Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
Share:
Articles May 1, 2019 ಪದ್ಮಾಲಯ ನಾಗರಾಜ್

ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ

ಇಂದಿಗೂ ನಮ್ಮ ದೇಶದಲ್ಲಿ ಪ್ರಚಲಿತವಿರುವ ಸಾಮಾಜಿಕತೆ, ಆರ್ಥಿಕತೆ ಹಾಗೂ ರಾಜಕೀಯ ವಿದ್ಯಮಾನಗಳನ್ನು ಮತನಿಷ್ಠ (ಅಥವಾ ಧರ್ಮನಿಷ್ಠ) ಮೂಲಭೂತವಾದದ ಸಾಂಸ್ಕೃತಿಕ ಧೋರಣೆಗಳೇ ತೀರ್ಮಾನಿಸುತ್ತಲಿರುತ್ತವೆ. ಇದರ ಕಾರಣಗಳು ಸುಸ್ಪಷ್ಟವಾಗಿಯೇ ಇವೆ. ಗತಕಾಲದಿಂದ ಇಲ್ಲಿಯ ತನಕ ಜನಸಾಮಾನ್ಯರ ಆಲೋಚನೆ / ಮಾತು / ನಂಬಿಕೆ / ತಿಳುವಳಿಕೆಗಳ ಮೇಲೆ ಅಧಿಕಾರ ಲೋಲುಪ ಮತೀಯತೆಗಳು ಅಸಂಬದ್ಧ ವಿಷಯಗಳನ್ನು ಬಲತ್ಕಾರವಾಗಿ ನಂಬಿಸಿ ಗೆದ್ದ ದಬ್ಬಾಳಿಕೆ ಅದು. ಈ ದೀರ್ಘಕಾಲೀನ ದಾಳಿ ಮನುಷ್ಯನನ್ನು ಸ್ವತಂತ್ರವಾಗಿ ಚಿಂತಿಸಲೂ ಬಿಡಲಿಲ್ಲ. ಹೇಗೆಂದರೆ, ರಿಲೀಜಿಯನ್ ಮೆಕಾನಿಸಂ ಮೂಲಕ ಮನುಷ್ಯನೊಳಗೆ ಇರಬಹುದಾದ ವಸ್ತುಸ್ಥಿತಿಯ ಪ್ರಜ್ಞೆಯನ್ನು ಕಳೆದುಕೊಳ್ಳುವಂತೆ ಮಾಡಿ ಕೇವಲ ಬುದ್ಧಿಮತ್ತೆ ಹಾಗೂ ಭ್ರಮೆಗಳ ಅಡಿಯಾಳಾಗಿಸಿದ್ದು ಮತೀಯತೆಗಳ ಸಾಂಸ್ಕೃತಿಕ ಕುಚೋದ್ಯ. ಮತೀಯತೆ ಸೃಷ್ಟಿಸಿದ ಮನೋಸಂರಚನೆಗಳು ಪರಂಪರಾನುಗತವಾಗಿ ಮನುಷ್ಯನಿಂದ ಮನುಷ್ಯನಿಗೆ ವರ್ಗಾಯಿಸಲ್ಪಡುವುದರಿಂದಾದ ಊಳಿಗವು ವರ್ತಮಾನದ ಜನಸಮುದಾಯಗಳ ಲೋಕಗ್ರಹಿಕೆಗಳಲ್ಲಿ ಶ್ರೇಷ್ಠತೆಯ ಹಂಬಲವಾಗಿ ಕೆನೆಗಟ್ಟಿ ಕಾರ್ಯಶೀಲವಾಗಿರುತ್ತದೆ. ಆದ್ದರಿಂದ ಮತಾಂಧತೆಯ ಬಹುದೊಡ್ಡ ದುಷ್ಪರಿಣಾಮವೆಂದರೆ ಶ್ರೇಷ್ಠತೆಯ ಹಂಬಲಕ್ಕಾಗಿ ಸದಾ ತುಡಿಯುತ್ತಿರುವುದರಲ್ಲಿದೆ. ಈ ಹಂಬಲ ಅವರವರ ವ್ಯಾಪ್ತಿಗನುಸಾರವಾಗಿ ಒಂದು ಪ್ರತ್ಯೇಕತೆಯ (separatism) ಅಮಲನ್ನು ನಿರ್ಮಿಸಿಕೊಂಡು ಲೋಕದೆದುರಿಗೆ ತನ್ನನ್ನು ‘ವಿಶಿಷ್ಠ’ ಎಂದು ಪರಿಭ್ರಮಿಸುತ್ತಿರುತ್ತದೆ. ಇಲ್ಲಿಂದಲೇ ಅಸಂಖ್ಯಾತ ವೈರುಧ್ಯಗಳು ಹಾಗೂ ಅಸಮಾನತೆಗಳು (well furnished ideological structures) ಮತ್ತಿವುಗಳಿಂದ ಉದ್ಭವಿಸುವ ಅಗಣಿತ ಶೋಷಣೆಗಳು ನಿರಂತರವಾಗಿ ಜೀವಪಡೆಯುತ್ತಾ ಹೋಗುತ್ತವೆ. ಇದರಿಂದ ಸಮಾಜದೊಳಗೆ ಮಾನವ ಘನತೆಯನ್ನು ಮಾನವನೇ ಉಲ್ಲಂಘಿಸಲ್ಪಡುವ ವಿಪರೀತಕ್ಕೆಡೆಮಾಡಿ, ಸಮುದಾಯಿಕವಾಗಿ ಒಬ್ಬರನ್ನೊಬ್ಬರು ನೆಚ್ಚಿ ಸಹಬಾಳ್ವೆಗಾಗಿ ಸಹಕರಿಸಿಕೊಳ್ಳುವುದರ ಬದಲು ಒಬ್ಬರಿಗೊಬ್ಬರು ಕಂಟಕವಾಗಿ ಬಿಡುತ್ತಾರೆ. ಆಗ ವಂಚನೆ, ಮೋಸ, ಹಿಂಸೆ, ದಗಾಕೋರತನಗಳು ಸಹಜವೆಂಬಂತಾಗಿ ಬಿಡುತ್ತವೆ. ಒಬ್ಬರನ್ನೊಬ್ಬರು ಆಶ್ರಯಿಸಿ ತಮ್ಮತಮ್ಮ ಸಾಮರ್ಥ್ಯ ಕೌಶಲ್ಯಗಳನ್ನು ಹಂಚಿಕೊಂಡು ಪ್ರಶಾಂತವಾಗಿರಬೇಕಾದವರು ಸ್ವಹಿತಾಸಕ್ತಿಗಳ ಸಂಘರ್ಷಕ್ಕೆ ಗುರಿಯಾಗಿ ಒಬ್ಬರಿಗೊಬ್ಬರು ಅನುಮಾನಗ್ರಸ್ತರಾಗಿ ಅಸಹನೆಗಳು ಮಡುಗಟ್ಟುತ್ತವೆ. ಆಗ ಉಳಿಯುವುದೊಂದೇ ದಾರಿ, ಒಬ್ಬರನ್ನೊಬ್ಬರು ಆಳಿಕೊಳ್ಳುವ ಪ್ರವೃತ್ತಿ! ಇದರಿಂದ ಒಬ್ಬರನ್ನೊಬ್ಬರು ಅರಿಯಬೇಕಾದವರು ಸ್ವಾರ್ಥಿಗಳಾಗುತ್ತಾರೆ. ಹೀಗೆ… ನಿರಾತಂಕವಾದ ನಿರಮ್ಮಳ ಸಮೂಹವನ್ನು ಕಟ್ಟಬೇಕಾಗಿದ್ದರೂ, ಈ ಸಮಾಜವನ್ನು ದುಃಖವನ್ನು ಉತ್ಪಾದಿಸುತ್ತಲೇ ಇರುವ ಮಹಾಪಾತಕಗಳ ಸಂತೆಯನ್ನಾಗಿ ಮಾರ್ಪಡಿಸುವುದಕ್ಕೆ ತನ್ನ ಪಾಲೂ ಇದೆಯೆಂಬ ಸಣ್ಣ ಊಹೆಯೂ ಹೊಳೆಯದಷ್ಟು ಜನ ದುರ್ಬಲರಾಗುತ್ತಾರೆ. ಆಗ ಅವರ ಬದುಕು ಕೇವಲ ತನ್ನ ಸ್ವಯಂ ಹಿತಕ್ಕಾಗಿಯಷ್ಟೇ ಆಡುವ ಕ್ರೀಡೆ ಮಾತ್ರ ಎಂಬ ಹಂತಕ್ಕೆ ತಲುಪುತ್ತಾರೆ. ತನ್ನ ಆತ್ಮಗೌರವವನ್ನು ಒತ್ತೆಇಟ್ಟುಕೊಂಡು ತನ್ನನ್ನು ತಾನೇ ನಾಶಮಾಡಿಕೊಳ್ಳಲೇಬೇಕಾದ ಆವಸ್ಥೆ ಇದು. ಇಂತಹ ಸಂದರ್ಭಗಳನ್ನು ಅತ್ಯಂತ ಜಾಣ್ಮೆಯಿಂದ ದುರುಪಯೋಗ ಪಡಿಸಿಕೊಳ್ಳುವ ಅಧಿಕಾರ ಕೇಂದ್ರಗಳು ಮನುಷ್ಯನ ನೆತ್ತಿಯ ಮೇಲೆ ಪಾಪಭೀತಿ, ವಿಧಿಬರಹ, ದುರಾದೃಷ್ಟ, ಅದೃಷ್ಟ, ಅಕಾಲಮರಣ, ಜನ್ಮನಕ್ಷತ್ರ ಇತ್ಯಾದಿ ಭಯಗ್ರಸ್ತ ಭಾರಗಳನ್ನಿಟ್ಟು, ಎಲ್ಲವೂ ಭಗವತ್‍ಲೀಲೆ ಎಂದು ಬಿಂಬಿಸಿಬಿಡುತ್ತವೆ.

