Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
Share:
Articles September 10, 2022 Bayalu

ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ

(ಅಣ್ಣ-ತಂಗಿಯರ ಸುಜ್ಞಾನದ ಪಯಣ)

ಅಲರೊಳಡಗಿದ| ಪರಿಮಳದಂತೆ||
ಪತಂಗದೊಳಡಗಿದ| ಅನಲನಂತೆ||
ಶಶಿಯೊಳಡಗಿದ| ಷೋಡಸಕಳೆಯಂತೆ||
ಉಲುಹಡಗಿದ| ವಾಯುವಿನಂತೆ||
ಸಿಡಿಲೊಳಡಗಿದ| ಗಾತ್ರದ ತೇಜದಂತೆ||
ಇರಬೇಕಯ್ಯಾ ಯೋಗ| ಎನ್ನ ಅಜಗಣ್ಣತಂದೆಯಂತೆ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-900 / ವಚನ ಸಂಖ್ಯೆ-1098)

ಮಹಿಳೆಯರು ಮನೆಬಿಟ್ಟು ಹೊರಗೆ ಬರಲಾರದಂತಹ ಕಾಲದಲ್ಲಿ ಅವರಿಗೆ ಆತ್ಮಗೌರವ ನೀಡಿ, ಅಕ್ಷರಲೋಕಕ್ಕೆ ಪರಿಚಯಿಸಿದ ಕಾಲಘಟ್ಟ 12ನೇ ಶತಮಾನ. ವಚನ ಸಾಹಿತ್ಯದಲ್ಲಿ ಸುಮಾರು 65/67 ಶರಣೆಯರ ಉಲ್ಲೇಖ ಬರುತ್ತದೆ. ಅವರಲ್ಲಿ 37 ವಚನಕಾರ್ತಿಯರ ವಚನಗಳು ನಮಗೆ ಇಲ್ಲಿಯವರೆಗೆ ಲಭ್ಯವಾಗಿವೆ. ತಮ್ಮ ಅನುಭವ ಮತ್ತು ಅನುಭಾವಗಳನ್ನು ಅದ್ಭುತವಾಗಿ ಅವರು ತಮ್ಮ ವಚನಗಳಲ್ಲಿ ಹಿಡಿದಿಟ್ಟಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಮೂರ್ತಿರೂಪ ಅಕ್ಕಮಹಾದೇವಿ, ಕಾಯಕನಿಷ್ಠೆಯ ಆಯ್ದಕ್ಕಿ ಲಕ್ಕಮ್ಮ, ಸದುವಿನಯದ ಸತ್ಯಕ್ಕ, ಅಕ್ಕ ನಾಗಲಾಂಬಿಕೆ, ಅಕ್ಕ ಗಂಗಾಂಬಿಕೆ, ಅಕ್ಕ ನೀಲಾಂಬಿಕೆ, ಗೊಗ್ಗವ್ವೆ, ಕದಿರೆ ರೆಮ್ಮವ್ವೆ, ಮೋಳಿಗೆ ಮಹಾದೇವಿ, ಬೊಂತಾದೇವಿ, ಅಕ್ಕಮ್ಮ, ಆಮುಗೆ ರಾಯಮ್ಮನವರಂಥ ಪ್ರಬುದ್ಧ ವಚನಕಾರ್ತಿಯರು ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. 900 ವರ್ಷಗಳ ಹಿಂದೆ, ಕೇವಲ ಎರಡೇ ಎರಡು ದಶಕಗಳಲ್ಲಿ ಸಮಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾದ ವಚನ ಚಳುವಳಿ ಇಡೀ ಪ್ರಪಂಚದಲ್ಲಿಯೇ ಒಂದು ಅದ್ಭುತ ನಿದರ್ಶನ. Mystic Messiah ಅಲ್ಲಮಪ್ರಭುಗಳಿಗೆ ಸರಿಸಮನಾಗಿ ನಿಂತು ಸಂವಾದ, ಚಿಂತನ ಮತ್ತು ಚರ್ಚೆಗಳನ್ನು ವಚನಕಾರ್ತಿಯರು ಮಾಡಿದರು. ಅಷ್ಟೇ ಅಲ್ಲಾ “ನೀವು ಮಾಡತಾ ಇರೋದು ಸತ್ಯಾನಾ?” ಅಂತಾ ಅಲ್ಲಮಪ್ರಭುಗಳನ್ನೇ ಪ್ರಶ್ನೆ ಮಾಡಿದವರು ಮುಕ್ತಾಯಕ್ಕ ಮತ್ತು ಅಕ್ಕಮಹಾದೇವಿ. ಅಲ್ಲಮಪ್ರಭು ಕೂಡಾ ಅವರನ್ನು ಮನಸಾರೆ ಮೆಚ್ಚಿಕೊಂಡು ನಮಿಸಿದ್ದರು. ಅಜಗಣ್ಣ ಮತ್ತು ಮುಕ್ತಾಯಕ್ಕ ಈಗಿನ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದವರು. ವ್ಯವಸಾಯವನ್ನು ಕಾಯಕವನ್ನಾಗಿಸಿಕೊಂಡಿದ್ದ ಸದಾಚಾರ ಸಂಪನ್ನರ ಮನೆತನದಲ್ಲಿ ಜನಿಸುತ್ತಾರೆ. ಅಜಗಣ್ಣ ತಮ್ಮ ಗುಪ್ತ ಭಕ್ತಿಯಿಂದ ಆಧ್ಯಾತ್ಮಿಕದಲ್ಲಿ ಅಸಾಮಾನ್ಯ ಎತ್ತರಕ್ಕೆ ಏರಿದ ಶರಣ. ಅವರು ಮುಕ್ತಾಯಕ್ಕನವರಿಗೆ ಅಣ್ಣನಲ್ಲದೇ ಆಧ್ಯಾತ್ಮಿಕ ಗುರುವಾಗಿದ್ದರು. ಅಣ್ಣ-ತಂಗಿ ಅನ್ಯೋನ್ಯತೆಗೆ ಸಾಕ್ಷಿಯಾಗಿದ್ದರು. ಅಣ್ಣ-ತಂಗಿಯರ ಈ ಪ್ರೀತಿ ಅನುಭೂತಿ ಚರಿತ್ರೆಯಲ್ಲಿ ಅಸಾಮಾನ್ಯ ಮಾದರಿ.

ವಚನ ಸಂಕಲನ-ಸಂಪಾದನೆಗಳ ಮೂಲಕ ಭಕ್ತಿ ತತ್ವದ ಅನುಭಾವವನ್ನು ಚಿತ್ರಿಸುವ ಕೃತಿಗಳಲ್ಲಿ ‘ಶೂನ್ಯ ಸಂಪಾದನೆ’ ಮುಖ್ಯವಾದದ್ದು. ಅಲ್ಲಮಪ್ರಭುದೇವರು ಅದರ ಹೃದಯ ಮತ್ತು ಬಸವಾದಿ ಶರಣರು ಅದರ ಅಂಗಾಂಗಗಳು. ಶೂನ್ಯಸಂಪಾದನೆ ಕೃತಿಗಳು ಬೇರೆ ಬೇರೆ ಕಾಲದಲ್ಲಿ ರಚನೆಯಾಗಿವೆ. ಅವುಗಳಲ್ಲಿ ಪ್ರಮುಖವಾದವು:
1. ಕ್ರಿ. ಶ. 1420: ಕನ್ನಡದ ಮೊದಲ ಶೂನ್ಯಸಂಪಾದನೆ ಬರೆದವರು ಶಿವಗಣ ಪ್ರಸಾದಿ ಮಹಾದೇವಯ್ಯ
2. ಕ್ರಿ. ಶ. 1430: ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’
3. ಕ್ರಿ. ಶ. 1495: ಹಲಗೇ ಆರ್ಯ, ಶಿವಗಣ ಪ್ರಸಾದಿ ಮಹದೇವಯ್ಯನವರ ಶೂನ್ಯಸಂಪಾದನೆಯನ್ನು ಮೊದಲು ಪರಿಷ್ಕರಿಸಿದರು.
4. ಕ್ರಿ. ಶ. 1510: ಗೂಳೂರು ಸಿದ್ಧವೀರಣ್ಣನೊಡೆಯರು ಬರೆದ ‘ಪ್ರಭುದೇವರ ಶೂನ್ಯಸಂಪಾದನೆ’
5. ಕ್ರಿ. ಶ. 1650: ಸಿದ್ಧನಂಜೇಶ ಬರೆದ ಶೂನ್ಯ ಸಂಪಾದನೆ ‘ಗುರುರಾಜ ಚಾರಿತ್ರ್ಯ’
6. ಕ್ರಿ. ಶ. 1672: ಶಾಂತಲಿಂಗ ದೇಶಿಕರು ಬರೆದ ‘ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ’
7. ಕ್ರಿ. ಶ. 1700: ಗೂಳೂರು ಸಿದ್ಧ ವೀರಣ್ಣನೊಡೆಯ ಬರೆದ ಪ್ರಭುದೇವರ ಶೂನ್ಯ ಸಂಪಾದನೆಯಲ್ಲಿ ‘ಮುಕ್ತಾಯಕ್ಕನ ಸಂಪಾದನೆಗಳು’.

ಈ ಗ್ರಂಥಗಳಲ್ಲಿ ಅಜಗಣ್ಣ -ಮುಕ್ತಾಯಕ್ಕನವರ ಜೀವನದ ವಿವರಣೆ ಮಾರ್ಮಿಕವಾಗಿ ನಿರೂಪಣೆಯಾಗಿದೆ. ಅಜಗಣ್ಣ ಅಮಳೋಕ್ಯದಲ್ಲಿ ಲಿಂಗ ಧರಿಸಿದ್ದರು ಎನ್ನುವ ಮಾಹಿತಿ ಇಲ್ಲಿ ಸಿಗುತ್ತದೆ. ಹಲಗೆ ಆರ್ಯರ ಕೃತಿಯಲ್ಲಿನ ಕಥಾನಕದಂತೆ ಅಜಗಣ್ಣ ಓರಗೆಯವರೊಡನೆ ಆಟವಾಡುವಾಗ ಗೆಳೆಯರು ಇಷ್ಟಲಿಂಗ ಕಸಿದುಕೊಳ್ಳಲು ಹೋದಾಗ ‘ಓಂ ನಮಃ ಶಿವಾಯ’ ಎನ್ನುತ್ತಾ ನುಂಗಿಬಿಟ್ಟರು. ಅದು ಅವರ ಅಮಳೋಕ್ಯ(ಅಮಳೋಕ್ಯ ಅಂದರೆ ದವಡೆ ಮತ್ತು ಗಂಟಲ ಮಧ್ಯೆ ಇರುವ ಸ್ಥಳ) ದಲ್ಲಿ ನಿಂತುಬಿಟ್ಟಿತು. ಬಾಲಕ ಅಜಗಣ್ಣ ಮನೆಗೆ ಬಂದಾಗ ಕೊರಳಲ್ಲಿ ಇಷ್ಟಲಿಂಗವು ಕಾಣದಾದಾಗ ಅವನನ್ನು ಮನೆಯಿಂದ ಹೊರ ಹಾಕಿದರಂತೆ. ಅಣ್ಣನ ಜೊತೆಗೆ ತಂಗಿ ಮುಕ್ತಾಯಕ್ಕ ಕೂಡಾ ಹೊರಟರು.

