Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕರ್ತಾರನ ಕಮ್ಮಟ (ಭಾಗ-5)
Share:
Articles November 6, 2019 ಮಹಾದೇವ ಹಡಪದ

ಕರ್ತಾರನ ಕಮ್ಮಟ (ಭಾಗ-5)

ಮುಂಜಾನೆ ಎನ್ನುವುದು ಎಳೆಯ ಹುಡುಗನಂತೆ ಸೊನ್ನಲಿಗೆಯ ದಾರಿಗೆ ತಂಪಿನ ಮಂಜೆರೆದಿತ್ತು. ಹುಲ್ಲುರಾಶಿಯ ತುಂಬೆಲ್ಲ ಹನಿಗಳು ಮುತ್ತಿನ ತೋರಣ ಕಟ್ಟಿದಂತೆ ಎಳೆಯ ಬಿಸಿಲಿಗೆ ನಳನಳಿಸುತ್ತಿದ್ದವು. ಸೋಸಿ ತೆಗೆದಂತಿದ್ದ ಹೂಮಣ್ಣಿನಲಿ ಹೆಜ್ಜೆ ಇಟ್ಟಂತೆ ಅವರೊಳಗೆ ನವಿರೇಳುವ ಪುಳಕ ಮೂಡತೊಡಗಿತು. ಇಡೀ ಸೀಮೆಯೇ ಮದುವಣಗಿತ್ತಿಯ ವೇಷ ತೊಟ್ಟಂತೆ ಹೊಚ್ಚಹೊಸ ಬಣ್ಣದಲ್ಲಿ ಲಕಲಕ ಎನ್ನುವಂತಿದ್ದಾಗ ಸಿದ್ಧರಾಮರ ಮನಸ್ಸು ಮುದಗೊಂಡಿತ್ತು. ತಮ್ಮ ಪ್ರೀತಿಯ ಕುದುರೆಯ ಬೆನ್ನ ಮೇಲೆ ಕೈಯಾಡಿಸುತ್ತಾ ಹಿಂತಿರುಗಿ ನೋಡಿದರೆ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುವ ಕುದುರೆಯ ಹೆಜ್ಜೆಗಳೂ ಎರಡೇ..! “ಎರಡು ತೋಳೆರಡು ಭುಜ ಆವಾತನ ಹಿಡಿವಾಗಲಿ ಒಂದೇ ನೋಡಾ. ಕಣ್ಣೆರಡಂಗ ಬೇರಿರೆ ಆವಾತನ ಹಿಡಿವಾಗ ಒಂದೇ ನೋಡಾ… ಇಬ್ಬರಿಗೊಬ್ಬ ಗಂಡ ಕಪಿಲಸಿದ್ಧಮಲ್ಲಿನಾಥನಯ್ಯ..!” ಎಂದು ಉದ್ಘರಿಸಿದಾಗ ಅಮುಗಿದೇವ ‘ಆಹಾ… ಎಂಥ ಘನ ತತ್ವ ಹೇಳಿದಿರಿ ಶಿವಯೋಗಿ’ ಎಂದನು.
“ಅಮುಗಿದೇವ, ಕಣ್ಣೆಷ್ಟು?”
“ಎರಡು…”
“ಕಾಣುತ್ತಿರುವುದೆಲ್ಲವೂ ಎರಡಾಗಿದೆಯೇ?”
“ಇಲ್ಲ ನನ್ನಪ್ಪ ಒಂದೇ ಆಗಿದೆ.”
“ಇದೇ ಈ ಬದುಕಿನ ನಿಜದ ಅರಿವು ನೋಡಾ..! ಶರಣಸತಿ ಲಿಂಗಪತಿ..! ಕಲ್ಯಾಣಕ್ಕೊಂದೇ ಕಣ್ಣು, ಒಂದೇ ಮುಖ, ಒಂದೇ ಭಾವ. ಅದನ್ನು ಅರಿಯುವುದು ನಮ್ಮನ್ನ ನಾವು ತಿಳಿಯುವುದು ಎರಡೂ ಒಂದೆಯಲ್ಲವೇನು..?”
“ಹೌದಲ್ಲವೇ..!”
“ನಾನು ಅಲ್ಲಮರೊಡಗೂಡಿ ಕಲ್ಯಾಣಕ್ಕೆ ಹೋದಾಗ ಈ ದ್ವಂದ್ವ ನನ್ನನ್ನೂ ಕಾಡಿತು. ಬಸವಣ್ಣನೊಳಗೆ ಕಲ್ಯಾಣವಿದೆಯೋ.. ಕಲ್ಯಾಣದೊಳಗೆ ಬಸವಣ್ಣನಿದ್ದಾನೋ ಎಂಬ ಸೋಜಿಗವದು. ಅದು ಬಿಜ್ಜಳನ ಕಲ್ಯಾಣವೇ ಅಲ್ಲ ಎನ್ನುವುದು ಮತ್ತೆಮತ್ತೆ ಖಾತ್ರಿಯಾದದ್ದೆ ಒಂದು ದಿನ ಚನ್ನಬಸವಣ್ಣನೊಡನೆ ಮಾತಾನಾಡುತ್ತಾ ಇದನ್ನು ಪ್ರಸ್ತಾಪಿಸಿದೆ. ಎರಡಳಿಯುವ ಕ್ರಿಯೆಯೇ ಕಲ್ಯಾಣದ ನಿಜವಾದ ನೆಲೆ ಎಂಬುದನ್ನ ಚನ್ನಬಸವಣ್ಣನ ಜೊತೆ ಬಹಳ ಹೊತ್ತು ಮಾತನಾಡಿದೆ…”

ಮಾತುಕತೆಗೆ ದಾರಿಯ ದಣಿವು ಅಡ್ಡಬರಲಿಲ್ಲ, ಮಾತಿನ ಲಹರಿಯಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಹೂವಿನ ಮೇಲಿಟ್ಟಂತಾಗಿ ಲಗುಬಗೆಯಲ್ಲಿ ಸೊನ್ನಲಿಗೆ ಮುಟ್ಟಿದರು. ಪರಿಷೆಯ ಮಾತು ಹಾಗಿರಲಿ ಶಿವಯೋಗಿಗಳ ಸ್ವಾಗತಕ್ಕೆ ಇಡೀ ಊರಿನ ಮಂದಿಯೇ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಂಭ್ರಮದಿಂದ ಸ್ವಾಗತಿಸಿದರು. ಕೊಂಬು-ಕಹಳೆ-ನಗಾರಿಗಳ ಸಡಗರದ ನಡುವೆ ಆ ಎತ್ತರದ ಘನಗಾಂಭೀರ್ಯ ನಡಿಗೆಯ ಸಿದ್ಧರಾಮರು ನಡೆದು ಬರುತ್ತಿದ್ದರೆ ಗುಡ್ಡರ ಕುಲದ ಹುಡುಗರು ಉಘೆ ಉಘೆ ಸಿದ್ಧರಾಮ ಎಂದು ಘೋಷಣೆ ಕೂಗುತ್ತಿದ್ದರು. ಸಿಂಗಾರಗೊಂಡಿದ್ದ ಸೊನ್ನಲಿಗೆಗೆ ಹೊಸ ಚಲನೆ ಬಂದಂತೆ ಲವಲವಿಕೆ ಊರವರೊಳಗೆ ಬಂದದ್ದೆ ಪರಿಷೆಯ ಹುಮ್ಮಸ್ಸು ಮೂರುಪಟ್ಟು ಹೆಚ್ಚಾಯ್ತು.

ವಾರೊಪ್ಪತ್ತು ಪರಿಷೆಯ ಗದ್ದಲದ ನಡುವೆ ಯಾವ ಏಕಾಂತವೂ ಇಲ್ಲದಂತಾಗಿತ್ತು. ಜಾತ್ರೆಗೆ ಬಂದಿದ್ದ ಬಂಧುಬಳಗವೆಲ್ಲ ಹೊರಡುತ್ತಿದ್ದಂತೆ, ಬೆಂಡು-ಬೆತ್ತಾಸಿನ, ಕಂಬಳಿ-ಕೌದಿಯ, ಮಿಣಿ-ಹಗ್ಗ-ಕುಣಿಕೆಯ, ಕಾಳುಕಡಿಯ ಅಂಗಡಿ ಮುಂಗಟ್ಟುಗಳು ಒಂದೊಂದೇ ತೆರುವಾಗುತ್ತಾ ಜಾತ್ರೆಗೆ ಬಂದು ಬೀಡುಬಿಟ್ಟಿದ್ದ ದೊಂಬರು, ಗೊಂಬೆರಾಮರೂ, ಬುಡ್ಗರು, ಹಕ್ಕಿ ಶಕುನದವರೂ ತಮ್ಮತಮ್ಮ ಬಂಡಿ ಕಟ್ಟಿಕೊಂಡು ಮುಂದಲೂರ ಜಾತ್ರೆಗಳಿಗೆ ಹೊರಟರು. ಸಂಭ್ರಮ ಕಳೆದು ಭಿಕೋ ಎನ್ನುವ ಬಿಸಿಲಗುದುರೆ ಕಣ್ಣೆದುರು ಕುಣಿಯುವ ಸರಿಹೊತ್ತಿಗೆ ಕುಟೀರದಿಂದ ಹೊರಗೆ ಬಂದರು.

