Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
Share:
Articles February 11, 2022 ಡಾ. ವಿಜಯಕುಮಾರ್ ಬೋರಟ್ಟಿ

ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…

ಮಂಟೇಸ್ವಾಮಿಯ ಮಡಿವಾಳ ಮಾಚಯ್ಯ ಮತ್ತು ಶೈವ ಪುರಾಣಗಳ ಸಿರಿಯಾಳ

ಕನ್ನಡ ವಿದ್ವಾಂಸರಾದ ವೆಂಕಟೇಶ ಇಂದ್ವಾಡಿಯವರಿಂದ ಸಂಪಾದಿಸಲ್ಪಟ್ಟಿರುವ ‘ಧರೆಗೆ ದೊಡ್ಡವರ ಕತೆ’ (1996) ಮೈಸೂರು ಮತ್ತು ಚಾಮರಾಜನಗರ ಸುತ್ತ-ಮುತ್ತಲು ಜನಪ್ರಿಯತೆ ಪಡೆದಿರುವ ಮಂಟೇಸ್ವಾಮಿಯನ್ನು ಕುರಿತಾಗಿರುವ ಜಾನಪದ ಕಾವ್ಯ. ಅನೇಕ ವಿದ್ವಾಂಸರು ಮತ್ತು ಈ ಕಾವ್ಯದ ಜಾನಪದ ಗಾಯಕರು (ಬಹುತೇಕ ಕೆಳ ಜಾತಿಗೆ ಸೇರಿದ ನೀಲಗಾರರು) ಮಂಟೇಸ್ವಾಮಿಯನ್ನು 12ನೇ ಶತಮಾನದ ಅಲ್ಲಮ ಪ್ರಭುವಿಗೆ ಹೋಲಿಸಿದ್ದಾರೆ. 12ನೇ ಶತಮಾನದ ಶಿವಶರಣರ ನಂತರ ಸಂಸ್ಥೀಕರಣ ಮತ್ತು ಜಡತ್ವವನ್ನು ಪಡೆದುಗೊಂಡ ವಚನಗಳ ವಿಚಾರಗಳನ್ನು ಪ್ರಶ್ನಾತ್ಮಕವಾಗಿ ಮತ್ತು ಬಂಡಾಯಕೋರ ಧೋರಣೆಯಿಂದ ವಿಮರ್ಶಿಸುತ್ತಾ, ವಚನಗಳ ‘ನೈಜ’ ಆಶಯಗಳನ್ನು ಕೆಳಹಂತದ ಜನರಿಗೆ ತಲುಪಿಸಿದ ಜಂಗಮನೆಂದು ಮಂಟೇಸ್ವಾಮಿಯನ್ನು ವರ್ಣಿಸಲಾಗಿದೆ.

ಈ ಜಾನಪದ ಕಾವ್ಯದಲ್ಲಿ ಬರುವ ಮಡಿವಾಳ ಮಾಚಯ್ಯನ ಕತೆ, ಪುರಾಣ ಪ್ರಸಿದ್ಧ ಸಿರಿಯಾಳನ ಕತೆಯನ್ನು ಹೋಲುತ್ತದೆ. ಶೈವ ಭಕ್ತಿಯ ಸಂಕೇತವಾದ ಸಿರಿಯಾಳನ ಕತೆ 13ನೇ ಶತಮಾನದ ಹರಿಹರನ ರಗಳೆಗಳು ಮತ್ತು ತೆಲುಗಿನ ಸೋಮನಾಥನ ಬಸವ ಪುರಾಣದಲ್ಲಿದ್ದರೂ, ಅದರ ಮೂಲ ತಮಿಳಿನ ಜಾನಪದದಲ್ಲಿದೆ. ಶಿಷ್ಟ ಕಾವ್ಯದಲ್ಲಿ ಸಿರಿಯಾಳ ಭಕ್ತಿ ಮತ್ತು ತ್ಯಾಗದ ಪರಾಕಾಷ್ಠೆಯನ್ನು ಸಂಕೇತಿಸುತ್ತಾನೆ. ಶಿವನ ಮೇಲಿರುವ ಭಕ್ತಿಗಾಗಿ ತನ್ನ ಮಗನನ್ನೆ ಬಲಿ ತೆಗೆದುಕೊಂಡು ತ್ಯಾಗಮಯಿಯಾಗಿ ಹೊರಹೊಮ್ಮವ ವ್ಯಕ್ತಿಯಾಗಿ ಈ ಪುರಾಣಗಳು ಸಿರಿಯಾಳನನ್ನು ಬಿಂಬಿಸಿವೆ. ಈ ಕತೆ ದಕ್ಷಿಣ ಭಾರತದಾದ್ಯಂತ ಜಾನಪದ ರೂಪದಲ್ಲಿ ಜನಪ್ರಿಯ ಪಡೆದುಕೊಂಡಿತು. ಧರೆಗೆ ದೊಡ್ಡವರ ಕತೆಯಲ್ಲಿ ಇದು ಮಡಿವಾಳ ಮಾಚಯ್ಯನ ರೂಪವನ್ನು ಪಡೆದುಕೊಂಡಿದೆ. ಲಿಂಗಾಯತ ಕಾವ್ಯ/ಪುರಾಣಗಳಲ್ಲಿ ನಿರ್ಲಕ್ಷ್ಯಗೊಳಗಾಗಿದ್ದ ಮಾಚಯ್ಯನ ಪಾತ್ರವನ್ನು ಜಾನಪದ ಕಾವ್ಯದ ಮುಖ್ಯವಾಹಿನಿಗೆ ತರಲಾಗಿದೆ. 63 ನಾಯನಾರರ ಜಾನಪದೀಯ ಕತೆಗಳು ಪುರಾಣಗಳಲ್ಲಿ ಹರಿದು, ಗ್ರಾಂಥಿಕ ರೂಪ ಪಡೆದುಕೊಂಡರೆ ಕನ್ನಡದ ಸನ್ನಿವೇಶದಲ್ಲಿ ಅದು ಮಂಟೆಸ್ವಾಮಿಯ ಜಾನಪದ ಕಾವ್ಯದಲ್ಲಿ ಕುಲವನ್ನು ಮೀರುವ ಸುಧಾರಣೆಯ ಪ್ರಯತ್ನವಾಗಿ ಕಾಣಿಸುತ್ತದೆ.