ಮಾನವ ಸ್ವಭಾವವನ್ನು ಕೆರಳಿಸಿ ಭಾವನಾತ್ಮಕ ವಿಷಯಗಳನ್ನೇ ವಿಮುಕ್ತಿ ಎಂದು ವಂಚಿಸಿ ನಿಜವಿಮುಕ್ತಿಯನ್ನೇ ಮನುಷ್ಯನಿಗೆ ಎಟುಕದಂತೆ ಮಾಡಿದ ಚಾರಿತ್ರಿಕ ನಯವಂಚಕತನಗಳ ಮೇಲೆ ಅತ್ಯಂತ ಬಲವಾದ ವೈಚಾರಿಕ ಬಂಡಾಯವಿತ್ತು, ಮಾನವ ಕುಲದ ಸರ್ವತೋಮುಖ ಏಳಿಗೆಗೆ ತಮ್ಮನ್ನು ಅರ್ಪಿಸಿಕೊಂಡು, ಮಾವನ ನಿರ್ಮಿತ ಹುಸಿ ಕೇಡುಗಳಿಂದ ಜನರನ್ನು ಬಿಡುಗಡೆಗೊಳಿಸಲು ಅದೆಷ್ಟೊ ಹೃದಯವಂತ ಮಾರ್ಗದಾತರು ಈ ನೆಲದಲ್ಲಿ ಬಂದುಹೋಗಿದ್ದಾರೆ. ಇಂತಹವರಲ್ಲಿ ಕ್ರಿ.ಪೂ. ಎರಡನೇ ಶತಮಾನದಿಂದ ಕ್ರಿ.ಶ. 10ನೇ ಶತಮಾನದವರೆಗೂ ಬಾಳಿದ ಬೌದ್ಧಸಿದ್ಧರು, ಹನ್ನೆರಡನೆಯ ಶತಮಾನದ ವಚನಕಾರರು ಹಾಗೂ 18ನೇ ಶತಮಾನದಿಂದ ತೀರಾ ಇತ್ತೀಚಿನವರೆಗೂ ಕಾಣಸಿಗುವ ತತ್ತ್ವಪದಕಾರರು ಮುಖ್ಯರಾಗುತ್ತಾರೆ. ಭಾರತದ ಹೆಮ್ಮೆಯ ಸಾಂಸ್ಕೃತಿಕ ಚರಿತ್ರೆ ಇರುವುದೇ ಇಲ್ಲಿ.

ನಮ್ಮ ಕನ್ನಡನೆಲದಲ್ಲಿ ಅಲ್ಲಮ ಪ್ರಭುಗಳು ಹಾಗೂ ಜಗಜ್ಯೋತಿ ಬಸವಣ್ಣನವರಿಂದ ರೂಪುಗೊಂಡ ‘ಅನುಭವ ಮಂಟಪ’ ಮಾನವ ಇತಿಹಾಸದಲ್ಲೇ ಅತ್ಯಪರೂಪದ್ದು. ಸರ್ವರಲ್ಲೂ ಇರಬಹುದಾದ ಮಾನವ ಘನತೆಯು ಅಪಾತ್ರಕ್ಕೊಳಗಾಗದಂತೆ ಮಾನ್ಯಮಾಡುವ ಸಮಾಜವನ್ನು ಪುನರ್ರೂಪಿಸುವುದು ಇದರ ಗುರಿಯಾಗಿತ್ತು. ದಯಾಮೈತ್ರಿ ಅಂತಃಕರಣಗಳಿಂದ ಸಮೃದ್ಧಗೊಂಡ ಮಾನವೀಯ ಅಂತಃಸತ್ವವನ್ನು ಬೆಳಗಿಸುವ ಪ್ರಜಾಸತ್ತಾತ್ಮಕ ಆದರ್ಶ ಸಮಾಜದ ವಿಶಿಷ್ಟ ಮಾದರಿಯೇ ಈ ಅನುಭವ ಮಂಟಪ!

ಇಂದಿನ ಜಾಗತಿಕ ಪ್ರಪಂಚದಲ್ಲಿ terms and conditionಗಳ ಗೂಟಕ್ಕೆ ಬಿಗಿದುಕೊಂಡಿರುವ ಕುಟುಂಬಗಳೂ ಒಂದು ಸಮುದಾಯವಾಗಿ ಉಳಿದಿಲ್ಲವೆಂಬುದು ದುರಂತದ ಸಂಗತಿ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಅಧಿಕಾರ ಗದ್ದುಗೆಗಳು ಮನುಷ್ಯ ಮನುಷ್ಯರ ಮಧ್ಯೆ ಕಂದಕಗಳನ್ನು ಸೃಷ್ಟಿಸಿ ಒಬ್ಬರನ್ನೊಬ್ಬರು ಒಳಗೊಳ್ಳದಂತೆ ಹೇಗೆ ವಿಘಟಿಸುತ್ತಿವೆ ಎಂಬುದು ಅನಾವರಣಗೊಳ್ಳುತ್ತಾ ಸಾಗುತ್ತದೆ. ದಿಕ್ಕೆಟ್ಟು ವಿಘಟನೆಯ ಜಾಡ್ಯಕ್ಕೆ ಗುರಿಯಾಗಿರುವ ಈ ಸಮಾಜಕ್ಕೆ ಅನುಭವ ಮಂಟಪದಲ್ಲಿನ ಸಾಮರಸ್ಯ ಎಂದೆಂದಿಗೂ ಮದ್ದಾಗಬಲ್ಲದು.

ಸಂಪ್ರದಾಯಗಳು ಸೃಷ್ಟಿಸಿದ ಎಲ್ಲಾ ಬಗೆಯ ಅಸಡ್ಡೆಗಳನ್ನು ಧಿಕ್ಕರಿಸಿ ಬೆಸಗೊಂಡ ಅನುಭವ ಮಂಟಪದ ಜನಾಂಗೀಯ ಬೆಸುಗೆ ಫ್ರೆಂಚ್ ಮಹಾಕ್ರಾಂತಿಯಷ್ಟೆ ಮಹತ್ವದ್ದು. ಶರಣ ಸಾಹಿತ್ಯದ ಬಹುದೊಡ್ಡ ಹೆಗ್ಗಳಿಕೆಯೆಂದರೆ, ವಿಚ್ಛಿದ್ರವಾಗಿರುವ ಮಾತು ಮತ್ತು ಪ್ರಜ್ಞೆಗಿರುವ ತಾಯ್ಗರಳ ಸಂಬಂಧವನ್ನು ಮರುಪೂರಣಗೊಳಿಸಿ ಸಮಾಜದಲ್ಲಿ ಮನೋಪರಿವರ್ತನೆಗೆ ಪ್ರೇರಣೆ ನೀಡಿ ತನ್ಮೂಲಕ ಕ್ರಾಂತಿಯ ಹಾದಿ ತೆರೆದಿದ್ದರಲ್ಲಿದೆ.

ಅಲ್ಲಮ, ಬಸವಣ್ಣ, ಸಿದ್ಧರಾಮ, ಅಕ್ಕ, ಮೋಳಿಗೆ ಮಾರಯ್ಯ, ತುರುಗಾಹಿ ರಾಮಣ್ಣ, ಕೋಲ ಶಾಂತಯ್ಯ, ಅರಿವಿನ ಮಾರಿತಂದೆ, ಬಿಬ್ಬಿ ಬಾಚಯ್ಯ, ಮಧುವಯ್ಯ, ಆದಯ್ಯ, ಕದಿರೆ ರೆಮ್ಮವ್ವ, ಮಾದಾರ ಧೂಳಯ್ಯ, ವೀರಗೊಲ್ಲಾಳ, ಕಲಿಕೇತಯ್ಯ, ಅಮುಗಿದೇವಯ್ಯ, ಆಯ್ದಕ್ಕಿ ಲಕ್ಕವ್ವ ಮುಂತಾದ ಶರಣರು ಅಲ್ಲಿಯವರೆಗಿನ ಸಾಹಿತ್ಯಕ್ಕಿದ್ದ ಶಾಸ್ತ್ರೀಯ ವೃತ್ತ, ಕಂದ, ರಗಳೆ, ಛಂದೋಜ್ಞಾನವನ್ನು ನಿರಾಕರಿಸಿ ಸಹಜವಾದ ಅಂತರಾಳದಿಂದ ಚಿಮ್ಮುವ ಸ್ವತಂತ್ರ ನಿರ್ಮಲನುಡಿಯ ನಾದ ಉಕ್ಕಿಸಿ ಮಾತನ್ನು ಜೋತಿರ್ಲಿಂಗವಾಗಿಸಿದವರು.

