Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಬದ್ಧ ಆರ್ಥಿಕತೆ
Share:
Articles March 5, 2019 ಡಾ. ಪಂಚಾಕ್ಷರಿ ಹಳೇಬೀಡು

ಅಬದ್ಧ ಆರ್ಥಿಕತೆ

ಅರ್ಥವ್ಯವಸ್ಥೆ ಎಂದರೆ ಸಾಮನ್ಯ ಅರ್ಥದಲ್ಲಿ ಹಣಕಾಸು ನಿರ್ವಹಣೆ. ಒಬ್ಬ ವ್ಯಕ್ತಿಯಿಂದ ಹಿಡಿದು ಗೃಹ, ಗ್ರಾಮ, ರಾಜ್ಯ, ರಾಷ್ಟ್ರಗಳ ನಿರ್ವಹಣೆಯ ತನಕ ಅರ್ಥವ್ಯವಸ್ಥೆಯ ಜಾಡು ಹಬ್ಬಿ ಕೊಂಡಿರುತ್ತದೆ ಮತ್ತು ಅದರ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಇಡೀ ಜೀವನದಲ್ಲಿ ಅರ್ಥವ್ಯವಸ್ಥೆ ಹಾಸು-ಹೊಕ್ಕಾಗಿದೆ. ಸುಸ್ಥಿರ ಆರ್ಥಿಕ ವ್ಯವಸ್ಥೆಯು ಆಯಾ ಸಮಾಜದ, ಆಯಾದೇಶದ ಒಟ್ಟಾರೆ ಸ್ಥಿತಿಗತಿಯ ಸೂಚ್ಯಂಕವಾಗಿರುತ್ತದೆ. ಸದೃಢ ಆರ್ಥಿಕತೆ ಸದೃಢ ಸಮಾಜದ ಸಂಕೇತ. ಎಲ್ಲಕ್ಕೂ ಮೂಲಭೂತವಾಗಿರುವ ಇಂತಹ ಅರ್ಥವ್ಯವಸ್ಥೆಯನ್ನು ಸರಿಯಾಗಿ ರೂಪಿಸುವುದು ಮತ್ತು ಅದನ್ನು ನಡೆಸಿಕೊಂಡು ಹೋಗಬೇಕಾದದ್ದು ಆಯಾ ರಾಜ್ಯದ, ದೇಶದ ಆಡಳಿತಗಾರರ ಪ್ರಮುಖ ಕರ್ತವ್ಯವಾಗಿರುವುದು. ಅರ್ಥವ್ಯವಸ್ಥೆಯ ಮೂಲ ಅಡಗಿರುವುದು ಅರ್ಥ ಸಂಪಾದನೆಯಲ್ಲಿ, ಅರ್ಥ ಸಂಪಾದನೆಯ ಮೂಲ ದುಡಿಮೆ. ಸತ್ಯ ಮತ್ತು ಶುದ್ಧ ದುಡಿಮೆಯ ಮೂಲಕ ಹಣ ಸಂಪಾದಿಸಬೇಕು, ಸಂಪಾದಿಸಿದ ಹಣಕ್ಕೆ ತೆರಿಗೆ ಕಟ್ಟಬೇಕು, ವೈಯಕ್ತಿಕ ಹಾಗೂ ಕುಟುಂಬ ನಿರ್ವಹಣೆಗೆ ಬಳಸಬೇಕು, ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ತನ್ನಿಂದಾದಷ್ಟು ಧನವನ್ನು ಸವೆಸಬೇಕು. ಇದು ಪ್ರತಿಯೊಬ್ಬ ಪ್ರಜೆಯೂ ಪಾಲಿಸಬೇಕಾದ ಅರ್ಥವ್ಯವಸ್ಥೆಯಾದರೆ,  ಆಡಳಿತಗಾರರು ಸಂಗ್ರಹವಾದ  ತೆರಿಗೆಯನ್ನು ಸಮಾಜದ ಅಭಿವೃದ್ಧಿಯ ವಿವಿಧ ಉದ್ದೇಶಗಳಿಗೆ ಸಮರ್ಪಕವಾಗಿ ಬಳಸಬೇಕು, ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ತನ್ಮೂಲಕ ಯಾರೂ ಸೋಮಾರಿಯಾಗಿ ಕಾಲ ಕಳೆಯದೆ, ಅನ್ಯರಿಗೆ, ಸಮಾಜಕ್ಕೆ ಹೊರೆಯಾಗದೆ  ಕನಿಷ್ಟಪಕ್ಷ ತನ್ನ ಜೀವನ ನಿರ್ವಹಣೆಯನ್ನು ತಾನು ಮಾಡಿಕೊಳ್ಳುವಂತಾಗಬೇಕು. ದುಡಿಯದೇ ಸೋಮಾರಿಯಾದವನಿಗೆ ಉಣ್ಣುವ ಹಕ್ಕೂ ಇಲ್ಲ. ಭಾರತದಂಥಾ ಬೃಹತ್ ಜನಸಂಖ್ಯೆಯ ದೇಶದ ಅರ್ಥವ್ಯವಸ್ಥೆಯನ್ನು ಸರಿಯಾಗಿ ನಡೆಸುವುದು ಒಂದು ಸವಾಲೇ ಸರಿ! ವಿವೇಚನಾಯುಕ್ತ ಅರ್ಥಿಕ ಪರಿಣತಿಯಿಂದ ಅರ್ಥವ್ಯವಸ್ಥೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕಾಗುತ್ತದೆ.

ಅರ್ಥವ್ಯವಸ್ಥೆಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಜಗತ್ತಿನಲ್ಲಿಯೇ ಪ್ರಪ್ರಥಮವಾಗಿ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ರೂಪಿಸಿಕೊಟ್ಟಿದ್ದಾರೆ. ಅದನ್ನು ಜಗತ್ತು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. ಬಸವಣ್ಣನವರ ಆಗಮನದ ತನಕ ಭಾರತ ದೇಶದಲ್ಲಿ ದುಡಿಯುವ ವರ್ಗವನ್ನು ಅತಿ ನಿಕೃಷ್ಟವಾಗಿ ಕಾಣಲಾಗುತ್ತಿತ್ತು ಹಾಗೂ ಪರಾವಲಂಬಿ ಜೀವನ ನಡೆಸುವವರನ್ನು ಸಮಾಜದಲ್ಲಿ ಮೇಲು ಸ್ತರದಲ್ಲಿ ಇಡಲಾಗಿತ್ತು. ದೇಶದ ಅರ್ಥ ವ್ಯವಸ್ಥೆ ಉತ್ತಮಗೊಳ್ಳುವುದು ಮತ್ತು ಉಣ್ಣುವ ಕೈಗಳಿಗೆ ಅನ್ನ ಸಿಗುವುದು ದುಡಿಯುವ ವರ್ಗದವರಿಂದಲೇ ಹೊರತು ಪರಾವಲಂಬಿಗಳಿಂದಲ್ಲ. ನಿಜ ಅರ್ಥದಲ್ಲಿ  ಶ್ರಮಿಕವರ್ಗವನ್ನು ಅತಿ ಹೆಚ್ಚು ಗೌರವದಿಂದ ಸಮಾಜ ಕಾಣಬೇಕು. ಪುರೋಹಿತ ವರ್ಗ, ವ್ಯಾಪಾರೀ ವರ್ಗಗಳವರ ಜೀವನ ಸಾಗಲು ಶ್ರಮಿಕ ವರ್ಗದವರ ಉತ್ಪನ್ನವೇ ಬೇಕು, ಆ ಉತ್ಪನ್ನವೇ ಇಲ್ಲದಿದ್ದರೆ ಪುರೋಹಿತನ ಪೂಜೆ, ವ್ಯಾಪಾರಿಯ ವ್ಯಾಪಾರ ಹೇಗೆ ನಡೆದಾವು?