ಸಣ್ಣದೊಂದು ದಂಡಿನ ಜೊತೆ ಯಾರೋ ದೊಡ್ಡವರು, ರಾಜನ ಸಂಬಂಧಿಗಳು ಇತ್ತ ಬರುವುದ ಕಾಣಿಸಿತು. ಕಾಲಾಳುಗಳು ಬಿಸಿಲಿಗೆ ದಣಿದಂತೆ ಕೈಯಲ್ಲಿ ಹಿಡಿದ ಈಟಿಯ ಮೇಲೆ ಭಾರ ಹಾಕಿ ನಡೆದು ಬರುತ್ತಿದ್ದರು. ಕರ್ಣದೇವ.. ಬಿಜ್ಜಳನ ಖಾಸಾ ತಮ್ಮ ಕಣ್ಣಪನ ಸವಾರಿ ಸೊನ್ನಲಿಗೆಗೆ ಬಂದಿತ್ತು. ನೀರು ನೀಡಿ ಊಟೋಪಚಾರದ ನಂತರ ಚಣಹೊತ್ತು ಮಲಗೆದ್ದ ಕಣ್ಣಪನು ಶಿವಯೋಗಿಯ ಕಂಡು ಮಾತನಾಡಿದನು. ಯಾವ ರಾಜಾಶ್ರಯವೂ ಇಲ್ಲದೆ ಸ್ವತಂತ್ರಶಕ್ತಿಯಿಂದ ಈ ಊರನ್ನು ಅಭಿನವ ಶ್ರೀಶೈಲದ ಹಾಗೆ ಕಟ್ಟಿದ್ದ ಸಿದ್ಧರಾಮರನ್ನು ಕೊಂಡಾಡಿದನು.

