Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಳಗನರಿವ ಬೆಡಗು
Share:
Articles September 10, 2022 ಡಾ. ಚಂದ್ರಶೇಖರ ನಂಗಲಿ

ಒಳಗನರಿವ ಬೆಡಗು

ಕೊಳಗದ ತೋರಿಹ ಕೆಚ್ಚಲು

ಮಾನದ ತೋರಿಹ ಆವಿಂಗೆ
ಕೊಳಗದ ತೋರಿಹ ಕೆಚ್ಚಲು!
ತಾಳಮರದುದ್ದವೆರಡು ಕೋಡು ನೋಡಾ!
ಅದನರಸ ಹೋಗಿ ಆರುದಿನ!
ಅದು ಕೆಟ್ಟು ಮೂರು ದಿನ!
ಅಘಟಿತಘಟಿತ ಗುಹೇಶ್ವರ!
ಅರಸುವ ಬಾರೈ ತಲೆಹೊಲದಲ್ಲಿ! (LB: 30)

ಆದಿಮ ಸಮತಾವಾದ (=ಪ್ರಿಮಿಟಿವ್ ಕಮ್ಯೂನಿಸಮ್) ಸಮಾಜದಲ್ಲಿ ‘ಆಸೆ’ಗೆ ಎಡೆಯಿಲ್ಲ! ಇಂದಿಗೆ ನಾಳೆಗೆ ಎಂದು ಕೂಡಿಡುವ ‘ಸಂಗ್ರಹದಾಹ’ ಆದಿಮಾನವರಲ್ಲಿ ಅಸ್ತಿತ್ವದಲ್ಲಿರಲಿಲ್ಲ! ಖಾಸಗಿ ಆಸ್ತಿ + ಹಿಡುವಳಿ + ವರ್ಗ ಸ್ವಭಾವ + ಶೋಷಣೆ + ಹಿಂಸೆಗಳು ಆದಿಮ ಸಮಾಜದಲ್ಲಿ ಇರಲೇ ಇಲ್ಲ! ಈ ಆದಿಮ ಸಮಾಜದ ಶೋಷಣಾರಹಿತ ಸಾಮಾಜಿಕ ವ್ಯವಸ್ಥೆ ಇಂದಿನ ಬುಡಕಟ್ಟುಗಳ – Tribal Society – ಗಣಸಮಾಜದಲ್ಲಿ ಪ್ರಪಂಚದಾದ್ಯಂತ ಈಗಲೂ ಇವೆ. ಗಣಸಮಾಜದಲ್ಲಿ ಉತ್ಪಾದನೆ (=ಕಾಯಕ) ಮತ್ತು ವಿತರಣೆ (=ದಾಸೋಹ) ಗಳ ಮಧ್ಯೆ ಅಂತರವೇ ಇರುವುದಿಲ್ಲ. ಉತ್ಪಾದನೆಗೆ ಅಂಟಿಕೊಂಡೇ ವಿತರಣೆಯೂ ನಡೆದುಹೋಗುತ್ತದೆ. ಶರಣರು ಕೂಡಾ ಕಾಯಕದ ಬೆನ್ನಿಗಂಟಿಯೇ ದಾಸೋಹ ನಡೆಸುವುದರಿಂದ, ಇಲ್ಲಿ ಕೂಡಾ ಇಂದಿಗೆ ನಾಳೆಗೆ ಎಂದು ಕೂಡಿಡುವ ಸಂಗ್ರಹದಾಹ ಇಲ್ಲ! ಗಣಸಮಾಜದ ಸಾಮುದಾಯಿಕ ಮನೋಧರ್ಮವನ್ನು ಶರಣರು ಆದರ್ಶವಾಗಿ ಸ್ವೀಕರಿಸಿದರು. ಆದ್ದರಿಂದಲೇ ತಮ್ಮನ್ನು ‘ಮರ್ತ್ಯಲೋಕದ ಗಣಂಗಳು’ ಎಂದು ಕರೆದುಕೊಂಡಿದ್ದಾರೆ.
(1) ಭವಿಗೆ ವಿರುದ್ಧವಾಗಿ ಗಣಪದವಿಯ ಭಕ್ತಿ = ತನುದಾಸೋಹ
(2) ಕುಲಸಂತಾನಕ್ಕೆ ವಿರುದ್ಧವಾಗಿ ಗಣಸಂತಾನ = ಮನದಾಸೋಹ
(3) ಏಕಸ್ವಾಮ್ಯಕ್ಕೆ ವಿರುದ್ಧವಾಗಿ ಗಣಸ್ವಾಮ್ಯ = ಧನದಾಸೋಹ [ ಇದೇ ತ್ರಿವಿಧ ದಾಸೋಹ ]
ತಮ್ಮನ್ನು ‘ಗಣಂಗಳು’ ಎಂದು ಕರೆದುಕೊಂಡ ಶರಣರು, ವಚನಗಳನ್ನು ‘ಗಣಭಾಷಿತಗಳು’ ಎಂದೂ, ಶರಣರ ಅನುಭಾವಸಂಗವನ್ನು ‘ಗಣಮೇಳಾಪ’ ಎಂದೂ ಕರೆದಿದ್ದಾರೆ. ಶರಣರಿಗೆ ಕೇಡು ( EVIL ) ಯಾವುದೆಂದರೆ ಮಾನವ ಮನಸ್ಸಿನ ‘ಆಸೆ’ ! ಬುದ್ಧಮಾರ್ಗವು ಕೂಡಾ ‘ಆಸೆಯೇ ದುಃಖಕ್ಕೆ ಮೂಲ’ ಎಂದು ಗುರುತಿಸಿದೆ. ಇದು ಬುದ್ಧತತ್ವಕ್ಕೂ ಶರಣ ತತ್ವಕ್ಕೂ ಇರುವ ಸಮಾನಧರ್ಮ! ಆಸೆಯ ವಿರಾಟ್ ಸ್ವರೂಪದ ನಿರೂಪಣೆಗಳನ್ನಾಗಿ ವಚನಗಳನ್ನು ಪರಿಭಾವಿಸಬೇಕು. ಪ್ರಸ್ತುತ ಅಲ್ಲಮಪ್ರಭುವಿನ ಮೇಲ್ಕಂಡ ವಚನವು ಮಾನವ ಮನಸ್ಸಿನ ಆಸೆಯ ದುರಂತಕಥನದ ಪರಿಣಾಮಕಾರಿ ಚಿತ್ರಣವಾಗಿದೆ.

ಅಲ್ಲಮಪ್ರಭು ಕಾಲದಲ್ಲಿ ಈಗಿನಂತೆ ಹೈನೋದ್ಯಮದ ಬೃಹತ್ ಕೈಗಾರಿಕೆ ಇರಲಿಲ್ಲ! ಹಸುವಿನ ಆಕಾರಕ್ಕಿಂತಲೂ ಮಿಗಿಲಾದ ಗಾತ್ರವನ್ನು ಹೊಂದಿರುವ ಕೆಚ್ಚಲುಭಾರದ ಜರ್ಮನ್ ಜೆರ್ಸಿಗಳಂತೂ ಇರಲೇ ಇಲ್ಲ! ಆದರೆ, ಅಲ್ಲಮಪ್ರಭು ಇದರ ಮುಂಗಾಣ್ಕೆ ಹನ್ನೆರಡನೇ ಶತಮಾನದಲ್ಲೇ ಕೊಟ್ಟಿದ್ದಾರೆ:
“ಮಾನದ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು” – ಎಂಬ ರೂಪಕ ಮಾನವಮನಸ್ಸಿನ ಆಸೆಯ ಚಿತ್ರಣ ಆಗಿರುವಂತೆಯೇ, ಬೃಹತ್ ಉತ್ಪಾದನೆಯ ಔದ್ಯಮಿಕ ಕೈಗಾರಿಕೆಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯ ವಿರಾಟ್ ಸ್ವರೂಪದ ದುರಾಸೆಯ ಪ್ರತೀಕವೂ ಆಗಿದೆ. ಖಾಸಗಿ ಆಸ್ತಿ + ಕುಟುಂಬ + ರಾಜ್ಯಗಳ ಉಗಮ / ವಿಕಾಸದ ಜೊತೆಯಲ್ಲೇ ಹುಟ್ಟುವ ಅಹಂಕಾರ + ಮಮಕಾರಗಳೇ ಎರಡು ಕೊಂಬುಗಳಾಗಿ ಪ್ರಕಟವಾಗುತ್ತವೆ:
“ತಾಳಮರದುದ್ದವೆರಡು ಕೋಡು ನೋಡಾ”
ಇದರ ಅನ್ವೇಷಣೆಯ ದಾಹ ಮತ್ತು ಭಂಗದಲ್ಲೇ ನಮ್ಮ ಬದುಕು ನಾಶವಾಗುತ್ತದೆ:
“ಅದನರಸ ಹೋಗಿ ಆರುದಿನ!
