Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕರ್ತಾರನ ಕಮ್ಮಟ  ಭಾಗ-6
Share:
Articles December 22, 2019 ಮಹಾದೇವ ಹಡಪದ

ಕರ್ತಾರನ ಕಮ್ಮಟ ಭಾಗ-6

ಯಾರ ಮುಖದಲ್ಲೂ ನಗುವಿಲ್ಲ, ಚಲುವಿಲ್ಲ, ಒಲವಿಲ್ಲವಾಗಿ ಯಾವ ಶರಣರ ವಿಧೇಯತೆಯೂ ಅಲ್ಲಿಲ್ಲವಾಗಿ ಬರೀ ಈಟಿ, ಗುರಾಣಿ, ಝಳಪಿಸುವ ಸುಳ್ಳಿಗತ್ತಿ, ಕಠಾರಿ, ಕಿರುಗತ್ತಿ, ಮೊನಚಾದ ಅಲಗು ಹಿಡಿದವರು ಗುಂಪುಗುಂಪಾಗಿ ಗಸ್ತು ತಿರುಗುವವರ ಹೊರತು ಬೇರೊಬ್ಬರ ಸುಳಿವಿಲ್ಲ ರಾಜಬೀದಿಯಲ್ಲಿ. ಅತ್ತ ಶರಣರ ಗುಹೆಮನೆ, ನೆಲಮನೆ, ಮಾಳಿಗೆಯ ಮನೆ, ನಾಡಹೆಂಚಿನ ಮನೆಗಳಲ್ಲಿ, ಗುಡಿಸಲು-ಚಪ್ಪರಗಳಲ್ಲಿ ಸೂರ್ಯ ಕರಗಿ ಕತ್ತಲಾದರೂ ಬೆಳಕಿನ ಹಣತೆಗಳು ಹೊತ್ತಿರಲಿಲ್ಲ. ದಿನದ ಅನ್ನ ಅಂಬಲಿ ಬೇಯಿಸುವ ಹೊಗೆಯೂ ಎದ್ದಿರಲಿಲ್ಲವಾಗಿ ಯಾರ ಮೇಲೆ ಯಾರ ವಿಶ್ವಾಸವೂ ಇಲ್ಲದಂತೆ ಆ ಸೈನಿಕರೂ ಅಲ್ಲೊಬ್ಬ ಇಲ್ಲೊಬ್ಬ ಓಡಾಡುವ ಪುರದ ಜನರೊಳಗೆ ನಿಧನಿಧಾನ ಅಪನಂಬುಗೆ ಬೆಳೆಯುತ್ತಿರುವುದ ಕಂಡು ಸಿದ್ಧರಾಮರ ಮನಸ್ಸು ಮಮ್ಮಲ ಮರುಗಿತು. ತಿಂಗಳೊಪ್ಪತ್ತಿನ ಹಿಂದೆ ಔದಾರ್ಯದ ವಿನಯವೇ ಮೆರೆದಾಡುತ್ತಿದ್ದ ಬೀದಿಗಳಲ್ಲಿ ಇಂದು ಕತ್ತಿ-ಕಠಾರಿ-ಅಲಗುಗಳ ಮೆರವಣಿಗೆ ನಡೆಯುತ್ತಿರುವುದಲ್ಲಾ ‘ಕಪಿಲಸಿದ್ದ ಮಲ್ಲಿಕಾರ್ಜುನ’ ಎಂದು ಮನದಲ್ಲಿಯೇ ಉದ್ಘರಿಸಿದರೊಮ್ಮೆ… ಕಟ್ಟುಮಸ್ತಾದ ಶಿವಯೋಗಿ ಸೊನ್ನಲಿಗೆ ಪುರದ ಪುಣ್ಯ ಪುರುಷ, ಶ್ರೀಗಿರಿಯ ಮಲ್ಲಿನಾಥನ ಕೃಪೆಯಿಂದ ಸಿದ್ಧನಾದವನು, ಸಾಯುವ ಮನುಷ್ಯರನ್ನು ಬದುಕಿಸುವ ಪಂಡಿತನು ಎಂದು ಕೇಳಿಬಲ್ಲ ರಾಜರ ಕಾಲಾಳುಗಳು, ಕತ್ತಿವರಸೆ, ದೊಣ್ಣೆಯ ವೀರರು, ಕುದುರೆ ಸವಾರರು, ಗರಡಿಮನೆಯ ಜಟ್ಟಿಗಳು ಅವರನ್ನು ಮುಟ್ಟಲು ಹಿಂಜರಿಯುತ್ತ ಮಹಾಮನೆಯತ್ತ ದಾರಿಬಿಟ್ಟುಕೊಟ್ಟರು.

ಊರ ನಡುವಿನ ಕಲ್ಯಾಣಿಯ ಮುಂದಿನ ಬೇವಿನ ಗಿಡದ ಬುಡದಲ್ಲಿ ಯಾರೋ ನಿಂತಿರುವುದ ಕಾಣಿಸಿತು. ಹೆದರಿಕೆಯೇ ಮಡುಗಟ್ಟಿದ್ದ ಕತ್ತಲಲ್ಲಿ ಹುಲ್ಲುಕಡ್ಡಿ ಅಲುಗಾಡಿದರೂ ಎದೆ ಝಲ್ಲೆನ್ನುತ್ತಿರಲಾಗಿ ಆ ನಿಂತಿರುವ ಆಕಾರವು ಸಿದ್ಧರಾಮರ ಅಜಾನುಬಾಹು ಶರೀರವನ್ನು ಕಂಡು ಹಲ್ಲಕಚ್ಚಿಕೊಂಡು ಮತ್ತಷ್ಟು ಮರೆಯಾಗಿ ನಿಂತಿತು. ಹತ್ತಿರ ಹೋಗುತ್ತಿದ್ದಂತೆ ಆ ನೆರಳಿನಲ್ಲಿ ಅಡಗಿ ನಿಂತಿದ್ದ ಆಕಾರ ಎರಡಾಯ್ತು, ಮೂರಾಯ್ತು… ಅಲ್ಲಲ್ಲ ಅಲ್ಲೊಂದು ಸಣ್ಣ ಶರಣೆಯರ ಗುಂಪು ಅಡಗಿ ನಿಂತಿತ್ತು. ಅವರೆಲ್ಲರ ಮುಂದೆ ನಿಂತಿದ್ದವ ತುಸು ಮುಂದೆ ಬಂದು ಶಿವಯೋಗಿ ಎಂದು ಉದ್ಘಾರ ಹೊರಡಿಸಿದ್ದೆ ಆ ಧ್ವನಿ ಕಕ್ಕಯ್ಯನದ್ದು ಎಂಬುದನ್ನರಿತ ಸಿದ್ಧರಾಮರು ಬಾಯಿ ಮೇಲೆ ಬೆರಳಿಟ್ಟು ಉಶ್.. ಎಂದು ಸುಮ್ಮನಿರಿಸಿದರು. ಹಿಂದೆ ತಿರುಗಿ ನೋಡಿದರೆ ಕೈಗಲ್ಲಳತೆ ದೂರದಲ್ಲಿ ಮರೆಯಾಗಿ ಯಾರೋ ನಾಲ್ಕಾರು ದಂಡಿನ ಹುಡುಗರು ಹಿಂಬಾಲಿಸಿಕೊಂಡು ಬರುತ್ತಿರುವುದನ್ನ ಕಂಡರು. ಚಣಹೊತ್ತು ಅವರು ಅಲ್ಲಿ ನಿಂತದ್ದೆ ಶ್ರೀರಕ್ಷೆಯಾದಂತೆ ಆ ಸೈನಿಕರು ಮರೆಯಾಗಿ ನಿಂತರು. ಆಗ ಸಿದ್ಧರಾಮರು ಕಕ್ಕಯ್ಯನವರಿಗೆ ಕೇಳುವಂತೆ.. ‘ಒಂಟಿಕಂಬದ ಹಾಗೆ ನಿಂತಿದ್ದೇನೆ ಅಯ್ಯಾ.. ನೀವು ಹೋಗಿರಿ ಮಹಾಮನೆಯೊಳಕ್ಕೆ ಕಾಯುವೆನು, ಆಗದಿದ್ದಲ್ಲಿ ಕಾದುವೆನು ಶರಣರ ಸಂಗಕ್ಕಾಗಿ, ಹೊಂಡಿರಿ ಬೇಗ’ ಹೀಗೆ ಹೇಳಲು ಕಕ್ಕಯ್ಯನವರ ಜೊತೆ ನಿಂತಿದ್ದ ಹತ್ತಾರು ಶರಣಮ್ಮನವರು ಮಕ್ಕಳು ಮರಿಯಾದಿಯಾಗಿ ಆ ಚಣದಲ್ಲಿ ಕಲ್ಯಾಣವನ್ನಾವರಿಸಿದ್ದ ಕತ್ತಲಲ್ಲಿ ಮರೆಯಾಗಿ ಬೆಳಕಿನ ಮಹಾಮನೆಯನ್ನು ಹೊಕ್ಕರು.

