Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಚಲ ಕಥಾಲೋಕ
Share:
Articles February 10, 2023 Bayalu

ಅಚಲ ಕಥಾಲೋಕ

ಅನುಭಾವಿ ಲೇಖಕರಾದ ಶರಣ ಪದ್ಮಾಲಯ ನಾಗರಾಜ ಅವರು ಅಚಲ ಕಥಾಲೋಕ (ಅಚಲ-ಝೆನ್ ಅನುಸಂಧಾನ) ಪುಸ್ತಕದಲ್ಲಿ ಬರೆದ ದೀರ್ಘ ಪ್ರಸ್ತಾವನೆಯ ಮಧ್ಯದಲ್ಲಿ ಬರುವ ಕೆಲವು ಮಾತುಗಳನ್ನು ಮಾತ್ರ ಇಲ್ಲಿ ಬಯಲು ಓದುಗರಿಗೆ ಕೊಡಲಾಗಿದೆ-

ಅಚಲ ಪರಂಪರೆ ಮತ್ತದರ ತತ್ವಸಿದ್ಧಾಂತಗಳಿಗೆ ದೇಶ ಕಾಲಾತೀತವಾದ ಚಾರಿತ್ರಿಕ ಇತಿಹಾಸವಿರುವುದೂ ಬಹಳ ಮಹತ್ವಪೂರ್ಣವಾದದ್ದು. ಅಚಲದ ಮೇಲೆ ಶಿವಶರಣರ ಪ್ರಭಾವ ಬಲು ದೊಡ್ಡದು. ಅಚಲತ್ವದ ಕುರಿತು ವಚನಗಳೂ ಸಾಕಷ್ಟು ಅಭಿವ್ಯಕ್ತಿಸಿವೆ. ಅಲ್ಲಮಪ್ರಭುವಿನ ಕುರಿತು ಅಚಲರು ತುಂಬಾ ಗೌರವವನ್ನು ತಾಳುತ್ತಾರೆ. ಶಿವಶರಣರ ಮೇಲೆ ನಾಥ ಸಿದ್ಧರ ಪ್ರಭಾವವಿರುವುದನ್ನು ಚರಿತ್ರೆಕಾರರು ದೃಢಪಡಿಸಿದ್ದಾರೆ. ಅಲ್ಲಮಪ್ರಭುವಿನ ಗುರು ಅನಿಮಿಷಯ್ಯ ಒಬ್ಬ ನಾಥಸಿದ್ಧ ಯೋಗಿಯಾಗಿದ್ದ. ಮತ್ತು ಅವಧೂತನಾಗಿದ್ದ. ಕಬೀರ ಅವಧೂತನನ್ನು “ಈ ಜಗದ ಗುರು ಅವಧೂತ, ಅವನೇ ನನ್ನಯ ಗುರು, ಅವನೇ ಗುರುವಿನ ಗುರು” ಎನ್ನುತ್ತಾನೆ. ಈ ಜಗದ ಗುರು ಹೇಗಿರಬಲ್ಲ ಎಂಬುದನ್ನು ತನ್ನ ದೋಹೆಗಳಲ್ಲಿ ಸೂಚಿಸುತ್ತಾ… “ಅವಧೂತನಿಗೆ ಕಾವಿ ಕಮಂಡಲದಂಥ ವೇಷಭೂಷಣಗಳೇನೂ ಇಲ್ಲ. ಅವನು ಎಲ್ಲಾ ಮತಗಳಿಂದ, ಪಥಗಳಿಂದ, ಪಂಥಗಳಿಂದ, ದೈವಗಳಿಂದ ಹೊರತಾದವನು. ಮನಸ್ಸಿದ್ದರೆ ಮಾಸಿ ಬಿಸಾಡಿದ ಗೋಣಿಯಂತಹ ಚಿಂದಿಯನ್ನು ಸೊಂಟಕ್ಕೆ ಸುತ್ತಿಕೊಳ್ಳಬಹುದು. ಇಲ್ಲದಿದ್ದರೆ ಅದೂ ಇಲ್ಲ. ಮನೆ, ಮಠ, ಬಂಧು, ಮಿತ್ರ, ಶತೃ, ಇತ್ಯಾದಿ ಮಾನವ ನಿರ್ಮಿತ ಸಂಬಂಧಗಳೂ ಆತನಿಗಿರುವುದಿಲ್ಲ. ಇರುವುದೊಂದೇ ಸದಾ ಮೌನ! ಹುಚ್ಚರಂತೆ ಕಂಡರೂ ಅವರಿಗೆ ಜೀವಸಂಕುಲದ ಕುರಿತು ಅಪಾರ ದಯೆ, ಅಂತಃಕರುಣೆ, ಮೈತ್ರಿಗಳಿವೆ. ಅವರ ನಡೆ ಮತ್ತು ನುಡಿಗಳಲ್ಲಿ ಸತ್ಪಥದ ಗಾದೆಗಳಿವೆ” ಎನ್ನುತ್ತಾನೆ.

ತೆಲುಗಿನ ವೇಮನ ಕಬೀರ ಸೂಚಿಸುವ ಅವಧೂತ ಪ್ರಜ್ಞೆಗೆ ಸಾಕ್ಷಿಯಾಗಿರುವುದನ್ನು ನಾವು ನೋಡಬಹುದು. ವೇಮನ ಮತ್ತು ಆತನ ಗುರು ಅಂಬಿಕಾ ಶಿವಯೋಗಿ ಇಬ್ಬರೂ ಅಚಲ ಗುರುಮಾರ್ಗಕ್ಕೆ ಸೇರಿದವರಾಗಿದ್ದರು. ನಾಥ ಸಿದ್ಧಯೋಗಿಗಳ ಮೇಲೆ ವಜ್ರಯಾನ ಬೋಧಿಸತ್ವರ ಪ್ರಭಾವ ಅಷ್ಟೇ ಪ್ರಖರವಾಗಿದ್ದಿತು. ವಜ್ರಯಾನ ಬೌದ್ಧರಿಗೆ ಮಹಾಯಾನದ ಸಿದ್ಧರಾದ ಕ್ರಿ.ಪೂ ಎರಡನೇ ಶತಮಾನದ ಸರಹಪಾದ ಮತ್ತು ನಾಗಾರ್ಜುನರ ಪ್ರಭಾವವನ್ನು ಯಥೇಚ್ಛವಾಗಿ ಕಾಣಬಹುದು. ಅಚಲದಲ್ಲಿರುವ ದ್ವಾದಶಿ ಮಂತ್ರೋಪದೇಶ ಹಾಗೂ ಷೋಡಶಿ ಭಾವಗಳು ಸರಹನ ದೋಹೆಗಳಲ್ಲೂ ಅನುರಣಿಸಿವೆ.
ಬೌದ್ಧ ಮಾಧ್ಯಮಿಕ ನಾಗಾರ್ಜುನ ಗುರು ಪ್ರಸ್ತುತಪಡಿಸಿದ ‘ಶೂನ್ಯತಾ’ ಅಚಲರ ‘ಬಯಲು’ ಇವೆರಡೂ discourseಗಳ ಮಧ್ಯೆ ಸಾಮ್ಯತೆಯನ್ನು ಗುರ್ತಿಸಬಹುದು. ಶೂನ್ಯತೆ ಮತ್ತು ಬಯಲು ಇವೆರಡೂ ಅನಿತ್ಯತೆಯನ್ನು ಪ್ರತಿಪಾದಿಸುವ ಕೀಲಿಗಳು. ಹಾಗೆ ನೋಡಿದರೆ ‘ಬಯಲು’ ಎಂಬ ಪದದ ತಾತ್ವಿಕ ಸ್ವರೂಪವನ್ನು ಅಚಲರಿಗೆ ಮಾತ್ರ ಸೀಮಿತಗೊಳಿಸಲಾಗದು. ಏಕೆಂದರೆ ಸಂಸ್ಕೃತವನ್ನು ಹೊರತುಪಡಿಸಿ ಎಲ್ಲಾ ದೇಸಿ ಭಾಷೆಗಳ ಸಂತರ ಸಾಹಿತ್ಯದಲ್ಲಿ ‘ಬಯಲು’ ಎಂಬ ನಿರ್ವಚನ ಕಾಣಸಿಗುತ್ತದೆ. ಇದರಿಂದ ಬಯಲ ತಾತ್ವಿಕತೆ ಅನಾದಿ ಕಾಲದಿಂದಲೂ ಈ ಮಣ್ಣಿನಲ್ಲೇ ಇದ್ದ ಸತ್ವವಾಗಿರಬೇಕೆನಿಸುತ್ತದೆ.