ಯಾವೊಂದು ಕಲ್ಯಾಣ ಕಟ್ಟುವ ಮನಸ್ಸು ಧಿಮಿಧಿಮಿ ಅನ್ನುವಂಥ ಹೊತ್ತಿನಲ್ಲಿ ಕಣ್ಣಪನು ಸೊನ್ನಲಿಗೆಯನ್ನು ಶ್ರೀಗಿರಿಗೆ ಹೋಲಿಸಿದಾಗ ಎದೆಯ ಭಾರ ಇಳಿದವರಂತೆ ನಕ್ಕು ಬಿಟ್ಟರು. ಅಂದು ಹಾಗೆ ಯೋಚನೆ ಬಂತು ಹಾಗೆ ಮಾಡಿದೆ ಇಂದು ಮನಸು ಬೆಳಗುವ ಕಲ್ಯಾಣವೆಂಬ ಪ್ರಣತೆಯನ್ನು ಹೊತ್ತಿಸಬೇಕಿದೆ ಎಂಬುದಾಗಿ ನಗುತ್ತಲೇ ತಾವು ಬದಲಾದುದರ ಸುಳಿವು ಕೊಟ್ಟರು. ಹೀಗಿರಲು ಮಾತಿಗೆ ಬಂದುದರಿಣದ ಕಣ್ಣಪನು ತಾನು ಕಲ್ಯಾಣದ ಸೀಮೆಯಿಂದಲೇ ಇತ್ತ ಬರುತ್ತಿರುವುದಾಗಿ ತಿಳಿಸಿದನು. ರಾಜನಿರುವಲ್ಲಿ ಗೂಢಚರ್ಯೆ, ಮಸಲತ್ತು, ಆಂತರಿಕ ಅಸೂಯೆ, ಕಲಹಗಳು ಇದ್ದೇ ಇರುತ್ತದೆಯಾಗಿ, ತನಗೆ ಕಸಪಯ್ಯನೆಂಬ ದಳಪತಿಯೂ, ಮಂಚಣ್ಣನೆಂಬ ಕ್ರಮಿತನೂ ಗುಟ್ಟಾಗಿ ಪತ್ರ ಬರೆದು ಅಣ್ಣ ಬಿಜ್ಜಳನನ್ನು ಪಟ್ಟದಿಂದಿಳಿಸಿ, ಕಲ್ಯಾಣದ ತುಂಬೆಲ್ಲ ವ್ಯಾಪಿಸಿರುವ ಶರಣರ ಬಗ್ಗೆ ಕಹಿ ಕಾರಿದರೆಂಬುದಾಗಿ ಕಣ್ಣಪನು ಮನಸ್ಸು ಬಿಚ್ಚಿ ಸಿದ್ಧರಾಮರ ಮುಂದೆ ಭಿನ್ನೈಸಲು.. ಸಣ್ಣದೊಂದು ನಗೆ ನಕ್ಕಂಥಾ ಶಿವಯೋಗಿಯು…
“ಜ್ಯೋತಿಯಿಂದ ಕತ್ತಲೆ ಕಳೆಯುತ್ತದೆ. ಅಂಥ ತಮಂಧದ ಕೇಡನ್ನು ಕಳೆದ ಬಸವಣ್ಣನ ಮೇಲೆ ಕಾರಸ್ಥಾನವೇ..? ನೋಡು ಕಣ್ಣಪಯ್ಯ..! ದೀಪದಿಂದ ಬೆಳಕು ಹೊತ್ತಿಸ ಬೇಕು ಹೊರತು ಬೆಂಕಿ ಹಚ್ಚಬಾರದು. ದೀಪ ಚೈತನ್ಯ ಕೊಟ್ಟರೆ ಬೆಂಕಿ ಸುಟ್ಟು ಕರಕಲು ಮಾಡುತ್ತದೆ. ಬಸವಣ್ಣನಿಂದ ಮೊದಲಾದ ಈ ವಿಚಾರ ಜ್ಯೋತಿಯ ಪ್ರಖರತೆ ಅವರಾರ ಅರಿವಿಗೂ ಬಾರದು. ರೂಹಿಲ್ಲದ ನೆಲದಲ್ಲಿ ಸಸಿಯ ಬೆಳೆಯಲಾಗದು, ಭಯವಿಲ್ಲದವನಲ್ಲಿ ಭಕ್ತಿಯ ಕಾಣಲಾಗದು.. ಹೋ ಅಯ್ಯಾ… ಬಿಜ್ಜಳರಾಯನ ಸುತ್ತಲೂ ಇಂತಹ ಕಾರಿಗರು ತುಂಬಿಕೊಂಡರೆ ಭುವನಮಲ್ಲನ ಭಾಗ್ಯಕ್ಕೊಂದು ಅಂತ್ಯದ ಬಿಂದು ಸಮೀಪಿಸಿದೆ ಎಂದರ್ಥ.. .ಬಸವಣ್ಣನೆಂದರೆ ಎನಗೆ ಲಿಂಗಸಂಪನ್ನ, ಗುರು ಸಂಪನ್ನ, ಜಂಗಮ ಸಂಪನ್ನ ಇಂಥ ಸಂಪನ್ನನ ಕಂಡು ದ್ರೋಹ ಮಾಡುವರೇ..? ಛೇ ಛೇ.. ಬಸವಣ್ಣನನ್ನ ಅರಿಯಲು ನನ್ನ ಇಡೀ ದೇಹವೇ ಬಸವಾ ಬಸವಾ ಎನ್ನುತ್ತಿದೆ…
ಕಣ್ಣಪಯ್ಯಾ…? ನೀನು ಬಸವಣ್ಣನನ್ನು ಕಂಡೆಯಾ..?”
“ಗುರುವೇ ಅಣ್ಣನ ರಾಜ್ಯದ ಪ್ರಧಾನಿಗಳು ಅವರು..!”
“ನೀನು ಬರೀ ಬಸವಣ್ಣನನ್ನು ಪ್ರಧಾನಿಯಾಗಿ ಕಂಡಿದ್ದಿಯಾ, ನಮ್ಮ ಶರಣರು ಅರಿವಿನ ತಂದೆಯಾಗಿ ಆ ಬಸವಗುರುವನ್ನ ಕಾಣುತ್ತಿದ್ದಾರೆ. ಈ ರಾಜ್ಯ, ಕೋಶ, ಧನ-ಕನಕ, ಲೆಕ್ಕದ ಹೊತ್ತುಗೆಗಳ ದಾಟಿದ ವ್ಯವಹಾರ ಬಸವಣ್ಣಂದು… ಸಕಲರಲ್ಲಿಯೂ ದಯೆ ಕಾಣುತ್ತ ಧರ್ಮದ ನಡೆ ನಡೆದವರು ಬಸವಣ್ಣ. ಜಡಗೊಂಡ ಜೀವಗಳಿಗೆ ಚೈತನ್ಯ ಕೊಟ್ಟವರು ಬಸವಣ್ಣ… ಹೌದು ಕಣ್ಣಪಯ್ಯಾ ನೀವು ಮೊದಲ ಸಲ ಬಸವಣ್ಣನನ್ನು ಕಂಡದ್ದು ಯಾವಾಗ..?”
“ಅಂದು ಮಂಗಳವೇಡೆಯಲ್ಲಿ..! ಅಣ್ಣನ ಜೊತೆಗೆ ಮಾತನಾಡುತ್ತಿದ್ದಾಗ ಮೊದಲ ಸಲ ಕಂಡೆ…”
“ಆಗ ಹೇಗಿದ್ದರು ಬಸವಣ್ಣ?”
“ಸಪೂರ ದೇಹದ, ಮೃದು ಮಾತಿನ ಅವರ ಮುಖದಲ್ಲಿ ಆ ದಿವಸ ಮಂದನಗೆಯಿತ್ತು ಶಿವಯೋಗಿ..!”
“ಆ ನಗೆ ಹೇಗಿತ್ತೋ ನಾನರಿಯೇ.. ಆದರೆ ನಾನು ಮೊದಲ ಸಲ ಅಲ್ಲಮ ಗುರುವಿನೊಂದಿಗೆ ಕಲ್ಯಾಣಕ್ಕೆ ಹೋದಾಗಲೂ ನೀವು ಹೇಳಿದಂತೆಯೇ ನನಗೂ ಕಂಡರು ಕಣ್ಣಪಯ್ಯಾ… ಅವರ ವ್ಯವಧಾನ ನನ್ನನ್ನು ಸೂಜಿಗಲ್ಲಿನಂತೆ ಸೆಳೆದು ಬಿಟ್ಟಿತು.”
ಇಂತಾಗಿ ಶಿವಯೋಗಿಯು ಮನದಾಳದಿಂದ ಮಾತನಾಡುವಾಗ ಕಣ್ಣಪನ ಕಣ್ಣುಗಳು ಅರಳಿದವು. ಮನಸ್ಸು ಮೊಗ್ಗಾಗಿ ಬಸವಣ್ಣ ದಣ್ಣಾಯಕರು ಕಟ್ಟಿರುವ ಮನಸುಗಳ ಕಲ್ಯಾಣವನ್ನು ಕಲ್ಪಿಸಿಕೊಳ್ಳತೊಡಗಿದರು. ಆ ದಿನದ ಇಳಿಹೊತ್ತಿನವರೆಗೂ ಅವರಿಬ್ಬರೂ ದೀರ್ಘವಾಗಿ ಮಾತನಾಡಿ ಹೊರಡುವಾಗ ಕಟ್ಟಕಡೆಯದಾಗಿ ಮತ್ತೊಂದು ಮಾತನ್ನು ಇಂತೆಂದರು..
“ಕಣ್ಣಪಯ್ಯ.. ಯಾರದೋ ಮನೆಯ ಮದುವೆಗೆ ಹೋದಾಗ ಯಾರೋ ತಾಯಿಯೊಬ್ಬಳು ನೀಲಮ್ಮ ತಾಯಿಯನ್ನು ಮಕ್ಕಳಾಗಲಿಲ್ಲ ಎಂಬ ನೆಪವೊಡ್ಡಿ ಕಾರ್ಯದಿಂದ ಹೊರಗಿಟ್ಟು ನಡೆಸಿಕೊಂಡಳಂತೆ.. ದುಃಖಿತಳಾದ ನೀಲಮ್ಮತಾಯಿಯ ಭುಜವಿಡಿದು ಸಂತೈಸುತ್ತಾ ಅಣ್ಣ ಬಸವಣ್ಣನವರು ‘ಅಸಂಖ್ಯ ಸಂಖ್ಯೆಯ ಮಕ್ಕಳು ನಮಗಿದ್ದಾರೆ. ಒಂದು ಸಲ ಕಣ್ತೆರೆದು ನೋಡು ನೀಲಾ.. ಅಯ್ಯ ಎನ್ನುವ ಬಳಗ ನಮ್ಮದು. ಅಂಥಪ್ಪ ಶರಣರ ನಡುವೆ ಮನಸಿನ ಕಿಂಚಿತ್ ಆಸೆಗಾಗಿ ದುಃಖಿಸುವುದೇ?’ ಎಂದು ಹೇಳಿದರಂತೆ. ಇಡೀ ಶರಣ ಸಂಕುಲವನ್ನೇ ಮಕ್ಕಳಂತೆ, ತಂದೆತಾಯಿಗಳಂತೆ, ಬಂಧುಬಳಗದಂತೆ ಕಾಣುವ ಆ ಬಸವಣ್ಣನ ದೊಡ್ಡಗುಣ ಬರುವುದು ಸಾಮಾನ್ಯರಿಗೆ ಸಾಧ್ಯವೇ..? ನೀವು ಅವರಿವರ ಮಾತಿಗೆ ಕಿವಿಗೊಡದೇ ಇರುವುದು ಲೇಸು.”

ಶಿವಯೋಗಿಗಳ ಜೊತೆಗಿನ ಮಾತಿಗೆ ಅರ್ಥ ಬಂದಂತಾಗಿ ತಾನು ಈ ದಿವಸ ಸೊನ್ನಲಿಗೆ ಮಾರ್ಗವಾಗಿ ಬಂದುದು ಒಳ್ಳೆಯದೇ ಆಯ್ತು. ಕಲ್ಯಾಣವನ್ನು ಬರೀ ಕ್ಷುದ್ರ ರಾಜ್ಯನೀತಿಯ ಕಾರಣದಿಂದ ನೋಡದೇ ಧರ್ಮಕಾರಣದಿಂದ ನೋಡಬೇಕೆಂಬ ಅರಿವು ಕಣ್ಣಪಯ್ಯನ ಮನಸ್ಸಿಗೆ ಬಂದಿತು. ಅದೇ ದಿವಸ ಇಳಿಹೊತ್ತಿಗೆ ಕಣ್ಣಪಯ್ಯ ಮತ್ತು ಅವನ ಕಾಲಾಳುಗಳ ಪ್ರಯಾಣ ಮುಂದುವರೆಯಲು ಇತ್ತ ಸಿದ್ಧರಾಮರ ಮನಸ್ಸು ವಿಲವಿಲ ಒದ್ದಾಡುತ್ತಾ ಮತ್ತೆ ಕಲ್ಯಾಣದತ್ತ ಹೊರಡಬೇಕು. ಅಲ್ಲಿನ ರಾಜನನ್ನೂ ಕಂಡು ಮಾತಾಡಬೇಕು, ಆಸ್ಥಾನದಲ್ಲಿದ್ದೂ ಅತ್ತ ರಾಜನ ಮೇಲೂ ಇತ್ತ ಬಸವಣ್ಣನ ಮೇಲೂ ಹಗೆ ಸಾಧಿಸುವ ಅವಿವೇಕಿಗಳ ಕಂಡು ಮಾತಾಡಬೇಕೆನಿಸತೊಡಗಿತು.

