Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕರ್ತಾರನ ಕಮ್ಮಟ
Share:
Articles January 4, 2020 ಮಹಾದೇವ ಹಡಪದ

ಕರ್ತಾರನ ಕಮ್ಮಟ

ಸೊನ್ನಲಿಗೆಯೇ ಖಾಲಿಖಾಲಿ… ಗುಡ್ಡರ ಮನಸ್ಸುಗಳು ಭಾರವಾದಂತೆ ಹೊಸದಿನದ ಹೊಸ ಬೆಳಕಿನ ಕಿರಣಗಳ ಹೊತ್ತು ಸೂರ್ಯ ಮೂಡಿದಾಗ ದಿಗಂತದಲ್ಲಿ ಏನೋ ಹೊಸತೊಂದು ಕಾಲದ ಸೂಚನೆಯಂತೆ ಸುತ್ತಲೂ ಕೆಂಪೇರಿದ್ದ ದಿಗಂತವು ಇದ್ದಕ್ಕಿದ್ದಂತೆ ಬೆಳ್ಳಗಾಗಿ ಸೂರ್ಯನೊಬ್ಬನೇ ಧಗಧಗನೇ ಉರಿಯುತ್ತಿರುವಂತೆ ಕಾಣಿಸಿತು. ಶಿವಯೋಗಿಯು ತುಸು ಹೆಚ್ಚೆ ಎನ್ನುವಷ್ಟು ಧ್ಯಾನಾಸಕ್ತರಾಗಿ ಕುಳಿತಿದ್ದವರು ಮೇಲೇಳಲೇ ಇಲ್ಲ. ಅವರ ಚಿತ್ರಪಟದಲ್ಲಿ ಒಬ್ಬೊಬ್ಬರೇ ಮೂಡಿಮೂಡಿ ಮರೆಯಾಗುತ್ತಿದ್ದರಾಗಿ ಶರಣರ ಸಂಗವನ್ನು ಕಳೆದುಕೊಂಡ ಯಾತನೆ ಅವರೊಳಗೆ ದಟ್ಟವಾಗಿ ಕಾಡುತ್ತಿತ್ತು.
ಪ್ರಭುದೇವರ ನಿರೀಕ್ಷಣೆ ಇನ್ನೆಂತೋ… ಕಪಿಲಸಿದ್ಧ ಮಲ್ಲಿಕಾರ್ಜುನನೇ ತಾನಾಗಿ ದೀಕ್ಷೆಯನಿತ್ತ ಚನ್ನಬಸವಣ್ಣ ಪ್ರಮಥರ ಶಿವಲಿಂಗಕೂಟವಿನ್ನೆಂತೋ.. ಮಡಿವಾಳನ ಮಹಾನುಭಾವವಿನ್ನೆಂತೋ… ಇಳೆಯೊಳಾನಂದವೇ ತುಂಬಿ ತುಳುಕುತ್ತಲಿದ್ದ ಕಲ್ಯಾಣವ ನೆನೆದು ಕಣ್ಣೀರು ಕೋಡಿಯಾಗಿ ಬಸವಾ ಬಸವಾ ಎಂದು ದನಿಯೆತ್ತರಿಸಿ ಹಾಡತೊಡಗಿದರು.

ಬಸವಾ ಶರಣಯ್ಯ ಬಸವೇಶ ಶರಣಯ್ಯ
ಬಸವರಸ ಬಸವದಂಡೇಶ ಶರಣು||
ಬಸವಣ್ಣ ಬಸವಯ್ಯ ಬಸವ ಗತಿಮತಿ ಎನಗೆ
ಬಸವ ಗುರು ಶರಣಯ್ಯ ಯೋಗಿನಾಥ..

ಶರಣು ಗುರು ಬಸವಯ್ಯ ಶರಣು ಗುರು ಬಸವರಸ
ಶರಣಾರ್ಥಿ ಬಸವದಂಡೇಶ ನಿಮಗೆ
ಕರುಣಾಕರ ಚನ್ನಬಸವಪ್ಪ ನಿಮ್ಮಡಿಗೆ
ಶರಣು ಶರಣಾರ್ಥಿಯೈ ಯೋಗಿನಾಥ…
ಭಾವದೊಳಗೆ ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ ಮೊದಲಾಗಿ ಅಸಂಖ್ಯಾತ ಪ್ರಮಥರೇ ತುಂಬಿರಲಾಗಿ ಗಂಟಲುಬ್ಬಿ ಬಂದು ಅಳುವಿನೊಳಗೆ ಕಳೆದುಕೊಂಡ ನೆಲೆಯನ್ನು ಅರಸುವ ಮಗುವಂತೆ ದನಿಯೆತ್ತರಿಸಿ ಹಾಡುತ್ತಿರಲಾಗಿ ಸೊನ್ನಲಿಗೆಯ ಗುಡ್ಡರಾದಿಯಾಗಿ ಊರಲ್ಲಿ ಉಳಿದಿದ್ದ ಹಲಕೆಲವು ಶರಣರೂ ಬಂದು ಸಿದ್ಧರಾಮರ ಸುತ್ತ ನೆರೆದರು. ಪ್ರಭು ಕರೆದುಕೊಂಡು ಹೋದಂದು ಅವರೊಡನೆ ಮಾತಾಡಿದ ಸಕಲೆಂಟು ಸಂಗತಿಗಳನ್ನು ನೆನೆ ನೆನೆದು ಮನಸ್ಸು ತುಂಬಿ ಬಂತು. ಗುರುವಿಂಗೂ ಬಸವಣ್ಣನೇ ಬೇಕು, ಲಿಂಗ-ಜಂಗಮಕ್ಕೂ ಬಸವಣ್ಣನೇ ಬೇಕು ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮಗೂ ನನಗೂ ನಿಮ್ಮ ಶರಣರಿಗೂ ಬಸವಣ್ಣನೇ ಬೇಕು ಎಂದು ಉದ್ಘರಿಸಿದರು.
“ಅಯ್ಯಾ ಈ ತಳಮಳ ಯಾಕೆ, ಈ ಕಸಿವಿಸಿ ಯಾಕೆ..? ಶರಣರಿಗೆ ಯಾವ ಹಾನಿಯೂ ಬಂದೊದಗಿಲ್ಲ. ತಾವು ನೋಯಬಾರದು.”
“ಕಸಿವಿಸಿ ಎನ್ನುವುದು ಅನುಭವಕ್ಕೆ ಬಂದವಗೆ ಮಾತ್ರ ಗೊತ್ತು ಕಲ್ಲಯ್ಯ.. ನನಗ್ಯಾಕೋ ಕಾಣಬೇಕು ಶರಣರ, ಕಂಡು ಮಾತಾಡಿಸಬೇಕು ಮನದಿಂಗಿತವ, ಇಲ್ಲಿರುವುದೆಲ್ಲವ ಬಿಟ್ಟು ಅಲ್ಲೆಲ್ಲೋ ನಡೆದವರ ನಡುವೆ ಗುರು-ಲಿಂಗ-ಜಂಗಮ-ಪ್ರಸಾದ ಪಾದೋದಕದ ಇರವನ್ನು ಕಾಣಬೇಕೆಂಬ ಹಂಬಲವಾಗುತ್ತಿದೆ. ಒಬ್ಬೊಬ್ಬರೊಡನೆ ಮಾತಾಡಬೇಕು. ಅವರ ಅರಿವಿನ ಪ್ರಮಾಣವನ್ನು ಕೇಳಿ ತಿಳಿದು ಆ ಮಾರ್ಗದ ಸತ್ಯಾಸತ್ಯತೆಗಳ ತಿಳಿಯಬೇಕು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಹಾಡುವೆ, ಹೊಗಳುವೆ, ಬೇಡುವೆ ಸೆರಗೊಡ್ಡಿ ಆನು ಕಾಡುವೆ ನಿಮ್ಮವರ ಸಂಗವನೇ ಕರುಣಿಸಯ್ಯಾ…”
ಆ ದಿನವಂತಲ್ಲ ಮುಂದಲ ಮೂರುನಾಲ್ಕು ದಿವಸ ಅದೇ ನೆನಪಿನಲ್ಲೇ ಕಳೆದರು. ಸಿದ್ಧರಾಮ ಶಿವಯೋಗಿಯು ಕಲ್ಯಾಣದ ಒಬ್ಬೊಬ್ಬ ಶರಣರ ಜೊತೆಗಿನ ತಮ್ಮ ಒಡನಾಟವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಚೂರುಚೂರೇ ಮುಸುಕಿದ್ದ ಮನದ ಮಾಯೆ ಕಳೆದು ಔಷಧೋಪಚಾರ, ಗುಡ್ಡರ ಸುಖದುಃಖಗಳ ಕತೆ ಕೇಳುತ್ತಾ, ಲಿಂಗಪೂಜೆ, ಶಿವಯೋಗದಲ್ಲಿ ನಿರತರಾಗಿರಲು ಅದೊಂದು ದಿನ ಶರಣರು ನಡೆದ ದಾರಿಯಿಂದ ಸುದ್ದಿ ಬಂತು ಮಾಚಿದೇವರು ಹೋರಾಡುತ್ತಲೇ ವೀರಮರಣವನ್ನಪ್ಪಿದರೆಂದು, ಮತ್ತೊಂದು ದಿನ ಸೊಗಲದ ಹೆಬ್ಬಾಗಿಲಿಗೆ ಶರಣರು ತಲುಪಿದರೆಂದು, ಮಗದೊಂದು ದಿನ ಬಡಗಣ ದಿಕ್ಕಿನಿಂದ ಒಂದು ಸುದ್ದಿ ಬಂದು ತಲುಪಿದಾಗ ಸಿದ್ಧರಾಮ ಶಿವಯೋಗಿಯ ಎದೆಯಲ್ಲಿ ಖಡಿಲ್ ಎಂಬೊಂದು ಸಿಡಿಲು ಬಡಿದ ಅನುಭವವಾಯ್ತು.
“ಬಸವಣ್ಣನವರು ಕಪ್ಪಡಿ ಸಂಗಮದಲ್ಲಿ…”
“ಅವರೊಬ್ಬರೇ..?
“ಇಲ್ಲಾ ಜೊತೆಗಿದ್ದ ಶರಣರು, ನೀಲಮ್ಮತಾಯಿ, ಅಪ್ಪಣ್ಣನೂ…”
“ಬಸವಣ್ಣಾ… ಶರಣರಿಗೆ ಮರಣವೇ ಮಹಾನವಮಿ. ಮರಣವೇ ಮಹಾನವಮಿ.”
ಅದು ಹೇಗೋ ಹಾಗೇ ಇತ್ತಲ ಈ ದಿಕ್ಕಿನಲ್ಲಿ ಶರಣೆ ಗಂಗಾಂಬೆಯು ಹರಿಯುವ ನದಿಯಲ್ಲಿ ಕೈಯಿಟ್ಟುಕೊಂಡು ಧ್ಯಾನಸ್ಥಳಾಗಿ ಕುಳಿತಾಕೆ…
ಉರುಳುವ ಚಕ್ರದ ಗತಿಯಲ್ಲಿ ಒಂದಾಗಿ ಹೋಗುತ್ತಿರುವ ಸಂಗತಿಗಳನ್ನು ಕೇಳುತ್ತಿದ್ದಂತೆ ಸಿದ್ಧರಾಮ ಶಿವಯೋಗಿ ಕನಲುತ್ತಿದ್ದರು. ದಂಡಿಯಾಗಿ ಕಾಡುತ್ತಿದ್ದ ಅವರ ನೆನಪಿನಲ್ಲಿ ಆಯಾ ಶರಣರ ಬದುಕು ಒಡಮೂಡುತ್ತಿತ್ತು. ಕೆಲವೊಮ್ಮೆ ಅವರ ಕಾಯಕ ತತ್ವ, ಬದುಕಿನ ತತ್ವವನ್ನು ಏಕಾಂತದಲ್ಲಿ ಅವರೊಡನೆ ಚರ್ಚಿಸುತ್ತಿರುವಂತೆ ಮಾತಾಡಿಕೊಳ್ಳುತ್ತಿದ್ದರು. ಒಮ್ಮೆ ಪುಲಿಗೆರೆಗೆ ಹೋಗಿದ್ದ ತೇಲಂಗದ ವ್ಯಾಪಾರಿಯೊಬ್ಬ ಚನ್ನಬಸವಣ್ಣನವರು ಹೊಸದಾಗಿ ಕಟ್ಟಿರುವ ವಚನಗಳ ತಾಳೆಗರಿಗಳನ್ನು ಕೊಟ್ಟುಹೋದ. ಅವುಗಳನ್ನು ಓದುತ್ತ ಇವರ ಕಣ್ಣಲ್ಲಿ ನೀರಾಡಿತು.

