Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವು ಕಣ್ತೆರೆಯದವರಲಿ….
Share:
Articles August 5, 2018 ಕೆ.ಆರ್ ಮಂಗಳಾ

ಅರಿವು ಕಣ್ತೆರೆಯದವರಲಿ….

ಪ್ರಪಂಚದಲ್ಲಿ ಬಹಳಷ್ಟು ಬಿಡಿಸಲಾಗದ ಸಮಸ್ಯೆಗಳಿವೆ. ಆದರೆ ಅವುಗಳಲ್ಲಿ ಒಂದು ಶಬ್ದ ಮಾತ್ರವೇ ‘ಕಠಿಣ ಕಗ್ಗಂಟು’ (ಬಿಡಿಸಲಾಗದ ಒಗಟು!?) ಎಂದು ಗುರುತಿಸಿಕೊಂಡಿದೆ. ಆ ಶಬ್ದವೇ ‘ಅರಿವು’. ಬ್ರಿಟನ್ನಿನ ಮನಶಾಸ್ತ್ರಜ್ಞ ಸ್ಟುವರ್ಟ್ ಬರೆಯುತ್ತಾರೆ: “ನಿಜಕ್ಕೂ ಅರಿವು ಎನ್ನುವುದು ಒಂದು ಅತ್ಯಾಕರ್ಷಕ, ಆದರೆ ಗ್ರಹಿಕೆಗೆ ನಿಲುಕದ ವಿದ್ಯಮಾನ… ಇದುವರೆಗೂ ಅದರ ಕುರಿತು ಯಾವ ಮೌಲ್ಯಯುತ ಬರವಣಿಗೆಯನ್ನೂ ನಾನು ಕಂಡಿಲ್ಲ.” ತತ್ವಜ್ಞಾನಿಗಳಿಂದ ಹಿಡಿದು ನರವಿಜ್ಞಾನಿಗಳು, ವಿಜ್ಞಾನಿಗಳು, ಮನೋ ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಂಶೋಧಕರು ಈ ಕುರಿತು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಆದರೆ ಈ ‘ಕಠಿಣ ಕಗ್ಗಂಟು’ ಮಾತ್ರ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ.

ವಚನಗಳನ್ನು ಆಸಕ್ತಿಯಿಂದ ಓದಲು ಶುರು ಮಾಡಿದಾಗಿನಿಂದ ನನ್ನಲ್ಲಿ ತೀವ್ರ ಕುತೂಹಲ ಹುಟ್ಟಿಸಿದ ಶಬ್ದ- ‘ಅರಿವು’. ಯಾವುದನ್ನು ಶರಣರು ಅರಿವು ಎಂದು ಕರೆದರು? ನಿಜ ಜೀವನದಲ್ಲಿ ಪ್ರಜ್ಞಾ ಪೂರ್ವಕವಾಗಿ ಬದುಕುವುದನ್ನು ಅರಿವು ಎಂದು ಕರೆದರೇ? ಪ್ರಜ್ಞೆ ಎಂಬುದು ಇದರ ಸಮಾನಾರ್ಥಕ ಪದವೇ… ಎನ್ನುವ ಗೊಂದಲಗಳು ಹುಟ್ಟಿಕೊಳ್ಳುತ್ತಿದ್ದವು. ಆದರೆ ಹಾಗೆ ಪ್ರಜ್ಞಾಪೂರ್ವಕವಾಗಿ ಬದುಕುವ ಪ್ರಯೋಗ ನಡೆಸಿದಾಗ ಮನಸ್ಸು ದಣಿಯುತ್ತಿತ್ತು. ಎಷ್ಟೋ ಸಲ ನಿತ್ಯದ ದಿನಚರಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಅಳವಡಿಸಲು ಸಾಧ್ಯವಾಗದೆ ಸೋಲುತ್ತಿದ್ದೇನೆ ಎಂದು ಭಾಸವಾಗುತ್ತಿತ್ತು. ಆಗ ಇಂಥ ಒತ್ತಾಯದ ಹೇರಿಕೆಗಳಲ್ಲೇ ಏನೋ ದೋಷವಿದೆ ಎನಿಸತೊಡಗಿತು. ಅರಿವು ಎಂಬುದರ ಅರ್ಥ ಮತ್ತೇನೋ ಇದೆ ಎಂದು ಅರಿವಾಗಿದ್ದೇ ಆಗ!!

ಸೃಷ್ಟಿಯಂತೆ ಜೀವವೂ ನಿಗೂಢವೇ. ನಿಗೂಢತೆಯ ಒಂದಂಶ ನಾವೇ ಆಗಿರುವಾಗ ಅದನ್ನು ಕಾಣುವ ಕೌಶಲ್ಯ ಕೂಡ ನಮ್ಮಲ್ಲೇ ಇದೆ ಎನ್ನುತ್ತಾರೆ ಶರಣರು. ಬಿಸಿಲು- ಮಳೆ- ಗಾಳಿಗೆ ಎದೆಯೊಡ್ಡಿ ನಿಲ್ಲುವ ನೆಲದಂತೆ ಜೀವವೂ ಆಂತರ್ಯದಲ್ಲಿ ಸಹಜವಾಗಿ ತೆರೆದುಕೊಳ್ಳಬೇಕು. ಅದೇ ಅರಿವು.