ಅಣ್ಣ-ತಂಗಿಯರಿಬ್ಬರೂ ‘ಅಡಕ’ ಎನ್ನುವ ಗ್ರಾಮದಲ್ಲಿದ್ದ ಸೋದರಮಾವನ ಮನೆಗೆ ಬರುತ್ತಾರೆ. ಸೋದರಮಾವ ಅವರನ್ನು ಪ್ರೀತಿಯಿಂದ ಸಾಕಿದ್ದಲ್ಲದೇ ತನ್ನ ಮಗಳನ್ನು ಅಜಗಣ್ಣನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಸೂಕ್ಷ್ಮ ಸ್ವಭಾವದ ಅಜಗಣ್ಣ ಕಡಿಮೆ ಮಾತನಾಡುತ್ತಿದ್ದರು. ಇದಕ್ಕಾಗಿ ಅವರ ಹೆಂಡತಿ ಉದಾಸೀನ ಮಾಡುತ್ತಿದ್ದಳು. ಅಷ್ಟೇನೂ ಸುಮಧುರ ದಾಂಪತ್ಯ ಇರಲಿಲ್ಲ ಅಂತ ಹಲಗೆ ಆರ್ಯರು ಬರೆಯುತ್ತಾರೆ. ಮುಂದೆ ಮುಕ್ತಾಯಕ್ಕನವರಿಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಸಳಿಕಲ್ಲು ಎನ್ನುವ ಗ್ರಾಮದ ವರನೊಂದಿಗೆ ಮದುವೆ ಆಗುತ್ತದೆ. ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗ್ರಾಮ ಮಸಳಿಕಲ್ಲು. ಕಲ್ಮಲ ಮತ್ತು ದೇವದುರ್ಗದ ಹೆದ್ದಾರಿಯಲ್ಲಿ ಬರುವಂಥ ಒಂದು ಗ್ರಾಮ. ಹರಿದಾಸ ಸಂಪ್ರದಾಯದ ದಾಸ ಚತುಷ್ಟಯ (ಪುರಂದರದಾಸರು, ವಿಜಯದಾಸರು, ಗೋಪಾಲದಾಸರು ಮತ್ತು ಜಗನ್ನಾಥದಾಸರು) ರಲ್ಲಿ ಒಬ್ಬರಾದ ಗೋಪಾಲದಾಸರ ಜನ್ಮಸ್ಥಳ ಮಸಳಿಕಲ್ಲು. ಇದಕ್ಕೆ ಮಸರಿಕಲ್ಲು, ಮೊಸರುಕಲ್ಲು ಎಂದೂ ಕರೆಯಲಾಗುತ್ತದೆ. ಗೋಪಾಲದಾಸರು 18 ನೇ ಶತಮಾನದ ಕಾಲಘಟ್ಟದಲ್ಲಿದ್ದ ದಾಸವರೇಣ್ಯರು.

ಮುಕ್ತಾಯಕ್ಕ ಮದುವೆ ಆಗಿ ಮಸಳಿಕಲ್ಲು ಗ್ರಾಮಕ್ಕೆ ಹೋದಾಗ ಅವರ ಜೊತೆ ಅಜಗಣ್ಣ ಬಂದು ಅಲ್ಲಿಯೇ ಬೇಸಾಯ ಮಾಡಿಕೊಂಡಿರುತ್ತಾರೆ. ಒಂದು ರಾತ್ರಿ ಕಡಲೆ ಬೆಳೆದ ಹೊಲಕ್ಕೆ ಕಾಯಲು ಹೋಗಿರುತ್ತಾರೆ. ಅಲ್ಲಿ ಹಾವು ತನ್ನ ಹೆಡೆಯ ಮೇಲೆ ರತ್ನವನ್ನು ಇಟ್ಟುಕೊಂಡು ಅದರ ಬೆಳಕಿನಲ್ಲಿ ಆಹಾರ ಹುಡುಕುತ್ತಾ ಹೋಗುವುದನ್ನು ಕಾಣುತ್ತಾರೆ. ಇವರು ಬಂದ ಶಬ್ದ ಕೇಳಿ ಆ ರತ್ನವನ್ನು ಬಾಯಲ್ಲಿಟ್ಟುಕೊಂಡು ಹಾವು ಹುತ್ತದಲ್ಲಿ ಹೋಗುತ್ತದೆ. ಇದನ್ನು ಕಂಡ ಅಜಗಣ್ಣ- ಹಾವು ತನ್ನ ಹೆಡೆಯ ಮೇಲಿರುವ ರತ್ನದ ಪ್ರಕಾಶದ ಮೂಲಕ ಆಹಾರವನ್ನು ಹೇಗೆ ಹುಡುಕಿಕೊಳ್ಳುತ್ತದೋ ಹಾಗೆಯೇ ಇಷ್ಟಲಿಂಗದ ಬೆಳಕಿನಲ್ಲಿ ಜ್ಞಾನ ಸಂಪಾದಿಸಬೇಕೆಂದುಕೊಂಡು ಇಷ್ಟಲಿಂಗವನ್ನು ಯಾರಿಗೂ ಕಾಣದಂತೆ ಅಮಳೋಕ್ಯದಲ್ಲಿ ಮುಚ್ಚಿಟ್ಟುಕೊಂಡರೆಂದು ಕೆಲವು ಕಡೆ ಉಲ್ಲೇಖವಾಗಿದೆ. ಬಹಿರಂಗದ ಪೂಜೆಗಿಂತ ಅಂತರಂಗದ ಆರಾಧನೆಯೇ ಶ್ರೇಷ್ಠವೆಂದುಕೊಂಡವರು ಅಜಗಣ್ಣ.

ಮತ್ತೊಂದು ನಿರೂಪಣೆಯ ಪ್ರಕಾರ ಘಟಸರ್ಪ ತನ್ನ ಹೆಡೆಯ ಮೇಲಿನ ರತ್ನವನ್ನು ಹೊರತೆಗೆದು ಅದರ ಬೆಳಕಿನಲ್ಲಿ ಆಹಾರ ಹುಡುಕಿಕೊಂಡು ಮತ್ತೆ ರತ್ನವನ್ನು ನುಂಗಿಕೊಂಡು ಹೋಗಿದ್ದನ್ನು ನೋಡಿದ ಅಜಗಣ್ಣ – ಅಂಡಜ ಪ್ರಾಣಿಯಾದ ಹಾವು ಪ್ರಕಾಶಮಯವಾದ ಅಮೂಲ್ಯ ರತ್ನವನ್ನು ಗುಪ್ತವಾಗಿರಿಸಿಕೊಂಡಂತೆ ಸ್ವಪ್ರಕಾಶಮಯವಾದ ಮಹಾಲಿಂಗವನ್ನು ಅಂತರಂಗದಲ್ಲಿ ಇರಿಸಿಕೊಂಡು ಗುಪ್ತ ಭಕ್ತಿ ಮಾಡಲು ಪಿಂಡಜರಾದ ಮಾನವರಿಗೇಕೆ ಸಾಧ್ಯವಿಲ್ಲ? ಅಂಡಜ ಪ್ರಾಣಿ ಹಾವೇ ಹಾಗೆ ಮಾಡಬೇಕಾದರೆ ಪಿಂಡಜರಾದ ನಾವು ಏಕೆ ಅಂತರಂಗದಲ್ಲಿ ಇಷ್ಟಲಿಂಗ ಪೂಜಿಸಬಾರದು ಎಂದುಕೊಂಡು ಬಹಿರಂಗದ ಅರ್ಚನೆ ಬಿಟ್ಟು ಅಂತರ್ಮುಖಿಯಾಗಿ ಪರಿಪೂರ್ಣ ನಿಃಶಬ್ದ ನಿರುಪಾಧಿಕ ಸ್ಥಿತಿಯಲ್ಲಿದ್ದುಬಿಟ್ಟರು. ಅಂದಿನಿಂದ ಅಜಗಣ್ಣನವರ- ಪ್ರಾಣಲಿಂಗಕ್ಕೆ ಅಂತರಂಗದ ನಿರ್ಗುಣವೇ ಅಷ್ಟವಿಧಾರ್ಚನೆಯಾಯಿತು. ಆನಂದ ಜಲವೇ ಮಜ್ಜನವಾಯಿತು. ಸುಬುದ್ಧಿಯೇ ಗಂಧವಾಯಿತು. ನಿತ್ಯತ್ವವೇ ಅಕ್ಷತೆಯಾಯಿತು. ಹೃದಯ ಕಮಲವೇ ಪುಷ್ಪವಾಯಿತು. ಸ್ವಾನುಭವವೇ ಧೂಪವಾಯಿತು. ಸಮ್ಯಕ್ ಜ್ಞಾನವೇ ಆರತಿಯಾಯಿತು. ನಿಜಭಕ್ತಿ ರಾಜ ರಸತೆ ತಾಂಬೂಲವಾಯಿತು. ‘ಇಷ್ಟಲಿಂಗವೇ ಪ್ರಾಣಲಿಂಗವಾಗಿ ಅಂತರಂಗದಲ್ಲಿ ಅರ್ಚಿಸಿ ಮನದಲ್ಲಿ ಮಂತ್ರವ ನೆನೆಯುತ್ತಿದ್ದ’ ಅಂತ ಶಾಂತಲಿಂಗ ದೇಶಿಕ ಬರೆಯುತ್ತಾರೆ. ಹೀಗೆ ಶಿವಭಕ್ತರ ಮನೆಯಲ್ಲಿ ಜನಿಸಿ ಅಂಗದ ಮೇಲೆ ಲಿಂಗವಿಲ್ಲದ, ಲಿಂಗಪೂಜೆ ಮಾಡಿಕೊಳ್ಳದೆ ಇರುವ, ಬಾಯಲ್ಲಿ ಮಂತ್ರೋಚ್ಛಾರಣೆ ಮಾಡದ ಅಜಗಣ್ಣನವರನ್ನು ಕಂಡು ನೆರೆಹೊರೆಯವರು ಆಡಿಕೊಳ್ಳಲು ಮತ್ತು ಪ್ರಶ್ನಿಸಲು ಪ್ರಾರಂಭ ಮಾಡುತ್ತಾರೆ. ಏನೇ ಅಂದರೂ, ಎಲ್ಲದಕ್ಕೂ ಮೌನವಾಗಿದ್ದ ಅಜಗಣ್ಣನವರನ್ನು ಜನ ಹುಚ್ಚನೆಂದು ತೀರ್ಮಾನ ಮಾಡಿದ್ದರು.

ಶೂನ್ಯ ಸಂಪಾದನೆಗಳಲ್ಲಿ ಬರುವ ಮತ್ತೊಂದು ಕಥೆ ಅಂದರೆ ಮುಕ್ತಾಯಕ್ಕ ಗಂಡನ ಮನೆಗೆ ಹೋಗುವಾಗ ಅವರ ನಡುವಿನ ಸಂಭಾಷಣೆ. ನಿನ್ನ ಸಾವಿನ ಸುದ್ದಿ ನನಗೆ ಹೇಗೆ ತಿಳಿಯಬೇಕು- ಮುಕ್ತಾಯಕ್ಕ ಅಣ್ಣನನ್ನ ಕೇಳುತ್ತಾರೆ. ಆಗ, “ತಂಗಿ ನಿನ್ನ ಮನಿಯ ಹಿತ್ತಲದೊಳಗ ಮಲ್ಲಿಗೆಯ ಗಿಡ ಹಚ್ಚು. ಯಾವಾಗ ಆ ಗಿಡ ಒಣಗತದೆ ಆವಾಗ ನನ್ನ ಅವಸಾನ ಅಂತ ತಿಳಿದುಕೋ” ಎನ್ನುತ್ತಾರೆ. ಇದು ಹಲಗೆ ಆರ್ಯನ ಶೂನ್ಯ ಸಂಪಾದನೆ. ಸಿದ್ಧನಂಜೇಶರ ಗುರುರಾಜ ಚಾರಿತ್ರ್ಯದಲ್ಲಿಯೂ ಮುಕ್ತಾಯಕ್ಕ, “ನಿನ್ನ ಅವಸಾನದ ಕುರುಹು ಏನು?” ಎನ್ನುತ್ತಾರೆ. “ನೀನುಟ್ಟ ಸೀರೆಯ ನಿರಿಗೆ ಕಳಚಿದಾಗ, ತೋರಮುಡಿ ಕಳಚಿದಾಗ, ಕಡೆಯುವ ಮೊಸರು ಕಲ್ಲು ಆದಾಗ ನನ್ನ ಅವಸಾನವಾಯಿತೆಂದು ತಿಳಿ” ಎಂದು ವಿವರಿಸಲಾಗಿದೆ.

