Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
Share:
Articles September 5, 2019 ಸ್ಮಶಾನವಾಸಿ

ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು

ಆ ರಾತ್ರಿ.

ಮಲಗಿದರೂ ನನಗೆ ನಿದ್ದೆ ಹತ್ತಲಿಲ್ಲ. ಕಾರಣವೇನೆಂದರೆ- ಬೌದ್ಧ, ಜೈನ, ಸಿಖ್ಖರು, ಲಿಂಗಾಯತರು, ವೀರಶೈವರು ಎಲ್ಲರೂ ಹಿಂದೂಗಳೇ ಆಗಿದ್ದಾರೆ ಎಂದು ಪೇಜಾವರರು ಹೇಳಿದ್ದನ್ನು ಪತ್ರಿಕೆಗಳು ಪ್ರಕಟಿಸಿದ್ದವು. ಹೃದಯಾಂತರಾಳದಲ್ಲಿ ಮಾನವೀಯತೆ ಹಾಗೂ ಜೀವಪರವಾದ ಸಾಮರಸ್ಯವನ್ನು ನೆಚ್ಚಿಕೊಂಡಿರುವ ಯಾರಿಗೇ ಆಗಲಿ ಇದು ತುಂಬಾ ಆಘಾತವನ್ನುಂಟು ಮಾಡುವ ವಿಷಯವೇ ಆಗಿದೆ. ಅಷ್ಟೇ ಅಲ್ಲ ಪ್ರತಿ ಕಾಲಕ್ಕೂ ಅನ್ಯಾಯದ ವಿರುದ್ಧ ಹೋರಾಡಲು ತಮ್ಮ ಬದುಕುಗಳನ್ನೇ ಸಮರ್ಪಿಸಿಕೊಂಡ ಅದೆಷ್ಟೋ ಜನ ಸಂತರ ಸಾಂಸ್ಕೃತಿಕ ಚರಿತ್ರೆಗಳನ್ನು ನಿರ್ದಯವಾಗಿ ಮುಚ್ಚಿಹಾಕಿ ಅಲ್ಲಿ ಹಿಂದೂ ಸಾಮ್ರಾಜ್ಯಶಾಹಿಯನ್ನು ಕಟ್ಟುವ ಈ ರಾಜಕೀಯ ಕುತಂತ್ರ ಭಯಾನಕವಾದದ್ದು. ಏಕೆಂದರೆ ನಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ಧಾರ್ಮಿಕ ಪಂಥಗಳು ಒಂದಕ್ಕೊಂದು ಸಂಘರ್ಷಕ್ಕಿಳಿದು ತಲೆಗೊಂದು ದೈವ, ತಲೆಗೊಂದು ಜಾತಿಗಳ ಹುಟ್ಟಿಗೆ ಕಾರಣವಾದದ್ದು ಅತ್ಯಂತ ಸ್ಪಷ್ಟವಾಗಿಯೇ ಇದೆ. ಇಲ್ಲಿಯ ತನಕ ಯಾವ ದೈವಗಳಿಗೂ ಜಾತಿಗಳನ್ನು ಹೋಗಲಾಡಿಸಿ ಮನುಷ್ಯ ಸಂಬಂಧಗಳನ್ನು ಒಂದಾಗಿಸಲು ಸಾಧ್ಯವಾಗಲೇ ಇಲ್ಲ. ಜಾತಿ, ಧರ್ಮ, ಪಂಥ, ಮತಗಳ ನೆಪದಲ್ಲಿಉಂಟುಮಾಡಿದ ಕಂದಕಗಳು ಇಂತಹ ವೈಜ್ಞಾನಿಕ ಯುಗದಲ್ಲೂ ಮತ್ತಷ್ಟು ತೀವ್ರವಾಗುತ್ತಿರುವುದು ನಮ್ಮ ದುರ್ಬಲವಾದ ಬುದ್ಧಿಮತ್ತೆಗೆ ಸಾಕ್ಷಿಯಾಗಿದೆ. ಪಾಂಥಿಕ ಕೇಡಿಗೆ ಉದಾಹರಣೆಯಾಗಿದೆ.

ಭಾರತದ ಮಟ್ಟಿಗೆ ಹೇಳುವುದಾದರೆ, ನಮ್ಮ ದೇಶ ಅನೇಕ ಬಣ್ಣಗಳ ವಿವಿಧ ಸುಗಂಧಭರಿತ ಹೂಗಳ ಸುಂದರವಾದ ಹೂಗುಚ್ಛ! ಅನೇಕ ಧರ್ಮಗಳ, ವಿಭಿನ್ನ ಭಾಷೆಗಳ, ವಿಭಿನ್ನ ವಾತಾವರಣಗಳ, ವಿಭಿನ್ನ ಪರಿಸರಗಳಿಂದ ಸುಂದರಗೊಂಡ ದೇಶ. ಮಳೆ ಬೆಳೆ ಜೀವನ ಶೈಲಿ ಆಹಾರವಿಹಾರಗಳಲ್ಲಿಯೂ ಇಲ್ಲಿ ವೈವಿಧ್ಯ! ಈ ವೈವಿಧ್ಯತೆಯನ್ನು ‘ಹಿಂದೂ ಏಕತೆ’ ಎಂದು ಮಾತನಾಡುತ್ತಿರುವ ರಾಜಕೀಯ ಅತ್ಯಂತ ಅಪಾಯಕಾರಿ. ಏಕೆಂದರೆ ಅದು ವೇದಾಂಗಗಳನ್ನೇ ಈ ದೇಶದ ನಿಜವಾದ ಚರಿತ್ರೆ ಎಂದು ನಂಬಿಸಿ ತನ್ನ ಅಧಿಕಾರ ಸ್ಥಾಪನೆ ಮಾಡಿಕೊಳ್ಳುವ ಹುನ್ನಾರವನ್ನಾಗಿಸಿಕೊಂಡಿದೆ. ಆದರೆ ಎಲ್ಲ ಕಾಲಕ್ಕೂ ಶತಶತಮಾನಗಳಿಂದಲೂ ‘ಏಕತೆ’ ಎಂಬುದರ ಬದಲಿಗೆ ನಮ್ಮ ನೆಲದಲ್ಲಿ ಜನಿಸಿದ ಅದೆಷ್ಟೋ ದೇಸಿ ಸಂತರು ‘ಸಾಮರಸ್ಯ’ ಎಂದು ನಮಗೆ ಕಲಿಸುತ್ತಲೇ ಬಂದಿದ್ದಾರೆ. ಆದ್ದರಿಂದ ಏಕತೆಗಿಂತಲೂ ಸಾಮರಸ್ಯವೇ ನಮಗೆ ಅತ್ಯಂತ ಪ್ರಮುಖ.

ಸಾಮರಸ್ಯದಲ್ಲಿ ನಿಜವಾದ ಸಹೋದರತೆಯಿದೆ, ಶಾಂತಿಯಿದೆ, ಸ್ವಾತಂತ್ರ್ಯವಿದೆ ಹಾಗೂ ಅದಮ್ಯವಾದ ಸಹನೆಯಿದೆ. ಹನ್ನೆರಡನೆ ಶತಮಾನದ ವಚನ ಚಳುವಳಿಯೂ ಸಾಮರಸ್ಯದ ದೃಷ್ಟಿಯಿಂದ ಕನ್ನಡಿಗರೆಲ್ಲರಿಗೂ ಆತ್ಮಗೌರವದ ಸಂಗತಿಯಾಗಿದೆ. ಈಗ ವಚನ ಚಳುವಳಿಗೂ ‘ಹಿಂದೂ’ ಏಕತೆಯ ರೋಗ ಸೋಂಕುವ ಅಪಾಯ ನಿಚ್ಚಳವಾಗಿದೆ. ಈ ರೋಗಕ್ಕೆ ನಾವು ಎಂತಹ ಎಚ್ಚರವಹಿಸಬೇಕೆಂದುಕೊಂಡಾಗ…  ನನ್ನ ಹೃದಯ ಇನ್ನಷ್ಟು ತಳಮಳಿಸತೊಡಗಿತ್ತು. ಮಾದಾರ ಚೆನ್ನಯ್ಯ, ಆಯ್ದಕ್ಕಿ ಮಾರಯ್ಯ, ಮಡಿವಾಳ ಮಾಚಿದೇವರು, ನನ್ನೊಳಗೆ ಆವಿರ್ಭವಿಸಬಾರದೇ? ನನ್ನ ಪ್ರಜ್ಞಾ ಕೋಶದಲ್ಲಿ ಅವರ ಚಳುವಳಿಯ ಮಹಾಮಾನವತೆಯು ಅಂತಃಚಿಲುಮೆಯಾಗಿ ಉಕ್ಕಬಾರದೆ? ಈ ದೌರ್ಭಾಗ್ಯದಿಂದ ಮುಕ್ತನಾಗುವ ಹಾದಿಯನ್ನು ನನಗವರು ತಿಳಿಸಬಾರದೆ? ಎಂಬ ನೂರಾರು ಪ್ರಶ್ನೆಗಳು ನನ್ನಲ್ಲಿ ಹುಟ್ಟಿ ಮಾಯವಾಗುತ್ತಲೇ ನನಗೆ ತಿಳಿಯದಂತೆ ನಾನು ನಿದ್ದೆಗೆ ಜಾರಿಕೊಂಡಿದ್ದೆ…

*********************************************

ಸುಮಾರು ಇಪ್ಪತ್ತು ಮೂವತ್ತು ಜನರಿದ್ದ ವಿಭೂತಿಧಾರಿಗಳ ಗುಂಪೊಂದು ತಮ್ಮತ್ತ ಧಾವಿಸುತ್ತಿರುವುದನ್ನು ಕಂಡ ಶ್ರೀಗಳು, ಕುತೂಹಲದಿಂದ ಆ ಗುಂಪನ್ನೇ ಗಮನಿಸುವಷ್ಟರಲ್ಲಿ… ಆ ಗುಂಪು ತೀರಾ ಸನಿಹಕ್ಕೆ ಬಂದು ಎಲ್ಲರೂ ಒಂದೇ ದನಿಯಲ್ಲಿ, “ವಿಶ್ವೇಶ್ವರ ತೀರ್ಥ ಶ್ರೀಪಾದಂಗಳಾದ ಪೇಜಾವರ ಶ್ರೀಗಳಿಗೆ ಶರಣು ಶರಣಾರ್ಥಿ” ಎಂದು ನಮಿಸಿದರು. ಈ ಮಾತುಗಳಿಂದ ಪ್ರಸನ್ನರಾದ ಶ್ರೀಗಳು ಆನಂದಚಕಿತರಾಗಿ … “ತಾವು ಯಾರು? ಎಲ್ಲಿಂದ ಬಂದಿರಿ?” ಎಂದು ಆಶ್ಚರ್ಯದಿಂದ ಕೇಳಿದರು.

