
ಅರಿವು-ಮರೆವಿನಾಟ
ನೀನರಿಯೆ ನಾನಾರೆಂದು
ನಾಮರೆತೆ ನೀನಾರೆಂದು
ನನ್ನಲ್ಲೇ ನೀನಿದ್ದರೂ
ನಿನ್ನಿಂದಲೇ ನಾ ಬದುಕಿದ್ದರೂ…
ಇದೇ ಅಲ್ಲವೇ ವಿಸ್ಮಯ?
ನಾ-ನೀನೆಂಬ ಉಭಯವೇ ಇಲ್ಲ
ಭ್ರಮೆಗೆ ಬಲಿಯಾಗದೆ
ತಿಳಿದು ನೋಡೆಂದ ಗುರು-
ನೀನೇ ನಾನೋ, ನಾನೇ ನೀನೋ…
ಮತ್ತೇ ಶುರುವಾಯ್ತು ಗೊಂದಲ.
ನೀನು ನೀನೆಂದು
ಕನವರಿಸುತಿರುವುದೆಲ್ಲ ಬುದ್ಧಿಯ ಬೇಧ
ನಾನು ನಾನು ಎಂದು
ಬಡಬಡಿಸುತಿರುವುದೆಲ್ಲ ಮನದ ಕಸ
ಈ ತಿಪ್ಪೆಯ ಮೇಲೆ ಕೂತು
ಹಿಡಿಯಬಹುದೇ ಸತ್ಯದ ಕೈಯ?
ಅಂಟಿಸಿಕೊಂಡ ರೆಕ್ಕೆಗಳ ನೆಚ್ಚಿ
ಹಾರಲಾದೀತೆ ಬಯಲಿನತ್ತ?
ಬಣ್ಣಬಣ್ಣದ ಮಾತುಗಳೆಲ್ಲ
ಮೌನದಲಿ ಕರಗಿ
ಎಲ್ಲ ಖಾಲಿಯಾಗುವ ತನಕ
ಕೇಳಲಾದೀತೆ ಎದೆಯ ಗುಟ್ಟು?
Comments 2
Jyothilingappa
Aug 9, 2021ಬುದ್ಧಿಯ ಬೇಧ
ಮನದ ಕಸ… ಆಹಾ!
ಪೇರೂರು ಜಾರು, ಮಂಗಳೂರು
Aug 14, 2021ಅರಿವು ಮರೆವು
ಅರಿತೇ ಮರೆಯುವುದು
ಅರಿಯದೇ ಮರೆಯುವುದು
ಕೆಲವ ಕುರಿತು ಮರೆಯುವುದು
ಬಯಲಾಗು ಮರೆಯುವುದು
ಎಲ್ಲ ಆಟಕ್ಕೂ ಕೊನೆ ತಿಳಿ
ಅದೇ ಅರಿವು ತಿಳಿಯದೊಡೆ
ಬಾಳ ಮರೆವು
ಆಟ ಮುಗಿಯಲೇ ಬೇಕು
ಮಂಗಳ ಹಾಡಲೇ ಬೇಕು
(ಮಂಗಳಾ ಬರೆಯಲೂ ಬೇಕು)