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಈ ವರ್ಗಗಳ ನಡುವಿನ ವ್ಯತ್ಯಾಸವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದರು. ಶ್ರಮಿಕರು ನಿತ್ಯ ಶೋಷಣೆಗೊಳಗಾಗುವುದನ್ನು ಕಂಡು ಮಮ್ಮಲ ಮರುಗಿದರು. ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರಮಿಕ ವರ್ಗವನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿರಿಸಲಾಗಿತ್ತು, ಅವರ ಬೆವರಿನ ಫಲವು ಉತ್ತಮ ವರ್ಗವೆನಿಸಿಕೊಂಡ ಪರಾವಲಂಬಿಗಳ ಪಾಲಾಗುತ್ತಿತ್ತು. ಉತ್ತಮ ವರ್ಗದವರ ಸೇವೆಗಾಗಿಯೇ ನಿಮ್ಮನ್ನು ದೇವರು ಈ ಭೂಮಿಯಲ್ಲಿ ಸೃಷ್ಟಿಸಿದ್ದಾನೆ ಎಂದು ತಮ್ಮ ಸುಖ ಜೀವನಕ್ಕೆ ಬೇಕಾದ ಹಾಗೆ ಶಾಸ್ತ್ರಗಳನ್ನು ರಚಿಸಿಕೊಂಡು  ನಿಮ್ನವರ್ಗದವರನ್ನು ಅದರಂತೆಯೇ ನಂಬಿಸಿ ಅವರನ್ನು ಎಲ್ಲಾ ರೀತಿಯ ಸಂಸ್ಕಾರಗಳಿಂದ ವಂಚಿಸಿ ಶೂದ್ರರೆಂದು ಕರೆದು ಅವರಿಂದ ಸೇವೆ ಮಾಡಿಸಿಕೊಳ್ಳಲು ತಮ್ಮನ್ನು ದೇವರು ಸೃಷ್ಟಿಸಿದ್ದಾನೆ ಎಂದೆಲ್ಲಾ ಪುರಾಣಗಳನ್ನು ಸಂಸ್ಕೃತ ಭಾಷೆಯಲ್ಲಿ ಹೆಣೆದು ಅದನ್ನು ದೇವಭಾಷೆಯೆಂದೂ, ಶೂದ್ರರು ಅದನ್ನು ಕಲಿಯಬಾರದೆಂದೂ ಮುಂತಾಗಿ ಅವರ ಮೇಲೆ ನಿರ್ಬಂಧಗಳನ್ನು ಹೇರಿ, ಅವರು ಅನುತ್ಪಾದಕ ವರ್ಗವಾಗಿ ಗುರುತಿಸಿಕೊಂಡು ಸಮಾಜಕ್ಕೆ ಹೊರೆಯಾಗಿ ಬದುಕುತ್ತಿದ್ದರು. ಈ ಅಸಮಾನತೆಯನ್ನು ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ಗಮನಿಸಿ ಖಂಡಿಸಿದವರು ಬಸವಣ್ಣನವರು.

ಬಸವಣ್ಣನವರ ಸಿದ್ಧಾಂತದ ಪ್ರಕಾರ ದುಡಿಯುವವನ ಜೀವನವೇ ಶ್ರೇಷ್ಠ, ಪರಾವಲಂಬಿ ಜೀವನ ನಡೆಸುವವನೇ ಕನಿಷ್ಠ! ಏಕೆಂದರೆ ದುಡಿಯುವವನು ಜಗತ್ತಿಗೆ ಅನ್ನ ನೀಡುತ್ತಾನೆ, ವ್ಯವಹಾರಕ್ಕೆ ಸರಕು ನೀಡುತ್ತಾನೆ, ಹಾಗಾಗಿ ಜಗತ್ತಿನಲ್ಲಿ ಎಲ್ಲವೂ ನಿರಾತಂಕವಾಗಿ ಸಾಗುತ್ತದೆ. ಪರಾವಲಂಬಿಯು ಜಗತ್ತಿಗೆ ಯಾವುದೇ ರೀತಿಯಲ್ಲೂ ಕೊಡುಗೆ ನೀಡದೇ ಹೊರೆಯಾಗಿ ಬದುಕುವ ಮೂಲಕ ನಿರರ್ಥಕ ಬಾಳನ್ನು ಬಾಳುತ್ತಾನೆ. ಪರಾವಲಂಬಿಯು ಕಾಣದ ದೇವರನ್ನು ಗುಡಿಗಳಲ್ಲಿ ಹುಡುಕುತ್ತಾನೆ, ಆದರೆ ಶ್ರಮಿಕನು ದೇವರನ್ನು ತನ್ನ ದುಡಿಮೆಯಲ್ಲಿಯೇ ಕಾಣುತ್ತಾನೆ. “ಪರಾವಲಂಬಿಯಾಗಿ ಅನುತ್ಪಾದಕ ಜೀವನ ನಡೆಸುವವನಿಗೆ ಭ್ರಮೆಯೇ ದೇವರಾದರೆ, ಶ್ರಮಿಕನಿಗೆ ದೇವರೆಂಬುದು ಕಾಯಕದ ಮೂಲಕ ವಾಸ್ತವ ಸತ್ಯ”  ಇದನ್ನು ಮನಗಂಡ ಬಸವಣ್ಣನವರು  ದುಡಿಮೆಯನ್ನು ದೈವೀಕರಣಗೊಳಿಸಿದರು, ದೈವೀಕರಣಗೊಂಡ ದುಡಿಮೆಯೇ ಕಾಯಕವಾಯಿತು. ಅಂಥಾ ಕಾಯಕ ಮಾಡುವ ಶ್ರಮಿಕನ ದೇಹವೇ ದೇವಾಲಯವೆಂದು ಬಸವಾದಿ ಶರಣರು ಸಾರಿದರು. ಇದರಿಂದಾಗಿ ಅನುತ್ಪಾದಕ ಭೋಗಜೀವನ ತನ್ನ ಮುನ್ನಿನ ಮೌಲ್ಯ ಕಳೆದುಕೊಂಡರೆ ಕಾಯಕ ಜೀವನ ದೈವತ್ವಕ್ಕೇರಿತು.