ಅಜಗಣ್ಣ ಮತ್ತು ಮುಕ್ತಾಯಕ್ಕನವರ ಜೀವನ ಕಥೆಗಳು ಶೂನ್ಯ ಸಂಪಾದನೆಯ ಕೃತಿಗಳಲ್ಲಿ ಕಾಲಕಾಲಕ್ಕೆ ಮಾರ್ಪಾಡಾದರೂ ಕೆಲ ಸಂಗತಿಗಳು ಮತ್ತು ಸಂಕೇತಗಳು ಉಳಿದುಕೊಂಡವು. ಷೋಡಶೋಪಚಾರಗಳಿಲ್ಲದೇ ಬಹಿರಂಗದ ಆರಾಧನೆಗಿಂತ ಅಂತರಂಗದ ಅರಿವು ಆಚಾರ ಪೂಜೆಗಳು ಶ್ರೇಷ್ಠವೆಂದು ನಂಬಿದ್ದರು ಅಜಗಣ್ಣ. ಇದನ್ನೇ ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ:
ಅಂತರಂಗದಲ್ಲಿ | ಆಯತವನರಿದವಂಗೆ||
ಬಹಿರಂಗದಲ್ಲಿ | ಹಮ್ಮೆಲ್ಲಿಯದಯ್ಯ||
ಅಂತರಂಗದಲ್ಲಿ | ಅನಿಮಿಷನಾಗಿ||
ನಿರಂತರ ಲಿಂಗಸುಖಿ | ನೋಡಯ್ಯ||
ಸರ್ವೇಂದ್ರಿಯ | ಸಮ್ಮತವಾಯಿತ್ತು||
ಮಹಾಘನ ಸೋಮೇಶ್ವರ | ಮುಂತಾಗಿ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-974 / ವಚನ ಸಂಖ್ಯೆ-198)
ಬದುಕಿನುದ್ದಕ್ಕೂ ಅಂತರಂಗದ ಪೂಜೆ ಕೈಗೊಂಡು ಅರಿವಿನ ಜ್ಞಾನಪ್ರಕಾಶವನ್ನು ಕಂಡಿದ್ದ ಅಜಗಣ್ಣ ಐಕ್ಯಸ್ಥಲವನ್ನು ಮುಟ್ಟಿ ಬಿಟ್ಟಿದ್ದರೆಂಬುದು ಬಹಳ ಜನರಿಗೆ ಅರ್ಥವಾಗಲೇ ಇಲ್ಲ. ಲಕ್ಕುಂಡಿಯಲ್ಲಿ ಈಗಲೂ ಇರುವ ಸೋಮೇಶ್ವರ ದೇವಾಲಯದ ಅವರ ಇಷ್ಟದೈವ ಸೋಮೇಶ್ವರ. ‘ಮಹಾಘನ ಸೋಮೇಶ್ವರಲಿಂಗ’ ಎನ್ನುವ ವಚನಾಂಕಿತದಿಂದ ಬರೆದ ಅವರ ಹತ್ತು ವಚನಗಳು ಲಭ್ಯವಾಗಿವೆ. ಕೇವಲ ಹತ್ತು ವಚನ ಬರೆದಿದ್ದರೂ ಅನುಭಾವದಲ್ಲಿ ಶ್ರೇಷ್ಠವಾಗಿವೆ. ಚೆನ್ನಬಸವಣ್ಣ ತಮ್ಮ ವಚನದಲ್ಲಿ ಆ ವಚನಗಳ ಗುಣಮಟ್ಟವನ್ನು ಹೀಗೆ ನಿರೂಪಿಸಿದ್ದಾರೆ.
ಆದ್ಯರ ಅರವತ್ತು ವಚನಕ್ಕೆ | ದಣ್ಣಾಯಕರಿಪ್ಪತ್ತು ವಚನ ||
ದಣ್ಣಾಯಕರ ಇಪ್ಪತ್ತು ವಚನಕ್ಕೆ | ಪ್ರಭುದೇವರ ಹತ್ತು ವಚನ ||
ಪ್ರಭುದೇವರ ಹತ್ತು ವಚನಕ್ಕೆ | ಅಜಗಣ್ಣನ ಐದು ವಚನ ||
ಅಜಗಣ್ಣನ ಐದು ವಚನಕ್ಕೆ | ಕೂಡಲಚೆನ್ನಸಂಗಮದೇವಾ ||
ಮಹಾದೇವಿಯಕ್ಕಗಳದೊಂದೆ | ವಚನ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-318 / ವಚನ ಸಂಖ್ಯೆ-225)