****  ****  ****
ಮನದಹಕ್ಕಿ ಪುಟನೆಗೆದು ಮುಂದೆ ಬಂದು ಮುಂಗೈ ಮೇಲೆ ಕುಳಿತು ಮಾತನಾಡಲು ಹವಣಿಸುತ್ತಿತ್ತು. ಸವಡು ಸಿಕ್ಕರೆ ಸಾಕೊಮ್ಮೆ ಕಲ್ಯಾಣಕ್ಕೆ ಹೋಗಿ ಬರುವ ಯೋಚನೆ ತಲೆಯೊಳಗೆ ಬಂದು ಹೋಗುತ್ತಿತ್ತು. ಆದರೆ ನೂರಾರು ತೆರನಾದ ರೋಗಿಗಳು ದಿನವೂ ಬಂದು ಕಾಣುತ್ತಿದ್ದರಿಂದಾಗಿ ಹೋಗಿ ಬರಲು ಸಾಧ್ಯವಾಗಿರಲಿಲ್ಲ. ಕಾಲುಗಳು ಭಾರವಾದಂತೆ ಮನಸ್ಸು ಕೂಡ ಜಡವಾಗುತ್ತಿದೆಯೇ ಎಂಬ ಅನುಮಾನದ ಹುಳ ಏಳುತ್ತಿದ್ದಂತೆಯೇ ಒಂದು ರಾತ್ರಿ ಮಲಗುವ ಮೊದಲು ಧುತ್ತೆಂದು ಮನದಹಕ್ಕಿ ಮೂರ್ತಗೊಂಡು ಹಾಸಿಗೆಯ ಮೇಲೆ ಬಂದು ಕುಳಿತಿತು.

ಆ ಹಕ್ಕಿಗೆ ರೆಕ್ಕೆಗಳಿದ್ದಾವೆ… ಆದರೆ ಆಕಾರವಿಲ್ಲ. ಭಾರ ಹೊತ್ತಂತಿದ್ದ ಮನದಕ್ಕಿ ರೆಕ್ಕೆ ಕೊಡವಿ ಸಿದ್ಧರಾಮನ ತಲೆಯ ಮೇಲೆ ಹಾರಿಬಂದು ಕುಳಿತಿತು. ಭುಜದ ಮೇಲೊಮ್ಮೆ, ಮುಂಗೈ ಮೇಲೊಮ್ಮೆ, ಓದಿ ಮಲಗುವುದಕ್ಕಾಗಿ ಹಿಡಿದಿದ್ದ ತಾಳೆಗರಿಯ ವಚನದ ಕಟ್ಟುಗಳ ಮೇಲೊಮ್ಮೆ ಕುಳಿತು ಆಕರ್ಷಿಸಲು ಹವಣಿಸುತ್ತಿತ್ತು.
“ಮಾತಾಡಲು ಬಂದೆಯಾ..?”
“……………………………..!”
“ಯಾಕಾಗಿ ಈ ಮೌನ.. ಏನಾದರೂ ಮಾತಾಡು.”
“ದಣಿವಾಗಿದೆಯಾ ಶಿವಯೋಗಿ?”
“ಇಲ್ಲ, ಹಾಗೇನಿಲ್ಲವಲ್ಲಾ..!”
“ಸತ್ಯ ಮುಚ್ಚಿಡಬೇಡ.. ನಿನ್ನ ದಣಿವು ನನ್ನನ್ನು ಕೆಣಕುತ್ತಿದೆ.”
“ಹೌದು. ದೇಹಕ್ಕೆ ದಣಿವಾಗಿದೆ.”
“ಮನಸ್ಸಿಗೆ…?”
“ಅದು ಮಾತ್ರ ಭಾರವಾಗಿದೆ.”
“ಅಯ್ಯಾ ಸಿದ್ಧರಾಮ ಮಗುವಾಗುವುದೆಂದರೇ ಮೌನವಲ್ಲ ಸಿದ್ದರಾಮ.”
“ನನಗದು ತಿಳಿದಿದೆ.  ತಿಳಿಯಾದ ಲೋಕವನ್ನು ಕೌತುಕದಿಂದ ಕಾಣುತ್ತ ನಿಜವಾದ ಸುಖದ ಮಾರ್ಗವನ್ನರಿಯುವುದು.”
“ಅದು ಭ್ರಮೆ.. ನಿನ್ನ ಮಾತಿನೊಳಗೆ ಪೂರ್ವದ ವಾಸನೆಯೇ ಹೋಗಿಲ್ಲ ನೋಡು. ಹ..ಹ.. ಹಹಹ…”
“ನಗಬೇಡ. ನಿನಗೇನಾಗಿದೆ..? ಯಾಕೆ ನನ್ನನ್ನ ಕಾಡುವೆ.. ನಾನು ಸ್ವಸ್ಥವಾಗಿದ್ದೇನೆ.”
“ಅಹುದಹುದು. ನೀನು ಸ್ವಸ್ಥವಾಗಿರುವೆ. ಹೇಳು, ನೀನು ಮಾಡುವ ಕಾಯಕದಲ್ಲಿ ಮನವಿಟ್ಟಿರುವೆಯಾ.. ನೀನು ಮಾಡುವ ಲಿಂಗಪೂಜೆಯಲ್ಲಿ ಮನ ನಿಯಂತ್ರಣವಾಗಿದೆಯೇ…”
“ಶೂನ್ಯದೊಳಗೆ ಎಲ್ಲವೂ ಇದೆ. ಆದರೆ ಏನೂ ಇಲ್ಲದ ನಿರ್ವಯಲ ಹುಡುಕುವ ಹಂಬಲದಲ್ಲಿದ್ದೇನೆ.”

“ಅಯ್ಯಾ ಸಿದ್ಧರಾಮ ನಾನು ಕೂಡ ಇದರ ಜಡತ್ವವನ್ನೇ ಹೇಳುತ್ತಿರುವೇನಯ್ಯ.. ಶ್ರೀಗಿರಿಯ ಸುತ್ತಿ ಯೋಗಿಯಾದೆ, ಸೊನ್ನಲಿಗೆಯಲ್ಲಿ ಸ್ಥಾವರವಾಗಿ ಸಿದ್ಧನಾದೆಯಲ್ಲವೇ..! ಇಂಥ ವೇಷಧಾರಿ ಜಂಗಮನಂತಾಗಿದ್ದ ನಿನ್ನೊಳಗೆ ಜ್ಞಾನಿ ಜಂಗಮನು ಅಂಕುರಿಸಿದ್ದಾನೆ ತಿಳಿಯಯ್ಯಾ ಸಿದ್ಧರಾಮ. ನಿನ್ನನ್ನು ಶುದ್ಧ ಶಿವಯೋಗಿ ಮಾಡಿದಾತ ಯಾರು..?”