ಆಯ್ದಕ್ಕಿ ಮಾರಯ್ಯ ಶರಣರು “ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು, ಕಾಯಕ ಸತ್ತು, ಹಣ ಹೊನ್ನ ಬೇಡಹೆನೆಂಬುದು ಕಷ್ಟವಲ್ಲವೆ ಸದ್ಭಕ್ತಂಗೆ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ.”  ಉತ್ಪಾದಕ ಕಾಯಕವಿಲ್ಲದೆ  ತಾನು ಗುರುವೆಂದು, ಜಂಗಮವೆಂದು ಮನೆಮನೆ ಹೊಕ್ಕು ನೇಮ, ಪೂಜೆ, ಯಜ್ಞ ಯಾಗ, ಹೋಮ ಹವನಗಳನ್ನು ಮಾಡಿಸಲು ಪೌರೋಹಿತ್ಯವನ್ನೇ ಜಿವನೋಪಾಯವನ್ನಾಗಿಸಿಕೊಂಡವರನ್ನು ಕುರಿತು ಖಂಡಿಸುತ್ತಾರೆ. ಇಂಥಾ ಗುಣಗಳು ದೇವನಿಗೆ ಪ್ರಿಯವಾಗುವುದಿಲ್ಲ ಎನ್ನುವರು. ಈ ರೀತಿಯ ಜೀವನ ನಡೆಸುವುದೂ ಒಂದು ವಿಧದಲ್ಲಿ ರಾಷ್ಟ್ರದ್ರೋಹ. ಯಾವುದೇ ರಾಷ್ಟ್ರದ ಬೆಳವಣಿಗೆ ಅಲ್ಲಿನ ಆರ್ಥಿಕತೆಯನ್ನು ಅವಲಂಬಿಸಿರುತ್ತದೆ. ಆರ್ಥಿಕತೆಯು ದುಡಿಮೆಯೆ ಮೇಲೆ ಅವಲಂಬಿತವಾಗಿರುವುದರಿಂದ ದುಡಿಯದೇ ಉಣ್ಣುವುದು ರಾಷ್ಟ್ರದ್ರೋಹವಾಗುವುದು! ಕಾಯಕವೇ ಉಸಿರಾದಾತನೇ ಶರಣ, ಅಂಥಾ ಶರಣನ ಕುರಿತು ಬಸವಣ್ಣನವರು “ಶರಣ ನಿದ್ರೆಗೈದಡೆ ಜಪ ಕಾಣಿರೊ, ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, ಶರಣ ನಡೆದುದೆ ಪಾವನ ಕಾಣಿರೊ, ಶರಣ ನುಡಿದುದೆ ಶಿವತತ್ವ ಕಾಣಿರೊ, ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ.” ಸತ್ಯ ಶುದ್ಧ ಕಾಯಕ ಜೀವಿಯ  ನಿದ್ರೆಯೇ ಜಪ, ಆತನೆಚ್ಚರಗೊಂಡರೆ ಅದೇ ಶಿವರಾತ್ರಿ, ಆತನ ನಡೆ-ನುಡಿಗಳೇ ಶಿವತತ್ವ ಮತ್ತು ಆತನ ದೇಹವೇ ದೇವಾಲಯ, ಅದುಬಿಟ್ಟು ಬೇರೊಂದು ಶಿವ ತತ್ವವಿಲ್ಲ ಬೇರೊಂದು ದೇವಾಲಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ.

ಹತ್ತೊಂಭತ್ತನೇ ಶತಮಾನದ ಆದಿಯಲ್ಲಿ  ಬಂದ ಕಾರ್ಲ್ ಮಾರ್ಕ್ಸ್ ಕೂಡ ವ್ಯಕ್ತಿಯ ಹಾಗೂ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಮೆಯೇ ಮೂಲಮಂತ್ರ ಎಂದು ಸಾರುತ್ತಾನೆ. According to Marx, the productive powers of labour appear as the creative power of capital. Indeed, “labour power at work” becomes a component of capital, it functions as working capital. ಕಾರ್ಲ್ ಮಾರ್ಕ್ಸ್ ನ  ದುಡಿಮೆಯ ಸಿದ್ಧಾಂತಕ್ಕೆ ದೇವರನ್ನು ಸೇರಿಸಿದಾಗ ಅದು ದೈವೀಕರಣಗೊಂಡ ದುಡಿಮೆಯಾಗಿ ಕಾಯಕವೆನಿಸುವುದು ಅದೇ ಬಸವಣ್ಣನವರ ಕಾಯಕ ಸಿದ್ಧಾಂತ. ಒಂದು ದೇಶದ ನಾಗರಿಕರೆಲ್ಲರಿಗೂ ದುಡಿಮೆಯಲ್ಲಿ ಸಮಪಾಲು – ಸಂಪಾದನೆಯಲ್ಲಿ ಸಮಪಾಲು  ಇದ್ದಾಗ ಮಾತ್ರ ಸುಖೀ ಸಮಾಜ ನಿರ್ಮಾಣವಾಗುವುದು,  ಯಾವ ವ್ಯವಸ್ಥೆಯಲ್ಲಿ ಶ್ರಮಿಕನು ತಿರಸ್ಕಾರಕ್ಕೊಳಗಾಗಿ, ದುಡಿತಕ್ಕೆ ತಕ್ಕ ಪ್ರತಿಫಲವಿರುವುದಿಲ್ಲವೋ ಅಲ್ಲಿ ಆರ್ಥಿಕ ಅಸಮಾನತೆ ತಲೆದೋರಿ ಕ್ಷೋಭೆ ಉಂಟಾಗುವುದು. ಆರ್ಥಿಕ ಅಸಮಾನತೆ ತಲೆದೋರದಂಥಾ ಅರ್ಥ ವ್ಯವಸ್ಥೆಯನ್ನು ನಿರ್ಮಿಸುವ ಹೊಣೆ ಆಡಳಿತಗಾರರದ್ದಾಗಿರುವುದು. ಆಡಳಿತಗಾರ ಈ ವಿಷಯದಲ್ಲಿ ಮುಗ್ಗರಿಸಿದನೆಂದರೆ ಬಡವ ಬಲ್ಲಿದರ ನಡುವಿನ ಕಂದಕ ವಿಸ್ತಾರವಾಗುತ್ತಾ ಹೋಗಿ ದುಡಿಯುವ ವರ್ಗ ಕ್ರಮೇಣ ದುಡಿಮೆಯಿಂದ ವಿಮುಖವಾಗಿ  ಆರ್ಥಿಕತೆಯ/ ಆಹಾರದ ಬೆನ್ನೆಲುಬಾದ ಕೃಷಿ ಮುಂತಾದ ಚಟುವಟಿಕೆಗಳು ಕ್ಷೀಣಿಸಿ ಜನರಿಗೆ ಅನ್ನ ಸಿಗುವುದೇ ದುಸ್ತರವಾದೀತು!

