Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕರ್ತಾರನ ಕಮ್ಮಟ
Share:
Articles July 5, 2019 ಮಹಾದೇವ ಹಡಪದ

ಕರ್ತಾರನ ಕಮ್ಮಟ

ವಸುಧೆಯೊಳು ಹೆಸರಾಂತ ಸೊನ್ನಲಿಗೆ ಎಂಬ ಊರಿನಲ್ಲಿ ಮುದ್ದಣ್ಣ ಸುಗ್ಗವ್ವೆ ಎಂಬ ಗಂಡ ಹೆಂಡತಿಗೆ ಮುದ್ದಾದ ಇಬ್ಬರು ಮಕ್ಕಳಿದ್ದರು. ದೊಡ್ಡವನು ಬೊಮ್ಮಣ್ಣ ಸಣ್ಣವನು ಧೂಳಯ್ಯ. ಬೊಮ್ಮಣ್ಣ ಹುಟ್ಟಿದ ಏಳೆಂಟು ವರ್ಷದ ನಂತರ ಮತ್ತೊಂದು ಗಂಡುಕೂಸು ಹುಟ್ಟಿ ಬಾಳಿಕೊಂಡಿತ್ತು. ಊರಿಗೊಂದು ಹಿರೇಮನೆತನ, ಆ ಮನೆತನಕ್ಕ ಗೊಂಡ, ಗೌಡ ಅನ್ನುವ ವಾಡಿಕೆ ಆ ಸೀಮೆಯಲ್ಲಿದ್ದ ಕಾರಣ ಗುಡ್ಡರ ಆ ಸೊನ್ನಲಿಗೆಗೆ ಮುದ್ದಣ್ಣ ಗೌಡನಾಗಿದ್ದ. ಕೂಸು ಹುಟ್ಟಿದ ಹದಿಮೂರನೇ ದಿವಸಕ್ಕೆ ಊರವರಿಗೆಲ್ಲ ಹಾಲು-ಹುಗ್ಗಿಯ ಊಟವ ಹಾಕಿ, ಚಂದ್ರಕಳೆಯ ಆ ಮುದ್ದಾದ ಗಂಡುಕೂಸನ್ನು ತೊಟ್ಟಿಲಿಗೆ ಹಾಕಿದ್ದರು. ಸಂಬಂಧದಲ್ಲಿ ಅತ್ತೆಯಾಗುವ ಹೆಣ್ಣುಮಕ್ಕಳು  ಕುಲದೇವರಾದ ಧೂಳಮಾಂಕಾಳನ ಹೆಸರನ್ನು ಆ ಕೂಸಿನ ಕಿವಿಯೊಳಗೆ ಉಸುರಿ ಕುಟ್ಟುಟ್ಟೆ ಕುರ್ರ ಅಂತ ಕಚಗುಳಿ ಕೊಟ್ಟು ಗುಗ್ಗರಿ ತಿಂದಿದ್ದರು.

ತಿಂಗಳ ಚಂದ್ರ ಮತ್ತೆ ಮೂಡಿ ಮತ್ತೆ ಕಳೆದು ಒಂಬತ್ತು ತಿಂಗಳಾದರೂ ಆ ಧೂಳಯ್ಯನೆಂಬ ಹಸುಗೂಸು ತನ್ನ ಬಾಲ್ಯದ ಆಟಗಳನ್ನು ಆಡುವುದು ಮರೆತಂತೆ ಎಲ್ಲಿ ಮಲಗಿಸಿದಲ್ಲಿ ಸುಮ್ಮನೇ ಮಲಗಿಬಿಟ್ಟಿರುತ್ತಿದ್ದ. ಯಾವುದೇ ಕೂಸಾಗಲಿ ತೊಟ್ಟಿಲ ಗುಬ್ಬಿಚಟ್ಟಿನ ಕೆಳಗೆ ಕೈ ಆಡಿಸುತ್ತಾ, ಮುಸುಮುಸು ನಗುತ್ತಾ.. ಆಟವಾಡುತ್ತಾ ದೊಡ್ಡವರ ಅರಿವಿಗೆ ಬಾರದ ಯಾವದೋ ಸಂಗತಿಯ ಜೊತೆಗೆ ಮಾತಾಡುತ್ತ ಇರುತ್ತವೆ. ಹಾಗೆ ಆಡುವ ಮಕ್ಕಳನ್ನು ದೇವರು ಮಾತಾಡಿಸುತ್ತಾನೆಂದು ಗುಡ್ಡರ ಕುಲದ ಹಿರಿಯರು ಹೇಳುತ್ತಾರೆ. ಆದರೆ ಧೂಳಯ್ಯನೆಂಬ ಈ ಹುಡುಗನು ಆಡುವುದನ್ನು ಬಿಟ್ಟು ಸುಂದು ಬಡಿದವರ ಹಾಗೆ ಇರುವುದನ್ನು ಕಂಡ ಮುದ್ದಣ್ಣ-ಸುಗ್ಗವ್ವೆಯರಿಗೆ ಒಳಗೊಳಗೆ ಆತಂಕ ಶುರುವಾಗಿತ್ತು.

ಅಂಗಾತ ಮಲಗಿದವ ಕವುಚಿ ಮಲಗಿದ. ಹೊಟ್ಟೆಯ ನೆಲಕ್ಕೆ ಕೊಟ್ಟು ಆ ಮಣ್ಣ ನೆಲದ ಮೇಲೆ ಸರದಾಡಿದ, ನಿಧನಿಧಾನಕ್ಕೆ ಅಂಬೇಗಾಲಿಡುತ್ತ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿ ದುಬಕ್ಕನೇ ಬಿದ್ದಾಗ ವರುಷವಾಯ್ತು ಕೂಸಿಗೆ. ಅಣ್ಣನ ಬೆನ್ನ ಮೇಲೆ ಕುಳಿತು, ತಂದೆಯ ಹೆಗಲ ಮೇಲೆ ಕುಳಿತು ಊರೆಲ್ಲ ತಿರುಗಿ ಮನೆಗೆ ಬಂದಾಗ ರಚ್ಚೆ ಹಿಡಿದು ಅಳುತ್ತಿದ್ದ. ಆ ಕೂಸು ಮನೆಗೆ ಬರುವುದೇ ಬೇಡವೆಂಬಷ್ಟು ಹೊರಗೆ ತಿರುಗಾಡುವುದನ್ನು ಇಷ್ಟಪಡುತ್ತಿತ್ತು. ಯುಗಾದಿ ಕಳೆದು ಮೂರುದಿನಕ್ಕೆ ಗುಡ್ಡದ ಮೇಲಿನ ಊರ ದೇವರಾದ ಧೂಳಯ್ಯನ ಪರಿಷೆಗೆ ಇಡೀ ಹಟ್ಟಿಯೇ ಸಿದ್ಧಗೊಂಡಿತ್ತು. ಮೂರುವರ್ಷಕ್ಕೊಮ್ಮೆ ಬರುವ ಆ ಪರಿಷೆಯ ದಿನ ದನದ ಜಾತ್ರೆ ನೆರೆಯುತ್ತದೆ. ಗೊಂಬೆ ಆಟದವರು ಬಂದಿರುತ್ತಾರೆ, ಸಿಹಿತಿನಿಸು ಬೆಂಡುಬೆತ್ತಾಸು, ಹಗ್ಗ-ಕಣ್ಣಿ, ಕುಡುಗೋಲು-ಕುರ್ಚಗಿ ಆದಿಯಾಗಿ ಒಕ್ಕಲುತನದ ಸಾಮಾನುಗಳ ಅಂಗಡಿಗಳನ್ನು ಸಾಲುಸಾಲಾಗಿ ಹಾಕಲಾಗುತ್ತದೆ. ದೊಂಬರು, ಪೀಪಿಯವರು, ಕಣೆನಾದವರು, ಜಗ್ಗಲಗಿ, ಕಹಳೆ ಕಿನ್ನುರಿಗಳ ನಡುವೆ ಧೂಳಯ್ಯನ ಪಲ್ಲಕ್ಕಿ ಗುಡ್ಡದಿಂದ ಇಳಿದು ಕೆಳಗೆ ಬಂದು ಸಣ್ಣ ತೊರೆಯೊಂದರಲ್ಲಿ ಮಿಂದು ಹೋಗುವ ಮೂಲಕ ಶುರುವಾಗುವ ಸಡಗರಕ್ಕೆ ಊರಿಗೆ ಊರೇ ಸಿಂಗಾರಗೊಳ್ಳುತ್ತಿತ್ತು.

ಹುಟ್ಟಿದ ಗಂಡುಕೂಸು ಯಾವ ಕರುವನ್ನು ಮುಟ್ಟಿ ಖುಷಿಗೊಳ್ಳುತ್ತದೋ ಆ ಕರುವನ್ನು ಕೊಂಡು ತಂದು ಮನೆಯಲ್ಲಿ ಸಾಕುವುದು ಆ ಕುಲದ ವಾಡಿಕೆ. ಧೂಳಮಾಂಕಾಳನ ಪರಿಷೆಗಾಗಿ ಬಂಧುಬಳಗವೆಲ್ಲ ಬರುತ್ತಿದ್ದಂತೆ ಸಂಭ್ರಮವೂ ಗರಿಗೆದರಿ ಧೂಳಯ್ಯನೆಂಬೋ ಮಾತು ಬಾರದ ಕೂಸು ಮನೆಗೆ ಬಂದ ಅತಿಥಿಗಳ ಕೈಗಳ ಮೇಲೆಯೇ ಓಡಾಡುತ್ತ ನಿರುಮ್ಮಳಾಗಿತ್ತು. ವಾಲಗದವರು ಸದ್ದು ಮಾಡುವ ನಗಾರಿ, ಡೊಳ್ಳು, ಕಹಳೆ, ತಾಳ, ಸಮ್ಮಾಳಗಳನ್ನು ನುಡಿಸುತ್ತಾ ಧೂಳಮಾಂಕಾಳಯ್ಯನ ಪೂಜೆಗಾಗಿ, ಸುತ್ತಲ ದೇವರುಗಳ ಭೇಟಿಗಾಗಿ ಅತ್ತಿಂದಿತ್ತ, ಇತ್ತಿಂದ ಅತ್ತ ದೇವರ ಪಲ್ಲಕ್ಕಿಯ ಮುಂದೆ ಬಾರಿಸಿಕೊಳ್ಳುತ್ತಾ ದೇವರನ್ನು ಕರೆದೊಯ್ದು ತರುವುದು ನಡೆದಿತ್ತು. ಘಮ್ಮೆನ್ನುವ ಬಗೆಬಗೆಯ ಭಕ್ಷ್ಯಭೋಜ್ಯಗಳು ಮನೆಮನೆಗಳಲ್ಲಿ ತಯಾರಾಗುತ್ತಿದ್ದ ಸಡಗರದಲ್ಲಿ ಮಕ್ಕಳು ದೇವರಂತೆ ಮುಂದಾಗಿ ಮೀಸಲು ಸವಿಯ ತಿನ್ನುವುದು ನಡೆದಿತ್ತು.