ಅದು ಕೆಟ್ಟು ಮೂರು ದಿನ!”………
ಇದನ್ನರಿತು ವಿಚಾರಬುದ್ಧಿಯ ನಿರಂಕುಶ ಮತಿಯಿಂದ ನಡೆದುಕೊಳ್ಳಬೇಕು:
“ಅಘಟಿತಘಟಿತ ಗುಹೇಶ್ವರ!
ಅರಸುವ ಬಾರೈ ತಲೆಹೊಲದಲ್ಲಿ”
ಆಸೆಯ ನಿರಾಕರಣೆಯನ್ನು ಜರ್ಮನ್ ಜೆರ್ಸಿಹಸುವಿನ ರೂಪಕದಲ್ಲಿ ಹೇಳಿರುವ ಅಲ್ಲಮಪ್ರಭುವಿನ ಮುಂಗಾಣ್ಕೆ ಮತ್ತು ಆತ್ಮಶ್ರೀ ಸುಸಂಪನ್ನವಾದುದು!

~~~~~~~~~~~~~~~~~~~~~

ಮಾಯೆಯ ಕೈಯಲ್ಲಿ ಓಲೆ ಕಂಠವ ಕೊಟ್ಟರೆ…

ಮಾಯದ ಕೈಯಲ್ಲಿ ಓಲೆ ಕಂಠವ ಕೊಟ್ಟರೆ
ಲಗುನ – ವಿಗುನವ ಬರೆಯಿತ್ತು ನೋಡಾ!
ಅರಗಿನಪುತ್ಥಳಿಗೆ ಉರಿಯಸೀರೆಯನುಡಿಸಿದರೆ
ಅದು ಸಿರಿಯ ಸಿಂಗಾರವಾಯಿತ್ತು ನೋಡಾ!
ಅಂಬರದೊಳಗಾಡುವ ಗಿಳಿ
ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದ ಅಗಲಿತ್ತು ನೋಡಾ – ಗುಹೇಶ್ವರ॥ (LB: 19)

ನನ್ನ ಒಳಗನ್ನು ನಾನೇ ಅರಿತುಕೊಂಡು ನನ್ನ ಭಾಗ್ಯದ ಬರಹವನ್ನು ನಾನೇ ಬರೆದುಕೊಳ್ಳಬೇಕು. ಇದನ್ನು ಮರೆತು ನನ್ನೊಳಗಿನ ಮಾಯೆಯ ಕೈಯಲ್ಲಿ ಓಲೆ ಕಂಠ (=ತಾಳಪತ್ರ + ಕಂಠಲೇಖನಿ) ಕೊಟ್ಟರೆ, ಅದು ಲಗ್ನಕ್ಕೆ (ಸಂಲಗ್ನತೆಗೆ = Union with Nature) ಬದಲು ವಿಘ್ನವಿನಾಶವನ್ನೇ (=Distruction) ಬರೆಯುವುದು, ನೋಡಿರಿ! ರೂಪಾದ ಜಗಕ್ಕೆ ಪ್ರಳಯ ತಪ್ಪದಾದ್ದರಿಂದ ಈ ಜಗದಲ್ಲಿ ರೂಪುವೆತ್ತ ಜೀವನಶ್ವರತೆಯ ಅರಗಿನ ಪುತ್ಥಳಿಗಳು ಉರಿಯಸೀರೆಯನ್ನು (=ಜ್ಞಾನದ ಬಟ್ಟೆ) ಉಟ್ಟಿದ್ದೇ ಆದರೆ, ಅದು ಭವನಾಶಕ್ಕೆ ಕಾರಣವಾಗಿ ಜೀವಸಿರಿಗೆ ಸಿಂಗಾರ (=ಶೃಂಗಾರ) ಪ್ರಾಯವಾಗುವುದು ನೋಡಿರಿ! ಅಂಬರ ಎಂದರೆ – ದೇಹ, ಬಟ್ಟೆ, ಆಕಾಶ ಎಂಬರ್ಥಗಳಿವೆ. ಈ ಮೂರೂ ಅರ್ಥಗಳಿಲ್ಲಿ ಸ್ವೀಕಾರಯೋಗ್ಯ! ಅಂಬರದೊಳಗಾಡುವ ಜೀವಗಿಳಿ ಅಸ್ಥಿಪಂಜರದೊಳಗಣ ಮಾಯಾ ಬೆಕ್ಕನ್ನು ನುಂಗಿದ್ದೇ ಆದರೆ, ನಮ್ಮ ಪಾಲಿಗೆ ಆಸೆಯಗಾಳವಾದ ‘ರಂಭೆಯ ತೋಳಿನಿಂದ’ ಅಗಲುವುದು, ದೂರವಾಗುವುದು ಖಂಡಿತಾ ನೋಡಿರಿ – ಗುಹೇಶ್ವರ! ಭವಲೋಕದಲ್ಲಿನ ಸಕಲ ಆಕರ್ಷಣೆಗಳ ಕೇಂದ್ರವನ್ನು ಇಲ್ಲಿ ‘ರಂಭೆಯ ತೋಳು’ ಎಂದು ಕರೆಯಲಾಗಿದೆ.

~~~~~~~~~~~~~~~~~~~~~

ಕೋಣನ ಕೊಂಬಿನ ತುದಿಯಲ್ಲಿ…

ಕೋಣನ ಕೊಂಬಿನ ತುದಿಯಲ್ಲಿ
ಏಳುನೂರೆಪ್ಪತ್ತು ಸೇದೆಯ ಭಾವಿ.
ಭಾವಿಯೊಳಗೊಂದು ಬಗರಿಗೆ.
ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯ!
ಆ ಸೂಳೆಯ ಕೊರಳಲ್ಲಿ
ಏಳುನೂರೆಪ್ಪತ್ತಾನೆ ನೇರಿತ್ತ ಕಂಡೆ – ಗುಹೇಶ್ವರ! (LB: 20)

‘ಭಾಷೆಯೆಂಬುದು ಪ್ರಾಣಘಾತಕ’ ಎಂದು ಅಲ್ಲಮಪ್ರಭು ಹೇಳಿದ್ದಾರೆ. ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯ ಉತ್ಪತ್ತಿಯಾದ ಭಾಷೆಯ ಮೂಲಕವೇ ಮಾನವ ಸಮಾಜ ಸಂವಹನ ನಡೆಸುವುದು ಅನಿವಾರ್ಯ ಆಗಿದೆ. ಇದನ್ನು ಸಂಪೂರ್ಣವಾಗಿ ತೊರೆದು ಹೊಸದಾದ ಸಂವಹನ ಮಾಡಲು ಸಾಧ್ಯವಿಲ್ಲ. ಈ ಪ್ರಾಣಘಾತಕ ಭಾಷೆಯ ಮೂಲಕವೇ ನಮ್ಮತನವನ್ನು ನಾವು ಪಡೆಯಬೇಕು. ಸೂಳೆ ಎಂಬ ನುಡಿ ಸ್ತ್ರೀವಾದಿ / ಮಾನವತಾವಾದಿ ದೃಷ್ಟಿಯಿಂದ ಸೂಕ್ತಪದ ಪ್ರಯೋಗವಲ್ಲ! ಆದರೂ ಈ ಮಾನಸಿಕ ಮುಜುಗರ ಮರೆತು ಭವನಾಶದ ಮಾರ್ಗವನ್ನು ಕಂಡುಕೊಳ್ಳಬೇಕು.