ಅರಿವು ಎಂಬ ಶಬ್ದ ಒಂದೊಂದು ವಚನದಲ್ಲಿ ಒಂದೊಂದು ನೆಲೆಯಲ್ಲಿ ತನ್ನ ಅರ್ಥಗಳನ್ನು ವಿಸ್ತರಿಸಿಕೊಳ್ಳುತ್ತದೆ. ಉದಾಹರಣೆಗೆ ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ?, ಅರಿವುಳ್ಳಾತನೇ ಜಂಗಮ- (ಚನ್ನಬಸವಣ್ಣ), ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲಯ್ಯ (ಅಕ್ಕಮಹಾದೇವಿ); ನಿರ್ವಯಲನು ಅರಿವುತ್ತ ಅರಿವುತ್ತ ಬೆರಗಾದೆ (ತೋಂಟದ ಸಿದ್ಧಲಿಂಗಯತಿಗಳು); ಅರಿವಿನ ಅರಿವು ಸೋಮೇಶ್ವರ ಲಿಂಗ (ಬಿಬ್ಬಿ ಬಾಚಯ್ಯ); ಭಾವನಾಸ್ತಿಯಾದಲ್ಲಿ ಅರಿವು ನೆಲೆಗೊಳ್ಳುವುದು (ಅಲ್ಲಮಪ್ರಭುದೇವರು); ಅಂಗ ಲಿಂಗವ ಮರೆದಲ್ಲಿ ಅರಿವುದಕ್ಕೆ ಆಶ್ರಯ ಇನ್ನಾವುದು ಹೇಳಿರಣ್ಣಾ (ಮಧುವಯ್ಯ); ಎನ್ನ ಅರಿವು ನಿಜದಲ್ಲಿ ನಿಃಪತಿಯಾಯಿತ್ತಯ್ಯ (ಮಡಿವಾಳ ಮಾಚಿದೇವ), ಅರಿವೇ ಗುರು, ಅರಿದೊಡೆ ಶರಣ ಮರೆದೊಡೆ ಮಾನವ…. ಹೀಗೆ ವಚನಗಳಲ್ಲಿ ಅರಿವು ಎಂಬುದಕ್ಕೆ ಅನೇಕ ವ್ಯಾಖ್ಯಾನಗಳು, ಅನಂತ ಅರ್ಥಗಳು.

ಏನನ್ನು ಅರಿಯುವುದು? ಯಾರನ್ನು ಅರಿಯುವುದು? ಯಾಕಾಗಿ ಅರಿಯುವುದು? ಅಸಲಿಗೆ ಅರಿವು ಎಂದರೆ ಏನು?

“ಅರಿವು ಯಾಕಾಗಿ ಬೇಕು? ಈ ಹಿಂದೆ ಯಾವತ್ತೂ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅದರ ಅರಿವಿಲ್ಲದೆ ಇಷ್ಟು ದಿನ ಬದುಕಿಲ್ಲವೇ?” ಎನ್ನುವ ಪ್ರಶ್ನೆ ಸಹಜ. “ಜೀವದ ನಿಜ ಅಸ್ತಿತ್ವ ಆ ಅರಿವೇ ಆದ್ದರಿಂದ ಅದನ್ನು ತಿಳಿದುಕೊಳ್ಳುವ ಅಗತ್ಯವಿದೆ” ಎನ್ನುವುದು ಶರಣರ ದರ್ಶನ.

ತೀರಾ ಸರಳವಾಗಿ ಹೇಳುವುದಾದರೆ ನಾವೊಂದು ಕಾರನ್ನೋ, ದೂರದರ್ಶನವನ್ನೋ, ಫ್ರಿಜನ್ನೋ ಕೊಂಡುಕೊಂಡರೆ ಅದರ ಇಡೀ ಕೈಪಿಡಿಯನ್ನು ಓದುತ್ತೇವೆ. ಕೊನೆಪಕ್ಷ ಅವುಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದು ಹೇಗೆ ಎನ್ನುವಷ್ಟು ಅವಶ್ಯಕ ಮಾಹಿತಿಯನ್ನಾದರೂ ಪಡೆದುಕೊಳ್ಳುತ್ತೇವೆ.  ಅದೇ ರೀತಿ ನಮ್ಮೊಳಗಿರುವ ಅಂತರಾತ್ಮದ ಸಾಮರ್ಥ್ಯದ ಬಗ್ಗೆ ತಿಳಿದಷ್ಟು ಬದುಕಿನ ಬಗ್ಗೆ ಸ್ಪಷ್ಟತೆ ಸಿಗುತ್ತಾ ಹೋಗುತ್ತದೆ. ಅರಿವು ಕಣ್ತೆರೆಯುವ ಮೊದಲ ಹೆಜ್ಜೆ ಇದು.

ಅರಿವು ಜಾಗೃತಗೊಳಿಸಿಕೊಳ್ಳುವಂಥದೇ? ತಾನಾಗಿಯೇ ಮೂಡುವಂಥದೇ? ಇಲ್ಲ, ನಾವು ಕಂಡುಕೊಳ್ಳುವಂಥದೇ?

ನಮ್ಮನ್ನು ಆಳುವ ಭಾವನೆಗಳೊಂದಿಗೆ, ನಿಯಂತ್ರಿಸುವ ವಿಚಾರಗಳೊಂದಿಗೆ ನಿರಂತರವಾಗಿ ನಡೆಯುವ ಹೋರಾಟ, ಹೊಂದಾಣಿಕೆಗಳೇ ಜೀವನ. ಭಾವನೆಗಳೇ ಬದುಕಲ್ಲ, ವಿಚಾರಗಳೇ ವಿಶ್ವವಲ್ಲ. ಇದೊಂದು ವಿಚಿತ್ರ ಸಂಬಂಧ. ಭಾವನೆಗಳಿಗೆ ಅಡಿಯಾಳಾಗದಂತೆ, ವಿಚಾರಗಳಿಗೆ ಜೋತು ಬೀಳದಂತೆ ಜಾಗೃತ ಆವಸ್ಥೆಯಲ್ಲಿ ಮನಸ್ಸನ್ನು ಇಟ್ಟುಕೊಳ್ಳಬೇಕು. ಮನಸ್ಸಿನ ನಿರಂತರ ಅನುಸಂಧಾನದಿಂದ ಅರಿವಿನ ಕಣ್ಣು ತೆರೆದುಕೊಳ್ಳುತ್ತದೆ. ಇದನ್ನೇ “ಸ್ವಂತ ಪ್ರಜ್ಞೆಯ ಎಚ್ಚರ” ಎನ್ನುತ್ತಾರೆ ಖ್ಯಾತ ಚಿಂತಕ ಜಿಡ್ಡು ಕೃಷ್ಣಮೂರ್ತಿ. “ವಿಚಾರಿಸುವವ ಹಾಗೂ ವಿಚಾರ, ವೀಕ್ಷಕ ಮತ್ತು ವೀಕ್ಷಿಸಲ್ಪಟ್ಟ ವಸ್ತು, ಅನುಭವಿಸುವವ ಮತ್ತು ಅನುಭವ ಇವುಗಳ ವಿಭಜನೆ ಇಂಥ ‘ಎಚ್ಚರ’ದ ಮನಸ್ಥಿತಿಯಲ್ಲಿ ಭ್ರಮೆಯೆಂದು ತಿಳಿಯುತ್ತದೆ. ಅದೇ ಶುದ್ಧ ನೋಟ. ಗತಕಾಲದ ನೆರಳಿಲ್ಲದ, ದ್ವಂದ್ವಗಳಿಲ್ಲದ ಕಾಲಾತೀತವಾದ ಅಂತರ್ ಜ್ಞಾನ, ಅರಿವು”.