“ಚನ್ನಬಸವಣ್ಣ.”
“ಆ ಜ್ಞಾನದ ವಿಚಾರವನ್ನು ಮಸೆಮಸೆದು ಬದುಕನ್ನು ಸಾರ್ಥಕ್ಯಗೊಳಿಸಿಕೊಳ್ಳಲು ಸಿದ್ಧನಾಗು. ಅಂಗಕ್ಕೆ ಲಿಂಗೋಪದೇಶ ಮನಕ್ಕೆ ಮಂತ್ರೋಪದೇಶ ಆದ ಮಾತಿಗೆ ಮೊದಲು ತಿಳವಳಿಕೆಯ ಯೋಗವಾರಂಭಿಸು ಸಿದ್ದರಾಮ.”
“ಅದರ ಅರಿವಿನ ಹುಡುಕಾಟದಲ್ಲಿರುವೆ ಮನದಕ್ಕಿಯೇ…”
“ನಿನಗೊಂದು ಪ್ರಶ್ನೆ ಕೇಳಲೇ..?”
“ಕೇಳು.”
“ನೀನು ಈ ಮೊದಲು ಕಪಿಲಸಿದ್ಧಮಲ್ಲಿಕಾರ್ಜುನ ದೇವರ ಗುಡಿಯೊಳಗೆ ಪೂಜಿಸುವಾಗ ಎಂಥಾ ಸೊಗಸಿರುತ್ತಿತ್ತು ನೆನಪಿದೆಯಾ..?”
“ಅದು ಹಳೆಯ ಮಾತಾಯ್ತು.. ಮತ್ತು ಅದು ಕರಾರುವಾಕ್ ಪೂಜೆಯಷ್ಟೇ.”
“ಅಲ್ಲವೇ..? ಆದರೆ ಮನಸ್ಸು ಮುದವಾಗಿತ್ತು.”
“ಛೇ.. ಅದು ತೋರಿಕೆಯ ಪೂಜೆ.”
“ಈಗ..?”
“ಈಗೀನದು ಮನದೊಳಗೆ ಮಹಾದೇವನ ಕಾಣುವ ಪೂಜೆ…”
“ಭಲೇ..! ಇದನ್ನೇ ಕರ್ತಾರನ ಕಮ್ಮಟ ಎಂದದ್ದು. ಈಗ ನೀನು ಮತ್ತಷ್ಟು ಹಗುರಾಗು ಸಿದ್ಧರಾಮ, ಎಳೆಯ ಮಗುವಿನಂತಾಗು. ಬಸವಣ್ಣ ಹಚ್ಚಿದ ವಿಚಾರ ಜ್ಯೋತಿಯನ್ನು ವಸುಧೆಯೊಳಗೆಲ್ಲ ಬೆಳಕಾಗುವಂತೆ ಮಾಡಬೇಕಿದೆ ನೀನು. ಇಷ್ಟು ದಿವಸ ನೋಡಿದ ಕೇಳಿದ ಕಲ್ಯಾಣದ ಚಿತ್ರಣ ಬದಲಾಗುತ್ತಿರುವ ಸೂಚನೆ ನಿನಗಾಗಲೇ ಸಿಕ್ಕಿದೆ. ನಿನ್ನ ಮಾತುಗಳ ಕೇಳಿ ಕಣ್ಣಪ ಒಬ್ಬ ಸುಮ್ಮನಿರಬಹುದು. ಆದರೆ.. ಕಲ್ಯಾಣದ ಒಳಸುಳಿಯಲ್ಲಿ ಅಸಂಖ್ಯ ಸಂಖ್ಯೆಯಲ್ಲಿ ಅಸೂಯೆ ತುಂಬುತ್ತಿದೆ. ಅದು ದ್ವೇಷದ ಮಟ್ಟವನ್ನು ಮುಟ್ಟಿದಾಗ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಯಾತನೆ ಉಳಿಯುತ್ತದೆ. ಆಗ ನಿನ್ನ ಹಗೂರ ಮನಸ್ಸು ಸರ್ವವನ್ನೂ ವ್ಯಾಪಿಸಿಕೊಳ್ಳುತ್ತಾ ಕಳೆದುಕೊಂಡ ಮುತ್ತನ್ನು ಹುಡುಕಿ ಮತ್ತೆ ದೀಪ ಬೆಳಗಿಸುವ ಕೆಲಸವನ್ನು ನೀನೇ ಮಾಡಬೇಕಿದೆ ಸಿದ್ಧರಾಮ.. ಏಳು ಎದ್ದೇಳು.. ಹಗೂರಾಗು. ಗಾಳಿಗಿಂತ ವೇಗವಾಗಿ ಪಸರಿಸುವ ಬಸವ ಬೆಳಕಾಗು…”

ಮನದಕ್ಕಿ ಚಂಗನೇ ನೆಗೆದು ಹಾರಿ ಆಕಾಶದೆತ್ತರಕ್ಕೆ ಹೋಗಿ ಅದೇ ವೇಗದಲ್ಲಿ ಮರಳಿ ಬಂದು ಮನದ ಗೂಡನ್ನು ಹೊಕ್ಕಿತು. ಧಡಗ್ಗನೇ ಎದ್ದು ಕುಳಿತವರ ಮುಖದಲ್ಲಿ ಮಂದಹಾಸ ಮೂಡಿತಷ್ಟೇ..  ಆದರೆ ಕಣ್ಣಪ ಬಂದು ಹೋದ ಸಂಗತಿಯ ಬೆಳವಣಿಗೆ ವಿಪರೀತವಾಗಿರಬಹುದೇ ಎಂಬ ಸಂಶಯ ಒಡಮೂಡಿತು. ತನ್ನ ತಾನು ಅರಿಯುವ, ನಲ್ಲನ ಕೂಡುವ ವಿಚಾರವೂ ರಾಗವಾಗಿ ಗುನುಗುನಿಸಿದಂತೆ ತಾಳೆಗರಿಯ ಮೇಲೆ ಅಚ್ಚರಿಯಂತೆ ಬರೆಯತೊಡಗಿದರು.
ಎಲವೆಲವೊ ನಲ್ಲ,
ನಿನ್ನ ಕೂಡದ ಮುನ್ನ ಕಾಣೆ,
ಕೂಡಿದ ಬಳಿಕ ಮತ್ತೆ ಕಾಣೆನಯ್ಯಾ,
ನಿನ್ನ ಕೂಡಿದ ಸುಖದಿಂದ ಆನೇನೆಂದರಿಯೆನಯ್ಯಾ
ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.

****  ****  ****
ಬೆಳಗಿನ ಜಾವಕ್ಕೆ ಸರಿಯಾಗಿ ಯಾರೋ ಒಬ್ಬ ಕುಟೀರದ ಹೊರಗೆ ನಿಂತ ಅಯ್ಯಾ ಅಯ್ಯಾ ಎಂದು ಕೂಗುವುದು ಕೇಳಿಸಿತು. ಬೊಮ್ಮಣ್ಣ ಎಚ್ಚರಾಗಿ ಅವನನ್ನು ವಿಚಾರಿಸಲಾಗಿ ಅವನೊಬ್ಬ ನಾಂದೇಡ ಸೀಮೆಯ ರೈತನಾಗಿದ್ದು, ಅವನೇ ಸಾಕಿದ್ದ ಜೀವದ ಎತ್ತೊಂದರ ಹೆಗಲ ಮೇಲೆ ನೊಗದ ಭಾರ ಹೆಚ್ಚಾಗಿ, ಅಲ್ಲೊಂದು ಸಣ್ಣ ಗುಳ್ಳೆಯಾಗಿ, ಅದು ಒಡೆದು, ಹೆಗಲ ತುಂಬೆಲ್ಲ ಹಸಿಗಾಯದ ಅಂಟು ಹತ್ತಿದ್ದರಿಂದ, ಅದು ಇಡೀ ಹೆಗಲಿಗೆಲ್ಲ ಅಂಟಿಕೊಂಡು ಕೀವು ತುಂಬಿ ಹುಳ ಬಿದ್ದಿತ್ತು. ಅದರ ಉಪಚಾರಕ್ಕಾಗಿ ರಾತ್ರೆಯೆಲ್ಲ ಎತ್ತನ್ನ ಹೊಡೆದುಕೊಂಡು ಸೊನ್ನಲಿಗೆಗೆ ಬಂದಿದ್ದ.

ನಸುಕಿಗೆ ಎದ್ದು ಔಷಧದ ಎಲೆಗಳನ್ನ, ಬಳ್ಳಿಗಳನ್ನ ತಂದು ಹದಮಾಡುತ್ತಿದ್ದ ಕಲ್ಲಯ್ಯನು ಎದ್ದು ಹೋಗಿ ಆ ಎತ್ತಿನ ಹೆಗಲು ಕಂಡವನೇ ಚಣ ಮರುಗಿ ‘ಇದನ್ನ ಶಿವಯೋಗಿಯೇ ನೋಡಿದರೆ ಸರಿಯಾದ ಔಷಧಿ ಆದೀತು’ ಎಂದು ಹೇಳಿದವರೇ ಕಪಿಲಸಿದ್ಧ ಮಲ್ಲಿಕಾರ್ಜುನನ ಗುಡಿಯ ಮುಂದಿನ ಅರೆಯುವ ಕಲ್ಲಿನ ಕಡೆಗೆ ನಡೆದುಬಿಟ್ಟಿದ್ದರು. ಬೊಮ್ಮಣ್ಣನು ಕಪಲೆಬಾವಿಯಿಂದ ನೀರು ಸೇದಿ ಹಂಡೆ ತುಂಬಿಸುವ ಅವಸರವಿದ್ದಿತ್ತಾದ್ದರಿಂದ ಆ ರೈತನಿಗೆ ಅಲ್ಲಿಯೇ ಬೆಳಗಿನವರೆಗೂ ಕಾಯಲು ಹೇಳಿ ಅವರು ಅತ್ತ ಹೊರಟೇಬಿಟ್ಟರು. ಅರೆಮಂಪರಿನಲ್ಲಿದ್ದ ಸಿದ್ಧರಾಮ ಶಿವಯೋಗಿಗಳು ಇದೆಲ್ಲವನ್ನು ಕೇಳಿಸಿಕೊಳ್ಳುತ್ತಲೇ ಎದ್ದು ನಿತ್ಯದ ಸಂಗತಿಗಳನ್ನು ಪೂರೈಸಿಕೊಂಡು ಹೊರಗೆ ಬಂದಾಗ ಮೂಡಣದ ಒಡಲಲ್ಲಿ ಕೆಂಪೇರಿ ಚುಮುಚುಮು ಬೆಳಕು ಒಡಮೂಡಿತು.
“ಏನಾಗಿದೆ.. ಎತ್ತಿಗೆ..?”
“ಹೆಗಲು ಕೀವಾಗಿದೆ ಅಜ್ಜಾ…”
ಹೆಬ್ಬೇವಿನ ಮರದ ತೊಗಟೆಯನ್ನು ಸ್ವರ್ಣಗಡ್ಡೆಗೆ ಸೇರಿಸಿ, ಮೇಲೊಂದು ಹೆಸರಿಲ್ಲದ ಬೇರಿನ ತುಂಡೊಂದನ್ನು ಆ ರೈತನ ಕೈಗೆ ಕೊಟ್ಟು, ಅದನ್ನು ಹದವಾಗಿ ಅರೆದು ತಾ ಎಂದು ಹೇಳಿ, ಕೆರೆಯ ನಡುವಿರುವ ಜೀವಸಮಾಧಿಯತ್ತ ಹೊರಟರು. ಆ ಎತ್ತು ತನ್ನ ನಾಲಿಗೆಗೆ ಸಿಕ್ಕದ ನೋವನ್ನು ನೆಕ್ಕಿಕೊಳ್ಳುವುದಕ್ಕಾಗಿ ಗೋಣನ್ನು ಹಿಂದಕ್ಕೆ ಚಾಚಿ, ಕೈಕಾಲೊಳಗೆ ಓಡಾಡುವ ತೊಣಸಿಗಳನ್ನ ಓಡಿಸಲು ಬಾಲ ಜಾಡಿಸುತ್ತಾ, ಮೈ ಅದರಿಸುತ್ತಾ ತನ್ನ ಸುತ್ತ ತಾನೇ ತಿರುಗುತ್ತಿತ್ತು.

