Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅವಿರಳ ಅನುಭಾವಿ-4
Share:
Articles June 17, 2020 ಮಹಾದೇವ ಹಡಪದ

ಅವಿರಳ ಅನುಭಾವಿ-4

(ಮಹಾಮನೆಯ ಕಣ್ಮಣಿಯಾಗಿ ಪ್ರಬುದ್ಧವಾಗಿ ಬೆಳೆದು ನಿಂತಿದ್ದ ಚನ್ನಬಸವಣ್ಣ, ಬಿಜ್ಜಳ ರಾಜನ ಇಚ್ಛೆಯಂತೆ ಚಿಕ್ಕದಣ್ಣಾಯಕನಾಗಿ ಕಾಯಕ ಆರಂಭಿಸಿದ. ನಳನಳಿಸುತ್ತಿದ್ದ ಕಲ್ಯಾಣ ದುರುಳರ ಕುತಂತ್ರಕ್ಕೆ ಬಲಿಯಾಗಿ ಹೊತ್ತಿ ಉರಿಯತೊಡಗಿತು. ಬಸವಣ್ಣನವರು ಕೂಡಲಸಂಗಮಕ್ಕೆ ಹೊರಟಿದ್ದೆ ತಡ ಎಲ್ಲೆಡೆ ದೊಂಬಿ, ಗಲಭೆಗಳು ಕಾಣಿಸಿಕೊಂಡು ಶರಣರು ಕಲ್ಯಾಣವನ್ನು ತೊರೆದು ಚನ್ನಬಸವಣ್ಣನವರ ನೇತೃತ್ವದಲ್ಲಿ ಸೊನ್ನಲಿಗೆಯತ್ತ ನಡೆದರು. ಮುಂದಕ್ಕೆ ಓದಿ-)