ಸುಗ್ಗವ್ವೆ ಮೊದಲ ದಿನ ದೇವರ ಗುಡಿಗೆ ಬಾಣದೆಡೆ ಮಾಡಿ ಕೊಟ್ಟಳು, ಎರಡನೇ ದಿವಸಕ್ಕೆ ಕರಗಡುಬು, ಮೂರನೆ ದಿವಸಕ್ಕೆ ಹುರೆಕ್ಕಿ ಕಡುಬು, ನಾಲ್ಕನೆಯ ದಿವಸಕ್ಕೆ ಹಾಲಿನಲ್ಲಿ ಹುಗ್ಗಿಯ ಎಡೆಮಾಡಿಕೊಂಡು ಹೋಗಿ ಧೂಳಯ್ಯನ ಗುಡಿಗೆ ಕೊಟ್ಟು ಬಂದಳು. ಐದನೆಯ ದಿವಸವೇ ಪರಿಷೆಯ ದೊಡ್ಡಪೂಜೆ, ಸುತ್ತಲ ಸೀಮೆಯ ಹತ್ತೂ ದೇವರುಗಳಿಗೆ ಎಡೆಮಾಡಿಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುವ ದಿನ. ತುಪ್ಪದಲ್ಲೇ ಕರಿದ ತುಪ್ಪದ ಹೋಳಿಗೆ ಮಾಡಿಕೊಂಡು ಸೀಮೆ ದೇವರಿಗೆ ಹೋಗಿ ಬರುವುದಕ್ಕಾಗಿ ಅಣಿಯಾದಳು ಆ ತಾಯಿ. ಮಕ್ಕಳು ದೇವರ ಸಮನೆಂದು ನಂಬುವ ಆ ಗುಡ್ಡರು, ತಾವು ಮಾಡಿರುವ ಖಾದ್ಯದಲ್ಲಿ ಎಳೆಮಕ್ಕಳು ಮೀಸಲು ಉಂಡರೆ ಒಳ್ಳೆಯದಾಗುವುದೆಂದು ಭಾವಿಸುತ್ತಾರೆ. ಆದರೆ ಧೂಳಯ್ಯನೆಂಬ ಈ ಎಳೆಗೂಸು ಆ ಐದು ದಿನಗಳಲ್ಲಿ ಒಂದು ದಿನವೂ ಬುತ್ತಿಗೆ ಕೈ ಹಾಕಿ ತಿನ್ನಲಿಲ್ಲವಲ್ಲಾ ಎಂಬ ಕೊರಗು ಆಕೆಯನ್ನು ಕಾಡತೊಡಗಿತು. ತುಪ್ಪದ ಹೋಳಿಗೆಯ ಚೂರೊಂದನ್ನು ತಾನೇ ಕೈಯಾರೆ ಮುರಿದು ಇವನ ಬಾಯಿಗೊರೆಸಿದರೆ ಧೂಳಯ್ಯನು ಥೂ ಥೂ ಎಂದೆನ್ನುತ್ತ ಒಂದಂಶವನ್ನು ಬಾಯೊಳಗಿಟ್ಟುಕೊಳ್ಳದಿರುವುದು ಸೋಜಿಗವೆನಿಸಿತು. ಆ ದಿವಸ ನಗುವಿಲ್ಲ, ಆಟವಿಲ್ಲ, ಸಣ್ಣದೊಂದು ಹುಡುಗಾಟಿಕೆಯೂ ಇಲ್ಲದಂತೆ ಧೂಳಯ್ಯನಿರಲು, ಕಂಕುಳಲ್ಲಿ ಹೊತ್ತುಕೊಂಡು ಊರೆಲ್ಲ ತಿರುಗಿ ಸೀಮೆಯ ಸುತ್ತಿ ಎಲ್ಲ ದೇವರಿಗೂ ಎಡೆಕೊಟ್ಟು ಬಂದಳು.

ಸಿಹಿ ಅಡುಗೆ ಮಾಡುವುದು ಮಕ್ಕಳಿಗಾಗಿ, ಈ ಹಬ್ಬಸಡಗರಗಳನ್ನು ಮಕ್ಕಳು ಖುಷಿಯಿಂದ ಕಳೆಯದಿದ್ದರೆ ಅಂತ ಮಕ್ಕಳ ಮನಸ್ಸು ಮತ್ತು ಬುದ್ದಿಯ ಬೆಳವಣಿಗೆಯಲ್ಲಿ ದೋಷವಿದೆ ಎಂದು ಭಾವಿಸುವ ಆ ಗುಡ್ಡರಿಗೆ ಧೂಳಯ್ಯನ ಬಗ್ಗೆ ಅಳುಕೊಂದು ಕಾಡಿತು. ದೇವರನ್ನು ಗುಡ್ಡದಿಂದ ಹೊರಡಿಸಿ ಆ ಸಣ್ಣತೊರೆಯಲ್ಲಿ ಮೀಯಿಸಿ, ದೇವರನ್ನು ಮೀಯಿಸಿದ ಆ ನೀರನ್ನು ಸೀಮೆಯಲ್ಲೆಲ್ಲ ಚುಮುಕಿಸಿ ‘ಮಳೆಬೆಳೆ ಕೊಟ್ಟು, ದನ-ಕರುಗಳನ್ನ ಕಾಯಪ್ಪಾ’ ಅಂತ ಗುಡ್ಡರ ಕುಲದ ಗೌಡ ಮುದ್ದಣ್ಣ ಬೇಡಿಕೊಂಡಾದ ಮೇಲೆ ಜಾತ್ರೆ ಆರಂಭವಾಗುತ್ತದೆ. ಅಲ್ಲಿಂದ ದೇವರ ಪಲ್ಲಕ್ಕಿ ಸೀಮೆ ಸುತ್ತಿ ಕಂಕಣ ಕಟ್ಟಿ ಬಂದು ಮತ್ತೆ ಗಿಡದ ಕೆಳಗೆ ಪ್ರತಿಷ್ಠಾಪಿತನಾದ ಮೇಲೆ ಐದು ದಿನಗಳ ಕಾಲ ವಾಡಿಕೆಯಂತೆ ಮೂರು ಹೊತ್ತು ಪೂಜೆಯಾಗುತ್ತದೆ.

ಆಹಾ ಆ ದೇವರನ್ನು ಬೈಗಿಗೆ ಎಳೆಮಗುವಿನಂತೆ ಶೃಂಗರಿಸಿ ಪೂಜಿಸಿದರೆ, ಮಧ್ಯಾಹ್ನ ನಡುವಯಸ್ಸಿನ ಹರೆಯದ ಹುಡುಗನಂತೆ, ಸಾಯಂಕಾಲ ಧೂಳಯ್ಯನೆಂಬೋ ಆ ದೇವರು ಮುಪ್ಪಾನು ಮುದುಕನ ವೇಷದಲ್ಲಿ ಅಂಲಂಕಾರಗೊಂಡು ಪೂಜೆಗೊಳ್ಳುವುದನ್ನ ನೋಡುವುದೇ ಒಂದು ಚಂದವೆಂದು ಜಾತ್ರೆಗೆ ಬಂದವರೆಲ್ಲ ಮಾತಾಡಿಕೊಳ್ಳುತ್ತಿದ್ದರು.

ಮರುದಿನ ಎಳೆಹುಡುಗನ ವೇಷದಲ್ಲಿರುವ ಆ ಧೂಳಮಾಂಕಾಳ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ದನದ ಜಾತ್ರೆಗೆ ಬರುವಷ್ಟರಲ್ಲಿ ಹಿಂದಿನ ಜಾತ್ರೆಯಿಂದ ಇಂದಿನವರೆಗೂ ಹುಟ್ಟಿದ ಗುಡ್ಡರಕುಲದ ಗಂಡುಕೂಸುಗಳೆಲ್ಲ ಆ ಸಂತೆಮೈದಾನದಲ್ಲಿ ಅವರವರ ತಂದೆತಾಯಂದಿರ ಹೆಗಲ ಮೇಲೆ ಕುಳಿತಿರುತ್ತವೆ. ಆಗ ದೇವರ ಅಪ್ಪಣೆಯಾದದ್ದೆ ಕೂಸುಗಳು ಯಾವ ದನ-ಕರುವನ್ನು ಮುಟ್ಟುತ್ತವೋ ಅದನ್ನು ತಂದೆಯಾದವನು ಖರೀದಿಸಿ ಮಗುವಿಗೆ ಕೊಡುವುದು ಹಿಂದಿನಿಂದ ನಡೆದುಕೊಂಡ ಬಂದ ಪದ್ಧತಿ.

ಧೂಳಮಾಂಕಾಳನ ಪಲ್ಲಕ್ಕಿ ದನಗಳ ಜಾತ್ರೆಯ ಮಧ್ಯದಲ್ಲಿಗೆ ಹೋಗಿ ಗೂಳಿಯೊಂದನ್ನು ಪೂಜಿಸಿ ಬಂದುದೇ ತಡ ವ್ಯಾಪಾರ ಆರಂಭವಾಗುತ್ತದೆ. ತಾಯಿ ಸುಗ್ಗವ್ವೆಯ ಮಡಿಲಲ್ಲಿ ಕುಳಿತಿದ್ದ ಧೂಳಯ್ಯನು ಆ ದನಗಳ ಜಾತ್ರೆಯನ್ನು ಕಂಡದ್ದೆ ಖುಷಿಗೊಂಡು ನಗಲಾರಂಭಿಸಿದ. ಚಿಕ್ಕ ಕರುವೊಂದು ತಾಯಿ ಆಕಳೊಂದಿಗೆ ಚಿನ್ನಾಟ ಆಡುವುದನ್ನು ಕಂಡು ಧೂಳಯ್ಯ ತಾಯಿಯ ಕೈ ಕೊಸರಿ ಆ ಕರುವಿನ ಕಡೆಗೆ ಕೈ ಮಾಡ ತೊಡಗಿದಾಗ ಮುದ್ದಣ್ಣ-ಸುಗ್ಗವ್ವೆಯರ ಮನಸ್ಸಿಗಾನಂದ ಹೇಳತೀರದಾಯ್ತು. ಹತ್ತು ಹಾಗಗಳನ್ನು ಕೊಟ್ಟು ಆ ಹಸು-ಕರು ಕೊಂಡು ದೊಡ್ಡಿಯ ಕಡೆ ಹೊಡೆದುಕೊಂಡು ಬಂದಾಗ  ಧೂಳಯ್ಯನ ಮುಖದೊಳಗಿನ ಮಂದಹಾಸ ಇಮ್ಮಡಿಯಾಯ್ತು. ತಾಯಿಹಸುವಿಗೆ ಗೌರಿ ಎಂದೂ, ಕರುವಿಗೆ ಕಪಿಲೆ ಎಂದು ಹೆಸರಿಟ್ಟು ಧೂಪದಾರತಿ ಎತ್ತಿ ಹೊಸ ಅತಿಥಿಗಳನ್ನು ಮನೆಗೆ ಬರಮಾಡಿಕೊಂಡರು.