ಗ್ರಾಂಥಿಕ ರೂಪದ ಸಿರಿಯಾಳ ಭಕ್ತಿಯ ಪರಾಕಾಷ್ಟೆಯನ್ನು ತಲುಪಲು ತನ್ನ ಮಗನನ್ನು ಬಲಿ ಕೊಟ್ಟರೆ, ಧರೆಗೆ ದೊಡ್ಡವರ ಕತೆಯಲ್ಲಿ, ಅಸ್ಪೃಶ್ಯತೆಯನ್ನು ಮತ್ತು ಅದಕ್ಕೆ ಅಂಟಿಕೊಂಡಿರುವ ಮುಟ್ಟು/ ಮೈಲಿಗೆಯನ್ನು ವ್ಯಂಗ್ಯ ಮಾಡಿ, ಅದನ್ನು ನಗಣ್ಯವಾಗಿಸುವ ಸನ್ನಿವೇಶದಲ್ಲಿ ಮಾಚಯ್ಯನ ಕತೆ ಹೊರಹೊಮ್ಮುತ್ತದೆ. ಮಂಟೇಸ್ವಾಮಿಯ ಈ ಕಥನ-ಕಾವ್ಯದಲ್ಲಿ ಸಾಂಪ್ರದಾಯಿಕ/ಶಿಷ್ಟ/ಭಕ್ತಿಯ ಪರೀಕ್ಷೆ ಯಾಗಲಿ ಅಥವಾ ತ್ಯಾಗದ ಹಿರಿಮೆಯನ್ನಾಗಲಿ ವರ್ಣಿಸಿರುವುದನ್ನು ಕಾಣುವುದಿಲ್ಲ. ಮಾಚಯ್ಯನ ಭಕ್ತಿ ಪರೀಕ್ಷೆ ಇಲ್ಲಿ ಅಮುಖ್ಯವಾಗಿರುವುದರಿಂದ ಶಿಷ್ಟ ಮಾರ್ಗದ ಭಕ್ತಿಯ ಆಚಾರ-ವಿಚಾರಗಳು ಇಲ್ಲಿ ಅಂಚಿಗೆ ತಳಲ್ಪಟ್ಟಿವೆ. ಅಂದರೆ ಧರೆಗೆ ದೊಡ್ಡವರ ಕತೆಯಲ್ಲಿ ಇರುವ“ಮಾಚಯ್ಯನ ಕತ್ತ ಕೊಟ್ಗ ಚಂದ್ರಶಾಲ” ಪ್ರ್ರಸಂಗವು ಮಾಚಯ್ಯನ ಭಕ್ತಿಯನ್ನು ಪರೀಕ್ಷಿಸುವ ಸಾಹಸವನ್ನು ಮಾಡುವುದಿಲ್ಲ. ಮಾಚಯ್ಯನ ಕೊಟ್ಟ ಮಾತು ಮುಖ್ಯವಾಗುತ್ತದೆಯೇ ಹೊರತು, ಅವನ ಭಕ್ತಿಯಲ್ಲ. ಮಾಚಯ್ಯನು ತನ್ನ ಮಡಿ ಕೊಟ್ಟಿಗೆ, ಚಂದ್ರಶಾಲವನ್ನು ಮಂಟೇಸ್ವಾಮಿಗೆ ಕೊಡಲು ಇಷ್ಟ ಪಡದೆ, ಬೇರೆ ಏನನ್ನಾದರು ಕೇಳು ಕೊಡುತ್ತೇನೆ ಎಂದು ಆಣೆ ಮಾಡಿದಾಗ, ಮಂಟೇಸ್ವಾಮಿಯು ಆತನ ಸ್ವಂತ ಮಗನನ್ನೆ ಬಲಿ ಕೊಡು ಎಂದು ಹೇಳುವ ಮಾರ್ಮಿಕ ದೃಶ್ಯವನ್ನು ಈ ಪ್ರಸಂಗ ಒಳಗೊಂಡಿದೆ.

ಮಾಚಯ್ಯ ಪ್ರಸಂಗದ ಸಂಕ್ಷಿಪ್ತ ವಿವರಣೆ
ಶಿಶು ಮಕ್ಕಳನ್ನು ಪಡೆಯುತ್ತಾ ಪರ್ಯಟನೆಯಲ್ಲಿ ತೊಡಗಿರುವ ಮಂಟೆಸ್ವಾಮಿಗೆ ತನ್ನ ಶಿಶುಮಕ್ಕಳಿಗೆ ಒಂದು ಕಡೆ ನೆಲೆಸಲು ಜಾಗ, ಒಕ್ಕಲ್ಲನ್ನು ಗಳಿಸುವುದಕ್ಕೋಸ್ಕರ ಬೊಪ್ಪೆಗೌಡನ ಹತ್ತಿರ ಹೋಗಿ ಅವನಿಂದ ಕೊಟ್ಟುಗೆ ಮತ್ತು ಉರಿ ಗದ್ಗವನ್ನು ಪಡೆದ ಮೇಲೆ ಮಾಚಯ್ಯನಿಂದಲು ಸ್ವಲ್ಪ ಜಾಗವನ್ನು ಪಡೆದುಕೊಳ್ಳಬೇಕೆಂದೆನಿಸುತ್ತದೆ. ಪ್ರಯಾಣ ಮಾಡುತ್ತಾ ಮಂಟೇಸ್ವಾಮಿ ಮಾಚಯ್ಯನ ಮನೆಯ ಮುಂಬಾಲಿಗೆ ಬಂದು ನಿಲ್ಲುತ್ತಾನೆ. ಬಂದವನೆ ಭಿಕ್ಷೆ ಬೇಡುತ್ತಾನೆ. ಆದರೆ ಮಾಚಯ್ಯನಿಗಾಗಲಿ ಅಥವಾ ಅವನ ಪತ್ನಿ ಮಾದೇವಿಗಾಗಲಿ ಮಂಟೇಸ್ವಾಮಿಯ ದನಿ ಕೇಳುವುದಿಲ್ಲ. ಹನ್ನೆರಡು ವರ್ಷದಿಂದ ಕೆಟ್ಟು ಹೋಗಿದ್ದ ಉಬ್ಬ ಓಲಾ ಹತ್ತಿಸುವಲ್ಲಿ ತಲ್ಲೀನರಾಗಿದ್ದ ದಂಪತಿಗಳು ಮಂಟೇಸ್ವಾಮಿಯನ್ನು ಗಮನಿಸುವುದಿಲ್ಲ. ಇದರಿಂದ ಅಸಮಾಧಾನಗೊಂಡ ಮಂಟೇಸ್ವಾಮಿ ತನ್ನ ಕಪ್ಪು ಧೂಳ್ತದಿಂದ ಆ ಉಬ್ಬ ಓಲಗವನ್ನು ಭಗಭಗನೆ ಹತ್ಕೊಳ್ಳುವಂತೆ ಮಾಟ ಮಾಡುತ್ತಾನೆ. ಇದರಿಂದ ಆಶ್ಚರ್ಯಗೊಂಡ ಮಾಚಯ್ಯ ಯಾರು ಈ ಮಾಟವನ್ನು ಮಾಡಿದವರು ಎಂದು ನೋಡಲು ಮುಂಬಾಲಿಗೆ ಬಂದಾಗ ಮಂಟೇಸ್ವಾಮಿ ನಿಂತಿರುವುದನ್ನು ನೋಡುತ್ತಾನೆ.