ಮಳ್ಳಾಮರುದಿನದ ಚುಮುಚುಮು ಕೆಂಪಗೆ ಒಡಲು ನೆರತದ್ದೆ ತಡ ಸಿದ್ಧರಾಮ ಶಿವಯೋಗಿ ಕುದುರೆಯನ್ನೇರಿ ಪಡುವಣದತ್ತ ಹೊರಟರು. ಮರಣ ಮರುಹುಟ್ಟು ಪಡೆವುದು ನೆನೆದವರ ಮನದಾಗೆ ಅನ್ನುವಂತೆ ಅವರ ತಲೆಯಲ್ಲಿ ಗಿರಗಿರ ಚಿತ್ರಗಳು ಮೂಡಿ ಮೂಡಿ ಮಸಳುತ್ತಿದ್ದವು. ಇಡೀ ಕಲ್ಯಾಣದ ಬಿಳಿಪರದೆಯೊಂದು ಮನಃಪಟಲದಲ್ಲಿ ಬಿಚ್ಚಿಕೊಂಡದ್ದೆ ಒಬ್ಬೊಬ್ಬ ಶರಣನೊಡನೆ ಹಾಕ್ಯಾಡುತ್ತಾ ಮಾತಿಗೆ ಮಾತು ಹೊಸೆದು ಸೋಸಿ ತೆಗೆದ ವಿಚಾರದ ಬೆಳಕು ಹರಿಯತೊಡಗಿತ್ತು. ಕುದುರೆಯ ಸವಾರಿ ಚೂರುಚೂರೇ ತೆಂಕಣದತ್ತ ಹೊರಳುತ್ತಾ ಆಯಾಸವಿಲ್ಲದೇ ಹೊರಟಿರಲಾಗ ಭೀಮಾನದಿ ಅಡ್ಡಬಂತು. ಅಲ್ಲಿ ಕುದುರೆಯ ಆಯಾಸಕ್ಕೆ ತುಸು ತಡೆದು, ತಿಳಿಯಾಗಿ ತೆಳುವಾಗಿ ನುಣುಪುಕಲ್ಲುಗಳ ಮೇಲೆ ಮೆದುವಾಗಿ ಹರಿಯುತ್ತಿದ್ದ ನದಿಯೊಳಗೆ ಮಿಂದು, ಲಿಂಗಸಾಮರಸ್ಯವ ಕಂಡು ಮತ್ತೆ ಸವಾರಿ ನಡೆಯಲು ಅದೇ ಆಗ ಮೂಡಿದ್ದ ಕಲ್ಯಾಣದ ಚಿತ್ರಪಟವು ಮತ್ತೊಮ್ಮೆ ಬಿಚ್ಚಿಕೊಂಡಿತು. ಮನುಷ್ಯನ ಬದುಕೊಂದು ಲೀಲೆಯಂತೆ ನನ್ನೊಳಗಿನ ಅರಿವು ನನಗಾದರೆ ಗುರುವೆಂಬುದು, ಜಂಗಮವೆಂಬುದು, ಲಿಂಗವೆಂಬುದು ನಾನಲ್ಲದೆ ಮತ್ತೇನಲ್ಲ.
ಯೋಜನ ದಾರಿ ತುಳಿದಿರಲಿಲ್ಲ ತವರಿಗೆ ಹೊಂಟಿದ್ದ ಹೆಂಗಸೊಬ್ಬಳು ಬಂಡಿಯೊಳಗೆ ಬೇನೆ ತಿನ್ನುತ್ತಾ ಜೀವದ ಬೆರಗಿಗೆ ಜೀವವನ್ನೇ ಒತ್ತೆಯಿಟ್ಟು ಒದ್ದಾಡುತ್ತಿರುವ ಅಕ್ರಂದನವು ಕೇಳಿದ್ದೆ ಓಡುವ ಕುದುರೆ ಗಕ್ಕನೇ ನಿಂತಿತು. ಸಮೀಪದಲ್ಲೊಂದು ಗೌಳಿಗರ ಹಟ್ಟಿಯಿದ್ದುದನ್ನ ಕಂಡವರೇ ಆ ಬಿಡಾರದ ಕಡೆಗೆ ಬಂಡಿ ಓಡಿಸಲು ಆ ಹೆಂಗಸಿನ ಅಣ್ಣನಿಗೆ ಹೇಳಿದರು. ಆ ಗೌಳಿಗರಲ್ಲಿ ಯಾರೂ ಸೂಲಗಿತ್ತಿ ಇದ್ದಿರಲಿಲ್ಲವಾಗಿ ಬೇನೆಯ ಆರ್ತತೆ ಮುಗಿಲುಮುಟ್ಟಿದ್ದೆ  ಶಿವಯೋಗಿಗಳು ಲಗುಬಗೆಯಿಂದ ಗೌಳಿಗರ ಮನೆಗೆ ಹೋಗಿ ಒಂದಷ್ಟು ಜೀರಿಗೆಯನ್ನು ಸಣ್ಣಗೆ ಪುಡಿಮಾಡಿ, ಅದನ್ನು ಬೆಣ್ಣೆಯಲ್ಲಿ ಕಲಸಿ ಗರ್ಭವತಿಗೆ ತಿನ್ನಲು ಕೊಟ್ಟು ಗೌಳಿಗರ ಕಡೆಯ ಮುದುಕಿಯೊಬ್ಬಳನ್ನು ಕರೆದು ಹೆರಿಗೆ ಮಾಡಿಸಲು ಹೇಳಿದರು.

ಅದೇನು ಮಾಯೆಯೋ ಟ್ಯಾಂ ಎಂದಿತು ಇದೀಗ ಕಣ್ತೆರೆದ ಜೀವವು. ಗೌಳಿಗರ ಹೆಂಗಸರು ಆರೈಕೆಗೆ ಮುಂದಾಗಿ ಹೆಣ್ಣುಕೂಸೆಂದಾಗ ಅಣ್ಣನ ಮುಖದಲ್ಲಿ ನಗೆಮೂಡಿ ಶಿವಯೋಗಿಯ ಪಾದಕ್ಕೆರಗಿದನು.
“ಅಯ್ಯಾ.. ದಾರಿಯಲ್ಲಿ ದೇವರಾಗಿ ಬಂದಿರಿ. ಮನೆಗೆ ಬಂದು ಉಪಚಾರ ಸ್ವೀಕರಿಸಿ.”
“ಅಪ್ಪಾ, ನಾ ಸಾಗುವ ದಾರಿ ಬಲು ದೂರವಿದೆ. ಕಾಳಜಿಯಿಂದ ಕರೆದುಕೊಂಡು ಹೋಗು.”
“ನಿನ್ನ ಹೆಸರಾದರೂ ಏನು ತಂದೆ, ಕೂಸಿಗಿಟ್ಟು ಕರೆಯುತ್ತೇವೆ.”
“ನಾನೊಬ್ಬ ಶರಣನಪ್ಪಾ.. ನನ್ನ ಹೆಸರು ಕರೆಯುವುದು ಬೇಡ. ನಾನು ಶರಣರನ್ನು ಕಾಣಲು ಹೊರಟಿದ್ದೆ, ನಡುದಾರಿಯಲ್ಲಿ ಈ ಶರಣೆಯ ದರುಶನವಾಯ್ತು. ಶರಣವ್ವಾ ಎಂದು ಹೆಸರಿಡು.”
“ನಿಮ್ಮ ಊರಾವುದು ತಂದೆ?”
“ಸೊನ್ನಲಿಗೆ”
“ಶಿವಯೋಗಿ ಸಿದ್ಧರಾಮರ ಊರೇ..!?”
“ಹೌದು. ಬನವಾಸಿ ಸೀಮೆಗೆ ಹೋಗಬೇಕು ನಾನು…”
“ಅಪ್ಪಾ ನೀವು ದೇವರಾಗಿ ಬಂದಿರಿ ಶರಣು ನಿಮಗೆ”
“ಶರಣು ಶರಣಾರ್ಥಿ”
ಕುದುರೆಯ ಲಗಾಮು ಸಡಿಲಿಸಿ ಮತ್ತೆ ಹೊರಟಾಗ ಅದೇ ಹರಳುಗಟ್ಟುತ್ತಿದ್ದ ಕಲ್ಯಾಣದ ಶರಣರ ಚಿತ್ರಗಳು ಮೂಡತೊಡಗಿದವು. ಹಳ್ಳಕೊಳ್ಳಗಳನ್ನು ದಾಟಿ, ಐದಾರು ನದಿಗಳನ್ನು ಹಾದು ಕುದುರೆಗೆ ಆಯಾಸವಾದಲ್ಲಿ ನಿಲ್ಲಿಸಿ, ರಾತ್ರಿಯ ಎರಡನೇ ಜಾವಕ್ಕೆ ಬನವಸೆ ಸೀಮೆಯ ಸೊಗಲವೆಂಬ ಸೂಜಿಗಲ್ಲಿನ ಬೆಟ್ಟಕ್ಕೆ ಬಂದು ತಲುಪಿದರು. ಮುಂದೆ ನಡೆಯಲಾಗದೇ ಉಳಿದಿದ್ದ ಹಲಕೆಲವು ಶರಣರು ಅಲ್ಲಿ ಇದ್ದುದರಿಂದ ಅವರು ಸೊನ್ನಲಿಗೆಯಿಂದ ಹೊರಟು ಬಂದ ಕಾಲುದಾರಿಯ ಕಥನವನ್ನು ಹೇಳಿದರು.

