ ಕೈಯಾಗಿ, ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಕಿಂಕರ ಭಾವದಿಂದ ಸ್ವಾಗತಿಸುತ್ತಿದ್ದರು. ಬಸವಣ್ಣನವರ ಮಾತಿನಲ್ಲೇ ಹೇಳುವುದಾದರೆ- “ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು, ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಯವ್ವಾ. ತರಗೆಲೆ ಗಿರಿಕೆಂದಡೆ ಹೊರಗನಾಲಿಸುವೆ; ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಯವ್ವಾ. ಕೂಡಲಸಂಗಮದೇವನ ಶರಣರು ಬಂದು, ಬಾಗಿಲ ಮುಂದೆ ನಿಂದು `ಶಿವಾ’ ಎಂದಡೆ, ಸಂತೋಷ ಪಟ್ಟೆನೆಲೆಗವ್ವಾ.”
ನೀಲಾಂಬಿಕೆಯವರು “ಕಲ್ಯಾಣ ಕೈಲಾಸವಾಯಿತ್ತು ಬಸವ” ಎನ್ನುತ್ತಾರೆ. ಅಲ್ಲಮಪ್ರಭುದೇವರು, “ನೆನೆ ಎಂದಡೆ ಏನ ನೆನೆವೆನಯ್ಯಾ? ಎನ್ನ ಕಾಯವೆ ಕೈಲಾಸವಾಯಿತ್ತು, ಮನವೆ ಲಿಂಗವಾಯಿತ್ತು, ತನುವೆ ಸೆಜ್ಜೆಯಾಯಿತ್ತು. ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ? ಗುಹೇಶ್ವರ ಲಿಂಗ ಲೀಯವಾಯಿತ್ತು” ತಾನೇ ಲಿಂಗವಾದ ಬಳಿಕ ಏನನ್ನು ನೆನೆಯುವುದು, ಏನನ್ನು ಪೂಜಿಸಿವುದು, ಕಾಯವೇ ಕೈಲಾಸವಾಗಿದೆ, ಮನವೇ ಘನಮನವಾಗಿದೆ. ಹೀಗಿರುವಾಗ ನೆನೆಯಲು ದೇವರೆಲ್ಲಿದ್ದಾನೆ, ಭಕ್ತನೆಲ್ಲಿದ್ದಾನೆ. ಶರಣರಿದ್ದ ಸ್ಥಳವೇ ಕೈಲಾಸ, ಕಲ್ಯಾಣವೇ ಕೈಲಾಸ, ಕಾಯವೇ ಕೈಲಾಸ, ಕಾಯಕವೇ ಕೈಲಾಸ.
“ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ, ಅಲ್ಲಿದ್ದಾತ ರುದ್ರನೊಬ್ಬ. ಆ ಬೆಟ್ಟಕ್ಕೂ ಆ ರುದ್ರಂಗೆಯೂ ಪ್ರಳಯವುಂಟೆಂಬುದ ಗುಹೇಶ್ವರಾ ನಿಮ್ಮ ಶರಣ ಬಲ್ಲನು”
ಹರಿಬ್ರಹ್ಮಾದಿಗಳನ್ನು ದೇವರೆಂದು ಪೂಜಿಸುವ ಮೂಢ, ಮುಗ್ದ ಭಕ್ತರನ್ನು ಬಸವಾದಿ ಶರಣರು ವಿಡಂಬಿಸುತ್ತಾರೆ. ಕೈಲಾಸ ಪರ್ವತವೂ ನಾಶವಾಗುತ್ತದೆ, ಅದರಂತೆ ಅಲ್ಲಿರುವ ಮಾನವ ನಿರ್ಮಿತ ದೇವತೆಗಳಿಗೂ ಅಳಿವಿದೆ. ಈ ಸತ್ಯವನ್ನು ನಮ್ಮ ಶರಣರು ಅರಿತವರಾದ್ದರಿಂದ ಕಲ್ಯಾಣದಲ್ಲೇ ಕೈಲಾಸವನ್ನು ಕಂಡರು.