ಸದ್ಯ ಭಾರತದ ಆರ್ಥಿಕ ವ್ಯವಸ್ಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ದೇಶದ ಪ್ರತಿ ಪ್ರಜೆಗೂ ನೆಮ್ಮದಿಯ ಹಾಗೂ ಗೌರವಯುತ ಜೀವನ ನಡೆಸಲು ಆತನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಸರ್ಕಾರವು ಪ್ರತಿಯೊಬ್ಬನಿಗೂ  ಆತನ ಜೀವನಕ್ಕೆ ಅಗತ್ಯವಿರುವ ಹಣಕಾಸಿನ ಮಾನದಂಡವನ್ನು ಅಂದಿನ ದಿನಮಾನಕ್ಕೆ ತಕ್ಕಂತೆ ನಿಗದಿಪಡಿಸಿ ಆತನ ಪರಿಶ್ರಮಕ್ಕೆ (ಶಾರೀರಿಕ ದುಡಿಮೆ)  ಅನುಗುಣವಾಗಿ ನೀಡಿದಾಗ ಮಾತ್ರ ಎಲ್ಲರಿಗೂ ಸುಖೀ ಜೀವನ ನಡೆಸಲು ಸಾಧ್ಯ. ನಮ್ಮ ದೇಶದಲ್ಲಿ ಇಂದಿನ ದಿನಮಾನದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎನ್ನಲಾಗದು. ಇತ್ತ ಬಡವನು (ವಿಷೇಷವಾಗಿ ರೈತ ಸಮುದಾಯ) ಇನ್ನಷ್ಟು ಬಡವನಾಗುತ್ತಿದ್ದು ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದರೆ  ಅತ್ತ ಸಿರಿವಂತ ಮತ್ತಷ್ಟು  ಮಗದಷ್ಟು ಸ್ಥಿತಿವಂತನಾಗಿ ವಿಲಾಸಿ ಜೀವನ ನಡೆಸುತ್ತಿದ್ದಾನೆ. ಬಡತನ- ಸಿರಿತನಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಸಮ ಸಮಾಜ ನಿರ್ಮಿಸಬೇಕಾದ ಸರ್ಕಾರದ ಪ್ರತಿನಿಧಿಗಳು ತಮ್ಮ ಮುಂದಿನ ಹತ್ತಾರು ತಲೆಮಾರುಗಳಿಗಾಗುವಷ್ಟು ಸಂಪತ್ತು ಕ್ರೋಢೀಕರಿಸಿಕೊಳ್ಳುತ್ತಿರುವುದರಿಂದ ನ್ಯಾಯಯುತವಾಗಿ ಬಡವನಿಗೆ ದೊರೆಯಬೇಕಾದ ಸಂಪತ್ತು ಸಿರಿವಂತರ ತಿಜೋರಿಗಳಲ್ಲಿ ತುಂಬಿಕೊಳ್ಳುತ್ತಿದೆ.

ರೈತ, ಕೂಲಿ ಕಾರ್ಮಿಕ, ವೈದ್ಯ, ಇಂಜಿನಿಯರ್, ವಕೀಲ, ಶಿಕ್ಷಕ, ವ್ಯಾಪಾರಿ, ರಾಜಕಾರಣಿ ಯಾರೇ ಆಗಲೀ, ಯಾವುದೇ ವೃತ್ತಿಯಾಗಲೀ ಇವರೆಲ್ಲರಿಗೂ ಸಮವಾಗಿ ಗೌರವಯುತವಾಗಿ ಬದುಕಲು ಅಗತ್ಯವಿರುವಷ್ಟು ಮಾತ್ರ ಸಂಪಾದನೆ ದೊರೆಯುವಂತಾಗಬೇಕು. ಆದರೆ ಪ್ರಸ್ತುತ ಈ ಪರಿಸ್ಥಿತಿ ಇಲ್ಲ. ರೈತ ಹಗಲಿರುಳೆನ್ನದೆ ದೇಹವನ್ನು ದಂಡಿಸಿ ಸಾಲ ಮಾಡಿ ಬೆಳೆ ಬೆಳೆಯುತ್ತಾನೆ, ಆದರೆ ಮಾರುಕಟ್ಟೆಯಲ್ಲಿ ಆತನ ಬೆಳೆಗೆ ದೊರೆಯುವ ಒಟ್ಟುಮೌಲ್ಯ ಬೆಳೆಯಲು ಮಾಡಿದ ಖರ್ಚಿಗಿಂತಲೂ ಕಡಿಮೆ ಅಂದರೆ ತಾನು ಸಾಲದ ಸುಳಿಯಲ್ಲಿ ಸಿಲುಕಿ, ಆಹಾರವನ್ನು ಬೆಳೆದು ಉಳ್ಳವರಿಗೆ ಅತಿ ಕಡಿಮೆ ದರಕ್ಕೆ ಒದಗಿಸುತ್ತಾನೆ. ಇತ್ತ ಉಳ್ಳವರು ಅತೀ ಕಡಿಮೆ ದರದಲ್ಲಿ ಆಹಾರ ಧಾನ್ಯ ಖರೀದಿಸಿ ತಿಂದುಂಡು ಸುಖಪಡುತ್ತಾರೆ. ಉಳ್ಳವರಿಗೆ ಹೆಚ್ಚಿನ ಪರಿಶ್ರಮವಿಲ್ಲದೇ ಹಣ ತಾನಾಗಿಯೇ ಬಂದು ಸೇರುತ್ತಿರುತ್ತದೆ ಅದನ್ನು ಖರ್ಚುಮಾಡಲು ಅತ್ಯಂತ ವಿಲಾಸೀ ಜೀವನ ನಡೆಸುತ್ತಾರೆ, ಹಲವರು ಯಥೇಚ್ಚವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಸ್ಥಿರಾಸ್ಥಿ, ಬಂಗಾರ ಮುಂತಾದುವನ್ನು ಖರೀದಿಸುತ್ತಾರೆ, ಇದರಿಂದಾಗಿ ಸ್ಥಿರಾಸ್ಥಿಗಳು ದುಬಾರಿಯಾಗಿ, ಅಗತ್ಯವಿರುವ  ಬಡವನಿಗೆ ಗಗನ ಕುಸುಮವಾಗುವುವು, ಕನಿಷ್ಠಪಕ್ಷ ವಾಸಯೋಗ್ಯವಾದ ಒಂದು ಮನೆಯನ್ನೂ ಕಟ್ಟಿಕೊಳ್ಳಲಾಗದ ಪರಿಸ್ಥಿತಿ ಬಡವರದ್ದು.

ನಮ್ಮ ದೇಶದಲ್ಲಿ 2011 ನೇ ಇಸವಿಯ ಅಂಕಿ-ಅಂಶದ ಪ್ರಕಾರ ಸುಮಾರು 1.77 ದಶಲಕ್ಷ ಜನರು ಯೋಗ್ಯ ಆಹಾರವಿಲ್ಲದೇ ಹಸಿವಿನಿಂದ ನರಳುತ್ತಿದ್ದಾರೆ ಹಾಗೂ ರಸ್ತೆಬದಿಯ ಕಾಲುದಾರಿಯ ಮೇಲೆ, ರೈಲ್ವೆ ಪ್ಲಾಟ್ ಫಾರಂಗಳ ಮೇಲೆ, ಫ್ಲೈ ಓವರ್ ಗಳ ಕೆಳಗೆ, ಚರಂಡಿ ನಿರ್ಮಿಸಲೆಂದು ಶೇಖರಿಸಿರುವ ಸಿಮೆಂಟ್ ಕೊಳವೆಗಳ ಒಳಗೆ ಜೀವಿಸುತ್ತಿದ್ದಾರೆ. ಇವರುಗಳಿಗೆ ಗೌರವಯುತ ಬದುಕು ಕಟ್ಟಿಕೊಳ್ಳುವ ಹಕ್ಕಿಲ್ಲವೇ? ಇವರ ಜೀವನಮಟ್ಟವನ್ನು ಸುಧಾರಿಸುವುದು ಹೇಗೆ ಎಂದು ಆಡಳಿತಗಾರರು ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ, ಬದಲಾಗಿ ಇಂಥಾ ದಮನಿತ ವರ್ಗವನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುತ್ತಾರೆ.

ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ  ಸುಮಾರು 10% ರಿಂದ 15% ಭತ್ಯೆ ಏರಿಸಲಾಗುತ್ತದೆ, ಪ್ರತಿ ನಾಲ್ಕು ವರ್ಷಕ್ಕೊಮ್ಮೆ  ವೇತನ ಪರಿಷ್ಕರಣೆ ಮಾಡುವ ಮೂಲಕ ಪುನಃ ಶೇ 25%-30%  ವೇತನ ಹಚ್ಚಿಸಲಾಗುತ್ತದೆ. ಹೀಗೆ ವರ್ಷದಿಂದ ವರ್ಷಕ್ಕೆ ಅವರ ವರಮಾನ ಹೆಚ್ಚುತ್ತಲೇ ಸಾಗುತ್ತದೆ. ಈ ಏರಿಕೆಯನ್ನು ಸರಿದೂಗಿಸಲು ಉತ್ಪನ್ನಗಳ ಮೇಲೆ ತೆರಿಗೆಯನ್ನು ಏರಿಸಲಾಗುತ್ತದೆ, ಕಡಿಮೆ ಆದಾಯ ಹೊಂದಿರುವವರಿಗೆ ಇದು ಹೆಚ್ಚ್ಚಿನ ಹೊರೆಯಾಗುತ್ತದೆ. ವಾಸ್ತವದಲ್ಲಿ ನೌಕರರ ವೇತನವನ್ನು ಬಡಜನರಿಂದ ತೆರಿಗೆ ರೂಪದಲ್ಲಿ ವಸೂಲು ಮಾಡಲಾಗುತ್ತದೆ. ಬಡಜನರಿಗೆ ಯಾವ ಸೌಲಭ್ಯವೂ ಇಲ್ಲ, ಬರೀ ತೆರಿಗೆ ಕಟ್ಟುವುದೇ ಇವರ ಸೌಭಾಗ್ಯ!

ಅಪರೂಪಕ್ಕೊಮ್ಮೆ ಆಹಾರಧಾನ್ಯಗಳ, ತರಕಾರಿಗಳ ಬೆಲೆ ಏರಿಕೆಯಾದಾಗ  ಹೋಟೆಲ್ ಉದ್ಯಮದವರು ಹೋಟೆಲ್ ಉತ್ಪನ್ನಗಳ ಬೆಲೆಯನ್ನು ಏಕಾಏಕಿ ಏರಿಸುತ್ತಾರೆ. ಆದರೆ ಇನ್ನುಳಿದಂತೆ ಇಡೀ ವರ್ಷ ತರಕಾರಿ ಧಾನ್ಯಗಳ ಬೆಲೆಗಳು ಪಾತಾಳ ಕಂಡರೂ ತಮ್ಮ ಉತ್ಪನ್ನಗಳ ಬೆಲೆ ಇಳಿಸುವುದಿಲ್ಲ. ಹಣವನ್ನು ನಿರಾಯಾಸವಾಗಿ ಕೊಳ್ಳೆಹೊಡೆಯುತ್ತಾರೆ. ಉದ್ಯಮಗಳಲ್ಲಿ ತಯಾರಾದ ಉತ್ಪನ್ನಗಳ ಬೆಲೆಯನ್ನು ಉತ್ಪಾದಕರು ನಿರ್ಧರಿಸುತ್ತಾರೆ, ಇಲ್ಲಿ ಗ್ರಾಹಕರು ಅಸಹಾಯಕರು. ಇವುಗಳನ್ನು ನಿಯಂತ್ರಿಸಲು ಸರ್ಕಾರದ ಯಾವ ಮಾನದಂಡಗಳೂ ಇಲ್ಲ, ಇದ್ದರೂ ಜಾರಿಯಾಗುವುದಿಲ್ಲ. ಇವುಗಳು ಕೇವಲ ಉದಾಹರಣೆಗಳಷ್ಟೇ. ಇದೇ ರೀತಿ ಶಿಕ್ಷಣ, ಆರೋಗ್ಯ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ  ನಿರಂತರವಾಗಿ ಅನ್ಯಾಯದಿಂದ ಹಣ ವಸೂಲಿ ನಡೆದೇ ಇದೆ. ಪಟ್ಟಭದ್ರರು ಈ ಅಸಮಾನತೆಗಳನ್ನು ನೀರೆರೆದು ಪೋಷಿಸುತ್ತಾ ಬರುತ್ತಿದ್ದಾರೆ. ಒಬ್ಬ ವೈದ್ಯ ತನ್ನ ಬಳಿ ಬರುವ ರೋಗಿಗಳಿಂದ ಎರಡು ನಿಮಿಷಗಳಲ್ಲಿ ಮುಗಿಯುವ ತಪಾಸಣೆಗಾಗಿ ಸಾವಿರಾರು ರೂಪಾಯಿ ಸಂಭಾವನೆ ಪಡೆಯುತ್ತಾನೆ. ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಹಣ ಸಂಪಾದಿಸುತ್ತಾನೆ, ಇದು ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನ ಎರಡು ಅಥವಾ ಮೂರು ವಾರಗಳ ಬೆವರಿನ ಸಂಪಾದನೆಯಾಗಿರುತ್ತದೆ.