ಅದೇ ಸರಿಹೊತ್ತಿಗೆ ದಂಡಿನ ಪುಂಡರು ಶರಣರ ಗುಡಿಸಲೊಂದನ್ನು ಹೊಕ್ಕು ಬೆಂಕಿ ಹಾಕಲಾಗಿ ಆ ಮನೆಯಿಂದ ಬೊಬ್ಬೆಯೆದ್ದು ಕಲ್ಯಾಣದ ನಟ್ಟನಡುವೆ ಬೆಂಕಿಯ ಕೆನ್ನಾಲಿಗೆ ಚಿಮ್ಮಿದ್ದೆ ತಡ ಹುಚ್ಚು ಹಿಡಿದ ರಕ್ಕಸರಂತೆ ಆ ಹುಡುಗರು ಬೆಂಕಿ ಕಾಣಿಸಿಕೊಂಡ ಕಡೆಗೆ ಓಡಿದರು. ಯಾರ ಮನೆ ಸುಟ್ಟಿತೋ, ಅದಾವ ಶರಣರ ಮನ ನೊಂದಿತೋ.. ಅರೇ ಚಣ ಜೀವ ಝಲ್ಲೆಂದಿತಲ್ಲಾ, ಜೀವಗಳನ್ನು ಪ್ರೀತಿಸುವ ಕರಳು ಸುಂಯ್ಯನೇ ಆ ಮನೆಯತ್ತ ಓಡಿತು.
“ಯಾರು ಬಂದವರು ನೀವು..?”
“ನಾನು ಸೊನ್ನಲಿಗೆಯ…”
“ಓ ಶಿವಯೋಗಿ ಸಿದ್ಧರಾಮ..!”
“ಹೌದು…”
“ನಿಮ್ಮ ಶರಣರ ಉಪಟಳ ತುಸು ಹೆಚ್ಚೇ ಆಗಿತ್ತು ಶಿವಯೋಗಿ. ಹಾಗಾಗಿ ಒಂದೊಂದೇ ಮನೆ ಹುಡುಕಿ ಸುಡುತ್ತಿದ್ದೇವೆ. ಅಲ್ಲಾ ಇವರು ಕಲ್ಯಾಣವನ್ನು ಕುಲಗೆಡಿಸಿಬಿಟ್ಟರು. ನೆನಪಾದರೆ ನನ್ನ ಮೈಯೇ ಉರಿಯುತ್ತದೆ.”
“ಇದು ನಿಮ್ಮ ಮನದಲ್ಲಿನ ಬೆಂಕಿಯ ಶಾಖವೋ…”
“ಅಲ್ಲಾ ನೀವೇ ಹೇಳ್ರೀ.. ಈ ಮಕ್ಕಳಿಗೆ ಪೂರ್ವ ಧರ್ಮದ ಕಿಂಚಿತ್ತಾದರೂ ಅರಿವಿತ್ತೇನು? ಊಂಹೂಂ.. ಕೇಳಬೇಡ್ರೀ. ಈ ಪಟ್ಟಣದಲ್ಲಿ ಆಟವೇ ಆಗಿತ್ತು ಇವರದ್ದು. ಕುಲ ಇಲ್ಲ, ನೇಮ ಇಲ್ಲ ತಾವು ಮಾಡಿದ್ದೆ ಧರ್ಮ ತಾವು ನಡೆದದ್ದೆ ಧರ್ಮದ ನಡೆ ಅಂತ ಮೆರೀತಿದ್ದರಲ್ಲ ಸ್ವಾಮಿ ಇವರನ್ನ ಹೀಗೆ ಬಿಟ್ಟಿದ್ದರೆ ಕಲ್ಯಾಣವನ್ನ ನುಂಗಿ ಬಿಡುತ್ತಿದ್ದರು ಪವಾಡದ ನೆಪ ಹೇಳಿಕೊಂಡು. ಇಗೋ ಇಲ್ಲಿ ನೋಡ್ರೀ ಶಿವಯೋಗಿ, ಈ ಗುಡಿಸಲಿಗೊಂದು ಪವಾಡ, ಆ ಕೆರೆಗೊಂದು ಪವಾಡ, ಹಳ್ಳಕ್ಕೂ, ಬಟ್ಟೆಗೂ, ಲಿಂಗಕ್ಕೂ, ಎಂಜಲೆಲೆ ಬಿಸಾಕುವ ತೊಟ್ಟಿಯೊಳಗೂ ಇವರ ಪವಾಡಗಳು ನಡೀತಿದ್ದವು. ಅದೆಷ್ಟು ಖರೆ-ಸುಳ್ಳು ಅನ್ನೋದನ್ನ ಖಾತ್ರಿ ಮಾಡಿಕೊಳ್ಳದ ಹುಂಬ ಭಕ್ತರು ಮಹಾಮನೆಯ ಶರಣರನ್ನ ನೆನೆಯುತ್ತ ಇಲ್ಲಿಗೆ ಬಂದು ಸೇರತಿದ್ದವರಾದರೂ ಎಷ್ಟು ಮಂದಿ.. ಛೇ ಛೇ.. ನಾನು ಹೋಗಲಿ ಈ ರಾಜ್ಯದ ಒಬ್ಬ ಸೈನಿಕನಿಗೂ ಹಣಿಮ್ಯಾಲ ವಿಬತ್ತಿ ಇಲ್ಲಾಂದರ ಮರ್ಯಾದೆ ಇದ್ದಿರಲಿಲ್ಲ. ಜಾತಿ ಕೆಡಿಸಿಬಿಟ್ಟರಲ್ಲ…”
“ಸುಳ್ಳು.. ಶರಣರದ್ದೆ ಒಂದು ಕುಲ ಎಂದಾದಾಗ ಜಾತಿಕೆಡಿಸಿದರು ಎನ್ನುವುದು ಸರಿಯೇ ಕಸಪಯ್ಯ…”
“ಅಂದರೆ..! ನೀವು ಶರಣರ ಪರವಾಗಿದ್ದೀರೇನು..?”
“ಸತ್ಯದ ಪರವಾಗಿ ನಿಲ್ಲುವುದಕ್ಕೆ ಯಾರ ಪರವೇನು ಕಸಪಯ್ಯ…”
“ಹಂಗಾದರ ಕೇಳಿರಿ.. ಆ ಬಸವಣ್ಣನೇ ಕಲ್ಯಾಣ ಬಿಟ್ಟು ಹೋದರು ಇವರು ಯಾಕ ಇಲ್ಲೇ ನೆಲೆ ನಿಂತರು. ಹಂಗೊಂದ ವೇಳೆ ಶರಣರ ಕುಲ ಒಂದೇ ಅನ್ನೋದಾದರೆ, ಬ್ರಾಹ್ಮಣರ ಹುಡುಗಿಯನ್ನ ಸಮಗಾರ ಹುಡುಗನಿಗೆ ಕಟ್ಟಿದ್ದು ಯಾಕೆ..? ಆ ಬಿಜ್ಜಳನಿಗೂ ಮಂಕುಬೂದಿ ಎರಚಿದ್ದರು, ಆ ಬಸವಣ್ಣ ಏನು ಹೇಳಿದರೂ ತಲೆದೂಗತಿದ್ದ ಆ ಆಸಾಮಿ ಇನ್ನುಳಿದವರ ಮಾತಿಗೆ ಕಿಮ್ಮತ್ತ ಕೊಡತಿದ್ದಿಲ್ಲ…”
ಇನ್ನೂ ಅವನೊಳಗಿದ್ದ ವಿಷ ಕಾರಿಕೊಳ್ಳುತ್ತಾ ಮಾತು ತಾರಕಕ್ಕೆ ಹೊರಟಿದ್ದೆ ತಡ ಅಷ್ಟೊತ್ತಿಗೆ ಸರಿಯಾಗಿ ದೊಂದಿ ಹಿಡಿದವನೊಬ್ಬ ಓಡಿ ಬಂದು.. ‘ಶಿವಕೇರಿಯೊಳಗ ಶರಣರು ಗುಂಪುಕೂಡಿ ನಮ್ಮವರ ಮ್ಯಾಲ ಮುಗಿಬಿದ್ದಾರು ನೀವು ಬರಬೇಕು ದಳಪತಿ’ ಅಂದವನೇ ಅವಸರದಲ್ಲಿ ಬಂದ ದಾರಿಯಲ್ಲೇ ಮತ್ತೆ ಓಡಿದ.
“ಶಿವಯೋಗಿ… ನೀವು ಬಹಳಾ ಹೊತ್ತು ಇಲ್ಲಿ ಇರೋದು ಬ್ಯಾಡ.. ಇಲ್ಲಿಂದ ಬೇಗನೇ ಹೊರಟುಬಿಡ್ರೀ ಇಲ್ಲಾ ಅಂದರ.. ಅಗ್ರಹಾರದ ಮುಂದಲ ಧರ್ಮಛತ್ರದಾಗ ಉಳಕೊಂಡರ ಏನೂ ಅನಾನುಕೂಲ ಆಗೋದಿಲ್ಲ. ಯಾಕಂದರ ಈಗ ಕಲ್ಯಾಣದ ನಿಜವಾದ ಪ್ರಜಾಮಂದಿ ಸಿಟ್ಟಿಗೆದ್ದಾರು. ಸಿಟ್ಟಿನ ಭರದೊಳಗ ನಿಮ್ಮ ಕೀರ್ತಿ, ಸಿದ್ಧಿ ಯಾವುದೂ ಅವರಿಗೆ ಕಾಣಸೋದಿಲ್ಲ. ನೀವು ಹೊಂಡರಿ…”

