Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಳಿದು ಕೂಡುವುದು- ಅಳಿಯದೆ ಕೂಡುವುದು
Share:
Articles March 9, 2023 ಡಾ. ಚಂದ್ರಶೇಖರ ನಂಗಲಿ

ಅಳಿದು ಕೂಡುವುದು- ಅಳಿಯದೆ ಕೂಡುವುದು

೧) ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು
ಪೂಜಿಸಹೋದರೆ,
ಆ ದೇವರೇನ ಕೊಡುವರೋ?
ಸಾಯದೆ-ನೋಯದೆ –
ಸ್ವತಂತ್ರನಾಗಿ ಸಂದು – ಭೇದವಿಲ್ಲದಿಪ್ಪ,
ಗುಹೇಶ್ವರ, ನಿಮ್ಮ ಶರಣ! (LB:73)

‘ಪೂಜಾಫಲ’ ಎನ್ನುವುದುಂಟು! ಈ ರೂಢಿ ಮಾತು ಪೂಜೆಗೂ ಪ್ರತಿಫಲಕ್ಕೂ ಇರುವ ಅನ್ಯೋನ್ಯ ಭಾವಮೈತ್ರಿಯನ್ನು ಸೂಚಿಸುತ್ತದೆ. ಫಲಾಪೇಕ್ಷೆಯ ಪೂಜೆ ಲೋಗರ ನಡತೆಯ ಮುಂದುವರಿಕೆ, ಅಷ್ಟೇ! ಯಾರನ್ನಾದರೂ ಒಲಿಸಿಕೊಳ್ಳಬೇಕಾದರೆ ಅನುಸರಿಸುವ ದಾನ ನೀತಿಯೇ ಪೂಜೆಯಲ್ಲೂ ಕಂಡುಬರುತ್ತದೆ. ‘ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆಮಾತಿನಲ್ಲೂ ಫಲಾಪೇಕ್ಷೆಯ ಪೂಜಾ ಬುದ್ಧಿಯಿದೆ. ಸತ್ತ ಬಳಿಕ ಮೋಕ್ಷ ಗಳಿಸುವ ಸ್ವಾರ್ಥಭಾವನೆಯಿಂದ ಮಾಡುವ ಪೂಜೆ ಮತ್ತು ನೀಡುವ ದಾನ ಗುಣಗಳು ನಮ್ಮ ಸ್ವಾರ್ಥ ಸಾಧನೆಯ ಮಾರ್ಗೋಪಾಯವೇ ಆಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಇಹಲೋಕ ಮತ್ತು ಪರಲೋಕವೆಂಬ ಸೀಮೆಗಳನ್ನು ಸೃಷ್ಟಿಸಿ, ಇಹಕ್ಕೆ ದೂರವಾದ ಪರಲೋಕದಲ್ಲಿ ಮನಸ್ಸು ನೆಟ್ಟು ನಮ್ಮನ್ನು ಮನೋಭ್ರಾಂತಿಗೆ ದೂಡುತ್ತದೆ. ಇದನ್ನೇ ಅಲ್ಲಮಪ್ರಭು ‘ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು ಪೂಜಿಸ ಹೋದರೆ ಆ ದೇವರೇನ ಕೊಡುವರೋ?’ ಎಂದು ಛೇಡಿಸಿದ್ದಾರೆ. ಪೂಜೆ ವ್ರತ ನಿಯಮ ನಿಷ್ಠೆಗಳಲ್ಲಿ ಸಾಯದೆ – ನೋಯದೆ, ಪರತಂತ್ರನಾಗಿ ನರಳದೆ, ಸ್ವತಂತ್ರನಾಗಿ ಸಂದು, ಯಾವೊಂದೂ ಭೇದವಿಲ್ಲದೆ ಇರುವವರೇ ನಿಜಶರಣರು ಎಂಬುದು ಈ ವಚನದ ಮಥಿತಾರ್ಥವಾಗಿದೆ.