‘ಕೋಣನ ಕೊಂಬು’ ಅಹಂಕಾರದ ಪ್ರತೀಕ. ಅಹಂಕಾರದ ತುಟ್ಟತುದಿಯಲ್ಲಿ ನಮ್ಮನ್ನು ಬೀಳಿಸಿಕೊಳ್ಳುವ ‘ಏಳುನೂರೆಪ್ಪತ್ತು’ ಸೇದುವ ಬಾವಿಗಳಿವೆ. ಈ ಒಂದೊಂದು ಬಾವಿಯೊಳಗೆ ಒಂದು ಬಗರಿಗೆ (=ಮರಿ ಬಾವಿ) ಇದೆ. ಈ ಬಗರಿಗೆಯೊಳಗೊಬ್ಬ ಸೂಳೆ (=ಮಾಯೆ) ಇದ್ದಾಳೆ, ನೋಡಯ್ಯ! ಆ ಸೂಳೆಯ ಕೊರಳಲ್ಲಿ ‘ಏಳುನೂರೆಪ್ಪತ್ತು’ ಆನೆ (=ಮದಗಜ) ನೇತಾಡುತ್ತಿದ್ದುದ ಕಂಡಿದ್ದೇನೆ – ಗುಹೇಶ್ವರ! ಮಾನವರ ಮಾಯಾ ವಿಲಾಸದೊಂದಿಗೆ ಅಹಂಕಾರ ಕ್ಷಾಳನದ ವಿಚಾರವನ್ನು ಇಲ್ಲಿ ಹೇಳಲಾಗಿದೆ.

ಅಹಂಕಾರ ಎಂದರೇನು? ಅಹಂಕಾರದಿಂದ ಬಿಡುಗಡೆ ಹೇಗೆ? ಎಂಬುದನ್ನು ಈ ಬೆಡಗಿನ ವಚನ ಲೋಕವಿರುದ್ಧವಾದ ವಿಪರೀತದ ಬೆಳಕಿನ ಭಾಷೆಯಲ್ಲಿ ನಿರೂಪಣೆ ಮಾಡುತ್ತಿದೆ. ಇಲ್ಲಿನ ತಲೆಕೆಳಗಾಗಿರುವ ಚಿತ್ರಣ ನಡೆಗೆಟ್ಟ ನಡೆ ಮತ್ತು ನುಡಿಗೆಟ್ಟ ನುಡಿಯಾಗಿದೆ. ‘ಏಳುನೂರೆಪ್ಪತ್ತು’ ಎಂಬ ಪದಪ್ರಯೋಗದ ಔಚಿತ್ಯವೇನು? ಎಂದು ವಿಚಾರ ಮಾಡಿದರೆ, “ಅನಾದಿಯಲ್ಲಿ ಬಸವಣ್ಣನು ಏಳುನೂರೆಪ್ಪತ್ತು ಅಮರ ಗಣಂಗಳು ಸಹಿತ ಮರ್ತ್ಯಕ್ಕೆ ಬಂದನೊಂದು ಕಾರಣದಲ್ಲಿ” ಎಂಬ ಉಲ್ಲೇಖವಿದೆ. ಈ ದೃಷ್ಟಿಯಿಂದ ಪರಿಭಾವಿಸಿದರೆ ಬಸವಣ್ಣ ಸಹಿತ ಇಡೀ ಮಹಾಮನೆಯ ವಿಡಂಬನ ಪ್ರಹಸನದಂತೆ ಈ ಬೆಡಗಿನ ವಚನವು ಭಾಸವಾಗುವುದು. “ಭಕ್ತರೆಲ್ಲರೂ ಲಂದಣಿಗರು (=ಅಡುಗೆ ಭಟ್ಟರು), ಜಂಗಮವೆಲ್ಲವೂ ಉಪಜೀವಿಗಳು (=ಪರೋಪಜೀವಿಗಳು)” ಎಂಬ ಅಲ್ಲಮರ ವಚನದ ಸಾಲು ನೆನಪಿಗೆ ಬರುವುದು! ಮಹಾಮನೆಯ ಮುಂದೆ ಪ್ರಸಾದದ ಕುಳಿಯಲ್ಲಿ (=ಎಂಜಲೆಲೆ ಬಿಸಾಡುವ ತಿಪ್ಪೇಗುಂಡಿಯಲ್ಲಿ) ಸೂಫಿಸಂತನಾದ ಮರುಳುಶಂಕರ ದೇವನಿದ್ದನೆಂಬುದು ಬಸವಾದಿ ಪ್ರಮಥ ಗಣಂಗಳಿಗೆ ಗೊತ್ತಿರಲಿಲ್ಲ. ಇದನ್ನು ಮನಗಾಣಿಸಿ, ಕಲ್ಯಾಣದ ನಿಜಭಕ್ತಿ ಭಂಡಾರಿಯನ್ನು ಸಂತ ಸಿದ್ಧರಾಮಯ್ಯನವರಿಗೆ ತೋರಿದ ಅಲ್ಲಮಪ್ರಭುಗಳ ಪ್ರಸಂಗವನ್ನು ಇಲ್ಲಿ ಸ್ಮರಿಸಬಹುದು.

~~~~~~~~~~~~~~~~~~~~~

ಅಲ್ಲಮಪ್ರಭು ವಚನತೋರಣ
[ಡಜನ್ ವಚನಗಳ ಗಣಭಾಷಿತ ರತ್ನಮಾಲೆ]

(1) ಅಂಗಸೋಂಕು ಎಂಬುದು ಅಧಮವು
ಉರಸೆಜ್ಜೆ ಎಂಬುದು ಎದೆಯ ಗಂಡ
ಕಕ್ಷ ಎಂಬುದು ಕವುಚಿನ ತವರುಮನೆ
ಅಮಳೋಕ್ಯ ಎಂಬುದು ಬಾಯ ಬಗದಳ
ಮುಖಸೆಜ್ಜೆ ಎಂಬುದು ಪಾಂಡುರೋಗ
ಕರಸ್ಥಲ ಎಂಬುದು ಮರವಡದ ಕುಳಿ
ಉತ್ತಮಾಂಗ ಎಂಬುದು ಸಿಂಬಿಯ ಕಪ್ಪಡ
ಎಲ್ಲರಿಗೆ ಸೋಂಕಾಯಿತ್ತು ಈ ಹಸಿಯ ಗುಂಟದಲ್ಲಿ
ಬಿಡು, ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು, ಗೊಗೇಶ್ವರ॥ (LB: 397)

[=ಇಲ್ಲಿ ವಚನದ ಸಮಾಸವಾಕ್ಯವನ್ನು ವಿಗ್ರಹವಾಕ್ಯ ಮಾಡಲಾಗಿದೆ]
ಪಂಚೇಂದ್ರಿಯಗಳು ಐದು: ಕಿವಿ, ಚರ್ಮ, ಕಣ್ಣು , ನಾಲಿಗೆ, ಮೂಗು. ಇವುಗಳಿಂದ ದಕ್ಕುವ ಅನುಭವಗಳೂ ಐದು: ಶಬ್ದ, ಸ್ಪರ್ಶ, ರೂಪ, ರಸ, ಗಂಧ. ದೇವರು ಅಥವಾ ಲಿಂಗವನ್ನು ಈ ಪಂಚೇಂದ್ರಿಯಮೂಲ ಅನುಭವಗಳ ಮೂಲಕ ಒಳಗೊಳ್ಳಲು ಸಾಧ್ಯವಿಲ್ಲ! ಈ ಸತ್ಯವನ್ನು ಒಪ್ಪಿಕೊಳ್ಳದ ಮಾನವ ಹಗ್ಗವನ್ನು ಹಾವೆಂದು ಭ್ರಾಂತಿಗೆ ಒಳಗಾಗುವಂತೆ, ಭ್ರಾಂತನಾಗಿ ದೇವರನ್ನು ತನ್ನ ಮಟ್ಟಕ್ಕೆ ಇಳಿಸಿಕೊಂಡು ಬಿಡುತ್ತಾನೆ. ಆಗ ತಾನು ಸ್ತುತಿಸುವ (=ಶಬ್ದ), ಮುಟ್ಟುವ (=ಸ್ಪರ್ಶ), ಕಾಣುವ (=ರೂಪ), ರುಚಿಸುವ (=ರಸ), ಆಘ್ರಾಣಿಸುವ (=ಗಂಧ) ಗಳಿಂದ ಅಂದರೆ ಇಂದ್ರಿಯಗಳ ಮೂಲಕ ದೇವರನ್ನು ಕಂಡುಕೊಳ್ಳುತ್ತಾನೆ. ಹೀಗೆ ಇಂದ್ರಿಯಜ್ಞಾನದಿಂದ ತನ್ನ ದೇಹದ ಹಲವು ಭಾಗಗಳಲ್ಲಿ ದೇವರು ಅಥವಾ ಲಿಂಗವನ್ನು ಕಟ್ಟಿಕೊಳ್ಳುತ್ತಾನೆ. ಇದೇ ‘ಅಂಗದ ಮೇಲೆ ಲಿಂಗ ಸಾಹಿತ್ಯ’ ಎನಿಸುತ್ತದೆ.