ಅಕ್ಕಮಹಾದೇವಿ ಭಕ್ತಿ ವೈರಾಗ್ಯ ಮಾರ್ಗದ ಪ್ರತಿಪಾದಕರಾದರೆ ಮುಕ್ತಾಯಕ್ಕ ವೈಚಾರಿಕ ದಿಟ್ಟ ನಿಲುವಿನ ಜ್ಞಾನ ಮಾರ್ಗದ ಪ್ರತಿಪಾದಕರು. ‘ಅಜಗಣ್ಣ’ ಅಥವಾ ‘ಅಜಗಣ್ಣ ತಂದೆ’ ಎಂಬ ವಚನಾಂಕಿತದಿಂದ ವಚನಗಳನ್ನು ರಚಿಸಿದ ಮುಕ್ತಾಯಕ್ಕನವರ ಲಭ್ಯ ವಚನಗಳು 37. ಮುಕ್ತಾಯಕ್ಕ ಮುಟ್ಟಿದ ಅನುಭಾವದ ನೆಲೆ ಮಹತ್ತರವಾದುದು. ಒಂದು ದಿನ ಅಜಗಣ್ಣ ಹೊಲದಿಂದ ಕೆಲಸ ಮುಗಿಸಿ ಬರುವಾಗ ಭಾರದ ಗೋಧಿ ಚೀಲ ಹೊತ್ತು ತಂದಿದ್ದರು. ತರುವ ಭರದಲ್ಲಿ ಮನೆ ಬಾಗಿಲಿನ ಚೌಕಟ್ಟು ತಲೆಗೆ ಬಡಿಯುತ್ತದೆ. ಆಗ ನೋವಿನಲ್ಲಿ ‘ಓಂ ನಮಃ ಶಿವಾಯ’ ಅಂದುಬಿಡುತ್ತಾರೆ, ಅಮಳೋಕ್ಯದಲ್ಲಿದ್ದ ಇಷ್ಟಲಿಂಗ ಅವರ ಕೈಗೆ ಬರುತ್ತದೆ. ತನ್ನ ಭಕ್ತಿ ಕೈಹಿಡಿದ ಪತ್ನಿಗೂ ತಿಳಿಯಬಾರದೆನ್ನುವ ಇಚ್ಛೆಯಿತ್ತು ಅವರಿಗೆ. ಇದಕ್ಕಾಗಿ ಏನೆಲ್ಲ ತಿರಸ್ಕಾರಗಳಿಗೆ ಒಳಪಟ್ಟರೂ ನಿರಾಡಂಬರದ ಬದುಕನ್ನು ಸಾಧಿಸಿದ್ದರು. ಈಗ ಎಲ್ಲವೂ ಪ್ರಕಟವಾಗಿ ತನ್ನ ಗಂಡ ವಾಸ್ತವದಲ್ಲಿ ಶಿವಭಕ್ತನಿದ್ದರೂ ಬಹಿರಂಗದಲ್ಲಿ ತೋರ್ಪಡಿಸಲಿಲ್ಲ ಎಂದು ಅವರ ಪತ್ನಿಗೆ ತಿಳಿಯುತ್ತದೆ. ಅಜಗಣ್ಣ ತನ್ನ ಗುಪ್ತಭಕ್ತಿ ಪ್ರಕಟವಾಯಿತಲ್ಲಾ ಅಂತ ದುಃಖಪಡುತ್ತಾರೆ. ಅಂಗದ ಮೇಲೆ ಲಿಂಗ ಸ್ವಾಯತವಾದಾಗ ಲಿಂಗಾಂಗ ಸಾಮರಸ್ಯವನ್ನು ಕಂಡಂಥ ಜನ ಅವರ ಶಿವಸಮಾಧಿಯನ್ನು ಜರುಗಿಸಿದರು ಎಂದು ಗುರುರಾಜ ಚಾರಿತ್ರ್ಯದಲ್ಲಿ ಬರೆಯಲಾಗಿದೆ.
ಅಜಗಣ್ಣ ಲಿಂಗೈಕ್ಯರಾದಾಗ ಮುಕ್ತಾಯಕ್ಕನ ಮನೆ ಹಿತ್ತಲದಲ್ಲಿದ್ದ ಮಲ್ಲಿಗೆ ಗಿಡಗಳು ಒಣಗಿದವು. ಅವರು ಆತಂಕದಿಂದ ದುಃಖ ತಪ್ತಳಾಗಿ ಮುಕ್ತಕೇಶಿಯಾಗಿ ಲಕ್ಕುಂಡಿಗೆ ಧಾವಿಸುತ್ತಾರೆ. ತನ್ನ ಜೀವನದ ಆಧ್ಯಾತ್ಮಿಕ ಭ್ರಾತೃವಾತ್ಸಲ್ಯದ ಸಾಕಾರವು ನಿರಾಕಾರವಾದದ್ದರಿಂದ ಮನೆ ಅಷ್ಟೇ ಅಲ್ಲಾ ಇಡೀ ಲೋಕವೇ ಬರಿದಾಗಿ ಕಂಡ ಮುಕ್ತಾಯಕ್ಕ ದಿಕ್ಕುಗೆಟ್ಟುಹೋದರು. ಆಗ ಅಲ್ಲಮಪ್ರಭು ಅಲ್ಲಿಗೆ ಬರುತ್ತಾರೆ. ಹನ್ನೆರಡನೇ ಶತಮಾನದ ಭಕ್ತಿ ಚಳುವಳಿಯಲ್ಲಿ ಅಲ್ಲಮಪ್ರಭುಗಳ ಈ ಸುತ್ತಾಟ ಮಹತ್ವವಾದದ್ದು. ಸಿದ್ಧರಾಮೇಶ್ವರ, ಗೋರಕ್ಷ, ಮರುಳ ಶಂಕರದೇವ ಮುಂತಾದವರನ್ನು ಶರಣ ಸಂಕುಲಕ್ಕೆ ಪರಿಚಯಿಸಿದವರು ಅಲ್ಲಮಪ್ರಭು. ಸಾಮಾನ್ಯವಾಗಿ ಶಿಷ್ಯರು ಗುರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಅಲ್ಲಮಪ್ರಭು ಶಿಷ್ಯರನ್ನು ಹುಡುಕಿ ಅವರಿಗೆ ಜ್ಞಾನ ಪ್ರಕಾಶ ನೀಡಿ ಕಲ್ಯಾಣಕ್ಕೆ ಕರೆತರುತ್ತಾರೆ. ಅದಕ್ಕೆ ಶಿವಗಣಪ್ರಸಾದಿ ಮಹದೇವಯ್ಯನವರು ತಮ್ಮ ಶೂನ್ಯಸಂಪಾದನೆಯಲ್ಲಿ ಈ ವಿಷಯಕ್ಕೆ ಬಹಳ ಮಹತ್ವ ನೀಡಿದ್ದಾರೆ. ಅಲ್ಲಮಪ್ರಭು ಯಾಕೆ ಪ್ರಯಾಣ ಮಾಡುತ್ತಿದ್ದರೆಂದರೆ ಜ್ಞಾನಸ್ಥಲವಾದ ಜಂಗಮರಿಗೆ ಎರಡು ಜವಾಬ್ದಾರಿಯುತ ಕೆಲಸಗಳು: ಒಂದು ಜ್ಞಾನ ಪ್ರಸಾರ, ಇನ್ನೊಂದು ಜ್ಞಾನ ಸೃಷ್ಟಿ. ಜ್ಞಾನ ಒಂದು ಕಡೆ ಇರಬಾರದು. ಎಲ್ಲಿ ಜ್ಞಾನದ ಅವಶ್ಯಕತೆ ಇದೆಯೋ ಅಲ್ಲಿಗೆ ಹೋಗುವುದು ಅನಿವಾರ್ಯ. ಜಂಗಮ ಓಡಾಡುವುದು ತನಗಾಗಿ ಅಲ್ಲಾ, ‘ಸಕಲ ಪುರಾತನ ಗಣಂಗಳ ಕೃತಾರ್ಥಂ ಮಾಡಲೋಸುಗ ಸುಳಿದಾಡುತಿರ್ದಂ.’ ಅಲ್ಲಮಪ್ರಭುಗಳ ಈ ಓಡಾಟವನ್ನು ಕಲ್ಯಾಣದ ಇಡೀ ಭಕ್ತಿ ಚಳುವಳಿಯಲ್ಲಿ ಕಾಣಬಹುದು. ಅಲ್ಲಮಪ್ರಭು ಮುಕ್ತಾಯಕ್ಕನವರನ್ನು ಸಂತೈಸಲು ಬಂದ ಈ ಸನ್ನಿವೇಶವನ್ನು ಶೂನ್ಯ ಸಂಪಾದನೆಯಲ್ಲಿ ‘ಮುಕ್ತಾಯಕ್ಕನ ಸಂಪಾದನೆಗಳು’ ಎನ್ನಲಾಗಿದೆ. ಅಲ್ಲಮಪ್ರಭು ‘ಏನಾಯ್ತು ತಾಯಿ?’ ಅಂತ ಮಾತಿಗೆ ಎಳೆಯಲೆಂದೇ ಕೇಳುತ್ತಾರೆ. ಇದಕ್ಕೆ ದುಃಖದಿಂದಲೇ ಮುಕ್ತಾಯಕ್ಕ ವಚನದ ಮೂಲಕ ಹೇಳುತ್ತಾರೆ:
ಅರಿವನಣಲೊಳಗಿಕ್ಕಿ | ಅಗಿವುತ್ತಿದೆ ಮರ್ತ್ಯಲೋಕವೆಲ್ಲವು ||
ಅರಿವು ಉಳಿಯಲರಿಯದೆ | ಕೆಟ್ಟಿತ್ತು ಲೋಕವೆಲ್ಲವು ||
ನಾನೆಂತು | ಬದುಕುವೆನಣ್ಣಾ? ||
ಕತ್ತಲೆ ಬೆಳಗ ಕಾಂಬ | ಸಂದೇಹಿ ನಾನೊಬ್ಬಳು ||
ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೋ | ಅಜಗಣ್ಣ ನಿನ್ನ ಯೋಗ |
|
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1097)
ತುತ್ತನ್ನು ಬಾಯಲ್ಲಿಟ್ಟುಕೊಂಡು ಜಗಿದು, ಜಗಿದು ತಿನ್ನುವಂತೆ, ಮಾತುಗಳಲ್ಲಿ ಮುಳುಗಿದ ಈ ಲೋಕ ನಿಜವಾದ ಅರಿವನ್ನು ಹಂಚುವಲ್ಲಿ ಸೋತು ಹೋಗಿದೆ. ಬರೀ ಮಾತಿನ ಈ ಜಗತ್ತಿಗೆ ಅಣ್ಣ ಅಜಗಣ್ಣ ನನ್ನನ್ನ ಒಬ್ಬಳನ್ನೇ ಬಿಟ್ಟು ಹೋದರೆ ಹೇಗೆ ಇರಲಿ? ಕತ್ತಲೆ ಬೆಳಕು ಅನ್ನುವ ಅರಿವು ಜ್ಞಾನ ನನಗಿಲ್ಲ. ಅಜಗಣ್ಣನು ಅರಿವಿನ ಯೋಗದ ಕನ್ನಡಿಯನ್ನು ನನ್ನೆದುರಿಗೆ ಇಟ್ಟು ಕಣ್ಣು ಕಟ್ಟಿ ಬಿಟ್ಟನು. ಈಗ ನನಗಾರು ದಿಕ್ಕಿಲ್ಲವೆಂದು ದುಃಖದಿಂದ ನಿವೇದನೆ ಮಾಡುತ್ತಾರೆ.
ಸ್ಫಟಿಕ ಪ್ರಜ್ವಲಜ್ಯೋತಿ | ಘಟದೊಳಗೆ ತೋರುತ್ತಿರೆ ||
ದಿಟಪುಟವನತಿಗಳೆದು | ಸಟೆಯ ಬಳಸುವರೆ? ||
ಅಂತರಂಗದ ಸುದ್ದಿಯ | ಬಹಿರಂಗಕ್ಕೆ ತಂದು ||
ಸಂತೈಸಲರಿಯದೆ | ಮರುಳಾದಿರಣ್ಣಾ ||
ಜಂತ್ರದ ಕೀಲಕೂಟದ | ಸಂಚದ ಭೇದವು ತಪ್ಪಿ ||
ಮಂತ್ರ ಭಿನ್ನವಾಗಿ | ನುಡಿವರೆ ಅಜಗಣ್ಣಾ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-903 / ವಚನ ಸಂಖ್ಯೆ-1130)
ಘಟಸರ್ಪವು ರತ್ನವನ್ನು ಗೋಪ್ಯವಾಗಿರಿಸಿಕೊಂಡಂತೆ ಅಜಗಣ್ಣ ತನ್ನೆಲ್ಲ ಭಕ್ತಿ ಪೂಜೆಗಳನ್ನೂ ಹೊರಗೆ ತೋರ್ಪಡಿಸಲಿಲ್ಲ. ಹೊರಗೆ ಭವಿ ಒಳಗೆ ಭಕ್ತನಾಗಿದ್ದ. ಆ ಅಂತರಂಗದ ಬೆಳಕನ್ನು ನಾನು ಮಾತ್ರ ಬಲ್ಲೆ ಎಂದು ಅಣ್ಣನ ದೇಹವನ್ನು ತೊಡೆಯ ಮೇಲಿರಿಸಿಕೊಂಡು ದುಃಖಿಸುತ್ತಿದ್ದಾರೆ. ಮುಂದುವರೆದು ಅಣ್ಣನ ಉಪದೇಶ ಹೇಗಿತ್ತು ಎಂದು ವಿವರಿಸುತ್ತಾರೆ:
ಅಂಧಕನ ಕೈಯ | ಅಂಧಕ ಹಿಡಿದಂತಿರಬೇಕು ||
ಮೂಗನ ಕೈಯಲ್ಲಿ | ಕಾವ್ಯವ ಕೇಳಿದಂತಿರಬೇಕು ||
ದರ್ಪಣದೊಳಗೆ ಪ್ರತಿಬಿಂಬದಂತೆ | ಹಿಡಿವರಿಗಳವಲ್ಲದಿರಬೇಕು ||
ಅಣ್ಣಾ ಕೂರ್ಮನ | ಶಿಶುವಿನ ಸ್ನೇಹದಂತೆ ||
ಇರಲೊಲ್ಲದೆ | ಆರೂಢಗೆಟ್ಟೆಯೊ ಅಜಗಣ್ಣಾ

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1095)
ಅಜಗಣ್ಣ ಎಂದಿಗೂ ಮುಕ್ತಾಯಕ್ಕನವರಿಗೆ ಮುಂದೆ ಕುಳಿತು ಹೇಳಿಕೊಡಲಿಲ್ಲ. ಕಿವಿಗಳಿಂದ ಅಣ್ಣನ ಮಾತು ಕೇಳಿಸಿಕೊಂಡು ಕಲಿಯಲಿಲ್ಲ. ಎಲ್ಲಿ ಹೋಗಬೇಕು, ಹೇಗೆ ಹೋಗಬೇಕು ಅನ್ನೋದು ಗೊತ್ತಿಲ್ಲದೇ ಇರುವ ಒಬ್ಬ ಕುರುಡ ಇನ್ನೊಬ್ಬ ಕುರುಡನ ಕೈ ಹಿಡಿದು ಮುನ್ನಡೆಸುವಂತೆ ಮಾರ್ಗದರ್ಶನ ನೀಡಿದ. ಆ ಉಪದೇಶ ಮೂಗನ ಕಾವ್ಯದಂತಿತ್ತು. ಕನ್ನಡಿಯೊಳಗೆ ಮೂಡಿದ ಪ್ರತಿಬಿಂಬವು ಕನ್ನಡಿಯೊಳಗೆ ಸಮಾವಿಷ್ಠವಾಗುವಂತಿತ್ತು. ಆಮೆಯು ತನ್ನ ಮರಿಗೆ ದೃಷ್ಟಿಮಾತ್ರದಿಂದ ಹಸಿವನ್ನು ನೀಗಿಸುವಂತೆ ತನ್ನ ಆಧ್ಯಾತ್ಮಿಕ ತಿಳುವಳಿಕೆಯ ಹಸಿವನ್ನು ನೋಟ ಮಾತ್ರದಿಂದಲೇ ನೀಗಿಸಿದನು. ಹೀಗೆ ಮುಂದುವರೆಸದೆ ಹೋಗಿಬಿಟ್ಟೆಯಲ್ಲಾ ಅಜಗಣ್ಣ ತಂದೆ ಎಂದು ಕಳವಳಿಸುತ್ತಾರೆ. ಇದಕ್ಕೆ ಅಲ್ಲಮಪ್ರಭು ಸಂತೈಸುವ ಅಂತಃಕರಣದ ಸಂವಾದದಲ್ಲಿ ಕೇಳುತ್ತಾರೆ:
ಅಂಗೈಯೊಳಗೊಂದು| ಅರಳ್ದ ತಲೆಯ ಹಿಡಿದುಕೊಂಡು||
ಕಂಗಳ ಮುತ್ತ ಪವಣಿಸುವಾಕೆ| ನೀನಾರು ಹೇಳಾ?||
ಸಂದ ಸಂಪಿಗೆಯರಳ ತುಂಬಿ| ಬಂದುಂಬ ಭೇದವನರಿಯದೆ||
ಹಂಬಲಿಸುವ| ಪರಿತಾಪವೇನು ಹೇಳಾ?||
ಒಂದೆಂಬೆನೆ ಎರಡಾಗಿದೆ| ಎರಡೆಂಬೆನೆ ಒಂದಾಗಿದೆ||
ಅರಿವಿನೊಳಗಣ| ಮರಹಿದೇನು ಹೇಳಾ?||
ದುಃಖವಿಲ್ಲದ ಅಕ್ಕೆ| ಅಕ್ಕೆಯಿಲ್ಲದ ಅನುತಾಪ||
ನಮ್ಮ ಗುಹೇಶ್ವರಲಿಂಗದಲ್ಲಿ| ತೋರುತಿದೆ||
ನೀನಾರೆಂದು ಹೇಳೆ| ಎಲೆ ಅವ್ವಾ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-195 / ವಚನ ಸಂಖ್ಯೆ-724)
ಅರಳ್ದ ತಲೆ- ಲಿಂಗ ಸ್ವರೂಪಿ ಶರೀರವನ್ನು ಅಂಗೈಲ್ಲಿ ಹಿಡಿದು, ಕರುಳು ಕಿತ್ತು ಬರುವಂತೆ ರೋಧಿಸುತ್ತಿದ್ದ ಮುಕ್ತಾಯಕ್ಕನನ್ನು ಕುರಿತು ಅರಳಿದ ಸಂಪಿಗೆಯ ಸುತ್ತ ಸುತ್ತುತ್ತಾ ಮಧುವನ್ನು ದುಂಬಿಗಳು ಹುಡುಕುವ ಹಾಗೆ ನೀನ್ಯಾಕೆ ಶರೀರದ ಮುಂದೆ ಕುಳಿತು ಅಳುತ್ತೀಯಾ ಅದು ಶರಣರಿಗೆ ಶೋಭಿಸುವುದಿಲ್ಲ. ನಿನಗೆ ಅಂತರಂಗದ ಅರಿವಿನ ಮಹತ್ವವೇ ಗೊತ್ತಿಲ್ಲ. ದುಃಖ, ದುಗುಡ… ಇವೆಲ್ಲಾ ಬಾಹ್ಯಕ್ಕೆ ತೋರುವ ಸ್ವರೂಪಗಳು. ಅಜಗಣ್ಣನನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಈ ರೀತಿ ಅಳಬೇಕಿಲ್ಲ, ಹುಟ್ಟು ಸಾವಿನ ಭೇದವನ್ನರಿತೂ ಅಳುವುದು ಸರಿಯಲ್ಲ… ಅನುಭಾವದ ಮಧು ಹೀರಿ ಪರಿಪೂರ್ಣ ಲಿಂಗಸ್ಥಿತಿ ಸಾಧಿಸಿದ ಅಣ್ಣನನ್ನು ತಿಳಿದುಕೊಳ್ಳುವಲ್ಲಿ ವಿಫಲವಾಗಿದ್ದೀಯಾ ಎನ್ನುವ ಸೂಕ್ಷ್ಮತೆ ಅವರ ಮಾತಲ್ಲಿದೆ. ಅಣ್ಣನಿಂದ ಪಡೆಯಬೇಕಾದದ್ದು ಬಹಳಷ್ಟು ಇತ್ತು ಆದರೆ ಸಾಧ್ಯವಾಗಲಿಲ್ಲ ಎನ್ನುವ ದುಃಖ ಒಂದೆಡೆ, ಅಣ್ಣನಿಲ್ಲಾ ಅನ್ನುವ ಆಘಾತ ಇನ್ನೊಂದೆಡೆ ಕಾಣುತ್ತಿದೆ. ನೀನು ಅಸಾಮಾನ್ಯ ಪ್ರತಿಭೆಯುಳ್ಳವಳು. ನೀನಾರೆಂದು ಹೇಳೇ ಅವ್ವಾ ಎಂದು ಕಕ್ಕುಲತೆಯಿಂದ ಕೇಳುತ್ತಾ, ಮುಕ್ತಾಯಕ್ಕನ ಅಂತರಂಗದ ಅರಿವನ್ನು ಮೂಡಿಸುವ ಪ್ರಯತ್ನದಲ್ಲಿ ಮುಂದಿನ ಹೆಜ್ಜೆ ಇಡುತ್ತಾರೆ. ಅದಕ್ಕೆ ಮುಕ್ತಾಯಕ್ಕಾ-
ಆರೆಂದು ಕುರುಹ ಬೆಸಗೊಳಲು| ಏನೆಂದು ಹೇಳುವೆನಯ್ಯಾ? ||
ಕಾಯದೊಳಗೆ ಮಾಯವಿಲ್ಲ| ಭಾವದೊಳಗೆ ಭ್ರಮೆಯಿಲ್ಲ ||
ಕರೆದು ಬೆಸಗೊಂಬಡೆ| ಕುರುಹಿಲ್ಲ||
ಒಬ್ಬರಿಗೂ ಹುಟ್ಟದೆ| ಅಯೋನಿಯಲ್ಲಿ ಬಂದು||
ನಿರ್ಬುದ್ಧಿಯಾದವಳ| ನೇನೆಂಬೆನಣ್ಣಾ?||
ತಲೆಯಳಿದು ನೆಲೆಗೆಟ್ಟು| ಬೆಳಗುವ ಜ್ಯೋತಿ||
ಎನ್ನ ಅಜಗಣ್ಣತಂದೆಯ| ಬೆನ್ನ ಬಳಿಯವಳಾನಯ್ಯ

