Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಲ್ಯಾಣವೆಂಬ ಪ್ರಣತೆ
Share:
Articles April 3, 2019 ಡಾ. ಪಂಚಾಕ್ಷರಿ ಹಳೇಬೀಡು

ಕಲ್ಯಾಣವೆಂಬ ಪ್ರಣತೆ

ಜಗದಾರಾಧ್ಯ ಬಸವಣ್ಣ, ಪ್ರಮಥಗುರು ಬಸವಣ್ಣ, ಶರಣ ಸನ್ನಿಹಿತ ಬಸವಣ್ಣ, ಸತ್ಯಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯ ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ, ಸರ್ವಾಚಾರಸಂಪನ್ನ ಬಸವಣ್ಣ, ಸರ್ವಾಂಗಲಿಂಗಿ ಬಸವಣ್ಣ, ಸುಜ್ಞಾನಭರಿತ ಬಸವಣ್ಣ, ನಿತ್ಯಪ್ರಸಾದಿ ಬಸವಣ್ಣ, ಸಚ್ಚಿದಾನಂದಮೂರ್ತಿ ಬಸವಣ್ಣ, ಸದ್ಯೋನ್ಮುಕ್ಮಿರೂಪ ಬಸವಣ್ಣ, ಅಖಂಡಪರಿಪೂರ್ಣ ಬಸವಣ್ಣ, ಅಭೇದ್ಯಭೇದಕ ಬಸವಣ್ಣ, ಅನಾಮಯಮೂರ್ತಿ ಬಸವಣ್ಣ, ಮಹಾಮನೆಯ ಮಾಡಿದಾತ ಬಸವಣ್ಣ, ರುದ್ರಲೋಕವ ಮತ್ರ್ಯಲೋಕಕ್ಕೆ ತಂದಾತ ಬಸವಣ್ಣ, ಶಿವಚಾರದ ಘನವ ಮೆರೆದಾತ ಬಸವಣ್ಣ. ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ, ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ, ರಾಜಾಧಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ ಆ ಕಲ್ಯಾಣಪಟ್ಟಣದೊಳಗೆ ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು, ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು. ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು. ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ, ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ, ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು, ಇದು ಕಾರಣ, ಕೂಡಲಚೆನ್ನಸಂಗಮದೇವಾ, ನಿಮ್ಮ ಭಕ್ತ ಬಸವಣ್ಣನಿದ್ದ ಠಾವೇ ಮಹಾಕಲ್ಯಾಣವೆಂದರಿದು ದಿವ್ಯಶಾಸನವ ಬರೆದು ಪಠಿಸಿದ ಕಾರಣ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ.

ಚೆನ್ನಬಸವಣ್ಣನವರು ಗುರು ಬಸವಣ್ಣನವರ ಸ್ತೋತ್ರವನ್ನು ಮನತುಂಬಿ ಭಾವ ತುಂಬಿ ಮಾಡುತ್ತಾ, ಬಸವಣ್ಣ ಪ್ರಧಾನಮಂತ್ರಿಯಾಗಿ, ಬಿಜ್ಜಳನು ರಾಜನಾಗಿ  ಅಭೂತಪೂರ್ವವಾಗಿ  ನಾಡಿನ ಯೋಗಕ್ಷೇಮ ನೋಡಿಕೊಳ್ಳುತ್ತಾ ರಾಜ್ಯಭಾರ ಮಾಡುತ್ತಿರುವ ಮಹಾಸುಖಿ ಸಾಮ್ರಾಜ್ಯ ಕಲ್ಯಾಣವನ್ನು ನೋಡುವುದು, ಸಂದರ್ಶಿಸುವುದು ಮತ್ತು ನೆನೆಯುವುದರಿಂದ ಭವಕರ್ಮ ಹರಿದು ಮೋಕ್ಷ ಸಂಪದವಹುದು ಎಂದು ವರ್ಣಿಸಿದ್ದಾರೆ. ಹಾಗಾದರೆ ವಾಸ್ತವವಾಗಿ ಕಲ್ಯಾಣದಲ್ಲಿ ಏನಿತ್ತು, ಕಲ್ಯಾಣವೆಂಬ ಪಟ್ಟಣ ಹೇಗಿತ್ತು ಎಂಬುದೇ ನಮ್ಮ ಊಹೆಗೂ ನಿಲುಕದ ನಕ್ಷತ್ರದಂತೆ. ಭೂಲೋಕದೊಳಗೆ ಅದುವೇ ಕಾಲ್ಪನಿಕ ಕೈಲಾಸದ  ನೈಜ ಪ್ರತಿಸ್ಪರ್ಧಿಯಾಗಿ ಕಂಗೊಳಿಸುತ್ತಿದೆ. ನಂತರದಲ್ಲಿ ಆ ಕಲ್ಯಾಣದ ಹೆಸರು ವಿವಾಹಕ್ಕೆ ಕಲ್ಯಾಣವೆಂದು  ಹೆಸರಾಯಿತು ಎಂದು ಕಲ್ಯಾಣದ ಮಹಿಮೆಯನ್ನು ಬಹಳ ಅರ್ಥಗರ್ಭಿತವಾಗಿ ವರ್ಣಿಸಿದ್ದಾರೆ.

ಕಲ್ಯಾಣ ಪಟ್ಟಣದ ವಿಸ್ತೀರ್ಣವನ್ನು  ಚೆನ್ನಬಸವಣ್ಣನವರು- “ಹನ್ನೆರಡು ಗಾವುದ ವಿಸ್ತೀರ್ಣದ ಮಹಾಪಟ್ಟಣಕ್ಕೆ ಕಲ್ಯಾಣವೆಂಬ ಪ್ರಣತೆ, ಮಹತ್ತೆಂಬ ಎಣ್ಣೆ, ಬಸವನೆಂಬ ಸ್ವಯಂಜ್ಯೋತಿ. ಅಲ್ಲಿ ಕಾಳಯ್ಯ ಚವುಡಯ್ಯ ಕೋಲ ಸಾತಯ್ಯ, ಮುಖವಾಡದ ಕೇಶಿರಾಜ, ಖಂಡನೆಯ ಬೊಮ್ಮಣ್ಣ, ಮಿಂಡ ಮಲ್ಲಿನಾಥ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಅವ್ವೆ ನಾಗವ್ವೆ ಸಹಿತ ಇವರೆಲ್ಲರೂ ಸಂಗನಬಸವಣ್ಣನ ಬಯಲ ಕೂಡಿದರು. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಇವರ ಪ್ರಸಾದದ ಬಯಲೆನಗಾಯಿತ್ತು” ಎಂದು ವರ್ಣಿಸಿದ್ದಾರೆ. ಅಂದಿನ ಕಲ್ಯಾಣ ಪಟ್ಟಣದ ವಿಸ್ತೀರ್ಣ ಹನ್ನೆರಡು ಗಾವುದ.  ನಮ್ಮ ಗ್ರಾಮೀಣ ಲೆಕ್ಕಾಚಾರದ ಪ್ರಕಾರ 1 ಹರದಾರಿ = 4.8 ಕಿ.ಮೀ., 1 ಗಾವುದ/ಯೋಜನ = 19.2 ಕಿ.ಮೀ.

ಅಂದರೆ 12 ಗಾವುದ * 12 ಗಾವುದ = 144 ಚದುರ ಗಾವುದ.

1 ಗಾವುದ = 19.2 ಕಿಲೋಮೀಟರ್.

12 ಗಾವುದ = 12 * 19.2 = 230.4 ಕಿ.ಮೀ.

ಒಟ್ಟು ವಿಸ್ತೀರ್ಣ = 230.4 * 230.4 = 53084 ಚದುರ ಕಿಲೋಮೀಟರ್. ಬಹುಶಃ ಇದು ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯದ ವಿಸ್ತಾರವಿರಬಹುದು ಎನಿಸುವುದು.