ಜಾತ್ರೆ ಮುಗಿದದ್ದೆ ತಡ ಊರನ್ನೋ ಊರೆಲ್ಲ ಖಾಲಿಖಾಲಿಯಾದಂತೆ ಭಿಕೋ ಎನ್ನುತ್ತಿರಲು, ಹುಡುಗರ ಮುಖ ಕಪ್ಪಿಟ್ಟು ಬೇಸರ ಮನೆಮಾಡಿತ್ತು.  ಆದರೆ ಧಳಯ್ಯನೆಂಬೋ ಈ ಬಾಲಕನ ಮುಖದಲ್ಲಿ ಮಾತ್ರ ದಿನದಿಂದ ದಿನಕ್ಕೆ ಮಂದಹಾಸ ಇಮ್ಮಡಿಯಾಗುತ್ತ, ಕಪಿಲೆಯೊಂದಿಗಿನ ಆಟ ಹುಡುಗಾಟದ ಜೊತೆಜೊತೆಯಲ್ಲೇ ಬೆಳೆಯತೊಡಗಿದ. ವರುಷ ಎರಡಾಯ್ತು, ಮೂರು ಕಳೆದು ನಾಲ್ಕಾದಾಗ ಗೌರಿ ಹಸು ಮತ್ತೆರಡು ಕರುವಿಗೆ ಜನ್ಮಕೊಟ್ಟು ಕರುಳಬಳ್ಳಿಯನ್ನು ಕರಕಿಯ ಕುಡಿ ಹಾಂಗ ಹಬ್ಬಿಸಿದ್ದಳು. ಈಗ ಧೂಳಯ್ಯನೂ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ಕೈಯಾಸರಾಗುತ್ತಿದ್ದ. ಪ್ರತಿದಿವಸ ಅಣ್ಣ ಬೊಮ್ಮಣ್ಣನೊಡಗೂಡಿ ದನ ಕಾಯಲು ಹೋಗುತ್ತಿದ್ದ. ವಯಸ್ಸು ಬೆಳೆದಂತೆಲ್ಲ ಅಂತರ್ಮುಖಿಯಾಗುತ್ತ, ಮಾತು ಮರೆತವನಂತೆ ಇದ್ದುಬಿಡತೊಡಗಿದ. ಮಗನು ಎಲ್ಲಿ  ಮಾತು ಬಾರದ ಮೂಕನಾಗುತ್ತಾನೆಂಬ ಅಳುಕಿದ್ದರೂ ನಿಧನಿಧಾನಕ್ಕೆ ಒಂದೊಂದೇ ಅಕ್ಷರಗಳು ನಾಲಗೆಯ ಮೇಲೆ ಹೊರಳಾಡಿ ‘ಬೇಕು, ಬೇಡ, ಅಮ್ಮ, ಅಣ್ಣ, ಅಪ್ಪ, ಕಪಿಲೆ, ನೀರು’ಎಂಬಿತ್ಯಾದಿ ಅಗತ್ಯಕ್ಕೆ ಬೇಕಾದ ಶಬ್ದಗಳನ್ನು ಅತ್ಯಂತ ಪ್ರಯಾಸಕರವಾಗಿ ಮಾತಾಡುತ್ತಿದ್ದ. ನೆಲ, ನೀರು, ಗಿರಿ, ಗುಡ್ಡ, ಗಿಡಗಂಟೆ, ದನಕರುಗಳ ಜೊತೆಯಲ್ಲಿಯೇ ಬೆಳೆದು ದೊಡ್ಡವನಾದ.

ದನ-ಕರುಗಳ ಜೊತೆಗೂಡಿ ಗುಡ್ಡಗಾಡು ತಿರುಗುವುದು, ಹೊಲದಲ್ಲಿ ಬೆಳಸಿ ತೆನೆ ಸುಟ್ಟು ತಿನ್ನುವುದೆಂದರೆ ಅವನಿಗೆ ಪಂಚಪ್ರಾಣ. ಆಗೀಗ ಅಣ್ಣ ಬೊಮ್ಮಣ್ಣ ಹೊಲದಲ್ಲಿ -ಬೆಂಕಿ ಹಾಕಿ ಬೆಳಸಿ ತೆನೆಗಳ ತಂದು ಮಡಕೆಯಲ್ಲಿ ಕವುಚಿ ಹಾಕಿ ಹದವಾಗಿ ಬೆಂದ ತೆನೆಗಳಿಗೆ ಉಪ್ಪು ಸವರಿ ತಿನ್ನಲು ಕೊಟ್ಟರೆ ಧೂಳಯ್ಯನ ಹೊಟ್ಟೆ ಎರಡಾಗುತ್ತಿತ್ತು.

ಹೀಗಿರಲು ಒಂದು ದಿನ ಗೌರಿ ಹಸುವು ಬೆದೆತಾಳಲಾರದೆ ಕೂಗು ಹಾಕುತ್ತಿರಲು ಅಣ್ಣ ಬೊಮ್ಮಣ್ಣನು ಹಸುವನ್ನು ಧೂಳಮಾಂಕಾಳ ದೇವರಿಗೆ ಬಿಟ್ಟಿದ್ದ ಗೂಳಿಯ ಬದಿಯಲ್ಲಿ ದಿನವೊಂದು ನಿಲ್ಲಿಸುವುದಕ್ಕಾಗಿ ಹೊಡೆದುಕೊಂಡು ಗುಡ್ಡವನ್ನೇರಿ ಹೋದ. ಮುದ್ದಣ್ಣಗೌಡನು ಬಂಡಿ ಹೂಡಿಕೊಂಡು ಕಾಳುಕಡಿ ವ್ಯಾಪಾರಕ್ಕೆಂದು ಹತ್ತಿರದ ಊರಿಗೆ ಹೊರಟು ನಿಂತಾಗ, ಹಸುಕರುಗಳನ್ನ ಕಾಯುವ ಕಾಯಕ ಧೂಳಯ್ಯನಿಗೊದಗಿತು. ತಾಯಿ ಸುಗ್ಗವ್ವೆ ‘ಅಡುಗೆ ಮಾಡಿಟ್ಟು, ಬುತ್ತಿ ಕಟ್ಟಿಕೊಂಡು ಬರುವನಕ ನೀ ದನಕರು ಕಾಯ್ದುಕೊಂಡಿರು ಮಗನೆ’ಎಂದು ಹೇಳಿ ಊರಮುಂದಣ ಹಳ್ಳದ ಕಡೆಗೆ ದನಕರು ಬಿಟ್ಟು ಹೋದಳು.

ಆ ದಿವಸ ಧೂಳಯ್ಯನ ಮನಸ್ಸು ಖುಷಿಗೊಂಡಿತ್ತು. ತನಗೂ ಜವಾಬ್ದಾರಿ ಬಂತಲ್ಲ ಎಂಬ ಹಿಗ್ಗಿನಲ್ಲೇ ದನಕರು ತಿರುವಿಕೊಂಡು ಹೊರಟ ಅವನ ಬಾಯೊಳಗೆ ಅನಾದಿಕಾಲದ ಓಂಕಾರವು ಆಕಾರಗೊಳ್ಳುತ್ತ ‘ಅಉಮ್’ ಎಂಬ ರಾಗವೊಂದು ಗುನುಗುಟ್ಟುತ್ತಿತ್ತು. ದಿನದ ಜಾಡಿನಂತೆ ದನಗಳು ಊರಹಳ್ಳದ ದಡದ ಮೇಲಿಸ ಮೇಲಿನ ಹೊಲದತ್ತಲೇ ಹೋದವು. ದನಕರು ಹಸಿರು ಕಂಡಲ್ಲಿ ಬಾಯಿಹಾಕಿ ಮೇಯುತ್ತಿರಲು ಇವನಿಗೆ ಬೆಳಸಿ ಸುಡುವುದು ತನಗೂ ಬರುತ್ತದೆಯೇ ಎಂದು ತಿಳಿದು ನೋಡುವ ಕುತೂಹಲವಾಯಿತು. ಬೆದರುಗೊಂಬೆಯ ತಲೆಯ ಮೇಲಿನ ಮಡಕೆಯನ್ನು ಇಳುಹಿ, ಎಳೆಯ ಬೆಳಸಿಯ ಕೊಯ್ದು, ಬೆಂಕಿಯ ಹಾಕಿ ಮಡಕೆಯೊಳಗೆ ತೆನೆ ಹಾಕಿ ಒಲೆಯ ಮೇಲೆ ಮಡಕೆಯ ಮುಗುಚಿ ಹಾಕಿದ. ಹಾಲು ಸುರಿಯುವ ತೆನೆಯ ಸಿಹಿಸಿಹಿಯಾದ ಪರಿಮಳ ಬಿಸಿಯೇರುತ್ತಿದ್ದಂತೆ ಗಾಳಿಯೊಡಗೂಡಿ ಮೂಗಿಗೆ ಬಡಿದಾಗ ಅವನ ಆನಂದಕ್ಕೆ ಪಾರವಿರಲಿಲ್ಲ. ‘ಓಹೋ ನನಗೀಗ ಬೆಳೆಸಿ ಸುಡುವುದು ತಿಳಿದಿದೆ, ನಾನು ದೊಡ್ಡವನೇ ಆಗಿಬಿಟ್ಟೆ’ಎಂದು ಮನಸ್ಸಿನಲ್ಲೆ ಅಂದುಕೊಂಡ.

ಅಷ್ಟೊತ್ತಿಗೆ ಸರಿಯಾಗಿ ಪಡುವಣ ದಿಕ್ಕಿನಿಂದ ಬಡಕಲು ಶರೀರದ ಮುಪ್ಪಾನು ಮುದುಕ ಸನ್ಯಾಸಿಯೊಬ್ಬ ಧೂಳಯ್ಯನಿದ್ದಲ್ಲಿಗೆ ನಡೆದುಕೊಂಡು  ಬರುತ್ತಿದ್ದ.  ಆ ಊರಂಬೋ ಊರು ಸೌರಾಷ್ಟ್ರದ ಸೋಮೇಶ್ವರ ಕ್ಷೇತ್ರದಿಂದ ಶ್ರೀಶೈಲಕ್ಕೆ ಹೋಗುವ ದಾರಿಯ ಮಧ್ಯದಲ್ಲಿಯೇ ಇರುವುದರಿಂದ ಈ ಬಗೆಯ ಸನ್ಯಾಸಿಗಳು ಹತ್ತಾರು ಜನ ಅತ್ತಿಂದಿತ್ತ ಹಾದು ಹೋಗುವುದು ಸಹಜವಾಗಿಯೇ ಇರುತ್ತಿತ್ತು. ಹಾಗಿನ ಸನ್ಯಾಸಿ ಇವರೂ ಇದ್ದಿರಬಹುದೆಂದು ಭಾವಿಸಿದ ಧೂಳಯ್ಯ ಆ ಬರುತ್ತಿರುವ ಸನ್ಯಾಸಿಯನ್ನು ದೇವರ ಸ್ವರೂಪವೆಂದೇ ಭಾವಿಸಿದ. ಆಹಾ ಬಂದಂಥ ಆ ಮುದುಕನ ಮುಖದ ಮೇಲಿನ ಜೀವಕಳೆ ಅನ್ನುವುದು ದೇವರ ಸಾನಿಧ್ಯದಲ್ಲಿ ಸಿಕ್ಕುವ ಸುಗಂಧ ಪರಿಮಳದಂತೆ ಭಾಸವಾಯ್ತು.

‘ಅಯ್ಯಾ ಹುಡುಗಾ, ಹಸಿವು ತಾಳಲಾರೆನೂ… ಬೆಳಸಿಯ ನನಗೂ ಕೊಟ್ಟು ತಿನ್ನುವೆಯಾ…’ ಎಂದು ಆತ ಕೇಳಿದ್ದೆ ತಡ ಧೂಳಯ್ಯ ಅವರಿಗೆ ನಮಸ್ಕರಿಸಿ ಹ್ಞೂ.. ಎಂದಷ್ಟೆ ತಲೆಯಾಡಿಸಿ ಮಡಕೆಯ ಹೊರಮೈ ಕುಟ್ಟಿ ನೋಡಿದ ಠುಣ್ ಠುಣ್ ಎಂದಿತು. ಚೂರು ಬೇಯಬೇಕಿದೆ ಕಾಯಿರಿ ಎಂದು ಸನ್ನೆ ಮಾಡಿದಾಗ ಆ ಮುದುಕ ಅಲ್ಲೇ ಹತ್ತಿರದಲ್ಲಿ ಹೆಬ್ಬೇವಿನ ಮರದ ಕೆಳಗೆ ಕುಳಿತು ದಣಿವಾರಿಸಕೊಳ್ಳತೊಡಗಿದ.