ಕಲ್ಯಾಣದಲ್ಲಿದ್ದಾಗ ಅಲ್ಲೊಂದು ಇಲ್ಲೊಂದು ಗಲಭೆಗಳು ಕೇಳುತ್ತಿದ್ದವು ಈಗ ಶರಣರ ದಂಡಿಗೆ ಎದುರಲ್ಲೇ ನಡೆಯತೊಡಗಿದವು. ಹಾದು ಹೋದದ್ದೊಂದು ದಂಡು ಹಿಂದಿನಿಂದ ಬಂದು ಇರಿದದ್ದೊಂದು ಹಿಂಡು, ಎದುರಾಗಿ ಕಾದಾಡಿ ಸೋತು ಓಡಿದ್ದೊಂದು ದಂಡು, ಯಾವ ಕೈಗಳು ಕತ್ತಿ-ಗುರಾಣಿ ಹಿಡಿಯದೆ ಸಮಸಮಾನತೆ ಕಾಯಕ ಸಿದ್ಧಾಂತಕ್ಕೆ ಕೈಜೋಡಿಸಿ ದುಡಿದಿದ್ದವೋ ಅದೇ ಕೈಗಳು ಸ್ವರಕ್ಷಣೆಗಾಗಿ ಈಟಿ, ಅಲುಗು, ಗುರಾಣಿ, ಜಂಬೆ, ಕೈಗತ್ತಿ, ಕಿಗ್ಗತ್ತಿ ಹಿಡಿದು ಮುನ್ನಡೆಯುತ್ತಿದ್ದವು. ಮೊದಲ ಬಾರಿಗೆ ಮೇನೆ, ಕಾಲಾಳು, ಕುದುರೆ, ಸಾರೋಟಿಲ್ಲದೆ ದೂರದಾರಿ ನಡೆಯುತ್ತಿದ್ದ ಚನ್ನಬಸವಣ್ಣನ ಮುಖದಲ್ಲಿ ಕಳವಳವೇ ತುಂಬಿಕೊಂಡಿರಲಾಗಿ ಆ ಮುಖದಲ್ಲಿ ದುಗುಡವೇ ಮಡುಗಟ್ಟಿ ನಿಂತಿತ್ತು.
ಹನ್ನೆರಡು ಗಾವುದ ಕಲ್ಯಾಣವು ಅಂಗುಲಂಗುಲ ಹಿಗ್ಗಿ ಇಡೀ ನಾಡೆಲ್ಲ ಹೊಂಗನಸಿನ ಶರಣಸಮುದಾಯ ಕಟ್ಟುತ್ತದೆ ಎಂಬ ವಿಶ್ವಾಸ ಅವರ ಪ್ರತಿಯೊಂದು ಪಾದದಲ್ಲೂ ಮೂಡುತ್ತಿತ್ತು. ಆದರೆ ಅಂಗಾಲುಗಳಿಗೆ ಹೊಸ ಅನುಭವವು ಚೂರುಚೂರೇ ತಾಗುತ್ತಾ, ಆ ಕಲ್ಲು, ಮುಳ್ಳುಗಳು ಗುಡ್ಡಗಾಡಿನ ಹಾದಿಗೆ ಎರವಾಗಿ ಹಿಂಬಡಿಯೊಳಗೆ ಬಿರುಕು ಬಿಟ್ಟದ್ದೆ ಪಾದಗಳು ಉರಿಯತೊಡಗಿದವು. ಕಾದು ಹದಕ್ಕೆ ಬಂದ ನೆಲದೊಳಕ್ಕೆ ರಕ್ತದ ವಾಸನೆ ಮುಟ್ಟಿದ್ದೆ ಎಂದೂ ನಡೆಯದ ಕಾಲುಗಳಿಗೆ ದಣಿವಾಗತೊಡಗಿತ್ತು.
‘ಅಯ್ಯೋ ನಾನು ಸತ್ತೆ’ ಎಂದು ಯಾರೋ ಕೂಗಿದರು ಹಿಂದೆ ಹಿಂದೆ.. ಮಾಚಿದೇವ, ಬಾಚರಸರು ಅತ್ತ ಹೊರಡುವುದರೊಳಗೆ ಎದುರಿನಲ್ಲೊಂದು ದಂಡು ಬಂದು ಮೈಮೇಲೆ ಬಿದ್ದಿತು. ಅಷ್ಟರಲ್ಲಿ ಹತ್ತಾರು ಮಂದಿಯ ದಂಡಿನ ಖಡ್ಗದ ಝಳಪು ಶರಣರ ಗುಂಪಿನ ಮೇಲೆ ಇದ್ದಕ್ಕಿದ್ದಂತೆ ಎರಗಿ ಮನಬಂದಂತೆ ಇರಿಯತೊಡಗಿದಾಗ ಹಾಡುತ್ತಾ ಹೊರಟಿದ್ದ ಶರಣರ ಬಾಯೊಳಗೆ ಮರಣವೇ ಮಹಾನವಮಿ ಎಂಬೊಂದು ಮಾತು ಶಕ್ತಿ ಸಂಚಲಿಸಿ ಮೈಮನಗಳಿಗೆ ಶಕ್ತಿ ತುಂಬಿತು. ಶರಣೆಯರಾದಿಯಾಗಿ ಟೊಂಕ ಕಟ್ಟಿ ವೀರಗಚ್ಚೆ ಹಾಕಿ, ಸೀರೆಯ ಸೆರಗಲ್ಲಿ ಕಲ್ಲುಕಟ್ಟಿಕೊಂಡು ಬೀಸತೊಡಗಿದರು. ಇಡೀ ಗುಂಪಿನ ಆವೇಶದ ಬಲದಲ್ಲಿ ಸೂವಿದೇವ ದಳವು ಸೋಲುವ ಭಯದಲ್ಲಿ ಕಾಲ್ಕಿತ್ತು ಓಡಿತಷ್ಟೆ..! ಆದರೆ ಶರಣರ ಮೈಮೇಲೆ ಮೂಡಿದ್ದ ಗಾಯಗಳು, ಭರ್ರೆಂದು ಸೋರುವ ರಕ್ತವು ವಿಭೂತಿ ಹಚ್ಚಿದ್ದ ಹಣೆಯ ಮೇಲೆ ಇಳಿಯತೊಡಗಿತು.
ನೋವು ತುಂಬಿದ ಕಂಗಳಲ್ಲಿ, ಭರವಸೆಯ ಬೆಳಕಾಗಿ ಮಾತಿನ ಬಲ ತುಂಬಬೇಕಿದ್ದ ಚನ್ನಬಸವಣ್ಣ ತನ್ನೆಲ್ಲ ನೋವನ್ನು ನುಂಗಿಕೊಂಡು ಕೊಂಚಹೊತ್ತು ಅಲ್ಲೇ ವಿಶ್ರಮಿಸಿ ನೋವುಂಡ ಶರಣರಿಗೆ ಸಾಂತ್ವನ ಹೇಳಿ ಮತ್ತೆ ಮುನ್ನಡೆಯತೊಡಗಿದರು.
ಇನ್ನೇನು ನಾಲ್ಕು ಹರದಾರಿಗೆ ಬಂದೇ ಬಿಟ್ಟಿತು ಸೊನ್ನಲಿಗೆ-
ಸಿದ್ಧರಾಮರ ಮಾತು ಬಾಯೊಳಗಿದ್ದಾಗಲೇ ಚನ್ನಬಸವಣ್ಣನ ಆಯಾಸವೂ, ತುಟಿ ಕಪ್ಪಿಟ್ಟ ಬಾಯಾರಿಕೆಯೂ ಒಟ್ಟಾಗಿ ಬಂದು ಕುಸಿದುಬಿದ್ದರು. ಹಿಂದಿನಿಂದ ಬರುತ್ತಿದ್ದ ಚಂದಯ್ಯನು ಮುಂದಾಗಿ ತಲೆಗೆ ಭುಜಕೊಟ್ಟು ಒರಗಿ ಕುಳ್ಳಿರಿಸಿದಾಗ ಹಿಂದಿನಿಂದ ಸಾಗರೋಪಾದಿಯಲ್ಲಿ ಬರುತ್ತಿದ್ದ ಶರಣರಿಗೆ ಏನಾಗುತ್ತಿದೆ ಮುಂದೆಂಬ ಗೊಂದಲವಾಗಿ ಅವಸರಿಸಿ ಬಂದು ಗುಂಪುಗೂಡುವ ಮೊದಲೇ ಗುಂಡಯ್ಯನು ತತ್ತರಾಣಿಯಿಂದ ನೀರು ತೆಗೆದು ಮುಖದ ಮೇಲೆ ಚುಮುಕಿಸಿ ನೀರುಕುಡಿಸಿದ. ಅಲ್ಲೇ ಇದ್ದ ಸಿದ್ಧರಾಮರು ಚಂಗನೆ ನೆಗೆದು ಹಳ್ಳದ ಬದುವಿನಲ್ಲಿ ಕೈಯಾಡಿಸಿ ಲವಳಸರವೆಂಬ ಹಸಿರುಬಣ್ಣದ ಗಾದ್ಯಾಳಿ ಜಾತಿಯ ಸಸ್ಯವನ್ನು ಕಿತ್ತು ತಂದು ಚನ್ನಬಸವಣ್ಣನ ಅಂಗೈ, ಅಂಗಾಲುಗಳಿಗೆ ಹಚ್ಚಿ, ಕಾದ ನೆತ್ತಿಗೂ ತುಸು ಒತ್ತಿ ಹಿಡಿದರು. ಬಾಚರಸರು ಗಟ್ಟಿಯಾಗಿ ಶರಣರಿಗೆ ‘ಕೂತು ದಣಿವಾರಿಸಿಕೊಳ್ಳಿರೈ..’ ಎಂದು ಕೂಗಿ ಹೇಳಿದರು.
ಆ ದಿವಸ ಅದೇ ಹಳ್ಳದ ಆ ದಿನ್ನೆಯ ಮೇಲೆ ವಾಸ್ತವ್ಯ ಹೂಡಿದ್ದರಿಂದ ರಾತ್ರೆಯ ಕಾವಲಿಗೆ ನಾಲ್ಕಾರು ಶರಣರು ಪಾಳಿಯಂತೆ ನಿಂತರು. ಅರೆನಿದ್ದೆಯಲ್ಲಿದ್ದ ಚಿಕ್ಕದಣ್ಣಾಯಕನ ಕನವರಿಕೆಗೆ ಅಕ್ಕನಾಗಲಾಂಬೆ ರಾತ್ರಿಯಿಡೀ ಎಚ್ಚರಿದ್ದು ಆರೈಕೆ ಮಾಡುತ್ತಲಿದ್ದಳು. ಸರೂರಾತ್ರಿಗೆ ತೋಳಗಳು ಶರಣರ ದಂಡನ್ನೇ ಸುತ್ತುವರೆದಿವೆಯೋ ಎಂಬಂತೆ ಊಳಿಡುತ್ತಿದ್ದವು. ದಾರಿಯ ದಣಿವಿಗೆ ಯಾರ ಕಣ್ಣಗಳಲ್ಲೂ ಕಾಯುವ ಕಾತರವಿದ್ದಿರಲಿಲ್ಲ. ಎಚ್ಚರತಪ್ಪಿದರೆ ಇನ್ನೇನಾದೀತೆಂಬ ಭಯದಲ್ಲೇ ಕಾವಲಿಗೆ ನಿಂತವರು ಒಬ್ಬರನ್ನೊಬ್ಬರು ಚಿವುಟಿಕೊಳ್ಳುತ್ತಾ, ತೂಕಡಿಕೆ ಬಾರದಿರಲೆಂದು ತುದಿಗಾಲ ಬೆರಳ ಮೇಲೆ ನಿಂತು ತಮ್ಮ ತಲೆಯ ಕೂದಲಿಗೆ ದಾರ ಬಿಗಿದು, ಗಿಡದ ಟೊಂಗೆಗೆ ಕಟ್ಟಿಕೊಂಡಿದ್ದರು. ದೇಹದಣಿದು ಕಣ್ಣುತೇಲಿ ತೂಕಡಿಸಿದಾಗೊಮ್ಮೆ ಚುರ್ರುಕ್ ಎಂದು ಆ ತಲೆಯ ಕೂದಲಿಗೆ ಕಟ್ಟಿದ್ದ ದಾರವೂ ಎಳೆಯುತ್ತಿತ್ತು.