ಬಹಳ ಖೇದದ ಸಂಗತಿಯೆಂದರೆ, ಪಟ್ಟಭದ್ರ ಹಿತಾಸಕ್ತಿಗಳು ವಚನ ಸಾಹಿತ್ಯಕ್ಕೆ ವೈದಿಕ ನೆಲೆಗಟ್ಟಿನಿಂದ ತೆಗೆದುಕೊಂಡ ಅರ್ಥ, ಟೀಕು ಹಾಗೂ ನಿರ್ದಿಷ್ಟಗೊಳಿಸಿದ ವಿವರಣೆಗಳನ್ನು ನೀಡತೊಡಗಿದ್ದು. ಇದರಿಂದ ತಾತ್ತ್ವಿಕ ವಿರೂಪವಾಗಿ, ಶರಣರನ್ನು ನೋಡುವ ನಮ್ಮ ಕಣ್ಣುಗಳು ಕುರುಡಾಗಿವೆ. ಇಂತಹ ಅಸಂಬದ್ಧ ನಿಲುವುಗಳು ವಚನಗಳನ್ನು ಧರ್ಮನಿಷ್ಠ ಭಕ್ತಿ ಚಳುವಳಿಯನ್ನಾಗಿಯೋ ಇಲ್ಲವೆ ಆಧ್ಯಾತ್ಮಿಕ ಸಿದ್ಧಾಂತಗಳನ್ನಾಗಿಯೋ ಇಲ್ಲ ಊಹಾತ್ಮಕ ಅನುಭಾವಗಳನ್ನಾಗಿಯೋ ಗ್ರಹಿಸುವ ಪರಿಪಾಠಕ್ಕೆ ಬೀಳಿಸಿ ವಚನಗಳ ಸತ್ಯಸಂಗತಿಗಳಲ್ಲಿದ್ದ ಮೂಲಸತ್ವಕ್ಕೆ ಭಂಗವನ್ನುಂಟು ಮಾಡಿದ್ದೇ ಹೆಚ್ಚು.

ವಚನ ಚಳುವಳಿಯು “ಭಕ್ತಿ ಚಳುವಳಿ” ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ. ಆದರೆ ಶರಣರ ಭಕ್ತಿಯನ್ನು ವೇದ ಪ್ರಣೀತ ಭಕ್ತಿಯನ್ನಾಗಿ ವ್ಯಾಖ್ಯಾನಿಸುವುದಾಗಲಿ, ಗ್ರಹಿಸುವುದಾಗಲಿ ಶರಣರಿಗೆ ಮಾಡುವ ದ್ರೋಹವಾಗುತ್ತದೆ. ಶರಣರಲ್ಲಿ ದೈವಿಕ ಪ್ರತಿಮೆಗಳಾಗಲಿ ಧೂಪದೀಪ, ನೈವೇದ್ಯ ಪ್ರದಕ್ಷಿಣೆ ನಮಸ್ಕಾರ ಭಜನೆ ವರಪ್ರಸಾದದಂತಹ ಕಡುಮೌಢ್ಯಕ್ಕೆ ಅವಕಾಶವಿಲ್ಲ. ಬದಲಾಗಿ ವೈದಿಕರ ಇಂತಹ ಆಚಾರ-ವಿಚಾರಗಳಿಗೆ ನಿಷ್ಠುರವಾಗಿಯೇ ಶರಣರು ಮುಖಾಮುಖಿಯಾಗಿದ್ದಾರೆ. ಅವರು ತಮ್ಮ ತಮ್ಮ ದೈವಗಳನ್ನು “ಇದೆ-ಇಲ್ಲ” ಎಂಬ ರಚನಾತ್ಮಕ ಕಲ್ಪನೆಗಳಿಗೆಟುಕದಂತೆ ನಿಗೂಢವಾಗಿಸಿ, ಮನುಷ್ಯನಲ್ಲಿರುವ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದಕ್ಕೆ ಹೆಚ್ಚು ಮಹತ್ವ ನೀಡಿದರು. ನಡೆ-ನುಡಿಗಳ ಮಧ್ಯೆ ಸಣ್ಣ ಅಂತರವೂ ಏರ್ಪಡದಂತೆ ನಿರಂತರ ಎಚ್ಚರದಲ್ಲಿರುವುದು ಅವರ ಭಕ್ತಿಯ ಮುಖ್ಯಲಕ್ಷಣ. ಭಕ್ತಿಯೆಂಬುದು ಶರಣರಿಗೆ ಒಂದು ಗತ್ಯಂತರವಿಲ್ಲದ ಹೃದಯಕೃಷಿ. ಅದು ಸಂಪೂರ್ಣವಾಗಿ ಅಂತರಂಗದಲ್ಲಿ ಬೇರನ್ನು ಮೂಡಿಸಿ ಬಹಿರಂಗ ಪ್ರಪಂಚದಲ್ಲಿ ಹೆಮ್ಮರವಾಗಿ ಚಿಗುರಬೇಕು.

ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು? ಫಲವೇನು?
ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ,
ಕೂಡಲಸಂಗನ ಶರಣರ ಮನನೊಂದಡೆ ಆನು ಬೆಂದೆನಯ್ಯಾ.

ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ
ತೆರಹಿಲ್ಲದ ಸಂಭಾಷಣೆ ಸುಖವು.
ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು,
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ
ಕೂಡಲಸಂಗಮದೇವಾ, ನಿಮ್ಮ ಶರಣಂಗೆ !  (ತೆರಹು- ಭೇದ, ವ್ಯತ್ಯಾಸ)

ಶರಣಭಕ್ತಿ ಬಯಲಿನಷ್ಟೇ ಸಹಜ, ಸುಂದರ. ಅದು ಅಸ್ತಿತ್ವದ ಅಹಂಕಾರದಲ್ಲಿ ಜಾರಿ ಬಿದ್ದು ಡಾಂಭಿಕವಾಗದು, ಸುಖಭೋಗಗಳೇ ಹಿರಿದೆನ್ನುವ ದೃಷ್ಟಿಗಳಿಗೆ ಪ್ರಭಾವಗೊಳ್ಳದು, ಸಂಕುಚಿತ ಗುಣಭಾವಗಳ ಪಾಲಾಗಿ ತನ್ನನ್ನು ಕಳೆದುಕೊಳ್ಳದು. ನಿಜಜೀವನದಲ್ಲಿ ಏನು ಲಭ್ಯವಿದೆಯೋ ಅದನ್ನೇ ಮಹಾಪ್ರಸಾದವೆಂದು ನಂಬಿ, ನಶ್ವರತೆಯ ಮಹಾಸತ್ಯವನ್ನು ಸದಾ ನೆನೆಯುತ್ತಾ, ಬಯಲನ್ನೇ ಬಿತ್ತಿ ಬಯಲನ್ನೇ ಬೆಳೆಯುವ ಬೆಡಗಾಗಲು ಜೀವನಪರ್ಯಂತ ದೃಢವಾಗಿರುವ ಸಹಜಸುಂದರ ವ್ರತವಾಗಿ ಶರಣಭಕ್ತಿ ಕಾಣತೊಡಗುತ್ತದೆ.

ಕಾಯಗುಣಂಗಳಳಿದು ಜೀವನ್ಮುಕ್ತನಾದ ಬಳಿಕ
ಸಮ್ಯಕ್ ಜ್ಞಾನವೆಂಬ ಶಾಂತವು ದೊರಕಿತ್ತು ನೋಡಾ
ಅಂತರಂಗ ಬಹಿರಂಗವೆಂಬುದನರಿಯರಾಗಿ
ದ್ವೈತಾ-ದ್ವೈತವ ನೀಕರಿಸಿ ನಿರ್ವಾಣ ನಿಷ್ಪತ್ತಿಯಾಗಿ
ಗುಹೇಶ್ವರ ನಿಮ್ಮಶರಣನನುಪಮಸುಖಿ.

ಅಲ್ಲಮಾದಿ ಶರಣರ ಶೈವ ಸಿದ್ಧಾಂತವು ಅಂದಿನಕಾಲಕ್ಕೆ ವಿಫುಲವಾಗಿದ್ದ ಬೌದ್ಧಮಾಧ್ಯಮಿಕರು, ನಾಥಸಿದ್ಧರು, ಅವಧೂತರು ಹಾಗೂ ಕಾಳಾಮುಖಾಚಾರ್ಯರ ಪ್ರಭಾವದಲ್ಲಿ ರೂಪುಗೊಂಡ ಪ್ರತಿಭೆ. ಹಾಗೆಂದ ಮಾತ್ರಕ್ಕೆ ಅಲ್ಲಮ ಅವರೆಲ್ಲರ ಸಿದ್ಧಾಂತಗಳನ್ನು ಅವು ಹೇಗಿದ್ದವೋ ಹಾಗೆ ಒಪ್ಪಿಕೊಳ್ಳುವ ಜಾಯಮಾನದವನಲ್ಲ. ಅವುಗಳೊಳಗಿದ್ದ ಅಂಕುಡೊಂಕು ಅತಿರೇಕಗಳನ್ನು ಕಟುವಾಗಿ ಅಲ್ಲಗಳೆಯುತ್ತಲೇ ಅವುಗಳೊಳಗಿದ್ದ ಮಾನವ ಪರ ನಿಲುವುಗಳನ್ನು ತೆಗೆದುಕೊಂಡು ಅಂದಿನ ಕಾಲಕ್ಕೆ ಜನಪರ್ಯಾಯ ಮಾರ್ಗವನ್ನಾಗಿ ಶೈವ ಪ್ರತಿಭೆಯನ್ನು ಕಟ್ಟಿದವನು.

ಮೇಲ್ಕಂಡ ವಚನದಲ್ಲಿ ‘ನಿಮ್ಮ ಶರಣನು ಅನುಪಮ ಸುಖಿ’ ಎಂಬ ವಾಕ್ಯ ಇಲ್ಲಿ ಅತ್ಯಂತ ಗಮನಾರ್ಹವಾದದ್ದು. ಈ ಅನುಪಮ ಸುಖಕ್ಕೆ ಸಮಾನವಾಗಿ ಶರಣ ಸಾಹಿತ್ಯದಲ್ಲಿ ಶಿವ, ಬಯಲು, ನಿರ್ವಾಣ, ಆಳನಿರಾಳ, ನಿರಾಳಕ್ಕೆ ನಿರಾಳ ಮುಂತಾದ ಶಬ್ಧಗಳನ್ನು ಸಂವಾದಿಯಾಗಿ ಬಳಸಿಕೊಂಡಿರುವುದು ಯಥೇಚ್ಛವಾಗಿ ಕಂಡುಬರುತ್ತದೆ.

ಅರಿವು ಅರಿದಲ್ಲದೆ ಲಿಂಗವೆಂಬ ರೂಪಿಲ್ಲ
ಅರಿವು ಅರಿದಲ್ಲದೆ ಜೀವಭಾವ ಹಿಂಗದು
ಅರಿವೆಂಬ ಸೂತಕ ಹೆರೆಹಿಂಗುವನ್ನಬರ
ನಾನೀನೆಂಬನ್ನಕ್ಕ ಒಡಲು,
ಅದೇನು ಕಾರಣ ಹೇಳಾ, ಕಾಮಧೂಮ ಧೂಳೇಶ್ವರಾ.

ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ,
ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು.
ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ.
ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ?
ಕಾಷ್ಟವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ್ಟಕ್ಕೆ,
ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ.
ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ.
ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ
ಕಾಮಧೂಮ ಧೂಳೇಶ್ವರ ತಾನೂ ತಾನೆ.

ಶರಣರ ಜೀವನ್ಮುಕ್ತತೆಯು ಆದಿದೈವಿಕ ಹಾಗೂ ಆದಿಭೌತಿಕಕ್ಕಾಗಲಿ ಅಥವಾ ವೇದಾಂತಗಳು ತರ್ಕಿಸುವ ಆತ್ಮ-ಪರಮಾತ್ಮನ ಸಂಯೋಗದಿಂದಾಗಿ ಸಾಕ್ಷಾತ್ಕರಿಸಿಕೊಳ್ಳಬಹುದೆನ್ನಲಾದ ‘ಆನಂದವಲ್ಲ’ ವೆಂಬುದು ಇಲ್ಲಿ ಸುಸ್ಪಷ್ಟವಾಗಿರುವ ಅಂಶ. ಇಂತಹ ವಿಚಾರಗಳು ಎದುರಾದಾಗಲೆಲ್ಲಾ ಶರಣರೆಲ್ಲರೂ ಒಂದೆಂಬಂತೆ “ಉಭಯ ಉಂಟೆಂಬ ದಂದುಗ ಬೇಡ” ಎಂದೇ ಘೋಷಿಸುತ್ತಾರೆ. ಆತ್ಮ-ಪರಮಾತ್ಮ ಸಂಬಂಧಿಯಾದ ಅನುಭಾವ, ಆನಂದಗಳನ್ನು ಬಹಳ ನಿಷ್ಠುರವಾಗಿ ನಿರಸನಗೊಳಿಸುವ ವಚನಗಳಿಗೆ ಶರಣಸಾಹಿತ್ಯದಲ್ಲಿ ವಿಶಿಷ್ಟ ಆದ್ಯತೆಯಿದೆ. ಅಲ್ಲಮನಂತೂ ಈ ಬಗೆಯ ಸಂಯೋಗ ಪರಿಕಲ್ಪನೆಯನ್ನು ಕಾಲ್ಪನಿಕವೆಂದೂ, ಪೊಳ್ಳು ಆಶೆಯೆಂದೂ ಜರಿದಿದ್ದಾನೆ. ಆದ್ದರಿಂದ ಅನುಪಮ ಸುಖವನ್ನು ಸಾಧಿಸಿಕೊಳ್ಳಬೇಕಾದ ಸಾಧಕನು ಆಗಮಿಸಂಚಿತ ಪ್ರಾರಬ್ಧವಾಗಿ ಶೇಖರಣೆಗೊಂಡಿರುವ ದ್ವೈತಾ-ದ್ವೈತವೆಂಬ ಶಠತ್ವವನ್ನು ನೀಕರಸಿಕೊಳ್ಳಲೇಬೇಕು. ಈ ಅಸಂಬದ್ಧತೆಯಿಂದಾಗಿಯೇ ಉಪನಿಷತ್ತುಗಳ ಮಹಾವಾಕ್ಯಗಳಿಗೋ ಅಥವಾ ಇವುಗಳಿಂದಾದ ಅನುಭಾವಕ್ಕೋ ಶರಣಸಾಹಿತ್ಯದ ಮೂಲಸತ್ವವನ್ನು ಅನ್ವಯಿಸಿಕೊಂಡು ಓದುವ ಓದುಗಳಿಗೆ ಶರಣರ ಮಹತ್ವದ ಸಾಧನಾ ಪ್ರಕ್ರಿಯೆಗಳಾಗಿರುವ ಅಷ್ಟಾವರಣ, ಪಂಚಾಚಾರ ಮತ್ತು ಷಟ್‍ಸ್ಥಲಗಳ ಕುರಿತಾದ ವಚನಗಳ ಯಾತಾರ್ಥತೆ ಸಿಗದಂತೆ ತಪ್ಪಿಸಿಕೊಂಡು ಸಂಕಿರ್ಣವಾಗಿಬಿಡುತ್ತದೆ. ಬೆಡಗಿನ ವಚನಗಳಿಗಂತೂ ಈ ಮಾತು ಇನ್ನಷ್ಟು ನಿಜ ಎನ್ನಬಹುದು. ಆದ್ದರಿಂದಾಗಿ ಶರಣಸಾಹಿತ್ಯವು ಮಹಾ ಅದ್ವೈತ, ಶಕ್ತಿ ಅದ್ವೈತ, ವಿಶಿಷ್ಟಾದ್ವೈತ, ಏಕಾದ್ವೈತ ಇತ್ಯಾದಿ ಪಾಂಥಿಕ ಆವರಣಗಳನ್ನು ದಾಟಿಕೊಳ್ಳುವ ವಿವೇಕವನ್ನೇ ಬಯಸುತ್ತದೆ. ಇಂತಹ ಭ್ರಮೆಗಳಿಂದ ನಿರ್ಗಮಿಸಿ ಕಲ್ಪನಾರಹಿತವಾದ ನೆಲಪ್ರಜ್ಞೆಗೆ ತಂದುನಿಲ್ಲಿಸಿ ಬದುಕಿನ ವಸ್ತುಸ್ಥಿತಿಯನ್ನು ಸ್ವಾಸ್ಥ್ಯ ಅರಿವಿನಿಂದ ತಿಳಿದುಕೊಳ್ಳಲು ವಚನಗಳು ಪ್ರೇರಣೆ ನೀಡುತ್ತವೆ.

ಅಕ್ಷರವ ಬಲ್ಲೆವೆಂದು
ಅಹಂಕಾರ ವೆಡೆಗೊಂಡು ಲೆಕ್ಕಗೊಳ್ಳರಯ್ಯಾ
ಗುರುಹಿರಿಯರು ತೋರಿದ ಉಪದೇಶದಿಂದ
ವಾಗಾದ್ವೈತವ ಕಲಿತು ವಾದಿಪರಲ್ಲದೆ
ಆಗು-ಹೋಗೆಂಬುದನರಿಯರು
ಭಕ್ತಿಯನರಿಯರು – ಯುಕ್ತಿಯನರಿಯರು – ಮುಕ್ತಿಯನರಿಯರು
ಮತ್ತೂ ವಾದಿಗೆಳಸುವರು
ಹೋದರು ಗುಹೇಶ್ವರ ! ಸೆಲೆಕೊಂಡ ಮಾರಿಂಗೆ!