‘ಅಯ್ಯಾ ಹುಡುಗಾ ಏನು ನಿನ್ನ ಹೆಸರು..?’

ಮಾತು ಬಾರದ ಧೂಳಯ್ಯನ ಬಾಯೊಳಗೆ ಹೆಸರು ಒಡಮೂಡಲಿಲ್ಲ. ಮಾತಾಡಬೇಕೆಂದು ಜೀವಬಯಸಿದರೂ ಆತನ ಮಾತು ಗಂಟಲೊಳಗೆ ನಿಂತಂತೆ ಬಾಯಿಯೇ ಗಪ್ಪಗಾಗಿರುವುದನ್ನು ಗಮನಿಸಿದ ಮುದುಕನಿಗೆ ಹುಡುಗ ಮೂಕನಿರಬೇಕೆನ್ನುವುದು ಅರಿವಿಗೆ ಬಂತು.

‘ಅಯ್ಯಾ ಹುಡುಗಾ ನಾನು ಗಿರಿಗೆ ಹೊರಟಿದ್ದೇನೆ. ಸಿದ್ಧರ ಸಿದ್ಧಮಲ್ಲಿಕಾರ್ಜುನದೇವರ ದರ್ಶನಕ್ಕೆ ಹೊರಟಿದ್ದೇನೆ. ಹಾಗಾಗಿ ನಿನ್ನ ಸಿದ್ಧ ಅನ್ನಲೇ?’ಅಂದಾಗ ಧೂಳಯ್ಯನ ಮುಖದಲ್ಲಿ ನಗುವರಳಿತು. ‘ಈಗ ಮಡಕೆಯ ಬಾರಿಸಿ ನೊಡಾ ಸಿದ್ಧರಾಮ, ಹದಕ್ಕೆ ಬಂದಿರುವ ಬೆಂದಕಾಳಿನ ಸುವಾಸನೆ ಬರುತ್ತಿದೆ’ ಎಂದಾಗ ಧೂಳಯ್ಯ ಮಡಕೆಯ ಮೇಲ್ಭಾಗದಲ್ಲಿ ಬಾರಿಸಿ ನೋಡಿದ ಟಣ್, ಟಣ್ ಎಂಬ ಕಣೆಹಲಗೆಯ ನಾದ ಬಂದಿತು. ಮಡಕೆಯ ತಿರುಗಿಸಿ ನೊಡಿದರೆ ಬೆಳಸಿಯ ಹಾಲು ಬೆಂದು ಹಿತವಾದ ಉಗಿಯು ಹೊರಚೆಲ್ಲಿತು.

‘ಆಹಾ ಸಿದ್ಧರಾಮ, ಅದೇನು ನಿನ್ನ ಕೈಚಳಕವೋ ಮಾರಾಯ, ಬೆಳಸಿಯ ಸುಡುವ ನಿನ್ನ ಕೈಗುಣದಲ್ಲೇ ರುಚಿಯದೆ ಮಾರಾಯ’ ಎನ್ನುತ್ತಾ ಆ ಸನ್ಯಾಸಿ ಅವನ ತಲೆಯ ಮೇಲೆ ಮೃದುವಾಗಿ ಕೈಯಾಡಿಸಿದ. ಆ ವೃದ್ಧ ಸನ್ಯಾಸಿಯು ಒಂದು ತೆನೆಗೆ ಕೈಹಾಕಿ ಎರಡು ಕಾಳು ಬಿಡಿಸಿಕೊಂಡು ತಿಂದಿದ್ದನಷ್ಟೆ… ಆಸ್ವಾದಕ್ಕೆ ನಾಲಗೆಯ ಸವರಿ ಚಪ್ಪರಿಸಿದವನು ಗಕ್ಕನೇ ಅಗಿಯುವ ಬಾಯನ್ನು ತಡೆದು ‘ಇದಕ್ಕೆ ಚೂರೇಚೂರು ಉಪ್ಪು ಬೆರೆಸಿದ್ದರೆ ಮೃಷ್ಟಾನ್ನಕ್ಕಿಂತ ಮಿಗಿಲಾಗುವುದು, ಮಗು ಹೋಗಿ ಉಪ್ಪು ತರುವೆಯಾದರೆ ಹಸಿದ ಹೊಟ್ಟೆಗೆ ಬಾಯಿರುಚಿ ಕೆಡದಂತೆ ಊಟ ಹಾಕಿದ ಪುಣ್ಯ ನಿನಗೆ ಲಭಿಸುವುದು. ಅಲ್ಲದೇ ಸಾಕ್ಷಾತ್ ಶ್ರೀಗಿರಿಯ ಮಲ್ಲಿನಾಥನಿಗೇ ಊಟ ಹಾಕಿದ ತೃಪ್ತಿ ನಿನಗಾಗುವುದು ಕಂದ’ಎನ್ನುತ್ತಲೇ ಧೂಳಯ್ಯನಿಗೆ ಬಂದಂಥವರು ಶ್ರೀಗಿರಿಯ ಮಲ್ಲಿನಾಥನೇ ಇರಬೇಕೆಂಬ ಅಭಿಮಾನವುಕ್ಕಿ, ಬಿಸಿಯಾಡುತ್ತಿದ್ದ ತೆನೆಯೊಂದರ ತುದಿಯ ಕಾಳನ್ನು ಉದುರಿಸಿ ತಿಂದು ನೋಡಿ ಉಪ್ಪು ಬೇಕೇ ಬೇಕಿದಕೆ ಎಂದುಕೊಳ್ಳುತ್ತಾ ಎದ್ದು ಮನೆಯತ್ತ ದೌಡಾಯಿಸಿದನು.

ಧೂಳಯ್ಯನು ಅತ್ತ ಹೋದದ್ದೆ ಕೊಂಬುಕಹಳೆ ಜಗ್ಗಲಿಗೆಯಾದಿಯಾಗಿ ಡೋಲು ನಗಾರಿ ಬಾರಿಸುತ್ತ ನಂದಿಕೋಲ ಹೊತ್ತು ಶ್ರೀಶೈಲಕ್ಕೆ ಹೊರಟಂಥ ದಿಂಡೆಯೊಂದು ಅದೇ ಮಾರ್ಗವಾಗಿ ಬಂದಿತು. ಮಲ್ಲಯ್ಯನಿಗೆ ಜಯಕಾರ ಹಾಕುತ್ತಾ, ಹಾಡುವವರು ಹಾಡುತ್ತಾ, ದೂರದ ಊರುಗಳಿಂದ ಬರುವ ದಿಂಡೆಯವರು ಸಕಲ ಸಿದ್ಧತೆಯೊಂದಿಗೆ ಗಿರಿಗೆ ಹೋಗಿಬರುತ್ತಾರೆ. ಇವರೊಂದಿಗೆ ಹೊರಟರೆ ತನಗೆ ದಾರಿಯೂ ಬೇಗ ಸಾಗುವುದೆಂದೂ ಮತ್ತು ಊಟೋಪಚಾರಕ್ಕೆ ಅನುಕೂಲವಾದೀತೆಂದು ಭಾವಿಸಿದ ಆ ವೃದ್ದ ಮಹಾಶಯನು –ಉಪ್ಪು ತರಲಿಕ್ಕೆಂದು ಹೋಗಿದ್ದ ಧೂಳಯ್ಯನನ್ನು ಮರೆತು, ಬೆಳಸಿಯ ತೆನೆಗಳನ್ನು ಅಲ್ಲಿಯೇ ಬಿಟ್ಟೆದ್ದು ಅವಸರವಸರವಾಗಿ ಗಿರಿಗೆ ಹೊರಟಿದ್ದ ಮೇಳದವರನ್ನು ಕೂಡಿಕೊಂಡನು.

ಅತ್ತ ಉಪ್ಪು ತರಲೆಂದು ಮನೆಗೆ ಹೋಗಿದ್ದ ಧೂಳಯ್ಯನು ತನ್ನ ಅವ್ವ ನೀರು ತರಲೆಂದು ತೊರೆಗೆ ಹೋಗಿದ್ದವಳು ಬರುವತನಕ ಕಾದಿದ್ದು ಆಕೆ ಬಂದ ಮೇಲೆ ಅಡಕಲು ಗಡಿಗೆಯ ಮೇಲಿಟ್ಟಿದ್ದ ಉಪ್ಪನ್ನು ಮುತ್ತುಗದ ಎಲೆಯಲ್ಲೊಂದರಲ್ಲಿ ಹಾಕಿಸಿಕೊಂಡು, ಅಷ್ಟೇ ಅವಸರದಲ್ಲಿ ಹೊಲಕ್ಕೆ ಓಡಿಬರುವುದರೊಳಗೆ ಸ್ವಲ್ಪ ತಡವೇ ಆಯ್ತೇನೋ ಎಂಬ ಆತಂಕ ಆತನ ಏದುಸಿರೊಳಗಿತ್ತು. ಅಲ್ಲಿ ಇರಬೇಕಾಗಿದ್ದ ಆ ವೃದ್ಧ ಸನ್ಯಾಸಿ ಇಲ್ಲವಲ್ಲಾ..! ಮಗಿಹಾಕಿದ್ದ ಮಡಕೆ ಹಾಗೆ ಇತ್ತು. ಬೆಳಸಿಯ ಒಂದು ಕಾಳು ಆಚೀಚೆಯಾಗದೆ, ಅಲ್ಲೇ ಕುಳಿತಿದ್ದ ಆ ವೃದ್ಧನೂ ಈಗ ಇಲ್ಲವಲ್ಲಾ.. ಓಹೋ ದೇವರು ಕೆಲವೊಮ್ಮೆ ಪರೀಕ್ಷೆ ಮಾಡುತ್ತಾನೆಂದು ಅಬ್ಬೆ-ಅಪ್ಪ ಹೇಳುವ ಕತೆಗಳಂತೆ ತನಗೂ ಆ ದೇವರು ಮುದುಕನ ರೂಪದಲ್ಲಿ ಬಂದು ಸತ್ವಪರೀಕ್ಷೆ ಮಾಡಿದನೇ..? ಎಂಬ ಅಳುಕು ಕಾಡತೊಡಗಿತು.