ಕತ್ತಲು ಕಳೆದು ಬೆಳಗಿನ ಜಾವಕ್ಕೊಂದು ಸಣ್ಣ ಕೋರೆಹಲ್ಲಿನ ಹಾಗೆ ಚಂದಿರ ಮೂಡುವ ಹೊತ್ತಿಗೆ ಸರಿಯಾಗಿ ಎಚ್ಚರವಾದಾಗ ಚನ್ನಬಸವಣ್ಣ ಮೈಪೂರ ಬೆವೆತಿದ್ದನು. ಬಿಸಿಲಿನ ದಾವವಿಲ್ಲವಾಗಿ ತಣ್ಣನೆಯ ತಂಗಾಳಿ ಸೂಸಿ ಬರುತ್ತಿದ್ದ ಆ ಹೊತ್ತಿನಲ್ಲೂ ಬೆವೆತಿದ್ದನಲ್ಲಾ..! ಅಕ್ಕನಾಗಮ್ಮಳು ಎದ್ದು, “ನೀರು ಬೇಕೇನಪ್ಪಾ..?” ಎಂದಳು. “ಬೇಡಾ ಅಬ್ಬೆ, ನಮ್ಮ ನಡಿಗೆ ಈಗ ಶುರುವಾಗಿದೆ ನಿಲ್ಲುವುದು ಬೇಡ. ಹೊರಡಬೇಕಲ್ಲ..!” ಎಂದವನೇ ದಡಬಡಿಸಿ ತನ್ನ ಜೋಳಿಗೆ ಕೈಕೋಲನು ಹುಡುಕತೊಡಗಿದ. ಕುಳಿತಲ್ಲಿಂದ ಏಳಗೊಡದ ತಾಯಿ ಬೆವೆತ ಮೈಯನ್ನು ತನ್ನ ಸೀರೆಯ ಸೆರಗಿನಿಂದ ಒರೆಸತೊಡಗಿದಳು.
“ಕನಸು ಕಂಡೆ ಏನಪ್ಪಾ..?”
“ಹೌದಬ್ಬೆ ಅದೊಂದು ಭಯಂಕರವಾದ ಕನಸು. ಏನೆಲ್ಲವೂ ನಡೆಯುತ್ತಿತ್ತು. ಆದರೆ ಯಾವುದಕ್ಕೂ ಸ್ಪಷ್ಟ ರೂಪವಿಲ್ಲವಾಗಿ ಅದ್ಯಾವ ಕನಸೆಂದು ಈಗ ನೆನಪಾಗುತ್ತಿಲ್ಲ. ಆದರೆ ಅದೊಂದು ಬಿಳಲು ಬಿಟ್ಟ ಮರದ ನೆರಳಲ್ಲಿ ನಾನಿದ್ದೆ, ನೀನಿದ್ದೆ, ಅಕ್ಕ ಗಂಗಾಂಬೆ ಇದ್ದಳು. ಸುತ್ತಲು ಹತ್ತಾರು ಜನ ಕುಳಿತು ಏನೋ ಮಾತಾಡುತ್ತಿದ್ದೆವು. ಏನು ಮಾತಾಡಿಕೊಂಡೆವೆಂಬ ನೆನಪಿಲ್ಲ. ಗಿಡವಾಗಿ ಹುಟ್ಟಿ ಮರವಾಗಿ ಬೆಳೆದು ಬಿಳಲಾಗಿ ಮತ್ತೆ ಭೂಮಿಯ ಒಡಲು ಸೇರಿದ್ದ ಆ ಮರದ ಬುಡವೇ ಯಾವುದೆಂದು ತಿಳಿಯದಂತೆ ಅದು ಆ ಮರವು ಆಕಾಶದ ಉದ್ದಗಲಕ್ಕೂ ಹಬ್ಬಿತ್ತೊಂದೆ ನೆನಪು… ಅಲ್ಲಿ ಮೇಲೆ ಗಿಡದ ತುತ್ತತುದಿಯಲ್ಲಿ ನೀಲಕ್ಕ ನಸುನಗುತ್ತಾ ಚನ್ನಬಸವಾ.. ಎಂದು ಕೂಗಿದಂತೆ ಕೇಳಿಸಿತ್ತು. ನಾನು ಹೊರಡಬೇಕಿತ್ತು, ಆದರೆ ನಮ್ಮ ನಡುವಿನ ಇನ್ಯಾರೋ ಹೊರಟೆದ್ದು ಹೋದರು. ಹೋದವರು ಯಾರೆಂದು ನೆನಪಿಗೆ ಬರಲೊಲ್ಲದು.. ಖರೇ, ಹೋದವರು ಹೊರಳಿ ನೋಡುವ ಮುನ್ನವೇ ಬೂದಿಯಾಗಿ ಉದುರಿದಂತಾಯ್ತು ಅಬ್ಬೆ…!”
ಅದೆಂಥ ಪ್ರಶಾಂತದ ಮುಖಮುದ್ರೆ, ಕನಸು ಹೇಳುವಾಗ ತುಟಿ ಅದುರಲಿಲ್ಲ, ಭಾವ ಓತಪ್ರೋತವಾಗಲಿಲ್ಲ, ಭಯ ಮೂಡಲಿಲ್ಲ, ಕೆನ್ನೆ ಕದಲಲಿಲ್ಲ. ಕಣ್ಣೊಳಗಿನ ದೃಷ್ಟಿ ಚಲಿಸಲಿಲ್ಲ, ಹುಬ್ಬು ಏರುಪೇರಾಗದೆ ನಿಶಾಂತ ನಿಶ್ಚಿಂತ ಮುಖಮುದ್ರೆಯಲ್ಲಿದ್ದ ಚನ್ನಬಸವಣ್ಣ ಎದೆಯ ಮೇಗಳ ಲಿಂಗವನ್ನೊಮ್ಮೆ ಮುಟ್ಟಿ ಕೂಡಲಚನ್ನಸಂಗಯ್ಯಾ ಎಂದನಷ್ಟೆ… ತಾಯಿಯ ಕಣ್ಣೊಳಗೆ ಹೊಸತೊಬ್ಬ ಬಸವಣ್ಣನ ಕಂಡ ಅನುಭವವಾಯ್ತು. ‘ಬಸವಾ’ ಎಂದಳಬ್ಬೆ.
ಬೆಳ್ಳಿ ಚಿಕ್ಕಿ ಮೂಡಿದ್ದೆ ಮಲಗಿದ್ದ ಶರಣರು ಒಬ್ಬರ ಮಾತೊಬ್ಬರು ಕೇಳಿಸಿಕೊಳ್ಳುತ್ತಲೇ ಎಚ್ಚರಗೊಂಡರು. ‘ಇನ್ನೇನು ದೂರಿಲ್ಲ ನಾಲ್ಕು ಹರದಾರಿ’ ಎಂದಿದ್ದ ಸಿದ್ಧರಾಮರ ಮಾತು ಮತ್ತೊಮ್ಮೆ ಕೇಳಿದಂತೆನಿಸಿ… ತನ್ನ ಕಾಲುಗಳನ್ನು ತಾನೆ ಮುಟ್ಟಿಕೊಂಡ. ದಿನದ ಶುಚಿ ಮುಗಿಸಿ, ಹಳ್ಳದಲ್ಲಿ ಮಿಂದು, ಲಿಂಗಪೂಜೆಯ ಕೈಗೊಂಡು, ‘ಗುಹೇಶ್ವರ ನಿಮ್ಮ ಲಿಂಗವನು ಅವರೆತ್ತ ಬಲ್ಲರು?’ ಎಂಬ ಅಲ್ಲಮರ ವಚನವೊಂದನ್ನು ಹಾಡಿದರು. ಬೀಡ ಬಿಟ್ಟ ಊರು ಹಿಂದುಳಿಸಿ ಮತ್ತೆ ಮುನ್ನಡೆದಾಗ ಮೂಡಣದಂಚು ಕೆಂಪೇರಿ ಬಾಂದಳವೆ ಬೆಳಗತೊಡಗಿತು.
******** ******* *********
ಸೊನ್ನಲಿಗೆ ತಲುಪಿದಾಗ ಇಡೀ ಊರೇ ಸ್ವಾಗತಕ್ಕೆ ಸಜ್ಜಾದಂತೆ, ಕೈಕಾಲಿಗೆ ನೀರು ನೀಡಿ ಆರೈಕೆ ಮಾಡುತ್ತಾ, ಪೂಜೆಗೆ ಅಣಿಮಾಡಿ, ಅಂಬಲಿ, ಅನ್ನಪ್ರಸಾದ ಮನೆಮನೆಯಲ್ಲೂ ನಡೆಯತೊಡಗಿತು. ಎಲ್ಲೆಲ್ಲೂ ಆತಿಥ್ಯ, ಆರೈಕೆಯ ಆ ಚಲುವನ್ನು ಗುಡ್ಡರ ನಡೆನುಡಿಗಳಲ್ಲಿ ಕಂಡ ಕಲ್ಯಾಣದ ಶರಣರು, ಇದು ಕಲ್ಯಾಣವೇ..! ಇದ್ದಿರಬಹುದೆಂಬ ಅನುಮಾನದ ಹುಬ್ಬೇರಿಸಿದರು. ದಿನ ಕಳೆದು ದಿನ ಬೆಳಗಾದಾಗ ಕಪ್ಪಡಿ ಸಂಗಮದಿಂದ ಅಪ್ಪಣ್ಣ ಮುಂದಾಗಿ ಕರೆಯಲು ಹೋದವರಿಬ್ಬರೂ ಮರಳಿ ಬಂದರು. ಬಸವಣ್ಣನ ಮನದಿಚ್ಚೆಯನರಿತ ಸತಿಯರಿಬ್ಬರೊಳು ನೀಲಾಂಬೆ, ಅಲ್ಲಿರುವ ಸಂಗಯ್ಯನು ಇಲ್ಲಿಲ್ಲವೇ..! ಎಂದೆನುತ್ತಲೇ ಆದಿಗಾರಂಭದ ನಿಧಾನವ ತಿಳಿದು ಮತ್ತೆರಡು ದಿನ ಯೋಚಿಸಿ ಅಪ್ಪಣ್ಣನೊಡಗೂಡಿ ಕಪ್ಪಡಿಗೆ ಹೊರಟು ನಿಂತಾಗ ಶರಣರ ಕಣ್ಣಲ್ಲಿ ನೀರು ತುಳುಕಿತ್ತು. ಆ ದಿವಸ ಗಂಗಾಂಬೆಯ ಮನದಲ್ಲಿ ಮನವಿರಲಿಲ್ಲ, ಚಿತ್ತಗೆಟ್ಟು ಹರಿದಾಡುವ ಕೈಕಾಲು ದೇಹಗಳು ಬಳಬಳನೇ ಉದುರಿದಂತೆ ಹೊಯ್ದಾಡುತ್ತಿದ್ದಳು.