“ಉಪಪಾತಕ ಮಹಾಪಾತಕಂಗಳ ಮಾಡಿದ ಕರ್ಮಂಗಳು ಕೋಟ್ಯನುಕೋಟಿ, ಒಬ್ಬ ಶಿವಶರಣನ ಅಂಗಳವ ಕಂಡಲ್ಲಿ ಅಳಿದು ಹೋಹುದು ನೋಡಯ್ಯಾ. ಅದೇನು ಕಾರಣವೆಂದಡೆ: ಆ ಶಿವಶರಣನ ಅಂತರಂಗದಲ್ಲಿ ಶಿವನಿಪ್ಪನು. ಶಿವನಿದ್ದಲ್ಲಿ ಕೈಲಾಸವಿಪ್ಪುದು, ಕೈಲಾಸವಿದ್ದಲ್ಲಿ ಸಮಸ್ತ ರುದ್ರಗಣಂಗಳಿಪ್ಪರು. ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳಿಪ್ಪವು. ಇಂತಪ್ಪ ಶರಣ ಬಸವಣ್ಣನ ಅಂಗಳವ ಕಂಡೆನಾಗಿ ಗುಹೇಶ್ವರ ಲಿಂಗದ ಕಂಗಳಿಗೆ ತೃಪ್ತಿಯಾಯಿತ್ತು ಕಾಣಾ ಸಿದ್ಧರಾಮಯ್ಯಾ” ಶರಣರ ಮನೆಯ ಅಂಗಳವನ್ನು ನೋಡಿದರೇ, ಆತನು ಮಾಡಿರುವ ಕೋಟ್ಯಾನುಕೋಟಿ ಪಾತಕಗಳು ಅಳಿದು ಹೋಗುತ್ತವೆ. ಏಕೆಂದರೆ ಶರಣನ ಅಂತರಂಗದಲ್ಲಿಯೇ ಶಿವನಿದ್ದಾನೆ. ಶಿವನಿದ್ದ ಸ್ಥಳ ಸಹಜವಾಗಿಯೇ ಕೈಲಾಸವಾಗಿರುತ್ತದೆ. ಅಲ್ಲಿಯೇ ಎಲ್ಲಾ ರುದ್ರಗಣ ಪ್ರಮಥ ಗಣಂಗಳು ನೆಲೆಸಿದ್ದಾರೆ.
ಇನ್ನು ಉರಿಲಿಂಗ ಪೆದ್ದಿಗಳು ಹೇಳುತ್ತಾರೆ: “ಲಿಂಗವಿದ್ದ ಠಾವೆ ಕೈಲಾಸ, ಲಿಂಗವಿದ್ದ ಠಾವೆ ಕಾಶಿಕ್ಷೇತ್ರ, ಲಿಂಗವಿದ್ದ ಠಾವೆ ಅಷ್ಟಾಷಷ್ಟಿ ಮುಕ್ತಿಕ್ಷೇತ್ರ ಕಾಣಿರಣ್ಣ” ಎಲ್ಲಾ ಶರಣರ ಅಭಿಪ್ರಾಯವೂ ಒಂದೇ ಆಗಿತ್ತು. ಅಂತರಂಗ ಬಹಿರಂಗ, ನಡೆನುಡಿ ಶುದ್ದವಾದವರಲ್ಲಿ ಶಿವನಿದ್ದಾನೆ. ಆ ಶಿವನಿರುವ ಠಾವೇ ಕೈಲಾಸ.
ಬಸವಣ್ಣನವರು ಹೇಳುತ್ತಾರೆ- “ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ಈ ಲೋಕದೊಳಗೆ ಮತ್ತೆ ಅನಂತಲೋಕ ಶಿವಲೋಕ, ಶಿವಾಚಾರವಯ್ಯಾ. ಶಿವಭಕ್ತನಿದ್ದ ಠಾವೆ ದೇವಲೋಕ, ಭಕ್ತನಂಗಳವೆ ವಾರಣಾಸಿ, ಕಾಯವೆ ಕೈಲಾಸ, ಇದು ಸತ್ಯ, ಕೂಡಲಸಂಗಮದೇವಾ” ಈ ಭೂ ಮಂಡಲದೊಳಗೇ ಎಲ್ಲಾ ಲೋಕಗಳೂ ಇವೆ. ದೇವಲೋಕ ಮರ್ತ್ಯಲೋಕಗಳು ಮತ್ತೆಲ್ಲೂ ಇಲ್ಲ. ಶಿವಾಚಾರವನ್ನು ಮಾಡುವುದೇ ಶಿವಲೋಕ. ಅಂದರೆ ಎಲ್ಲರನ್ನೂ ಸಮಾನವಾಗಿ ಕಂಡಾಗ ಶಿವಲೋಕವೂ ಇಲ್ಲೇ ಇದೆ. ಶಿವಭಕ್ತರು ಎಲ್ಲಿ ವಾಸಿಸುತ್ತಾರೋ ಅದೇ ದೇವಲೋಕ. ಭಕ್ತರ ಮನೆಯ ಅಂಗಳವೇ ವಾರಣಾಸಿ. ಅವರ ಕಾಯವೇ ಕೈಲಾಸ. ನಮ್ಮ ನಡೆ ನುಡಿಯಲ್ಲಿಯೇ ದೇವರಿದ್ದಾನೆ. ಪಾಪಪುಣ್ಯವೆಂಬುದೂ ನಮ್ಮ ಕೈಲೇ ಇದೆ.
“ಪುಣ್ಯಪಾಪಂಗಳೆಂಬವು ತಮ್ಮ ಇಷ್ಟ ಕಂಡಿರೆ, `ಅಯ್ಯಾ ಎಂದಡೆ ಸ್ವರ್ಗ, ಎಲವೊ ಎಂದಡೆ ನರಕ. ದೇವಾ, ಭಕ್ತಾ, ಜಯಾ, ಜೀ[ಯಾ] ಎಂಬ ನುಡಿಯೊಳಗೆ ಕೈಲಾಸವೈದುವುದೆ ಕೂಡಲಸಂಗಮದೇವಾ” ಮೂಢ ಭಕ್ತಿಯ ಪರಾಕಾಷ್ಟೆ ತಾರಕಕ್ಕೇರಿ ದೇಹ ದಂಡಿಸುತ್ತಾ ಮನವ ನಿಗ್ರಹಿಸುತ್ತಾ ಇಂದ್ರಿಯಗಳನ್ನು ಹತ್ತಿಕ್ಕಿ ಕೈಲಾಸದ ಕಲ್ಪನೆಯನ್ನಿಟ್ಟುಕೊಂಡು ಹೋಗುವ ಭಕ್ತರನ್ನು ಎಚ್ಚರಿಸುತ್ತಾರೆ ಬಸವಣ್ಣನವರು.
“ಮಾಡುವ ಮಾಟವುಳ್ಳನ್ನಕ್ಕ ಬೇರೊಂದು ಪದವನರಸಲೇತಕ್ಕೆ ? ದಾಸೋಹವೆಂಬ ಕಮಲ ಸೇವೆಯ ನೀಸಲಾರದೆ ಲಿಂಗವಿದ್ದ ಠಾವೆ ಕೈಲಾಸ.” ಪಾದರಕ್ಷೆ ಮಾಡುವ ಕಾಯಕದಲ್ಲಿಯೇ ಕೈಲಾಸವನ್ನು ಕಂಡಂತಹ ಮಾದಾರ ಚನ್ನಯ್ಯನವರು ಕೈಲಾಸವನ್ನು ಈ ರೀತಿ ವಿಡಂಬಿಸುತ್ತಾರೆ.
“ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವನ ಮುಂದೆ? ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು. ನೀ ಹೊತ್ತ ಬಹುರೂಪ[ದಿ] ತಪ್ಪದೆ ರಜತಬೆಟ್ಟದ ಮೇಲಕ್ಕೆ ಹೋಗು, ನಿನ್ನ ಭಕ್ತರ ಮುಕ್ತಿಯ ಮಾಡು. ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದುಕು” ಕಾಯಕ ನಿಷ್ಠೆಗೆ ಮೆಚ್ಚಿ ಮಾದಾರ ಧೂಳಯ್ಯನವರಿಗೆ ಪಾದರಕ್ಷೆ ಹೊಲಿಯುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷನಾಗುತ್ತಾನಂತೆ ಪರಶಿವ. ಅವನನ್ನು ಕಂಡು, ನೀನು ಇಲ್ಲಿಗೆ ಏಕೆ ಬಂದೆ. ನಿನ್ನನ್ನು ಹುಡುಕಾಡುತ್ತಿರುವ ನಿನ್ನ ಭಕ್ತರ ಇರುವ ಸ್ಥಳಕ್ಕೆ ಹೋಗಿ ಅವರಿಗೆ ಮುಕ್ತಿಯ ಮಾಡು, ರಜತಬೆಟ್ಟ ಅಂದರೆ ಕೈಲಾಸ ಪರ್ವತಕ್ಕೆ ಹೋಗು, ಅಲ್ಲಿರುವಂತಹ ನಿನ್ನ ಭಕ್ತರಿಗೆ ಮುಕ್ತಿನೀಡು ಎಂದು ಹೇಳುವುದಷ್ಟೇ ಅಲ್ಲ ಆ ಪ್ರತ್ಯಕ್ಷವಾದ ಪರಮೇಶ್ವರನಿಗೆ ಸವಾಲು ಎಸೆಯುತ್ತಾರೆ, ಕಾಮಧೂಮ ಧೂಳೇಶ್ವರ ಕರುಣೆಯಿಂದ ನೀನೇ ಬದುಕು ಎಂದು.