‘ಅಯ್ಯಾ… ಮಲ್ಲಯ್ಯಾ, ಉಪ್ಪು ತಂದಿರುವೆ ಬಾರಯ್ಯ ಮಲ್ಲಯ್ಯಾ’ಎಂದು ನಾಲ್ಕು ದಿಕ್ಕಿಗೂ ಕೂಗಿ ಕರೆಯಲಾರಂಭಿಸಿದ. ತನಗೆ ಮಾತನಾಡಲು ಬರುವುದಿಲ್ಲ ಎಂದೇ ಭಾವಿಸಿದ್ದ ಅವನೀಗ ಮಾತನಾಡುತ್ತಿರುವುದು ಸೋಜಿಗವೆನಿಸಿತು. ಕೆಲವೇ ಕೆಲವು ಶಬ್ದಗಳ ಹೊರತು ಮತ್ತೊಂದು ಶಬ್ದವನ್ನೂ ಮಾತನಾಡಲಾರದ ಅವನು ಅರಳು ಹುರಿದಂತೆ ಪಟಪಟನೇ ಮಾತನಾಡಲಾರಂಭಿಸಿದ. ತನಗೆ ಮಾತು ಬಂದಿರುವುದಕ್ಕೂ ಆ ಮುದುಕನಿಗೂ ಸಂಬಂಧವಿದೆ ಎಂದೇ ಭಾವಿಸಿದ ಧೂಳಯ್ಯನು… ಬಂದಿದ್ದ ಆ ಬಡಕಲು ಶರೀರದ ಮುದುಕನು ದೇವರಲ್ಲದೆ ಮತ್ತೊಬ್ಬನಲ್ಲ,  ತನ್ನನ್ನು ಸಿದ್ಧರಾಮ ಎಂದು ಹೆಸರಿಟ್ಟು ಕರೆದ ಅವನು ಶ್ರೀಗಿರಿಯ ಮಲ್ಲಿನಾಥನೇ ಹೌದು. ಅಯ್ಯೋ ನಾನೆಂಥ ಮೂರ್ಖ ಮನೆಗೆ ಬಂದ ದೇವರನ್ನು ಉಪವಾಸ ಕಳಿಸಿದೆನಲ್ಲಾ ಎಂದು ಮಮ್ಮಲ ಮರುಗತೊಡಗಿದ.

ಮೇಯುತ್ತಿದ್ದ ದನಕರುಗಳು ಅಲ್ಲೇ ಹಳ್ಳದ ಎಡಬಲದಲ್ಲಿ ನಿರುಮ್ಮಳಾಗಿ ಮೇಯುತ್ತಿರಲು ಈತನು ದಿಕ್ಕುದಿಕ್ಕಿಗೂ ತಿರುಗಿ ಆ ಹಸಿದು ಬಂದಿದ್ದ ದೇವರನ್ನು ಕೂಗಿ ಕರೆಯಲಾರಂಭಿಸಿದ. ಎಲ್ಲಿಯೂ ಕಾಣದ ದೇವರು ಈ ಗುಡ್ಡರ ಗುಡ್ಡವ ದಾಟಿ ಬಡಗು ದಿಕ್ಕಿಗೆ ಹೋಗಿರಬೇಕು. ಅಲ್ಲಿಂದ ಮತ್ತೆ ಎಡಕಾಗಿ ಮೂಡಣ ದಿಕ್ಕಿಗೆ ಇರಬಹುದಾದ ಶ್ರೀಗಿರಿಯ ದಾರಿಯಲ್ಲಿ ಸಿಕ್ಕೇಸಿಗುತ್ತಾನೆ ಎಂದುಕೊಂಡವನೇ… ಆ ಮಡಕೆಯನ್ನು ಒಡಲಲ್ಲಿ ಕಟ್ಟಿಕೊಂಡು ‘ಈ ಬೆಳಸಿಯನ್ನು ದೇವರಿಗಲ್ಲದೆ ಮತ್ತೊಬ್ಬರಿಗೆ ತಿನ್ನಿಸಲಾರೆ’ ಎಂದುಕೊಂಡು ಹೊರಟೇಬಿಟ್ಟ.

****   ****   ****

ಮಧ್ಯಾಹ್ನದ ಬುತ್ತಿ ಕಟ್ಟಿಕೊಂಡು ಬಂದ ಸುಗ್ಗವ್ವೆ ಮಗನಿಗಾಗಿ ಅಲ್ಲಿ ಇಲ್ಲಿ ಹುಡುಕಾಡಿ, ಧೂಳಯ್ಯ ಎಲ್ಲಿಯೂ ಕಾಣುತ್ತಿಲ್ಲವಲ್ಲಾ ಎನ್ನುತ್ತಲೇ ಹುಚ್ಚುಹುಡುಗ ಕಾಡಿನ ಯಾವುದೋ ಹಣ್ಣು ತಿನ್ನುವುದಕ್ಕೋ, ಜೇನು ಬಿಡಿಸುವುದಕ್ಕೋ ಇಲ್ಲಾ ನೀರೊಳಗೆ ಚಿನ್ನಾಟವಾಡುವುದಕ್ಕೋ ಇಲ್ಲೋ ಎಲ್ಲೋ ದನಗಾಹಿ ಗೆಳೆಯರೊಡಗೂಡಿ ಹೋಗಿರಬೇಕೆಂದು ಭಾವಿಸಿದ ಆಕೆ ಬುತ್ತಿಯ ಗಂಟನ್ನು ಹೆಬ್ಬೇವಿನ ಮರದ ಟೊಂಗೆಗೆ ನೇತು ಹಾಕಿ ಕೆಲಸದ ಗಡಿಬಿಡಿಯಲ್ಲಿ ಮತ್ತೆ ಮರಳಿ ಮನೆಗೆ ಬಂದಿದ್ದಳು. ಸಂಜೆ ಭುವಿಗಿಳಿದು ಬೆಳಕನ್ನು ನುಂಗಿಕೊಳ್ಳುವ ಕತ್ತಲು ಆವರಿಸುತ್ತಿದ್ದಂತೆ ದನ-ಕರುಗಳು ಯಥಾರೀತಿ ಮನೆಯ ಹಾದಿಹಿಡಿದು, ದೊಡ್ಡಿಯೊಳಗೆ ಸೇರಿಕೊಂಡವು, ಬಾಗಿಲಿಗೆ ನೀರು ಹಾಕಿ, ಧೂಳಸಂಜೆಯ ಕಸಗುಡಿಸಿ, ಎಳ್ಳೆಣ್ಣಿಯ ಬತ್ತಿ ಹೊಸೆದು ದೀಪ ಹಚ್ಚಿಟ್ಟ ಸುಗ್ಗವ್ವೆ, ಮಕ್ಕಳು ಮತ್ತು ಗಂಡ ಬರುವ ದಾರಿ ಕಾಯುತ್ತ ಕುಳಿತಳು. ಗೌರಿಯನ್ನು ಗುಡ್ಡದಿಂದ ಹೊಡೆದುಕೊಂಡು ಬಂದ ಬೊಮ್ಮಣ್ಣ ದೊಡ್ಡಿಯಲ್ಲಿ ದನಕರುಗಳನ್ನು ಕಟ್ಟದೇ ಇರುವುದನ್ನು ಕಂಡು, ಎಲ್ಲ ದನಕರುಗಳನ್ನು ಗೂಟಗಳಿಗೆ ಕಟ್ಟಿಹಾಕಿ ಬಣವೆಯಿಂದ ತಂದಿಟ್ಟಿದ್ದ ಹುಲ್ಲನ್ನು ಅವುಗಳ ಮುಂದೆ ಹಾಕಿ ಮನೆಗೆ ಬಂದಾಗ ಕತ್ತಲು ಕವಿದಿತ್ತು. ದಿನದಂತೆ ಧೂಳಯ್ಯನು ಅಣ್ಣನೊಡನೆ ಹುಡುಗಾಟಿಕೆಗೆ ಮುಂದಾಗುವವನು ಈ ದಿವಸ ಮನೆಯಲ್ಲಿ ಅವನ ಸುಳಿವಿಲ್ಲದ್ದನ್ನು ಕಂಡು ಗಲಿಬಿಲಿಗೊಂಡು ಅಬ್ಬೆಯನ್ನು ಕೇಳಿದ. ಆಕೆಗೂ ಧೂಳಯ್ಯ ಈ ದಿವಸ ಬೆಳಿಗ್ಗೆ ಕಂಡವನು ಮತ್ತೆ ಕಾಣಿಸಲಿಲ್ಲ ಎಂದಾಗ ಇಬ್ಬರ ಎದೆಯಲ್ಲೂ ಚುಳುಚುಳಾಡಿತು. ಮುದ್ದಣ್ಣಗೌಡ ಸಂತೆಯಿಂದ ಬಂದವನೇ ಮಗನ ಮೇಲಿನ ಅಕ್ಕರೆಗಾಗಿ ಬಂಡಿ ನಿಲ್ಲಿಸುತ್ತಲೇ ‘ಧೂಳಯ್ಯಾ’ ಎಂದು ಕೂಗಿದ. ಒಳಗಿನಿಂದ ಯಾವ ಉಲುವು ಇಲ್ಲದ್ದನ್ನು ಕಂಡು ‘ಧೂಳಯ್ಯ ನಿನಗಾಗಿ ಕೊಬ್ಬರಿ ಬೆಲ್ಲ ತಂದೀನಿ ಬಾರೋ’ ಎಂದು ಮತ್ತೊಮ್ಮೆ ಕೂಗಿದ. ಬೊಮ್ಮಣ್ಣ, ಮತ್ತು ಸುಗ್ಗವ್ವೆಯರ ಮುಖದ ಮೇಲಿನ ಆತಂಕದ ಅರಿವಾದ ಕೂಡಲೇ ಅಪ್ಪನೂ ಆತಂಕಗೊಂಡ.

ದನ ಮೇಯಿಸಲು ಹೋಗಿದ್ದ ಧೂಳಯ್ಯ ಮನೆಗೆ ಬಂದಿಲ್ಲವೆಂಬ ಸುದ್ದಿ ಗುಡ್ಡರ ಆ ಸೊನ್ನಲಿಗೆಯ ಪ್ರತಿಯೊಂದು ಮನೆಗೂ ತಲುಪಿದ್ದೆ ತಡ ಸುಗ್ಗವ್ವೆ ಅಳಲಾರಂಭಿಸಿದಳು. ಯಾವ ಹುಲಿ ಹಿಡಿಯಿತೋ, ಯಾವ ಕರಡಿ ಕೊಂದಿತೋ ನನ್ನ ಮಗನನ್ನ, ಮಧ್ಯಾಹ್ನ ಬೆಳಸಿಯ ಸುಟ್ಟಿದ್ದೇನೆ ಉಪ್ಪು ಕೊಡು ಅಬ್ಬೆ ಅಂತ ಕೈಬಾಯ ಸನ್ನೆ ಮಾಡಿಕೊಂಡು ಬಂದಿದ್ದ ಮಗ, ಎಲ್ಲಿ ಹೋದನೋ ಎಂದು ಅಳತೊಡಗಿದ್ದಳು. ಗುಡ್ಡರ ಕುಲದ ಗಂಡಾಳುಗಳು ಹಿಲಾಲು ಹೊತ್ತಿಸಿಕೊಂಡು ಹಳ್ಳ-ಕೊಳ್ಳ, ಗುಡ್ಡ-ಗಹ್ವರಗಳನ್ನೆಲ್ಲ ಹುಡುಕತೊಡಗಿದರು. ಎಲ್ಲಿಯೂ ಕಾಣಲಾರದ, ಬಾಯಿಯಿಲ್ಲದ ಮಗನಿಗಾಗಿ ತಂದೆ-ತಾಯಿ ಬೊಮ್ಮಣ್ಣ ಆದಿಯಾಗಿ ಊರಿನ ಹಿರಿಕಿರಿಯರೆಲ್ಲ ಸುತ್ತಲ ಸೀಮೆಯನ್ನೆಲ್ಲ ಹುಡುಕಿದರು. ಹುಡುಕುತ್ತಲೇ ಇದ್ದರು.