ಮನುಷ್ಯರು ಮರಣಭಯದಿಂದ ಕಂಗೆಟ್ಟು ನರಳಬಾರದು. ಹುಟ್ಟಿದವರು ಸಾಯಲೇಬೇಕು! ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಬಂದಾಗ ಹೆದರುವುದೇಕೆ? ಬೆದರುವುದೇಕೆ? ಎಂಬ ನಿರ್ಭೀತಿಯೇ ಶರಣರ ಉಸಿರಾಟವಾಗಿದೆ. ಇದನ್ನು ಅಲ್ಲಮಪ್ರಭು ಬೆಡಗಿನ ವಚನದ ಮೂಲಕ ಸರಳಸುಂದರವಾಗಿ ಹೇಳಿದ್ದಾರೆ:

೨) ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದನೆಂದರೆ – ಅದ ಕಂಡು ಬೆರಗಾದೆ!
ರಕ್ಕಸಿಯ ಮನೆಗೆ ಹೋಗಿ
ನಿದ್ರೆಗೆಯ್ದು ಬಂದನೆಂದರೆ – ಅದ ಕಂಡು ಬೆರಗಾದೆ!
ಜವನ ಮನೆಗೆ ಹೋಗಿ
ಸಾಯದೆ ಬದುಕಿ ಬಂದನೆಂದರೆ – ಅದ ಕಂಡು ಬೆರಗಾದೆ! ಗುಹೇಶ್ವರ! (LB:13)

ಮೇಲ್ಕಂಡ ಬೆಡಗಿನ ವಚನದಲ್ಲಿರುವ ಅದಮ್ಯ ಜೀವನಪ್ರೀತಿ ನಿರ್ಭೀತಿಯಿಂದ ಕೂಡಿದೆ. ಹುಲಿಯ ಬೆನ್ನಲ್ಲಿ ಹೋಗಿ ಮೇದು ಬರುವ ಹುಲ್ಲೆ, ರಕ್ಕಸಿಯ ಮನೆಗೆ ಹೋಗಿ ನಿದ್ದೆ ಮಾಡಿ ಬರುವುದು, ಜವನ ಮನೆಗೆ ಹೋಗಿ ಸಾಯದೆ ಬದುಕಿ ಬರುವುದು ಶರಣರ ವಿಗಡಚರಿತೆ ಎನ್ನಬಹುದು. ಯಾರೊಬ್ಬರಿಗಾಗಲೀ ಸಾವಿಗಾಗಲೀ ಅಂಜದ ಶರಣರ ದಿಟ್ಟತನದ ಮನೋಧರ್ಮವು ಜನಪದ ಕತೆಗಳಲ್ಲಿನ ರೂಪಕಗಳಂತೆ ತೋರುತ್ತದೆ. ಈ ಧೈರ್ಯ ಮತ್ತು ಆತ್ಮಶ್ರೀ ಇಲ್ಲದ ನರಪ್ರಾಣಿಗಳ ಕತೆಯೇ ಬೇರೆ:

೩) ಊರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದೈದಾವೆ ಐದು ಹೆಣನು!
ಬಂದು ಬಂದು ಅಳುವರು ಬಳಗ ಘನವಾದ ಕಾರಣ.
ಹೆಣನೂ ಬೇಯದು! ಕಾಡೂ ನಂದದು!
ಮಾಡ ಉರಿಯಿತ್ತು ಗುಹೇಶ್ವರ! (LB:12)

ಊರ ಮಧ್ಯದಲ್ಲಿ ಕಣ್ಣಿಗೆ ಕಾಣುವ ಕಾಡಿನಲ್ಲಿ ಪಂಚಪ್ರಾಣಗಳು ಮೃತ್ಯುಭೀತಿಯಿಂದಾಗಿ, ಸಾಯದ ಮುನ್ನ ಸತ್ತಂತೆ ಐದು ಹೆಣವಾಗಿ ಬಿದ್ದಿವೆ. ಬಂಧು ಬಳಗ ಘನವಾದ ಕಾರಣ ಬಂದು ಬಂದವರೆಲ್ಲರೂ ಒಂದೇ ಸಮನೆ ಅಳುತ್ತಿದ್ದಾರೆ. ಇದೊಂದು ಕಪಟ ನಾಟಕ!
ಹೆಣವೂ ಬೇಯುತ್ತಿಲ್ಲ! ಕಣ್ಣಿಗೆ ಕಾಣುವ ಕಾಡಿನ ಕಿಚ್ಚೂ ಆರುತ್ತಿಲ್ಲ! ಬಾಳೆಂಬುದು ಚಿಂತೆಯೇ ಚಿತೆಯಾಗಿ ಉರಿಯುತ್ತಿದೆ. ಇಲ್ಲಿ ಚಿತಾ ದಹತೀ ಶವಂ, ಚಿಂತಾ ದಹತೀ ಜೀವಂ ಎಂಬ ಸೂಕ್ತಿಯನ್ನು ಸ್ಮರಿಸಬಹುದು. ಪೂಜಾದಿ ಕರ್ಮಾಚರಣೆ ಮಾಡಿಯೂ ಸಾವಿನ ಭಯ ಬಿಟ್ಟು ಹೋಗದಿದ್ದರೆ ಫಲವೇನು?