ಮೊದಲಿಗೆ ಮಾಚಯ್ಯ ಮಂಟೇಸ್ವಾಮಿಯನ್ನು ಗುರುತಿಸದೆ, ತನ್ನ ಮನೆಯಲ್ಲಾದ ಮಾಟವನ್ನು ನಂಬಲಾರದೆ ಮುಂಬಾಗಿಲಿನ ಮುಂದೆ ನಿಂತಿರುವ ಮಂಟೇಸ್ವಾಮಿಯನ್ನು ನೋಡಿ ತಾವು ಯಾರು ಸ್ವಾಮಿ ಎಂದು ಕೇಳುತ್ತಾನೆ. ಹನ್ನೆರಡು ವರ್ಷದಿಂದ ತನ್ನ ಮನೆಯ ಓಲ ಹತ್ತಿರಲಿಲ್ಲ. ಆದರೆ ಈಗ ಹತ್ತಿಕೊಂಡು ಭಗಭಗನೇ ಉರಿತೊರದನ್ನು ನೋಡಿ ಯಾವುದೋ ಮಾರಿ, ಮಹಣಿ, ದುರ್ಗಿ, ಚೌಡಿ ಮನೆಯೊಳಗೆ ಹೊಕ್ಕಿಕೊಂಡಿರಬೇಕೆಂದು ಭಯಪಡುತ್ತಾನೆ. ಆದರೆ ಮಂಟೇಸ್ವಾಮಿ ಅವನ ಅನುಮಾನ ನಿವಾರಿಸುತ್ತಾ ಉಬ್ಬಾ ಓಲಗೆಯನ್ನು ಹತ್ತಿಸಲು ಮಾಟಮಾಡಿದವನು ನಾನೆ ಎಂದು ಹೇಳುತ್ತಾನೆ ಮತ್ತು ತಾನು ಧರೆಗೆ ದೊಡ್ಡವನು ಎಂದು ಸಾರುತ್ತಾನೆ. ಮುಟ್ಟು/ಮೈಲಿಗೆಯಾಗಿರುವ ತನ್ನ ಮನೆಗೆ ಮಂಟೇಸ್ವಾಮಿ ಬಂದಿರೊದನ್ನು ನೋಡಿ, “ಸ್ವಾಮಿ ಮುಟ್ಟುತಟ್ಟಿದ ಬಟ್ಟೆಯನ್ನೆಲ್ಲಾ ಎತ್ಕ ಬಂದು ನನ್ನ ಮನ್ಗ ತುಂಬಾ ಗುಡ್ಡಾಕ್ಕಂಡಿದ್ದೀನಿ. ಆ ಮುಟ್ಟನವರ ಮನ ಬಾಕ್ಲಗ ನೀವ್ ಯಾಕ್ ಬಂದಿರಾ ನಮ್ಮಪ್ಪಾಜಿ.” ಎಂದು ಕೇಳುತ್ತಾನೆ. ಆಗ ಮಂಟೇಸ್ವಾಮಿ ತನ್ನ ಶಿಶುಮಕ್ಕಳಿಗಾಗಿ ಮಾಚಯ್ಯನಿಂದ ಮೂರು ವಸ್ತುಗಳನ್ನು ಪಡೆದುಕೊಳ್ಳಲು ಬಂದಿರುವುದಾಗಿ, ಮಾಚಯ್ಯನ ಮನೆಯ ಕತ್ತ ಕೊಟ್ಗ (ಚಂದ್ರಶಾಲ ಮಾಡೊದಕ್ಕೆ), ಉಬ್ಬ ಓಲ ಒಳಗ (ಊಳಿಗಾರ ಮನೆ ಮಾಡೋದಕ್ಕೆ) ಮತ್ತು ತೊಟ್ಟಿ ಜಾಗ (ಮಜ್ಜನ ಬಾವಿ ಮಾಡೊದಕ್ಕೆ) ಎಂಬ ಮೂರು ಜಾಗಗಳನ್ನು ತನಗೆ ಧಾರೆಯೆರದು ಕೊಡಬೇಕೆಂದು ಕೇಳುತ್ತಾನೆ. ಮೈಲಿಗೆಯಾದ ತನ್ನ ಮನೆಯ ಜಾಗಗಳನ್ನು ಋಷಿ ಅಥವಾ ಖಾವಿ ಹಾಕಿದ ವ್ಯಕ್ತಿಗಳಿಗೆ ಕೊಟ್ಟರೆ ಪಾಪವಾದೀತು ಎಂದು ನಿರ್ಧರಿಸಿ, ಮೈಲಿಗೆಯಾದ ಜಾಗದ ಬದಲಿಗೆ ಗುಡಿ ಕಟ್ಟಿಸಿಕೊಡುತ್ತೇನೆ ಎಂದು ಮಾಚಯ್ಯ ಮಾತನ್ನು ನೀಡುತ್ತಾನೆ. ಆಗ ಮಂಟೇಸ್ವಾಮಿ ಮೈಲಿಗೆ, ಮುಟ್ಟು, ಮಡಿ, ಎಂಬ ನಂಬಿಕೆಗಳನ್ನು ಖಂಡಿಸುತ್ತಾನೆ, “ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ” ಎಂದು ಮಾಚಯ್ಯನಿಗೆ ತಿಳಿ ಹೇಳುತ್ತಾನೆ. ಮುಟ್ಟಾಗದೆ/ಮೈಲಿಗೆಯಾಗದ ಜಾಗವನ್ನು ಈ ಜಗತ್ತಿನಲ್ಲಿ ತೋರಿಸು ಎಂದು ಮಾಚಯ್ಯನಿಗೆ ಸವಾಲೆಸುಯುತ್ತಾನೆ. ಜಗತ್ತಲ್ಲಿ ನಾವು ಹುಟ್ಟಿನಿಂದ ಸಾಯುವವರೆಗು ಮುಟ್ಟಾಗಿರುವಂತವರೆ ಎಂದು ವಾದಿಸುತ್ತಾನೆ.

ಮುಟ್ಟಾಗಿರುವ ಜಾಗಗಳು ತನಗೆ ಬೇಕೆಂದು, ಈ ಮೂರು ಜಾಗಗಳನ್ನು ಬಿಟ್ಟು ಬೇರೆ ಯಾವುದೇ ಜಾಗಗಳು ಬೇಡ ಎಂದು ಹೇಳಿದಾಗ, ಮಾಚಯ್ಯ “ಅವು ಮೂರನ್ನು ಬಿಟ್ಟು ಬೇರೆ ಏನನ್ನಾದರು ಕೇಳಿ, ಮಾಸ್ವಾಮಿ” ಎಂದು ಬೇಡುತ್ತಾನೆ. ಕೇಳಿದ್ದನ್ನು ಕೋಡ್ತೀನಿ ಅಂದದಕ್ಕೆ ಮಂಟೇಸ್ವಾಮಿ, “ನೀ ಮನುಷನಮ್ವಾಸ ತರಲೇಬೇಕು, ಭಂಗಿ ಮಾಂಸ ಮಾಡಲೇಬೇಕು” ಎಂದು ಹೇಳುತ್ತಾನೆ. ಒಂದು ಕ್ಷಣ ತಲೆತಿರುಗಿದಂತಾಗಿ, ಮಾಚಯ್ಯನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಕೊನೆಗೆ ತನ್ನ ಮಡದಿಯನ್ನು ಕೇಳಿ ಮನುಷ್ಯ ಮಾಂಸವನ್ನು ಆಹಾರವನ್ನಾಗಿ ನೀಡಲು ಒಪ್ಪಿಕೊಳ್ಳುತ್ತಾನೆ. ಕೊಟ್ಟ ಮಾತಿಗೆ ತಪ್ಪಬಾರದೆಂದು, ಬೇರೆ ಮಕ್ಕಳನ್ನು ಕೊಂದು ಮಾಂಸ ಮಾಡುವ ಬದಲು ತನ್ನ ಏಳು ವರ್ಷದ ಮಗನನ್ನೆ (ಹೀರಾಣ್ಣ) ಬಲಿ ಕೊಟ್ಟು ಮಾಂಸವನ್ನಾಗಿ ಮಂಟೇಸ್ವಾಮಿಗೆ ಅರ್ಪಿಸಲು ಸಿದ್ಧನಾಗುತ್ತಾನೆ. ಗುರು ಶಾಪ ತನ್ನ ತಂದೆ-ತಾಯಿಯ ಮೇಲೆ ಬೀಳಬಾರದು ಎಂಬ ಉದ್ದೇಶದಿಂದ ಹೀರಾಣ್ಣ ಸಂತೋಷದಿಂದ ತಂದೆ-ತಾಯಿಯ ಇಚ್ಛೆಯಂತೆ ಮಂಟೇಸ್ವಾಮಿಗೆ ಮಾಂಸವಾಗಲು ಒಪ್ಪಿಕೊಳ್ಳುತ್ತಾನೆ.