ಬಯಲ ಮಾರ್ಗಿಗಳಾದ ಅಚಲರ ಚರಿತ್ರಾತ್ಮಕ ದಾಖಲೆಗಳನ್ನಾಧರಿಸಿ ಅಚಲರ ಪ್ರಾಚೀನತೆಯನ್ನು ಹುಡುಕಿದರೆ, ಮಾಧ್ಯಮಿಕ ನಾಗಾರ್ಜುನ ಗುರುವಿನ ದಶಭೂಮಿಕಾಶಾಸ್ತ್ರದಲ್ಲಿ ಅಚಲರ ವಿವರಣೆಯಿದೆ. ಬೋಧಿಸತ್ವ ಸಿದ್ಧಿಯನ್ನು ಅನುಸಂಧಾನ ಮಾಡುವ ಸಾಧಕರಿಗೆ ಇರಬೇಕಾದ ಹತ್ತು ಅರ್ಹತೆಗಳಲ್ಲಿ ‘ಅಚಲ’ವೆಂಬುದು ಎಂಟನೆಯ ಅರ್ಹತೆಯಾಗಿದೆ…
*** *** *** ***
ಜಪಾನ್ ಮತ್ತು ಚೈನಾದೇಶದ ಮೂಲಕ ಇಂದು ಝೆನ್ ನ ಕಂಪು ವಿಶ್ವಕ್ಕೆಲ್ಲಾ ಹಬ್ಬಿದೆ. ಇಂದಿನ ಜಾಗತಿಕ ವಿಶ್ವದಲ್ಲಿಯೂ ಝೆನ್ ಬುದ್ಧಿಸಂ ಅತೀವವಾದ ಆಸಕ್ತಿ ಮತ್ತು ಕುತೂಹಲಗಳನ್ನು ಕೆರಳಿಸಿದೆ. ಝೆನ್ ಕಥೆಗಳು, ಪ್ರಸಂಗಗಳು, ಮುಂಡಿಗೆ ರೂಪದ ಬೆಡಗಿನ ನುಡಿಗಳು, ಸಂವಾದಗಳು ವಿಶ್ವದ ಬಹುತೇಕ ಭಾಷೆಗಳಲ್ಲಿ ತರ್ಜುಮೆಗೊಂಡಿವೆ. ನಮ್ಮ ಕನ್ನಡವು ಸಹ ಝೆನ್ ನ ಅನುವಾದಗಳಿಗೆ ತಕ್ಕುದಾದ ಮನ್ನಣೆಯನ್ನು ತಂದುಕೊಟ್ಟಿದೆ. ಇಂದಿನ ಆಧುನಿಕ ಸಂದರ್ಭದಲ್ಲಿಯೂ ಝೆನ್ ಒಂದು ಬೌದ್ಧ ಪಂಥ ಎನ್ನುವುದನ್ನು ಬದಿಗರಿಸಿ ಅದೊಂದು ಬಾಳುವ ದಾರಿಯಾಗಿ ಗ್ರಹೀತವಾಗುತ್ತಿದೆ. ಝೆನ್ ನ ಮೂಲಕ ಪೂರ್ವಭಾಗದ ಸಂಸ್ಕೃತಿಗಳ ಆಳದಲ್ಲಿ ಅಡಕವಾಗಿರುವ ಮಾನವ ಪರವಾದ ಮತ್ತು ನಿಸರ್ಗಪರವಾದ ಹೊಸದಾದ ಅನನ್ಯ ಸಾಧ್ಯತೆಗಳನ್ನು ಸಂಸ್ಕೃತಿ ಚಿಂತಕರು ಮತ್ತು ಭಾಷಾ ಅಧ್ಯಯನಕಾರರು ವಿಶ್ಲೇಷಿಸಿ ಮಾನ್ಯ ಮಾಡಿದ್ದಾರೆ.
ಝೆನ್ ನ ಮೂಲ ಭಾರತದ ಈ ನೆಲ! ಸಂಸ್ಕೃತದ ‘ಧ್ಯಾನ’ ಎಂಬ ಪದ ನಿಷ್ಪತ್ತಿ, ಪಾಲಿಯ ಝಾನ ಆಗಿ ಆನಂತರ ಝೆನ್ ಆಗಿದೆ. ಕ್ರಿ.ಶ 401ರಲ್ಲಿ ಕುಮಾರಜೀವ ಮತ್ತು ಪರಮಾರ್ಥ, ಕ್ರಿ.ಶ 520ರ ಬೋಧಿಧರ್ಮರೆಂಬ ಮಹಾಯಾನಿ ಭಿಕ್ಕುಗಳು ಭಾರತದಿಂದ ಚೈನಾ ಮತ್ತು ಜಪಾನ್ ದೇಶಗಳಿಗೆ ಝೆನ್ ಪಂಥವನ್ನು ಹಬ್ಬಿಸಿದರು ಎಂಬುದು ವಿದ್ವಾಂಸರ ಸಹಮತ. ಇಂದು ಇಡೀ ವಿಶ್ವಕ್ಕೆ ತನ್ನ ಕಂಪನ್ನು ಸೂಸುತ್ತಿರುವ ಕುಮ್ಮಳ ಪುಷ್ಪದ ಮೂಲಬೇರು ಈ ನೆಲದ್ದು. ಬುದ್ಧ ಗುರುವೇ ಝೆನ್ ಮೂಲ ಎಂಬುದು ತರ್ಕಾತೀತವಾದದ್ದು. ಕೆಲವು ವಿದ್ವಾಂಸರನ್ನು ಹೊರತುಪಡಿಸಿ, ಬಹುತೇಕ ವಿದ್ವಾಂಸರು ಬೌದ್ಧವು ಭಾರತದಲ್ಲೇ ಹುಟ್ಟಿ 14ನೆಯ ಶತಮಾನದ ಹೊತ್ತಿಗೆ ಈ ನೆಲದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾಯಿತು ಎಂಬಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಗಳನ್ನು ಬದಿಗಿರಿಸಿ ದೇವಿಪ್ರಸಾದ್ ಚಟ್ಟೋಪಾದ್ಯಾಯರಂತಹ ವಿದ್ವಾಂಸರು, ಬಹುತ್ವ ಭಾರತದ ಪಂಥೀಯ ದರ್ಶನಗಳಲ್ಲಿ ಅದು ತನ್ನ ಅಸ್ಮಿತೆಯನ್ನು ಕಳೆದುಕೊಂಡು ವಿಲೀನವಾಯಿತು ಎನ್ನುತ್ತಾರೆ. ಬಹುಮುಖ್ಯವಾಗಿ ಕ್ರಿ.ಶ 700ಕ್ಕಿಂತಲೂ ಹಿಂದೆಯೇ ಹುಟ್ಟಿಕೊಂಡ ಧಾರ್ಮಿಕ ಸಂಕರದಿಂದ ಬೌದ್ಧ ತಾತ್ವಿಕತೆ ಗುರ್ತು ಸಿಗಲಾಗದಷ್ಟು ವಿರೂಪಗೊಂಡು ಅನ್ಯಪಂಥಗಳಲ್ಲಿ ವಿಲೀನವಾಯಿತೆಂಬುದನ್ನು ಇತಿಹಾಸ ದೃಢೀಕರಿಸುತ್ತದೆ.