೪) ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದರೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೇ?
ದೇವ! ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿಯೇ ಸಾಲದೇ?
ಗುಹೇಶ್ವರ! ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊರಗಣ ಜವನೆ ಸಾಲದೆ? (LB:45)

ಮೇರುಗಿರಿಯು ಚಿನ್ನದ ಬೆಟ್ಟ! ಇದನ್ನು ತಾಕಿದ ಎಲ್ಲರೂ ಚಿನ್ನವೇ ಆಗುತ್ತಾರೆಂದು ಪ್ರತೀತಿ. ಈ ಕವಿಸಮಯವನ್ನು ಅಲ್ಲಮಪ್ರಭು ಬಳಸಿಕೊಂಡು ಮೇರುಗಿರಿಯನ್ನು ತಾಕಿದ ಕಾಗೆ ಕೂಡಾ ಬಂಗಾರದ ಬಣ್ಣದಿಂದ ಶೋಭಿಸಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮೇರುಗಿರಿಯ ಕಾಗೆಗೆ ಹೊಂಬಣ್ಣ ಬರದಿದ್ದರೆ ಅದಕ್ಕಿಂತಲೂ ಚಿಕ್ಕ ಗುಡ್ಡವೇ ಸಾಕಲ್ಲವೆ? ಹಾಗೆಯೇ ದೇವರನ್ನು ಪೂಜಿಸಿದವರಿಗೆ ಯಾವೊಂದೂ ಧಾವತಿಯೂ (=ಮನೋಭ್ರಾಂತಿ) ಇರಬಾರದು! ದೇವರನ್ನು ಪೂಜಿಸಿದರೂ ಉಳಿದುಬಿಡುವ ಧಾವತಿಗಿಂತ ವಿಧಿ ವಿಲಾಸವೆಂಬ ನಂಬಿಕೆಯೇ ಸಾಕಲ್ಲವೇ? ಗುಹೇಶ್ವರ! ನಿಮ್ಮನ್ನು ಪೂಜಿಸಿಯೂ ಸಾಯುವುದಾದರೆ ನಿಮ್ಮಿಂದ ಹೊರಗಿರುವ ಜವನೇ (=ಯಮನೇ) ಸಾಕಲ್ಲವೇ? ‘ಶರಣನ ಸಾವನ್ನು ಮರಣದಲ್ಲಿ ಕಾಣು’ ಎಂಬ ಗಾದೆಯೇ ಇದೆ. ‘ಮರಣವೇ ಮಹಾನವಮಿ’ ಎಂಬುದೇ ಶರಣರ ವೀರವ್ರತ! ಇದನ್ನು ಅರಿಯದೆ ಬರಿದೆ ಶರಣವೇಷ ತೊಟ್ಟರೇನು? ಲೋಕದ ಪ್ರಾಣಿಗಳೆಲ್ಲ ಹುಟ್ಟಿ ಸಾಯುವುದು ಇದ್ದೇ ಇದೆ!

೫) ಕಾಳರಕ್ಕಸಿಗೊಬ್ಬ ಮಗ ಹುಟ್ಟಿ
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯ!
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು
ದೇವಕನ್ನಿಕೆಯ ಮರೆಹೊಕ್ಕು
ಬಾಯತುತ್ತೆಲ್ಲವನು ಉಣಲೊಲ್ಲದೆ ಕಾರಿದಡೆ
ಆತನ ಭಕ್ತನೆಂಬೆ, ಗುಹೇಶ್ವರ! (LB:46)