ವಚನಗಳ ಕಾಲದಿಂದಲೂ ಶರಣಸಾಹಿತ್ಯವನ್ನು ಮತಸಿದ್ಧಾಂತಗಳ ಮೂಸೆಯಲ್ಲಿಟ್ಟು ಕರಗಿಸುತ್ತಲೇ ಇರುವ ಕೇಡು ನಮ್ಮಲ್ಲಿ ಇಂದಿಗೂ ಕ್ರಿಯಾಶೀಲವಾಗಿದೆ. ಮಾನವೀಯ ಅನುಕಂಪ ಮತ್ತು ಪರಿವರ್ತನೆಯ ಹಿರಿಮೆಗಳನ್ನು ನೆಚ್ಚಿಕೊಂಡಿರುವ ಸಹೃದಯರಿಗೆ ಇದು ತುಂಬಾ ನೋವಿನ ಸಂಗತಿಯಾಗಿದೆ. ಏಕೆಂದರೆ ಶರಣಸಾಹಿತ್ಯವು ಯಾವ ಮತವನ್ನೂ ಪುನರುತ್ಥಾನಗೊಳಿಸಲು ಹುಟ್ಟಿಕೊಂಡಿದ್ದಲ್ಲ. ಮನುಷ್ಯನಲ್ಲಿ ಸಾವಿರಾರು ವರ್ಷಗಳಿಂದಲೂ ವಿಕಾಸಗೊಂಡು ಮನುಷ್ಯಕುಲವನ್ನೇ ದುರ್ಬಲವಾಗಿಸುತ್ತಿರುವ ಹಿಂಸೆ, ದಬ್ಬಾಳಿಕೆ, ದೌರ್ಜನ್ಯ, ಅಮಿತಸುಖಾಪೇಕ್ಷೆ, ಶೋಷಣೆ, ಸಂಗ್ರಹಣೆ, ಸ್ವಾರ್ಥ, ದುರಹಂಕಾರ, ದುರಾಭಿಮಾನ, ಅವಿದ್ಯೆ, ಅಪಹಾಸ್ಯಗಳನ್ನು ನಿರ್ಮೂಲನೆ ಮಾಡದೆ ಪ್ರಶಾಂತ ಸಮಾಜವನ್ನು ರೂಪಿಸಲು ಸಾಧ್ಯವೇ ಇಲ್ಲ. ಒಂದು ಸ್ವಾಸ್ಥ್ಯ ಸಮಾಜವನ್ನು ಕಟ್ಟುವುದೆಂದರೆ ಮೊದಲು ವ್ಯಕ್ತಿಯಲ್ಲಿ ಲೋಕದ ಕುರಿತಾಗಿರುವ ತಪ್ಪುಗ್ರಹಿಕೆಗಳನ್ನು ಮನವರಿಕೆ ಮಾಡಿಕೊಡುವುದರಿಂದ ಅವನನ್ನು ಪರಿವರ್ತಿಸಬಹುದು. ಒಬ್ಬ ವ್ಯಕ್ತಿಯನ್ನು ಬದಲಾವಣೆ ಮಾಡಲು ಅನೇಕ ಉಪಾಯಗಳು (techniques) ಕೂಡ ಬೇಕಾಗುತ್ತವೆ. ‘ಉಪಾಯ’ ಎಂಬ ಶಬ್ಧಕ್ಕೆ ಪಾಲಿ ಮತ್ತು ಸಂಸ್ಕೃತದಲ್ಲಿ ‘ದಯೆ’ ಎಂಬ ವಿವರಣೆ ಇದೆ. ಅಷ್ಟಾವರಣ, ಪಂಚಾಚಾರ, ಷಟ್‍ಸ್ಥಲ ಇತ್ಯಾದಿಗಳು ಶರಣರು ಸೃಜಿಸಿದ ತಾಂತ್ರಿಕ ಉಪಾಯಗಳೇ ಆಗಿವೆ. ಶರಣರು ಇಂತಹ ಮಹತ್ವದ ಪ್ರಕ್ರಿಯೆಗಳನ್ನು ರೂಪಿಸಲು ಕಾರಣ ಅವರಿಗೆ ಈ ಸಮಾಜದಲ್ಲಿರುವ ಅಜ್ಞಾನದ ಕುರಿತು ಅಪಾರವಾದ ದಯೆ ಇತ್ತು. ಬಸವಣ್ಣನವರಂತೂ, ಇದನ್ನು ಗುರುಕಾರುಣ್ಯವೆಂದೇ ಕರೆದಿದ್ದಾರೆ. ಅವರು ಈ ಮಾರ್ಗದಲ್ಲಿ ತಾನು ಚಾಚೂ ತಪ್ಪದೇ ನಡೆದು ಉಳಿದವರಿಗೆ ಆ ಹಾದಿಯ ಬೆಡಗನ್ನು ಹಂಚಿ, ಜಗಜ್ಯೋತಿಯೆನಿಸಿಕೊಂಡರು.

ಅರಿವಿಂದ ಅರಿದು
ಏನುವ ತಟ್ಟದೇ ಮುಟ್ಟದೇ ಇದ್ದೆನಯ್ಯಾ
ಅಂತರಂಗ ಸನ್ನಿಹಿತ ಬಹಿರಂಗ
ನಿಶ್ಚಿಂತನಾಗಿ ಇದ್ದೆನಯ್ಯಾ
ಸ್ವಾತಿಯ ಬಿಂದುವ ಬಯಸುವ
ಚಿಪ್ಪಿನಂತೆ, ಗುರುಕಾರುಣ್ಯವ
ಬಯಸುತ್ತಿದ್ದೆ ಕೂಡಲಸಂಗಮದೇವಾ.

ಇಲ್ಲಿ ಬಸವಣ್ಣನವರ ‘ಕೂಡಲ ಸಂಗಮದೇವಾ’ ಎಂಬ ಸಾಲು ಮುಖ್ಯವಾದದ್ದು. ಎಲ್ಲಾ ಅವಿದ್ಯೆ ಅಥವಾ ದುಃಖೋತ್ಪನ್ನಗಳ ಕಾರ್ಯಕಾರಣ ಪರಿಣಾಮರೂಪಿ ಮನವೇ ಆ ಕೂಡಲಸಂಗಮ. ಕೂಡಲಸಂಗಮ ಕ್ಷೇತ್ರವಾಗಿರುವ ಮನಸ್ಸಿನಿಂದ ಮನಸ್ಸಿಗೆ ಶರಣಾಗಿ, ಚೇತನರೂಪಿಯಾಗಿರುವ ಆ ಮನದ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಉಪಾಯ ತಿಳಿದಿದ್ದರೆ ಅದು ನೀಡುವ ಫಲ ಅನಂತವಾದದ್ದು. ಆದಿಮಧ್ಯಂತ ರಹಿತವಾದದ್ದು. ಅರಿವಿನಿಂದಲೇ ಅರಿವಿನ ಕುರುಹಿಡಿದು ಪ್ರಜ್ಞೆಯ ಮೂಲಕ (ಎಚ್ಚರ) ಅಜ್ಞಾನಿ ರೂಪಿಣಿ ಮನವನ್ನು ಓಲೈಸಿಕೊಂಡು ಕಾರ್ಗತ್ತಲನ್ನು ನಿರೋಧಿಸಬಹುದು ಎಂಬ ಸಮ್ಯಕ್ ಜ್ಞಾನವೇ ಅವರ ಅನುಭಾವ. ಅವರ ಅನುಭಾವ ಹತಾಶೆಯ ತತ್ವಜ್ಞಾನವಲ್ಲ; ಊಹಾತ್ಮಕವೂ ಅಲ್ಲ. ಅದು ಲೋಕಾರ್ಥಪರ ವಿವೇಕ! ಅದನ್ನು ಅವರು ಗುರುಕಾರುಣ್ಯವೆಂದೂ ಒಪ್ಪುತ್ತಾರೆ.

ಕೊನೆಯದಾಗಿ, ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳು ಜೀವನಕೌಶಲ್ಯಗಳನ್ನಾಗಲಿ ನೈಜ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಎದಿರಾಗುವ ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಡದೆ ‘ನಿಷ್ಪ್ರಯೋಜಕ knowledgeನ್ನೇ ದೊಡ್ಡದೆಂದು ಬಿಂಬಿಸಿರುವುದರಿಂದ ಯುವಪೀಳಿಗೆ ಬದುಕನ್ನು ಎದಿರುಗೊಳ್ಳುವ/ ನಿಭಾಯಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿದೆ. ಒಮ್ಮೆ ಯುವ ಪೀಳಿಗೆಯ ಆತಂಕ ಮತ್ತು ತಲ್ಲಣಗಳನ್ನು ಗ್ರಹಿಸಿನೋಡಿದರೆ ಇದು ಇನ್ನೂ ಸ್ಪಷ್ಟವಾಗುತ್ತದೆ. ಈಗ ನಮಗಿರುವ ದಾರಿಯೆಂದರೆ ವಚನಕಾರರ ಮಾರ್ಗದಲ್ಲಿ ಒಂದೆರಡು ಹೆಜ್ಜೆ ಮೂಡಿಸಿ ಕುದಿಯುತ್ತಿರುವ ಮನವನ್ನು/ಸಮಾಜವನ್ನು ಪ್ರಶಾಂತಗೊಳಿಸಿ ಬದುಕಿನ ಮೌಲ್ಯವನ್ನು ಮರುಜೋಡಿಸುವುದು! ನಿಜವಾಗಲೂ ಇಂದಿನ ಯುವಜನತೆ ಒಂದು ಮಹತ್ತರ ಬದಲಾವಣೆಗಾಗಿ ತುಡಿಯುತ್ತಿದೆ. ವಚನಕಾರರ ಸಾಧಕ ಪ್ರಕ್ರಿಯೆಗಳನ್ನು ಮತ್ತೆ ಮುನ್ನೆಲೆಗೆ ತರುವುದಾದರೆ, ವಚನಗಳ ಪ್ರಸ್ತುತತೆ ಮೊದಲಿಗಿಂತಲೂ ಈಗ ಹೆಚ್ಚು ಜರೂರಾಗಿದೆ.

ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆ ಅರಿವೆ ಜಂಗಮವೆಂದು ತೋರಿದ
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ
ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ.

Previous post ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
Next post ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?

Related Posts

ಮನವೆಂಬ ಸರ್ಪ
Share:
Articles

ಮನವೆಂಬ ಸರ್ಪ

February 7, 2021 ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ? ತನುವಿನಲ್ಲಿ ಹುಸಿ ತುಂಬಿ,...
ಮನೆ ನೋಡಾ ಬಡವರು
Share:
Articles

ಮನೆ ನೋಡಾ ಬಡವರು

April 29, 2018 ಡಾ. ಶಶಿಕಾಂತ ಪಟ್ಟಣ
ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವಣ್ಣನವರ ಕಾಲಕ್ಕೆ ಆ ಊರಿನಲ್ಲಿ...

Comments 15

  1. Devaraj Patil
    May 2, 2019 Reply

    ಹೊಸ ವಿಚಾರಕ್ಕೆ ಹಚ್ಚುವ ಲೇಖನ, ಇನ್ನೂ ಎರಡು ಮೂರು ಸಲ ಓದಬೇಕು. ಅರ್ಥಮಾಡಿಕೊಳ್ಳುವುದು ತುಂಬಾ ಇದೆ.

  2. Harsha m patil
    May 6, 2019 Reply

    “ಶರಣರ ಭಕ್ತಿಯನ್ನು ವೇದ ಪ್ರಣೀತ ಭಕ್ತಿಯನ್ನಾಗಿ ವ್ಯಾಖ್ಯಾನಿಸುವುದಾಗಲಿ, ಗ್ರಹಿಸುವುದಾಗಲಿ ಶರಣರಿಗೆ ಮಾಡುವ ದ್ರೋಹವಾಗುತ್ತದೆ” ಯೋಚನೆಗೆ ಹಚ್ಚುವ ಲೇಖನ ಸರ್. ಇದರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ? ನಮ್ಮನ್ನು ನಾವು ಹುಡುಕಿಕೊಳ್ಳುವುದು ಈ ಗೊಂದಲದಲ್ಲಿ ಆದೀತೆ?

  3. Mahadevappa Jevargi
    May 6, 2019 Reply

    ವಿಭಿನ್ನ ಲೇಖನ ನನ್ನನ್ನ ಸೂಜಿಗಲ್ಲಿನಂತೆ ಸೆಳೆಯಿತು. ನಾವು ಹಾದಿ ತಪ್ಪಿದ್ದೇವೆ, ಶರಣರಿಗೆ ಮೋಸ ಮಾಡುತ್ತಿದ್ದೇವೆ. ವ್ಯವಸ್ಥೆಯ ವಂಚನೆಗಳು ಕಣ್ಣಿಗೆ ಕಾಣದೇ ಕುರಿಗಳಂತೆ ಬಲೆಗೆ ಬೀಳುತ್ತಲಿದ್ದೇವೆ. ಬಯಲು ನಮಗೆ ದಾರಿ ತೋರಿಸಲಿ.

  4. ಉಮೇಶ್ ಕುಂದಾಪುರ
    May 6, 2019 Reply

    ಅನುಭವ ಮಂಟಪದ ಬಗ್ಗೆ ಬಹಳ ಸಮಂಜಸ ಮಾತುಗಳನ್ನು ಬರೆದಿದ್ದೀರಿ. ಐತಿಹಾಸಿಕ ಅನುಭವ ಮಂಟಪದ ಬಗ್ಗೆ ಕನ್ನಡಿಗರಿಗೆ ಯಾವುದೇ ಅಭಿಮಾನವಿಲ್ಲ. ಅನೇಕರಿಗೆ ಅದರ ಬಗ್ಗೆ ಗೊತ್ತೇ ಇಲ್ಲ. ಶಾಲಾ ಕಾಲೇಜುಗಳಲ್ಲಿ ಇದರ ಮಾಹಿತಿ ಸಿಗುವುದಿಲ್ಲ. ಅಂತರ್ಜಾಲದಲ್ಲಿ ಇದರ ಮಹತ್ವ ತಿಳಿಸುವ ವಿವರಣೆ ಇಲ್ಲ. ಇದರ ಬಗ್ಗೆ ಯೋಚಿಸುವವರು, ಕ್ರಮಕೈಗೊಳ್ಳುವವರೂ ಯಾರೂ ಇಲ್ಲ. ಲಿಂಗಾಯತರಿಗೆ ಇದೆಲ್ಲ ಅರ್ಥವೂ ಆಗುವುದಿಲ್ಲ.

  5. ಡಾ. ಪಂಚಾಕ್ಷರಿ ಹಳೇಬೀಡು
    May 8, 2019 Reply

    ಶರಣ ಚಳುವಳಿ ಯಾವ ಹಳತನ್ನೂ ನವೀಕರಿಸುವ ಗೋಜಿಗೆ ಹೋಗದೆ ಸಂಪೂರ್ಣ ಹೊಸತನ್ನು ನೀಡಿದ ವಿಶ್ವ ವಿಶಾಲದ ಧರ್ಮ ಎಂದು ಸೊಗಸಾಗಿ ನಡುವೆ ನಿರೂಪಿಸಿದ್ದೀರಿ.

  6. Prabhavathi m
    May 8, 2019 Reply

    “ಶರಣಸಾಹಿತ್ಯವು ಮಹಾ ಅದ್ವೈತ, ಶಕ್ತಿ ಅದ್ವೈತ, ವಿಶಿಷ್ಟಾದ್ವೈತ, ಏಕಾದ್ವೈತ ಇತ್ಯಾದಿ ಪಾಂಥಿಕ ಆವರಣಗಳನ್ನು ದಾಟಿಕೊಳ್ಳುವ ವಿವೇಕವನ್ನೇ ಬಯಸುತ್ತದೆ” ಎಂದು ಬರೆದಿದ್ದೀರಿ. ಆದರೆ ಶರಣರದು ಶಕ್ತಿ ವಿಶಿಷ್ಟಾದ್ವೈತ ಎನ್ನುವುದು ಎಲ್ಲರೂ ಹೇಳುತ್ತಾರೆ. ಏಕದೇವೋಪಾಸನೆಯ ಧರ್ಮ ಇದೆಂದು ಎಲ್ಲ ಕಡೆ ಬರೆದಿದ್ದಾರೆ. ನಿಮ್ಮ ಮಾತು ಇದಕ್ಕೆ ವಿರುದ್ಧವಿದೆ. ಯಾವುದು ಸರಿ ಎಂದು ಗೊಂದಲವಾಗಿದೆ.

  7. jayakumar .K.S
    May 8, 2019 Reply

    ಪದ್ಮಾಲಯ ನಾಗರಾಜರವರಿಗೆ ನನ್ನ ವಿನಂತಿಯೆಂದರೆ ˌ ನಾನೂ ಮೊದಲು ನಿಮ್ಮಂತೆˌ ಟಿಬೇಟ್ ಬುದ್ದಿಸಂ ನಿಂದ ಪ್ರಾಭಾವಿತನಾಗಿ ˌ ವಚನಗಳನ್ನು ಓದಿದಾಗಲೆಲ್ಲ ˌಅದನ್ನು ಬೌದ್ದಿಸಂ ಕನ್ನಡಕದಲ್ಲಿ ನೋಡಿ ˌ ಅದರ ನೆಲೆಗಟ್ಟಲ್ಲೆ ಅರ್ಥಮಾಡಿಕೊಂಡು ಹಿಗ್ಗುತ್ತಿದ್ದೆ .
    ನಿಮ್ಮ ಪ್ರಕಾರ ˌ ಶೂನ್ಶ ಒಂದೆಯೆನ್ನಬಹುದಾದರು ˌ ದರ್ಶನ ಒಂದೆಯೆಂದರು ˌ ಅವರ ಇಳಿದ ಆಳ ˌ ಪಡೆದ ಅನುಭವವನ್ನು ತಿಳಿಯಲು ಶರಣರ ಷಟ್ ಸ್ತಲಾಂತಕ ತಿಳುವಳಿಕೆಯ ನಿಚ್ಚಳಿಕೆಯನೇರಿ ಆ ಗಗನದ ವಿಸ್ತಾರನೋಡಬೇಕು ಆಗ ಅವರ ಸಾಧನೆ ˌ ಶ್ರಮ ಹಾಗು ಅನುಭವ ತಿಳಿಯುವುದು ˌಕೊನೆಗೆ ಶೂನ್ಶಕ್ಕೆ ಶೂನ್ಶವಾಗುವುದು.