ಮಾಡುವ ಕಾಯಕದಲ್ಲಿ ಚತುರ್ವಿಧ ಪದವಿಯ ಕಾಣಲು ಸಾಧ್ಯವಿದೆ.ಅದನ್ನು ಬಿಟ್ಟು ಬೇರೆ ಪದವಿಯ ಬಯಸುವ ಅಗತ್ಯವಿಲ್ಲ. ಅದೇ ರೀತಿ ದಾಸೋಹವೆಂಬ ಮಹಾ ಸೇವೆಯ ಬಿಟ್ಟು ಆಯಾಸಗೊಂಡು ಕೈಲಾಸದ ಆಸೆ ಬಯಸುವುದು ಅಗತ್ಯವಿಲ್ಲ ಎನ್ನುತ್ತಾರೆ ಆಯ್ದಕ್ಕಿ ಲಕ್ಕಮ್ಮ. “ಶರಣ ನಿದ್ರೆಗೈದಡೆ ಜಪ ಕಾಣಿರೊ, ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಶರಣ ನಡೆದುದೆ ಪಾವನ ಕಾಣಿರೊ, ಶರಣ ನುಡಿದುದೆ ಶಿವತತ್ವ ಕಾಣಿರೊ, ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ. ” “ಭಕ್ತನ ನಡೆ ಶುದ್ಧ , ಭಕ್ತನ ನುಡಿ ಶುದ್ಧ ,ಭಕ್ತನ ತನು ಶುದ್ಧ , ಭಕ್ತನ ಮನ ಶುದ್ಧ ,ಭಕ್ತನ ಭಾವ ಶುದ್ಧ , ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ ಅಖಂಡೇಶ್ವರಾ, ನೀ ಒಲಿದ ಸದ್ಭಕ್ತನ ಕಾಯವೇ ಕೈಲಾಸವಯ್ಯ.”
“ಶರಣನಿರ್ದಲ್ಲಿ ಸಕಲ ತೀರ್ಥಕ್ಷೇತ್ರಂಗಳಿರ್ಪವು. ಶರಣನಿರ್ದಲ್ಲಿ ಕೈಲಾಸ ಮೇರು ಮಂದರ ಕುಲಶೈಲಂಗಳಿರ್ಪವು. ಶರಣನಿರ್ದಲ್ಲಿ ಈರೇಳುಭುವನ ಹದಿನಾಲ್ಕು ಲೋಕಂಗಳಿರ್ಪವು. ನಮ್ಮ ಅಖಂಡೇಶ್ವರನ ಶರಣನಿರ್ದಲ್ಲಿ ಅನಂತಕೋಟಿ ಬ್ರಹ್ಮಾಂಡಗಳಿರ್ಪವು ನೋಡಾ.”
ಹೀಗೆ ಸುಮಾರು ೧೭೯ ವಚನಗಳಲ್ಲಿ ಪೌರಾಣಿಕ ಕಲ್ಪನೆಯ ಕೈಲಾಸವನ್ನು ಶರಣರು ವಿಡಂಬಿಸುತ್ತಾರೆ.
ಆದ್ದರಿಂದ ಶರಣರು ಕಲ್ಪನೆಯ ದೇವರುಗಳನ್ನು ಪಕ್ಕಕ್ಕೆ ಸರಿಸಿ ಕಾಯಕ ನೆಚ್ಚಿ ಬದುಕನ್ನೂ, ತಾವಿರುವ ಜಾಗವನ್ನೂ ಕೈಲಾಸವನ್ನಾಗಿಸಿದವರು. ಕಲ್ಯಾಣದಲ್ಲಿಯೇ, ಕಾಯಕದಲ್ಲಿಯೇ, ಕಾಯದಲ್ಲಿಯೇ ಕೈಲಾಸವನ್ನು ಕಂಡರು. ಆದ್ದರಿಂದ ಅಕ್ಕಮಹಾದೇವಿ ಹೇಳುವಂತೆ ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು.