ಮಗನ ಮಾಂಸವನ್ನು ತಿನ್ನಲು ಕೊಟ್ಟಾಗ ಮಂಟೇಸ್ವಾಮಿ ಮಾಚಯ್ಯನನ್ನು ಮತ್ತಷ್ಟು ಪರೀಕ್ಷೆಗೆ ಒಳಪಡಿಸುತ್ತಾನೆ. ಮಗನ ದೇಹದ ಜೊತೆಗೆ ತಲೆ ಮಾಂಸ ಇಲ್ಲದ್ದನ್ನು ನೋಡಿ ಮಂಟೇಸ್ವಾಮಿ ಸಿಟ್ಟಾಗುತ್ತಾನೆ, “ಮಡಿವಾಳ ಶೆಟ್ಟಿ ಎಲ್ಲ ಮ್ವಾಸ ಎಡ ಒಳಗ ಇದಾ ಅಂದೆಲ್ಲಾ ತಲಕಾಲಿನ ಮ್ವಾಸ ಒಂದ ಇಲ್ಲವಲ್ಲಾ ನಿನ್ನ ವಂಶಾ ಆಳಾಗೋಗ ಊಟ ಮಾಡದಿಲ್ಲಾ”ಅಂತ ಗದರಿಸುತ್ತಾನೆ. ಆಗ ಮಾಚಯ್ಯನ ಮಡದಿ ಗಾಬರಿಯಿಂದ ಓಡಿ ಬಂದು ಕಂಡಾಯ ಪೂಜೆಗೆ ತಲೆಕಾಲ ಮಾಂಸ ಇಟ್ಟುಕೊಂಡಿದ್ದರಿಂದ ಅವು ಊಟದಲ್ಲಿ ಇಲ್ಲವೆಂದು, ಈಗ ಅವನ್ನು ಕೂಡ ನಿಮಗೆ ಅರ್ಪಿಸುತ್ತೇವೆ ಎಂದು ಮಗನ ತಲೆ-ಕಾಲಿನ ಮಾಂಸವನ್ನು ನೀಡುತ್ತಾಳೆ. ಇಷ್ಟಕ್ಕೆ ಸಂತೃಪ್ತನಾಗದ ಮಂಟೇಸ್ವಾಮಿ ತಾನು ಮಕ್ಕಳಿಲ್ಲದ ಮನೆಯಲ್ಲಿ ಊಟ ಮಾಡುವುದಿಲ್ಲವೆಂದು, ಮನೆಯಲ್ಲಿರುವ ತಮ್ಮ ಮಗನನ್ನು ಕರೆದುಕೊಂಡು ಊಟ ಮಾಡಿಸಿ ಎಂದು ಅಪ್ಪಣೆ ಮಾಡುತ್ತಾನೆ. ಮಗನನ್ನೆ ಮಾಂಸವನ್ನಾಗಿ ಮಾಡಿ ಊಟಕ್ಕೆ ಬಡಿಸಿದ ಮಾಚಯ್ಯ ದಂಪತಿಗಳಿಗೆ ಈಗ ಧರ್ಮಸಂಕಟ. ನಂತರ ನಿಜ ತಿಳಿದ ಮೇಲೆ ಮಂಟೇಸ್ವಾಮಿ ಮಗನನ್ನೇ ಬಲಿ ಕೊಟ್ಟು ಊಟಕ್ಕೆ ಬಡಿಸಿದ ದಂಪತಿಗಳನ್ನು ನೋಡಿ ಶಾಪ ಹಾಕುತ್ತಾನೆ.
ಗಾಬರಿ ಮತ್ತು ದುಃಖಿತನಾದ ಮಾಚಯ್ಯ ಈ ಶಾಪ- ಪಾಪದಿಂದ ಮುಕ್ತಿ ಪಡೆಯುವ ದಾರಿ ಯಾವುದು ಎಂದು ಅಂಗಲಾಚಿ ಬೇಡಿದಾಗ ಮಂಟೇಸ್ವಾಮಿ ಮತ್ತೆ ಅದೇ ಮೂರು ಜಾಗಗಳನ್ನು ಕೊಟ್ಟರೆ ಪಾಪಮುಕ್ತಿಯಾಗಬಹುದೆಂದು ಹೇಳುತ್ತಾನೆ. ಆಗ ಮಾಚಯ್ಯ ದಂಪತಿಗಳು, “ಹಟ್ಟಿ ನಿನ್ನ ವಶ, ನಮ್ಮಪ್ಪಾಜಿ ಕೊಟ್ಗು ನಿನ್ನ ವಶ, ಈ ಉಬ್ಬ ಒಲವೂ ನಿನ್ನ ವಶ. ತೊಟ್ಟಿ ಜಾಗವು ನಿನ್ನ ವಶ. ನಿನ್ನ ಹರಕ ನೀ ಒಪ್ಪಿಸಕ್ಕಪ್ಪಾ” ಅಂತ ಹಾಲುಧಾರೆ ಎರೆದುಕೊಟ್ಟಾಗ ಧರೆಗೆ ದೊಡ್ಡವರ್ಗ ಆನಂದ ಬಂದ್ ಬಿಡ್ತು.

ನಂತರ ಮಂಟೇಸ್ವಾಮಿ ಕಪ್ಪುಧೂಳ್ತವ ತೆಗೆದು ಮಾಂಸದ ಮೇಲೆ ಇಟ್ಟಾಗ ಅವು ಮೊದಲು ಹೂವುಗಳಾಗಿ ನಂತರ ಜೀವ ತುಂಬಿ ಏಳು ವರ್ಷದ ಹೀರಾಣ್ಣನಾಗಿ ಮತ್ತೆ ಪುರ್ನಜೀವನ ಸಿಗುತ್ತದೆ. ಮಗ ಎಂಬ ಮಮಕಾರವ ಬಿಟ್ಟು, ಕೊಟ್ಟ ಮಾತಿಗೆ ನಡೆದುಕೊಂಡ ಮಾಚಯ್ಯನನ್ನು ಮೆಚ್ಚಿಕೊಳ್ಳುವ ಮಂಟೇಸ್ವಾಮಿಯು ದಂಪತಿಗಳನ್ನು ಹರಸಿ, ಅವರನ್ನು ದೇವರನ್ನಾಗಿ ಮಾಡಿಕೊಂಡು, ಏಳು ವರ್ಷದ ಮಗನನ್ನು ಮುಂದೆ ನರಲೋಕದಲ್ಲಿ “ನರಮುಂಡಾ ಮಕ್ಕಳಗಾ ಮಡಿ ಮಾಡಿಕೊಂಡು, ನೀ ಮಡಿವಾಳ ಶೆಟ್ಟಿಯಾಗು” ಎಂದು ಹರಸುತ್ತಾನೆ. ಇಲ್ಲಿಗೆ ಈ ಪ್ರಸಂಗ ಮುಗಿಯುತ್ತದೆ.

