Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆತ್ಮಹತ್ಯೆ-ಆತ್ಮವಿಶ್ವಾಸ
Share:
Articles January 10, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಆತ್ಮಹತ್ಯೆ-ಆತ್ಮವಿಶ್ವಾಸ

ಕಟ್ಟಬೇಕು ಮನವ, ಮೆಟ್ಟಬೇಕು ಮದವ,
ಸುಟ್ಟರುಹಬೇಕು ಸಪ್ತವ್ಯಸನಂಗಳ.
ಆ ತೊಟ್ಟಿಲ ಮುರಿದು, ಕಣ್ಣಿಯ ಹರಿದು, ಆ ಬಟ್ಟಬಯಲಲ್ಲಿ ನಿಂದಿರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.

ಮನುಷ್ಯನ ಮೂಲ ಉದ್ದೇಶ ಲಿಂಗಾಂಗಸಮರಸ ಸುಖದ ಮೂಲಕ ಶಿವ ಸಾಕ್ಷಾತ್ಕಾರ ಪಡೆಯುವುದು. ಇದು ಅಂದುಕೊಂಡಷ್ಟು ಸುಲಭವಿಲ್ಲ. ಏಕೆಂದರೆ ಬದುಕಿನಲ್ಲಿ ಅನೇಕ ಸಂಕಟ, ಸಮಸ್ಯೆ, ವಿಪತ್ತುಗಳು ಎದುರಾಗುವವು. ವಿಷಯವಾಸನೆಗಳು ವ್ಯಕ್ತಿಯನ್ನು ಮುತ್ತಿಕೊಂಡು ಬಂಧಿಸುವವು. ಆ ಬಂಧನದಿಂದ ಮುಕ್ತಿ ಪಡೆಯಲು ವಿಷಯವಾಸನೆಗಳೆಂಬ ತೊಟ್ಟಿಲನ್ನು ಮುರಿಯಬೇಕು. ಪಂಚೇಂದ್ರಿಯಗಳ ಉಪಟಳ ಹೇಳತೀರದು. ಅವು ವಿಷಯಗಳೆಂಬ ಹಸಿರಿನ ಆಸೆಗೆ ಬಲಿಯಾಗಿ ವಾಸನೆಗಳ ಹೊಂಡದಲ್ಲಿ ಮನುಷ್ಯನನ್ನು ಮುಳುಗಿಸಿ ಅವನ ಹೆಡಮುರಿಗೆ ಕಟ್ಟುವಂತಹವು. ಹಾಗಾಗಿ ಇಂದ್ರಿಯಗಳೆಂಬ ಹಗ್ಗವನ್ನು ಹರಿದುಹಾಕಬೇಕು. ಅದಕ್ಕಾಗಿ ಮನಸ್ಸನ್ನು ಒಂದೆಡೆ ಹಿಡಿದು ನಿಲ್ಲಿಸಬೇಕು. ಅಹಂಕಾರವನ್ನು ಮೆಟ್ಟಿ ನಿಲ್ಲಬೇಕು. ತನುವ್ಯಸನ, ಮನವ್ಯಸನ, ಧನವ್ಯಸನ, ವಾಹನವ್ಯಸನ, ಉತ್ಸಾಹವ್ಯಸನ, ವಿಶ್ವವ್ಯಸನ, ಸೇವಕವ್ಯಸನಗಳೆಂಬ ಏಳು ವ್ಯಸನಗಳನ್ನು ಸುಟ್ಟು ಬೂದಿ ಮಾಡಬೇಕು. ಈ ವ್ಯಸನಗಳನ್ನು ಸುಟ್ಟು ಬೂದಿ ಮಾಡುವುದು ಕಷ್ಟಸಾಧ್ಯ. ಹಾಗಾಗಿ ಅನೇಕರು ಅವುಗಳ ವ್ಯಸನದಲ್ಲಿ ತಾವೇ ಸುಟ್ಟುಹೋಗುವುದನ್ನು ಕಾಣುತ್ತೇವೆ.
ವ್ಯಕ್ತಿ ತನ್ನಲ್ಲಿರಬಹುದಾದ ಸಪ್ತವ್ಯಸನಗಳನ್ನು ಸುಡುವ ಬದಲು ಇತರರು ಹಾಗೆ, ಹೀಗೆ, ಅವನಿಂದ ಯಾವ ಸಾಧನೆಯೂ ಆಗುವುದಿಲ್ಲ ಎಂದು ಅವರನ್ನೇ ದೋಷಿಗಳನ್ನಾಗಿ ಮಾಡುವ ನಿರ್ಣಯಕ್ಕೆ ಬರುವುದುಂಟು. ಇದೇ ವ್ಯಕ್ತಿಗತ ಪ್ರಗತಿಗೆ ಮುಳ್ಳಾಗುವುದು. ವ್ಯಕ್ತಿ ತನ್ನಷ್ಟಕ್ಕೆ ತಾನೇ ಕುಬ್ಜತನ ಬೆಳೆಸಿಕೊಳ್ಳುವ ಸಿನಿಕನಾದಾಗಲೂ ಆತ ಸಾಧನೆಯಿಂದ ಹಿಂದೆ ಸರಿಯುವನು. ಇವುಗಳ ಜೊತೆಗೆ ಭಯದ ವಾತಾವರಣದ ಮನಸ್ಥಿತಿ ಇದ್ದರೆ ಅಲ್ಲಿಗೆ ಪ್ರಗತಿ ನೆಲ ಕಚ್ಚುವುದು. ಈ ನಿರ್ಣಯ, ಸಿನಿಕತನ, ಭಯಗಳನ್ನು ಹಿಂದೆ ತಳ್ಳಿ ಕುತೂಹಲ, ಕರುಣೆ, ಧೈರ್ಯ ಮೈಗೂಡಿಸಿಕೊಂಡರೆ ಒಳಿತಿನ ದಾರಿಯಲ್ಲಿ ಹೆಜ್ಜೆ ಇಡುತ್ತ ಅದ್ಭುತ ಸಾಧನೆ ಮಾಡಬಹುದು. ಇದಕ್ಕೆಲ್ಲ ಮುಖ್ಯವಾಗಿ ಬೇಕಾದುದು ಸಹಾನುಭೂತಿ. ತಾನು ಹಾಗೆ, ಹೀಗೆ ಎಂದು ಕೊಚ್ಚಿಕೊಳ್ಳದೆ ಮತ್ತೊಬ್ಬರ ಭಾವನೆಗಳನ್ನೂ ಅರಿಯುವ, ಅವರ ನೋವು, ನಲಿವುಗಳಿಗೆ ಸ್ಪಂದಿಸುವ ಹೃದಯವಂತಿಕೆ ಇರಬೇಕು. ಆಗ ಮನೋಬಲ, ಆತ್ಮವಿಶ್ವಾಸ ಮೈದಾಳಿ ಏನೆಲ್ಲ ಒಳ್ಳೆಯ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದು. ಆದರೆ ಇಂದಿನ ದಿನಮಾನಗಳಲ್ಲಿ ಹಲವಾರು ಶ್ರೀಮಂತರು, ಧೀಮಂತರು, ರಾಜಕಾರಣಿಗಳು ಸಹ ಆತ್ಮವಿಶ್ವಾಸ, ಮನೋಬಲ ಕಳೆದುಕೊಂಡು ಆತ್ಮಹತ್ಯೆಯ ದಾರಿ ತುಳಿಯುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಹಡಪದ ಅಪ್ಪಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ ಅವರು ಮನಸ್ಸನ್ನು ಕಟ್ಟದಿರುವುದು, ಅಹಂಕಾರವನ್ನು ಮೆಟ್ಟದಿರುವುದು, ಸಪ್ತವ್ಯಸನಗಳನ್ನು ಸುಟ್ಟು ಹಾಕದಿರುವುದು.