Previous post ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
Next post ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ

Related Posts

ಛಲಬೇಕು ಶರಣಂಗೆ…
Share:
Articles

ಛಲಬೇಕು ಶರಣಂಗೆ…

April 29, 2018 ಕೆ.ಆರ್ ಮಂಗಳಾ
ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೇ ಸಂದರ್ಭದಲ್ಲಿ ಹುಟ್ಟಿದ ಮಾನವನ ಮೂಲಭೂತ ಚಿಂತನೆಗಳು ಆಯಾ ಕಾಲ ಮತ್ತು ದೇಶಗಳಿಗೆ ಮಾತ್ರವೇ ಬದ್ಧವಾಗಿರುವುದಿಲ್ಲ. ಇಡೀ ಲೋಕಕ್ಕೆ, ಎಲ್ಲಾ...
ಅರಸೊತ್ತಿಗೆಯಿಂದ ಅರಿವಿನೆಡೆಗೆ
Share:
Articles

ಅರಸೊತ್ತಿಗೆಯಿಂದ ಅರಿವಿನೆಡೆಗೆ

April 29, 2018 ಕೆ.ಆರ್ ಮಂಗಳಾ
ಬಹುತೇಕ ಧರ್ಮಗಳು ಸನ್ಯಾಸತ್ವಕ್ಕೆ ಆದ್ಯತೆ ನೀಡಿದರೆ, ಲಿಂಗಾಯತವು ದಾಂಪತ್ಯ ಸಂಸ್ಕೃತಿಗೆ ಪ್ರಧಾನ ಸ್ಥಾನ ನೀಡಿದ ಧರ್ಮ. ಆಧ್ಯಾತ್ಮಿಕ ಸಾಧನೆಗೂ ವೈರಾಗ್ಯಕ್ಕೂ ಗಂಟು ಹಾಕದೆ...