ಬಸವಣ್ಣನವರ ವಚನದಲ್ಲಿಯೂ ಕಲ್ಯಾಣದ ವಿವರಣೆ ಲಭ್ಯವಿದೆ. “ಅಂಗುಲ ಹನ್ನೆರಡು ಕೂಡಲು ಒಂದು ಗೇಣು, ಗೇಣು ಎರಡು ಕೂಡಲು ಒಂದು ಮೊಳ, ಮೊಳವೆರಡು ಕೂಡಲು ಒಂದು ಹಸ್ತ,  ಹಸ್ತವೆರಡು ಕೂಡಲು ಒಂದು ಮಾರು, ಮಾರೆರಡು ಕೂಡಲು ಒಂದು ಜಂಘೆ, ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ, ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ, ಹರದಾರಿ ನಾಲ್ಕು ಕೂಡಲು ಒಂದು ಯೋಜನ, ಅಂಥ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು ಬಳಸಿ ನಾಲ್ವತ್ತೆಂಟು ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು. ಇಂತಪ್ಪ ಕಟ್ಟಳೆಯಾಗಿದ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ ಕೂಡಲಸಂಗಯ್ಯಾ ನಿಮ್ಮೊಳು ಕಂಡು ಸುಖಿಯಾಗಿರ್ದೆನು.” (ಜಂಘೆ ಹತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯ ನಲವತ್ತು ಕೂಡಲು ಒಂದು ಕೂಗಳತೆ). ಈ ವಚನದಲ್ಲಿ ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ ಎಂಬುದು ಸರಿಯಾದುದಲ್ಲವೇನೋ ಎಂಬ ಅನುಮಾನ ಕಾಡುವುದು. ಚನ್ನಬಸವಣ್ಣನವರ ವಚನದಲ್ಲಿ ಬಳಸಿರುವ ಗಾವುದ ಮತ್ತು ಬಸವಣ್ಣನವರ ವಚನದಲ್ಲಿ ಬಳಸಿರುವ ಯೋಜನ ಎರಡೂ ಒಂದೇ ( 1 ಗಾವುದ = 1 ಯೋಜನ) ಹಾಗಾಗಿ ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ ಎಂಬುದರ ಬದಲು ಜಂಘೆ ಹತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯವೆರಡು ಸಾವಿರದೆಂಟನೂರು ಕೂಡಲು ಒಂದು ಕೂಗಳತೆ ಎಂಬುದರ ಬದಲು ಪಾದಚ್ಛಯ ನಲವತ್ತು ಕೂಡಲು ಒಂದು ಕೂಗಳತೆ ಎಂದರೆ ಲೆಕ್ಕ ಸರಿಯಾಗುವುದು. ಇಲ್ಲವಾದಲ್ಲಿ ಕಲ್ಯಾಣದ ವಿಸ್ತೀರ್ಣ ಭೂಮಿಯ ವಿಸ್ತೀರ್ಣಕ್ಕಿಂತಲೂ ಬಹಳ ದೊಡ್ಡದಾಗುವುದು. ಬಹುಶಃ ವಚನಗಳ ನಕಲು ಮಾಡುವಾಗ ಇಂಥಾ ಪ್ರಮಾದ ಉಂಟಾಗಿರಬಹುದು ಎಂಬುದು ನನ್ನ ಅಭಿಪ್ರಾಯ. ಎರಡು ಬಗೆಯ ಲೆಕ್ಕಾಚಾರಗಳನ್ನೂ ಇಲ್ಲಿ ಕೊಡುತ್ತಿದ್ದೇನೆ ಓದುಗರು ತಮಗೆ ಸರಿಕಂಡಂತೆ ಅರ್ಥೈಸಿಕೊಳ್ಳಬಹುದು.

1 ಮಾರು = 5 ಅಡಿಗಳು

1 ಜಂಘೆ = 2 ಮಾರು = 2 * 5 = 10 ಅಡಿಗಳು = 3 ಮೀಟರುಗಳು

1 ಪಾದಚ್ಛಯ = 770 ಜಂಘೆ = 770 * 3 = 2310 ಮೀಟರುಗಳು = 2.31 ಕಿಲೋಮೀಟರುಗಳು

1 ಕೂಗಳತೆ = 2800 ಪಾದಚ್ಛಯ = 2800 * 2.31 = 6468 ಕಿಲೋಮೀಟರುಗಳು (ಒಂದು ಪಾದಚ್ಛಯ 6468 ಕಿಲೋಮೀಟರುಗಳು ಇರುವುದು ಸಾಧ್ಯವಿಲ್ಲ)

1 ಹರದಾರಿ = 4 ಕೂಗಳತೆ = 4 * 6468 = 25872 ಕಿಲೋಮೀಟರುಗಳು (ಕೂಗಳತೆ ಎಂದರೆ ಒಬ್ಬ ವ್ಯಕ್ತಿ ಗಟ್ಟಿಯಾಗಿ ಕೂಗಿದಾಗ ಆ ಶಬ್ದ ತಲುಪುವ ದೂರ, ಅದು 25872 ಕಿ.ಮೀ ಇರುವುದು ಸಾಧ್ಯವೇ ಎಂದು ಯೋಚಿಸಬೇಕಾಗಿದೆ)

1 ಯೋಜನ = 4 ಹರದಾರಿ = 4 * 25872 = 103488 ಕಿಲೋಮೀಟರುಗಳು

12 ಯೋಜನ = 12 * 103488 = 1241856 ಕಿಲೋಮೀಟರುಗಳು

ಒಟ್ಟು ವಿಸ್ತೀರ್ಣ = 12 ಯೋಜನ * 12 ಯೋಜನ = 1241856 * 1241856 = 1542206000000 ಚದುರ ಕಿಲೋಮೀಟರುಗಳು.

ಇಷ್ಟು ವಿಸ್ತೀರ್ಣದ ಕಲ್ಯಾಣ ಪಟ್ಟಣ ಅಥವಾ ಸಾಮ್ರಾಜ್ಯವಿರಲು ಸಾಧ್ಯವೇ ಇಲ್ಲ. ಇದು ಭೂಮಿಯ ಒಟ್ಟು ವಿಸ್ತೀರ್ಣಕ್ಕಿಂತ ಬೃಹತ್ತಾದದ್ದು ಹಾಗೂ ಅವಾಸ್ತವವಾದದ್ದು.

 

ಆದ್ದರಿಂದ  ಮೇಲೆ ತಿಳಿಸಿದ ಅಳತೆಗಳನ್ನು ಸ್ವಲ್ಪ ಬದಲಿಸಿದಾಗ ಬರುವ ಲೆಕ್ಕಾಚಾರವನ್ನು ನೋಡುವಾ, (ಸೂಚಿತ ಬದಲಾವಣೆ: ಜಂಘೆ ಹತ್ತು ಕೂಡಲು ಒಂದು ಪಾದಚ್ಛಯ, ಪಾದಚ್ಛಯ ನಲವತ್ತು ಕೂಡಲು ಒಂದು ಕೂಗಳತೆ).

1 ಮಾರು = 5 ಅಡಿಗಳು

1 ಜಂಘೆ = 2 ಮಾರು = 2 * 5 = 10 ಅಡಿಗಳು = 3 ಮೀಟರುಗಳು

1 ಪಾದಚ್ಛಯ = 10 ಜಂಘೆ = 10 * 3 = 30 ಮೀಟರುಗಳು

1 ಕೂಗಳತೆ = 40 ಪಾದಚ್ಛಯ = 40 * 30 = 1200 ಮೀಟರುಗಳು = 1.2 ಕಿಲೋಮೀಟರುಗಳು

1 ಹರದಾರಿ = 4 ಕೂಗಳತೆ = 4 * 1.2 = 4.8 ಕಿಲೋಮೀಟರುಗಳು

1 ಯೋಜನ = 4 ಹರದಾರಿ = 4 * 4.8 = 19.2 ಕಿಲೋಮೀಟರುಗಳು

12 ಯೋಜನ = 12 * 19.2 = 230.4 ಕಿಲೋಮೀಟರುಗಳು

ಒಟ್ಟು ವಿಸ್ತೀರ್ಣ = 12 ಯೋಜನ * 12 ಯೋಜನ = 230.4  * 230.4  = 53084 ಚದುರ ಕಿಲೋಮೀಟರುಗಳು. ಹೀಗೆ ಲೆಕ್ಕ ಮಾಡಿದಾಗ  ಚೆನ್ನ ಬಸವಣ್ಣನವರ ಕಲ್ಯಾಣದ ವರ್ಣನೆಗೂ ಮತ್ತು ಬಸವಣ್ಣನವರ ಕಲ್ಯಾಣದ ವರ್ಣನೆಗೂ ತಾಳೆಯಾಗುವುದು.