ಮಾನವ ಶರೀರದ ಅಂಗ, ಎದೆ (=ಉರ), ಕಕ್ಷ (=ಕಂಕುಳು), ಅಮಳೋಕ್ಯ (=ಅಂಗುಳು), ಮುಖ, ಕರಸ್ಥಲ (=ಅಂಗೈ), ಉತ್ತಮಾಂಗ (=ಶಿರಸ್ಸು), ಮೊಣಕಾಲು… ಹೀಗೆ ಎಂಟು ಸ್ಥಾನಗಳಲ್ಲಿ ಲಿಂಗವನ್ನು ಕಟ್ಟಿಕೊಳ್ಳುವ ಬಗೆ
‘ಅಂಗದ ಮೇಲೆ ಲಿಂಗ ಸಾಹಿತ್ಯ’ವಾಗಿದೆ. ಈ ಅಂಗಸಾಹಿತ್ಯವನ್ನು ಅಲ್ಲಮಪ್ರಭು ‘ಅಂಗ ಸೋಂಕು’ ಎಂದು ಕರೆಯುತ್ತಾರೆ. ಇಲ್ಲಿನ ಸೋಂಕು (Infection) ಶಬ್ದಪ್ರಯೋಗವು ಗಮನಾರ್ಹ! ಅಂದರೆ ಸೋಂಕಿಗೊಳಗಾದ ದೇಹ ಮತ್ತು ಮನಸ್ಸುಗಳಿಂದ (Infected body and mind) ದೇವರು ಅಥವಾ ಲಿಂಗವನ್ನು ಮನಗಾಣುವ ಭಂಡತನ ಇಲ್ಲಿದೆ.
ಮಾನವಶರೀರದ – (1) ಅಂಗದ ಸೋಂಕು ಅಧಮ, (2) ಉರಸೆಜ್ಜೆಯು ಎದೆಯ ಗಂಡ, (3) ಕಕ್ಷವು ಕೌಸು ಅಥವಾ ಬೆವರಿನ ವಾಸನೆ, (4) ಅಮಳೋಕ್ಯವು ಶಬ್ದಸ್ಥಾನೀಯಗಳಾದ ಬಾಯಂಗುಳು ತಂಬುಲದ ಉಗುಳು, (5) ಮುಖಸೆಜ್ಜೆಯು ಬಿಳಿಚಿಕೊಳ್ಳುವ ಪಾಂಡುರೋಗ, (6) ಕರಸ್ಥಲವು ಮರವೆಯ ನೆಲೆ, (7) ಉತ್ತಮಾಂಗವು ಭಾರ ಹೊರುವ ಸಿಂಬೆಯ ವಸ್ತ್ರ, [(8) ಮೊಣಕಾಲು = ಕೀಲುನೋವು] ಎಂಬ ಗ್ರಹಿಕೆ ಇಲ್ಲಿದೆ. ಎಂಟು ಸ್ಥಾನಗಳೂ ಎಂಟು ಬಗೆಯ ಸೋಂಕುಗಳು ಎಂಬುದು ಇಲ್ಲಿ ತಿಳಿಯಬೇಕಾದ ಸುವಿಚಾರ. ಉಪಾಧಿಕೆಯಿಂದ ಕೂಡಿದ ದೇವರು ಅಥವಾ ಲಿಂಗವನ್ನು ಪೂಜಿಸುವ ಮಾನವನ ಭ್ರಾಂತಿ ಈ ವಚನದಲ್ಲಿ ಅನಾವರಣಗೊಂಡಿದೆ.

ಸಚರಾಚರ ವಸ್ತುಜಗತ್ತಿನ ವಿಶ್ವಾತ್ಮಕ ಚೈತನ್ಯದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ
‘ಇಂಗಿತಜ್ಞಾನ’ ಅತ್ಯುನ್ನತವಾದುದು. ಬೀಜಾಂಕುರ ನ್ಯಾಯದ ಪ್ರಕಾರ, ಬೀಜ ನಷ್ಟವಾದ ಮೇಲೆ ಅಂಕುರ ತಲೆಯೆತ್ತುವಂತೆ, ‘ಇಂದ್ರಿಯಜ್ಞಾನ’ ನಷ್ಟವಾದ ಮೇಲೆಯೇ ‘ಇಂಗಿತಜ್ಞಾನ’ ತಲೆಯೆತ್ತುವುದು. ಕವಿ ಕುಮಾರವ್ಯಾಸ ಕೂಡಾ ಭೀಷ್ಮವಚನದ ಮೂಲಕ ಇದನ್ನು ಮನಗಾಣಿಸಿದ್ದಾನೆ: ಕಂಗಳಲಿ ಅರಿವರು ಅಧಮರು, ಕರ್ಣಪಥಂಗಳಲಿ ಅರಿವರು ಮಧ್ಯಮರು, ಇಂಗಿತದೊಳು ಅರಿವರು ಮಹಾತ್ಮರು… ಹರಿಯನು ಕಂಗಳಲಿ, ಕಿವಿಗಳಲಿ ಮೇಣ್ ಇಂಗಿತದಲಿ ಅರಿಯದ ಜಡಾತ್ಮನು ಚೈದ್ಯ ನೀನೆಂದ (=ಕರ್ಣಾಟಭಾರತ ಕಥಾಮಂಜರಿ)

ದೇವರೊಡನೆ (1) ನೇತ್ರಮಾರ್ಗದ ಅನುಸಂಧಾನ – ವಿಗ್ರಹಾರಾಧನೆ, ಸಾಕಾರ ಪೂಜೆ – ಅಧಮ! (2) ಕರ್ಣಪಥದ – ಭಜನೆ, ಪಾರಾಯಣ, ಶ್ರವಣ – ಅನುಸಂಧಾನ ಮಧ್ಯಮ! (3) ಇಂಗಿತದ ಅನುಸಂಧಾನ ಉತ್ತಮ ಎಂಬ ಅಭಿಪ್ರಾಯ ಭೀಷ್ಮನದು. ಆದರೆ, ಚೇದಿರಾಜ ಅಥವಾ ಶಿಶುಪಾಲ ಎಂಥ ಕಡುಮೂರ್ಖನೆಂದರೆ, ಶ್ರೀಕೃಷ್ಣನನ್ನು ಕಣ್ಣುಗಳಿಂದ, ಕಿವಿಗಳಿಂದ, ಅಥವಾ ಇಂಗಿತದಿಂದ ಅರಿಯದ ಜಡಾತ್ಮ ಎಂಬ ಅಭಿಪ್ರಾಯವಿಲ್ಲಿದೆ. ಅಲ್ಲಮಪ್ರಭು ಕೂಡಾ ಶಬ್ದ ಸ್ಪರ್ಶ ರೂಪ ರಸ ಗಂಧಗಳಿಂದ ಅರಿಯಲಾಗದ ಘನತರ ವಸ್ತುವನ್ನು ಅಲ್ಪ ಮಾನವರು ‘ಅಂಗಸೋಂಕು’ ಮೂಲಕ ಸೋಕಲಾರದ ಸತ್ಯವನ್ನು ಹೇಳುತ್ತಿದ್ದಾರೆ. ಈ ವಚನವನ್ನೂ ಗಮನಿಸಿ:

(2) ವರ್ಣವಿಲ್ಲದ ಲಿಂಗಕ್ಕೆ ರೂಪಪ್ರತಿಷ್ಠೆಯ ಮಾಡುವರು!