ಅರಿವು ಎಂದರೆ ತಿಳಿವಳಿಕೆ, ವಿಶೇಷ ತಿಳಿವಳಿಕೆ. ಇದು ನಮಗೆ ಒದಗದ ಹೊರತು ಜೀವನದ ಅರ್ಥ ಗೋಚರಿಸಲಾರದು.  ಬದುಕು ಶುಭ್ರವಾಗಲು, ಬದಲಾಗಲು ಅರಿವು ಬೇಕು. “ನೀವು ಅರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದಲೇ ನಿಮ್ಮನರಿದೆ” ಎನ್ನುವ ಬಸವಣ್ಣನವರ ಮಾತು ಗಮನಿಸಿ. ಅರಿವು  ಸತ್ಯದ ದಾರಿಯಲ್ಲಿ ಮುಂದೆ ನಡೆಸುವ ಗುರು, ಆತ್ಮವಿಶ್ವಾಸ. ಸರಿ- ತಪ್ಪುಗಳನ್ನು ವಿವೇಚಿಸಿ, ಬೆಳಕಾಗಿ ನಿಲ್ಲುವ ಅಂತರ್ಗತ ಪ್ರಜ್ಞೆ. ಇದ್ದುದನ್ನು ಇದ್ದಂತೆ ಗ್ರಹಿಸಬಲ್ಲ ಸ್ಪಷ್ಟತೆ. ಶರಣರ ಪ್ರಕಾರ ಆಧ್ಯಾತ್ಮ ಎನ್ನುವುದು ಬದುಕನ್ನು ಅಗಲಿ ಇರುವಂಥದ್ದಲ್ಲ. ತರ್ಕಾತೀತವಾದ ಸತ್ಯಗಳಿಗೆ ಒಡ್ಡಿಕೊಂಡ ಆಧ್ಯಾತ್ಮದ ಹಾದಿ ಶರಣರದಾಗಿರಲಿಲ್ಲ. ಸಹಜ ಬದುಕಿನ ಸರಳತೆಯಲ್ಲೇ ಅತೀತ ಸತ್ಯವನ್ನು ಅವರು ತಮ್ಮ ಅನುಭವಕ್ಕೆ ದಕ್ಕಿಸಿಕೊಂಡರು. ಇದು ಅವರಿಗೆ ಸಾಧ್ಯವಾದದ್ದು ಅರಿವಿನಿಂದ. ಭಗವತ್ ಚಿಂತನೆ ಎಂದರೆ ಅದು ಮನಸ್ಸಿನ ಹೊರೆಯಲ್ಲ. ತರ್ಕ, ಸಿದ್ಧಾಂತ, ವಿಚಾರಗಳಲ್ಲಿ ಸಿಲುಕಿಕೊಂಡವ ಬದುಕನ್ನು ಸಂಭ್ರಮಿಸಲಾರ. ಒತ್ತಡಗಳಿಗೆ ಒಡ್ಡಿಕೊಳ್ಳುವ ಮನಸ್ಸಿಗೆ ಬೆಳಕು ಗೋಚರಿಸಲಾರದು. ದೇವ ಚಿಂತನೆಯ ಭಾರದಲ್ಲಿ ಕುಸಿದು ಹೋದವನಿಗೆ ಅರಿವು ಮರೀಚಿಕೆ.

ಜಗತ್ತನ್ನು ತಿಳಿದುಕೊಳ್ಳಲು ಜ್ಞಾನೇಂದ್ರಿಯಗಳಿವೆ. ಹಾಗೆ ಅರ್ಥ ಮಾಡಿಕೊಂಡದ್ದನ್ನು ವಿಶ್ಲೇಷಿಸುವ ಮನಸ್ಸಿದೆ, ಬುದ್ಧಿ ಸಾಮರ್ಥ್ಯ ಇದೆ, ತರ್ಕ ಜ್ಞಾನವಿದೆ, ವಿವೇಚನಾ ಶಕ್ತಿ ಇದೆ.  ಜ್ಞಾನದ ಅಳತೆಗೆ ಅಂದರೆ ಬುದ್ಧಿಗೆ ನಿಲುಕುವ ಎಲ್ಲವನ್ನೂ ಅರಿಯಬಹುದು. ಆದರೆ ಕಾಲ- ದೇಶ-ಗುಣ-ಕ್ರಿಯೆ-ರೂಪುಗಳ ಪರಿಧಿಯಲ್ಲಿ ಸಿಗದೇ ಇರುವ ಅರಿವಿನ ಮರ್ಮವರಿಯುವುದು ಸುಲಭವಲ್ಲ. ತನ್ನ ಎದುರಿನ ಬಾಹ್ಯ ಜಗತ್ತೆಲ್ಲವನ್ನೂ ಅರಿಯುವ ಅರಿವು ತನ್ನ ಮರೆಯಲ್ಲಿರುವುದನ್ನು ಸುಲಭವಾಗಿ ಅರಿಯಲಾರದು. ಅದಕ್ಕಾಗಿ “ಅರಿವು ಸಾಮಾನ್ಯವೇ?”- ಎಂದು ಪ್ರಶ್ನಿಸುತ್ತಾರೆ ಅಲ್ಲಮರು.