 

ಇಷ್ಟು ವಿಸ್ತೀರ್ಣದ ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯದಲ್ಲಿ ಕಲ್ಯಾಣವೆಂಬ ಪಟ್ಟಣ, ಆ ಸಾಮ್ರಾಜ್ಯದ ಅರಸು ಬಿಜ್ಜಳ, ಅದರ ಪ್ರಧಾನ ಮಂತ್ರಿ ಬಸವಣ್ಣ. ಬಸವಣ್ಣ ಅಲ್ಲಿ ಪ್ರಧಾನಮಂತ್ರಿ ಅಷ್ಟೇ ಅಲ್ಲ ಮನೆ ಮನೆಗಳನ್ನೂ ಮನ ಮನಗಳನ್ನೂ ಬೆಳಗುವ ಮಹಾಜ್ಯೋತಿ, ಅಂಥಾ ಬಸವನೆಂಬ ಮಹಾಜ್ಯೋತಿಯನ್ನು ಕಂಡು ಹರ್ಷಿತರಾದ ಅಲ್ಲಮಪ್ರಭುದೇವರು ಭಾವ ಪುಳಕಿತರಾಗಿ ಹೇಳುತ್ತಾರೆ “ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು. ಶಿವಭಕ್ತರಿರ್ದ ಕ್ಷೇತ್ರವೆ ಅವಿಮುಕ್ತಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನಬಸವಣ್ಣನ ಕಂಡು ಬದುಕಿದೆನು ಕಾಣಾ ಸಿದ್ಧರಾಮಯ್ಯಾ”. ಇಡೀ ಕಲ್ಯಾಣವೇ ಪ್ರಣತೆಯಾಗಿ, ಅದರ ತುಂಬೆಲ್ಲಾ ಭಕ್ತಿರಸವೆಂಬುದೇ ತೈಲವಾಗಿದೆ, ಸತ್ಯ ಸದಾಚಾರಗಳು ಬತ್ತಿಯಾಗಿರಲು ಬಸವಣ್ಣನೆಂಬ ಸುಜ್ಞಾನದ ಮಹಾಜ್ಯೋತಿ ಮುಟ್ಟಲು ಇಡೀ ಕಲ್ಯಾಣವೇ ಶಿವಪ್ರಜ್ಞೆಯ ಬೆಳಗನುಟ್ಟು ಬೆಳಗುತ್ತಿರಲು, ಆ ಬೆಳಗಿನೊಳಗೆ ಲೆಕ್ಕವಿಲ್ಲದಷ್ಟು ಜನರು, ಲೆಕ್ಕಕ್ಕೆ ಬಾರದ ದಮನಿತರು, ತಮ್ಮ ಬಾಳ ಹಣತೆಗೆ ಶಿವಪ್ರಜ್ಞೆಯ ಬೆಳಗನ್ನು ಹತ್ತಿಸಿಕೊಂಡು ಪುನೀತರಾಗಿದ್ದಾರೆ. ಇಂಥಾ ಕ್ಷೇತ್ರವೇ ನಿಜವಾದ ಮುಕ್ತಿಧಾಮ, ಪರಮಪಾವನ ಪುಣ್ಯಧಾಮ. ಅಪ್ರತಿಮ ಜ್ಞಾನಿ ಪ್ರಭುದೇವರೇ- ಎನ್ನ ಪರಮಾರಾಧ್ಯ ಬಸವಣ್ಣ ಎಂದು ಸ್ತುತಿಸಬೇಕಾದರೆ ಬಸವಣ್ಣನವರ ವ್ಯಕ್ತಿತ್ವ, ಶಕ್ತಿ, ಆಚಾರ, ವಿಚಾರ, ಸಾಧನೆಗಳು ಯಾವ ಮಟ್ಟದ್ದು ಎಂದು ನಮಗೆ ಊಹಿಸುವುದೂ ಅಸಾಧ್ಯ.

ಚೆನ್ನಬಸವಣ್ಣನವರು ಕೂಡಾ ಮೇಲಿನ “ಕಲ್ಯಾಣವೆಂಬ ಪ್ರಣತೆಯಲ್ಲಿ ಬಸವನೆಂಬ ಸ್ವಯಂಜ್ಯೋತಿ… ವಚನದಲ್ಲಿಇದೇ ರೀತಿ ವರ್ಣಿಸಿದ್ದಾರೆ. ಬಸವಣ್ಣ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದರು, ಎಲ್ಲಾ ದಮನಿತರಿಗೂ ಊರುಗೋಲಾಗಿದ್ದರು ಮತ್ತು ಅವರೊಳಗೆ ಎಂದೂ ಆರದ ಶಿವಪ್ರಜ್ಞೆಯ ಜ್ಯೋತಿಯನ್ನು ಹತ್ತಿಸಿ ಎಲ್ಲರನ್ನೂ ಮುಕ್ತಾತ್ಮರನ್ನಾಗಿಸಿದರು. ಕಲ್ಯಾಣವೇ ಮುಕ್ತಿ ಕ್ಷೇತ್ರವಾಯಿತು.

ಬಸವಣ್ಣನವರ ಕಲ್ಯಾಣದಲ್ಲಿ ಎಲ್ಲರೂ ಸತ್ಯಶುದ್ಧ ಕಾಯಕ ನಿರತರು. ಸತ್ಯಶುದ್ಧ ಕಾಯಕದಿಂದ ಬಂದ ಸಂಪಾದನೆಯಲ್ಲಿ ತಾವು ಸರಳಜೀವನ ನಡೆಸಿ ಉಳಿದ ಧನವನ್ನು ಸಮಾಜಕ್ಕೆ ನೀಡಲು ಸಿದ್ಧರಿರುವರೇ ವಿನಃ ಬೇಡುವವರಿಲ್ಲ. ಬೇಡುವ ಜನರಿಲ್ಲದ ಕಾರಣ ನೀಡಲು ಆಗದು, ನೀಡಲಾಗದ ಕಾರಣ ನಾನು ಬಡವನಾದೆ ಎಂದು ಬಸವಣ್ಣನವರೇ ಹೇಳುತ್ತಾರೆಂದರೆ ಆ ಜನರ ಮನೋಭೂಮಿಕೆಯನ್ನು ಅವರು ಯಾವರೀತಿ ಹದಗೊಳಿಸಿದ್ದಿರಬಹುದು ಎಂದು ನಾವು ಊಹಿಸಲು ಸಾಧ್ಯವೇ? “ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ, ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ, ಬಡವಾದೆನಯ್ಯಾ ಎನ್ನ ತನು ಮನ ಧನವ ಬೇಡುವರಿಲ್ಲದೆ. ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸು ಕೂಡಲಸಂಗಮದೇವಾ.”

ಪರಮಪವಿತ್ರ ಮುಕ್ತಿಧಾಮ ಕಲ್ಯಾಣದೊಳಗೆ ಪ್ರವೇಶಿಸಲು ವ್ಯಕ್ತಿಯೊಬ್ಬನಿಗೆ ಇರಬೇಕಾದ ಅರ್ಹತೆ ಮತ್ತು ಮಾನದಂಡಗಳನ್ನು ಅಕ್ಕಮಹಾದೇವಿ ತಾಯಿ ಪಟ್ಟಿಮಾಡುತ್ತಾರೆ “ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?  ಹೊಗಬಾರದು, ಅಸಾಧ್ಯವಯ್ಯಾ. ಆಸೆ ಆಮಿಷ ಅಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು. ಒಳಹೊರಗು ಶುದ್ಧನಾದಂಗಲ್ಲದೆ ಕಲ್ಯಾಣವ ಹೊಗಬಾರದು. ನೀನಾನೆಂಬುದ ಹರಿದಂಗಲ್ಲದೆ ಕಲ್ಯಾಣದ ಒಳಗು ತಿಳಿಯಬಾರದು. ಚೆನ್ನಮಲ್ಲಿಕಾರ್ಜುನಂಗೊಲಿದು ಉಭಯ ಲಜ್ಜೆ ಅಳಿದೆನಾಗಿ ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು”. ಪರಮಪವಿತ್ರ ಮುಕ್ತಿಧಾಮ ಕಲ್ಯಾಣದೊಳಗೆ ಪ್ರವೇಶಿಸುವ ಮುನ್ನ ತನ್ನನ್ನು ತಾನು ಅವಲೋಕಿಸಿಕೊಳ್ಳಬೇಕು ಆಸೆ ಆಮಿಷಗಳಿಂದ ಮುಕ್ತನಾಗಿರಬೇಕು, ಅಂತರಂಗ ಮತ್ತು ಬಹಿರಂಗ ಎರಡೂ ಶುದ್ಧವಾಗಿರಬೇಕು ಅಂದರೆ ಒಳಗಿನ ಅರಿವು ಮತ್ತು ಹೊರಗಿನ ಆಚಾರಗಳಲ್ಲಿ ಸಮನ್ವಯತೆ ಇರಬೇಕು, ನಾನೆಂಬ ಅಹಂಕಾರ, ನಾನು ನೀನೆಂಬ ಭಿನ್ನಭಾವ ಅಳಿದಿರಬೇಕು. ಈ ತೆರನಾದ ವಾತಾವರಣ ಕಲ್ಯಾಣ ಪಟ್ಟಣದ ತುಂಬಾ ಕಾಣಬಹುದಿತ್ತು ಅಂಥಾ ಕಲ್ಯಾಣಕ್ಕೆ ಅಕ್ಕ ನಮಿಸಿ ಅದರೊಳಗೆ ಪ್ರವೇಶಿಸುತ್ತಿದ್ದಾರೆ. ಈ ವಚನದ ಇನ್ನೊಂದು ಮಗ್ಗುಲು ಆಧ್ಯಾತ್ಮ ಸಾಧನೆಯ ಪಥಿಕನಿಗಿರಬೇಕಾದ ಲಕ್ಷಣಗಳನ್ನು ಮನವರಿಕೆ ಮಾಡಿಕೊಡುವುದು.