ಪ್ರಳಯವಿಲ್ಲದ ಲಿಂಗಕ್ಕೆ ಪ್ರಾಣಪ್ರತಿಷ್ಠೆಯ ಮಾಡುವರು!
ನುಡಿಯಬಾರದ ಲಿಂಗಕ್ಕೆ ಜಪ ಸ್ತೋತ್ರ ಪೂಜೆಯ ಮಾಡುವರು!
ಮುಟ್ಟಬಾರದ ಲಿಂಗಕ್ಕೆ ಕೊಟ್ಟು ಕೊಂಡಾಡಿದೆವೆಂಬರು!
ಬೊಟ್ಟಿಡಲು ಎಡೆಯಿಲ್ಲದ ಲಿಂಗವ ಮುಟ್ಟಿ ಪೂಜಿಸಿಹೆನೆಂಬ
ಭ್ರಷ್ಟರ ನೋಡಾ, ಗುಹೇಶ್ವರ! (LB: 470)

ಇಲ್ಲಿ ಭಾವಿಸುವ ಮನಲಿಂಗ ಮತ್ತು ಪೂಜಿಸುವ ದ್ರವ್ಯಲಿಂಗದ ವ್ಯತ್ಯಾಸವನ್ನು ಮನಗಾಣಬೇಕು. ಅಲ್ಲಮಪ್ರಭು ಈ ಸತ್ಯವನ್ನು ಬೆಡಗಿನಲ್ಲಿ ಹೇಳುವ ಬಗೆಗೆ ಕೆಳಕಂಡ ವಚನವನ್ನು ಪರಿಭಾವಿಸಿ:

(3) ಊರದ ಚೇಳಿನ, ಏರದ ಬೇನೆಯಲ್ಲಿ
ಮೂರುಲೋಕವೆಲ್ಲಾ ನರಳಿತ್ತು!
ಹುಟ್ಟದ ಗಿಡುವಿನ, ಬಟ್ಟೆಲೆಯ ತಂದು ಮುಟ್ಟದೆ ಪೂಸಲು ಮಾಬುದು, ಗುಹೇಶ್ವರ (LB: 192)

ಚೇಳಿನ ಕಡಿತವಿಲ್ಲದಿದ್ದರೂ ನಂಜೇರಿ ಉರಿಬೇನೆಯಿಂದ ನರಳುತ್ತಿರುವ ಮೂರು ಲೋಕದ ಮನೋಭ್ರಾಂತಿಗೆ, ಹುಟ್ಟದ ಗಿಡದ ಬಟ್ಟೆಲೆಯೇ ಮದ್ದು! ಆದರೆ ಇದನ್ನು ‘ಮುಟ್ಟದೆ’ ಪೂಸಿದರೆ ನಂಜೆಲ್ಲಾ ಇಳಿದು ಉರಿಬೇನೆಯು ವಾಸಿಯಾಗುವುದು! ಇದು ಉಲ್ಟಾ ಭಾಷೆಯ ಉಲ್ಟಾ ಅನುಭವಗಳ ಉಲ್ಟಾ ಅಭಿವ್ಯಕ್ತಿ! ದೇವರನ್ನು ಮೈಮೇಲೆ ಕಟ್ಟಿಕೊಳ್ಳುವ ‘ಕಟ್ಟುಗುಂಟ’ ಮತ್ತು ಮುಟ್ಟಿಕೊಳ್ಳುವ ‘ಮುಟ್ಟುಗುಂಟ’ ವನ್ನು ಅಲ್ಲಮಪ್ರಭು ಒಪ್ಪುವುದಿಲ್ಲ! “ಕಟ್ಟುಗುಂಟಕ್ಕೆ ಬಂದ ದೇವರ ಪೂಜಿಸಲುಂಟೆ?” ಎಂಬ ಮೂಲಭೂತ ಪ್ರಶ್ನೆ ಅಲ್ಲಮಪ್ರಭುವಿನದು. ಆದ್ದರಿಂದಲೇ ಈ ಮಾರ್ಗ ತುಳಿದವರನ್ನು ಲಕ್ಷಿಸಿ ‘ಎಲ್ಲರಿಗೆ ಸೋಂಕಾಯಿತ್ತು ಈ ಹಸಿಯ ಗುಂಟದಲ್ಲಿ’ ಎಂದು ಉಗ್ಗಡಿಸಿದ್ದಾರೆ:

(4) ತಮ್ಮ ತಮ್ಮ ಭಾವಕ್ಕೆ ಉಡಿಯಲ್ಲಿ ಕಟ್ಟಿಕೊಂಡರು!
ತಮ್ಮ ತಮ್ಮ ಭಾವಕ್ಕೆ ಕೊರಳಲ್ಲಿ ಕಟ್ಟಿಕೊಂಡರು!
ನಾನೆನ್ನ ಭಾವಕ್ಕೆ ಪೂಜಿಸಹೋದರೆ
ಕೈತಪ್ಪಿ (=ಕರಸ್ಥಲ) ಮನದಲ್ಲಿ ಸಿಲುಕಿತ್ತೆನ್ನ ಲಿಂಗ!
ಸಾಧಕನಲ್ಲ, ಭೇದಕನಲ್ಲ, ಗುಹೇಶ್ವರಲ್ಲಯ್ಯ ತಾನೆ ಬಲ್ಲ! (LB: 137)

ಈ ಕಾರಣಕ್ಕೆ ಅಲ್ಲಮಪ್ರಭು ಇಷ್ಟಲಿಂಗದೀಕ್ಷೆ ಮತ್ತು ಸ್ಥಾವರಲಿಂಗ ಪ್ರತಿಷ್ಠೆಗಳ ವಿರೋಧಿ:

(5) ಹೊಟ್ಟೆಯ ಮೇಲೆ
ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು?
ಹಸಿವು ಹೋಹುದೆ?
ಅಂಗದ ಮೇಲೆ ಲಿಂಗ ಸ್ವಾಯತವಾದರೇನು?
ಭಕ್ತನಾಗಬಲ್ಲನೆ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಆ ಕಲ್ಲು ಲಿಂಗವೆ?
ಆ ಮೆಳೆ ಭಕ್ತನೆ?
ಇಟ್ಟಾತ ಗುರುವೆ?
ಇಂತಪ್ಪವರ ಕಂಡಡೆ ನಾಚುವೆನಯ್ಯ ಗುಹೇಶ್ವರ! (LB: 106)

– ಇದು ಇಷ್ಟಲಿಂಗದೀಕ್ಷೆಯ ವಿರೋಧಿ ವಚನ.

(6) ಪೃಥ್ವಿಗೆ ಹುಟ್ಟಿದ ಶಿಲೆ
ಕಲ್ಲುಕುಟಿಕಂಗೆ ಹುಟ್ಟಿದ ಮೂರುತಿ
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ!