Comments 10

  1. ಪ್ರಸಾದ ವಿ.ಪಿ
    Dec 9, 2020 Reply

    ಕಲ್ಯಾಣದ ಮಹತ್ತನ್ನು ಶರಣರೇ ವಚನಗಳಲ್ಲಿ ಸಾರಿ ಹೋಗಿದ್ದಾರೆ ಎಂದು ತಿಳಿಸಿದ ಬರಹ ನಮ್ಮನ್ನು ಎಚ್ಚರಿಸುವಂತೆ ಇದೆ. ಕಲ್ಯಾಣದ ಹೆಸರು ಹೇಳಲೂ ನಮಗೆ ಯೋಗ್ಯತೆ ಇಲ್ಲ ಬಿಡಿ.

  2. Jayadev Jawali
    Dec 9, 2020 Reply

    ಕಲ್ಯಾಣವನ್ನು ಕೈಲಾಸವನ್ನಾಗಿ ಮಾಡಿದ ಶರಣರ ಮರ್ಮವನ್ನು ತಿಳಿಸಿದ ಶರಣೆ ಜಯಕ್ಕಾ ಅವರಿಗೆ ಶರಣಾರ್ಥಿಗಳು.

  3. Mahesh Reddy
    Dec 16, 2020 Reply

    ಶರಣರ ಸಂಗದಲ್ಲಿ ಬಾಳು ಸವೆಸಲು ನಮಗೆ ಅರ್ಹತೆ ಬೇಕೆಂದು ಅಕ್ಕನವರು ಅಂದೇ ಹೇಳಿದ್ದಾರೆ, ಕಲ್ಯಾಣ ಪ್ರವೇಶದ ಶುಲ್ಕ ಏನೆಂದು ತಿಳಿಸಿದ ಜಯಾ ಅಕ್ಕನವರಿಗೆ ವಂದನೆ.

  4. Sudha baikal
    Dec 16, 2020 Reply

    ಕಲ್ಯಾಣದ ವಿಶೇಷತೆಯನ್ನು ಶರಣರ ವಚನಗಳ ಜೊತೆಗೆ ಅಂದಿನ ಶರಣರ ಜೀವನದ ವಿಶೇಷತೆಯನ್ನು ತಿಳಿಸಿಕೊಟ್ಟಿದ್ದರೆ ಚೆನ್ನಾಗಿತ್ತು. ಬಸವಣ್ಣನವರು ಅಷ್ಟು ಶರಣರನ್ನು ಅಲ್ಲಿಗೆ ಅದ್ಹೇಗೆ ಕರೆತಂದರು? ಯಾವ ಮಾಂತ್ರಿಕ ಶಕ್ತಿ ಅಲ್ಲಿ ಕೆಲಸ ಮಾಡಿತ್ತೆಂದು ನೆನೆದರೆ ಮೈ ಜುಂ ಎನ್ನುತ್ತದೆ.

  5. ಭಾರತಿ ತುರವೆಕೆರೆ
    Dec 16, 2020 Reply

    ಪುರಾಣಗಳ ದೇವ ನಿವಾಸ ಕೈಲಾಸವನ್ನೇ ನಾಚಿಸುವಂತೆ ಶರಣರು ಕಲ್ಯಾಣವನ್ನು ನಿರ್ಮಿಸಿದ್ದರು. ಆದರೆ ಅವರ ಕಾಲದಲ್ಲೇ ಕಲ್ಯಾಣವನ್ನು ಧ್ವಂಸ ಮಾಡಿದ ಅಗೋಚರ ಶಕ್ತಿಗಳ ನೆನೆದು ಭಯವಾಗುತ್ತದೆ.