ಮಡಿವಾಳ ಮಾಚಿದೇವ ಶರಣರದೂ ಇದೇ ಭಾವ. ” ಹೊಗಬಾರದು ಕಲ್ಯಾಣವನಾರಿಗೆಯೂ ಹೊಕ್ಕಡೇನು? ಕಲ್ಯಾಣದ ಸ್ಥಾನಮಾನಂಗಳ ನುಡಿಯಬಾರದು. ಈ ಕಲ್ಯಾಣದ ಕಡೆಯ ಕಾಣಬಾರದು. ಕಲ್ಯಾಣದೊಳಗೆ ಹೊಕ್ಕೆಹೆವೆಂದು ಕಲ್ಯಾಣ ಚರಿತ್ರರಾದೆಹೆವೆಂದು ದೇವ ದಾನವ ಮಾನವರೆಲ್ಲರೂ ಭಾವಿಸುತ್ತಿರ್ದುರು ನೋಡಯ್ಯಾ ಕಲ್ಯಾಣವನು. ಅನಂತಮೂರ್ತಿಗಳು ಅನಂತ ಸ್ಥೂಲಮೂರ್ತಿಗಳು ಅನಂತ ಸೂಕ್ಷ್ಮಮೂರ್ತಿಗಳು ಅನಂತ ಮಂತ್ರಧ್ಯಾನರೂಪರು ಪುಣ್ಯಕ್ಕೆ ಅಭಿಲಾಷೆಯ ಮಾಡುವವರು ಪೂಜಕರು ಯೋಗಿಗಳು ಭೋಗಿಗಳು ದ್ವೈತರು ಅದ್ವೈತರು ಕಾಮಿಗಳು ನಿಷ್ಕರ್ಮಿಗಳು ಅಶ್ರಿತರು ಅದೆಂತು ಹೊಗಬಹುದಯ್ಯಾ ಕಲ್ಯಾಣವನು? ಲಿಂಗದೃಷ್ಟಂಗಲ್ಲದೆ ಲಿಂಗವೇದ್ಯಂಗಲ್ಲದೆ ಲಿಂಗಗಂಭೀರಂಗಲ್ಲದೆ ಪ್ರಸಾದ ಕುಳಾನ್ವಯಂಗಲ್ಲದೆ ಆಸೆಗೆಡೆಗುಡದಿಪ್ಪುದೆ ಕಲ್ಯಾಣ. ಸರ್ವಾಂಗ ವರ್ಣವಳಿದು ಕುಲಮದ ತಲೆದೋರದೆ ಭಕ್ತಿ ನಿತ್ಯವಾದುದೆ ಕಲ್ಯಾಣ. ಈ ಕಲ್ಯಾಣವೆಂಬ ಮಹಾಪುರದೊಳಗೆ ಬಸವಣ್ಣನೂ ನಾನೂ ಕೂಡಿ ಹದುಲಿರ್ದೆವು ಕಾಣಾ, ಕಲಿದೇವಯ್ಯ.” ಉಚ್ಚ ಕುಲದಲ್ಲಿ ಹುಟ್ಟಿದ ಬಸವಣ್ಣ, ನಿಮ್ನ ವರ್ಗದಿಂದ ಬಂದ ಮಡಿವಾಳ ಮಾಚಿದೇವ, ನಾವಿಬ್ಬರೂ ಹದುಳಿಗಭಾವದಿಂದ ಬೆರೆತು ಬಾಳುತ್ತಿದ್ದೇವೆ ಈ ಕಲ್ಯಾಣದಲ್ಲಿ ಎಂದಿದ್ದಾರೆ ಮಾಚಿತಂದೆ.

ಸಿದ್ಧರಾಮೇಶ್ವರ ಶರಣರು ತಾವು ಬಹಳ ತಡವಾಗಿ ಕಲ್ಯಾಣಕ್ಕೆ ಬಂದುದಕ್ಕೆ “ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಕಲ್ಯಾಣಕ್ಕೆ. ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಮಾರ್ಗಕ್ಕೆ. ಎಲೆ ಎಲೆ ಲಿಂಗವೆ, ನಾನಂದೆ ಚೆನ್ನಬಸವಣ್ಣನಾಗಲಿಲ್ಲ. ಲಿಂಗವೆ ಲಿಂಗವೆ, ಕಪಿಲಸಿದ್ಧಮಲ್ಲಿಕಾರ್ಜುನಾ.” ಎಂದು ಕಳೆದು ಹೋದ ಸಮಯಕ್ಕೆ ಮರುಗುತ್ತಿದ್ದಾರೆ, ಅಲ್ಲಿ ಜಾತಿ ಬೇಧಗಳಿಲ್ಲ, ಹಿರಿಯ-ಕಿರಿಯ ಎಂಬ ವಯೋ ಬೇಧವಿಲ್ಲ, ಗಂಡು-ಹೆಣ್ಣೆಂಬ ಲಿಂಗ ಬೇಧವಿಲ್ಲ. ಎಲ್ಲರೂ ಸರ್ವ ಸಮಾನರು, ಮೌಢ್ಯಕ್ಕೆ ಅವಕಾಶವಿಲ್ಲ ಎಂದು ಮಾಚಿದೇವರು ಹೇಳುತ್ತಾರೆ  “ಅಯ್ಯಾ, ನಾನು ಹುಟ್ಟಿದಂದಿಂದ ಲಿಂಗವನಲ್ಲದೆ ಆರಾಧಿಸೆ. ಜಂಗಮಕ್ಕಲ್ಲದೆ ನೀಡೆ, ಶರಣಸಂಗವಲ್ಲದೆ ಮಾಡೆ. ಕಲ್ಯಾಣದ ಮಹಾಗಣಂಗಳೊಂದು ಹೊಳೆಯ ಮಾಡಿಕೊಟ್ಟರು. ಆ ಹೊಳೆಯಲ್ಲಿ ಹೆಣ್ಣು ಗಂಡು ಸುಳಿಯಲೀಯೆನು. ಚಿಕ್ಕವರು ಹಿರಿಯರ ಸುಳಿಯಲೀಯೆನು. ಎಲ್ಲಾ ಮಹಾಗಣಂಗಳು ಎನ್ನ ಹೊಳೆಯಲೆ ಹಾಯುವರು. ಲಿಂಗದ ವಸ್ತ್ರವನೊಗೆದು ಕಾಯಕದಲ್ಲಿ ಶುದ್ಧನಾದೆನು. ಎನ್ನ ಕಾಯಕವನವಧರಿಸು ಕಲಿದೇವಯ್ಯಾ”.