“ಅಕ್ಕಾ…”
ಕಪಿಲಸಿದ್ದನ ಗುಡಿಯ ಮುಂದಿನ ಹಾಲಗಂಬಕ್ಕೊರಗಿ ಕುಳಿತಿದ್ದಾಕೆ ನಿಧಾನ ಕಣ್ತೆರೆದು ನೋಡಿದಾಗ. ಅದೇ ಆ ಮುಖವೇ ಕಣ್ಣಮುಂದೆ ಬಂದಂತಾಯ್ತು. ಅರೇ ಇವನು ಚನ್ನಬಸವನಲ್ಲವೇ… ಎಂದು ಎಚ್ಚರಗೊಂಡಳಾದರೂ ಮನದಲ್ಲಿ ಮನವಿಲ್ಲವಾಗಿ ಮಂಡೆ ಆಡಿಸಿದಳು ಏನು ಎಂಬಂತೆ..!
“ಅಕ್ಕಾ ಗಾಳಿಯ ಸೋಂಕಿಗೆ ಸಿಕ್ಕ ಪರಿಮಳವು ಅದೆಷ್ಟು ಹೊತ್ತು ನಿಂತೀತು.. ಕರ್ಪುರ ಕರಗಿದಂತಿದು ಈ ದೇಹದ ಬಾಧೆ. ನೀನು ಹೋಗುವಿಯಾದರೆ ಅಪ್ಪಣ್ಣನೇನು ದೂರ ಹೋದುದಿಲ್ಲ. ಕಳಿಸಲು ಶಿವಯೋಗಿಯ ಬಿಳಿಗುದುರೆ ಇದೆ.”
“ಬೇಡ.. ಬಂದುದು ನನಗಲ್ಲದೆ ಆ ಕೂಡಲಸಂಗನಿಗಲ್ಲ. ಈ ಕೂಡುವ ಕೂಟ ಎಲ್ಲಿದ್ದರೂ ಹೇಗಾದರೂ ನಡೆಯುತ್ತದೆ. ಮುಂದಿನ ದಾರಿ ಯಾವುದು..? ನಾವಿನ್ನು ಇಲ್ಲಿರುವುದು ಬೇಡ. ನಮ್ಮಿಂದ ಊರವರ ಬದುಕಿಗೆ ತೊಂದರೆಯಾದೀತು. ನಡೆ ದೂರ ಹೋಗೋಣ. ಆರಿಗೂ ತೋರದ ಕಾಡಹೊಕ್ಕು ತುಸು ವಿಶ್ರಮಿಸಿ ಕಲ್ಯಾಣದ ಕನಸು ಬಿತ್ತೋಣ…”
ಆ ದಿವಸದ ಅನುಭವ ಮಂಟಪದ ಗೋಷ್ಠಿಯಲ್ಲಿ ಸಿದ್ಧರಾಮ ಶಿವಯೋಗಿಗಳು ಬನವಾಸಿ ದೇಶದ ಪಡುವಣದ ಕಾಡಿನ ರಹದಾರಿಗಳ ಬಗ್ಗೆ ಹೇಳಿದರು. ಕಾಡು, ಕಾಡಿನ ಹಾದಿಯೂ ದಿಕ್ಕು ತಪ್ಪಿಸುತ್ತವೆ. ನಮಗೆ ದಿಕ್ಕು ತೋಚದಂತೆ ಕರೆದೊಯ್ದು ಕಾಳಿ ನದಿಗೆ ಮುಟ್ಟಿಸುತ್ತವೆ. ಅಲ್ಲಿಂದ ಮತ್ತೆ ಮರಳಿ ಘಟ್ಟವನ್ನೇರಿ ಬರುವುದೆಂದರೆ ಅದೊಂದು ರಹಸ್ಯದ ಸಂಗತಿಯೇ ಸರಿ. ಕದಂಬ ರಾಜರ ಆರೈಕೆಗೆ ಹೋದಾಗ, ತಾವು ಆ ಕಾಡಿನ ನಡುವೆ ಎಲ್ಲೋ ಕಳೆದುಕೊಂಡಂತಾಗಿ, ನಾಲ್ಕಾರು ದಿನ ಅಲೆದಾಡಿ, ಕಡೆಯದಾಗಿ ಗುಲಗಂಜಿ ಗಿಡಗಳ ಗುರುತು ಮಾಡಿಕೊಂಡು, ಕಾಮಕಸ್ತೂರಿ ಪರಿಮಳ ಸೂಸುವ ದಿಕ್ಕು ಹಿಡಿದು ಘಟ್ಟವೇರಿ ಬಂದ ಸಂಗತಿಯನ್ನು ವಚನವೊಂದರ ಅನುಭವದಲ್ಲಿ ಸ್ವಾರಸ್ಯಕರವಾಗಿ ವಿವರಿಸಿದರು.
ಆ ದಿನದ ಅನುಭಾವ ಗೋಷ್ಠಿ ಮುಗಿದು, ಪ್ರಸಾದ ಪೂರೈಸಿ ಮಾತಿಗೆ ತೊಡಗಿದ್ದಾಗ ಚನ್ನಬಸವಣ್ಣ, ಮಾಚಿದೇವರು ಅದೇ ಆ ಕಾಳಿನದಿಯ ಪಡುವಣದ ಕಾಡಿನ ಕಡೆಗೆ ಹೊರಟರೆ ಹೇಗೆ..? ಎಂಬುದಾಗಿ ಮಾತಾಡಿದಾಗ ಶಿವಯೋಗಿಗಳು ಕ್ಷಣ ಕಣ್ಮುಚ್ಚಿ ತೆರೆದು-“ಹೊರಡುವುದಾದರೆ ಏಕಾಂತದ ವಾಸಕ್ಕೆ ಹೇಳಿಮಾಡಿಸಿದ ಜಾಗ, ಶರಣರ ಆಯಾಸಕ್ಕೀಗ ಏಕಾಂತವೂ ಬೇಕಿದೆ. ಕದಂಬ ದೊರೆಯ ಅಕಾಲಿಕ ಮರಣದ ನಂತರ ಆತನ ಪತ್ನಿ ಮೈಲಾಳದೇವಿ ಮತ್ತಾಕೆಯ ಮಗ ಆಳ್ವಿಕೆ ಮಾಡುತ್ತಿದ್ದಾರೆ. ನೀವು ಅಲ್ಲಿಗೆ ಹೋಗಿ ತಲುಪುವುದರೊಳಗೆ, ನಿಮಗೆ ಆಸರಾಗುವಂತೆ ಅವರಿಗೊಂದು ಬಿನ್ನಹ ಕಳಿಸುತ್ತೇನೆ.”
“ಆಗಬಹುದು. ಶರಣರು ಯಾವ ದಿಕ್ಕೆಂದು ತೋಚದೆ ಚನ್ನಬಸವ ದಣ್ಣಾಯಕರ ಮಾತಿಗಾಗಿಯೇ ಕಾದಿದ್ದಾರೆ. ತೇಲಲಿ ಬೆಂಡು ಮುಳುಗಲಿ ಗುಂಡು… ಈಗ ಹೊರಟ ಯಾತ್ರೆಗೆ ಗುರಿಯೊಂದಿದ್ದರೆ ಸಾಕೆನಿಸಿದೆ ಎಲ್ಲರಿಗೂ.”
“ಯಾಕೆ ಮಾಚಿದೇವರೆ..! ಶರಣರೆಲ್ಲ ಇಲ್ಲಿಯೇ ಉಳಿಯಬಹುದಲ್ಲಾ..!”
ಶಿವಯೋಗಿಯ ಮಾತುಗಳು ಬಾಯೊಳಗಿರುವಾಗಲೇ ಚನ್ನಬಸವಣ್ಣ ಬಾಯಿ ಹಾಕಿ ಪ್ರಸ್ತಾವವನ್ನಿಟ್ಟರು.
“ಬೇಡ ಶಿವಯೋಗಿ, ಆವ ಹೊತ್ತಾವ ವಿಪತ್ತು ಬಂದೆರಗುವುದೋ ಎಂಬ ಭಯದಲ್ಲೇ ಇನ್ನೂ ಶರಣರಿದ್ದಾರೆ. ತಾಯಂದಿರ ಕಂಗಳಲ್ಲಿನ ಕಳವಳ ದೂರಾಗಿ, ಅಂಗೈ ಮೇಗಳ ಲಿಂಗದೊಳು ದೃಷ್ಟಿ ಕೂಡಿಸುವ ಮತ್ತೊಂದುಳುವಿಯ ಕಡೆಗೆ ಹೊರಡುತ್ತೇವೆ.”
“ಉಳುವಿ..?”
“ಶರಣರು ಆಯ್ದುಕೊಂಡ ಸ್ಥಳದಲ್ಲಿ ಉಳಿಯುವ ಜಾಗಕ್ಕೆ ಮತ್ತೊಂದು ಹೆಸರೇತಕ್ಕೆ..? ಉಳಿಯುವ ಜಾಗವೇ ಉಳವಿ.”
ಶಿವಯೋಗಿಗಳೊಡನೆ ನಡೆದ ಮಾತುಕತೆ ಶರಣರಲ್ಲಿ ಸಂಚನಲವನ್ನೇ ಮೂಡಿಸಿತು. ಇದುವರೆಗೂ ಶಿವಯೋಗಿಗಳ ಕಣ್ಣ ನೆದರಲ್ಲಿದ್ದ ಶರಣರು ನಾಳೆ ಬಯಲಿಗೆ ಬಿದ್ದದ್ದೆ ತಡ, ಮತ್ತೆ ದಂಡು ದಾಳಿಗಳನ್ನು ಎದುರಿಸುತ್ತಾ ನಡೆಯಬೇಕೆಂಬ ಚಿಂತೆ ಹಲಕೆಲವರ ಬಾಧಿಸಿತು. ಮರುದಿನ ಕೆಲವರು ಸೌರಾಷ್ಟ್ರದ ಕಡೆಗೂ ಉತ್ತರದ ಕಡೆಗೂ ಹೋಗುವುದಾಗಿ ಹೇಳಿದರೆ ಬಹುತೇಕ ಶರಣರು ಉಳವಿಯ ಕಡೆಗೆ ಹೊರಟು ನಿಂತರು.