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-900 / ವಚನ ಸಂಖ್ಯೆ-1102)
ತಾನು ಅಜಗಣ್ಣನ ಸಹೋದರಿ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಅವರು ತನ್ನನ್ನು ಗುರುತಿಸಿಕೊಂಡಿದ್ದೆ ಹಾಗೆ. ಸ್ವಂತ Identity ಎಂಬುದೇ ಇಲ್ಲ, ಹಾಗಾಗಿ ನಾನ್ಯಾರು ಅನ್ನುವುದಕ್ಕೆ ಉತ್ತರ ಇಲ್ಲ. ಈ ದೇಹಕ್ಕೆ ನಾನೆಂಬ ಮಾಯೆಯಿಲ್ಲ. ಏನೆಲ್ಲಾ ಸಾಧನೆ ಮಾಡಿದ್ದೇನೆ ಎನ್ನುವ ಭಾವ ಭ್ರಮೆಯೆಂಬ ಮರೀಚಿಕೆ ಇಲ್ಲ. ಅಂತರಂಗದ ಅರಿವು ಅವರಿವರಿಂದ ಪಡೆದ ಜ್ಞಾನ ಪ್ರಕಾಶ ಅಲ್ಲ. ಅದು ತನ್ನನ್ನು ತಾನು ಅರಿತಾಗ ಮಾತ್ರ ಸಾಧ್ಯ. ಆಗ ಬಹಿರಂಗದ ಆಡಂಬರ ಬೇಕಿಲ್ಲ. ಅದರ ಪರಿಚಯ ಹೇಗೆ ಮಾಡಿಕೊಡಲಿ? ಬುದ್ಧಿಯಿಲ್ಲದ ತಂಗಿಗೆ ಈ ಎಲ್ಲ ಅರಿವನ್ನೂ ಬೆಳಗಿಸಿದ ಅರಿವಿನ ಕುರುಹಾದ ಅಜಗಣ್ಣ ಜ್ಞಾನ ಪ್ರಕಾಶ ಬೆಳಗಿದ ಜ್ಯೋತಿ. ಇಂಥ ಅಜಗಣ್ಣನ ತಂಗಿ ತಾನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮುಕ್ತಾಯಕ್ಕ. ಅಜಗಣ್ಣನ ಗುಪ್ತ ಭಕ್ತಿಯ ಬಗ್ಗೆ ಅಲ್ಲಮಪ್ರಭುಗಳು ಮೊದಲೇ ತಿಳಿದಿದ್ದರು ಎನ್ನುವುದಕ್ಕೆ ಈ ವಚನ ಸಾಕ್ಷಿ:
ಕಾಣದುದ ಕಂ[ಡ]| ಕೇಳದುದ ಕೇಳಿ[ದ]||
ಮುಟ್ಟಬಾರದುದ ಮುಟ್ಟಿದ| ಅಸಾಧ್ಯವ ಸಾಧಿಸಿದ||
ತಲೆಗೆಟ್ಟುದ ತಲೆವಿಡಿದ | ನೆಲೆಗೆಟ್ಟುದ ನಿರ್ಧರಿಸಿದ||
ಗುಹೇಶ್ವರಾ ನಿಮ್ಮ | ಶರಣ ಅಜಗಣ್ಣಂಗೆ||
ಶರಣೆಂದು | ಶುದ್ಧನಾದೆನು.

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-236 / ವಚನ ಸಂಖ್ಯೆ-1064)
ಲೌಕಿಕರು ಕಾಣಲಾಗದ್ದನ್ನು, ಕೇಳಲಾಗದ್ದನ್ನು, ಮುಟ್ಟಲಾಗದ್ದನ್ನು, ಅಸಾಮಾನ್ಯರಿಗೂ ಸಾಧ್ಯವಾಗದ್ದನ್ನು ಸಾಧಿಸಿದ್ದ ಅಜಗಣ್ಣನಿಗೆ ಶರಣು ಎನ್ನುತ್ತಾರೆ ಪ್ರಭು. ಅಣ್ಣನ ಅರಿತ ಈ ಜಂಗಮ ಸಾಮಾನ್ಯನಲ್ಲ, ಯಾರೀತ… ಮುಕ್ತಾಯಕ್ಕಾ ಕೇಳುತ್ತಾರೆ:
ಸಚ್ಚಿದಾನಂದಸ್ವರೂಪವಾದ| ವಾಙ್ಮನಕ್ಕಗೋಚರವಾದ||
ಜ್ಞಾನಕ್ರೀಯನೊಳಕೊಂಡು ನಿಂದ| ಜಂಗಮವೆ ಅಂಗ ಪ್ರಾಣವಾದ||
ಶರಣರನೊಳಕೊಂಡು| ಚಿದ್ಘನದೊಳಗೆ ಅವಿರಳೈಕ್ಯವಾದ||
ಎನ್ನ ಅಜಗಣ್ಣತಂದೆಯನರಿದು | ಶರಣೆಂಬಾತ ನೀನಾರು ಹೇಳಯ್ಯಾ? ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-902 / ವಚನ ಸಂಖ್ಯೆ-1125)