ಕಸಪಯ್ಯನೂ ಆ ದೊಂದಿಯ ಬೆಳಕನ್ನ ಅನುಸರಿಸಿ ಶಿವಕೇರಿಯತ್ತ ಹೊರಟಾಗ.. ಶಿವಯೋಗಿಯ ಎದೆಯಲ್ಲಿ ಚಿಟುಕು ಮುಳ್ಳಾಡಿಸಿದಂತ ಅನುಭವವಾಗತೊಡಗಿತು. ಎಷ್ಟೊಂದು ಕೇರಿಗಳು..! ಹೊರಕೇರಿ, ಶಿವಕೇರಿ, ಮೇಗಳ ಕೇರಿ, ಕೆಳಗಿನ ಕೇರಿ ಜನರಲ್ಲದ ಆಯಗಾರರು, ಊರಿಂದೂರು ಅಲೆಯು ಬುಡ್ಗರು ಸೇರಿದಂತೆ ಇಡೀ ಕಲ್ಯಾಣ ಪಟ್ಟಣವೇ ಶಿವನ ಒಡ್ಡೋಲಗದಂತೆ ವಿರಾಜಮಾನಗೊಂಡ ಸಂದರ್ಭದಲ್ಲಿ ಹೀಗೊಂದು ಅವಘಡ ಆದುದು ಅವರನ್ನ ಕಂಗೆಡಿಸಿತ್ತು. ಹಿಂತಿರುಗಿ ನೋಡಿದರೆ ಅದೇ ಆ ಕಕ್ಕಯ್ಯನವರು ಶಿವಯೋಗಿಯ ಸಮೀಪದಲ್ಲಿಯೇ ನಿಂತಿದ್ದಾರೆ.
“ಅಯ್ಯಾ ಶಿವಯೋಗಿ ಸಿದ್ದರಾಮ…”
“ಕಕ್ಕಯ್ಯನವರೇ.. ನೀವು ಯಾಕೆ ಇತ್ತ ಕಡೆ ಬಂದಿರಿ.”
“ಬರದೇ ಇನ್ನೇನು ಮಾಡಲಿ, ನೀವು ದಾರಿಗೆ ಆಸರಾಗಿ ನಿಂತು ಎಲ್ಲ ಶರಣೆಯರೂ ಮಹಾಮನೆ ಸೇರುವಂತೆ ಕಾದಿರಿ, ಆದರೆ ನೀವು ಮಾತ್ರ ನೋವಿನ ಚೀತ್ಕಾರ ಬಂದ ಕಡೆ ಓಡಿ ಬಂದಾಗ ನನ್ನೆದೆಯೂ ಝಲ್ಲೆಂದಿತು.”
“ಇದೇನು ಘಟಿಸಿತು. ಅಣ್ಣಬಸವಣ್ಣನಿಗೆ ಸುದ್ದಿ ತಲುಪಿತೇ..?”
“ಈಗಷ್ಟೇ.. ಇಬ್ಬರು ಶರಣರು ಕಪ್ಪಡಿ ಸಂಗಮಕ್ಕೆ ಸುದ್ದಿ ಕೊಂಡೊಯ್ದರು. ಆದರೇನು ಮಾಡುವುದು ಕಾಲ ಮಿಂಚಿ ಹೋಗಿದೆ. ಸುಳ್ಳಿನ ಸುದ್ದಿಗಳು ಊರಿನ ಬೀದಿಗಳಲ್ಲಿ ಕುಣಿತ-ಮಣಿತ ಮಾಡುತ್ತಾ ವಿಜಯದ ನಗೆ ನಗುತ್ತಿವೆ. ಒಂದೊಂದು ದಿಕ್ಕಿನಿಂದ ಒಂದೊಂದು ಅಂತೆಕಂತೆಗಳು ಕೇಳಿಬರುತ್ತಿವೆ.”
ಕಕ್ಕಯ್ಯನೆಂಬ ಆ ಹಿರಿಯ ಜೀವದ ಮುಖದಲ್ಲಿ ಆತಂಕವಿತ್ತು, ಈಗೇನು ಘಟಿಸುವುದೋ ಅಘಟಿತ ಘಟನೆ ಎಂಬ ಅಳುಕಿತ್ತು. ಮಹಾಮನೆಯಲ್ಲಿನ ಮಂದಬೆಳಕು ಕಾಣುತ್ತಲೇ ಇಡೀ ಕತ್ತಲನ್ನು ಕಳೆದು ಬೆಳಗುವ ಮಿಣುಗು ಬೆಳಕಿನ ಚೂರ್ಣವೊಂದು ಬಾಗಿಲಲ್ಲಿ ಹಾದು ಅಂಗಳದಲ್ಲಿ ಮೈಚಾಚಿ ಮಲಗಿಕೊಂಡಿತ್ತು. ಅದೇ ಬೆಳಕಿನ ಗುರುತು ಪಥವಾಗಿ, ಒಳಮಾರ್ಗದ ಅರಿವಿನ ಕುರುಹಾಗಿ ನೋಟಕ್ಕೆ ಸಿಕ್ಕಿದ್ದೆ ತಡ ಶಿವಯೋಗಿಯ ಮುಖದಲ್ಲೂ ಮೂಡಿದ್ದ ಚಿಂತೆಯ ಗೆರೆ ಮಾಯವಾಯ್ತು. ನಡುಮನೆಯ ಕಂಬದ ಮೇಲೆ ನಿಶ್ಚಲವಾಗಿ ನಿಂತು ಬೆಳಕ ಬೀರುತ್ತಿದ್ದ ದೀಪದ ಸುತ್ತಲೂ ಶರಣೆಯರು, ಹಣ್ಣುಹಣ್ಣಾದ ಶರಣರು ಕುಳಿತಿದ್ದರು. ಅವರೆಲ್ಲಾ ಯಾರ ಬರುವಿನ ನಿರೀಕ್ಷೆಯಲ್ಲಿದ್ದಾರೆ… ಅಪ್ಪಾ.. ಅಣ್ಣಾ.. ಆಗಿದ್ದ ಬಸವಣ್ಣ ಬಂದೇ ಬರುವರು. ಅವರು ಬಂದರೆ ಕಲ್ಯಾಣದ ಚಿತ್ರಣ ಮತ್ತೆ ಮೊದಲಿನಂತಾಗುತ್ತದೆ ಎಂಬ ಸೂಜಿಗಲ್ಲಿನ ಸೆಳೆತ ಅವರನ್ನು ಆ ದೀಪದ ಬೆಳಕಿನಲ್ಲಿ ಹಿಡಿದು ಕೂರಿಸಿತ್ತು.
ಚನ್ನಬಸವಣ್ಣನ ಮುಖದಲ್ಲಿ ನಿರ್ವಿಕಾರ ಮನೆ ಮಾಡಿತ್ತು, ಹೃದಯದಲ್ಲಿನ ತಳಮಳವನ್ನು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಶರಣರು ಯಾರದ್ದೋ ಆದೇಶಕ್ಕಾಗಿ ಕುಳಿತುಕೊಂಡಿದ್ದರು. ಅಂದು ಲಿಂಗದೀಕ್ಷೆಯನಿತ್ತು ಲಿಂಗದ ಮಹತ್ತನ್ನು ಹೇಳುವುದರ ಜೊತೆಜೊತೆಗೆ ಅರಿಯುವ ಅರಿವಿನ ಹಾದಿಯನ್ನು ಸ್ಪಷ್ಟಗೊಳಿಸಿದ್ದ ಆ ಮುಖದಲ್ಲಿ ಎಂಥಾ ಚೈತನ್ಯದ ಚಿಲುಮೆಯಿತ್ತು…! ಇಂದು..? ಇದಾಗಬಾರದಿತ್ತು. ಅನಿರೀಕ್ಷಿತವಾದ ಗಾಳಿಯ ಹೊಡೆತಕ್ಕೆ ಸಿಕ್ಕ ನಾವೆಯು ಗಾಳಿಗರವಾಗಿ ತುಯ್ದಾಡುತ್ತಾ.. ಆ ದಡಕ್ಕೊಮ್ಮೆ ಈ ದಡಕ್ಕೊಮ್ಮೆ ಬಡಿಯುತ್ತಾ ಆಸರಿಲ್ಲದೆ ಓಡುತ್ತಿದೆಯೇ…!
‘ಮತ್ರ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶಿವಶರಣನ. ಆ ಶರಣ ಬಂದು ಕಲ್ಯಾಣವನ್ನು ಕಟ್ಟಿದ. ಶಿವಾಚಾರದ ಧ್ವಜವನೆತ್ತಿದ. ಮತ್ರ್ಯಲೋಕ ಭೂಲೋಕಕೆ ನಿಚ್ಚಣಿಗೆಯಾದ, ಭಕ್ತಿಯನ್ನು ಬಿತ್ತಿ ದಾಸೋಹದ ಘನವನೆತ್ತಿ ತೋರಿದ, ನೋಡೋ ಸಿದ್ಧರಾಮಾ…’ ಎಂದು ಅಲ್ಲಮರು ಮೊದಲ ದಿವಸ ಕಲ್ಯಾಣಕ್ಕೆ ಬಂದಾಗ ಹೇಳಿದ್ದ ಮಾತು ಅಂತರಂಗದಲ್ಲಿ ಧುಮುಗುಡುತ್ತಿತ್ತು.