ಮುಂದೆಲ್ಲೋ ಉಂಬುವ ಚಿಂತೆ, ಮತ್ತೆಲ್ಲೋ ಮಲಗುವ ಚಿಂತೆ, ಇನ್ನೆಲ್ಲೋ ವೈದಿಕರ ದೂಷಣೆಯ ಚಿಂತೆ, ಮಗದೆಲ್ಲೋ ದಂಡುದಾಳಿಗಳ ಚಿಂತೆ ಹೊತ್ತು ಇಷ್ಟೊಂದು ಜನ ಶರಣರು ಒಂದಾಗಿ ಹೊರಟರೆ ಈ ಸಮಸ್ತ ಶರಣರ ತನು-ಮನ ಕಾಯಲಾಗುವುದೇ ಅಯ್ಯಾ… ಎಂದು ನಾಲ್ಕು ಹರದಾರಿ ನಡೆಯುವುದರೊಳಗೆ ಚಂದಯ್ಯನವರು ಕೇಳಿದರು. ಈ ಮಾತು ಚನ್ನಬಸವಣ್ಣನವರಿಗೂ ಸರಿ ಅನಿಸಿತು. ಆ ದಿನದ ಆಯಾಸ ಕಳೆಯಲು ಮೋರಗ್ಯಾನ ಹಳ್ಳದ ದಂಡೆಯಲ್ಲಿ ವಾಸ್ತವ್ಯ ಹೂಡಿದ್ದರಲ್ಲ, ಅಲ್ಲಿಯೇ ಮಂದೇನು..? ಎಂಬ ಪ್ರಶ್ನೆಯನ್ನು ಶರಣ ಸಂದೋಹದ ಮುಂದಿಡಲಾಯ್ತು.
“ಹೀಗೆ ಹೊರಡುವುದಕ್ಕಿಂತ ತುಕುಡಿ ತುಕುಡಿಯಾಗಿ ಹೊರಟರೆ ಹಳ್ಳಿಗಳಲ್ಲಿ ನಮಗೆಲ್ಲಾ ಆರೈಕೆ ಸಿಗಬಹುದು. ಪ್ರತಿ ಹಳ್ಳಿಯಲ್ಲೂ ಒಂದೊಂದು ದಿನ ಉಳಿದು ಅನುಭವಮಂಟಪದ ಚರ್ಚೆಗಳನ್ನು ನಡೆಸಿ, ಕಲ್ಯಾಣದ ನಿಜ ಸಂಗತಿಯನ್ನು ತಿಳಿಸಿ, ದಾಸೋಹದ ಅಂಬಲಿ ಉಂಡು ಜಂಗಮಕ್ಕೆ ವಂದಿಸಿ ಹೋಗಲು ನಮಗೂ ಅನುಕೂಲ. ಅಲ್ಲದೆ ಶರಣತತ್ವ ಚಿಂತನೆಗೆ ಇಂಬು ಸಿಕ್ಕಂತಾಗುವುದು.”
ಚನ್ನಬಸವಣ್ಣನ ಮಾತು ಎಲ್ಲರ ಮನಸ್ಸಿಗೂ ಬಂದುದುರಿಂದ… ಮೂರು ಗುಂಪುಗಳಾಗಿ ಹೊರಡುವುದೆಂದು ಶರಣರೆಲ್ಲ ಒಪ್ಪಿದರು. ಅಕ್ಕನಾಗಲಾಂಬೆ ಮತ್ತು ಚನ್ನಬಸವಣ್ಣನವರದ್ದೊಂದು ಗುಂಪು ಮೋರಗ್ಯಾನ ಹಳ್ಳದ ತುದಿವರೆಗೂ ಹೋಗಿ ಹಿರೇಹೊಳಿಯ ದಾಟಿ ತೆಂಕಣಕ್ಕ ಬರುವುದು. ಬಾಚರಸ, ಚಂದಯ್ಯ, ಕಕ್ಕಯ್ಯನವರದ್ದೊಂದು ಗುಂಪು ಇಲ್ಲಿಯೇ ಭೀಮೆ-ಕೃಷ್ಣೆಯರನ್ನು ತಡೆಹಾಯ್ದು ಘಟಪ್ರಭಾ ದಂಡಿಗುಂಟ ಹಾದು ಬರುವುದು. ಮಾಚಿದೇವ ಮತ್ತುಳಿದ ಶರಣರ ಗುಂಪು ಮಲಪ್ರಭೆಯ ಪಾತ್ರದಲ್ಲಿ ಹಾಯ್ದು ಬಂದು ಸೂಜಿಗಲ್ಲಿನ ಸೊಗಲದಲ್ಲಿ ಎಲ್ಲರೂ ಸೇರುವುದೆಂದು ನಿರ್ಧರಿಸಲಾಯ್ತು.
ಹೌದು.. ಶಿವಯೋಗಿಗಳು ಹೇಳಿದಂತೆ ನಮ್ಮನ್ನು ಕದಂಬರ ಸೈನ್ಯವು ಸೊಗಲದಲ್ಲಿ ಇದಿರುಗೊಳ್ಳುವುದು. ಅಲ್ಲಿಯವರೆಗೆ ನಮ್ಮ ಈ ಯಾತ್ರೆ ಶರಣರ ಅನುಭಾವದ ಯಾತ್ರೆಯಾಗಿರಲಿ. ಇಂದಿಂಗೆ ಇಲ್ಲಿನ ಅನುಭಾವಗೋಷ್ಠಿ ಮುಗಿದುದು.; ಎಂದು ಚನ್ನಬಸವಣ್ಣನವರು ಘೋಷಿಸಿದಾಗ ಶರಣರೆಲ್ಲ ಅಂಬಲಿಯನುಂಡು ಮಲಗಿದರು.
ಮಳ್ಳಾಮರುದಿನ ಸಣ್ಣಸಣ್ಣ ತುಕುಡಿಗಳಲ್ಲಿ ಶರಣರು ತಮ್ಮ ದಾರಿಯ ಲಕ್ಷ್ಯಭಾವವಿಡಿದು, ಹಳ್ಳಿಗಳಲ್ಲಿ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದದ ತತ್ವಗಳನ್ನು ಹಾಡುಮಾಡಿ ಹಾಡುತ್ತಾ, ಕತೆಮಾಡಿ ಹೇಳುತ್ತಾ ಹೊರಟರು. ಯಾರು ಎಲ್ಲಿದ್ದಾರೆಂಬ ಚಿಂತೆ ಯಾರಲ್ಲೂ ಇರಲಿಲ್ಲ. ಎಲ್ಲರೂ ಕೂಡಲಚನ್ನಸಂಗನ ದಾರಿಯಲ್ಲಿದ್ದಾರೆಂಬುದೇ ಧೈರ್ಯ. ಹಳ್ಳಿಹಳ್ಳಿಗಳಲ್ಲಿ ಶರಣರು ಬರುತ್ತಾರೆಂದು ಜನ ದಾರಿ ಕಾಯುತ್ತಾ ನಿಂತಿರುತ್ತಿದ್ದರು. ಎಷ್ಟೋ ಜನಗಳಿಗೆ ಕಲ್ಯಾಣಕ್ಕೆ ಹೋಗಿ ಶರಣರ ಕಂಡು ಬರಬೇಕೆಂಬ ಆಸೆಯಾಗಿದ್ದರೂ ಹೋಗಲಾಗದೆ ಇದ್ದಲ್ಲಿಯೇ ಇದ್ದು ಬಸವಣ್ಣನ ಅನುಯಾಯಿಗಳಾಗಿದ್ದ ಸಾಕಷ್ಟು ಸಂಖ್ಯೆಯ ಶರಣರು ಅನುಭವ ಮಂಟಪದಲ್ಲಿ ಸೇರಿ ತಮ್ಮ ಅನುಭವಗಳನ್ನೂ ಹೇಳಿಕೊಳ್ಳತೊಡಗಿದರು. ಪ್ರತಿ ಊರಲ್ಲೂ ಹಲಗೆ, ಕಣಿ, ಗಣೆ, ಉರಗ, ಸಮಾಳ, ಡೊಳ್ಳು, ಚಳ್ಳಂ ಹಿಡಿದು ಸ್ವಾಗತಿಸುತ್ತಾ ವೀರಭದ್ರನ ಒಡಪುಗಳಲ್ಲಿ ಶರಣರ ಕ್ರಾಂತಿಯ ಮಾತುಗಳನ್ನು ಹೇಳುತ್ತಾ ಸ್ವಾಗತಿಸುತ್ತಿದ್ದರು. ಗಾಸೆ ಕುಣಿಯುವ ವೀರರನ್ನು ಕಂಡಂತೆಲ್ಲಾ ಗಣಾಚಾರದ ತತ್ವವೂ ಹಿಡಿ-ಇಮ್ಮಡಿಯಾಗಿ ಕಲ್ಯಾಣದ ಕನಸು ಮತ್ತೆ ಕಳೆಗಟ್ಟತೊಡಗಿದಾಗ ಚನ್ನಬಸವಣ್ಣ ಆದಿಯಾಗಿ ಶರಣರ ಮುಖದಲ್ಲಿ ಹೊಸಹುಮ್ಮಸ್ಸು ಒಡಮೂಡತೊಡಗಿತ್ತು. ಜನರ ಭಾವನೆಗೆ ಬಲ ಬರಲೆಂದು, ಶರಣರ ಜೊತೆ ನಾವಿದ್ದೇವೆಂದು ಬೇಸಾಯಗಾರರು ಅಸ್ತ್ರ-ಶಸ್ತ್ರಗಳ ಪ್ರಯೋಗದಾಟ, ವೀರಹೆಜ್ಜೆ, ಖಡ್ಗವರಸೆಗಳನ್ನೆಲ್ಲ ಆಡಿ ವೀರಭದ್ರನ ಕೆಂಡ ಹಾಯುವ ಆಚರಣೆಯ ಸಮಾಳನ್ನು ಹೊತ್ತು ತಿರುಗತೊಡಗಿದರು.
ಆದರೆ ಕಲ್ಯಾಣದ ಮದುವೆ ನಟ್ಟಿದ್ದ ನಂಜು ಗಾಯವಾಗಿ, ಕೀಂವಾಗಿ ವಸರಿ ಹುಣ್ಣಾದಂತೆ ಚಡಪಡಿಸುತ್ತಿದ್ದ ಸಂಗತಿಯೂ ಅಷ್ಟೇ ವೇಗವಾಗಿ ಹಳ್ಳಿಗಳಲ್ಲಿನ ವೈದಿಕ ಮನಸ್ಸುಗಳಿಗೆ ತಾಗಿದ್ದರಿಂದ ಅಲ್ಲಲ್ಲಿ ಪ್ರತಿರೋಧಗಳನ್ನೂ ಎದುರಿಸಬೇಕಾಯ್ತು. ಎಷ್ಟೋ ಸಲ ಶರಣರು ಮಲಗಿದ್ದ ಗುಡಿಪಾವಳಿಗಳಿಗೆ ಬೆಂಕಿ ಹಚ್ಚಿ ರಾತ್ರೋರಾತ್ರಿ ಊರು ಬಿಡುವಂತೆ ಮಾಡುತ್ತಿದ್ದರು ಕಪಟಿಗಳು. ಕೆಲವು ಊರುಗಳಲ್ಲಿ ಶರಣರಿಗೆ ಅನ್ನಾಹಾರ ಕೊಟ್ಟ ಭಕ್ತಗಣಕ್ಕೂ ಇನ್ನಿಲ್ಲದ ಕಷ್ಟ ಕೊಡತೊಡಗಿದಾಗ ನಿಧಾನಗೊಂಡಿದ್ದ ಯಾತ್ರೆಯ ಹೆಜ್ಜೆಗಳನ್ನು ಶರಣರು ಅವಸರಗೊಳಿಸಿದರು.