ಸುಗ್ಗಿಯ ಕಣದಲ್ಲಿ ಧಾನ್ಯರಾಶಿಯನ್ನು ಅಳೆಯುತ್ತಾ ಸುರಿಯುವಂತೆ, ಬಾಳಿನಲ್ಲಿ ಮೃತ್ಯುದೇವತೆಗೊಬ್ಬ ಮಗ ಹುಟ್ಟಿ ದೇಹರಾಶಿಯನ್ನು ಮೊಗೆದು ಮೊಗೆದು ಅಳೆಯುತ್ತಾ ಸುರಿಯುತ್ತಿದ್ದಾನೆ. ಈ ಕಾಳರಕ್ಕಸಿಯ ಮೂಗು ಮೊಲೆ ಕೊಯ್ದು ದೇವಕನ್ನಿಕೆಯ ಮರೆಹೊಕ್ಕು ಮೃತ್ಯುವಿನ ಬಾಯತುತ್ತುಗಳು ನಾವಾಗದಂತೆ, ಮೃತ್ಯುವಿಗೆ ಉಣಲು ಸಾಧ್ಯವಾಗದೆ, ಕಾರಿದರೆ (= ಕಕ್ಕಿಬಿಟ್ಟರೆ) ಆತನನ್ನೇ ನಿಜಭಕ್ತ ಎಂದು ಕರೆಯುತ್ತೇನೆ, ಗುಹೇಶ್ವರ! ಜನಪದ ಕತೆಯ ರಮ್ಯಾದ್ಭುತ ಕಲ್ಪನಾವಿಲಾಸದ ಕಥನ ಇಲ್ಲಿದೆ. ದೇವಕನ್ನಿಕೆಯ ಸಹಾಯದಿಂದ ಕಾಳ ರಕ್ಕಸಿಯ ಮೂಗು ಮೊಲೆಯನ್ನು ಕತ್ತರಿಸಿ ಹಾಕುವ ಫ್ಯಾಂಟಸಿಯನ್ನು ಅಲ್ಲಮಪ್ರಭು ಇಲ್ಲಿ ಬಳಸಿದ್ದಾರೆ. ಮೃತ್ಯುದೇವತೆಗೆ ಕೊಂಚ ಕೂಡಾ ಹೆದರದ ಮೃತ್ಯುಂಜಯನ ಬೆಡಗಿನ ವಚನವಿದು! ಮೃತ್ಯುಭೀತಿಯನ್ನು ಅಲ್ಲಮಪ್ರಭು ಕಿಂಚಿತ್ತೂ ಒಪ್ಪುವುದಿಲ್ಲ!

೬) ಕಳ್ಳಗಂಜಿ ಕಾಡ ಹೊಕ್ಕಡೆ
ಹುಲಿ ತಿನ್ನದೆ ಮಾಬುದೇ?
ಹುಲಿಗಂಜಿ ಹುತ್ತವ ಹೊಕ್ಕಡೆ
ಸರ್ಪ ತಿನ್ನದೆ ಮಾಬುದೇ?
ಕಾಲಕ್ಕಂಜಿ ಭಕ್ತನಾದಡೆ
ಕರ್ಮ ತಿನ್ನದೆ ಮಾಬುದೇ?
ಇಂತೀ ಮೃತ್ಯುವಿನ ಬಾಯತುತ್ತಾದ
ವೇಷಡಂಬಕರನು ಏನೆಂಬೆ – ಗುಹೇಶ್ವರ! (LB:51)

ಮರ್ತ್ಯಮಾನವರ ಬೆನ್ನು ಬಿಡದ ಸಾವಿನ ರೂಪಕಗಳು ಒಂದಾದ ಮೇಲೊಂದರಂತೆ ಇಲ್ಲಿ ಸಾಲು ಸಾಲಾಗಿವೆ. ಕಾಲನಿಗೆ ಅಂಜಿ ಭಕ್ತನಾದರೆ ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತೆ ನಾವು ಮಾಡಿದ ಕರ್ಮ ನಮ್ಮನ್ನು ತಿನ್ನದೇ ಬಿಡದು! ಮೃತ್ಯುಂಜಯರಾಗುವುದಕ್ಕೆ ಬದಲಾಗಿ ಮೃತ್ಯುವಿನ ಬಾಯತುತ್ತುಗಳಾಗುವ ವೇಷಡಂಬಕರು ಎಲ್ಲಾ ಕಾಲದೇಶಗಳಲ್ಲಿ ಇದ್ದೇ ಇರುತ್ತಾರೆ. ಇಂಥವರಿಗೆ ಏನು ಹೇಳುವುದು ಗುಹೇಶ್ವರ?