ಆ ಗುಂಪಿನ ಒಬ್ಬರು: ನಾವು ಎಲ್ಲಿಂದಲೋ ಬಂದವರಲ್ಲ ಸ್ವಾಮಿ! ಹಾಗೆಯೇ ನಾವು ಎಲ್ಲಿಗೋ ಹೋಗುವವರಂತೂ ಅಲ್ಲ. ಈ ಮಣ್ಣಿನಿಂದಾಗಿಯೇ ಹುಟ್ಟಿ, ಮಣ್ಣನ್ನು ಆತುಕೊಂಡೇ ಬದುಕಿ ಮಣ್ಣಲ್ಲಿ ಮಣ್ಣಾಗುವ ಜನ. ನಮ್ಮ ಆದಿ ಅಂತ್ಯಗಳು ಈ ಮಣ್ಣಿನ ಜೀವಸ್ಥಿತಿಯೇ ಆಗಿರುವುದರಿಂದ ನಮ್ಮನ್ನು ಎಲ್ಲರೂ ಶ್ರಮ (ಕಾಯಕ) ಪರಂಪರೆಯ ಈ ನೆಲದ ನಡಿಗೆಯ ನಡೆಕಾರರು ಎಂದು ಕರೆಯುತ್ತಾರೆ…

ಶ್ರೀಗಳು: (ತಮ್ಮಲ್ಲಿ ತಾವೇ ಊಹಿಸಿಕೊಳ್ಳುತ್ತಾ… ಇವರ ಭಾಷೆಯಲ್ಲಿ ವೇದದ ಘಮಲಿಲ್ಲ, ಆಗಮದ ರಸಸ್ವಾದವಿಲ್ಲ! ನಿತ್ಯ ನಾರಕದ ಈ ಭಾಷೆ… ಇವರು ನಿತ್ಯನಾರಕಿಗಳೆಂದೇ ಸೂಚಿಸುತ್ತಿದೆಯಲ್ಲಾ ಎಂದುಕೊಳ್ಳುತ್ತಾ)—“ನೆಲದ ನಡಿಗೆಯ ನೆಲಕಾರರಿಗೂ ತಮ್ಮ ಪರಂಪರೆಯ ಹಿರೀಕರ ಗುರ್ತಾದರೂ ಇರಬೇಕಲ್ಲವೆ? ಅದನ್ನಾದರೂ ಹೇಳಿದರೆ ನಮಗೆ ನೀವ್ಯಾರೆಂಬುದನ್ನು ಗುರ್ತಿಸಲು ಸಹಾಯಕವಾಗಬಹುದಲ್ಲವೆ?”

ಗುಂಪಿನ ಮತ್ತೊಬ್ಬರು: ಮನೆ ಮಠಗಳೆಂಬ ಸ್ಥಾವರಗಳಾಚೆ, ಭೌತಿಕ ವಿಶ್ವವನ್ನೇ ತನ್ನಲ್ಲಿ ಅಡಗಿಸಿಕೊಂಡಿರುವ ಮಹಾ ಘನವೇದ್ಯ ಬಯಲನ್ನು ತನ್ನ ಮನೆಯನ್ನಾಗಿಸಿಕೊಂಡು ನಡೆಕೊಂಡ ಕಾಳಾಮುಖಾಚಾರ್ಯರು, ನಾಥಸಿದ್ದರು, ಅವಧೂತಿಗಳು, ಸಹಜಮನಸ್ಕ ಮುನಿಗಳ ಸಂತತಿಯಲ್ಲಿ ಬಂದು ಲೋಕವನ್ನು ಬೆಳಗಿಸಿ ಹೋದ ಕೋಟ್ಯಾನುಕೋಟಿ ಗಣಾಚಾರಿಗಳು ನಮ್ಮ ಹಿರೀಕರು…

ವೇದಪ್ರಮಾಣ, ಶಬ್ದಪ್ರಮಾಣ, ಜ್ಞಾನಪ್ರಮಾಣ, ಆಗಮ ಪ್ರಮಾಣ, ಶೃತಿ, ಸ್ಮೃತಿ ಪ್ರಮಾಣಗಳೆಂಬ ಮಾನವ ನಿರ್ಮಿತ ಕೃತಕ ರಚನೆಗಳನ್ನೆಲ್ಲಾ ಸುಟ್ಟು ಬೂದಿ ಮಾಡಿ, ಆ ಬೂದಿಯನ್ನೇ ಲೇಪಿಸಿಕೊಂಡು… “ವೇದಪ್ರಮಾಣನಲ್ಲ, ಶಾಸ್ತ್ರಪ್ರಮಾಣನಲ್ಲ, ಶಬ್ದ ಪ್ರಮಾಣನಲ್ಲ ಕಾಣಿಭೋ, ಲಿಂಗಕ್ಕೆ ಅಂಗಸಂಗದ ಮಧ್ಯದಲ್ಲಿದ್ದುದ ಬೈಚಿಟ್ಟು ಬಳಸಿದ ಗುಹೇಶ್ವರಾ ನಿಮ್ಮ ಶರಣ” ನೆಂಬ ಮಹಾಮನೆಯ ಅಲ್ಲಮನ ವಾರಸುದಾರರು… ಬಸವಣ್ಣನ ಮಕ್ಕಳು…

ಶ್ರೀಗಳು: ಓಹೋ… ಹೋ… ಗೊತ್ತಾಯ್ತು! ಗೊತ್ತಾಯ್ತು… ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರು…! ಬನ್ನಿ ಬನ್ನಿ ಕೊನೆಗೂ ನನ್ನ ಆಹ್ವಾನಕ್ಕೆ ಮಣಿದು ಬಹಿರಂಗ ಚರ್ಚೆಗೆ ಬಂದೇ ಬಿಟ್ಟಿರಲ್ಲ!! ನಿಮ್ಮ ಧೈರ್ಯ ಮೆಚ್ಚಲೇ ಬೇಕು. ಬನ್ನಿ ಮುಕ್ತವಾಗಿ ಮಾತನಾಡೋಣ!!! (ಎಂದು ಮಾತನಾಡಿಕೊಳ್ಳುತ್ತಲೇ ದಡದಡ ಎಂದು ತಡವರಿಸುತ್ತಾ ಹೋಗಿ ಎತ್ತರವಾದ ಸುಂದರ ಪೀಠದಲ್ಲಿ ಕುಳಿತು, ಆ ಗುಂಪನ್ನು ತಮಗಿಂತಲೂ ಕೆಳಸ್ತರದ ಪೀಠಗಳಲ್ಲಿ ಕುಳಿತುಕೊಳ್ಳಲು ಸಂಜ್ಞೆ ಮಾಡಿದರು).

ಗುಂಪಿನಿಂದ ಒಬ್ಬರು: ಮೇಲೆ-ಕೆಳಗೆ; ಗುರು-ಶಿಷ್ಯ; ಹಿರಿಯ-ಕಿರಿಯ… ಎಂಬ ಭೇದಗಳನ್ನು ನಿರಾಕರಿಸಿಕೊಳ್ಳುವ ನಮಗೆ ಈ ಉಸಾಬರಿಯೆಲ್ಲಾ (ಸ್ಥಾನಗಳ ಬೇಧ) ಯಾಕೆ ಸ್ವಾಮಿ?

ಗುಂಪಿನ ಮತ್ತೊಬ್ಬರು:  ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ ?
ಹಿರಿದು ಕಿರಿದೆಂದಲ್ಲಿ ಏನಾಯಿತ್ತು?
ಹಿರಿದು ಕಿರಿದೆಂಬ ಶಬ್ದವಡಗಿದರೆ,
ಆತನೆ ಶರಣ ಗುಹೇಶ್ವರಾ.

ನಾ’ `ನೀ’ ಎಂಬ ಭೇದ ಅಂದೂ ಇಲ್ಲ, ಇಂದೂ ಇಲ್ಲ
ಸಾಲೋಕ್ಯನಲ್ಲ ಸಾಮೀಪ್ಯನಲ್ಲ ಶರಣ.
ಸಾರೂಪ್ಯನಲ್ಲ ಸಾಯುಜ್ಯನಲ್ಲ ಶರಣ.
ಕಾಯನಲ್ಲ ಅಕಾಯನಲ್ಲ
ಗುಹೇಶ್ವರಲಿಂಗ ತಾನೆಯಾಗಿ.

ಗುಂಪಿನ ಮತ್ತೊಬ್ಬ: ಈ ಭೇದ ನಿರಾಕರಣೆ ನಿಮ್ಮನ್ನು ಕೆಳಗಿಳಿಸಬೇಕೆಂಬ ಅಹಂಕಾರಿಕೆಯಲ್ಲ, ಅದು ನಮ್ಮ ಉದ್ದೇಶವೂ ಅಲ್ಲ! ನೀವು ಅಲ್ಲೇ ಇರಿ! ನಾವು ಇಲ್ಲಿ ನಿಂತೇ ಮಾತನಾಡುತ್ತೇವೆ! ನೀವು ಸಮ್ಮತಿಸಿದರೆ ನಾವೆಲ್ಲ ಈ ನೆಲದ ಮೇಲೆಯೇ ಕುಳಿತು ಮಾತನಾಡಬಹುದೆಂದುಕೊಳ್ಳುತ್ತೇವೆ ಅಷ್ಟೇ! ನಮ್ಮ ಲಿಂಗ ನಡೆಗೆ, ಲಿಂಗಪಥಕ್ಕೆ ಯಾವ ಸರಹದ್ದುಗಳೂ ಇಲ್ಲ; ಯಾವ ಕ್ಷಣಕ್ಕೆ ಏನು ಲಭ್ಯವೋ ಅದೇ ಮಹಾಪ್ರಸಾದ!

ಶ್ರೀಗಳು: ಜ್ಞಾನವೃದ್ಧ, ತಪೋವೃದ್ಧ, ವಯೋವೃದ್ಧ ಇತ್ಯಾದಿ ಸದ್ಭಾವನೆಗಳಲ್ಲಿರುವ ಗೌರವವನ್ನು ಅಲ್ಲಗಳೆದು, ಸಮಾಜದಲ್ಲಿ ಅರಾಜಕತೆಯನ್ನುಂಟು ಮಾಡುವುದು ನಿಮ್ಮ ಧರ್ಮದ ಗುರಿಯೇನು? ನೀವು ಸನಾತನ ಸಂಸ್ಕೃತಿಯಲ್ಲಿರುವ ಪ್ರಬುದ್ಧ ನಾಗರಿಕತೆಯನ್ನು ಅರ್ಥಮಾಡಿಕೊಳ್ಳಬೇಕಿದೆ.

ಗುಂಪಿನಿಂದ ಮೂಡಿ ಬಂದ ದನಿ: ಅಲ್ಲಲ್ಲ… ಅರಾಜಕತೆ ನಮ್ಮ ಧರ್ಮದ ಉದ್ದೇಶವಲ್ಲ! ಸಮಭಾವ, ಸಮಚಿತ್ತ, ಸಮರಸ, ಸಮಪಾಲು, ಸಮಬಾಳುವೆಯಿಂದ ವ್ಯಕ್ತಿ ಸ್ವಾತಂತ್ರ್ಯದ ಚಿದ್ಬೆಳಕನ್ನು ಸರ್ವಜನರೂ ದಕ್ಕಿಸಿಕೊಳ್ಳಬೇಕೆಂಬುದು ನಮ್ಮ ಧರ್ಮದ ಸಾರ! ನಮ್ಮ ಧರ್ಮದಲ್ಲಿ ಸಮತೆಯಿಂದಲೇ  ಸಹೋದರತೆ! ಸಹೋದರತೆಯಿಂದ ನಿತ್ಯ ಶಾಂತಿ! ನಮ್ಮ ಸಮತೆಯನ್ನು ನಿಮ್ಮ ಸನಾತನ ಧರ್ಮಗಳ ರೀತ್ಯಾ ಸಮರ್ಥಿಸಲಾರಿರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಹಾಗೂ ಸಮತೆಯನ್ನು ಕಟ್ಟಬಹುದಾದ ಸಾಮರ್ಥ್ಯವೂ ನಿಮ್ಮಲ್ಲಿಲ್ಲ ಎಂಬುದು ನಮಗೆ ಗೊತ್ತಿದೆ. ನಮ್ಮ ಸಮತೆಯ ಮಹಾಮನೆಗೆ ಇರುವ ಹಾದಿ ನಿಮ್ಮ ಸನಾತನತೆಗೆ ತಿಳಿಯುವ ಸಾಧ್ಯತೆಗಳಂತೂ ಇಲ್ಲವೇ ಇಲ್ಲ… ಆದ್ದರಿಂದ ಸಮತೆಯ ಶಿವಪ್ರಜ್ಞೆಯನ್ನು-

ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು,
ಪುರಾಣ ಪೂರೈಸಲರಿಯದೆ ಕೆಟ್ಟವು.
ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು:
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು.
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ?