ಶಿವಯೋಗಿ ಬಂದು ಎತ್ತಿನ ಎಡತೊಡೆಯ ಚಪ್ಪೆಯ ಮೇಲೆ ಕೈಯಾಡಿಸುತ್ತಾ, ಅದರ ಇನಿಯ ತುದಿಯಲ್ಲಿ ತುರಿಸುತ್ತಾ ಹೆಗಲ ಮೇಲೆ ಗಿಜಿಗುಡುತ್ತಿದ್ದ ಕೀವನ್ನು ಕಂಡು ಮಮ್ಮಲ ಮರುಗಿದರು. ಈ ರೈತನು ಗಾಯ ಮಾಗಿದ ಮೇಲೆ ಹೊಡೆದುಕೊಂಡು ಬಂದಿದ್ದಾನಲ್ಲ ಎಂದು ಕೇಳಿ ವಿಚಾರಿಸಲಾಗಿ ಅವನು ತನ್ನದೇ ನೂರಾರು ಬದುಕಿನ ಒತ್ತಡಗಳನ್ನು ಹೇಳಿಕೊಂಡು, ಮನೆಯ ಎತ್ತನ್ನು ಉಳಿಸಿ ಕೊಡಿರೆಂದು ಅಂಗಲಾಚಿದನು.

“ಬೊಮ್ಮಣ್ಣ.. ಬಾ ಇಲ್ಲಿ. ಈ ಚಿಮ್ಮಟಿಗೆಯಿಂದ ಕಾಣುವ ಹುಳಗಳನ್ನು ಹೊರಗೆ ತೆಗೆದು ಈ ಔಷಧವನ್ನು ಗಾಯಕ್ಕೆ ಕಟ್ಟು. ಇದು ಆರಂಭವಾದಾಗ ಬಂದಿದ್ದರೆ ಮಾಯುತ್ತಿತ್ತು. ಈಗ ಹೊತ್ತು ಮೀರಿ ಹೋಗಿದೆ.. ಆದರೂ ಹೆಗಲ ನೋವು ವಾಸಿ ಮಾಡಲು ಪ್ರಯತ್ನಿಸೋಣ. ಮೂಕ ಜೀವ ಹೇಗೆ ಹೇಳೀತು ನೋವಿನ ಸಂಕಟ?”  ಎಂದೆನ್ನುತ್ತಾ ಎತ್ತಿನ ಮುಂಗಾಲಗಳ ಮೇಲೆ ಹಗ್ಗದ ಮುಲಕೊಂದನ್ನು ಹಾಕಿ ಅಡ್ಡಗೆಡವಿ ಬೊಮ್ಮಣ್ಣನ ಕೈಗೆ ಚಿಮ್ಮಟಿಗೆಯನ್ನು ಕೊಟ್ಟರು.