****   ****   ****
ಇತ್ತಲೀ ಸೀಮೆಯಲ್ಲಿ ಶಿವಯೋಗಿಗಳು ಶರಣರನ್ನು ಕಂಡು ಬರುತ್ತೇನೆಂದು ಹೇಳಿ ಹೋದವರು ತಿಂಗಳಾದರೂ ಮರಳಿ ಬರಲಿಲ್ಲವಲ್ಲಾ ಎಂಬ ಚಿಂತೆಯಲ್ಲಿರಲು ಕಲ್ಯಾಣದ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವೇ ಘಟಿಸಿ ಸೋವಿದೇವನೆಂಬ ಎಳಸುಕರು ತಾನು ತೋಡಿದ್ದ ತೋಡಿನಲ್ಲಿ ತಾನೇ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಿರಲು ಬಿಜ್ಜಳನ ತಮ್ಮ ಕಣ್ಣಪನು ಬಂದು ರಾಜ್ಯಾಧಿಕಾರ ವಹಿಸಿಕೊಂಡಿದ್ದನು. ಹುಣ್ಣಿಮೆ ಕಳೆದು ಸೊನ್ನಲಿಗೆಗೆ ಬಂದು ಸಿದ್ಧರಾಮ ಶಿವಯೋಗಿಗಳನ್ನು ಕಂಡು ಮಾತಾಡಿ ಹೋಗುವುದಾಗಿ ತಿಳಿಸಲು ಕಲ್ಯಾಣದಿಂದ ಓಲೆಕಾರನನ್ನು ಕಳಿಸಿದ್ದನು. ಈಗೀಗ ಎಲ್ಲವೂ ಸರಿಯಿದ್ದಂತೆ ತೋರಿದರೂ ಕಲ್ಯಾಣದ ಬೀದಿಗಳು ಹೆದರಿಕೆಯಿಂದ ಚೇತರಿಸಿಕೊಂಡಿಲ್ಲವೆಂದೂ, ಬಸವಣ್ಣನಿಲ್ಲದ, ಶರಣರಿಲ್ಲದ ಊರೂ ಊರಾಗಿ ಉಳಿದಿಲ್ಲವೆಂದೂ ಆ ಓಲೇಕಾರ ಅಮುಗಿದೇವ, ಕಲ್ಲಯ್ಯನ ಮುಂದೆ ಕಲ್ಯಾಣದ ಚಿತ್ರಣವನ್ನು ಬಿಡಿಸಿಟ್ಟಿದ್ದನು. ತಿಂಗಳ ಮೇಲೆ ವಾರ ಕಳೆಯಿತು, ಪಕ್ಷಕಳೆಯಿತು ಎನ್ನುವಾಗ್ಗೆ ಸಿದ್ಧರಾಮ ಶಿವಯೋಗಿಗಳು ಅಚ್ಚ ಬಿಳಿ ಕುದುರೆಯ ಮೇಲೆ ಮತ್ತೆ ಮರಳಿಬಂದಾಗ ಮುಖದಲ್ಲಿ ಹೂನಗೆ ಅರಳಿತು.
ಆ ದಿನ ಸಂಜೆಯ ಸತ್ಸಂಗದಲ್ಲಿ ಶಿವಯೋಗಿಯು ದಟ್ಟಡವಿಯ ನಡುವಿನ ಕಾಳಕಪ್ಪಿನ ನದಿಯ ದಡದಲ್ಲಿ ಉಳಿದಿರುವ ಶರಣರ ಉಳವಿಯ ಬಗ್ಗೆ ಹೇಳಿದರು. ಅಕ್ಕನ ಊರು ಉಡತಡಿಯ ದಾಟಿ ಕೆಳದಿಯವರೆಗೂ ಹೋಗಿ ಬಂದುದ ಹೇಳಿದರು. ನೊಳಂಬ ಕುಲದ ಮಕ್ಕಳಿಗೆ ಲಿಂಗದೀಕ್ಷೆಯನಿತ್ತುದ ಹೇಳಿದರು. ಹಗೂರಕೆ ಇಡೀ ನಾಡನ್ನೇ ಆವರಿಸಿಕೊಳ್ಳುತ್ತಿರುವ ಕಲ್ಯಾಣದ ಬೆಳಕಿನ ಬಗ್ಗೆ ಹೇಳಿದರು. ಅವಿರಳ ಜ್ಞಾನಿಯ ಖಡಕ್ ಮಾತಿನ ನಡುವೆ ಅನುಭವದ ಅಗಾಧತೆ ನುಸುಳಿ ವಚನಗಳು ಹರಳುಗಟ್ಟುತ್ತಾ ಧರ್ಮದ ನೆಲೆಯನ್ನು ಕಾಣುತ್ತಿರುವ ಅಭಿಜಾತತೆ ಬಗ್ಗೆ ಹೇಳಿದರು. ಅಲ್ಲಲ್ಲಿ ಶರಣ-ಶರಣೆಯರ ನೆನೆ ನೆನೆದು ಹಾಡಿದರು. ಕಾಲವೊಂದಾಗಿ ಎರಡನೇ ಪ್ರಹರಕ್ಕೆ ಸತ್ಸಂಗದ ಮಾತು ಮುಗಿದಾಗ ಸೊನ್ನಲಿಗೆಯ ಜನ ಮೂಕವಿಸ್ಮಿತರಾಗಿ ಶರಣರ ಮಹಾಪಯಣದ ಕತೆ ಕೇಳುತ್ತಿದ್ದರು. ಮಾತು ಕತೆಯಾಗಿ, ಕತೆಯು ಬದುಕಾಗಿ, ಆ ಬದುಕನ್ನೇ ಬೆಳಗಿದ ಶರಣರ ಇತಿಹಾಸದ ಆದಿಬೀಜವೊಂದು ನೆಲಕ್ಕೆ ಇಳಿದು, ಘನಗೊಂಡ ನೆಲವನ್ನು ಹೂನೆಲವಾಗಿಸುತ್ತಿದೆ ಏನೋ ಎಂಬಂಥ ಪುಳಕ ಆ ರಾತ್ರಿಯನ್ನು ಆವರಿಸಿಕೊಂಡಿತ್ತು. ಕಲ್ಲಯ್ಯನು ಬಂದು ತಡರಾತ್ರಿಯಾಯ್ತೆಂದು ಎಚ್ಚರಿಸಿದಾಗಲೇ ಶಿವಯೋಗಿಯು ಆ ನೆನಪಿನ ಚಕ್ರದಿಂದ ಹೊರಬಂದರು.
“ಶರಣರನ್ನು ನೆನೆಯುವುದೆಂದರೆ ಆಯಾಸವಾಗದು ನೋಡಾ ಕಪಿಲಸಿದ್ದಮಲ್ಲಿಕಾರ್ಜುನ” ಎಂದೆನ್ನುತಾ ಎದ್ದು ತುಸುವೇ ಹಣ್ಣುಹಂಪಲ ತಿಂದು ಕಂಬಳಿ ಹಾಸಿಕೊಂಡು ಮೈಚಾಚಿ ಮಲಗಿದರು. ಆಹಾ ಆಕಾಶದಲ್ಲಿ ಮಿನುಗುವ ಒಂದೊಂದು ತಾರೆಯೂ ಶರಣರ ಹಾಗೆ ಕಾಣಿಸುತ್ತಿದ್ದವು. ಇಡೀ ಆಕಾಶಕ್ಕೇ ಒಂದು ಚೌಕಟ್ಟಿಲ್ಲ. ಶರಣರ ನಡೆನುಡಿಯೂ ಆಕಾಶದಲ್ಲಿ ಕಾಂತಿಯುತವಾಗಿ ಹೊಳೆಯುವ ಚುಕ್ಕಿಗಳಂತೆ ಕಾಣಿಸತೊಡಗಿದವು. ಯಾವಾಗ ನಿದ್ದೆಬಂತೋ.. ಎಷ್ಟೋ ದಿವಸ ಅರಕಳಿಯಾಗಿದ್ದ ಗಾಢತೆ ಆ ಕಣ್ಣೊಳಗಿನ ಕತ್ತಲೆಯನ್ನಾವರಿಸಿತು.
ಬೆಳಗಾದಾಗ ಕಲ್ಯಾಣದ ಕಣ್ಣಪನ ಮೇನೆಯು ಬಂದಿತ್ತು. ಸಿದ್ಧರಾಮ ಶಿವಯೋಗಿಗಳು ಕಲ್ಯಾಣಕ್ಕೆ ಬಂದು ಮತ್ತೆ ಧರ್ಮಕಾರ್ಯವನ್ನು ನಡೆಸಿಕೊಡುತ್ತಾ ರಾಜಗುರುವಾಗಿ ಇರಬೇಕೆಂದು ಓಲೆಯನ್ನೂ ಕಳಿಸಿದ್ದ. ಯಾವ ಶರಣರನ್ನು ಕಂಡು ಮಾತಾಡಲು ಹೋಗಿದ್ದರೋ ಆ ಶರಣರು ಇಲ್ಲದ ಕಲ್ಯಾಣಕ್ಕೆ ಹೋಗುವುದೆಂದರೆ… ಅದೊಂದು ಘಾಸಿಗೊಳ್ಳುವ ಕ್ರಿಯೆ ಎನಿಸಿತವರಿಗೆ. ಹೀಗೆ ರಾಜನಿಂದ ಬಂದ ಮನವಿಯನ್ನು ಇಲ್ಲಿಯೇ ಕುಳಿತು ತಿರಸ್ಕರಿಸುವುದು ಸರಿಯಲ್ಲವೆನಿಸಿತು.
“ಉಳವಿ, ಉಡತಡಿ, ಬನವಸೆ, ಸೊಗಲ, ಸಂಗಮ ತಿರುಗಾಡಿ ನೆನ್ನೆ ಬಂದಿದ್ದೇನೆ. ಎರಡು ದಿನ ತಡೆದು ಬರುತ್ತೇನೆಂದು ಹೇಳಿರಿ. ಬೇಡ ಕಲ್ಲಯ್ಯ ನೀನೆ ಖುದ್ದ ಹೋಗಿ ಕಣ್ಣಪನಿಗೆ ಇರುವ ಸಮಾಚಾರ ತಿಳಿಸು… ಅದೂ ಬೇಡ ನಾನೂ ಬರುತ್ತೇನೆ…” ಎಂದು ಹಾವಿನಾಳ ಕಲ್ಲಯ್ಯನನ್ನು ಜೊತೆಮಾಡಿಕೊಂಡು ಮೇನೆಯವರ ಜೊತೆಗೆ ಹೊರಟು ನಿಂತರು. ಹಿಂದೆ ಕಲ್ಯಾಣಕ್ಕೆ ಹೊರಡುವಾಗ ಇದ್ದ ಉಮೇದು ಇಂದಿರಲಿಲ್ಲ.