೭) ಅಷ್ಟಾಂಗಯೋಗದಲ್ಲಿ
ಯಮ – ನಿಯಮಾಸನ – ಪ್ರಾಣಾಯಾಮ,
ಪ್ರತ್ಯಾಹಾರ – ಧ್ಯಾನ – ಧಾರಣ – ಸಮಾಧಿ
ಎಂದು, ಎರಡು ಯೋಗ ಉಂಟು ಅಲ್ಲಿ:
ಅಳಿದು ಕೂಡುವುದೊಂದು ಯೋಗ!
ಅಳಿಯದೆ ಕೂಡುವುದೊಂದು ಯೋಗ!
ಈ ಎರಡು ಯೋಗದೊಳಗೆ
ಅಳಿಯದೇ ಕೂಡುವ ಯೋಗವರಿದು ಕಾಣಾ ಗುಹೇಶ್ವರ! (LB:141)

ಅಷ್ಟಾಂಗ ಯೋಗದ ಪರಿಭಾಷೆಗಳನ್ನು ಹೇಳುತ್ತಲೇ, ಅದನ್ನು ವಿಸರ್ಜಿಸಿ, ಎರಡು ಯೋಗವನ್ನು ಮಾತ್ರ ಪ್ರತಿಪಾದಿಸುತ್ತಿರುವ ಈ ವಚನವು ಸಹಜಯೋಗದ ಅಭಿವ್ಯಕ್ತಿಯಾಗಿದೆ. (1) ಅಳಿದು ಕೂಡುವ ಯೋಗವು ‘ಹೋಗುವ’ ಯೋಗ (2) ಅಳಿಯದೇ ಕೂಡುವ ಯೋಗವು ‘ಆಗುವ’ ಯೋಗ. ಆಯುಷ್ಯವು ಮುಗಿದು ಜೀವವು ಹೋಗುವುದಕ್ಕೂ ಆಯುಷ್ಯವು ಇದ್ದಾಗಲೇ ಜೀವವು ಆಗುವುದಕ್ಕೂ ಇರುವ ವ್ಯತ್ಯಾಸ ಇಲ್ಲಿದೆ. ಈ ಎರಡು ಯೋಗದೊಳಗೆ ಅಳಿಯದೇ ಕೂಡುವ ಯೋಗವೇ ಮಿಗಿಲಾದುದು ಕಾಣಾ ಗುಹೇಶ್ವರ!

೮) ತತ್ತ್ವವೆಂಬುದ ನೀನೆತ್ತ ಬಲ್ಲೆಯೋ?
ಸತ್ತು ಮುಂದೆ ನೀನೇನ ಕಾಬೆಯೋ?
ಇಂದೆ, ಇಂದೆಯೊ, ಇಂದೆ ಮಾನವ!
ಮಾತಿನಂತುಟಲ್ಲ ಶಿವಾಚಾರದ ಸರಿದೊಡಕು ಕಾಣಿರಣ್ಣಾ!
ರಚ್ಚೆಯ ಮಾತಲ್ಲ! ಬೀದಿಯ ಮಾತಲ್ಲ!
ಏಕೋ ರಾತ್ರಿಯ ಬಿಂದು ನೋಡಾ!
ಗುಹೇಶ್ವರನ ಕೂಡಿದ ಕೂಟ
ಇಂದು ಸುಖ, ಮುಂದೆ ಲೇಸು! (LB:254)

ಸತ್ತುಹೋದ ನಂತರದ ಕಾಣ್ಕೆಯ ನಿರಾಕರಣೆ ಈ ವಚನದಲ್ಲಿದೆ. ಈ ಕ್ಷಣದ, ತಕ್ಷಣದ ಬದ್ಧತೆ ಇಲ್ಲಿದೆ. ಇದು ಅರಳಿಕಟ್ಟೆಯ ಹರಟೆಯಲ್ಲ! ಸಂತೆಬೀದಿಯ ಮಾತಲ್ಲ! ಇದು ಪ್ರತ್ಯಕ್ಷ ಅನುಭವದ ನಿಜಸುಖ! ನಿಜಶ್ರೇಯಸ್ಸು!

೯) ಸತ್ತು ಮುಂದೆ ದೇವನ ಕೂಡಿಹೆನೆಂಬಿರಿ?
ಸಾಯದ ಮುನ್ನ ಸತ್ತಿದ್ದರೆ ಎಂತಯ್ಯ?
ನಿಮ್ಮ ಲಿಂಗೈಕ್ಯದ ಪರಿ ಎಂತಯ್ಯ?
ನಿಮ್ಮ ಪ್ರಮಥರ ಪರಿ ಅಂಗದ ಅವಸ್ಥೆಯಲ್ಲದೆ
ಲಿಂಗಾವಸ್ಥೆ ಯಾರಿಗೂ ಇಲ್ಲ ಗೋಗೇಶ್ವರ! (LB:387)