ನನ್ನನ್ನು ನಾನರಿತೆ, ನನ್ನನ್ನು ನಾನರಿವೆ- ಎನ್ನುವ ಮಾತುಗಳೇ ಅಭಾಸ. ಏಕೆಂದರೆ ಇಲ್ಲಿ ನಾನು ಮತ್ತು ಅರಿವು ಎರಡೂ ಭಿನ್ನ ಸಂಗತಿಗಳಲ್ಲ, ಇಂಥ ಭಿನ್ನತೆಯು ಮಾಯೆ ಎಂಬುದು ಅಲ್ಲಮರ ಮಾತು. ಇದಕ್ಕೆ ಕಾರಣ ನಮ್ಮೊಳಗಿನ ಅಜ್ಞಾನ. “ತಮ್ಮ ಹಾದಿಯ ತಾವರಿಯದವರು ತಾವಿನ್ನಾರಿಗೆ ಹಾದಿ ತೋರುವರಯ್ಯಾ?” ಎಂಬುದು ಶರಣರ ಪ್ರಶ್ನೆ.

ಮಾಯಾ ಮಲಿನ ಮನದಿಂದಗಲದೆ
ಕಾಯದ ದಂದುಗ ಕಳೆಯಿಂದಗಲದೆ
ಅರಿವು ಬರಿದೆ ಬಪ್ಪುದೆ?
ವ್ಯಾಮೋಹದ ಮಾಯಾ ಮಾಲಿನ್ಯವು ದೂರ ಸರಿಯದೆ , ದಂದುಗ ಎಂದರೆ ಚಿಂತೆ-ಭ್ರಾಂತಿ, ವ್ಯಸನ, ವ್ಯಥೆಗಳು… ದೇಹಕ್ಕಂಟಿದ ಈ ಕ್ಲೇಶಗಳನ್ನು ಕಳೆದುಕೊಳ್ಳಬೇಕು. ಇವು ದೂರವಾಗದೆ ಅರಿವು ಸಾಧ್ಯವಿಲ್ಲ.

ನಾನು ಎಂಬುದು ಕೇವಲ ದೇಹಕ್ಕೆ ಸೀಮಿತವೇ?- ಈ ಪ್ರಶ್ನೆ ಪ್ರಜ್ಞೆಯಲ್ಲಿ ವಿಸ್ತಾರಗೊಂಡು ಅರಿವಿನಲ್ಲಿ ಉತ್ತರ ಪಡೆಯುತ್ತದೆ. ದೇಹಕ್ಕೆ ನೋವಿದೆ, ಮುಪ್ಪಿದೆ, ರೋಗವಿದೆ, ಸಾವಿದೆ, ಅಂದರೆ ಇಂತಿಷ್ಟು ವರ್ಷಗಳ ಕಾಲಮಿತಿ ಇದೆ. ದೇಹ ಮತ್ತು ಮನಸ್ಸುಗಳಲ್ಲಿ ಮರವು ಹರಡಿಕೊಂಡಿದ್ದರೆ ಅರಿವು ಎಲ್ಲಿರುತ್ತದೆ? ಆ ಮರೆವು ಮಾಯೆಯ ರೂಪದಲ್ಲಿ, ನಾನು, ನನ್ನದು ಎನ್ನುವ ಅಹಂ ರೂಪದಲ್ಲಿ ದೇಹ-ಮನಸ್ಸುಗಳನ್ನು ವ್ಯಾಪಿಸಿಕೊಂಡಿರುತ್ತದೆ.

ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?
ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ?
ನಾನರಿದೆನೆಂಬಾತ ಇದಿರ ಕೇಳಲುಂಟೆ ?
ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು
ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ?

ಅಜ್ಞಾನಿಯಾದವನಿಗೆ ಅರಿವು ಇರುವುದಿಲ್ಲ, ಸುಜ್ಞಾನಿಗೆ ಮರೆಹು ಇರುವುದಿಲ್ಲ. ಇವರಿಬ್ಬರ ಹೊರತಾಗಿ ಮತ್ತೊಂದು ಬಗೆಯ ಜನರು ಇರುತ್ತಾರೆ. ಅವರು “ನಾನು ಅರಿತವ” ಎಂದು ಭಾವಿಸಿದವರು. ಅವರದು ನಿಜ ಜ್ಞಾನವಲ್ಲ. ಭ್ರಾಂತಿ- ಭ್ರಮೆಗಳಲ್ಲಿ ಮುಳುಗಿದವರು. ಅನುಭಾವದ ಮಾತಿನ ಮಾಲೆಯನ್ನೇ ಪೋಣಿಸಬಲ್ಲವರು. ತನ್ನನ್ನೇ ಶ್ರೇಷ್ಠನೆಂದು ಬಿಂಬಿಸಿಕೊಳ್ಳುವವರಲ್ಲಂತೂ ಅರಿವು ಹತ್ತಿರವೂ ಸುಳಿಯದು. ಢಾಂಬಿಕ ಮಾತುಗಳು, ಢಾಂಬಿಕ ಜನ ಈ ದಾರಿಗೆ ಬಲು ದೂರ. ಇಂಥವರು ಪಾಂಡಿತ್ಯದ ಅಹಂಕಾರಿಗಳು. ಲೋಕದ ಜಾಲದೊಳಗೆ ಬಂಧಿತರು.