ಹನ್ನೆರಡು ಗಾವುದ ವಿಸ್ತಾರವುಳ್ಳ ಆ ಕೋಟೆಗೆ ಯಾವ ಉತ್ಸಾಹವೂ ಇದ್ದಿರಲಿಲ್ಲ. ದೂರ ದಿನ್ನೆಯ ಮೇಲಿನ ಅನುಭವಮಂಟಪದ ಗಿಡಕ್ಕೀಗ ಮುದಿತನ ಬಂದು ಬೀಸುವ ಬಿಸಿಗಾಳಿಗೆ ಬಾಡಿದಂತೆ ಸಪ್ಪಗಾಗಿತ್ತು. ಆ ಸದ್ವಿನಯದ ಶರಣರು ಓಡಾಡಿದ ನೆಲ ಕಾದ ಹಂಚಿನಂತೆ ಕೆಂಡದ ಹಾಗೆ ಸುಡುತ್ತಿತ್ತು. ಯಾರ ಬಳಿಯೂ ಜೀವನೋತ್ಸಾಹವೇ ಇದ್ದಿರಲಿಲ್ಲವಾಗಿ ಅಲ್ಲಿ ಅರಮನೆಯ ಸಪ್ತದ್ವಾರಗಳ ನಡುವಿನ ಓಲಗದಲ್ಲಿನ ಸಿಂಹಾಸನದ ಮೇಲೆ ಯಾರದೋ ನೆರಳಿನ ಹಾಗೆ ಕಣ್ಣಪ ಕುಳಿತಂತೆ ಕಾಣಿಸಿತು. ಆ ವ್ಯಕ್ತಿ ಕುಳಿತಿದ್ದ ಸಿಂಹಾಸನದಿಂದ ಎದ್ದು ಬಂದು ಸ್ವಾಗತಿಸಿ, ಅಗತ್ಯ ಸ್ಥಾನದಲ್ಲಿ ಕೂರಿಸಿದಾಗ ಅಲ್ಲಿ ಕೂರುವುದು ಶಕ್ಯವೇ ಇಲ್ಲವೆನ್ನುವಷ್ಟು ಒರಟು ಒರಟಾಗಿತ್ತದು.
“ಅಯ್ಯಾ ಶಿವಯೋಗಿಯೇ.. ನೀವು ಬರುತ್ತಿರೋ ಇಲ್ಲವೋ ಎಂಬ ಆತಂಕವಾಗಿತ್ತು. ನಾವು ಕಳಿಸಿದ ಓಲೆಯನ್ನು ಮನ್ನಿಸಿದ್ದಕ್ಕೆ ನಾವು ಆಭಾರಿಯಾಗಿದ್ದೇವೆ.”
“ಅಯ್ಯಾ ಕಣ್ಣಪನೇ..! ನಿನ್ನ ಔದಾರ್ಯಕ್ಕೆ, ಪ್ರಿತಿಗೆ ನನ್ನ ಶರಣಾರ್ಥಿಗಳು. ಆದರೆ.. ನೀನು ಬಯಸಿದಂತೆ ನನಗೆ ಯಾವ ರಾಜಗುರುವಾಗುವ ಆಕಾಂಕ್ಷೆಗಳಿಲ್ಲ. ಒಂದೆಳೆಯಲ್ಲಿ ತಪ್ಪಿಹೋದ ಈ ಕಲ್ಯಾಣದ ಸುಖವನ್ನು ಮತ್ತೊಂದೆಳೆ ಜೋಡಿಸಿ ಕೂಡಿಸುತ್ತೇನೆನ್ನುವುದು ಸಾಧ್ಯವಾಗದ ಮಾತು. ಆದರೆ ಇಲ್ಲಿ ಹರಿದ ಆ ಎಳೆ ಇಡೀ ನಾಡಿನಲ್ಲೆಲ್ಲ ಬಂಧುತ್ವ ಬೆಳೆಸುತ್ತ ಬಸವಣ್ಣನ ವಿಚಾರದ ಜ್ಯೋತಿಯನ್ನು ಹಚ್ಚುತ್ತಿದ್ದಾರೆ. ನನ್ನ ಮನಸ್ಸು ತೃಪ್ತವಾಗಿದೆ. ಅಷ್ಟು ಸಾಕು… ಇನ್ನುಳಿದ ಕಾಲವನ್ನು ನಾನು ಸೊನ್ನಲಿಗೆಯಲ್ಲೇ ಉಳಿಯಲು ಬಯಸುತ್ತೇನೆ.”
“ಅಯ್ಯಾ ಶಿವಯೋಗಿಯೇ..!”
“ಒತ್ತಾಯದ ಅಗತ್ಯವಿಲ್ಲ ದೊರೆಯೇ. ಈ ಹಾಳು ಸೋಸುತ್ತಿರುವ ಕಲ್ಯಾಣದ ನಡುವೆ ಅಲ್ಲಿ ಇಲ್ಲಿ ವಾಸವಿರುವ ಶರಣರನ್ನು ಕಾಯುವ ಹೊಣೆ ನಿನ್ನದು.”
“ಆಗಲಿ ಶಿವಯೋಗಿ, ನಿಮ್ಮ ಶುಭಾಶೀರ್ವಾದ ನನ್ನ ಮೇಲಿರಲಿ, ರಾಜ್ಯದ ಮೇಲಿರಲಿ.”
ಇಬ್ಬರೂ ಮಾತಾಡುತ್ತಿರುವಾಗ ಕಲ್ಯಾಣದಲ್ಲಿಯೇ ಬದುಕಿದ್ದ, ಹಣೆಯ ಮೇಲೆ ಭಸಿತವನ್ನು ಹಚ್ಚಿಕೊಳ್ಳದೆ ಗುಪ್ತಭಕ್ತಿಯೊಳಗೆ ನಿಜಾಚರಣೆಯಲ್ಲಿ ತೊಡಗಿದ್ದ ಅಳಿದುಳಿದ ಶರಣರು ಶಿವಯೋಗಿಯನ್ನು ಕಾಣಲು ಬಂದರು.
“ಅಯ್ಯಾ ಶಿವಯೋಗಿಯೇ.. ಶರಣುಶರಣಾರ್ಥಿ..!”
ಇವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತಾಗಿ ಗದ್ಗದಿತವಾದ ಸಮೂಹದ ಧ್ವನಿಯೊಂದು ಕೇಳಿದ್ದೆ ಸಿದ್ಧರಾಮರ ಕಣ್ಣೊಳಗೆ ಮಿಂಚಿನ ಸಂಚಾರವಾಯ್ತು. ಕಾಶ್ಮೀರದಲ್ಲಿ ರಾಜನಾಗಿದ್ದವ ಕಲ್ಯಾಣದಲ್ಲಿ ಮೋಳಿಗೆ ಕಾಯಕ ಮಾಡಿಕೊಂಡಿದ್ದ ಮಾರಯ್ಯನವರು ಮುಂದೆ ಬಂದು ತಮ್ಮ ಗುಡಿಸಿಲಿಗೆ ಸ್ವಾಗತಿಸಿದರು. ಒಬ್ಬೊಬ್ಬ ಶರಣರ ಮುಖಗಳಲ್ಲೂ ಅಸಹಾಯಕತೆ ಕಾಣುತ್ತಿದ್ದರೆ ಈ ಮಾರಯ್ಯನವರ ಮುಖದಲ್ಲಿ ಶಿವಪ್ರಭೆ ಕಂಗೊಳಿಸುತ್ತಿತ್ತು. ಖಡ್ಗ ಹಿಡಿದ ಕೈಗಳು ಕಾಯಕದ ದೆಸೆಯಿಂದ ಕೊಡಲಿ ಹಿಡಿದು ಕಲ್ಯಾಣದ ಸತ್ವದ ಹಾಗೆ ಬದುಕಿದ್ದರು. ಶರಣರೆಲ್ಲ ಕಣ್ಣಪನಿಗೆ ಶರಣು ಹೇಳಿ ಮಾರಯ್ಯನವರ ಗುಡಿಸಿಲಿಗೆ ಬಂದಾಗ ಇಳಿಸಂಜೆಯಾಗಿತ್ತು.
ಎಷ್ಟೋ ದಿನದ ಮೇಲೆ, ಅರಾಜಕ ರಾಜಕಾರಣದ ನಡುವೆ ಮಿಡಿವ ತಂತಿಯು ಹರಿದು ಹೋದಹಾಗೆ ಸ್ತಬ್ಧವಾಗಿದ್ದ ಕಲ್ಯಾಣದೊಳಗೆ ಮತ್ತೊಂದು ಸಲ ಸಿದ್ಧರಾಮ ಶಿವಯೋಗಿಗಳ ಘನಸಾನಿಧ್ಯದಲ್ಲಿ ಅನುಭವಮಂಟಪದ ಹಾಗೆಯೇ ಅನುಭವ ಗೋಷ್ಠಿ ನಡೆಯಿತು. ಎದುರು ಸಿಕ್ಕರೆ ಶರಣು-ಶರಣಾರ್ಥಿ ಹೇಳುವುದಕ್ಕೂ ಅಂಜುತ್ತಿದ್ದವರ ನಡುವೆ ಅಜಾನುಭಾವ ವ್ಯಕ್ತಿಯೊಬ್ಬ ಕುಳಿತದ್ದೆ ಶರಣರೊಳಗೆ ಹೊಸಹುಮ್ಮಸ್ಸು ಬಂದಿತ್ತು. ತಾವುಂಡ ಕಷ್ಟಸುಖಗಳ ನಡುವೆ ಗುರು-ಲಿಂಗ-ಜಂಗಮ-ಪಾದೋದಕ ಪ್ರಸಾದ ನೆರವೇರಿಸಿದ ಸಾಹಸದ ಕತೆಗಳನ್ನು ಒಬ್ಬೊಬ್ಬ ಶರಣ ಎದ್ದೆದ್ದು ಹೇಳುತ್ತಿದ್ದಾಗ ಶಿವಯೋಗಿಯ ಕಣ್ಣಾಲಿಗಳೂ ತುಂಬಿ ಬಂದವು.
ದಿನವೊಂದು ಕಳೆಯಿತು, ದಿನವೆರಡು, ದಿನಮೂರು ಕಳೆದರೂ ಮತ್ತೆ ಸೊನ್ನಲಿಗೆಗೆ ಹೋಗುವುದನ್ನೇ ಮರೆತವರ ಹಾಗೆ ಸಿದ್ಧರಾಮರು ಕಲ್ಯಾಣದಲ್ಲೇ ಉಳಿದರು. ಅನುಭವಮಂಟಪಕ್ಕೆ ಬರುವ ಶರಣರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೊರಟಾಗ ಶರಣರ ಅಳಿವು-ಉಳಿವಿನ ಅಪಸ್ವರದ ಅನುಭಾವದ ಮಾತುಗಳೂ ಗೋಷ್ಠಿಯೊಳಗೆ ಕೇಳಿಬರತೊಡಗಿದವು. ಶರಣರ ಬದುಕಿನ ಒಡನಾಟವನ್ನು ಹಂಚಿಕೊಳ್ಳುತ್ತಾ ಮತ್ತೆ ಕಲ್ಯಾಣದ ಜೀವಂತಿಕೆ ಚಿಗುರೊಡೆಯುತ್ತಿರುವ ಹಾಗೆ ಭಾಸವಾಗತೊಡಗಿತು. ಅಂದು ಕಟ್ಟಕಡೆಯದಾಗಿ ಶರಣರ ಗೋಷ್ಠಿಯಲ್ಲಿ ತಮ್ಮ ವಿಚಾರ ಹಂಚಿಕೊಳ್ಳುತ್ತಾ ಶಿವಯೋಗಿಯು ಶರಣರು ಅಳಿವಿನಿಂದ ಉಳವಿಯವರೆಗೆ ಹೋದ ಕತೆಯನ್ನು ಹೇಳಿದರು. ಅಪಸ್ವರವೆತ್ತಿದ ಸೋತ ಶರಣರ ಮೈಚಳಿ ಬಿಡಿಸುವ ಹಾಗೆ ವಚನಗಳ ಮುಖೇನ ಛಾಟಿ ಬೀಸಿ ಶರಣಪ್ರಜ್ಞೆಯನ್ನು ಜಾಗೃತಗೊಳಿಸಿದರು. ಮರುದಿನವೇ ಕಲ್ಯಾಣದಿಂದ ಹೊರಟು ನಿಂತಾಗ ಅನೇಕ ಶರಣರು ಮತ್ತೊಮ್ಮೆ ಬನ್ನಿರೆಂದು ಬಿನ್ನೈಸಿ ಸೊನ್ನಲಿಗೆಗೆ ಬೀಳ್ಕೊಟ್ಟರು.