ಸಮಸ್ಯೆ, ಸವಾಲು, ಸಂಕಷ್ಟಗಳು ಇದ್ದದ್ದೇ. ಇವಿಲ್ಲದ ವ್ಯಕ್ತಿಯೇ ಈ ಭೂಮಿಯ ಮೇಲೆ ಇಲ್ಲ. ಹಾಗಂತ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದೆ ಹೇಡಿಗಳಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಲ್ಲ. ಪರಸ್ಪರ ಸಮಾಲೋಚನೆ, ಸಹಾನುಭೂತಿ ನಡಿಗೆಯ ಮೂಲಕ ಎಲ್ಲ ಸಮಸ್ಯೆ, ಸವಾಲು, ಸಂಕಷ್ಟಗಳನ್ನು ಮೆಟ್ಟಿನಿಲ್ಲುವ ಮನೋಬಲವನ್ನು ಬೆಳೆಸಿಕೊಳ್ಳಬೇಕು. ಅದನ್ನು ಬಿಟ್ಟು ಅಯ್ಯೋ ಹೀಗಾಯ್ತಲ್ಲ ಎಂದು ಮನೋದೌರ್ಬಲ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿಗಳ ಕಾರ್ಯ. ಈ ಲೋಕಕ್ಕೆ ಬಂದಿರುವುದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಅಲ್ಲ; ಸಾಧನೆ ಮಾಡಿ ತೋರಿಸಲು. `ಜೀವ ಇದ್ದರೆ ಜೀವನ’ ಎನ್ನುವ ತತ್ವ ಅರಿತು ಬದುಕನ್ನು ಎದುರಿಸಬೇಕು. ಎಲ್ಲರೂ `ಜೀವನ’ದ ಬಗ್ಗೆ ಚಿಂತನೆ ಮಾಡುವರೇ ಹೊರತು `ಜೀವ’ದ ಬಗ್ಗೆ ಅಲ್ಲ ಎನ್ನುವುದೇ ವಿಷಾದನೀಯ. ಜೀವ ಇಲ್ಲದಿದ್ದರೆ ಜೀವನ ಮಾಡಲು ಹೇಗೆ ಸಾಧ್ಯ? ಸಾವೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಲ್ಲ. ಎಂಥ ಬಿಕ್ಕಟ್ಟಿನ ಸಂದರ್ಭ ಬಂದರೂ ವ್ಯಕ್ತಿ ತಾನಾಗಿ ಸಾವಿನ ಮನೆಯ ಕದ ತಟ್ಟುವ ಹೀನ ಕಾರ್ಯಕ್ಕೆ ಮುಂದಾಗಬಾರದು.
ನಮ್ಮಲ್ಲಿ ಧರ್ಮದ ಬಗ್ಗೆ ಸರಿಯಾದ ಅರಿವಿಲ್ಲದಿರುವುದು ಸಹ ಆತ್ಮಹತ್ಯೆಗೆ ಕಾರಣವಾಗುತ್ತಿದೆಯೇನೋ ಎನ್ನುವ ಅನುಮಾನ ಇದೆ. ಭಾರತೀಯ ಪರಂಪರೆಯಲ್ಲಿ ಬೆಳೆದು ಬಂದ ಬಹುತೇಕ ಜನರು ಆಸ್ತಿಕರೇ ಆಗಿರುತ್ತಾರೆ. ಆಸ್ತಿಕ ಅಂದರೆ ದೇವರಲ್ಲಿ ನಂಬಿಕೆ ಇರುವವರು. ನಾಸ್ತಿಕ ಎಂದರೆ ದೇವರಲ್ಲಿ ನಂಬಿಕೆ ಇಲ್ಲದವರು. ವಿವೇಕಾನಂದರ ಪ್ರಕಾರ ತನ್ನನ್ನು ತಾನು ನಂಬದ, ತನ್ನಲ್ಲಿ ಅದ್ಭುತ ಶಕ್ತಿ ಇದೆ ಎಂದು ಅರಿಯದ ವ್ಯಕ್ತಿ ನಾಸ್ತಿಕ. 33 ಕೋಟಿ ದೇವರನ್ನು ನಂಬಿ ತನ್ನನ್ನು ತಾನು ನಂಬದಿದ್ದರೆ ಅವನ ಆಸ್ತಿಕತೆಗೆ ಯಾವ ಹುರುಳೂ ಇಲ್ಲ. ಅದು ಹೊಳೆಯಲ್ಲಿ ಹುಣಸೆಹಣ್ಣನ್ನು ಕದಡಿದಂತೆ. ಮನುಷ್ಯ ಯಾವಾಗಲೂ ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಅದನ್ನು ಸಾಧಿಸಲು ಸತತ ಪ್ರಯತ್ನ ಮಾಡÀಬೇಕು. ಒಳ್ಳೆಯ ಕಾರ್ಯಕ್ಕೆ ಬೇಕಾದುದು ದೇವರಲ್ಲಿ ನಂಬಿಕೆ ಅಲ್ಲ; ತನ್ನ ಪ್ರಯತ್ನ, ಪರಿಶ್ರಮದಲ್ಲಿ ನಂಬಿಕೆ. ಅಂಥವರು ಮಾತ್ರ ಇತಿಹಾಸ ಪುರುಷರಾಗಲು ಸಾಧ್ಯ. ವ್ಯಕ್ತಿ ಇನ್ನೊಬ್ಬರ ಬಗ್ಗೆ ನಂಬಿಕೆ ಕಳೆದುಕೊಂಡರೆ ಅಪಾಯವೇನಲ್ಲ. ಬದಲಾಗಿ ತನ್ನ ಬಗ್ಗೆ ತಾನೇ ನಂಬಿಕೆ ಕಳೆದುಕೊಂಡರೆ ಅದೇ ಅಪಾಯಕಾರಿ. ಅಂಥ ಸಂದರ್ಭದಲ್ಲೇ ಮನುಷ್ಯ ಆತ್ಮಹತ್ಯೆಯಂಥ ಹೀನಾತಿಹೀನ ಕೃತ್ಯಕ್ಕೆ ಶರಣಾಗುವುದು. ಹಾಗಾಗಿ ಮನುಷ್ಯ ಆತ್ಮವಿಶ್ವಾಸ ತಳೆಯಬೇಕಾದ್ದು ತುಂಬಾ ಮುಖ್ಯ.
ಪಾಪ ಪುಣ್ಯಗಳ ಬಗೆಗೂ ಜನರಿಗೆ ವಿಭಿನ್ನ ಅಭಿಪ್ರಾಯಗಳಿವೆ. ಬಸವಣ್ಣನವರು ಸುಖ ಬಂದರೆ ಪುಣ್ಯದ ಫಲ, ದುಃಖ ಬಂದರೆ ಪಾಪದ ಫಲ ಎಂದುಕೊಂಡವರಲ್ಲ. ದೇವರ ಒಲುಮೆಯೇ ಪುಣ್ಯ, ಒಲುಮೆ ಆಗದಿದ್ದರೆ ಅದೇ ಪಾಪ ಎಂದು ನಂಬಿದವರು. ತನ್ನನ್ನು ನಾನು ದುರ್ಬಲ, ಹೇಡಿ, ಕೈಲಾಗದವ ಎಂದುಕೊಂಡರೆ ಅವನೇ ಪಾಪಿ ಎನ್ನುವರು ವಿವೇಕಾನಂದರು. ವ್ಯಕ್ತಿ ತನ್ನನ್ನು ತಾನು ಬಲಿಷ್ಟನನ್ನಾಗಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅವರಿಂದ ಬಲಿಷ್ಟನಾಗುತ್ತೇನೆ, ಇವರಿಂದ ಬಲಿಷ್ಟನಾಗುತ್ತೇನೆ ಎನ್ನುವ ಪರಾವಲಂಬಿತನ ಒಳ್ಳೆಯದಲ್ಲ. ಅದರಿಂದ ಮೊದಲು ಹೊರಬರಬೇಕು. ಘನವಾದ ಕಾರ್ಯ ಮಾಡುವೆನೆಂಬ ವಿಶ್ವಾಸ ತಳೆದು ಅದನ್ನು ಸಾಕಾರಗೊಳಿಸುವ ಸಂಕಲ್ಪದಿಂದ ಕಾಯಕಶೀಲನಾದರೆ ಯಶಸ್ಸು ಅವನನ್ನು ಹಿಂಬಾಲಿಸುವುದು. ವ್ಯಕ್ತಿ ತಾನೇ ದೃಢವಾದ ಹೆಜ್ಜೆ ಹಾಕದಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ನನ್ನಿಂದ ಇದು ಸಾಧ್ಯವಿಲ್ಲ ಎನ್ನುವ ನಕಾರಾತ್ಮಕ ಭಾವನೆ ತಳೆಯದೆ ನನ್ನಲ್ಲಿ ಅನಂತ ಶಕ್ತಿ ಮತ್ತು ಅಪಾರ ಸಾಧ್ಯತೆಗಳಿವೆ ಎಂದು ನಂಬಿ ಹೆಜ್ಜೆ ಹಾಕಿದಾಗ ಇತರರು ಸಹ ಅವನ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ, ಅವನಿಗೆ ಸಹಾಯಕರಾಗಿ ನಿಲ್ಲುವರು. ಆಗ ಅಸಾಧ್ಯವೂ ಸಾಧ್ಯವಾಗುವುದು. ಒಮ್ಮೊಮ್ಮೆ ನಮ್ಮ ಹೋರಾಟದಲ್ಲಿ ಯಶಸ್ಸು ದಕ್ಕದಿರಬಹುದು. ಅದಕ್ಕಾಗಿ ನಿರಾಶರಾಗಬೇಕಿಲ್ಲ. ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ಮತ್ತೆ ಪ್ರಯತ್ನಶೀಲರಾದಲ್ಲಿ ಒಂದಿಲ್ಲೊಂದು ದಿನ ಯಶಸ್ಸು ಅಂಗೈ ನೆಲ್ಲಿಯಾಗುವುದರಲ್ಲಿ ಅನುಮಾನವಿಲ್ಲ.
ಸಾಧಕನಿಗೆ ಮುಖ್ಯವಾಗಿ ಬೇಕಾದದ್ದು ಮನೋಬಲ. ಅದರ ಜೊತೆಗೆ ಜನಬಲ ಮತ್ತು ಸಮಾಜದ ಬಲ ಬಳಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು. ಬುದ್ಧ, ಬಸವಣ್ಣ, ಗಾಂಧೀಜಿ, ನಮ್ಮ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಮನೋಬಲ, ಜನಬಲ, ಸಮಾಜದ ಬಲ ಬಳಸಿಕೊಂಡೇ ತಮ್ಮ ಜೀವಿತಾವಧಿಯಲ್ಲಿ ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸಿದರು. ಆದರೆ ಅನೇಕ ಜನರು ನಾವು ದುರ್ಬಲರು, ನಮ್ಮಿಂದೇನು ಮಾಡಲು ಸಾಧ್ಯ ಎಂದು ತಮ್ಮ ಮನೋಬಲವನ್ನು ತಾವೇ ಕುಂದಿಸಿಕೊಂಡು ದುರ್ಬಲರಾಗುವರು. ದುರ್ಬಲತೆಯೇ ಸಾವಿಗೆ ಆಹ್ವಾನ ನೀಡಿದಂತೆ. ಮನಸ್ಸಿನ ದುರ್ಬಲತೆಯನ್ನು ಕಿತ್ತೆಸೆದು ನಾನು ಏನು ಬೇಕಾದರೂ ಮಾಡಬಲ್ಲೆ ಎನ್ನುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಯಶಸ್ಸಿನ ಮೊದಲ ಗುಟ್ಟೆಂದರೆ ದೌರ್ಬಲ್ಯವನ್ನು ದೂರ ತಳ್ಳುವುದು. ಅದನ್ನೇ ಬಸವಣ್ಣನವರು “ಅಂಜಿದರೆ, ಅಳುಕಿದರೆ ಆಗದು. ವಿಪತ್ತುಗಳು ವಜ್ರದ ಪಂಜರದಲ್ಲಿದ್ದರೂ ತಪ್ಪುವುದಿಲ್ಲ” ಎಂದಿರುವರು. ಏನಾಗಬೇಕೊ ಅದು ಆಗೇ ಆಗುತ್ತದೆ. ಆದುದರಿಂದ ಮನುಷ್ಯ ಧೈರ್ಯಶಾಲಿಯಾಗಿ ಕುತೂಹಲದಿಂದ ಅನುಕಂಪೆಯನ್ನು ಅಸ್ತ್ರವಾಗಿಸಿಕೊಂಡು ತನ್ನ ಕಾಯಕವನ್ನು ನಿಸ್ಪೃಹತೆಯಿಂದ ಮಾಡಬೇಕು.
ಧೈರ್ಯ, ಅನುಕಂಪೆ ಮತ್ತು ಕುತೂಹಲ ಈ ಮೂರನ್ನು ಆಪ್ತಮಿತ್ರರನ್ನಾಗಿ ಮಾಡಿಕೊಂಡರೆ ನಿರ್ಣಯಿಸುವ, ಅಂಜುವ, ಸಿನಿಕತನ ತೋರುವ ಸಾಧ್ಯತೆಗಳು ಕಡಿಮೆ ಆಗುತ್ತವೆ. ಎಷ್ಟೋ ಸಂದರ್ಭದಲ್ಲಿ ಮನೋದೌರ್ಬಲ್ಯದಿಂದಾಗಿ ವೈರಿಗಳನ್ನೇ ಮಿತ್ರರೆಂದು ತಪ್ಪು ಭಾವಿಸುವ ಸಾಧ್ಯತೆಗಳಿರುತ್ತವೆ. ಒಬ್ಬರು ಒಂದು ವಿಚಾರ ಮಂಡಿಸುತ್ತಿದ್ದರೆ ತಕ್ಷಣ ಆ ವ್ಯಕ್ತಿಯ ಬಗ್ಗೆ ಮತ್ತು ಅವನು ಮಂಡಿಸುವ ವಿಚಾರದ ಬಗ್ಗೆ ತಪ್ಪು ನಿರ್ಣಯಕ್ಕೆ ಬಂದುಬಿಡುವುದುಂಟು. ಆಗಲೂ ಏನೋ ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿರುತ್ತದೆ. ದೊಡ್ಡವರೇ ಹೀಗೆ ಮಾಡಿದರೆ ನಮ್ಮ ಗತಿ ಏನು ಎನ್ನುವ ಸಿನಿಕತನ ಆವರಿಸುವುದು. ಇಂಥ ಮನಸ್ಥಿತಿ ಇದ್ದರೆ ಯಾವ ಒಳಿತಿನ ಕಾರ್ಯಗಳನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಧೈರ್ಯ ಎಲ್ಲ ಒಳಿತು ಮತ್ತು ಸದ್ಗುಣಗಳ ಮೂಲ ಎನ್ನುವುದು. ಧೈರ್ಯಂ ಸರ್ವತ್ರ ಸಾಧನಂ. ಅದೇ ರೀತಿ ಭಯವೇ ಎಲ್ಲ ಕೆಡುಕಿಗೂ ಮೂಲ. ಈ ನೆಲೆಯಲ್ಲಿ ಅಮುಗೆ ರಾಯಮ್ಮನ ವಚನ ಮಾರ್ಗದರ್ಶನ ನೀಡುವಂತಿದೆ. ಆತ್ಮಹತ್ಯೆಗೆ ಮುಂದಾಗುವವರು, ಆ ಬಗ್ಗೆ ಯೋಚನೆ ಮಾಡುವವರು ರಾಯಮ್ಮನ ವಚನವನ್ನು ಗಮನಿಸಬೇಕು.
ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ,
ಹಿಡಿದ ಛಲವ ಬಿಡದಿರು ಮನವೆ.
ಜರಿದರೆಂದು ಝಂಕಿಸಿದರೆಂದು
ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ
ಗುರುವಾದಡು ಲಿಂಗವಾದಡು ಜಂಗಮವಾದಡು
ನೊಸಲಲ್ಲಿ ಕಣ್ಣುಳ್ಳ ಪಶುಪತಿಯಾದಡು
ತೆತ್ತಿಗರು ಕಂಡು ಒತ್ತಿ ನುಡಿದರೆಂದು ಘಟವ ಬಿಡುವ ಘಟಕರ್ಮಿಗಳು
ಏಳೇಳು ಜನ್ಮದಲ್ಲಿ ಸೂಕರನ ಹೊಟ್ಟೆಯಲ್ಲಿ ಹುಟ್ಟಿ,
ನೂರೊಂದು ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು
ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ:
ಅಮುಗೇಶ್ವರಲಿಂಗವೆ, ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಯಾರೋ ಅವಹೇಳನ ಮಾಡಿದರೆಂದು, ವಿನಾಕಾರಣ ಜರಿದರೆಂದು, ಕೆಟ್ಟದಾಗಿ ಬೈದರೆಂದು, ಕೈ ಮಾಡಿದರೆಂದು ಶಸ್ತ್ರ, ಸಮಾಧಿ, ನೀರು, ನೇಣು, ವಿಷ, ಔಷಧ ಇವುಗಳನ್ನು ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಎಚ್ಚರಿಸುವಳು ರಾಯಮ್ಮ. ಆತ್ಮಹತ್ಯೆಯಿಂದ ಪಾರಾಗಬೇಕೆಂದರೆ ಸಹಾನುಭೂತಿ ನಡಿಗೆಯ ಅಗತ್ಯವಿದೆ. ಅದು ಹೊರಗಿನ ಜನರ ಜೊತೆಗಷ್ಟೇ ಅಲ್ಲ; ನಮ್ಮ ಬುದ್ಧಿ, ಮನಸ್ಸುಗಳೊಂದಿಗೆ ಮೊದಲು ಮಾಡಿಕೊಳ್ಳಬೇಕು. ಅದರಲ್ಲೂ ಬಿಕ್ಕಟ್ಟಿನ ಸಂದರ್ಭ, ಸಮಸ್ಯೆಗಳು ಎದುರಾದಾಗ ನಮ್ಮೊಳಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಹಾನುಭೂತಿ ನಡಿಗೆಯುಳ್ಳವರ ಜೊತೆ ಮಾತನಾಡಬೇಕು. ಶರಣರು ಇಷ್ಟಲಿಂಗವನ್ನು ಕರುಣಿಸಿದ್ದು ಈ ನೆಲೆಯಲ್ಲೇ. ಅಂಗೈಯಲ್ಲಿ ಲಿಂಗಯ್ಯನನ್ನು ಇಟ್ಟುಕೊಂಡು ಅದೇ ನಮ್ಮ ಆತ್ಮಸಾಕ್ಷಿಯ ಪ್ರತೀಕವೆಂದು ಭಾವಿಸಿ ಅದರ ಜೊತೆ ಮುಖಾಮುಖಿಯಾಗಬೇಕು. ಅಂದರೆ ವ್ಯಕ್ತಿ ತನ್ನ ಜೊತೆ ತಾನೇ ಸಹಾನುಭೂತಿಯ ನಡಿಗೆ ಮಾಡಿಕೊಳ್ಳುತ್ತಿದ್ದರೆ ಆತ್ಮಹತ್ಯೆಯಂತಹ ಹೇಯ ಕೃತ್ಯಗಳಿಂದ ಹೊರಬರಲು ಸಾಧ್ಯವಾಗುವುದು. ರಾಯಮ್ಮನವರ ವಚನಕ್ಕೆ ಪೂರಕವಾಗಿರುವ ಮಹಾದೇವಿಯಕ್ಕನವರ ವಚನವನ್ನೂ ನೋಡಬಹುದು:
ಹೆದರದಿರು ಮನವೆ, ಬೆದರದಿರು ತನುವೆ,
ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದಮರನ ಇಡುವರೊಬ್ಬರ ಕಾಣೆ.
ಭಕ್ತಿಯುಳ್ಳವರ ಬೈವರೊಂದು ಕೋಟಿ,
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ,
ಚೆನ್ನಮಲ್ಲಿಕಾರ್ಜುನಾ.
ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚುವವರು ಇರುವ ಹಾಗೆ ನಿಂದಿಸುವವರೂ ಇರುತ್ತಾರೆ. ಕೆಲವರ ಸ್ವಭಾವ ತುಂಬಾ ವಿಚಿತ್ರದಾದುದು. ನೀವು ಏನೇ ಮಾಡಿದರೂ ಅದನ್ನು ಮೆಚ್ಚುವ ಗುಣವಿರಲಿ; ಸಹಿಸುವ ಮನಸ್ಸೂ ಇರುವುದಿಲ್ಲ. ಅದಕ್ಕೆ ಕಲ್ಲು ಹಾಕುವುದು ಹೇಗೆಂದು ಚಿಂತೆ ಮಾಡುತ್ತಿರುತ್ತಾರೆ. ಮನೋಬಲ ಇರುವ ವ್ಯಕ್ತಿ ಮತ್ತೊಬ್ಬರ ಮೆಚ್ಚುಗೆ ಇಲ್ಲವೆ ನಿಂದೆಗೆ ಸೊಪ್ಪು ಹಾಕದೆ ತನ್ನ ಮನ ಮೆಚ್ಚುವ ಕಾರ್ಯವನ್ನು ಮಾಡುತ್ತ ಸಾಗುವನು. ಅವನು ಯಾವುದಕ್ಕೂ ಹಿಗ್ಗುವುದಿಲ್ಲ ಇಲ್ಲವೇ ಕುಗ್ಗುವುದಿಲ್ಲ. ಈ ನೆಲೆಯಲ್ಲಿ ಮನುಷ್ಯನಿಗೆ ಬೇಕಾದುದು ಮನೋಬಲ, ಧೈರ್ಯ, ಉತ್ತಮ ಕಾರ್ಯಗಳಲ್ಲಿ ನಂಬಿಕೆ, ಸಹಾನುಭೂತಿಯ ನಡಿಗೆ ಮತ್ತು ಸಕಾರಾತ್ಮಕ ಚಿಂತನೆ. ಅದರಿಂದ ಅವನಲ್ಲಿ ಒಂದುರೀತಿಯ ಗಟ್ಟಿತನ ಬರುವುದು. ಇವತ್ತು ಮುಖ್ಯವಾಗಿ ಬೇಕಾಗಿರುವುದೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುಣ. ಮನೋಬಲ ಬೆಳೆಸಿಕೊಂಡು ಧೀಶಕ್ತಿಯನ್ನು ರೂಢಿಸಿಕೊಂಡರೆ ಮನುಷ್ಯ ಸ್ಥಿತಪ್ರಜ್ಞತ್ವ ಕಾಯ್ದುಕೊಳ್ಳಲು ಸಾಧ್ಯವಾಗುವುದು. ಸ್ಥಿತಪ್ರಜ್ಞರಿಂದ ಅದ್ಭುತ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯ. ಈ ದಿಶೆಯಲ್ಲಿ ನಕಾರಾತ್ಮಕ ಚಿಂತನೆಗೆ ಬದಲಾಗಿ ಸಕಾರಾತ್ಮಕ ಚಿಂತನೆ ಮಾಡುವ, ಆದರ್ಶದ ದಾರಿಯಲ್ಲಿ ನಡೆಯುವ ಅವಶ್ಯಕತೆ ಇದೆ. ಆದರೆ ಮನಸ್ಸಿನ ಸ್ವಭಾವ ತುಂಬಾ ವಿಚಿತ್ರ. ಅದು ನಕಾರಾತ್ಮಕ ಚಿಂತನೆಗೆ, ಚಾಡಿ ಮಾತುಗಳಿಗೆ ಒತ್ತು ಕೊಡುವುದು.
ಸಕಲ ಜೀವಾತ್ಮರಿಗೆ ಒಳಿತು ಬಯಸುವ ವ್ಯಕ್ತಿ ನಿಷೇಧಾತ್ಮಕ ಭಾವನೆಗಳನ್ನು ಕಿತ್ತೆಸೆದು ಒಳಿತನ್ನು ಮೆಚ್ಚಿ ಗೌರವಿಸುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕಾದುದು ತುಂಬಾ ಮುಖ್ಯ. ಒಬ್ಬ ಬಡತನವನ್ನು ಶಾಪವೆನ್ನದೆ ಅದನ್ನೇ ತನ್ನ ಬದುಕಿನ ಬಂಡವಾಳ ಮಾಡಿಕೊಂಡು `ಹಾಸಿಗೆ ಇದ್ದಷ್ಟು ಕಾಲು ಚಾಚುವ’, ಸತ್ಯದ ದಾರಿಯಲ್ಲಿ ನಡೆಯುವ ಛಲವುಳ್ಳವನಾಗಿದ್ದರೆ ಆತನನ್ನು ಪ್ರೀತಿಸಬೇಕು. ಪ್ರಗತಿಯ ಮೆಟ್ಟಿಲೇರುವವರನ್ನು ಕಂಡು ಗೌರವಿಸಿ ಪ್ರೋತ್ಸಾಹಿಸಬೇಕು. ಆತ ಬರಿಗೈಲಿ ಎಷ್ಟೆಲ್ಲ ಸಾಧನೆ ಮಾಡಿದ್ದಾನಲ್ಲ ಎಂದು ಬೆನ್ನು ತಟ್ಟಬೇಕು. ಇಂಥ ಗುಣ, ಸ್ವಭಾವಗಳನ್ನು ಬೆಳೆಸಿಕೊಂಡರೆ ಆತನೂ ಬೆಳೆಯುತ್ತಾನೆ, ಇನ್ನೊಬ್ಬರನ್ನೂ ಬೆಳೆಸುತ್ತಾನೆ. ಇವತ್ತು ಬಾಹ್ಯ ಕಟ್ಟಡ ಕಟ್ಟುವುದು ಮುಖ್ಯವಲ್ಲ. ಯಾರು ಬೇಕಾದರೂ ಭವ್ಯ ಕಟ್ಟಡ ಕಟ್ಟಿಸಬಹುದು. ಆದರೆ ಜನರ ಮನಸ್ಸು ಕಟ್ಟುವುದು, ಸಜ್ಜನರ ಸಂಗ ಬೆಳೆಸುವುದು ತುಂಬಾ ಕಷ್ಟಸಾಧ್ಯವಾದ ಕಾರ್ಯ. ಒಬ್ಬ ವ್ಯಕ್ತಿ ಒಳ್ಳೆಯ ಭಾವನೆ ಬೆಳೆಸಿಕೊಂಡರೆ ಏನೆಲ್ಲ ಸಾಧನೆ ಮಾಡಲು ಸಾಧ್ಯ. ಇದಕ್ಕಾಗಿ ವಯಸ್ಸಾದವರ ಸಂಘಟನೆ ಮಾಡುವುದಕ್ಕಿಂತ ಯುವಪೀಳಿಗೆಯ ಸಂಘಟನೆ ಮಾಡುವುದು ಮುಖ್ಯ.
ಮಾತು, ಕೃತಿ, ಹೃದಯ ಉತ್ತಮ ಸಂಸ್ಕಾರದಿಂದ ಕೂಡಿದ್ದರೆ ಎಲ್ಲರ ಒಲವು ಗಳಿಸಲು ಸಾಧ್ಯ. ಆಗ ಆತ್ಮಹತ್ಯೆಯ ಪ್ರಸಂಗವೇ ಉದ್ಭವಿಸುವುದಿಲ್ಲ. ಆತ್ಮಹತ್ಯೆಯ ಭಾವ ಬಂದಾಗ ದುಡುಕದೆ ಸ್ವಲ್ಪ ಸಮಾಧಾನಚಿತ್ತವುಳ್ಳವರಾದರೆ ಆ ಕ್ಷಣದಿಂದ ಹೊರಬಂದು ಮುಂದೆ ಸತ್ಕಾರ್ಯಗಳನ್ನು ಮಾಡಲು ಸಾಧ್ಯ. ಇತ್ತೀಚಿನ ದಿನಮಾನಗಳಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ಬಹುತೇಕರು ಹೊಟ್ಟೆಗೆ, ಬಟ್ಟೆಗೆ ಇಲ್ಲದವರಲ್ಲ. ಎಲ್ಲ ಇದ್ದೂ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಅವರಲ್ಲಿ ಆತ್ಮಬಲ, ಆತ್ಮವಿಶ್ವಾಸ ಇಲ್ಲವೆಂದೇ ಅರ್ಥ. ಕೆಲವರು ಇದ್ದಕ್ಕಿದ್ದಂತೆ ಖಿನ್ನತೆಗೆ ಒಳಗಾಗಿದ್ದರೂ ಅದನ್ನು ತೋರಗೊಡದೆ ಹೇಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಣಯ ಮಾಡಿಕೊಂಡಿರುತ್ತಾರೆ. `ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ’ ಎನ್ನುವಂತೆ ಬಾಲ್ಯದಿಂದಲೇ ಮಕ್ಕಳಲ್ಲಿ ಅರಿವು, ಆಚಾರ ಒಂದಾಗುವ ಹಾಗೆ ಹಿರಿಯರು ನೋಡಿಕೊಂಡಿದ್ದರೆ ಖಿನ್ನತೆಗೆ, ಆತ್ಮಹತ್ಯೆಗೆ ಅವಕಾಶವೇ ಇರುವುದಿಲ್ಲ. ಮಗು ನಗು ನಗುತ್ತಲೇ ಎಲ್ಲವನ್ನೂ ಸ್ವೀಕರಿಸುವುದು. ನಡೆಯುವಾಗ ಎಷ್ಟೇ ಸಲ ಬಿದ್ದರೂ ಮತ್ತೆ ಮತ್ತೆ ಪ್ರಯತ್ನಿಸಿ ನಡೆಯುವಲ್ಲಿ ಯಶಸ್ಸು ಕಾಣುವುದು. ಈ ದಿಶೆಯಲ್ಲಿ ಮನುಷ್ಯನಿಗೆ ಬೇಕಾದ್ದು ಮಗುವಿನ ನಗು ಮತ್ತು ನಡಿಗೆ. ಅದೇ ಎಲ್ಲ ಅನಾಹುತವನ್ನೂ ತಪ್ಪಿಸಿ ಸರಿಯಾದ ಮಾರ್ಗವನ್ನು ಸೂಚಿಸುವುದು.
ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಸಹ ಆತ್ಮಹತ್ಯೆಯೆ. ಆತ್ಮದ್ರೋಹಿ ಮಾತ್ರ ನೈಜ ವಿಚಾರಗಳನ್ನು ಮರೆಮಾಚಿ ಮುಖವಾಡ ಧರಿಸಿ ಬದುಕುವನು. ಅಂಥ ಮುಖವಾಡದ ಮನುಷ್ಯರೇ ಬೇಗ ಆತ್ಮಹತ್ಯೆಗೆ ಮುಂದಾಗುವುದು. ಒಬ್ಬ ವ್ಯಕ್ತಿ ಎಷ್ಟೇ ಬುದ್ಧಿವಂತ, ಶ್ರೀಮಂತ, ಅಧಿಕಾರಸ್ಥ ಆಗಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ಅವನ ಆಂತರಿಕ ಬದುಕು ಕೊಳಕಾಗಿತ್ತು ಎಂದೇ ಭಾವಿಸಬೇಕಾಗುತ್ತದೆ. ಅಂಥವರ ಬಗ್ಗೆ ಮರುಗುವುದು, ಕನಿಕರ ತೋರುವುದು ಸಹ ಸಹ್ಯವೆನಿಸದು. ಕೆಲವರು ಅನುಭವಿಸುತ್ತಿರುವ ನೋವುಗಳನ್ನು ಗಮನಿಸಿದಾಗ ಅವರು ಯಾವಾಗಲೋ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು ಎಂದು ಅನಿಸುವುದುಂಟು. ಆದರೆ ಅವರಿಗೆ ಆತ್ಮಬಲ, ಮನೋಸ್ಥೈರ್ಯ, ಆದರ್ಶ ಪಥ ಇರುತ್ತದೆ. ಅದೇ ಅವರನ್ನು ಬದುಕಿಸುವುದು; ಧೈರ್ಯದಿಂದ ಸವಾಲುಗಳನ್ನು ಎದುರಿಸುವ ಮನೋಬಲ ತಂದುಕೊಡುವುದು. ಸುಳ್ಳು, ತಟವಟ ಯಾವ ಕಾಲಕ್ಕೂ ಸಲ್ಲವು. ಕೆಲವರು ಊಟಕ್ಕಾಗಿ ಸುಳ್ಳು ಹೇಳುವರು, ದುಡ್ಡಿಗಾಗಿ ಸುಳ್ಳು ಹೇಳುವರು, ನನಗೆ ಸಹಾಯ ಮಾಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಬ್ಲಾಕ್ಮೇಲ್ ಮಾಡುವರು. ಇದು ಸಹ ಸಲ್ಲದ ಕಾರ್ಯ. ಮನುಷ್ಯ ಯಾವಾಗಲೂ ಸತ್ಯದ ದಾರಿಯಲ್ಲೇ ಹೆಜ್ಜೆ ಇಡಬೇಕು. ಈ ನಿಟ್ಟಿನಲ್ಲಿ ಶರಣರ ವಚನಗಳು ಎಲ್ಲರ ಬದುಕಿಗೆ ಭರವಸೆ ತಂದುಕೊಡುವಂತಹವು. ಅವುಗಳ ಅರಿವು ಇಂದು ತುರ್ತಾಗಿ ಬೇಕಾಗಿದೆ.
ಆತ್ಮಹತ್ಯೆಗೆ ಕೆಲವೊಮ್ಮೆ ಕಾರಣಗಳೇ ಬೇಕಿರುವುದಿಲ್ಲ. ಚಿಕ್ಕಪುಟ್ಟ ವಿಷಯಗಳನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗುವವರೂ ಇದ್ದಾರೆ. ಸಾಯಲು ಹೆದರದವರು ಬದುಕುವುದಕ್ಕೆ ಏಕೆ ಹೆದರಬೇಕು? ಬದುಕಿ ತಾವೇನು ಎನ್ನುವುದನ್ನು ತೋರಿಸುವ ಛಲ ಮತ್ತು ಮನೋಬಲ ಮೈಗೂಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಪ್ರಯೋಜನವೇನು? ಅದರಿಂದ ತನ್ನನ್ನು ಅವಲಂಬಿಸಿದವರಿಗೆ ನೋವು ಕೊಟ್ಟಂತಾಗುವುದು. ಸತ್ತವನ ಬಗ್ಗೆ ಯಾರೂ ಒಳ್ಳೆಯ ಮಾತು ಆಡುವುದಿಲ್ಲ. ಮಾತಿನಲ್ಲಿ ಅಯ್ಯೋ ಎನ್ನುವ ಅನುಕಂಪೆ ವ್ಯಕ್ತಪಡಿಸಿದರೂ ಅವನಂಥ ಹೇಡಿ ಮತ್ತಾರೂ ಇಲ್ಲ ಎಂದು ಹೀಗಳೆವರು. ಹಾಗಾಗಿ ಆತ್ಮಹತ್ಯೆಗೆ ಕಾರಣ ಇಂಥವರು ಎಂದು ಬರೆದಿಟ್ಟು ಸಾಯುವ ಬದಲು ಅಂಥವರ ಮುಂದೆ ತಲೆ ಎತ್ತಿ ಬಾಳುವ ಸಂಕಲ್ಪ ಸ್ವೀಕರಿಸಬೇಕು. ನಿಮ್ಮ ಬಗ್ಗೆ ಮಾತನಾಡಿದವರೇ ಪಶ್ಚಾತ್ತಾಪಪಡುವಂತೆ ಬದುಕಿ ತೋರಿಸಬೇಕು. ಯಾರೇನು ಈ ಜಗತ್ತಿನಲ್ಲಿ ದೈಹಿಕವಾಗಿ ಶಾಶ್ವತವಾಗಿ ಇರಲಾರರು. ಹಾಗಂತ ಆತ್ಮಹತ್ಯೆಗೆ ಮುಂದಾಗುವುದು ಮಹಾಪಾಪ.
ಮಹಾದೇವಿಯಕ್ಕನವರು `ಆವ ವಿದ್ಯೆ ಕಲಿತಡೇನು ಸಾವ ವಿದ್ಯೆ ಬೆನ್ನ ಬಿಡದು’ ಎಂದು ಹೇಳಿದರೆ ಬಸವಣ್ಣನವರು `ಎಮ್ಮವರಿಗೆ ಸಾವಿಲ್ಲ, ಸಾವೆಂಬುದು ಸ್ವಯವಲ್ಲ’ ಎಂದಿದ್ದಾರೆ. ಮರಣ ಯಾರಿಗೂ ತಪ್ಪಿದ್ದಲ್ಲ. ಆದರೆ ಸಾವು ತಾನಾಗಿ ಬಂದಾಗ ಅದನ್ನು ಮಹಾನವಮಿಯ ಹಬ್ಬದಂತೆ ಸಂತೋಷದಿಂದಲೇ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅದನ್ನು ಬಿಟ್ಟು ಏನೇನೋ ನೆಪ ಮುಂದೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವ ಮಹಾಪಾಪಕ್ಕೆ ಯಾರೂ ಮುಂದಾಗಬಾರದು.
ಭಕ್ತಂಗೆ ಬಡತನವುಂಟೆ? ನಿತ್ಯಂಗೆ ಮರಣವುಂಟೆ?
ಭಕ್ತರು ಬಡವರೆಂದು ಮತ್ತೊಂದ ಕೊಟ್ಟೆಹೆನೆಂದಡೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗವು ಸತ್ತಂದಿಗಲ್ಲದೆ ಬಡತನವಿಲ್ಲ.