ಝೆನ್ ಚೀನಾವನ್ನು ಪ್ರವೇಶಿಸಿದಾಗ ಅಲ್ಲಿ ಕನಫ್ಯೂಷಿಯಸ್ ಧರ್ಮ ಹಾಗೂ ತಾವೋ ಎಂಬ ಪಂಥಗಳೂ ಇದ್ದವು. ಬೌದ್ಧರ ಅನೇಕ ಶಾಖೆಗಳು ಪ್ರವೇಶಿಸುವ ಮೊದಲೇ ಅಲ್ಲಿದ್ದ ತಾವೋ ಮತ್ತು ಕನಫ್ಯೂಷಿಯಸ್ ಪಂಥಗಳ ಜೊತೆ ಒಡನಾಡಿಯಾಗಿ ಆ ಅಂಶಗಳನ್ನೂ ಒಳಗೊಳ್ಳುತ್ತಾ ಅನೇಕ ಅಂಶಗಳ ಜೊತೆ ಸಂಘರ್ಷಿಸಿಕೊಳ್ಳುತ್ತಾ ಝೆನ್ ಒಂದು ಸೃಜನಾತ್ಮಕ ಶಕ್ತಿಯನ್ನು ಪಡೆದುಕೊಂಡಿತೆಂದು ವಿದ್ವಾಂಸರು ಗ್ರಹಿಸಿದ್ದಾರೆ. ದುರಾದೃಷ್ಟವೆಂದರೆ ಈ ರೀತಿಯಾದ ಪ್ರಕ್ರಿಯಾ ಪ್ರಸ್ಥಾನವೊಂದು ಭಾರತ ದೇಶದಲ್ಲಿ ಸಂಭವಿಸಲೇ ಇಲ್ಲ. ಅಂದರೆ ಇಲ್ಲಿನ ದರ್ಶನಗಳೊಂದಿಗೆ ಸಂಘರ್ಷಿಸಿಕೊಂಡು ಒಂದು ಹೊಸ ಸೃಜನಶೀಲ ಪ್ರತಿಭೆಯಾಗಿ ಅಭಿವ್ಯಕ್ತಿಗೊಳ್ಳಲಿಲ್ಲ. ಬದಲಾಗಿ ಇತರ ಪಂಥಗಳ ದೀರ್ಘಕಾಲೀನ ಅಧಿಕಾರಯುಕ್ತ ಒತ್ತಡಗಳಿಂದಾಗಿ ಸಾಮಾನ್ಯರ ಜೀವನಗಳಲ್ಲಿದ್ದ ಬೌದ್ಧ ಬದುಕು ಮರೆವಿಗೆ ಸಂದಿತು ಎನ್ನಬಹುದು. ಇದಕ್ಕೆ ಇನ್ನೂ ಹಲವು ಕಾರಣಗಳಿದ್ದಿರಬಹುದು. ಆ ಕಾರಣಗಳು ಏನೇ ಇರಲಿ, ಈ ನೆಲದ ಬಹುರೂಪಿ ಸಂಸ್ಕೃತಿಗಳಲ್ಲಿ ದೇಶ ಕಾಲಾತೀತವಾಗಿ ಬೌದ್ಧ ತಾತ್ವಿಕ ಸತ್ವ ಬಹುವೇಷಗಳಲ್ಲಿ ಪ್ರಕಟವಾಗಿರುವುದನ್ನು ನಾವು ಕಂಡುಕೊಳ್ಳಬಹುದು. ಉದಾಹರಣೆಗೆ: ಶೈವತಂತ್ರಗಳಲ್ಲಿ, ನಾಥ ಸಿದ್ಧರಲ್ಲಿ, ಕಾಳಾಮುಖಾಚಾರ್ಯರಲ್ಲಿ, ದೇಸಿ ಅದ್ವಯಯೋಗಿಗಳಲ್ಲಿ, ಅವಧೂತ ಪರಂಪರೆಗಳಲ್ಲಿ, ಕನ್ನಡದ ಶಿವಶರಣರ ಬದುಕಿನ ಅಸ್ಮಿತೆಗಳಲ್ಲಿ ಇಂದಿಗೂ ಸುಮ್ಮನೆ ಸಾಧನೆಯ ಹಾದಿಯಲ್ಲಿ ಜೀವಿಸುತ್ತಿರುವ ತತ್ವಪದಕಾರರು ಬೌದ್ಧ ಸತ್ವವನ್ನು ಪರಿಪೂರ್ಣ ಬಯಲ ಬೆಡಗಿನಲ್ಲಿ ಅಡಗಿಸಿಟ್ಟುಕೊಂಡಿರುವ ಪರಿ ಅಚ್ಚರಿಯನ್ನುಂಟು ಮಾಡಬಲ್ಲದು. ಈ ಸಹಜ ಸಂತರು ಬಯಲ ಬೆಡಗಿಗಾಗಿ, ಬಯಲ ಜೀವನಕ್ಕಾಗಿ ತಮ್ಮನ್ನು ಒಡ್ಡಿಕೊಂಡಿರುವ ಪರಿ ಝೆನ್ ನಷ್ಟೇ ಅತೀವವಾದದ್ದು.