ಅರಿದೆವರಿದೆವೆಂಬಿರಿ ಅರಿದ ಪರಿಯೆಂತು ಹೇಳಿರೆ? ಎಂದು ಅಂಥವರನ್ನು ಹಿಡಿದು ನಿಲ್ಲಿಸಿ ಪ್ರಶ್ನಿಸುತ್ತಾರೆ. ಏಕೆಂದರೆ  “ತನ್ನ ತಾನರಿದೆನೆಂಬುವನ ಮುನ್ನ ನುಂಗಿತ್ತು ಮಾಯೆ”

“ಅರಿಯಬಾರದ ಘನವನರಿತವರು ಅರಿಯದಂತಿಪ್ಪರು.”

ಅರಿವು- ಮರೆವುಗಳಿಗೆ ಆಶ್ರಯವಾಗಿರುವುದು ನಮ್ಮೊಳಗಿನ ಅಹಂ. ಅದು ಉಸಿರಾಡುತ್ತಿರುವ ತನಕ ನಾನು, ನೀನು, ಜಗತ್ತು… ಹೀಗೆ ಭಿನ್ನತೆಗಳು ಇರುತ್ತವೆ. ತಾನೇ ಅರಿವು ಎಂಬ ಅನುಭೂತಿ ಪಡೆಯದೇ ಭೇದ ಭಾವ ಹೋಗಲಾರದು. ಜೀವವೇ ಅರಿವಿನ ರೂಪ. ನಾನು ದೇಹ, ನಾನು ಮನಸ್ಸು ಎನ್ನುವಂಥವು ಜಡಭಾವನೆಗಳು. ಅಹಂ ಎಂಬ ಭ್ರಮೆ ಇಳಿದಾಗ ಮಾತ್ರವೇ ಈ ಜಡಭಾವನೆಗಳು ಇಲ್ಲವಾಗುವುದು.

ಆದರೆ ಒಣಜ್ಞಾನಿಗಳಿಗೆ ಬರಿಯ ಮಾತಿನ ತೆವಲು. ತಾವು ತಿಳಿದದ್ದೇ ಸತ್ಯವೆಂದು ಅಡಿಕೆಯನ್ನು ದವಡೆಯೊಳಗೆ ಹಾಕಿಕೊಂಡು ಅಗಿಯುವ ಚಟದಂತೆ ಮನಸೋ ಇಚ್ಛೆ ದೊಡ್ಡ ದೊಡ್ಡ ಅನುಭಾವದ ಮಾತುಗಳನ್ನು ಹೇಳುತ್ತಿರುತ್ತಾರೆ. ಆ ಚರ್ವಿತಚರ್ವಣದಂಥ ಮಾತಿನ ಅಮಲಿನಲ್ಲಿಯೇ ತೇಲುತ್ತಿರುತ್ತಾರೆ. ಇಂಥ ಆಷಾಢಭೂತಿ ಜನರಿಂದ ಜಗತ್ತು ದಾರಿ ತಪ್ಪುತ್ತಿದೆ. ಮಾತಿನ ವೀರರ  ಮುಂದೆ ಅರಿವು ಉಳಿದೀತೇ ಎಂದು ಆತಂಕದಿಂದ ಪ್ರಶ್ನಿಸುತ್ತಾರೆ ಮುಕ್ತಾಯಕ್ಕಾ.

ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು. 
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು. 
ನಾನೆಂತು ಬದುಕುವೆನಣ್ಣಾ?

ಅರಿವಿನ ಹಾದಿ ಹಿಡಿದು ಹೊರಟ ವ್ಯಕ್ತಿಯಲ್ಲಿ ಕ್ರಮೇಣ ಬದಲಾವಣೆಗಳನ್ನು ಕಾಣಬಹುದು. ಆಕೆ/ ಆತ ಅವಶ್ಯಕತೆಗಿಂತ ಹೆಚ್ಚು ಮಾತನಾಡಲಾರ. ಅನಗತ್ಯ ವಿಷಯಗಳನ್ನು ತಲೆಗೆ ಹಾಕಿಕೊಳ್ಳಲಾರ. ಅನ್ಯರೊಂದಿಗೆ ಮನಸ್ತಾಪ, ಸಿಟ್ಟು, ರೋಷ, ಕೋಪ, ಮತ್ಸರಗಳು ತಲೆದೋರುವುದಿಲ್ಲ. ಅರಿವು ಹೊಂದಲು ಕೆಲವು ಅರ್ಹತೆಗಳನ್ನು, ಯೋಗ್ಯತೆಗಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ.

ಈ ದೇಹ ಅರಿವಿನ ನೆಲೆ. ಅರಿವು ಎಂದರೆ ಅನುಭಾವ, ಅಮೃತಾನುಭೂತಿ. “ಇದು ಅರಿವು” ಎಂದು ಶರಣರು ವಚನಗಳಲ್ಲಿ ಬುತ್ತಿಯನ್ನಿಟ್ಟು ಕೊಡುವುದಿಲ್ಲ. ಬದಲಿಗೆ ಬದುಕನ್ನು ಅರಿಯುವುದಕ್ಕೆ ದಾರಿ ತೋರುತ್ತಾರೆ. ಹೇಗೆ ಬಾಳಬೇಕು ಎಂದು ಕಟ್ಟುಪಾಡುಗಳನ್ನು ಹಾಕದೇ ಪೂರ್ವಗ್ರಹಗಳ ಹೊರೆಯಿಲ್ಲದೆ ಜೀವಿಸುವುದು ಹೇಗೆಂದು ತೋರಿಸುತ್ತಾರೆ. ಅರಿವಿನ ಅನೇಕ ಆಯಾಮಗಳ ಬಗ್ಗೆ ಸವಿವರವಾಗಿ ದಾಖಲಿಸಿದವರು ಅರಿವಿನ ಮಾರಿತಂದೆ ಶರಣರು.

ಅರಿವು ಘಟದಲ್ಲಿ ನಿಂದು ನುಡಿವನ್ನಕ್ಕ
ಗುರುಲಿಂಗಜಂಗಮದ ಪೂಜೆಯ ಮಾಡಬೇಕು.
ನಾಮರೂಪು ಎಂಬನ್ನಕ್ಕ ಉಭಯವನರಿಯಬೇಕು.
ಸದಾಶಿವಮೂರ್ತಿಲಿಂಗವನರಿವುದಕ್ಕೆ.