ಶ್ರೀಗಳು: ಸೋದರರಿರಾ… ಆರ್ಯರಿಗಿಂತಲೂ ಸಾಮಾನ್ಯರು ಹೆಚ್ಚು ಜ್ಞಾನಿಗಳೆಂದು ಹೇಳುವ ಮೂರ್ಖತನವನ್ನು ಬಿಟ್ಟುಬಿಡಿ. ನಾನು ನಿಮ್ಮ ಧರ್ಮದ ಬಗ್ಗೆ ಕೂಡ ಮಾತನಾಡಬಲ್ಲೆ. ಕೂಡಲ ಸಂಗಮ, ಬಯಲು, ಗುಹೇಶ್ವರ… ಇತ್ಯಾದಿ ಗುರಿಗಳಿಗೆ ಆದಿದೈವಿಕ ಸಂಸ್ಕಾರವೆಂಬುದಿಲ್ಲ! ನನ್ನ ಮಾತು ಕೇಳಿ ಭಗವಂತನ ಪಾದದಲ್ಲಿ ವಿಶ್ರಮಿಸಿ. ಶರಣರ ಧರ್ಮ ಭಕ್ತಿ ಪ್ರಧಾನ ಧರ್ಮವೇ ಆಗಿದೆ. ನಾವೂ ಭಕ್ತಿಯನ್ನೇ ಪ್ರತಿಪಾದಿಸುತ್ತೇವೆ. ಆ ಮಾರ್ಗ ಸುಲಭ ಮಾರ್ಗ. ಸುಕ್ಷೇಮ ಮಾರ್ಗ. ನಿಮಗೆ ಪರಮಾತ್ಮನು ಇಲ್ಲಿ ಅತ್ಯಂತ ಸುಲಭವಾಗಿ ಸಿಗುತ್ತಾನೆ. ಜೀವಾತ್ಮಗಳು ಭಕ್ತಿಯಿಂದ ಪುನೀತವಾಗುತ್ತವೆ. ಪಾಪಾತ್ಮಗಳಿಗೆ ಒಳ್ಳೆಯ ಜನ್ಮ ಸಿಗುತ್ತದೆ. ಭಗವಂತನ ಅನುಭೂತಿಯ ಅನುಭಾವವನ್ನು ಪಾನ ಮಾಡಿ ಬದುಕನ್ನು ದಿವ್ಯವಾಗಿಸಿಕೊಳ್ಳಿ. ನಿಮಗೆ ಇದರಿಂದ ಇಹದಲ್ಲೂ ಗತಿಯುಂಟು, ಪರದಲ್ಲೂ ಗತಿಯುಂಟು… ವಿಶ್ವಗುರುವೇ ನಿಮ್ಮ ಮುಂದೆ ನಿಂತು ಹೇಳುತ್ತಿದ್ದಾರೆಂಬ ನಿಮಗೊದಗಿ ಬಂದಿರುವ ಈ ಅಪೂರ್ವ ಅವಕಾಶವನ್ನು ವ್ಯರ್ಥಮಾಡಿಕೊಳ್ಳಬಾರದೆಂದು ನಿಮಗೆ ನಾನು ಶಾಸಿಸುತ್ತಿದ್ದೇನೆ (ಆಜ್ಞೆ ಮಾಡುತ್ತಿದ್ದೇನೆ). ಸಾವಿರಾರು ವರ್ಷಗಳ ಇತಿಹಾಸವುಳ್ಳ ಸನಾತನ ಶಾಸ್ತ್ರಗಳಿಂದ ನಿಮಗೆ ಖಂಡಿತಾ ಮುಕ್ತಿಯಿದೆ…

ವಿಭೂತಿಧಾರಿಗಳ ಗುಂಪಿನಿಂದ ಇಂಪಾದ ರಾಗಾಲಾಪ…

ಕಂಡಹರೆಂದು ಕಣ್ಗೆ ಮರೆಮಾಡಿದ,
ಕೇಳಿಹರೆಂದು ಕಿವಿಗೆ ಮರೆಮಾಡಿದ,
ಮುಟ್ಟಿಹರೆಂದು ಕೈಗೆ ಮರೆಮಾಡಿದ,
ಸೋಂಕಿಹರೆಂದು ತನುವಿಂಗೆ ಮರೆಮಾಡಿದ,
ನೆನೆದಹರೆಂದು ಮನಕ್ಕೆ ಮರೆಮಾಡಿದ,
ಅರಿದಹರೆಂದು ಅಂತರಂಗದಲ್ಲಿ ಮರೆಮಾಡಿದ,
ಪೂಜಿಸಿಹರೆಂದು ಕ್ರೀಗೆ ಮರೆಮಾಡಿದ,
ಕೂಡಲಸಂಗಮದೇವರೊಡನೆ, ಅಹಂಕಾರವ ಮಾಡಿ
ಕೆಟ್ಟ ಕೇಡನೇನೆಂದುಪಮಿಸುವೆನು.

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.

ಶ್ರೀಗಳು: ಅಭಿಪ್ರಾಯಭೇದಗಳು ಏನೇ ಇರಬಹುದು. ವೈದಿಕರಲ್ಲಿ ಶಿವ ಸನಾತನಿಯಲ್ಲವೆ? ಇಂತಹ ಶಿವನನ್ನು ಆರಾಧಿಸುವ, ಶಿವ ಪಂಚಾಕ್ಷರಿ ಜಪ ಮಾಡುವ ನೀವು ಹಿಂದೂಗಳಾಗದಿರಲು ಹೇಗೆ ತಾನೆ ಸಾಧ್ಯ? ಜಾತಿ ಭೇದವನ್ನು ಒಪ್ಪದಿದ್ದರೂ ಶಿವನ ಆರಾಧನೆ ಮಾಡುತ್ತಿದ್ದರೆ ಅವರೂ ಹಿಂದೂಗಳೇ ಅಲ್ಲವೇ?

ಗುಂಪಿನಿಂದ: ಯತಿವರ್ಯರೇ, ನೀವು ಕಲ್ಪಿಸಿಕೊಂಡಿರುವ ಆಗಮದ ಶಿವನನ್ನು ಆರಾಧಿಸುವವರಂತೂ ನಾವಲ್ಲ, ಹಾಗೆಯೇ ಶಿವಶರಣರು ಶಿವ ಪಂಚಾಕ್ಷರಿ ಜಪ ಮಾಡುತ್ತಾ ಕೂತವರೂ ಅಲ್ಲ- ಆಗಮದ ಕರ್ಮ/ ಜ್ಞಾನ ಭಾರಗಳಿಂದ ಮನುಕುಲವನ್ನು ಮುಕ್ತರಾಗಿಸುವಲ್ಲಿ ಶರಣರು ಹೋರಾಡಿದರೆಂಬುದು ನಿಮಗೆ ತಿಳಿದಿಲ್ಲವೆಂದು ಕಾಣುತ್ತದೆ. ಆಗಮಿ ಸಂಚಿತ ಪ್ರಾರಬ್ಧ ಕರ್ಮಗಳಿಂದ ಸಮಾಜವನ್ನು ಬಿಡುಗಡೆಗೊಳಿಸುವುದು ನಮ್ಮ ಮುಕ್ತತೆಯ ಸಿದ್ಧಾಂತವಾಗಿದೆ.

ಧ್ಯಾನಸೂತಕ, ಮೌನಸೂತಕ, ಜಪಸೂತಕ
ಅನುಷ್ಠಾನ ಸೂತಕ ಗುಹೇಶ್ವರನೆಂಬ ಲಿಂಗವರಿದ
ಬಳಿಕ ಸೂತಕ ನುಂಗಿತ್ತು ಯಥಾ ಸ್ವೇಚ್ಛೆ

ಗುಹೇಶ್ವರ, ಕೂಡಲಸಂಗಮದೇವಾ, ಬಯಲು ಎಂಬ ನಿಗೂಢವಾಗಿರುವ ಶಿವಾಚಾರಗಳು (ಲಿಂಗಾಚಾರಗಳು) ಶರಣ ಧರ್ಮದವರ ವಿನಃ ಅನ್ಯರಿಗೆ ಅನಾಮಿಕ! ಅಪಶ್ಯಂತಿ! ಅಸಂಪ್ರದಾಯಿಕ ಕ್ರಿಯಾಚಾರಗಳಾಗಿವೆ. ಲಿಂಗಾಚಾರವು ಶಬ್ದಾಗಮಗಳಿಗೆ ತಿಳಿಯುವ ಸಾಧ್ಯತೆಗಳೂ ಇಲ್ಲ. ಆದ್ದರಿಂದ ನಿರ್ವಿಷಯ ನಿರಾವಲಂಬಿಯಾದ ಲಿಂಗಾಚಾರವು ಮತರಹಿತವಾದದ್ದು! ಆದ್ದರಿಂದ ಮತಗಳಿಗತೀತ! ಜಾತಿಗಳಿಗತೀತ! ದೈವಗಳಿಗತೀತವಾದ ಶಿವಾಚಾರವನ್ನು ನಾವು ಹೊಂದಿರುವುದರಿಂದ ನಮ್ಮ ಈ ಧರ್ಮವನ್ನು ‘ಸ್ವತಂತ್ರ ಧರ್ಮ’ ಎಂದು ಅಂದು, ಇಂದು, ಎಂದೆಂದಿಗೂ ಸಾರುತ್ತಿದ್ದೇವೆ.

ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ.
ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ.
ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ.

ಹಿಂದೂ ಎಂಬ ಆಧುನಿಕ ಪರಿಭಾಷೆಯನ್ನು ಬಳಸಿಕೊಂಡು ವೈದಿಕ ನಿಲುವುಗಳ ಮೂಲಕ ಜನರಲ್ಲಿ ಧರ್ಮಾಧಿಕಾರವನ್ನು ಸ್ಥಾಪಿಸುವ ರಾಜಕೀಯವನ್ನು ನಾವು ಸ್ವೀಕರಿಸಲಾಗದು ಎಂದು ನಿಮ್ಮಲ್ಲಿ ಭಿನ್ನವಿಸಿಕೊಳ್ಳುತ್ತೇವೆ. ನಮ್ಮ ಪಥ ನಮ್ಮ ಹಕ್ಕು! ನಮ್ಮ ಪರಂಪರೆ ನಮ್ಮ ಕರ್ತವ್ಯ!! ನಾವು ನಾವಾಗಲು ನಮ್ಮನ್ನು ಬಿಡಿ, ಧರ್ಮಸಂಕರ ಇನ್ನು ಸಾಕು!!!