ರೈತರು ಉತ್ಪಾದಿಸುವ ಅತ್ಯಗತ್ಯವಾದ ಆಹಾರಸಾಮಗ್ರಿಗಳ ಬೆಲೆ ನಿರ್ಧರಿಸುವುದು ರೈತರ ಕೈಲಿಲ್ಲ, ಇದೇ ದುರಂತ! ಪರಿಸ್ಥಿತಿ ಹೀಗಿರುವಾಗ ರೈತರ ಬೆನ್ನಿಗೆ ನಿಂತು ಆಹಾರ ಉತ್ಪಾದನೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ. ಆಹಾರ ಉತ್ಪಾದನೆ ಹೆಚ್ಚಾಗಬೇಕಾದರೆ  ರೈತರ ಉತ್ಪನ್ನಗಳಿಗೆ ಸರ್ಕಾರವೇ ಮುತುವರ್ಜಿ ವಹಿಸಿ ಸೂಕ್ತ ಬೆಲೆಕಟ್ಟಿಕೊಡಬೇಕು. ಇದಕ್ಕೆ ಹಣ ಎಲ್ಲಿಂದ ತರುವುದು?  ನೌಕರರಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಕೊಡುವ ವೇತನವನ್ನು ಕಡಿತಗೊಳಿಸಿ ರೈತರಿಗೆ ನೆರವಾದರೆ ರೈತರ- ಉದ್ಯೋಗಿಗಳ ನಡುವಿನ ಆರ್ಥಿಕ ಅಸಮಾನತೆ ಕಡಿಮೆಯಾಗಿ ಎಲ್ಲರ ಜೀವನ ಹಸನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರ್ಕಾರೀ ಉದ್ಯೋಗ ಶ್ರೇಷ್ಠ,  ಕೃಷಿ ಕನಿಷ್ಠ ಎಂಬ ಭಾವನೆ ಮೊದಲು ತೊಲಗಬೇಕು. ಹೀಗಾಗಬೇಕಾದರೆ ಸರ್ಕಾರಿ ಉದ್ಯೋಗಿಗಳ ವೇತನ ರೈತರ ಆದಾಯಕ್ಕೆ ಸಮನಾಗಬೇಕು, ಆಗ ಹೆಚ್ಚು ಯುವಕರು ಕೃಷಿಯೆಡೆಗೆ ಅಥವಾ ಇತರ ಕೆಲಸಗಳೆಡೆಗೆ  ಆಕರ್ಷಿತರಾಗುತ್ತಾರೆ. ಇದರಿಂದಾಗಿ ದೇಶದ ಕೃಷಿ ಉತ್ಪನ್ನ ಹೆಚ್ಚುತ್ತದೆ  ಹಾಗೂ ಆರ್ಥಿಕತೆ ಸುಧಾರಿಸುತ್ತದೆ. ಆಹಾರಕ್ಕಾಗಿ ನಾವು ಇನ್ನಿತರ ದೇಶಗಳನ್ನು ಅವಲಂಬಿಸುವುದು ತಪ್ಪಿ ಸಂಪೂರ್ಣ ಸ್ವಾವಲಂಬನೆ ಸಾಧ್ಯವಾಗುವುದು.

ನಮ್ಮ ದೇಶ ಬೃಹತ್ ಸೈನ್ಯವನ್ನು ಹೊಂದಿದೆ. ಆದರೆ ಎಷ್ಟೋ ಸೈನಿಕರು ಗುಂಡುನಿರೋಧಕ ಕವಚಗಳಿಲ್ಲದೆ ನಿತ್ಯ ತಮ್ಮ ಪ್ರಾಣವನ್ನು ತಾಯ್ನಾಡಿಗೆ ಅರ್ಪಿಸುತ್ತಿದ್ದಾರೆ ಹಾಗಾದರೆ ಇವರಿಗೆ ಗುಂಡು ನಿರೋಧಕ ಕವಚಗಳನ್ನು  ಪೂರೈಸಲಾಗದಷ್ಟು ದಾರಿದ್ರ್ಯವೇ ನಮ್ಮನ್ನು ಆಳುವ ಸರ್ಕಾರಕ್ಕೆ? ದಿನಕ್ಕೆ  ಕೇವಲ ಒಂದೋ ಎರಡೋ ತಾಸು ಪಾಠ ಮಾಡುವ ಒಬ್ಬ ಪ್ರಾಧ್ಯಾಪಕನಿಗೆ ಲಕ್ಷಗಟ್ಟಲೆ ವೇತನ, ಜೀವನವನ್ನೇ ದೇಶಕ್ಕಾಗಿ ಸವೆಸುವ ಸೈನಿಕನಿಗೆ ಜೀವ ರಕ್ಷಕವಿಲ್ಲ! ಇದೇ ವಿಪರ್ಯಾಸ!!

ಅನ್ಯ ದೇಶಗಳಲ್ಲಿ ಇಂಥಾ ಸ್ಥಿತಿ ಇಲ್ಲ, ಬೆಲೆಗಳು ನಮ್ಮ ದೇಶದಲ್ಲಿರುವಂತೆ ನಿತ್ಯ ಏರಿಳಿತ ಕಾಣುವುದಿಲ್ಲ, ಹಲವು ದೇಶಗಳಲ್ಲಿ ಸುಮಾರು ದಶಕಗಳಿಂದ ಪದಾರ್ಥಗಳ ಬೆಲೆ ಏರಿಲ್ಲ, ಉದ್ಯೋಗಿಗಳ ವೇತನವೂ ಏರಿಲ್ಲ. ಹಾಗಾಗಿ ಶ್ರಮಿಕ ವರ್ಗದವರು ತಾವು ಖರೀದಿಸುವ ಉತ್ಪನ್ನಗಳಮೇಲೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ, ಎಲ್ಲಾ ಪ್ರಜೆಗಳ ಜೀವನವೂ ಸುಖಮಯವಾಗಿರುತ್ತದೆ.

ನಮ್ಮಲ್ಲೂ ವೇತನ ಏರಿಕೆಯೂ ಇಲ್ಲದೆ,  ಪದಾರ್ಥಗಳ ಬೆಲೆ ಏರಿಕೆಯೂ ಇಲ್ಲದಿದ್ದರೆ ಹಣಕಾಸು ನಿರ್ವಹಣೆ ಬಹಳ ಸುಗಮವಾಗುವುದು. ಭಾರತದ ಯಾವೊಬ್ಬ ನಾಯಕನೂ ವಸ್ತುಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೆಲವರ ಓಲೈಕೆಗಾಗಿ ಹಲವರನ್ನು ಶೋಷಿಸುವ ಪ್ರವೃತ್ತಿ ನಮ್ಮನ್ನಾಳುವವರದ್ದಾಗಿದೆ.