ದೇಹಧಾರಿಯಾದ ಜೀವನು ಅರಿವು ಕುರಿತು ಮಾತನಾಡುವಾಗ ಗುರುಲಿಂಗಜಂಗಮ ಪೂಜೆ ಅಂದರೆ ಅರಿವು (ಇಲ್ಲಿ ಜ್ಞಾನ), ಆಚಾರ ಮತ್ತು ಅನುಭಾವಗಳ ಮರ್ಮವನ್ನು ಅರಿಯಬೇಕು. ಈ ದೇಹದ ಸ್ವರೂಪ ಜ್ಞಾನ ಪಡೆಯಲು ಅದರ ಬಾಹ್ಯ ಹೆಸರು ಮತ್ತು ರೂಪಗಳಾಚೆಯ ಸತ್ಯವನ್ನು ಶೋಧಿಸಬೇಕು. ಹಾಗೆ ನಡೆಸುವ ತನ್ನ ಹುಡುಕಾಟದಲ್ಲೇ ಸಮಷ್ಟಿ ಸ್ವರೂಪದ ಅರಿವೂ ಅಡಗಿದೆ.

ಅರಿವು ಎಂಬುದು ನಮ್ಮಿಂದ ಎಲ್ಲೋ ದೂರದಲ್ಲಿಲ್ಲ. ಎಲ್ಲಿಂದಲೋ ಇಳಿದು ಬರುವಂಥದ್ದೂ ಅಲ್ಲ, ಅಥವಾ ಹೊಸದಾಗಿ ಹುಟ್ಟುವಂಥದ್ದೂ ಅಲ್ಲ. ಅದು ಮನುಷ್ಯನಲ್ಲಿ ಹುಟ್ಟಿನಿಂದಲೇ ಬರುವಂಥದು. ಜೀವದೊಂದಿಗೇ ಇರುವಂಥದು.

ನಿಮ್ಮಲ್ಲಿ ನೀವು ತಿಳಿದು ನೋಡಿರೆ,
ಅನ್ಯವಿಲ್ಲ ಕಾಣಿರಣ್ಣಾ
ಅರಿವು ನಿಮ್ಮಲ್ಲಿಯೇ ತದ್ಗತವಾಗಿಯದೆ…

ಅರಿವು ಅನುಭಾವವಾಗಲು ವಿವೇಕ ದೃಷ್ಟಿ ಬೇಕು. ಎರಡು ಬಗೆಯ ಸತ್ಯಾನ್ವೇಷಕರನ್ನು ನೋಡಬಹುದು. ಮೊದಲ ವರ್ಗದವರು ಶಾಸ್ತ್ರಜ್ಞಾನದ ಸಹಾಯದಿಂದ ಸತ್ಯವನ್ನು ಅರಸಿ ನಡೆಯುವವರು. ಇವರು ಸೂಕ್ತ ಗುರು ಸಿಕ್ಕಾಗ, ಅವರ ಮಾರ್ಗದರ್ಶನದಲ್ಲಿ ಶಾಸ್ತ್ರಗಳನ್ನೆಲ್ಲಾ ಅಧ್ಯಯನ ಮಾಡಿ ಅವುಗಳನ್ನು ಕರತಲಾಮಲಕ ಮಾಡಿಕೊಳ್ಳುತ್ತಾರೆ. ಆದರೆ ವೈಯಕ್ತಿಕ ನೆಲೆಯಲ್ಲಿ ಅವರಿಗೆ ಅರಿವು ಸಾಧ್ಯವಾಗಿರುವುದಿಲ್ಲ. ಆಂತರ್ಯದಲ್ಲಿ ಕತ್ತಲೆಯಲ್ಲೇ ಉಳಿದಿರುತ್ತಾರೆ. ಇನ್ನೊಂದು ರೀತಿಯ ಜಿಜ್ಞಾಸುಗಳು ಇರುತ್ತಾರೆ. ಅವರು ಸತ್ಯವನ್ನು ನೇರವಾಗಿ ಮುಖಾಮುಖಿಯಾಗಲು ಬಯಸುತ್ತಾರೆ. ಇಂಥ ಜ್ಞಾನದಾಹಿಗಳನ್ನು ಶಬ್ದಗಳು ತಣಿಸಲಾರವು. ಅವರು ಶಾಸ್ತ್ರಾಧಾರಗಳನ್ನು ಅವಲಂಬಿಸದೆ ಅಂತರಂಗ ಪ್ರಾಮಾಣ್ಯದಲ್ಲಿ ಬದುಕನ್ನು ಅರಳಿಸಿಕೊಳ್ಳುತ್ತಾರೆ. ಅಂಥವರಲ್ಲಿ ಅರಿವಿನ ಬೆಳಕಿರುತ್ತದೆ. ಶರಣರು ಈ ವರ್ಗಕ್ಕೆ ಸೇರಿದವರು.