    • padmalaya nagraj
      May 8, 2019 Reply

      nanu bouddha mateeyanalla …… adyatma sadhakanoo alla… parivartaneyannu nambuva manushya matra…

  8. Dr.mallesh, Mysuru
    May 9, 2019 Reply

    ನನ್ನ ಲೇಖನದ ಜೊತೆಯಲ್ಲಿಯೇ ಪ್ರಕಟಗೊಂಡಿರುವ ಇನ್ನುಳಿದ 3 ಲೇಖನಗಳು ಮನಸೆಳೆಯುವಂತಹವು. ಪ್ರಸ್ತುತ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ನೀರಿನ ಬವಣೆಯನ್ನು ಕುರಿತ ಸ್ವಾಮೀಜಿಯವರ ಲೇಖನ ಅವರ ಬಗೆಗಿನ ಗೌರವವನ್ನು ಇಮ್ಮಡಿಗೊಳಿಸಿತು. ನೀರಿನ ಬಳಕೆ ಬಗ್ಗೆ ನಮಗಿರಬೇಕಾದ ನಿಲುವು ಮತ್ತು ಎಚ್ಚರಿಕೆಗಳ ಬಗ್ಗೆ ಅವರ ಮನಸ್ಸು ಸ್ಪಂದಿಸಿರುವುದು ಅವರ ಜನಪರ ಕಾಳಜಿಯನ್ನು ಪ್ರತಿಬಿಂಬಿಸಿದೆ. ಶ್ರೀ ಮಠದ ನಿರ್ವಹಣೆಯ ಜೊತೆಗೆ ಸಮಾಜದ ಹಿತಚಿಂತನೆಯ ಬಗೆಗೂ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಯವರ ವ್ಯಕ್ತಿತ್ವ ನನ್ನ ಮನಸೆಳೆಯಿತು. ಒಟ್ಟಾರೆ ಹೇಳುವುದಾದರೆ ನನ್ನ ಮನಸ್ಸು ಇಚ್ಚಿಸಿ ಕಲ್ಪಿಸಿಕೊಂಡಿರುವ ಧಾರ್ಮಿಕ ಗುರುವೊಬ್ಬರಿಗಿರಬೇಕಾದ ಸನ್ನಡತೆಯನ್ನು ತಮ್ಮ ಅತ್ಯಂತ ವಿಚಾರಪೂರಿತ ಲೇಖನದ ಮೂಲಕ ತೋರಿರುವ ಕಾಯಕನಿರತ ಶ್ರೀಗಳವರು ಅಭಿನಂದನಾರ್ಹರು.

    ಭೋಲಾನನ್ನು ವಿಭಿನ್ನ ರೀತಿಯಲ್ಲಿ ಸಾಕ್ಷಾತ್ಕರಿಸಿರುವುದು ಕನ್ನಡದಲ್ಲಿ ವ್ಯಕ್ತಿ ಚಿತ್ರಣದ ಬರವಣಿಗೆಯ ಪರಂಪರೆಗೆ ಹೊಸ ದಾರಿಯನ್ನು ತೋರಿಸಿದೆ. ಕಲ್ಪನೆಯೂ ಚಿಂತನೆಯ ಒಂದು ಕ್ರಮ ಎಂದು ಲೇಖಕರು ಭಾವಿಸಿ ಬರೆದಿರುವುದು ಆ ಲೇಖನ ದೊಳಗಿನ ಸಂದೇಶವನ್ನು ಸಂವಹನಗೊಳಿಸುವಲ್ಲಿ ಸಾರ್ಥಕ್ಯ ಪಡೆದಿದೆ. ಮುಂದಿನ ಭಾಗವನ್ನು ತಿಳಿದುಕೊಳ್ಳಲು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸಿದೆ.

    ಅರಿವಿಂದ ಅರಿವ…. ಲೇಖನ ಅತ್ಯಂತ ಸಾಂದ್ರ ಲೇಖನ. ವ್ಯಕ್ತಿ ಮತ್ತು ಸಮಷ್ಟಿಯ ಬದುಕು ಪಟ್ಟಭದ್ರ ಹಿತಾಸಕ್ತಿಗಳ ಮೂಸೆಯಲ್ಲಿ ಸಿಲುಕಿ ತನ್ನ ನಿಜ ನಿಲವನ್ನು ಮನಗಾಣುವುದಿರಲಿ ಏನೆಂದು ತಿಳಿಯಲೂ ಅಶಕ್ತವಾಗಿ ಆತ್ಮಸ್ಥೈರ್ಯ ಕಳೆದುಕೊಂಡು ರೋಗಗ್ರಸ್ತವಾಗಿರುವುದನ್ನು ಗಾಢವಾಗಿ ಚಿತ್ರಿಸಿದ್ದಾರೆ. ನಮ್ಮನ್ನೇ ನಾವು ಅವಲೋಕಿಸಿಕೊಳ್ಳಬೇಕಾದಂತಹ ಅನೇಕ ವಿಚಾರಗಳನ್ನು ಮನ ಮುಟ್ಟುವಂತೆ ಎಚ್ಚರಗೊಳ್ಳುವಂತೆ ಅರುಹಿದ್ದಾರೆ. ಮೊದಲ ಓದಿಗೆ ಸಂಪೂರ್ಣ ದಕ್ಕದ ಮತ್ತೆ ಮತ್ತೆ ಮೆಲುಕು ಹಾಕಿ ಅರ್ಥ ಮಾಡಿಕೊಳ್ಳಬೇಕಾದಂತಹ ವಿಚಾರಗಳು ಸಾಕಷ್ಟಿವೆ.

    ಆ ಮೂವರು ಲೇಖಕರಿಗೂ ‘ಬಯಲು’ ಬಳಗಕ್ಕೂ ನನ್ನ ಮನದಾಳದ ನಮನಗಳು.

    ಕೆ. ಎಸ್. ಮಲ್ಲೇಶ್

  9. Pro K.P. Shrinivasmurthy
    May 10, 2019 Reply

    ಶಿಕ್ಷಣ ವ್ಯವಸ್ಥೆಯು ನಮ್ಮನ್ನು ನಮ್ಮಿಂದಲೇ ದೂರಕ್ಕೆ ಒಯ್ಯುತ್ತಿರುವುದು ನಿಜ. ಇದಕ್ಕೆ ಸದ್ಯದಲ್ಲಿ ಪರಿಹಾರ ಕಾಣುವ ಯಾವ ಲಕ್ಷಣಗಳೂ ಇಲ್ಲ. ನಾಗರಾಜ್ ಅವರ ವಿಚಾರಗಳು ಚಿಂತನಯೋಗ್ಯವಾಗಿವೆ.

  10. mahadev hadapad
    May 10, 2019 Reply

    ಲೇಖನ ಚನ್ನಾಗಿದೆ. ಅರಿವು ಎನ್ನುವುದು ವಿಚಾರವಲ್ಲ, ವಿಚಾರವೆನ್ನುವುದು ಅರಿವಲ್ಲ.. ಹಾಗಿನ ಅನುಭವಮಂಟಪವದು. ಆಧ್ಯಾತ್ಮದ ಸಣ್ಣತೊರೆಯೊಂದು ನಿತ್ಯನಿರಂತರವಾಗಿ ಹರಿಯುತ್ತಲೇ ಸಂವಾದವನ್ನು ಸೃಷ್ಟಿಸುತ್ತದೆಯಲ್ಲವೇ..?

  11. Pro. Parameshwar Belwadi
    May 13, 2019 Reply

    ‘ಉಪಾಯ’ ಎಂಬ ಶಬ್ಧಕ್ಕೆ ಪಾಲಿ ಮತ್ತು ಸಂಸ್ಕೃತದಲ್ಲಿ ‘ದಯೆ’ ಎಂಬ ವಿವರಣೆ ಇದೆ. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಇತ್ಯಾದಿಗಳು ಶರಣರು ಸೃಜಿಸಿದ ತಾಂತ್ರಿಕ ಉಪಾಯಗಳೇ ಆಗಿವೆ.
    ನಿಮ್ಮ ಮೇಲಿನ ಸಾಲುಗಳು ಕುತೂಹಲ ಹುಟ್ಟಿಸಿವೆ. ಉಪಾಯ ಮತ್ತು ದಯೆ ಒಂದಕ್ಕೊಂದು ಸಂವಾದಿ ಶಬ್ದಗಳೆ? ಶರಣರ ತಾಂತ್ರಿಕ ಉಪಾಯಗಳ ಬಗ್ಗೆ ಬೆಳಕು ಚಲ್ಲಿದರೆ ನಮಗೆ ಸಹಾಯವಾಗುತ್ತದೆ. ಬಯಲು ಸಂಪಾದಕರು ನಿಮ್ಮಿಂದ ಆ ವಿಷಯದ ಬಗ್ಗೆ ಲೇಖನ ಬರೆಸಿದರೆ ನಮ್ಮ ತಿಳುವಳಿಕೆ ಹೆಚ್ಚುತ್ತದೆ. ಈ ಮೂಲಕ ನನ್ನ ಪ್ರೀತಿಯ ಬಯಲು ಬಳಗಕ್ಕೆ ನನ್ನ ಕೋರಿಕೆಯನ್ನು ಸಲ್ಲಿಸುತ್ತಿದ್ದೇನೆ.