****   ****   ****

ದಿನಗಳು ಉರುಳಿ ವರ್ಷಗಳಾಗಿ ಒಂದೊಂದೆ ಕಳೆಯುತ್ತಿರಲು ಶಿವಯೋಗಿಯ ನೆಟ್ಟನೆಯ ಬೆನ್ನು ಚೂರು ವಾಲುತ್ತಾ ವಯಸ್ಸು ಕಳೆಯಿತು. ಮಾಗಿದ ದೇಹವು ತೂಕ ತಪ್ಪದಂತೆ ಹೆಜ್ಜೆಯಿಡತೊಡಗಿದರು. ಎಳೆಯ ಬಾಲಕರನ್ನು ಕಂಡು ಮುದ್ದಾಡಿ ಮಾತಾಡಿಸುತ್ತಾ, ಅಮುಗಿದೇವನ ನದರಲ್ಲಿ, ಕಲ್ಲಯ್ಯನ ಆರೈಕೆಯಲ್ಲಿ ಶಿವಾನುಭವ ನಡೆಸುತ್ತಾ ಮುಂದಿನ ಹತ್ತಾರು ವರ್ಷ ಬಸವಣ್ಣ ತೋರಿದ ಬೆಳಕಿನ ಪಥದಲ್ಲಿಯೇ ನಡೆದರು.
ಅಂದು ಸೊನ್ನಲಿಗೆಯ ಮೇಲೆ ಕಾರ್ಮೋಡ ದಟ್ಟೈಸಿ, ಬೆಳಕು ಎಂಬ ಬೆಳಗನ್ನು ನುಂಗಿಕೊಂಡು ಕುಳಿತಿದ್ದ ದಿವಸ ಶಿವಯೋಗಿ ಕೊಂಚ ತಡವಾಗಿಯೇ ಎದ್ದರು.  ಲಿಂಗಪೂಜೆ ಪೂರೈಸಿ ತಾವೇ ಕಟ್ಟಿಸಿದ್ದ ಕೆರೆಯ ನಡುವಿನ ಗುಹೆಯತ್ತ ಯಾರ ಆಸರೆಯೂ, ನದರೂ ಇಲ್ಲದೆ ನಡದುಕೊಂಡು ಹೊರಟಿದ್ದಾಗ ದೂರದಲ್ಲಿ ರೋಗಿಗಳನ್ನು ಆರೈಕೆ ಮಾಡುತ್ತಿದ್ದ ಕಲ್ಲಯ್ಯ ನೋಡಿದವನೇ ಎದ್ದೋಡಿ ಬಂದು ಸಿದ್ಧರಾಮರ ಕೈಗೆ ಆಸರಾಗಲು ಮುಂದಾದ…
“ಕಲ್ಲಯ್ಯಾ.. ಈ ಮುಕ್ತಿಪಥವನ್ನು ನಾನೇ ಸವೆಸಿ ನಾನೇ ಅದರ ಸುಖ ಕಾಣಬೇಕಲ್ಲ.”
“ಯಾಕೆ ಗುರುವೇ ಇಂಥ ಮಾತಾಡುತ್ತೀರಿ?”
“ಯಾಕಿಲ್ಲ ಕಲ್ಲಯ್ಯಾ… ನನ್ನ ಅಚ್ಚ ಬಿಳಿಕುದುರೆಯೊಂದು ಎರಡು ದಿನದಿಂದ ಎಲ್ಲೂ ಕಾಣದಾಗಿದೆ. ಅದರ ಮೈ ಸವರಬೇಕು, ಅದರುವ ಅದರ ಚರ್ಮದ ಮೇಲೆ ಕುಳಿತ ನೊಣ-ನುಸಿಗಳ ಹಾಗೆ ಪಟಪಟನೇ ಹಾರಿ ಕುಳಿತು ಆಡುವ ಆಟವನ್ನು ನಾನು ನೋಡಬೇಕು ಅನಿಸುತ್ತಿದೆ.”
“ಆಗಲಿ ಅಯ್ಯಾ ಇಲ್ಲೇ ಎಲ್ಲೋ ಇರಬೇಕದು. ಹಿಡಿದು ತರಲು ಹೇಳುತ್ತೇನೆ.”
“ಬೇಡ ಬೇಡ. ಅದು ಮೇಯಲು ಹಳ್ಳದ ಹೊಲಕ್ಕೆ ಹೋಗಿದೆ. ನೋಡು ಯಾರ ಬೆಳಸಿಯ ತೆನೆಯನ್ನು ಉಮುಗಿ ಹಾಕಿ ಸುಡುತ್ತಿರುವ ವಾಸನೆ ಅದರ ಮೂಗಿಗೆ ಬಂದದ್ದೆ ಹೊರಟು ಬಿಡುತ್ತದೆ ಆ ಕುದುರೆ. ಹೋಗಿ ಕರೆದುಕೊಂಡು ಬರುವೆಯಾ.. ನಾನು ಇಲ್ಲೆ ಸಮಾಧಿ ಗುಹೆಯ ಮುಂದೆ ಕುಳಿತಿರುತ್ತೇನೆ.”
“ಆಗಲಿ ಅಯ್ಯಾ…”
ಅಲ್ಲೇ ಕೆರೆಯ ದಡದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಗುಡ್ಡರನ್ನು ಕರೆದು ಶಿವಯೋಗಿಗೆ ಸಹಾಯ ಮಾಡಲು ಹೇಳಿದ ಕಲ್ಲಯ್ಯನು ಹಳ್ಳದ ಹೊಲದತ್ತ ಹೊರಟು ನಿಂತನು. ಹಾಗೇ ನಾಲ್ಕಾರು ಹೆಜ್ಜೆ ಹೋಗಿದ್ದ ಕಲ್ಲಯ್ಯನನ್ನು ಕೂಗಿದ ಶಿವಯೋಗಿಗಳು.
“ಕಲ್ಲಯ್ಯಾ.. ಎಲ್ಲಿ ಹೊರಟಿರುವೆ..?”
“ಅಯ್ಯಾ, ಕುದುರೆಯನ್ನು ಹುಡುಕಿ ಹೊರಟಿದ್ದೇನೆ.”
“ಬಾ ಇಲ್ಲಿ. ಬಂದೆನ್ನ ಒಮ್ಮೆ ಸಂಪೂರ್ಣ ನೋಡಿಕೋ.. ಈ ದೇಹದಲ್ಲಿ ಏನಾದರೂ ಬದಲಾವಣೆ ಆಗಿದೆಯೇ…?”
“ಇಲ್ಲ ನನ್ನಯ್ಯ.. ನೀವಿರುವ ಹಾಗೆಯೇ ಇದ್ದೀರಿ. ಆದರೆ ಇಂದು ನಿಮ್ಮ ಮುಖದಲ್ಲಿ ಕಾಂತಿಯೊಂದು ಮೂಡಿದೆ. ಅದು ಈ ಹಿಂದೆ ಎಂದೂ ನಿಮ್ಮ ಕಣ್ಣೊಳಗೆ, ಮುಖದೊಳಗೆ ನಾನು ಕಂಡಿದ್ದಿಲ್ಲ.”
“ಆಯ್ತು ನೀನಿನ್ನು ಹೋಗು.. ಹುಷಾರು ಕಲ್ಲಯ್ಯಾ.. ಅದೇ ಹೊಲದಲ್ಲಿಯೇ ನಾನು ಅಂದು ಮಲ್ಲಯ್ಯನ ಕುದುರೆಯೊಂದನ್ನು ಕಂಡು ಆಕರ್ಷಿತನಾಗಿ ಹೊರಟುಬಿಟ್ಟಿದ್ದೆ. ಹುಷಾರು ಕಣಪ್ಪಾ.. ಇಂದು ಹೊರಟಿರುವ ಕುದುರೆ ನೀನಲ್ಲ.. ಮತ್ತದೇ ನಾನೇ..!”