ಶಿವಯೋಗಿಯನ್ನ ಕಂಡದ್ದೆ ದೀಪಕ್ಕೆ ಹತ್ತಿರದಲ್ಲಿ ಕುಳಿತಿದ್ದ ಶರಣೆಯರು ಎದ್ದು ನಿಂತು ಶರಣೆಂದರು, ಹಿರಿಯರ ನಡುವೆ ಕುಳಿತಿದ್ದ ಚನ್ನಬಸವಣ್ಣನೂ ಎದ್ದು ನಿಂತಾಗ ಇಡೀ ಮಹಾಮನೆಯ ಎದುರಿಗೆ ಸಿದ್ಧರಾಮರು ಶಿರಬಾಗಿ ಶರಣು ಶರಣಾರ್ಥಿ ಹೇಳಿದರು.
“ನೀವು ಬಂದುದು ಒಳ್ಳೆಯದೇ ಆಯ್ತು. ಬಸವಣ್ಣ ಕಪ್ಪಡಿ ಸಂಗಮಕ್ಕೆ ಹೋದದ್ದೆ ಕಲ್ಯಾಣ ರಣರಂಗದಂತಾಗಿದೆ. ಈ ಕತ್ತಲೊಳಗೆ ಯಾವ ಮೂಲೆಯಿಂದ ಯಾರ ಅಳುವಿನ ಚೀತ್ಕಾರ ಕೇಳಿದರು ಇಲ್ಲಿನ ಶರಣೆಯರ ಎದೆ ಝಲ್ಲೆನ್ನುತ್ತದೆ..”
ಅಕ್ಕನಾಗಲಾಂಬಿಕೆಯ ಮಾತು ಮುಗಿಯುವ ಮೊದಲೇ ಧಡಕ್ಕನೆ ಜಿಗಿದು ಮಹಾಮನೆಯ ಒಳಸಾಲಿಗೆ ಮಾಚಯ್ಯ ಬಂದರು. ಬಂದವರೇ ಸಿದ್ಧರಾಮ ಶಿವಯೋಗಿಯನ್ನು ಕಂಡು ಅಚ್ಚರಿಯಿಂದ-
“ಸೊನ್ನಲಿಗೆಯಿಂದ ಶರಣರ ದಂಡೊಂದು ಬಂದಿದೆ ಎಂದು ಯಾರೋ ಹೇಳಿದರು. ಅವರೆಲ್ಲಾ ಎಲ್ಲಿದ್ದಾರೆ ಶಿವಯೋಗಿ…? ಈಗ ನಾವು ಕೈಕಟ್ಟಿ ಕುಳಿತಿರುವುದು ಉಚಿತವಲ್ಲ. ಗಾಳಿಗಿಂತ ವೇಗವಾಗಿ ಅವರು ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಶರಣರ ಸಂಕುಲ ನಾಶ ಮಾಡಿದ್ದಲ್ಲದೆ ತಾನು ವಿರಮಿಸಲಾರೆ ಅಂತ ದಾಮೋದರ ಭಟ್ಟ ಹೇಳುತ್ತಿದ್ದನಂತೆ.. ನಿಮ್ಮೊಡನೆ ಬಂದಿರುವ ದಂಡಿನ ಹುಡುಗರು ನನ್ನೊಡನೆ ಬಂದರೆ ನಾವೂ ಎದುರೇಟು ಕೊಡಲಿಕ್ಕಾದೀತು”
ಮಾಚಯ್ಯನ ಮಾತು ಕೇಳಿ ಶರಣೆಯರು ಹುಬ್ಬೇರಿಸಿ ಸಿದ್ಧರಾಮದೇವರನ್ನು ನೋಡಿದರಲ್ಲದೆ ಅಂಥ ಯಾವ ದಂಡೂ ಮಹಾಮನೆಯತ್ತ ಬಂದಿಲ್ಲವೆಂಬುದನ್ನ ಚನ್ನಬಸವಣ್ಣ ಹೇಳಿದಾಗ ಮಾಚಯ್ಯನವರ ಆವೇಶ ಕೊಂಚ ತಣ್ಣಗಾಯ್ತು. ಒಂದಷ್ಟು ಹೊತ್ತು ಕತ್ತಲು ಮತ್ತು ತಮ್ಮತಮ್ಮೊಳಗಿನ ಏಕಾಂತದೊಟ್ಟಿಗಿದ್ದ ಶರಣರು ಮುಂದೇನು ಎಂದು ಯೋಚಿಸುತ್ತಿರುವಾಗ ಸೊಡ್ಡಳ ಬಾಚರಸರು ತಮ್ಮ ಹಿರಿತನದ ನೆವದಿಂದ ‘ಈಗ ನಾವು ಕಲ್ಯಾಣವನ್ನು ಬಿಟ್ಟು ಹೊರಡುವುದು ಉಚಿತ’ ಎಂದರು. ಸೊಂಟದಲ್ಲಿನ ಕಠಾರಿಯ ಹಿಡಿಯನ್ನು ತೀಡುತ್ತಾ ಕುಳಿತಿದ್ದ ಮಾಚಯ್ಯನವರಿಗೆ ಅದೆಲ್ಲಿತ್ತೋ ಸಿಟ್ಟು ‘ನಾವ್ಯಾಕ ಕಲ್ಯಾಣ ಬಿಡಬೇಕು. ನಾವು ಧೀರ ಶೂರ ಶರಣರು. ಭಕ್ತಿಗೆ ತಲೆಬಾಗುತ್ತೇವೆ, ಎದೆಗೆ ಎದೆ ಕೊಡುತ್ತೇವೆ. ಈ ಮಾತನ್ನು ನಾನು ಸುತಾರಾಂ ಒಪ್ಪುವುದಿಲ್ಲ’ ಎಂದೆನ್ನುತ್ತಾ ಉರಿದೆದ್ದರು. ಶರಣರೆಲ್ಲ ಮಾತಿಗೆ ಮಾತು ಬೆಳೆಸಿದಾಗ ಕೆಲವರು ನಿಂತು ಹೋರಾಡುವುದೆಂದು ಕೆಲವರು ನಾಲ್ಕು ದಿಕ್ಕಿಗೆ ಹರಡಿಹೋಗಿ ಶರಣರ ತತ್ವವನ್ನು ನಾಲ್ಕೂ ದಿಕ್ಕಿಗೆ ಹರಡಬೇಕೆಂದೂ ತಮತಮಗೆ ತಿಳಿದದ್ದ ತಾವುತಾವು ಮಾತಾಡುತ್ತಿದ್ದಾಗ ಕತ್ತಲೊಳಗಿಂದ ಮಲ್ಲಿಬೊಮ್ಮ ಚಂಗನೇ ಜಿಗಿದು ಮಹಾಮನೆಯ ಒಳಸಾಲಿಗೆ ಬಂದ. ಅವನ ಕರಿಯ ಮೈಯ ಮೇಲೆ ರಕ್ತದ ಕಲೆಗಳಿದ್ದವು. ಆವೇಶವೊಂದನ್ನು ಬಿಟ್ಟರೆ ಅವನ ಮಾತೊಳಗೆ ಯಾವ ಸ್ಪಷ್ಟತೆಯೂ ಇದ್ದಿರಲಿಲ್ಲ. ಅವನ ಹಿಂದಿನಿಂದ ಅರಮನೆಯ ಊಳಿಗದ ನಾಲ್ಕಾರು ಮಂದಿ ದೊಂದಿಯನ್ನು ಹಿಡಿದುಕೊಂಡು ಮಹಾಮನೆಯತ್ತ ಓಡಿ ಬಂದರು. ಮಹಾಮನೆಯೊಳಗೆ ಬರುವ ಧೈರ್ಯ ಅವರಿಗೂ ಇಲ್ಲದಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೆ ಮರಳಿದರು.
ಮಹಾಮನೆಯ ಬೆಳಕಿನಿಂದ ಅವುಚಿಕೊಳ್ಳಲು ಕತ್ತಲೊಳಗೆ ಹೊಕ್ಕ ಮಲ್ಲಿಬೊಮ್ಮ ಅದ್ಯಾವ ಮಾಯದಲ್ಲೋ ಗಪ್ಪಗಾರ ಆಗಿ ಇನ್ನೆಲ್ಲಿಗೋ ಹೊರಟು ಹೋದ. ಅದೇ ಸರಿಸುಮಾರಿಗೆ ಮುಳ್ಳಾವಿಗೆ ಶರಣನೊಬ್ಬ ಓಡೋಡಿ ಬಂದು ಅರಮನೆಯಲ್ಲಿ ಬಿಜ್ಜಳ ರಾಜರ ಕೊಲೆಯಾಗಿದೆ ಎಂಬ ವಾರ್ತೆಯನ್ನಿತ್ತ. ಮಹಾರಾಜರ ಕೊಲೆ ಬೆಂಕಿಗೆ ತುಪ್ಪ ಸುರಿದಷ್ಟೆ ಆಘಾತಕಾರಿ ಸುದ್ದಿಯಾದ್ದರಿಂದ ಶರಣರ ಮುಖಗಳಲ್ಲಿ ಆತಂಕದ ಛಾಯೆ ದಟ್ಟೈಸಿತು. ಉದಾಸಗೊಂಡ ಚನ್ನಬಸವಣ್ಣನು ಎದ್ದು ಹೋಗಿ ಅಡಕಲ ಮೇಲಿದ್ದ ಗಾಣದೆಣ್ಣೆಯ ಕುಡಿಕೆಯಿಂದ ಸೆರಿ ಎಣ್ಣೆ ತಂದು ಮಹಾಮನೆಯ ನಡುವಿಟ್ಟಿದ್ದ ದೀಪಕ್ಕೆ ಎಣ್ಣೆಹಾಕಿದರು.
“ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಹುದೆ.. ಬಸವಣ್ಣ ಕಪಡಿಗೆ ಹೋದರು, ಅಲ್ಲಮರು ಕದಳಿಗೆ, ನನ್ನ ಮನಸ್ಸು ಕಾಡಿನತ್ತ ಸೆಳೆಯುತ್ತಿದೆ… ನನ್ನ ಮಾತು ಕೇಳುವಿರಾದರೆ. ಲಕ್ಷಲಕ್ಷೋಪಾದಿಯಲ್ಲಿ ಎಲ್ಲಾ ಶರಣರು ಒಂದೇ ಕಡೆಗೆ ಹೋಗುವುದು ಬೇಡ. ದಿಕ್ಕುದಿಕ್ಕಿಗೂ ಹೊರಟರೇ ಈ ಮಹಾಮನೆಯ ದೀಪದ ಬೆಳಕಿನ ಕಿರಣಗಳಾದ ಒಂದೊಂದು ಅಂಶವು ಒಂದೊಂದು ದೀಪ ಹಚ್ಚುತ್ತದೆ. ನಾನು, ತಾಯಿ ಮತ್ತು ಅಕ್ಕಂದಿರು ಹಿರಿಯರೆಲ್ಲ ಒಂದು ಕಡೆ ಹೊರಡುತ್ತೇವೆ. ಮಿಕ್ಕಾದ ಶರಣರು ದಿಕ್ಕು ತೋಚಿದತ್ತ ಸಾಗಿ ನೆಲೆಕಂಡು ಆ ನೆಲೆಯೊಳಗೆ ಮಹಾಮನೆಯ ದೀಪ ಬೆಳಗಿರಿ.”
ಎಷ್ಟೋ ಹೊತ್ತಿನ ನಂತರದಲ್ಲಿ ತುಟಿಯೊಣಗಿದ್ದ ಬಾಯಿಂದ ಚನ್ನಬಸವಣ್ಣ ಮಾತಾಡಿದ್ದೆ ಶರಣರು ಮುಂದಿನ ಅಕಲು ಹಾಕತೊಡಗಿದರು. ಕೆಲವರು ನಾಂದೇಡದ ಕಡೆಗೂ, ತೇಲಂಗದ ಕಡೆಗೂ, ಹಂಪೆಯ ಕಡೆಗೂ, ಚೋಳರ ರಾಜ್ಯಕ್ಕೂ, ಬನವಸೆಯ ದೇಶಕ್ಕೂ ಹೋಗುವುದಾಗಿ ಗುಸುಗುಸು ಮಾತುಕತೆ ಹಬೆ ಎದ್ದಿತು. ಒಮ್ಮೆ ಹೊರಟರೆ ಲಕ್ಷಲಕ್ಷ ಜನ ಹೊರಡುವುದು, ದಾರಿಯಲ್ಲಿ ಸಾವು ನೋವು ಸಂಭವಿಸುವುದು, ಮರಣವೇ ಮಹಾನವಮಿ ಎಂದು ಎದೆಯೊಡ್ಡಿ ಹೋರಾಡುವುದು ಎಲ್ಲದರ ಬಗ್ಗೆಯೂ ಮಾತುಕತೆಯಾಯ್ತು. ಸಿದ್ಧರಾಮರು ಅಕ್ಕನಾಗಲಾಂಬಿಕೆ, ಚನ್ನಬಸವಣ್ಣರನ್ನು ಸೊನ್ನಲಿಗೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದಾಗ ಮಿಕ್ಕೆಲ್ಲ ಶರಣರು ಬಸವಣ್ಣನವರಿಂದ ವಾರ್ತೆ ಬರುವವರೆಗೂ ತಾವು ಸೊನ್ನಲಿಗೆಗೆ ಬರುವುದಾಗಿ ತಿಳಿಸಿದರು.
“ಈಗ ವಚನದ ಸಂಗ್ರಹವನ್ನು ಏನು ಮಾಡುವುದು..?” ಶಾಂತರಸರು ಮೆದುವಾಗಿ ಕೇಳಿದರು.
“ಶಾಂತರಸರೇ ಬರೀ ವಚನಗಳ ಕಟ್ಟನ್ನು ಕಾಯುವುದರಿಂದ ಪ್ರಯೋಜನವಿಲ್ಲ. ಅವೂ ಒಂದಿಲ್ಲೊಂದು ದಿನ ನಶಿಸಿ ಹೋಗುತ್ತವೆ. ನಮ್ಮನಮ್ಮ ನಾಲಗೆಯಲ್ಲಿರುವ ವಚನಗಳನ್ನು ನೆನಪಿಟ್ಟುಕೊಂಡರೆ ಮತ್ತೆ ಬರೆದಿಡಬಹುದಲ್ಲವೇ..? ಶರಣರು ಆಡಿರುವ ವಚನಗಳು ಬರೀ ಮಾತಲ್ಲ, ಬದುಕುವ ರೀತಿಯವು. ಹಾಡಾಗಿ, ಲಯವಾಗಿ ನಮ್ಮಗಳ ನಾಲಗೆಯಲ್ಲಿ ಇರುವವರೆಗೂ ಅವುಗಳನ್ನು ಯಾರಿಂದಲೂ ಸುಡಲಾಗದು” ಸಿದ್ಧರಾಮರು ಹೇಳಿದಾಗ ಉಳಿದೆಲ್ಲ ಶರಣರು ಹೌದೆಂದು ಗೋಣಾಡಿಸಿದರು.
“ಅವುಗಳನ್ನು ಎಲ್ಲಿಕಂಡರೂ ಸುಟ್ಟುಬಿಡಿರೆಂದು ಮಂಚಣ್ಣಕ್ರಮಿತ ದಾಮೋದರ ಭಟ್ಟ, ಕಸಪಯ್ಯ ಹೇಳುತ್ತಿದ್ದಾರೆ. ಅವುಗಳನ್ನು ಸುಡುತ್ತಿದ್ದಾರೆ. ನಾಳೆ ದಿನ ವಚನ ಭಂಡಾರಕ್ಕೂ ಬೆಂಕಿ ಹಚ್ಚುತ್ತಾರೆ, ನನಗನಿಸುತ್ತಿದೆ ಹೊರಡುವ ಪ್ರತಿಯೊಬ್ಬ ಶರಣನ ಜೋಳಿಗೆಯಲ್ಲೂ ಒಂದಷ್ಟು ವಚನಗಳನ್ನ ಕೊಂಡೊಯ್ದರೆ ವಚನಭಂಡಾರ ಖಾಲಿಯಾಗುತ್ತದೆ.”
ಶಾಂತರಸರ ಮಾತನ್ನು ಮಾನ್ಯ ಮಾಡಿದ ಶರಣರು ವಚನಭಂಡಾರದಿಂದ ವಚನಗ್ರಂಥಗಳನ್ನು ತಂದು ಮೂಟೆ ಕಟ್ಟಿಕೊಂಡು ಹೊರಡಲು ಅನುವಾದರು. ಎಲ್ಲಾ ಶರಣರು ಕಟ್ಟಿದ್ದ ಸೌಧವನ್ನು ಹೇಗಿತ್ತೋ ಹಾಗೇಯೆ ಬಿಟ್ಟು ಜೀವವೊಂದನ್ನು ಮಾತ್ರ ಜೊತೆಯಲ್ಲಿಟ್ಟುಕೊಂಡು ಹೊರಡಬೇಕಲ್ಲ ಎಂಬ ಭಾರವಾದ ಮನಸ್ಸಿನಲ್ಲಿ ಶರಣು ಶರಣಾರ್ಥಿ ಹೇಳುತ್ತಾ ದಿಕ್ಕಾಪಾಲಾದರು. ಸಹಸ್ರಾರು ಶರಣರು ಮಾತ್ರ ಮಹಾಮನೆಯಿಂದ ಕದಲದೆ ಬೆಳಗಿಗೆ ಕಾಯುತ್ತಾ ಕುಳಿತರು.
ಚನ್ನಬಸವಣ್ಣನು ಸಿದ್ಧರಾಮರನ್ನು ಕರೆದುಕೊಂಡು ಮಹಾಮನೆಯ ಮಾಳಿಗೆಯ ಮೇಲೆ ಹತ್ತಿಬಂದು ವಿಶಾಲ ಆಕಾಶದಲ್ಲಿ ಮಿಣಕು ಬೆಳಕಾಡುತ್ತಿದ್ದ ನಕ್ಷತ್ರಗಳನ್ನು ನೋಡುತ್ತಾ ಕುಳಿತರು.
“ಚನ್ನಬಸವಣ್ಣಾ.. ಇಲ್ಲಿ ಕೆಳಗೆ ಜಾತಿಯೊಂದರ ಸಂಕರವಾಯ್ತೆಂದು ಆನೆಯ ಕಾಲಿಗೆ ಕಟ್ಟಿ ಶರಣರ ಎಳೆಹೂಟೆ ನಡೆಯಿತು. ಇದೇ ಅವಕಾಶವೆಂದು ಬಿಜ್ಜಳ ರಾಜನ ಕೊಲೆಯಾಯ್ತು. ದೊಂಬಿ ಶುರುವಾಯ್ತು. ಕಲ್ಯಾಣದ ಬೀದಿಯಲ್ಲಿ ಚೀರಾಟ ನರಳಾಟ, ರಕ್ತಪಾತವೇ ನಡೆಯುತ್ತಿದೆ. ಆದರೆ ಅಲ್ಲಿ ಆ ಆಗಸದಲ್ಲಿ ಏನೂ ನಡೆದಿಲ್ಲವೆಂಬಂತೆ ಆಗಸ ಹಸನಾಗಿದೆಯಲ್ಲಾ ಗುರುವೇ…”
“ಅದನ್ನೇ ಅಲ್ಲವೇ ತತ್ವ ಎಂದು ಪ್ರಭುದೇವ ಕರೆದದ್ದು. ಕತ್ತಲನ್ನು ನುಂಗಿಕೊಂಡು ಬೆಳಕು ತೋರುತ್ತದೆ. ಬೆಳಕನ್ನು ನುಂಗಿಕೊಂಡು ಕತ್ತಲು ತೋರುತ್ತದೆ. ಇದೆರಡರ ನಡುವಿನ ಘನವನ್ನು ಕಂಡುಕೊಳ್ಳುವ ಎದೆಗಾರಿಕೆ ಕರ್ಮಠರಿಗಿಲ್ಲ. ಅಂತೆಯೇ ವಿಲೋಮ ಮದುವೆ ನೆಪ ಮಾಡಿಕೊಂಡು ಈ ಹುಯಿಲೆಬ್ಬಿಸಿದರು ಕರ್ಮಠರು.”