ಸತ್ತು ಹೋದ ನಂತರ ದೇವನ ಕೂಡುವ ಸಾಂಸ್ಥಿಕ ಜಡತ್ವದ ಕಲ್ಪನೆಯನ್ನು ಈ ವಚನವು ನಿರಾಕರಿಸಿದೆ. ಸಾಯದ ಮುನ್ನ ನಮ್ಮ ಬದುಕು ಮೃತಪ್ರಾಯವಾದರೆ ಹೇಗೆ? ಎಂಬ ಜೀವಂತ ಪ್ರಶ್ನೆಯನ್ನು ಪ್ರತಿಯೊಬ್ಬರೂ ಎದುರಿಸಬೇಕು. ‘ಲಿಂಗೈಕ್ಯ’ ಎಂಬುದು ಮರಣೋತ್ತರದ ಪರಿಭಾಷೆಯಲ್ಲ! ಮರಣಕ್ಕೆ ಮುಂಚಿನ ಪರಿಕಲ್ಪನೆಯಾಗಿದ್ದು ಜೀವಂತ ಲಿಂಗೈಕ್ಯತೆಯನ್ನು ಸೂಚಿಸುತ್ತಿದೆ. ಇದು ಮನೋಪುಷ್ಪದಲ್ಲಿ ಪೂಜಿಸುವ ಒಳಗಿನ ಅನಿಮಿಷಲಿಂಗ!

೧೦) ಹೊರಗನೆ ಕೊಯ್ದು
ಹೊರಗನೆ ಪೂಜಿಸಿದವರ ಕಂಡು ನಾಚಿದೆನಯ್ಯ!
ಒಳಗೊಂದು ಅನಿಮಿಷಲಿಂಗವ ಕಂಡು
ಎನ್ನ ಮನೋಪುಷ್ಪದಲ್ಲಿ ಪೂಜೆಯ ಮಾಡಿದಡೆ
ನಾಚಿಕೆ ಮಾದು, ನಿಸ್ಸಂದೇಹಿಯಾದೆನು, ಗುಹೇಶ್ವರ! (LB:209)

ಅಂಗದ ಮೇಲೆ ಲಿಂಗ ಸಾಹಿತ್ಯ ಮಾಡಿಕೊಳ್ಳುವ ದ್ರವ್ಯಲಿಂಗಿಗಳಿಗಿಂತಲೂ, ಮನೋಪುಷ್ಪದಲ್ಲಿ ಲಿಂಗವನ್ನು ಪೂಜಿಸುವ ಮನಲಿಂಗಿಗಳು ಮಿಗಿಲಾದವರು! ವೇಷವ ಹೊತ್ತು ಬಳಲುವ ನೆಲೆ ಇಲ್ಲಿಲ್ಲ!

೧೧) ಭಸ್ಮವ ಪೂಸಿ ಬತ್ತಲೆ ಇದ್ದಡೇನು?
ಬ್ರಹ್ಮಚಾರಿಯೇ?
ಅಶನವನುಂಡು ವ್ಯಸನವ ಮರೆದಡೇನು?
ಬ್ರಹ್ಮಚಾರಿಯೇ?
ಭಾವ ಬತ್ತಲೆಯಿದ್ದು ಮನ ದಿಗಂಬರವಾದಡೆ
ಅದು ‘ಸಹಜ ನಿರ್ವಾಣ’ ಕಾಣಾ ಗುಹೇಶ್ವರ! (LB:262)

ವೇಷಧಾರಣೆಯಿಲ್ಲದ ಸಹಜ ನಿರ್ವಾಣವನ್ನು ಹೇಳುತ್ತಿರುವ ಈ ವಚನವು ಶರಣರ ಒಲವು ನಿಲುವಿನ ಪ್ರತೀಕವಾಗಿದೆ. ಭಾವ ಬತ್ತಲೆಯಿದ್ದು ಮನ ದಿಗಂಬರವಾಗಿರಬೇಕು ಎಂಬ ಪ್ರತಿಪಾದನೆ ಅನನ್ಯವಾಗಿದೆ.