ಕಲ್ಯಾಣ ರಾಜ್ಯವೆಂದರೆ ಹೇಗಿರಬೇಕೆಂದು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಸ್ವತಃ ಕಟ್ಟಿ ತೋರಿಸಿದರು. ಅವರು ಕಲ್ಯಾಣದ ಬಿಜ್ಜಳರಾಜನ ಪ್ರಧಾನಮಂತ್ರಿಯಾಗಿ  ನಡೆಸಿದ ಆಡಳಿತ ಹೇಗಿತ್ತೆಂದರೆ, ಆ ರಾಜ್ಯದಲ್ಲಿ ನೀಡುವವರುಂಟು ಬೇಡುವವರಿಲ್ಲ, ಬೇಡುವವರಿಲ್ಲದ ಕಾರಣ ನಾನು ಬಡವನಾದೆ ಎಂದು ಬಸವಣ್ಣನವರೇ ಹೇಳುತ್ತಾರೆಂದರೆ ಆ ಕಲ್ಯಾಣ ರಾಜ್ಯ ಹೇಗಿತ್ತೆಂದು ಇಂದು ಊಹಿಸುವುದೂ ಕಷ್ಟ! ಆರ್ಥಿಕ ಅಸಮಾನತೆ ಸಾಮಾಜಿಕ ಅಸಮಾನತೆಗೆ ಕಾರಣವಾಗುವುದು, ನಂತರ ಕ್ಷೋಭೆ ಉಂಟಾಗುವುದು. ಅಕ್ಕಮಹಾದೇವಿ ತಾಯಿ ಹೇಳುತ್ತಾರೆ, “ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.”  ಬಸವಣ್ಣನವರ ಕಲ್ಯಾಣ ರಾಜ್ಯವೇ ಕಾಲ್ಪನಿಕ ಕೈಲಾಸವನ್ನು ಮೀರಿಸುವಂತಿತ್ತು ಎಂದರೆ ಬಹುಶಃ ನಮ್ಮ ಊಹೆಗೂ ನಿಲುಕಲಾರದ ಕಲ್ಯಾಣ ಅದಾಗಿತ್ತು. ಪಾಪದ ಮೂಲದಿಂದ ಮಾಡಿದ ಧನ ಸಂಗ್ರಹ ನಾಯಿಯ ಹಾಲಿಗೆ ಸಮ ಅದು ಸತ್ಪಾತ್ರಕ್ಕೆ ಸಲ್ಲದು ಎಂಬುದು ಬಸವಣ್ಣನವರ ಅಭಿಮತ, “ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ, ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ. ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ.”  ಅಂದರೆ ಸಂಪಾದನೆಯ ಮೂಲ ಮತ್ತು ಮಾರ್ಗ ಎರಡೂ ನ್ಯಾಯಯುತವಾಗಿರಬೇಕು ಹಾಗೆ ಸಂಪಾದಿಸಿದ ಸಂಪತ್ತು ಸದ್ವಿನಿಯೋಗವಾಗಬೇಕು ಎಂಬುದೇ ಕಲ್ಯಾಣ ರಾಜ್ಯದ ಸಂದೇಶ.

Previous post ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
Next post ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…

Related Posts

ಕರ್ತಾರನ ಕಮ್ಮಟ
Share:
Articles

ಕರ್ತಾರನ ಕಮ್ಮಟ

July 5, 2019 ಮಹಾದೇವ ಹಡಪದ
ವಸುಧೆಯೊಳು ಹೆಸರಾಂತ ಸೊನ್ನಲಿಗೆ ಎಂಬ ಊರಿನಲ್ಲಿ ಮುದ್ದಣ್ಣ ಸುಗ್ಗವ್ವೆ ಎಂಬ ಗಂಡ ಹೆಂಡತಿಗೆ ಮುದ್ದಾದ ಇಬ್ಬರು ಮಕ್ಕಳಿದ್ದರು. ದೊಡ್ಡವನು ಬೊಮ್ಮಣ್ಣ ಸಣ್ಣವನು ಧೂಳಯ್ಯ....
ಗಣಾಚಾರ
Share:
Articles

ಗಣಾಚಾರ

August 8, 2021 ಡಾ. ಪಂಚಾಕ್ಷರಿ ಹಳೇಬೀಡು
ಬಸವಾದಿ ಶರಣರು ಆಚರಿಸಿ, ಬೋಧಿಸಿದ ಆಚಾರಗಳಲ್ಲಿ ಒಂದಾದುದು ಗಣಾಚಾರವೆಂಬ ಆಚಾರ. ಆಚಾರವೆಂದರೆ ಸಮಾಜದೊಂದಿಗೆ ನಾವು ನಡೆದುಕೊಳ್ಳುವ ರೀತಿ ನೀತಿ. ಗಣ ಎಂದರೆ ಸಮೂಹ ಅಥವಾ ಸಮಾಜ...

Comments 12

  1. kalpana Jevargi
    Mar 7, 2019 Reply

    ದೇಶದ ಹಣಕಾಸು ಸ್ಥಿತಿಯ ಮೇಲೆ ದೇಶವೊಂದರ ಜನರ ಜೀವನ ಮಟ್ಟ ಅಳೆಯುತ್ತಾರೆ. ನಮ್ಮ ದೇಶದಲ್ಲಿ ದರಿದ್ರರಿಗೆ ಭವಿಷ್ಯವೇ ಇಲ್ಲವೆನ್ನುವಂತೆ ಅಸಮತೋಲನವಿದೆ. ಶರಣರ ಅರ್ಥ ಚಿಂತನೆಗಳನ್ನು ತಿಳಿಸುವ ಯಾವುದಾದರೂ ಪುಸ್ತಕಗಳೆನಾದರೂ ಇದ್ದಾವೆಯೇ? ತಮ್ಮಲ್ಲಿ ಮಾಹಿತಿ ಇದ್ದರೆ ಅದರ ಸಂಪೂರ್ಣ ಚಿತ್ರಣ ಬಯಲು ನಲ್ಲೇ ಕೊಡುವಿರಾ?
    ಕಲ್ಪನಾ ಜೇವರ್ಗಿ, ಎಂಎ ವಿದ್ಯಾರ್ಥಿ

  2. Maribasappa palled
    Mar 11, 2019 Reply

    ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಸರ್ಕಾರಿ ಹಣ ಯಾವತ್ತು ಪೂರ್ಣ ಪ್ರಮಾಣದಲ್ಲಿ ಖರ್ಚಾಗುವುದಿಲ್ಲ. ಸರ್ಕಾರ, ಅರ್ಥ ವ್ಯವಸ್ಥೆ ಮತ್ತು ಆಶಯಗಳು ಒಂದಾಗಿ ಕೆಲಸ ಮಾಡದ ಹೊರತು ಪ್ರಗತಿ ಸಾಧ್ಯವಿಲ್ಲ. ಅಧಿಕಾರದ ಬೆನ್ನು ಹತ್ತುವವರಿಗೆ ಮುಂದಾಲೋಚನೆಗಳು ಇರೋದಿಲ್ಲ. ಬಡತನ ರೇಖೆ ನಮ್ಮನ್ನು ಅಣಕಿಸುವಂತೆ ಕಣ್ಣಿಗೆ ರಾಚುತ್ತದೆ. ಅತ್ಯುತ್ತಮ ಲೇಖನ ಸರ್.

  3. vijayashankar u.p
    Mar 11, 2019 Reply

    “ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.” ಇಂಥ ನಾಡು ಈಗ ಸಾಧ್ಯವಾಗುವುದೇ ಅನ್ನುವುದು ಯೋಚಿಸುವ ವಿಷಯ. ವ್ಯಕ್ತಿ ಬದಲಾಗದೆ ಉದ್ಧಾರ ಸಾಧ್ಯವಿಲ್ಲ/

  4. sharada A.M
    Mar 11, 2019 Reply

    ಶ್ರಮಿಕರು ಮುಖ್ಯವಾಹಿನಿಗೆ ಬರದೆ ಅಭಿವೃದ್ಧಿ ಆಗದು ಎನ್ನುವ ನಿಮ್ಮ ಮಾತು ನಿಜ ಅಣ್ಣಾ. ಬಸವಣ್ಣನವರು ದುಡಿಯುವವರನ್ನು ಕಟ್ಟಿಕೊಂಡೇ ಕ್ರಾಂತಿ ಮಾಡಿದ್ದು. ಅದಕ್ಕೆ ಕಲ್ಯಾಣ ಸುಭಿಕ್ಷವಾಗಿತ್ತು. ಶರಣರು ಪ್ರಸನ್ನರಾಗಿ ಕಾಯಕ, ದಾಸೋಹದಲ್ಲಿ ತೊಡಗಿದ್ದರು.