ಕಲ್ಯಾಣದಲ್ಲೊಂದು ಅನುಭಾವ ಮಂಟಪ, ಆ ಅನುಭಾವ ಮಂಟಪದಲ್ಲಿ ನಿತ್ಯ ಅನುಭಾವ ಗೋಷ್ಠಿ, ಅಲ್ಲಿ ಮಥನಿಸಿ ಉದಿಸಿದ ಅನುಭಾವ ಅಸಂಖ್ಯಾತರ ಬಾಳು ಬೆಳಗುತ್ತಿದ್ದಿತ್ತು, ಆ ಅನುಭಾವದ ಶಿವಬೆಳಗಿನೊಳಗೆ ನಾನು ಓಲಾಡುತ್ತಿರ್ದೆನು ಎನ್ನುತ್ತಾರೆ ಶರಣ ದೇಶಿಕೇಂದ್ರ ಸಂಗನಬಸವಯ್ಯನವರು. “ಶ್ರೀಮಹಾಕಲ್ಯಾಣದೊಳಗಿರ್ದು ನಿತ್ಯಾನುಭವದ ಬೆಳಗಿನೊಳೋಲ್ಯಾಡುತಿರ್ದೆನು. ಅದು ಹೇಗೆಂದೊಡೆ, ಆದ್ಯರನುಭಾವವೆನ್ನ ಕಾರಣತನುವಿನಲ್ಲಿ ಆನಂದಪ್ರಕಾಶಮಯವಾಗಿ ಕಾಣಿಸುತ್ತಿಹುದು. ವೇದ್ಯರನುಭಾವವೆನ್ನ ಸೂಕ್ಷ್ಮತನುವಿನಲ್ಲಿ ಚಿತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು. ಸಾಧ್ಯರನುಭಾವವೆನ್ನ ಸ್ಥೂಲತನುವಿನಲ್ಲಿ ಸತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು. ಇದು ಕಾರಣ, ಈ ತ್ರಿವಿಧ ಮಹಿಮರನುಭಾವಕ್ಕೆ ಎನ್ನನೊತ್ತೆಯನಿತ್ತು ಮರೆದಿರ್ದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.” ಗುರು ಲಿಂಗ ಜಂಗಮ ತ್ರಿವಿಧಕ್ಕೆ ತನು ಮನ ಧನವೆಂಬ ತ್ರಿವಿಧವನ್ನಿತ್ತು ಸ್ಥೂಲ ಸೂಕ್ಷ್ಮ ಕಾರಣ ತನುಗಳಲ್ಲಿ ಅರಿವು ಆಚಾರ ಅನುಭಾವವೆಂಬ ತ್ರಿವಿಧ ಫಲಗಳೊಡಗೂಡಿ ನಾನು ಬೆಳಗಿನ ಸ್ವರೂಪವೇ ಆದೆ ಎಂದು ಕಲ್ಯಾಣದ ಮತ್ತು ತಮ್ಮ ಜೀವನದ ಸಾರ್ಥಕತೆಯನ್ನು ಬಿಂಬಿಸಿದ್ದಾರೆ. ಮತ್ರ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು, ದೇವಾ, ನೀವೀ ಕಲ್ಯಾಣಕ್ಕೆ ಬಂದವತರಿಸಿದಲ್ಲಿ. ಬಸವಣ್ಣ ಬರಲೊಡನೆ ಕಲ್ಯಾಣ ಮತ್ತು ಕೈಲಾಸ ಬೇರಿಲ್ಲದಂತಾಗಿ ಕಲ್ಯಾಣವೇ ಕೈಲಾಸವಾಯಿತು.