ಉದಾಹರಣೆಗೆ-
ಝೆನ್ ಗುರುವೊಬ್ಬ ಶಿಷ್ಯನಿಗೆ ತನ್ನ ಕೈಯಲ್ಲಿರುವ ಕೋಲು ತೋರಿಸುತ್ತಾನೆ: ‘ಇದು ಕೋಲು ಎಂದರೆ ಅಸ್ತಿ ಎಂದ ಹಾಗೆ… ಅಲ್ಲ ಎಂದರೆ ನಾಸ್ತಿ ಎಂದ ಹಾಗೆ… ಅಸ್ತಿ-ನಾಸ್ತಿಗಳಿಲ್ಲದೆ ಇದೇನೆಂದು ತಟ್ಟನೆ ಹೇಳು’ ಎನ್ನುತ್ತಾನೆ. ಆ ಕ್ಷಣದಲ್ಲೇ ಉತ್ತರಿಸಬೇಕಾದ ತುರ್ತಿನಲ್ಲಿ ಶಿಷ್ಯ ಎಡವಬಹುದು. ಹಾಗೆ ಎಡವಿದಾಗ ಗುರು ಇನ್ನೊಂದು ತಂತ್ರವನ್ನು ಬಳಸಿ ಅವನ ಪ್ರಜ್ಞೆ ಜಾಗೃತವಾಗುವಂತೆ ಮಾಡಬಹುದು.
ಇದೇ ಕಥೆಗೆ ಪೂರಕವಾಗಿ ಈ ಕೃತಿಯಲ್ಲಿ ಸ್ಮಶಾನವಾಸಿಯೆಂಬ ಗುರುವಿಗೆ ಶಿಷ್ಯನೊಬ್ಬ, ‘ದೇವರೆಂದರೆ ಯಾರು?’ ಎಂದು ಪ್ರಶ್ನಿಸುತ್ತಾನೆ. ಆಗ ಗುರುವಿನಿಂದ, “ಯಾರೋ ಹೇಳಿಕೊಟ್ಟ ಜ್ಞಾನವನ್ನೇ ದೇವರೆನ್ನುತ್ತಿದ್ದೀಯಲ್ಲಾ!?” ಎಂಬ ಮರುಪ್ರಶ್ನೆಯ ರೂಪದಲ್ಲಿ ಉತ್ತರ ಬರುತ್ತದೆ.
ಅಸ್ತಿ-ನಾಸ್ತಿಯೆನ್ನದೇ ಗುರು ಈ ಪ್ರಸಂಗವನ್ನು ನಿರ್ವಹಿಸಿದ ರೀತಿ ಒಂದು ವಸ್ತುಸ್ಥಿತಿಗೆ ಕಣ್ತೆರೆಸುವಂತೆ ಮಾಡಲು ಒತ್ತಾಯಿಸುತ್ತದೆ.
ಇವೆರಡೂ ಕಥೆಗಳಲ್ಲಿರುವ ಸೂಚನೆಯನ್ನು ಗಮನಿಸಿದಾಗ… ಭಾಷೆ ಮತ್ತು ಮಾತು ಪೂರ್ವಾಶ್ರಿತವಾದದ್ದು. ಅಸ್ತಿ-ನಾಸ್ತಿ ಎಂಬೆರಡೂ ತುದಿಗಳಲ್ಲಷ್ಟೇ ಅದು ವ್ಯವಹರಿಸಿ ನುಡಿಯಬಲ್ಲದು. ಅದರಾಚೆಗೆ ಅದು ಏನನ್ನೂ ನುಡಿಯಲಾಗದು. ಮನೋದೃಷ್ಟಿ ಮತ್ತು ಭಾವದ ಹೊರತಾಗಿ ಮಾತಿಗೆ ಅಸ್ತಿತ್ವವಿಲ್ಲ. ಎಲ್ಲವೂ ಅನಿತ್ಯವೇ ಆಗಿರುವ ಈ ಲೋಕಪ್ರವಾಹದಲ್ಲಿ ಅನಿತ್ಯವಾಗಿರುವ ದೃಷ್ಟಿ, ಭಾವ, ಮಾತಿನಿಂದ ನಿತ್ಯ ಪದಾರ್ಥವನ್ನು ಗ್ರಹಿಸಲಾಗದು ಎಂಬ ಸಂಜ್ಞೆ ಲೋಕಪರ ವಸ್ತುಸ್ಥಿತಿಗೆ ತನ್ನನ್ನು ಒಡ್ಡಿಕೊಳ್ಳಬೇಕೆಂದು ಒತ್ತಾಯಿಸುತ್ತದೆ.
ಸರಹ ನುಡಿಯುತ್ತಾನೆ…
ಎಲವೋ… ಸುಳ್ಳು, ಕಪಟ ಇತ್ಯಾದಿ ಲೆಕ್ಕವಿಲ್ಲದಷ್ಟು ಹೇಳಿದರಲ್ಲಾ
ಅದೆಲ್ಲವನ್ನೂ ದೂರ ಬಿಸಾಡು
ಯಾವುದನ್ನಾದರೂ ಮೋಹಿಸುತ್ತಿದ್ದರೆ ಅದನ್ನೂ… ಅಷ್ಟೆ
ಪ್ರಜ್ಞೆ ಸ್ವಯವಾದರೆ, ಸಮಸ್ತವೂ ಅದೇ
ಅದನ್ನು ತಿಳಿದುಕೊಂಡರೆ ಸಾಕು ಇನ್ನೇನೂ ಬೇಡ
ಅದನ್ನು ಇಂತಿಂತಹದ್ದೆಂದು ಹೇಳಲಾಗದು
ಆದಾಗ್ಯೂ ಗುರುವಾಕ್ಯದಿಂದ ಅರಿಯಬಹುದು
.

(ಹೀಗೆ ಮುಂದುವರಿಯುತ್ತದೆ…)