ಶಿವಯೋಗಿ ನಗುತ್ತಿದ್ದರೆ ಆ ನಗುವಿನ ಅರ್ಥವೇ ಆಗದಂತಿದ್ದ ಕಲ್ಲಯ್ಯನು ಪ್ರತಿಯಾಗಿ ನಕ್ಕು ಕುದುರೆ ಹುಡುಕಿಕೊಂಡು ಹೊರಟು ಹೋದ. ಇತ್ತಲೀ ಗುಡ್ಡರು ಶಿವಯೋಗಿಯ ಕೈಯಾಸರೆಯಾಗಿ ಕೆರೆಯ ನಡುವಿನ ಗದ್ದುಗೆಯವರೆಗೂ ಕರೆತಂದರು.
“ಅಪ್ಪಾ ಶರಣರೇ.. ನನಗ್ಯಾಕೋ ಈ ಬೆಳಕು, ಈ ಗಾಳಿ, ಈ ಮೋಡಗಳ ನಡುವೆ, ಈ ಕಾಡು, ಈ ಹಸಿರು ಈ ನೀರಿನ ನಡುವೆ ಓಡಾಡಿ ಓಡಾಡಿ ಬೇಸರವಾಗಿದೆ. ಈ ಸಮಾಧಿಯ ಗರ್ಭದಲ್ಲಿ ಕೂರುತ್ತೇನೆ. ನೀವು ಕುಟೀರಕ್ಕೆ ಹೋಗಿ ಒಬ್ಬ ಎಣ್ಣೆ, ಇನ್ನೊಬ್ಬ ಬತ್ತಿ, ಮತ್ತೊಬ್ಬ ಪ್ರಣತೆಯನ್ನು ತರುತ್ತೀರಾ…”
“ಆಗಲಿ ನನ್ನಯ್ಯಾ…”
“ಬಸವಾ ಬಸವಾ.. ಘನಸುಖದ ಸಂಪನ್ನನಾಗಿ ನಿಮ್ಮ ಕರುಣಕಾವುದು ಕಡೆಯು, ಮನಸಿಜನ ಮದವ ಮಾಯೆಯನೆಲ್ಲವ ಹರಿದು ನಿಮ್ಮ ಪದದ ಹದುಳವಿರಿಸಿದಿರಯ್ಯಾ ಕರುಣಾಕರನೇ ಕಪಿಲಸಿದ್ಧಮಲ್ಲೇಶ್ವರಾ…” ಎಂದೆನ್ನುತ್ತಾ ತಾವೇ ಒಳನಡೆದು ಸಿದ್ಧಸಮಾಧಿಯ ಕೇಂದ್ರದಲ್ಲಿ ಪದ್ಮಾಸನದಲ್ಲಿ ಕುಳಿತು, ಅಂಗೈಯಲ್ಲಿ ಲಿಂಗವಿಡಿದು ತದೇಕಚಿತ್ತದಿಂದ ಅದನ್ನೇ ನೋಡುತ್ತಾ ಗುರುಬಸವಾ.. ಬಸವಾ ಬಸವೇಶ ಎಂದು ಉಲಿಯತೊಡಗಿದಾಗ, ಆ ಕತ್ತಲೆಯ ನಟ್ಟುನಡುವಿನಿಂದ ಹೊರಡುತ್ತಿದ್ದ ಸ್ವರವು ನಿಧನಿಧಾನ ಕ್ಷೀಣಿಸುತ್ತಾ ಯಾವದೋ ಗಳಿಗೆಯಲ್ಲಿ ಆ ಸ್ವರದ ಉಸಿರಾಟವೂ ನಿಂತಂತಾಯ್ತು.

ಬಸವಾ ಬಸವಾ ಬಸವಾ…..

ಎಣ್ಣೆ-ಪ್ರಣತೆ-ಬತ್ತಿಯನ್ನು ತಂದ ಗುಡ್ಡರು ಶಿವಯೋಗಿಯನ್ನು ಸುತ್ತಲೂ ಹುಡುಕಿದರೂ ಸಿಗಲಿಲ್ಲವಾಗಲು ಒಬ್ಬ ಗುಡ್ಡರ ಕುಲದ ಹಿರಿಯರನ್ನು ಕರೆಯಲು ಹೋದ, ಮತ್ತೊಬ್ಬ ಕಲ್ಲಯ್ಯನನ್ನು ಕರೆಯಲು ಹೋದ, ಇನ್ನುಳಿದ ಒಬ್ಬನು ಪ್ರಣತೆಗೆ ಎಣ್ಣೆ ಹಾಕಿ ಬತ್ತಿ ಹೊಸೆದು, ಚಕಮಕಿಯಿಂದ ಕಿಡಿಹೊತ್ತಿಸಿ ಬೆಳಕು ಮಾಡಿಕೊಂಡು ಆ ಕಗ್ಗಲ್ಲ ಗವಿಯೊಳಗೆ ಇಣುಕಿದ… ಶಿವಶಿವಾ…
ಗವಿಯೊಳಗಿನ ಗೂಡಿನಲ್ಲಿ ಅವರ ದೇಹವು ಮುದುಡಿ ಮುದ್ದೆಯಾಗಿ ಕುಳಿತಿದೆ. ಅಂಗೈಯಲ್ಲಿ ಲಿಂಗವಿದ್ದರೂ ಉಸಿರಿನ ಯಾವ ಸೊಗಸೂ ಆ ದೇಹದಲ್ಲಿರಲಿಲ್ಲ. ಶಿವಭೋ ಎನ್ನುತ್ತಾ ಪ್ರಣತೆಯನ್ನು ಅವರ ಮುಂದಿಟ್ಟು ಗವಿಯಿಂದ ಹೊರಗೆ ಬಂದಾಗ ಊರಿನ ಸಮಸ್ತ ದೈವವೂ ಕೆರೆಯತ್ತಲೇ ನಡೆದು ಬರುತ್ತಿತ್ತು.
ದಶದಿಕ್ಕಿಗೂ ಲಿಂಗೈಕ್ಯರಾದ ಸುದ್ದಿ ತಲುಪಿದ್ದೆ ಭಕ್ತಗಣ ಅವರದೇ ವಚನಗಳನ್ನು ಹಾಡಿಕೊಂಡು ತೋಳುತೋಳಾಗಿ ಬಂದು ಸೇರತೊಡಗಿದರು. ಎಲ್ಲೂ ಸಿಗಲಾರದ ಬಿಳಿಕುದುರೆಯನ್ನು ಹುಡುಕಿಕೊಂಡು ಹೋಗಿದ್ದ ಹಾವಿನಾಳ ಕಲ್ಲಯ್ಯನಿಗೆ ಸುದ್ದಿ ತಿಳಿದಾಗ ‘ಕಪಿಲಸಿದ್ದಮಲ್ಲಿಕಾರ್ಜುನನ ಆಟವು ಮುಗಿಯಿತೇ ಅಯ್ಯಾ.. ನಾನು ಸಾಮೀಪ್ಯದಲ್ಲಿದ್ದರೆ ನೀವು ಆ ಅನಂತ ಅನೂಹ್ಯ ಕತ್ತಲಿಗೆ ಸರಿಯಲು ಬಿಡಲಾರೆನೆಂದು ಹೀಗೆ ಕುದುರೆಯನ್ನು ಹುಡುಕಿತರಲು ಕಳಿಸಿದಿರೇ ಅಯ್ಯಾ…’ ಎಂದು ಕಣ್ಣೀರಗರೆಯುತ್ತಾ ಮರಳಿ ಬಂದಾಗ ಅವರೇ ಗುರುವಾಗಿ ಲಿಂಗದೀಕ್ಷೆಯನಿತ್ತ ಶರಣರ ಹೊಸಪೀಳಿಗೆಯ ಸಂದೋಹವೇ ಅಲ್ಲಿ ನೆರೆದಿತ್ತು. ತಮ್ಮಹಾದಿಯನ್ನು ತಾವೇ ತುಳಿದು ತಾವೇ ಸಮಾಧಿ ಹೊಕ್ಕು ಐಕ್ಯರಾದರೆಂಬ ಪವಾಡವೂ ಅಷ್ಟೇ ಗಟ್ಟಿಮುಟ್ಟಾಗುತ್ತಾ ನೆರೆದಿದ್ದ ಜನರ ಬಾಯಲ್ಲಿ ಶಿವಯೋಗಿ ಸಿದ್ದರಾಮದೇವರಾಗಿದ್ದರು.
ಉಘೆ ಉಘೆ ಶಿವಯೋಗಿ
ಉಘೆ ಉಘೆ ಸಿದ್ಧರಾಮದೇವ
ಶರಣರಿಗೆ ಮರಣವೇ ಮಹಾನವಮಿ… ಮರಣವೇ ಮಹಾನವಮಿ.