ಚೆನ್ನಬಸವಣ್ಣನವರು ಕಲ್ಯಾಣದ ಸಮಸ್ತ ವಿವರಣೆಯನ್ನು ಸಮಗ್ರವಾಗಿ  ಹೀಗೆ ನಿರೂಪಿಸಿದ್ದಾರೆ “ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ್ಯ ಎಂತೆಂದಡೆ: ವಿಸ್ತರಿಸಿ ಪೇಳುವೆನು; ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ. ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ರುದ್ರಲೋಕವೆ ಮತ್ರ್ಯಕ್ಕಿಳಿತಂದು, ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯಾ ! ಅಲ್ಲಿ ಸತ್ಯರು ಸಾತ್ತ್ವಿಕರು ನಿತ್ಯರು ನಿಜೈಕ್ಯರು ಮಹಾಜ್ಞಾನಿಗಳು ಪರಮಶಿವಯೋಗಿಗಳು ಶಿವಾನುಭಾವಸಂಪನ್ನರು ಶಿವಲಿಂಗಪ್ರಾಣಿಗಳು ಶಿವಪ್ರಸಾದಪಾದೋದಕಸಂಬಂಧಿಗಳು ಶಿವಾಚಾರವೇದ್ಯರು ಶಿವಾಗಮಸಾಧ್ಯರು ಶಿವಸಮಯಪಕ್ಷರುಗಳಲ್ಲದೆ, ಮತ್ತಾರು ಅಲ್ಲಿಲ್ಲ ನೋಡಿರಯ್ಯಾ. ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಗಳು ಹೊಗಬಾರದು ಕಲ್ಯಾಣವ. ಮೀರಿ ಹೊಕ್ಕೆಹೆವೆಂಬವರಿಗೆ ಬಾಳ ಬಾಯಧಾರೆ ನೋಡಿರಯ್ಯಾ. ಆ ಕಲ್ಯಾಣ ಅಗಮ್ಯ ಅಗೋಚರ ನೋಡಿರಯ್ಯಾ. ಆ ಮಹಾಕಲ್ಯಾಣದ ವಿಸ್ತೀರ್ಣ ತಾನೆಂತೆಂದಡೆ: ಹನ್ನೆರಡು ಯೋಜನ ಪರಿಪ್ರಮಾಣದ ವಿಸ್ತ್ರೀರ್ಣಪಟ್ಟಣಕ್ಕೆ ಮುನ್ನೂರರವತ್ತು ಬಾಗಿಲವಾಡ. ಆ ಬಾಗಿಲಿಂಗೆ ನೂರ ಐವತ್ತೈದು ವಜ್ರದ ಹಾರೆಯ ಕದಂಗಳು. ಇನ್ನೂರ ಇಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ ನಾನೂರ ಐವತ್ತು ಸುವರ್ಣದ ಕೆಲಸದ ಕದಂಗಳು, ಅಲ್ಲಿ ನೂರ ಹದಿನೈದು ಚೋರಗಂಡಿ; ಅವಕ್ಕೆ ನೂರ ಹದಿನೈದು ಮೊಳೆಯ ಕದಂಗಳು. ಇಪ್ಪತ್ತು ಬಾಗಿಲು ಆಳ್ವರಿಯೊಳಗಿಪ್ಪವಾಗಿ ಅವಕ್ಕೆ ಕದಂಗಳಿಲ್ಲ. ಆ ಪಟ್ಟಣಕ್ಕೆ ಬರಿಸಿಬಂದ ಕೋಂಟೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣು. ಬಾಹತ್ತರ [ನಿಯೋಗಿಗಳ] ಮನೆ ಲಕ್ಷ; ಮಂಡಳಿಕರ ಮನೆ ಲಕ್ಷ; ಸಾಮಂತರ ಮನೆ ಲಕ್ಷ; ರಾಯ ರಾವುತರ ಮನೆಯೊಳಡಗಿದ ಮನೆಗಳಿಗೆ ಲೆಕ್ಕವಿಲ್ಲ. ದ್ವಾದಶ ಯೋಜನ ವಿಸ್ತ್ರೀರ್ಣದ ಸೂರ್ಯವೀಥಿ ನೂರಿಪ್ಪತ್ತು; ದ್ವಾದಶ ಯೋಜನದ ಸೋಮವೀಥಿ ನೂರಿಪ್ಪತ್ತೈದು. ಅದರಿಂ ಮಿಗಿಲಾದ ಒಳಕೇರಿ ಹೊರಕೇರಿಗೆ ಗಣನೆಯಿಲ್ಲ. ಆ ಪಟ್ಟಣದೊಳಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯ. ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕದೇವರ ಶಿವಾಲಯ. ಮುನ್ನೂರರವತ್ತು ಪದ್ಮಪತ್ರ ತೀವಿದ ಸರೋವರಗಳು. ಎರಡು ಲಕ್ಷವು ಎಂಬತ್ತೈದು ಸಾವಿರದ ಏಳು ನೂರೆಪ್ಪತ್ತು ದಾಸೋಹದ ಮಠಂಗಳು. ಆ ದಾಸೋಹದ ಮಠಂಗಳಿಗೆ ಮುಖ್ಯವಾದ ಬಸವರಾಜದೇವರ ಮಠದ ವಿಸ್ತ್ರೀರ್ಣವೆಂತೆಂದಡೆ: ಯೋಜನವರಿಯ ಬಿನ್ನಾಣದ ಕಲುಗೆಲಸ; ಅತಿ ಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು. ಅವಕ್ಕೆ ಪಂಚಾಕ್ಷರಿಯ ಶಾಸನ. ಮಿಸುನಿಯ ಕಂಭದ ತೋರಣಗಳಲಿ ರುದ್ರಾಕ್ಷಿಯ ಸೂಸಕ ಆ ಬಾಗಿಲುವಾಡದಲ್ಲಿ ಒಪ್ಪುತಿರ್ಪವಯ್ಯಾ, ನಂದಿಯ ಕಂಭದ ಧ್ವಜ ಉಪ್ಪರಗುಡಿ ಪತಾಕೆ ವ್ಯಾಸಧ್ವಜ ಒಪ್ಪುತಿರ್ಪವಯ್ಯಾ, ಆ ಮಧ್ಯದಲ್ಲಿ ಬಸವರಾಜದೇವರ ಸಿಂಹಾಸನದ ವಿಸ್ತೀರ್ಣದ ಪ್ರಮಾಣು: ಸಹಸ್ರಕಂಭದ ಸುವರ್ಣದುಪ್ಪರಿಗೆ; ಆ ಮನೆಗೆತ್ತಿದ ಹೊನ್ನಕಳಸ ಸಾವಿರ. ಗುರುಲಿಂಗ ಜಂಗಮಕ್ಕೆ ಪಾದಾರ್ಚನೆಯ ಮಾಡುವ ಹೊಕ್ಕರಣೆ ನಾಲ್ಕು ಪುರುಷಪ್ರಮಾಣದ ಘಾತ. ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು ಬೆಳೆವ ರಾಜಶಾಲಿಯ ಗದ್ದೆ ಹನ್ನೆರಡು ಕಂಡುಗ, ಆ ಯೋಜನವರಿಯ ಬಿನ್ನಾಣದ ಅರಮನೆಯ ವಿಸ್ತ್ರೀರ್ಣದೊಳಗೆ ಲಿಂಗಾರ್ಚನೆಯ ಮಾಡುವ ಮಠದ ಕಟ್ಟಳೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಇನ್ನು ಬಸವರಾಜದೇವರು ಮುಖ್ಯವಾದ ಅಸಂಖ್ಯಾತರ ಮಠಂಗಳು ಆ ಕಲ್ಯಾಣದೊಳಗೆ ಎಷ್ಟು ಎಂದಡೆ: ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು, ಇಪ್ಪತ್ತೆಂಟು ಸಾವಿರ ಮಹಾಮನೆಗಳು; ಹತ್ತು ಸಾವಿರ ನಿತ್ಯನೇಮಿಗಳ ಮಠಂಗಳು; ಹದಿನೈದು ಸಾವಿರ ಚಿಲುಮೆಯಗ್ಗವಣಿಯ ವ್ರತಸ್ಥರ ಮಠಂಗಳು; ಐದು ಸಾವಿರ ವೀರವ್ರತನೇಮಿಗಳ ಕಟ್ಟಳೆಯ ಮಠಂಗಳು; ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು, ಒಂದು ಸಾವಿರ ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು; ನಿತ್ಯ ಸಾವಿರ ಜಂಗಮಕ್ಕೆ ಆರೋಗಣೆಯ ಮಾಡಿಸುವ ದಾಸೋಹಿಗಳ ಮಠಂಗಳು ಮೂವತ್ತೆರಡು ಸಾವಿರ; ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ; ನಿತ್ಯ ಸಾವಿರದೈನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ; ನಿತ್ಯ ಅವಾರಿಯಿಂದ ಮಾಡುವ ಮಾಟಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ; ಜಂಗಮಸಹಿತ ಸಮಯಾಚಾರದಿಂದ ಲಿಂಗಾರ್ಚನೆಯ ಮಾಡುವ ಜಂಗಮಭಕ್ತರ ಮಠಂಗಳು ಎರಡು ಸಾವಿರದೇಳ್ನೂರೆಪ್ಪತ್ತು; ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಏಳುನೂರೆಪ್ಪತ್ತು. ಇಂತಪ್ಪ ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ ಪ್ರಮಥಗಣಂಗಳ ಮಠಂಗಳು ಏಳು ನೂರೆಪ್ಪತ್ತು. ಇಂತೀ ಮಹಾಪ್ರಮಥರಿಗೆ ಪುರಾತರಿಗೆ ಅಸಂಖ್ಯಾತ ಮಹಾಗಣಂಗಳಿಗೆ ಪ್ರಥಮ ನಾಯಕನಾಗಿ, ಏಕಮುಖ, ದಶಮುಖ, ಶತಮುಖ, ಸಹಸ್ರಮುಖ, ಲಕ್ಷಮುಖ, ಕೋಟಿಮುಖ, ಅನಂತಕೋಟಿಮುಖನಾಗಿ ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣ. ಜಗದಾರಾಧ್ಯ ಬಸವಣ್ಣ, ಪ್ರಮಥಗುರು ಬಸವಣ್ಣ, ಶರಣಸನ್ನಹಿತ ಬಸವಣ್ಣ, ಸತ್ಯಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯ ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ, ಸರ್ವಾಚಾರಸಂಪನ್ನ ಬಸವಣ್ಣ, ಸರ್ವಾಂಗಲಿಂಗಿ ಬಸವಣ್ಣ, ಸುಜ್ಞಾನಭರಿತ ಬಸವಣ್ಣ, ನಿತ್ಯಪ್ರಸಾದ ಬಸವಣ್ಣ, ಸಚ್ಚಿದಾನಂದಮೂರ್ತಿ ಬಸವಣ್ಣ, ಸದ್ಯೋನ್ಮುಕ್ಮಿರೂಪ ಬಸವಣ್ಣ, ಅಖಂಡಪರಿಪೂರ್ಣ ಬಸವಣ್ಣ, ಅಭೇದ್ಯಭೇದಕ ಬಸವಣ್ಣ, ಅನಾಮಯಮೂರ್ತಿ ಬಸವಣ್ಣ, ಮಹಾಮನೆಯ ಮಾಡಿದಾತ ಬಸವಣ್ಣ, ರುದ್ರಲೋಕವ ಮತ್ರ್ಯಲೋಕಕ್ಕೆ ತಂದಾತ ಬಸವಣ್ಣ, ಶಿವಚಾರದ ಘನವ ಮೆರೆದಾತ ಬಸವಣ್ಣ. ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡುವ, ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿರಾಯ, ರಾಜಾಧಿರಾಜ ಬಿಜ್ಜಳರಾಯನೂ ಆ ಬಸವಣ್ಣನೂ ಆ ಕಲ್ಯಾಣಪಟ್ಟಣದೊಳಗೆ ಸುಖಸಂಕಥಾವಿನೋದದಿಂದ ರಾಜ್ಯಂಗೆಯುತ್ತಿರಲು, ಆ ಕಲ್ಯಾಣದ ನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು. ಲೋಕದೊಳಗೆ ಕಲ್ಯಾಣವೆ ಕೈಲಾಸವೆನಿಸಿತ್ತು. ಇಂತಪ್ಪ ಕಲ್ಯಾಣದ ದರುಶನವ ಮಾಡಿದಡೆ ಭವಂ ನಾಸ್ತಿ, ಇಂತಪ್ಪ ಕಲ್ಯಾಣವ ನೆನೆದಡೆ ಪಾಪಕ್ಷಯ, ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದಡೆ ಕರ್ಮಕ್ಷಯವಹುದು, ಮೋಕ್ಷ ಸಾಧ್ಯವಹುದು, ಇದು ಕಾರಣ, ಕೂಡಲಚೆನ್ನಸಂಗಮದೇವಾ, ನಿಮ್ಮ ಭಕ್ತ ಬಸವಣ್ಣನಿದ್ದ ಠಾವೇ ಮಹಾಕಲ್ಯಾಣವೆಂದರಿದು ದಿವ್ಯಶಾಸನವ ಬರೆದು ಪರಿಸಿದ ಕಾರಣ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ.’