ದೂರದಲ್ಲಿ ಶರಣರ ಮನೆಗೆ ಹಚ್ಚಿದ್ದ ಬೆಂಕಿಯು ಹೊಗೆಯಾಗಿ ಆಕಾಶ-ನೆಲವನ್ನು ಒಂದು ಮಾಡಿದ ಹಾಗೆ ಹರಡಿಕೊಂಡಿತ್ತು. ಬೆಳಕಿನ ಪಂಜುಗಳು ಕಲ್ಯಾಣದ ಮೂಲೆಮೂಲೆಯನ್ನು ಹುಡುಕುತ್ತಿದ್ದವು.
“ಶಿವಯೋಗಿ…”
“ಗುರುವೇ…”
“ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದ ಮುಖ್ಯ ಮಾತೆಂದರೆ… ಬಸವಣ್ಣ ಮತ್ತೆ ಮರಳಿ ಬರಲಾರರು ಕಲ್ಯಾಣಕ್ಕೆ. ಪ್ರಭುದೇವರೂ ಕೂಡ… ನಾಳೆ ನಾನು ಹೊರಟರೆ ಈ ಮಹಾಮನೆಯ ದೀಪವು ನಂದಿ ಹೋದಂತಾಗಬಾರದು. ನಿಮ್ಮೊಳಗಿನ ಚಿದ್ ಆನಂದವು ಕರ್ತಾರನ ಲೀಲೆಯಂತೆ ತೋರುತಿವುದು. ಇನ್ಮುಂದೆ ನೀವೇ ಶೂನ್ಯಪೀಠವನ್ನು ಕಾಯುವವರಾಗಬೇಕು. ಈ ಮಹಾಮನೆಯ ದೀಪದ ಬೆಳಕನ್ನು ಲಕ್ಷಲಕ್ಷೋಪಾದಿಯಲ್ಲಿ ಹಂಚುವ ಕಾಯಕ ಶೂನ್ಯಪೀಠದಿಂದ ನಿರಂತರ ನಡೆಯಬೇಕು.”
“ಗುರುವೇ.. ಹಿರಿದಾಯ್ತೆನಗೆ ಈ ಕಾಯಕದ ಭಾರ. ನಾನು ಶರಣರೊಳಗೊಬ್ಬ ಶರಣ…”
“ನೀವು ಬರೀ ಶರಣರಲ್ಲ. ಸಾಧನೆಯ ಹಠ ಹಿಡಿದು ಅರಿವಿನ ಪಥ ಕಂಡವರು. ಅನುಭವಿಸಿದವನು ಮಾತ್ರ ಅನುಭಾವವ ಮಾತನಾಡಬಲ್ಲ ಶಿವಯೋಗಿ. ಜ್ಞಾನದ ಬಲದಿಂದ ಅಜ್ಞಾನ ಕೇಡಾಗುವುದು ಹೇಗೋ ಹಾಗೆಯೇ ನಿಮ್ಮ ನಿರಂತರ ಶ್ರಮದಿಂದ ಮತ್ತೆ ನಾವು ಕಂಡ ಈ ಕಲ್ಯಾಣವನ್ನು ನೀವು ಮಾತ್ರ ಕಟ್ಟಬಲ್ಲಿರಿ.”
“ಅಂದರೆ… ನೀವು..?”
“ನಾನು ದೂರ ಯಾವುದಾದರೂ ಅಭಯಾರಣ್ಯ ಹೊಕ್ಕು ಶಾಂತಚಿತ್ತನಾಗಿ ಉಳಿದು ಬಿಡಬೇಕೆಂದು ಬಯಸಿದ್ದೇನೆ.”
“ಉಳಿದೆಲ್ಲ ಶರಣರು..?”
“ಅವರವರ ಲಕ್ಷ್ಯಭಾವ ಬಂದ ಕಡೆಗೆ ಹೋಗಲಿ. ಬರುವವರು ಮಾತ್ರ ನನ್ನೊಂದಿಗೆ ಬರಲಿ.”
“ಚನ್ನಬಸವಣ್ಣಾ.. ನನಗೆ ಕದಂಬರ ರಾಜಮನೆತನದೊಂದಿಗೆ ನಂಟಿದೆ. ರಾಣಿ ಮೈಳಾಲದೇವಿಗೆ ಓಲೆಯೊಂದನ್ನು ಕಳಿಸುತ್ತೇನೆ. ನೀವು ಹೊರಡುವಿರಾದರೆ ಸೊಗಲದಿಂದ ಅತ್ತತ್ತ ಕಾಡಿಗೆ ಹೊರಟರೆ ನೆಮ್ಮದಿಯಾದೀತು ಜೀವಕ್ಕೆ.”
“ಹಾಗೆ ಆಗಲಿ ಶಿವಯೋಗಿ…”
ರಾತ್ರಿಯೆಂಬುದು ಕೋಡಿದ್ದ ಬಸವನ ಹುಳು ಹರಿದಂತೆ ನಿಧನಿಧಾನ ಸರಿಯುತ್ತಾ ಬೆಳಕು ಮೂಡಿದಾಗ ಅವರಿಬ್ಬರ ಮಾತುಕತೆ ಮುಗಿದಿರಲಿಲ್ಲ. ಕಣ್ಣರೆಪ್ಪೆಗಳಿಗೆ ದಣಿವಾಗಿರಲಿಲ್ಲ. ಕಕ್ಕಯ್ಯನು ಮಾಳಿಗೆಯ ಮೇಲೆ ಬಂದು ಈಗ ಹೊರಡುವುದೇ ಎಂದು ಕೇಳಿದಾಗ ವಿಚಾರದಲ್ಲಿ ಮಗ್ನರಾಗಿದ್ದ ಅವರನ್ನು ಎಳೆತಂದು ದೊಂಬಿ ಎದ್ದಿದ್ದ ಕಲ್ಯಾಣದಲ್ಲಿ ಬಿಟ್ಟಂತಾಗಿತ್ತು. ರಾತೋರಾತ್ರಿ ಸಹಸ್ರಸಹಸ್ರ ಶರಣರು ದಿಕ್ಕಾಪಾಲಾಗಿ ಹೋಗಿದ್ದರೂ ಇನ್ನೂ ಸಹಸ್ರಾರು ಶರಣರು ಮಹಾಮನೆಯ ಮುಂದೆ ಜಮಾಯಿಸುತ್ತಿದ್ದರು. ಅಂದು ಬಸವಣ್ಣ ಕಲ್ಯಾಣಬಿಟ್ಟು ಹೊರಟ ದಿನವೂ ಹೀಗೆ ಶರಣರು ಮಹಾಮನೆಯ ಮುಂದೆ ನೆರೆದಿದ್ದರು. ಇಂದು ಅವರು ಬರೀ ಕುತೂಹಲದಿಂದ ಬಂದಿರಲಿಲ್ಲ. ತಮ್ಮ ಬದುಕಿನ ಲಾವಿಗಂಟು ಕಟ್ಟಿಕೊಂಡು ಕಲ್ಯಾಣ ತೊರೆಯಲು ಸಿದ್ಧರಾಗಿ ಬಂದಿದ್ದರು.
ಶರಣರು ಬಸವಣ್ಣನ ಹೆಸರಲ್ಲಿ ಉಘೆಉಘೆ ಹಾಕತೊಡಗಿದಾಗ, ಅಲ್ಲಿದ್ದ ಅಳಿದುಳಿದ ಶರಣರ ಮೈಯಲ್ಲೂ ಉತ್ಸಾಹ ಇಮ್ಮಡಿಸಿತು. ಅದೇ ಶರಣರ ಧೀರನಡಿಗೆಯಲ್ಲಿ ಸಿದ್ಧರಾಮರ ಹಿಂದೆ ಚನ್ನಬಸವಣ್ಣ, ಕಕ್ಕಯ್ಯ, ಚಂದಯ್ಯ, ಬಾಚರಸ ಮುಂತಾದ ಶರಣರು ನಡೆದಿದ್ದರೆ ಅವರ ಜೊತೆಯಲ್ಲಿ ಶರಣೆಯರು ಸಾಲುಗಟ್ಟಿ ಹೊರಟು ನಿಂತಿದ್ದರು. ಅವರ ಹಿಂದೆಹಿಂದೆ ಗಣಾಚಾರಿ ಮಾಚಯ್ಯನವರ ದಂಡೂ ಕಾವಲಾಗಿ ನಡೆಯುತ್ತಾ ಕಲ್ಯಾಣಬಿಟ್ಟು ಹೊರಟರು.
ಶರಣರು ಹೊರಟರು
ಮಹಾಮನೆ ಬೆಳಕ ಹೊತ್ತು
ಹೊರಟರು ಹೊರಟೇಬಿಟ್ಟರು.