ಇತ್ತ ಮಲ್ಲಯ್ಯನನ್ನು ಹುಡುಕಿಕೊಂಡು ಹೊರಟಿದ್ದ ಧೂಳಯ್ಯನು ತನ್ನ ಪೂರ್ವದ ಹೆಸರಿಗಿಂತ ಆ ಮುದುಕನ ವೇಷದಲ್ಲಿ ಬಂದಿದ್ದ ದೇವರು ಕರೆದಿದ್ದ ಸಿದ್ಧರಾಮ ಅನ್ನೋ ಹೆಸರನ್ನೇ ತನ್ನ ಗುರುತು ಎಂದು ಹೇಳಿಕೊಳ್ಳುತ್ತಾ ಗಿರಿಗೆ ಹೊರಟಿದ್ದವರ ಕೂಡಿಕೊಂಡಿದ್ದ. ಹಗಲೆಲ್ಲ ಕಣ್ಣ ದಣಿಯುವತನಕ ಮುದುಕನ ಚಹರೆ ಹುಡುಕಿಹುಡುಕಿ ಸುಸ್ತಾದಾಗ ಯಾವದೋ ಊರಿನ ಜಗುಲಿಯ ಮೇಲೆ ಬೀಡುಬಿಟ್ಟಿದ್ದ ನಂದಿಕೋಲಿನ ಮೇಳದವರ ಜೊತೆ ತಾನೂ ಮಲಗಿ ನಿದ್ದೆ ಹೋಗಿದ್ದ. ಮರುದಿನ ಮತ್ತೆ ಕಣ್ಣು ದಣಿಯುವವರೆಗೆ ಹುಡುಕಿದ. ಆ ದಿನವೊಂದು ಕಳೆದು ಎರಡನೆಯ ಬೆಳಗಿಗೆ ಮತ್ತೆ ಮೇಳದ ಜೊತೆಜೊತೆಯಲ್ಲೇ ನಡೆಯತೊಡಗಿದ. ಊರಿಂದೂರಿಗೆ ಮಲ್ಲಯ್ಯನ ಪರಿಷೆಗೆ ನಂದಿಕೋಲು ಒಯ್ಯುವ ಮ್ಯಾಳಗಳು ಬಂದು ಸೇರಿಕೊಳುತ್ತಲೇ ಜನಸಾಗರವೇ ಶ್ರೀಶೈಲಕ್ಕೆ ಹೊರಟಂತೆ ಕಾಣತೊಡಗಿತು. ಅವರೆಲ್ಲರ ನಡುವ ಬೆಳಸಿಯ ಬೇಯಿಸಿದ ಮಡಕೆಯೊಂದನ್ನು ಹಿಡಿದುಕೊಂಡು ‘ಅಜ್ಜಾ. ಮಲ್ಲಯ್ಯಜ್ಜಾ’ ಅಂತ ಹುಡುಕಾಡುತ್ತ ತಬ್ಬಲಿಯಂತೆ ಓಡಾಡುವ ಈ ಹುಡುಗನನ್ನು ಕಂಡು ಹಲವರು ಅವನಿಗೆ ನೆರವಾಗಲು ಮುಂದಾದರು. ಹಾವಿನಾಳ ನಂದಿಕೋಲು ಹೊತ್ತಿದ್ದ ಮೇಳದ ಮುಖಂಡನೊಬ್ಬ ಹೀಗೆ ಅಬ್ಬೇಪಾರಿಯಾಗಿ ಅಲೆದಾಡುತ್ತಿದ್ದ ಈ ಹುಡುಗನ್ನು ಕರೆದು ಮಾತನಾಡಿಸಿದ.

‘ತಮ್ಮಾ ಯಾವೂರಪ್ಪಾ ನಿನ್ನದು…’

‘ನನ್ನ ಊರು ಸೊನ್ನಲಿಗೆಪುರ.’

‘ನಾನು ಆವಾಗಿನಿಂದ ನೋಡತಿದ್ದೇನೆ ಗಂಟಲು ನರ ಹರಿದು ಹೋಗುವ ಹಾಗೆ ಕೂಗುತ್ತಿದ್ದಿಯಾ..? ಜೊತೆ ಬಂದವರನ್ನ ಕಳಕೊಂಡಿದ್ದಿಯೇನಪ್ಪಾ…’

‘ಹೌದು ಆ ಮಲ್ಲಯ್ಯ ಅಜ್ಜನನ್ನ ಹುಡುಕುತ್ತಿದ್ದೇನೆ…’

‘ಯಾವ ಮಲ್ಲಯ್ಯನಪ್ಪಾ..? ಆತನು ನಿನಗೆ ಅಜ್ಜನೇನು..?’

‘ಇಲ್ಲಾ ಆತ ಶ್ರೀಗಿರಿಯ ಮಲ್ಲಯ್ಯ, ಹಸಿದುಕೊಂಡು ಬಂದಿದ್ದ…’

ಮೇಳದವರ ಮುಖದಲ್ಲಿ ಸಣ್ಣದೊಂದು ನಗೆ ಹುಟ್ಟಿತು. ಏನು ಮಲ್ಲಿಕಾರ್ಜುನ ದೇವರು ನಿನ್ನನ್ನು ಊಟ ಕೇಳಿ ಬಂದಿದ್ದರೆ ಎಂಬಂಥ ಉದ್ಘಾರದ ಜೊತೆಜೊತೆಯಲ್ಲಿ ನಗುವುದು ತಮಾಷೆಯ ಸಂಗತಿಯಾಯ್ತು.

‘ಹೌದು ಅದೇ ಮಲ್ಲಿಕಾರ್ಜುನದೇವರು…’

ಇವನಿಗೆ ಎಲ್ಲೋ ಭ್ರಾಂತು ಎಂಬ ಭಾವ ಮೇಳದವರಲ್ಲಿದ್ದರೂ ಹುಡುಗನ ನಂಬುಗೆ ಸತ್ಯವಾಗಿರಬಹುದು ಎಂಬುದು ಮೇಳದ ಮುಖಂಡನಿಗೆ ಅನಿಸತೊಡಗಿತು.

‘ಏನು ಶ್ರೀಶೈಲದ ಮಲ್ಲಯ್ಯನನ್ನ ಹುಡುಕುತ್ತಿದ್ದಿಯಾ..?’

‘ಹೌದು ಆ ತಪಸ್ವಿ ತಾನು ಶ್ರೀಶೈಲದ ಮಲ್ಲಯ್ಯ ಅಂತಲೇ ಹೇಳಿದರು. ಬಡಕಲು ಶರೀರ, ಎದೆಯ ಮೇಲೆ ಕಟ್ಟಿಗೆಯ ಕರಡಿಗೆ, ಕೊರಳಲ್ಲಿ ರುದ್ರಾಕ್ಷಿ, ಬಗಲಲ್ಲಿ ಜೋಳಿಗೆ, ತಲೆಯ ಮೇಲೆ ಜಟೆ, ಆ ಜಟೆಗೆ ಸುವಾಸನ ಭರಿತ ಜಾಜಿ ಮಲ್ಲಿಗೆಯ ಮುಡಿದಿದ್ದಾರೆ, ಕಾಲಲ್ಲಿ ಆವುಗೆ, ಕೈಯಲ್ಲೊಂದು ಬೆತ್ತ, ಲುಟುಪುಟು ನಡುಗೆಯ ಆ ಅವರ ದೇಹದ ಆಕಾರ ಗಿಡ್ಡದು. ಅಂಥವರನ್ನ ನೀವು ಎಲ್ಲಾದರೂ ನೋಡಿದಿರಾ.. ಬಹಳ ಹಸಿದಿದ್ದಾರೆ… ಇಗೋ ಇಲ್ಲಿದೆ ನೋಡಿ ಈ ಬೆಳಸಿಯ ತೆನೆ ಅವರಿಗಾಗಿ ತಂದಿದ್ದೇನೆ…! ಅಂಥವರನ್ನ ನೀವು ಕಂಡಿರಾ.. ನೀವು…’

‘ಹುಡುಗಾ ನಿನ್ನ ಹೆಸರೇನು..?’

‘ಧೂಳಯ್ಯ.. ಅಲ್ಲಲ್ಲ ಆ ಮಲ್ಲಯ್ಯ ನನ್ನನ್ನ ಸಿದ್ಧರಾಮ ಅಂದಿದ್ದರು. ಹಾಂ ನಾನು ಸಿದ್ಧರಾಮನೇ.’

ಹುಡುಗನ ಕಣ್ಣೊಳಗೆ ಕಾತರವಿತ್ತು. ಇವರು ಆ ಮಲ್ಲಯ್ಯನೇ ಅಥವಾ ಅವರೋ ಎಂಬ ಹುಡುಕಾಟ ಮಡುವುಗಟ್ಟಿತ್ತು. ಎರಡು ದಿನದಿಂದ ನಡೆದು ನಡೆದು ಅವನ ಕಾಲುಗಳಲ್ಲಿ ಬೊಬ್ಬೆ ಎದ್ದಿದ್ದವು, ಮುಳ್ಳುಕಲ್ಲುಗಳ ತುಳಿದು ಕಾಲುಗಳಲ್ಲಿ ರಕ್ತ ವಸರುತ್ತಿದ್ದರೂ ಅದರ ಬಗ್ಗೆ ಕಿಂಚಿತ್ತೂ ಅರಿವಿಲ್ಲದಂತೆ ಆತ ಅಲ್ಲಿ ಹೊಲದಲ್ಲಿ ಕಂಡ ಮುಖವನ್ನೇ ಈ ನಂದಿಕೋಲದ ಮೇಳಗಳಲ್ಲಿ ಹುಡುಕುತ್ತಿದ್ದ. ನಡೆದ ವೃತ್ತಾಂತವನ್ನೆಲ್ಲ ಸವಿಸ್ತಾರವಾಗಿ ಕೇಳಿ ತಿಳಿದ ಆ ಮುಖಂಡನು ಅವನ ಸಮಾಧಾನಕ್ಕಾಗಿ ಇಂತೆಂದನು.

‘ಅಪ್ಪಾ ಸಿದ್ಧರಾಮ, ನಿನ್ನ ಮಲ್ಲಯ್ಯ ಬೇರಲ್ಲ ನಾವು ದರುಶನಕ್ಕೆ ಹೊರಟಿರುವ ಶ್ರೀಗಿರಿಯ ಮಲ್ಲಯ್ಯ ಬೇರಲ್ಲ, ಬಾ ನಮ್ಮೊಂದಿಗೆ ನಿನಗೂ ಆ ಪರಮಾತ್ಮನ ದರುಶನ ಮಾಡಿಸಿಕೊಂಡು ಬರುತ್ತೇವೆ. ಯಾರು ಹಡೆದ ಮಗನೋ ನೀನು, ನಿನ್ನೊಳಗಿನ ನಿರ್ಮಲವಾದ ಅಂತಃಕರಣ ದೇವರನ್ನು ಬಯಸುತ್ತಿದೆ. ಭಯ ಪಡಬೇಡಪ್ಪಾ ಸಿದ್ಧರಾಮ ನಾವು ನಿನ್ನ ಸೊನ್ನಲಿಗೆ ಹತ್ತಿರದ ಊರಾದ ಹಾವಿನಾಳದಿಂದ ನಂದಿ ಹೊತ್ತು ಪರಿಷೆಗೆ ಬಂದಿದ್ದೇವೆ. ಆ ಗಿರಿವಾಸಿಯಾದ ಮಲ್ಲಯ್ಯನನ್ನು ಹುಡುಕಿಕೊಂಡು ಎಲ್ಲೆಲ್ಲಿಂದಲೋ ಭಕ್ತರು ಬರುತ್ತಾರೆ. ಈಗ ನೀನು ಬರುತ್ತಿದ್ದಿಯಾ, ಬಾ ನಮ್ಮೊಂದಿಗೆ. ಇಗೋ ಈತನು ನನ್ನ ಮಗ ಕಲ್ಲಯ್ಯ, ನಿನಗಿಂತ ಚಿಕ್ಕವನು.. ಇವನೊಂದಿಗೆ ನಿಧಾನ ಹೆಜ್ಜೆ ಹಾಕು’ ಎಂದರು.