ಈ ಮೂವರಿಗೆ ಹುಟ್ಟಿದ ಮಗನ
ಲಿಂಗವೆಂದು ಕೈವಿಡಿವ
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರ? (LB: 121)

– ಇದು ಸ್ಥಾವರಲಿಂಗಪೂಜೆ ವಿರೋಧಿ ವಚನ.

ಭಕ್ತಿಯು ಜೀವಂತಿಕೆಯಿಂದ ಕೂಡಿರಬೇಕು. ಶವಸಾಧನೆಯು ಭಕ್ತಿಯಲ್ಲ:

(7) ಜೀವವಿಲ್ಲದ ಹೆಣನ ಹಿಡಿದಾಡುವರಯ್ಯ!
ಪ್ರತಿಯಿಲ್ಲದ ಅಪ್ರತಿಗೆ ಪ್ರತಿಯ ಮಾಡುವರಯ್ಯ!
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ! (LB: 83)

ಎಂಜಲು ಎಂಜಲೆಂದು ಭಿನ್ನಭೇದ ಮಾಡುವ ಮಡಿವಂತಿಕೆಯನ್ನು ಬಳಸಿಕೊಂಡೇ ಅಲ್ಲಮಪ್ರಭು ಇಂದ್ರಿಯಜ್ಞಾನದ ಶಬ್ದ ಸ್ಪರ್ಶ ರೂಪ ರಸ ಗಂಧಗಳ ಅನುಸಂಧಾನವನ್ನು ನಿರಾಕರಿಸಿದ್ದಾರೆ:

(8) ಶಬ್ದವೆಂಬೆನೆ ಶ್ರೋತ್ರದೆಂಜಲು
ಸ್ಪರ್ಶವೆಂಬೆನೆ ತ್ವಕ್ಕಿನೆಂಜಲು
ರೂಪೆಂಬೆನೆ ನೇತ್ರದೆಂಜಲು
ರುಚಿಯೆಂಬೆನೆ ಜಿಹ್ವೆಯೆಂಜಲು
ಪರಿಮಳವೆಂಬೆನೆ ಘ್ರಾಣದೆಂಜಲು
ನಾನೆಂಬೆನೆ ಅರಿವಿನೆಂಜಲು
ಎಂಜಲೆಂಬ ಭಿನ್ನವಳಿದ
ಬೆಳಗಿನೊಳಗಣ ಬೆಳಗು ಗುಹೇಶ್ವರಲಿಂಗವು! (LB: 285)

ಕುರುಹು ಮತ್ತು ಅರಿವು ಧ್ರುವೀಕರಣಕ್ಕೆ ಒಳಗಾಗಬಾರದು. ಕುರುಹಿನ ಬೀಜ ನಷ್ಟವಾಗಿ ಅರಿವಿನ ಅಂಕುರ ತಲೆದೋರಬೇಕು! ರೂಪಿನ ಕೋಟಲೆ ಕಳೆದು ಅರಿವು ಗುರುವಾಗಬೇಕು!

(9) ರೂಪನೆ ಕಂಡರು, ನಿರೂಪನೆ ಕಾಣರು!
ತನುವನೆ ಕಂಡರು, ಅನುವನೆ ಕಾಣರು!
ಆಚಾರವನೆ ಕಂಡರು, ವಿಚಾರವನೆ ಕಾಣರು!
ಗುಹೇಶ್ವರ ನಿಮ್ಮ ಕುರುಹನೆ ಕಂಡು
ಕೂಡಲರಿಯದೆ ಕೆಟ್ಟರು! (LB: 251)

ರೂಪು > ನಿರೂಪು, ತನು > ಅನು, ಆಚಾರ > ವಿಚಾರ, ಕುರುಹು > ಅರಿವು = ಇದೊಂದು ಆಧ್ಯಾತ್ಮಿಕ ಅಭಿಯಾನ. ಇದನ್ನರಿಯದೆ, ಜೀವಮಾನವಿಡೀ ಕುರುಹುವಿಡಿದು ಅರಿವಿಲ್ಲದೆ ನಾಶವಾಗುವವರೇ ಭ್ರಷ್ಟರು:

(10) ಅಗ್ಘವಣಿ ಪತ್ರೆ ಧೂಪ ದೀಪ ನಿವಾಳಿಯಲ್ಲಿ
ಪೂಜಿಸಿ, ಪೂಜಿಸಿ, ಬಳಲುತ್ತೈದಾರೆ!
ಏನೆಂದರಿಯರು! ಎಂತೆಂದರಿಯರು!
‘ಜನ ಮರುಳೋ ಜಾತ್ರೆ ಮರುಳೋ’
ಎಂಬಂತೆ ಎಲ್ಲರೂ ಪೂಜಿಸಿ ಏನನೂ ಕಾಣದೆ
ಲಯವಾಗಿ ಹೋದರು, ಗುಹೇಶ್ವರ! (LB: 77)

ಅಲ್ಲಮಪ್ರಭು ವಚನಗಳಲ್ಲಿ ನಿಸರ್ಗಲಿಂಗದ ನಿಜೋದಯವನ್ನು ಮನಗಾಣಬಹುದು. ಮಾನವನಿರ್ಮಿತ ಲಿಂಗಗಳು ಕೃತಕ ಮತ್ತು ಸುಳ್ಳುಸೃಷ್ಟಿಗಳು! ನಿಸರ್ಗನಿರ್ಮಿತವಾದ ಲಿಂಗಗಳು ನಿರುಪಾಧಿಕವಾದವು! ಅಲ್ಲಮರು ಈ ನಿಜೋದಯವನ್ನು ಮನಗಾಣಿಸುವ ಬಗೆ ಹೃದ್ಯವಾಗಿದೆ:

(11) ಹರಿವನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈಯಿ
ಇದು ಕಾರಣ, ಗುಹೇಶ್ವರ!
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯವಯ್ಯ! (LB: 365)

ಅಷ್ಟಾಂಗಲಿಂಗಿಗಳೇ ದ್ರವ್ಯಲಿಂಗಿಗಳು! ಸರ್ವಾಂಗಲಿಂಗಿಗಳೇ ಮನಲಿಂಗಿಗಳು! ಇದನ್ನು ಅರ್ಥಮಾಡಿಕೊಳ್ಳದೆ, ಜೀವನವಿಡೀ ಬರಿಯ ಇಂದ್ರಿಯಜ್ಞಾನದಲ್ಲೇ ಉಳಿದು ಅಳಿಯುವವರೇ ಇಂದು ಹಿರಿಯರಾಗಿ ವಿಜೃಂಭಣೆಯಿಂದ ಮೆರೆಯುತ್ತಿದ್ದಾರೆ:

(12) ಆದ್ಯರಲ್ಲ! ವೇದ್ಯರಲ್ಲ!
ಸಾಧ್ಯರಲ್ಲದ ಹಿರಿಯರ ನೋಡಾ!
ತನುವಿಕಾರ! ಮನವಿಕಾರ!
ಇಂದ್ರಿಯವಿಕಾರದ ಹಿರಿಯರ ನೋಡಾ!
ಶಿವಚಿಂತೆ ಶಿವಜ್ಞಾನಿಗಳ ಕಂಡರೆ
ಆಳವಾಡಿ ನುಡಿವರು!
ಗುಹೇಶ್ವರನನರಿಯದ ಕರ್ಮಿಗಳಯ್ಯ! (LB: 84)

– ಇಂಥ ಬಾಲಭಾಷೆಯ ಭಂಡರನ್ನು ಹಿರಿಯರೆಂಬ ವಿಶೇಷಣದಿಂದ ಕರೆಯಬೇಕೆ?