  12. ಬಸವರಾಜ ಹಂಡಿ
    May 14, 2019 Reply

    ಯಾವಾಗ ಕಲ್ಯಾಣ ಕ್ರಾಂತಿ ವಿಫಲಗೊಳ್ಳುತ್ತದೆ, ಯಾವಾಗ ವಚನಗಳು ಗಂಟನ್ನು ಸೇರಿಕೊಂಡು ಬೇರೆಬೇರೆ ಸ್ತಳಗಳಗೆ ವರ್ಗಾಯಿಸಲಾಗುತ್ತದೆ ಆವಾಗಿನಿಂದ ಇಲ್ಲಿಯವರೆಗೆ, ಕನಿಷ್ಟ ೯೦೦ ವರ್ಷಗಳವರೆಗೆ ನಾವು ಹಾಗು ನಮ್ಮ ಹಿರಿಯರು ವಚನಗಳನ್ನು ವೈದಿಕತೆಯ ಬೆಳಕಿನಲ್ಲಿ ನೋಡುತ್ತಿದ್ದೇವೆ ಮತ್ತು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ವೈದಿಕತೆ ಬೆಳಕಿನಲ್ಲಿ ವಚನಗಳು ತಮ್ಮ ನಿಜವಾದ ಅರ್ಥ ವನ್ನು ಹೊರಸೂಸಲಾರದೇ, ಬರೆ ವೈದಿಕತೆ ನಮ್ಮ ತಲೆಯಲ್ಲಿ ಹೋಗುತ್ತಿದೆ. ಈ ದೃಷ್ಟಿಕೋನ ಈ ಪ್ರಯತ್ನ ಇದು ನಾವು ಮಾಡಿದ ಬಹಳ ದೊಡ್ಡ ತಪ್ಪು. ಇದು ಶರಣರಾಗೆ ಮಾಡಿದ ದ್ರೋಹ. ಇದು ವಚನಗಳಿಗೆ ಬಗೆದ ದ್ರೋಹ. ಮುಂದಿನ ಪೀಳಿಗೆ ನಮ್ಮನ್ನು ಹಾಗು ನಮ್ಮ ಹಿರಿಯರನ್ನು ಎಂದಿಗೂ ಕ್ಷಮಿಸುವುದಿಲ್ಲ.

    ಇಂತ ಅಂಧಕಾರದ ಪರಿಸ್ಥಿತಿಯ ದಲ್ಲಿಯೂ ಪದ್ಮಾಲಾಯ ನಾಗರಾಜ ಶರಣರ ಈ ಲೇಖನ ಬಹಳ ಅದ್ಬುತವಾಗಿ, ಪರಿಣಾಮಕಾರಿಯಾಗಿ ಹಾಗು ಅಂಧಕಾರವನ್ನು ತೊಡೆದುಹಾಕುವ ಉದ್ದೇಶದಿಂದ ಬರೆಯಲು ಪಟ್ಟಿದೆ.

    ಪ್ರತಿಯೊಂದು ವಾಕ್ಯದಲ್ಲಿ ಲಿಂಗಾಯತರಗೆ ಹಾಗು ಬಸವ ಅನುಯಾಯಿಗಳಿಗೆ ಕೂಗಿ ಹೇಳುತ್ತಿದ್ದಾರೆ – ವಚನಗಳನ್ನು ನೋಡುವ ನಿಮ್ಮ ದೃಷ್ಟಕೋನ ತಪ್ಪು, ವಚನಗಳನ್ನು ಅರ್ಥೈಸಿ ಕೊಳ್ಳುವ ರೀತಿ ಸಹ ತಪ್ಪು ಅಂತ.

    ಹೇಗೆ ಬುದ್ಧ ಜಾರಿಯಲ್ಲಿದ್ದ ಹಾಗು ಅಜ್ಞಾನದಿಂದ ಕೂಡಿದ ಸಂಪ್ರದಾಯವನ್ನು ತೊಡೆದುಹಾಕಿ ಹೊಸ ಜ್ಞಾನದಿಂದ ಕೂಡಿದ ಸಂಪ್ರದಾಯವನ್ನು/ಧರ್ಮವನ್ನು ಪ್ರಾರಂಭ ಮಾಡಿದ್ದ ಅದೇ ತರ ಬಸವಣ್ಣ ಹಾಗು ಬಸವಾದಿ ಶರಣರು ಹೊಸ ಸಂಪ್ರದಾಯಕ್ಕೆ/ಧರ್ಮಕ್ಕೆ ಕಾರಣಿಬೂತರಾದರು.

    ಈ ಲೇಖನದ ಪ್ರಕಾರ – ನಾವು ತಿಳಿದುಕೊಂಡ ಅಷ್ಠಾವರಣಗಳು ಅಷ್ಠಾವರಣಗಳು ಅಲ್ಲ. ನಾವು ತಿಳಿದುಕೊಂಡ ಪಂಚಾಚಾರಗಳು ಪಂಚಾಚಾರಗಳು ಅಲ್ಲ. ಷಟ್ ಸ್ಥಳಗಳು ಷಟ್ ಸ್ಥಳಗಳು ಅಲ್ಲ.

    ಇದು ಸತ್ಯ. ನಮ್ಮ ಮೂಲ ಗ್ರಹಿಕೆದಲ್ಲಿ ದೋಷವಿದೆ.

    ವಚನಗಳಲ್ಲಿ ಅಡಗಿಕೊಂಡಿರುವ ಜ್ಞಾನ ಸಾಮಾನ್ಯವಲ್ಲ.
    ೧೨ ನೆಯ ಶತಮಾನದಲ್ಲಿ ಇಡಿ ಭಾರತ ದೇಶದಿಂದ ಹಾಗು ಹೊರ ದೇಶದಿಂದ ಈ ಜ್ಞಾನವನ್ನು ಪಡೆದುಕೊಳ್ಳಲು ಜನರು ಕಲ್ಯಾಣಕ್ಕೆ ಬಂದರು. ಓದಲು ಬರೆಯಲು ಗೊತ್ತು ಇರಾಲಾರದವರು ಸಹ ವಚನಗಳನ್ನು ಬರೆದರು. ಕಲ್ಪನೆಮಾಡಿಕೊಳ್ಳಿ ಮೈ ಝೂಮ್ ಅನ್ನುತ್ತೆ.

    ನಾನು ಈ ಲೇಖನ ೨ ಸಲ ಓದಿದ್ದೇನೆ. ನನಗೆ ಸುಮಾರು ೫೦% ಮಾತ್ರ ಅರ್ಥವಾಗಿದೆ. ಇನ್ನು ೨-೩ ಸಲ ಓದಿದ ನಂತರ ಪೂರ್ತಿಯಾಗಿ ಅರ್ಥವಾಗಬಹುದು.

    ಶರಣ ಶ್ರೀ ಪದ್ಮಾಲಯ ನಾಗರಾಜ ಅವರಿಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು.

    ನಮ್ಮೆಲ್ಲರ ಯಿಂದ ಶರಣ ಶ್ರೀ ಪದ್ಮಾಲಯ ನಾಗರಾಜ ಅವರಿಗೆ ಹಾಗು ಬಯಲು ತಂಡಕ್ಕೆ ಶರಣು ಶರಣಾರ್ಥಿ ಗಳು.

  13. ಕುಮುದಾ ಪ್ರದೀಪ್
    May 20, 2019 Reply

    ಶರಣರ ಭಕ್ತಿಯನ್ನು ವೇದ ಪ್ರಣೀತ ಭಕ್ತಿಯನ್ನಾಗಿ ವ್ಯಾಖ್ಯಾನಿಸುವುದಾಗಲಿ, ಗ್ರಹಿಸುವುದಾಗಲಿ ಶರಣರಿಗೆ ಮಾಡುವ ದ್ರೋಹವಾಗುತ್ತದೆ.
    ಈಮಾತು ನಾನು ಒಪ್ಪುತ್ತೇನೆ, ಬಹುಶಃ ಲಿಂಗಾಯತ ಧರ್ಮ ಿಲ್ಲಿಯೇ ಎಡವಿ ಬಿದ್ದದ್ದು. ಈ ಸೂಕ್ಷ್ಮತೆ ಅರಿವಿಗೆ ಬರದ ಹೊರತು ಶರಣರು ಈಗಿನ ಕಾಲಕ್ಕೆ ಸಿಕ್ಕಲಾರರು.

  14. ಕುಮಾರಪ್ಪ ಹೊನಕುಂಟೆ
    May 26, 2019 Reply

    ವಚನ ಚಳುವಳಿ ಫ್ರೆಂಚ್ ಕ್ರಾಂತಿಗಿಂತ ಮಹತ್ವವಾದದ್ದು ಎಂದು ನನ್ನ ಭಾವನೆ. ಆದರೆ ಈ ಲಿಂಗಾಯತರನ್ನು ನೋಡಿದರೆ ಸಂಶಯ ಬರುತ್ತದೆ. ಇವರಲ್ಲಿ ಒಂದಾದರೂ ಶರಣರ ಅಂಶಗಳು ಜೀವಂತವಾಗಿಇಲ್ಲವಲ್ಲ!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ನಾನು ಯಾರು?
ನಾನು ಯಾರು?
December 8, 2021
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
Copyright © 2023 Bayalu