*** *** *** ***
ಪುಸ್ತಕದಲ್ಲಿ ಬರೆಯಲಾದ ಝೆನ್ ಮಾದರಿಯ ಕೆಲವು ಅಚಲ ಕತೆಗಳು:

ಗೊತ್ತೇನಪ್ಪಾ??
ಒಂದು ಚಳಿಗಾಲದ ಬೆಳಿಗ್ಗೆ ಆಗ ತಾನೆ ಉದಯಿಸುತ್ತಿರುವ ಸೂರ್ಯನ ನೀರ್ ಬಿಸಿಲಿಗೆ ಮೈಯೊಡ್ಡಿ ಚೆಂಚುದಾಸರು ತಮ್ಮ ಗುಡಿಸಲ ಹೊರಗೆ ಕೂತಿದ್ದರು. ಅವರ ಸುತ್ತಮುತ್ತ ಬೆಲ್ಲಕ್ಕೆ ಇರುವೆ ಮುತ್ತಿದ ಹಾಗೆ ನಾಲ್ಕೈದು ಜನ ಜಮಾಯಿಸಿ ಅಸಂಗತ ವಿಷಯಗಳಲ್ಲಿ ಹರಟೆ ಕೊಚ್ಚಿಕೊಳ್ಳುತ್ತಿದ್ದರು. ಅವರಲ್ಲೊಬ್ಬ ದಾಸರ ಮೌನವನ್ನು ಕೆಣಕುವ ರೀತಿಯಲ್ಲಿ, “ದಾಸರೇ, ಮನುಸಾ ಸತ್ತ ಮ್ಯಾಲೆ ಏನಾಗ್ತನೆ? ಜೀವ ಎಲ್ಲಿಗೋಗ್ತದೆ ಹೇಳ್ತೀರಾ” ಅಂತಂದ.
“ಯಾರೂ ಯಾವ್ದೂ ಯಲ್ಲಿಂದಾನೂ ಬಂದಿಲ್ಲಾ; ಎಲ್ಲೂ ಹೋಗಲ್ಲಾ! ಕನಸ್ನಾಗ ಕಂಡ್ಬಂದ ಕನಕಾಭರಣಗಳು ಎಚ್ಚರಾದಾಗ ಇಲ್ಲವಾಗ್ತಾವಲ್ಲಾ? ಅವು ಎಲ್ಲಿಂದ ಬಂದ್ವು? ಎಲ್ಲಿಗೆ ಹೋದ್ವು”
“ನೀವು ಇಷ್ಟೊತ್ತೂ ಮಾತಾಡ್ತಾ ಇದ್ದ ಸಿರಿತನ-ಬಡತನ, ಪ್ರಾಯ, ಅಧಿಕಾರ, ಸ್ವರ್ಗಾ-ನರಕಾ, ಹುಟ್ಟು-ಸಾವು; ದೈವ-ಅದೈವ, ಗೆಳೆತನ-ಹಗೆತನ, ಜಾತಿಮತಗೋತ್ರಗಳ ಅಹಂಭಾವ ಕನಸ್ನಾಗ ಕಂಡ ಕನಕಾಭರಣಗಳಿದ್ದಂಗೆ!”
“ನಮ್ಮ ಒಡಲ ಅನುಭವಕ್ಕೆ ಸಿಗ್ತಾ ಇರೋ ಈ ಜೀವಸರೀರಾ ಈ ಅಖಂಡ ಜಗತ್ತಿನ ಲೀಲಾ ವಿಲಾಸದಾಗ ಬೆರ್ಕೊಂಡು ಮಣ್ಣಲ್ಲಿ ಮಣ್ಣಾಗಿ ಬದ್ಲಾಗ್ತಾ ಮುಂದುವರೀತಾ ಇರ್ತದೆ, ಬದ್ಲಾವಣೆ ನಿಲ್ಲದಾ ಪಯಣ!”
“ಸಿರಿತನ-ಬಡತನ, ಪ್ರಾಯ, ಅಧಿಕಾರ, ಸ್ವರ್ಗಾ-ನರಕಾ, ಹುಟ್ಟು-ಸಾವು; ದೈವ-ಅದೈವ, ಗೆಳೆತನ-ಹಗೆತನ, ಜಾತಿಮತಗೋತ್ರಾದಿ ಮನುಷ್ಯನ ಗುಣಗಳು, ಮುಂದುವರೀತಾ ಇರೋ ಪ್ರಕೃತಿ ತತ್ವಕಾ ಗೊತ್ತೇನಪ್ಪಾ?”

ಹುಟ್ಟದ ಸಾಯದ ನಿತ್ಯ
“ಶರಣು ಗುರುದೇವಾ… ಶರಣು ಶರಣು… ಗುರುವಿಲ್ಲ ಅಂತೀರಾ, ಅದು ತಿಳಿವುದೋ, ತಿಳಿಯಲ್ವೋ? ಇದು ಜ್ಞಾನವಲ್ಲವಂತೀರಾ, ಜ್ಞಾನವಲ್ಲದುದು ಅರಿವುದೋ ಅರಿಯದೋ? ಬಯಲಲ್ಲವೆಂತೀರಾ ಈ ತತ್ವ ಅಂಟಿತೋ, ಅಂಟಲ್ವೋ? ಮೋಕ್ಷವಲ್ಲ ಅಂತೀರಾ, ಇದು ಮೋಸವೋ, ನ್ಯಾಯವೋ? ನುಡಿಯದು, ನಡೆಯದು; ಹುಟ್ಟದು, ಸಾಯದು. ಓಂ ನಮ ರಹಿತ ಬಯಲಪದ ಎಂದಿರಲ್ಲಾ!? ಎಲ್ಲಾ ಅಯೋಮಯದಂತಾಗುತ್ತಿದೆ, ಕತ್ತಲ ಕೋಣೆಯಲ್ಲಿ ಕೂಡಿಸಿ, ಬೀಗ ಜಡಿದಂತಾಗುತ್ತಿದೆ!”
“ನನ್ನೊಳಗೂ, ನಿನ್ನೊಳಗೂ ಸಕಲ ಮಾನವ ಕೋಟಿಯಲ್ಲೂ ಅರಿವು ತದ್ಗತಿತವಾಗಿರುವಾಗ ಬೇರೆ ಗುರುವುಂಟೆಂದು ಹೇಗೆ ಹೇಳಲಿ? ಜ್ಞಾನವು ಪೂರ್ವಾರ್ಜಿತವಾದುದಲ್ಲವೇ, ಪೂರ್ವಾಪರಗಳಿಲ್ಲದ ಆ ಮಹಾಪ್ರಸಾದವನ್ನು ಜ್ಞಾನವೆಂದು ಹೇಗೆ ಕರೆಯಲಿ? ಇಲ್ಲದಾ ಆ ಗೋಪ್ಯವನ್ನು ನಮ್ಮ ಹಿರೀಕರು ಬಯಲೆಂದರಲ್ಲಾ, ಅಂಟಿಯೂ ಅಂಟದ ಆ ತತ್ವವನ್ನು ಬಯಲೆಂದು ಹೇಗೆ ಕರೆಯಲಿ? ನಾನೇ ಇಲ್ಲದಾಗಿರುವ ಈ ನಶ್ವರತೆಯ ಜಗದೊಳಗೆ ಬಯಲನ್ನು ಮೋಕ್ಷವೆಂದು ಹೇಗೆ ಒಪ್ಪಲಿ? ನುಡಿಯದಾ ನಡೆಯದಾ ಹುಟ್ಟದಾ ಸಾಯದಾ ಓಂ ನಮ ರಹಿತ ಮಹಾಮೌನವಾದ ಶೂನ್ಯವನ್ನು ಏನಂತ ಕರೆಯಲಿ ಕಂದಾ? ‘ಅಸ್ತನಾಸ್ತಿಕೋವೇದಾ ನಿರ್ಣಯೋ ನಾಸ್ತಿ ಸರ್ವದಾ’ ಎಂದು ಹೇಳಿದರಲ್ಲಾ ದೇಸಿಕರು! ಇದೆ ಎನ್ನಲಾಗದೆ, ಇಲ್ಲವೆಂದು ಹೇಳದೆ ಏನನ್ನೂ ನಿರ್ಣಯಿಸದೆ ನಿರಾಳವಾಗಿರುವ ಯುಕ್ತಿ ಕಂದಾ ಇದು ನಿರಾಳವಾಗಿರುವ ಯುಕ್ತಿ.”
“ಎಟುಕಲಾರದಲ್ಲೋ ಈ ಬಯಲ ಪದ ಕಾಣಲಾರದಲ್ಲೋ
ಅಚಲ ಅಚಲ ಅಂದ್ಕೊಂಡು ಉಪದೇಶಗಳನ್ನ ನೀಡಿ
ಗುರುಶಿಷ್ಯರೆಲ್ಲ ಅಚಲರೆಂದು ಹಿಗ್ತಾ ಇದ್ರೂ ಕೂಡ
ಸಿಗೋದಲ್ಲಪ್ಪಾ! ಈ ಶೂನ್ಯ ಪದ ಕೂಡೋದಲ್ಲಪ್ಪಾ…
ಬದುಕಬೇಕಪ್ಪ ಈ ಬಯಲೊಳು ನಿತ್ಯವ ತಿಳಿದು ನಿರಾಳನಾಗಪ್ಪಾ!
ಬಯಲೇನನ್ನೂ ಹುಟ್ಟಿಸೋದಿಲ್ಲಪ್ಪಾ, ಅದೆಂದಿಗೂ ಸಾಯೋದಿಲ್ಲಪ್ಪಾ!!
ಹುಟ್ಟಿದ್ದೆಲ್ಲಾ ನಿನ್ನ ಭ್ರಾಂತಿ ಕಾಣಪ್ಪಾ ಈ ಯುಕ್ತಿ ತಿಳಿದರೆ ಭವವ ದಾಟಬಹುದಪ್ಪಾ
ಇದು ಬಲು ಸುಲಭವಿಹುದಪ್ಪಾ!!!”