  5. shashank g.k
    Mar 12, 2019 Reply

    ಆಯ್ದಕ್ಕಿ ಮಾರಯ್ಯ ಶರಣರು “ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು, ಕಾಯಕ ಸತ್ತು, ಹಣ ಹೊನ್ನ ಬೇಡಹೆನೆಂಬುದು ಕಷ್ಟವಲ್ಲವೆ ಸದ್ಭಕ್ತಂಗೆ? ಆ ಗುಣ ಅಮರೇಶ್ವರಲಿಂಗಕ್ಕೆ ದೂರ.” ಉತ್ಪಾದಕ ಕಾಯಕವಿಲ್ಲದೆ ತಾನು ಗುರುವೆಂದು, ಜಂಗಮವೆಂದು ಮನೆಮನೆ ಹೊಕ್ಕು ನೇಮ, ಪೂಜೆ, ಯಜ್ಞ ಯಾಗ, ಹೋಮ ಹವನಗಳನ್ನು ಮಾಡಿಸಲು ಪೌರೋಹಿತ್ಯವನ್ನೇ ಜಿವನೋಪಾಯವನ್ನಾಗಿಸಿಕೊಂಡವರನ್ನು ಕುರಿತು ಖಂಡಿಸುತ್ತಾರೆ.
    ಇಂಥ ಪ್ರಾಮಾಣಿಕ ವ್ಯಕ್ತಿಗಳನ್ನು ಸೃಷ್ಟಿ ಮಾಡಿದರೆ ಎಂತಹ ವ್ಯವಸ್ಥೆಯೂ ಸೂಪರ್ ಆಗಿರುತ್ತದೆ. ಅದ್ಭುತ ವೈಚಾರಿಕ ಲೇಖನ.

  6. ಮೂರ್ತಿ ಜಾಗಿರ್ದಾರ
    Mar 12, 2019 Reply

    ಪಾಪದ ಹಣವೇ ಎಲ್ಲ ಕಡೆ ಹರಿದಾಡುತ್ತಿದೆ. ಸಾರ್ವಜನಿಕರ ಕೆಲಸಗಳು ಬೇಕಾಬಿಟ್ಟಿಯಾಗಿವೆ. ವಾತಾವರಣ ಕೊಳೆತಾಗ ಯಾವ ಒಳ್ಳೆಯತನ ಹುಡುಕುವುದು ಗೊತ್ತಾಗುತ್ತಿಲ್ಲ. ಇಂತಹ ಲೇಕನಗಳನ್ನು ಓದಿದರೆ ಮನಸ್ಸು ಪಿಚ್ಚೆನಿಸುತ್ತದೆ. ಎಲ್ಲಿಂದ ಕಸಗುಡಿಸೋದು, ನೀವೇ ಹೇಳಿ.

  7. Ravindra Desai
    Mar 12, 2019 Reply

    ಈ ಚುನಾವಣಾ ಕಾಲದಲ್ಲಿ ಇಂತಹ ವಿಚಾರಗಳು ಎಲ್ಲಕಡೆ ಹರಿದಾಡಬೇಕು. ಜನ ಪ್ರಶ್ನೆ ಮಾಡಬೇಕು.

  8. Kamala l. akki
    Mar 12, 2019 Reply

    ಬಯಲು ನನ್ನನ್ನು ಶರಣರ ಓದಿಗೆ ಹಚ್ಚಿದೆ, ಎಲ್ಲ ಲೇಖಕರಿಗೂ ನನ್ನ ವಂದನೆಗಳು.

  9. Muniswamy k.p
    Mar 16, 2019 Reply

    ನಮ್ಮ ದೇಶದಲ್ಲಿ 2011 ನೇ ಇಸವಿಯ ಅಂಕಿ-ಅಂಶದ ಪ್ರಕಾರ ಸುಮಾರು 1.77 ದಶಲಕ್ಷ ಜನರು ಯೋಗ್ಯ ಆಹಾರವಿಲ್ಲದೇ ಹಸಿವಿನಿಂದ ನರಳುತ್ತಿದ್ದಾರೆ ಹಾಗೂ ರಸ್ತೆಬದಿಯ ಕಾಲುದಾರಿಯ ಮೇಲೆ, ರೈಲ್ವೆ ಪ್ಲಾಟ್ ಫಾರಂಗಳ ಮೇಲೆ, ಫ್ಲೈ ಓವರ್ ಗಳ ಕೆಳಗೆ, ಚರಂಡಿ ನಿರ್ಮಿಸಲೆಂದು ಶೇಖರಿಸಿರುವ ಸಿಮೆಂಟ್ ಕೊಳವೆಗಳ ಒಳಗೆ ಜೀವಿಸುತ್ತಿದ್ದಾರೆ.
    ನಮ್ಮ ದೇಶದ ಈ ಶೋಚನೀಯ ಸ್ಥಿತಿಗೆ ನಮ್ಮ ಅವ್ಯವಸ್ಥೆಯೇ ಕಾರಣ. ಸರಿಪಡಿಸುವ ಕ್ರಮಗಳ ಬಗ್ಗೆಯೂ ಲೇಖನದಲ್ಲಿ ಬರೆಯಬೇಕಿತ್ತು.

  10. jayaprakash hadimani
    Mar 18, 2019 Reply

    bayalu is my favourite blog, i read all the articles without fail, but i dont know how to comment. eventhough i have many things to express my love for the articles, i cant frame the sentences. thanks for all the readers who through light on the unknown things.

  11. ಸಿದ್ದರಾಜು ಧನ್ನೂರು
    Mar 23, 2019 Reply

    ಸಿದ್ದರಾಜು ಧನ್ನೂರು
    ಡಾಲರಿನ ಮುಂದೆ ರೂಪಾಯಿಯ ಕುಸಿತ ದಿನದಿನಕ್ಕೂ ಕುಸಿಯುತ್ತಿರುವ ದಿನಗಳಲ್ಲಿ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಅಧೋಗತಿ ನೋಡಬಹುದು. ನಮ್ಮ ಜೀವನಮಟ್ಟ ಹಾಳಾಗಿದೆ, ಹಣದ ದಾಹ ಎಲ್ಲ ಕಡೆ ಹೆಚ್ಚಿದೆ. ಶಾಂತಿ, ನೆಮ್ಮದಿಗಳು ದೂರವಾಗಿವೆ. ನಮ್ಮ ಸಮಸ್ಯೆಯ ಮೂಲ ಯಾವುದೆಂದು ತೋರಿಸುವ ಬರಹ ಚನ್ನಾಗಿದೆ.

  12. manohar achar
    Mar 25, 2019 Reply

    ಬಯಲು ನೋಡಿದೆ, ಸೊಗಸಾಗಿದೆ. ಆರ್ಥಿಕ ಚಿಂತನೆ ಬಗ್ಗೆ ಬರೆದ ಲೇಖನ ಚಿಂತನಾರ್ಹ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
Copyright © 2023 Bayalu