ಮಾಚಯ್ಯನ ಸತ್ಯ ಮತ್ತು ಸಿರಿಯಾಳನ ಭಕ್ತಿ

ಸಿರಿಯಾಳ ಕತೆಯ ಶಿವನು ವೇದಗಳಿಂದ ಮಾನ್ಯ ಮಾಡಲ್ಪಟ್ಟ ರುದ್ರದೇವನು. ಶೈವ ಪುರಾಣಗಳಲ್ಲಿ ಅವನನ್ನು ಹಾಗೆಯೇ ಚಿತ್ರಿಸಲಾಗಿದೆ. ವೇದಾಗಮಗಳು ಸಿರಿಯಾಳ ಮತ್ತು ಶಿವನನ್ನು ಆವರಿಸಿವೆ. ಹರಿಹರನ ಕತೆಯಲ್ಲಿ ಶಿವನು ಜಂಗಮನ ರೂಪದಲ್ಲಿ ಬಂದಾಗ ಸಿರಿಯಾಳ ಅವನನ್ನು ಅನುಮಾನಿಸುವುದಾಗಲಿ ಅಥವಾ ಅವನ್ಯಾರೆಂದು ಪ್ರಶ್ನಿಸುವುದಾಗಲಿ ಇಲ್ಲ. ಸಿರಿಯಾಳನಿಗೆ ನಿಜ ಅಥವಾ ಕಪಟ ಜಂಗಮನ ನಡುವೆ ವ್ಯತ್ಯಾಸಗಳು ಮುಖ್ಯವಾಗುವುದಿಲ್ಲ. ಜಂಗಮ ನಿಜವಾಗಿಯೂ ಶಿವನ ಸ್ವರೂಪ ಎಂದು ದೃಢವಾಗಿ ನಂಬಿರುವ ಭಕ್ತ. ಜಂಗಮನನ್ನು ಗೌರವಿಸುವ ಮತ್ತು ಆರಾಧಿಸುವ ಪರಂಪರೆಯನ್ನು ಮೈಗೂಡಿಸಿಕೊಂಡವ ಈ ಸಿರಿಯಾಳ. ಈ ಪರಂಪರೆಗಾಗಿ ಅವನು ಯಾವುದೇ ತ್ಯಾಗ ಮತ್ತು ಸೇವೆ ಮಾಡಲು ಸಿದ್ಧ. ಹರಿಹರನ ಮತ್ತು ಸೋಮನಾಥನ ಸಿರಿಯಾಳ ಈ ಮಾದರಿಗೆ ಸೇರಿದವನು. ಹರಿಹರನ ಸಿರಿಯಾಳನಿಗೆ ಚಿಲಾಳ ಎಂಬ ಮಗ ಹುಟ್ಟಿದಾಗ “ಶಿವಬ್ರಾಹ್ಮರ ವೇದಘೋಷದೊಳುಂ ಸಿರಿಯಾಳ್ವನುಮೂರ್ಜಿತಮಪ್ಪಂತೆ ವೇದೋಕ್ತಮಾರ್ಗದಿಂ ಜಾತಕರ್ಮವನಲಂಕರಿಸಿ” ಪುತ್ರ-ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾನೆ ಮತ್ತು ತನ್ನ ಶ್ರೀಮಂತಿಕೆ ತಕ್ಕಂತೆ (ಸಿರಿಯಾಳ ಈ ಕತೆಯಲ್ಲಿ ಚೋಳ ದೇಶದ ಕಾಂಚಿನ ಶಿವಪುರಂನಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿ) ಅನೇಕ ಶಿವಭಕ್ತರಿಗೆ ಸುವರ್ಣಾಭರಣಗಳನ್ನು ದಾನ ಮಾಡುತ್ತಾನೆ. ಶಿವನು ಕೈಲಾಸದಿಂದ ಭೈರವ ರೂಪದಲ್ಲಿ ಬಂದು ಐದು ವರ್ಷದ “ಸದಾಚಾರಸಂಪನ್ನಂ, ಸಲ್ಲಕ್ಷಣಮಾದಾತನಂ” ಮಗುವಿನ ಮಾಂಸವೇ ತನಗೆ ಊಟಕ್ಕೆ ಬಡಿಸಬೇಕೆಂದು ಕೇಳಿದಾಗ, ಸಿರಿಯಾಳ ತನ್ನ ಭಕ್ತಿಯನ್ನು ಸಾಧಿಸಲು ಮತ್ತು ಕೊಟ್ಟ ಮಾತಿಗೆ ನಡೆದುಕೊಳ್ಳಲು ತನ್ನ ಮಗನನ್ನೆ ಕೊಂದು ಊಟಕ್ಕೆ ಬಡಿಸುತ್ತಾನೆ.