Previous post ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
Next post ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…

Related Posts

ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
Share:
Articles

ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ

January 7, 2019 ಮಹಾದೇವ ಹಡಪದ
ಒಂದಾನೊಂದು ಕಾಲದಲ್ಲಿ ಸಿಂಧಿ ಅನ್ನೋ ನಾಡಲ್ಲಿ ಸುಪ್ರಸಿದ್ದ ಕಳ್ಳನಿದ್ದ. ಅವನು ಆಕಾರದಲ್ಲಿ ಕುಳ್ಳನಾಗಿದ್ದರೂ ಬುದ್ದಿಯಲ್ಲಿ ಬಲು ಜಾಣ. ಹಂಗಾಗಿ ಅವನು ಕಳ್ಳರಿಗೆಲ್ಲ ನಾಯಕನಾಗಿ,...
ಅನುಭಾವ ಮತ್ತು ಅನಿರ್ವಚನೀಯತೆ
Share:
Articles

ಅನುಭಾವ ಮತ್ತು ಅನಿರ್ವಚನೀಯತೆ

March 12, 2022 ಡಾ. ಎನ್.ಜಿ ಮಹಾದೇವಪ್ಪ
ನಾವು ಇಂದ್ರಿಯಾನುಭವವನ್ನು ವರ್ಣಿಸಿದಂತೆ ಅನುಭಾವ ಅಥವಾ ತುರೀಯವನ್ನು ವರ್ಣಿಸಲಾಗದು. ಅನುಭಾವಿಗಳೇ ಅದನ್ನು ಅನಿರ್ವಚನೀಯ, ಮಾತುಮನಂಗಳಿಂದತ್ತತ್ತ, ಮೂಕ/ಶಿಶು ಕಂಡ...