ಎಲಾ ಎಲಾ ಏನಾಯ್ತಿದು ಜಗದ ಸೋಜಿಗಾ.. ಕೆಟ್ಟಿತ್ತು ಕಲ್ಯಾಣ ನೋಡಾ ಎಂದು ಮಮ್ಮಲ ಮರಗುವ ಜೀವಗಳು ಒಂದೆಡೆ ನಿಂತು ಬಾಯಿಗೆ ಸೆರಗೊಡ್ಡಿ ಕಣ್ಣೀರುಗರೆಯುತ್ತಿದ್ದರೆ… ರಾಜರಾಟ ನಮಗ ಹ್ಯಾಂಗ ತಿಳಿದೀತು.. ನೋಡಬಾರದ್ದ ನೋಡತಿದೀವಲ್ಲ ಅನ್ನೋ ಸಂಕಟ ಏನೂ ಅರಿಯದ ನಾಗರಿಕರದ್ದು. ಇಡೀ ನಾಡಿನ ಪುಣ್ಯವೇ ಗುಳೆ ಎದ್ದು ಹೊರಟಿದೆ ಎನೋ ಅನ್ನೋ ಹಾಗೆ ಇರೋಬರೋರೆಲ್ಲ ವ್ಯಾಪಾರಸ್ಥರು, ನಾಗರಿಕರು, ಹೆಂಗಸರು, ಮಕ್ಕಳು ಮರಿಯಾದಿಯಾಗಿ ಇಡೀ ಕಲ್ಯಾಣವೇ ಶರಣರ ಹಿಂದಹಿಂದ ಬರತೊಡಗಿದಾಗ ಸೋವಿದೇವನ ಸೈನ್ಯವು ನಿಧನಿಧಾನ ಹಿಂದಕ್ಕೆ ಸರಿಯಿತು.
ಚನ್ನಬಸವಣ್ಣ  ಸೊನ್ನಲಿಗೆಗೆ ಬರುವ ಮೊದಲೇ ಎಲ್ಲವೂ ವ್ಯವಸ್ಥೆಯಾದಂತೆ ಊರಿಗೂರೆ ಶರಣರ ಬರುವನ್ನು ನೀರಿಕ್ಷಿಸುತ್ತಾ ನಿಂತಿತ್ತು. ಮನೆಗೊಂದಾಳು ಕೊಡವನ್ನು ತುಂಬಿಕೊಂಡು ಬಂದು ಶರಣರ ಕೈಕಾಲಿಗೆ ನೀರು ಹಣಿಸಿ ಕುಡಿಯಲು ಸಿವಿ ನೀರು ಕೊಟ್ಟರು. ಬಿಸಿಲ ಕೋಲಿಗೆ ಆಯಾಸಗೊಂಡವರ ಬಾಯಿಗೆ ಕಣ್ಣಿ ಬೆಲ್ಲ ಕೊಟ್ಟು ಸಂತೈಸಿದರು. ಉಳಿದೆಲ್ಲ ಶರಣರು ರಾತ್ರೆಯ ನಿದ್ದೆಯನ್ನು ಪೂರೈಸಲು ಅಲ್ಲಲ್ಲಿ ಸಿದ್ಧರಾಮರು ನೆಟ್ಟಿದ್ದ ಗಿಡದ ತೋಪಿನ ನಡುವೆ ಅಡ್ಡಾದರೆ, ಮಲ್ಲಿಕಾರ್ಜುನನ ಪರಿಷೆಗೆ ಹೂಡುತ್ತಿದ್ದ ಒಲೆಯನ್ನು ಹೂಡಿ ಊರಿನ ದೈವವು ಅಂಬಲಿ ಬೇಯಿಸತೊಡಗಿತು.
****   ****   ****
ದಿನವೆರಡು ಕಳೆಯಿತು. ಹಗಲೆಲ್ಲ ಸಿದ್ಧರಾಮರ ಹೂದೋಟದ, ಸಸ್ಯವನದ, ಕೆರೆಬಾವಿಗಳ ಸುತ್ತ ಸಣ್ಣಪುಟ್ಟ ಕಾಯಕ ಮಾಡಿಕೊಂಡು ಅಂಬಲಿಯುಂಡು ಇಳಿಹೊತ್ತಿಗೆ ಚನ್ನಬಸವಣ್ಣನ ಸಮ್ಮುಖದಲ್ಲಿ ಅನುಭಾವಗೋಷ್ಠಿ ನಡೆಸಿ, ರಾತ್ರೆ ಪಹರೆಗಿಬ್ಬರು ಕಾವಲು ಕಾಯುತ್ತಾ ದಿನ ಮೂರಕ್ಕೆ ಕಾಲಿಡುವ ಆ ಬೆಳಗಿನ ಹೊತ್ತಿಗೆ ಗುಪ್ತಮಂಚಣ್ಣನೂ ಅಪ್ಪಣ್ಣನೂ ಕಪ್ಪಡಿಯಿಂದ ಬಂದರು. ಅವರೊಡನೆ ಬಸವಣ್ಣನೂ ಬಂದಾನೆಂಬ ನಿರೀಕ್ಷೆಯಲ್ಲಿದ್ದವರ ಮುಖದಲ್ಲಿ ಕಳವಳ ಹೆಪ್ಪುಗಟ್ಟಿತ್ತಾದರೂ ಸೈರಿಸಿಕೊಂಡು ಬಂದವರ ವಿಚಾರಿಸಲಾಗಿ… ಅಪ್ಪಣ್ಣನು ನಾಗಲಾಂಬೆಯನ್ನು ಉದ್ದೇಶಿಸಿ ಇಂತೆಂದನು.
“ಅಕ್ಕಾ.. ನಾವು ಕಪ್ಪಡಿಗೆ ಹೋದುದೇ ಬಸವಣ್ಣನವರು ಮಾತು ಮರೆತವರಂತೆ ಕಣ್ಣುಮುಚ್ಚಿ ಆ ಮೂರು ನದಿಗಳ ಸಂಗಮಸ್ಥಾನದ ನಟ್ಟನಡುವಲ್ಲಿ ಕುಳಿತುಬಿಟ್ಟರು. ದಾರಿಯ ದಣಿವಿನ ಆಯಾಸವಿಲ್ಲ, ಹೊಟ್ಟೆಗೆ ಅಂಬಲಿಯಿಲ್ಲ ಕಣ್ಣಿಗೆ ನಿದ್ದೆಯಿಲ್ಲ ನೆಟ್ಟನೆ ಸೊಂಟದಿಂದ ಸಹಸ್ರದಳದ ಆ ತುದಿಯವರೆಗೂ ಬಿಸಿಲಿನ ಕಾವು ಧಗಧಗಿಸುವ ಆ ಸುಡುಬಿಸಿಲಲ್ಲಿ ಹಾಗೇ ಕುಳಿತಿದ್ದರು. ನಾನು ಮತ್ತಿಬ್ಬರು ಕುರಿಗಾಹಿ ಹುಡುಗರ ಸಹಾಯದಿಂದ ಅಲ್ಲಿಯೇ ಬೆಳೆದಿದ್ದ ಬಾಳೆಯದಿಂಡನ್ನು ತಂದು ನೆರಳು ಮಾಡಿಕೊಂಡು, ಅವರು ಕಣ್ಣು ಬಿಡುವುದನ್ನು ಕಾಯುತ್ತಾ ಕುಳಿತಿದ್ದೆ. ಇಳಿಸಂಜೆಯಾದರೂ ಆ ಮುಖದಲ್ಲಿ ಮೂಡಿದ್ದ ತೆಳುಗೆರೆಯ ನಗು ಮಾಯವಾಗಲಿಲ್ಲ. ತ್ರಾಹಿ ತ್ರಾಹಿ.. ಎಂದವರೇ ಕಣ್ಣುಬಿಟ್ಟು ನನ್ನನ್ನ ಹತ್ತಿರಕ್ಕೆ ಕರೆದರು. ಏನನ್ನೋ ಹೇಳುತ್ತಾರೆಂದು ಹತ್ತಿರಕ್ಕೆ ಹೋಗಿ ಕಿವಿಗೊಟ್ಟರೆ.. ಬಾರದು ಬಪ್ಪುದು, ಬಪ್ಪುದು ತಪ್ಪದು ನೋಡಾ ಅಪ್ಪಣ್ಣಾ ಎಂದರು. ಆ ದಿನ ರಾತ್ರಿಗೆ ಸಂಗಮನಾಥನ ಗುಡಿಯ ಪೌಳಿಯಲ್ಲಿ ಮಲಗುವ ಮೊದಲು ನಾನು ಕಲ್ಯಾಣ ಬಿಟ್ಟು ಬರಬಾರದಿತ್ತು ಅಪ್ಪಣ್ಣಾ… ಎನ್ನುತ್ತಾ ಕಲ್ಲಹಾಸಿನ ಮೇಲೆ ಮೈಚಾಚಿ ಮಲಗಿದರು.”
“ಮುಂದೆ..?”