ಆದರೆ ಧರೆಗೆ ದೊಡ್ಡವರ ಕಾವ್ಯದಲ್ಲಿ ಮಾಚಯ್ಯ ಒಬ್ಬ ಮಡಿವಾಳ. ಅಷ್ಟಾಗಿ ಓದು-ಬರಹ ಬಾರದ ಕೆಳವರ್ಗದ ಅಗಸ. ಮನೆಗೆ ಬಂದ ಭಿಕ್ಷುಕನನ್ನು ಮೊದಲಿಗೆ ತಿರಸ್ಕಾರ ಭಾವದಿಂದ ಕಾಣುವ ಒಬ್ಬ ಸಾಮಾನ್ಯ ವ್ಯಕ್ತಿ. ಅಪರಿಚಿತ ಭಿಕ್ಷುಕ ಮನೆಬಾಗಿಲಿಗೆ ಬಂದು ಭಿಕ್ಷೆ ಬೇಡಿದಾಗ ಒಬ್ಬ ಸಾಮಾನ್ಯ ವ್ಯಕ್ತಿ ಯಾವ ರೀತಿ ವರ್ತಿಸುತ್ತಾನೋ ಆ ರೀತಿಯಲ್ಲಿ ವರ್ತಿಸುವ ಮಾಚಯ್ಯ ನಂತರ ತನ್ನ ತಪ್ಪಿನ ಅರಿವಾಗಿ ಸುಧಾರಿಸಿಕೊಳ್ಳುವ ವಿನಮ್ರತೆಯ ವ್ಯಕ್ತಿ. ಮಂಟೇಸ್ವಾಮಿಯನ್ನು ಯಾರು ನೀವು, ಎಲ್ಲಿಂದ ಬಂದೀರಿ, ತನ್ನ ಮನೆಯ ಓಲೆ ಭಗ, ಭಗನೆ ಹತ್ತಿಕೊಂಡಿದ್ದು ಮಾರಿ, ಚಂಡಿಯರ ಕುಕೃತ್ಯವೇ ಸರಿ ಎಂದು ಚಡಪಡಿಸುತ್ತಿದ್ದಾಗ ಮಂಟೇಸ್ವಾಮಿ “ನಾನು ಹಿಂಡ ಮಾರಿರ ಗಂಡ, ಮೂಗೊಂಡಕ ಒಡೆಯಾ, ಜಡಕಾರಕ ಗಂಡ ಅರಾಶೂನ್ಯಕ್ಕೆ ಒಡೆಯ, ಮಾಟ್ನ-ಕೂಟ್ನದ ಕರ್ತು ಮಂಟೇಲಿಂಗಯ್ಯ, ಏಳು ನೂರ ಐವತ್ತೂರು ಮಾರಿರ ಯಜಮಾನ” ಎಂದು ತನ್ನ ಪರಿಚಯ ಮತ್ತು ಹಿರಿಮೆಯನ್ನು ಹೇಳಿಕೊಳ್ಳಬೇಕಾದ ಪ್ರಮೇಯ ಮಂಟೇಸ್ವಾಮಿಗೆ ಬರುತ್ತದೆ. ಈ ರೀತಿ ಪರಿಚಯವಾದ ಮೇಲೆ ಮಾಚಯ್ಯ ಮಂಟೇಸ್ವಾಮಿಗೆ ಗೌರವ ನೀಡುತ್ತಾನೆ. ಜಂಗಮನಿಗಾಗಿ ಕಾಯುತ್ತಾ, ಅವರ ಸಂತೃಪ್ತಿಯಿಂದ ಮಾತ್ರ ತನ್ನ ಜೀವನ ಸಾರ್ಥಕವೆಂದು ಯೋಚಿಸದ ಕಾಯಕ ಜೀವಿ ಈ ಮಾಚಯ್ಯ.

ಮಾಚಯ್ಯನಿಂದ ಜಾಗಗಳನ್ನು ಪಡೆದುಕೊಳ್ಳಲು ಬರುವ ಮಂಟೇಸ್ವಾಮಿ ಭಿಕ್ಷೆ ಬೇಡಿಕೊಂಡು ಬದುಕುತ್ತಿರುವ ಒಬ್ಬ ತಿರುಕ. ಭಕ್ತರನ್ನು ಪರೀಕ್ಷಿಸುವ ಮೂಲೋದ್ದೇಶ ಅವನಲ್ಲಿಲ್ಲ. ಭಿಕ್ಷೆ ಬೇಡುತ್ತಾ ತಿರುಕನಾಗಿದ್ದರೂ, ತನ್ನ ಶಿಶುಮಕ್ಕಳಿಗೆ ಸ್ಥಾನ ಕಲ್ಪಿಸಿಕೊಡುವ ದೆಸೆಯಲ್ಲಿ (ಪ್ರಾಪಂಚಿಕ ಅವಶ್ಯಕತೆಗಳು) ಪರ್ಯಟನವನ್ನು ಕೈಗೊಳ್ಳುವ ಮತ್ತು ತನ್ನ ಮಹತ್ವವನ್ನು ಸಾರಿ ಹೇಳುವ ಪ್ರಯಾಣಿಕನಾಗಿ ಹೊರಹೊಮ್ಮುತ್ತಾನೆ. ದಾರಿಯಲ್ಲಿ ಸಿಗುವ ಅನೇಕ ಮಂದಿ ಮಂಟೇಸ್ವಾಮಿಯನ್ನು ಸಂಶಯದಿಂದ ನೋಡಿ, ಅವನನ್ನು ಪ್ರಶ್ನಿಸುತ್ತಾರೆ. ಸಂಸ್ಥೆ, ಸಾಹಿತ್ಯ ಅಥವಾ ಮಠ-ಮಾನ್ಯಗಳ ಮನ್ನಣೆಯಿರದ ಮಂಟೇಸ್ವಾಮಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸುವ, ಸಾಬೀತುಪಡಿಸುವ ಮತ್ತು ಸ್ಥಾಪಿಸುವ ಸಾಹಸದಲ್ಲಿ ಪದೇ, ಪದೇ ತೊಡಗಬೇಕಾಗುತ್ತದೆ. ಜಂಗಮನ ರೂಪದಲ್ಲಿರುವ ಶಿವನಿಗಾಗಿ ಅಥವಾ ಯಾವುದೇ ಜಂಗಮನಿಗಾಗಲಿ ಸಿದ್ಧ ಮಾದರಿಯಲ್ಲಿ ಸಿಗುವ ಗೌರವ, ಭಕ್ತಿ, ಆದರಗಳನ್ನು ಮಂಟೇಸ್ವಾಮಿ ತನ್ನ ಮಾಟ, ಮಂತ್ರ ಮತ್ತು ಶಕ್ತಿಗಳ ಮೂಲಕ ಗಳಿಸಿಕೊಳ್ಳಬೇಕಾದ ಪರಿಸ್ಥಿತಿಗೆ ಒಳಗಾಗುತ್ತಾನೆ. ಅಷ್ಟೆ ಅಲ್ಲ. ಜನ ತನಗೆ ನೀಡಿದ ಭಿನ್ನ ಹೆಸರುಗಳು ಮತ್ತು ಅವುಗಳ ಹಿಂದಿರುವ ಕಾರಣಗಳನ್ನು ಹೇಳಿ ತನ್ನ ಎದುರಾಳಿಗಳಿಗೆ ಮನದಟ್ಟು ಮಾಡಿಕೊಡುವುದನ್ನು ನಾವು ಪದೆ, ಪದೆ ನೋಡುತ್ತೇವೆ. ದೈವಾಂಶ ಸಂಭೂತನಲ್ಲದ ಮಂಟೇಸ್ವಾಮಿ ತಾನೆ ದೇವರಿಗೆ ಸಮಾನ ಎಂದು ಸಾರಿ ಹೇಳುವ ಸಂತನಾಗಿ ಗೋಚರಿಸುತ್ತಾನೆ.