Previous post ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
Next post ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು

Related Posts

ಬಯಲಾದ ಬಸವಯೋಗಿಗಳು
Share:
Articles

ಬಯಲಾದ ಬಸವಯೋಗಿಗಳು

April 3, 2019 ಕೆ.ಆರ್ ಮಂಗಳಾ
“ಅವರು ಗುಣಮುಖರಾಗೋದು ಯಾವಾಗ?” ಮಾತಾಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕೇಳುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಸಣ್ಣ ಭರವಸೆ. ನನ್ನ ನೇರ...
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
Share:
Articles

ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ

September 4, 2018 ಡಾ. ಜೆ ಎಸ್ ಪಾಟೀಲ
ಬಸವಣ್ಣನವರ ವ್ಯಕ್ತಿತ್ವ ವಿಮರ್ಶಿಸುವ ಅಳತೆಗೋಲು ಬಹುಶಃ ಇದುವರೆಗೆ ಯಾವ ಅಧುನಿಕ ಲೇಖಕ/ವಿಮರ್ಶನಿಗೂ ಲಭ್ಯವಾಗಲಿಕ್ಕಿಲ್ಲ. ಅವರ ಅಸಾಧಾರಣ ವ್ಯಕ್ತಿತ್ವ ಸೀಮಿತ ವಿಮರ್ಶೆಯ...

Comments 23

  1. ಮಹಾದೇವ ಹಡಪದ
    Jan 4, 2020 Reply

    ಬಯಲು ವೇದಿಕೆಯಲ್ಲಿ ಬರೆಯುತ್ತಾ ಒಂದು ವರ್ಷ ಕಳೆಯಿತು. ಶರಣರ ಬದುಕಿನ ಐದು ಕತೆಗಳನ್ನು ಒಂದು ಕಿರುಕಾದಂಬರಿಯನ್ನು ಬರೆಯಲು ಪ್ರೇರೇಪಿಸಿ, ಪ್ರೋತ್ಸಾಹಿಸಿ ಬೆನ್ನು ತಟ್ಟಿದ ಬಯಲು ಬಳಗಕ್ಕೆ ಹೃದಯಪೂರ್ವಕ ನನ್ನಿ. ಹಾಗೆಯೇ ಮಂಗಳ ಮೇಡಮ್ ಅವರ ಅಕ್ಕರತೆಯೇ ಇದೆಲ್ಲದಕ್ಕೂ ಮೂಲ ಅವರಿಗೆ ಅನಂತ ಪ್ರಣಾಮಗಳು… ಶರಣು ಶರಣಾರ್ಥಿ

  2. Harsha m patil
    Jan 6, 2020 Reply

    ಮಹಾದೇವ ಹಡಪದ ಅವರಂತಹ ಉತ್ತಮ ಕತೆಗಾರರನ್ನು ಪರಿಚಯಿಸಿದ್ದಕ್ಕಾಗಿ ಬಯಲು ಬ್ಲಾಗಿಗೆ ಅನಂತ ನಮಸ್ಕಾರಗಳು. ಶರಣರ ಕತೆಗಳು ಇಷ್ಟು ಆಸಕ್ತಿಕರವಾಗಿ ನಮಗೆ ಇದುವರೆಗೆ ಯಾರೂ ಹೇಳಿದ್ದಿಲ್ಲ. ಕನ್ನದ ಮಾರಯ್ಯನಿಂದ ಹಿಡಿದು ಸಿದ್ದರಾಮೇಶ್ವರರ ತನಕ ಅವರು ಬರೆದ ಕತೆಗಳಲ್ಲಿ ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಗುಣವಿತ್ತು. ಜೊತೆಗೆ ಅವರು ಕತೆಗಳನ್ನು ಮನಮುಟ್ಟುವಂತೆ ಹೇಳಬಲ್ಲರು.

  3. Siddesh, Solapur
    Jan 6, 2020 Reply

    ಸಿದ್ದರಾಮೇಶ್ವರರ ಕೊನೆಯ ದಿನಗಳನ್ನು ಓದುತ್ತಾ ಕಣ್ಣು, ಮನಸ್ಸು ತುಂಬಿ ಬಂದವು. ತುಂಬು ಜೀವನ ನಡೆಸಿದ ಸಿದ್ದರಾಮೇಶ್ವರರ ಅಂತ್ಯದ ಮೂಲಕ ಕಲ್ಯಾಣದ ಕೊನೆಯ ಕೊಂಡಿ ಕಳಚಿದ ಅನುಭವವಾಯಿತು.

  4. Sharada A.M
    Jan 7, 2020 Reply

    ಸಿದ್ದರಾಮೇಶ್ವರರ ವ್ಯಕ್ತಿಚಿತ್ರಣ ಮರೆಯಲು ಸಾಧ್ಯವೇ ಇಲ್ಲ. ಓದುಗರ ಮನಸ್ಸಿನಲ್ಲಿ ಶಿವಯೋಗಿಯ ರೂಪವನ್ನು ಕೆತ್ತಿದಂತೆ ಇದೆ ಕತೆ. ಕತೆಗಾರರಿಗೆ ಅನಂತ ಶರಣುಗಳು.

  5. Gavisiddappa
    Jan 7, 2020 Reply

    ಸೊನ್ನಲಗಿ ಖಾಲಿ ಖಾಲಿ ಎನಿಸಿತು… ಎಂಥ ಮಹಾಪುರುಷ ಶಿವಯೋಗಿ ಸಿದ್ದರಾಮ!

  6. Gurusiddappa Hospet
    Jan 8, 2020 Reply

    ಶರಣರ ಅಂತ್ಯದ ದಿನಗಳು ಎಷ್ಟು ಕ್ರೂರವಾಗಿದ್ದವು! ಬಸವಣ್ಣನವರ ತರುವಾಯ ಕಲ್ಯಾಣದಲ್ಲಿ ಮತ್ತೆ ಮಹಾಮನೆಯನ್ನು ಜೀವಂತವಾಗಿಡಲು ಸಿದ್ದರಾಮೇಶ್ವರರು ಪ್ರಯತ್ನಿಸಿದರು ಎನ್ನುವ ಐತಿಹಾಸಿಕ ವಿಷಯ ನನಗೆ ಗೊತ್ತಿರಲಿಲ್ಲ. ಓದಿ ರೋಮಾಂಚನವಾಯಿತು.

  7. Rashmi Kundagol
    Jan 8, 2020 Reply

    ಯೋಗಿನಾಥ ರಚನೆಯ ತ್ರಿಪದಿಗಳನ್ನು ಶಿವಯೋಗಿ ಸಿದ್ದರಾಮೇಶ್ವರರು ಕಲ್ಯಾಣ ಕ್ರಾಂತಿಯ ಬಳಿಕ ಶರಣರನ್ನು ನೆನೆನೆನೆದು ಸ್ಮರಿಸಿಕೊಂಡದ್ದು….. ಅನೇಕ ಶರಣರನ್ನು, ಮುಖ್ಯವಾಗಿ ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಮಡಿವಾಳ ಮಾಚಿದೇವರ ಕುರಿತು ತಮ್ಮ ನೆನಪುಗಳನ್ನು ಆಪ್ತವಾಗಿ ಇವುಗಳಲ್ಲಿ ಹಂಚಿಕೊಂಡಿದ್ದಾರೆ. ಕತೆ ಅತಿ ಸುಂದರವಾಗಿ ಮೂಡಿಬಂದಿತು.

  8. Jayakumar Vijaypur
    Jan 9, 2020 Reply

    ಕಾಯಕಯೋಗಿಯಂತೆ ಕಂಡರು ಶಿವಯೋಗಿ ಸಿದ್ದರಾಮರು. ಇಡೀ ಕತೆಯನ್ನು ನಾಟಕವಾಗಿಸಬೇಕು. ಸಿರಿಗೆರೆ ಸ್ವಾಮಿಗಳ ತಂಡದಿಂದ ಈ ನಾಟಕ ಪ್ರದರ್ಶನವಾದರೆ ಬಹಳ ಸಂತೋಷವಾಗುತ್ತದೆ.

  9. Shivarudrappa Bidar
    Jan 12, 2020 Reply

    ಮೋಳಿಗೆ ಮಾರಯ್ಯನವರನ್ನು ಸಿದ್ದರಾಮೇಶ್ವರರು ಭೇಟಿಯಾದ ಸಂದರ್ಭ ಚನ್ನಾಗಿ ಮೂಡಿಬಂದಿದೆ, ಮೋಳಿಗೆಯ ಮಾರಯ್ಯನವರ ಪತ್ನಿ ಮಹಾದೇವಮ್ಮನವರ ಬಗೆಗೂ ಏನಾದರೂ ಬರೆದಿರಬಹುದೆಂದು ಊಹಿಸಿದ್ದೆ. ಕ್ರಾಂತಿಯ ನಂತರದ ಕಲ್ಯಾಣ ಬಿಕೋ ಎನ್ನುವಂತಿತ್ತು….. ಹಡಪದ ಶರಣರಿಗೆ ಶರಣಾರ್ಥಿ.

  10. L.S.Patil
    Jan 12, 2020 Reply

    ಮನುಷ್ಯನ ಬದುಕೊಂದು ಲೀಲೆಯಂತೆ ನನ್ನೊಳಗಿನ ಅರಿವು ನನಗಾದರೆ ಗುರುವೆಂಬುದು, ಜಂಗಮವೆಂಬುದು, ಲಿಂಗವೆಂಬುದು ನಾನಲ್ಲದೆ ಮತ್ತೇನಲ್ಲ…… ಅದ್ಭುತ ಕತೆ, ಎರಡು ಸಲ ಓದಿ, ಸೊನ್ನಲಿಗೆಯಲ್ಲಿ ಮುಳುಗಿ ಎದ್ದೆ.