೧೨) ನಾರು ಬೇರಿನ ಕುಟಿಲ ಕಪಟದ
ಯೋಗವಲ್ಲ ಇದು ನಿಲ್ಲಿಭೋ!
ಕಾಯಸಮಾಧಿ, ಕರಣಸಮಾಧಿ, ಯೋಗವಲ್ಲ
ಇದು ನಿಲ್ಲಿಭೋ!
ಜೀವಸಮಾಧಿಯೆಂಬುದಲ್ಲ!
ನಿಜ ಸಹಜಸಮಾಧಿ ಗುಹೇಶ್ವರ! (LB:313)

ಸರಹಪಾದನ ‘ಸಹಜಯಾನ’ ಅಥವಾ ತಾವೋಯಿಸಂ ಪ್ರತಿಪಾದಿಸುವ ‘ನಿಸರ್ಗವಿವೇಕ’ವನ್ನು ಹೇಳುತ್ತಿರುವ ಮೇಲ್ಕಂಡ ವಚನಗಳು ಅಲ್ಲಮಪ್ರಭುವಿನ ಬಗ್ಗೆ ಹೊಸಬೆಳಕನ್ನು ಚೆಲ್ಲುತ್ತದೆ. ಅಷ್ಟೇ ಅಲ್ಲ! ಅಲ್ಲಮಪ್ರಭು ಎಂದರೆ ಅತ್ಯಂತ ಕ್ಲಿಷ್ಟ ಮತ್ತು ದುರವಗಾಹಿ ಎಂಬ ಸ್ಥಿರೀಕೃತ ಚಿಂತನೆಯನ್ನು ಛಿದ್ರಿಸುತ್ತದೆ.

Previous post ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
Next post ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?

Related Posts

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
Share:
Articles

ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳುವಳಿಯ ಅಗ್ರನಾಯಕ ಮಡಿವಾಳ ಮಾಚಿದೇವರು. ಕಲ್ಯಾಣ ಕ್ರಾಂತಿಯು ತನ್ನ ಕೊನೆಯ ದಿನಗಳಲ್ಲಿ ರಕ್ತಸಿಕ್ತವಾಗಿ...
ವಚನಗಳಲ್ಲಿ ಜೀವವಿಜ್ಞಾನ
Share:
Articles

ವಚನಗಳಲ್ಲಿ ಜೀವವಿಜ್ಞಾನ

December 22, 2019 Bayalu
ನಮ್ಮೆದುರು ಅನೇಕ ರಹಸ್ಯಗಳನ್ನು ಬಿಚ್ಚಿಟ್ಟ ಆಧುನಿಕ ಜೀವವಿಜ್ಞಾನ ಮನುಷ್ಯನ ಇದುವರೆಗಿನ ಕೌತುಕದ ಫಲ.ವಿಜ್ಞಾನದ ವಿಕಾಸದಲ್ಲಿ ಇದರ ಬೆಳವಣಿಗೆಯ ಹೆಜ್ಜೆಗಳು ಸ್ಪಷ್ಟವಾಗಿವೆ....

Comments 8

  1. Kiran Attikere
    Mar 12, 2023 Reply

    ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು ಪೂಜಿಸಹೋದರೆ, ಆ ದೇವರೇನ ಕೊಡುವರೋ?- ಈ ವಚನದ ಮೂಲಕ ಅಲ್ಲಮಪ್ರಭುದೇವರ ವಚನಗಳೊಳಗೆ ಕರೆದುಕೊಂಡು ಹೋಗಿ ಶರಣ ತತ್ವವನ್ನು ಹೇಳುವ ನಿಮ್ಮ ವಿನೂತನ ಶೈಲಿ ಚೆನ್ನಾಗಿದೆ. ಶರಣು.

  2. ಗುಣಶೀಲಾ ಜವಳಿ
    Mar 12, 2023 Reply

    ಲಿಂಗೈಕ್ಯ ಎನ್ನುವುದು ಮರಣೋತ್ತರ ಶಬ್ದವಲ್ಲ, ಅದೊಂದು ತಲುಪಬೇಕಾದ ಸ್ಥಿತಿ. ಯಾವುದೇ ಧರ್ಮ ಜಡಗೊಂಡಾಗ ಅರ್ಥವ್ಯತ್ಯಾಸಗಳು ಅದರಲ್ಲಿ ಹೇರಳವಾಗಿ ತುಂಬಿಕೊಳ್ಳುತ್ತವೆ. ಲಿಂಗಾಯತವೂ ಅದಕ್ಕೆ ಹೊರತಾಗಿಲ್ಲ.