ಹೀಗೆ ಸಿದ್ಧರಾಮನು ಹಾವಿನಾಳದ ನಂದಿಕೋಲಿನವರ ಸಂಗಡ ಶ್ರೀಶೈಲದತ್ತ ನಡೆಯತೊಡಗಿದ. ಅಪ್ಪ-ಅಮ್ಮನ ನೆನಪಿಲ್ಲ, ಅಣ್ಣ ಬೊಮ್ಮಣ್ಣನ ಅಕ್ಕರೆಯ ಸುಳಿವೂ ಇಲ್ಲ, ಮುಂಗೈಯಲ್ಲಿ ಬೆಳಸಿಯ ಮಡಕೆ, ಪಕ್ಕದಲ್ಲಿ ಭಕ್ತರ ದಂಡು ಉಘೇಉಘೆ ಮಲ್ಲಯ್ಯ ಎನ್ನುತ್ತಿರಲು ಇವನೊಳಗೂ ಆವೇಶ ಉಕ್ಕಿಬರುತ್ತಿತ್ತು. ಹಗಲನ್ನು ಇರುಳು ನುಂಗುತ್ತಾ, ಇರುಳನ್ನು ಹಗಲು ನುಂಗುತ್ತಾ ವಾರೊಪ್ಪತ್ತು ಕಳೆಯುವುದರಲ್ಲಿ ಗಿರಿಯು ಸಮೀಪಿಸುತ್ತಿದ್ದಂತೆಯೇ.. ಸಿದ್ಧರಾಮನ ಮೈಮನಸ್ಸು ಉಲ್ಲಸಿತಗೊಂಡವು.

ಆ ಬೆಟ್ಟಸಾಲಗಳ ನಡುವಿನ ದೊಡ್ಡ ಪ್ರಾಂಗಣದ ದೇವಸ್ಥಾನಕ್ಕೆ ಹೋದದ್ದೆ ಆ ಮುಖಂಡ ಸಿದ್ಧರಾಮನಿಗೆ ದೇವರನ್ನು ತೋರಿಸಿ ‘ತಮ್ಮಾ ಇದೋ ಇವನೇ ಅಪ್ಪಾ ಆ ಮಲ್ಲಯ್ಯ’ ಎಂದು ಹೇಳಿದ್ದೆ ಇವನು ಮುಖ ಸಿಂಡರಿಸಿ ಆ ಚಿತ್ಕಳೆಯ ದೇವರು ಇವನಲ್ಲ ಎಂಬಂತೆ ಪ್ರಶ್ನಾರ್ಥಕವಾಗಿ ನೋಡಿದ. ಅವನ ಮನಸ್ಸು ಈ ಕಲ್ಲೊಳಗೆ ಆ ಮುದುಕನ ಯಾವ ಚಹರೆಯೂ ಇಲ್ಲ, ನಾನು ಕಂಡವನ ಮುಖದಲ್ಲಿ ಚಿತ್ಕಳೆ ಇತ್ತು. ಹಂಬಲದ ಕಣ್ಣೋಟವಿತ್ತು ಎನ್ನುವುದನ್ನು ನೆನಪಿಸಿಕೊಂಡವನೇ ‘ಇವನಲ್ಲ ಆ ಮಲ್ಲಯ್ಯ’ ಎಂದು ಕಿರುಚಿಬಿಟ್ಟ. ಆ ಜನಸಂದಣಿಯ ನಡುವಿನಿಂದ ಕೊಸರಿಕೊಂಡು ಗುಡಿಯ ಪ್ರಾಂಗಣ ಬಿಟ್ಟು ಹೊರಗೆ ಬಂದ. ‘ಈ ದಿವಸದವರೆಗೂ ಆ ಮಲ್ಲಯ್ಯ ಇಲ್ಲಿ ಸಿಕ್ಕೆ ಸಿಗುತ್ತಾನೆಂದು ಭಾವಿಸಿದ್ದು ಸುಳ್ಳಾಯ್ತಲ್ಲ..! ಇಲ್ಲ ನಾನು ಆ ಮಲ್ಲಯ್ಯನನ್ನು ಗುರುತಿಸಬಲ್ಲೇ, ಆತನು ಇಲ್ಲೆ ಎಲ್ಲೋ ಇದ್ದಾನೆಂದು’ ಅಂದುಕೊಂಡವನೇ ಮತ್ತೆ ಹುಡುಕಲಾರಂಭಿಸಿದ.

ಕಡಿದಾದ ಬೆಟ್ಟ-ಗಡ್ಡಗಳ ನಡುವೆ ಜನಸಾಗರದ ಮಧ್ಯದಲ್ಲಿ ಸಿದ್ಧರಾಮ ಅದೇ ಚಿತ್ಕಳೆಯ ವೃದ್ಧನನ್ನು  ಗಿರಿಯ ಗಹ್ವರಗಳಲ್ಲಿ ಧ್ಯಾನಾಸಕ್ತರಾಗಿದ್ದ ತಾಪಸಿಗಳಲ್ಲಿ ಹುಡುಕತೊಡಗಿದನು. ಹಾವಿನಾಳದ ನಂದಿಮೇಳದವರು ಮಲ್ಲಿಕಾರ್ಜುನನು ಗುಡಿಯೊಳಗಿದ್ದಾನೆಂದು ಎಷ್ಟು ಹೇಳಿದರೂ ಕೇಳಿಸಿಕೊಳ್ಳದ ಆತ ಅವರಿಂದ ಬೇರೆ ಆಗಿ ಗಿರಿಗಳಲ್ಲಿ, ಗುಹೆಗಳಲ್ಲಿ ಒಂಟಿಯಾಗಿ ತಿರುಗತೊಡಗಿದ. ನದಿಯ ಉದ್ದಕೂ ತೆಪ್ಪವ ಕಟ್ಟಿ ಆಚೆಯಿಂದ ಈಚೆಗೆ ಈಚೆಯಿಂದ ಆಚೆಗೆ ಓಡಾಡುತ್ತಿದ್ದ ಜನರ ನಡುವೆ ಹಾದು ಕದಳಿ ಬನದಲ್ಲಿ ಆಳದ ಪ್ರಪಾತದ ನಡುವಿನ ಗುಹೆಯಲ್ಲಿ ಆ ಮುದುಕ ಸನ್ಯಾಸಿ ಸಿಕ್ಕೇಬಿಟ್ಟರು.

ಆಹಾ ಅವನ ಆನಂದಕ್ಕೆ ಪಾರವಿರಲಿಲ್ಲ.. ಉದ್ದೋಕೆ ಆ ತಾಪಸಿಯ ಕಾಲಮೇಲೆ ಬಿದ್ದು, ಒಣಗಿ ಗುಗ್ಗರಿಯಾಗಿದ್ದ ಬೆಳಸಿಯ ಮಡಕೆಯನ್ನು ಅವರ ಕೈಗಿಟ್ಟು ‘ಇದು ನಿಮ್ಮ ಪ್ರಸಾದ, ನಿಮಗಲ್ಲದೆ ಬೇರೆಯವರಿಗೆ ಸಲ್ಲದೆಂದು ಹೊತ್ತು ತಂದಿದ್ದೇನೆ ಸ್ವೀಕರಿಸಿ’ ಎಂದು ವಿನಮ್ರವಾಗಿ ತಲೆಬಾಗಿದನು. ಅಂದಿನಿಂದ ಮುಂದಲ ಹನ್ನೆರಡು ವರ್ಷಗಳ ಕಾಲ ಅದೇ ಗಹ್ವರವೇ ವಾಸಸ್ಥಾನವಾಗಿ, ವನಮೂಲಿಕೆ, ಸಸ್ಯರಾಶಿ, ಯೋಗಧ್ಯಾನ, ಮಲ್ಲಿನಾಥನ ಧ್ಯಾನದಲ್ಲಿ ಮನಸ್ಸು ನೆಲೆ ನಿಂತು ಸಿದ್ಧರಾಮ ಶಿವಯೋಗಿ ಸಿದ್ಧರಾಮರಾದರು.

Previous post ಶರಣನಾಗುವ ಪರಿ
ಶರಣನಾಗುವ ಪರಿ
Next post ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ

Related Posts

ಸವೇಜನಾಃ ಸುಖಿನೋ ಭವಂತು
Share:
Articles

ಸವೇಜನಾಃ ಸುಖಿನೋ ಭವಂತು

August 2, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ನ್ಯಾಯನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ. ಲೋಕವಿರೋಧಿ ಶರಣನಾರಿಗಂಜುವನಲ್ಲ. ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ. ಬಸವಣ್ಣನವರ ಈ ವಚನದ ಆಶಯಕ್ಕನುಗುಣವಾಗಿ ತಮ್ಮ ಬದುಕನ್ನು...
ಸಂದೇಹ ನಿವೃತ್ತಿ…
Share:
Articles

ಸಂದೇಹ ನಿವೃತ್ತಿ…

October 6, 2020 ಪದ್ಮಾಲಯ ನಾಗರಾಜ್
ಗುರು-ಶಿಷ್ಯ ಪ್ರಶ್ನೋತ್ತರ ಮಾಲಿಕೆ ಮೂಲ: ಬೃಹದ್ವಾದಿಷ್ಠ (ಅಚಲ ಗ್ರಂಥ) ಕನ್ನಡಕ್ಕೆ: ಪದ್ಮಾಲಯಾ ನಾಗರಾಜ್ ಶಿಷ್ಯ: ಮನಸ್ಸು ಮತ್ತು ದೇಹ ಬೇರೆ ಬೇರೆ ಆಗಿವೆಯೇ? ಇಲ್ಲವೆ ಅವೆರಡೂ...

Comments 18

  1. Lingaraj Patil
    Jul 7, 2019 Reply

    ಮಹಾದೇವ ಹಡಪದ ಅವರ ಲೇಖನಗಳು ಕುತೂಹಲದಿಂದ ಓದಿಸಿಕೊಳ್ಳುತ್ತವೆ. ಅದರಲ್ಲೂ ಶರಣರ ನೈಜ ಕತೆಗಳು ನಮ್ಮನ್ನು ವಿಚಾರಕ್ಕೆ ಹಚ್ಚುತ್ತವೆ. ಸಿದ್ಧರಾಮೇಶ್ವರರ ಬಾಲ್ಯದ ಹೆಸರು ಧೂಳಯ್ಯ ಎಂಬುದು ನನಗೆ ತಿಳಿದೇ ಇರಲಿಲ್ಲ.

  2. ಪಂಚಾಕ್ಷರಿ ಹಳೇಬೀಡು
    Jul 7, 2019 Reply

    ಶರಣ ಶಿವಯೋಗಿ ಸಿದ್ದರಾಮೇಶ್ವರರ ಕಥೆಯಯನ್ನು ಮನದಲ್ಲಿ ಅಚ್ಚೊತ್ತುವಂತೆ ಹೇಳಿದ್ದೀರಿ.
    ಶರಣು.