ಜಡರುಗಳ ಮನದ ಮೈಲಿಗೆಯ ಕಳೆದು ಇಳೆಗೆ ಬೆಳಕಾದ ಕಲ್ಯಾಣ ಲಾವಣ್ಯವತಿ ಮತ್ತು ಶೀಲವಂತರ ವಿವಾಹದಿಂದಾಗಿ ಕ್ರಾಂತಿಗೆ ಮುನ್ನುಡಿ ಬರೆಯಿತು. ಗುರು ಬಸವಣ್ಣನವರನ್ನು ಗಡೀಪಾರು ಮಾಡಿ ಅಸಂಖ್ಯಾತ ಶರಣರ ವಧೆಯಾಯಿತು, ಅನುಭಾವ ಮಂಟಪವೆಂಬ ಜೇನ್ಗೂಡಿನಲ್ಲಿ ಶರಣರ ಅನುಭಾವವೆಂಬ ಜೇನುತುಪ್ಪವನ್ನು ವಚನಗಳ ರೂಪದಲ್ಲಿ ಸಂಗ್ರಹಿಸಿಡಲಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಮತ್ತು ವೈಚಾರಿಕತೆಯ ವಿರೋಧಿಗಳು ಶರಣರ ಅಸ್ಮಿತೆಯಾದ ವಚನಗಳನ್ನು ಸುಟ್ಟುಹಾಕಿದರು, ಕಲ್ಯಾಣ ಅಕ್ಷರಶಃ ಕಟುಕರ ಕೇರಿಯಂತೆ ಭಾಸವಾಯಿತು. ವಚನಭಂಡಾರಿ ಶರಣ ಶಾಂತರಸ “ಅಯ್ಯಾ ಗುರುವೆಂಬರ್ಚಕನು ತಂದು, ಎನಗಿಷ್ಟವ ಕಟ್ಟಲಿಕೆ, ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು. ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು, ಲಿಖಿತವ ಲೇಖನವ ಮಾಡಿ ಮಾಡಿ ದಣಿದು, ಹಂಗನೂಲ ಹರಿದು ಹಾಕಿದೆನು. ಇಷ್ಟವನಿಲ್ಲಿಯೇ ಇಟ್ಟೆನು. ಅಯ್ಯಾ ನಾ ಹಿಡಿದ ನೀಲಕಂಠನು ಶಕ್ತಿ ಸಮೇತವ ಬಿಟ್ಟನು, ಕಲ್ಯಾಣ ಹಾಳಾಯಿತ್ತು, ಭಂಡಾರ ಸೊರೆಹೋಯಿತ್ತು, ನಿರ್ವಚನವಾಯಿತ್ತು . ಶಾಂತ ಸಂತೋಷಿಯಾದ, ಅರಸರು ನಿರ್ಮಾಲ್ಯಕ್ಕೊಳಗಾದರು. ಅಲೇಖ ನಾಶವಾಯಿತ್ತು, ಪತ್ರ ಹರಿಯಿತ್ತು, ನಾದ ಶೂನ್ಯವಾಯಿತ್ತು ಒಡೆಯ ಕಲ್ಲಾದ ಕಾರಣ, ಎನ್ನೈವರು ಸ್ತ್ರೀಯರು ಉಳಲಾಟಗೊಂಡೇಳಲಾರದೆ ಹೋದರು ಕಾಣಾ, ಕಲ್ಲಿನಾಥಾ”. ಕಲ್ಯಾಣ ಹಾಳಾಯಿತ್ತು ಭಂಡಾರ ಸೂರೆಹೋಯಿತ್ತು ಎಂದು ಮನದ ಬೇಗುದಿಯನ್ನು ಹೊರಹಾಕಿದ್ದಾರೆ.

ಕಲ್ಪಿತ ಕೈಲಾಸಕ್ಕೆ ಪರ್ಯಾಯವಾಗಿ ಕಲ್ಯಾಣವೇ ನೈಜ ಕೈಲಾಸವಾಗಿತ್ತು. ಅಂಥಾ ಕಲ್ಯಾಣ ತಮ್ಮ ಕಣ್ಣೆದುರಿಗೇ ಹಾಳಾಗಿದ್ದನ್ನು ಕಂಡು  ನೀಲಮ್ಮ ತಾಯಿಯವರು ಮರುಗುತ್ತಾರೆ. “ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ. ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ. ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ. ಆ ಕಲ್ಯಾಣವಳಿದು ಕೈಲಾಸವಾದ ಬಳಿಕ, ಬಸವನ ಮೂರ್ತಿಯಿಲ್ಲ. ಬಸವನ ಮೂರ್ತಿಯನರಿಯದ ಕಾರಣ ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ.” ಬಸವಣ್ಣನವರ ಪ್ರಗತಿಪರ ವಿಚಾರಧಾರೆಗಳನ್ನು ಅರಿಯದೆ  ಅವರನ್ನು ಗಡೀಪಾರು ಮಾಡಿದ್ದರಿಂದ ಮತ್ತು ನಂತರದಲ್ಲಿ ಸಂಭವಿಸಿದ ಗಲಭೆಗಳಿಂದ ಬಹಳವಾಗಿ ನೊಂದ ನೀಲಮ್ಮನವರು  ಇನ್ನಿತರ ಶರಣರೊಡನೆ ಕಲ್ಯಾಣವನ್ನು ತೊರೆಯುತ್ತಾರೆ.

ಯಾವ ಕಲ್ಯಾಣ ಇಡೀ ಜಗತ್ತಿಗೆ ಪ್ರಪ್ರಥಮವಾಗಿ ಪ್ರಜಾಪ್ರಭುತ್ವವನ್ನು ಕೊಡುಗೆಯಾಗಿ ಕೊಟ್ಟಿತ್ತೋ ಆ ಕಲ್ಯಾಣ ಅಂದು ಕಟುಕರ ಕೇರಿಯಾಯಿತು.

ಯಾವ ಕಲ್ಯಾಣ ಇಡೀ  ಜಗತ್ತಿನಲ್ಲೇ ಪ್ರಪ್ರಥಮವಾಗಿ ಜಾತಿ, ವರ್ಣ, ವರ್ಗ ಮತ್ತು ಲಿಂಗ ಸಮಾನತೆಯನ್ನು  ಸಾರಿ ಇಡೀ ಜಗತ್ತಿಗೇ ಮಾದರಿಯಾಯಿತ್ತೋ ಅಲ್ಲಿ ಆ ತತ್ವಗಳು ಹೇಳಹೆಸರಿಲ್ಲದಂತಾದವು.

ಯಾವ ಕಲ್ಯಾಣ ಇಡೀ  ಜಗತ್ತಿನಲ್ಲೇ ಪ್ರಪ್ರಥಮವಾಗಿ ನಿರುಪಯುಕ್ತ ಪೂಜಾರಿಕೆಯನ್ನು ಕಿತ್ತೆಸೆದು ನೈಜ ಕಾಯಕಕ್ಕೆ  ಪೂಜ್ಯಸ್ಥಾನ ಕಲ್ಪಿಸಿತ್ತೋ ಆ ಕಲ್ಯಾಣ ಹಾಳಾಯಿತ್ತು.

ಅಂಥಾ ಕಲ್ಯಾಣ ರಾಜ್ಯವನ್ನು ಇಂದು ಮತ್ತೆ ಕಟ್ಟಬೇಕಿದೆ, ಜಾತಿರಹಿತ ಸರ್ವಸಮಾನತೆಯ ಕಲ್ಯಾಣ ರಾಜ್ಯನಿರ್ಮಿಸಲು ಬಸವಣ್ಣ ಮತ್ತೆ ಬರಬೇಕಾಗಿದೆ. ಇಡೀ ಜಗತ್ತು ಆ ಬಸವಣ್ಣನ ಆಗಮನದ ನಿರೀಕ್ಷೆಯಲ್ಲಿದೆ.

ಮತ್ತೆ ಬಾ ಬಸವಣ್ಣ ಬಳಲಿಬೆಂಡಾದ ಈ ಧರೆಯನ್ನು ಉದ್ದರಿಸಿ ನವಕಲ್ಯಾಣ ನಿರ್ಮಿಸು ಬಾ ಬಸವಣ್ಣ.

Previous post ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
Next post ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು

Related Posts

ಗುರುವೇ ತೆತ್ತಿಗನಾದ
Share:
Articles

ಗುರುವೇ ತೆತ್ತಿಗನಾದ

April 29, 2018 ಕೆ.ಆರ್ ಮಂಗಳಾ
ಜಾಗತಿಕ ಇತಿಹಾಸದಲ್ಲಿಯೇ ಹನ್ನೆರಡನೆಯ ಶತಮಾನ ಪ್ರಬುದ್ಧ ಚಿಂತನೆಗಳು ನಡೆದ ಕಾಲಮಾನ. ಅದುವರೆಗೆ ಮನುಷ್ಯನ ಜೀವನವನ್ನೂ, ಮನಸ್ಸನ್ನೂ ಆಳುತ್ತಿದ್ದ ಕರ್ಮಠ ವ್ಯವಸ್ಥೆಗಳನ್ನು...
ಗುರು-ಶಿಷ್ಯ ಸಂಬಂಧ
Share:
Articles

ಗುರು-ಶಿಷ್ಯ ಸಂಬಂಧ

August 8, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಡಕೆಯ ಮಾಡುವಡೆ ಮಣ್ಣೆ ಮೊದಲು, ತೊಡುಗೆಯ ಮಾಡುವಡೆ ಹೊನ್ನೆ ಮೊದಲು, ಶಿವಪಥವನರಿವಡೆ ಗುರುಪಥವೆ ಮೊದಲು, ಕೂಡಲಸಂಗಮದೇವರನರಿವಡೆ ಶರಣರ ಸಂಗವೆ ಮೊದಲು. ಸಂಗದ ಮಹತ್ವವನ್ನು ಕೆಲವು...