ಶ್ರೀಗಳು: ಆಗಮ ಶಿವ, ನಿಮ್ಮ ಶಿವ ಬೇರೆ ಬೇರೆ ಎಂದು ನೀವು ಸಿದ್ಧಾಂತೀಕರಿಸಬಹುದು. ಅಂತೆಯೇ ದ್ವೈತ, ವಿಶಿಷ್ಟಾದ್ವೈತ ಅನುಯಾಯಿಗಳು ಒಪ್ಪುವ ಪರಬ್ರಹ್ಮನ ರೂಪ ಬೇರೆ ಬೇರೆಯೇ ಇದೆ. ಆದರೂ ಮಾಧ್ವರು, ರಾಮಾನುಜರ ಪರಬ್ರಹ್ಮನು ಸಗುಣ ಸಾಕಾರನಾಗಿದ್ದರೆ ಶಂಕರರು ಪರಬ್ರಹ್ಮ ನಿರ್ಗುಣ ನಿರಾಕಾರನಾಗಿದ್ದಾನೆಂದು ಪ್ರತಿಪಾದಿಸಿದ್ದಾರೆ. ಬಹಳಷ್ಟು ವ್ಯತ್ಯಾಸವಿದ್ದರೂ ಇವರೆಲ್ಲರೂ ವೈದಿಕರು, ಹಿಂದೂಗಳೇ ಆಗಿದ್ದಾರೆ ಎಂಬುದನ್ನು ನೀವು ಒಪ್ಪಿಕೊಳ್ಳಲೇ ಬೇಕು! ಅಷ್ಟೇ ಅಲ್ಲ ದೇವತೆಗಳನ್ನು ಪೂಜಿಸುವವರೂ ದೇವರನ್ನು ಒಪ್ಪುವ- ಒಪ್ಪದೆ ಇರುವ ಎಲ್ಲರೂ ಹಿಂದೂಗಳೇ ಆಗಿದ್ದಾರೆ.

ಗುಂಪಿನಿಂದ: ಕೇವಲ ಎರಡು ದಿನದ ಬದುಕಿಗಾಗಿ ನಾವು ವೈರುಧ್ಯಗಳ ತೂಗು ತಕ್ಕಡಿಯನ್ನು ಇಟ್ಟುಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರಲ್ಲ. ಆದ್ದರಿಂದ ಲಿಂಗಾಚಾರವು ಸಗುಣವೂ ಅಲ್ಲ, ನಿರ್ಗುಣವೂ ಅಲ್ಲ; ಕರ್ಮವೂ ಅಲ್ಲ, ಜ್ಞಾನವೂ ಅಲ್ಲ; ವೈದಿಕವೂ ಅಲ್ಲ, ಅವೈದಿಕವೂ ಅಲ್ಲ.

ಅಯ್ಯ ! ನಿರವಯಶೂನ್ಯಲಿಂಗಮೂರ್ತಿಯ ನಿಲುಕಡೆ ಎಂತೆಂದಡೆ,_
ಸಾಕಾರನಲ್ಲ ನಿರಾಕಾರನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಆದಿಯಲ್ಲ ಅನಾದಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಹದವನಲ್ಲ ಪರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಸುಖದವನಲ್ಲ ದುಃಖದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪುಣ್ಯದವನಲ್ಲ ಪಾಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕರ್ತುವಲ್ಲ ಭೃತ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಕಾರಣನಲ್ಲ ಕಾರ್ಯನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಧರ್ಮಿಯಲ್ಲ ಕರ್ಮಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಪೂಜ್ಯನಲ್ಲ ಪೂಜಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
ಹೃತ್ಕಮಲಮಧ್ಯದಲ್ಲಿ ನೆಲಸಿರ್ಪುದು ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ.

ಶ್ರೀಗಳು: (ಕ್ಷಣಕಾಲ ತಬ್ಬಿಬ್ಬರಾಗಿ) ಅರೆ ಏನಿದು, ನಿಮ್ಮ ತತ್ವದ ಆತ್ಮವಾದ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ಮೂಲ ಎಲ್ಲಿದೆ ಗೊತ್ತೆ? ನಮ್ಮ ಜ್ಞಾನಕಾಂಡದಲ್ಲಿದೆ…  ಅದನ್ನು ನೀವು ಮರೆಯುವಂತಿಲ್ಲ, ಆ ಕೃತಜ್ಞತೆ ನಿಮಗಿರಲೇ ಬೇಕಾಗುತ್ತದೆ.

ಗುಂಪಿನಿಂದ: ಶರಣರು ಶಕ್ತಿವಿಶಿಷ್ಟಾದ್ವೈತರಲ್ಲ. ದ್ವೈತಾದ್ವೈತಗಳು ಅವರಿಗೆ ಸಂಬಂಧಿಸಿದವುಗಳಲ್ಲ. ಶರಣರು ಬಯಲಸಾಧಕರು. ಲಿಂಗಾಂಗ ಸಮರಸ ಸಿದ್ಧರು. ಜಂಗಮ ಜಗಜ್ಯೋತಿಗಳು. ಅಮನಸ್ಕರು. ನಿಮಗೆ ವಚನಾಧ್ಯಾಯ ಸಾಲದು ಎಂಬುದು ನಮಗೆ ತಿಳಿದಿತ್ತು, ಅದಕ್ಕೆ ವಚನ ಮಹಾಸಂಪುಟಗಳನ್ನು ತಂದಿದ್ದೇವೆ. ಬಿಡುವಿದ್ದಾಗ ತಾವು ದಯವಿಟ್ಟು ಓದಿಕೊಳ್ಳಬೇಕು.

(ದಪ್ಪಗಾತ್ರದ ಎರಡು ವಚನ ಮಹಾಸಂಪುಟಗಳನ್ನು ಶ್ರೀಗಳ ಮುಂದಿಡುತ್ತಾರೆ)

ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ.
ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ,
ಭಾವದ ಭ್ರಾಂತು, ಅರಿವಿನ ಮರಹು,
ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು,
ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ.
ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ,
ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ.
ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ,
ಹರಿಹರಬ್ರರ್ಹದಿಗಳನರಿಯದ
ವೇದಶಾಸ್ತ್ರ ಆಗಮ ಪುರಾಣ ಇತಿಹಾಸ ರಹಸ್ಯಛಂದಸ್ಸು
ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ
ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ
ಸ್ವಯಾದ್ವೈತಿ (ಸ್ವತಂತ್ರ ಚಿಂತಕ) ತಾನೆ ಸೌರಾಷ್ಟ್ರ ಸೋಮೇಶ್ವರ.

ದ್ವೈತಾದ್ವೈತದ ಬಳಿವಿಡಿದರಸುವನಲ್ಲ.
ಅರಿವ ಮುಂದಿಟ್ಟುಕೊಂಡು, ಜ್ಞಾನದ ಮಾತ ಜಿನುಗಿ,
ಕುರುಹ ತೋರಿ, ತಿರುಗುವ ಉಪಾಧಿಕನಲ್ಲ.
ತ್ರಿಪುಟಿಸಂಕಲ್ಪ ಮೀರಿ “ದಾಸೋಹಂ ಸ್ಯೋಹಂ ಹಂಸಃ
ಎಂಬ ಬಳಲಿಕೆಯಳಿದು,
ತಾ ಬೈಚಿಟ್ಟ ಬಯ್ಕೆಯ ತಾನೆ ಕಂಡಂತೆ .
ತಾನೇ ತನ್ನ ನಿಜ ನಿಧಾನಗಂಡ ನಿಜಸುಖಿ,
ಸ್ವಾನುಭಾವಭರಿತ ಸ್ವತಂತ್ರ ನಿತ್ಯಮುಕ್ತ,
ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾದ ಶರಣ.

ಶ್ರೀಗಳು: (ಹಠ ಬಿಡದವರಂತೆ, ತಡವರಿಸುತ್ತಾ) ಉಮಾಪತಿ ಶಿವನ ಆರಾಧಕರು ನೀವು. ಸಮರಸ, ಸಮರಸ ಎಂದು ಬಡಬಡಿಸುತ್ತಿದ್ದೀರಿ… ಮುಕ್ತರಾಗುವುದೆಂದರೆ ಆ ಶಿವನೊಂದಿಗೆ ಲೀನವಾಗುವುದೆಂದೇ ಅರ್ಥ… ತ್ರಿಮೂರ್ತಿಗಳಲ್ಲಿನ ಶಿವ, ರುದ್ರ ಈರ್ವರೂ ಒಂದೇ…

ಗುಂಪಿನಿಂದ: ಸ್ವಾಮಿ, ನಾವು ಆರಂಭದಿಂದಲೂ ಹೇಳುತ್ತಿರುವ ವಚನಗಳನ್ನು ಹೀಗೆ ನೀವು ನಿರ್ಲಕ್ಷಿಸುತ್ತಾ, ಮತ್ತೆ ಅದೇ ಅದೇ ಗೂಟಕ್ಕೆ ನಮ್ಮನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದ್ದೀರಿ…

ಶಿವನಿಗೂ ರುದ್ರನಿಗೂ ಸಂಬಂಧ ಕಲ್ಪಿಸಿದವರಾರು? ಈ ನೆಲದ ಮೂಲಿಗನಾದ ಶಿವ, ಯಜ್ಞ-ಯಾಗಗಳ ಅಧಿದೇವತೆಯಾದ ರುದ್ರನಾಗಲು ಹೇಗೆ ಸಾಧ್ಯ?! ಇದ್ದವನನ್ನು ಇಲ್ಲದವರೊಂದಿಗೆ ಸೇರಿಸುವ ಕುತಂತ್ರ ನಡೆದದ್ದು, ಯಾಗ ದ್ವೇಷಿ ಶಿವನನ್ನು ಯಾಗದ ದೈವ ರುದ್ರನೊಂದಿಗೆ ತಳುಕು ಹಾಕಿದ್ದು… ಈ ಇತಿಹಾಸದ ರಾಜಕೀಯ ತಮಗೆ ಚೆನ್ನಾಗಿ ಗೊತ್ತಿದೆ, ನಮಗೂ ತಿಳಿದಿದೆ… ಆದಯ್ಯನವರ ಈ ವಚನ ಕೇಳಿ:

ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ
ಅನಂತ ವಿಚಿತ್ರಭುವನಂಗಳಡಗಿಪ್ಪವಯ್ಯಾ.
`ಆಲಯಃ ಸರ್ವಭೂತಾನಾಂ ಲಯನಾಲ್ಲಿಂಗಮುಚ್ಚ್ಯತೇ
ಎಂದುದಾಗಿ,
ಅನಂತಕೋಟಿ ಬ್ರಹ್ಮಾಂಡಗಳು
ನಿಮ್ಮ ರೋಮಕೂಪದೊಳಗೆ ಅಡಗಿಪ್ಪವೆಂದಡೆ
ಬ್ರಹ್ಮ ವಿಷ್ಣು ರುದ್ರ ಇವರೆಲ್ಲ ಒಂದು ಬ್ರಹ್ಮಾಂಡದೊಳಗಣ ಬಾಲಕರು.
ಇವರೆತ್ತ
ಬಲ್ಲರೋ ಲಿಂಗದ ನಿಜವ!
ಅಪ್ರಮಾಣವಗೋಚರ ಮಹಾಂತ,
ನಿಮ್ಮ ನಿಜದೊಳಗನಾರು ಬಲ್ಲರಯ್ಯಾ
ಸೌರಾಷ್ಟ್ರ ಸೋಮೇಶ್ವರಾ!