“ಮುಂದೇನು..! ರಾತ್ರಿಯಲ್ಲಾ ಕನವರಿಕೆಯಲ್ಲೇ ಕಳೆದರು. ಕೀವು, ಕೀಡೆ, ರಕ್ತ, ಎಂದು ಆಗೀಗ ಹೇಳುತ್ತಿದ್ದವರು ನಡುನಡುವೆ ಪ್ರಭುದೇವಾ ಎನ್ನುತ್ತಿದ್ದರು ತಾಯೀ… ಮರುದಿನ ಕೋಳಿಕೂಗಿಗೂ ಮುನ್ನ ಗುಪ್ತಮಂಚಣ್ಣ ಬಂದಾಗಲೇ ನಮಗಾದರೂ ತಿಳಿಯಿತು. ಕಲ್ಯಾಣದ ಬೀದಿ ರಣರಂಗವಾಗಿರುವುದೆಂದು.”
ಶರಣರ ಕಣ್ಣಾಲಿಗಳು ತುಂಬಿಬಂದಿದ್ದವು, ಅವರ ನಡುವೆ ಅಳ್ಳೆದೆಯ ಮಾತೆಂಬ ದುಃಖವು ನುಸುಳಿದರೆ ಎಲ್ಲಿ ಕಟ್ಟೆಯೊಡೆದು ಭರಪೂರ ಅಸಾಹಯಕತೆಯ ಅಳುವು ನಗ್ಗಿಬರುವುದೋ ಎಂದೆನಿಸಿದ್ದೇ ತಡ ಸಿದ್ಧರಾಮರು ಮಧ್ಯಪ್ರವೇಶಿಸಿ-
“ಬೀಸುವ ಗಾಳಿ ಧೂಳೆಬ್ಬಿಸಿದ ಮಾತ್ರಕ್ಕೆ ಸೂರ್ಯ ಮಸಳುವನೇ..? ಆ ಸೂರ್ಯನಂತೆ ಬೆಳಗುತ್ತಿರುವೇಡಾ..! ಹಿರಿಯರ ಮನವು ಮನವಚ್ಚಂದವಾಗದೆ ಒಂದೆಯಂದದಿ ಇಪ್ಪಂತಪ್ಪ ನಿಮ್ಮದೊಂದು ಸಮತೆಯಗುಣ ಎನ್ನನೆಂದು ಪೊದ್ದಿಪ್ಪುದು ಕಪಿಲ ಸಿದ್ಧಮಲ್ಲಿಕಾರ್ಜುನಾ.. ನೀವು ದಣಿದಿದ್ದೀರಿ. ವಿಚಾರ-ವಿವೇಚನೆಗೆ ಸಮಯವಿರುವುದು ನಮಗೆ. ಅಪ್ಪಣ್ಣನೂ, ಮಂಚಣ್ಣನೂ ದಣಿದಿದ್ದಾರೆ ತಾಯಿ. ರವಸ್ಟು ವಿಶ್ರಮಿಸಲಿ…” ಎಂದು ಶರಣರ ಕಣ್ಣಕೋಡಿಯ ಹನಿ ಒಡಿದು ಹರಿಯುವ ಮೊದಲೇ ಸಿದ್ಧರಾಮರು ಮಾತಾಡಿದರು. ಆದರೂ ನೀಲಮ್ಮನ ಕಣ್ಣೀರ ಹರಿವನ್ನು ತಡೆಯಲಾದೀತೆ..? ಅಲ್ಲಿರುವ ಸಂಗಯ್ಯನಿಲ್ಲಿ ಇಲ್ಲವೇ ಎನ್ನುತ್ತಾ ಅವರು ಮನದೊಳಗೆ ಕಟ್ಟಿಕೊಂಡಿದ್ದ ನೋವನ್ನೆಲ್ಲಾ ಹಾಡಾಗಿಸಿ ಸೊಲ್ಲೆತ್ತಿದಾಗ ಇಡೀ ಶರಣಸಂದೋಹವೇ ಆ ಹಾಡಿಗೆ ದನಿಗೂಡಿತು.
ಆ ದಿವಸ ಮದ್ಯಾಹ್ನ ಕಳೆದು ಅಪ್ಪಣ್ಣ ಮತ್ತೆ ಕಪ್ಪಡಿಸಂಗಮಕ್ಕೆ ಹೊರಟುನಿಂತಾಗ ನಿಲಮ್ಮ ಕೂಡ ಬರುವುದಾಗಿ ಹೊರಟು ನಿಂತರು. ಯಾರಿಗೆ ಯಾರೂ ಯಾವ ಮಾತನ್ನೂ ಹೇಳುವಷ್ಟು ಸಮತೆ ಯಾರೊಳಗೂ ಇರಲಿಲ್ಲವಾಗಿ ಅಪ್ಪಣ್ಣ-ನೀಲಮ್ಮರನ್ನು ಬೀಳ್ಕೊಟ್ಟ ಶರಣರು ಮುಂದೇನು ಎಂಬ ಆತಂಕದಲ್ಲಿದ್ದರು. ಅವರಿಬ್ಬರೂ ಯೋಜನದಷ್ಟು ದೂರ ಹೋಗುವವರೆಗೂ ಹಿಂದಿನಿಂದ ಕಾವಲಾಗಿ ಹೋಗಿದ್ದ ಗುಡ್ಡರಿಬ್ಬರು ಸೂರ್ಯದೇವನು ತುಸುವೇ ಕೆಂಪಾಗಿ ಇಂಚಿಂಚೆ ಮುಳುಗುತ್ತಿರುವಾಗ್ಗೆ ಅವಸರವಸರದಲ್ಲಿ ಓಡೋಡಿಬಂದು ಸಿದ್ಧರಾಮರ ಕಿವಿಯಲ್ಲಿ ಏನೋ ಹೇಳಿದರು.
ನೊಸಲಲ್ಲಿ ಧರಿಸಿದ್ದ ವಿಭೂತಿಯ ತಿಲಕವು ಏರುಪೇರಾಗಿ, ಕ್ರುದ್ಧಗೊಂಡ ಕಣ್ಣಗಳು ಉರಿದೆದ್ದು ಸಿದ್ಧರಾಮರು ಎದ್ದು ಆ ಗುಡ್ಡರು ಕೈಮಾಡಿ ತೋರಿದ ಗುಡ್ಡದತ್ತ ಹೊರಟು ನಿಂತಾಗ ಹಿಂದಿನಿಂದ ಹತ್ತಾರು ಗುಡ್ಡರು ಮಲ್ಲಗರಡಿಯ ಸಣ್ಣದೊಡ್ಡ ಗದೆಗಳನ್ನು ಹೆಗಲಿಗೆ ಇಟ್ಟುಕೊಂಡು ದುಡುದುಡು ನಡೆದರು. ಏನು..? ಏನೆಂಬ ಗದ್ದಲವು ಶರಣರೊಳಗೆ ಎದ್ದದ್ದೆ ಗಣಾಚಾರಿ ಮಾಚಿದೇವರ ಮೂಗಿಗೆ ವೈರಿಯ ಸುಳಿವಿನ ವಾಸನೆ ಬಡಿದಂತಾಗಿ ತನ್ನೊಡನಿದ್ದ ಹತ್ತಾರು ಕತ್ತಿವರಸೆ ಬಲ್ಲಂಥ ಹುಡುಗರನ್ನು ಗುಂಪುಕಟ್ಟಿಕೊಂಡು ಸನ್ನದ್ಧನಾಗಿ ಹೊರಡಲನುವಾದರು.
ಅಲಲಾ ಇದೇನು ಘಟಿಸುತ್ತಿದೆ ಇಲ್ಲಿ. ಸಣ್ಣಪುಟ್ಟ ಶರಣರು ಇದಿರುಗೊಳ್ಳುವ ಉತ್ಸಾಹ ತೋರುತ್ತಾ ರಣರಂಗವನ್ನೇ ಮಾಡಿಬಿಟ್ಟಾರೆಂಬ ಆತಂಕದಲ್ಲಿ ಅಕ್ಕನಾಗಲಾಂಬಿಕೆಯು ಅಡ್ಡಾಗಿ ಓಡಿ ಬಂದು ಮಾಚಿದೇವರನ್ನ ತರುಬಿ, ‘ಇದು ಸೊನ್ನಲಿಗೆ … ಒಂದು ಕಾಲಕ್ಕೆ ಅಭಿನವ ಶ್ರೀಶೈಲವಾಗಿತ್ತು. ಇಂದು ಈಗ ಅಭಿನವ ಕಲ್ಯಾಣದಂತೆ ತೋರುವುದು ಮಾಚಯ್ಯ.. ಶಿವಯೋಗಿ ಬರುವವರೆಗೂ ಕಾಯುವುದು ಒಳಿತು. ಇಲ್ಲಿ ನಾವಿದ್ದರೆ ಈ ಭೂಮಿಯೂ ರಣರಂಗವಾಗುವುದು. ಈ ದಿನವೇ ನಾವು ಇಲ್ಲಿಂದ ಕಾಲ್ಕಿತ್ತರೆ ಯಾರಿಗೂ ಯಾವ ಹಾನಿಯೂ ಸಂಭವಿಸದು. ಸ್ಥಿರನಾಗು ಮಾಚಯ್ಯ” ಎಂದು ಹೇಳಿದರು. ಅತ್ತ ಗುಡ್ಡದ ಕಡೆಗೆ ಹೋಗಿದ್ದವರು ಮತ್ತೆ ಬಂದಾಗ ನಸುಗೆಂಪು ಕರಗಿ ಸೊನ್ನಲಿಗೆಯನ್ನು ಕಡುಕತ್ತಲು ವ್ಯಾಪಿಸಿತ್ತು.
ನಡೆದದ್ದು ಏನು ಎಂಬುದನ್ನ ಊಹಿಸಿದ ಚನ್ನಬಸವಣ್ಣ-ಅಕ್ಕನಾಗಮ್ಮರು ಉಂಡು ಮಲಗುವ ಹೊತ್ತಿಗೆ ಶಿವಯೋಗಿಯನ್ನು ಕಾಣಲು ಬಂದರು. ಮಹಾಮನೆಯಿಂದ ತಂದಿದ್ದ ದೀಪಕ್ಕೆ ಎಳ್ಳೆಣ್ಣೆ ಹಾಕಿ, ಬತ್ತಿಯನ್ನು ಹೊಸೆದು ಸೇರಿಸುತ್ತಿದ್ದ ಸಿದ್ಧರಾಮ ಆ ಸರುಹೊತ್ತಿನಲ್ಲಿ ಅವರನ್ನು ಕಂಡು ಚಕಿತರಾದರು.
“ಅಪ್ಪ ಶಿವಯೋಗಿ, ಸೈನ್ಯವು ಅಲ್ಲಿಯೇ ನಿಂತಿತೋ ಇಲ್ಲಾ ಹಿಂದಕ್ಕೆ ಹೋಯಿತೋ…”
“ತಾಯೀ.. ಕಲ್ಯಾಣದ ಹೊಸ ಚಕ್ರವರ್ತಿ ಯಾರಾಗಿದ್ದಾರೆಂಬ ಸುದ್ದಿ ತಿಳಿದಿದೆಯೇ..?”
“ಇಲ್ಲಾ ನನ್ನಪ್ಪ. ಬಸವನಿಲ್ಲದ ಕಲ್ಯಾಣದ ಕತೆ ಕಟ್ಟಿಕೊಂಡು ನಮಗೇನಾಗಬೇಕಿದೆ. ಈ ಶರಣರ ಜೊತೆಜೊತೆಯಲ್ಲೇ ಕಲ್ಯಾಣವು ನಡೆದುಕೊಂಡು ಇಂದಿಲ್ಲಿಗೆ ಬಂದಿದೆ. ನಾಳೆ…”
“ತಾಯಿ… ಈಗ ಕಲ್ಯಾಣದ ದೊರೆ ಸೋವಿದೇವನಂತೆ..”
“ಹಾಗಿದ್ದರೆ ನಾವು ಇಲ್ಲಿರುವುದೂ ತರವಲ್ಲ.”
“ಇನ್ನೆಲ್ಲಿಗೆ ಹೋಗುವಿರಿ ತಾಯೀ…”
ಇದುವರೆಗೂ ಯಾವ ಮಾತೂ ಆಡದೇ ಉಳಿದಿದ್ದ ಚನ್ನಬಸವಣ್ಣನ ತುಟಿಗಳು ಅದುರತೊಡಗಿದವು. ಬಸವಣ್ಣ ಬರುತ್ತಾನೆ, ಬಂದವನು ನಮ್ಮ ದಾರಿಯ ಬಗ್ಗೆ ನಿಚ್ಚಳವಾಗಿ ತಿಳಿಸುತ್ತಾನೆಂದು ಭಾವಿಸಿದ್ದ ಅವನು ಈಗ ಮಾತಾಡಲೇಬೇಕಿತ್ತು.
“ಶಿವಯೋಗಿ.. ಅಂದು ನೀವು ಮಹಾಮನೆಯ ಮಾಳಿಗೆ ಮೇಲೆ ಕುಳಿತಾಗ ಹೇಳಿದ್ದಿರಿ. ಕದಂಬರ ಮೈಳಾಲದೇವಿಯ ಬಗ್ಗೆ. ಅವರಿಂದ ಉತ್ತರವೇನಾದರೂ ಬಂದಿತೇ..? ನನಗೆ ಚೂರು ಏಕಾಂತ ಬೇಕಿದೆ ಶಿವಯೋಗಿ. ಹೇಳಬೇಕಾದುದ ಹೇಳಿ, ಬರೆಯಬೇಕಾದುದ ಬರೆದು ಪೂರೈಸಬೇಕಿದೆ. ಸೊಗಲದಿಂದ ಅತ್ತತ್ತ ಕಾಡಿಗೆ ಹೊರಡುತ್ತೇವೆ.”
“ಗುರುವೇ.. ನಾನು ಈಗಾಗಲೇ ಅವರಿಗೊಂದು ಓಲೆ ಕಳಿಸಿದ್ದೇನೆ. ಅದಕ್ಕೆ ತಕ್ಕಂತೆ ಅವರು ವ್ಯವಸ್ಥೆಯನ್ನೂ ಮಾಡುತ್ತಾರೆ. ಆದರೆ ಈಗಲೇ ನೀವು ಹೋಗುವುದು…”
“ಮನಸ್ಸು ನಿಲ್ಲದೇ ತುಯ್ಯೂತ್ತಿದೆ ಶಿವಯೋಗಿ ತಡೆಯದಿರು. ಕಾಡದಿರು, ಇನ್ನೆರಡು ದಿನ ನಿಲ್ಲಿರೆಂದು ಬೇಡದಿರು. ನಾಳೆಯ ನಸುಕಿಗೆ ನಾವು ಹೊರಡುತ್ತೇವೆ. ಇದೋ ಈ ಬೆಳಗುವ ಮಹಾಮನೆಯ ದೀಪದ ಒಂದಂಶವನ್ನು ನಾವು ಒಯ್ಯತ್ತೇವೆ ಶಿವಯೋಗಿ. ನೀವು ನನಗೆ ಮಾತು ಕೊಟ್ಟಂತೆ ಈ ದೀಪವು ಮರಿಹಾಕಿ ಲಕ್ಷಲಕ್ಷೋಪಾದಿಯಲ್ಲಿ ಹಂಚಬೇಕು ಬೆಳಕನ್ನು…”
ಹೀಗೆ ಮತ್ತಷ್ಟು ಮಾತಾಡಿದರು ಅವರಿಬ್ಬರು.
ಬೆಳಗಾದಾಗ ಇಡೀ ಸೊನ್ನಲಿಗೆಯೇ ನಡೆದುಕೊಂಡು ಹೊರಟಂತೆ ಶರಣರು ಪಡುವಣ ದಿಕ್ಕಿಗೆ ಹೊರಟು ನಿಂತಿದ್ದರು. ಯಾರ ಮುಖದಲ್ಲೂ ನಗುವಿಲ್ಲ, ಆಯಾಸವೆಂಬುದು ಕಳೆದು ಹೊಸ ಚೈತನ್ಯಕ್ಕೆ ನಾಂದಿಯೆಂಬಂತೆ ಈ ದಿವಸ ಚನ್ನಬಸವಣ್ಣನು ಶರಣರ ದಂಡಿಗೆ ಕೆಲವು ಸೂಚನೆ ಕೊಟ್ಟು ತಂಡತಂಡವಾಗಿ ಸೊಗಲದತ್ತ ಹೊರಟಾಗ ಸಿದ್ಧರಾಮರ ಜೀವದಲ್ಲಿ ಜೀವವಿರಲಿಲ್ಲ. ಭಾವದಲ್ಲಿ ಭಾವವಿರಲಿಲ್ಲ.
(ಮುಂದುವರೆಯುತ್ತದೆ)