  3. Guruprasad Bellary
    Mar 12, 2023 Reply

    ನೀವು ತೆಗೆದುಕೊಂಡು ನಿರ್ವಚನ ಮಾಡಿದ ವಚನಗಳಿಗೆ ನಾನು ಬೇರೆಯದೇ ವ್ಯಾಖ್ಯಾನಗಳನ್ನು ಓದಿದ್ದೆ. ಪೂಜ್ಯ ಸಿದ್ದೇಶ್ವರ ಅಪ್ಪಾರ ವಚನ ನಿರ್ವಚನ ಪುಸ್ತಕದಲ್ಲಿ ಇವುಗಳಿಗೆ ವಿಭಿನ್ನ ವಿವರಣೆಗಳಿವೆ. ನೀವು ಮಾಡಿದ ವಿವರಣೆಯೂ ಸರಿ ಎನ್ನುವಂತಿದೆ. ಹಾಗಾದರೆ ಶರಣರು ಯಾವುದನ್ನು ಮನಸ್ಸಲ್ಲಿಟ್ಟುಕೊಂಡು ಬರೆದರು ಎನ್ನುವುದು ನನ್ನ ಪ್ರಶ್ನೆಯಾಗಿದೆ.

  4. ಚಂದ್ರಶೇಖರ ವಸ್ತ್ರದ್
    Mar 14, 2023 Reply

    ಯಾರೊಬ್ಬರಿಗಾಗಲೀ ಸಾವಿಗಾಗಲೀ ಅಂಜದ ಶರಣರ ದಿಟ್ಟತನದ ಮನೋಧರ್ಮವು ಜನಪದ ಕತೆಗಳಲ್ಲಿನ ರೂಪಕಗಳಂತೆ ತೋರುತ್ತದೆ- ಹೀಗೆ ವಚನಗಳನ್ನ ನೋಡುವ ರೀತಿಯೇ ಬಲು ಸೊಗಸು…..

  5. Sukanya Hallikatti
    Mar 17, 2023 Reply

    ಅಲ್ಲಮಪ್ರಭುವಿಗೆ ಎಲ್ಲ ಯೋಗ ಮಾರ್ಗಗಳೂ ಗೊತ್ತಿದ್ದವು, ಅಂತೆಯೇ ಅವುಗಳ ನಿರರ್ಥಕತೆಯ ಬಗೆಗೆ ಅವರು ಅಥಾರಿಟೇಟಿವ್ ಆಗಿ ಮಾತನಾಡುತ್ತಾರೆ. ಅಷ್ಟಾಂಗಯೋಗವನ್ನು ತಲೆಯ ಮೇಲೆ ಹೊತ್ತುಕೊಂಡವರಿಗೆ ಅದರ ನಿಷ್ಪ್ರಯೋಜಕತೆಯನ್ನು ಹೇಳುವ ವಚನ ಬಹಳ ಚೆನ್ನಾಗಿದೆ, ನೀವು ಕೊಟ್ಟ ಪುಟ್ಟ ವಿವರಣೆಯಲ್ಲೂ ಯಾವುದು ಬೇಕು, ಯಾವುದು ಬೇಡ ಎನ್ನುವ ತಿಳುವಳಿಕೆ ಇದೆ.

  6. ವಿಜಯಕುಮಾರ್ ಎಂ
    Mar 17, 2023 Reply

    ಸಹಜಯೋಗದ ಬಲ್ಲಿದ ಅಲ್ಲಮ. ಅಳಿದು ಕೂಡುವ ಯೋಗವು ‘ಹೋಗುವ’ ಯೋಗ ಮತ್ತು ಅಳಿಯದೇ ಕೂಡುವ ಯೋಗವು ‘ಆಗುವ’ ಯೋಗ. ಆಹಾ, ಅಲ್ಲಮನಿಗೆ ಅಲ್ಲಮನೇ ಸಾಟಿ!!

  7. Pavan Kumar KV
    Mar 21, 2023 Reply

    ಶರಣರ ನಡೆ ನುಡಿ ಕುರಿತಾದ ಲೇಖನ ಚೆನ್ನಾಗಿದೆ

  8. VIJAYAKUMAR KAMMAR
    Mar 21, 2023 Reply

    ಪ್ರಬುದ್ಧ ಲೇಖನ 🤝🤝

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು… ನನ್ನದು
ನಾನು… ನನ್ನದು
July 4, 2021
ದಾರಿ ಬಿಡಿ…
ದಾರಿ ಬಿಡಿ…
December 6, 2020
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
Copyright © 2023 Bayalu