ಶ್ರೀಗಳು ತಮ್ಮೆದುರು ಇಟ್ಟ ವಚನ ಮಹಾಸಂಪುಟವನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರು. ಅವರ ಸಣ್ಣಗಿನ ಕೈಗಳಿಗೆ ಪುಸ್ತಕ ಭಾರವಾಗಿ ಕೆಳಗೆ ಜಾರಿತು… “ಕೃಷ್ಣ ಕೃಷ್ಣ…” ಎಂದು ತಡಬಡಿಸಿದಾಗ, ನೆಲದ ಮೇಲೆ ಕುಳಿತಿದ್ದ ವಿಭೂತಿಧಾರಿಗಳು ಪುಸ್ತಕ ಕೆಳಗೆ ಬೀಳದಂತೆ ಹಿಡಿದು ಜೋಪಾನವಾಗಿ ಶ್ರೀಗಳ ಕೈಗಿತ್ತರು…

ಶ್ರೀಗಳು: ಬಯಲೆಂದರೆ ಸರಳವಾಗಿ ಹೇಳುವುದಾದರೆ ಪರಶಿವನೇ, ಪರಬ್ರಹ್ಮನೇ. ಯಾಕೆ ಗೊಂದಲ ಮಾಡಿಕೊಳ್ಳುತ್ತೀರಿ, ಅದು ಕೂಡ ವೇದ ಮೂಲವೇ… (ಇನ್ನೂ ಏನೋ ಹೇಳಲು ಹೊರಟ ಶ್ರೀಗಳು ಯಾಕೋ ಸುಮ್ಮನಾದರು)

ಗುಂಪಿನ ಹಿರಿಯರೊಬ್ಬರು: ನಮಗೆ ಬಯಲೆಂಬುದು ಚೈತನ್ಯವಲ್ಲ, ವಿಶ್ವತೇಜಸ ಪ್ರಾಜ್ಞಸ್ವರೂಪವಲ್ಲ, ಸಾಕ್ಷಾತ್ಕಾರವಲ್ಲ, ಪ್ರಣವವಲ್ಲ(ಓಂಕಾರ), ಪ್ರಕೃತಿಯಲ್ಲ, ಪುರುಷವಲ್ಲ, ಕ್ಷರವಲ್ಲ, ಅಕ್ಷರವಲ್ಲ, ಕಾರಣಕಾರ್ಯವಲ್ಲ, ಕರ್ಮವಲ್ಲ, ಕರ್ತನಲ್ಲ, ಜ್ಯೋತಿಯಲ್ಲ, ಯುಗಗಳ ಪರ್ಯಂತ ಚಿಂತಿಸಿದರೂ ಅದು ದಕ್ಕುವದಲ್ಲ, ಸಮಾಧಿಯಲ್ಲ, ಮುಕ್ತಿಯಲ್ಲ, ಶಕ್ತಿಯಲ್ಲ, ವಿದ್ಯೆಯಲ್ಲ, ಮೋಕ್ಷವಲ್ಲ, ದ್ವಂದ್ವಗಳಲ್ಲ,  ಲಕ್ಷ್ಯವಲ್ಲ, ಹಿಂಸೆಯಲ್ಲ, ಸಾಕ್ಷಿಯಲ್ಲ, ಕಾಶಿಯಲ್ಲ, ರಾಮೇಶ್ವರವಲ್ಲ, ಜ್ಞಾನವಲ್ಲ, ನಿಷ್ಠೆಯಲ್ಲ, ತಪಸ್ಸಿನಿಂದ ದೊರಕುವದಲ್ಲ, ಮಂತ್ರವಲ್ಲ, ತಂತ್ರವಲ್ಲ, ವಿಭೇದವಲ್ಲ, ನಿರ್ಣಯವಲ್ಲ, ಸೂಕ್ಷ್ಮವಲ್ಲ, ಮತವಲ್ಲ, ಭಕ್ತಿಯಲ್ಲ, ಶಬ್ದನಿಶಬ್ದಗಳಲ್ಲ, ಗ್ರಾಹ್ಯವಲ್ಲ, ದ್ವಾದಶಾದಿತ್ಯರಲ್ಲ, ಪುರಾಣಗಳಲ್ಲ, ವೇದಶಾಸ್ತ್ರಗಳಲ್ಲಿ ಅದಿಲ್ಲ, ಭಾಷ್ಯಗಳಲ್ಲ, ನಿರ್ಗುಣಸಗುಣಗಳಲ್ಲ, ಆತ್ಮಪರಮಾತ್ಮಗಳಲ್ಲ, ಮತವಲ್ಲ, ಭಕ್ತಿಯಲ್ಲ, ಯೋಗವಲ್ಲ, ಅದು ಅರಿವಲ್ಲ, ಶೂನ್ಯವಲ್ಲ, ನಿರ್ವಾಣವಲ್ಲ, ನಿರ್ವಾಣವಲ್ಲದೆಯೂ ಅಲ್ಲ, ದೇಹವಲ್ಲ, ವಿದೇಹವಲ್ಲ, ಚಿತ್ತವಲ್ಲ, ತಿಳಿಯಬಹುದಾದದ್ದಲ್ಲ, ತಿಳಿಯದೆ ಇರುವುದೂ ಅಲ್ಲ, ಗಮ್ಯವಲ್ಲ, ದ್ವೈತಾದ್ವೈತವಲ್ಲ, ಕವಿತಾವಿಶೇಷವಲ್ಲ, ಮಾರ್ಗವಲ್ಲಮುದ್ರೆಗಳಲ್ಲ, ಬೌದ್ಧ ಮಾಧ್ಯಮಿಕ ಯೋಗಾಚಾರವಲ್ಲ, ಅಚಲವಲ್ಲ, ಆನಂದವಲ್ಲ. ಬಯಲು ಅಸಂಪ್ರದಾಯಕ, ಅಲಕ್ಷ್ಯ, ಅನಿರ್ದೇಶ, ಅಪಶ್ಯಂತಿ, ಅನಾಮಿಕ…

ಹಿಂದಿನಿಂದ ರಾಗಾಲಾಪ:

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.

ಈ ನೆಲದ ನೆಲಗಾರರು ವಿಶ್ವದಲ್ಲಿ ಕೇಡಿರುವ ತನಕ ಕೇಡಿನ ಹುಟ್ಟಡಗಿಸಲು ಮತ್ತೆ ಮತ್ತೆ ಹುಟ್ಟಿ ಬರುತ್ತಾರೆ, ಭ್ರಾಂತುಗಳನ್ನು ಬಯಲುಗೊಳಿಸುತ್ತಲೇ ಇರುತ್ತಾರೆ.

Previous post ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
Next post ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ

Related Posts

ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು
Share:
Articles

ಹಳಕಟ್ಟಿಯವರ ಸ್ವಚರಿತ್ರೆ: ಕೆಲವೊಂದು ಟಿಪ್ಪಣಿಗಳು

July 4, 2021 ಡಾ. ವಿಜಯಕುಮಾರ್ ಬೋರಟ್ಟಿ
ಪ್ರಸ್ತುತ ಲೇಖನದಲ್ಲಿ ‘ವಚನ ಗುಮ್ಮಟ’ವೆಂದು ಪ್ರಶಂಸಿಸಲ್ಪಟ್ಟ ಫ.ಗು. ಹಳಕಟ್ಟಿಯವರ (1880-1964) ಜೀವನ ಚರಿತ್ರೆಯನ್ನು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ. ಅವರ ಜೀವನ...
ವಚನಗಳಲ್ಲಿ ಜೀವವಿಜ್ಞಾನ
Share:
Articles

ವಚನಗಳಲ್ಲಿ ಜೀವವಿಜ್ಞಾನ

December 22, 2019 Bayalu
ನಮ್ಮೆದುರು ಅನೇಕ ರಹಸ್ಯಗಳನ್ನು ಬಿಚ್ಚಿಟ್ಟ ಆಧುನಿಕ ಜೀವವಿಜ್ಞಾನ ಮನುಷ್ಯನ ಇದುವರೆಗಿನ ಕೌತುಕದ ಫಲ.ವಿಜ್ಞಾನದ ವಿಕಾಸದಲ್ಲಿ ಇದರ ಬೆಳವಣಿಗೆಯ ಹೆಜ್ಜೆಗಳು ಸ್ಪಷ್ಟವಾಗಿವೆ....

Comments 29

  1. Dr. J S Patil
    Sep 6, 2019 Reply

    ವೈದಿಕ ಮಾದ್ವ ಪೇಜಾವರನೊಂದಿಗಿನ ಕಾಲ್ಪನಿಕ ಶರಣ ಸಂತತಿಯ ಕಾಲ್ಪನಿಕ ಸಂಭಾಷಣೆ ಲಿಂಗಾಯತ ಧರ್ಮದ ವಿವಿಧ ಆಯಾಮಗಳನ್ನು ಮಾರ್ಮಿಕವಾಗಿ ತೆರೆದಿಟ್ಟಿದೆ. ಲಿಂಗಾಯತರು ಲಿಂದೂಗಳೆಂಬ ಪೇಜಾವರರ ಅಸಂಗತ ವಾದ ಲಿಂಗಾಯತ ಧರ್ಮದಲ್ಲಿನ ಸತ್ವಯುತ ತತ್ವಗಳು ವೈದಿಕತೆಯನ್ನು ದಿಕ್ಕರಿಸುವ ಪರಿಯನ್ನು ನೋಡಿ ಗಾಬರಿಗೊಂಡಂತೆ ಚಿತ್ರಿಸುವಲ್ಲಿ ಲೇಖಕರ ಕೌಶಲ್ಯ ಶ್ರಮಿಸಿದೆ. ನೈಜದಲ್ಲೂ ಲಿಂಗಾಯತ ತತ್ವಗಳಿಂದ ಪೇಜಾವರ ಸಾಂಕೇತಿಕವಾಗಿ ವೈದಿಕ ಕ್ರೂರಿಗಳು ಭಯಬಿದ್ದಿರುವುದನ್ನು ಅಲ್ಲಗಳೆಯಲಾಗದು.

  2. ಮಹಾದೇವ
    Sep 6, 2019 Reply

    ಆ ಅಸಹಾಯಕ ಮುದುಕ ಕನಸಿನಲ್ಲಾದರೂ ಒಂದು ಮುಕ್ತ ಸಂವಾದಕ್ಕೆ ಸಿಕ್ಕಿದ್ದಾನಲ್ಲ ಅದೇ ಖುಷಿ.. ಇದನ್ನ ಇನ್ನೊಂಚೂರು ಉತ್ತರ ಕರ್ನಾಟಕದ ಭಾಷೆಯಲ್ಲಿ ನಿವಾಳಿಸಿ ಬರೆದಿದ್ದರೆ ಹಾಸ್ಯಪ್ರಸಂಗವೂ ಆಗಿಬಿಡುತ್ತಿತ್ತು. ಮಾನ್ಯ ಸ್ಮಶಾನವಾಸಿಗಳು ಯಾರೂ ಇಲ್ಲದ ಏಕಾಂತದೊಳಗೆ ಪೇಜಾವರನನ್ನು ಕಲ್ಪಿಸಿಕೊಂಡು ನಿಜ ಲಿಂಗಾಯತ ತತ್ವವನ್ನು ಅದ್ಭುತವಾಗಿ ನಿರೂಪಿಸಿದ್ದಾರೆ. ಇನ್ನೊಂಚೂರು ಮಸಾಲೆ ಸೇರಿಸಿದರೆ.. ತತ್ವಾಧಾರಿತ ನಾಟಕವನ್ನು ಮಾಡಬಹುದು… ಈ ಹಿಂದೆ ಬೌದ್ಧರನ್ನು ಆಡಿಕೊಳ್ಳಲು ಸಾಲುಸಾಲು ಪ್ರಹಸನಗಳನ್ನು ಈ ಪೇಜಾವರ ಮತದವರು ಮಾಡಿರುವ ಸಾಕಷ್ಟು ಉದಾಹರಣೆಗಳಿವೆ ಹಂಗೆ ವಿಶಾಲರ್ಥದಲ್ಲಿ ಈ ನಾಟಕ ಮಾಡಬೇಕು ಮತ್ತೆ… (ಸುಮ್ಮನೇ ಬ್ರಾಹ್ಮಣರನ್ನು ಆಡಿಕೊಳ್ಳುವುದಕ್ಕಾಗಿ ನಾಟಕ ಮಾಡಬಾರದು)

  3. MAHESH B.MAINDARGI
    Sep 7, 2019 Reply

    ಅದ್ಭುತ.. ಆತ್ಮವಿಶ್ವಾಸದಿಂದ ನೂರು ಅಲ್ಲ ಸಾವಿರ ಬಾರಿ ಹೇಳುತ್ತೇವೆ-
    “ನಾವೂ ಲಿಂಗಾಯತರು ನಮ್ಮ ಧರ್ಮ ಲಿಂಗಾಯತ” ನಾವೂ ಹಿಂದು ಧರ್ಮದ ಭಾಗವಲ್ಲಾ..
    ನಮಗೆ ಬಸವಣ್ಣನೇ ಗುರು, ಧರ್ಮಸ್ಥಾಪಕ, ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ… ಹಿರಿಯರಾದ ಪೇಜಾವರ ಶ್ರೀಗಳು ತಮ್ಮ ದ್ವಿಮುಖ ನೀತಿ ನಿಯಮಗಳನ್ನು ಬದಿಗೊತ್ತಿ ಲಿಂಗಾಯತ ಧರ್ಮದ ಬಗ್ಗೆ ಸತ್ಯ ಪ್ರತಿಪಾದನೆ ಮಾಡಬೇಕೆಂದು ವಿನಂತಿ ಮಾಡುವೆ..
    ಜಾಗತಿಕ ಲಿಂಗಾಯತ ಮಹಾಸಭಾದವರು ಸ್ವತಂತ್ರಧರ್ಮಕ್ಕಾಗಿ ಕಾನೂನು ಹೋರಾಟ ಆರಂಭಿಸಿ ಯಶಸ್ವಿ ಆಗಲೆಂದು ಪ್ರಾರ್ಥಿಸುತ್ತೇನೆ.