“ಯಾವುದನ್ನೇ ಆಗಲಿ ಅದನ್ನು ಅದರ ನಿಜಸ್ವರೂಪದಲ್ಲಿಯೇ ಅರಿವುದು ಜ್ಞಾನದ ಮುಖ್ಯ ಗುಣ” ಎನ್ನುತ್ತಾನೆ ಆರ್ನಾಲ್ಡ್. ಮನುಷ್ಯನ ಆಳದಲ್ಲಿ ಅಂಥದೊಂದು ಮಿಡಿತ ಇದ್ದೇ ಇರುತ್ತದೆ. ಆ ಮಿಡಿತ ನಮ್ಮ ಕಿವಿಗೆ ಕೇಳಿಸದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ. ಹಾಗೆ ನಮ್ಮ ಅಂತರಾಳದ ದನಿ ನಮ್ಮ ಕಿವಿ ಮುಟ್ಟಲು ಪೂರಕವಾಗುವ ಸನ್ನಿವೇಶಗಳನ್ನು ಜೀವನವೇ ತಂದುಕೊಡುತ್ತದೆ. ಅಂಥ ವಾತಾವರಣ, ಸಂದರ್ಭ ಸೃಷ್ಟಿಯಾಗದ ಹೊರತು ಮನಸ್ಸಿನ ಮಾತು ಕೇಳದೆ ಇರುವುದು ಸೋಜಿಗವೇ ಸರಿ. ಮನಸ್ಸು ಪೂರಕವಾಗಿ ನಿಲ್ಲದ ಹೊರತು ಮನುಷ್ಯ ಬದಲಾಗಲಾರ. ಒಳದನಿ ಕನವರಿಕೆಯಾಗಿ, ಕನವರಿಕೆ ಹಂಬಲವಾಗಿ, ಹಂಬಲ ಧ್ಯಾನವಾಗಿ, ತಪವಾಗಿ ಮುಂದುವರಿಯಬೇಕು. ಅಂಥ ಒಂದು ಧ್ಯಾನಸ್ಥ ಮನಸ್ಥಿತಿಯಲ್ಲಿ ಅರಿವು ಜಾಗೃತವಾಗುತ್ತದೆ. ಅದಕ್ಕಾಗಿ ಸಾಧನೆ ಬೇಕು.

ಅರಿದೆನೆಂಬುದು ತಾ ಬಯಲು.
ಅರಿದೆವರಿದೆವೆಂಬಿರಿ ಅರಿದ ಪರಿಯಂತು ಹೇಳಿರೆ?
ಅರಿದವರು ಅರಿದೆವೆಂಬರೆ?
ಅರಿಯಬಾರದ ಘನವನರಿದವರು
ಅರಿಯದಂತಿಪ್ಪರು ಗುಹೇಶ್ವರಾ.
ಅರಿತುಕೊಳ್ಳುವುದು ಒಂದು ಪ್ರಕ್ರಿಯೆ. ಆ ಸಾಧನಾ ಕ್ರಿಯೆ ಪೂರ್ತಿ ಆಗುವ ಹೊತ್ತಿಗೆ ಆ ಶಬ್ದವೇ ಮಾಯವಾಗಿರುತ್ತದೆ. ಅರಿತ ಬಳಿಕ ಅರಿತವನೂ ಇಲ್ಲ, ಅರುಹಿಸಿಕೊಂಡುದೂ ಇಲ್ಲ. ಅದು ನಿಮಗ್ನ ಸ್ಥಿತಿ.

ಗ್ರಂಥಗಳ ಮೂಲಕ, ಶಾಸ್ತ್ರಗಳ ಸಹಾಯದಿಂದ ಸತ್ಯವನ್ನು ಸಂಪಾದಿಸುತ್ತೇನೆನ್ನುವುದು ಆಗದ ಮಾತು. ಅದರಿಂದ ಬುದ್ಧಿ ದಣಿಯುತ್ತದೆ, ತರ್ಕ ಶಕ್ತಿಯು ದಾರಿ ಕಾಣದೆ ಕಂಗೆಟ್ಟು ನಿಲ್ಲುತ್ತದೆ. ಆಲೋಚನೆಗಳು ದಿಕ್ಕಾಪಾಲಾಗುತ್ತವೆ. ನಿಜವನರಿಯುವ ದಾರಿಯಲ್ಲಿ ಶಬ್ದಗಳಿಗೆ ಪ್ರವೇಶವಿಲ್ಲ! ನಾನು ಸತ್ಯ ಸ್ವರೂಪ ಎಂದು ಅರಿತ ಬಳಿಕ ಯಾರನ್ನು ನೆನೆಯುವುದು? ಯಾರನ್ನು ಪೂಜಿಸುವುದು? ಅದನ್ನೇ “ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ” ಎನ್ನುವುದು.

ತಮ್ಮ ಸಮಗ್ರ ವಿಸ್ತಾರದಲ್ಲಿ ವಚನಗಳು ತೋರಿಸುವ ದಾರ್ಶನಿಕ ಸತ್ಯ ಅನಂತವಾದುದು. ಅವುಗಳಲ್ಲಿ ಇಳಿದು ಬೆರೆತು ಹೋಗಿರುವ ಅಂತರಾರ್ಥ ನಿಗೂಢದ ಅಲೆಗಳನ್ನು ಎಬ್ಬಿಸುತ್ತಲೇ ಅರಿವಿನ ಜ್ಯೋತಿಯಾಗಿ ಮುನ್ನಡೆಸುತ್ತದೆ. ಬೆಲೆಕಟ್ಟಲಾಗದ ಅನುಭವ ನಮ್ಮೊಳಗೇ ಇದೆ. ಶಾಸ್ತ್ರಗಳ ಅಧ್ಯಯನದಲ್ಲಿ ಅದು ನಮಗೆ ದಕ್ಕಲಾರದು. ಗ್ರಂಥಗಳಿಂದ ಹೆಚ್ಚೆಂದರೆ ನಮಗೆ ಶಾಸ್ತ್ರಜ್ಞಾನ ಸಿಗಬಹುದು, ಅಷ್ಟೇ. ಈ ಮೇಲು ಓದಿನಿಂದ ಪಡೆದುಕೊಳ್ಳುವ ಜ್ಞಾನವು ಅರಿವು ಆಗಲಾರದು. ಅರಿವು ಮನುಷ್ಯನ ಒಳಬೆಳಕಿನ ಕಾಣ್ಕೆ. ಅನುಭವವೇದ್ಯವಾದ ಕಾಣ್ಕೆ. ಶರಣರದು ಅರಿವನ್ನು ಹಸ್ತಾಂತರಿಸುವ ಹಾದಿಯೇ ಹೊರತು ಅನುಯಾಯಿಗಳನ್ನು ಸೃಷ್ಟಿಸುತ್ತಾ ಹೋಗುವ ಪರಂಪರೆಯಲ್ಲ.