ಮೇಲ್ಜಾತಿ/ಮೇಲ್ವರ್ಗ ವಿದ್ಯಾವಂತರ ಮುಂದೆ ಭಕ್ತಿಯ ಬಗ್ಗೆ ಪುಟಗಟ್ಟಲೆ ಬರೆಯುವ ಕವಿಗಳು, ಸಾಧುಗಳು ಅಥವಾ ಸ್ವಯಂ ಘೋಷಿತ ದೇವ ಮಾನವರಿಗಿಂತ ಭಿನ್ನವಾಗಿ ಧರೆಗೆ ದೊಡ್ಡವರ ಕತೆ ಸಾಗುತ್ತದೆ. ಹಾಗಾಗಿ ಮಾಚಯ್ಯನ ಪ್ರಸಂಗದಲ್ಲಿ ಭಕ್ತಿ ಎಂಬುದು ನಗಣ್ಯ. ಭಕ್ತಿಯ ಹೆಸರಲ್ಲಿ ಜಂಗಮ ತನ್ನ ಭಕ್ತರ ಭಕ್ತಿಯನ್ನು ಸಾಬೀತು ಪಡಿಸುವ ಅಥವಾ ಭಕ್ತರನ್ನು ಕೈಲಾಸಕ್ಕೆ ಕೊಂಡೊಯ್ಯವ ಆಚಾರ-ವಿಚಾರಗಳನ್ನು ಮಂಟೇಸ್ವಾಮಿ ಕತೆಯಲ್ಲಿ ಕಾಣುವುದಿಲ್ಲ. ಅಂದರೆ ಮಂಟೇಸ್ವಾಮಿಗೆ ಮಾಚಯ್ಯನ ಭಕ್ತಿಯನ್ನು ಪರೀಕ್ಷಿಸಿ, ಅದನ್ನು ಜಗತ್ತಿಗೆ ಸಾರಿ ಹೇಳುವ ಅಥವಾ ಅವನನ್ನು ಗಣಗಳಿರುವ ಕೈಲಾಸಕ್ಕೆ ಕರೆದುಕೊಂಡು ಹೋಗುವ (ಹರಿಹರನ ಸಿರಿಯಾಳದಲ್ಲಿದ್ದಂತೆ) ಯಾವುದೇ ಉದ್ದೇಶವಿಲ್ಲ. ಮಂಟೇಸ್ವಾಮಿಗೆ ಬೇಕಾಗಿರುವುದು ಮಾಚಯ್ಯನ ಕತ್ತ ಕೊಟ್ಗದಲ್ಲಿನ ಚಂದ್ರಶಾಲದ ಜಾಗ. ಸಮಾಜದ ಕೆಳಸ್ತರಕ್ಕೆ ಸೇರಿದ ಮಾಚಯ್ಯನಿಂದ ಭಿಕ್ಷೆ ಸ್ವೀಕರಿಸುವುದು ಅಥವಾ ಮೈಲಿಗೆಯಾಗಿದ್ದರೂ ಅವನಿಂದ ಜಾಗಗಳನ್ನು ತೆಗೆದುಕೊಳ್ಳುವುದು ತಪ್ಪೇನಿಲ್ಲ ಎಂದು ಪ್ರತಿಪಾದಿಸುವ ಸಿದ್ಧಾಂತವನ್ನು ಇಲ್ಲಿ ಕಾಣುತ್ತೇವೆ. ಭಿಕ್ಷೆ ಬೇಡುವುದರ ಮೂಲಕ ಸಮಾಜದಲ್ಲಿ ಮುಟ್ಟು/ಮೈಲಿಗೆ ಬಲವಾಗಿ ನೆಲೆಯೂರಿರುವ ಅನಿಷ್ಠವನ್ನು ಮಂಟೇಸ್ವಾಮಿ ಮೂದಲಿಸುವುದು ವಿಶೇಷ. ಭಿಕ್ಷೆ ಬೇಡುವುದು ಇಲ್ಲಿ ಒಂದು ರೂಪಕವಾಗಿ ಸಮಾಜಕ್ಕೆ ಹಿಡಿದ ಕನ್ನಡಿಯಂತೆ ಕಾಣಿಸುತ್ತದೆ.

ಶಿವಶರಣರ ‘ಕಾಯಕವೇ ಕೈಲಾಸ’ ಎಂಬ ಅಣತಿಯಂತೆ ಮಡಿವಾಳ ಮಾಚಯ್ಯ ತನ್ನ ಕೆಲಸವನ್ನು ಕೈಗೊಂಡರೂ, ಅವನ ಮಡಿ-ಮೈಲಿಗೆ ವಿಚಾರಗಳನ್ನು ಮತ್ತು ಆಚರಣೆಯನ್ನು ಮಂಟೇಸ್ವಾಮಿ ಖಂಡಿಸುತ್ತಾನೆ ಮತ್ತು ಬಲವಾಗಿ ಪ್ರಶ್ನಿಸುತ್ತಾನೆ. ‘ಕಾಯಕವೇ ಕೈಲಾಸ’ ಎಂದು ಅದರಲ್ಲೆ ಭಕ್ತಿಯನ್ನು ವ್ಯಕ್ತಪಡಿಸುವ ಶಿವಶರಣರ ಸಿದ್ಧಾಂತಕ್ಕೆ ಮಂಟೇಸ್ವಾಮಿ ಸವಾಲಾಗಿ ಪರಿಣಮಿಸುತ್ತಾನೆ. ನಿಷ್ಠೆಯಿಂದ ಕಾಯಕ ಮಾಡಿದರೆ ಸಾಲದು, ಮುಟ್ಟು/ಮೈಲಿಗೆಯಂತ ಸಾಮಾಜಿಕ ಪಿಡುಗಿನ ಭಾವನೆ ತೊಡೆದು ಹಾಕಬೇಕೆಂದು ಮಂಟೇಸ್ವಾಮಿ ಉಪದೇಶಿಸುತ್ತಾನೆ. ಕಾಯಕವನ್ನು ಮಾಡಿದಾಗಲು ನಮ್ಮೊಳಗೆ ವಿಮರ್ಶಾತ್ಮಕ ಧೋರಣೆಯಿರಬೇಕೆಂದು ಅವನು ಎಚ್ಚರಿಸುತ್ತಿದ್ದಾನೆ. ವಚನಗಳ ‘ಮೂಲ ಮತ್ತು ನೈಜ’ ಆಶಯವನ್ನು ಮಂಟೇಸ್ವಾಮಿಯಲ್ಲಿ ಕಾಣುತ್ತೇವೆ.

Previous post ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
Next post ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ

Related Posts

ಕಾಣಿಕೆಯ ರೂಪದ ಕಪ್ಪುಹಣ
Share:
Articles

ಕಾಣಿಕೆಯ ರೂಪದ ಕಪ್ಪುಹಣ

April 29, 2018 ಡಾ. ಜೆ ಎಸ್ ಪಾಟೀಲ
ಭಾರತ ದೇಶವು ಭ್ರಷ್ಟತೆಯ ಕರಾಳ ಸಂಸ್ಕೃತಿಯನ್ನು ತನ್ನ ಸಾಂಪ್ರದಾಯಿಕ ಸಂಸ್ಕೃತಿಯ ಭಾಗವಾಗಿಸಿಕೊಂಡೇ ಬೆಳೆದುದು ಅದರ ಪುರಾಣ ಮತ್ತು ಇತಿಹಾಸದುದ್ದಕ್ಕೂ ದಾಖಲಾಗಿದೆ. ದೇವರು ಮತ್ತು...
ಅಬದ್ಧ ಆರ್ಥಿಕತೆ
Share:
Articles

ಅಬದ್ಧ ಆರ್ಥಿಕತೆ

March 5, 2019 ಡಾ. ಪಂಚಾಕ್ಷರಿ ಹಳೇಬೀಡು
ಅರ್ಥವ್ಯವಸ್ಥೆ ಎಂದರೆ ಸಾಮನ್ಯ ಅರ್ಥದಲ್ಲಿ ಹಣಕಾಸು ನಿರ್ವಹಣೆ. ಒಬ್ಬ ವ್ಯಕ್ತಿಯಿಂದ ಹಿಡಿದು ಗೃಹ, ಗ್ರಾಮ, ರಾಜ್ಯ, ರಾಷ್ಟ್ರಗಳ ನಿರ್ವಹಣೆಯ ತನಕ ಅರ್ಥವ್ಯವಸ್ಥೆಯ ಜಾಡು ಹಬ್ಬಿ...