ಶೂನ್ಯವಾದ ಶೂನ್ಯ
“ಹಾಗಾದರೆ ಗುರುಪದ ಏನೂ ಅಲ್ಲದ; ಇಲ್ಲದ ಶೂನ್ಯವಾದವೋ?”
“ಸಂಕಲ್ಪ ಶೂನ್ಯವಾದರೆ ಆನಂತರದಲ್ಲಿ ಶೂನ್ಯವಾದ ಶೂನ್ಯ ಯಾವುದು?”
“ಏನೂ ಇಲ್ಲವಾದ ಬಯಲು”
“ಈ ಬರಿದಾದ ಬಟ್ಟ ಬಯಲು ಏನೂ ಇಲ್ಲ ಎಂದು ಬೋಧಿಸುವಿರಲ್ಲಾ ತಂದೆ, ಏನೂ ಇಲ್ಲವಾದ ಆ ಬಯಲಾವುದು ಸ್ವಾಮಿ?”
“ಇಲ್ಲಿ ತಪ್ಪಿಸಿಕೊಂಡವನಿಗಲ್ಲವೇ ಸಹಜವೆಂಬೋ ಸದ್ಗತಿ? ತಗುಲಿಹಾಕಿಕೊಂಡವನಿಗೆ ಕಾರ್ಗತ್ತಲೇ ಮುಕ್ತಿ!!! ಕಂದಾ… ಈ ಬಯಲ ಬೋಧೆಯಲ್ಲಿ ಈಶ್ವರ, ವಿಷ್ಣು, ಪರಮಾತ್ಮ, ಬ್ರಹ್ಮ, ಆದಿಶಕ್ತಿ, ಆನಂದ, ಪರಮಪದ, ಎಂಬ ಕಾಲ್ಪನಿಕ ಪುರಾಣಗಳ ಕಾಲಕ್ಷೇಪವಿಲ್ಲ. ಜಾತಿ, ಕುಲ, ಗೋತ್ರಗಳ ಬದುಕಿಲ್ಲ. ಶ್ರೀಮಂತ-ಬಡವ ಎಂಬ ವಿಕೃತಿಗಳಿಲ್ಲ. ಚೈತನ್ಯದ ಅನುಭೂತಿಯ ಭ್ರಾಂತಿಯಿಲ್ಲ… ಕ್ಷೇತ್ರ- ಕ್ಷೇತ್ರಜ್ಞರ ಕನಸುಗಳಿಲ್ಲ… ಜ್ಞಾನ- ಅಜ್ಞಾನದ ಜಿಜ್ಞಾಸೆಗಳಿಲ್ಲ… ಆಶೆ-ನಿರಾಶೆಗಳ ತಂಟೆ ತಕರಾರುಗಳಿಲ್ಲ… ಅಹಮಿಕೆಯ ಅಂಧಕಾರವಿಲ್ಲ… ಸದ್ರೂಪ-ಚಿದ್ರೂಪ-ಸ್ವಸ್ವರೂಪದ ಭ್ರಾಂತಿಗಳಿಲ್ಲ… ಆದ್ದರಿಂದ ಬರಿದಾದ ಈ ಬಟ್ಟ ಬಯಲು ಏನೂ ಇಲ್ಲವೆನುವಾತನು ರಾಗ-ದ್ವೇಷಗಳಿಲ್ಲದವನು. ಶತೃ- ಮಿತ್ರತ್ವದ ಅತಿಗೆ ಅತೀತನಾದವನು, ಜ್ಞಾನಾಜ್ಞಾನಗಳ ಹಂಗಿಲ್ಲದೆ ಸಹಜಸುಖವನ್ನೇ ಮಹಾಜ್ಞಾನವನ್ನಾಗಿಸಿಕೊಂಡವನು. ತಂತ್ರ-ಮಂತ್ರ, ಇತ್ಯಾದಿ ಮಾನವ ನಿರ್ಮಿತ ವಿದ್ಯೆಗಳನ್ನು ಮಾಯಾ ವಿದ್ಯೆಗಳೆಂದು ತಿಳಿದು ನಿರಾಕರಿಸಿದವನು. ಕಲ್ಪನಾರಹಿತನಾಗಿ ಈ ಜಗತ್ತು ಹೇಗಿದೆಯೋ ಹಾಗೆ… ಬದುಕಿನಲ್ಲಿ ಏನು ಲಭ್ಯವೋ ಅಷ್ಟನ್ನೇ ಮಹಾಪ್ರಸಾದವೆಂದು ತಿಳಿದು, ಜೀವನದಲ್ಲಿ ಉಂಟಾಗುವ ಎಲ್ಲಾ ಅನಿರೀಕ್ಷಿತ ಬದಲಾವಣೆಗಳಿಗೂ ಸದಾ ಸಿದ್ಧವಾಗಿರುವ ಮಹಾಸಿದ್ಧನು!!!”