Previous post ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
Next post ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ

Related Posts

ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
Share:
Articles

ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ

February 7, 2021 ಡಾ. ಎನ್.ಜಿ ಮಹಾದೇವಪ್ಪ
ಹಿಂದೆ ಬಹಳಷ್ಟು ಕಾಯಕಗಳು (ಉದಾಹರಣೆಗೆ, ಒಕ್ಕಲುತನ, ಕುಂಬಾರಿಕೆ, ನೇಕಾರಿಕೆ, ಇತ್ಯಾದಿ) ಶ್ರಮದಾಯಕವಾಗೇ ಇದ್ದವು. ಅವುಗಳ ಸಂಖ್ಯೆ ಸಹಾ ಸಣ್ಣದಾಗಿತ್ತು ಮತ್ತು...
ಲೋಕವೆಲ್ಲ ಕಾಯಕದೊಳಗು…
Share:
Articles

ಲೋಕವೆಲ್ಲ ಕಾಯಕದೊಳಗು…

May 1, 2018 ಕೆ.ಆರ್ ಮಂಗಳಾ
ಮೇ- ಅಂದಾಕ್ಷಣ ನಮಗೆ ಕಾರ್ಮಿಕರ ನೆನಪಾಗುತ್ತದೆ, ಕಾರ್ಲ್ ಮಾರ್ಕ್ಸ್, ಏಂಗೇಲ್ಸ್, ಲೆನಿನ್, ಇತ್ಯಾದಿ ಸಮಾಜವಾದಿ ಮತ್ತು ಕಮ್ಯೂನಿಸ್ಟರ ಹೆಸರುಗಳು ಮಸುಕುಮಸುಕಾಗಿ ಮನಸ್ಸಿನಲ್ಲಿ...

Comments 15

  1. ರವಿ ಹಿತ್ತಲಮನಿ
    Sep 13, 2022 Reply

    ಅಲ್ಲಮಪ್ರಭುದೇವರ ವಚನಗಳು ನನಗೆ ಯಾವತ್ತಿಗೂ ಅತ್ಯಾಕರ್ಷಕ, ಆದರೆ ಅರ್ಥವಾಗುತ್ತಿದ್ದುದು ಬಹಳ ಕಡಿಮೆ. ಈ ಲೇಖನದ ಹೊಸ ಹೊಳಪುಗಳು ನನಗೆ ಬಹಳ ಹಿಡಿಸಿದವು. ಲೇಖಕರಾದ ಶರಣ ಚಂದ್ರಶೇಖರ ನಂಗಲಿಯವರಿಗೆ ಶರಣಾರ್ಥಿಗಳು. ಬಯಲುಗೆ ಅನಂತ ಧನ್ಯವಾದಗಳು.

  2. ಪರಶುರಾಮ ಪಾವಗಡ
    Sep 13, 2022 Reply

    ಒಳಗನರಿಸುವ ಲೇಖನದಲ್ಲಿ ಉಲ್ಲೇಖವಾದ ಒಂದೊಂದು ವಚನಗಳೂ ಅಲ್ಲಮಪ್ರಭುದೇವರ ಅಗಾಧ ಕರ್ತೃತ್ವವನ್ನು, ಅನುಭಾವವನ್ನು ಎತ್ತಿ ತೋರಿಸುತ್ತವೆ. ನಿಜಕ್ಕೂ ಇಂತಹ ಮಹಾಮಹಿಮರನ್ನು ಪಡೆದ ಕನ್ನಡ ತಾಯಿಯೇ ಧನ್ಯ, ನಾವಂತೂ 12ನೆಯ ಶತಮಾನಕ್ಕೆ ಸದಾ ಕಾಲ ಕೃತಜ್ಞರಾಗಿರಬೇಕಾಗುತ್ತದೆ.

  3. Halappa Beluru
    Sep 14, 2022 Reply

    ತಮ್ಮನ್ನು ‘ಗಣಂಗಳು’ ಎಂದು ಕರೆದುಕೊಂಡ ಶರಣರು, ವಚನಗಳನ್ನು ‘ಗಣಭಾಷಿತಗಳು’ ಎಂದೂ, ಶರಣರ ಅನುಭಾವಸಂಗವನ್ನು ‘ಗಣಮೇಳಾಪ’ ಎಂದೂ ಕರೆದಿದ್ದಾರೆ… ಇಂತಹ ಹಲವು ಹೊಸ ವಿಚಾರಗಳನ್ನು ಉಣಬಡಿಸಿದ ತಮ್ಮ ಜ್ಞಾನಪ್ರಸಾದದ ದಾಸೋಹಕ್ಕೆ ಶರಣುಗಳು.

  4. ಶಶಿಕಲಾ ಕುಂಚೂರು
    Sep 14, 2022 Reply

    ಮಾಯದ ಕೈಯಲ್ಲಿ ಓಲೆ ಕಂಠವ ಕೊಟ್ಟರೆ- ವಚನದ ವ್ಯಾಖ್ಯಾನ ಓದಿ ಸಂತೋಷವಾಯಿತು. ನಿಜ, ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳುತ್ತಿರುವುದು ನಮಗೆ ಗೊತ್ತೇ ಇರುವುದಿಲ್ಲ. ಸೂಕ್ಷ್ಮ ವಿಚಾರಗಳನ್ನು ಬಿಡಿಬಿಡಿಸಿ ತಿಳಿಸಿದ್ದಕ್ಕೆ ಧನ್ಯವಾದ.

  5. Mahantesh Pattar
    Sep 15, 2022 Reply

    ಒಂದೊಂದು ವಚನದಲ್ಲೂ ಎಷ್ಟೊಂದು ಅಗಾಧವಾದ ಮತ್ತು ಆಳವಾದ ಅರಿವಿನ ಹರಿವು ಅಡಗಿದೆ! ಲೇಖನದ ಶೈಲಿ ವಿಭಿನ್ನವಾಗಿದೆ ಹಾಗೂ ತೊಳೆತೊಳೆಯಾಗಿ ಅವುಗಳ ಗಾಢ ತಿಳುವಳಿಕೆಯನ್ನು ಬಿಡಿಸಿ ಇಟ್ಟಂತಿದೆ. ಲೇಖನ ಬಹಳ ಹಿಡಿಸಿತು ಅಕ್ಕಾ.

  6. Shivarudra Kalhalli
    Sep 18, 2022 Reply

    “ಮಾನದ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು” – ಎಂಬ ರೂಪಕ ಮಾನವಮನಸ್ಸಿನ ಆಸೆಯ ಚಿತ್ರಣ ಆಗಿರುವಂತೆಯೇ, ಬೃಹತ್ ಉತ್ಪಾದನೆಯ ಔದ್ಯಮಿಕ ಕೈಗಾರಿಕೆಗಳಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯ ವಿರಾಟ್ ಸ್ವರೂಪದ ದುರಾಸೆಯ ಪ್ರತೀಕವೂ ಆಗಿದೆ- ಇದು ನನಗೆ ಅಚ್ಚರಿ ಎನಿಸಿದ ವಚನ ವಿಶ್ಲೇಷಣೆ. ಸರ್, ಇದನ್ನು ಮತ್ತಷ್ಟು ವಿವರವಾಗಿ ಬರೆದಿದ್ದರೆ ಚೆನ್ನಾಗಿತ್ತು. ಲೇಖನದ ಗಂಭೀರ ಚಿಂತನೆಗಳು ವಿಚಾರಕ್ಕೆ ಹಚ್ಚುವಲ್ಲಿ ಸಂದೇಹವೇ ಇಲ್ಲ.

  7. Varun Mysore
    Sep 18, 2022 Reply

    It’s really a great and helpful piece of information, thanks for sharing this. Excellent task, cheers.