  3. Kamalakara Jogimatti
    Jul 9, 2019 Reply

    ಕತೆಯಲ್ಲಿನ ಜಾತ್ರೆಯ ಚಿತ್ರಣ ನನ್ನನ್ನು ಬಾಲ್ಯದ ದಿನಗಳಿಗೆ ಕರೆದೊಯ್ಯಿತು. ಕಣ್ಣಿಗೆ ಕಟ್ಟುವಂತೆ ಕತೆ ಹೇಳುವ ಕಲೆ ನಿಮಗಿದೆ. ಎಲ್ಲ ಶರಣರ ಬಗ್ಗೆಯೂ ಬರೆಯಿರಿ, ಸಾಹಿತ್ಯ ಲೋಕಕ್ಕೆ ಇದೊಂದು ದೊಡ್ಡ ಕೊಡುಗೆ ಆಗುತ್ತದೆ.

  4. ಅನಿಲ್ ಕುಮಾರ ಕಟಗಿ, ಧಾರವಾಡ
    Jul 9, 2019 Reply

    ಶ್ರೀಗಿರಿಗೆ ನಾನೂ ಹೋಗಿದ್ದೇನೆ, ಅಲ್ಲಿಯ ಸಿದ್ಧರಾಮ ಕೊಳ್ಳವನ್ನು ನೋಡಿದ್ದೇನೆ, ಕಾಡಿನ ದಾರಿಯ ಕೊಳ್ಳ ಅದು. 12ನೆಯ ಶತಮಾನದಲ್ಲಿ ಅದೆಲ್ಲ ನಾಥ ಪಂಥದ ಗುರುಗಳಿಂದ ತುಂಬಿತ್ತು ಎಂದು ಇತಿಹಾಸ ಹೇಳುತ್ತದೆ. ಸಿದ್ಧರಾಮರ ಮೊದಲ ಸಾಧನೆಯ ಜಾಗವನ್ನು ನೋಡಲೇ ಬೇಕು.

  5. ರವಿಶಂಕರ ಮೈಸೂರು
    Jul 10, 2019 Reply

    ಊರ ಜಾತ್ರೆಗಳು ಎಷ್ಟು ಮಜವಾಗಿರುತ್ತವೆ!! ಊರಿಗೆ ಊರೇ ಆ ಸಂಭ್ರಮದಲ್ಲಿರುತ್ತದೆ. ಕತೆಯ ಜಾತ್ರಾ ವರ್ಣನೆ ಮೋಹಕವಾಗಿತ್ತು. ಮೂಕ ಹುಡುಗನಿಗೆ ಸಿದ್ದರಾಮ ಎನ್ನುವ ಹೆಸರು ಹೇಗೆ ಬಂದಿತೆಂದು ನನಗೆ ಆಶ್ಚರ್ಯವಾಗಿತ್ತು.

  6. Gangadhar navale
    Jul 11, 2019 Reply

    ಬಾಲಕ ಧೂಳಯ್ಯ ಅಪ್ಪ ಅಮ್ಮ ಅಣ್ಣನನ್ನು ಮರೆತು ಶ್ರೀಗಿರಿಯಲ್ಲಿ ನಿಂತುಬಿಟ್ಟದ್ದು ಬೇಸರವಾಯಿತು. ಜನ್ಮ ಬಂಧನವನ್ನು ಕಳಚಿಕೊಳ್ಳುವುದು ಆ ವಯಸ್ಸಿನಲ್ಲೇ ಸಾಧ್ಯವೇ?

  7. Mariswamy Gowdar
    Jul 12, 2019 Reply

    ಧೂಳಯ್ಯನಿಗೆ ಸಿಕ್ಕ ಬಾಲ್ಯ ನನ್ನದೂ ಆಗಿತ್ತು. ಹಳ್ಳಿಯ ಸೊಗಡು ಕತೆಯ ಉದ್ದಕ್ಕೂ ಅತ್ಯಂತ ಸುಂದರವಾಗಿದೆ.

  8. mahadevi katagi
    Jul 14, 2019 Reply

    ಮಾತು ಬಾರದ ಧೂಳಯ್ಯನ ಬಾಳಿನ ಪಯಣ ರೋಚಕವಾಗಿದೆ. ನಾವೂ ಅವರೊಂದಿಗೆ ನಡೆದಿದ್ದೇವೆ, ಈಗ ಶ್ರೀಶೈಲದಲ್ಲಿ ಇದ್ದೇವೆ. ಕತೆಗಾರರ ಶೈಲಿ ಮೋಡಿ ಮಾಡುವಂತಿದೆ.

  9. Aruna Vali
    Jul 14, 2019 Reply

    ಬಾಲಕ ಧೂಳಯ್ಯನ ಬಾಲ್ಯದ ಮುಗ್ಧತೆ ಆಪ್ಯಾಯಮಾನವಾಗಿದೆ. ಪ್ರಕೃತಿಯಲ್ಲಿ ಪ್ರಕೃತಿಯಾಗಿ ಬೆಳೆಯುತ್ತಿದ್ದ ಬಾಲಕ ಶ್ರೀಗಿರಿ ತಲುಪಿದ್ದು ಆಕಸ್ಮಿಕವೇ? ವಿಧಿ ಲಿಖಿತವೇ?

  10. ನಿರ್ಮಲಾ ಜೊಂತೆ
    Jul 14, 2019 Reply

    ಶರಣರ ಇತಿಹಾಸ ಮತ್ತು ಸಾಧನೆಗಳು ಬಯಲಿನಲ್ಲಿ ಕತೆಗಳಾಗಿ ಪ್ರಕಟವಾಗುತ್ತಿರುವುದು ಬಹಳ ಸಂತೋಷದ ವಿಚಾರ. ವಿಭಿನ್ನ ಬರಹಗಳಿಗೆ ಬಯಲು ವೇದಿಕೆ ಆಗಿರುವುದು ಗ್ರೇಟ್.

  11. ದೇವೀರಯ್ಯ ಹೊನ್ನಾಪುರ
    Jul 15, 2019 Reply

    ಬಾಲಕ ಸಿದ್ಧರಾಮನ ಮನಸ್ಸು ಬಾಲ್ಯದ ವಿವರಣೆಗಳ ನಡುವೆ ನಮಗೆ ಕಾಣಿಸುವುದೇ ಇಲ್ಲ. ಮೌನವಾಗಿದ್ದ ಹುಡುಗನ ಮನಸ್ಸೂ ಮೌನವಾಗಿಯೇ ಇತ್ತೇ? ಬೆಳೆದ ವಾತಾವರಣದ ವಿವರದಲ್ಲಿ ಬಾಲಕ ಸಿದ್ಧರಾಮನ ವ್ಯಕ್ತಿತ್ವ ಕಳೆದುಹೋಗಿದ್ದು ಕತೆಯ ಸಾಂದ್ರಕ್ಕೆ ಧಕ್ಕೆ ತಂದಂತಾಯಿತೆಂದು ನನ್ನ ಅಭಿಪ್ರಾಯ. ಶರಣು.
    ದೇವೀರಯ್ಯ ಹೊನ್ನಾಪುರ

  12. Jyothi Hulyal
    Jul 16, 2019 Reply

    ಧೂಳಯ್ಯ ಧೂಳಮಾಂಕಾಳನ ಪ್ರತಿರೂಪದಂತೆ ಕಂಡ. ಸುಂದರ ಕಥೆ.

  13. jeevan koppad
    Jul 17, 2019 Reply

    ಮಲ್ಲಯ್ಯನಿಗೆ ಉಪ್ಪು ತರಲು ಹೋದ ಧೂಳಯ್ಯ, ಮನೆ ಮರೆತು ಶ್ರೀಗಿರಿಗೆ ಹೊರಟಿದ್ದು ಅವನ ಬಾಳಿನ ಅನಿರೀಕ್ಷಿತ ತಿರುವು. ಕುತೂಹಲಕರವಾಗಿ ಆ ಇಡಿ ಸಂದರ್ಭವನ್ನು ಕತೆಗಾರರು ಹೆಣೆದಿರುವ ರೀತಿ ನನಗೆ ತುಂಬಾ ಹಿಡಿಸಿದೆ.

  14. ಮಹಾದೇವ
    Jul 18, 2019 Reply

    ಪ್ರತಿಕ್ರಿಯಿಸಿದ ಎಲ್ಲಾ ಶರಣರಿಗೂ ನಾನು ಆಭಾರಿ
    -ಮಹಾದೇವ ಹಡಪದ

  15. Shambu BANAKAR
    Jul 18, 2019 Reply

    ಸಿದ್ಧರಾಮೇಶ್ವರರ ಚರಿತ್ರೆಯನ್ನು ತುಂಬಾ ಸಹಜವಾಗಿ ಬರೆದಿದ್ದೀರ ನಾನು ಕೇಳಿದ ಸಿದ್ಧರಾಮನ ಚರಿತ್ರೆ ಪೌರಾಣಿಕವಾಗಿ ಮತ್ತು ಅಸಹಜ ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿ ಹೇಳುತ್ತಿರುವ ಸಿದ್ದರಾಮೇಶ್ವರ ಚರಿತ್ರೆಯನ್ನು ಕೇಳಿದ್ದೇನೆ ಈ ಲೇಖನಕ್ಕೂ ನಾನು ಕೇಳಿದ ಸಿದ್ದರಾಮೇಶ್ವರ ಚರಿತ್ರೆ ಅಜಗಜಾಂತರ ವ್ಯತ್ಯಾಸವಿದೆ ತುಂಬಾ ಸರಳ ಮತ್ತು ನಂಬುವ ನಮ್ಮದೇ ಕಾಲಘಟ್ಟದಲ್ಲಿ ಆಡು ಭಾಷೆಯನ್ನು ಬಳಸಿ ಬರೆದಿದ್ದು ಅತ್ಯಂತ ಸುಂದರವಾಗಿ ಸಹಜವಾಗಿ ಮೂಡಿಬಂದಿದೆ ಲೇಖನವನ್ನು ಓದುತ್ತಾ ಹೋದಂತೆ ನಾವು ಕೂಡ ಆ ಕಾಲಘಟ್ಟದಲ್ಲಿ ಇದ್ದೇವೆ ಎಂಬುವ ಭಾವ ಭಾಸವಾಗುತ್ತದೆ

  16. ಆನಂದ ತೇಗದೂರ
    Jul 19, 2019 Reply

    ಸಿದ್ಧರಾಮ ಚರಿತೆ ಓದಿದ್ದೆ. ಅದಕ್ಕಿಂತ ಭಿನ್ನವಾಗಿ, ಸುಸಂಗತವಾಗಿ ಕತೆ ಬರೆದಿದ್ದೀರಿ. ಒಳ್ಳೆಯ ಪ್ರಯತ್ನ, ಶುಭವಾಗಲಿ.

  17. shivasharanappa sv
    Jul 24, 2019 Reply

    ನಾನು ಸೊಲ್ಲಾಪುರದವನು. ಸಿದ್ಧರಾಮರ ಕುರಿತು ಎಷ್ಟು ಓದಿದರೂ ನನಗೆ ತೃಪ್ತಿಯಿಲ್ಲ. ಬಾಲ್ಯದ ಚಿರ್ತಣ ಚನ್ನಾಗಿದೆ, ಮುಂದಿನ ಭಾಗ ಓದಲು ಕಾತರನಾಗಿದ್ದೇನೆ.

  18. ಶಿವಪಂಚಾ‌‌ಕ್ಷ‌ರಿ ತ್ಯಾಗಟೂರು
    Apr 9, 2020 Reply

    ಸಿದ್ದರಾಮಯ್ಯನ ಕತೆಯ ರಸಗವಳ ಉಣಬಡಿಸಿದ ತಮಗೆ ಶರಣು ಶರಣಾರ್ಥಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
Copyright © 2023 Bayalu