Comments 11

  1. Mariswamy Gowdar
    Feb 14, 2022 Reply

    ಮಡಿವಾಳ ಮಾಚಯ್ಯ ಶರಣರು ಕಾಲಾತೀತರು. ಅವರ ಕತೆಗೆ ಸೀಮೆಗಳಿಲ್ಲ. ಉತ್ತಮ ಬರಹ.

  2. Mallesh P.S
    Feb 14, 2022 Reply

    ಸಿರಿಯಾಳನದು ಶೈವ ಭಕ್ತಿ, ಅಲ್ಲಿ ವೈಚಾರಿಕತೆಗೆ ದಾರಿ ಇಲ್ಲ. ಅದೇ ಮಂಟೆಸ್ವಾಮಿಯಲ್ಲಿ ಬರೋದು ವೈಚಾರಿಕತೆಯ ಸಿಡಿಮಾತುಗಳು. ಮಾಚಯ್ಯನವರ ನೈಜ ವ್ಯಕ್ತಿತ್ವಕ್ಕೆ ಮಂಟೆಸ್ವಾಮಿಯ ಕಥನ ಹೆಚ್ಚು ಹತ್ತಿರವಾಗುತ್ತದೆ.

  3. Panchakshari H V
    Feb 16, 2022 Reply

    ಸಿರಿಯಾಳ ಮತ್ತುಮಾಚಿದೇವರ ಕಥೆ ಒಂದೇ ಇದ್ದ ಹಾಗೆ ಇದೆ! ಇದೇ ಪ್ರಥಮಬಾರಿಗೆ ಮಾಚಿದೇವರ ಈ ಕಥೆಯನ್ನು ಕೇಳಿ ಬಹಳ ಆಶ್ಚರ್ಯವಾಯಿತು.
    ವಚನಗಳಲ್ಲಿ ಇದರ ಉಲ್ಲೇಖ ಎಲ್ಲೂ ಕಾಣಸಿಗುವುದಿಲ್ಲ.

  4. Sharada A.M
    Feb 21, 2022 Reply

    ಮಾಚಯ್ಯನ ಸತ್ಯ ಪರೀಕ್ಷೆಯಲ್ಲಿ ಶರಣರ ಪರಂಪರೆಯನ್ನು ಮುಂದುವರಿಸುವ ಸೂಚನೆ ಸಿಗುತ್ತದೆ. ಸಿರಿಯಾಳನ ಭಕ್ತಿ ಮತ್ತೆ ಶೈವದ ಮೌಢ್ಯವನ್ನು ಗಟ್ಟಿಗೊಳಿಸುತ್ತದೆ, ಅಲ್ಲವೇ?

  5. Basavalinga H
    Feb 21, 2022 Reply

    ಮಡಿ-ಮೈಲಿಗೆಗಳ ಆಚರಣೆಯನ್ನು ಲಿಂಗಾಯತ ಸಮಾಜ ಯಾವ ಕಾಲದಿಂದ ಮತ್ತೆ ತನ್ನೊಳಗೆ ಸೇರಿಸಿಕೊಂಡಿತೋ ಅಂದೇ ಅದರ ಅವನತಿ ಆರಂಭವಾಯಿತು ಎನ್ನಬಹುದು. ಚಿಂತನೆಗೆ ಪ್ರೇರೇಪಿಸುವ ಲೇಖನ.

  6. Veerabhadrappa, Bangalore
    Feb 23, 2022 Reply

    ಕಾವ್ಯಗಳಲ್ಲಿ ಶರಣರ ಜೀವನಕಥೆಯನ್ನು ಹೆಕ್ಕಿ ತೆಗೆಯುವುದು ಕಷ್ಟವೇ, ಆದರೆ ಅವರ ಆಶಯಗಳನ್ನು ಕಥನರೂಪದಲ್ಲಿ ಗ್ರಹಿಸಬಹುದೆನಿಸುತ್ತದೆ.

  7. P.R. Patil
    Feb 24, 2022 Reply

    ಮಡಿವಾಳ ಮಾಚಿದೇವರ ಕಾಯಕಕ್ಕೆ ಸಂಬಂಧಿಸಿದ ಸ್ಥಳೀಯ ಶಬ್ದಗಳು ಹೊಸ ಭಾಷಾ ನಿಘಂಟುವಿನ ಅಗತ್ಯವನ್ನು ಬೇಡುತ್ತವೆ. ಕಲ್ಯಾಣದ ಕನ್ನಡ ಆಗ ಹೇಗಿದ್ದಿರಬಹುದೆಂಬುದನ್ನು ಈಗ ಊಹಿಸುವುದು ಕಷ್ಟವಾಗುತ್ತದೆ.

  8. ಬಸವಪ್ರಭು ಗಂಗಾವತಿ
    Feb 27, 2022 Reply

    ಕಾವ್ಯಗಳು, ಕಾವ್ಯ ಪುರುಷರು ಕಾಲಾತೀತರಾಗಿರುತ್ತಾರೆ. ಎಲ್ಲಿಯ ಮಾಚಯ್ಯನವರು, ಎಲ್ಲಿಯ ಮಂಟೇಸ್ವಾಮಿ? ಕಾವ್ಯಗಳಲ್ಲಿ ಇವರು ಎದುರುಬದರಾಗುವುದೇ ಒಂದು ಅದ್ಭುತ ಸೃಷ್ಟಿ. ಬಯಲು ಬ್ಲಾಗಿನ ಲೇಖನಗಳು ನನಗೆ ಬಹಳಾ ಅಚ್ಚುಮೆಚ್ಚು.

  9. Chinnaswamy
    Feb 27, 2022 Reply

    ಜಾನಪದ ಕಾವ್ಯಗಳ ಘಮಲು ಲೇಖನದುದ್ದಕ್ಕೂ ಕಾಣುತ್ತದೆ.

  10. Shivappa Halapur
    Feb 28, 2022 Reply

    ಎರಡರ ಕತೆಗಳಲ್ಲೂ ನರಬಲಿ ಇರುವುದು, ಅದರಲ್ಲೂ ಮಗನ ಬಲಿ ಕೊಟ್ಟಿರುವುದು ಮಮಕಾರದ ತ್ಯಾಗದ ಪ್ರತೀಕವಾಗಿರಬಹುದೇ?

  11. Jeevan H
    Mar 11, 2022 Reply

    I would like to thank you for the efforts you have put in writing this site. Infact your creative writing abilities has encouraged me to get my own personal blog now… thanks.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
WHO AM I?
WHO AM I?
June 17, 2020
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಗಣಾಚಾರ
ಗಣಾಚಾರ
August 8, 2021
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
September 6, 2023
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
Copyright © 2023 Bayalu