  8. ಗಿರೀಶ್ ರಾಯದುರ್ಗಾ
    Sep 23, 2022 Reply

    ಒಂದೊಂದು ವಚನಗದ ವ್ಯಾಖ್ಯಾನವೂ ಬಹಳ ಅರ್ಥಗರ್ಭಿತವಾಗಿದೆ ಹಾಗೂ ಮನಸ್ಸು ಒಪ್ಪುವಂತಿವೆ. ಭಕ್ತರೆಲ್ಲರೂ ಲಂದಣಿಗರು (=ಅಡುಗೆ ಭಟ್ಟರು), ಜಂಗಮವೆಲ್ಲವೂ ಉಪಜೀವಿಗಳು (=ಪರೋಪಜೀವಿಗಳು)- ಎನ್ನುವ ವಿವರಣೆಯಂತೂ ಶರಣರು ಸಾರ್ವಕಾಲಿಕ ಎನ್ನುವುದನ್ನು ನಿಜಮಾಡುತ್ತದೆ. ಅವರ ಅನುಭಾವಿಕ ನುಡಿಗಳು ಎಷ್ಟೊಂದು ಹರಿತವಾಗಿವೆ!!

  9. Tippeswamy M
    Sep 23, 2022 Reply

    ಅಲ್ಲಮಪ್ರಭು ಸ್ಥಾವರಲಿಂಗ ಪ್ರತಿಷ್ಠೆಗಳ ವಿರೋಧಿಯೆಂಬುದೇನೋ ನಿಜ, ಆದರೆ ಇಷ್ಟಲಿಂಗದೀಕ್ಷೆಯ ವಿರೋಧಿ ಎಂಬುದನ್ನು ನನಗಂತೂ ಒಪ್ಪಿಕೊಳ್ಳಲಾಗದು. ಬಸವಣ್ಣನವರು ಕೊಟ್ಟ ಲಿಂಗದ ಮಹತ್ವವನ್ನು ಕೊಂಡಾಡುವ ವಚನಗಳನ್ನು ತಾವು ದಯವಿಟ್ಟು ಗಮನಿಸಬೇಕು.

  10. Basanagowda DVG
    Sep 23, 2022 Reply

    ಕುರುಹು ಮತ್ತು ಅರಿವುಗಳು ಒಂದಕ್ಕೊಂದು ಪೂರಕವಾಗದಿದ್ದರೆ ಏನೂ ಪ್ರಯೋಜನವಿಲ್ಲಾ ಎನ್ನುವುದು ಅಕ್ಷರಶಃ ನಿಜ. ಇವತ್ತಿನ ಭಕ್ತರೆಲ್ಲಾ ಕುರುಹಿಗೆ ಅಂಟಿಕೊಂಡು ಅರಿವು ಮರೆತವರು.

  11. ಶಿವಾನಂದ ಹೊಸಮನಿ, ಹಾವೇರಿ
    Sep 26, 2022 Reply

    ಸರ್, ಲೇಖನ ಬಹಳ ವಿದ್ವತ್ಪೂರ್ಣವಾಗಿದೆ, ಹೆಚ್ಚು ಹೆಚ್ಚು ಆಳ ಚಿಂತನೆಗೆ ಹಚ್ಚುತ್ತದೆ, ವಚನಗಳನ್ನು ಹೀಗೂ ಓದಬಹುದೆನ್ನುವ ವಿಸ್ತಾರಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ನನ್ನದೊಂದು ಪ್ರಶ್ನೆ ಇದೆ: ‘ಅಂಗದ ಮೇಲೆ ಲಿಂಗ ಸಾಹಿತ್ಯ’ವನ್ನೇ ಅಲ್ಲಮಪ್ರಭುದೇವರು ಅಂಗದ ಸೋಂಕು ಎಂದಿರುವುದು ನಿಜವೇ? ಸೋಂಕು ಎನ್ನುವುದು ಡಿರೊಗೇಟರಿ ಶಬ್ದ, ಅದ್ಹೇಗೆ ಸೋಂಕಾಗುತ್ತದೆ, ಅಥವಾ ಕೇವಲ ಡಾಂಭಿಕತೆಯ ಸಂಕೇತವಾಗಿ ಉಳಿದರೆ ಅದು ಸೋಂಕೆಂದು ಖಂಡಿಸಿರಬಹುದೇ?

  12. ಉಮೇಶ್ ಪತ್ರಿ
    Sep 26, 2022 Reply

    ಲಿಂಗದ ಕುರಿತಾಗಿ ಅನೇಕ ಸಂಗತಿಗಳಿವೆ. ಶರಣರು ಸ್ಥಾವರ ಲಿಂಗ ವಿರೋಧಿಗಳೆಂಬುದು ಪ್ರಚಲಿತ ನಂಬುಗೆ. ನೀವು ಬೇರೇನೋ ಹೇಳುತ್ತಿದ್ದಂತೆ ತೋರುತ್ತದೆ. ವರ್ಣವಿಲ್ಲದ ಲಿಂಗಕ್ಕೆ ರೂಪಪ್ರತಿಷ್ಠೆಯ ಮಾಡುವರು! ಮತ್ತು ಊರದ ಚೇಳಿನ, ಏರದ ಬೇನೆಯಲ್ಲಿ- ಈ ಎರಡೂ ವಚನಗಳಿಗೆ ಇನ್ನಷ್ಟು ವಿವರಣೆ ಕೊಟ್ಟಿದ್ದರೆ ನೀವು ಹೇಳುವುದು ಸ್ಪಷ್ಟವಾಗುತ್ತಿತ್ತು.

  13. Rajashekhar Kalburgi
    Sep 28, 2022 Reply

    ಅಷ್ಟಾಂಗಲಿಂಗಿಗಳೇ ದ್ರವ್ಯಲಿಂಗಿಗಳು! ಸರ್ವಾಂಗಲಿಂಗಿಗಳೇ ಮನಲಿಂಗಿಗಳು! ಇದನ್ನು ಅರ್ಥಮಾಡಿಕೊಳ್ಳದೆ, ಜೀವನವಿಡೀ ಬರಿಯ ಇಂದ್ರಿಯಜ್ಞಾನದಲ್ಲೇ ಉಳಿದು ಅಳಿಯುವವರೇ ಇಂದು ಹಿರಿಯರಾಗಿ ವಿಜೃಂಭಣೆಯಿಂದ ಮೆರೆಯುತ್ತಿದ್ದಾರೆ- ಎಂತಹ ಮಾತುಗಳನ್ನು ಹೇಳಿದ್ದೀರಿ ಶರಣರೇ… ತಮ್ಮ ಪಾದಗಳಿಗೆ ಭಕ್ತಿಯ ನಮನಗಳು.

  14. Mallikarjuna Hadimani
    Sep 28, 2022 Reply

    ನಿಸರ್ಗಲಿಂಗದ ನಿಜೋದಯವನ್ನು ತೋರಿದ ಶರಣರ ವಚನಗಳ ಆಂತರ್ಯವನ್ನು ಬಗೆಬಗೆದು ನೋಡಿ ಸೂತ್ರ ರೂಪದಲ್ಲಿಟ್ಟ ಅದ್ಭುತ ಲೇಖನ.

  15. ಜಯದೇವಪ್ಪಾ ಡಾವಣಗೆರೆ
    Sep 28, 2022 Reply

    ಅಲ್ಲಮಪ್ರಭು ಇಷ್ಟಲಿಂಗದೀಕ್ಷೆ ಮತ್ತು ಸ್ಥಾವರಲಿಂಗ ಪ್ರತಿಷ್ಠೆಗಳ ವಿರೋಧಿ ಎನ್ನುವುದು ಬೀಸು ಹೇಳಿಕೆಯಾಯಿತು. ಸ್ಥಾವರಲಿಂಗ ಪ್ರತಿಷ್ಠೆಯನ್ನು ಅವರು ಒಪ್ಪಲೇ ಇಲ್ಲ. ಇಷ್ಟಲಿಂಗದ ಮಿತಿಯನ್ನು ತಿಳಿಸಿರಬಹುದು, ಆದರೆ ವಿರೋಧಿಸಿದರೆಂದರೆ ಹೇಗೆ? ದಯವಿಟ್ಟು ನನ್ನ ಸಮಸ್ಯೆ ಬಗೆಹರಿಸಿ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
Copyright © 2023 Bayalu