Previous post ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
Next post ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…

Related Posts

ಲಿಂಗ ಕೂಡಲ ಸಂಗಮ
Share:
Articles

ಲಿಂಗ ಕೂಡಲ ಸಂಗಮ

April 29, 2018 ಕೆ.ಆರ್ ಮಂಗಳಾ
ವಚನಗಳು ಓದುಗನನ್ನು ಒಂದು ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯುತ್ತವೆ. ಆ ಮಟ್ಟವನ್ನು ಮನಸ್ಸು ಮುಟ್ಟದ ಹೊರತು ಅದರ ಒಳಪದರುಗಳು ಬಿಚ್ಚಿಕೊಳ್ಳಲಾರವು. ಇಲ್ಲಿ ಕಾಣಿಸುವ ಭಕ್ತ,...
ವಚನಕಾರರು ಮತ್ತು ಕನ್ನಡ ಭಾಷೆ
Share:
Articles

ವಚನಕಾರರು ಮತ್ತು ಕನ್ನಡ ಭಾಷೆ

December 6, 2020 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮಾತು ಮಾನವನ ನಿಜವಾದ ಆಸ್ತಿ. ಈ ಮಾತು ಮಾನವನಿಗೆ ಯಾವಾಗ ಬಂತೆಂದು ಹೇಳುವುದು ಕಷ್ಟ. ಮೊದಲಿಗೆ ಮಾನವ ಮಾತಿಲ್ಲದೆ ತನ್ನ ಆಂಗಿಕ ಅಭಿನಯ, ಹಾವ ಭಾವಗಳ ಮೂಲಕವೇ ತನ್ನ ಭಾವನೆಗಳನ್ನು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ನಾನು ಯಾರು?
ನಾನು ಯಾರು?
December 8, 2021
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
Copyright © 2023 Bayalu