Comments 10

  1. ವಸುದೇವ
    Jan 13, 2021 Reply

    ಸುಂದರವಾದ, ಅರ್ಥಪೂರ್ಣ ಲೇಖನ. Depression ಕರಿನೆರಳಿಗೆ ಒಳಗಾಗುವ ಅಪಾಯ ಇವತ್ತು ಪ್ರತಿಯೊಬ್ಬರಿಗೂ ಇರುವುದರಿಂದ ಎಲ್ಲರೂ ಓದಲೇ ಬೇಕಾದ ಉತ್ತಮ ಲೇಖನ.

  2. Jagannatha Patil
    Jan 13, 2021 Reply

    `ಆವ ವಿದ್ಯೆ ಕಲಿತಡೇನು ಸಾವ ವಿದ್ಯೆ ಬೆನ್ನ ಬಿಡದು’ ಮತ್ತು `ಎಮ್ಮವರಿಗೆ ಸಾವಿಲ್ಲ, ಸಾವೆಂಬುದು ಸ್ವಯವಲ್ಲ’- ಈ ವಚನ ವ್ಯಾಖ್ಯೆಗಳನ್ನು ವಿವರಿಸುವಿರಾ, ಪ್ಲೀಸ್?

  3. Umashankara Bengaluru
    Jan 14, 2021 Reply

    ಆತ್ಮವಿಶ್ವಾಸದಿಂದ ಆತ್ಮಹತ್ಯೆಯ ಯೋಚನೆಗಳಿಂದ ಹೊರಬರುವ ಮಾರ್ಗ ತೋರಿದ ಸ್ವಾಮಿಗಳಿಗೆ ವಂದನೆಗಳು

  4. Jahnavi Naik
    Jan 17, 2021 Reply

    ಯುವಜನರಿಗೆ ಇಂತಹ ಲೇಖನಗಳು ತಲುಪಬೇಕು. ಸುಂದರ ನಿರೂಪಣೆ.

  5. Girija K.P
    Jan 18, 2021 Reply

    ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುವುದು ಆತ್ಮಹತ್ಯೆ- ಎನ್ನುವ ಗುರುಗಳ ಮಾತನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಹೀಗೆ ನಾನೂ ಜೀವನದಲ್ಲಿ ಹೊಣೆಗಾರಿಕೆಯಿಂದ ಓಡಿಹೋಗಲು ಆತ್ಮಹತ್ಯೆಯ ವಿಚಾರ ಮಾಡಿದ್ದೆ.

  6. Rajashekhar s
    Jan 20, 2021 Reply

    “ಮನಸ್ಸು ಸಣ್ಣ ಸಣ್ಣ ವಿಷಯಗಳಿಗೆಲ್ಲಾ ದುರ್ಬಲವಾಗುತ್ತದೆ… ಬದುಕಿನ ಬಗ್ಗೆ ಆಸಕ್ತಿಯೇ ಹೊರಟು ಹೋಗುತ್ತದೆ. ಆಗ ಸಾಯೋದೇ ವಾಸಿ ಅನಿಸುತ್ತೆ”- ನನ್ನ ಬಳಿ ಬರೋ ವಿದ್ಯಾರ್ಥಿಗಳೆಲ್ಲ ಹೆಚ್ಚುಕಮ್ಮಿ ಹೀಗೇ ಹೇಳ್ತಾರೆ. ಅವರನ್ನು ಸಕಾರಾತ್ಮಕವಾಗಿ ಉತ್ತೇಜಿಸಲು ಅನೇಕ ಘಟನೆಗಳನ್ನು ಹೇಳುತ್ತಿರುತ್ತೇನೆ. ಇನ್ನು ಮೇಲೆ ವಚನಗಳನ್ನು ಬಳಸಿಕೊಳ್ಳುತ್ತೇನೆ. ಸಮಯೋಚಿತ ಲೇಖನ.

  7. Aravind Malur
    Jan 21, 2021 Reply

    My brother recommended I would possibly like this website. certainly I Liked it most.

  8. ದೇವಕಿ ಶಿರೂರು
    Jan 22, 2021 Reply

    ಅಮುಗೆ ರಾಯಮ್ಮನವರ ವಚನ – “…ಜರಿದರೆಂದು ಝಂಕಿಸಿದರೆಂದು, ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ…” ಅದ್ಭುತವಾಗಿದೆ. ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವ ಗಳಿಗೆಗಳು ಎಲ್ಲರಿಗೂ ಬಂದೇ ಬರುತ್ತವೆ. ಈ ವಚನ ಮತ್ತು ಶ್ರೀಗಳ ಮಾತುಗಳು ಬೆಳಕಾಗಿ ದಾರಿ ತೋರಲಿ.

  9. Jeevan koppad
    Jan 25, 2021 Reply

    ತನ್ನನ್ನು ನಾನು ದುರ್ಬಲ, ಹೇಡಿ, ಕೈಲಾಗದವ ಎಂದುಕೊಂಡರೆ ಅವನೇ ಪಾಪಿ ಎನ್ನುವ ವಿವೇಕವಾಣಿ ಮತ್ತು ಶರಣರ ವಚನಗಳು ಜೀವನದಲ್ಲಿ ಮತ್ತೆ ಉತ್ಸಾಹ ತುಂಬುತ್ತವೆ. ಆತ್ಮಹತ್ಯೆ ಸುಳಿದು ಹೋಗಲಿ, ಆದರೆ ಅದು ಬಲಿ ತೆಗೆದುಕೊಳ್ಳುವುದು ಬೇಡ.

  10. Ganesh
    Feb 5, 2021 Reply

    Awesome post. I am a normal visitor of your blog and appreciate you taking the time to maintain the nice site. I will be a regular visitor from now…

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
ಸಾವಿಲ್ಲದ ಝೆನ್ ಗುರು: ಥಿಚ್ ನಾತ್ ಹಾನ್
February 11, 2022
Copyright © 2023 Bayalu