ಸೊನ್ನಲಿಗೆ ಬಿಟ್ಟ ಮೇಲೆ ದಿನಗಳುರುಳಿ ವಾರ ಕಳೆದು ತಿಥಿಯೊಂದು ಮುಗಿಯುವಷ್ಟರಲ್ಲಿ ಶರಣರು ನಡೆಯುತ್ತಾ ಬಂದು ಹಿರೇಹೊಳಿ ದಾಟಿ ಘಟಪ್ರಭೆಯನ್ನೂ ದಾಟಿ ಇತ್ತಲಿತ್ತಲ ಗುಡ್ಡಗಾಡಿನ ಲಂಗಟ್ಯಾನ ಕೊಳ್ಳಕ್ಕೆ ಬಂದರು. ಎಷ್ಟೋ ಅವಧೂತರು, ಗುಹಾವಾಸಿ ತಪಸ್ವಿಗಳೇ ಇರುವ, ಮೂರುಕಡೆ ಗುಡ್ಡದ ನಡುವೆ ಸಣ್ಣದೊಂದು ಜರಿ ಹರಯುತ್ತಿತ್ತು. ಆ ಲಂಗ್ಟ್ಯಾನ ಕೊಳ್ಳದ ಎಡಬಲಕೆ ಆಲದ ಮರಗಳು ಸಾಲಾಗಿ ಬೆಳೆದು ನಿಂತಿದ್ದವು. ಅದು ಶರಣರು ಕೆಲಕಾಲ ತಂಗಲು ಪ್ರಶಸ್ತವಾದ ಜಾಗವೇ ಆಗಿತ್ತು. ಅಲ್ಲಿ ಬರೀ ಗುಡ್ಡಗಾಡು ಜನ. ಬೇಟೆಯಾಡಿ ಬದುಕುವ ಆ ಜನರ ನಡುವೆ ವಿಶ್ವಾಸದಿಂದ ಬೇಸಾಯ ಮಾಡಿಕೊಂಡಿರಬಹುದೆನಿಸಿದ್ದೆ ಹಲಕೆಲವು ಶರಣರು ಆ ಕೊಳ್ಳದಿಂದ ಮೂಡಣ ದಿಕ್ಕಿಗೆ ನಡೆದು ಹೋಗಿ ಕೆಂಪುಮಣ್ಣಿನ ಕುಂದರ ಸೀಮೆಯಲ್ಲಿ ಬೇಸಾಯ ಮಾಡುವುದಾಗಿ ನಿರ್ಧರಿಸಿ ಮರುದಿನವೇ ಹೊರಟರು. ಉಳಿದ ಕೆಲ ಶರಣರು ಅಲ್ಲಿಯೇ ಒಂದೆರಡು ದಿನ ಕಳೆದು ಹೋದಾಯ್ತೆಂದು ವಿಶ್ರಮಿಸಿದ್ದರು. ದಿನಗಳು ನಾಲ್ಕಾರು ಕಳೆದಿರಲು ಅದೊಂದು ರಾತ್ರಿ ಆಲದ ಮರವೊಂದರ ನೆಳಲಲ್ಲಿ ಶರಣರು ಮಲಗಿದ್ದಾಗ…
ಕಣ್ಣೊಳಗೆ ಮೊಳೆತ ಬೀಜಕ್ಕೆ ಆದಿ ಎನ್ನುವುದೇ ಇಲ್ಲದಂತ ಜಟಿಲವಾದ ಮರವೊಂದರ ಕೆಳಗೆ ಯಾರೋ ನಿಂತಿದ್ದ, ಅದಕ್ಕೆ ಅಂತ್ಯವೂ ಇಲ್ಲದ ಹಾಗಿತ್ತು. ಬಹುಶಃ ಅದರಾಚೆಗೆ ಕತ್ತಲು ಕವಿದಿತ್ತು. ಅದೇ ಆ ಆಲದ ಮರದ ಬಿಳಲು ಯಾವುದು..? ಮರದ ಕಾಂಡ ಯಾವುದು..? ಎನ್ನುವುದು ಗುರುತಿಸಲಾಗಲಿಲ್ಲ. ಒಂದೊಂದು ರೆಂಬೆಯ ಮೇಲೂ ಒಂದೊಂದು ತೊಟ್ಟಿಲು ಕಟ್ಟಲಾಗಿತ್ತು. ಅಳುವ ಕೂಗಿಲ್ಲ, ಕೂಸು ಕಿಲಕಿಲ ನಗುತ್ತಿಲ್ಲ. ಆದರೂ ಆ ಅಸಾಧ್ಯ ಕತ್ತಲಿನ ಆ ಮೂಲೆಯಿಂದ ಜೋಗುಳದ ಹಾಡು ಕೇಳುತ್ತಿತ್ತು. ಚನ್ನಬಸವಣ್ಣನಿಗೆ ನಿದ್ದೆಯೋ, ಕನಸೋ ಎಂಬ ಭ್ರಮೆ ಮೂಡಿದರೂ ಎಚ್ಚರಗೊಳ್ಳಲಿಲ್ಲ. ಅರೇ..! ಹಾಡು ಬಸವಣ್ಣನ ವಚನ. ‘ತಂದೆ ನೀನು ತಾಯಿ ನೀನು..’ ಮನಸ್ಸು ಪುಳಕಗೊಂಡಿತ್ತು. ‘ಕೂಡಲಸಂಗಮದೇವ ಹಾಲಲದ್ದು, ನೀರಲದ್ದು’ ಈ ಸೊಲ್ಲು ಬರುವುದಕ್ಕಾಗಿ ಚನ್ನಬಸವಣ್ಣನ ಮನಸ್ಸು ತುಡಿಯುತ್ತಿತ್ತಲ್ಲವೆ…! ಇದ್ದಕ್ಕಿದ್ದಂತೆ ಭೊಗ್ಗನೇ ಆಲದ ಮರವೇ ಹೊತ್ತಿ ಉರಿಯಲಾರಂಭಿಸಿತು. ಇದೇನು ಕನಸೋ ನಿಜವೋ ಎಂದು ಕಣ್ಬಿಟ್ಟಾಗ, ಅವರು ಮಲಗಿದ್ದ ಮರಕ್ಕೆ ಬೆಂಕಿ ಬಿದ್ದಿತ್ತು. ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯುವ ಕುತೂಹಲ ಯಾರಲ್ಲೂ ಇರಲಿಲ್ಲವಾಗಿ ಬೆಂಕಿ ತಾಗಿದವರು ನೀರಿಗೆ ಹಾರಿದರು, ಬೆಂಕಿ ತಾಗದಿರುವವರು ಗುಡ್ಡವನ್ನೇರತೊಡಗಿದರು. ಹಾ.. ಹೋ.. ಎನ್ನುವ ಅರಚಾಟ, ಉರಿಯುವ ಬೆಂಕಿ, ಮುಗಿಲೆತ್ತರಕ್ಕೆ ಹಾರಿ ಹೊರಟ ಹೊಗೆ ಬಿಟ್ಟರೆ ಏನೂ ಕಾಣುತ್ತಿರಲಿಲ್ಲ. ಶರಣರೆಲ್ಲ ಓಡಿ ಗುಡ್ಡದ ಮೇಲೆ ನಿಂತರು.
ದೂರದಲ್ಲಿ ಕರ್ಮಠರಿಬ್ಬರು ಆ ಬೇಡರ ಕುಲದ ನಾಯಕನನ್ನು ಕರೆತಂದು ಆಲದಮರಕ್ಕೆ ಬೆಂಕಿ ಹಚ್ಚಿ ನಗುತ್ತಾ ನಿಂತಿರುವುದು ಕಾಣಿಸಿತು. ಕೆಲಸ ಮುಗಿಸಿ ಬಂದ ಆ ನಾಯಕನಿಗೆ ಇವರ ನಗುವಿನ ಹಿಂದಿನ ಕಾರಣವೂ ತಿಳಿದಿರಲಿಲ್ಲ. ತಲೆಬಾಗಿ ನಮಸ್ಕರಿಸಿ ಮುಂಗೈ ಒಡ್ಡಿದಾಗ ಅವರು ದೂರದಿಂದಲೇ ಒಂದಷ್ಟು ಚಿನ್ನದ ನಾಣ್ಯಗಳನ್ನು ಒಗೆದದ್ದು ಕಾಣಿಸಿತು.
ಆ ಕನಸೂ ಈ ಘಟನೆಯೂ ಎರಡೊಂದಾಗಿ ಕಾಡುತ್ತಿದ್ದ ಆ ಆಲದ ಮರದ ಚಿತ್ರವಿಚಿತ್ರದ ರೆಂಬೆಕೊಂಬೆಗಳು, ಚನ್ನಬಸವಣ್ಣನ ಕಣ್ಣೊಳಗೆ ಗೊಂಬಿಯಾಗಿ ಕಾಡುತ್ತಿರಲು, ಸೊಗಲದತ್ತ ಹೆಜ್ಜೆ ಹಾಕಿದರು. ಮಧ್ಯರಾತ್ರಿಗೆ ನಡೆಯಲಾರಂಭಿಸಿದವರು ಸೂರ್ಯ ಒಡಮೂಡಿ ದಿನಗಳೆದು ಮುಳುಗುವ ಹೊತ್ತಿಗೆ ಸರಿಯಾಗಿ ಕಾರಿಮನಿಯಂಬಲ್ಲಿಗೆ ಬಂದರು. ಆಯಾಸಗೊಂಡ ಶರಣೆಯರು ದಣಿದು ಕುಸಿದು ಕುಳಿತರು. ಭಿಕ್ಷೆಗೆ ಹೋದ ಬಹುರೂಪಿ ಚೌಡಯ್ಯನು ಹಾಡುಹಾಡಿ ಅಂಬಲಿಗಾಗುವಷ್ಟು ತಂದು ಬೇಯಿಸಿ, ಶರಣರೆಲ್ಲರಿಗೂ ಕೊಟ್ಟಾಗ, ಆ ಹಿಟ್ಟಿನಂಬಲಿ ಮೃಷ್ಟಾನ್ನಕೂ ಮಿಗಿಲಾಗಿತ್ತು. ಆ ದಿವಸ ಕೆಲವು ಶರಣರು ಎಚ್ಚರಿದ್ದು ಕಾದು ಕೆಲವರು ಮಲಗಿ ನಿದ್ರಿಸಿದರು. ಬೆಳಗಾಗುತ್ತಲೇ ಕುದುರೆ ಸವಾರಿಯ ದಾರಿಹೋಕನೊಬ್ಬ, ಕಕ್ಕಯ್ಯನವರ ಜೊತೆಗೂಡಿ ಬರುತ್ತಿದ್ದ ಶರಣರೂ ಇದೇ ಮಾರ್ಗವಾಗಿ ಬರುತ್ತಿದ್ದಾರೆಂದು ಹೇಳಿದಾಗ ಚನ್ನಬಸವಣ್ಣನ ಮುಖವರಳಿತು. ಅವರು ಬರುವತನಕ ಕಾದಿದ್ದು ಎಲ್ಲರೂ ಒಟ್ಟಾಗಿ ಸೊಗಲಕ್ಕೆ ಹೋಗುವುದೆಂದು ಅಲ್ಲಿಯೇ ಉಳಿದರು. ಬಾಚರಸ, ಚಂದಯ್ಯ, ಕಕ್ಕಯ್ಯ ಮೊದಲಾದವರು ಬಂದು ಕೂಡಿದಾಗ ಅವರವರ ಯಾತ್ರೆಯ ಕಷ್ಟಸುಖ ಮಾತಾಡಿಕೊಂಡು ಮಲಗುವ ಹೊತ್ತಿಗೆ ಮತ್ತೊಬ್ಬ ದಾರಿಹೋಕ ಬಂದು ಮಾಚಯ್ಯನವರ ಜೊತೆಗಿನ ಶರಣರು ಇಲ್ಲಿಯೇ ಸಮೀಪದಲ್ಲಿದ್ದಾರೆಂಬ ಸುದ್ದಿ ಕೊಟ್ಟ.