  4. Shobhadevi Kamalapura
    Sep 7, 2019 Reply

    ಕನಸಿನಲ್ಲಿ ನಡೆಯುವ ಸಂಭಾಷಣೆ ಮತ್ತು ಅಲ್ಲಲ್ಲಿ ಬಳಸಲಾದ ವಚನಗಳು ಲಿಂಗಾಯತ ಧರ್ಮದ ಆಶಯಗಳನ್ನು ಅರ್ಥಪೂರ್ಣವಾಗಿ ತಿಳಿಸುತ್ತವೆ. ಕುತೂಹಲಕರವಾಗಿದೆ ಕನಸು.

  5. Keshava K
    Sep 8, 2019 Reply

    ಸ್ಮಶಾನವಾಸಿಗಳೇ, ನೀವು ಪೇಜಾವರ ಶ್ರೀಗಳನ್ನು ಭೇಟಿ ಆದದ್ದು ನಿಮ್ಮ ಪೂರ್ವಜನ್ಮದ ಪುಣ್ಯ ಎಂಬುದು ನೆನಪಿರಲಿ. ಅವರೆದುರು ವಾಸ್ತವದಲ್ಲಿ ನಿಂತು ಧರ್ಮದ ಬಗ್ಗೆ ಮಾತನಾಡಿ ಗೆಲ್ಲುವುದು ಯಾರಿಂದಲೂ ಸಾಧ್ಯವಿಲ್ಲ. ಪೂಜ್ಯರು ಪ್ರಕಾಂಡ ಪಂಡಿತರು. ನೀವು ಏನೇ ಹೇಳಿ ಲಿಂಗಾಯತರು ಹಿಂದೂಗಳೆಂದೇ ನಮ್ಮ ವಾದ.

    • Madapathi.V.V
      Dec 22, 2019 Reply

      ಶರಣು ಶರಣಾರ್ಥಿ. ಲಿಂಗಾಯತರಿಗೆ ಆಚಾರ, ವಿಚಾರ, ಸಾಹಿತ್ಯ, ಸಂಸ್ಕೃತಿ ಎಲ್ಲಾ ಲಿಂಗವಂತದಿಂದ ಬಂದುದರಿಂದ ಮೊದಲು ನಾವು ಲಿಂಗವಂತರು ನಂತರ, ಭೌಗೋಳಿಕ ವಾಗಿ ಹೆತ್ತ ನೆಲ ನಮಗೆ ತಾಯಿಯ ಸಮ. ನಾವು ಭಾರತೀಯರೆಂದು ಗರ್ವದಿಂದ ಹೇಳುವೆನು. ಈ ಹಿಂದೂ ಎಂಬ ಪದವು ಎಂದು ಬಂತು ನೀವು ತಿಳಿಸಬೇಕು.

      ಶರಣು ಶರಣಾರ್ಥಿ.

  6. ವೀರಣ್ಣ ಕಮತಗಿ
    Sep 8, 2019 Reply

    ಲಿಂಗಾಯತವು ಯಾವತ್ತಿದ್ದರೂ ಸ್ವತಂತ್ರ ಧರ್ಮವೇ. ಪೇಜಾವರರ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ವಚನಗಳ ಗಟ್ಟಿತನವನ್ನು ಡೈಲಾಗ್ ಮಾದರಿಯಲ್ಲಿ ಅರ್ಥಗರ್ಭಿತವಾಗಿ ಬರೆದಿರುವಿರಿ. ಒಂದೊಂದು ಮಾತೂ ಲಿಂಗಾಯತರೂ ಸೇರಿದಂತೆ ಎಲ್ಲರೂ ತಿಳಿದುಕೊಳ್ಳಬೇಕು, ಹಾಗೆ ಬರೆದಿದ್ದೀರಿ.

  7. Naveena h a
    Sep 9, 2019 Reply

    ಲಿಂಗಾಯತ ಸ್ವತಂತ್ರ ಧರ್ಮ ಎಂಬುದನ್ನು ಅರ್ಥ ಗರ್ಭಿತವಾಗಿ ವಿವರಿಸಿದ್ದಾರೆ. ಮುಕ್ತ ಸಂವಾದಕ್ಕೆ ಕೊಳ್ಳಿಹಿಟ್ಟು ಏಕ ಸಂಸ್ಕೃತಿಯನ್ನು ಹೇರುತ್ತಿರುವ ಕಾಲ ಘಟ್ಟದಲ್ಲಿ ಕನಸ್ಸಿನಲ್ಲಾದರೂ ಸಂವಾದ ನಡೆಸಿ ವಚನ ಚಳವಳಿಯ ಮೌಲ್ಯ ಮತ್ತು ಪರಂಪರೆಯನ್ನು ಅರ್ಥಗರ್ಭಿತವಾಗಿ ವಿವರಿಸಿರುವ ಲೇಖಕರಿಗೆ ಧನ್ಯವಾದಗಳು.
    ಈ ಲೇಖನ ಓದಿದ ನಂತರ ತುರ್ತಾಗಿ ಅರಿಯ ಬೇಕಾಗಿರುವ ಮತ್ತು ಆಗಬೇಕಾಗಿರುವ ಕಾರ್ಯಗಳಿವೆ. ಎಲ್ಲರೂ ಒಂದು ಎಲ್ಲರೂ ಹಿಂದೂ ಎಂಂದು ಕೇವಲ ಬಾಯಿ ಮಾತಿನಲ್ಲಿ ಹೇಳುವ ಮೂಲಕ ಹಿಂದೂ ಬ್ರಾಹ್ಮಣ ಸಾಮ್ರಾಜ್ಯಶಾಹಿಯನ್ನು ಕಟ್ಟುತ್ತಿರುವವರ ರಾಜಕೀಯ ಕುತಂತ್ರವನ್ನು ಸ್ಪಷ್ಟವಾಗಿ ಅರಿತು ಕೊಳ್ಳಬೇಕಿದೆ. ಈ ಸಾಮ್ರಾಜ್ಯ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿರುವ ನಮ್ಮ ಲಿಂಗಾಯತ ಸಮಾಜಕ್ಕೆ ವಚನ ಚಳವಳಿಯ ಮಹತ್ವ, ಉದ್ದೇಶಗಳನ್ನು ತಿಳಿಹೇಳ ಬೇಕಿದೆ ಹಾಗು ಲಿಂಗಾಯತರಾದಿಯಾಗಿ ಎಲ್ಲಾ ಶೋಷಿತ ಹಿಂದುಳಿದ ಸಮಾಜದ (ಬಹುಜನ ಸಮಾಜ) ಯುವ ಜನಾಂಗವನ್ನು ವಚನ ಚಳವಳಿಗೆ ಪೂರಕವಾಗಿ ಈ ಶ್ರೇಣೀಕೃತ ಭಾರತೀಯ ಸಮಾಜವನ್ನು ಸಮಾನತೆಯ ತಳಹದಿಯ ಮೇಲೆ ಪುನರ್ ನಿರ್ಮಿಸುವ ಕಾರ್ಯಕ್ಕೆ ಕಂಕಣಬದ್ದರಾಗಿರುವಂತೆ ತಯಾರಿ ಮಾಡಬೇಕಿದೆ. ಇಲ್ಲದಿದ್ದರೆ ಈ ಲೇಖನದ ಉದ್ದೇಶ ಮತ್ತು ಚರ್ಚೆ ಸೀಮಿತವಾಗಿ ಪ್ರಜ್ಞಾವಂತ ಸಮಾಜದಲ್ಲೇ ಗಿರಕಿ ಒಡೆದು ಪ್ರಜ್ಞೆಯಿಂದ ದೂರವಿರುವ ಬಹುಸಂಖ್ಯಾತ ಭಾರತೀಯರನ್ನ ತಲುಪದೇ ಹಿಂದೂ ಸಾಮ್ರಾಜ್ಯ ಶಾಹಿಯ ಕಪಿಮುಷ್ಟಿಯಲ್ಲೇ ಕೊಳೆಯುವ ದುಸ್ತಿತಿಗೆ ಎಡೆಮಾಡಿ ಕೊಡುತ್ತದೆ.

  8. KESHAVAMURTHY
    Sep 9, 2019 Reply

    ಹಿಂದೂ ಧರ್ಮದ ಉತ್ಪನ್ನಗಳಾದ ವೇದಗಳು, ಉಪನಿಷತ್ತುಗಳು, ಶೃತಿ ಸ್ಮೃತಿಗಳೆಲ್ಲವೂ ಸ್ಥಿರ ಸಿದ್ದವಸ್ತುಗಳಾಗಿರುವುದರಿಂದ ಅವುಗಳು ಯಾವುದೇ ವೈಯಕ್ತಿಕ ಸ್ವೇಚ್ಚೆಗಾಗಲೀ ಬದುಕಿನ ಅನುಸಂದಾನಕ್ಕಾಗಲೀ ಸಣ್ಣ ಅವಕಾಶವನ್ನೂ ಕೊಡುವುದಿಲ್ಲ ಎಲ್ಲವೂ ತನ್ನ ಪರಧಿಯೊಳಗೆ ತಿರುಗುತ್ತಲೇ ಇರುತ್ತದೆ. ಆದರೆ ವಚನ‌ಚಳುವಳಿ(ಲಿಂಗಯತನ)ಮನುಷ್ಯನ ಮನಸ್ಸಿನಿಂದ, ಬದುಕಿನ ಸಂಕೋಲೆಗಳ ಬಿಡುಗಡೆಯಿಂದ ಮೊದಲುಗೊಳ್ಳುವ ನಡೆಗೆಗಳಾಗಿ ನಮ್ಮನ್ನು ಪ್ರತೀ ಕ್ಷಣದಲ್ಲಿ ಎಚ್ಚರವಾಗಿಸುವ ನೈತಿಕ ಪ್ರಜ್ಞೆಯಾಗಿ ಈ ನೆಲದಲ್ಲಿ ಉಳಿದುಕೊಂಡಿದೆ. ಆದ್ದರಿಂದ ಪೇಜಾವರರ ಹಿಂದೂ ಧರ್ಮಕ್ಕಾಗಲೀ ಅವರ ಸನಾತನ‌ ಸಂಸ್ಕೃತಿಕ್ಕಾಗಲೀ ಬಸವ ಎಂದಿಗೂ‌ ಸಿಗುವುದಿಲ್ಲ.