ಅದೇ ಹೊತ್ತಿಗೆ ಸರಿಯಾಗಿ ಕಲ್ಯಾಣದ ದಾರಿಯಿಂದ ಅಮುಗಿದೇವನು ಅವಸರವಾಗಿ ಓಡೋಡಿ ಬರುತ್ತಿರುವುದು ಕಾಣಿಸಿತು. ಅವನು ಅಮುಗಿಯೇ ಹೌದಾದರೂ ಯಾಕೋ ಮುಂಜಾಲೆಯಿಂದ ಆ ಎತ್ತಿನ ಹೆಗಲ ಮೇಲಿನ ಕೀವು ಕಂಡಾಗಿನಿಂದ ಮನಸ್ಸು ಪ್ರಕ್ಷುಬ್ಧವಾಗಿದ್ದ ಸಿದ್ಧರಾಮರು ಅವನನ್ನು ಕಾಣುವ ಮೊದಲು ಪೂಜೆ ಮುಗಿಸಿದರಾಯ್ತೆಂದು ಒಳಗೆ ಹೊರಟಿದ್ದರು. ಆದರೆ ಅಮುಗಿಯ ಆ ವೇಗದ ನಡೆ ಮತ್ತು ಎತ್ತಿನ ಹೆಗಲ ಕೀವೊಳಗೆ ಚಲ್ಲಾಟವಾಡುತ್ತಿದ್ದ ಹುಳಗಳು ಅವರನ್ನೊಂದು ಚಣ ತಡೆದು ನಿಲ್ಲಿಸಿದವು.
“ಅಯ್ಯಾ ಶರಣು ಶರಣಾರ್ಥಿ…”
“ಶರಣು ಶರಣಾರ್ಥಿ.. ಅಮುಗಿ. ಯಾಕಿಷ್ಟು ಧಾವಂತದಿಂದ ಓಡಿ ಬಂದಿರುವೆ, ಏನಾಯ್ತು..?”
“ಏನಾಯ್ತೆಂದು ಹೇಳಲು ಬಾಯಿ ಹೊರಡುತ್ತಿಲ್ಲ ಶಿವಯೋಗಿ. ಮೂರು ದಿನದ ಮೊದಲೇ ಹೊರಟು ಊರಿಗೆ ಬರಬೇಕೆಂದು ಯೋಚಿಸಿದ್ದೆ. ಆದರೆ ಶರಣರೆಲ್ಲ ಸೇರಿ ಲಿಂಗತತ್ವದ ಸಮಾಜವನ್ನು ಕಟ್ಟಲು ಕುಲದ ಕಟ್ಟನ್ನು ಮೀರಿದ್ದೊಂದು ಮದುವೆ ಮಾಡುವ ಯೋಜನೆ ಹಾಕಿದ್ದರು. ಹಾಗಾಗಿ ಅಲ್ಲಿಯೇ ನಿಂತೆನಾದ್ದರಿಂದ ಎಲ್ಲವನ್ನೂ ಇದೇ ಕಣ್ಣಿಂದ ನೋಡುವಂತಾಯ್ತು ಅಯ್ಯಾ…”
“ಏನಾಯ್ತು.. ಬಿಡಿಸಿ ಹೇಳು ಅಮುಗಿ, ಮನಸ್ಸು ಘಾಸಿಗೊಂಡಿದೆ ಈ ದಿನದ ಬೆಳಿಗ್ಗೆ. ಅದನ್ನ ಮತ್ತಷ್ಟು ಕೆಣಕಬೇಡ.”
“ಅಪ್ಪಾ.. ಕಲ್ಯಾಣವೆಂಬ ಪ್ರಣತೆ ಒಡೆದು ಹೋಗುತ್ತಿದೆ. ಅಳಿದುಳಿದ ಜೀವಗಳ ಜಂಘಾಬಲವೇ ಉಡುಗಿ ಹೋಗಿದೆ. ಊರು ಕೆಟ್ಟು ಸೂರೆಯಾಡುತ್ತಿದ್ದಾರೆ…”
“ಏನು ನಡೆಯಿತು ಅಮುಗಿದೇವ…”
“ಕಲ್ಯಾಣದಲ್ಲಿ ರಕ್ತದ ಓಕುಳಿಯಾಡುತ್ತಿದ್ದಾರೆ ಸೋವಿದೇವನ ಸೈನಿಕರು.”
“ಏನು ಸೋವಿದೇವನೇ..?”
“ಹೌದು ನನ್ನಪ್ಪಾ.. ಅಲ್ಲೋಲಕಲ್ಲೋಲವೇ ಆಗಿ ಹೋಯ್ತು. ತಿಂಗೊಳೊಪ್ಪತ್ತಿನಿಂದ ಕಲ್ಯಾಣದ ಅಂತರಂಗ ಧಗಧಗಿಸುತ್ತಿತ್ತು. ಅಣ್ಣನವರನ್ನು ಅನುಮಾನಿಸುವ ಮೂಲಕ ಸೋವಿದೇವನ ಪ್ರವೇಶ ಆದದ್ದೇ ತಡ. ಬಸವಣ್ಣನವರು ಪ್ರಧಾನರ ಪಟ್ಟದ ಕುರುಹನ್ನ ಬಿಜ್ಜಳರಾಜರ ಕೈಗೊಪ್ಪಿಸುವ ಬಗ್ಗೆ ಚಿಂತಿಸತೊಡಗಿದ್ದರು. ಅದೇ ಹೊತ್ತಿಗೆ ಸರಿಯಾಗಿ ಶರಣರು ನೀಲ-ಶೀಲರ ಮದುವೆಯನ್ನು ಮಾಡಿಸಿದರು.  ಜಡಗೊಂಡ ಬದುಕನ್ನು ಚೈತನ್ಯಗೊಳಿಸಿ ಶರಣರೊಳಗೆ ಉತ್ಸಾಹ ತುಂಬಿತ್ತು ಆ ಮದುವೆ. ಆದರೆ ಅದೇ ನೆಪ ಮಾಡಿಕೊಂಡ ಕಿಡಿಗೇಡಿಗಳು ಇಡೀ ಕಲ್ಯಾಣವನ್ನೇ ಸುಡುತ್ತಿದ್ದಾರೆ. ನೀವು ಈಗಿಂದೀಗಲೇ ಕಲ್ಯಾಣಕ್ಕೆ ಹೊರಡಬೇಕು ಅಪ್ಪಾ.. ಚನ್ನಬಸವಣ್ಣ ದಣ್ಣಾಯಕರು ಒಂಟಿಯಾಗಿದ್ದಾರೆ.”
“ಅಣ್ಣ ಬಸವಣ್ಣ ಎಲ್ಲಿದ್ದಾರೆ?”
“ಅವರು ಕಪ್ಪಡಿ ಸಂಗಮಕ್ಕೆ ಹೋಗಿದ್ದಾರೆ.”
ಅಮುಗಿದೇವ ಅವಸರದಲ್ಲಿ  ನಡೆದ ವೃತ್ತಾಂತವನ್ನೆಲ್ಲ ಸವಿಸ್ತಾರವಾಗಿ ಹೇಳಿದಾಗ ಶಿವಯೋಗಿಯ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವೇ ಎದ್ದಿತ್ತು. ಎತ್ತಿನ ಹೆಗಲ ಕೀವಲ್ಲಿ ಹುಳಗಳನ್ನು ಹೆಕ್ಕಿ ತೆಗೆಯುತ್ತಿದ್ದ ಬೊಮ್ಮಣ್ಣ ಸುದ್ದಿಯನ್ನು ಕೇಳಿ ಆಘಾತಗೊಂಡು, ಚಿಮ್ಮಟಿಗೆಯನ್ನು ಹೇಗೆ ಹಿಡಿದಿದ್ದನೋ ಹಾಗೆಯೇ ಎದ್ದು ನಿಂತ.
“ಬೊಮ್ಮಣ್ಣ.. ಬಿಡಬೇಡ ಕಾಯಕವನ್ನು. ಆ ಹುಳುಗಳನ್ನು ಜೀವಸಹಿತ ಹೊರಗೆ ತೆಗೆದರೆ ಮಾತ್ರ ಔಷಧಿ ವಾಸಿ ಮಾಡುತ್ತದೆ. ಹಿಡಿದ ಕೆಲಸವನ್ನು ಬಿಡಬೇಡ ಕಾಯಕವನ್ನು ಮುಂದುವರೆಸು. ನಾನು ಕಲ್ಯಾಣಕ್ಕೆ ಹೋಗಿ ಶರಣರನ್ನು ಕಂಡು ಬರುತ್ತೇನೆ. ಶರಣರು ಮರಣಕ್ಕಂಜುವರಲ್ಲ” ಎಂಬ ಬಸವಣ್ಣನವರ ಮಾತೊಂದನ್ನು ನೆನಪಿಸಿಕೊಂಡ ಶಿವಯೋಗಿಗಳು ಸಣ್ಣದೊಂದು ಶಿಳ್ಳೆ ಹಾಕಿದಾಗ ಅದೆಲ್ಲಿತ್ತೋ ಕುದುರೆ ಓಡೋಡಿ ಬಂದಿತು. ಬಸವಾ ಬಸವಾ ಎಂದೆನ್ನುತ್ತಾ ಹೇಗಿದ್ದರೋ ಹಾಗೆಯೇ ಸಿದ್ಧರಾಮ ಶಿವಯೋಗಿ ಕಲ್ಯಾಣದತ್ತ ದೌಡಾಯಿಸಿದರು.

(ಮುಂದುವರೆಯುವುದು)

Previous post ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
Next post ಮನುಷ್ಯತ್ವ ಮರೆಯಬಾರದು
ಮನುಷ್ಯತ್ವ ಮರೆಯಬಾರದು

Related Posts

ಶರಣರ ಚರಿತ್ರೆಯ ಮೇಲೆ ಹೊಸಬೆಳಕು
Share:
Articles

ಶರಣರ ಚರಿತ್ರೆಯ ಮೇಲೆ ಹೊಸಬೆಳಕು

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣದಲ್ಲಿ ಕಂಬದ ಮಾರಿ ತಂದೆ ಎಂದು ಪ್ರಸಿದ್ಧಗೊಂಡ ವಚನಕಾರ ಕದಂಬರ ರಾಜ್ಯದ ಇಂದಿನ ಪೊಂಡ ತಾಲೂಕಿನ ಕಾವಳೆ ಪುಟ್ಟ ಹಳ್ಳಿಯ ಮೀನುಗಾರ. ಬಸವಾದಿ ಶರಣರ ಅನುಭಾವ ಕ್ರಾಂತಿಗೆ...
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
Share:
Articles

ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು

September 5, 2019 ಸ್ಮಶಾನವಾಸಿ
ಆ ರಾತ್ರಿ. ಮಲಗಿದರೂ ನನಗೆ ನಿದ್ದೆ ಹತ್ತಲಿಲ್ಲ. ಕಾರಣವೇನೆಂದರೆ- ಬೌದ್ಧ, ಜೈನ, ಸಿಖ್ಖರು, ಲಿಂಗಾಯತರು, ವೀರಶೈವರು ಎಲ್ಲರೂ ಹಿಂದೂಗಳೇ ಆಗಿದ್ದಾರೆ ಎಂದು ಪೇಜಾವರರು...

Comments 14

  1. deveeramma pavate
    Nov 7, 2019 Reply

    ಕತೆ ಮನೋಜ್ಞವಾಗಿದೆ, ಕತೆಗಾರರು ಸಿದ್ದರಾಮೇಶ್ವರರ ಮನಸ್ಸನ್ನು ಹೊಕ್ಕು ಬರೆದಂತಿದೆ. Wow! Beautiful!!

  2. Rashmi Kundagol
    Nov 7, 2019 Reply

    ಅರೆ! ಇಷ್ಟು ಬೇಗ ಕಲ್ಯಾಣ ಕ್ರಾಂತಿ ನಡೆದುಹೋಯಿತಾ? ಕಲ್ಯಾಣದಲ್ಲಿ ಅವರ ಒಡನಾಟವನ್ನು ಕತೆಗಾರರು ನಿರ್ಲಕ್ಷಿಸಿದಂತೆ ಭಾಸವಾಯಿತು. ಶರಣರ ಒಡನಾಟವನ್ನು ಅದ್ಭುತವಾಗಿ ಚಿತ್ರಿಸಬಹುದಿತ್ತು.