ಆಗ ಅಲ್ಲಮಪ್ರಭುಗಳು ಕೊಟ್ಟ ಉತ್ತರ ಅನುಭಾವ ಚರಿತ್ರೆಯಲ್ಲಿ ಅಜರಾಮರವಾಗಿ ನಿಲ್ಲುವಂಥದು.
ಶರಣು ಶರಣಾರ್ಥಿ| ಎಲೆ ತಾಯೆ||
ಧರೆಯಾಕಾಶ| ಮನೆಗಟ್ಟದಂದು||
ಹರಿವ ಅನಿಲ ಅಗ್ನಿ ಜಲ| ಮೊಳೆದೋರದಂದು ಹುಟ್ಟಿದಳೆಮ್ಮವ್ವೆ||
ಅದಕ್ಕೆ ಮುನ್ನವೆ| ಹುಟ್ಟದೆ ಬೆಳೆದನೆಮ್ಮಯ್ಯ||
ಈ ಇಬ್ಬರ| ಬಸಿರಲ್ಲಿ ಬಂದೆ ನಾನು||
ಎನ್ನ ತಂಗಿಯರೈವರು| ಮೊರೆಗೆಟ್ಟು ಹೆಂಡಿರಾದರೆನಗೆ||
ಕಾಮಬಾಣ ತಾಗದೆ| ಅವರ ಸಂಗವ ಮಾಡಿದೆನು||
ನಾ ನಿಮ್ಮ ಭಾವ ಅಲ್ಲಯ್ಯನು| ನೀನೆನಗೆ ನಗೆವೆಣ್ಣು||
ನಮ್ಮ ಗುಹೇಶ್ವರನ ಕೈವಿಡಿದು| ಪರಮಸುಖಿಯಾಗಿ||
ಕಳವಳದ| ಕಂದರವೆಯೇನು ಹೇಳಾ?||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-281 / ವಚನ ಸಂಖ್ಯೆ-1518)
ಒಂದು ಸಣ್ಣ ಸಾಧನೆ ಮಾಡಿದರೆ ಅಹಂ ನಮ್ಮ ತಲೆಗೇರುತ್ತದೆ. ಆದರೆ ಆಧ್ಯಾತ್ಮದ ಮೇರು ವ್ಯೋಮಮೂರ್ತಿ ಪ್ರಭುಗಳು ಅಷ್ಟೇ ವಿನಮ್ರತೆಯಿಂದ ‘ಶರಣುಶರಣಾರ್ಥಿ ಎಲೆ ತಾಯೆ’ ಎಂದು ತಾನಾರೆಂದು ಹೇಳುವ ಈ ವಚನದ ಆಶಯ ಅದ್ಭುತ. ಗುಹೇಶ್ವರನ ಕೈಹಿಡಿದು ಆನಂದದಿಂದ ಇರಬೇಕಾದ ನಿನಗೆ ಏನು ದುಃಖ ಅಂತ ಮರು ಪ್ರಶ್ನೆ ಮಾಡುತ್ತಾರೆ. ಪ್ರಭುಗಳಲ್ಲಿ ಲಿಂಗದ ಸಾಕಾರ ರೂಪ ಕಂಡ ಮತ್ತು ಅವರ ಸಾಂತ್ವನದ ನುಡಿ ಕೇಳಿ ದುಃಖದಿಂದ ಹೊರಬರುವ ಪ್ರಯತ್ನ ಮಾಡುತ್ತಾರೆ ಮುಕ್ತಾಯಕ್ಕ.
ದೇವ ದೇವ ಶರಣು ಶರಣಾರ್ಥಿ| ಅವಧರಿಸಯ್ಯಾ ||
ಕೇಳಿದ ಸುಖ| ಕಿವಿಗೆ ಬೇಟವಾಯಿತ್ತು ||
ಕಿವಿಗಳ ಬೇಟ ಕಂಗಳ| ಮುಂದೆ ಮೂರ್ತಿಗೊಂಡಿತ್ತು ||
ಕಂಗಳ ಮುಂದೆ ಕಂಡ ಸುಖವು| ಮನಕ್ಕೆ ವೇದ್ಯವಾಯಿತ್ತು ||
ಶಿವಶರಣರ ದರುಶನದ| ಸುಖವೇನೇನೆಂದೆನಬಹುದು? ||
ಮದವಳಿದು| ಮಹವನೊಡಗೂಡಿದ ||
ಎನ್ನ ಅಜಗಣ್ಣನಗಲಿದ| ದುಃಖ ||
ನಿಮ್ಮ ಸಂಗದಲ್ಲಿ| ಸಯವಾಯಿತ್ತು ಕಾಣಾ ಪ್ರಭುವೆ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-902 / ವಚನ ಸಂಖ್ಯೆ-1117)
ಇಂಥ ಸಾಂತ್ವನದ ನುಡಿಗೆ ಕಾಯುತ್ತಿದ್ದ ಕಿವಿಗಳಿಗೆ ಈಗ ಹಿತವಾಯಿತು. ಕಂಗಳಿಗೆ ದರ್ಶನವಾಯಿತು. ಇದೇ ಶರಣರ ದರ್ಶನದ ಭಾಗ್ಯ. ಎಲ್ಲ ಮೋಹ ತ್ಯಜಿಸಿ ಲಿಂಗೈಕ್ಯನಾದ ಅಣ್ಣ ಅಗಲಿದ ದುಃಖ ಈ ದರ್ಶನ ಭಾಗ್ಯದಿಂದ ಕಡಿಮೆಯಾಯಿತೆನ್ನುವ ಮುಕ್ತಾಯಕ್ಕನವರಿಗೆ ಅಜಗಣ್ಣ ಅಗಲಿದ ಎಂದು ಯಾಕೆ ಹೇಳಬಾರದೆಂದು ಈ ವಚನದಿಂದ ತಿಳಿಸುತ್ತಾರೆ ಅಲ್ಲಮಪ್ರಭು.
ಅರಿವರತು | ಮರಹುಗೆಟ್ಟು ||
ತನ್ನಲ್ಲಿ ತಾನು | ಸನ್ನಹಿತನಾದವಂಗೆ ||
ದುಃಖಿಸುವರೆ ಹೇಳಾ? | ಶೋಕಿಸುವರೆ ಹೇಳಾ? ||
ಒಡಲಿಲ್ಲದಾತಂಗೆ ಎಡೆಯಲೊಂದು | ಅಳಿವುಂಟೆಂದು ||
ನುಡಿದು ಹೇಳುವ ಮಾತು | ಭ್ರಾಂತು ನೋಡಾ ||
ಎರಡಿಲ್ಲದ ಐಕ್ಯಂಗೆ | ಒಳಹೊರಗಿಲ್ಲ ನೋಡಾ ||
ಗುಹೇಶ್ವರನ ಶರಣ | ಅಜಗಣ್ಣಂಗೆ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-211 / ವಚನ ಸಂಖ್ಯೆ-831)
ತನ್ನನ್ನು ತಾನರ್ಥ ಮಾಡಿಕೊಂಡು ಐಕ್ಯಸ್ಥಿತಿ ತಲುಪಿದವನಿಗೆ ಶರೀರವೇ ಇಲ್ಲ. ಜ್ಯೋತಿಗೆ ಯಾವುದು ಶರೀರ? ಒಡಲು ಬೇರೆ ಮನಸ್ಸು ಬೇರೆ ಎಂದೇನೂ ಇಲ್ಲ. ಎಲ್ಲವೂ ಲಿಂಗ ಸ್ವರೂಪವೇ. ಬೇರೆ ಬೇರೆ ಎನ್ನುವುದು ಭ್ರಾಂತಿ. ಶರಣರಾದವರಿಗೆ ಅಂತರಂಗ ಬಹಿರಂಗ ಎನ್ನುವ ಎರಡು ಮಾತಿಲ್ಲ. ಇದಕ್ಕಾಗಿ ದುಃಖಪಡಬಾರದು ಅಂತ ಸಾಂತ್ವನ ಹೇಳುತ್ತಾರೆ. ಅವರ ಈ ಮಾತುಗಳಿಂದ ಮುಕ್ತಾಯಕ್ಕನವರಿಗೆ ಅಜಗಣ್ಣನ ನಿಜರೂಪ ಕಣ್ಣ ಮುಂದೆ ಬರುತ್ತದೆ. ಹೌದು ಪ್ರಭು, ನೀವು ಹೇಳುತ್ತಿರುವುದು ಸತ್ಯ. ಅಣ್ಣನನ್ನು ನಾನ್ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಎನ್ನುವುದ ಸ್ವಲ್ಪ ಕೇಳಿ ಎಂದು ಭಿನ್ನವಿಸಿಕೊಳ್ಳುತ್ತಾಳೆ:
ನೀರಬೊಂಬೆಗೆ | ನಿರಾಳದ ಗೆಜ್ಜೆಯ ಕಟ್ಟಿ ||
ಬಯಲಬೊಂಬೆಯ ಕೈಯಲ್ಲಿ | ಕೊಟ್ಟು ಮುದ್ದಾಡಿಸುತ್ತಿರ್ದನಯ್ಯ ||
ಕರ್ಪೂರದ ಪುತ್ಥಳಿಗೆ | ಅಗ್ನಿಯ ಸಿಂಹಾಸನವನಿಕ್ಕಿ ||
ಅಗ್ನಿ ಕರಗಿ ಕರ್ಪೂರ | ಉಳಿದುದಕ್ಕೆ ||
ಬೆರಗಾದೆನಯ್ಯಾ ಎನ್ನ | ಅಜಗಣ್ಣನ ಯೋಗಕ್ಕೆ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-902 / ವಚನ ಸಂಖ್ಯೆ-1119)
ಹರಿಯುವ ಗುಣದ ನೀರು ಒಂದು ಕಡೆ ನಿಲ್ಲಲಾರದು. ತನ್ನತನ ಬಿಡದಿದ್ದರೂ ಯಾವಾಗಲೂ ಸ್ಥಾನ ಬದಲಿಸುತ್ತಿರುತ್ತದೆ. ಅಂಥ ನೀರ ಗೊಂಬೆ ನಾನು. ಬಯಲು ರೂಪ ಅಂದರೆ ಎಲ್ಲವನ್ನೂ ಒಳಗೊಂಡದ್ದು. ನನಗೆ ಎಲ್ಲ ತತ್ವ ವಿಚಾರಧಾರೆಗಳನ್ನೂ ಎರೆದು ಒಂದು ಮುದ್ದಾದ ಗೊಂಬೆ ಮಾಡಿದ್ದಾನೆ. ಸಾಮಾನ್ಯವಾಗಿ ಅಗ್ನಿಯ ಸ್ಪರ್ಶದಿಂದ ಕರ್ಪೂರ ಆವಿಯಾಗುತ್ತದೆ. ಇಲ್ಲಿ ಅಗ್ನಿಯ ಸಿಂಹಾಸನದಲ್ಲಿ ಕುಳಿತ ಕರ್ಪೂರದ ಗೊಂಬೆಗೆ ಏನೂ ಆಗಿಲ್ಲ. ಆದರೆ ಅಗ್ನಿಯ ಸಿಂಹಾಸನ ಕರಗಿ ಕರ್ಪೂರ ಉಳಿದಿದೆ! ಜ್ಞಾನಾಗ್ನಿಯಾದ ಅಜಗಣ್ಣ ಹೊರಟು ಹೋಗಿದ್ದಾನೆ. ಕರ್ಪೂರದ ಪುತ್ಥಳಿಯಾದ ನಾನು ಉಳಿದುಕೊಂಡಿದ್ದೇನೆ. ಇದು ಅಜಗಣ್ಣನ ಯೋಗದ ಪ್ರತಿಫಲ ಎನ್ನುತ್ತಾರೆ. ಇದಕ್ಕೆ ಸಮಾಧಾನ ಹೇಳುತ್ತಾರೆ ಅಲ್ಲಮಪ್ರಭು-
ಅಳಿವನಲ್ಲ ಉಳಿವನಲ್ಲ | ಘನಕ್ಕೆ ಗಮನನಲ್ಲ ||
ಮನಕ್ಕೆ ಸಾಧ್ಯನಲ್ಲ | ತನ್ನ ತಪ್ಪಿಸಿ ||
ಇದಿರನೊಪ್ಪಿಸಿಹೆನೆಂಬ | ಭಿನ್ನಭಾವಿಯಲ್ಲ ||
ಗುಹೇಶ್ವರನ ಶರಣ | ಅಜಗಣ್ಣನ ||
ಅಂತಿಂತೆನಬಾರದು | ಕೇಳಾ ತಾಯೆ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-214 / ವಚನ ಸಂಖ್ಯೆ-854)