ಅವರು ಮತ್ತೊಂದೂರಿನ ದಾರಿ ಹಿಡಿದಾರೆಂಬ ಶಂಕೆಯಿಂದಾಗಿ ತಾವೇ ಖುದ್ದಾಗಿ ಹೋಗಿ ಕರೆದುಕೊಂಡು ಬರಲು ಚೌಡಯ್ಯನೂ, ಚನ್ನಬಸವಣ್ಣನೂ ಮಾಚಯ್ಯನವರು ತಂಗಿರುವ ಸ್ಥಳದತ್ತ ರಾತೋರಾತ್ರಿ ಹೊರಟರು. ಕೋಳಿಕೂಗುವ ಸರಿಹೊತ್ತಿಗೆ ಭಲ್ಲೂಕ ಭರ್ಚಿ, ಕತ್ತಿ-ಕಿಗ್ಗತ್ತಿ ಹಿಡಿದು ಹೋರಾಡುತ್ತಿರುವ ಅಬ್ಬರದ ಧ್ವನಿ ಕೇಳಲಾರಂಭಿಸದ್ದೆ ಚನ್ನಬಸವಣ್ಣ ಅವಸರದಿಂದ ಅತ್ತಲೋಡಿದರು. ಇನ್ನೇನು ಕಲ್ಯಾಣದ ದಂಡನ್ನು ಧೈರ್ಯವಾಗಿ ಎದುರಿಸಿ, ಸೋಲಿಸಿ ಹಿಮ್ಮೆಟ್ಟಿಸಿದ್ದ ಶರಣರು ಉಘೆ ಉಘೇ, ಮಾಚಯ್ಯ, ಉಘೆಉಘೆ ಕಲಿದೇವರದೇವ ಎಂದು ಕೂಗಲು ಬಾಯ್ದೆರೆಯುವ ಹೊತ್ತಿಗೆ ಚನ್ನಬಸವಣ್ಣನೂ ಆ ಗುಂಪನ್ನು ಸೇರಿದರು. ಎಲ್ಲರಿಗಿಂತ ಮುಂದಿದ್ದ ಮಾಚಯ್ಯನು ಹಿಂತಿರುಗಿ ನೋಡಿ ‘ಅರೇ ಚಿಕ್ಕದಣ್ಣಾಯಕರು ಬಂದಿದಾರೆ’ ಎಂದು ಉದ್ಘಾರತೆಗೆದು ನಾಲ್ಕು ಹೆಜ್ಜೆ ಮುಂದಕ್ಕೆ ಬಂದಿರಲಿಲ್ಲ. ದಂಡಿನ ಸೈನಿಕರಿಬ್ಬರು ಗಾದ್ಯಾಳಿಯ ಸಾಲಲ್ಲಿ ಅಡಗಿದ್ದವರು ಧಡಗ್ಗನೆ ಎದ್ದು ಮಾಚಿದೇವರ ಬೆನ್ನಿಗಿರಿದು ಓಡಿಹೋದರು.. ಘಾತವಾಯ್ತಲ್ಲಾ ಎಂದು ಶರಣರು ಒರೆಗೆ ಹಾಕಿದ್ದ ಖಡ್ಗಗಳನ್ನು ಮತ್ತೆ ಹಿರಿದು ಅತ್ತ ಓಡುವುದರೊಳಗೆ ಅಜಾನುಬಾಹು ಗಾತ್ರದ ಘಟ ‘ಕಲಿದೇವರ ದೇವ’ ಎಂದೆನುತ್ತಾ ಧರೆಗುರುಳಿತು.. .
ಧಾವಿಸಿ ಬಂದ ಚನ್ನಬಸವಣ್ಣ ನೆಲಕ್ಕೆ ಬೀಳಲಿದ್ದ ಶಿರವೆತ್ತಿ ತೊಡೆಯ ಮೇಲಿಟ್ಟುಕೊಂಡಾಗ.. ಕಟ್ಟಕಡೆಯ ಶ್ವಾಸದಲ್ಲೂ ಕಲಿದೇವರ ದೇವ ಎಮಬ ಪಿಸುನುಡಿ ಕೇಳಿಸಿತು. ಚದುರಿದ್ದ ಶರಣರು ಓಡೋಡಿ ಬಂದು ಸುತ್ತಗಟ್ಟಿದಾಗ ಅವರ ಕಣ್ಣೊಳಗಿನ ತೇಜಸ್ಸು ನಿಶ್ಚಲವಾಗಿತ್ತು.
ಕೂಡಲ ಚನ್ನಸಂಗಮದೇವಾ.. ಶರಣರಿಗೆ ಮರಣವೇ ಮಹಾನವಮಿ.
******** ******* *********
ರಟ್ಟರಾಳಿದ ಸೂಜಿಗಲ್ಲಿನ ಸೊಗಲಕ್ಕೆ ಮುನ್ನ ಕಾರಿಮನಿಯಲ್ಲಿ ತಂಗಿದ್ದ ಶರಣರು ಮಾಚಿದೇವರ ಗಣಾಚಾರ ತತ್ವವನು ನೆನೆ ನೆನೆದು ಬಿಕ್ಕಿದರು, ತಮಗೆ ತಾವೇ ಮರಣವೇ ಮಹಾನವಮಿ ಎಂದು ಧೈರ್ಯಗೊಳ್ಳುತ್ತಾ ಸೊಗಲಕ್ಕೆ ಬಂದರು. ಶಿವಯೋಗಿಗಳ ಆದೇಶದಂತೆ ಮೈಳಾಲದೇವಿ ಮತ್ತವರ ಮಗ ಶರಣರನ್ನು ಸ್ವಾಗತಿಸಿದರಾದರೂ… ಶರಣರ ಮನಸ್ಸು ವಿಹ್ವಲಗೊಂಡಿತ್ತು. ಇನ್ನುಮುಂದೆ ಯಾವ ರಾಜಾಶ್ರಯದ ನೆರಳಲ್ಲಿ ನಿಲ್ಲದೆ ಜನಾಶ್ರಯದ ಜಂಗಮಸೇವೆಯಲ್ಲಿಯೇ ಮುನ್ನಡೆಯಬೇಕೆಂಬ ನಿರ್ಧಾರವನ್ನು ಶರಣರು ಹೇಳಿದಾಗ ಮೈಳಾಲದೇವಿಗೆ ಕೊಂಚ ಬೇಸರವಾದರೂ… ತಾವು ನಮ್ಮ ಅರಮನೆಗೆ ಬಾರದಿದ್ದರೂ ಪರವಾಗಿಲ್ಲ ಕದಂಬರ ನಾಡಿನಲ್ಲಿ ನಿಮಗಾವ ತೊಂದರೆಯೂ ಆಗದಂತೆ ಕಾಯುವೆವು. ನಿಮ್ಮ ರಕ್ಷಣೆಗಾಗಿ ದಂಡಿನ ಸಣ್ಣ ತುಕುಡಿಯನ್ನು ನಿಮ್ಮೊಡನೆ ಕಳಿಸುವೆ ಒಪ್ಪಿಕೊಳ್ಳಿ ಎಂದರು. ನಸುನಗುತ್ತಲೇ ರಾಜಾಶ್ರಯದ ಸವಲತ್ತು ನಿರಾಕರಿಸಿದ ಚನ್ನಬಸವಣ್ಣ ಹನ್ನೆರಡು ಗಾವುದದ ಕಲ್ಯಾಣಪಟ್ಟಣದಲ್ಲಿ ನಡೆದ ಸಂಗತಿಯನೆಲ್ಲ ಹೇಳಿದರು. ದಾರಿಯುದ್ದಕ್ಕೂ ಶರಣರಿಗೆ ಜಯಘೋಷ ಕೂಗಿದ ಅಸಂಖ್ಯಾತ ಭಕ್ತರ ಪ್ರೀತ್ಯಾದರಗಳ ಬಗ್ಗೆಯೂ ಹೇಳಿದರು. ಆದರೆ ಕೆಲವು ವಯಸ್ಸಾದ ಶರಣ/ಶರಣೆಯರು ಕಾಡಿನ ತುದಿಯಂಚಿನ ನಾಡಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಬಿನ್ನೈಸಿ, ತಾನು ಮತ್ತೆ ತನ್ನೊಂದಿಗೆ ಬರುವ ಶರಣರಿಗೆ ಯಾವ ರಕ್ಷಣೆಯೂ ಬೇಡ. ನಾವು ಕಾಡಿನೊಳಗಿನ ಏಕಾಂತ ಹುಡುಕಿಕೊಂಡು ಬಂದವರು, ಶಿವಯೋಗಿಗಳು ಹೇಳಿದ ಆ ಕಾಳಕಪ್ಪಿನ ಕಾಳಿನದಿಯ ದಡದ ಏಕಾಂತಕ್ಕೆ ಹೋಗುತ್ತೇವೆ ತಾಯಿ ಎಂದು ವಿನಮ್ರವಾಗಿ ಕೇಳಿಕೊಂಡರು.
ಅಷ್ಟೇ ವಿಧೇಯಳಾಗಿ ಚನ್ನಬಸವಣ್ಣನ ಮಾತಿಗೆ ಒಪ್ಪಿಗೆಯನಿತ್ತ ಮೈಳಾಲದೇವಿ ಎರಡು ದಿನ ಶರಣರ ಸತ್ಸಂಗದಲ್ಲಿದ್ದು, ರಾಜ್ಯಭಾರದ ಅವಸರಕ್ಕೆ ರಾಜಧಾನಿಯತ್ತ ಹೊರಟುಹೋದಳು. ಶರಣರು ನದಿಯ ಹರಿವಿನ ಜಾಡುಹಿಡಿದು ಕಾಡನ್ನು ಸಮೀಪಿಸುತ್ತಾ ತಾವೂ ಸೊಗಲನ್ನು ತೊರೆದು ಹೊರಟರು.
(ಮುಂದುವರೆಯುವುದು)