ಕುಡಿಕೆಯೂ ಅಲ್ಲ; ಅದರ ತೂತೂ ಅಲ್ಲ!
ಒಮ್ಮೆ ದಾಸರು ನೀರು ಕುಡಿಯಲು ಇಟ್ಟುಕೊಂಡಿದ್ದ ಕುಡಿಕೆ ತೂತಾಗಿ ಸುರಿಯಲಾರಂಭಿಸಿತು. ಆ ತೂತಿಗೆ ಜೇನುಮೇಣವನ್ನು ಕರಗಿಸಿ ಬಿಡುತ್ತಿದ್ದರು. ಅದೇ ಸಮಯಕ್ಕೆ ಒಬ್ಬ ಶಿಷ್ಯ ಬಂದು ಗುರುಗಳನ್ನು. “ಅಚಲವೆಂದರೆ ಪ್ರಪಂಚ ಸಂಬಂಧಿ ವಿಷಯಾನಂದವೋ ಇಲ್ಲವೆ ಪಾರಲೌಕಿಕ ಸಂಬಂಧಿ ಆನಂದವೋ?”
ತಲೆ ಮೇಲೆತ್ತಿ ಸಹಾ ನೋಡದೆ ತಮ್ಮ ಪಾಡಿಗೆ ತಾವು ಕೆಲಸದಲ್ಲಿ ತನ್ಮಯರಾಗಿ- “ಅದು ಕುಡಿಕೆಯೂ ಅಲ್ಲ, ಕುಡಿಕೆಯ ತೂತೂ ಅಲ್ಲ ಹೋಗಯ್ಯ!!!” ಎಂದರು.
ಸ್ವಯಂ ಆತ್ಮಾಹುತಿ
“ಗುರುವೇ… ಶರಣು… ನಾನು ಹಠಯೋಗವನ್ನು ಹಲವು ವರ್ಷಗಳಿಂದ ಅಭ್ಯಾಸ ಮಾಡುತ್ತಿರುವೆ! ಇಡಾ ಪಿಂಗಳಾ ಎರಡನ್ನೂ ಎಡಬಲಗಳಲ್ಲಿ ಚಲಿಸದಂತೆ ತಡೆದು, ತುದಿ ರಂಧ್ರದಲ್ಲಿ, ಊರ್ಧ್ವಮುಖದಲ್ಲಿ ಸಂಚರಿಸುವಂತೆ ಮಾಡಬಲ್ಲೆ.”
“ನಿನ್ನನ್ನು ನೋಡಿ ನನ್ನಲ್ಲಿ ಕನಿಕರವುಂಟಾಗುತ್ತಿದೆ. ಕ್ಷಣಕ್ಷಣ ಪ್ರವಹಿಸುತ್ತಿರುವ ಈ ಪ್ರಾಣದ ಹರಿಯುವಿಕೆಯ ಜೀವಂತ ವಿಸ್ಮಯವನ್ನು ಸ್ವತಃ ತಿಳಿಯಲು ಒಂದು ಕ್ಷಣವಾದರೂ ಸಾಕು! ಇಂತಹ ಅಮೂಲ್ಯವಾದದ್ದನ್ನು ಅಲ್ಲಗಳೆದು ಸ್ವಯಂ ಆತ್ಮಾಹುತಿಗೆ ನಿನ್ನನ್ನು ಅರ್ಪಿಸಿಕೊಂಡುಬಿಟ್ಟೆಯಲ್ಲಪ್ಪಾ…!”

————————+++++——————-

ಓದುಗರ ಗಮನಕ್ಕೆ:
ಆಕಾರ ಪ್ರಕಾಶನದಿಂದ ಶರಣ ಪದ್ಮಾಲಯ ನಾಗರಾಜ್ ಅವರ ಎರಡು ಪುಸ್ತಕಗಳು ಪ್ರಕಟವಾಗಿವೆ…
1. ‘ಅಚಲ ಕಥಾಲೋಕ: ಅಚಲ-ಝೆನ್ ಅನುಸಂಧಾನ’ -ಇದು ಅಚಲ ಪರಂಪರೆಯ ಪುಟ್ಟ ಪುಟ್ಟ ಝೆನ್ ತರಹದ 42 ಕತೆಗಳನ್ನು ಒಳಗೊಂಡಿದೆ. ಅಚಲ ತತ್ವಪರಂಪರೆಯು ಈ ನೆಲದ ಜೀವಂತ ದಾರ್ಶನಿಕ ಪಂಥ. ಈ ಪುಸ್ತಕದಲ್ಲಿ ಪದ್ಮಾಲಯ ಅವರು ಬರೆದ ಪ್ರಸ್ತಾವನೆ ಸಾಧಕರೂ, ಆಸಕ್ತರೂ ಓದಲೇ ಬೇಕಾದ ಮಹತ್ತರ ವಿಚಾರಗಳನ್ನು ಒಳಗೊಂಡಿದೆ. ಡಾ. ರಹಮತ್ ತರೀಕೆರೆ ಅವರು ಅರ್ಥಪೂರ್ಣ ಬೆನ್ನುಡಿ ಬರೆದಿದ್ದಾರೆ.
ಪುಟ: 138
ಸೈಜ್: 1/8 ಡೆಮಿ
ಬೆಲೆ: ₹150
ಅಂಚೆವೆಚ್ಚ ಇಲ್ಲ
—-+———+———-+—————++
2. ‘ಅಚಲ ಗುರುಮಾರ್ಗ: ಮರೆತ ದಾರಿಗಳ ಅಧ್ಯಯನ’ ಮರುಪ್ರಕಟಗೊಂಡಿದೆ. ನಮ್ಮದೇ ನೆಲದ ಮರೆಯಲ್ಲಿ ಅಜ್ಞಾತವಾಗಿ ಉಳಿದಿದ್ದ ಅಚಲ ಗುರುಪಂಥವನ್ನು ಲೇಖಕರು ಶೋಧಿಸಿ ಕೊಟ್ಟಿದ್ದಾರೆ.
ಪುಟ: 260
ಸೈಜ್: 1/8 ಡೆಮಿ
ಬೆಲೆ: ₹275
ಅಂಚೆವೆಚ್ಚ ಇಲ್ಲ.
———+-+—————
ಎರಡೂ ಪುಸ್ತಕ ಸೇರಿ ₹425
ಅಂಚೆವೆಚ್ಚ ಇಲ್ಲ.
ಫೋನ್ ಪೇ ನಂಬರ್ 9036749533
ವಿಳಾಸ ಕಳಿಸುವ ವಾಟ್ಸಪ್ ನಂಬರ್ 8073397463

Previous post ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
Next post ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ

Related Posts

ಬಸವೋತ್ತರ ಶರಣರ ಸ್ತ್ರೀಧೋರಣೆ
Share:
Articles

ಬಸವೋತ್ತರ ಶರಣರ ಸ್ತ್ರೀಧೋರಣೆ

April 29, 2018 ಡಾ. ಎನ್.ಜಿ ಮಹಾದೇವಪ್ಪ
ಶರಣರ ಸ್ತ್ರೀಧೋರಣೆಯ ಬಗೆಗೆ ಮಾತಾಡುವಾಗ ಅನೇಕ ವಿದ್ವಾಂಸರು ಎಲ್ಲ ಶರಣರ ಧೋರಣೆಯೂ ಒಂದೇ ತೆರನಾಗಿತ್ತು ಎಂದು ಆತುರವಾಗಿ ಸಾಮಾನ್ಯೀಕರಿಸುತ್ತಾರೆ. ಅವರು ಸ್ತ್ರೀಯರ ಬಗೆಗಿನ ಎಲ್ಲ...
ಶರಣೆಯರ ಸ್ಮಾರಕಗಳು
Share:
Articles

ಶರಣೆಯರ ಸ್ಮಾರಕಗಳು

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಕ್ರಾಂತಿಯ ನಂತರ ಅದು ವಿಸ್ತೃತವಾಗಿ ವ್ಯಾಪಿಸಿಕೊಂಡಿದ್ದು ಇಂದಿನ ಸೊಲ್ಲಾಪೂರ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಜಮಖಂಡಿ ತೇರದಾಳ ಚಿಮ್ಮಡ ಅಂಕಲಗಿ ಹಿರೇ...