  9. ಮಧುಸೂದನ, ಮೈಸೂರು
    Sep 9, 2019 Reply

    ಗಂಭೀರ ವಿಷಯ, ಗಂಭೀರ ಮಾತುಕತೆ. ಇಂಥ ಕನಸು ನನಸಾಗಲಿ, ಪೇಜಾವರರು ಮುಕ್ತವಾಗಿ ಚರ್ಚೆ ನಡೆಸಿ ಲಿಂಗಾಯತ ಧರ್ಮದ ವಿಶೇಷತೆಯನ್ನು, ಅಸ್ತಿತ್ವವನ್ನು ಮನಗಾಣುವಂತಾಗಲಿ. ಅವರೊಬ್ಬ ಪ್ರಗತಿಪರ ಚಿಂತಕರೆಂದು ನಾನು ನಂಬಿದ್ದೇನೆ. ಶರಣರ ವಿಭಿನ್ನತೆಯನ್ನು ಅವರು ಅರಿಯಲಿ, ಈ ಲೇಖನ ಅವರಿಗೆ ತಲುಪಿಸಲು ನಾನೂ ಯತ್ನಿಸುತ್ತೇನೆ.

  10. Kiran Varad
    Sep 9, 2019 Reply

    ವೈದಿಕರಿಗಿಂತ ಲಿಂಗಾಯತರಿಗೇ ಈ ಕನಸು ಪಾಠದಂತಿದೆ. ವಿಭೂತಿಧಾರಿಗಳು ಇಷ್ಟು ಚೆನ್ನಾಗಿ ಧರ್ಮ ಅರ್ಥಮಾಡಿಕೊಂಡರೆ ಗ್ರೇಟ್, ಸ್ವತಂತ್ರ ಸಿಕ್ಕಂತೆ, ಮಾನ್ಯತೆ ಲಭಿಸಿದಂತೆ.

  11. ಗಣಪತಿ ವಿ.ಪಿ
    Sep 10, 2019 Reply

    ನಮ್ಮ ಮನೆ ಪಕ್ಕದವರೇ ಲಿಂಗಾಯತರು, ಅವರಿಗೂ ಬ್ರಾಹ್ಮಣರಿಗೂ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಇಂಥವರಿಗೆ ಪ್ರತ್ಯೇಕ ಧರ್ಮ ಯಾಕೆ? ನೀವು ಮೇಲೆ ಹೇಳಿದ ಯಾವ ತಾತ್ವಿಕ ಸಿದ್ಧಾಂತವೂ ಇಲ್ಲದ ಲಿಂಗಾಯತರನ್ನು ನೋಡಿದ್ದೇನೆ. ಅವರೂ ಗುಡಿ-ಗುಂಡಾರಗಳನ್ನು ಸುತ್ತುತ್ತಾರೆ. ಪೂಜಾರಿಗಳ ಸಹಾಯವಿಲ್ಲದೆ ಯಾವ ಕಾರ್ಯವನ್ನೂ ಮಾಡುವುದಿಲ್ಲ. ಶರಣರ ಬಗ್ಗೆ ಏನೂ ಗೊತ್ತಿಲ್ಲದ, ದೇವಾನುದೇವತೆಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಂಡ ಲಿಂಗಾಯತರನ್ನು ಎಲ್ಲಿ ಸೇರಿಸುತ್ತೀರಿ? ನಿಮ್ಮ ಕನಸಿನ ಹಿಂದಿನ ಕಳಕಳಿ ಇಂಥವರಿಗೆ ಅರ್ಥವೂ ಆಗಲಿಕ್ಕಿಲ್ಲ.
    -ಗಣಪತಿ ವಿ.ಪಿ

    • Madapathi.V.V
      Dec 22, 2019 Reply

      ಶರಣು ಶರಣಾರ್ಥಿ. ಗಣಪತಿ ಶರಣರೆ…
      “ಬಸವ ಶರಣ ಮರುಳಶಂಕರದೇವರ ವಚನ”

      “ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ,
      ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ,
      ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ
      ಮಾಡಿ,
      ದುರ್ಗುಣ ದುರಾಚಾರದಲ್ಲಿ ನಡೆದು,
      ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ.
      ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ.
      ಇದ ನಮ್ಮ ಶಿವಶರಣರು ಮೆಚ್ಚರು.
      ಲಿಂಗವಂತನ ಪರಿ ಬೇರೆ ಕಾಣಿರೆ.
      ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ.
      ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ.
      ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ,
      ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು.
      ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು.
      ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ
      ಸರ್ವನಿರ್ವಾಣಿಕಾಯೆಂಬೆನು.
      ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ,
      ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ,
      ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ.
      ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
      ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ
      ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ
      ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.”
      ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 1116

      ನಿಮ್ಮ ಪಕ್ಕದವರಿಗೆ ಸಾಹಿತ್ಯ ಪರಿಜ್ಞಾನ ವಿಲ್ಲ ಎಂದು ಖಚ್ಚಿತವಾಗಿಯೂ ನೀವೇ ಹೇಳಲಾಗಿದೆ. ದಯವಿಟ್ಟು ಅವರಿಗೆ ಸಾಹಿತ್ಯವನ್ನು ಪರಿಚಯಿಸಿ. ನೀವೂ ಓದಿ.
      ಶರಣು ಶರಣಾರ್ಥಿ.

  12. jeevan koppad
    Sep 10, 2019 Reply

    ಕನಸಿನಲ್ಲಿ ನಡೆಯುವ ಮಾತುಕತೆ ಗಂಭೀರವೂ ಅರ್ಥಗರ್ಭಿತವೂ ಆಗಿದೆ. ಹೀಗೊಂದು ಸಂವಾದ ತಾತ್ವಿಕ ನೆಲೆಗಟ್ಟಿನ ಮೇಲೆ ನಡೆಯಲೇ ಬೇಕು. ಆಗ ಹೊಸ ಪೀಳಿಗೆಗೆ ಸತ್ಯ ಗೊತ್ತಾಗುತ್ತದೆ. ಅಂಥದೊಂದು ಝಲಕ್ ತೋರಿಸಿದ ಬಯಲು ಬ್ಲಾಗಿಗೆ ಹ್ಯಾಟ್ಸಾಫ್. ಕನಸು ಕಂಡ ಸ್ಮಶಾನವಾಸಿಗಳಿಗೆ ಶರಣು.

  13. ಸಿದ್ದಪ್ಪ ಮೂಲಗಿ, ಬೀದರ್
    Sep 11, 2019 Reply

    ಕನಸು ತುಂಬಾ ಚೆನ್ನಾಗಿದೆ. ಪೇಜಾವರ ಶ್ರೀಗಳ ಪ್ರತಿಗಾಮಿತನ ಮನಮುಟ್ಟುವಂತೆ ಬಟಾಬಯಲುಗೋಳಿಸಿದ್ದಾರೆ. ಓದುತ್ತಾ ಹೋದಂತೆ ಇದೊಂದು ಮುಖಿಮುಖಿಯಾಗಿ ನಡೆದಿರುವ ಸಂವಾದ ಎನಿಸಿತು.

  14. deveeramma pavate
    Sep 11, 2019 Reply

    ಒಂದು ವೇಳೆ ಪೇಜಾವರರೊಂದಿಗೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಮುಖಾಮುಖಿಯಾದರೆ ಇಂತದೊಂದು ಸಂವಾದ ಸಾಧ್ಯವೇ? ಹೀಗೆ ಆರೋಗ್ಯಕರವಾದ ಚರ್ಚೆಗಲಿಲ್ಲದೆ ಸಮಾಜ ಗಬ್ಬೆದ್ದು ಹೋಗಿದೆ. ಪೇಜಾವರ ಶ್ರೀಗಳು ತೆರೆದ ಮನಸ್ಸಿನವರೆಂದು ಕೇಳಿದ್ದೇನೆ. ಅವರಿಗೆ ಖಂಡಿತ ಈ ಹೋರಾಟದ ನಿಜ ಗೊತ್ತಾಗುತ್ತದೆ. ಆಗ ಅವರೂ ಬೆಂಬಲ ಕೊಡಬಹುದು!! ಅಂಥ ಹೃದಯವಂತಿಕೆಯನ್ನು ಅವರಿಂದ ನಿರೀಕ್ಷಿಸಬಹುದೇ?…. ಇದೂ ನನ್ನ ಕನಸೇ ಇರಬೇಕು….. ಬಿಡಿ.

  15. Tippeswamy.j
    Sep 12, 2019 Reply

    ಶಿವನ ಹೆಸರಿನಲ್ಲಿ ಗೊಂದಲಗಳನ್ನು ಸೃಷ್ಟಿ ಹಾಕಿದವರು ಜನರ ಭಾವನೆಗಳನ್ನು encash ಮಾಡಿಕೊಳ್ಳುತ್ತಿದ್ದಾರೆ. ಶರಣರು ಸನಾತನಿಗಳ ಮೇಲೆ ದಂಗೆ ಎದ್ದರೆ? ವಚನಗಳು ಸ್ಪಷ್ಟವಾಗಿ ಕರ್ಮಾಚರಣೆಗಳನ್ನು ಖಂಡಿಸುತ್ತವೆ. ವಚನಗಳ ಮೂಲಕವೇ ಪೇಜಾವರರ ಬಾಯಿ ಕಟ್ಟುವ ರೀತಿ ಚನ್ನಾಗಿದೆ.

  16. Surendra
    Sep 12, 2019 Reply

    ಪೇಜಾವರರಿಗೆ ಉಪದೇಶ ಮಾಡುವುದಕ್ಕಿಂತ ಮೊದಲು ನೀವು ಅರ್ಥಮಾಡಿಕೊಳ್ಳಿ. ಅವರು ಜ್ಞಾನಿಗಳು, ತಪಸ್ವಿಗಳು. 12ನೇ ಶತಮಾನದ ವಚನಗಳನ್ನ ಹಿಡಿದುಕೊಂಡು ಸನಾತನ ಧರ್ಮ ಎದುರಿಸುವುದು ಸಾಧ್ಯವೆ? ಆ ಕಲ್ಪನೆಯೂ ಬೇಡ, ಕನಸೂ ಬೇಡ. ಯಾವುದೋ ಒಂದೆರಡು ಆಚರಣೆಗಳನ್ನು ಒಪ್ಪದಿದ್ದ ಮಾತ್ರಕ್ಕೆ ಲಿಂಗಾಯತರು ಹಿಂದೂಗಳಲ್ಲವೆಂದು ಹೇಳಲಾಗದು. ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದಗಳೇ ವಚನಗಳು.

  17. Guruswamy
    Sep 14, 2019 Reply

    ಹನ್ನೆರಡನೆ ಶತಮಾನದ ವಚನ ಚಳುವಳಿಯೂ ಸಾಮರಸ್ಯದ ದೃಷ್ಟಿಯಿಂದ ಕನ್ನಡಿಗರೆಲ್ಲರಿಗೂ ಆತ್ಮಗೌರವದ ಸಂಗತಿ… ಕನಸಿಗೊಂದು ವಿಚಾರಪೂರ್ಣ ಪೀಠಿಕೆ. ಕನಸಿನ ಹಿನ್ನೆಲೆಯಲ್ಲಿ ಇವತ್ತಿನ ಪರಿಸ್ಥಿತಿಯ ಕಾರಣವನ್ನು ತಿಳಿಸಿದ್ದಾರೆ. ಪೇಜಾವರ ಶ್ರೀಗಳ ಮಾತು ಮಾತಿನಲ್ಲಿ ರಾಜಕೀಯದ ವಾಸನೆ. ಧರ್ಮದ ರಾಜಕೀಯ ಗುರುತಿಸಲಾಗದಷ್ಟು ಸೂಕ್ಷ್ಮವಾಗಿರುತ್ತದೆ ಎನಿಸುತ್ತದೆ. ಆ ರಾಜಕೀಯಕ್ಕೆ ಇವತ್ತು ಇಡೀ ದೇಶ ಬಲಿಯಾಗಿದೆ.