ಇನ್ನೂ ಅಣ್ಣನ ಸಾವಿನ ಮಾಯೆಯಿಂದ ಹೊರ ಬರಲಾರದ ಮುಕ್ತಾಯಕ್ಕನವರನ್ನು ಕುರಿತು, ನಿನ್ನಣ್ಣನ ಸಾವು ನಿಜಕ್ಕೂ ನೀನು ತಿಳಿದ ಹಾಗಿಲ್ಲ. ಅದು ನಿನ್ನ ಭ್ರಮೆ. ಕತ್ತಲೆಂಬ ಮಾಯೆ ನಿನ್ನ ಕಣ್ಣು ಮುಚ್ಚಿದೆ. ಅಳಿದವನಲ್ಲ, ಉಳಿದವನಲ್ಲ, ಪರಿಪೂರ್ಣ ನಿರಾಕಾರ ಸತ್ವ. ಮಹಾಘನ ಅಜಗಣ್ಣನು ನಿಷ್ಕಲ, ನಿರಾಲಂಬ, ಸರ್ವ ವೃತ್ತಿರಹಿತನಾಗಿ ತನ್ಮಯನಾಗಿದ್ದಾನೆ. ಹಾಗಾಗಿ ಅಜಗಣ್ಣ ನಿನ್ನನ್ನು ಬಿಟ್ಟುಹೋಗಿದ್ದಾನೆ ಎನ್ನುವುದು ತಪ್ಪು, ಆತ ಗುಹೇಶ್ವರನ ಶರಣ ಎಂದು ಹೇಳುತ್ತಾರೆ. ಆದರೆ ಅಣ್ಣ ಅಜಗಣ್ಣನವರ ಲಿಂಗೈಕ್ಯವನ್ನು ಸಹಿಸಿಕೊಳ್ಳಲಾರದ ಮುಕ್ತಾಯಕ್ಕ ಮರಳಿ ಪ್ರಶ್ನೆ ಮಾಡುತ್ತಾರೆ.
ಅಂಬರದಲಾಡುವ | ತುಂಬಿಯ ಬಿಂಬದ ||
ಕಂಬನಿಯೊಳಗಣ | ರತ್ನದ ||
ಬಯಕೆಯಾದ್ಯಂತವ | ನೇನೆಂಬೆನಯ್ಯಾ ||
ವೇದ ಶಾಸ್ತ್ರ ಶೃತಿ ಸ್ಮೃತಿಗಳು | ಸ್ತುತಿಸಲರಿಯವು ||
ನಾದವಲ್ಲ ಸುನಾದದ | ನಿಲವಲ್ಲ ||
ಭೇದಿಸುವಡೆ | ಅಗಮ್ಯ ನೋಡಾ ||
ಸೋಲಿಲ್ಲದ ಸೊಮ್ಮಿಲ್ಲದ | ಘನವನೇನೆಂಬೆನು ||
ಎಂತು ಮರೆವೆನಯ್ಯಾ | ಎನ್ನ ಅಜಗಣ್ಣ ತಂದೆಯನು ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1096)
ಅಜಗಣ್ಣನನ್ನು ಮರೆಯುವದಕ್ಕಾಗುವುದಿಲ್ಲ ಎನ್ನುತ್ತಾರೆ ಮುಕ್ತಾಯಕ್ಕ. ದುಂಬಿಯ ರೆಕ್ಕೆಗಳ ಬಡಿತ ಕಣ್ಣಿಗೆ ಕಾಣಲಾರದಷ್ಟು ವೇಗ. ಅದರೆ ಆ ದುಂಬಿ ಕಣ್ಣಲ್ಲಿರುವ ಬೆಳಕಿನ ಪ್ರಕಾಶವನ್ನು ಹುಡುಕಿಕೊಂಡು ಹೋಗುವ ಪರಿ ವಿಸ್ಮಯ. ಅಂಥ ದುಂಬಿಯ ಬಯಕೆಯ ಹಾಗೆ ಅಜಗಣ್ಣನ ನೆನಪು ನನಗೆ. ವೇದ ಶಾಸ್ತ್ರ ಶೃತಿ ಸ್ಮೃತಿಗಳಿಗೂ ಮೀರಿದ ನಾದ ಸುನಾದ ಅಜಗಣ್ಣ. ಅದು ಆಕಾಶದಷ್ಟು ಅಗಮ್ಯ ಅಗೋಚರ. ಇಂಥ ಅಸಾಧಾರಣ ವ್ಯಕ್ತಿ ನನ್ನಣ್ಣನನ್ನು ಹೇಗೆ ಮರೆಯಲಿ ಗುರುಗಳೇ ಎಂದು ಪ್ರಲಾಪಿಸುತ್ತಾರೆ.
ಕಂಡೆನೆಂಬುದು | ಕಂಗಳ ಮರವೆ ||
ಕಾಣೆನೆಂಬುದು | ಮನದ ಮರವೆ ||
ಕೂಡಿದೆನೆಂಬುದು | ಅರುಹಿನ ಮರವೆ ||
ಅಗಲಿದೆನೆಂಬುದು | ಮರಹಿನ ಮರವೆ ||
ಇಂತು ಕಂಡೆ-ಕಾಣೆ | ಕೂಡಿದೆ-ಅಗಲಿದೆ ಎಂಬ ||
ಭ್ರಾಂತಿಸೂತಕವಳಿದು | ನೋಡಲು ||
ಗುಹೇಶ್ವರಲಿಂಗವನಗಲಲೆಡೆಯಿಲ್ಲಾ | ಕೇಳು ಎಲೆ ತಾಯೆ ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-233 / ವಚನ ಸಂಖ್ಯೆ-1033)
ಕಂಡೆ, ಕಾಣೆ, ಕೂಡಿದೆ, ಅಗಲಿದೆ ಎನ್ನುವುದು ನಮ್ಮೊಳಗಿರುವ ಭ್ರಮೆ. ಕಂಡಿದ್ದು ಸ್ವಲ್ಪ ಹೊತ್ತು ಕಳೆದ ಮೇಲೆ ಮರೆತು ಹೋಗಬಹುದು. ಮನಃಪಟಲದ ಮೇಲೆ ಮೂಡಿದ ಚಿತ್ರ ಸ್ವಲ್ಪ ಹೊತ್ತಿನ ನಂತರ ಮರೆತು ಹೋಗಬಹುದು. ಕೂಡಿ ಮಾತನಾಡಿದವರು ಚಿರಕಾಲ ನೆನಪಿನಲ್ಲಿ ಉಳಿಯದೇ ಇರಬಹುದು. ಅಗಲಿ ಹೋದ ವ್ಯಕ್ತಿಯ ನೆನಪು ಶಾಶ್ವತವಾಗಿ ಮರೆತು ಹೋಗಬಹುದು. ಈ ಎಲ್ಲ ಅನುಭವಗಳು ಶಾಶ್ವತವಲ್ಲ. ಲಿಂಗ ಇಲ್ಲದ ಜಾಗ ಯಾವುದು? ಗುಹೇಶ್ವರಲಿಂಗವನ್ನು ಬಿಟ್ಟು ಎಲ್ಲಿಗೆ ಹೋಗುತ್ತೀಯೆ ತಾಯೆ ನೀನು ಅವನ ಜೊತೆಗೇ ಇದ್ದೀಯಾ ಎಂದು ಸಾಂತ್ವನ ಹೇಳುತ್ತಾರೆ ಅಲ್ಲಮಪ್ರಭು. ಇದಕ್ಕೆ ಮುಕ್ತಾಯಕ್ಕ ಕೊಡುವ ಉತ್ತರ ಭಾಷೆ ಎಷ್ಟು ಸೊಗಸಾಗಿದೆ. ಅಲ್ಲಮ ಪ್ರಭುಗಳಿಗೂ ಆಶ್ಚರ್ಯ ತಂದಿರುವಂತೆ ಕಾಣುತ್ತದೆ.
ಕಣ್ಣ ಮೊದಲಲ್ಲಿ | ಕುಳ್ಳಿರ್ದು ||
ಬಣ್ಣದೋರುವ ಪರಿಯ | ನೋಡು ಅವ್ವಾ ||
ಬಣ್ಣವಿಲ್ಲದ ಬಣ್ಣವನುಟ್ಟು | ಸುಳಿದನು ||
ಈ ಅಜಗಣ್ಣನ ಯೋಗಕ್ಕೆ | ಬೆರಗಾದೆನವ್ವಾ ||
ಈ ಅರಿವೆಂತುಟೆಲ್ಲವ | ನೊಳಗಿಟ್ಟುಕೊಂಡನು ||
ಶಿವಗಣಸಂಚ ಶಿವಯೋಗಿ | ಅಜಗಣ್ಣದೇವನು ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1106)
ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದ. ಬಣ್ಣವಿಲ್ಲದ ಅಂದರೆ ನಿರಾಕಾರ, ನಿರಹಂಕಾರ ಮತ್ತು ನಿರ್ಲಿಪ್ತ . ಕಣ್ಣಿಗೆ ಕಾಣಲಾರದ ಅರಿವನ್ನು ಬಣ್ಣದಂತೆ ತೊಟ್ಟು ಬದುಕಿ ಮಿಂಚಿ ಮರೆಯಾಗಿದ್ದಾನೆ. ಇದು ಅತ್ಯಂತ ಆಶ್ಚರ್ಯ! ಇಂಥ ಅಪರಿಮಿತ ಅನುಪಮ ಶಕ್ತಿಯನ್ನೆಲ್ಲವನ್ನು ತನ್ನೊಳಗೆ ಇಟ್ಟುಕೊಂಡು ಮರೆಯಾಗಿದ್ದಾನೆ. ಜೊತೆಗೆ ಮುಕ್ತಾಯಕ್ಕ ಮತ್ತೊಂದು ಪ್ರಶ್ನೆ ಮಾಡುತ್ತಾರೆ:
ತನುವಿಡಿದೆನಾಗಿ | ಅನುವರಿಯದೆ ಕೆಟ್ಟೆನು ||
ಮನವಿಡಿದೆನಾಗಿ | ಅರಿವು ಉಳಿಯದೆ ಕೆಟ್ಟೆನು ||
ಭಾವದ ಬಯಕೆ ಹಿಂಗದಾಗಿ | ವಿಯೋಗಿಯಾಗಿ ಕೆಟ್ಟೆನು ||
ಅರಿವ ನುಡಿದು | ಮರಹಿಗೊಳಗಾದೆನು ||
ಎನ್ನ ಕಾಣದೆ | ಭಿನ್ನಜ್ಞಾನಿಯಾದೆನು ||
ಅಜಗಣ್ಣನೆಂಬ ಮಹಿಮನು | ಘನವೇದ್ಯನಾಗಿ ||
ಎನ್ನ ಮತಿಗೆ ಮರವೆಯ | ಮಾಡಿ ಹೋದನು ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-901 / ವಚನ ಸಂಖ್ಯೆ-1114)
ಅಣ್ಣನೇ ಪ್ರಪಂಚವಾಗಿರುವಾಗ ಅಷ್ಟು ಸುಲಭವಾಗಿ ಅಣ್ಣನ ಸಾವನ್ನು ಸ್ವೀಕರಿಸಲು ತಯಾರಿಲ್ಲ. ತಂಗಿಯಾದರೂ ಅವರಲ್ಲಿದ್ದ ಅರಿವನ್ನು ಪೂರ್ಣ ತಿಳಿದುಕೊಳ್ಳಲಿಲ್ಲ. ಅವರನ್ನು ಮರೆಯಲಾಗದೇ ವಿಯೋಗಿಯಾದಳು. ಅಣ್ಣ ಹೇಳಿದ್ದನ್ನು ನೆನಪಿಟ್ಟುಕೊಳ್ಳಲು ಮರೆತಳು. ಅಣ್ಣನನ್ನು ಅರ್ಥ ಮಾಡಿಕೊಳ್ಳಲಾಗದೆ ಅಜ್ಞಾನಿಯಾದಳು. ನನ್ನ ಬುದ್ಧಿಗೆ ಮಂಕುಮಾಡಿ ಅಣ್ಣ ಹೋಗಿಬಿಟ್ಟ. ಕತ್ತಲೆಯಿಂದ ಬೆಳಕಿನೆಡೆಗೆ ಹೇಗೆ ಹೋಗಲಿ? ಇದಕ್ಕೆ ಮುಕ್ತಾಯಕ್ಕಳನ್ನು ಸಂತೈಸುವ ಅಲ್ಲಮಪ್ರಭುಗಳ ಪರಿ ನಿಜಕ್ಕೂ ಅದ್ಭುತ.
ತನು ಉಂಟೆಂದಡೆ | ಪಾಶಬದ್ಧ ||
ಮನ ಉಂಟೆಂದಡೆ | ಭವಕ್ಕೆ ಬೀಜ ||
ಅರಿವ ನುಡಿದು ಕೆಟ್ಟೆನೆಂದರೆ | ಅದೇ ಅಜ್ಞಾನ ||
ಭಾವದಲ್ಲಿ ಸಿಲುಕಿದೆನೆಂಬ | ಮಾತು ಬಯಲ ಭ್ರಮೆ ನೋಡಾ ||
ಒಮ್ಮೆ ಕಂಡೆ-ಒಮ್ಮೆ ಕಾಣೆ | ಒಮ್ಮೆ ಕೂಡಿದೆ-ಒಮ್ಮೆ ಅಗಲಿದೆ ||
ಎಂದಡೆ ಕರ್ಮ | ಬೆಂಬತ್ತಿ ಬಿಡದು ||
ನಿನ್ನೊಳಗೆ ನಿನ್ನ ತಿಳಿದು | ನೋಡಲು ಭಿನ್ನವುಂಟೆ? ||
ಗುಹೇಶ್ವರಲಿಂಗವನರಿವಡೆ ನೀನೆಂದೇ | ತಿಳಿದು ನೋಡಾ ಮರುಳೆ? ||