ವಚನಗಳು ಬುದ್ಧಿಗೆ ಸಂಬಂಧಿಸಿದವುಗಳಲ್ಲ. ಅವುಗಳನ್ನುಅರ್ಥಮಾಡಿಕೊಳ್ಳಲು ಪಾಂಡಿತ್ಯ ಬೇಕಾಗಿಲ್ಲ. ವಚನಗಳಿಗೆ ವಿದ್ವಾಂಸರು ಪುಟಗಟ್ಟಲೆ ವ್ಯಾಖ್ಯಾನ ಬರೆಯಬಹುದು. ಪ್ರವಚನಕಾರರು ತಿಂಗಳುಗಟ್ಟಲೆ ಮಾತಾಡಲು ಸಾಮಗ್ರಿ ಗಿಟ್ಟಿಸಿಕೊಳ್ಳಬಹುದು. ಪಂಡಿತರು, ಸ್ವಾಮಿಗಳು, ತತ್ವಜ್ಞಾನಿಗಳು, ಭಾಷಣಕಾರರು, ವಚನಗಳನ್ನು ಸುತ್ತುವರಿದು ತಮ್ಮತಮ್ಮ ಬುಟ್ಟಿಗೆ ಸರಕುಗಳನ್ನು ತುಂಬಿಕೊಳ್ಳಬಹುದು. ಆದರೆ ಅರಿವು ಕಣ್ತೆರೆದ ಅನುಭಾವಿಗಳು ಮಾತ್ರ ಅವುಗಳನ್ನು ಬದುಕಬಲ್ಲರು. ಆ ಅನುಭಾವ ಪಾಕದಲ್ಲಿ ತಮ್ಮ ಅನುಭಾವವನ್ನು ಬೆರೆಸಬಲ್ಲರು.

Previous post ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
Next post ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ

Related Posts

ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
Share:
Articles

ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ

May 1, 2019 ಪದ್ಮಾಲಯ ನಾಗರಾಜ್
ಇಂದಿಗೂ ನಮ್ಮ ದೇಶದಲ್ಲಿ ಪ್ರಚಲಿತವಿರುವ ಸಾಮಾಜಿಕತೆ, ಆರ್ಥಿಕತೆ ಹಾಗೂ ರಾಜಕೀಯ ವಿದ್ಯಮಾನಗಳನ್ನು ಮತನಿಷ್ಠ (ಅಥವಾ ಧರ್ಮನಿಷ್ಠ) ಮೂಲಭೂತವಾದದ ಸಾಂಸ್ಕೃತಿಕ ಧೋರಣೆಗಳೇ...
ಅಲ್ಲಮಪ್ರಭು ಮತ್ತು ಮಾಯೆ
Share:
Articles

ಅಲ್ಲಮಪ್ರಭು ಮತ್ತು ಮಾಯೆ

January 7, 2022 ಡಾ. ಎನ್.ಜಿ ಮಹಾದೇವಪ್ಪ
ಅಲ್ಲಮಪ್ರಭು ತನ್ನ ವಚನಗಳಲ್ಲಿ ಮಾಯೆ ಎಂಬ ಪದವನ್ನು ಆಗಾಗ್ಗೆ ಬಳಸುತ್ತಾರೆ ಎಂಬುದು ಅವರ ವಚನಗಳನ್ನು ಓದಿದವರಿಗೆಲ್ಲಾ ಗೊತ್ತು. ಇದು ಕೆಲವರನ್ನು ‘ಅಲ್ಲಮ ಒಬ್ಬ ಶಂಕರಾಚಾರ್ಯರಂಥ...

Comments 6

  1. Jagannatha Patil
    Aug 7, 2018 Reply

    i read it twice, an eye opener article

  2. yaragunti.r.b
    Aug 12, 2018 Reply

    ಮತ್ತೊಮ್ಮೆ ಮತ್ತೊಮ್ಮೆ ಓದಿಸಿಕೊಂಡು, ಅರ್ಥಮಾಡಿಕೊಂಡು ಜೀರ್ಣಿಸಿಕೊಳ್ಳಬೇಕಾದ ಲೇಖನ. ತುಂಬಾ ಹಿಡಿಸಿತು.

  3. channamma javali
    Aug 13, 2018 Reply

    ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?
    ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ?
    ವಚನದಲ್ಲಿ ಅರಿವಿನ ಪರಿಮಳವಿದೆ. ಶರಣರ ಮಾತುಮಾತುಗಳೆಲ್ಲ ಅರಿವಿನ ಕಿಡಿಗಳು. ಸುಂದರ ಬರಹ.

  4. ಡಾ.ಪಂಚಾಕ್ಷರಿ ಹಳೇಬೀಡು
    Aug 18, 2018 Reply

    ಅರಿವೆಂದರೇನು, ಯಾವುದನ್ನು ಅರಿವುದು ಎಂದು ಬಹಳ ಅರ್ಥವತ್ತಾಗಿ ಅರುಹಿದ ಶರಣರಿಗೆ ಅನಂತ ಶರಣಾರ್ಥಿಗಳು

    • ಬಸವರಾಜ ಮುರಗೋಡ
      Oct 2, 2018 Reply

      ಲೇಖಕರ ವಿಳಾಸ ಪ್ರಕಟಿಸಿ

  5. Ravandur Shivakumar
    Sep 8, 2019 Reply

    ಅರಿವು ಬೆಳಸಿಕೊಳ್ಳಲು ಈ ಲೇಖನ ತುಂಬಾ ಸಹಕಾರಿಯಾಗಿದೆ .ಸರಳವಾಗಿ ವಿವರಿಸಿದ್ದೀರಾ .ತುಂಬಾ ಧನ್ಯವಾದಗಳು .

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಗುರುಪಥ
ಗುರುಪಥ
January 4, 2020
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
Copyright © 2023 Bayalu