  18. Karibasappa hanchinamani
    Sep 15, 2019 Reply

    ಕನಸಲ್ಲಾದರೂ ಪೇಜಾವರ ಸ್ವಾಮಿ ವಚನಗಳನ್ನು ಓದಿ ಜೀವನ ಪಾವನ ಮಾಡಿಕೊಳ್ಳಲಿ. ವಚನಗಳು ಅನುಭಾವದಿಂದ ಬಂದ ಸತ್ಯ ದರ್ಶನ. ಕನಸಿನ ಮಾತುಕತೆ ಕುತೂಹಲಕರವಾಗಿದೆ, ಇನ್ನಷ್ಟು ಪ್ರಶ್ನೋತ್ತರ ನಡೆಸಬೇಕಿತ್ತೆಂಬುದು ನನ್ನ ಅಬಿಪ್ರಾಯ.

  19. ಜಯರಾಜ್ ಶಿವಮೊಗ್ಗ
    Sep 15, 2019 Reply

    ಆರ್ಯರಿಗಿಂತಲೂ ಜ್ಞಾನಿಗಳಿಲ್ಲವೆನ್ನುವ ಮಾತುಗಲನ್ನು ಕೇಳಲಾಗದು. ಇವರಿಗೆ ವಚನಪಾಠ ಮಾಡಲು ಸಾಧ್ಯವೇ? ಅವರ ತಲೆಯೆಲ್ಲಾ ವೇದೋಪನಿಷತ್ತುಗಳಿಂದ ತುಂಬಿ ಹೋಗಿರುವ ಅವರ ತಲೆಯೊಳಗೆ ವಚನಗಳು ಇಳಿಯುತ್ತವೆಯೇ? ಹೋಗಲಿ, ತಮ್ಮ ಪಾಡಿಗೆ ತಾವಿದ್ದು, ಲಿಂಗಾಯತರ ಗೊಡವೆಗೆ ಹೋಗದೆ ಉಳಿಯಲಿ. ಈ ಲೇಖನವನ್ನು ಶ್ರೀಗಳಿಗೆ ತಲುಪಬೇಕು, ನಾನು ಪ್ರಯತ್ನಿಸುತ್ತೇನೆ.

  20. sharanappa b.kerur
    Sep 16, 2019 Reply

    ಇಂಥ ಕನಸಿಗಾಗಿ ನಾನು ಕಾಯುತ್ತಿದ್ದೆ. ಈ ರೀತಿಯ ಕನಸು ಕಾಣುವವರಿಗೆ ಸಮಾಜದ ಮೇಲೆ ನಿಜವಾದ ಕಳಕಳಿ ಇರುತ್ತದೆ. ವಾಸ್ತವದ ಬಗ್ಗೆ ನೋವಿರುತ್ತದೆ. ನಿಮ್ಮ ಕನಸು ನನಸಾಗಲಿ. ವಚನಗಳು ಪೇಜಾವರರ ಕೈ ಸೇರಲಿ, ಅವರ ಮನಸ್ಸು ಪರಿವರ್ತನೆಯಾಗಲಿ, ನಮ್ಮ ಹೋರಾಟಕ್ಕೆ ಕೈ ಸೇರಿಸಲಿ. ಆ ದಿನ ನಾನು ಅವರನ್ನು ತಂದೆಯಂತೆ ಗೌರವಿಸುತ್ತೇನೆ.

  21. Pro Mallikarjuna
    Sep 18, 2019 Reply

    ಕನಸು!! ಆಹಾ ಅದ್ಭುತವಾದ ಕನಸು!!! ಮಾತುಕತೆಯಲ್ಲಿನ ಪ್ರಬುದ್ಧತೆ ನಿಜಕ್ಕೂ ಮನನಯೋಗ್ಯ. ಪೇಜಾವರರು ಇದನ್ನು ಓದಲೇ ಬೇಕು, ಹೇಗಾದರೂ ಅವರ ಶಿಷ್ಯೋತ್ತಮರ ಮೂಲಕ ಇದನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಿ.

  22. ಗಂಗಾಧರ ಕೆ
    Sep 18, 2019 Reply

    ಲೇಖನ ಸಕಾಲಿಕ. ಆದರೆ ಪೇಜಾವರರೊಡನೆ ಸಂವಾದವೇ ಸಾಧ್ಯವಿಲ್ಲ. ಅವರು ಪಲಾಯನವಾದಿಗಳು. ಅವರ ಹೇಳಿಕೆಗಳಲ್ಲಿಯೇ ದ್ವಂದ್ವಗಳೂ ಇವೆ, ಗೊಂದಲಗಳೂ ಇವೆ. ಅವರಿಗೆ ವಿದೋಧಿಸುವುದಷ್ಟೇ ಮುಖ್ಯವಾಗಿರೋದರಿಂದ ನಿಜವಾದ ಚರ್ಚೆ ಬೇಕಾಗಿಲ್ಲ. ತಮ್ಮ ತಿಳುವಳಿಕೆಯೇ ಸುಪ್ರೀಂ ಎಂದುಕೊಂಡವರೊಂದಿಗೆ ಎಂತಹ ಸಂವಾದ ಸಾಧ್ಯ?

  23. ರವೀಂದ್ರ ಪ್ರಸಾದ್, ಚಿತ್ರದುರ್ಗ
    Sep 22, 2019 Reply

    ಪೇಜಾವರರೇ ಮಾತನಾಡುವಂತಿವೆ ಅವರ ಡೈಲಾಗುಗಳು. ಕನಸಿನ ರೂಪದಲ್ಲಿ ಪ್ರಬುದ್ಧವಾದ ಸಂವಾದವನ್ನು ನಡೆಸಿದ ಲೇಖಕರು ಶ್ರೀಗಳನ್ನು ವಚನಗಳ ಓದಿಗೆ ಹಚ್ಚಿದ ರೀತಿ ತುಂಬಾ ಚನ್ನಾಗಿದೆ. ವಚನಗಳನ್ನು ನಾನೂ ಸರಿಯಾಗಿ ಓದಿಲ್ಲ, ನಾನೂ ತಿಳಿಯಬೇಕಾದದ್ದು ಬಹಳ ಇದೆ.

  24. ಅರುಣ್ ಪಾಟೀಲ್
    Sep 22, 2019 Reply

    ಶ್ರೀಗಳು ನಿಜಕ್ಕೂ ಆರೋಗ್ಯಕರ ಚರ್ಚೆಗೆ ಆಹ್ವಾನ ಕೊಡುತ್ತಿದ್ದಾರೋ ಅಥವಾ ತಮ್ಮ ವಿಚಾರಗಳನ್ನು ಹೇರಲು ನೋಡುತ್ತಿದ್ದಾರೋ… ಪೇಜಾವರರ ಜತೆಯಲ್ಲಿ ಇಂತಹ ಚರ್ಚೆ ನಡೆದರೆ ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಅಂದುಕೊಳ್ಳುತ್ತೇನೆ. ಇನ್ನೊಂದಿಷ್ಟು ಪ್ರಶ್ನೋತ್ತರಗಳನ್ನು ನಡೆಸಬಹುದಿತ್ತು…..

  25. Prabhakar Banavar
    Sep 25, 2019 Reply

    ಸಮರಸವನ್ನು ಮರೆಯುತ್ತಿರುವವರು ಏಕತ್ವದ ಮಂತ್ರ ಹಿಡಿದುಕೊಂಡು ಆಳಲು ತೊಡಗುತ್ತಾರೆ. ದೇಸಿ ಸಂತರು ಸಾಮರಸ್ಯದ ಪ್ರತಿಪಾದಕರು. ಸಾಮರಸ್ಯಕ್ಕೆ ಅದ್ಭುತ ಉದಾಹರಣೆಯಂತೆ ಬದುಕಿದ ಶರಣರ ಕೊಡುಗೆಯನ್ನು, ಅವರ ವಿಶಿಷ್ಟತೆಯನ್ನು ಯಾರೂ ಅಲ್ಲಗಳೆಯಲಾಗದು. ಪೇಜಾವರರಿಗೆ ಇದು ಗೊತ್ತಿಲ್ಲವೆಂದು ನನಗೆ ಅನಿಸುವುದಿಲ್ಲ. ಅವರದು ಜಾಣತನದ ನಾಜೂಕು ಬುದ್ದಿ. ವಿಶ್ವದಲ್ಲೇ ಶ್ರೇಷ್ಠ ಮಟ್ಟದ ತತ್ವಗಳು ವಚನಗಳಲ್ಲಿವೆ. ಅವುಗಳನ್ನು ಹೊರಗೆ ಹೋಗದಂತೆ ತಡೆಯುವ ಹುನ್ನಾರ ಎಂದಿನಿಂದಲೂ ನಡೆಯುತ್ತಾ ಬಂದಿದೆ. ಪೇಜಾವರರೊಂದಿಗೆ ಈ ಕನಸಿನಂತಹ ಮಾತುಕತೆ ನಡೆಯುವುದಾದರೆ ಎಷ್ಟು ಚನ್ನ. ನಾನೂ ಲೇಖಕರ ಜೊತೆಗೆ ಇಂತಹ ಕನಸು ಕಾಣಲು ಇಚ್ಚಿಸುತ್ತೇನೆ.

  26. Vinay Bengaluru
    Sep 25, 2019 Reply

    ಈ ಕನಸನ್ನು ನಾಟಕ ರೂಪಕ್ಕೆ ಇಳಿಸುವುದಾದರೆ, ಅದನ್ನು ಮಹಾದೇವ ಹಡಪದ ಶರಣರಿಗೆ ಕೊಡಿ, ನಾನೂ ಪಾತ್ರವಹಿಸುತ್ತೇನೆ. ಅದ್ಭುತ ಕನಸು.

  27. Madapathi V.v
    Dec 22, 2019 Reply

    ಪೇಜಾವರ ಅಜ್ಜಾ ಅವರಿಗೆ ಅನಂತ ಶರಣು ಶರಣಾರ್ಥಿ. ಸ್ಮಶಾನವಾಸಿಗಳ ಶ್ರಿ ಜ್ಞಾನಪದ್ಮಗಳಿಗೆ ಶರಣು. ಪೇಜಾವರ ತಾತ ಅವರು ವರ್ಣ ವ್ಯವಸ್ಥೆ ಎಲ್ಧಿ ಎಷ್ಟೋ ತಿಳಿದು ಕೂಂಡವರು. ಆದರೇ ಸ್ಮಶಾನವಾಸಿಗಳನ್ನು ಕಂಡಡೆ ನಾನು ಕಿಂಚಿತ್ತಾದೆ. ಅವರಿಗೆ ಅವರ ಕನಸು ನನಸಾಗಲು ಸಾಧ್ಯ ಎಂದು ಅವರು ಕಂಡ ಕನಸಿನಲ್ಲಿನ ವಚನಗಳಿಗೆ ಹೇಳುತ್ತವೆ. ಶರಣು ಶರಣಾರ್ಥಿ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ಬಯಲಾಟ
ಬಯಲಾಟ
March 17, 2021
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
Copyright © 2023 Bayalu