Comments 8

  1. ಗೌರಿಶಂಕರ ತೇರದಾಳ
    Feb 13, 2023 Reply

    ಪುಸ್ತಕದ ಪರಿಚಯವನ್ನು ಓದಿದರೆ ಇದೊಂದು ಅಪೂರ್ವ ಪುಸ್ತಕ ಎನಿಸುತ್ತದೆ. ಖಂಡಿತ ಕೊಂಡು ಓದುತ್ತೇವೆ, ಧನ್ಯವಾದಗಳು.

  2. Halappa Naragund
    Feb 16, 2023 Reply

    ಇಲ್ಲಿಯ ವಿಚಾರಗಳು ವಿನೂತನವಾಗಿದ್ದು, ಪುಸ್ತಕವನ್ನು ಯಾವಾಗ ಪಡೆದು ಓದುವೆನೆಂದು ತವಕದಿಂದ ಕಾಯುತ್ತಿದ್ದೇನೆ… ಒಳ್ಳೆಯ ಪುಸ್ತಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು

  3. ಶ್ರೀಶೈಲ ಭರಣಿ
    Feb 16, 2023 Reply

    ಈ ಹಿಂದೆ ಝೆನ್ ಕತೆಗಳ ಬಗೆಗೆ ತಲೆ ಕೆಡಿಸಿಕೊಂಡು ಓದುತ್ತಿದ್ದೆ… ಆದರೆ ಅವು ಅರ್ಥವಾಗದೇ ಬೆಪ್ಪಾಗಿ ಸುಮ್ಮನಾಗುತ್ತಿದ್ದೆ… ಆದರೂ ಝೆನ್ ಅಂದಾಕ್ಷಣ ಈಗಲೂ ಮನಸ್ಸಿನಲ್ಲಿ ಏನೋ ಆಕರ್ಷಣೆ… ಕನ್ನಡದಲ್ಲೂ ಅಂಥ ಪ್ರಯೋಗ ನಡೆದದ್ದು ಈಗಲೇ ತಿಳಿದದ್ದು… ಬಯಲು ಬಳಗಕ್ಕೆ ವಂದನೆಗಳು.

  4. ದಯಾನಂದ, ಗಜೇಂದ್ರಗಡ
    Feb 17, 2023 Reply

    ಹಿಂದೆ ಬಯಲುನಲ್ಲಿ ಪ್ರಕಟವಾದ ಪದ್ಮಾಲಯ ನಾಗರಾಜರ ಲೇಖನಗಳನ್ನು ಓದಿದ್ದೇನೆ. ತುಂಬಾ ಆಸಕ್ತಿ ಹುಟ್ಟಿಸುವ ಅವರ ಬರವಣಿಗೆ ಬಹಳ ಪ್ರೀಯವೆನಿಸುತ್ತದೆ. ಅಕ್ಕಾ ಖಂಡಿತ ಅವರ ಪುಸ್ತಕ ಕೊಂಡು ಓದುತ್ತೇನೆ.

  5. ಪ್ರವೀಣ್ ಕುಮಾರ, ಉಜ್ಜಯಿನಿ
    Feb 17, 2023 Reply

    ಝೆನನ ಮುಂಡಿಗೆ ರೂಪದ ಬೆಡಗಿನ ನುಡಿಗಳು ಹಾಗೂ ಅಲ್ಲಮಪ್ರಭುವಿನ ಬೆಡಗಿನ ವಚನಗಳು ಒಂದೇ ಪ್ರಕಾರವಾಗಿದ್ದು, ಅಂತಹ ವಚನಗಳಿಗೆ ವ್ಯಾಖ್ಯಾನ ಬರೆದರೆ, ಅವುಗಳ ಅರ್ಥ ವ್ಯಾಪ್ತಿಯನ್ನು ಕುಗ್ಗಿಸಿದಂತಾಗುವುದಿಲ್ಲವೇ? ಕಥಾಲೋಕದ ಗುರು ಕೊಡುವ ಬೆಡಗಿನ ಉತ್ತರಗಳು ನಮ್ಮ ಅರಿವಿಗೆ ಸವಾಲು ಹಾಕುವಂತಿವೆ.

  6. ಪ್ರದೀಪ್ ಚಾಮರಾಜನಗರ
    Feb 23, 2023 Reply

    ಶರಣರು, ಅಚಲರು, ಬೌದ್ಧರು, ತತ್ವಪದಕಾರರು- ಒಂದೇ ಬಳ್ಳಿಯ ಹೂಗಳು… ಸಾಧಕ ಪರಂಪರೆಯ ಇವರ ಸಾಹಿತ್ಯ ನಮ್ಮ ನಾಡಿನ ಅಮೂಲ್ಯ ಸಂಪತ್ತು, ಬದುಕನ್ನು ಬೆಳಗುವ ದೀಪಗಳು.

  7. ಗುರುಕಿರಣ್
    Feb 23, 2023 Reply

    ಅಚಲ ಕತೆಗಳ ಸ್ಯಾಂಪಲ್ಲುಗಳನ್ನು ಓದುತ್ತಿದ್ದರೆ ಅಚಲ ಗುರುಮಾರ್ಗ ಗ್ರಂಥವನ್ನು ಓದಲೇ ಬೇಕೆನಿಸುತ್ತದೆ. ಎರಡು ಉತ್ತಮ ಪುಸ್ತಕಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

  8. ಮಂಜುನಾಥ ಹಲಗಿ
    Feb 27, 2023 Reply

    ಪ್ರಸ್ತಾವನೆಯ ಆಳ ಮುಮುಕ್ಷಿಗಳಿಗೆ ದಾರಿ ತೋರಿಸುವಂತಿದೆ. ಇದೊಂದು ಕನ್ನಡದಲ್ಲೇ ಮಹತ್ವದ ಪುಸ್ತಕವೆಂದು ಭಾವಿಸುತ್ತೇನೆ. ಇಲ್ಲಿರುವ ಕತೆಗಳನ್ನು ಮತ್ತೆಮತ್ತೆ ಓದಿದೆ. ಝೆನ್ ಕತೆಗಳು ವಾಸ್ತವಕ್ಕೆ ತರುವ ಒಡಪುಗಳು. ಅದೇ ಮಾದರಿಯ ಕನ್ನಡದ ಸಾಧಕ ಪರಂಪರೆಯ ಚುಟುಕು ಕತೆಗಳನ್ನು ಓದಿ ಬಹಳ ಸಂತೋಷವಾಯಿತು. ಪುಸ್ತಕವನ್ನು ಖಂಡಿತ ಓದುತ್ತೇನೆ, ಧನ್ಯವಾದಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನವೇ ಮನವೇ…
ಮನವೇ ಮನವೇ…
May 6, 2020
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಗಣಾಚಾರ
ಗಣಾಚಾರ
August 8, 2021
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಭವ ರಾಟಾಳ
ಭವ ರಾಟಾಳ
September 10, 2022
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಹುಡುಕಾಟ…
ಹುಡುಕಾಟ…
August 8, 2021
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
Copyright © 2023 Bayalu