  11. Rekha Kaladagi
    Jan 14, 2020 Reply

    ಕತೆಯ ನಿರೂಪಣೆ ಮನಸ್ಸಲ್ಲಿ ಅಚ್ಚೊತ್ತಿದಂತೆ ಮೂಡಿಬಂದಿದೆ. ಶಿವಯೋಗಿಗಳು ತಮ್ಮ ಗುರು ಚನ್ನಬಸವಣ್ಣನವರ ಆಶಯದಂತೆ ಕಲ್ಯಾಣವನ್ನು ಅಕ್ಷರಗಳಲ್ಲಿ ದಾಖಲಿಸಿ ಹೋಗಿದ್ದಾರೆ.

  12. Mahalingesh Nagalapura
    Jan 16, 2020 Reply

    ಸೊನ್ನಲಗಿಯ ಸಿದ್ದರಾಮರನ್ನು ಮನಸ್ಸಿನಲ್ಲಿ ಎಂದಿಗೂ ಅಳಿಸದಂತೆ ಮೂಡಿಸುವ ಕತೆ ಬರೆದಿದ್ದೀರಿ. ಸಿನೆಮಾ ನೋಡಿದಂತಾಯಿತು.

  13. ಷಣ್ಮುಖಪ್ಪ, ಹಿರೆಕೆರೂರು
    Jan 20, 2020 Reply

    ಚಾರಿತ್ರಿಕ ವಿಷಯಗಳನ್ನು ಕಥಾನಕವಾಗಿಸಿದ ಸಿದ್ದರಾಮರ ಕತೆ ಅತಿ ಸುಂದರವಾಗಿ ಮೂಡಿಬಂದಿದೆ. ನೊಳಂಬ ಕುಲದ ಮಕ್ಕಳಿಗೆ ಲಿಂಗದೀಕ್ಷೆಯನಿತ್ತದ್ದು, ಕರ್ನಾಟಕವ ಸುತ್ತಾಡಿ ಬಂದದ್ದು ಹೊಸ ಹೊಸ ವಿಷಯಗಳು. ಹೃದಯ ಸ್ಪರ್ಶಿ ಬರವಣಿಗೆಯಿಂದ ಕತೆ ಬಹಳ ಇಷ್ಟವಾಯಿತು.

  14. gangadharaiah H.S
    Jan 20, 2020 Reply

    ಬಸವಣ್ಣವರಿಲ್ಲದ ಕಲ್ಯಾಣದಲ್ಲಿ ಸಿದ್ದರಾಮರು ಮತ್ತೆ ಅನುಭವ ಮಂಟಪವನ್ನು ಕಟ್ಟುವ ಪ್ರಯತ್ನ ನಡೆಸಿದ್ದು ಓದಿ ಸ್ವಲ್ಪ ಮಟ್ಟಿಗೆ ಸಂತೋಷವಾಯಿತು. ಆದರೂ ಯಾಕೆ ಅವರು ಅಲ್ಲೇ ನೆಲೆ ನಿಂತು ಮುಂದುವರಿಸಲಿಲ್ಲ ಎಂಬುದು ಕತೆಯಲ್ಲಿ ಅಸ್ಪಷ್ಟವಾಗಿ ಹಾಗೆಯೇ ಉಳಿಯಿತೆನಿಸಿತು.

  15. Girija K.P
    Jan 22, 2020 Reply

    ಶರಣರಿಗೆ ಮರಣವೇ ಮಹಾನವಮಿ ನಿಜ, ಆದರೆ ಅವರ ಹತ್ಯಾಕಾಂಡ ಕರುಳು ಹಿಂಡುತ್ತದೆ. ಸಿದ್ದರಾಮ ಶಿವಯೋಗಿಯ ಕತೆ ಬಹಳ ಬಹಳ ಹಿಡಿಸಿತು.

  16. Sushma karaga
    Jan 22, 2020 Reply

    ಮೋಳಿಗೆ ಮಾರಯ್ಯನವರು ತಮ್ಮ ಗುಡಿಸಲಿಗೆ ಶಿವಯೋಗಿಗಳನ್ನು ಆಹ್ವಾನಿಸಿದರು ಎಂದು ಬರೆದಿದ್ದೀರಿ, ಆದರೆ ಅವರು ಮೊಳಕೇರಾದಲ್ಲಿನ ಗವಿಯೊಂದರಲ್ಲಿ ವಾಸವಾಗಿದ್ದರು ಎಂದು ಹೇಳುತ್ತಾರೆ. ಕ್ರಾಂತಿಯ ನಂತರದ ಕಲ್ಯಾಣದ ಚಿತ್ರಣ ಇನ್ನಷ್ಟು ವಿವರಣಾತ್ಮಕವಾಗಿದ್ದರೆ ಚನ್ನಾಗಿತ್ತು.

  17. ಜ್ಞಾನಪ್ರಕಾಶ
    Jan 22, 2020 Reply

    ಕತೆ ಚನ್ನಾಗಿದೆ ಸರ್. ಸಿದ್ದರಾಮರ ಐಕ್ಯದೊಂದಿಗೆ ಕಲ್ಯಾಣ ಪೂರ್ತಿ ಸ್ತಬ್ದವಾದಂತೆನಿಸಿತು. ಮನಸ್ಸು ಮೌನವಾಯಿತು.

  18. Jagadeesh anekal
    Jan 23, 2020 Reply

    ಉಘೆ ಉಘೆ ಶಿವಯೋಗಿ
    ಉಘೆ ಉಘೆ ಸಿದ್ಧರಾಮದೇವ… ಸದಾ ಕಾಲ ನೆನಪಲ್ಲುಳಿಯುವ ಕತೆ ಬರೆದ ಕತೆಗಾರರಿಗೆ ನಮೋ ನಮಃ

  19. Mariswamy Gowdar
    Jan 28, 2020 Reply

    ಇತಿಹಾಸ ಮತ್ತು ವಚನಾಧಾರಿತ ಆಧಾರಗಳು ರೋಮಾಂಚಕ ಸಮ್ಮಿಳನದಂತಿರುವ ಕತೆ ನನಗೆ ಬಹಳ ಪ್ರಿಯವೆನಿಸಿತು. ಶರಣರ ಕತೆಗಳನ್ನು ಹೇಳುತ್ತಿರುವ ಬಯಲು ಬ್ಲಾಗಿಗೆ ಅನಂತ ಶರಣುಗಳು. ಕತೆಗಾರ ಮಹಾದೇವ ಶರಣರಿಗೆ ಶರಣಾರ್ಥಿಗಳು.

  20. Chandrika & Lasya
    Jan 28, 2020 Reply

    I read the complete story of Siddharameshwar shivayogi with my daughter. It’s wonderful. Excellent way of story telling, it gave us a lot of information about 12th century.

  21. Paramashivappa Patil
    Jan 29, 2020 Reply

    ಗಾಳಿ, ಬೆಳಕು, ಕಾಡು, ಮೋಡ, ಹಕ್ಕಿಗಳ ನಡುವೆ ನಿಸರ್ಗವೇ ತಾವಾಗಿ ಬಾಳಿದ ಸಿದ್ದರಾಮ ಯೋಗಿಗಳ ಕತೆ ಮನೋಜ್ಞವಾಗಿತ್ತು.

  22. Veeresh S, Belgavi
    Jan 30, 2020 Reply

    ಶರಣರಾದ ಮಹದೇವ ಹಡಪದ ಅವರಲ್ಲಿ ನನ್ನ ಪ್ರಾರ್ಥನೆ- ದಯವಿಟ್ಟು ಎಲ್ಲ ಶರಣರ ಕತೆಯನ್ನೂ ಹೀಗೇ ಹೇಳಬೇಕು. ನಮ್ಮ ಮನೆ ಮಂದಿಯೆಲ್ಲಾ ಓದಿ ಬಹಳ ಸಂತೋಷಪಟ್ಟಿದ್ದೇವೆ, ಮಕ್ಕಳಿಗೂ ಓದಿಸಿದ್ದೇವೆ. ಮಂಗಳಕ್ಕಾ ನಮಗೆ ಒಬ್ಬ ಉತ್ತಮ ಕತೆಗಾರರನ್ನು ಪರಿಚಯಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

  23. ಬಸವರಾಜ ಹಂಡಿ
    Feb 1, 2020 Reply

    ಶರಣ ಮಹಾದೇವ ಹಡಪದ ಅವರಿಂದ ಅದ್ಬುತವಾದ ಲೇಖನ. ಕಲ್ಯಾಣ್ ಕ್ರಾಂತಿಯ ಕೊನೆಯ ದಿನಗಳು ಪಡೆದೆ ಮೇಲೆ ನೋಡಿದ ಅನುಭವ ಆಯಿತು. ಹೃದಯ ತುಂಬಿ ಬಂತು. ಕಲ್ಯಾಣ ಕ್ರಾಂತಿ ವಿಫಲವಾಗಿದ್ದು ಇಡಿ ಮಾನವ ಕುಲಕ್ಕೆ ತುಂಬುಲಾರದ ಹಾನಿ. ಶರಣ ಶ್ರೀ ಸಿದ್ದರಾಮ ಶರಣರು ಮತ್ತೆ ಅನುಭವ ಮಂಟಪ ಶುರು ಮಾಡಲು ಪ್ರಯ್ನಿಸುತ್ತಿದ್ದು ನಮಗೆ ಗೊತ್ತು ಇರಲಾರದ ವಿಷಯ.
    ಇಂತ ಅದ್ಬುತವಾದ ಅನುಭಾವನ್ನು ನಮಗೆ ನೀಡಿದ್ದಕ್ಕಾಗಿ ನಮ್ಮೆಲ್ಲರ ಯಿಂದ ಮಹಾದೇವ ಹಡಪದ ಶರಣರ ಗೆ ದನ್ಯವಾದಗಳು ಹಾಗು ಶರಣು ಶರಣಾರ್ಥಿ

Leave a Reply to Mariswamy Gowdar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ಗಂಟಿನ ನಂಟು
ಗಂಟಿನ ನಂಟು
November 7, 2020
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ವೀರ
ವೀರ
April 29, 2018
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
Copyright © 2021 Bayalu