Comments 12

  1. jyothi patil
    Apr 5, 2019 Reply

    ಕಲ್ಯಾಣದ ಕುರಿತು ನನಗೆ ತುಂಬಾ ಕುತೂಹಲವಿತ್ತು. ನಿಮ್ಮ ಲೇಖನ ನನ್ನ ಕುತೂಹಲವನ್ನು ಮತ್ತೂ ಹೆಚ್ಚಿಸಿತು. ಅದರ ವಿಸ್ತೀರ್ಣವನ್ನು ಲೆಕ್ಕಹಾಕಿದ್ದು ಸರಿಯಾಗಿದೆ ಸರ್.

  2. lingaraju Patil
    Apr 5, 2019 Reply

    ಕಲ್ಪಿತ ಕೈಲಾಸಕ್ಕೆ ಪರ್ಯಾಯವಾಗಿ ಕಲ್ಯಾಣವೇ ನೈಜ ಕೈಲಾಸವಾಗಿತ್ತು. ಈ ಮಾತು ಸತ್ಯ ಸತ್ಯ ಸತ್ಯ. ಇವಾಗ ಸಹ ಕಲ್ಯಾಣವೆಂಬ ಹೆಸರಿನಲ್ಲಿಯೇ ಶರಣರಿದ್ದಾರೆ ಎಂದು ಅನಿಸುತ್ತದೆ.

  3. ಕುಮಾರಪ್ಪ ಬರಗೂರು
    Apr 6, 2019 Reply

    ಕಲ್ಯಾಣದ ವಿಸ್ತೀರ್ಣ ಎಷ್ಟೂಂತ ನಾನೂ ತಲೆ ಕೆಡಿಸಿಕೊಂಡಿದ್ದೆ. ನಮ್ಮ ಅಳತೆ ಮಾಪನಕ್ಕೂ ಆ ಕಾಲದವರ ಅಳತೆಗೂ ವ್ಯತ್ಯಾಸವಿದೆ. ನೀವು ನಿಖರವಾಗಿ ಹೇಳಲು ಪ್ರಯತ್ನಪಟ್ಟಿದ್ದೀರಿ……. ಆದರೂ ಗೊಂದಲಗಳಿವೆ, ಇರಲಿ ಕಲ್ಯಾಣ ಸ್ವರ್ಗ-ಕೈಲಾಸ ಎಲ್ಲವನ್ನೂ ನಾಚಿಸುವಂತಿತ್ತು ಅನ್ನೋದು ನಿಜ.

  4. ಅಪ್ಪಾಜಿಗೌಡ ಹಿರಿಯೂರು
    Apr 8, 2019 Reply

    ” ಹೊಗಬಾರದು ಕಲ್ಯಾಣವನಾರಿಗೆಯೂ ಹೊಕ್ಕಡೇನು? ಕಲ್ಯಾಣದ ಸ್ಥಾನಮಾನಂಗಳ ನುಡಿಯಬಾರದು. ಈ ಕಲ್ಯಾಣದ ಕಡೆಯ ಕಾಣಬಾರದು…….” ಮಡಿವಾಳ ಮಾಚಿದೇವರ ವಚನಕ್ಕೆ ಇನ್ನಷ್ಟು ವ್ಯಾಖ್ಯಾನ ಕೊಡಬೇಕಿತ್ತು. ಕಲ್ಯಾಣ ಒಳಗೂ ಅದೇ, ಹೊರಗೂ ಅದೇ…. ಎನ್ನುವಂತಹ ಮಾತುಗಳಲ್ಲಿ ಗಹನವಾದ ಅರ್ಥಗಳು ಅಡಗಿವೆ.

  5. veeranna madiwalar
    Apr 9, 2019 Reply

    ಕಲ್ಯಾಣದ ಲೆಕ್ಕ ವಿಸ್ತೀರ್ಣದಲ್ಲಿ ತೋರಿಸುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಈ ಹಿಂದೆ ನಾನೂ ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಲೆಕ್ಕದ ಜೊತೆ ಮ್ಯಾಪೂ ಕೊಟ್ಟಿದ್ದರೆ ಚನ್ನಾಗಿತ್ತು.

  6. keerti jajuru
    Apr 10, 2019 Reply

    ಆಸೆ, ಆಮಿಶಗಳನ್ನು ಅಳಿದವರಿಗಲ್ಲದೆ ಕಲ್ಯಾಣಕ್ಕೆ ಹೋಗಲುಬಾರದು- ಅಕ್ಕನ ವಚನದಲ್ಲಿ ಕಲ್ಯಾಣದ ಗುಣಗಳ ಪಟ್ಟಿ ಇದೆ. ಅಂಥ ಕಲ್ಯಾಣ ಶರಣರ ಬೀಡಾದ ಕಲ್ಯಾಣ ಬಸವ ಕಲ್ಯಾಣವಾಗಿ ಖ್ಯಾತಿ ಪಡೆಯಿತು. ಲೇಖನ ವಚನಗಳೊಳಗೆ ಇಳಿದು ಬೇರೆ ಬೇರೆ ದೃಷ್ಟಿಯಲ್ಲಿ ಕಲ್ಯಾಣ ನೋಡಬೇಕಾಗಿತ್ತು

  7. jeevan koppad
    Apr 12, 2019 Reply

    bayalu is interesting blog, its content and presentation are professional. the two articles and a story of this month are thought provoking.

  8. ಪದ್ಮರಾಜ ನಾಶಿ
    Apr 20, 2019 Reply

    ಕಲ್ಯಾಣದ ಚಿತ್ರ ಕೊಡುವ ಲೇಖನ ಕುತೂಹಲವಾಗಿದೆ, ನಾನು ಕಲ್ಯಾಣಕ್ಕೆ ಆಗಾಗ ಹೋಗುತ್ತಿರುತ್ತೇನೆ, ಲಿಂಗಾಯತನಲ್ಲದಿದ್ದರೂ ನಾನು ಬಸವಣ್ಣನವರ ಅಭಿಮಾನಿ

  9. ಸರೋಜಮ್ಮ ಭದ್ರಾಪುರ
    Apr 20, 2019 Reply

    ನಾನು ಬಯಲು ಓದುತ್ತಿರುತ್ತೇನೆ. ಎಲ್ಲರೂ ತುಂಬಾ ಚೆನ್ನಾಗಿ ಬರೆಯುತ್ತೀರಿ. ಓದಿ ಮನಸ್ಸು ಹಗುರಾಗುತ್ತೆ.
    -ಸರೋಜಮ್ಮ ಭದ್ರಾಪುರ

  10. Dr.Shashidhar Angadi
    Apr 21, 2019 Reply

    ಡಾ. ಶಶಿಧರ್ ಅಂಗಡಿ
    ಕಲ್ಯಾಣದ ವಿವರ ತಿಳಿಸುವ ಐತಿಹಾಸಿಕ ಪುಸ್ತಕಗಳಿದ್ದರೆ ತಿಳಿಸುವಿರಾ ಸರ್? ಹೆಚ್ಚಿನ ಮಾಹಿತಿಗಾಗಿ ಹುಡುಕುತ್ತಿದ್ದೇನೆ

  11. mahadev hadapad natuvara
    Apr 22, 2019 Reply

    ಕಲ್ಯಾಣವನ್ನು ವಿಸ್ತೀರ್ಣ ಸಹಿತ ಕಣ್ಣಮುಂದೆ ಕಟ್ಟಿದೀರಿ.. ಧನ್ಯವಾದಗಳು ಸರ್

  12. Prasanna Hosur
    Aug 9, 2020 Reply

    ನಿಮ್ಮ ಪಾದಕ್ಕೆ ಅನಂತ ಭಕ್ತಿಯಿಂದ ಶರಣು ಶರಣಾರ್ಥಿಗಳು💐💐💐

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
ಸನಾತನ ಧರ್ಮ
ಸನಾತನ ಧರ್ಮ
October 10, 2023
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
Copyright © 2023 Bayalu