  6. Umesh Mavinakere
    Dec 16, 2020 Reply

    ಯಾವ ಬೇಧಗಳೂ ಆಚರಣೆಯಲ್ಲಿಲ್ಲದ ಮನಯಷ್ಯನನ್ನು ಮನುಷ್ಯನಂತೆ ಕಾಣುವ ಕಲ್ಯಾಣ ಇವತ್ತು ನಮ್ಮನ್ನು ಎಚ್ಚರಿಸಬೇಕು. ಕರ್ನಾಟಕದಲ್ಲಿ ಕಲ್ಯಾಣದ ಮಹಿಮೆಯನ್ನು ಹೇಳುವ ಪಠ್ಯ ಮಕ್ಕಳ ತರಗತಿಗಳಲ್ಲಿ ಲಭ್ಯವಾಗಬೇಕು. ಜಗತ್ತೇ ಅಚ್ಚರಿ ಪಡುವ ಐತಿಹಾಸಿಕ ಸತ್ಯವನ್ನು ತನ್ನೊಳಗಿಟ್ಟುಕೊಂಡಿರುವ ಕಲ್ಯಾಣದ ಕಲ್ಯಾಣ ಗುಣಗಳು ನಮ್ಮೆಲ್ಲರನ್ನು ಉದ್ದರಿಸಲಿ.

  7. Ravindra Desai
    Jan 4, 2021 Reply

    ಕಲ್ಯಾಣ, ಅನುಭವ ಮಂಟಪ, ಶರಣರು, ಅನುಭಾವ, ಕಾಯಕ, ದಾಸೋಹ- ಇವು ಈ ಕನ್ನಡದ ಮಣ್ಣಿನಲ್ಲಿ ನಿಜಕ್ಕೂ ಬದುಕಿ ಹೋದವೇ ಎಂದು ಸಂತೋಷ, ಆನಂದ, ಅಭಿಮಾನ ಹುಟ್ಟುತ್ತದೆ. ಕಲ್ಯಾಣಕ್ಕೆ ಈಗ ಹೋಗಿ ಬಂದರೆ ಅಲ್ಲಿನ ವಾತಾವರಣ ಕಂಡು ಮನಸ್ಸಿಗೆ ಪಿಚ್ಚೆನಿಸುತ್ತದೆ.

  8. ಮಹಾದೇವಪ್ಪ ಹುಬ್ಬಳ್ಳಿ
    Jan 4, 2021 Reply

    ಇವತ್ತಲ್ಲ ನಾಳೆ ಜಗವರಿಯಲು ಕಟ್ಟಿ ತೋರಿಸಿದ ಕಲ್ಯಾಣದ ಮಹತ್ವ ನಮಗೆ ಅರ್ಥವಾಗಬಹುದು. ಹಾಗೆ ಮತ್ತೊಮ್ಮೆ ಕಲ್ಯಾಣ ಕಟ್ಟಲು ನಮ್ಮ ಪೀಳಿಗೆಗೆ ಸಾಧ್ಯವಾದರೆ ನಾವೇ ಧನ್ಯರು!

  9. Mariswamy Gowdar
    Jan 4, 2021 Reply

    ಲಿಂಗಾಂಗ ಸಾಮರಸ್ಯದ ದಾರಿ ಕಲ್ಯಾಣದಲ್ಲಿದೆ. ಅದಕ್ಕಾಗಿ ಸಜ್ಜನರೆಲ್ಲಾ ಅಲ್ಲಿಗೆ ದೌಡಾಯಿಸಿದರು. ಜೀವನದ ಸತ್ಯವನ್ನು ತೋರಿಸಿದ ಕಲ್ಯಾಣದ ಕುರಿತ ಬರಹ ಚನ್ನಾಗಿದೆ

  10. Subhas Baliga
    Jan 4, 2021 Reply

    I believe you have remarked some very interesting details , thankyou for the post.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಶಿವಾಚಾರ
ಶಿವಾಚಾರ
April 9, 2021
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಸಂತೆಯ ಸಂತ
ಸಂತೆಯ ಸಂತ
September 7, 2020
ನಾನರಿಯದ ಬಯಲು
ನಾನರಿಯದ ಬಯಲು
April 9, 2021
Copyright © 2022 Bayalu