Previous post ಗಾಳಿ ಬುರುಡೆ
ಗಾಳಿ ಬುರುಡೆ
Next post ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ

Related Posts

ಭ್ರಾಂತಿಯೆಂಬ ತಾಯಿ…
Share:
Articles

ಭ್ರಾಂತಿಯೆಂಬ ತಾಯಿ…

April 29, 2018 ಕೆ.ಆರ್ ಮಂಗಳಾ
ನಿಮಗೆ ನೆನಪಿರಬಹುದು. ಅದು ನವೆಂಬರ್ 8, 2000ನೇ ಇಸ್ವಿ. ವಿಶ್ವಖ್ಯಾತಿಯ ಜಾದೂಗಾರ ಪಿ.ಸಿ.ಸರ್ಕಾರ್ (ಜೂ) ನೆರೆದ ಭಾರೀ ಜನಸ್ತೋಮದ ಎದುರು ಹಾಗೂ ಟಿವಿ ಪರದೆಯ ಮುಂದೆ...
ಶರಣೆಯರ ಸ್ಮಾರಕಗಳು
Share:
Articles

ಶರಣೆಯರ ಸ್ಮಾರಕಗಳು

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಕ್ರಾಂತಿಯ ನಂತರ ಅದು ವಿಸ್ತೃತವಾಗಿ ವ್ಯಾಪಿಸಿಕೊಂಡಿದ್ದು ಇಂದಿನ ಸೊಲ್ಲಾಪೂರ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಜಮಖಂಡಿ ತೇರದಾಳ ಚಿಮ್ಮಡ ಅಂಕಲಗಿ ಹಿರೇ...

Comments 9

  1. ವೀರಣ್ಣ ಜಾಗಿರದಾರ್
    Jun 19, 2020 Reply

    ಚನ್ನಬಸವಣ್ಣ ಅಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟೆಲ್ಲಾ ಬದುಕಿನ ವಿಪ್ಲವಗಳನ್ನು ಕಾಣಬೇಕಾಯಿತು! ಅವುಗಳನ್ನು ಎದುರಿಸುವ ಶಕ್ತಿ ಅವರಿಗೆ ಎಲ್ಲಿಂದ ಬಂದಿರಬೇಕು? ಅವರಿಗಾದ ಮಾನಸಿಕ ಆಘಾತಗಳನ್ನು, ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ಹೋದ ಜಾಣ್ಮೆಯನ್ನೂ ಕತೆ ಮನಮುಟ್ಟುವಂತೆ ಹೇಳುತ್ತಿದೆ. ಶರಣ ಮಹಾದೇವ ಅವರಿಗೆ ಥ್ಯಾಂಕ್ಸ.

  2. Kavyashree
    Jun 21, 2020 Reply

    ಚನ್ನಬಸವಣ್ಣನವರ ಕತೆ ಕುತೂಹಲದ ಜೊತೆಗೆ ಒಂದು ರೀತಿಯ ನೋವನ್ನೂ, ಹೆಮ್ಮೆಯನ್ನೂ ಒಟ್ಟೊಟ್ಟಿಗೆ ತಂದುಕೊಡುತ್ತಿದೆ. ಸುಂದರ ಕತಾ ಹಂದರ ಹೆಣೆದಿದ್ದಾರೆ ಕತೆಗಾರರು.

  3. ಸತೀಶ್ ಗವಿಮಠ
    Jun 23, 2020 Reply

    ಶರಣರು ಉಳಿದುಕೊಂಡ ತಾವು ಉಳುವಿ….. ಕೊನೆಯ ದಿನಗಳಲ್ಲಿ ಅವರು ಅನುಭವಿಸಿದ ಸವಾಲುಗಳು, ಸಮಸ್ಯೆಗಳು, ಅನಿರೀಕ್ಷಿತ ತಿರುವುಗಳು ಕರುಳು ಹಿಂಡುತ್ತವೆ, ಜೊತೆಗೆ ಅಡಿಗಡಿಗೆ ಹೆಮ್ಮೆ ಮೂಡುತ್ತದೆ.

  4. Saroja I.P
    Jun 25, 2020 Reply

    ಚನ್ನಬಸವಣ್ಣನವರು ಬಸವಣ್ಣನವರ ಗಡಿಪಾರಿನ ನಂತರ ಬಹು ಮುಖ್ಯ ಪಾತ್ರವಹಿಸಿದರೆಂದು ಗೊತ್ತಿತ್ತು. ಕತೆ ಓದುತ್ತಾ, ಆ ಸನ್ನಿವೇಶಗಳಲ್ಲಿ ಅವರ ಕಾರ್ಯಗಳನ್ನು ನೋಡುತ್ತಾ ಅವರ ಮೇಲೆ ಮತ್ತೂ ಗೌರವ, ಅಭಿಮಾನಗಳು ಉಕ್ಕುಕ್ಕಿ ಬರತೊಡಗಿವೆ.

  5. ದಯಾಮೂರ್ತಿ, ಸೊಗಲೆ
    Jun 27, 2020 Reply

    ಚನ್ನಬಸವಣ್ಣನ ಸಮವಯಸ್ಕ, ಸಹಪಾಠಿಗಳ ವಿಷಯವಾಗಿ ವಚನಗಳಲ್ಲಿ ಏನಾದರೂ ಮಾಹಿತಿ ಇದೆಯಾ ಶರಣರೇ? ಚನ್ನಬಸವಣ್ಣ ಏಕಾಂಗಿಯಾಗಿ ಕಂಡುಬರುತ್ತಾನೆ. ಆತನ ಸ್ನೇಹ ಬಳಗದ ಚಿತ್ರಣ ನೀಡಿದ್ದರೆ ಇನ್ನೂ ಕುತೂಹಲಕರವಾಗಿರುತ್ತಿತ್ತು.

  6. Nirmala R
    Jul 2, 2020 Reply

    ಮಾಚಿದೇವರ ಮರಣ ಕರುಳು ಕಿವುಚಿದಂತಾಯ್ತು. ನ್ಯಾಯವೇ ಸಿಗಲಿಲ್ಲವೇ ಶರಣರಿಗೆ…. ಹೃದಯ ಭಾರವೆನಿಸುವ ಸನ್ನಿವೇಶ.

  7. Pruthvi J.K
    Jul 8, 2020 Reply

    ಚನ್ನಬಸವಣ್ಣನ ಪಾತ್ರ ಚಿತ್ರಣ ಚನ್ನಾಗಿ ಮೂಡಿ ಬಂದಿದೆ, ಆದರೂ ಏನೋ ಕೊರತೆ ಎನಿಸುತ್ತಿದೆ…..

  8. ರವೀಂದ್ರ ಹೊನವಾಡ, ಗಜೇಂದ್ರಗಡ
    Jul 16, 2020 Reply

    ಕತೆ ತುಂಬಾ ಚೆನ್ನಾಗಿದೆ. ಕಲ್ಯಾಣದ ಕತೆಯನ್ನು ಮನಮುಟ್ಟುವಂತೆ ಹೇಳಿದ್ದಾರೆ.

  9. Suresh Babu
    Jul 18, 2020 Reply

    ಚನ್ನಬಸವಣ್ಣನವರು ಸೊನ್ನಲಿಗೆಯಿಂದ ಉಳವಿಯತ್ತ ನಡೆದರು ಎನ್ನುವುದು ನನಗೆ ಗೊತ್ತಿರಲಿಲ್ಲ. ಸುಂದರ ನಿರೂಪಣೆಯ ಕತೆ ಮನವನ್ನು ಸೂರೆಗೊಳ್ಳುವುದು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುಪಥ
ಗುರುಪಥ
January 4, 2020
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
Copyright © 2023 Bayalu