(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-249 / ವಚನ ಸಂಖ್ಯೆ-1212)

ನಿನ್ನೊಳಗೆ ನೀನೆ ಇರುವ ಮತ್ತು ನೀನೇ ಗುಹೇಶ್ವರಲಿಂಗದಲ್ಲಿರುವ ತತ್ವ ಎಂದು ತಿಳಿದಾಗ ದುಃಖಪಡಬೇಕಾಗಿಲ್ಲ. ಭವಿಗೆ ಮನಸ್ಸೆನ್ನುವುದೇ ಮಾಯಾಂಕುರ. ಎಲ್ಲವನ್ನೂ ತಿಳಿದಿದ್ದೇನೆ ಎನ್ನುವುದೇ ಅಜ್ಞಾನ. ಎಲ್ಲ ಭಾವನೆಗಳಿಗೂ ಪ್ರತಿಕ್ರಿಯೆ ನೀಡುವುದು ಲೌಕಿಕದ ಭ್ರಮೆಯಲ್ಲಿ ನಿಂದ ನಿಲುವು. ಶರಣನಾದವನಿಗೆ ಭಯವಿಲ್ಲ. ಆದರೆ ಕಂಡೆ, ಕಾಣೆ, ಕೂಡಿದೆ, ಅಗಲಿದೆ ಎನ್ನುವ ಲೌಕಿಕ ಅನುಭವಗಳೇ ಕರ್ಮದ ಸಂಕೋಲೆಗಳು. ಹಾಗಾಗಿ ನಿನ್ನ ನೀ ತಿಳಿದು ಅರಿವಿನ ಸಾಕ್ಷಾತ್ಕಾರವಾದಾಗ, ಪರತತ್ವ ಬೇರೆ ಇಲ್ಲ ಎನ್ನುವ ಅರಿವು ಉಂಟಾದಾಗ ಅಜಗಣ್ಣ ಯಾರು ಎನ್ನುವುದು ನಿನಗೆ ಅರಿವಾಗುತ್ತದೆ ಎನ್ನುತ್ತಾರೆ ಅಲ್ಲಮಪ್ರಭು. ಮುಕ್ತಾಯಕ್ಕ ಅಲ್ಲಮ ಪ್ರಭುಗಳಿಗೆ ನೀಡುವ ಪ್ರತಿಕ್ರಿಯೆ ಅನುಭವ, ಅನುಭಾವ ಮತ್ತು ಅನುಭೂತಿ ಚರಿತ್ರೆಯಲ್ಲಿ ಸಿಗುವ ಉಪಮೆಯಗಳ ಅದ್ಭುತ ಲೋಕ. ಉಪಮೆಗಳಿಗೆ ಉಪಮಾತೀತರು ವಚನಕಾರರು. ಅನುಭಾವದೆತ್ತರಕ್ಕೇರಿದವರಿಗೆ ಮಾತ್ರ ಇಂಥ ಮಾತುಗಳನ್ನು ಹೇಳಲು ಸಾಧ್ಯ ಅಂತ ಅನಿಸುತ್ತದೆ.
(ಮುಂದುವರಿಯುವುದು)

Previous post ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
Next post ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ

Related Posts

ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
Share:
Articles

ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)

February 11, 2022 ಡಾ. ಎನ್.ಜಿ ಮಹಾದೇವಪ್ಪ
ನಮ್ಮ ಮೂಲ ಪ್ರಶ್ನೆಗೆ ಬರೋಣ: ಅಲ್ಲಮರ ಪ್ರಕಾರ ಜಗತ್ತು ಮಾಯೆಯಲ್ಲದಿದ್ದರೆ ಅವರು ಪದೇ ಪದೇ ಬಳಸುವ ಮಾಯೆ ಎಂಬ ಪದಕ್ಕೆ ಯಾವ ಅರ್ಥವಿದೆ? ಚಾಮರಸನು ಅಲ್ಲಮ ಮಾಯೆಯನ್ನು ಗೆದ್ದವ...
ಏನ ಬೇಡಲಿ ಶಿವನೇ?
Share:
Articles

ಏನ ಬೇಡಲಿ ಶಿವನೇ?

August 2, 2020 ಡಾ. ಪಂಚಾಕ್ಷರಿ ಹಳೇಬೀಡು
ಧರ್ಮ ಮತ್ತು ದೇವರು ಎಂದಾಕ್ಷಣ ಸಾಮಾನ್ಯವಾಗಿ ಅನೇಕರಲ್ಲಿ ಮೂಡುವ ಭಾವವೆಂದರೆ ಕೆಲವು ನಿರ್ದಿಷ್ಟ ಆಚರಣೆಗಳು, ಕಟ್ಟು ಕಟ್ಟಳೆಗಳು, ಮಡಿವಂತಿಕೆ ಮತ್ತು ಅತೀತ ಶಕ್ತಿಯಲ್ಲಿ...

Comments 9

  1. ಪೆರೂರು ಜಾರು, ಉಡುಪಿ
    Sep 13, 2022 Reply

    ಅಜಗಣ್ಣ- ಮುಕ್ತಾಯಕ್ಕರದು ನಿಲ್ಲದ ಶರಣ ಪಯಣ!

  2. Mallesh G
    Sep 13, 2022 Reply

    ಮುಕ್ತಾಯಕ್ಕ ಅಪರೂಪದ ಶಿಷ್ಯೆಯಾಗಿ ತನ್ನ ಅಣ್ಣನನ್ನು ಚಿರಸ್ಥಾಯಿಗೊಳಿಸಿದಳು; ಅದೇ ರೀತಿ ಅಜಗಣ್ಣ ತನ್ನ ತಂಗಿಗೆ ಏನನ್ನೂ ಕಲಿಸಿಕೊಡದೇ ಗುರುವಾಗಿಬಿಟ್ಟ! ಶರಣರ ನಡೆಯೇ ನಡೆ, ಅವರು ಸಾಮಾನ್ಯರಂತೆ ಕಂಡರೂ ಅಸಾಮಾನ್ಯ ಮಹಿಮರು.

  3. K.P. Gaurishankar
    Sep 14, 2022 Reply

    ಇತಿಹಾಸದಲ್ಲೇ ಇಂತಹ ಅಪರೂಪದ ಅಣ್ಣ-ತಂಗಿಯರನ್ನು ಎಲ್ಲೂ ನೋಡಲಿಕ್ಕೆ ಸಾಧ್ಯವಿಲ್ಲಾ. ಮುಕ್ತಾಯಕ್ಕಾ ಅಲ್ಲಮಪ್ರಭುದೇವರ ಸಂಭಾಷಣೆ ತುಂಬಾ ಆಸಕ್ತಿದಾಯಕವಾಗಿದೆ.

  4. ಗಿರಿಜಾ ಶಂಕರಪ್ಪ, ಬೇಲೂರು
    Sep 18, 2022 Reply

    ಮುಕ್ತಾಯಕ್ಕ ಅಣ್ಣನ ಕಳೆಬರಹವನ್ನು ತೊಡೆಯ ಮೇಲಿಟ್ಟುಕೊಂಡು ಇಂತಹ ವಾದ-ವಿವಾದದಲ್ಲಿ ತೊಡಗಿಕೊಂಡಿದ್ದರೆನ್ನುವುದು ಊಹಿಸಲಿಕ್ಕೂ ಸಾಧ್ಯವಿಲ್ಲ. ಇದೊಂದು ಶೂನ್ಯಸಂಪಾದನೆಯ ಕಟ್ಟುಕತೆ ಎಂದೇ ನನ್ನ ಅಭಿಪ್ರಾಯ. ಸಿಂಬಾಲಿಕ್ ಆಗಿ ಇದನ್ನು ತಿಳಿದುಕೊಂಡರೆ ಸರಿಯಾಗಿರುತ್ತದೆ, ಅಲ್ಲವೇ?

  5. Anand Burli
    Sep 18, 2022 Reply

    I am grateful for your post, really thank you.

  6. SIDDHESH GAJENDRAGAD
    Sep 23, 2022 Reply

    ಸವಾಲಿಗೆ ಜವಾಬಿನಂತೆ ಸಾಗುವ ವಚನ ಸಂವಾದ ತುಂಬಾ ಕುತೂಹಲಕಾರಿಯಾಗಿದೆ. ಅವುಗಳ ಆಳ-ಹರವುಗಳನ್ನು ಅರಿಯಲು ನಮ್ಮ ಬುದ್ಧಿಯೂ ಪ್ರಬುದ್ಧವಾಗಿರಬೇಕಾಗುತ್ತದೆ. ಉತ್ತಮ ಲೇಖನ.

  7. ಪೂಜಾ ಭದ್ರಣ್ಣ
    Sep 23, 2022 Reply

    ಗುರುವಾದ ಅಣ್ಣನನ್ನು ಮುಕ್ತಾಯಕ್ಕಾ ಹೇಗೆ ನಚ್ಚಿಕೊಂಡಿದ್ದರು ಎನ್ನುವುದು ಅವರ ವಚನಗಳಿಂದ ವೇದ್ಯವಾಗುತ್ತದೆ. ಅಗಲಿಕೆಯ ನೋವು ಎಲ್ಲಕ್ಕಿಂತಲೂ ತೀವ್ರವಾದದ್ದು, ಅದನ್ನು ಶರಣನಾದವನು ಹೇಗೆ ಎದುರಿಸಬೇಕೆನ್ನುವ ತಿಳುವಳಿಕೆ ನೀಡುತ್ತವೆ ಅಲ್ಲಮರ ವಚನಗಳು.

  8. Shanthkumara
    Sep 26, 2022 Reply

    ಅಲ್ಲಮಪ್ರಭು ಮತ್ತು ಮುಕ್ತಾಯಕ್ಕಾ ಒಂದೇ ಹಾದಿಯಲ್ಲಿ ನಡೆಯುವ ಮುಮುಕ್ಷಿಗಳು, ಅವರ ಮಾತುಗಳು ಎಷ್ಟು ಮಾರ್ಮಿಕವಾಗಿವೆ! ಪಾಟಿಸವಾಲಿನಂತೆ ಕಂಡುಬಂದರೂ ಆಳ ನೋಟಗಳು ಅಡಕವಾಗಿವೆ.

  9. ರವೀಂದ್ರ ಗಜೇಂದ್ರಗಡ
    Sep 26, 2022 Reply

    ಶರಣ ಅಜಗಣ್ಣನವರು ಅಮಳೋಕ್ಯದಲ್ಲಿ ಲಿಂಗವನ್ನು ಧರಿಸಿದ್ದರು ಎನ್ನುವುದಕ್ಕೆ ಬೇರೇನೋ ಅರ್ಥವಿರಬಹುದು. ವಾಚ್ಯದಲ್ಲಿ ಇರುವಂತೆ ಹಾಗೆ ದವಡೆಯಲ್ಲಿ ಲಿಂಗ ಧರಿಸುವುದನ್ನು ಯಾರೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಮಳೋಕ್ಯದಲ್ಲಿ ಲಿಂಗವ ಧರಿಸಿದ್ದರು ಎನ್ನುವುದು ಗೂಢಾರ್ಥದಿಂದ ಕೂಡಿದೆ, ಅದನ್ನು ಲೇಖಕರು ವೈಜ್ಞಾನಿಕ ಹಿನ್ನೆಲೆಯಲ್ಲಿ ಅವಲೋಕಿಸಿದ್ದರೆ ಚೆನ್ನಾಗಿತ್ತು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಬಯಲಾಟ
ಬಯಲಾಟ
March 17, 2021
ಲಿಂಗವಾಗುವ ಪರಿ…
ಲಿಂಗವಾಗುವ ಪರಿ…
April 29, 2018
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
Copyright © 2023 Bayalu