  3. Lingaraj Patil
    Nov 8, 2019 Reply

    ಮನದ ಹಕ್ಕಿಯ ಮಾತು ಮನಮೋಹಕವಾಗಿದೆ. ಸಿದ್ದರಾಮೇಶ್ವರರಿಗೆ ರಾಜರ ಸಂಪರ್ಕವಿತ್ತು ಎನ್ನುವುದು ನನಗೆ ಗೊತ್ತಿತ್ತು, ಆ ಒಡನಾಟದ ಚಿತ್ರಣವನ್ನು ನೀವು ಉಲ್ಲೇಖಿಸಿದ್ದು ಸಾಂದರ್ಭಿಕವಾಗಿದೆ.

  4. ಗಿರೀಶ್ ಎಸ್
    Nov 8, 2019 Reply

    ಬಸವಣ್ಣ ಮತ್ತು ಶರಣರ ವಿರುದ್ದ ಪಿತೂರಿಗಳು ನಡೆಯುತ್ತಿರುವ ಮಾಹಿತಿ ಕಿವಿಗೆ ಬಿದ್ದರೂ ಸಿದ್ದರಾಮಯ್ಯನವರು ಕಲ್ಯಾಣಕ್ಕೆ ಹೋಗಿ ಯಾಕೆ ಎಚ್ಚರಿಸಲಿಲ್ಲ….. ಹಾಗಾಗಿದ್ದರೆ ಕಗ್ಗೊಲೆಯಿಂದ ಕಲ್ಯಾಣವನ್ನು ರಕ್ಷಿಸಬಹುದಿತ್ತಲ್ಲವೇ?…… ಸಿದ್ದರಾಮೇಶ್ವರರು ಯಾಕೆ ಹಾಗೆ ಸುಮ್ಮನಿದ್ದರು, ಅದೂ ರಾಜಮನೆತನಗಳ ಅಧಿಕಾರಶಾಹಿ ಏನು ಮಾಡಲೂ ಹೇಸದೆಂಬ ಲೋಕ ಸತ್ಯ ತಿಳಿದೂ ನಿರ್ಲಕ್ಷಿಸಿದ್ದೇಕೆ?

  5. Veeresh S, Belgavi
    Nov 9, 2019 Reply

    ಕಲ್ಯಾಣದ ಅಂತರಂಗ ಧಗಧಗಿಸುವ ಸುದ್ದಿ ಅಪ್ಪಳಿಸಿದ ಚಿತ್ರಣ ಹೃದಯ ತಟ್ಟುತ್ತದೆ.

  6. Nagendrappa
    Nov 9, 2019 Reply

    ಶಿವಯೋಗಿ ಸಿದ್ದರಾಮೇಶ್ವರರ ಈ ಕತೆಯನ್ನು ಕಾರಂಬರಿಯಾಗಿ ಪರಿವರ್ತಿಸಬೇಕೆಂದು ಮಹಾದೇವ ಹಡಪದ ಶರಣರಲ್ಲಿ ನನ್ನ ಕಲಕಳಿಯ ಮನವಿ.

  7. Akshay B.R
    Nov 10, 2019 Reply

    ಶರಣರಾದ ಸಿದ್ದರಾಮರ ವಚನಾಂಕಿತಗಳು ಕಪಿಲಸಿದ್ದ ಮಲ್ಲಿಕಾರ್ಜುನ ಮತ್ತು ಯೋಗಿನಾಥ ಎಂದು ಹೇಳುತ್ತಾರೆ. ಈ ಹೆಸರುಗಳ ಹಿನ್ನೆಲೆಯನ್ನು ಕತೆಯಲ್ಲಿ ಸಾಂದರ್ಭಿಕವಾಗಿ ಹೇಳುತ್ತಿರೆನೋ ಎಂದು ಕಾಯುತ್ತಿದ್ದೇನೆ.

  8. Giridhar Tonde
    Nov 11, 2019 Reply

    ಕಲ್ಯಾಣದೊಳಗಿನ ಬಸವಣ್ಣನನ್ನು, ಬಸವಣ್ಣನೊಳಗಿನ ಕಲ್ಯಾಣವನ್ನೂ ಕಂಡ ಸಿದ್ದರಾಮೇಶ್ವರರಿಗೆ, ಅದನ್ನು ಕತೆಯಾಗಿಸಿದ ಮಹಾದೇವ ಶರಣರಿಗೂ ನಮೋನಮಃ.

  9. Pro Mallikarjuna
    Nov 13, 2019 Reply

    ಶರಣ ಶಿವಯೋಗಿ ಸಿದ್ದರಾಮೇಶ್ವರರ ಕತೆ ಓದುತ್ತಾ ಓದುತ್ತಾ ಕಲ್ಯಾಣಕ್ಕೂ ಸೊನ್ನಲಿಗೆಗೂ ಪ್ರಯಾಣ ಬೆಳೆಸಿದಂತಾಯಿತು.

  10. Kamala l. akki
    Nov 14, 2019 Reply

    ಕತೆಗಳಲ್ಲಿ ಶರಣರ ಸಾಧನೆ ಮತ್ತು ಜೀವನವನ್ನು ತೆರೆದಿಡುತ್ತಿರುವ ಶರಣ ಕಥಾಲೋಕ ಬಹಳ ಆಸಕ್ತಿದಾಯಕವಾಗಿದೆ. ಬೋಧಿಸತ್ವನ ಕತೆಗಳಂತೆ ಮಕ್ಕಳಿಗೆ ಶರಣರ ಕತೆ ಹೇಳಲು ಸಹಾಯಕವಾಗುತ್ತದೆ. ನಾನು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೇಳಲು ಇಲ್ಲಿನ ಕತೆಗಳನ್ನು ಬಳಸಿಕೊಳ್ಳುತ್ತೇನೆ.

  11. Prabhakar Banavar
    Nov 17, 2019 Reply

    ಎತ್ತಿನ ಹೆಗಲ ಕೀವಿನ ನೋವು ಹೃದಯ ವಿದ್ರಾವಕವಾಗಿದೆ. ಕತೆಗಾರರು ಇದನ್ನು ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆಯೇ?

  12. Mariswamy Gowdar
    Nov 19, 2019 Reply

    ಸುಂದರ, ಮನಸೂರೆಗೊಳ್ಳುವ ಕತೆ. ಮನದ ಹಕ್ಕಿಯ ಮೂಲಕ ಸಿದ್ದರಾಮಯ್ಯನವರ ಒಳಮನಸ್ಸನ್ನು ಹೊಕ್ಕಂತಾಯಿತು.

  13. jayaprakash hadimani
    Nov 22, 2019 Reply

    ಕಲ್ಯಾಣಕ್ಕೊಂದೇ ಕಣ್ಣು, ಒಂದೇ ಮುಖ, ಒಂದೇ ಭಾವ….. ಬಗೆದಷ್ಟು ಅರ್ಥಗಳನ್ನು ಕೊಡುವ ಸುಂದರ, ಅತಿ ಸುಂದರ ಕತೆ ಕೊಡುತ್ತಿರುವ ಬಯಲುಗೆ ನನ್ನ ವಂದನೆಗಳು. ಮೋಡಿ ಮಾಡುವ ಕತೆಗಾರರಿಗೆ ಶರಣುಗಳು.

  14. ಜ್ಞಾನೇಶ ಜೇವರಗಿ
    Nov 26, 2019 Reply

    ಸಿದ್ದರಾಮೇಶ್ವರರು ಕೇವಲ ಒಬ್ಬ ತಪಸ್ವಿ ಎಂದು ತಿಳಿದಿದ್ದೆ, ಅವರೊಬ್ಬ ವೈದ್ಯ, ಅಷ್ಟೇ ಅಲ್ಲ ರಾಜಮನೆತನಗಳೊಂದಿಗೆ ಸಂಪರ್ಕವಿದ್ದ ಪ್ರಭಾವಶಾಲಿ ವ್ಯಕ್ತಿಯಾಗಿದ್ದರೆಂಬುದು ಗೊತ್ತಿರಲಿಲ್ಲ. ಕತೆಯ ಜೊತೆಗೆ 12ನೆ ಶತಮಾನದಲ್ಲಿ ವಿಹರಿಸುವಂತಾಗುತ್ತದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
Copyright © 2019 Bayalu